(ಪುನೀತ್ ರಾಜ್‌ಕುಮಾರ್ ರವರ ಹುಟ್ಟುಹಬ್ಬ ಮಾರ್ಚ್ ೧೭, ಈ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸ್ಮರಿಸಿ ಈ ನೆನೆಪು ….)
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ನಮ್ಮ ರಾಜ್ಯದಲ್ಲಿ ಜಾರಿಯಾಗಿದ್ದು ಹಲವಾರು ಪ್ರತಿಭಟನೆ ಹಾಗೂ ಗೊಂದಲದ ನಡುವೆ ಈ ಕಾಯ್ದೆಗೆ ಸೂಕ್ತ ಪ್ರಚಾರವೇ ಇರಲಿಲ್ಲ. ಆದರೆ ಈ ಕಾಯ್ದೆಯ ವಿಭಾಗ ೧೨.೧.ಅ ಅಪಾರ ಪ್ರಚಾರ ಪಡೆದಿತ್ತು ಹಾಗೂ ಬಹಳ ಜನಪ್ರಿಯ ಸಹ ಆಗಿತ್ತು. ವಿಭಾಗ ೧೨.೧.ಅ ಯ ಪ್ರಕಾರ ಅನುದಾನ ರಹಿತ ಶಾಲೆಗಳು ಬಡವರ್ಗದ ಮಕ್ಕಳಿಗೆ ಶೇಕಡಾ ೨೫% ಮೀಸಲಾತಿ ನೀಡಬೇಕಿತ್ತು. ಶ್ರೀಮಂತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಹಲವಾರು ಪೋಷಕರಿಗೆ ಅವಕಾಶವಿತ್ತು. ಈ ವಿಭಾಗವನ್ನು ಒಪ್ಪದ ಹಲವಾರು ಶಾಲೆಗಳು ಪೋಷಕರ ಅರ್ಜಿ ತೆಗೆದುಕೊಳ್ಳದೆ ಪೋಷಕರಿಗೆ ಅವಮಾನ ಮಾಡಿ ಕಳಿಸುತ್ತಿರುವ ವಿಚಾರ ತಿಳಿದೇ ನಾವು ಖಖಿಇ ಕಾರ್ಯಪಡೆ ಪ್ರಾರಂಭ ಮಾಡಿದ್ದು. ಶಾಲೆಗಳು ಆರಂಭದ ನಂತರ ಪೋಷಕರಿಂದ ಹಲವಾರು ಶಾಲೆಗಳು ಶುಲ್ಕ ಕೇಳತೊಡಗಿದವು. ೨೫% ಮೀಸಲಾತಿಯಲ್ಲಿ ಸರ್ಕಾರೇತರ ಶಾಲೆಗೆ ಸೇರಿದ ಮಕ್ಕಳಿಗೆ ಶಾಲೆ ಎಲ್ಲವನ್ನೂ ಉಚಿತವಾಗಿ ಒದಗಿಸಬೇಕು. ಹಲವಾರು ಪೋಷಕರು RTE ಕಾರ್ಯಪಡೆ ಶಾಲೆಗಳ ಬಗ್ಗೆ ದೂರು ನೀಡಿದ್ದರು. ಪೋಷಕರು ನೀಡಿದ್ದ ದೂರುಗಳನ್ನು ನಾವು ಮಕ್ಕಳ ಹಕ್ಕುಗಳ ಆಯೋಗಕ್ಕೆ ಮತ್ತು ಶಿಕ್ಷಣ ಇಲಾಖೆಗೆ ತಲುಪಿಸುತ್ತಿದ್ದೆವು. ಕೆಲವೊಮ್ಮೆ ಪೋಷಕರಿಗೆ ನ್ಯಾಯ ದೊರಕುತ್ತಿತ್ತು.
