ಆಹಾರವೇ ವಿಷವಾಗಿ, ವಿಷವೇ ಆಹಾರವಾಗಿರುವ ಈ ಕಾಲಘಟ್ಟದಲ್ಲಿ…: ಚಂಸು ಪಾಟೀಲ

ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಬಲ್ಲ, ನೀರಿನಲ್ಲಿ ಮೀನಿನಂತೆ ಈಜಬಲ್ಲ; ಆದರೆ, ಮನುಷ್ಯ ಮನುಷ್ಯನಂತೆ ಭೂಮಿಯ ಮೇಲೆ ಬದುಕುವುದನ್ನು ಕಲಿಯಲಿಲ್ಲ. ಎಂದು
ಡಾ. ರಾಧಾಕೃಷ್ಣನ್ ರು ಹೇಳಿದ ಮಾತು ನನಗಿಲ್ಲಿ ನೆನಪಾಗ್ತಾ ಇದೆ.

ನಮ್ಮ ಹಿರಿಯರು ಎಷ್ಟು ಗಟ್ಟಿಮುಟ್ಟಾಗಿದ್ದರು, ದೀರ್ಘಾಯುಷಿಗಳಾಗಿದ್ದರು. ಬೇಸಿಗೆಯಿಂದ ಹಿಡಿದು ಮಾಗಿಯವರೆಗೂ ನಿರಂತರ ಎಷ್ಟೊಂದು ಕೃಷಿ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದರು. ನೀರಾವರಿ ಇಲ್ಲದ ಕಾಲದಲ್ಲಿ ಕೇವಲ ಮಳೆಯನ್ನೇ ನೆಚ್ಚಿ ಬೆಳೆದರು.
ಟ್ರ್ಯಾಕ್ಟರ್ಗಳಿಲ್ಲದಾಗ ಬರಿ ಎತ್ತುಗಳನ್ನು ಹೂಡಿಯೆ ಹೊಲ ಉಳುಮೆ ಮಾಡಿದರು. ಒಕ್ಕುವ ಯಂತ್ರಗಳೇ ಇಲ್ಲದ ಸಂದರ್ಭದಲ್ಲಿ ಖಣದಲ್ಲಿ ತಿಂಗಳುಗಟ್ಟಲೇ ತೂರಿ, ಒಕ್ಕಿ ಕಾಳುಕಡೀ ರಾಶೀ ಮಾಡಿದರು.

ಎಲ್ಲಾ ಆಧುನಿಕ, ವೈಜ್ಞಾನಿಕ ಸೌಲಭ್ಯಗಳನ್ನು ಹೊಂದಿರುವ ಕೃಷಿ ಕ್ಷೇತ್ರ ಇವತ್ತು ಏನಾಗಿದೆ? ರೈತರ ಪರಿಸ್ಥಿತಿ ಹೇಗಿದೆ? ಎಂಬುದನ್ನು ಯೋಚಿಸಿದಾಗ ದಿಗಿಲಾಗುತ್ತದೆ. ಬಹಳ ಖುಷಿಯಾಗಿ, ಮಕ್ಕಳು ಆಟ ಆಡಿಕೊಂಡಂತೆ ಕೃಷಿಯಲ್ಲಿ ನಿರತರಾಗಿರುತಿದ್ದ ರೈತರು ಈಗ ಎಲ್ಲೂ ಕಾಣುವುದಿಲ್ಲ. ಹಸಿರು ಕ್ರಾಂತಿಯ ತರುವಾಯ ಕೃಷಿ ಉದ್ಯಮವಾಗಿ ಮಾರ್ಪಟ್ಟಿದ್ದು ಒಂದೇ ಸಾಧನೆ. ಕೃಷಿ ಆಧಾರಿತ ಬೀಜೋತ್ಪಾದನೆ, ಕೃಷಿ ಸಾಧನ ಸಲಕರಣೆ, ರಸಗೊಬ್ಬರ, ಔಷಧಿ, ತಯಾರಿಕಾ ಕಂಪೆನಿಗಳು ಮತ್ತು ಇವುಗಳ ಮಾರಾಟಗಾರರಿಗೆ ಕೃಷಿ ಎಂಬುದೊಂದು ಅಕ್ಷಯಪಾತ್ರೆಯಾಗಿ ಬದಲಾಗಿದ್ದು ಆಗಲೇ.

