ಕನ್ನಡದ ಪ್ರಖ್ಯಾತ ಪುಸ್ತಕಗಳಲ್ಲೊಂದಾದ ಕೆ.ವಿ.ಐಯ್ಯರ್ ವರ ಅವರ “ರೂಪದರ್ಶಿ” ನಾನು ಅಕಸ್ಮಾತಾಗಿ ಓದಿದ ಪುಸ್ತಕ. ಅದು ನನ್ನನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಅಲ್ಲಿಂದ ಇಲ್ಲಿಯವರೆಗಿನ ಸುಮಾರು 350 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಓದಿಗೆ ಮುನ್ನುಡಿ ಇಟ್ಟು, ಚಾರಣ, ನಾಟಕ ಹಾಗೂ ಪುಸ್ತಕಗಳ ಒಡನಾಟದಿಂದ ನನ್ನ ಜೀವನದ ಏಳು-ಬೀಳುಗಳಿಗೆ ಸಮಾಧಾನ ನೀಡಿ ಈಗಲೂ ಸಾಹಿತ್ಯದ ಚಟುವಟಿಗಳಿಗೆ ಭಾಗಿಯಾಗಲು ಪ್ರೇರೇಪಿಸುತ್ತಿರುವ ಪುಸ್ತಕ. ಕನ್ನಡ ಏಕೆ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದು? ಎನ್ನುವುದನ್ನು ಅರಿಯಲು ಈ ರೀತಿಯ ಬರವಣಿಗೆಯನ್ನು ಎಲ್ಲರೂ ಓದಲೇ ಬೇಕು!
ಆದದ್ದು ಇಷ್ಟೇ…
2015 ರಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಲು ನಾನು ತಯಾರಿ ಮಾಡಿಕೊಳ್ಳುತ್ತಿದ್ದಾಗ ಅತಿಥಿಗಳಿಗೆ ಪುಸ್ತಕ ಉಡುಗೊರೆ ನೀಡಲು ಯೋಜನೆ ಹಾಕಿಕೊಂಡದ್ದಾಗಿತ್ತು. ತೇಜಸ್ವಿ ಕುವೆಂಪು ಲಂಕೇಶ್ ತ್ರಿವೇಣಿ ಕಾರಂತರ ಪುಸ್ತಕ ನೋಡಿ; ಬೆಲೆ ತುಂಬಾ ಜಾಸ್ತಿ, ಸಣ್ಣ ಪುಸ್ತಕ ಇತ್ಯಾದಿ ಇತ್ಯಾದಿ ಅಳೆದೂ ತೂಗಿ ಗೊಂದಲದ ಗೂಡಾಗಿ, ಪುಸ್ತಕ ನೋಡುತ್ತಲೇ ಇದ್ದೆ. ಬಹುಶಃ ಅಂಗಡಿಯ ಮಾಲೀಕ ಸುಂದರ್ ಗೆ ನನ್ನ ಈ ತಾಕಲಾಟ ಗೊತ್ತಾಗಿರಬೇಕು. ಅವರು “ಸರ್ ಈ ಪುಸ್ತಕ ಚೆನ್ನಾಗಿದೆ ತಗೊಳ್ಳಿ.ನಾನು 2-3 ಸಲ ಓದಿದ್ದೇನೆ”ಎಂದು ‘ರೂಪದರ್ಶಿ’ ಪುಸ್ತಕ ನನ್ನ ಮುಂದೆ ಹಿಡಿದರು. “ತುಂಬಾ ಒಳ್ಳೆಯ ಕಾದಂಬರಿ” ಎಂದರು. ಪುಸ್ತಕದ ಸೈಜ್ ತಕ್ಕಮಟ್ಟಿಗೆ ಇತ್ತು. ಬೆಲೆ ಬರೀ 180 ರೂ.! ಸರಿ. “ನಾಳೆ ಮತ್ತೆ ಬರ್ತೇನೆ.ಇನ್ನೂ ಎರಡು ಮೂರು ಪುಸ್ತಕ ಬೇಕು” ಎಂದು ತಿಳಿಸಿ, gift pack ಮಾಡಿಸದೆ, ನಾಳೆ ‘ಬೇರೆಯವರನ್ನು ಕೇಳಿ ಬಂದರಾಯಿತು’ ಅಂತ ಇದೊಂದನ್ನು ತೆಗೆದುಕೊಂಡು ಹೋದೆ.
