( ಈ ಘಟನೆಯನ್ನು ಘಟನೆಯ ಪ್ರಮುಖ ವ್ಯಕ್ತಿಯ ಅನುಮತಿ ಪಡೆದು ಬರೆಯಲಾಗಿದೆ.. ಗೋಪ್ಯತೆಯ ಉದ್ದೇಶದಿಂದ ಹೆಸರುಗಳನ್ನು ಬದಲಿಸಿ ಬರೆದಿದ್ದೇನೆ )
ಸಾಮಾನ್ಯವಾಗಿ ನಾನು ಹೆಸರಿಲ್ಲದೆ ಬರಿ ನಂಬರ್ ಬರುವ ಕರೆಗಳನ್ನ ಬೇಗ ತೆಗೆಯೊಲ್ಲ. ನನ್ನ ಮೊಬೈಲ್ ನಂಬರ್ ಪದೇ ಪದೇ ಪತ್ರಿಕೆಗಳಲ್ಲಿ, ಟಿವಿ ನಲ್ಲಿ ಬಂದು ಸುಮ್ಮನೆ ಕರೆ ಮಾಡುವವರ ಸಂಖ್ಯೆ ಜಾಸ್ತಿ. ಇದು ಏನು ? ಯಾಕೆ ಸಹಾಯ ಮಾಡ್ತೀರಾ ? ಅನ್ನೂ ಪ್ರಶ್ನೆಗಳೇ.. ಅದಕ್ಕೆ ನಾನು ಹೆಸರಿಲ್ಲದೆ ಬರುವ ಕರೆ ಸ್ವೀಕಾರ ಮಾಡಲ್ಲ. ಆದ್ರೆ ಒಂದು ದಿನ ಸಂಜೆ ಆರುಗಂಟೆಯಿಂದ ಪದೇ ಪದೇ ಕರೆ ಬರ್ತಾನೇ ಇತ್ತು.. ನಾನು ತೆಗೆಯಲಿಲ್ಲ. ಸುಮಾರು ಹದಿನೈದು ಕರೆ ಬಂದ ನಂತರ ” ತುಂಬಾ ಅಗತ್ಯ ಇದ್ದರೆ ಮೆಸ್ಸೇಜ್ ಮಾಡಿ ‘ ಅಂತ ಸಂದೇಶ ಕಳಿಸಿದೆ. ಸಾರ್. ಪ್ಲೀಸ್ ಸಹಾಯ ಮಾಡಿ … !!!!!!!!! ಅಂತ ಮಾರುತ್ತರ ಬಂತು.. ಸರಿ ರಾತ್ರಿ ಒಂಬತ್ತರ ಮೇಲೆ ಕರೆಮಾಡಿ ಅಂತ ಮೆಸೇಜ್ ಮಾಡಿ ಮೊಬೈಲ್ ಆಫ್ ಮಾಡಿದೆ.
ಸಮಯ ರಾತ್ರಿ ಒಂಬತ್ತು ಮೊಬೈಲ್ ಆನ್ ಮಾಡಿದ ತಕ್ಷಣ ಕರೆ ಬಂತು.. ಅದು ಒಂದು ಲ್ಯಾಂಡ್ ಲೈನ್ ಫೋನ್ ಕರೆ.. ” ನಮಸ್ಕಾರ ಹೇಳಿ.. ಅಂದೇ.. ಆ ಕಡೆಯಿಂದ ಮಾತಿನ ಪ್ರವಾಹ ಶುರು ಆಯಿತು, ಸುಮಾರು ಹದಿನಾರು ವರುಷದ ಬಾಲಕಿ ಮಾತಾಡುತ್ತಿದ್ದಳು
”ಸಾರ್ ನನ್ನ ಹೆಸರು ಕೀರ್ತಿ ಅಂತ, ನಾನು ಹತ್ತನೇ ತರಗತಿಯಲ್ಲಿ ಓದ್ತಾ ಇದೀನಿ. ನನ್ನ ಫ್ರೆಂಡ್ ಸೋನಿ ಅಂತ ಇದಾಳೆ ಅವಳಿಗೆ ಹೆಲ್ಪ್ ಬೇಕಾಗಿದೆ ಸಾರ್. ನಿಮ್ಮ ನಂಬರ್ ನಮಗೆ ಇಂಟೆರ್ ನೆಟ್ನಲ್ಲಿ ಸಿಕ್ತು ”
” ಓಕೆ, ಸೋನಿ ಯವರಿಗೆ ಏನು ಸಹಾಯ ನನ್ನಿಂದ ಬೇಕಾಗಿದೆ ? ”
” ಸೋನಿಗೆ ತಾಯಿ ಇಲ್ಲ ಸಾರ್ ತಂದೆ ಇದಾರೆ.. ತುಂಬಾ ಸ್ಟ್ರಿಕ್ಟ್, ಮಿಲಟರಿಯಲ್ಲಿ ಇದ್ದೋರು. ಸೋನಿ ತುಂಬಾ ಚನ್ನಾಗಿ ಓದುತ್ತಾಳೆ.. ಒಳ್ಳೆಯೋಳು. ಅವಳಿಗೆ ನೀವು ಸಹಾಯ ಮಾಡಲೇ ಬೇಕು ಸಾರ್.. ಇಲ್ಲಾ ಅನ್ನಬೇಡಿ ”
” ನೋಡಮ್ಮ ಹಣ ಬೇಕು ಅಂದ್ರೆ, ಫೀ ಗೆ ಸಹಾಯ ಬೇಕು ಅಂದ್ರೆ ನಾನು ಬೇರೆಯವರ ನಂಬರ್ ಕೊಡ್ತೀನಿ, ಆಪ್ತಸಮಾಲೋಚನೆ, ಶಾಲೆ ಸಮಸ್ಯೆ ಆದ್ರೆ ನಾನು ಸಹಾಯ ಮಾಡಬಹುದು. ಸೋನಿ ಸಮಸ್ಯೆ ಏನು ?”
