“ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದರ ವೈಚಾರಿಕ ಚಿಂತನೆ”: ರವಿತೇಜ.ಎಂ.ಎನ್

ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನ ಮತ್ತು ಸಂವಹನ ಮಾಧ್ಯಮ. ಇದು ಮಾತು,ಬರಹ ಮತ್ತು ಭಾವಾಭಿವ್ಯಕ್ತತೆ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ.ಭಾಷೆಗೆ ರೂಪ, ಆಕಾರ, ಭೌತಿಕ ಅಥವಾ ರಚನಾತ್ಮಕ ಗುಣಗಳೇನೂ ಇಲ್ಲ. ಇದು ಪ್ರಾದೇಶಿಕವಾಗಿ ಜನಜೀವನದ ನಿತ್ಯ ವ್ಯವಹಾರದ ಸನ್ನಿವೇಶವನ್ನು ಅರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ನಿರ್ವಹಿಸುವ ಮಾಧ್ಯಮವಾಗಿರುತ್ತದೆ. ಮಾನವನಗಿರುವ ಚಿಂತಿಸುವ, ಪರಿಭಾವಿಸುವ , ಸದಾ ಚೈತನ್ಯದಾಯಕದಿಂದ ಮೌಖಿಕವಾಗಿ ಸ್ಪಂದಿಸುವ , ಪ್ರತಿಕ್ರಿಯಿಸುವ ಬೌದ್ಧಿಕ ಶಕ್ತಿಯೇ ಭಾಷೆಗೆ ಮೂಲ ಹಿನ್ನೆಲೆಯಾಗಿದೆ.ಈ ಪ್ರಕ್ರಿಯೆಯ ಸಾಧ್ಯತೆಯ ಸತ್ಫಲವೇ ಸಂವಹನವಾಗಿ, ಭಾಷೆಯ ಸುಸಂಘಟಿತ ರೂಪದ ಧ್ವನಿಶರೀರದಿಂದ ಅರ್ಥ ಸ್ಫುರಿಸುತ್ತದೆ.ಭಾಷೆ ಬಲ್ಲವರಿಗೆ ಭಾವನೆ ಸಂಲಗ್ನಗೊಳ್ಳುವುದಾದರೂ ಭಾವನೆಗಳೆಲ್ಲವನ್ನೂ ಭಾಷೆಯ ತೆಕ್ಕೆಗೆ ತರಲು ಸಾಧ್ಯವಿಲ್ಲದ್ದರಿಂದ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಬಳಸಿದಾಗ ಮಾತ್ರ ಉದ್ದೇಶ ಸಾಧಿತವಾಗುತ್ತದೆ.ಭಾಷೆ ಮತ್ತು ಆಯಾ ಭೌಗೋಳಿಕತೆಯಲ್ಲಿ ಮಾತನಾಡುವ ಜನರ ಆಂತರಿಕ ಸಂಬಂಧವನ್ನು ಅರಿಯುವುದು ಅಗತ್ಯವಾಗಿದೆ.ವಿವಿಧ ಭಾಷೆಗಳು ಹಲವು ಸಾಮಾನ್ಯ ಗುಣಾಂಶಗಳನ್ನು ಹೊಂದಿದ್ದರೂ ಎಲ್ಲವೂ ಒಂದೇ ಮೂಲದಿಂದ ರೂಪುಗೊಂಡವುಗಳಲ್ಲ,ಇದರಿಂದಲೇ ಪ್ರತಿಯೊಂದು ಭಾಷೆಯು ತನ್ನ ಮೂಲ ಸ್ವರೂಪದ ಸ್ವಂತಿಕೆಯ ಜಾಯಮಾನವನ್ನು ಸಮರ್ಥಿಸುತ್ತಲೇ ವಿಕಾಸಗೊಳ್ಳುತ್ತದೆ. ಹಾಗಾಗಿ ಪ್ರತಿಯೊಂದು ಮಾತೃಭಾಷೆಯು ಸಮುದಾಯವನ್ನು ಸಾಮಾಜೀಕರಣಗೊಳಿಸಿ ಸಾಹಿತ್ಯ,
ಸಾಂಸ್ಕೃತಿಕ ಪರಂಪರೆ ಮತ್ತು ಸಂಸ್ಕೃತಿಗೆ ತನ್ನದೇ ಮಹತ್ವದ ಕೊಡುಗೆ ನೀಡುವಲ್ಲಿ ಮೇಲುಗೈ ಸಾಧಿಸಿದೆ.

ಮನುಷ್ಯನಲ್ಲಿ ಬುದ್ಧಿಶಕ್ತಿ ಬೆಳೆದಂತೆ ಸುತ್ತಲಿನ ನಿಸರ್ಗ, ಮೃಗ ಪಕ್ಷಿಗಳ ಜೀವನಕ್ರಮ, ಸ್ವಭಾವ , ಸಹಚರರ ನಡವಳಿಕೆ ಆತನಲ್ಲಿ ಹೊಸ ಹೊಸ ಭಾವ, ಚಿಂತನೆಯನ್ನು ಪ್ರಚೋದಿಸಿತು.ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆಯು ಬೆಳೆಯುವುದರ ಜೊತೆಗೆ ಜಗತ್ತಿನ ವಿವಿಧೆಡೆ ಎಲ್ಲಾ ನಾಗರಿಕತೆಗಳಲ್ಲೂ ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ಹಲವು ಭಾಷೆಗಳೂ ವಿಕಸನಗೊಂಡವು.ವಿಶ್ವಸಂಸ್ಥೆಯು ನಡೆಸಿದ ಒಂದು ಸಮೀಕ್ಷೆಯ ಪ್ರಕಾರ 1900 ನೇ ಇಸವಿಯಲ್ಲಿ ಜಗತ್ತಿನಲ್ಲಿ ಸುಮಾರು 10,000 ಮಾತೃಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700 ಮಾತೃ ಭಾಷೆಗಳು ಮಾತ್ರ ಉಳಿದಿವೆ. ಉಳಿದಿರುವ ಮಾತೃಭಾಷೆಗಳ ಪೈಕಿ ಶೇಕಡಾ 50ರಷ್ಟು ಮಾತೃಭಾಷೆಗಳನ್ನು ಮಾತ್ರ ಮಕ್ಕಳಿಗೆ ಕಲಿಸಲಾಗುತ್ತಿದೆ. ಮಿಕ್ಕ ಮಾತೃಭಾಷೆಗಳು ನಶಿಸಿ ಹೋಗುವ ಅಂಚಿನಲ್ಲಿವೆ. 2001ರ ಜನಗಣತಿಯ ಪ್ರಕಾರ ಭಾರತ ದೇಶದಲ್ಲಿ 122 ಪ್ರಮುಖ ಮಾತೃಭಾಷೆಗಳು ಮತ್ತು 1,599 ಇತರೆ ಭಾಷೆಗಳು ಇರುವುದಾಗಿ ದಾಖಲೆಗಳಿವೆ. ಜಾಗತೀಕರಣದ ಪ್ರಭಾವಕ್ಕೆ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳು ಬಲಿಯಾಗಿ ಸಂಕಷ್ಟದಲ್ಲಿವೆ. ಭಾಷೆ ಸತ್ತರೆ ಸಮಾಜದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗುತ್ತದೆ. ಒಂದು ಭಾಷೆಯನ್ನು ಕಳೆದುಕೊಂಡರೆ ಒಂದು ಜ್ಞಾನವನ್ನು, ಅನುಭವಗಳನ್ನು, ಮೌಲ್ಯಗಳನ್ನು, ಔಷಧಿಗಳನ್ನು, ಅಡುಗೆ ವಿಧಾನಗಳನ್ನು, ಅನೇಕ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ನಾವು ಕಳೆದುಕೊಂಡಂತೆಯೇ ಸರಿ. ಹಾಗಾಗಿ ಜಗತ್ತಿನ ಎಲ್ಲಾ ಭಾಷೆಗಳನ್ನು ಉಳಿಸಿ ಬೆಳೆಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.

