ಯುವ ಕಥೆಗಾರ್ತಿ ಎಡಿಯೂರು ಪಲ್ಲವಿ ಅವರ “ಕುಂಡದ ಬೇರು” ಕಥಾ ಸಂಕಲನದ ಕಥೆಗಳ ಕಡೆ ಕಣ್ಣಾಡಿಸಿದಾಗ ಇದು ಇವರ ಮೊದಲ ಕಥಾ ಸಂಕಲನವೇ..? ಅನಿಸಿದ್ದು ಸುಳ್ಳಲ್ಲ!
ಚ.ಸರ್ವಮಂಗಳ ಅವರು “ಅಮ್ಮನ ಗುಡ್ಡ” ಸಂಕಲನದಲ್ಲಿ ಬ್ರೆಕ್ಟ್ ನ The mask of the demon ನ ಪುಟ್ಟ ಅನುವಾದವೊಂದಿದೆ. ಅದು,
“ನನ್ನ ಒಳಮನೆಯ ಗೋಡೆ ಮೇಲೊಂದು ಜಪಾನಿ ಕೆತ್ತನೆ:
ಒಬ್ಬ ದುಷ್ಟ ರಾಕ್ಷಸನ ಮುಖವಾಡ.
ಹೊಂಬಣ್ಣದ ಅರಗಿನಿಂದ ಮೆರಗಿಸಿರುವ ಮುಖ.
ಹಣೆ ಮೇಲೆ ಉಬ್ಬಿರುವ ನರ.
ನೋಡ್ತಾ ನೋಡ್ತಾ ಅಯ್ಯೋ ಪಾಪ ಅನ್ನಿಸುತ್ತೆ.
ದುಷ್ಟನಾಗಿರೋದಕ್ಕೆ ಎಷ್ಟು ಸುಸ್ತು ಪಡಬೇಕು!”
ದಲಿತ ಲೇಖಕನೊಬ್ಬ ತಾನು ಕಂಡುಂಡ ದಲಿತ ಬದುಕು ಭಾವನೆಗಳನ್ನು ವ್ಯಕ್ತಪಡಿಸುವುದಕ್ಕು ಇದೇ ಬದುಕು ಭಾವನೆಗಳನ್ನು ದಲಿತೇತರ ಲೇಖಕನೊಬ್ಬನ ವ್ಯಕ್ತತೆಗು ವ್ಯತ್ಯಾಸವಿದೆ.
ಹಾಗೆ ಒಬ್ಬ ಲೇಖಕಿ ಒಂದು ಹೆಣ್ಣಾಗಿ ತಾನು ಕಂಡುಂಡ ಬದುಕು ಭಾವನೆ ವ್ಯಕ್ತಪಡಿಸುವುದಕ್ಕು ಇದೇ ಹೆಣ್ಣಿನ ಬದುಕು ಭಾವನೆಗಳನ್ನು ಹೆಣ್ಣಲ್ಲದ ಒಬ್ಬ ಪುರುಷ ಲೇಖಕ ವ್ಯಕ್ತಪಡಿಸುವುದಕ್ಕು ವ್ಯತ್ಯಾಸವಿದೆ.
ಇವುಗಳ ಜಾಡಿನಲ್ಲಿ ಸಾಗುವಾಗ.. ದಲಿತರಿಗೆ ದಲಿತ ಪೂರಕ; ಹೆಣ್ಣಿಗೆ ಹೆಣ್ಣು ಪೂರಕ; ಅನ್ನೊ ಮನೋ ಭೂಮಿಕೆಯಲ್ಲಿ ಪಲ್ಲವಿ ಅವರ ‘ಕುಂಡದ ಬೇರು’ ಕಥೆಗಳ ಸಂಕಲನದಲ್ಲಿನ ಕಥೆಗಳ ವ್ಯಕ್ತತೆ, ಅನಿವಾರ್ಯತೆ ಮತ್ತು ಸಂಕೀರ್ಣತೆಯ ಚೌಕಟ್ಟಿನೊಳಗೆ ವಿಶದೀಕರಿಸುತ್ತ “ಕುಂಡದ ಬೇರು” ಕಥೆಯ ಚಿನ್ನಮ್ಮಳು ಕಂಡುಂಡ ಒಟ್ಟು ಬದುಕಿನ ಭಾವನೆಗಳ ಆಚೀಚೆ ಆಡಾಡುತ್ತಾ ಮಮ್ಮಲ ಮರುಗುವ ಕಥೆ.
ಚಿನ್ನಮ್ಮನೊಳಗೆ ಇರುವ ಆಸೆ ಅಗಾಧ. ಎಲ್ಲವನ್ನು ಕಾಪಿಟ್ಟುಕೊಂಡು ಸಾಗುವ ಅವಳ ಅಂತರಂಗದ ತುಡಿತವನ್ನು ಸೂಕ್ಷ್ಮವಾಗಿ ನೋಡುವ ಒಳಗಣ್ಣಿನ ಆಪ್ತ ಮನಸ್ಸುಗಳೇ ಇಲ್ಲವಾದಾಗ, ಯಾವುದೋ ಒಂದು ತಪ್ಪು ಘಟನೆ ಅಥವಾ ಒಂದು ತಪ್ಪು ತಿಳುವಳಿಕೆಯ ಕಾರಣ, ಎಲ್ಲ ಘಟನೆ ಸನ್ನಿವೇಶ ‘ಹಾಗೆ ಇರಬಹುದು’ ಎಂಬ ಪೂರ್ವಾಗ್ರಹ ಪೀಡಿತ ಮಾನಸಿಕ ವಿಕ್ಷಿಪ್ತತೆ! ಅದು ತಂದೊಡ್ಡುವ ಯಾತನೆ! ಆ ಯಾತನೆ ಕುಂಡದಲ್ಲಿ ಬೇಯುವ ಹೆಣ್ಣಿನ ಆಳದ ನೋವನ್ನು “ಕುಂಡದ ಬೇರು” ತೆರೆದಿಡುತ್ತದೆ.