”ಅದು.. ಅದೂ ಸಾರ್.. ನಮ್ಮ ಪ್ರಿನ್ಸಿಪಾಲ್ ನಿಮ್ಮ ತಂದೆನಾ ಕರಕೊಂಡು ಬಾ ಅಂತ ಸೋನಿಗೆ ಹೇಳಿದಾರೆ ಸಾರ್.. ತುಂಬಾ ತೊಂದರೆ ಆಗುತ್ತೆ ಅವರು ನಮ್ಮ ಸ್ಕೂಲಿಗೆ ಬಂದ್ರೆ.. ಹೆಲ್ಪ್ ಮಾಡಿ ಸಾರ್ ”
” ಆಯ್ತಮ್ಮಾ ನಾನು ಸಹಾಯ ಮಾಡ್ತೀನಿ.. ಆದ್ರೆ ಪ್ರಿನ್ಸಿಪಾಲ್ ಯಾಕೆ ಸೋನಿ ತಂದೆನ ಕರಕೊಂಡು ಬಾ ಅಂತ ಹೇಳಿದಾರೆ ?’
” ಪಾಪ ಸಾರ್ ಅವಳು …. ”
” ಗೊತ್ತಮ್ಮಾ ಅವಳು ಬುದ್ದಿವಂತೆ, ಒಳ್ಳೆಯವಳು,, ನೇರ ವಿಚಾರ ಹೇಳು.. ಯಾಕೆ ಪ್ರಿನ್ಸಿಪಾಲ್ ಕರೆದಿದಾರೆ ? ನಾನು ಹೇಗೆ ಸಹಾಯ ಮಾಡಬೇಕು ?
” ಸೋನಿ ಫ್ರೆಂಡ್ಸ್ ಜೊತೆ ಸಿಗರೇಟ್ ಸೇದುತ್ತಿರೋದನ್ನ ಪ್ರಿನ್ಸಿಪಾಲ್ ನೋಡಿದಾರಂತೆ ಅದಕ್ಕೆ ಅವಳಿಗೆ ತಂದೆನ ಕರಕೊಂಡು ಬಾ ಅಂತ ಹೇಳಿದರೆ.. ನೀವು ಸೋನಿಯ ಅಂಕಲ್ ತರ ಸ್ಕೂಲ್ ಗೆ ಬಂದು ಪ್ರಿನ್ಸಿಪಾಲ್ ಜೊತೆ ಮಾತಾಡಿ ಸಾರ್ ”
ಕೆಲವು ಕ್ಶಣ ನನಗೆ ಏನೂ ಮಾತಾಡಬೇಕೆಂದು ತೋಚಲಿಲ್ಲ. ಈ ಹುಡುಗಿ ಹೇಳುತ್ತಿರುವುದು ಏನು ? ಈಕೆಯ ಗೆಳತೀ ಸಿಗರೇಟ್ ಸೇದೋದನ್ನ ಪ್ರಿನ್ಸಿಪಾಲ್ ನೋಡಿದಾರೆ ಅಪ್ಪನ್ನ ಕರೆದುಕೊಂಡು ಬಾ ಅಂತ ಹೇಳಿದಾರೆ, ನಾನೀಗ ಅವರ ಶಾಲೆಗೆ ಸೋನಿ ಅಂಕಲ್ ನಾನು ಅಂತ ಹೇಳಿಕೊಂಡು ಹೋಗಿ ಶಿಕ್ಷೆ ತಪ್ಪಿಸಬೇಕು.. ವಾವ್.. ಮಕ್ಕಳ ಹಕ್ಕುಗಳನ್ನ ಪ್ರಚಾರ, ಮಕ್ಕಳ ರಕ್ಷಣೆ ಮಾಡುತ್ತರೋ ನನ್ನ ತರದೋರನ್ನ ಸಹಾಯ ಕೇಳಬೇಕು ಅಂತ ಈ ಮಕ್ಕಳಿಗೆ ಹೇಗೆ ಹೊಳೀತು ? ಪ್ರಚಂಡರು ಅಂದುಕೊಂಡೆ.
” ನೋಡಮ್ಮ ಕೀರ್ತಿ ಇಂತಹ ವಿಚಾರಕ್ಕೆ ಸಹಾಯ ಮಾಡಬೇಕೋ ಬೇಡವೋ ನನಗೆ ಗೊತ್ತಿಲ್ಲ, ಒಂದು ಕೆಲಸ ಮಾಡು ನಾಳೆ ಸೋನಿ ನೀನು ಬೆಳಗ್ಗೆ ನಮ್ಮ ಆಫೀಸ್ ಹತ್ತಿರ ಬನ್ನಿ.. ಯಾವರೀತಿಯಲ್ಲಿ ಸಹಕಾರ ನೀಡಬಹುದು ಮಾತಾಡೋಣ.. ನಾನು ಸಹ ಯೋಚನೆ ಮಾಡಬೇಕು ” ಅಂತ ಹೇಳಿ ಫೋನ್ ಕಟ್ ಮಾಡಿದೆ.
ಪ್ರತಿದಿನ ಬೆಳಗ್ಗೆ ಸುಮಾರು ಒಂಬತ್ತು ಇ. ಪೇಪರ್ ಓದಿ ಅದರಲ್ಲಿ ಬಂದಿರುವ ಮಕ್ಕಳ ಸುದ್ದಿಗಳನ್ನು ಸಂವಿಧಾನ, ಮಕ್ಕಳ ಹಕ್ಕುಗಳ ಒಡಂಬಡಿಕೆ, ಮಕ್ಕಳ ಪರ ಕಾನೂನುಗಳ ಹಿನ್ನಲೆಯಲ್ಲಿ ವಿಶ್ಲೇಷಣೆ ಮಾಡಿ ರಾಜ್ಯದ ಸುಮಾರು ೫೦೦ ಕ್ಕೂ ಹೆಚ್ಚಿನ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ‘ಚೈಲ್ಡ್ ಇನ್ ನ್ಯೂಸ್ ‘ ಎಂದು ಮೇಲ್ ಕಳಿಸುವುದು ನನ್ನ ಪ್ರಮುಖ ಕೆಲಸ. ಈ ಕೆಲಸ ಮಾಡಲು ಬೆಳಗ್ಗೆ ೬ ಗಂಟೆಗೆ ಆಫೀಸಿಗೆ ಬರುತ್ತಿದ್ದೆ.ಅವತ್ತು ಚೈಲ್ಡ್ ಇನ್ ನ್ಯೂಸ್ ಕಳಿಸುವ ವೇಳೆಗೆ ೮ ಗಂಟೆ ಆಗಿತ್ತು. ಅದೇ ವೇಳೆಗೆ ನನ್ನ ರೂಮ್ ಹತ್ತಿರ ಯಾರೋ ಬಂದಹಾಗಾಯಿತು. ಒಳಗೆ ಬನ್ನಿ ಅಂತ ಕರೆದೆ
. ಬೆಂಗಳೂರಿನ ಪ್ರತಿಷ್ಠ ಶಾಲೆಯೊಂದರ ಸಮವಸ್ತ್ರ ದರಿಸಿದ್ದ ಹದಿನಾರು ಹದಿನೇಳು ವರುಷದ ಬಾಲಕಿ ಒಳಗೆ ಬಂದಳು.. ನಮಸ್ಕಾರ ಸಾರ್..