ನಾವೆಲ್ಲ ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಕೇಳಿದ್ದೇವೆ. ನಮ್ಮ ದೌರ್ಭಾಗ್ಯ ಎಂದರೆ, ಅದು ದುರ್ಲಭ ಆಗಿರುವ ಕಾಲದಲ್ಲಿ ಬದುಕುತ್ತಿದ್ದೇವೆ. ಏಕೆಂದರೆ, ಕೃಷಿ ಮತ್ತು ಪರಿಸರ ಬೇರೆ ಬೇರೆ ಎಂದು ನಾವು ಬಗೆದಿದ್ದೇವೆ. ಮತ್ತು ಕೃಷಿ / ಪರಿಸರವನ್ನು ಬೇರ್ಪಡಿಸುವಲ್ಲಿ ನಾವು ಸಫಲರೂ ಆಗಿದ್ದೇವೆ. ನಮ್ಮ ಮೊದಲಿನ ಕೃಷಿ ಪದ್ಧತಿಗಳು ಪರಿಸರಕ್ಕೆ ಪೂರಕವಾಗಿದ್ದರಿಂದ ಅದು ಕೃಷಿ ಪರಿಸರ ಆಗಿತ್ತು. ಈಗ ಪರಿಸರ ಮಾಯವಾಗಿ ಬಿಟ್ಟಿದೆ. ಬರಿ ಕೃಷಿ ನಡೀತಾ ಇದೆ. ಇದೆಂಥಾ ಕೃಷಿ ಅದಕ್ಕೆ ಪರಿಸರವೇ ಬೇಕಿಲ್ಲ. ಎಲ್ಲವನ್ನೂ ಕೃತಕವಾಗಿಯೇ ಕೊಟ್ಟು ವಿಫುಲವಾಗಿ ಪಡೆಯುವ ಹುನ್ನಾರ! ಕಳೆನಾಶಕ, ಕೀಟನಾಶಕ..ಗಳ ಯಥೇಚ್ಛ ಪ್ರಯೋಗಕ್ಕೆ ಕೃಷಿ ಈಗ ಪ್ರಯೋಗಶಾಲೆ. ಅದಕ್ಕೆ ಪರಿಸರವೇ ಬಲಿ.
ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣು ಮಾಲಿನ್ಯ ಒಂದೇ ಎರಡೇ? ಈಗ ಭೂಮಿ ನಮಗೆ ತಾಯಿ ಆಗಿ ಉಳಿದಿಲ್ಲ.
ಕುವೆಂಪು ಅವರ ಜಡವಾದಿ ಕವಿತೆ ನೆನಪಾಗುತ್ತದೆ. ಇವತ್ತಿನ ಸಂದರ್ಭದಲ್ಲಿ ನಾವೆಲ್ಲರೂ ಜಡವಾದಿಗಳಾಗಿ ಬಿಟ್ಟಿದ್ದೇವೆಯೇ. ಇದು ನಾವಿಂದು ನಮ್ಮನ್ನೆ ಕೇಳಿಕೊಳ್ಳಬೇಕಿರುವ ಪ್ರಶ್ನೆ!

ಇಂಥದೇ ಒಂದು ಸಂದರ್ಭದಲ್ಲಿ ತಾನೇ ಫುಕುವೋಕಾಗೇ ಜ್ಞಾನೋದಯವಾಗಿದ್ದು, ಅದು ೧೯೩೮. ಸಮೀಪ ನೂರು ವರುಷಗಳೇ ಆಗುತ್ತ ಬಂತು. ನಾವೀಗ ಎಲ್ಲಿದ್ದೇವೆ? ಎತ್ತ ಸಾಗಿದ್ದೇವೆ.?

೧೯೭೪ರಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ “ಒಂದೇ ಭೂಮಿ” ಸಮಾವೇಶದಲ್ಲಿ ” ಇತರೆಲ್ಲ ಜೀವ ಸಂಕುಲ ಈ ಭೂಮಿಯ ಮೇಲೆ ಎಷ್ಟು ಸಹಜವಾಗಿ ಬದುಕುತ್ತವೆ, ಅವುಗಳಂತೆ ಆದರೂ ನಾವು ಒಳ್ಳೆಯ ಅತಿಥಿಗಳೆಂಬುನ್ನೆ ಮರೆತು ಬಿಟ್ಟಿದ್ದೇವೆ” ಎಂದು ಹೇಳಲಾಗಿತ್ತು. ಆನಂತರದಲ್ಲಿ-