ಹಾಗೆ ಬಾಲ್ಯದ ಮುಗ್ಧತೆ, ಶಾಲಾ ದಿನಗಳ ಚೆಲ್ಲು ಚೆಲ್ಲು, ಯೌವ್ವನದ ಉನ್ಮತ್ತತೆಯಲ್ಲಿ ಆಗುವ ಗಂಭೀರ ಎಡವಟ್ಟು, ನೆನೆದಾಗ ಈಗವು ಇಡುವ ಕಚಗುಳಿ, ಪಡೆವ ಸ್ವರೂಪ, ದೊಡ್ಡವರ ಸಣ್ಣತನ, ದರ್ಪ, ದೌಲತ್ತು, ಅವಿವೇಕ, ಸಣ್ಣವರ ಕೆಟ್ಟತನ, ಮುಗ್ಧತೆಯಲ್ಲಿ ಜರುಗುವ ಕ್ರಿಯೆ, ಅದುವರೆಗು ಜರುಗಿದ ‘ಗುಪ್ತ ಕ್ರಿಯೆ’ ಮರೆತು ಒಂಟಿತನದಲ್ಲಿ ಪಡುವ ‘ಆಸರೆ’ಯ ಸುಖ, ಬೆರಗಿನ ಕನಸು, ಕಟ್ಟಿಕೊಂಡವಳು ಎದುರುಗೊಂಡಾಗ ಆಗುವ ಆನಂದ, ಸರಸ – ಸಲ್ಲಾಪ. ಈ ನಡುವೆ ಮರೆತೇ ಹೋಗಿರುವ ಚಂದ್ರಿಯ ಬದುಕಿನ ದುರಂತ, ಆ ತಿರುವಿನಲ್ಲಾಗುವ ಪಲ್ಲಟ, ಇದ್ಯಾವುದನ್ನು ಅರಿಯದ, ಕೊನೆಗೆ ಇದೆಲ್ಲವನ್ನು ತನ್ನವ್ವಳಿಂದ ಅರಿಯುವ ಕಥಾ ನಿರೂಪಕನ ಮನಸ್ಸಿನಲ್ಲಾಗುವ ಹೊಯ್ದಾಟದ “ತಿರುವು” ಕಥೆಯಲ್ಲೊಂದು ನವಿರು, ಚೇಷ್ಟೆ, ಕಣ್ಣೀರು, ಬಿಚ್ಚಿ ಹೇಳಲಾಗದ ಸಲ್ಲಾಪದಾಚೆಗಿನ ಬಿಸಿಯುಸಿರಿನ ಗೋಳಿದೆ.
ಕಥೆಗಾರ್ತಿ ಎಡಯೂರು ಪಲ್ಲವಿ ಅವರು ಇದೆಲ್ಲವನ್ನು ಒಟ್ಟುಗೂಡಿಸಿ ಕಥೆ ಕಟ್ಟಿರುವ ರೀತಿ ಮತ್ತು ಅದರ ನಿರೂಪಣಾ ಶೈಲಿಯಲ್ಲಿ ಒಂದು ಆಪ್ತತೆ, ಘಟಿಸಿಹೋದ ಪ್ರೀತಿಯ ಮರು ಸೆಳೆತ, ಎದೆಯ ಧ್ವನಿಯಲ್ಲಿ ಮರುಕದ ಹಂಬಲಿಕೆಯಿದೆ.
ಕಲೆಗೆ ಒಗ್ಗೂಡಿಸುವ ಶಕ್ತಿಯಿದೆ. ಕಲಾವಿದೆ/ ಕಲಾವಿದ – ಜಾತಿ, ಧರ್ಮ, ನೆಲ, ಜಲ, ಭಾಷೆ ಎಲ್ಲವನ್ನು ಮೀರಿದ ಮೌಲಿಕ, ಮಾನವೀಯ ಗುಣದ ಪ್ರತೀಕ. ಈ ಗುಣಕ್ಕೆ ಜಾತಿಯಿಲ್ಲ ಧರ್ಮವಿಲ್ಲ. ಕಲಾವಿದೆಯೊಬ್ಬಳ ನಡೆಯಲ್ಲಿ ಕಂಡ ಸತ್ಯ “ರದ್ದಿ” ಯಲ್ಲಿದೆ.
ಮನುಷ್ಯತ್ವದ ಗುಣವನ್ನೇ ಬಿಸಾಡಿ, ಬಿಡು ಬೀಸಾಗಿ ನಾಜೂಕಾಗಿ ನಂಬಿಕಸ್ಥ ರೀತಿಯಲ್ಲಿ ಬದುಕುವುದು. ಈಗ ವಿಮಲ ಕಣ್ಣಲ್ಲಿ ಕಂಡದ್ದು ಅದನ್ನೆ. ಅವತ್ತು ಅಪ್ಪ ಹೇಳಿದ್ದನ್ನು ನಂಬದವಳು. ಅಂತರ್ಗತವಾಗಿ ಬೇರು ಬಿಟ್ಟಿರುವ ಜಾತಿಯ ಬೇರು. ಅದು ಆಳ ಮಣ್ಣಿನೊಳಗೇ ಹಾದು ಮೇಲೆದ್ದು ಚಿಗುರೊಡೆದು ನಳನಳಿಸಿ ಸಮೂಹದೊಳಗೆ ಸೇರಿ ಹರಡಿಕೊಂಡು ಕಣ್ಣು ಕುಕ್ಕಿ ತಣ್ಣಗೆ ಜೀವಿಸುವ ಜಾತಿ ಕ್ರೌರ್ಯವನ್ನು ತಣ್ಣಗೆ ಹೇಳುವ ಕಥೆ ‘ರದ್ದಿ” ಒಂದಲ್ಲ ನೂರು ಸಲ ಪಿಸುಗುಡುವ ಧ್ವನಿಯಲ್ಲಿ ಪ್ರಸ್ತಾಪಿಸುತ್ತದೆ.
ರದ್ದಿ ಎಂಬುದು ಬೇಡವಾದದ್ದನ್ನು ಬಿಸಾಡುವ, ಸೈಡಿಗಿಡುವ ಸಂಚಲನ ಕ್ರಿಯೆ. ಯಾವುದೇ ಅಬ್ಬರವಿಲ್ಲದೆ ಜಾತಿಯ ಹಿಮ್ಮುಖವನ್ನು ಅದು ಆವರಿಸುವ ರೀತಿಯನ್ನು ತೀರಾ ಸೂಕ್ಷ್ಮವಾಗಿ ಹೇಳಿರುವ ಯಡಿಯೂರು ಪಲ್ಲವಿ, ಇಲ್ಲಿನ ಕಥಾ ನಿರೂಪಕಿಯ ಮಗಳು ‘ಪೂರ್ವಜ’ಳ ಪಾತ್ರಸೃಷ್ಟಿಯನ್ನು ತಂದು ಕಥೆಗೊಂದು ತಾಂತ್ರಿಕ ತಿರುವು, ಕಥನತಂತ್ರದ ಸೊಗಸು ಮತ್ತು ಅಚ್ಚುಕಟ್ಟುತನವನ್ನು ಹೆಚ್ಚಿಸಿ ಒಬ್ಬ ನುರಿತ ಕಥೆಗಾರ್ತಿಯಂತೆ ಕಾಣಿಸುತ್ತಾರೆ.