ಒಂದು ದಿನ ನಮ್ಮ ಕಚೇರಿಗೆ ಇಬ್ಬರು ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿದರು. ತಮ್ಮ ಮಕ್ಕಳನ್ನು ಶಿಕ್ಷಣ ಹಕ್ಕು ಕಾಯಿದೆಯ ೨೫% ಮೀಸಲಾತಿಯಲ್ಲಿ ಸರ್ಕಾರೇತರ ಶಾಲೆಗೆ ಸೇರಿಸಿದ್ದೇವೆ. ಶಾಲೆಯವರು ಫೀ ಕೇಳುತ್ತಿದ್ದಾರೆ, ಅದು ಉಚಿತ ಅಲ್ಲವೇ ಎಂಬುದೇ ಅವರ ದೂರು. ಇಬ್ಬರೂ ಪೋಷಕರು ಗಾಡಿಯಲ್ಲಿ ತರಕಾರಿ ಮಾರುವವರು, ನನ್ನ ಬಗ್ಗೆ ಕೇಳಿ ಹುಡುಕಿಕೊಂಡು ಬಂದಿದ್ದರು. ಇದರ ಬಗ್ಗೆ ಶಿಕ್ಷಣಧಿಕಾರಿಗಳಿಗೆ ದೂರು ನೀಡಬೇಕು ನಾನು ಬರೆದು ಕೊಡುತ್ತೇನೆ ನೀವು ತೆಗೆದುಕೊಂಡು ಹೋಗಿ ಶಿಕ್ಷಣ ಇಲಾಖೆಗೆ ಕೊಡಿ ಎಂದೆ..
ತರಕಾರಿ ಮಾರೋದು ಬಿಟ್ಟು ಹೀಗೆ ಅಲೆದರೆ ನಮ್ಮ ವ್ಯಾಪಾರ ಹೇಗೆ? ಜೀವನ ಮಾಡೋದು ಹೇಗೆ? ಅಪ್ಪು ಅಣ್ಣ ಉಚಿತ ಅಂತ ಹೇಳಿದಕ್ಕೆ ನಾವು ಅರ್ಜಿ ಹಾಕಿದ್ದು ಅಂತ ಒಬ್ಬರು ಅಂದ್ರು.
ಏನು??? ಅಪ್ಪು ಅಣ್ಣ ಏನು ಹೇಳಿದ್ರು? ಅಂದೆ.
“ಅದೇ ಸಾರ್ ಟೀವಿಲಿ ಬರುತ್ತಲ್ಲ ಅಪ್ಪು ಅಣ್ಣ ಮತ್ತೆ ರಾಧಿಕಾ ಪಂಡಿತ್ ಬಂದು ಹೇಳ್ತಾರಲ್ಲ, ಶಿಕ್ಷಣ ಹಕ್ಕು ಸಂಪೂರ್ಣ ಉಚಿತ, ನಿಮ್ಮ ನೆರೆಯ ಶಾಲೆಯಲ್ಲಿಯೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬಹುದು ಅಂತ”
ಹಾ!! ಅದು ಶಿಕ್ಷಣ ಇಲಾಖೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ರ ಪ್ರಚಾರಕ್ಕಾಗಿ ಮಾಡಿದ್ದ ಜಾಹೀರಾತು. ಅದರಲ್ಲಿ ಶ್ರೀಯುತ ಪುನೀತ್ ರಾಜಕುಮಾರ್ ಹಾಗೂ ರಾಧಿಕಾ ಪಂಡಿತ್ ಯಾವುದೇ ಪ್ರತಿಫಲ ಅಪೇಕ್ಷಿಸದೆ ಅಭಿನಯಿಸಿದ್ದರು. ಬಡ ಪೋಷಕರ ಮೇಲೆ ಆ ಜಾಹೀರಾತಿನ ಪ್ರಭಾವದ ಬಗ್ಗೆ ಆಶ್ಚರ್ಯವಾಯಿತು, ‘ಉಚಿತ’ ಎಂದು ಅಪ್ಪುರವರ ಬಾಯಲ್ಲಿ ಹೇಳಿಸಿದ್ದಾರೆ ಆದರೆ ನಿಜವಾಗಲೂ ಉಚಿತವೇ? ನಮ್ಮ ಕಾರ್ಯಪಡೆಯ ಮೂಲಕ ಈಗಾಗಲೇ ಶಿಕ್ಷಣ ಇಲಾಖೆಗೆ ಸುಮಾರು ಮೂವತ್ತಕ್ಕೂ ಹೆಚ್ಚು ದೂರುಗಳನ್ನು ಕಳುಹಿಸಿದ್ದೆವು. ಎಲ್ಲಾ ದೂರುಗಳು ಉಚಿತವಾದರೂ ಶುಲ್ಕ ತೆಗೆದುಕೊಳ್ಳುತ್ತಿದ್ದರ ಬಗ್ಗೆ. ನಮ್ಮ ದೂರುಗಳಿಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಟ ನಟಿಯರಿಗೆ ಸಂಪೂರ್ಣ ಮಾಹಿತಿ ನೀಡದೆ ಜಾಹಿರಾತು ಮಾಡಿದ್ದಾರೆ ಅನಿಸಿತು.