ವಿಶ್ವ ಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ( UNICEF) ಯ ಪ್ರಕಾರ “ಮಾತೃಭಾಷೆಯಲ್ಲಿ ನೀಡುವ ಶಿಕ್ಷಣವು ಮಗುವಿನ ಕಲಿಕೆಯನ್ನು ಅಂತರ್ಗತಗೊಳಿಸಿ, ಭವಿಷ್ಯದ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿಯನ್ನು ನಿರ್ಮಿಸುತ್ತದೆ.ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಯುವ ಕಲಿಕಾ ವಾತಾವರಣವನ್ನು ಕಲ್ಪಿಸಿಕೊಡಬೇಕು.”
ಮಕ್ಕಳನ್ನು ಪಾಲಿಸಿ ಪೋಷಿಸುವುದು ಸಂತೋಷದಾಯಕ ಅನುಭವವಾಗಿದೆ. ಮುಗ್ಧ ಮಕ್ಕಳನ್ನು ಮುದ್ದಾಡುವುದು, ಚುಂಬಿಸುವುದು, ತಬ್ಬಿಕೊಳ್ಳುವುದು, ಆಡುವುದು ಮತ್ತು ಅವರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವುದು ಪ್ರತಿ ಪೋಷಕರ ಪರಮಾನಂದದ ಸಂಗತಿಯಾಗಿದೆ.ಮೊದಲ ಬಾರಿಗೆ ತೊದಲು ನುಡಿಯುವ ಪುಟಾಣಿ ಮಕ್ಕಳ ಮುದ್ದು ಮಾತುಗಳಿಗೆ ಮಾರುಹೋಗದಿರುವವರೇ ಇಲ್ಲ. ಪುಟ್ಟ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಂಭಾಷಿಸಲು ಶುರು ಮಾಡಿದಾಗ ಒಂದು ಸುಂದರವಾದ ಆಹ್ಲಾದತೆ ಏರ್ಪಡುತ್ತದೆ.ಸುಮಾರು ಎರಡು ವರ್ಷದ ಮಗು ಅನುಕರಣೆಯಿಂದ ಕೆಲವು ಪದಗಳನ್ನು ಪ್ರಯತ್ನ ದೋಷದ ವಿಧಾನದಿಂದ ಕಲಿಯುತ್ತದೆ.ಅದರ ಉಚ್ಚಾರಣೆ ಸ್ಪಷ್ಟವಾಗಿರುವುದಿಲ್ಲ.ಇದನ್ನು ಬಾಲಭಾಷೆ , ಮಕ್ಕಳಭಾಷೆ ಎನ್ನುತ್ತಾರೆ.ಮಕ್ಕಳ ಈ ಮಾತು ಕೇಳಲು ಇಂಪಾಗಿ ಸಂತೋಷವನ್ನುಂಟು ಮಾಡುವುದರಿಂದ ಇದನ್ನು ‘ಮುದ್ದು ಮಾತು’ ಎನ್ನುವರು.ಇಂತಹ ಮಾತಿನಲ್ಲಿ ಮಧ್ಯದ ಕೆಲವು ಅಕ್ಷರಗಳು ಬಿಟ್ಟು ಹೋಗಿರುತ್ತವೆ. ಮಾತನಾಡುವುದಕ್ಕೆ ಅವಶ್ಯಕವಾದ ಅಂಗಗಳ ಮಾಂಸಖಂಡಗಳು ಪಕ್ವವಾಗಿ ಸಮನ್ವಯತೆ ತೋರಿದಾಗ ಈಗಾಗಲೇ ಅಮ್ಮನ ಲಾಲಿಹಾಡು , ಅಜ್ಜಿಯ ಜೋಗುಳ ಪದಗಳನ್ನು ಆಲಿಸಿರುವುದರಿಂದ ಮಗುವು ತೊದಲು ನುಡಿಗಳಾದ ಮಾ..ಮಾ..,ಡಾ..ಡಾ..,ತಾ..ತಾ..,ಬಬ…ಪಪ..
ಶಬ್ಧಗಳನ್ನು ಶುರುಮಾಡುತ್ತದೆ.ಈ ತೊದಲು ನುಡಿ ಮತ್ತು ಮುದ್ದಿನ ಮಾತುಗಳಿಗೆ ಮೂಲವಾಗಿರುವುದೇ ಮಗುವು ಗಮನಿಸುತ್ತಿದ್ದ ಮಾತೃಭಾಷೆಯಾಗಿದೆ.

ಈ ಜಗತ್ತಿನಲ್ಲಿ ತಮ್ಮ ಜೀವನದ ಪ್ರಯಾಣವನ್ನು ಎಳೆಯ ಮಕ್ಕಳು ಪ್ರಾರಂಭಿಸುವಾಗ ಪೋಷಕರು ಮತ್ತು ಶಿಕ್ಷಕರು ಪರಸ್ಪರ ಸಹಯೋಗದಲ್ಲಿ ಮಗುವಿಗೆ ಶಿಕ್ಷಣದ ಅಡಿಪಾಯವನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಮಾತೃಭಾಷೆಯಲ್ಲಿ ಬೋಧನೆ ಮತ್ತು ಕಲಿಕೆಯು ಮಗುವಿನ ಅರಿವಿನ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ, ಸಂವಹನ ಕೌಶಲ್ಯಗಳನ್ನು ಸುಧಾರಿಸುವುದರೊಂದಿಗೆ ಮಗು ಮತ್ತು ಅದರ ಕಲಿಕಾ ವಾತಾವರಣದ ನಡುವೆ ಭಾವನಾತ್ಮಕ ಸಂಪರ್ಕವನ್ನು ಸೃಷ್ಟಿಸಲು ಮಗುವಿಗೆ ಸಹಾಯ ಮಾಡುತ್ತದೆ ಎಂದು ಪುರಾವೆಗಳು ಸ್ಪಷ್ಟಪಡಿಸುತ್ತವೆ.

ಹೆಚ್ಚು ಮುಖ್ಯವಾಗಿ, ತಮ್ಮ ಮಾತೃಭಾಷೆಯಲ್ಲಿ ಕಲಿಸಿದ ಮಕ್ಕಳು ದೀರ್ಘಾವಧಿಯಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ. ತಮ್ಮ ಸ್ವಂತ ಭಾಷೆಯಲ್ಲಿ ಕಲಿಯುವುದು ಮತ್ತು ಕಲಿಸುವುದು ಸಮುದಾಯದ ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮೊದಲಿಗೆ ಮಾತೃಭಾಷೆಯನ್ನು ಪಾಂಡಿತ್ಯಪೂರ್ಣವಾಗಿ ಕಲಿಸಿದರೆ ಎರಡನೇಯ ಭಾಷೆಯನ್ನು ಹೆಚ್ಚು ಸುಲಭವಾಗಿ ಕಲಿಯಲು ಅಗತ್ಯವಾದ ಅರಿವಿನ ಬೆಳವಣಿಗೆಯನ್ನು ಉತ್ತೇಜಿಸಿದಂತಾಗುತ್ತದೆ. ಇದರರ್ಥ ಒಂದು ಭಾಷೆಯನ್ನು ಚೆನ್ನಾಗಿ ಕಲಿಯುವುದು ಎರಡನೇಯ ಭಾಷೆಯ ಕಲಿಕೆಗೆ ಸಹಾಯ ಮಾಡುತ್ತದೆ, ಅದು ಇಂಗ್ಲೀಷ್ ಆಗಿರಬಹುದು ಅಥವಾ ಯಾವುದೇ ಇತರ ಭಾಷೆಯಾಗಿರಬಹುದು.
ಹಾಗಾಗಿ ಪ್ರತಿ ಮಗುವಿನ ಬೌದ್ಧಿಕ, ಶೈಕ್ಷಣಿಕ, ಸಾಮಾಜಿಕ,
ಆಧ್ಯಾತ್ಮಿಕ, ಸಾಂಸ್ಕೃತಿಕ, ಆಂತರಿಕ, ಆರ್ಥಿಕ, ಬೆಳವಣಿಗೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ಆಗಬೇಕಾಗಿರುವುದು ಸಹಜ ಮತ್ತು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕ್ರಮವಾಗಿ ವೈಚಾರಿಕ, ಜಾಗತಿಕ ಮತ್ತು ಮನಃಶಾಸ್ತ್ರದ ತಳಹದಿಯ ಆಯಾಮದಲ್ಲಿ ಮಾತೃಭಾಷೆಯು ಮಗುವಿನ ಕಲಿಕೆಗೆ ಅಕ್ಷರಶಃ ನೆರವಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಮತವಾಗಿದೆ.

