ಜ್ವಾಳಾ ಕೊಳ್ಳಾಗ..: ಎಫ್ ಎಂ ನಂದಗಾವ

“ಅಂಕಲ್ ಅಂಕಲ್, ಈ ಕೇಕ್ ಟೇಸ್ಟ್ ಮಾಡಿ ನೋಡ್ರಿ.’’

ನಮ್ಮೂರಾಗ, ಎಲ್ಲಾರೂ ನನ್ನ ಅಜ್ಜಾರ ಅಜ್ಜಾರ ಅಂತಾರ. ಇದ್ಯಾರಪಾ, ಇಲ್ಲ ನನ್ನ ಅಂಕಲ್ ಅಂತ ಕರಿಲಿಕ್ಹತ್ತಾರ? ನಾ ಇಲ್ಲ ಬಂದ ಮ್ಯಾಲ, ಹರೆಯ ಹಿಂದಕ್ಕ ಬರಾಕಹತ್ತದ ಏನೋ? ಮೊನ್ನಿ, ಮಗಾ ತನ್ನ ಕೂದಲಿಗೆ ಬಣ್ಣಾ ಹಚ್ಚೂ ಮುಂದ ನನ್ನ ತಲಿ ಕೂದಲಿಗೂ ಸ್ವಲ್ಪ ಬಣ್ಣ ಬಳಿದಿದ್ದ, ಮೊದಲ ಮುದುಕರು ತದಕರು ಬಣ್ಣಾ ಹಚ್ಚಕೋತಿದ್ದರು. ಈಗ, ಅಲ್ಲೊಂದ ಇಲ್ಲೊಂದ ಬಿಳಿ ಕೂದಲ ಬಂದ ಹರೆದವರ ಬಾಳ ಮಂದಿ ಕರಿ ಬಣ್ಣಾ ಹಚ್ಚಗೊಳ್ಳಾಕ ಶುರು ಮಾಡ್ಯಾರ. ಹೆಣ್ಮಕ್ಕಳಂತೂ ಈಗ ಕಾಮನ ಬಿಲ್ಲಾನ ಎಲ್ಲಾ ಬಣ್ಣಾನೂ ಹುಡುಕಿ ತಂದ ಇದ್ದ ಒಂದ ತಲಿಗೆ ಹಚ್ಚಗೊಳ್ಳಾಕ್ಹತ್ತಾರ. ಏನೇನ್ ನಮೂನಿ ಬಣ್ಣ ಅದಾವ. ಕಲಿಸಿದ್ದ ಬಣ್ಣ ವೇಸ್ಟ್ ಆಗ್ತದ, ನ್ಯಾಷನಲ್ ವೇಸ್ಟ್ ಅನಕೋತ ಕಲಿಸಿದ ಉಳಿದಿದ್ದ ಬಣ್ಣ ನನ್ನ ತಲಿಗೆ ಬಳದ ಬಿಟ್ಟಿದ್ದ ಮಗರಾಯ.

ಒಮ್ಮೊಮ್ಮಿ ನಾ ಈಗ ವೇಸ್ಟ ಆಗಬಾರದು ಅನ್ನೂ ಸಾಮಾನಗಳ್ನ ತುಂಬಿಸಿಕೊಳ್ಳು ಹಳಿ ಪೆಟ್ಟಿಗಿ ಆಗೀನಿ ಅನ್ನಸ್ತದ. ನನಗ, ಬೇಕಾದ್ದು ಬ್ಯಾಡಾದ್ದು ಎಲ್ಲಾ ಆಗಾಕಹತ್ತೇದ.

“ಅಂಕಲ್ ಅಂಕಲ್.. ..’’ ಮತ್ತ ಯಾರೋ ಕರದಂಗಾಯ್ತು.

ಮೊನ್ನಿ ಏನಾತು ಅಂದ್ರ ಮಗನ ಹೊಸಾ ಅಂಗಿ ಅವನಿಗೆ ಬ್ಯಾಡಾಯಿತಂತ. ಅವನ ದೋಸ್ತರು ಅವನಿಗೆ ಗಿಫ್ಟ್ ಕೊಟ್ಟಿದ್ದರಂತ. ನನಗ ಹಾಕೋ ಅಂತ ಕೊಟ್ಟ. ಆಚಿಮೊನ್ನಿ ಯಾವುದೋ ದೊಡ್ಡ ಹೊಟೇಲಿಂದ ಊಟ ತರಸಿದ್ದ. ಎಲ್ಲಾರದೂ ಊಟ ಆದ ಮ್ಯಾಲ, ಹಾಳಾಗ್ತದ ಅಂತ ಅದನ್ನೆಲ್ಲಾ ತಂಗಳ ಡಬ್ಬಿ- ಫ್ರಿಜ್ ಒಳಗ ಇಡಿಸಿಸಿದ. ಫ್ರಿಜ್ ಒಳಗ ತಿನ್ನು ಸಾಮಾನು ಕೂತೂವು ಅಂದ್ರ, ಅವನ್ನ ಮುಗುಸು ಜವಾಬ್ದಾರಿ ನಂದು ಮತ್ತ ನನ್ನ ಹೇಣ್ತಿದು.

ಆಕಿದೂ ಬಾಳೆ ನನ್ನಂಗ ಆಗೇದ. ಈಗ ಅಂಗಡಿಗೆ ಹೋಗಿ ಅರವಿ ಮುಟ್ಟಿನೋಡಿ ಅಂಗಡಿ ಹುಡುಗರ ಜೋಡಿ ಚೌಕಾಶಿ ಮಾಡಿ, ಗಲ್ಲೇದ ಮ್ಯಾಲ ಕೂತ ಮಾಲಕನಿಗೆ ಗಂಟ ಬಿದ್ದ, ರೇಟ್ ಕಡಿಮಿ ಮಾಡಿಸಿ ಅರವಿ ಅಂಚಡಿ ತರತಿದ್ದವಿ. ಮುಂದ ಸಿಂಪಿಗನ ಅಂಗಡಿಗೆ ಹೋಗಿ, ಸೆಟದ ನಿಂತ ಅಳತಿಕೊಟ್ಟ ಅಂಗಿ ಚೊಣ್ಣ, ಪರಕಾರ ಬ್ಲೌಜ್ ಎಲ್ಲಾ ಹೊಲಸತಿದ್ವಿ. ಆಮ್ಯಾಲ ರೆಡಿಮೇಡ್ ಅರವಿ ಅಂಗಡಿ ಬಂದ್ವು. ಈಗ ಅದ ಎಲ್ಲಾ ಇಲ್ಲಂತ. ಅದೇನೋ ಆನ್ ಲೈನ್ ಮಾರ್ಕೆಟಿಂಗ್ ಅಂತ ಬಂದದ ಅಂತ. ಕಾಯಿಪಲ್ಲೆ ತರಾಕ ಹೊರಗ ಹೋಗೂದಿಲ್ಲ ನಮ್ಮ ಸೊಸಿ. ಬಿಗ್ ಬಾಸ್ಕೆಟ್ ಅಂತ. ಅವಾಂ ತಂದಕೊಟ್ಟದ್ದ ಬಾಡಿದ್ದು ಹಣ್ಣಾಗಿದ್ದು ಎಲ್ಲಾ ತಂಗಳ ಡಬ್ಬಿ ಸೇರ್ತಾವ. ಈಗ ಸಾವಯವ ಕಾಯಿಪಲ್ಲೆ ಬರಾಕ್ಹತ್ತಾವ. ರಾಸಾಯನಿಕ ಗೊಬ್ಬರ ಅಲ್ಲ, ನೈಸರ್ಗಿಕ ಗೊಬ್ಬರ ಹಾಕ್ತಾರಂತ. ಬೆಳಿ ರೋಗಕ್ಕ ರಾಸಾಯನಿಕ ಅಲ್ಲ, ಬೇವಿನೆಣ್ಣಿಯಂಥ ನೈಸರ್ಗಿಕ ಔಷಧಿ ಹೊಡಿತಾರಂತ. ಅದಕ್ಕ ರೇಟು ಜಾಸ್ತೀನ. ಮತ್ತ ಅರಬಿ ಅಂಚಡಿ, ಮೊಬೈಲ್ ಒಳಗ ಅರವಿ ಅಂಚಡಿ ನೋಡೂದು ಪಸಂದ ಆದರ, ಆರ್ಡರ್ ಮಾಡೂದು. ಅದನ್ನ ತಗೊಂಡ ಮನಿಗ ಬರೂ ಹುಡುಗಗ ದುಡ್ಡ ಕೊಟ್ಟರ ವ್ಯಾಪಾರ ಮುಗದ ಹೋತು. ಚೌಕಾಸಿ ಮಾತ ಇಲ್ಲ. ನಮ್ಮವ್ವನ ಕಾಲಕ್ಕ ಸಾಮಾನಿನ ಕಿಮ್ಮತ್ತ ನಾಕಾಣೆ ಹೇಳಿದರೂ ಅಂದ್ರ, ಎರಡಾಣೆಯಿಂದ ಚೌಕಾಸಿ ಮಾಡತಿದ್ದರಂತ. ರೂಪಾಯಿ ಕಾಲಾಗ ಆರನಯಾಪೈಸೆ ಒಂದಾಣೆ, ಹಂಗ ಎರಡಾಣೆ, ನಾಲ್ಕಾಣೆ, ಎಂಟಾಣೆ ಮತ್ತ ಹನ್ನೆರಡಾಣೆ ಎಲ್ಲಾ ಹೋಗ್ಯಾವ ಈಗ. ಆವಾಗ, ಎಂಟ ಎರಡಾಣೆ ಕೊಟ್ಟ, ನೂರು ಪೈಸೆ ಆದರ ಒಂದ ರೂಪಾಯಿ ಆಗೂ ರೂಪಾಯಿ ಇಸಗೊಂಡರ ನಾಕ ಪೈಸೆ ಗಳಿಸಿದಂಗಾಗ್ತಿತ್ತು!