”ಯಾರು ನೀವು ? ಯಾಕೆ ಬಂದ್ದಿದೀರಿ ? ಪ್ರಶ್ನೆ ಕೇಳಿದೆ.
”ಅದೇ ಸಾರ್ ನಿನ್ನೆ ರಾತ್ರಿ ಫೋನ್ ಮಾಡಿದ್ದೇನಲ್ಲಾ.. ನಾನು ಕೀರ್ತಿ.. ”
‘ಒಹ್ ಮರತೇ ಹೋಗಿತ್ತು.. ಬನ್ನಿ ಬನ್ನಿ.. ನಿಮ್ಮ ಗೆಳತೀ ಸೋನಿ ಎಲ್ಲಿ ?”
ಒಂದು ಕ್ಶಣ ನನ್ನೇ ದಿಟ್ಟಿಸಿದ ಕೀರ್ತಿ ” ಪ್ರಾಬ್ಲಮ್ ನಂದೇ ಸಾರ್, ಸೋನಿದು ಅಲ್ಲ.. ಫೋನಲ್ಲಿ ಮಾತಾಡುವಾಗ ಭಯ ಆಯಿತು ಅದಕ್ಕೆ ಹಾಗೆ ಹೇಳಿದ್ದೆ. ”
ಆಪ್ತಸಮಾಲೋಚನೆಯಲ್ಲಿ ಸಮಸ್ಯೆ ಹೇಳೋರೆಲ್ಲಾ ಹೇಳೋದು ಹೀಗೇನೆ, ಗೆಳಯರ ಸಮಸ್ಯೆ ಅಂತ ತಮ್ಮ ಸಮಸ್ಯೆನೇ ಹೇಳಿರುತ್ತಾರೆ. ಅದು ನನಗೆ ಸಾಮಾನ್ಯ್ ಅನುಭವ. ಕೀರ್ತಿ ಹೇಳಿದ ಸಮಸ್ಯೆ ಏನೂ ಅಂದ್ರೆ ನಾಲ್ಕು ದಿನದ ಹಿಂದೆ ಗೆಳತಿಯೊಬ್ಬಳ ಹುಟ್ಟು ಹಬ್ಬದ ದಿನ ಬೇಕರಿಯೊಂದರಲ್ಲಿ ಕೇಕ್ ತಿಂದ ಬಳಿಕ ಏನಾದರು ಹೊಸದನ್ನ ಮಾಡೋಣ ಅಂತ ಗೆಳತಿಯರು ನಿರ್ಧಾರ ಮಾಡಿ ಪ್ರಥಮ ಬಾರಿಗೆ ಸಿಗರೇಟು ಸೇದುವ ಸಾಹಸ ಮಾಡಿದರಂತೆ. ದುರಾದೃಷ್ಟ ಅವರ ಪ್ರಿನ್ಸಿಪಾಲ್ ಅದನ್ನ ನೋಡಿ ಬಿಟ್ಟಿದ್ದಾರೆ. ಶಾಲೆಯಲ್ಲಿ ಬಹಳ ಚುರುಕಾದ ವಿದ್ಯಾರ್ಥಿನಿ ಕೀರ್ತಿ ಹೆಸರು ಮಾತ್ರ ಅವರ ನೆನಪಲ್ಲಿ ಇತ್ತು ಹಾಗಾಗಿ ಕೀರ್ತಿಯನ್ನು ಕರೆದು ಬೈದು ತಂದೆಯನ್ನು ಕರೆದು ಕೊಂಡು ಬಾ ಅಂತ ಹೇಳಿದಾರೆ. ಬಹಳ ಶಿಸ್ತನ್ನು ಇಷ್ಟ ಪಡುವ ಮಿಲಟರಿ ಅಪ್ಪ ಮಗಳು ಸಿಗರೇಟು ಸೇದಿದ ವಿಚಾರ ತಿಳಿದರೆ ಮತ್ತೆ ಶಾಲೆಗೆ ಕಳಿಸುವುದಿಲ್ಲ ಹಾಗಾಗಿ ಏನು ಮಾಡೋದು ? ಚೈಲ್ಡ್ ಹೆಲ್ಪ್, ಚೈಲ್ಡ್ ರೈಟ್ಸ್ ಅಂತ ಗೂಗಲ್ ನಲ್ಲಿ ಹುಡುಕಿದಾಗ ನನ್ನ ನಂಬರ್ ಸಿಕ್ಕಿದೆ. ಫೇಸ್ಬುಕ್ ನಲ್ಲಿ ನನ್ನ ವಿಚಾರ ತಿಳಿದಿದೆ. ಕೀರ್ತಿ ಬಗ್ಗೆ ನಂಗೆ ಹೆಮ್ಮೆ ಅನಿಸಿದ್ದು ಆಕೆ ನನ್ನ ಬಗ್ಗೆ ಸಂಪೂರ್ಣ ರಿಸೆರ್ಚ್ ಮಾಡಿಕೊಂಡು ಬಂದಿದ್ದಳು. ನನ್ನ ಕೆಲಸ, ನನ್ನ ಮೇಲಿರೋ ಕೇಸುಗಳು, ನನ್ನ ಪತ್ರಿಕಾ ಹೇಳಿಕೆ, ನನ್ನ ಲೇಖನ ಇವುಗಳ ಬಗ್ಗೆ ಅವಳಲ್ಲಿ ಮಾಹಿತಿ ಇತ್ತು.