□ ವೈಚಾರಿಕ ತಳಹದಿಯ ಆಯಾಮದಲ್ಲಿ ಮಾತೃಭಾಷೆ :

ಕಲಿಕೆಯ ಆರಂಭಿಕ ಹಂತದಲ್ಲಿ ಮಕ್ಕಳು ಸುಲಭವಾಗಿ ಗ್ರಹಿಸುವಂಥ ವಾತಾವರಣ ಇರಬೇಕು. ಮಕ್ಕಳಿಗೆ ಮನೆಯ ಪರಿಸರದಲ್ಲಿ ಪರಿಚಿತವಾದ ಭಾಷೆಯಲ್ಲಿಯೇ ಕಲಿಯುವಂಥ ವ್ಯವಸ್ಥೆ ಇದ್ದರೆ ಅವರು ಹೊಸ ವಿಷಯವನ್ನು ಸುಲಭವಾಗಿ ಗ್ರಹಿಸುತ್ತಾರೆ.ಮಕ್ಕಳು ಪ್ರಾಥಮಿಕ ಹಂತದಲ್ಲಿ ತಮ್ಮದೇ ಭಾಷೆಯಲ್ಲಿ ಕಲಿಯುವುದರಿಂದ ಕಲಿಕೆಯ ಪ್ರಕ್ರಿಯೆಗೆ ಭದ್ರ ಬುನಾದಿ ಒದಗುತ್ತದೆ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರ ನಿಲುವಾಗಿದೆ. ಪಠ್ಯದಲ್ಲಿನ ಭಾಷೆ ತಮ್ಮ ಪರಿಸರದ ಭಾಷೆಗಿಂತ ಭಿನ್ನವಾಗಿದ್ದಲ್ಲಿ ಅದು ಮಕ್ಕಳ ವಿಷಯ ಗ್ರಹಿಕೆಗೆ ಅಡ್ಡಿಯಾಗುತ್ತದೆ. ಇದಕ್ಕೆ ಪರಿಸರದ ಭಾಷೆ ಪಠ್ಯದ ಭಾಷೆಯೂ ಆಗುವುದೇ ಪರಿಹಾರ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದೇ ಶಿಕ್ಷಣದ ಅತ್ಯುತ್ತಮವಾದ ಮಾಧ್ಯಮ
ಎನ್ನುವುದನ್ನು ಅನೇಕ ಅಧ್ಯಯನಗಳು (ಯುನೆಸ್ಕೊ ಶೈಕ್ಷಣಿಕ ವರದಿ1953; ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 1968, 1986; 2020) ಯಾವುದೇ ಸಂದೇಹವಿಲ್ಲದೆ ಅಧಿಕೃತವಾಗಿ ದೃಢಿಕರಿಸಿವೆ.

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಸಾಮಾಜಿಕ, ಜ್ಞಾನಾತ್ಮಕ,ಭಾವನಾತ್ಮಕ ಮತ್ತು ಮಕ್ಕಳ ಸಮಯೋಜಿತ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಆಗುವ ಸಕಾರಾತ್ಮಕ ಪರಿಣಾಮಗಳನ್ನು ವ್ಯಾಪಕವಾಗಿ ಸಂಶೋಧನೆಗಳಿಗೆ ಒಳಪಡಿಸಿ ಆಳವಾಗಿ ಚರ್ಚಿಸಲಾಗಿದೆ.
ಮಗುವಿನ ಆರಂಭಿಕ ಕಲಿಕೆಯು ಅದರ ಮಾತೃಭಾಷೆಯಲ್ಲಿ ನಡೆದಾಗ ಮಗು ಮಾತನಾಡುವ ಭಾಷೆ ಮತ್ತು ಬರೆಯುವ ಭಾಷೆಗೆ ಸಂಯೋಜನೆ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ.ಇದರೊಂದಿಗೆ ಮಾತೃಭಾಷೆಯಲ್ಲಿನ ಶಿಕ್ಷಣವು ಗಟ್ಟಿಯಾದ ಸ್ವ-ಕಲ್ಪನೆ, ಆತ್ಮ-ವಿಶ್ವಾಸವನ್ನು ಬೆಳೆಸಿಕೊಳ್ಳಲು,ಸೃಜನಾತ್ಮಕ, ಕ್ರಿಯಾತ್ಮಕ ಆಲೋಚನೆ ಸಹಿತ ಉನ್ನತ ಮಟ್ಟದ ಜ್ಞಾನಾತ್ಮಕ ಕೌಶಲ್ಯಗಳು ಮಗುವಿನಲ್ಲಿ ವಿಕಾಸಗೊಳ್ಳಲು ನೆರವಾಗುತ್ತದೆ.ಪ್ರಾಥಮಿಕ ಶಾಲಾ ಶಿಕ್ಷಣವು ಮಕ್ಕಳ ವ್ಯಕ್ತಿತ್ವವನ್ನು , ನಡತೆಗಳನ್ನು ತಿದ್ದುವುದರಲ್ಲಿ ಅಸಾಧಾರಣ ಕಾರ್ಯ ಮಾಡುತ್ತದೆ.ಕುಟುಂಬದಲ್ಲಿ ಕಲಿತ ಅನೇಕ ಗುಣಗಳನ್ನು ಶಾಲೆಯು ತಿದ್ದಿ ಸಮಾಜವು ಒಪ್ಪುವಂತೆ ಮಾಡುತ್ತದೆ.ಮಗು ಎಂಬ ಮರುಡಾದ ಕಲ್ಲನ್ನು ಕಡೆದು ಅದಕ್ಕೊಂದು ಆಕರ್ಷಕ ರೂಪ ಕೊಟ್ಟು , ಜಗದ್ವಿಖ್ಯಾತವೂ ಪೂಜಾರ್ಹವೂ ಆದ ವಿಗ್ರಹದ ರೂಪವನ್ನು ಕೊಡುವುದು ಪ್ರಾಥಮಿಕ ಶಿಕ್ಷಣದ ಮುಖ್ಯ ಕಾರ್ಯ.ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಥಮಿಕ ಶಿಕ್ಷಣವೇ ಪ್ರಮುಖವಾಗಿದ್ದು , ಅದರ ಪರಿಸರದಲ್ಲಿ ಮಕ್ಕಳಿಗೆ ಹೊಸ ಸಂಸ್ಕೃತಿಗಳು ಪರಿಚಯವಾಗುತ್ತವೆ.