ನಮ್ಮ ಉಚ್ಚ ನ್ಯಾಯಾಲಯ ೨೦೧೨ ರಲ್ಲಿ ಜಾಹೀರಾತಿನ ಬಗ್ಗೆ ಒಂದು ಆದೇಶವನ್ನು ನೀಡಿದೆ. ಜಾಹೀರಾತುಗಳಲ್ಲಿ ತಪ್ಪು ಮಾಹಿತಿ ನೀಡಬಾರದು, ಜಾಹಿರಾತಿನಲ್ಲಿ ನೀಡುವ ಮಾಹಿತಿ ಸಂಪೂರ್ಣ ಸತ್ಯವಾಗಿರಬೇಕು ಎಂದು. ಹಾಗಾದರೆ ಈ ಶಿಕ್ಷಣ ಹಕ್ಕಿನ ಜಾಹೀರಾತಿನಲ್ಲಿ ತಪ್ಪು ಮಾಹಿತಿ ಪೋಷಕರಿಗೆ ಹೋಗುತ್ತಿದೆಯಲ್ಲಾ ಎಂದು ಯೋಚಿಸಿ ಒಂದು ದೀರ್ಘ ಪತ್ರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬರೆದು ಜಾಹಿರಾತಿನ ಬಗ್ಗೆ ವಿವರಣೆ ನೀಡಿದೆ. ತಕ್ಷಣ ಈ ಜಾಹೀರಾತನ್ನು ನಿಲ್ಲಿಸಬೇಕು ಇಲ್ಲವೇ ಜಾಹೀರಾತಿನ ಪದಗಳನ್ನು ಬದಲಿಸ ಬೇಕೆಂದು ಆಗ್ರಹಿಸಿದೆ. ಪತ್ರ ತಲುಪಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದಿಂದ ಮಾರುತ್ತರ ಬಂದಿತು. ಆಯೋಗ ನಾನು ಬರೆದ ಪತ್ರಕ್ಕೆ ಸೂಕ್ತ ಉತ್ತರ ನೀಡಿ ಎಂದು ಶಿಕ್ಷಣ ಇಲಾಖೆಗೆ ಆದೇಶ ಕಳುಹಿಸಿತ್ತು.
ಆ ದಿನ ಸಂಜೆ ಮನೆಗೆ ಹೋಗಲು ಬಸ್ ಹತ್ತಿದೆ, ಇನ್ನೇನು ಸೀಟ್‌ನಲ್ಲಿ ಕುಳಿತುಕೊಳ್ಳಬೇಕು ಯಾವುದೊ ಅನಾಮಿಕ ಸಂಖ್ಯೆಯಿಂದ ಕರೆ ಬಂತು. ಮಾಮೂಲಿನಂತೆ ಕರೆ ತೆಗೆದುಕೊಂಡು “ನಮಸ್ಕಾರ ಯಾರಿದು?” ಅಂದೇ.