ಸೊಸಿ ಆನ್ ಲೈನ್ ಒಳಗ ಒಂದ ನೈಟಿ ತರಿಸಿದ್ದಳು. ಅದು ಅವಳಿಗೆ ಹಿಡಸಲಿಲ್ಲ. ಅದನ್ನು ಈಕಿಗೆ ಕೊಟ್ಟಳು. `ಹಾಕೋರಿ, ಅವ್ವಾರ ನಿಮಗ ಭಾಳ ಛಂದ ಕಾಣ್ತದ’ ಅಂತ ಮ್ಯಾಲ ಸಕ್ಕರಿ ಗುಳಿಗಿ ತಿನ್ನಿಸಿದಳು.

ನನಗ ಮತ್ತ ನನ್ನಾಕಿಗೆ ಈಗ ಸಿಹಿಮೂತ್ರದ ಸಕ್ಕರಿ ರೋಗ ಬಂದದ ಅನ್ನೂದ ಅವಳಿಗೂ ಗೊತ್ತದ.

ಸಕ್ಕರಿ ಗುಳಗಿ ಅಂದ್ರ ಧ್ಯಾಸಕ ಬಂತು. ಊರಾಗ ಏನಿದ್ದರೂ ಗೌಂಟಿ ಓಷಧಿ ನಡಿತಿತ್ತು. ಇಲ್ಕಂದ್ರ ಓಣಿ ಮೂಲಿ ಮನಿ ಹೋಮಿಯೋಪತಿ ಡಾಕ್ಟರ್, ಸಕ್ಕರಿ ಗುಳಗಿ ಕೊಟ್ಟರ ನಮಗ ಬಂದ ಬ್ಯಾನಿ, ಬಂದಂಗ ಹಂಗ ವಾಪಸ್ ಹೋಗತ್ತಿದ್ದವು, ಮಾರಿ ಮುಚಗೊಂಡ. ಒಂಚೂರು ತಕರಾರ ಮಾಡ್ತಿರಲಿಲ್ಲ. ಇಲ್ಲಿ ಬಂದ ಮ್ಯಾಲ ಏನಾತೋ ಏನೋ. ಇಬ್ಬರು ಮ್ಯಾಲಿಂದ ಮಾಲ ಜಡ್ಡ ಬಿದ್ವಿ. ಮನಿ ಸನೇಕಿನ ಡಾಕ್ಟರ್ ಔಷಧಿ ಹತ್ತಲಿಲ್ಲ. ದೊಡ್ಡ ದವಾಖಾನಿಗೆ ಕರಕೊಂಡ ಹ್ವಾದ ಮಗಾ. ಅವರು, ಅಲ್ಲಿ ಆ ಟೆಸ್ಟು ಈ ಟೆಸ್ಟು ಅಂತ ಏನೇನೋ ಮಾಡಿ ಮೈ ನುಗ್ಗ ಮಾಡಿದರು. ನಮ್ಮಿಬ್ಬರ ರಕ್ತ ತಗೊಂಡ ತಪಾಸ ಮಾಡಿದ್ರು. ಕಡೀಕ ಇಬ್ಬರಿಗೂ ಡಯಾಬಿಟಿಸ್ ಬಂದದ ಅಂತ ಜಾಹೀರ ಮಾಡಿದರು.

“ಏನ್ರಿ ನಿಮಗ ಗೊತ್ತಾಗುದಿಲ್ಲ? ಹುಷಾರ ತಪ್ಪಿದರ ದವಾಖಾನಿಗೆ ಕರಕೊಂಡ ಬಂದ ತೋರಸ್ತಾರು. ಹಂಗ ಮನ್ಯಾಗ ಕೂತರ ಆಗ್ತದ. ನಿಮ್ಮ ತಂದೆ ತಾಯಿಗೆ ಡಯಾಬಿಟಿಸ್ ಬಂದ ಮರ್ನಾರಲ್ಕ ತಿಂಗಳ ಆಗರಬೇಕು. ಅದಕ್ಕ ಮ್ಯಾಲಿಂದ ಮ್ಯಾಲ ಜಡ್ಡ ಬಿದ್ದಿರಬೇಕು.’’

“.. .. ‘’

“ನೋಡಿದರ ಎಜುಕೇಟೆಡ್ ಕಂಡಂಗ ಕಾಣ್ತೀರಿ. ಇಷ್ಟ ನಿರ್ಲಕ್ಷ್ಯ ಮಾಡೂದ?’’ ಡಾಕ್ಟರು, ಮಗನ್ನ ಕೈ ತೊಳಕೊಂಡ ಜಬರುಸೂದ ನೋಡಿ ನನ್ನಾಕಿ ಹೊಟ್ಟಿ ಚುರಕ್ ಅಂತು.

