ಈ ಭೂಮಿಯ ಮೇಲೆ ಜೀವ ರಾಶಿಗಳು ಉದಯವಾಗಬೇಕೆಂದರೆ ಅಲ್ಲಿ ಒಂದು ಗಂಡು ಕುಲ ಮತ್ತೊಂದು ಹೆಣ್ಣು ಕುಲವೆಂಬ ಎರಡು ಸಮಾನ ಗುಂಪುಗಳನ್ನು ಕಾಣಬಹುದಾಗಿದೆ. ಅಲ್ಲಿ ಮುಂದಿನ ಪೀಳಿಗೆಯ ಸೃಷ್ಟಿ ಇವೆರಡರ ಸಮ್ಮಿಲನದಿಂದ ಎಂಬುದು ತಿಳಿದಿರುವ ವಿಷಯವಾಗಿದೆ. ಇಲ್ಲಿ ಸ್ತ್ರೀ ಕುಲವು ಮುಂದಿನ ಪೀಳಿಗೆಯನ್ನು ತನ್ನ ಮಡಿಲಲ್ಲಿ ಸಾಕಿ ಸಲಹಿ ಪ್ರಪಂಚಕ್ಕೆ ಪರಿಚಯಿಸುವ ಒಂದು ಮಹತ್ವವಾದ ನಿಯಮವನ್ನು ಪಾಲಿಸುತ್ತಾ ಈ ಭೂಮಿಯಲ್ಲಿ ಹೊಸ ಹೊಸ ಜೀವಿಗಳ ಉಗಮಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಪುಸ್ತಕಗಳಲ್ಲಿ ಓದುತ್ತಾ, ಪ್ರಕೃತಿಯನ್ನು ಗಮನಿಸುತ್ತಾ, ತಮ್ಮ ಬದುಕಿನಲ್ಲಿ ಅನುಭವಿಸುತ್ತಾ, ಹೀಗೆ ಭವಿಷ್ಯವನ್ನು ಹುಡುಕುತ್ತಾ ಸಾಗುತ್ತಿರುವುದು ಎಂಬುದು ಸಾರ್ವತ್ರಿಕವಾಗಿದೆ.
ಅದೇ ರೀತಿಯ ಜೀವ ರಾಶಿಯ ಈ ಗುಂಪಿನಲ್ಲಿ ಮಾನವ ಸಮಾಜವನ್ನು ಕಾಣಬಹುದಾಗಿದೆ. ಇಲ್ಲಿಯೂ ಸಹ ಹೆಣ್ಣು ಗಂಡ ಎಂಬ ಎರಡು ಗುಂಪುಗಳು ಕಾಣುತ್ತಿದ್ದೂ ಎಲ್ಲಾ ಜೀವ ರಾಶಿಯಲ್ಲಿ ನಡೆಯುತ್ತಿರುವ ಹಾಗೆ ಸಂತಾನೋತ್ಪತ್ತಿಯ ಜೊತೆಗೆ ಭಾವನೆಗಳು, ಪ್ರೀತಿ, ಜವಾಬ್ದಾರಿಗಳು, ನಿಯಮಗಳು, ಚಿಂತನಾತ್ಮಕ ವಿಷಯಗಳು ಎನ್ನುವಂತೆ ಎಲ್ಲದರಲ್ಲೂ ವಿಶೇಷ ಶಕ್ತಿಯನ್ನು ಹೊಂದಿರುವ ಮಾನವ ಸಂಪತ್ತು ಈ ಪ್ರಕೃತಿಯಲ್ಲಿ ಸಂಪತ್ಭರಿತವಾಗಿದೆ. ಈ ಎರಡು ಗುಂಪುಗಳಿಗೂ ತನ್ನದೇ ಆದ ಸ್ಥಾನಮಾನಗಳಿವೆ. ಮಾರ್ಚ್ 8 ಎಂದಾಗ ನಮಗೆ ನೆನಪಾಗುವ ಸ್ತ್ರೀ, ಹೆಣ್ಣು, ಪೆನ್ನು ಎಂದು ಹಲವಾರು ಹೆಸರಿನಿಂದ ಕರೆಯಲ್ಪಡುವ ಮಹಿಳೆಗೆ ಸಿಗುವ ಮತ್ತು ಸಿಗಲೇ ಬೇಕಾದ ಗೌರವ ರಕ್ಷಣೆ ವಾತ್ಸಲ್ಯ ಪ್ರೀತಿ ಹೆಮ್ಮೆ ಎಲ್ಲವನ್ನು ನೆನಪಿಸುವಂತಹ ದಿನವೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಅವರಿಗೆ ಲಬಿಸ ಬೇಕಾದ ಗೌರವವನ್ನು ಈ ಸಮಾಜಕ್ಕೆ ನೆನಪಿಸಿ, ಪುರುಷನು ಸ್ತ್ರೀಯನ್ನು ಗೌರವಿಸಿ ಮತ್ತು ಸಮಾನತೆಯನ್ನು ನೆನಪಿಸಿಕೊಳ್ಳುವಂತದ್ದಾಗಿದೆ.