“ಮೊದಲು ನೀನು ಯಾವೋನು ಹೇಳು? ನಮ್ಮ ಅಪ್ಪು ಅಣ್ಣನ ಮೇಲೆ ಕೇಸ್ ಮಾಡ್ತೀಯೇನೋಲೆ ಯಾರೋ ನೀನು?” ಗದರಿಸುವ ದನಿ.
ನನಗೇನು ಉತ್ತರಕೊಡಬೇಕೆಂದು ಹೊಳೆಯಲಿಲ್ಲ. ಏನಿದು? ನನಗೆ ಯಾಕೆ ಹೀಗನ್ನುತಿದ್ದಾರೆ ಅನ್ನೋ ಯೋಚನೆಯಿಂದ ಕರೆ ಕಟ್ ಮಾಡಿದೆ. ಆದರೂ ಆ ನಂಬರಿನಿಂದ ಕರೆ ಬರುತ್ತಲೇ ಇತ್ತು? ಯಾರು? ಯಾಕೆ? ಹೇಗೆ? ಈ ಪ್ರಶ್ನೆಗಳು ನನ್ನನು ಕಾಡತೊಡಗಿದವು. ಹೋ ಅಪ್ಪು ಅಂದರೆ ಪುನೀತ್ ರಾಜಕುಮಾರ್‌ರವರು ಅವರ ಜಾಹಿರಾತಿನ ಬಗ್ಗೆ ಪತ್ರ ಬರೆದಿರುವೆ ಹೊರತು ದೂರು ನೀಡಿಲ್ಲವಲ್ಲಾ? ಯೋಚಿಸಿ ಯೋಚಿಸಿ ತಲೆ ಕೆಟ್ಟಿತ್ತು. ಬಸ್ ಇಳಿದು ಮನೆ ತಲುಪುವ ವೇಳೆಗೆ ಸುಮಾರು ೫-೬ ಫೋನ್ ನಂಬರ್‌ನಿಂದ ಕರೆ ಬಂದಿತ್ತು.
“ಟೀವಿಲಿ ನಿನ್ನ ಹೆಸರು ಬರ್ತಿದೆ ನೋಡು ಬಾ” ಅಂತ ನನ್ನ ತಂದೆ ಕರೆದಾಗ ಓದಿ ಬಂದು ಟಿವಿ ಮುಂದೆ ಕುಳಿತೆ “RTE ಕಾರ್ಯಪಡೆಯ ನಾಗಸಿಂಹ ರವರು ಚಲನಚಿತ್ರ ನಟರಾದ ಶ್ರೀಯುತ ಪುನೀತ್ ರಾಜಕುಮಾರ್ ಹಾಗೂ ರಾಧಿಕಾ ಪಂಡಿತ್ ರವರ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ, ಈ ಸಿನಿಮಾ ನಟರು ಶಿಕ್ಷಣ ಹಕ್ಕಿನ ಬಗ್ಗೆ ಜಾಹಿರಾತಿನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ದೂರಿನಲ್ಲಿ ಬರೆದಿದ್ದಾರೆ, ಪೋಷಕರಿಗೆ ತಪ್ಪು ಮಾಹಿತಿ ಹೋಗುತ್ತಿರುವುದರಿಂದ ಆಯೋಗ ಸಹ ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ” ನಿರೂಪಕರು ದೊಡ್ಡದಾಗಿ ಹೇಳುತ್ತಿದ್ದರು. ಆದರೆ ಈ ರೀತಿಯಾಗಿ ನಾನು ಪತ್ರ ಬರೆದಿರಲಿಲ್ಲ. ಒಂದು ಚಿರಪರಿಚಿತ ಟಿವಿ ವಾಹಿನಿಯ ಗೆಳಯರು ಕರೆ ಮಾಡಿದರು. ರಾತ್ರಿ ೯ ಗಂಟೆಗೆ ನನ್ನ ಪತ್ರದ ಬಗ್ಗೆ ಚರ್ಚೆ ಇಟ್ಟುಕೊಂಡಿದ್ದೇವೆ ಬನ್ನಿ ಎಂದರು. ಬರಲಾಗುವುದಿಲ್ಲ ಎಂದು ತಿಳಿಸಿದೆ. ರಾತ್ರಿಯೆಲ್ಲಾ ವಿಚಿತ್ರ ಕನಸುಗಳು, ಸರಿಯಾಗಿ ನಿದ್ದೆ ಬರಲೇ ಇಲ್ಲ. ಏನೋ ಮಾಡಲು ಹೋಗಿ ಏನೋ ಆಯಿತಾ ಅನ್ನುವ ಯೋಚನೆ.