ಮಾರ್ಚ್ ೨೧- ವಿಶ್ವ ಅರಣ್ಯ ದಿನ
ಮಾರ್ಚ೨೨- ವಿಶ್ವ ಜಲ ದಿನ
ಮಾರ್ಚ್ ೨೩-ವಿಶ್ವ ಹವಾಮಾನ ದಿನ
ಎಪ್ರೀಲ್ ೨೨- ವಿಶ್ವ ಭೂಮಿದಿನ
ಜೂನ್ ೫- ವಿಶ್ವ ಪರಿಸರ ದಿನ
ಡಿಸೆಂಬರ್ ೫- ವಿಶ್ವ ಮಣ್ಣು ದಿನಗಳೆಲ್ಲ ಆಚರಣೆಗೆ ಬಂದವು… ಬದಲಾವಣೆ ಎಷ್ಟು ಸಾಧ್ಯವಾಗಿದೆ ಎಂಬುದು ಮಾತ್ರ ನಿಗೂಢ!

ಇತ್ತೀಚಿನ ಕೊರೋನಾ ಸಾಂಕ್ರಾಮಿಕವೂ ಸೇರಿದಂತೆ, ನಮ್ಮದೇ ರಾಜ್ಯದ ಬೆಳ್ತಂಗಡಿಯ ಎಂಡೋಸಲ್ಫಾನ್ ಸಿಂಪರಣೆ, ಭೂಪಾಲ್ ನ ವಿಷಾನಿಲ ಸೋರಿಕೆ, ಚೆರ್ನೋಬಿಲ್ ನ ವಿಕಿರಣ ಪ್ರಸರಣ ದುರಂತಗಳು, ಎರಡು ವಿಶ್ವ ಸಮರಗಳು, ನಂತರವೂ ನಿರಂತರವಾಗಿರುವ ಯುದ್ಧಗಳು ಯಾವ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತಿವೆ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಮನುಷ್ಯ ಕೃತ ಈ ದುರಂತಗಳು ಪರಿಸರದ ಸಮತೋಲನಕ್ಕೆ, ಸ್ಥಿತಿಸ್ಥಾಪಕ ಗುಣಕ್ಕೆ ಅಪಾಯವನ್ನು ತಂದೊಡ್ಡಿವೆ ಎಂಬುದನ್ನು ತಳ್ಳಿ ಹಾಕಲಾಗದು. ಪ್ರಪಂಚದ ಪಾರುಪತ್ಯಕ್ಕೆ ಆಹಾರ ಮತ್ತು ಅಸ್ತ್ರ ಮುಖ್ಯ ಎಂಬುದು ಸಾಬೀತಾಗಿರುವ ಈ ಕಾಲಘಟ್ಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆಹಾರ ಮತ್ತು ಅಸ್ತ್ರಗಳ ಮೇಲೆ ಏಕಸ್ವಮ್ಯತೆ ಸಾಧಿಸಲು ಪೈಪೋಟಿಗಿಳಿದಿವೆ. ಅವುಗಳ ವ್ಯಾಪಾರದ ಒಪ್ಪಂದ ನೀತಿಗಳೂ ಕೂಡ ಪರಿಸರಕ್ಕೆ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಜಾಗತಿಕ ತಾಪಮಾನ ಏರಿಕೆಯಂಥ ಗಂಭೀರ ವಿಷಯವೂ ಏಕೆ ಹಿನ್ನೆಲೆಗೆ ಸರಿದಿದೆ ಎಂಬುದು ಅರ್ಥವಾಗುತ್ತದೆ.

ಆಹಾರವೇ ವಿಷವಾಗಿ, ವಿಷವೇ ಆಹಾರವಾಗಿರುವ ಈ ಕಾಲಘಟ್ಟದಲ್ಲಿ ಮತ್ತೆ ಪರಿಸರಕ್ಕೆ ಪೂರಕವಾದ ಕೃಷಿ ಸಾಧ್ಯವೇ?
ಖಂಡಿತ ಸಾಧ್ಯವಿದೆ. ಆದರೆ, ಅದು ಈಗ ಅನಿವಾರ್ಯ ಎಂದು ಯಾರೂ ಯೋಚಿಸುತ್ತಿಲ್ಲ, ಆಹಾರವನ್ನು ಕೊಳ್ಳುವ ಗ್ರಾಹಕ ತನಗೆ ಶುದ್ಧ ಆಹಾರ ಬೇಕು ಎಂದು ಕೇಳುವ ವರೆಗೂ ನೈಸರ್ಗಿಕ ಕೃಷಿ ಅಸಾಧ್ಯವೇ.