ದಿನಾ ಮನ್ಯಾಗ ರಾಮಾಯಣ ಮಹಾಭಾರತಗಳು ಸಣ್ಣಾಗಿ ನಡಿತಿದ್ದವು. ಛಲೋ ನೌಕರಿ ಸಿಕ್ಕದ, ಇನ್ನ ಇಷ್ಟದಿನಾ ಹೊಟ್ಟಿ ತುಂಬಿಸಿದ್ದ, ಅರಬಿ ಅಂಚಡಿ ಕೊಡಿಸಿ ಬಾಳುವೆ ಕೊಟ್ಟ ಅಂಗಡಿ ಭಾನಗಡಿ ಬ್ಯಾಡ ಅಂತ ನಮ್ಮನ್ನ ಊರಿಂದ ಇಲ್ಲಿ ಕರಕೊಂಡ ಬಂದ ಮಗಾ. ನಮ್ಮ ಅಂಗಡಿನ್ನ ಒಬ್ಬ ದೋಸ್ತ ನೋಡಕೊಳ್ಳಾಕ ಮುಂದ ಬಂದ. ಶಹರಿನ ಭಾಷಾದಾಗ ಹೇಳಬೇಕಂದ್ರ, ಅವಾಂ ತಂದ ರೊಕ್ಕ ಹಾಕಿ ಪಾರ್ಟನರ್ ಆದ. ನಾ ಸ್ಲೀಪಿಂಗ್ ಪಾರ್ಟನರ್ ಆದೆ. ತಿಂಗಳಿಗೆ ಅಷ್ಟೋ ಇಷ್ಟೋ ಔಷಧಿಗೆ ರೊಕ್ಕ ಸಿಗ್ತಾವು. ಮೊದಮೊದಲ ಶಹರಿಗೆ ಬಂದಾಗ ಎಲ್ಲಾ ಛಂದ ಇತ್ತು. ನೌಕರಿ ಆತು, ಇನ್ನ ಜೋಡಿ ಮಾಡೂಣು ಅಂತ ಛೋಕರಿ ಹುಡಕಾಕ ಶುರು ಮಾಡಿದಿವಿ. ಆವಾಗ ಅವಾಂ, ಮದುವಿ ಬ್ಯಾಡ ಬ್ಯಾಡ ಅನ್ನಾಕ ಶುರು ಮಾಡಿದ. ಊರಾಗಿನ ಅವನ ಚಡ್ಡಿ ದೋಸ್ತರ ಕಡೆಯಿಂದ ಹೇಳಿಸಿ ನೋಡಿದಿವಿ. ಏನೂ ಉಪಯೋಗ ಆಗಲಿಲ್ಲ. ಮಗಂದ ಮದುವಿ ಆಗಲಿಲ್ಲ. ಆಕಿ ಕೊರಗಾಕ್ಹತ್ತಿದಳು. ಆಗೂ ಕಾಲಕ್ಕ ಆಗತದ. ದೇವರು ದೊಡ್ಡಾಂವ ಅದಾನ. ಅವನ ಎಲ್ಲಾ ನೋಡತಾನ’ ಅನಕೋತ ಸಮಾಧಾನ ಮಾಡ್ತಿದ್ದೆ.ದೇವರ ಮಾಡ್ತಾನ ಅಂತ ಸುಮ್ಮನ ಹೆಂಗ ಕುಡೂದು. ನಮ್ಮ ಪ್ರಯತ್ನ ನಾವ್ ಮಾಡಬೇಕಲಾ?’ ಅವಳ ಪ್ರಶ್ನೆ ತೂರಿ ಬರ್ತಿತ್ತು. ಒಂದ ದಿನ ಸಂಜಿ ಮುಂದ ಚೂಡಿದಾರ ತೊಟ್ಟ ಒಂದ ಬೆಳ್ಳಗಿನ ಹುಡುಗೀನ ಮನಿಗೆ ಕರಕೊಂಡ ಬಂದ. `ಈಕಿ, ನಮ್ಮ ಆಫೀಸಿನೊಳಗ ನನ್ನ ಜೋಡಿ ಕಲಸ ಮಾಡ್ತಾಳ, ನನ್ನ ಕಲೀಗ್’ ಅಂತ ಪರಿಚಯ ಮಾಡಿಕೊಟ್ಟ.

ಚಾ ಇಡ್ತೀನಿ ತಡಿ’ ಅಂತ ನನ್ನಾಕಿ ಎದ್ದರ,ಆಂಟಿ ನೀವೇನ್ ಹಚಗೊಬ್ಯಾಡ್ರಿ. ನಾ ಬರ್ತಿನಿ ತಡೀರಿ. ನಿಮಗ್ಯಾಕ ತ್ರಾಸ್’ ಅಂತ ಆಕಿ ಹಿಂದ ಅಡಗಿ ಮನಿ ಸೇರಿದಳು.

ಚಂದದ ಬೆಳ್ಳಗಿನ ಹುಡುಗಿ ತಿಂಗಳಿಗೊಮ್ಮಿ ಮನಿಗೆ ಬರ್ತಿದ್ದವಳು, ವಾರಕ್ಕೊಮ್ಮೆ ಮನಿಗೆ ಬರಾಕ ಶುರು ಮಾಡಿದಳು. ಈಕೀಗೆ ಆಶಾ ಹುಟ್ಟಿತು.

“ನಮ್ಮ ಕೂಸಿಗೆ ಈಕಿ ಒಳ್ಳೆ ಜೋಡಿ. ಏನಂತೀರಿ?’’ ನನ್ನ ಕೇಳಿದಳು.

ಕೂಸು ಹುಟ್ಟು ಮೊದಲ ಕುಲಾಯಿ ಹೊಲಿಸಿದ್ದರಂತ. ನನ್ನಾಕಿ ಕನಸ ಕಾಣಕಹತ್ತಿದ್ದಳು.

“ಅವಳು ಯಾವ ಊರವಳೋ ಏನೋ? ಯಾವ ಜಾತಿನೋ ಖಾನ್‌ದಾನೋ ಖೂನಿಲ್ಲ. ಅವರ ಅಪ್ಪಾ ಅವ್ವಾ ಹೂಂ ಅಂತ ಒಪ್ಪಗೋಬೇಕ. ಅದಲ್ಲದ ಪೈಲೆ ಮಾತಂದ್ರ ಇವರಿಬ್ಬರಿಗೂ, ಮನಸ್ಸ ಅದನೋ ಇಲ್ಲ ನೋಡಬೇಕ ಅಲಾ.’’

“ಒಂದ ಹೇಳಿದರ ಆತು, ಅದಕ್ಕ ನೂರಾಎಂಟ ಕಿತಿಬಿ ತಗಿತೀರಿ ನೀವು.’’ ನನ್ನವಳು ಮೂಗು ಮುರಿದಳು.

`ನಾಲ್ಕ ದಿವಸ ಆಫೀಸ್ ಟ್ಯೂರ್ ಅದ’ ಅಂತ ಹೇಳಿ ಹೊರಗ ಹೋಗಿದ್ದ. ನಾಲ್ಕನೇ ದಿವಸಕ್ಕ ಸಂಜಿಮುಂದ ಮನಿಗೆ ಬಂದ ನಮ್ಮ ಮಗಾ ಮತ್ತ ಅವನ ಆಫೀಸ್ ಕಲೀಗ್ ನಮ್ಮ ಮುಂದ ಬಂದ ನಿಂತರು. ಕಾಲಿಗೆ ಬಿದ್ದರು.

“ನಾನು. ನನ್ನ ಕಲೀಗ್ ಇಷ ್ಟದಿನಾ ಲಿವಿಂಗ ಟುಗೆದರನ್ಯಾಗ ಇದ್ವಿ. ಮೊನ್ನಿ ಮದವಿ ಆಗೀವಿ. ನಿಮ್ಮ ಆಶೀರ್ವಾದ ಬೇಕು’’ ಅಂದ ಮಗಾ.

ಮನಿಗೆ ಕಾಳುಕಡಿ ಸಮೃದ್ಧಿಯ ಧಾನ್ಯಲಕ್ಷ್ಮಿ ಬರಲಿ ಅಂತ ಬಲಗಾಲಿಂದ ಅಕ್ಕಿ ಸೇರ ಒದಿಲಾರದ ಸೊಸಿ ಮನಿ ಒಳಗ ಕಾಲಿಟ್ಟಿದ್ದಳು. ಹೊಸಾ ನಮೂನಿ ಮುಸುಕಿನ ಗುದ್ದಾಟಗಳು ಶುರು ಆಗಿದ್ದವು. ಈಗ, ಮಹಾಭಾರತದಾಗಿನ ಕುರುಕ್ಷೇತ್ರದ ಅಧ್ಯಾಯಗಳು ತೆರಕೊಂಡವು. `ಹೊಂದಾಣಕಿಗೆ ಸ್ವಲ್ಪ ಟೈಮ್ ಹಿಡಿತದ. ಹಲ್ಲ ಬರೂಮುಂದ ಕೂಸಿನ ರಂಪಾಟ ಜಾಸ್ತಿ. ಇರಲಿ ಸ್ವಲ್ಪ ದಿನಾ ಕಳದರ, ಎಲ್ಲಾ ಛಲೋ ಆಗ್ತದ’ ಅನಕೊಂಡೆ ನಾನು. ಮದುವಿ ನಡದ ಎರಡ ತಿಂಗಳಿಗೆ, ನಾನು ಒಂದ ವಾರ ದವಾಖಾನಿಗೇ ಸೇರಂಗಾಯತ್ತು, ಈಕೀನು ಅಡ್ಮಿಟ್ ಆಗಿ ಬಂದಳು. ಎಲ್ಲೆ ಹೋಗಲಿ, ಇಬ್ಬರ ಸಂಗಾತ ಗುಳಗಿ ಡಬ್ಬಿಗಳ ಬುತ್ತಿ ಡಬ್ಬಿ ಕಾಯಂ ಇರ್ತಾವ ಈಗ, ಅಜ್ಜಿ ಸೊಂಟಕ್ಕ ಸಂಚಿ ಕಟಗೊಂಡಂಗ. ನಮ್ಮ ಅಜ್ಜಿ ಚಂಚಿಯೊಳಗ ಎಷ್ಟೊಂದ ಖಾನೆಗಳು ಇರ್ತಿದ್ದವು. ಅದರಾಗ ಎಲಿ ಅಡಕಿ, ತೂತಿನ ದುಡ್ಡು, ಬೆಳ್ಳಿ ರೂಪಾಯಿ, ಮನಿ ಕೀಲಿ ಕೈ, ಒಂದ ಎರಡ- ಅದು ಇದು ಕೂಡಿ, ಅದು ಬಾಳ ವಜ್ಜಿ ಇರ್ತಿತ್ತು.