ಮರುದಿನ ಕಚೇರಿಗೆ ಹೋಗಲು ಒಂದು ರೀತಿ ಮುಜಗರ, ಭಯ ಇರಲಿಲ್ಲ. ನನ್ನ ಪತ್ರವನ್ನು ತಪ್ಪು ತಿಳಿದಿರುವ ಯಾರಾದರೂ ಅಭಿಮಾನಿ ಆಫೀಸ್‌ಗೆ ಬಂದು ಗಲಾಟೆ ಮಾಡಿದರೆ ಏನು ಮಾಡೋದು ಅನ್ನುವ ಚಿಂತೆ. ಪ್ರತಿಯೊಂದು ವಾರ್ತಾಪತ್ರಿಕೆಗಳು ನನ್ನ ಪತ್ರವನ್ನು “ಪುನೀತ್ ರವರ ವಿರುದ್ಧ ದೂರು” ಎಂದೇ ಬರೆದಿದ್ದವು. ನಿನ್ನೆಗಿಂತಾ ಹೆಚ್ಚು ಕರೆಗಳು ಬರುತ್ತಿದ್ದವು. ಯಾರಾದರೂ ಕಚೇರಿಗೆ ಬಂದು ಗಲಾಟೆ ಮಾಡಿದರೆ ಏನು ಮಾಡಬೇಕು ಎಂದು ಸಹದ್ಯೋಗಿಗಳೊಡನೆ ಚರ್ಚಿಸಿದೆ. ನಂತರ ವಾಚ್ ಮ್ಯಾನ್ ಹತ್ತಿರ ಹೋಗಿ ಯಾರಾದರೂ ಬಂದರೆ ಅವರು ಯಾರು? ಬಂದ ಕೆಲಸ ಏನು ಎಂದು ವಿಚಾರಿಸಿ ಒಳಗೆ ಬಿಡಲು ವಿನಂತಿ ಮಾಡಿಕೊಂಡೆ. ಆಯೋಗದಲ್ಲಿದ್ದ ಗೆಳೆಯರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಮಾಧ್ಯಮಗಳಿಗೆ ಯಾರು ಮಾಹಿತಿ ನೀಡಿದ್ದು ಎಂದು ಕೇಳಿದೆ. ನಾವು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ, ಶಿಕ್ಷಣ ಇಲಾಖೆಯಿಂದಲೇ ಯಾರೋ ಮಾಧ್ಯಮಗಳಿಗೆ ಮಾಹಿತಿ ನೀಡಿರಬೇಕು ಎಂದರು.
