ಕಲ್ಲು
ಒಂದುಕಲ್ಲು
ಒಂಟಿಯಾಗಿ ಬಿದ್ದಿತ್ತು
ನೆಲದ ಮೇಲೆ
ಮಳೆ ಬಿಸಿಲು ಚಳಿ
ಎಲ್ಲವನ್ನೂಕಂಡಿದ್ದ
ಅದರಅಂತರಂಗದಲ್ಲಿದ್ದ
ಬುದ್ಧಿವಂತಿಕೆಯಅರಿವು
ಯಾರಿಗೂಇರಲಿಲ್ಲ
ಹಿಂದೆನಡೆದದ್ದೆಲ್ಲಕ್ಕೂ
ಸಾಕ್ಷಿಯಾಗಿತ್ತು ಆ ಕಲ್ಲು
ಭೂಮಿ ಹುಟ್ಟಿದ್ದನ್ನು
ಅದುಕಂಡಿತ್ತು
ಬೆತ್ತಲೆಯಾಗಿ ಹುಟ್ಟಿದ
ಮನುಷ್ಯ
ಜಾತಿಧರ್ಮ
ಭಾಷೆ ದೇಶಗಳೆಂಬ
ಕವಲು ಕವಲುಗಳಲ್ಲಿ
ದಿಕ್ಕಾಪಾಲಾಗಿ ಚಲಿಸಿ
ಕಾಮ ಕ್ರೋಧ
ಮದ ಮತ್ಸರಗಳನ್ನು
ಎದೆಯೊಳಗೆ ತುಂಬಿಕೊಂಡ
ಬಗೆ ಅದಕ್ಕೆ ತಿಳಿದಿತ್ತು
ಸಾಮ್ರಾಜ್ಯಗಳು
ಉದಯವಾದದ್ದನ್ನು
ಪತನಗೊಂಡದ್ದನ್ನು
ಅದು ನೋಡಿತ್ತು
ಹೊಮ್ಮಿದ ನಗು
ಚಿಮ್ಮಿದಕಣ್ಣೀರು
ಎಲ್ಲದರ ಲೆಕ್ಕವೂ
ಅದರ ಬಳಿಯಿತ್ತು
ಆದರೆಕಲ್ಲಿಗೆ
ಬಾಯಿ ಇರಲಿಲ್ಲ
ಕಂಡದ್ದನ್ನು ಹೇಳುವುದಕ್ಕಾಗದ
ಸಹಜತೆಯೇದುರ್ಬಲತೆಯಾಗಿ
ಅದನ್ನು ತೆಪ್ಪಗಾಗಿಸಿತ್ತು
ಏನೂ ತಿಳಿಯದ
ಪಾಮರನಂತೆ
ಬಿದ್ದುಕೊಂಡಿತ್ತು
ನೆಲವನ್ನಪ್ಪಿಕೊಂಡು
ಹೀಗಿರುವಾಗಲೇ
ಬೊಬ್ಬೆ ಹೊಡೆಯುತ್ತಾ
ಬಂದಗುಂಪೊಂದು
ಎತ್ತಿಅದನ್ನು
ಬೀಸಿದರು ಎದುರು ದಿಕ್ಕಿಗೆ
ಹಣೆಯೊಂದರಲ್ಲಿಚಿಮ್ಮಿದರಕ್ತ
ಇದರ ಮೈಮೇಲೂ ಹರಿಯಿತು
ಬಡಿಯಿರಿ! ಕೊಲ್ಲಿ!