● ಮೆದುಳು ಮತ್ತು ಮಾತೃಭಾಷೆ :
ಮಾತನಾಡುವುದು, ಕೇಳುವುದು, ಬರೆಯುವುದು,ಓದುವುದು ಇತ್ಯಾದಿಗಳೆಲ್ಲ ದೇಹದ ವಿವಿಧ ಅಂಗಾಂಗಗಳ ಮೂಲಕ ನಿರ್ವಹಣೆಯಾಗುವ ಕ್ರಿಯೆಗಳಂತೆ ತೋರುತ್ತವೆ.ಆದರೆ ಈ ಎಲ್ಲಾ ಅಂಗಾಂಗಗಳ ಕ್ರಿಯಾವರ್ತನವನ್ನು ನಿಯಂತ್ರಿಸುವ ಮತ್ತು ಸಂಯೋಜಿಸುವ ಕೆಲಸ ಮೆದುಳಿನಲ್ಲಿ ನಡೆಯುತ್ತದೆ.ಮಗುವಿನ ಮರೆವು , ತೊದಲುವುದು, ಅಸ್ಪಷ್ಟವಾಗಿ ಮಾತನಾಡುವುದು, ಬರವಣಿಗೆಯ ತೊಡಕುಗಳು, ಸರಾಗ ಇವೆಲ್ಲಾ ಭಾಷಾಬಳಕೆಯ ವಿವಿಧ ಅಂಶಗಳು ಮಗುವಿನ ಬಾಲ್ಯದಲ್ಲಿಯೇ ಪ್ರಾರಂಭವಾಗುತ್ತವೆ.ಇದರಂತೆ ಮಕ್ಕಳಲ್ಲಿ ಮೆದುಳಿನ ವಿಕಾಸವಾದಂತೆ ಭಾಷಾ ಬೆಳವಣಿಗೆಯ ಕ್ರಮದಲ್ಲಿ ವ್ಯತ್ಯಾಸವಾಗುತ್ತದೆ.ಭಾಷಾನುಕರಣೆ ನರಮಂಡಲದಲ್ಲಿ ಪೂರ್ತಿವಿಕಸನವಾದಾಗಲೇ ಮಾತಿನ ಅನುಕರಣೆ ಪ್ರಬುದ್ಧವಾಗುತ್ತದೆ.ಹಾಗೆಯೇ ಪದಕೋಶ, ಪದಜೋಡಣೆ,ಅರ್ಥಕೋಶ,ಓದು, ಬರಹ ಇತ್ಯಾದಿ ಭಾಷಿಕ ಪ್ರಕ್ರಿಯೆಗಳು ಎಲ್ಲ ವಯಸ್ಕ ಮೆದುಳಿನಲ್ಲಿ ಸಾಮಾನ್ಯವೆಂಬಂತೆ ಕಂಡುಬಂದರೂ ಮೆದುಳಿನ ಭಾಷಾ ಸಂಬಂಧಿತ ರಚನೆ ಹಾಗೂ ಕೇಂದ್ರೀಕರಣ ಭಿನ್ನವಾಗಿದೆ.
ನಮ್ಮ ಹಿರಿಯರು ಹೇಳಿರುವ “ಮೂರು ವರ್ಷದ ಬುದ್ಧಿ ; ನೂರು ವರ್ಷದವರೆಗೆ, ಗಿಡವಾಗಿ ಬಾಗದ್ದು ; ಮರವಾಗಿ ಬಾಗಿತೇ?” ಎಂಬ ಗಾದೆ ಮಾತುಗಳು ಸಹ ಬಾಲ್ಯದ ಕಲಿಕೆಯ ಮಹತ್ವವನ್ನೇ ಸಾರುತ್ತವೆ.ಈ ಆಧಾರದಲ್ಲಿ ಮಾತೃಭಾಷೆಯಲ್ಲಿ ಕರಗತ ಮಾಡಿಕೊಂಡಿದ್ದೆಲ್ಲವೂ ಕೊನೆಯವರೆಗೂ ಇರುತ್ತದೆ, ಶಿಕ್ಷಣದ ಮೂಲಸತ್ವದ ಆತ್ಮವಿರುವುದೇ ಮಾತೃಭಾಷೆಯಲ್ಲಿ ಎಂದು ರುಜುವಾತಾಗಿದೆ.

● ಭಾವನೆ ಮತ್ತು ಸಂವೇದನೆಯ ಸ್ಫೂರ್ತಿ ಮಾತೃಭಾಷೆ :
ಹುಟ್ಟಿದಾಗ ಏನನ್ನು ಅರಿಯದ ಮಗು ಬೆಳೆದಂತೆಲ್ಲಾ ಬಾಹ್ಯ ಪ್ರಪಂಚದ ಪರಿಚಯ ಮಾಡಿಕೊಳ್ಳುತ್ತದೆ.ಇಂತಹ ಹೊರ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುವ ಸಾಧನಗಳೆಂದರೆ ‘ಜ್ಞಾನದ ಹೆಬ್ಬಾಗಿಲುಗಳು’ ಎನಿಸಿರುವ ಪಂಚೇಂದ್ರಿಯಗಳು.ಇಂದ್ರಿಯಗಳ ಮೂಲಕ ಪರಿಚಯಿಸಲ್ಪಟ್ಟ ಸಂಗತಿಗಳು ಮೆದುಳನ್ನು ತಲುಪಿದಾಗ ಭಾಷೆಯ ಅರಿವುಂಟಾಗುತ್ತದೆ.ಇದನ್ನೇ ಜ್ಞಾನ ಎನ್ನುವೆವು.ಈ ಪ್ರಕ್ರಿಯೆಯು ಇಂದ್ರಿಯಾನುಭವ, ಸಂವೇದನೆ, ಪ್ರತ್ಯಕ್ಷಾನುಭವ ಭಾವನೆಗಳಾಗಿ ಮೂರು ಹಂತದಲ್ಲಿ ಜರುಗುತ್ತದೆ.ಹೀಗೆ ಮಾನಸಿಕ ವ್ಯಾಪರಗಳಾದ ಭಾವನೆ ಮತ್ತು ಸಂವೇದನೆಗಳು ಮಾತೃಭಾಷೆಯಲ್ಲಿ ಸದಾ ಸ್ಫೂರ್ತಿಯಾಗಿ ಸಮ್ಮಿಳಿತಗೊಂಡಿರುತ್ತವೆ.ಭಾಷೆ ಒಂದು ಸಂಪರ್ಕ ಸಾಧನವೆಂಬುದರಲ್ಲಿ ಸಂದೇಹವಿಲ್ಲ.ಸಮಾಜದಲ್ಲಿ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಲಿರುವ ಮಾಧ್ಯಮ ಭಾಷೆಯಾಗಿದೆ.ದಿನನಿತ್ಯದಲ್ಲಿ ಭಾಷೆಯ ಬಳಕೆಯಲ್ಲಿ ಮತ್ತು ಕಲಿಕೆಯಲ್ಲಿ ಹಲವಾರು ಸಣ್ಣ-ಪುಟ್ಟ ಕುಂದು-ಕೊರತೆಗಳಿರುತ್ತವೆ.ಉದಾಹರಣೆಗೆ : ಪೂರ್ತಿ ಗ್ರಹಿಸಲಾಗದಿರುವುದು, ಮಾತನಾಡದಿರುವುದು,ಮುಂತಾದವು.ಇವು ಮಾನವ ಜಾತಿಯಲ್ಲಿ ಪರಸ್ಪರ ವ್ಯತ್ಯಾಸಕ್ಕೆ ಏರುಪೇರಿಗೆ ಕಾರಣವಾಗುತ್ತವೆ.ಭಾಷೆ ಹಾಗೂ ಮೆದುಳಿಗಿರುವ ಸಂಬಂಧ ಈ ವ್ಯತ್ಯಾಸಕ್ಕಿಂತಲೂ ಸೂಕ್ಷ್ಮವಾಗಿದೆ.ಬಹಳಷ್ಟು ಭಾಷೆಯ ಕುಂದು-ಕೊರತೆಗಳಿಗೆ ಮೆದುಳಿನ ನ್ಯೂನತೆ , ಹಾನಿ ಮತ್ತು ಆಘಾತಗಳು ಕಾರಣವಾಗಿರುತ್ತವೆ ಎಂಬುದನ್ನು ಇಲ್ಲಿ ಅರಿಯುವುದು ಅವಶ್ಯಕವಾಗಿದೆ.
ಮಾತೃಭಾಷೆಯ ಶಿಕ್ಷಣ ತನ್ನಷ್ಟಕ್ಕೇ ತಾನೇ ಕಲಿಯುವಿಕೆಯನ್ನು ಸಬಲಗೊಳಿಸುವುದಿಲ್ಲ, ಅದು ಪರಿಣಾಮಕಾರಿಯಾಗಬೇಕಾದರೆ ಮಗುವಿನ ದೈಹಿಕ ಮತ್ತು ಮಾನಸಿಕ ಸದೃಢತೆಯೊಂದಿಗೆ ಶಿಕ್ಷಣದ ಮೂಲ ವಿಚಾರಗಳು ಸಹ ಸಕ್ರಿಯವಾಗಿರಬೇಕಾಗುತ್ತದೆ.

  • ಜಾಗತಿಕ ತಳಹದಿಯ ಆಯಾಮದಲ್ಲಿ ಮಾತೃಭಾಷೆ :

ಭಾಷೆ ಮಾನವ ಜೀವನದ ಮೂಲಭೂತ ಅಂಶವಾಗಿದೆ. ಇದು ಸಂವಹನದ ಸಾಧನವಾಗಿದೆ, ಆಲೋಚನೆಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸುವ ಸಾಧನವಾಗಿದೆ ಮತ್ತು ಸಾಂಸ್ಕೃತಿಕ ಪ್ರಸರಣಕ್ಕೆ ಒಂದು ವಾಹನವಾಗಿದೆ. ಎಲ್ಲ ಭಾಷೆಗಳಲ್ಲೂ ಮಾತೃಭಾಷೆಗೆ ವಿಶಿಷ್ಟ ಸ್ಥಾನವಿದೆ. ಇದು ಮಗುವು ತನ್ನ ಹೆತ್ತವರು, ಸಮಾಜ, ಸಂಸ್ಕ್ರತಿ ಮತ್ತು ಸಮುದಾಯದಿಂದ ಕಲಿಯುವ ಮೊದಲ ಭಾಷೆಯಾಗಿದೆ ಮತ್ತು ಇದು ಅವರ ಅರಿವಿನ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಆಧಾರವಾಗಿದೆ.

ಜಗತ್ತಿನ ಭಾಷಾ ತಜ್ಞರು, ಮಾನವಶಾಸ್ತ್ರಜ್ಞರು ಹಾಗೂ ಸಾಮಾಜಿಕ ಚಿಂತಕರು ಮಗುವಿನ ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಗು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದಿರುತ್ತದೆ. ಮಗುವಿನ ಚಿಂತನಾ ಕ್ರಮ, ಕ್ರಿಯಾಶೀಲತೆ, ವಾಕ್‌ ಚಾತುರ್ಯ, ಅರಿವು ಉತ್ತಮಗೊಳ್ಳುತ್ತದೆ. ಭಾವನಾತ್ಮಕ ಗುಣಗಳು ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಸಹಾಯವಾಗುತ್ತದೆ. ತಂದೆ ತಾಯಿಗಳು ತಮ್ಮ ಮಗುವಿನ ಶಿಕ್ಷಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಮಾತೃ ಭಾಷೆಯ ಮಹತ್ವವನ್ನು ಅರಿತು ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಮಾತೃಭಾಷಾ ದಿನ (IMLD) ವನ್ನು ಪ್ರತೀ ವರ್ಷ ಫೆಬ್ರವರಿ 21 ರಂದು ಆಚರಿಸಲಾಗುತ್ತದೆ. 1999 ರಲ್ಲಿ, ಮಾತೃಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾತೆಯನ್ನು ಉತ್ತೇಜಿಸಲು ವಿಶೇಷ ದಿನವಾಗಿ ಯುನೆಸ್ಕೋ ಘೋಷಿಸಿದೆ.

ಮಾತೃಭಾಷೆ ಮುಖ್ಯ ಏಕೆಂದರೆ ಅದು ನಮ್ಮ ತಾಯಿಯಿಂದ ನಾವು ಮೊದಲು ಕಲಿತ ಭಾಷೆಯಾಗಿದೆ. ಇದು ನಾವು ಹೆಚ್ಚು ಆರಾಮದಾಯಕವಾಗಿರುವ ಭಾಷೆ ಮತ್ತು ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಲು ಬಳಸುವ ಭಾಷೆಯಾಗಿದೆ. ನಮ್ಮ ಮಾತೃಭಾಷೆ ನಮ್ಮ ಗುರುತಿನ ಪ್ರಮುಖ ಭಾಗವಾಗಿದೆ. ಇದು ನಾವು ಯಾರೆಂದು ಜಗತ್ತಿಗೆ ಪರಿಚಯಿಸುವುದರೊಂದಿಗೆ ನಮ್ಮ ಅಸ್ಮಿತೆಯನ್ನು ಗುರುತಿಸುತ್ತದೆ.ಅರಿವಿನ ಬೆಳವಣಿಗೆಯಲ್ಲಿ ಮಾತೃಭಾಷೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಭಾಷೆಯ ಮೂಲಕವೇ ಮಕ್ಕಳು ಮೊದಲು ತಮ್ಮ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಮಾತೃಭಾಷೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆಯುವ ಮಕ್ಕಳು ಎರಡನೇ ಭಾಷೆಯಲ್ಲಿ ಶಿಕ್ಷಣ ಪಡೆದವರಿಗಿಂತ ಉತ್ತಮ ಅರಿವಿನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಕಾರಣ ಸರಳವಾಗಿದೆ: ಸಂಕೀರ್ಣ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವ್ಯಕ್ತಪಡಿಸುವುದು ಒಬ್ಬರ ಸ್ಥಳೀಯ ಭಾಷೆಯಲ್ಲಿ ಸುಲಭವಾಗಿದೆ, ಇದು ಹೆಚ್ಚು ಆಳವಾದ ಗ್ರಹಿಕೆ ಮತ್ತು ಅರಿವಿನ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.

ಒಬ್ಬರ ಮಾತೃಭಾಷೆಯು ಜನರಲ್ಲಿ ಕಲಿಕೆಯ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಅತ್ಯಂತ ಪ್ರಬಲವಾದ ಸಾಧನವಾಗಿದೆ. ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ತಮ್ಮ ಪೋಷಕರೊಂದಿಗೆ ಸಂವಾದ ಮಾಡುವ ಮೂಲಕ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತಾರೆ. ಮತ್ತು ಈ ಸಂವಹನ ಕೌಶಲ್ಯವು ಶಾಲೆಯಲ್ಲಿ ಅಥವಾ ತರಗತಿಯಲ್ಲಿ ಭಾಗವಹಿಸಲು ಸಾಂಸ್ಥಿಕ ಮಟ್ಟದ ಅತ್ಯುನ್ನತ ಅವಕಾಶವಾಗಿದೆ. ಶಾಲೆಯಲ್ಲಿ ಕಲಿಕೆಯು ಮಾತೃಭಾಷೆಯ ಬಳಕೆಗೆ ಒತ್ತು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಅದೇ ರೀತಿ, ಪೋಷಕರು ವಿಷಯಗಳನ್ನು ಚರ್ಚಿಸಲು ಮತ್ತು ಮಕ್ಕಳಿಗೆ ಕಥೆಗಳನ್ನು ಹೇಳಲು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಸಮಯವನ್ನು ಕಳೆಯುತ್ತಾರೆ, ಅದು ಅವರ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಮಕ್ಕಳು ಸೂಚನೆಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಮತ್ತು ಸಲೀಸಾಗಿ ಕಲಿಯಬಹುದು, ಇದು ಶೈಕ್ಷಣಿಕ ಯಶಸ್ಸಿಗೆ ಕಾರಣವಾಗುತ್ತದೆ.

ಮಾತೃಭಾಷೆಯು ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಅವರ ಉಪಪ್ರಜ್ಞೆಯಲ್ಲಿ ಜನಿಸಿದ ಕೂಡಲೇ ರೂಪಿಸಲು ಪ್ರಾರಂಭಿಸುತ್ತದೆ ಏಕೆಂದರೆ ಒಬ್ಬ ವ್ಯಕ್ತಿಯು ತನ್ನ ಗರ್ಭದಲ್ಲಿ ಅದನ್ನು ಮೊದಲು ಕೇಳುತ್ತಾನೆ. ವ್ಯಕ್ತಿಯ ವೈಯಕ್ತಿಕ ಮತ್ತು ಸಾಂಸ್ಕೃತಿಕ ಅಸ್ಮಿತೆ ಅವರ ಮಾತೃಭಾಷೆಯಿಂದಾಗಿ ಅಭಿವೃದ್ಧಿಗೊಂಡಿದೆ. ತನ್ನನ್ನು, ತನ್ನ ಸುತ್ತಮುತ್ತಲಿನ ಪರಿಸರವನ್ನು ಮತ್ತು ತನ್ನ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಮೂಲಕ, ವೈಯಕ್ತಿಕ ಗುರುತನ್ನು ಸ್ಥಾಪಿಸಿಕೊಳ್ಳುತ್ತಾನೆ.ಭಾರತದ ಗಣರಾಜ್ಯದಲ್ಲಿ ಭಾಷಾವಾರು ರಾಜ್ಯಗಳನ್ನು ವಿಂಗಡಿಸಲಾಗಿದೆ. ಒಂದೊಂದು ರಾಜ್ಯದಲ್ಲೂ ತನ್ನದೇ ಪ್ರಾದೇಶಿಕ ಭಾಷೆ ಇದೆ.ಜಾಗತೀಕರಣ ನಮ್ಮ ದೇಶದ ಎಲ್ಲಾ ಕ್ಷೇತ್ರಗಳ ರೀತಿ ಶಿಕ್ಷಣ ಕ್ಷೇತ್ರದ ಮೇಲೂ ಪ್ರಭಾವವನ್ನು ಬೀರಿದೆ.ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಮಾತೃಭಾಷೆಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವಂತೆ ಭಾರತೀಯ ಸಂವಿಧಾನದ 350ಎ ವಿಧಿಯು ಆದೇಶಿಸುತ್ತದೆ. 2009 ರ ಶಿಕ್ಷಣ ಹಕ್ಕು ಕಾಯಿದೆ ತಿಳಿಸಿರುವಂತೆ ಬೋಧನಾ ಮಾಧ್ಯಮವು ಪ್ರಾಯೋಗಿಕ ಹಂತದಲ್ಲಿ ಮಗುವಿನ ಮಾತೃಭಾಷೆಯಲ್ಲಿರಬೇಕು ಎಂಬ ಸಿದ್ಧಾಂತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದೆ.