”ಸರಿ ಕೀರ್ತಿ ಈಗ ನಾನು ನಿನ್ನ ಅಂಕಲ್ ಅಂತ ನಿನ್ನ ಶಾಲೆಗೆ ಬಂದು, ಪ್ರಿನ್ಸಿಪಾಲ್ ಹತ್ತಿರ ಮಾತಾಡಿ ನಿನ್ನ ಸಮಸ್ಯೆ ಬಗೆ ಹರಿಸಿದ ಮೇಲೆ ನೀನು ಮತ್ತೆ ಸಿಗರೇಟು ಸೇದಲ್ಲ ಅನ್ನೋ ಗ್ಯಾರಂಟಿ ಏನು ? ನನ್ನ ವಿಚಾರ ನಿನ್ನ ಅಪ್ಪನಿಗೆ ತಿಳಿದು ನನ್ನ ಮೇಲೆ ಪೊಲೀಸ್ ಕೇಸ್ ಮಾಡಿದರೆ ಏನು ಮಾಡಲಿ ?”
” ಇಲ್ಲಾ ಸಾರ್ ನಾನು ಮತ್ತೆ ಸಿಗರೇಟು ಸೇದಲ್ಲ, ಅದೇ ಮೊದಲ ಸಲ ಹಾಗೂ ಕೊನೆ. ನನ್ನ ಅಪ್ಪ ಮಡಿಕೇರಿಗೆ ಹೋಗಿದಾರೆ, ಈ ಸಮಸ್ಯೆ ಮುಗಿದರೆ ನನ್ನ ತಂದೆನಾ ನಾನೆ ನಿಮ್ಮ ಹತ್ರ ಕರೆದುಕೊಂಡು ಬರ್ತೀನಿ ”
ಸರಿ ನಿಮ್ಮ ಶಾಲೆಗೆ ಬರಿತ್ತೀನಿ ಅನ್ನೋ ಭರವಸೆ ನೀಡಿ ಪ್ರಿನ್ಸಿಪಾಲ್ ಫೋನ್ ನಂಬರ್ ತೆಗೆದುಕೊಂಡು ಕೀರ್ತಿಯನ್ನು ಕಳಿಸಿದೆ. ಪಾಪದ ಹುಡುಗಿ ಸಹಾಯ ಮಾಡೋಣ ಅನ್ನೋದು ಒಂದುಕಡೆ, ನಾನು ಸರಿ ಮಾಡುತ್ತಿದ್ದೆನಾ ಅನ್ನುವ ಪ್ರಶ್ನೆ ಮತ್ತೊಂದು ಕಡೆ. ಆದರೂ ಇದೊಂದು ಹೊಸ ಅನುಭವ ನೋಡೋಣ ಅನ್ನುವ ಕುತೂಹಲ.
ನನ್ನ ಮನಸ್ಸಿನ ತೊಳಲಾಟಕ್ಕೆ ಒಂದು ಉಪಾಯ ಹೊಳೆಯಿತು. ತಕ್ಷಣ ನನ್ನ ಹತ್ತಿರ ಇದ್ದ ಕೀರ್ತಿ ಕೊಟ್ಟ ಶಾಲೆಯ ಪ್ರಿನ್ಸಿಪಾಲರ ಮೊಬೈಲ್ ನಂಬರ್ ಗೆ ಕರೆ ಮಾಡಿದೆ.. ”
” ಯಸ್ ಫಾದರ್ ಎಡ್ವರ್ಡ್ ಹಿಯರ್.. ” ಆಳವಾದ ದ್ವನಿ.. ನಾನು ಕನ್ನಡದಲ್ಲೀಯೇ ಉತ್ತರ ಕೊಟ್ಟೆ.
”ನಮಸ್ಕಾರ ಫಾದರ್ ನನ್ನ ಹೆಸರು ನಾಗಸಿಂಹ, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಹತ್ತಿರ ಕೆಲವು ವಿಚಾರ ಮಾತಾಡ ಬೇಕು, ನಾಳೆ ಬೆಳಗ್ಗೆ ೯. ೦೦ ನಿಮ್ಮ ಶಾಲೆಗೆ ಬಂದು ನಿಮ್ಮನ್ನು ಭೇಟಿ ಮಾಡಬಹುದೇ ?
” ಐಸ್ ಇಟ್ ನಾಗಸಿಂಹ ಫ್ರಮ್ RTE ಟಾಸ್ಕ್ ಫೋರ್ಸ್ ?’
‘ಯಸ್ ಫಾದರ್ ”
” ಯಸ್ ಯಸ್ ದಯವಿಟ್ಟು ಬನ್ನಿ.. ನಾಳೆ ೯.೩೦ ಕ್ಕೆ ಮೀಟ್ ಮಾಡೋಣ ”
ಅಬ್ಬಾ ದೇವರೇ ನನ್ನ ಬಗ್ಗೆ ಇವರಿಗೆ ಗೊತ್ತು.. ಮಾತಾಡಿದ್ದು ಕೇಳಿದರೆ ಸ್ನೇಹಮಯ ವ್ಯಕ್ತಿ ಅನ್ನಿಸಿತು. ಆದ್ರೆ ಸಿಗರೇಟು ಸೇದಿದ ಬಾಲಕಿ ಸಮಸ್ಯೆ ಪರಿಹಾರ ಮಾಡೋಕೆ ಹೋದ್ರೆ ಏನಾಗ ಬಹುದು ಅನ್ನುವ ಸಣ್ಣ ನಡುಕ ಎದೆಯಲ್ಲಿ ಇತ್ತು.