ಕೇಳಿಬರುತ್ತಿದ್ದ ಬೊಬ್ಬೆಗೆ
ವಿರಾಮವೇಇರಲಿಲ್ಲ
ಕಲ್ಲು ಸಾಕ್ಷಿಯಾಗತೊಡಗಿತು ಈಗ
ಹೊಸತೊಂದು ವಿದ್ಯಮಾನಕ್ಕೆ
ತಾನು ಬಯಸದ ವಿದ್ಯಮಾನಕ್ಕೆ
ಮರದಿಂದ ಮೂರ್ತಗೊಂಡದೇವರಿಗೆ…
ನೀನೇ ರೂಪಿಸಿದ ಮಳೆ
ನೀನೇ ಸೃಜಿಸಿದ ಚಳಿಗಾಳಿ
ಸೋಕದಂತೆ ನಿನ್ನ
ರಕ್ಷಿಸುವ ಭಾರ ನಮ್ಮದು
ನಮ್ಮೊಳಗಿನ ಭಕ್ತಿಭಾವ
ಹೊದಿಕೆಯಾಗಿ ಆವರಿಸಿದೆ
ಒಂದಷ್ಟು ಕಾಲ ಒಳಗಿರುವ
ಹೊಣೆ ನಿನ್ನದು
ನಿನ್ನಿಂದ ಸೃಷ್ಟಿಗೊಂಡ ನಾವು
ಮತ್ತೆ ಸೃಷ್ಟಿಸಿದ್ದೇವೆ ನಿನ್ನನ್ನು
ಮಾರಬಯಸಿದ್ದೇವೆ ತುತ್ತು ಕೂಳಿಗಾಗಿ
ಹೀಗೇ ಚೆನ್ನಾಗಿರಬೇಕು ನೀನು
ಎಂದು ಬಯಸಿದ್ದೇವೆ ನಾವು
ನಮ್ಮಚಂದದ ಬಾಳಿಗಾಗಿ
ರೂಪ ಕಳೆದುಕೊಳ್ಳಬೇಡ ದಯವಿಟ್ಟು
ಗೆದ್ದಲು ಹಿಡಿಯದಿರಲಿ ನಿನಗೆ
ನಿನ್ನ ಅಸ್ತಿತ್ವದಲ್ಲಿಯೇ ಇದೆ ನಮ್ಮ ಅಸ್ಮಿತೆ
ಅದು ಹಾಗೇ ಇರಲಿ ಕೊನೆಯವರೆಗೆ
ಜಗದ ಸಜೀವಗೊಂಬೆಯಾಟದಲ್ಲಿ
ನಮ್ಮೆಲ್ಲರದ್ದೂಒಂದೊಂದು ವೇಷ
ಹತ್ತು ಹಲವು ಪಾತ್ರ
ಪರದೆ ಹಿಂದಿರುವ
ನಿನ್ನ ಕೈಗೇ ಸೂತ್ರಕೊಟ್ಟ
ನಮ್ಮೊಳಗೀಗ ಆತಂಕವಿಲ್ಲ
ಇರುವುದು ನಿರಾಳತೆ ಮಾತ್ರ
ಕಾಲಾಂತರ
ಮದುವೆ ಮನೆಯಲ್ಲಿ
ಬಡಿಸುವಉಸ್ತುವಾರಿ ಹೊತ್ತ
ಎಳೆಯ ಜವ್ವನಿಗರಂತೆ
ಚುರುಕಿನಿಂದಓಡಾಡುತ್ತಿದ್ದ
ಮುಳ್ಳುಗಳು ತಟಸ್ಥವಾಗಿವೆ
ಏನೆಂದರೂ ಬರಿದಾಗಲಾರೆಎಂದು
ಪಟ್ಟುಹಿಡಿದು ಕುಳಿತಿದ್ದ
‘ಕೋಶ’ಖಾಲಿಯಾಗಿ
ಹಲವು ಸಮಯವೇ
ಕಳೆದುಹೋಗಿದೆ
ಗಂಟೆಗೊಮ್ಮೆ ಸದ್ದು ಹೊರಡಿಸುತ್ತಿದ್ದ
ಬಾಯಿಯೊಂದು ಸ್ತಬ್ಧವಾಗಿದೆ
ಏನ ಹೇಳಲಿ ಹೇಗೆ ಹೇಳಲಿ
ಎಂದು ಪರಿತಪಿಸುತ್ತಲೇ
ನಾಲಗೆಯನ್ನು ಮಡಚಿಟ್ಟುಮಲಗಿದೆ
ಧಾವಂತದಜಗತ್ತನ್ನು
ಕುತೂಹಲದಕಣ್ಣಿನಿಂದ
ಕಾಣುತ್ತಾ
ಮಳೆಗೆ ಬೆದರಿದಗುಬ್ಬಚ್ಚಿಯಂತೆ
ಕುಳಿತಿದೆ ಕೆಟ್ಟುಹೋದಗಡಿಯಾರ
ಆದರೂ…
ಕಾಲ ಹೀಗೆಯೇಇರುವುದಿಲ್ಲ
ಬದಲಾಗುತ್ತದೆ
ಎಂದು ನುಡಿಯುವ ಸಮಯಕ್ಕೆ
ಕಾಯುತ್ತಿದೆಅದರ ನಾಲಗೆ
ಮತ್ತು
ಹೃದಯ
-ಡಾ. ವಿಶ್ವನಾಥ ಎನ್ ನೇರಳಕಟ್ಟೆ