ರಕ್ತ ಸಂಬಂಧದ ಮದುವೆಗಳು ‘ಪ್ರೀತಿಗೂ’ ಕುದುರುತ್ತವೆ. ‘ಸಂಪತ್ತಿಗೂ’ ಕುದುರುತ್ತವೆ. ಕೆಲವು ಸಲ ‘ವಂಶ ಸಂಬಂಧಗಳು’ ತಮ್ಮ ತಲೆಮಾರಿಗೇ ಕೊನೆಯಾಗದಿರಲೆಂದು ಹಿರಿಯರ ‘ಕುಲೋದ್ಧಾರ’ ಪ್ರತಿಷ್ಠೆಯ ನಿರ್ಧಾರಗಳೂ ಅಂಚಿನಲ್ಲಿ ಹಠ ಸಾದಿಸಿ ಬಿಡುತ್ತವೆ. ಈ ನಿರ್ಧಾರದ ಹೊತ್ತಲ್ಲಿ ‘ಅವಳ’ ಮನಸ್ಸನ್ನೂ ‘ಅವನ’ ಮನಸ್ಸನ್ನೂ ಅರಿಯುವ ಯಾವ ಆಲೋಚನೆಯೂ ಇರುವುದಿಲ್ಲ. ಹಾಗಾಗಿ ಒಳಿತು ಕೆಡುಕು ಕಾಣುವ ಮುನ್ನವೇ ‘ಪ್ರತಿಷ್ಠೆ’ಯ ಮನಸ್ಸುಗಳು ಗೆಲುವು ಕಂಡು ಕಾಲದಲ್ಲಿ ಲೀನವಾಗಿರುತ್ತವೆ.
ಇನ್ನೂ ಮುಂದುವರಿದು ವಿಶ್ಲೇಷಿಸುವುದಾದರೆ ಹೆಣ್ಣು ಹೆಣ್ಣಿನ ನಡುವೆ, ಗಂಡು ಗಂಡಿನ ನಡುವಿನ ನೈಸರ್ಗಿಕವಲ್ಲದ ಆಕರ್ಷಣೆ ಮತ್ತು ಅದು ದೈಹಿಕ ಮೈಥುನದ ಎಲ್ಲೆಗೆ ಸಂಬಂಧಿಸಿದ್ದು. ಇದು “ಕಣಗಿಲೆ” ಹೇಳುವ ‘ಹೂ ಕಥೆ’!
ಈ ಹೂ ಕಥೆ ದೀರ್ಘವಾಗಿ ಕಾಡುತ್ತದೆ. ಈ ದೀರ್ಘದಲ್ಲಿ ದೊಡ್ಡ ಊನವಿದೆ. ಈ ಊನದೊಳಗೊಂದು ಹೂವಿದೆ. ಈ ಹೂವಿನಲ್ಲಿ ಅಂದವೂ ಇದೆ ಗಮಲೂ ಇದೆ!
ರಾಮಯ್ಯನದು ಯಾವುದನ್ನು ಮುಕ್ತವಾಗಿ ಹಂಚಿಕೊಳಲಾರದ ವೈಯಕ್ತಿಕ ತೊಳಲಾಟ. ಜೀವನೋತ್ಸಾಹವನ್ನೇ ಕಳೆದುಕೊಂಡ ತೃಪ್ತಿ ಇರದ ಬದುಕು. ಕನಸುಗಳು ನುಚ್ಚು ನೂರಾಗಿ, ಬಂದದ್ದು ಬಂದ ಹಾಗೆ ಸ್ವೀಕರಿಸಿ ನಲುಗುವ ಸ್ಥಿತಿಗೆ ‘ಗಿರಿಯಮ್ಮನ ಕೃಪೆ’ಯಿದೆ. ಸಂಪಿಯ ಬಾಳು ಕಂಡು ಮರುಗುವ, ಕರುಗುವ, ಅವಳಿಗೂ ಒಂದು ಸುಂದರ ಬದುಕು ಕಟ್ಟಿಕೊಡುವ ತುಡಿತದ ರೂಪೇಶನ ನಡೆ, ಮಾನವೀಯ ಸ್ಪಂದನ ಕಥೆಯಾಚೆಗೂ ಕಾಡುತ್ತದೆ.
ಕಣಗಿಲೆ – ಒಳಗೇ ಒಸರುವ ವಿಷಪೂರಿತ ಅನ್ನಲು ಕಥೆ ದೊರಕಿಸಿಕೊಡುವ ಹಲವು ದೃಶ್ಯ ಸನ್ನಿವೇಶ ಯಡಿಯೂರು ಪಲ್ಲವಿ ಅವರ ನಿರೂಪಣೆ ವಿಧಾನ ಓದುಗನಿಗೆ ಮನದಟ್ಟು ಮಾಡಿಸುತ್ತದೆ. ಅದು…
“ರಾಮಯ್ಯನಿಗೆ ಹೆಂಡತಿಯ ಎದೆ ನೋಡುದ್ರೆ ಅಂತಹ ಕೆರಳಿಕೆಗಳೇನು ಇರಲಿಲ್ಲ. ಈಗಿನ ಹರೇದ ಹುಡಗೀರು ಸೆರೆಗು, ವೇಲು ಇಲ್ಲದ ತೆರೆದೆದೆಯಲ್ಲಿ ಬರುವಾಗ ಅವನೊಳಗೊಂದು ಚಿಟ್ಟೆ ಸ್ಖಲಿಸುವ ಆಸೆಯಾಯ್ತದೆ”
“ಸದಾ ಅಕ್ಕನ ಅಂಟು ಪುರಲೆಯಂತಿದ್ದ ಪಕ್ಕದ್ಮನೆ ಗೆಳತಿಯ ಮುಖ ಮತ್ತು ಅಕ್ಕನ ಮುಖ ತೀರ ಹತ್ರ ತಂದು ತುಟಿಗೆ ತುಟಿಯೊತ್ತುತ್ತಿದ್ದು ನೋಡಿ ತುಂಬುಪ್ರಾಯದ ಎದೆ, ತೊಡೆಯ ಸಂದಲ್ಲಿ ಕಾವಿನ ಬೆಂಕಿ ತೊನೆದಾಡ್ತು. ತನ್ನಕ್ಕ ಅಂದು ಬಟ್ಟೆ, ಒಡವೆಗಳ ಬುತ್ತಿ ಮಾಡ್ಕೊಂಡು ರೆಡಿಯಾದದ್ದು ಈ ಗೆಳತಿಯೊಟ್ಟಿಗೆ ಗೂಡು ಕಟ್ಟಿಕೊಳ್ಳಲಿಕ್ಕಾ?”