ಮಾರನೇ ದಿನ ಬೆಳಗ್ಗೆ ೯. ೩೦ ಕ್ಕೆ ಆ ಶಾಲೆ ತಲುಪಿದೆ. ದೊಡ್ಡ ಶಾಲೆ, ದೊಡ್ಡ ಕಂಪೌಂಡ್, ಭವ್ಯ ಕಟ್ಟಡ. ಪ್ರಿಸ್ಸಿಪಾಲ್ ಅಂತ ಬರೆದಿದ್ದ ಕೊಠಡಿ ಬಳಿ ಹೋಗಿ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಗೆ ನನ್ನ ವಿಸಿಟಿಂಗ್ ಕಾರ್ಡ್ ಕೊಟ್ಟೆ. ಆ ವ್ಯಕ್ತಿ ಅದನ್ನು ತೆಗೆದುಕೊಂಡು ಹೋಗಿ ಕೆಲ ಸಮಯದಲ್ಲೇ ಹೊರ ಬಂದು ”ಒಳಗೆ ಹೋಗಿ ಸಾರ್ ಕಾಯ್ತಾ ಇದಾರೆ ” ಅಂತ ತಿಳಿಸಿದರು.
ಪ್ರಿನ್ಸಿಪಾಲ್ ಕೊಠಡಿ ಪ್ರವೇಶ ಮಾಡಿದೆ. ಕುರ್ಚಿಯಲ್ಲಿ ಕೂತಿದ್ದ ಪ್ರಿನ್ಸಿಪಾಲ್ ಎದ್ದು ಬಂದು ನನ್ನ ಕೈ ಕುಲುಕಿ ಒಳಕ್ಕೆ ಬರ ಮಾಡಿಕೊಂಡರು. ನನ್ನ ಬಗ್ಗೆ, ಶಿಕ್ಷಣ ಹಕ್ಕು ಕಾರ್ಯಪಡೆ ಬಗ್ಗೆ ಅವರಿಗೆ ತಿಳಿದಿತ್ತು. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ೨೦೦೯ ಅನ್ನು ರಾಜ್ಯದಲ್ಲಿ ಜಾರಿ ಮಾಡಲಿ ಎಂದು ಸರ್ಕಾರದ ಮೇಲೆ ಒತ್ತಡ ತರಲು ೨೦೧೨ ರಲ್ಲಿ ಆರ್ ಟಿ ಈ ಕಾರ್ಯಪಡೆ ಪ್ರಾರಂಭವಾಗಿತ್ತು. ನಾನು ಈ ಕಾರ್ಯಪಡೆಯ ರಾಜ್ಯ ಸಂಚಾಲಕ. ಸರ್ಕಾರೇತರ ಶಾಲೆಗಳಲ್ಲಿ ಮಕ್ಕಳ ಮೇಲೆ ಆಗುವ ತಾರತಮ್ಯ, ಪೋಷಕರ ಶೋಷಣೆ ಬಗ್ಗೆ ನಮ್ಮ ಹೋರಾಟ ನಿರಂತರವಾಗಿ ಸಾಗಿತ್ತು. ಕೆಲವು ಸರ್ಕಾರೇತರ ಶಾಲೆಗಳು ನನ್ನ ಮೇಲೆ ದೂರನ್ನೂ ಸಹ ದಾಖಲಿಸಿದ್ದರು. ಸದ್ಯ ಈ ಪ್ರಿನ್ಸಿಪಾಲರಿಗೆ ನನ್ನ ಮೇಲೆ ಕೋಪ ಇರಲಿಲ್ಲ. ಕೋಪ ಇದ್ದರೂ ಅವರ ಮುಖದಲ್ಲಿ ಕಾಣಲಿಲ್ಲ.
”ನಮಸ್ಕಾರ ನಾಗಸಿಂಹರವರೇ ನಮ್ಮ ಶಾಲೆಯಲ್ಲಿ ಆರ್ ಟಿ ಈ ಏನಾದರೂ ಸಮಸ್ಯೆ ಆಗಿದೆಯೇ ? ಯಾರಾದರೂ ಪೇರೆಂಟ್ಸ್ ನಿಮಗೆ ದೂರು ನೀಡಿದ್ದಾರೆಯೇ ?
” ನೋ ನೋ ಇಲ್ಲಾ ಸಾರ್ ನಾನು ನಿಮ್ಮ ಜೊತೆ ಆರ್ ಟಿ ಈ ವಿಚಾರದ ಬಗ್ಗೆ ಮಾತಾಡಲು ಬಂದಿಲ್ಲ, ನನ್ನ ಬಳಿ ಯಾವುದೇ ದೂರು ಸಹ ಬಂದಿಲ್ಲ,ನಾನು ನಿಮ್ಮ ಜೊತೆ ಮಾತಾಡಲು ಬಂದಿರೋದು ಇಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕೆಲವು ಮಕ್ಕಳು ಮಾದಕ ಪದಾರ್ಥಗಳಿಗೆ ಮೊರೆ ಹೋಗ್ತಾ ಇದಾರೆ, ಧೂಮಪಾನ ಮಾಡೋದು, ಗುಟ್ಕಾ ತಿನ್ನೋದು ಪ್ರಾರಂಭ ಮಾಡಿದ್ದಾರೆ.ಇದು ಅವರ ದೇಹದ ಮೇಲೆ, ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆ ಶಿಕ್ಷಣ ಇವಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ವಿಚಾರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸ ಬೇಕು. ಮಾದಕ ಪದಾರ್ಥ, ತಂಬಾಕು ಇಂತಹ ವಸ್ತುಗಳ ಸೇವನೆ ಇಂದ ಆಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯ ಬಹಳ ಇದೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೩ ಮಕ್ಕಳನ್ನು ಮಾದಕ ಪದಾರ್ಥಗಳಿಂದ ರಕ್ಷಿಸ ಬೇಕೆಂದು ತಿಳಿಸಿದೆ. ಹಾಗಾಗಿ ನಾವು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ತಾವು ಅವಕಾಶ ಕೊಟ್ಟರೆ ಮಕ್ಕಳಿಗೆ ಮಾದಕ ಪದಾರ್ಥಗಳನ್ನು ಬಳಸಬೇಡಿ ಎಂದು ಮಾಹಿತಿ ನೀಡಿ, ಮಕ್ಕಳಿಂದ ಮಾದಕಪದಾರ್ಥ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸುತ್ತೇವೆ ” ದೀರ್ಘವಾಗಿ ಮಾತನಾಡಿ ಪ್ರಿನ್ಸಿಪಾಲ್ ಮುಖ ನೋಡಿದೆ. ಅವರ ಮುಖದಲ್ಲಿ ಆಶ್ಚರ್ಯ, ಆನಂದ ಕಂಡು ಬಂತು.