ಮೊದಲೇ ಸುಸ್ತಾಗಿದ್ದ ನಾನು ಹಾಗೇ ಪುಸ್ತಕವನ್ನು ನೋಡಿ ಮುನ್ನುಡಿ ಓದಿದೆ. Reader’s digest ನಲ್ಲಿ 1942 ರಲ್ಲಿ ಇದ್ದ ‘ಒಂದು ಪುಟದ ಕಥೆ’ಯನ್ನು ಸುದೀರ್ಘ ಕಾದಂಬರಿಯಾಗಿ 1950ರಲ್ಲಿ ಬರೆದದ್ದಾಗಿ ಲೇಖಕರು ಕೆ.ವಿ.ಅಯ್ಯರ್ ರವರು ತಿಳಿಸಿ, ಅಚ್ಚಿಗೆ ಸಿದ್ದಪಡಿಸಿದ್ದಕ್ಕಾಗಿ ಅವರ ಮಿತ್ರರಾದ ಜಿ.ಪಿ.ರಾಜರತ್ನಂ ಅವರಿಗೆ ಧನ್ಯವಾದ ಸಲ್ಲಿಸಿದ್ದರು. ಅದುವರೆಗೂ ಕೆ.ವಿ.ಅಯ್ಯರ್ ಅವರ ಹೆಸರು ಕೇಳದ ನಾನು ರತ್ನನ್ ಪದಗಳ ಜಿ.ಪಿ.ರಾಜರತ್ನಂ ಅವರ ಗೆಳೆಯರು ಅಂದ ತಕ್ಷಣ, ಸ್ವಲ್ಪ ಪುಳಕಗೊಂಡು ಒಂದು ಎರಡು ಪುಟ ತಿರುವಿ ಹಾಕೋಣ ಅಂತ ಓದಲು ಕುಳಿತೆ.
ಐದು-ಹತ್ತು-ಮೂವತ್ತು ನಂತರ ಐವತ್ತು ಪುಟಗಳನ್ನು ಓದಿದ ನನಗೆ ಗಂಟೆ ಹನ್ನೆರಡಾಗಿದ್ದು ಗೊತ್ತೇ ಆಗಲಿಲ್ಲ. ಅದ್ಭುತ ಪದಲಾಲಿತ್ಯ, ಕಣ್ಣಿಗೆ ಕಟ್ಟುವಂತಿದ್ದ ವರ್ಣನೆಗಳು, ಸಿನಿಮೀಯ ಶೈಲಿಯ ರೀತಿಯಲ್ಲಿ ನನ್ನನ್ನು ಆವರಿಸಿಕೊಂಡ ಕತೆ, ಕತೆಯ ಕೇಂದ್ರಬಿಂದು ಫ್ಲಾರೆನ್ಸ್ ನಗರದಲ್ಲಿ ನಾನು ವಿಹರಿಸುತ್ತಿದ್ದೆ .! ನಾನೇ ಕಥೆಯ ನಾಯಕನಂತೆ ಎಲ್ಲವನ್ನೂ ಅನುಭವಿಸುತ್ತಿದ್ದೆ. ನಿದ್ರೆ ಎಳೆಯುತ್ತಿದ್ದರೂ ನಿದ್ರೆ ಮಾಡಲು ಮನಸ್ಸಿರಲಿಲ್ಲ. ಮತ್ತೆ ಮುಖಕ್ಕೆ ನೀರು ಎರಚಿಕೊಂಡು ಹೇಗೋ ಮಾಡಿ ನೂರಾ ಐವತ್ತು ಪುಟಗಳನ್ನು ಓದಿ ಹಾಗೆಯೇ ನಿದ್ರೆಗೆ ಜಾರಿದ್ದೆ. ಬೆಳಗಾಗಿತ್ತು. ನಂತರ ದೈನಂದಿನ ವೃತ್ತಿ ಚಟುವಟಿಕೆ. ಆದರೆ, ಯಾವುದಕ್ಕೂ ಚೈತನ್ಯವಿರಲಿಲ್ಲ. ಪುಸ್ತಕವನ್ನು ಮತ್ತೆ ಓದಲು 2 ದಿನ ಸಮಯವೇ ಆಗದೆ ಚಡಪಡಿಸಿದ್ದೆ. ಮೂರನೇ ದಿನ ಕಾರ್ಯಕ್ರಮ. ಬೇಗ ಸಿದ್ಧವಾಗಿ, ಅತಿಥಿಗಳಿಗೆ ಬೇರೆ ಪ್ರಸ್ತಕಗಳನ್ನು ತಂದು ಉಡುಗೊರೆ ನೀಡಿದ್ದಾಯಿತು. ಕಾರ್ಯಕ್ರಮ ಮುಗಿಸಿ, ತಟ್ಟನೆ ಬಂದು ಸ್ವಲ್ಪ ಕೋಳಿ ನಿದ್ದೆ ಮಾಡಿ, ಊಟ ಮಾಡಿ ,ದಣಿವಾರಿಸಿಕೊಂಡು ಪುಸ್ತಕ ಹಿಡಿದು ಕೂತೆ. ಅರ್ಧ ಕಾದಂಬರಿ ಓದಿ ಮೂರು ದಿನಗಳಿಂದ ಅನುಭವಿಸುತ್ತಿದ್ದ ವಿಚಿತ್ರ ತಲ್ಲಣಕ್ಕೆ ಈಗ ಎಳ್ಳುನೀರು ಬಿಡುವ ಸಂದರ್ಭ ಬಂದಾಗಿತ್ತು.
ಪ್ರಪಂಚದಲ್ಲೇ ವಾಸ್ತುಶಿಲ್ಪಕ್ಕೆ ಪ್ರಖ್ಯಾತವಾದ ಬಹು ಸುಂದರವಾದ ಪಟ್ಟಣಗಳಲ್ಲಿ ‘ಫ್ಲಾರೆನ್ಸ್’ ಕೂಡ ಒಂದು. ಅಲ್ಲಿನ ಒಂದು ನಯನ ಮನೋಹರವಾದ ದೇವಾಲಯವನ್ನು ಕಟ್ಟಿ ಐದು ನೂರು ವರ್ಷಗಳ ಮೇಲಾಗಿತ್ತು. ದೇವಾಲಯ ಕಟ್ಟಿದ ನಂತರ ಅಲ್ಲಿನ ಧರ್ಮದರ್ಶಿಗಳು ಸಭೆಗೂಡಿ ಭವ್ಯವಾದ ಆ ಆಲಯದಲ್ಲಿ ಕ್ರಿಸ್ತನ ಚರಿತ್ರೆಯನ್ನೆಲ್ಲ ತುಂಬಾ ಚೆನ್ನಾಗಿ ಚಿತ್ರಿಸಬೇಕೆಂದು ನಿರ್ಧರಿಸಿ ಆಗಿನ ಕಾಲದ ಶಿಲ್ಪಕಲಾ ಚಿತ್ರಕಲಾ ಸಾರ್ವಭೌಮನೆಂದು ಖ್ಯಾತಿ ಪಡೆದಿದ್ದ ಆ ಊರಿನವನೇ ಆದ ಮೈಕಲ್ ಆಂಜೆಲೊನಿಂದಲೇ ಈ ಕಾರ್ಯವನ್ನು ಮಾಡಿಸಬೇಕೆಂದು ಈ ಕಲಾವಿದನನ್ನು ತಮ್ಮ ದೇವಾಲಯಕ್ಕೆ ಬರಮಾಡಿಕೊಳ್ಳುತ್ತಾರೆ.ಮೈಕಲ್ ಅತಿಶಯ ದೈವಭಕ್ತ. ತನಗಿದ್ದ ಅಪಾರ ಭಕ್ತಿ ವಿಶ್ವಾಸಗಳನ್ನು ಚಿತ್ರಕಲೆಯಲ್ಲೂ ಶಿಲ್ಪಕಲೆಯಲ್ಲೂ ನಿದರ್ಶಿಸಿದ್ದ. ತನ್ನ ಜೀವಮಾನದಲ್ಲಿ ಒಮ್ಮೆ ದೇವನ ಚರಿತ್ರೆಯನ್ನೆಲ್ಲ ಮನತಣಿಯುವಂತೆ ಭಕ್ತಿ ವಿಶ್ವಾಸಗಳು ಉಕ್ಕಿ ಹರಿಯುವಂತೆ ಚಿತ್ರಿಸಬೇಕೆಂಬ ಆಸೆ ಮೈಕಲನಿಗೂ ಇತ್ತು.ಆ ಆಸೆ ಈಗ ತನಗೆ ಕೈಗೂಡುವ ಕಾಲ ಬಂದಿತೆಂದು ಮೈಕಲ್ ಚಿತ್ರಗಳನ್ನು ಬರೆಯಲು ಸಂತೋಷದಿಂದ ಒಪ್ಪಿಕೊಂಡ.