ಕೊನೆಗೆ,
“ಯವ್ವ ನಾನೇನೆ ಪಾಪ ಮಾಡಿದ್ನೆ. ಇರೋ ಒಂದ್ ಜೀವ್ನಾನ ಕೊಚ್ಚೆಲಿ ಕೊಳ್ಯೋ ತರ ಆಯ್ತಲ್ಲ”
ಎಂಬುದು.
ಯಡಿಯೂರು ಪಲ್ಲವಿ ಅವರ ಮನಸ್ಸಿನ ಆಳದ ಅಡಗಿರುವ ಧ್ವನಿಯ ಫಲಿತಾಂಶವನ್ನು ‘ಬಿಲ್’ ನೀಡುತ್ತದೆ. ಈ ಸಂಕಲನದಲ್ಲಿ ಇದೊಂದು ಅತ್ಯುತ್ತಮ ಹಾಗು ಪ್ರಭಾವಶಾಲಿ ಕಥೆ.
ಇಲ್ಲಿ ಸಾವಿತ್ರಿ ಪ್ರಗತಿಪರವಾಗಿ ಕಾಣುತ್ತಾಳೆ. ಪ್ರೀತಿಸಿ ಮದುವೆಯಾಗಿ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗುವ ಆಕೆಯಲ್ಲಿ ಛಲವಿದೆ. ಆಕಸ್ಮಿಕ ಗಳಿಗೆಗಳಿವೆ. ಅಗ್ನಿ ಪರೀಕ್ಷೆಗೆ ಒಳಪಡುವಾಗಲು ಕುಗ್ಗದ ಅವಳ ಮನಸ್ಥಿತಿ, ಪ್ರೀತಿಸಿ ಮದುವೆ ಆದವನ ಜೊತೆ ಸಾಂಸಾರಿಕವಾಗಿ ಜಗಳ, ಮುನಿಸು, ಕೋಪ ತಾಪ, ವಿರಸ, ಆರ್ಥಿಕ ವಹಿವಾಟಿನ ಜಟಾಪಟಿ ಇದ್ದಾಗ್ಯೂ ಅವರಿಬ್ಬರ ನಡುವಿನ ಪ್ರೀತಿ ಗಟ್ಟಿ. ಕರೋನಾ ತಂದೊಡ್ಡುವ ಸಂಕಷ್ಟದ ನಡುವೆಯೂ ಅವರಿಬ್ಬರೂ ಕೂಡಿ ಮಾಡುವ ಸೇವೆಯಲ್ಲಿ ಸಾರ್ಥಕತೆ ಇದೆ. ಇಲ್ಲಿಂದ ‘ಬಿಲ್’ ಇನ್ನೊಂದು ಮಗ್ಗುಲಿಗೆ ಹೊರಳುತ್ತದೆ.
ಜಗಳ ಮುನಿಸು ಸಿಟ್ಟಿನಲ್ಲಿ ಅವನಾಡಿದ “ನೋಡು ಒಂದ್ವೇಳೆ ಇದೇ ಪರಿಸ್ಥಿತಿ ನನಗೇನಾರು ಬಂದ್ರೆ, ಸ್ವತಃ ನಂಗೇನೆ ಇಷ್ಟು ಬಿಲ್ ಆದ್ರೆ, ನನ್ ಹೆಣಾನ ಅಲ್ಲೆ ಬಿಟ್ಟು ಬಾ. ಏನು ಇಲ್ದಿರೊ ಪ್ರಯೋಜನಕ್ಕೆ ಬರದಿರೊ ಈ ಹೆಣಕ್ಕೆ ಯಾಕೆ ಸುಮ್ನೆ ಹಣ ಸುರಿತ್ಯ. ಆ ದುಡ್ನಲ್ಲಿ ಹೇಗೋ ನೀನು ಸಂಸಾರ ತೂಗುಸ್ಕೊಂಡು ಹೋಗ್ಬೋದು. ಮಗ ಯಶಸ್ಸನ ಓದಿಗಾದ್ರು ಆಯ್ತದೆ” ಮಾತು ಕೇವಲ ತೋರಿಕೆಯದಲ್ಲ ಎಂಬುದು.. ಹಾಗೂ ಕಾಕತಾಳಿಯವೊ ಏನೊ ಸತ್ಯ ಕರೋನಾಗೆ ಬಲಿಯಾದ ಪ್ರಸಂಗವೇ ಸಾಕ್ಷಿ. ಆಗ ಅವಳು ತೋರುವ ದಿಟ್ಟತನ ಸಮಾಜಮುಖಿ. ಎಲ್ಲ ಇಸಂ ಗಳನ್ನು ಮೆಟ್ಟಿ ‘ಸತ್ಯ’ ನ ಮಾತಿನಂತೆ ತಳೆಯುವ ನಿಲುವು, ಇದರೊಂದಿಗೆ ಎರಗಿ ಬರುವ ಕೌಟುಂಬಿಕ ಕಟ್ಟುಪಾಡಿನ ಕುಹಕಗಳನ್ನು ಜಾಡಿಸಿ ಮೌನವಾಗಿಯೇ ಅದನ್ನೆಲ್ಲ ಸಮರ್ಥಿಸಿ ನಿಲ್ಲುವ ಸಾವಿತ್ರಿಯ ಬದುಕು ಆದರ್ಶಪ್ರಾಯವಾಗಿ ಚಿತ್ರಿತವಾಗಿದೆ.