ಗುಣಮಟ್ಟದ ಶಿಕ್ಷಣವೆಂದರೆ ಕೇವಲ ಶಾಲಾ ಕಟ್ಟಡಗಳು, ಪೀಠೋಪಕರಣಗಳು, ಮೂಲಸೌಕರ್ಯಗಳು,ಶಿಕ್ಷಕರ ನೇಮಕಾತಿ, ಇತ್ಯಾದಿಗಳು ಮಾತ್ರವಲ್ಲ. ಗುಣ ಮಟ್ಟದ ಶಿಕ್ಷಣ, ಪಠ್ಯವಿಷಯಗಳು ಮತ್ತು ಅವುಗಳನ್ನು ಬೋಧಿಸುವ ಭಾಷಾ ಮಾಧ್ಯಮದ ಮೇಲೆ ಅವಲಂಬಿತವಾಗಿರುತ್ತದೆ. ಪಠ್ಯವಿಷಯವು ಮತ್ತು ಭಾಷಾ ಮಾಧ್ಯಮ ಮಗುವಿನ, ಪೋಷಕರ ಹಾಗೂ ಸರ್ಕಾರದ ನಡುವಿನ ಸಂಬಂಧಗಳನ್ನು ಉತ್ತಮಪಡಿಸುವಂತೆ ಇರಬೇಕು. ಪಠ್ಯವಿಷಯವು ಮಗುವನ್ನು ಉತ್ತಮ ಕುಟುಂಬದ ಸದಸ್ಯನನ್ನಾಗಿ, ದೇಶದ ಉತ್ತಮ ಪ್ರಜೆಯಾಗಿಯೂ ಮತ್ತು ವಿಶ್ವ ಮಾನವನನ್ನಾಗಿ ರೂಪಿಸಬೇಕು. ಅತ್ಯಂತ ಪ್ರಮುಖ ವಿಷಯಗಳಾದ ಪಠ್ಯವಿಷಯ ಮತ್ತು ಭಾಷಾ ಮಾಧ್ಯಮವನ್ನು ಖಾಸಗಿ ಶಾಲೆಗಳ ಮರ್ಜಿಗೆ ಬಿಡುವಂತಿಲ್ಲ. ಸಂವಿಧಾನದ ಮೂಲತತ್ವಗಳನ್ನು ಸಾಧಿಸುವಂತೆ ಪಠ್ಯ ಮತ್ತು ಭಾಷಾ ವಿಷಯಗಳನ್ನು ಸರ್ಕಾರವೇ ಮಾಡಬೇಕಾದದ್ದು ಸಂವಿಧಾನಾತ್ಮಕ ಕರ್ತವ್ಯ. ಭಾಷಾತಜ್ಞರು, ಮಾನವ ಶಾಸ್ತ್ರಜ್ಞರು ಮತ್ತು ಸಮಾಜ ಚಿಂತಕರೂ ಸಹ ಮಾತೃಭಾಷೆಯಲ್ಲಿ ಶಿಕ್ಷಣದ ಮಾಧ್ಯಮ ಇರಬೇಕೆಂದು ಆಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯಗಳು ಇದನ್ನು ಗಮನಿಸಿದರೂ ಗಣನೆಗೆ ತೆಗೆದುಕೊಳ್ಳದೆ ಇರುವುದು ವಿಷಾದನೀಯ.

□ ಮನಃಶಾಸ್ತ್ರದ ತಳಹದಿಯ ಆಯಾಮದಲ್ಲಿ ಮಾತೃಭಾಷೆ :
ಮಕ್ಕಳ ಭಾವಕೋಶ ಅತ್ಯದ್ಭುತವಾದುದು.ಅದು ಕ್ಷಣ-ಕ್ಷಣಕ್ಕೂ ತನ್ನ ಸುತ್ತಮುತ್ತಣ ಪರಿಸರ ಪ್ರಪಂಚದಿಂದ ವಿಷಯಗಳನ್ನು ಸಂಗ್ರಹಿಸುತ್ತಿರುತ್ತದೆ.ನೀರು ಹರಿದಂತೆ ಅನೇಕ ವಿಷಯಗಳ ಕಡೆಗೆ ಅವಧಾನವನ್ನು ಹರಿಯಬಿಡುತ್ತದೆ.ಒಂದೇ ಒಂದು ವಿಷಯದ ಮೇಲೆ ಹೆಚ್ಚು ಹೊತ್ತು ಅವಧಾನವನ್ನು ಅದು ಇಡುವುದೇ ಇಲ್ಲ.ಅದರ ಕಲ್ಪನೆಗಳು ಅತ್ಯದ್ಭುತ; ಅದರ ಕನಸುಗಳೂ ಅನಂತ.ಮಕ್ಕಳ ಈ ಕಲ್ಪನೆ ಕನಸುಗಳನ್ನು ಸ್ಥಿರೀಕರಿಸಬಲ್ಲ ಜಾಡನ್ನು ಹಿಡಿದು ಅದಕ್ಕೆ ಹಂತ ಹಂತವಾಗಿ ಮನೋಭೂಮಿಕೆಯನ್ನು ಒದಗಿಸುವುದೇ ಮಾತೃಭಾಷೆ.ಮುಖ್ಯವಾಗಿ ಮಕ್ಕಳಲ್ಲಿನ ಅನೇಕ ಸಾಹಿತ್ಯಿಕ ಹುಟ್ಟು ಗುಣಗಳನ್ನು ಸಂಸ್ಕಾರಗೊಳಿಸಿ , ಸಶಕ್ತರನ್ನಾಗಿ ಮಾಡುವುದು ಮಾತೃಭಾಷೆಯ ಹಿರಿಮೆಯಾಗಿದೆ.ಮಕ್ಕಳ ಮನಸ್ಸಿನಲ್ಲಿ ಮೂಡುವ ಮನದನಿಗೆ ಕಿವಿಯಾಗಿ,ಭಾವನೆಗೆ ದನಿಯಾಗುವುದು ಮಾತೃಭಾಷೆಯ ಸೊಬಗಲ್ಲದೇ ಮತ್ತೇನು?.