ನಂತರ ದೇವಾಲಯದಲ್ಲಿ ಹಲವು ಚಿತ್ರಗಳನ್ನು ಬರೆಯುತ್ತಾನೆ. ಅವುಗಳನ್ನು ದೇವಾಲಯದವರು ನೋಡಿ ಕೊಂಡಾಡುತ್ತಾರೆ. ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಚಿತ್ರಗಳು ಅವು. ಮುಂದೆ, ಮೈಕಲ್ ಕ್ರಿಸ್ತನ ಬಾಲಕನ ರೂಪದ ಚಿತ್ರ ಬರೆಯುವಾಗ ಕೈ ಸಾಗುವುದಿಲ್ಲ. ಬರೆದು ಬರೆದು ಅಳಿಸುತ್ತಾನೆ. ಕ್ರಿಸ್ತನ ಮುಗ್ಧ ದೈವೀ ಸ್ವರೂಪದ ರೂಪ ಹೊಂದಿರಬಹುದಾದ ಆ ಚಿತ್ರಗಳಿಗೆ ಒಬ್ಬ ಬಾಲಕ ರೂಪದರ್ಶಿ ಬೇಕು ಎಂದು ಅನ್ನಿಸಿ, ಮುಂದೆ ಬರೆಯುವ ಚಿತ್ರಕ್ಕಾಗಿ ಒಬ್ಬ ಬಾಲಕ ರೂಪದರ್ಶಿಯನ್ನು ಹುಡುಕುತ್ತಾನೆ. ಅನೇಕ ದಿನಗಳ ಕಾಲ ಹುಡುಕಿದ ಮೇಲೆ ಅವನಿಗೆ ಬೇಕಾದಂತ ಒಬ್ಬ ಅಪ್ರತಿಮ ಸುಂದರ ದೈವ ಸ್ವರೂಪಿ ಬಾಲಕನೊಬ್ಬ ಸಿಗುತ್ತಾನೆ. ಅವನನ್ನು ರೂಪದರ್ಶಿಯಾಗಿಟ್ಟುಕೊಂಡು ಚಿತ್ರವನ್ನು ಬರೆಯುತ್ತಾನೆ. ಆ ಚಿತ್ರ ಯಶಸ್ವಿಯಾಗುತ್ತದೆ.ನಂತರ ಆ ಬಾಲಕನಿಗೆ ಸಲ್ಲಬೇಕಾದ ಎಲ್ಲಾ ಹಣವನ್ನು ಧರ್ಮದರ್ಶಿಗಳಿಂದ ಸಂದಾಯ ಮಾಡಿಸಿ ತನ್ನ ಅಜ್ಜಿಯ ಜೊತೆ ಆ ಹುಡುಗನನ್ನು ಊರಿಗೆ ಮರಳಿ ಕಳುಹಿಸುತ್ತಾನೆ. ನಂತರ ಸುಮಾರು ಚಿತ್ರಗಳನ್ನು ಪೂರೈಸಿ ಕಡೆಯ ನಾಲ್ಕು ಚಿತ್ರಗಳನ್ನು ಬರೆಯಲು ಮತ್ತೆ ಅವನಿಗೆ ರೂಪದರ್ಶಿಯ ಅವಶ್ಯಕತೆ ಇದಿರಾಗುತ್ತದೆ. ಈಗ, ಕ್ರಿಸ್ತನನ್ನು ಮೋಸದಿಂದ ಹಿಡಿದುಕೊಟ್ಟು, ಅವನನ್ನು ಶಿಲುಬೆಗೇರಿಸಲು ಸಹಾಯ ಮಾಡಿದ ಕ್ರೂರಿ ಕೊಲೆಗಡುಕ ‘ಜುದಾಸ’ನ ಚಿತ್ರಕ್ಕೆ ಒಬ್ಬ ರೂಪದರ್ಶಿ ಬೇಕಾಗಿರುತ್ತದೆ. ಮತ್ತೆ ರೂಪದರ್ಶಿಯ ಹುಡುಕಾಟದಲ್ಲಿ ಇದ್ದಾಗ, ರೋಮ್ ನ ಪೋಪರ ಆಜ್ಞೆಯಂತೆ ಬೇರೆ ಕೆಲಸ ವಹಿಸಿಕೊಳ್ಳಬೇಕಾಗುತ್ತದೆ. ಸುಮಾರು ವರ್ಷಗಳು ಕಳೆದರೂ ಚಿತ್ರಗಳನ್ನು ಪೂರ್ಣ ಬರೆಯಲು ಆಗುವುದಿಲ್ಲ.