ಹುಟ್ಟಿ ಆಡಿ ಬೆಳೆದ ಹಳ್ಳಿಗಾಡು ತೊರೆದು ನಗರ ಪ್ರದೇಶಗಳಿಗೆ ಬಂದವರ ಬದುಕು ಭಿನ್ನ. ಅವರು ಆರಿಸಿಕೊಳ್ಳುವ ಕೆಲಸ, ವಾಸದ ಪರಿಸರ, ಕಟ್ಟಿಕೊಳ್ಳುವ ವಲಯದ ಸಂಬಂಧಗಳು, ಈ ಮೂಲಕ ಇಲ್ಲಿನ ಏರಿಳಿತವನ್ನು ನಿಭಾಯಿಸುವ ಚಾಣಾಕ್ಷತನ ಇದ್ದರಷ್ಟೇ ಇಲ್ಲಿ ಏಗಲು ಸಾಧ್ಯ.
ನಾವೆಲ್ಲ ಪಿಜಿಗಳ ಬಗ್ಗೆ ಕೇಳಿರುತ್ತೇವೆ. ಅಲ್ಲಿನ ವಾಸ್ತವ್ಯ ವಾಸಿಗಳಿಂದ ಕೆಲವು ವಿಚಾರಗಳನ್ನು ಕುತೂಹಲಕ್ಕೆ ಕೇಳಿ ತಿಳಿದಿರುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಹೊರಗೆ ಬಂದು ಸ್ವತಂತ್ರವಾಗಿ ಸ್ವಾವಲಂಬಿಯಾಗಿ ಜೀವಿಸುವ ಹೆಣ್ಣು ಮಕ್ಕಳ ವೈಯಕ್ತಿಕ ವಿವರ, ಅವರು ಬಯಸುವ ಗೆಳೆತನ, ಅಲ್ಲಿ ದಕ್ಕುವ, ಅನುಭವಿಸುವ, ಕಳೆದುಕೊಳ್ಳುವ ಮುಗ್ಧತೆ, ಅದು ಒದಗಿಸುವ ಖಾಲಿತನ, ಒಂಟಿತನ, ನೋವು, ಯಾತನೆ – ಹೀಗೆ ಅದರೊಳಗೆ ಇನ್ನೂ ಹಲವು ಬಚ್ಚಿಟ್ಟ ವಿವರಗಳೂ ಇರುತ್ತವೆ ಎಂಬುದರ ವಾಸ್ತವಾಂಶ ತೆರೆದಿಡುವ ‘ಹುಳಿತೇಗು’ ಪಿಜಿ ಸುತ್ತಲೇ ಗಿರಕಿ ಹೊಡೆಯುತ್ತ ಪಿಜಿಯ ಎಲ್ಲ ಹಳವಂಡವನ್ನು ಮತ್ತು ಎಲ್ಲಕ್ಕು ಪಿಜಿಯೇ ಹೊಣೆಯೇ..? ಹಾಗೂ ಒಂಟಿತನದಲ್ಲಿ ಒಲವಿನಾಸರೆ ಬಯಸುವ ಮನಸ್ಸು ಕ್ಷಣ ಹೊರಳಿ ಆದ ಎಡವಟ್ಟೇ..? ಇದೆಲ್ಲವನ್ನು ವಿಶ್ಲೇಷಿಸಿ ವಿಮರ್ಶಿಸಿ ತೂಗುವ ಅಲ್ಲಿನ ಎರಡು ಪಾತ್ರಗಳ ಒಳ ಆಸೆ ವೈಯಕ್ತಿಕ!
ಆ ಪಾತ್ರಗಳ ದನಿ, ದೈಹಿಕವಾಗಿ ಆಗುವ ಏರುಪೇರು, ಅದು ಕಾಣಿಸುವ ಬಗೆ, ಗತಿಸಿದ, ಘಟಿಸಿದ ಒಳಿತು ಕೆಡುಕಿನ ಸತ್ಯ ಹೇಳುವ ಕನ್ನಡಿ ಮುಂದೆ ಬೆತ್ತಲಾಗಿ ನಿಂತು ಕಾಣುವ ತನ್ನ ದೈಹಿಕ ಆಕಾರ ವಿಕಾರತೆ; ಅವನ ಚಿತ್ರ; ಮೈಮರೆಸಿದ ಗುಲ್ ಮೊಹರ್ ಚಿತ್ತಾರದ ಚಿತ್ತ; ಅದು ಬೆಸೆದ ಬೆರಗು; ಅವನ ಅಗಲಿಕೆಯ ಕನವರಿಕೆ; ಹೀಗೆ ಆಗುವಲ್ಲಿ ಮಾನಸಿಕ ಖಿನ್ನತೆ, ತೊಳಲಾಟ; ಈ ಎಲ್ಲಾ ಪರಾಮರ್ಶೆಯೊಳಗೆ ಪಿಜಿ ಬಗೆಗಿನ ಜಿಜ್ಞಾಸೆ, ತಿರಸ್ಕಾರದ ಭಾವ; ಕೊನೆಗೆ ಹುಟ್ಟಿದೂರಿನ ಬದುಕನ್ನೇ ಅರಸುವ ಮನಸ್ಸು.
ಸೋ.. ಇದೆಲ್ಲ ಸ್ವಯಂಕೃತ..! ಅನ್ನಿಸುವ ಕನ್ಫ್ಯೂಶನ್ ತಂದಿಡುವ ‘ಹುಳಿತೇಗು’ ಎದೆಗೆ ಭಾರವಾಗಿ ಮುಗುಮ್ಮಾಗಿ ಪುನರವಲೋಕನದಲ್ಲಿ ಒತ್ತರಿಸಿ ಬಂದು ‘ಉರಿ’ಯನ್ನು ಒಸರುತ್ತ ತಣ್ಣಗೆ ಬಾಧಿಸುತ್ತದೆ. ಕೆಣಕುತ್ತದೆ.