“ಅಂಕಲ್ಲ ಅಂಕಲ್, ಸುಮ್ಮನ ನಿಂತೀರಿ. ನಮ್ಮ ಕಂಪನಿ ಹೊಸಾ ಪ್ರೊಡಕ್ಟ ಅದ ಈ ಕೇಕ್, ಟೇಸ್ಟ ಮಾಡಿ ನೋಡ್ರಿ.’’

ಕೇಕ್ ಅಂದ ಕೂಡ್ಲೆ ಬಿಷಪ್ಪರ ಮಾತುಗಳು ಧ್ಯಾಸಕ್ಕ ಬಂದವು. ನಿನ್ನ ಮಗನ ವೆಡ್ಡಿಂಗ್ ಕೇಕ್ ಬಿಷಪ್ ಹೌಸ್‌ನಿಂದ ಖಾಸಾ ಆಶೀರ್ವಾದಗಳಿಂದ ತುಂಬಿಕೊಂಡ ಬರ್ತದ ನೋಡಪಾ’ ಅಂದಿದ್ದರು. ಆದರ, ಏನ ಮಾಡೂದು? ಅದಾವುದೋ ಸ್ವಿಸ್ ಕಂಪನಿ ಅಂತ. ಅಲ್ಲಿ ಕೆಲಸ ಮಾಡೂ ಮಗಾ, ಯಾರಿಗೂ ಹೇಳದ ಕೇಳದ ಕಚೇರಿಯೊಳಗ ತನ್ನ ಜೋಡಿ ಕೆಲಸ ಮಾಡೂ ಉತ್ತರ ಭಾರತದ ಹುಡುಗೀನ ಮದುವಿ ಆದ. ಗುಡ್ಯಾಗ ನಪ್ಷಲ್ ಮಾಸ್ ಇಲ್ಲ. ಬೆಸ್ಟ್ ಮ್ಯಾನ್ ಇಲ್ಲ. ಮದುವಿ ಪೂಜಿ ಮುಗದ ಮ್ಯಾಲ, ಹೊರಗ ಬಂದ ಮದುವಣಗಿತ್ತಿ ಹುಡುಗಿ, ಹಾರಸು ಹೂವಿನ ಗುಚ್ಛ ಹಿಡಿದ ತಮ್ಮ ಮದವಿ ಖಾತರಿ ಮಾಡಿಕೊಳ್ಳು ಹುಡಿಗ್ಯಾರ ಟೋಳಿ ಇಲ್ಲ. ಪಾದ್ರಿಗಳು ಹೇಳಿಕೊಡುದುಕ್ಕೆಲ್ಲಾ ಲಗ್ನದ ಹುಡುಗ, ಹುಡುಗಿ ಒಪ್ಪಕೊಂಡ ಹೇಳೂಐ ಡೂ’ `ಐ ಡೂ’ ಇಲ್ಲ ಇಲ್ಲ. ಸಂಭ್ರ್ರ್ಮದ ಗುಡಿ ಮದವಿ ಕನಸ ಮಣ್ಣಾಗಿ ಹೋತು. ಮನಿ ಮುಂದ ಮದವಿ ಮಂಟಪ ಕಟ್ಟಲಿಲ್ಲ, ಮನಿ ಮುಂಚಿ ಬಾಗಲಕ ತೋರಣ ಕಟ್ಟಲಿಲ್ಲ. ಓಣ್ಯಾನ ಹೆಣ್ಮಕ್ಕಳಿಗೆ ಹಸರ ಬಳಿ ತೊಡಸಲಿಲ್ಲ. ನವ ಧಾನ್ಯ, ನವ ನಾಣ್ಯ ಹಾಕಿದ ಮಣ್ಣಿನ ಕುಂಡದೊಳಗ ಕಂಬ ನೆಡು ಶಾಸ್ತç ನಡಿಲಿಲ್ಲ. ದೇವಮಾತೆ ಮಂಟಪಕ್ಕ ಸೋದರ ಮಾವ ದಾರಾ ಕಟ್ಟಲಿಲ್ಲ. ವಧುವರರ ಕೈ ಮ್ಯಾಲ ಹಾಲ ಹಾಕೂ ಕರ್ಯ ನಡಿಲಿಲ್ಲ. ಉಪದೇಶಿ ಬಂದ ಇಂಥಾ ಸಂಸ್ಕಾರ ನಡಸಲಿಲ್ಲ. ಸಂಸ್ಕೃತ ಜಪಾ ಹೇಳಲಿಲ್ಲ. ಒಟ್ಟ ನಾವು ನಮ್ಮ ಬಿಷಪ್ಪಗ, ನಮ್ಮ ಮಾರಿ ತೋರಿಸದಂಗಾಯ್ತು. ಊರಾಗ ನಾವ ಇರಾವರ ನಾಕ ಮಂದಿ. ನಮ್ಮ ಮಂದಿ, ನಾಕ ಮಂದಿ ಸರಿಕರ ನಡುವ ತಲಿ ತಗ್ಗಿಸಿ ನಿಲ್ಲುವಂಗ ಆಯಿತು. ಎಲ್ಲಿ ಯಾರ ಸಿಗ್ತಾರೂ ಅನ್ನು ಹೆದರಿಕಿಯೊಳಗ, ಮುಖಾ ತಪ್ಪಿಸಿ. ಹಾದಿ ತಪ್ಪಿಸಿಕೊಂಡ ಓಡಾಡುವಂಗ ಆಗೇದ. ಶಹರರಿಗೆ ಸೇರಿದ್ದು ನಮ್ಮ ರ್ಯಾ ದಿ ಉಳಿಸಿದಂಗಾಗೇದ.

ನಮ್ಮ ಬಿಷಪ್ ಅಂದ್ರ ಜೆಮ್ ಇದ್ದಂಗ ಅದಾರು. ಮೂವತ್ತ ವರ್ಷ ಆತು ನಮ್ಮ ನಮ್ಮೂರಿಗೆ ಬಂದ. ಚರ್ಚ ಕಟ್ಟಿ ಬೆಳಿಸಿದರು. ಎಲ್ಲಾರ ಮನಿ ಮಂದಿ ಹೆಸರ ಅವರ ಬಾಯಾಗ ಕುಂತಿರ್ತದ. ಯಾರೂ ಅವರ ಮುಂದ ನಿಂತ ತಮ್ಮ ಹೆಸರ ನೆನಪ ಮಾಡಿಕೊಡಬೇಕಾಗಿಲ್ಲ. ಜನವರಿ ತಿಂಗಳದಾಗ ಭಾಲ್ಕಿಯೊಳಗ ಜಾತ್ರಿ ನಡಸ್ತಾರು. ಬಿಜಾಪುರ, ಗುಲ್ಬರ್ಗ ಮತ್ತ ಬೀದರ್ ಜಿಲ್ಲಾದ ನಮ್ಮ ಧರ್ಮಪ್ರಾಂತ್ಯದ ಮಂದಿ ಎಲ್ಲಾ ಕೂಡಿರ್ತದ. ಬಿಷಪ್ಪರು ಅಂದ್ರ, ನಮ್ಮ ಕಥೋಲಿಕ ಕ್ರೆöÊಸ್ತ ಮಂದಿ ಒಂದ ಧರ್ಮಪ್ರಾಂತ್ಯದ ಮುಖ್ಯಸ್ಥರು- ಪ್ರಧಾನ ಗುರುಗಳು. ಅಲ್ಲಲ್ಲಿ ಊರಾಗಿರೂ ಗುಡಿಗಳನ್ನ ನೋಡಕೊಳ್ಳಾಕ ಸಭಾಪಾಲಕ – ಪ್ಯಾರಿಶ್ ಪ್ರೀಸ್ಟ್ ಇರ್ತಾರು. ಬಿಷಪ್ಪರು ಅವರ ಮ್ಯಾಲ ಇರ್ತಾರು. ಬಿಷಪ್ಪರ ಮ್ಯಾಲ ಪ್ರಧಾನ ಬಿಷಪ್ಪರು- ಆರ್ಚಬಿಷಪ್ಪ ಮತ್ತು ಅವರ ಮ್ಯಾಲ ಕಾರ್ಡಿನಲ್, ಈ ನಮ್ಮ ದುನಿಯಾಕ ಇರೂ ಒಬ್ಬನ ಒಬ್ಬ ನಮ್ಮ ಜಗದ್ಗುರು ಪೋಪತನಕ ಹಂಗ ಹೋಗ್ತದ ಈ ಹೈರಾರ್ಕಿ.