”ವಾವ್ ವೆರಿ ಗುಡ್.. ಇದು ತುಂಬಾ ಅಗತ್ಯ ಇರೋ ವಿಷಯ. ನಾಲ್ಕು ದಿನದ ಹಿಂದೆ ನಮ್ಮ ಶಾಲೆಯಲ್ಲಿ ಇದೆ ಘಟನೆ ನಡೆದಿದೆ. ನಮ್ಮ ಶಾಲೆ ಹೊರಗಡೆ ಇರುವ ಬೇಕರಿ ಹತ್ತಿರ ನಮ್ಮ ಶಾಲೆಯ ವಿದ್ಯಾರ್ಥಿನಿಯರು ಸಿಗರೇಟು ಸೇದುವುದನ್ನ ನೋಡಿ ನನಗೆ ಬಹಳ ಬೇಸರ ಹಾಗೂ ಕೋಪ ಬಂತು, ಅವರ ಪೋಷಕರನ್ನು ಕರೆದುಕೊಂಡು ಬರೋಕೆ ಹೇಳಿದೀನಿ.. ನಾಳೆ ಬರ್ತಾರೆ ” ಅಂದರು ಅವರ ದ್ವನಿಯಲ್ಲಿ ಸಾತ್ವಿಕ ಕೋಪ ಇತ್ತು.
”ನೋ ಸರ್ ನೋ ಇಂತಹ ವಿಚಾರಗಳನ್ನ ಪೋಷಕರು ಸರಿಯಾಗಿ ನಿಭಾಯಿಸೋದಿಲ್ಲ. ಮನೆ ಮರ್ಯಾದೆ ಅಂತ ಹೇಳಿ ಮಕ್ಕಳನ್ನ ದಂಡಿಸಿ ಬಿಡುತ್ತಾರೆ. ಮಕ್ಕಳು ಅವಮಾನ, ಕೋಪದಲ್ಲಿ ಏನು ಬೇಕಾದರೂ ಮಾಡ ಬಹುದು ಮನೆ ಬಿಟ್ಟು ಓಡಿ ಹೋಗಬಹುದು, ಖಿನ್ನತೆಗೆ ಒಳಗಾಗ ಬಹುದು, ಆತ್ಮಹತ್ಯೆಗೆ ಪ್ರಯತ್ನ ಪಡಬಹುದು ಹಾಗಾಗಿ ಪೋಷಕರಿಗೆ ಹೇಳುವ ಮೊದಲು ಅರಿವು ಮೂಡಿಸಿ ಬದಲಾವಣೆಗೆ ಪ್ರಯತ್ನ ಮಾಡೋಣ ಬದಲಾಗಲಿಲ್ಲ ಎಂದರೆ ಪೋಷಕರಿಗೆ ತಿಳಿಸ ಬಹುದು ” ಪ್ರಿನ್ಸಿಪಾಲ್ ನನ್ನ ಕಣ್ಣುಗಳನ್ನೇ ನೋಡ್ತಾ ಇದ್ದರು,ನನ್ನ ಮನಸಲ್ಲಿ ಅಳುಕು ಇದ್ದರೂ ದೃಢವಾಗಿ ಮಾತನಾಡಿದ್ದೆ.
ಕೆಲವು ಕ್ಷಣ ಯೋಚಿಸಿದ ಪ್ರಿನ್ಸಿಪಾಲರು ” ನಾಗಸಿಂಹ ನೀವು ಹೇಳುತ್ತಿರೋದು ಸರಿಯಾಗಿದೆ. ಮಕ್ಕಳ ದುರಭ್ಯಾಸ ತಡೆಯಲು ಶಾಲೆ ಏನು ಪ್ರಯತ್ನ ಮಾಡಿದೆ ಅಂತ ಜನ ಕೇಳೇ ಕೇಳ್ತಾರೆ, ಕಡೆ ಪಕ್ಷ ನಾವು ಜಾಗೃತಿ ಕಾರ್ಯಕ್ರಮ ಆದ್ರೂ ಮಾಡಲೇ ಬೇಕು, ಸರಿ ಸರಿ ಯಾವಾಗ ಪ್ರೋಗ್ರಾಮ್ ಮಾಡ್ತೀರಾ ?” ಅವರ ಧ್ವನಿಯಲ್ಲಿ ಆತುರ ಇತ್ತು. ಕೀರ್ತಿ ಸಮಸ್ಯೆ ಬಗೆ ಹರಿದಿತ್ತು, ಮಕ್ಕಳ ಹಕ್ಕುಗಳ ಬಗ್ಗೆ ಪ್ರಚಾರ ಮಾಡಲು ನನಗೊಂದು ಅವಕಾಶ ಸಿಕ್ಕಿತ್ತು.
”ಸಾರ್ ಸಿಗರೇಟ್ ಸೇದಿದ ಯಾರಾದರೂ ವಿದ್ಯಾರ್ಥಿಯನ್ನ ಕರೆಸಿ, ನಾನು ಮಾತಾಡ್ತೀನಿ, ಅವರಿಗೆ ಕೆಲವು ಜವಾಬದ್ದಾರಿ ಕೊಡ್ತೀನಿ, ಈ ಶನಿವಾರ ಮದ್ಯಾನ ಪ್ರೋಗ್ರಾಮ್ ಮಾಡ ಬಹುದೇ ?”