ತುಮಕೂರು ಸೀಮೆಯ ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ಕಾದಂಬರಿಯ ಆರಂಭಿಕ ಸಾಲುಗಳಲ್ಲಿ ಕಂಡು ಬರುವ ಬೆಳಗಿನ ವಾತಾವರಣದ ಪೌರಕಾರ್ಮಿಕರ ಕಸದ ಲಾರಿಯ ಭಾಗಶಃ ಸನ್ನಿವೇಶದಂತೆ ಇಲ್ಲಿ “ಮಾಯದ ಗಾಯ”ದ ಕಥೆಯ “ಬನ್ನಿ ಬನ್ನಿ ಎಲ್ಲರು ಬನ್ನಿ ಸ್ವಚ್ಛತೆಯನ್ನು ಕಾಪಾಡಲು ಬನ್ನಿ’ ಎಂಬ ಹಾಡನ್ನು ಕರ್ಕಶವಾಗಿ ಕೇಳಿಸುತ್ತಾ, ಬಂದಿದ್ದೇವೆ ಎಂಬ ಸೂಚನೆ ನೀಡುತ್ತಾ ಬಂದ ಹಸಿರು ವಾಹನದ ಮುಂದಕ್ಕೆ ಬಕೀಟನ್ನು ಹಿಡಿದಳು ಸುಮಿತ್ರ” ಎಂಬುದರಿಂದ ಶುರುವಾಗುವ ಕಥೆಯ ಜಾಡಿನ ಕಡೆ ಕಣ್ಣಾಡಿಸುತ್ತಾ ಹೋದಂತೆ ‘ಅಟ್ರಾಸಿಟಿ’ ಕಾದಂಬರಿ ಕೆದಕುವ ದಲಿತ ಶೋಷಣೆಯ ರೂಪದಂತೆ ಇಲ್ಲಿನ ಕಥಾ ನಿರೂಪಣೆ ಒಳ ಹೊಕ್ಕಿ ಕೆದಕಿದಂತೆಲ್ಲ ಹೆಣ್ಣಿನ ಶೋಷಣೆಯ ಅಮಾನವೀಯ ರೂಪ ಕಾಣುತ್ತದೆ.
ಮೇಲುಕೀಳಿನ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬಂಟಿಗರು ಬದುಕುವುದೇ ದುಸ್ತರ.
ಅದರಲ್ಲು ಮಧ್ಯಮವರ್ಗ, ನಿರುದ್ಯೋಗಿ ವರ್ಗ, ಕೂಳಿಗಾಗಿ ಅಂಗಲಾಚುವವರ ಸ್ಥಿತಿ ಶೋಚನೀಯ. ಇಲ್ಲೆಲ್ಲ ಉದ್ಯಮಿಗಳ ದರ್ಪ, ಸ್ತ್ರೀಪರವಾದ ಸೋಗಲಾಡಿಗಳು, ಸಮಾಜ ಸೇವೆಯೆಂಬ ಸೋಗಿನ ಸಮಯಸಾಧಕತನ ವಿಜೃಂಬಿಸಿ ಆಳುತ್ತದೆ. ಗಂಡನನ್ನು ಕಳೆದುಕೊಂಡು ಇರುವನೊಬ್ಬ ಮಗನನ್ನು ನೋಡಿಕೊಳ್ಳುವ ಉಸಾಬರಿಯಲ್ಲಿ ತನ್ನೆಲ್ಲ ಸುಖ ಶಾಂತಿ ನೆಮ್ಮದಿಯನ್ನು ಒತ್ತಟ್ಟಿಗಿಟ್ಟು ಸುಮಿತ್ರ ಪಡುವ ಪಾಡನ್ನು “ಮಾಯದ ಗಾಯ” ವ್ಯಕ್ತಪಡಿಸುತ್ತದೆ.
ಇಲ್ಲಿ ನೀರಿಗಾಗಿ ಜಗಳವಿದೆ. ಉಪಟಳವಿದೆ. ಇದು ಬಡ ಜನವರ್ಗ ವಾಸಿಸುವ ಬಡಾವಣೆಗಳ ಸ್ಥಿತಿಗತಿಯನ್ನು ಸರ್ಕಾರ ಮತ್ತು ಉದ್ಯಮಗಳು ತನ್ನ ಕಾರ್ಮಿಕರಿಗಾಗಿ /ಸಾಮಾನ್ಯ ಜನವಾಸಿಗಳಿಗೆ ಅಗತ್ಯ ಸೌಲಭ್ಯ ದೊರಕಿಸಿ ಕೊಡದೆ ಮಗ್ಗುಲಾಗಿ ಮಲಗಿ ನಿರ್ಲಕ್ಷಿಸಿರುವುದನ್ನು “ಮಾಯಾದ ಗಾಯ” ಸೂಚ್ಯವಾಗಿ ಅನಾವರಣಗೊಳಿಸುತ್ತದೆ.
ಒಂದು ಕಡೆ ಜ್ವರದಿಂದ ಬಳಲುವ ಮಗ. ಇನ್ನೊಂದು ಕಡೆ ಕುಡಿವ ನೀರಿನ ವಿಚಾರವಾಗಿ ತನಗಾಗುತ್ತಿದ್ದ ಕಿರುಕುಳದ ವಿರುದ್ದ ದನಿ ಎತ್ತಿದ್ದರ ಪರಿಣಾಮದಿಂದ ಫ್ಯಾಕ್ಟರಿಯಲ್ಲಾಗುವ ಅಪಮಾನ ಮತ್ತು ಕುತಂತ್ರದಿಂದ ಕೆಲಸದಿಂದ ಹೊರ ತಬ್ಬಿಸಿಕೊಂಡು ಬೀದಿಗೆ ಬಿದ್ದು ನರಳುವ ಸುಮಿತ್ರ ಕೊನೆಯಲ್ಲಿ ಎಲ್ಲ ಹಿಕ್ಮತ್ತುಗಳ ಮುಖಗಳು ಒಂದಾಗಿ ವಿಜೃಂಬಿಸುವುದನ್ನು ಕಂಡು ನಲುಗುತ್ತಾಳೆ.