ಟಿವಿ ವಾಹಿನಿಗಳ ಪ್ರತಿನಿಧಿಗಳು ಕಚೇರಿಗೆ ಬಂದೇ ಬಿಟ್ಟರು, ಅವರಿಗೆಲ್ಲಾ ನನ್ನ ಹೇಳಿಕೆ ಬೇಕಾಗಿತ್ತು. ನಾನು ದೂರು ನೀಡಿಲ್ಲ, ತಪ್ಪಾಗಿ ಮಾಹಿತಿ ಹೊರಗೆ ಹೋಗಿದೆ, ಜಾಹೀರಾತಿನಿಂದ ಪೋಷಕರು ಮೀಸಲಾತಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ, ಈಗ ಶಾಲೆಯವರು ಪೋಷಕರಿಂದ ಹಣ ಕೇಳುತ್ತಿದ್ದಾರೆ ಹಾಗಾಗಿ ಜಾಹಿರಾತಿನಲ್ಲಿ ಇರುವ ಪದ ಬದಲಿಸಿ ಎಂದು ಬರೆದಿರುವೆ, ಯಾರ ಮೇಲೂ ದೂರು ಕೊಟ್ಟಿಲ್ಲ, ನಾನೂ ಸಹ ಪುನೀತ್ ರವರ ಅಭಿಮಾನಿ ಎಂದು ಹೇಳಿಕೆ ಕೊಟ್ಟು ನಾನು ಬರೆದ ಪತ್ರದ ಪ್ರತಿಯನ್ನು ಎಲ್ಲರಿಗೂ ಕೊಟ್ಟು ಕಳುಹಿಸಿದೆ. ಈ ನನ್ನ ಹೇಳಿಕೆಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದರೆ ಬೆದರಿಕೆ ಕರೆಗಳು ನಿಲ್ಲಬಹುದು ಎಂಬ ಆಶಯ ನನ್ನದಾಗಿತ್ತು. ಮದ್ಯಾನ ಸುಮಾರು ೩ ಗಂಟೆ ವೇಳೆಗೆ ಒಂದು ನಂಬರ್‌ನಿಂದ ಪದೇ ಪದೇ ಕರೆ ಬರುತಿತ್ತು, ನಾನು ತೆಗೆದುಕೊಳ್ಳಲಿಲ್ಲ. ಅದೇ ಸಂಖ್ಯೆಯಿಂದ ವಾಟ್ಸ್ ಆಪ್ ಸಂದೇಶ ಬಂದಿತು “ನಮಸ್ಕಾರ ನಾವು ಪುನೀತ್ ಸರ್ ಆಫೀಸ್‌ನಿಂದ ಕರೆ ಮಾಡುತ್ತಿದ್ದೇವೆ, ಸಾಧ್ಯವಾದಾಗ ಕರೆ ಮಾಡಿ” ಅನ್ನುವ ಸಂದೇಶವಿತ್ತು. ತಡಮಾಡದೆ ತಕ್ಷಣ ಆ ಸಂಖ್ಯೆಗೆ ಕರೆ ಮಾಡಿದೆ.
ಕರೆ ಸ್ವೀಕಾರ ಮಾಡಿದ ವ್ಯಕ್ತಿ ಬಹಳ ವಿನಯದಿಂದ ನಾನು ಯಾರು? ಯಾಕಾಗಿ ದೂರು ನೀಡಿದ್ದೀರಾ? ಏನು ವಿಷಯ ಎಂದು ಕೇಳಿದರು. ನಾನು ಸಹ ವಿನಮ್ರತೆಯಿಂದ ಪೋಷಕರು ತಿಳಿಸಿದ ವಿಷಯ, RTE ೧೨.೧.ಅ ವಿಭಾಗ, ಶಾಲೆಗಳ ವರ್ತನೆ, ಇಲಾಖೆಯ ಪ್ರತಿಕ್ರಿಯೆ ಎಲ್ಲಾ ವಿಚಾರವನ್ನು ವಿವರಿಸಿ ಜಾಹಿರಾತಿನಲ್ಲಿ ಇರುವ ತಪ್ಪನ್ನು ಸಹ ತಿಳಿಸಿದೆ. ನನ್ನ ಮಾಹಿತಿಗೆ ಅವರು ಧನ್ಯವಾದಗಳನ್ನು ತಿಳಿಸಿದರು. ನಾನು ನನಗೆ ಬರುತ್ತಿರುವ ಅಭಿಮಾನಿಗಳ ಕರೆಗಳ ಬಗ್ಗೆ ತಿಳಿಸಿ ಕೋಪಗೊಂಡ ಯಾರಾದರೂ ಅಭಿಮಾನಿ ಬಂದು ಗಲಾಟೆ ಮಾಡಿದರೆ ಏನು ಮಾಡುವುದು ಎಂದು ಕೇಳಿದೆ.