`ಜಾನ್ಸನ್ನ ಮಗಾ ಆನಂದಗ, ಬ್ಯಾರೆ ಕಾಸ್ಟ್ ಮ್ಯಾರೇಜ್ ಆಯ್ತಂತ. ನಮ್ಮ ಜಾನ್ಸ್ನ್ ಜೋಳದನ ಮಗ ಹಿಂಗ್ಯಾಕ ಮಾಡದ?’ ಅಂತ ಬೇಜಾರ ಮಾಡಕೊಂಡ್ರಂತ ಬಿಷಪ್ಪರು. ಏನ್ ಮಾಡೂದು ಅದ ಈಗ.

ನಮ್ಮ ಕಾಲಕ್ಕ ನಾವು ದಶರಥನ ಮಗಾ ರಾಮನಂಗ ಇದ್ವಿ. ಶ್ರವಣಕುಮಾರ, ಯಾರ ಅದಾರ ಈಗ? ಭರತ ವಾಕ್ಯ ಪಾಲನಿಗ ಕಿಮ್ಮತ್ತಿಲ್ಲ. ವಯಸ್ಸಾದ ಅಪ್ಪ ಅವ್ವನ್ನ ಅದೇನೋ ಅಂತಾರಲ್ಲಾ ವೃದ್ಧಾಶ್ರಮಕ್ಕ ಭರ್ತಿ ಮಾಡಿ ಕೈ ತಕ್ಕೊಂಡ ಬಿಡ್ತಾರ. ಲಕ್ಷö್ಮಣ ಗೆರೆ ಎಳದಂಗ ಅಪ್ಪ ಅವ್ವಾ, `ಆ ಹುಡಗ ಬ್ಯಾಡ, ಸುಳಿ ಸುಮಾರ ಅದ, ಚಟಾ ಅದಾವ, ಆ ಹುಡುಗಿ ಬ್ಯಾಡ ಅವರ ಅಕ್ಕ ಯಾವನ್ ಜೋಡಿನೋ ಓಡಿ ಹೋಗಿದ್ಲು. ಹಿರಿಯಕ್ಕನ ಚಾಳಿ ಮನಿಮಂದಿಗೆಲ್ಲಾ’ ಅಂತ ಅಂದರ ಮಾತ ಖತಂ, ಎಲ್ಲಾ ಮುಗೀತು. ಗರ್ವನರ್ ಫರ್ಮಾನ್ ಹೊಂಡಿಸಿದಂಗ ಆಗಿರೂದು.

ಹಿಂದ, ಸರ್ವೇಶ್ವರ ದೇವರು ತನ್ನ ಮಕ್ಕಳ ಜೋಡಿ ಮಾತಾಡ್ತಿದ್ದ. ಪಿತಾಮಹಾ ಅಬ್ರಹಾಂ, ದೇವರ ಹೇಳಿದ ಅಂತ ಮುಪ್ಪಿನ ಕಾಲಕ್ಕ ಹುಟ್ಟಿದ ಮಗನ್ನ ಬಲಿ ಕೇಳಿದ್ದ. ಅದಕ್ಕ ಮಗನ್ನ ನೈವೇದ್ಯ ಕೊಡಾಕ ದೇವರ ಗುಡ್ಡ ಹತ್ತಿದ್ದ. ದೇವರು ಅವನ್ನ ಪರೀಕ್ಷೆ ಮಾಡಾಕ ಹಂಗ ಮಾಡಿದ್ದ. ಅಬ್ರಾಹಂನ ಮಗನ ಬದಲಿ, ಬಲಿಗೆ ರೆಡಿ ಮಾಡಿದ್ದ ಅಗ್ನಿಕುಂಡಕ್ಕ ಕಂಟ್ಯಾಗ ಎಳಿ ಕುರಿಮರಿ ಸಿಗೂಹಂಗ ಮಾಡಿದ್ದ. ಮುಂದ, ದೇವರ ಮಕ್ಕಳಾದ ನಮ್ಮ ಜೋಡಿ ಮಾತಾಡೂ ನಮ್ಮ ದೇವರು, ಪ್ರವಾದಿಗಳ ಕೂಡ ಮಾತಾಡ್ತಿದ್ದ. ಪ್ರವಾದಿ ಮೋಸೆಸ್ನ ಕಾಲಕ್ಕ ಹತ್ತು ದೈವ ಕಟ್ಟಳೆಗಳ ಶಾಸನ ಕೊಟ್ಟಿದ್ದ. ಕಡೀಕ ತನ್ನ ಮಗಾ ಯೇಸುಸ್ವಾಮಿನ್ನ ಕಳಿಸಿದ್ದ. ಅದಾದ ಮ್ಯಾಲ ದೇವರು ಸರ್ವೇಶ್ವರ ನಮ್ಮ ಕೂಡ ಮಾತಾಡೂದು ನಿಲ್ಲಿಸಿ ಬಿಟ್ಟಾನ. ಯೇಸುಸ್ವಾಮಿ ಜೀವನ, ಅವಾಂ ಆಡಿದ್ದ ಮಾತುಗಳ ನಮಗ ಈಗ ದಾರಿ ತರ್ಸುಿ ಶುಭಸಂದೇಶ ಆಗ್ಯಾವ.

ಕಲ್ತ ಮಂದಿಗೆ ದೇವರುದಿಂಡರು ಕಾಣವೊಲ್ಲರು, ಕೈ ತುಂಬ ರೊಕ್ಕ ಸಿಗೂ ನೌಕರಿ ಸಿಕ್ಕಾವು. `ಮೊಲಿ ಮೂಡಿದಾಗ ನೆಲ ಕಾಣುದಿಲ್ಲ, ಮೀಸಿ ಮೂಡಿದಾಗ ಮುಗಲ ಕಾಣುದಿಲ’್ಲ ಅಂತಿದ್ರು ಹಿಂದ. ತಿಂಗಳಾ ತಿಂಗಳಾ ಹರೇದ ಮಕ್ಕಳ ಕೈಯಾಗ ಹಿಡಿತುಂಬ ರೊಕ್ಕ ಸಿಕ್ಕ ಮ್ಯಾಲ, ದುನಿಯಾದಲ್ಲಿದ್ದ ಎಲ್ಲಾನೂ ನೋಡೂ, ಅನುಭವಿಸೂ ಉಮೇದಿ ಹೆಚ್ಚಾಗೇದ. ಅವರದ ದುನಿಯಾನ ಬ್ಯಾರೆ ಆಗೇದ. ವಾರಕ್ಕೊಮ್ಮಿ ರವಿವಾರ ಗುಡಿಗೆ ಹೋಗತಿದ್ದ ಹುಡುಗರು ಈಗ ಹ್ವಾದರ ಹ್ವಾದರು ಇಲ್ಲಕಂದ್ರ ಇಲ್ಲ. ಮಾಲಿಗೆ, ಮಲ್ಟಿಫ್ಲೆಕ್ಸ್ ಸಿನಿಮಾಕ ಹೋಗು ಪ್ಲಾನ್ ಮಾತ್ರ ಆಗಿರ್ತದ. ಇಂದ ಮಕ್ಕಳ ಮದುವಿ ಬಾಳ ಸೆನ್ಸಿಟಿವ್ ಆಗೇದ. ಪ್ರೆöÊಯಾರಿಟೀಸ್ ಬದಲಾಗ್ಯಾವ. ಲೈಫ್‌ನ್ಯಾಗ ಎಲ್ಲಾ ಅನುಭವಿಸಬೇಕು.