”ವೆರಿ ಗುಡ್, ಶನಿವಾರ ಮಾಡೋಣ” ಎಂದವರೇ ತಮ್ಮ ಎದುರಿದ್ದ ಗಂಟೆ ಬಾರಿಸಿದರು, ಗಂಟೆ ಶಬ್ದ ಕೇಳಿ ಒಳಗೆ ಬಂದ ವ್ಯಕ್ತಿಗೆ ” ಹತ್ತನೇ ಕ್ಲಾಸ್ ಏ ಸೆಕ್ಷನ್ ಕೀರ್ತಿನಾ ಕರಕೊಂಡು ಬಾ ” ಅಂದರು. ಆಯಿತು ಎಂದು ಆ ವ್ಯಕ್ತಿ ಹೊರಗೆ ಹೋದರು.
” ನೋಡಿ ಸಿಂಹ ಸಾರ್, ಈ ಕೀರ್ತಿ ವೆರಿ ಗುಡ್ ಸ್ಟೂಡೆಂಟ್, ಟಾಪ್ಪರ್, ತುಂಬಾ ಒಳ್ಳೆಯವಳು, ಯಾಕೆ ಈ ದುರಭ್ಯಾಸ ಕಲಿತಳೋ ತಿಳಿದಿಲ್ಲ, ನನಗೆ ನಮ್ಮ ಭವಿಸ್ಯ ದ ಬಗ್ಗೆ ಭಯ ಆಗುತ್ತೆ ”
ಪ್ರಿನ್ಸಿಪಾಲ್ ಮಾತು ಮುಗಿಯುವ ಹೊತ್ತಿಗೆ ಕೀರ್ತಿ ಒಳಕ್ಕೆ ಪ್ರವೇಶ ಮಾಡಿದಳು. ನನ್ನ ಮುಖ ನೋಡಿದ ತಕ್ಷಣ ಅವಳ ಮುಖ ಬಿಳಿಚಿ ಕೊಂಡು ಬಿಟ್ಟಿತು. ನಾನು ಅವಳ ಮೇಲೆ ದೂರು ಕೊಟ್ಟಿರ ಬಹುದು ಎಂದು ಅವಳು ಅಂದು ಕೊಂಡಿರ ಬೇಕು, ಪ್ರಿನ್ಸಿಪಾಲ್ ಮಾತಾಡೋ ಮೊದಲೇ ನಾನೆ ಮಾತಾಡಿದೆ…
”ನಮಸ್ಕಾರ ಕೀರ್ತಿಯವರೇ ನನ್ನ ಹೆಸರು ನಾಗಸಿಂಹ, ನಾನು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆಯ ಬಗ್ಗೆ ಕೆಲಸ ಮಾಡ್ತಿದ್ದೀನಿ. ನಿಮ್ಮ ಪ್ರಿನ್ಸಿಪಾಲ್ ನಿಮ್ಮ ಬಗ್ಗೆ ಹೇಳಿದರು, ನೀವು ನಿಮ್ಮ ಪೋಷಕರನ್ನು ಕರೆತರುವ ಅಗತ್ಯ ಇಲ್ಲ, ಆದರೆ ಶನಿವಾರ ನಿಮ್ಮ ಶಾಲೆಯಲ್ಲಿ ”ಮಾದಕ ಪದಾರ್ಥಗಳ ಬಗ್ಗೆ ಒಂದು ಜಾಗೃತಿ ಕಾರ್ಯಕ್ರಮ ಮಾಡ್ತಿದ್ದೀವಿ. ಅದಕ್ಕೆ ನಿಮ್ಮ ಸಹಾಯ ಬೇಕು ” ನನ್ನ ಮಾತು ಕೇಳಿದ ಕೀರ್ತಿಯ ಮುಖದಲ್ಲಿ ಅರಳಿದ ಮಂದಹಾಸ ಅದ್ಭುತವಾಗಿತ್ತು
” ನಾನು ಏನು ಮಾಡಬೇಕು ಸಾರ್ ?” ಅಂದ ಕೀರ್ತಿಗೆ ಶನಿವಾರದ ಕಾರ್ಯಕ್ರಮಕ್ಕೆ ಆಕೆಯ ಗೆಳೆಯರೆಲ್ಲಾ ಕಡ್ಡಾಯ ವಾಗಿ ಹಾಜರು ಇರುವಂತೆ ನೋಡಿಕೊಳ್ಳ ಬೇಕು. ಪುಟ್ಟ ಅಹ್ವಾನ ಪತ್ರಿಕೆ ಸಿದ್ದ ಪಡಿಸಿ ಪ್ರತಿ ತರಗತಿಗೂ ಕಳಿಸಬೇಕು, ಸಿಗರೇಟು, ಗುಟ್ಕಾ ಸೇವನೆಯಿಂದ ಆಗುವ ತೊಂದರೆ ಬಗ್ಗೆ ಪೋಸ್ಟರ್ ಬರೆದು ಶಾಲೆಯ ಸಬಾಂಗಣದಲ್ಲಿ ಅಂಟಿಸಬೇಕು ಹಾಗೂ ನಾನು ಪ್ರಿನ್ಸಿಪಾಲ್ ರವರಿಗೆ ಇಮೇಲ್ ಕಳಿಸುವ ”ಪ್ರತಿಜ್ಞಾ ವಿಧಿಯ ” ಪ್ರಿಂಟ್ ತೆಗೆದು ಕೊಂಡು ಚನ್ನಾಗಿ ಓದಿ ಶನಿವಾರದ ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರತಿಜ್ಞೆ ಮಾಡಿಸ ಬೇಕು ಎಂದು ತಿಳಿಸಿದೆ. ಪ್ರಿನ್ಸಿಪಾಲರಿಗೆ ನಾನು ಹೇಳಿದ ಮಾತುಗಳು ಮತ್ತು ಕೀರ್ತಿಗೆ ಕೊಟ್ಟ ಜವಾಬದ್ದಾರಿಯಿಂದ ಸಂತೋಷವಾಗಿತ್ತು. ಕೀರ್ತಿಯ ಕಣ್ಣಲ್ಲಿ ಧನ್ಯತಾ ಭಾವ ಇತ್ತು.