ಯಾವತ್ತಿಗು ಹೆಣ್ಣಿಗೆ ಒಂದು ಗೆರೆ ಇದೆ ಬಹು ಹಿಂದಿನಿಂದಲು. ವರ್ತಮಾನದಲ್ಲಿ ಅದನ್ನು ದಾಟುವ/ ಮೀರುವ ಪ್ರಯತ್ನವಿದೆ. ಮೀರಿರುವ ಉದಾಹರಣೆಯೂ ಇದೆ. ನೈಸರ್ಗಿಕವಾಗಿ ಗಂಡಿಗಿಂತ ಹೆಣ್ಣಿಗೆ ದೈಹಿಕವಾಗಿ ಕೆಲವು ಸಮಸ್ಯೆಗಳಿವೆ. ಅದನ್ನು ಸಲೀಸಾಗಿ ಮುಕ್ತವಾಗಿ ಹಂಚಿಕೊಂಡು ಮುಕ್ತಿ ಹೊಂದುವಲ್ಲಿ ಹಿಂಜರಿಕೆ. ಅದರಲ್ಲಿ ಅವಳು ಪಡುವ ಯಾತನೆ ವಿವರಿಸಲಾಗದ್ದು. ಮದುವೆಗೆ ಕೆಲವೇ ದಿನ ಉಳಿದಿರುವ ಹೊತ್ತಲ್ಲಿ ಭಾನುಳಿಗೆ ಕಾಡುತ್ತಿದ್ದ “ಯುರೋಫ್ಲೊಮೆಟ್ರಿ” ಬಗ್ಗೆ ಕಥೆಗಾರ್ತಿ ಯಡಿಯೂರು ಪಲ್ಲವಿ ಅವರು ವಿವರಿಸಿ ಹೇಳಿರುವ ರೀತಿ ಕೌತುಕವಾಗಿದೆ.
ಇಲ್ಲಿ ಕೀರ್ತಿಯ ಸಮಯಪ್ರಜ್ಞೆ, ಅವಳ ಹಿಂದೆ ಬಿದ್ದಿದ್ದ ಶಿವು ತರದ ವ್ಯಕ್ತಿಯ ಒಳ ಬಯಕೆಯ ಮೋಹವನ್ನೇ ಬಳಸಿಕೊಂಡ ಬಗೆ. ಅವನ ಬಗ್ಗೆ ಭಾನು ನೀಡುವ ಎಚ್ಚರಿಕೆ. ಇದೆಲ್ಲವನ್ನು ಮನಸಿನ ಮೂಲೆಯಲ್ಲಿ ಇಟ್ಟುಕೊಂಡೂ.. ಒಂದು ಹೆಣ್ಣಾಗಿ ತನ್ನ ಮುಗ್ಧತೆಯ ಯೌವ್ವನದ ಸೆಳೆತದಲ್ಲಿ ಅವನ ಬಗ್ಗೆ ಉಕ್ಕುವ ಅನುರಾಗದೊಳಗೆ ತನ್ನ ಅಕ್ಕನ ಆರೋಗ್ಯದ ಆರೈಕೆ ಇದೆ. ಹೆತ್ತವರ ಸಿಟ್ಟು ಸೆಡವು ಆತಂಕ. ಗುಪ್ತತೆಯನ್ನು ಮುಕ್ತವಾಗಿ ಬಿತ್ತರಿಸಲಾಗದೆ ವಿಚಿತ್ರ ನೋವು ಸಂಕಟ ಅನುಭವಿಸುವ ಹಾಗು ಇದೆಲ್ಲದರ ನಡುವೆ ವೈದ್ಯರ ಸಲಹೆ ಸೂಚನೆ ಇದ್ದಾಗ್ಯೂ ಸಾಗುವ ಹಾದಿಯಲಿ ಭಾನುಗೆ ಆಗುವ ಒಳ ಅನಾಹುತ ಓದುಗನನ್ನು ಬೆಂಬಿಡದೆ ಕಾಡುತ್ತದೆ.
‘ಮೆ ಯು ಗೆಟ್ ಪೀಸ್ ಇನ್ ಹೆವನ್’ – ಇದು ರಾಜೇಶನ ‘ಅಂತಿಮ’ ಸ್ಟೇಟಸ್. ಸಾಗರಿಯ ಸಾವಿನ ಹಿಂದಿನ “ಎಜುಕೇಟೆಡ್ ಗರ್ಲ್ಸ್” ಕಥೆಯ ಹೂರಣ ವರ್ತಮಾನದಲ್ಲಿ ಜರುಗುವ ಸಾಮಾನ್ಯ ಸಂಗತಿಗಳು ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಕಣ್ಣಲ್ಲೇ ಕೊಲ್ಲುವಷ್ಟು ಗುಪ್ತ ಪ್ರೇಮವಿರುತ್ತದೆ. ಹುಡುಗಾಟಿಕೆಗಳು ಕೆಲವು ಸಲ ಹಿನ್ನೆಲೆಯಲ್ಲಿ ಕಾಮ ಪ್ರಚೋದಿತವಾಗಿರುತ್ತವೆ. ಕಾಲೇಜ್ ಡೇಸ್ಗಳೇ ಹಾಗೆ ಚೆಲ್ಲು ಚೆಲ್ಲು. ಆಕರ್ಷಣೆ, ಹಲವು ಆಪತ್ತು, ಸಾಂಸಾರಿಕ ತೊಡಕು ತಂದಿಡುವ ಪ್ರಸಂಗಗಳುಂಟು.
ಈ ಕಥೆಯಲ್ಲಿ ಮೂವರು ಗೆಳತಿಯರ ಆತ್ಮ ಸಂವಾದಗಳಿವೆ. ನಿರೂಪಕಿಯ ಸ್ವರ ಸಂವೇದನೆಯಲ್ಲಿ ಸೌಂದರ್ಯ, ಸಾಗರಿಯ ಮೆಲ್ಲುಸಿರಿದೆ. ಸಾಗರಿಯ ಮೌನದ ಹಿಂದಿನ ಕಿರು ನೋಟವನ್ನು ಗ್ರಹಿಸುವ ನಿರೂಪಕಿ ಅದುವರೆಗೂ ಅವಳ ಅಂತರಂಗ ಬೇಧಿಸಲು ಆಗದೆ ಕ್ಲಾಸ್ ಮೇಟ್ ಒಬ್ಬನ ಮೆಸೆಂಜರ್ ಮೆಸೇಜುಗಳ ಬಗ್ಗೆ ತಕರಾರು ತೆಗೆವಷ್ಟು ಸಾಗರಿಯ ಬಗ್ಗೆ ಅಪರಿಮಿತ ನಂಬಿಕೆ.