ಮೈಕಲ್ ಗೂ ವಯಸ್ಸು ಕಳೆಯುತ್ತಾ ಬರುತ್ತದೆ. ಫ್ಲಾರೆನ್ಸ್ ನ ದೇವಾಲಯದ ಆ ಕೆಲಸವನ್ನು ಬೇರೆ ಚಿತ್ರಕಾರರು ಮಾಡಲು ಒಪ್ಪುವುದಿಲ್ಲ. ದೇವಾಲಯದವರು ರೋಮ್ ನಲ್ಲಿದ್ದ ಮೈಕಲನಿಗೆ ಹಲವಾರು ವರ್ಷಗಳ ಕಾಲ ಮನವಿ ಮಾಡುತ್ತಾರೆ. ಕಡೆಗೂ ರೋಮ್ ನ ಚಿತ್ರ ಪೂರ್ಣಗೊಳಿಸಿ ಫ್ಲಾರೆನ್ಸ್ ನ ದೇವಾಲಯದ ಕೆಲಸಕ್ಕೆ ಹೊರಡುತ್ತಾನೆ.
ಕೊನೆಯ ಪ್ರಯತ್ನವಾಗಿ ಕ್ರೂರಿ ಕೊಲೆಗಡುಕನ ಚಿತ್ರಕ್ಕೆ ಒಬ್ಬ ರೂಪದರ್ಶಿಗಾಗಿ ಅಲೆಯುತ್ತಾ ಒಂದು ಗ್ರಾಮಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಒಬ್ಬ ಮುಖ ವಿಕಾರವಾಗಿರುವ ಒಂದು ಕಣ್ಣು ಹೋಗಿರುವ, ಕುಡಿದು ತೋಲಾಡುವ ಒಬ್ಬ ವ್ಯಕ್ತಿ ಸಿಗುತ್ತಾನೆ. ಅವನಿಗೆ ಹಣದ ಆಮಿಷವನ್ನು ತೋರಿಸಿ ತನ್ನ ಗ್ರಾಮಕ್ಕೆ ಕರೆದುಕೊಂಡು ಬರುತ್ತಾನೆ. ನಂತರ ದೇವಸ್ಥಾನದಲ್ಲಿ ಅವನನ್ನು ರೂಪದರ್ಶಿಯಾಗಿಟ್ಟುಕೊಂಡು ಚಿತ್ರವನ್ನು ಬರೆಯುತ್ತಿರುತ್ತಾನೆ. ಆ ವ್ಯಕ್ತಿ ಹಿಂದೆ ಬರೆದ ಚಿತ್ರಗಳನ್ನು ನೋಡುತ್ತಾ ,ನೋಡುತ್ತಾ ಪ್ರಜ್ಞಾಹೀನಾಗುತ್ತಾನೆ.
ಅವನಿಗೆ ಶೈತ್ಯೋಪಚಾರ ಮಾಡುತ್ತಾನೆ. ಆಗ ಅವನು ತನ್ನ ಹಿಂದಿನ ಸ್ಮರಣೆಯನ್ನು ನೆನಪಿಸಿಕೊಂಡು ನಡೆದ ಘಟನೆಗಳನ್ನು ಮೈಕಲನಿಗೆ ಹೇಳುತ್ತಾನೆ. ಆ ಹಿಂದಿನ ದೈವ ಸ್ವರೂಪಿ ಬಾಲಕ ರೂಪದರ್ಶಿಯೇ ಈ ಕ್ರೂರಿ ಕೊಲೆಗಡುಕನಾಗಿರುತ್ತಾನೆ.!….