“ಯೋಚಿಸಬೇಡಿ ಯಾರಾದರೂ ಹಾಗೆ ಮಾಡಿದರೆ ತಕ್ಷಣ ಈ ನಂಬರಿಗೆ ಕರೆ ಮಾಡಿ ನಾವೇ ಅವರೊಂದಿಗೆ ಮಾತಾಡುತ್ತೇವೆ” ಎಂದು ಭರವಸೆ ನೀಡಿದರು. ನನಗೆ ನೂರು ಆನೆಗಳ ಬಲ ಬಂದಂತೆ ಆಯಿತು.
ಮುಂದಿನ ದಿನಗಳಲ್ಲಿ ಅನಾಮಿಕ ಕರೆಗಳು ಕ್ರಮೇಣ ಕಡಿಮೆಯಾದವು. “ಪುನೀತ್ ರವರ ವಿರುದ್ಧ ದೂರು” ಎಂದು ಮತ್ತೆ ಯಾವುದಾದರೂ ಮಾದ್ಯಮದಲ್ಲಿ ಬಿತ್ತರವಾದರೆ, ಪ್ರಕಟವಾದರೆ ನನಗೆ ಅನಾಮಿಕ ಕರೆಗಳು ಖಂಡಿತಾ ಬರುತ್ತಿದ್ದವು. ಶಿಕ್ಷಣ ಹಕ್ಕಿನ ಪ್ರಚಾರಕ್ಕೆ ಹಲವು ಬಾರಿ ನನ್ನ ಮೊಬೈಲ್ ನಂಬರ್ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು ಹಾಗಾಗಿ ಗೂಗಲ್‌ನಲ್ಲಿ ನನ್ನ ಹೆಸರು ಹಾಕಿದರೆ ನನ್ನ ವಿಳಾಸ ಹಾಗೂ ಮೊಬೈಲ್ ನಂಬರ್ ಸುಲಭವಾಗಿ ಸಿಗುತ್ತವೆ. ಸಮಾಜದ ಕೆಲಸ ಮಾಡಲು ಸಿದ್ದರಾದರೆ ಇಂತಹ ಪ್ರಕರಣಗಳನ್ನು ಎದುರಿಸುವುದು ಅನಿವಾರ್ಯ.
ವಾರದ ನಂತರ ಕಚೇರಿಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಕರೆ ಬಂತು. ಆ ಕರೆ ಬಂದಿದ್ದು ಶಿಕ್ಷಣ ಇಲಾಖೆಯಿಂದ. “ನಮಸ್ಕಾರ ನಾಗಸಿಂಹ ರವರೆ ನಿಮ್ಮ ಪತ್ರ ನಮಗೆ ದೊರಕಿದೆ. ನೀವು ತಿಳಿಸಿದಂತೆ ಕೆಲವು ಪದಗಳು ಬದಲಾಗಬೇಕಾದ ಅಗತ್ಯವಿದೆ. ಹಾಗಾಗಿ ನಾವು ಆ ಜಾಹಿರಾತಿನ ಪ್ರಸಾರವನ್ನು ನಿಲ್ಲಿಸುತ್ತಿದ್ದೇವೆ, ನಿಮ್ಮ ಸಲಹೆಗೆ ಧನ್ಯವಾದಗಳು” ಕರೆ ಕಟ್ ಆಯಿತು. ನನ್ನ ಕಿವಿಯನ್ನು ನಂಬಲು ನನಗೆ ಆಗಲಿಲಲ್ಲ. ಜಾಹಿರಾತು ಸರಿ ಇದೆ, ನೀವು ದೂರು ನೀಡಿರುವ ಶಾಲೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಶಾಲೆಗಳು ಕಾನೂನನ್ನು ಉಲ್ಲಂಘಿಸಲು ಬಿಡುವುದಿಲ್ಲ ಎಂಬ ಉತ್ತರ ನಿರೀಕ್ಷಣೆಯಲ್ಲಿ ಇದ್ದ ನನಗೆ ಭ್ರಮ ನಿರಸನವಾಯಿತು. ಇವರು ಕೆಲಸ ಮಾಡುತ್ತಿರುವುದು ಮಕ್ಕಳ ಶಿಕ್ಷಣದ ಹಕ್ಕಿಗಾಗಿಯೋ? ಸರ್ಕಾರೇತರ ಶಾಲೆಗಳ ರಕ್ಷಣೆಗಾಗಿಯೋ? ಈ ಪ್ರಶ್ನೆಗೆ ಉತ್ತರ ದೊರಕಲಿಲ್ಲ.
