ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಗೆ ಕನ್ನಡಿಗರಾಗಿ ಕೈಗೊಳ್ಳಬೇಕಾದ ಹತ್ತು ಮಹತ್ವದ ನಿರ್ಧಾರಗಳು: ಶಿವಮೂರ್ತಿ ಹೆಚ್.

  1. ಕನ್ನಡ ಮಾತೃಭಾಷೆಯ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಸರ್ಕಾರಿ ಕೆಲಸಗಳು ಸಿಗಬೇಕು. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸಬೇಕು.
  2. ಸರ್ಕಾರಿ ಶಾಲಾ ಕಾಲೇಜು ಮಕ್ಕಳಿಗೆ ಮಾತ್ರ ಸರ್ಕಾರಿ ಬಸ್ ಸೌಲಭ್ಯ, ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣ ಸೌಲಭ್ಯಗಳು ಉಚಿತವಾಗಿ ದೊರೆಯಬೇಕು. ಇದರೊಂದಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಪ್ರತಿಯೊಬ್ಬರು ಕೂಡ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು.
  3. ಕರ್ನಾಟಕಕ್ಕೆ ಬಂದು ನೆಲೆಸಿರುವ ಅನ್ಯ ಭಾಷಿಕರು ಐದು ವರ್ಷಗಳೊಳಗೆ ಕನ್ನಡವನ್ನು ಓದುವ, ಬರೆಯುವ, ಮಾತಾಡುವುದನ್ನು ಕಲಿಯದಿದ್ದರೆ ಅವರಿಗೆ ರಾಜ್ಯದ ಯಾವ ಸೌಲಭ್ಯಗಳು ದೊರೆಯುವುದಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು.
  4. ಕರ್ನಾಟಕ ರಾಜ್ಯ ಸರ್ಕಾರದ ಆಡಳಿತ, ಆದೇಶಗಳು ಕನ್ನಡದಲ್ಲಿಯೇ ನಡೆಯಬೇಕು. ಹಾಗೂ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ, ಸರ್ಕಾರದ ಆಡಳಿತ ಯಂತ್ರವು ಸುಗಮವಾಗಿ ಸಾಗಲು ಮಧ್ಯ ಕರ್ನಾಟಕದ ಒಂದು ಜಿಲ್ಲೆಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಬೇಕು.
  5. ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಸುದ್ಧಿ ಮಾಧ್ಯಮಗಳು, ದಿನ ಪತ್ರಿಕೆಯಗಳು ಕನ್ನಡಿಗರ ಬೇಗ ಜಾಗೃತಿ ಮೂಡಿಸುವುದರ ಜೊತೆಗೆ ಪರಿಶುದ್ಧ ಕನ್ನಡವನ್ನು ಹೆಚ್ಚೆಚ್ಚು ಬಳಸಬೇಕು. ಪ್ರತಿನಿತ್ಯವೂ ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿಷಯಗಳ ಮಂಥನದ ಜೊತೆಗೆ, ಕನ್ನಡ ಕಟ್ಟಾಳುಗಳು, ಕನ್ನಡ ನಾಡಿನ ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಸ್ಥಳಗಳ ಬಗ್ಗೆ ಸುದ್ಧಿ ಪ್ರಸಾರ ಮಾಡಬೇಕು.
  6. ತೆಲುಗು, ತಮಿಳುನಾಡು ರಾಜ್ಯದ ಜನರರಂತೆ ಕನ್ನಡಿಗರು ಸಹ ಕನ್ನಡ ನಾಡಿನ ಪರವಾಗಿ ನಿಲ್ಲುವ, ಅಧಿಕಾರದ ಗದ್ದುಗೆ ಆಸೆಗಿಂತ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಪ್ರಾದೇಶಿಕ ಪಕ್ಷವನ್ನು ಕನ್ನಡಿಗರು ಕಟ್ಟಬೇಕು. ಜೊತೆಗೆ ಪ್ರತಿಬಾರಿಯೂ ಪ್ರಾದೇಶಿಕ ಪಕ್ಷವನ್ನು ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು.