ಈ ದೊಡ್ಡ ಶಹರಿಗೆ ಬಂದ ಜೀವನದಾಗ ಕನಸಿನ್ಯಾಗೂ ನೋಡಲಾರದಂತಾ ಜೀವನ ಎಲ್ಲಾ ಅನುಭವಿಸಿದಂಗಾಯ್ತು. ಎಷ್ಟಂದ್ರೂ ನಮ್ಮೂರ ನಮಗ ಛಲೋರಿಪಾ. ಹರ್ಯಾೀರು ಒಂದ ಮಾತ ಹೇಳತಿದ್ದರು. ಹಂಪ್ಯಾಗ ಇರೂಕಿಂತ ಕೊಂಪ್ಯಾಗ ಇರಬೇಕಂತ’. ಇಲ್ಲಿ ಯಾರದರ ಮನಿಗೆ ಹೋಗಬೇಕಂದರ, ಅದಕ್ಕ ವಾರದ ಮುಂದ ಪ್ಲಾನ್ ಮಾಡಬೇಕಂತ. ಗುರ್ತಿನವರದ್ದು, ಪೌಣ್ಯಾಗೋಳ ಮನಿಗಳು ಬರಿ ಹತ್ತ ಹದಿನೈದ ಕಿಲೋ ಮೀಟರ್ ದೂರ ಅದಾವ. ಬಸ್ ಹತ್ತಿದರ ಸಂಜೀಕ ಮುಟ್ಟತೀವಿ. ಈಗ ಮಾತ ಎತ್ತಿದರ, ಬಾಡಿಗಿ ಓಡಸೂ ಖಾಸಗಿ ಕಂಪನಿ- ಓಲಾ, ಊಬರ್‌ಗಳಂಥವರ ಕಾರು, ಆಟೋ ಹತ್ತಬೇಕು. ಅದರುದ್ದ ಬಾಡಿಗಿ ದುಡ್ಡ ಸುರಿಬೇಕು. ಮನ್ಯಾನವರು ಟಿವಿ ಮುಂದ ಕೂತಿರ್ತಾರು, ದಾರಾವಾಹಿಗಳನ್ನ ನೋಡಕೋತ. ನಾವ್ ಹೋದರ,ಎಲಾ ಇವನ, ಇವರ ಈಗ ಬರಬೇಕಿತ್ತ?’ ಅನ್ನವರಂಗ ಅವರ ಮುಖ ಕುಂಬಾರನ ಸುಟ್ಟಗಡಗಿ ಗತೆ ಆಗಿರ್ತಾವು. ಶಹರಿಗೆ ಬಂದ ಎರಡ ವರ್ಷ ಆತು, ಒಬ್ಬ ಪೌಣ್ಯಾನ ಮನಿಗೆ, ಗುರ್ತಿದ್ದವರ ಮನಿಗೆ ಹೋಗಾಕ ಆಗಿಲ್ಲ. ಏನ ಮಾಡೂದದ, ಅನಿವಾರ್ಯ. ಜೀವನದ ಗತೀನ ಬದಲಾಗೇದ.

ಮಗನ ಜೋಡಿ ಇಲ್ಲಿ ಬಂದ ದೊಡ್ಡ ಮನಿ ಕಾಯೂ ವಾಚಮನ್ ಕಲಸ ಮಾಡಂಗ್ ಆಗೇದ. ಜೀವನದಾಗ ಏನೆಲ್ಲಾ ಮಾಡದ. ಹೊಟೇಲ್ ಇಟ್ಟಿದ್ದ, ಬಾಡಿಗಿ ಸೈಕಲ್ ಅಂಗಡಿ ಇಟ್ಟಿದ್ದ, ಅರಬಿ ಅಂಗಡಿ ಇಟ್ಟಿದ್ದ, ಪೆಟ್ರೋಲ್ ಬಂಕ್ ಇಟ್ಟಿದ್ದ, ಸಾಲಿ ಮಾಸ್ತರಿಕಿ ಮಾಡಿದ, ಇಂಗ್ಲಿಷ್ ಸಾಲಿ ಮ್ಯಾನೇಜರ ಆದ. ವ್ಯಾಳೇಕ ಜೀಪ್ ಡ್ರೈವರ್ ಆಗದ್ದ. ಜೀವನದಾಗ ಇದೊಂದ ಟಾಸ್ಕ್ ಖಾಲಿ ಇತ್ತು. ವಾಚಮನ್ ಕೆಲಸ. ದೇವರ ದಯಾ ಗಾಡ್ಸ್ ಗ್ರೇಸ್, ಅದು ಕಂಪ್ಲೀಟ್ ಆಯಿತು. ದೇವರಿಗ ಕೋಟಿ ಕೋಟಿ ಸ್ತೋತ್ರ. ಊರಾಗಿನ ಮನಿ ಬಾಡಿಗೆ ಬರ್ತದ. ಅಂಗಡಿ ವ್ಯಾಪಾರದ ನನ್ನ ಪಾಲಿನ ದುಡ್ಡ ಬರ್ತದ. ನಮ್ಮ ಸಿಹಿಮೂತ್ರ ಔಷಧಿಗೆ ದುಡ್ಡ ಆಗ್ತದ. ಇಲ್ಲಕಂದ್ರ, ಇಷ್ಟ ಲಗೂನ್ ಎಲ್ಲಾ ರೊಕ್ಕ ಖರ್ಚಾತು?’ ಮಗಾ ಸೊಸಿ ಕೇಳಿದರ ಏನ್ ಮಾಡುದರಿಪಾ.ಮೊನ್ನೇನ ಡಬ್ಯಾಗ ಇಟ್ಟಿತ್ತಲಾ’ ಅನ್ನು ಮಾತು ಕೇಳಿಸಿಕೋಬೇಕಾಗ್ತದ. ನಾ ಇಲ್ಲಿ ಮಟ ಯಾರ ಮುಂದೂ ಕೈ ಚಾಚಿ ಬೇಡಿಕೊಂಡಾವಲ್ಲ. ವಾಟ್ಸಾಪ್ ಒಳಗ ಒಂದ ಹೇಳಿಕಿ ಬಂದಿತ್ತು. `ತಂದೆಯ ಸಂಪಾದನೆಯನ್ನು ಅನುಭವಿಸುವ ಸ್ವಾತಂತ್ರ್ಯ ಮಗನಿಗೆ ಸುಲಭವಾಗಿ ಸಿಗುತ್ತದೆ. ಆದರೆ, ಮಗನು ಸಂಪಾದಿಸುವಾಗ ಅದನ್ನು ಅನುಭವಿಸುವ ಸ್ವಾತಂತ್ರ್ಯ ತಂದೆಗೆ ಸಿಗುವುದಿಲ್ಲ.’ ಇದ, ಹದಿನಾರಾಣೆ ಖರೆ ಹೇಳಿಕಿ ಅದ.

“ಅಂಕಲ್ ಅಂಕಲ್..’’

ತಲಿ ಎತ್ತಿ ನೋಡದ. ಅಂಗಡಿಯೊಳಗಿನ ಸೇಲ್ಸ್ ಗರ್ಲ ಮಾರಿ ನೋಡಿ, “ಯವ್ವಾ ಕೇಕ್ ಬ್ಯಾಡವಾ. ಮನ್ಯಾಗಿ ಜ್ವಾಳದ ಹಿಟ್ಟ ಮುಗದದ. ಜ್ವಾಳ ತಗೊಂಡ ರ್ರಿ ಅಂತ ನನ್ನ ಹೇಣ್ತಿ ಕಳಿಸ್ಯಾಳವಾ. ಜ್ವಾಳಾ ಎಲ್ಲಿ ಇಟ್ಟೀರಿ’’

“ಅಂಕಲ್, ಜ್ವಾಳಾ ನಾವು ಮಾರಾಂಗಿಲ್ಲ. ಜ್ವಾಳ ಅಂದ್ರ ಏನು? ಹೆಂಗಿರ್ತದ?’’