ಹಿಂದಿನಿಂದಲೂ ಪುರುಷ ಪ್ರಧಾನ ಎಂದೇ ಪರಿಚಯ ಆಗಿರುವ ಈ ಸಮಾಜದಲ್ಲಿ ಕೆಲವರಲ್ಲಿ ಅವನು ಕೆಟ್ಟವ, ಹಿಂಸೆ ಮತ್ತು ಅವಮಾನ ಮಾಡುವಂತವುಗಳ ಪ್ರಧಾನ ಪಾತ್ರವೆಂದು ಬಹಳ ಹಿಂದಿನ ಕಾಲದಿಂದಲೂ ಕೇಳುತ್ತಾ ಬಂದಿರುತ್ತೇವೆ. ಆದರೆ ಪ್ರಸ್ತುತದಲ್ಲಿ ಅವನಿಗೂ ರಕ್ಷಣೆಯ ಅವಶ್ಯಕತೆ ಇದೆ ಎಂಬ ಕಾರಣದಿಂದ ಆರಂಭವಾದ ಪುರುಷರ ದಿನದ ಬಗ್ಗೆ ಒಮ್ಮೊಮ್ಮೆ ಒಬ್ಬೊಬ್ಬರು ಅವರದೇ ರೀತಿಯಲ್ಲಿ ಕಾಮೆಂಟ್ ಮಾಡುತ್ತಾ ಚೇಷ್ಟೆ ಮಾಡುವುದನ್ನು ಗಮನಿಸಿರುತ್ತೇವೆ.
ಸಂಸ್ಕೃತದ ಒಂದು ಸಾಲಿನಲ್ಲಿ ಜ್ಞಾನಿಗಳು ಪುರುಷನ ಬಗ್ಗೆ ಹೀಗೆಂದು ವರ್ಣಿಸಿದ್ದಾರೆ.
“ಪುರುಷಾರ್ಥಃ ಪೌರುಷಃ ಸ್ನೇಹಃ ಮೈತ್ರಿ ಉತ್ತರದಾಯಿತ್ವಂ ಪ್ರೇಮದಯ ಧೈರ್ಯಂ ಭಲಂ ರಕ್ಷಃ ರಕ್ಷಾತ್ಮಕತಾ ಭಾವನಾಪೂರ್ಣತಾಂ ವಿಶೇಷ ಪ್ರಕಾಶಃ ಮಾನವ ಸಮಾಜಸ್ಯ ಧನಂ”
ಅಂದರೆ, ಪುರುಷ ಎಂದರೆ: ಪೌರುಷ, ವಾತ್ಸಲ್ಯ, ಸ್ನೇಹ, ಜವಾಬ್ದಾರಿ, ಪ್ರೀತಿ, ಕರುಣೆ, ತಾಳ್ಮೆ, ಶಕ್ತಿ, ರಕ್ಷಣೆ ಭಾವ ತುಂಬಿರುವ ವಿಶೇಷ ಬೆಳಕು ಒಂದು ಮಾನವ ಸಮಾಜದ ಸಂಪತ್ತು ಎಂದು ಅರ್ಥೈಸುತ್ತದೆ.