ಶನಿವಾರ ಆ ಶಾಲೆಗೆ ನಿಮಾನ್ಸ್ ಸಂಸ್ಥೆಯ ಗೆಳಯ ಡಾ ಪ್ರಕಾಶರನ್ನು ಸಂಪನ್ಮೂಲ ವ್ಯಕ್ತಿಯಾಗಿ ಕರೆದು ಕೊಂಡು ಹೋದೆ. ಸಭಾಂಗಣದ ಎಲ್ಲಾ ಕಡೆ ಧೂಮಪಾನ ವಿರೋಧಿ ಪೋಸ್ಟರ್ ಗಳು ತುಂಬಿ ಹೋಗಿದ್ದವು.ಪ್ಲಯ್ ಕಾರ್ಡ್ ಗಳಲ್ಲಿ ದೂಮಪಾನ ವಿರೋಧಿ ಘೋಷಣೆಗಳು ಇತ್ತು. ಕಾರ್ಯಕ್ರಮದ ನಂತರ ಆ ಶಾಲೆಯ ಸುತ್ತಾ ವಿದ್ಯಾರ್ಥಿಗಳಿಂದ ಜಾಗೃತಿ ಮೆರವಣಿಗೆ ಕಾರ್ಯಕ್ರಮ ಸಹ ಆಯೋಜಿತ ವಾಗಿತ್ತು. ಡಾ ಪ್ರಕಾಶ್ ಮನಮುಟ್ಟುವಂತೆ ಧೂಮಪಾನದ ತೊಂದರೆಗಳ ಬಗ್ಗೆ ವಿವರಿಸಿದರು, ನಾನು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದೆ. ನಾವು ವಿದ್ಯಾರ್ಥಿಗಳು ನಮ್ಮ ಜೀವನದಲ್ಲಿ ಇಂದಿಗೂ ಧೂಮಪಾನ ಮಾಡುವುದಿಲ್ಲ, ಧೂಮಪಾನ ಮಾಡುವವರಿಗೆ ಜಾಗೃತಿ ಮೂಡಿಸುತ್ತೇವೆ ಎಂದು ಕೀರ್ತಿ ಹೇಳಿಕೊಟ್ಟ ಪ್ರತಿಜ್ಞೆಯನ್ನು ಎಲ್ಲಾ ಮಕ್ಕಳು ಜೋರಾಗಿ ಹೇಳಿದರು. ನಂತರ ಕೀರ್ತಿಯ ನಾಯಕತ್ವದಲ್ಲಿ ಮೆರವಣಿಗೆ ಹೊರಟಿತು.
ಪ್ರಿನ್ಸಿಪಾಲ್ ಹಾಗೂ ಶಾಲೆಯ ಇತರ ಶಿಕ್ಷಕ ಸಮುದಾಯ ನನಗೆ ಹಾಗೂ ಡಾ ಪ್ರಕಾಶ್ ರಿಗೆ ಧನ್ಯವಾದ ಅರ್ಪಿಸಿದರು. ಎಲ್ಲಾ ಶಿಕ್ಷರ ಕಣ್ಣಲ್ಲಿ ಕೀರ್ತಿ ಅದ್ಬುತ ನಾಯಕಿ ಆಗಿಬಿಟ್ಟಿದ್ದಳು.
ರಾತ್ರಿ ೯ ಕ್ಕೆ ಫೋನ್ ಕರೆ ನನಗೆ ಗೊತ್ತಿತ್ತು ಕೀರ್ತಿ ಫೋನ್ ಮಾಡುತ್ತಾಳೆ ಎಂದು ” ಸಾರ್ ಥ್ಯಾಂಕ್ಸ್ ಸಾರ್.. ನಾನು ಏನೋ ಆಗುತ್ತೆ ಅಂದು ಕೊಂಡಿದ್ದೆ ಅದು ಏನೂ ಆಗಿಬಿಟ್ಟಿದೆ ಸಾರ್. ಎಲ್ಲರೂ ನನ್ನ ಹೊಗಳಿದರು ಸಾರ್.. ತುಂಬಾ ಥ್ಯಾಂಕ್ಸ್ ಸಾರ್ ‘ ನಾನು ಜಾಸ್ತಿ ಮಾತಾಡದೆ ಫೋನ್ ಕಟ್ ಮಾಡಿದೆ. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಭರವಸೆ ನೀಡಿ ತಪ್ಪನ್ನು ತಿದ್ದಿ ಕೊಳ್ಳಲು ಅವಕಾಶ ನೀಡಿದರೆ ಖಂಡಿತ ಬದಲಾಗುತ್ತಾರೆ ಅನ್ನುವ ಸತ್ಯ ನನಗೆ ತಿಳಿದಿತ್ತು. ಈ ಘಟನೆ ನಡೆದು ಹಲವು ವರುಷಗಳಾಗಿದೆ, ಕೀರ್ತಿ ಇನ್ನೂ ಸಂಪರ್ಕದಲ್ಲಿ ಇದ್ದಾಳೆ, ದೆಹಲಿಯ ಒಂದು ಕಂಪನಿಯಲ್ಲಿ ದುಡಿಯುತ್ತಿದ್ದಾಳೆ.
-ನಾಗಸಿಂಹ ಜಿ ರಾವ್
ಚೈಲ್ಡ್ ರೈಟ್ಸ್ ಟ್ರಸ್ಟ್
ಸರ್ ಅದ್ಭುತವಾದ ಲೇಖನ.
ಮುಂದೇನಾಗುತ್ತೋ, ಮುಂದೇನಾಗುತ್ತೋ ಅನ್ನುವ ಕುತೂಹಲದಲ್ಲೇ ಕಥೆ ಮುಂದುವರಿಯುತ್ತದೆ.
ಒಳ್ಳೆಯ ಉದಾಹರಣೆಯೊಂದಿಗೆ ನೀವು ಹೇಳಿರುವ ವಿಚಾರ ಬಹಳ ಮನದಟ್ಟು ಮಾಡುತ್ತದೆ.
ಧನ್ಯವಾದಗಳು