“ಯವಾ,್ವ ಎರಡ ತಿಂಗಳ ಹಿಂದ ನನ್ನ ಮಗಾ ಇಲ್ಲಿಂದನ ಜ್ವಾಳಾ ತಂದಿದ್ದ ನಮ್ಮವ್ವ.’’

ಅವಳಿಗೆ ಯವ್ವಾ ಅಂದದ್ದಕ್ಕೆ ಬ್ಯಾಸರಾಗಿತ್ತೊ, ತಮ್ಮ ಅಂಗಡ್ಯಾಗ ಸಾಮಾನ ಇಲ್ಲ ಅಂದ್ರು ಕೇಳಲಾರದ ನನ್ನ ಹಟಾ ಬ್ಯಾಸರ ತಂದಿತ್ತೋ ಗೊತ್ತಾಗಲಿಲ್ಲ. `ಇದು, ದೊಡ್ಡ ಮಾಲ್. ಇಲ್ಲಿ ನಾನು ಕೆಲಸ ಮಾಡು ಹುಡುಗಿ, ಇಲ್ಲಿ ಏನೇನ ಮಾರ್ತದ ಅನ್ನೂದ ನನಗ ಎಲ್ಲಾ ಗೊತ್ತದ. ಆದ್ರ ಈ ಅಂಕಲ್ ಜ್ವಾಳ ನನಗ ಗೊತ್ತಿಲ್ಲ ಅಂದ್ರ ಏನು?’ ಅವಳ ಅಹಂಗೆ ಪೆಟ್ಟ ಬಿದ್ದಂಗ ಆಗಿತ್ತು.

“ಯವ್ವಾ, ಎರಡ ತಿಂಗಳ ಹಿಂದ ನನ್ನ ಮಗಾ ಇಲ್ಲಿಂದನ ಜ್ವಾಳಾ ತಂದಿದ್ದ, ಪಾಕೀಟದೊಳಗ. ನಮ್ಮ ಸೊಸಿನೂ ಮನ್ಯಾಗ ಇಲ್ಲ. ಕೆಲಸಕ್ಕ ಹೋಗ್ಯಾಳ. ಇಲ್ಲಕಂದ್ರ ಆಕಿ ಕಡಿಂದ ಆನ್ ಲೈನ್‌ನ್ಯಾಗ ಜ್ವಾಳಾ ತರಸ್ತಿದ್ವಿ ನಮ್ಮವ್ವ’’ ಅಂದಾಗ ಅವಳಿಗೆ ಕಸಿವಿಸಿ ಆಯಿತು.

ಹೊಸ ಬ್ರಾಂಡಿನ ಶೆಂಗಾ ಎಣ್ಣಿ ಪರಿಚಯ ಮಾಡಾಕ ನಿಂತಿದ್ದ ಹುಡುಗಿ ಕಡೆ ನೋಡಿ “ಏ ಸುನಿತಾ, ನಾವು ಜ್ವಾಳಾ ಮಾರ್ತೀವಿ?’’

“ಯು ಮೀನ್ ಮೇಝ್? ಅವು ಖಾಲಿ ಆಗ್ಯಾವ. ಅದರ ಹಿಟ್ ಸಿಗ್ತದ, ಆದರ..’’

ಈ ಅಂಕಲ್‌ಗೆ ಬೇಕಿಂಗ್ ಪೌಡರ್ ಯಾಕ ಬೇಕು? ಇವನ್ನ ನೋಡಿದರ ಕೇಕ್, ಬ್ರೆಡ್ ಮಾಡಾವರು, ಇಲ್ಲಾ ಬೇಕರಿ ನಡಸವರ ಪೈಕಿ ಅನುಸೂದಿಲ್ಲ. ಅವಳಿಗೆ ಅನುಮಾನ ಕಾಡಿದ್ದವು.

“ಅಲ್ಲ ನಮ್ಮವ್ವ ಮೇಝ್ ಅಲ್ಲ. ಮೇಝಿನ ಹಿಟ್ಟು ಅಲ್ಲ ನನಗ ಜ್ವಾಳಾ ಬೇಕಾಗ್ಯಾವ.’’

ಅಷ್ಟರಲ್ಲಿ ಅಲ್ಲಿ ಯಾರೋ ಒಬ್ಬರು ಬಂದಂಗಾಯ್ತು. ಗುಡ್ ಮಾರ್ನಿಂಗ್ ಸರ್’’ ಎನ್ನುತ್ತಾ ಸೇಲ್ಸ್ ಗಲ್ಸ್ ಸೆಟೆದು ನಿಂತಿದ್ದರು.ಏನು ಬೇಕಾಗಿದೆ ಅಂತೆ ಯಜಮಾನರಿಗೆ?’’ ಎಂದು ಕೇಳಿದರು. “ಅವರಿಗೆ ಜ್ವಾಳಾ ಬೇಕಂತ ಜ್ವಾಳಾ. ನಮ್ಮಲ್ಲಿ ಇಲ್ಲ ಅಂದ್ರು ಕೇಳವಲ್ಲರು’’ ನನ್ನ ಮೇಲೆ ಗೊಬೆ ಕುಂದ್ರಸಿದರು.

ಅಷ್ಟರಾಗ ಆ ಮನಷ್ಯಾ ನನ್ನ ಕಡೆ ತಿರುಗಿ, “ಹಂಗೇನ ಇಲ್ಲ. ಪ್ರೊಸೆಸ್ಡ್ ಪುಡ್ ಐಟೆಮ್ ಅಲ್ಲದ ಎಲ್ಲಾ ನಮೂನಿ ರಾ ಫುಡ್ ಐಟೆಮ್ ನಮ್ಮಲ್ಲಿ ಸಿಕ್ಕ ಸಿಗ್ತಾವು. ಐ ಮೀನ್ ಎಲ್ಲಾ ದಿನಸಿ ಸಾಮಾನು, ಕಾಳುಕಡಿ ಎಲ್ಲಾನೂ ಸಿಗತಾವು. ಯು ನೇಮ್ ಎನಿಥಿಂಗ್ ಅಂಡರ್ ದ ಸನ್, ವಿ ಪ್ರೊವೈಡ್. ಯಜಮಾನರೆ, ಜ್ವಾಳ ಅಂದ್ರ ಜವಾರ್ ಯು ಮೀನ್?’’

ಹೌದು ಹೌದು,’ ಅನ್ನೂಹಂಗ ನಾನು ಗೌಲೆತ್ತಿನ ಬಸವಣ್ಣನಂಗ ಗೋಣು ಅಲ್ಲಾಡಿಸಿದೆ.ನಿಮ್ಮ ಈ ಜವಾರ್ ಗೆ ಸೊರಘಮ್ ಅಂತಾನೂ ಕರಿತಾರ. ಅದು, ಉತ್ತರ ಭಾರತದ ಗೋದಿ ಹಂಗ, ಮೈಸೂರು ಸೀಮೆ ರಾಗಿ ಹಂಗ, ಉತ್ತರ ಕರ್ನಾಟಕದ ಸ್ಟೆಪೆಲ್ ಧಾನ್ಯ’ ಅಂತ ಹೇಳಬೇಕು ಅನ್ನಿಸಿತು. ಯಾಕ ಸುಮ್ಮಸುಮ್ಮಕ ಬಾಯಿಗೆ ಬೀಳೂದು, ಸುಮ್ಮನಾದೆ.

`ಗ್ರೋಸರಿ ಸೆಕ್ಷನ್ ಮೂಲೇಲಿ ರ್ಯಾ ಕ್ ನ್ಯಾಗ ಗೋದಿ, ರಾಗಿ ಜೋಡಿ, ಜವಾರ್ ಪಾಕೀಟು ಅದಾವ ನೋಡ್ರಿ. ಯಜಮಾನರನ್ನ ಅಲ್ಲಿಗೆ ಕರೆದುಕೊಂಡು ಹೋಗಿ ಬಿಡ್ರಿ. ಅವರು ಏನೋ ಬೇಕೋ ಅವನ್ನ ತಗೋತಾರ. ಯಾವದಕ್ಕೂ ಇಲ್ಲ ಅಂತ ಅನಬಾರದು, ಅಂಡರಸ್ಟಾಂಡ್. ಇಲ್ಲದಿದ್ದರ ಟೈಮ್ ತಗೊಂಡ ತರಿಸಿಕೊಡೂಣು.’