  7. ಕನ್ನಡ ನಾಡು ನುಡಿ ಸಂಸ್ಕೃತಿಯು ಉಳಿಸಿ, ಬೆಳೆಸಬೇಕಾದರೆ ಮೊದಲು ಕನ್ನಡಿಗರು ಇಲ್ಲಿರುವ ಅನ್ಯ ಭಾಷಿಕರೊಡನೆ ಅವರ ಭಾಷೆಯಲ್ಲಿ ವ್ಯವಹರಿಸುವ ಮನೋಭಾವನೆಯನ್ನು ಬಿಟ್ಟು. ಅವರಿಗೆ ನಮ್ಮ ಭಾಷೆ, ಸಂಸ್ಕೃತಿಯನ್ನು ಕಲಿಸುವ ಮನೋಭಾವ ಹೊಂದಬೇಕು. ನಾವು ಎಲ್ಲಿಯವರೆಗೂ ಅವರೊಡನೆ ಅವರ ಭಾಷೆಯಲ್ಲಿ ವ್ಯವಹರಿಸುವುದನ್ನು ಬಿಡುವುದಿಲ್ಲವೋ ಅಲ್ಲಿಯ ತನಕ ಅವರು ನಮ್ಮ ಭಾಷೆ ಕಲಿಯಲಾರರು. ಇಲ್ಲಿಯ ನೆಲ, ಜಲ, ಉದ್ಯೋಗ ಬೇಕೆನ್ನುವರಿಗೆ ನಮ್ಮ ಭಾಷೆಯನ್ನು ಕಲಿಯುವಂತೆ ನಾವು ಪ್ರೇರಣೆ ನೀಡಬೇಕು.
  8. ನಮ್ಮ ನಾಡು ನುಡಿ ಸಂಸ್ಕೃತಿಯ ಬಗ್ಗೆ ಇಂದಿನ ಮಕ್ಕಳಲ್ಲಿ ನಾವು ಅರಿವನ್ನು ಮೂಡಿಸುವ ಕೆಲಸವನ್ನು ಸಾಮಾಜಿಕ ಮಾಧ್ಯಮಗಳು, ಪ್ರಭಾವಿ ನಾಯಕರು, ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸಬೇಕು. ಜೀವನದ ನಿರ್ವಹಣೆಗಾಗಿ ಅನ್ಯ ಭಾಷೆ ಕಲಿತರು ಸಹ ಜೀವದ ಭಾವನೆಗಳನ್ನು ಹಂಚಿಕೊಳ್ಳುವ ಮಾತೃ ಭಾಷೆಯ ಸೊಗಡಿನ ಹಿರಿಮೆ ಗರಿಮೆಯನ್ನು ತಿಳಿಸಬೇಕು.
  9. ಕೇವಲ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಬಗ್ಗೆ ಅಭಿಮಾನವನ್ನು ತೋರಿಸುವ ಬದಲು, ವರ್ಷದ ಮೂನ್ನೂರೈವತ್ತೈದು ದಿನಗಳ ಕಾಲ ಭಾಷಾಭಿಮಾನ ತೋರಿಸಬೇಕು. ನಾವು ನಮ್ಮ ಸಹಿಯನ್ನು ಮಾತೃಭಾಷೆಯಲ್ಲಿಯೇ ಮಾಡಬೇಕು. ಯಾವುದೇ ಅಂತರ್ಜಾಲದಲ್ಲಿದ್ದರು ಸಹ ಕನ್ನಡದ ಅಂತಃಸತ್ವವನ್ನು ಪರಿ ಭಾಷೆಯ ಪದಗಳನ್ನು ಬಳಸಿಕೊಂಡು ನಮ್ಮ ಭಾಷೆಯಲ್ಲಿಯೇ ಸಂವಹನ ಮಾಡಬೇಕು. (ಉದಾ.. ಆಂಗ್ಲ ಭಾಷೆಯ ಪದಗಳಿಂದ ಏನು ಊಟ ಮಾಡಿದೆ ಎಂದು ಕೇಳಬಹುದು. enu uta madide endu kelabahudu.)
  10. ಕನ್ನಡ ನಾಡಿನ ಐತಿಹಾಸಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮನೆ ಹಾಗೂ ಶಾಲೆಗಳಿಂದ ಆರಂಭಿಸಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಮೊದಲ ಭಾಷೆಯಾಗಿ ಕಡ್ಡಾಯವಾಗಿ ಕಲಿಯುವಂತೆ ಮತ್ತು ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸುವ ಪಠ್ಯ ಪುಸ್ತಕಗಳನ್ನು ಸಿದ್ಧಗೊಳಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರಾಗಿರುವಂತೆ ಮಾಡಬೇಕು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಮಾತುಗಳ ಜೊತೆಯಲ್ಲಿಯೇ ಕನ್ನಡ ಬಳಸಿ, ಕನ್ನಡ ಬೆಳೆಸಿ ಎಂಬ ಘೋಷಣೆಗಳು ಕನ್ನಡಿಗರಲ್ಲಿ ಅಚ್ಚೊತ್ತಬೇಕು. ಆಗ ಮಾತ್ರ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಗೆ ಕನ್ನಡಿಗರಾಗಿ ನಮ್ಮ ಪ್ರಯತ್ನಗಳ ಬೀಜವು ಮೊಳಕೆಯೊಡೆದು ಬೆಳೆದು ಕನ್ನಡ ಹೆಮ್ಮರವಾಗಿ ಬೆಳೆದು ಕೋಟ್ಯಂತರ ಜನರಿಗೆ ಆಶ್ರಯ ಕೊಡಲು ಸಾಧ್ಯವಾಗುತ್ತದೆ.

ಹೀಗೆ ಪ್ರತಿಯೊಬ್ಬರು ಕನ್ನಡ ನಾಡು ನುಡಿಗಾಗಿ ದೃಢಸಂಕಲ್ಪ ಮಾಡಿದರೆ ಕನ್ನಡ ಭಾಷೆಯ ಪರಿಮಳವು ಜಗತ್ತಿನಾದ್ಯಂತ ಪಸರಿಸಲು ಸಾಧ್ಯ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಸಾರ್ವಭೌಮರು.

ಶಿವಮೂರ್ತಿ ಹೆಚ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x