ನಮ್ಮ ದೇಶದಲ್ಲಿ ಹಸಿರು ಕ್ರಾಂತಿಯ ನಂತರದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದೆ ಎಂಬುದೇನೋ ನಿಜ ಇರಬಹುದು. ಆದರೆ, ಹಸಿವಿನಿಂದ ನರಳುವವರ ಸಂಖ್ಯೆ ಕಡಿಮೆ ಆಗಿದೆಯೇ ಎಂದು
ಕೇಳಿದರೆ ಇಲ್ಲ ಎಂಬುದೇ ಉತ್ತರವಾಗಿದೆ. ವಿಶ್ವ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಕುಸಿತ ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾ ಮತ್ತು ಶ್ರೀಲಂಕಾಗಳನ್ನೂ ಹಿಂದಿಕ್ಕಿರುವುದು ಏನನ್ನು ಸೂಚಿಸುತ್ತದೆ? ಹಾಗಾದರೆ ಹಸಿರು ಕ್ರಾಂತಿಯಿಂದ ನಾವು ಸಾಧಿಸಿದ್ದಾದರೂ ಏನನ್ನು? ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಕೃಷಿಯನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದ್ದೇ ಹಸಿರು ಕ್ರಾಂತಿ. ಅದರ ಪರಿಣಾಮ ಇಂದೇನಾಗಿದೆ ಎಂದರೆ, ನಮ್ಮ ಕೃಷಿಕರು, ಹೆಚ್ಚು ಇಳುವರಿ, ಹೆಚ್ಚು ಲಾಭದ ಆಮಿಷಕ್ಕೆ ಬಲಿಯಾಗಿದ್ದಾರೆ.

ಪರಿಸರ ಮಾಲಿನ್ಯಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯೆ ತಾಯಿ ಎನ್ನುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಜನಸಂಖ್ಯೆ ಹೆಚ್ಚಿದಷ್ಟು ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ಗ್ರಾಹಕರ ಸಂಖ್ಯೆ ಹೆಚ್ಚಿದಷ್ಟು ಹೆಚ್ಚು ಲಾಭ!
ಈಗ ೬೦೦ ಕೋಟಿ ಇರುವ ಜಗತ್ತಿನ ಜನಸಂಖ್ಯೆ ೨೦೫೦ಕ್ಕೆ ಸಾವಿರ ಕೋಟಿ ತಲುಪುವ ನಿರೀಕ್ಷೆಯಿದೆ. ಈಗಲೇ ಶುದ್ಧ ನೀರು, ಗಾಳಿ, ಆಹಾರಕ್ಕಾಗಿ ಪರದಾಡುತ್ತಿದ್ದೇವೆ? ಇದು ಹೀಗೇ ಮುಂದುವರೆದರೆ ಆಗಿನ ಸ್ಥಿತಿ ಏನಾಗಬಹುದು?
ಈ ಕಂಪನಿಗಳು, ಮತ್ತು ಅವುಗಳ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರಗಳು ಇಡೀ ಕೃಷಿ ಕ್ಷೇತ್ರವನ್ನೇ ಪಾರತಂತ್ರ್ಯಕ್ಕೆ ದೂಡಿ ಬಿಟ್ಟಿವೆ. ಇದರಿಂದಾಗಿ ಕೃಷಿಕರು ತಮಗೆ ಲಾಭ ತರುವ ಏಕಬೆಳೆಗೆ ಗಂಟು ಬಿದ್ದಿದ್ದಾರೆ. ಇಂಥ ಅಸಹಾಯಕ ಸ್ಥಿತಿಯಲ್ಲಿ ಪರಿಸರ ಪೂರಕ ಕೃಷಿ, ಶುದ್ಧ ಆಹಾರ ಎಂಬುದೆಲ್ಲ ಹಾಸ್ಯಾಸ್ಪದ ಎನ್ನಿಸಿದರೆ ಆಶ್ಚರ್ಯವಿಲ್ಲ.

ಶುದ್ಧ ಆಹಾರ ಉತ್ತಮ ಆರೋಗ್ಯಕ್ಕೆ ಅಗತ್ಯ ಎಂಬ ಅನಿವಾರ್ಯತೆ ಗ್ರಾಹಕನ ಅರಿವಿಗೆ ಬಂದ ದಿನ, ನನಗೆ ಶುದ್ಧ ಆಹಾರ ಬೇಕು ಎಂದು ಅವನು ಬೇಡಿಕೆ ಇಟ್ಟಾಗ ಮಾತ್ರ ಸಾವಯವ ಕೃಷಿಗೆ ಉತ್ತೇಜನ ಸಿಕ್ಕೀತು.