ಹೀಗೆ ಒಬ್ಬರಿಗೊಬ್ಬರು ಜೊತೆಗಿದ್ದೂ ಅವಳ ‘ಒಳಗಿದ್ದ’ನ್ನು ಅರಿಯದಷ್ಟು ಈ “ಎಜುಕೇಟೆಡ್ ಗರ್ಲ್ಸ್” ಅಂತಿಮವಾಗಿ ‘ಫೂಲ್ಸ್’! ಅರ್ಥಾತ್ ಯೌವ್ವನದ ಗುಟ್ಟು ಬಣ್ಣದ ಬದುಕಿಗೆ ದಾಸಿ/ಸ ಆಗುವ ಒಳಕ್ರಿಯೆ. ಈ ಒಳಕ್ರಿಯೆಯೊಳಗೆ ತಣ್ಣಗಿನ ಕ್ರೌರ್ಯ ಇರುತ್ತದೆ. ಇದನ್ನು ಅರಿಯುವಲ್ಲಿ ವಿಫಲವಾದ ‘ಯೌವ್ವನ’ – ಎಮೊಷನಲ್ ಆಮಿಷಕ್ಕೆ ಅಂತ್ಯವಾಗುವ ಅಂತಿಮ ಲಕ್ಷಣವಾಗಿದೆ.
ಸತ್ಯ ಏನೆಂದರೆ, ಕುಂಡದ ಬೇರಿಂದ ಮಾಯದ ಗಾಯದ ತನಕ ಕಾಣ ಬರುವ ವಿಭಿನ್ನ ವ್ಯಕ್ತಿತ್ವದ ಚಿನ್ನಮ್ಮ, ಚಂದ್ರಿ, ಸಾವಿತ್ರಿ, ಸುಮಿತ್ರ, ಸಾಗರಿ, ಗಿರಿಯಮ್ಮ, ಸಂಪಿ, ಭಾನು, ಕೀರ್ತಿ, ವಿಮಲ, ಸೀತಮ್ಮ, ಪ್ರತೀಕ್ಷ, ಇಲ್ಲಿನ ಕಥೆಗಳ ನಿರೂಪಣೆಯ ಧ್ವನಿರೂಪದಲ್ಲಿ ವ್ಯಕ್ತಪಡಿಸುವ ಹೆಣ್ಣಿನ ಜೀವನ ಪ್ರೀತಿ, ತುಡಿತ, ಮಿಡಿತ, ಪ್ರತಿಭಟಿಸುವ ಕೆಚ್ಚು ಇರುವಂತೆ ಸಿನಿಕತನ, ಕುತಂತ್ರ, ಸೋಗಲಾಡಿತನ, ಜಾತಿತನ, ದುರ್ವ್ಯಕ್ತಿತ್ವದ ಮುಖವಾಡಗಳನ್ನು ತೆರೆದಿಟ್ಟಿರುವ ಎಡಿಯೂರು ಪಲ್ಲವಿ ಅವರಿಗೆ ಜೀವನಾನುಭವದ ದಟ್ಟತೆ ಸಾಮಾಜಿಕ ಬದುಕಿನ ಸೂಕ್ಷ್ಮ ಅರಿವಿದೆ ಎಂಬುದನ್ನು ಈ ಕಥಾ ಸಂಕಲನದ ಪ್ರತಿ ಕಥೆಗಳಲ್ಲಿ ದಾಖಲಾಗಿರುವ ದಟ್ಟ ವಿವರಗಳು, ಪಾತ್ರಗಳು ಸನ್ನಿವೇಶಗಳು ಸರಳವಾಗಿ ಸಣ್ಣಗೆ ಹಾದು ಹೋಗುವ ದೃಶ್ಯ ವೈಭವಗಳು ತಿಳಿಸುತ್ತವೆ.
ಹೀಗೆ ಇಲ್ಲಿನ ಎಲ್ಲ ಒಂಭತ್ತು ಕಥೆಗಳಲ್ಲಿ ಭಿನ್ನ ಅನಿಸುವ ಹೆಣ್ಣಿನ ಗೌಪ್ಯತೆ, ಸೂಕ್ಷ್ಮ ಚಿತ್ರಿಕೆಗಳ ಕಲಾತ್ಮಕ ಕೆತ್ತನೆ ಇದೆ. ಒಳಿತು ಕೆಡುಕಿನ ಆಯಾಮಗಳ ದಾರಿಯಲ್ಲಿ ಎಚ್ಚರಿಕೆಯ ಪಲುಕುಗಳೂ ಇವೆ. ಇಲ್ಲಿ ಹೆಣ್ಣು ತನ್ನ ಮಿತಿಗಳ ಒಳಗೂ ಗಂಡಾಳಿಕೆಗೆ/ ಕ್ರೌರ್ಯ ಮೆರೆವ ವ್ಯವಸ್ಥೆಗೆ ಸಮನಾಗಿ ನಿಂತು ಪ್ರತಿಭಟಿಸುವ ದಿಟ್ಟತೆಯನ್ನು , ಯಾವುದೇ ಮುಜುಗರವಿಲ್ಲದೆ ಹೆಣ್ಣು ಗಂಡಿನ ಸಾಮಾನ್ಯ ಗುಪ್ತ ಹಾಗು ವೈಯಕ್ತಿಕ ವಿವರಗಳನ್ನು ಮುಕ್ತವಾಗಿ ಕಥನದೊಳಗೆ ಬಿತ್ತಿರುವುದರಿಂದ ಕಥೆಯ ಚೌಕಟ್ಟು, ಅಂದ ಹೆಚ್ಚಿದೆಯಲ್ಲದೆ ಗಟ್ಟಿತನ ಪ್ರಾಪ್ತಿಯಾಗಿದೆ.
ಕೊನೆಯದಾಗಿ ಮೊದಲು ಕಾಣಿಸಿದ ಬ್ರೆಕ್ಟ್ ನ ಕೊನೆಯ ಸಾಲು:
“ದುಷ್ಟನಾಗಿರೋದಕ್ಕೆ ಎಷ್ಟು ಸುಸ್ತು ಪಡಬೇಕು”
-ಎಂ.ಜವರಾಜ್

ಕೃತಿ : ಕುಂಡದ ಬೇರು
(ಕಥಾ ಸಂಕಲನ)
ಲೇಖಕಿ: ಎಡಿಯೂರು ಪಲ್ಲವಿ
ಪ್ರಕಾಶನ : ಮಿಲಿಟರಿ ಪ್ರಕಾಶನ
ಪುಟ : 108
ಬೆಲೆ : 160
ಪ್ರತಿಗಳಿಗಾಗಿ : 9741632669