ಕಂಬಳ್ಯಾಗ ಕೋಲಿಟ್ಟ ಹೊಡದಂಗ ಜಬರಿಸಿದ ಅವಾಂ, `ಕಸ್ಟರಮರ್ ಇಜ್ ಆಲ್ವೇಜ್ ರೈಟ್’ ಅನ್ನೋ ಪಾಲಸಿ ಪಾಲಿಸುವ ಈ ಮಾಲ ಅಂಗಡ್ಯಾಗ, ನನ್ನ ತರುಬಿದ್ದ ಸೇಲ್ಸ್ ಗರ್ಲ್ಸಗಳ ಮುಖದಲ್ಲಿ ಆತಂಕದ ಗೆರೆಗಳು ಮೂಡಿದ್ದವು.

ನನ್ನ ಜೋಡಿ ಮಾತನಾಡಿಸಿದವ, ಆ `ಡಿ ಮಾರ್ಟ್’ ಮಾಲ್ ಅಂಗಡಿಯ ಆ ಫ್ಲೋರಿನ ಸೂಪರವೈಜರ ಅಂತ ಆಮ್ಯಾಲ ಗೊತ್ತಾತು.

ಶಹರದಾಗಿನ ಜೀವನ, ನಮ್ಮಂಥ ವಯಸ್ಸಾಗಿ ಖರೇನ ಬಿಳಿ ಕೂದಲ ಆದವರಿಗಲ್ಲ. ಅದ ಏನ್ ಇದ್ದರೂ ಸ್ವೀಟ್ ಸಿಕ್ಸಟೀನ್ ಕಳದ, ದುಡಿಯು ತಾಕತ್ತ ಸೇರಕೊಂಡ ಇಪ್ಪತ್ತರ ಹರೆದಾಗ ಬಂದ, ಕಣ್ಣಿಗೆ ಚಾಳೀಸ ಬರೂ ಚಾಲೀಸ ಆಗೂತನಕ ಅಷ್ಟ ಇಲ್ಲಿನ ಜೀವನ, ಇಲ್ಲ ಕುಂದ್ರಾಂಗಿಲ್ಲ ನಿಂದ್ರಾಂಗಿಲ್ಲ ಬರಿ ಓಡು ಓಡು ಓಡು ಓಡೂದ. ಬಸ್ಸಿಗೆ ಓಡು, ಪಿಕಪ್ ವ್ಯಾನ್ ಹಿಡದ ಕಚೇರಿ ಓಡು, ಮನಿಗೆ ಓಡು, ಹಾಲಿಗೆ ಓಡು, ಮೆಟ್ರೋಗ ಓಡು, ಟ್ರೈನಿಗೆ ಓಡು. ವಟ್ಟ ಓಡಕೋತ ಇರಬೇಕು ಕೈಯಾಗ ಕಾಲಾಗ ಕಸುವ ಇರೂತನಕ. ಆಮ್ಯಾಲ ಐತೆಲಾ, ಗಂಡಸಾಗಿದ್ದರ ಮನ್ಯಾಗ ವಾಚಮನ್ ಕೆಲಸ, ಹೆಂಗಸಾಗಿದ್ದರ ಮನಿ ಕಸಾಮುಸುರಿ ಮಾಡಕೋತ, ಪಪ್ಪಾ ಮಮ್ಮಿ ಬಡಬಡಿಸೂ ಸಣ್ಣ ಮಕ್ಕಳನ್ನ ನೋಡಕೊಂಡ ಕೂಡಾಕ ಒಂದ ಆಯಾ ಆಗಿ ಕೂತಬಿಡುದರಿಪಾ.

“ಯವ್ವಾ, ಕೇಕ್ ಟೇಸ್ಟ್ ಮಾಡೂದ ಏನ್ ಬ್ಯಾಡ. ಎರಡ ಕೇಕ್ ಪಾಕೀಟ್ ಕೊಟ್ಟಬಿಡ. ಅವನ್ನ, ಈ ಬುಟ್ಯಾಗ ಇಡವಾ.’’

“ಅಂಕಲ್, ಇದು ಹೊಸಾ ಕಂಪನಿ ಪ್ರೊಡಕ್ಟ್. ಒಂದ ಕೊಂಡರ ಒಂದ ಫ್ರೀ ಅದ. ನೀವ್ ಈಗ ಎರಡ ಕೇಕ್ ತಗೋಂಡ್ರ, ನಾಕ ಕೇಕ್ ಬರ್ತಾವ, ಇಡ್ಲಿ?’’

ಸೇಲ್ಸ್ ಗರ್ಲ್ ನಗುಮುಖದಿಂದ ಕೇಳಿದಳು.

ಒಂದ ತಗೊಂಡ್ರ ಒಂದ ಫ್ರೀ ಅನ್ನೂ ದುನಿಯಾದಾಗ ಈಗ ಅದೀವಿ. ಒಂದ ಸಂತೋಷ, ಒಂದ ನೆಮ್ಮದಿ ಕೊಂಡರ ಇನ್ನೊಂದ ಸಂತೋಷ, ಮತ್ತೊಂದ ನೆಮ್ಮದಿ ಫ್ರೀ ಆಗಿ ಸಿಗೂ ಹಂಗಿದ್ರ ಎಷ್ಟ ಛಲೋ ಇರ್ತಿತ್ತು ನಮ್ಮ ದುನಿಯಾ.

“ಆಯ್ತ, ಹಾಕವಾ ಬುಟ್ಯಾಗ’’ ಅಂದೆ.

ಯೇಸುಸ್ವಾಮಿ ಏನ ಹೇಳ್ಯಾನ? ನಿನ್ನ ನೆರಮನಿಯವನನ್ನೂ ನಿನ್ನಂಗ ಪ್ರೀತಿಸೂ ಅಂತ. ಇನ್ನ ಹೊಟ್ಟಿಲೆ ಹುಟ್ಟಿದವರನ್ನ ಏನ್ ಮಾಡೂದು? ಮಗ್ಗಲ ಮನ್ಯಾಗ ಕುಂಡ್ರಸಿ ಪ್ರೀತಿ ಮಾಡೂದದ? ದೊಡ್ಡವರ ಸಂಭಾಳಸಬೇಕಲಾ? ಒಂದ ಹೆಜ್ಜಿ ಹಿಂದ ಸರದರ ಏನ್ ಗಂಟ ಹೋಗ್ತದ?

ಏ ಮಗನ, ಮಿಸ್ಟರ್ ಜಾನ್ಸನ್ ಜೋಳದ’ ನನ್ನಷ್ಟಕ್ಕ ತಾನ ಹೇಳಕೊಂಡ,ಚೇಂಜಸ್ಸಗೆ ಹೊಂದಕೋಬೇಕ್ ಮಗನ, ಅದ ಜೀವನ. ಎವ್ರಿ ಡೆ ಸ್ಟಾರ್ಟ್ಸ ವಿಥ್ ಹ್ಯಾಪಿನೆಸ್, ಆಂಡ್ ಎಂಡ್ಸ್ ವಿಥ್ ಹ್ಯಾಪಿನೆಸ್. ಟು ಡೆ ಯು ಹ್ಯಾವ ಬಿಕಮ್ ಯಂಗ್ ಮ್ಯಾನ. ಇಟ್ ಇಜ್ ಬೈದ ಗ್ರೇಸ್ ಆಫ್ ಯುವರ್ ಒನ್ ಆಂಡ್ ಓನ್ಲಿ ಸನ್. ನಾಕ ದಿನದ ಸಂತಿ ಅದ ಈ ದುನಿಯಾ. ಯಾಕ ಚಿಂತಿ ಮಾಡತಿ? ಇರುವಷ್ಟ ದಿನಾ ಮನಸ್ಸ ಕೆಡಿಸಿಕೊಂಡ ಏನ್ ಮಾಡುದೈತಿ? ಬಿ ಹ್ಯಾಪಿ. ಲೆಟ್ ಅದರ್ಸ ಬಿ ಹ್ಯಾಪಿ.’

-ಎಫ್ ಎಂ ನಂದಗಾವ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x