ಬಾಲಕನ ಜೀವನದಿಂದ ಕೊಲೆಗಡುಕನಾಗುವ ಜೀವನದವರೆಗೆ ನಡುವೆ ನಡೆಯುವ ಘಟನೆಗಳ ಕಥಾ ವಸ್ತುವೇ ಈ ರೂಪದರ್ಶಿ ಕಾದಂಬರಿ. ದೈವ ಸ್ವರೂಪಿಯಾದ ಬಾಲಕನೇ ಸೈತಾನ ಸ್ವರೂಪಕ್ಕೂ ರೂಪದರ್ಶಿಯಾಗುವ ವಿಧಿಯ ವಿಪರ್ಯಾಸದ ಪರಮಾವಧಿ “ರೂಪದರ್ಶಿ” ರೂಪದಲ್ಲಿ ನಮ್ಮನ್ನು ಕೆಣಕುವುದು ಸುಳ್ಳಲ್ಲ. ಓದಿಸಿಕೊಂಡು ಹೋಗತ್ತಾ ಮನಸ್ಸನ್ನು ಮೂಕವನ್ನಾಗಿಸಿ ಜೀವನದ ಏಳುಬೀಳುಗಳ ವಿರಾಟ ದರ್ಶನ ಮಾಡಿಸುವ ವಿಶೇಷ ದೃಶ್ಯಕಾವ್ಯ ಈ ಪುಸ್ತಕ.ಈಗಲೂ, ಓದಿದಷ್ಟೂ ಮತ್ತೆ ಮತ್ತೆ ಓದಬೇಕೆನ್ನಿಸುವ ಕನ್ನಡದ ಶ್ರೇಷ್ಠ ಪುಸ್ತಕಗಳಲ್ಲಿ ಒಂದು. ಈ ಕತೆಯಲ್ಲಿ ಹೇಳಲಾಗುವ ‘ಫ್ಲಾರೆನ್ಸ್’ನಗರದ ಆ ಚಿತ್ರಗಳು ಅಂದಿಗೂ ಇಂದಿಗೂ ಸರ್ವಕಾಲಕ್ಕೂ ಅತ್ಯುತ್ತಮ ಎಂದು ಚಿತ್ರರಸಿಕರ ಹೃದಯದಲ್ಲಿ ಸ್ಥಾನ ಪಡೆದಿದೆ ಎಂದು ಹೇಳಲಾಗುತ್ತದೆ.
ಕೆ. ವಿ . ಐಯ್ಯರ್ ಅವರ ಇನ್ನೊಂದು ಕಾದಂಬರಿ ‘ಶಾಂತಲಾ’. ಹೊಯ್ಸಳ ವಿಷ್ಣುವರ್ಧನನ ಪಟ್ಟದರಸಿಯ ಕುರಿತ ಮನೋಜ್ಞ ಪುಸ್ತಕ. ಕೆ. ವಿ. ಐಯ್ಯರ್ ರವರು ಮುಂದೆ ಉನ್ನತ ಶಿಕ್ಷಣದಲ್ಲಿ ತಮ್ಮ ಪುಸ್ತಕವನ್ನು ತಾವೇ ಪಠ್ಯವಾಗಿ ಓದಿ ಪರೀಕ್ಷೆ ಕೂಡ ಬರೆಯಬೇಕಾಯಿತಂತೆ.
ಓದುವುದಕ್ಕೆ ಮತ್ತು ಸಂಗ್ರಹಕ್ಕೆ ಯೋಗ್ಯವಾದ ಪುಸ್ತಕಗಳು.
-ಡಾ. ಭರತ್ ಭೂಷಣ್. ಎಮ್
ಕಾದಂಬರಿ : ರೂಪದರ್ಶಿ
ಲೇಖಕರು : ಕೆ. ವಿ. ಅಯ್ಯರ್
ಪ್ರಥಮ ಮುದ್ರಣ:1950.
ಬೆಲೆ: 180 ರೂ.