ಇಂದಿನ ಮಕ್ಕಳೇ ಮುಂದಿನ ಜನಾಂಗ.ದೇಶದ ನಿಜವಾದ ಸಂಪತ್ತು ಎಂದರೆ ಮಕ್ಕಳು.ಅವರು ಮುಂದೆ ಸತ್ಪ್ರಜೆಗಳಾಗಿ ಬಾಳಬೇಕಾದರೆ ಇಂದಿನ ಅವರ ಜೀವನ ಹಸನಾಗಿರಬೇಕು.ಆದ್ದರಿಂದಲೇ ಮಕ್ಕಳಲ್ಲಿ ಬಾಲ್ಯದಿಂದಲೇ ಹೊಸತನ್ನು ಅರಿಯುವ, ಗ್ರಹಿಸುವ ಕುತೂಹಲ ನೈಜವಾಗಿಯೇ ಬೆಳೆದು ಬಂದಿರುವ ಪ್ರವೃತ್ತಿಯನ್ನು ಪೋಷಿಸಬೇಕಾಗಿದೆ.ಬಾಲ್ಯದಲ್ಲಿ ಮಕ್ಕಳನ್ನು ಓಲೈಸಲು ಹಿರಿಯರು ಕಥೆ-ಕವನಗಳನ್ನು ಕಟ್ಟಿ ಹೇಳುತ್ತಾರೆ.ಮಕ್ಕಳಿಗೆ ತಾವು ನೋಡುವ ಕಂಡಿರುವ ಸಾಮಾನ್ಯವಾದ ವಸ್ತುಗಳಲ್ಲಿ ಆಸಕ್ತಿ ಅಷ್ಟಾಗಿರುವುದಿಲ್ಲ.ಸಣ್ಣ ವಸ್ತುಗಳ ಬಗ್ಗೆಯೂ ಕುತೂಹಲ ಕೆರಳುವುದಿಲ್ಲ.ಬೃಹತ್ ವಸ್ತುಗಳು , ಅಸಾಮಾನ್ಯ ವಿಷಯ( ಯಕ್ಷಿಣಿ, ದೈವ, ಭೂತ, ಗೊಗ್ಗಯ್ಯನ ಕಥೆಗಳು)ಅದ್ಭುತ, ಸಾಹಸ, ರೋಮಾಂಚನಕಾರಿ ಘಟನೆಗಳ ಬಗ್ಗೆಯೇ ಹೆಚ್ಚು ಆಸಕ್ತಿ.ಈ ಹಿನ್ನೆಲೆಯಲ್ಲೇ ಪ್ರಪಂಚದಾದ್ಯಂತ ಮಕ್ಕಳ ಸಾಹಿತ್ಯ ಬೆಳೆದು ಬಂದಿರುವುದು.ಈ ಸಾಹಿತ್ಯದ ಆದ್ಯ ಪ್ರವರ್ತಕರು ತಾತ, ಅಜ್ಜಿ, ತಂದೆ, ತಾಯಿಯರು , ಬಂಧು-ಬಳಗದವರು ಹೇಳುವ ಕಥೆಗಳು,ಗೀತೆಗಳು , ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಸರಿಸಿ ಸಂಚರಿಸುವ ಊರೂರು ಅಲೆಯುವ ಚಾರಣಿಗರಿಂದ.ಇವೆರೆಲ್ಲರ ಸಂವಹನ ಭಾಷೆ ಸಾಮಾನ್ಯವಾಗಿ ಆಯಾ ಸ್ಥಳೀಯ ಭಾಷೆಯೇ ಆಗಿರುತ್ತದೆ. ಈ ಮೌಖಿಕ ಜನಪದ ಸಾಹಿತ್ಯ ಬೆಳೆದಂತೆ ಮನುಷ್ಯನ ಬುದ್ಧಿಶಕ್ತಿ ವಿಕಾಸಗೊಂಡು, ಭಾವನೆಯನ್ನು ಸೂಕ್ತ ರೀತಿಯಲ್ಲಿ ಹೊರಗೆಡಹಲು ದಾರಿದೀಪವಾಗಿರುವುದೇ ನಮ್ಮ-ನಮ್ಮ ಮಾತೃಭಾಷೆಯು ಎಂಬುದನ್ನು ನಾವು ಸದಾ ನೆನಪಿಡಬೇಕಾಗಿದೆ.ಏಕೆಂದರೆ ನಡೆಯುವ ದಾರಿಗೆ, ಸಾಗುವ ಹೆಜ್ಜೆಗೆ ನೆನಪೇ ಬೆಳಕು ಸುಳ್ಳಲ್ಲ.

● ಭಾಷೆ ಹಳೆಯದಾದರೇನು ಭಾವ ನವನವೀನ:
ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಲು ಮಾತೃಭಾಷೆಯು ಮೂಲಾಧಾರವಾಗಿದೆ.ಹೃದಯದಿಂಗಿತವನ್ನು ಭಾವ ತುಂಬಿ ಎದುರಿಗಿದ್ದವರಿಗೆ ತಲುಪಿಸಲು ಮಾತೃಭಾಷೆಗಿಂತ ಮಿತ್ರ ಮತ್ತೊಬ್ಬರಿಲ್ಲ ಎಂದು ಹೇಳಬಹುದು.ನಮ್ಮ ಮಾತೃಭಾಷೆ ಒಂದು ಸಾಂತ್ವನದ ಲಾಲಿಯಂತೆ, ಯಾವಾಗಲೂ ನಮ್ಮ ಹೃದಯಕ್ಕೆ ಹತ್ತಿರವಾಗಿದೆಯಲ್ಲವೇ? ಹಾಗಾಗಿ ನಮ್ಮ ನಿಜವಾದ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಇದು ನಮಗೆ ಸಹಾಯ ಮಾಡುತ್ತದೆ. ಹೀಗೆ ಅರ್ಥಪೂರ್ಣವಾದ ಪಾತ್ರವನ್ನು ನಮ್ಮ ನಿತ್ಯ ಬದುಕಿನಲ್ಲಿ ಮಾತೃಭಾಷೆಯು ನಿರ್ವಹಿಸುತ್ತದೆ.

ಇನ್ನೂ, ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ಆಗುವುದರ ಪ್ರಯೋಜನಗಳತ್ತ ಗಮನಹರಿಸಿದರೆ ಈ ಕೆಳಗಿನ ಅಂಶಗಳನ್ನು ನಾವು ಮನಗಾಣಬಹುದಾಗಿದೆ:

ನಮ್ಮ ಮಾತೃಭಾಷೆ ಕೇವಲ ಭಾಷೆಗಿಂತ ಹೆಚ್ಚು; ಇದು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಸಾಮೂಹಿಕ ಸ್ಮರಣೆಯ ಅನುರೂಪತೆಯಾಗಿದೆ. ಇದು ನಮ್ಮ ಪೂರ್ವಜರು, ಅವರು ಎತ್ತಿಹಿಡಿದ ಮೌಲ್ಯಗಳು ಮತ್ತು ಅವರು ಹೇಳಿದ ಕಥೆಗಳೊಂದಿಗೆ ನಮ್ಮನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಆಳವಾದ ಸಂಪರ್ಕವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ಶಿಕ್ಷಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ.

ರಾಷ್ಟ್ರದ ಬಲವು ಅದರ ಆರ್ಥಿಕತೆ ಅಥವಾ ಮಿಲಿಟರಿ ಪರಾಕ್ರಮದಿಂದ ಮಾತ್ರ ನಿರ್ಧರಿಸಲ್ಪಡುವುದಿಲ್ಲ, ಆದರೆ ಅದರ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರದ ಮೂಲಕವೂ ನಿರ್ಧರಿಸಲ್ಪಡುತ್ತದೆ. ಮಾತೃಭಾಷೆ ಇಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ಏಕತೆಯನ್ನು ಬೆಳೆಸುತ್ತದೆ, ಒಗ್ಗಟ್ಟಿನ ಭಾವನೆಯನ್ನು ಹುಟ್ಟುಹಾಕುತ್ತದೆ ಮತ್ತು ಹಂಚಿಕೆಯ ಮೌಲ್ಯಗಳನ್ನು ಬಲಪಡಿಸುತ್ತದೆ. ನಮ್ಮ ಮಾತೃಭಾಷೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಮೂಲಕ, ಕ್ಷಿಪ್ರ ಜಾಗತೀಕರಣದ ನಡುವೆಯೂ ನಮ್ಮ ರಾಷ್ಟ್ರೀಯ ಗುರುತು ಅಖಂಡವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಮಾತೃಭಾಷೆ ಶಿಕ್ಷಣ ಎಂದರೆ ಮಕ್ಕಳಿಗೆ ಅವರು ಮನೆಯಲ್ಲಿ ಮಾತನಾಡುವ ಭಾಷೆಯನ್ನೇ ಕಲಿಸುವುದು. ಅದು ಅವರಿಗೆ ಚೆನ್ನಾಗಿ ಕಲಿಯಲು ಸಹಾಯ ಮಾಡುತ್ತದೆ ಏಕೆಂದರೆ ಅವರು ಈಗಾಗಲೇ ಆ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಈ ಕೆಳಗಿನ ಅಂಶಗಳು ಸೇರಿದಂತೆ ಅಸಂಖ್ಯಾತ ಪ್ರಯೋಜನಗಳಿವೆ :