ಈ ಹಿನ್ನಲೆಯಲ್ಲಿ ಅವನು ಎಲ್ಲದರಲ್ಲೂ ಪ್ರಬಲನು ಆಗಿದ್ದರೂ ನಿಂದನೆ , ಆತ್ಮಹತ್ಯೆ, ನಿರಾಶ್ರಿತತೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ ಎಂಬುದು ಅಷ್ಟೇ ನಿಜ ಎನ್ನುಬಹುದಾಗಿದೆ. ಆದ್ದರಿಂದ ಪುರುಷರ ದಿನ ಆಚರಿಸುವುದರ ಮೂಲಕ ಲಿಂಗ ತಾರತಮ್ಯವನ್ನು ದೂರ ಗೊಳಿಸಿ ಸಮಾನತೆಯನ್ನು ಸೃಷ್ಟಿಸಬಹುದಾಗಿದೆ. ಮುಖ್ಯವಾಗಿ ಶೂನ್ಯ ಪುರುಷರ ಆತ್ಮಹತ್ಯೆ ಬೆಂಬಲಿಸುವ ವಿಷಯಗಳು ಈ ಸಮಾಜದಲ್ಲಿ ಚರ್ಚೆ ಆಗಬೇಕಾಗಿದೆ. ಹೆಣ್ಣು ಇನ್ನೊಂದು ಜೀವವನ್ನು ಸೃಷ್ಟಿಸಿ ಪಾಲಿಸಿ ಈ ಜಗತ್ತಿಗೆ ಪರಿಚಯಿಸುವ ಅದ್ಭುತ ಶಕ್ತಿಯಾಗಿದೆ. ಅಂತೆಯೇ ಕಾರಣನಾದ ಪುರುಷನು ಇವುಗಳಲ್ಲಿ ಸಮಾನವಾದರಿಂದ ಈ ಸುಂದರ ಸೃಷ್ಟಿಯ ವ್ಯವಸ್ಥೆಯ ಸಮತೋಲನ ಕಾಯ್ದಿರಿಸಲು ಸಹಕಾರಿಯಾಗುತ್ತದೆ ಎಂಬುದು ಒಂದು ವಿಷಯವಾದರೆ. ಕುಟುಂಬದಲ್ಲಿ ಅಣ್ಣನಾಗಿ ಗಂಡನಾಗಿ ತಂದೆಯಾಗಿ ಮಗನಾಗಿ ವಿಶೇಷವಾದ ರೂಪದಲ್ಲಿ ಹೆಣ್ಣಿಗೆ ರಕ್ಷಣೆ, ಧೈರ್ಯ ಹಾಗೂ ಶಕ್ತಿಯಾಗಿ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುವ ಕಾರ್ಯದಲ್ಲಿ ಮುಂದಿದ್ದಾನೆ ಎಂಬುದು ಮತ್ತೊಂದು ಆಗಿದೆ. ಅಲ್ಲದೆ ಅವನ ಜೀವನ ಸಾಧನೆಗಳನ್ನು ಮತ್ತು ಕೊಡುಗೆಗಳನ್ನು ವಿಶೇಷವಾಗಿ ರಾಷ್ಟ್ರ ಒಕ್ಕೂಟ ಸಮಾಜ ಸಮುದಾಯ ಕುಟುಂಬ ಮದುವೆ ಮತ್ತು ಮಕ್ಕಳ ಆರೈಕೆಗೆ ಅವರ ಕೊಡುಗೆಗಳನ್ನು ಪುಟಾಣಿಗಳಿಗೆ ಪರಿಚಯ ಮಾಡುವ ಸಲುವಾಗಿ ಪುರುಷ ದಿನ ಆಚರಣೆ ಅವಶ್ಯಕತೆ ಇದೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಪೃಥ್ವಿಯಲ್ಲಿ ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ. ಪ್ರಕೃತಿಯ ಸಮತೋಲನ ಕಾಪಾಡಲು ಎಲ್ಲಾ ಜೀವಿಗಳ ಪಾಲು ಇದೆ ಆದರೆ ಸ್ವಲ್ಪ ಬುದ್ಧಿಶಕ್ತಿ ಆಲೋಚನ ಶಕ್ತಿಯಲ್ಲಿ ಮೇಲ್ಗೈ ಹೊಂದಿರುವ ಮಾನವ ಸಂಪತ್ತಿನ ಜೀವನಶೈಲಿ ವಿಭಿನ್ನವಾಗಿದೆ. ಆದ್ದರಿಂದ ಪ್ರಕೃತಿಯನ್ನು ಸುಸ್ಥಿತಿಯಲ್ಲಿಡಲು ಕೆಲವು ನಿಯಮಗಳನ್ನು ಮಾನವ ಪಾಲಿಸಬೇಕಾಗುತ್ತದೆ. ಇಲ್ಲಿ ಲಿಂಗ ಸಮಾನತೆ, ಪರಸ್ಪರ ವಿಶ್ವಾಸ, ಸಹಕಾರ ಹಾಗೂ ಸಹಬಾಳ್ವೆ ಜೀವನವನ್ನು ನಡೆಸುವುದರ ಮೂಲಕ ಧನಾತ್ಮಕ ಪರಿಸರವನ್ನು ಸೃಷ್ಟಿಸುವುದು ಮತ್ತು ಆರೋಗ್ಯಕರ ಜೀವನವನ್ನು ನಡೆಸಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಆರೋಗ್ಯಕರ ಜೀವನವನ್ನು ಅವರಿಗೆ ಕೊಡುಗೆಯಾಗಿ ನೀಡಬಹುದಾಗಿದೆ.
–ಚಂದ್ರು ಪಿ ಹಾಸನ್