ಫುಕುವೋಕಾ ಅವರಿಂದ ಪ್ರೇರಿತರಾದ ಅನೇಕ ಕೃಷಿ ಸಾಧಕರು ಸಾವಯವ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿ ತೋರಿಸಿದ್ದಾರೆ. ನಮ್ಮಲ್ಲೇ ಚೇರ್ಕಾಡಿ ರಾಮಚಂದ್ರರಾಯರು, ನಾರಾಯಣ ರೆಡ್ಡಿ, ಭರಮಗೌಡರು, ಆರ್. ಎಸ್. ಪಾಟೀಲರು, ಸುರೇಶ ದೇಸಾಯಿ, ವಿಜಯ ಅಂಗಡಿ ಮೊದಲಾದವರು ಸಹಜ ಕೃಷಿಯ ಪರಿಣಿತಿಯನ್ನು ಪಲ್ಲವಿಸಿದ್ದಾರೆ. ಈ ಎಲ್ಲದರ ಮಧ್ಯೆ ಮುಖ್ಯವಾಗಿ ಜನರು, ಜನರನ್ನು ಪ್ರತಿನಿಧಿಸುವ ಸಂಘ ಸಂಸ್ಥೆಗಳು, ಸರ್ಕಾರಗಳು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ವಾಲ್ಟೇರ್ ಹೇಳಿದಂತೆ

“Men argue, nature acts “

ಅಷ್ಟೇ!

ಚಂಸು ಪಾಟೀಲ


ಚಂಸು ಪಾಟೀಲ ಎಂದೆ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಚಂದ್ರಶೇಖರ ಸುಭಾಸಗೌಡ ಪಾಟೀಲರ ಊರು ರಾಣೇಬೆನ್ನೂರು ತಾಲ್ಲೂಕಿನ ಕೊನಬೇವು, ಜನನ ೧೯೭೪, ಧಾರವಾಡ ಕಿಟೆಲ್ ಕಾಲೇಜಿನಲ್ಲಿ ಬಿ.ಎ ಪದವಿ. ‘ನೋಟ’ ವಾರಪತ್ರಿಕೆ ಮತ್ತು ಕಲ್ಬುರ್ಗಿಯ ‘ಕ್ರಾಂತಿ’ ಮತ್ತು ‘ಸಂಯುಕ್ತ ಕರ್ನಾಟಕ’ ದೈನಿಕಗಳಲ್ಲಿ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ೨೦೦೭ರ ನಂತರ ತಮ್ಮ ಊರು ಕೊನೆಬೇವುಗೆ ಹಿಂದಿರುಗಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಕೃಷಿಯ ಜತೆ ಇವರು ಸಾಹಿತಿಗಳೂ ಆಗಿದ್ದು ಇವರ ‘ಗೆಳೆಯನಿಗೆ’ (೧೯೯೫) ‘ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’ (೨೦೦೪) ‘ಅದಕ್ಕೇ ಇರಬೇಕು’ (೨೦೦೯) ಕವನಸಂಕಲನಗಳು ಹಾಗು ‘ಬೇಸಾಯದ ಕತಿ’ ಎಂಬ ಕೃಷಿ ಅನುಭವಗಳ ಪುಸ್ತಕ ಪ್ರಕಟಗೊಂಡಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Vidyagayatri
Vidyagayatri
29 days ago

ಸಂಜೆ ಹೊತ್ತು…ರುಚಿಕರವಾದ,ಬಣ್ಣಯುಕ್ತ,ಅನಾರೋಗ್ಯಕರ ಬಂಡಿ ತಿಂಡಿ ತಿನ್ನುವ ಅಭ್ಯಾಸ ಬೆಳೆದುಬಿಟ್ಟಿದೆ…

ನನ್ನ ದೇಹಕ್ಕೆ ನಾನು ಹನಿ ಮಾಡಬಾರದು.. ಒಳ್ಳೆಯ ಆಹಾರ ಮಾತ್ರ ತಿನ್ನಬೇಕು ಎಂಬ ಜಾಗೃತಿ ಬಂದಾಗಲೇ..ಮುಂದಿನ ಬೆಳವಣಿಗೆ ಆಗಬಹುದು sir

1
0
Would love your thoughts, please comment.x
()
x