  • ಕಲಿಕೆಯನ್ನು ವರ್ಧಿಸುತ್ತದೆ: ಮಗುವಿನ ಸ್ಥಳೀಯ ಭಾಷೆಯಲ್ಲಿ ಕಲಿಸಿದಾಗ ಪರಿಕಲ್ಪನೆಗಳನ್ನು ವೇಗವಾಗಿ ಗ್ರಹಿಸಲಾಗುತ್ತದೆ.
  • ಭಾವನಾತ್ಮಕ ಸಂಪರ್ಕವನ್ನು ನಿರ್ಮಿಸುತ್ತದೆ: ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿರುವಾಗ ವಿಷಯಕ್ಕೆ ಉತ್ತಮವಾಗಿ ಸಂಬಂಧಿಸಿರುತ್ತಾರೆ, ಆಳವಾದ ಭಾವನಾತ್ಮಕ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ.
  • ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಮಕ್ಕಳು ತಮ್ಮ ಪ್ರಾಥಮಿಕ ಭಾಷೆಯಲ್ಲಿ ಸಂವಹನ ಮಾಡುವಾಗ ಹೆಚ್ಚು ಅಭಿವ್ಯಕ್ತತೆ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.
  • ಸಂಸ್ಕೃತಿಯನ್ನು ಸಂರಕ್ಷಿಸುತ್ತದೆ: ಮಾತೃಭಾಷೆಯಲ್ಲಿ ಬೋಧನೆ ಮಾಡುವುದರಿಂದ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಕಥೆಗಳು ಯುವ ಪೀಳಿಗೆಗೆ ರವಾನೆಯಾಗುವುದನ್ನು ಖಚಿತಪಡಿಸುತ್ತದೆ ಎಂದು UNICEF ಸಹ ಒಪ್ಪಿಕೊಳ್ಳುತ್ತದೆ, ಏಕೆಂದರೆ ಅದು ಸಮುದಾಯದ ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುತ್ತದೆ ಮತ್ತು ಉತ್ತೇಜಿಸುತ್ತದೆ.
  • ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ: ಮಾತೃಭಾಷೆ ಮತ್ತು ಜಾಗತಿಕ ಭಾಷೆಗಳ ಸಮತೋಲನವು ಸುಸಜ್ಜಿತ ಶಿಕ್ಷಣವನ್ನು ಖಾತ್ರಿಗೊಳಿಸುತ್ತದೆ.

□ ಶೈಕ್ಷಣಿಕವಾಗಿ ಮಾತೃಭಾಷೆಯನ್ನು ಉತ್ತೇಜಿಸುವ ಮಾರ್ಗಗಳು :

  • ಭಾಷಾ ದಿನಾಚರಣೆಗಳ ಆಚರಣೆ: ವಿವಿಧ ಮಾತೃಭಾಷೆಗಳನ್ನು ಆಚರಿಸುವ ವಾರ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೆಮ್ಮೆಯನ್ನು ಹುಟ್ಟುಹಾಕುತ್ತದೆ ಮತ್ತು ಬಳಕೆಯನ್ನು ಉತ್ತೇಜಿಸುತ್ತದೆ.
  • ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವುದು: ಶಾಲಾ ಪಠ್ಯಕ್ರಮದಲ್ಲಿ ಮಾತೃಭಾಷೆ ಸಾಹಿತ್ಯ ಮತ್ತು ಕಥೆಗಳನ್ನು ಸೇರಿಸುವ ಮೂಲಕ, ಇದು ಮಗುವಿನ ಶಿಕ್ಷಣದ ಪ್ರಮುಖ ಭಾಗವಾಗಿ ಉಳಿಯುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.
  • ಮಾಧ್ಯಮ ಪ್ರಾತಿನಿಧ್ಯವನ್ನು ಪ್ರೋತ್ಸಾಹಿಸಿ: ಸ್ಥಳೀಯ ದೂರದರ್ಶನ ಕಾರ್ಯಕ್ರಮಗಳು, ರೇಡಿಯೋ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು ಮಾತೃಭಾಷೆಯ ವ್ಯಾಪಕ ಪ್ರಸರಣದಲ್ಲಿ ಸಹಾಯ ಮಾಡಬಹುದು.
  • ಸಾಹಿತ್ಯ ಉತ್ಸವಗಳು: ಒಬ್ಬರ ಮಾತೃಭಾಷೆಯಲ್ಲಿ ಸಾಹಿತ್ಯವನ್ನು ಕೇಂದ್ರೀಕರಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಅದರ ವ್ಯಾಪ್ತಿಯನ್ನು ಮತ್ತು ಮೆಚ್ಚುಗೆಯನ್ನು ವರ್ಧಿಸುತ್ತದೆ.
  • ಭಾಷಾ ತರಗತಿಗಳು: ಮಾತೃಭಾಷೆಯನ್ನು ಕಲಿಸಲು ಮತ್ತು ಸಂರಕ್ಷಿಸಲು ಸಮುದಾಯ-ಆಧಾರಿತ ತರಗತಿಗಳನ್ನು ಆಯೋಜಿಸುವುದು ಯುವ ಪೀಳಿಗೆಗಳು ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ.

ಒಟ್ಟಿನಲ್ಲಿ ಸ್ವಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು,ಬೆಳೆಸಬೇಕು ಎಂದರೆ ಅನ್ಯಭಾಷೆಗಳನ್ನು ತೀರಸ್ಕರಿಸಬೇಕು ಎಂದು ಅರ್ಥವಲ್ಲ.ಭಾಷೆಗಳಲ್ಲಿ ಮೇಲು-ಕೀಳೆಂಬುದಿಲ್ಲ.ನಾಲ್ಕು ಜನ ಮಾತನಾಡುತ್ತಿದ್ದ ಭಾಷೆಗೂ ನಾಲ್ಕು ಲಕ್ಷ ಜನ ಮಾತನಾಡುತ್ತಿದ್ದ ಭಾಷೆಗೂ ಸತ್ಯ ಹಾಗೂ ಐತಿಹ್ಯದಲ್ಲಿ ಯಾವುದೇ ಅಂತರವಿರುವುದಿಲ್ಲ.ಎಲ್ಲಾ ಭಾಷೆಗಳು ತನ್ನದೇ ಆದ ಅನನ್ಯತೆಯ ಸೊಗಡನ್ನು ಹೊಂದಿರುತ್ತವೆ.ಪ್ರತಿಯೊಬ್ಬ ತಾಯಿಯು ಹಾಡುವ ಲಾಲಿಯು ವಿಶೇಷವೇ ಆಗಿರುತ್ತದೆ ಅದರಲ್ಲಿ ತಾರತಮ್ಯ ಮಾಡಲಾಗುವುದಿಲ್ಲ.ಇದನ್ನರಿತು ವಿವಿಧತೆಯಲ್ಲಿ ಐಕ್ಯತೆಯನ್ನು ಕಾಣುವ ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೇ ಗೌರವಿಸಬೇಕಾಗಿದೆ, ನಮ್ಮ-ನಮ್ಮ ಭಾಷೆಗಳನ್ನು ಪ್ರೀತಿಸಿ ಅಭಿವೃದ್ಧಿಗೊಳಿಸಿದರೆ ದೇಶದ ವಿವಿಧ ಸಂಸ್ಕೃತಿಗಳು ಚೇತರಿಸಿಕೊಂಡು ಮುಂದಿನ ಪೀಳಿಗೆಯನ್ನು ತಲುಪುತ್ತವೆ. ಮಾತೃಭಾಷೆಯ ಆಂತರ್ಯದಲ್ಲಿರುವ ಆತ್ಮಿಯತೆ, ಸೊಬಗನ್ನು ಔದಾರ್ಯದಿಂದ ನಿತ್ಯಜೀವನದಲ್ಲಿ ಅದರ ಬಳಕೆಯನ್ನಾಗಿಸಿ ಪ್ರಾಥಮಿಕ ಶಿಕ್ಷಣವನ್ನು ನೀಡಿದರೆ ಪ್ರತಿ ಮಗುವು ಮನೋಜ್ಞವಾಗಿ ಕಲಿಕೆಯನ್ನು ಆನಂದಿಸಿ ಪ್ರಗತಿ ಸಾಧಿಸುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ.

-ರವಿತೇಜ.ಎಂ.ಎನ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x