ಕೆಲವೇ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ್ದ ಮತ್ತೊಂದು ಜಾಹಿರಾತು ಬಿತ್ತರವಾಗತೊಡಗಿತು “ಡನ್ .. ಡನ್ .. ಡನ್ .. ಗಂಟೆ ಬಾರಿಸುತ್ತಿದೆ .. ಎಂಬ ಹಾಡಿನ ಹಿನ್ನೆಲೆಯಲ್ಲಿ ಶಿಕ್ಷಣ ಹಕ್ಕಿನ ಪ್ರಮುಖ ಅಂಶಗಳನ್ನು ತಿಳಿಸುವ ಹಾಡು .. “ಉಚಿತ” ಪದ ಇರಲಿಲ್ಲ. ಪುನೀತ್ ರವರು ಮತ್ತೆ ಯಾವುದೇ ಪ್ರತಿಫಲ ಪಡೆಯದೇ ಜಾಹಿರಾತಿನಲ್ಲಿ ಅಭಿನಯಿಸಿದ್ದರು. ಮಕ್ಕಳ ಶಿಕ್ಷಣ ಹಕ್ಕಿನ ಬಗ್ಗೆ ಅವರಿಗಿದ್ದ ಕಾಳಜಿಯ ಬಗ್ಗೆ ಅಭಿಮಾನ ಉಕ್ಕಿ ಬಂತು.
–ನಾಗಸಿಂಹ ಜಿ ರಾವ್
ಚೈಲ್ಡ್ ರೈಟ್ಸ್ ಟ್ರಸ್ಟ್
ಗೊತ್ತಿರಲಿಲ್ಲ; ನೀವು ಬರೆಯದೇ ಹೋಗಿದ್ದರೆ ಗೊತ್ತಾಗುತ್ತಲೂ ಇರಲಿಲ್ಲ!
ಯಾರನ್ನೂ ದೂರದೇ, ದೂರವಿಡದೇ ಸಮಾಜದ ಆರೋಗ್ಯಕಾಗಿ
ಎಡೆಬಿಡದ ನಿಮ್ಮ ಪ್ರಯತ್ನ ಮತ್ತು ಪರಿಶ್ರಮಕ್ಕೆ ನೂರು ನಮನ.
ಶಿಕ್ಷಣ ಮತ್ತು ಆರೋಗ್ಯ – ಇವೆರಡನ್ನೂ ರಾಷ್ಟ್ರೀಕರಣ ಮಾಡಿದರೆ
(ವಿದೇಶಗಳಲ್ಲಿ ಇರುವಂತೆ) ಸಮಸ್ಯೆ ಬಗೆಹರಿಯಬಹುದೆ?
ನನಗೆ ಗೊತ್ತಿಲ್ಲ; ನಾನು ಅಜ್ಞಾನಿ. ನಿಮಗೆ ಬಿಡುವಾದಾಗ ಇದನ್ನು
ಕುರಿತು ಲೇಖನದ ಮೂಲಕ ಬೆಳಕು ಚೆಲ್ಲಬೇಕಾಗಿ ವಿನಂತಿ.
ಪಂಜುವಿನ ಕನ್ನಡ ಸೇವೆಗೆ ಅನಂತ ಪ್ರಣಾಮಗಳು.