ಸಂಜೆಯಲಿ ಮರಳಿ ಮನೆಗೆ ಸಾಗುವ ಜನಕೆಲ್ಲಾ,
ನಾನು ಬೆಳಕಾಗಿ ನಿಲ್ಲುವೆನು, ರಾತ್ರಿಯಿಡೀ.
ಮರವಂತೆ ನಿಂತು ರಸ್ತೆಯ ಬದಿಯಲಿ ಏಕಾಂಗಿ,
ನನ್ನ ಬೆಳಕಿನಲಿ ನಾ ಬೆಳಗುವೆ, ಶಾಂತವಾಗಿ.
ಶಿವನು ವಿಷವನುಂಡು, ಅಮೃತವನು ನೀಡಿದಂತೆ,
ವಿದ್ಯುತ್ತನುಂಡು ಬೆಳಕನಿತ್ತು, ಜನಕೆ ಹಿತವಂತೆ.
ಮನದಲಿ ಶುದ್ಧತೆಯು, ಕತ್ತಲೊಡನೆ ಹೋರಾಟ,
ಬೆಳಕಿನ ತ್ಯಾಗವಿದು, ಜನರಿಗಾಗಿ ಸದಾ ನೋಟ.
ಭೂಮಿಯ ಕತ್ತಲಲಿ ಸೂರ್ಯನಿಲ್ಲದ ಕೊರತೆಯಲಿ,
ರಾತ್ರಿಯೆಲ್ಲಾ ಎಚ್ಚರ, ಬೆಳಕನಿತ್ತು ಹರುಷದಲಿ.
ತ್ಯಾಗಮೂರ್ತಿಯಂತೆ ನಿಂತು, ರಸ್ತೆಯಲಿ ಏಕಾಂಗಿ,
ಬೆಳಕಿನ ಹಂಚುವಿಕೆ, ನನ್ನ ಜೀವನದ ಸಾಂಗತ್ಯ.
ಶಾಲೆಯಲಿ ಶಿಕ್ಷೆಯಾದ ಬಾಲಕನಂತೆ ದಿನವೆಲ್ಲಾ,
ಒಂದೇ ಕಾಲಿನಲಿ ನಿಂತು, ಕಾವಲು ಕಾಯುವೆನು ಎಲ್ಲಾ.
ಜಗಕೆ ಒಳ್ಳೆಯವರ ಬಗ್ಗೆ ಕನಿಕರವಿಲ್ಲದೆ ಇರಬಹುದು,
ನನ್ನ ತ್ಯಾಗವನು ಮರೆತು, ಕಿಡಿಗೇಡಿಗಳು ನಾಶ ಮಾಡುವರು.
ದುರ್ಬಲನಾದರೂ ಕಲ್ಲುಗಳೆಸೆದರೂ ಮಕ್ಕಳಿಂದ,
ಮುಷ್ಕರದವರ ಹಿಂಸೆಗೆ ಒಳಗಾದರು, ಕೊನೆಯವರೆಗೂ,
ಬೆಳಕನ್ನು ಹಂಚುತ್ತಲೇ ಇರುವೆನು, ಸಾಯುವವರೆಗೂ,
ನನ್ನ ಬೆಳಕಿನ ಕಥೆಯಿದು, ಜನರಿಗಾಗಿ ಸದಾ ಇರುವೆನು.
ತೆಲುಗು ಮೂಲ : ಡಾ. ಆಚಾರ್ಯ ಫಣೀಂದ್ರ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್