ಪ್ರಯಾಣಕ್ಕೆ ಹೊರಟಾಗ ದಾರಿಯ ಬಗ್ಗೆ ಒಮ್ಮೊಮ್ಮೆ ಗೊಂದಲ ಉಂಟಾಗುತ್ತದೆ. ಆಗ ಸಾಮಾನ್ಯವಾಗಿ ವಾಹನ ನಿಲ್ಲಿಸಿ ಸ್ಥಳೀಯ ಜನರನ್ನು ಅಂಗಡಿಯವರನ್ನು “ ದಾರಿ ಯಾವುದು?” ಎಂದು ಕೇಳುತ್ತೇವೆ. ನಮ್ಮದೇ ನಾಡಾಗಿದ್ದಲ್ಲಿ ನಮ್ಮ ಭಾಷೆಯಲ್ಲಿ ದಾರಿಯನ್ನು ಹೇಳುತ್ತಾರೆ. ಬೇರೆ ಜಾಗಕ್ಕೆ ಹೋದಾಗ ಅವರ ಭಾಷೆಯನ್ನು ಹರುಕು ಮುರುಕಾಗಿ ಉಪಯೋಗಿಸಿ ಅದರೊಂದಿಗೆ ಸಂಗಮ ಭಾಷೆಯನ್ನು ಬಳಸಿ ಕೇಳಬೇಕು. ಅವರು ಹೇಳಿದ ಮಾತು ಅರ್ಥವಾದರೆ ಪುಣ್ಯ, ಇಲ್ಲದಿದ್ದರೆ ಬಂದ ದಿಕ್ಕಿಗೆ ವಾಪಸ್ ಹೋದರು ಹೋಗಬಹುದು!! .
ದಾರಿ ತೋರಿಸುವವರನ್ನು ಹಲವಾರು ವಿಧಗಳಿವೆ; ನನ್ನ ಸ್ನೇಹಿತೆ ಒಬ್ಬಳನ್ನು ಒಂದು ಜಾಗಕ್ಕೆ ಹೇಗೆ ಹೋಗುವುದು ಎಂದು ಕೇಳಿದರೆ “ ಎಲ್ಲಿಂದ ಸೀದಾ ಹೋಗಿ ಅಲ್ಲಿ ಉಪಹಾರ ದರ್ಶಿನಿ ಕಾಣತ್ತೆ ಅದರ ಪಕ್ಕ ಬಲಕ್ಕೆ ತಿರುಗಿ ಮುಂದೆ ಹೋದರೆ ಹೋಳಿಗೆ ಮನೆ ಅದರಿಂದ ಎರಡನೇ ರಸ್ತೆಯಲ್ಲಿ ತಿರುಗಿದರೆ ಮುಂದೆ ಪಿಜ್ಜಾ ಹಟ್…” ಹೀಗೆ ಮುಂದುವರಿಯುತ್ತದೆ. ಅವರು ಊರಿನ ಎಲ್ಲಾ ಊಟದ ಜಾಗಗಳಿಗೂ ಭೇಟಿ ಕೊಟ್ಟಿದ್ದಾರೆ. ನಮ್ಮ ತಂದೆಯವರನ್ನು ಕೇಳಿದರೆ ನ್ಯಾಷನಲ್ ಕಾಲೇಜ್ ರಸ್ತೆಯಲ್ಲಿ ಹೋಗಿ ಪಂಪ ಮಹಾಕವಿ ರಸ್ತೆಯಲ್ಲಿ ಎಡಕ್ಕೆ ತಿರುಗಿ ಅಲ್ಲಿಂದ ಮುಂದೆ ಶಂಕರ ಮಠದ ರಸ್ತೆ ಕಡೆ, ಎಡಕ್ಕೆ ತಿರುಗುವ ಜಾಗದಲ್ಲಿ…” ಈ ರೀತಿ ಹೇಳುತ್ತಾರೆ. ಅವರಿಗೆ ಊರಿನ ಪ್ರತಿಯೊಂದು ರಸ್ತೆಯ ಹೆಸರು ತಿಳಿದಿದೆ ನಮಗೆ ರಸ್ತೆಯ ಹೆಸರು ತಿಳಿದಿರಬೇಕು ಏಕೆಂದರೆ ಎಲ್ಲಾ ರಸ್ತೆಯ ಫಲಕಗಳು ಇರುತ್ತವೆ ಎಂದು ಏನು ಖಾತರಿ ಇಲ್ಲ. ಇನ್ನೊಬ್ಬರು “ ಸೀದಾ ಹೋಗಿ ಮೂರನೇ ರಸ್ತೆಯಲ್ಲಿ ಎಡಕ್ಕೆ ತಿರುಗಿ ಅಲ್ಲಿಂದ ನಾಲ್ಕನೇ ರಸ್ತೆಯಲ್ಲಿ ಬಲಕ್ಕೆ ತಿರುಗಿ ಒಂದು ಕವಲು ಬರುತ್ತದೆ ಅಲ್ಲಿ ಬಲಕ್ಕೆ ಹೋಗಿ ನಾಲ್ಕನೇ ರಸ್ತೆ…” ಹೀಗೆ ಕೇವಲ ರಸ್ತೆಗಳನ್ನಷ್ಟೇ ಹೇಳಬಹುದು. ಒಟ್ಟಿನಲ್ಲಿ ದಾರಿ ಹೇಳುವವರು ತಮಗೆ ತಿಳಿದಿರುವ ರೀತಿಯಲ್ಲಿ ನಿಮಗೆ ವಿವರಿಸುತ್ತಾರೆ. ಅದಕ್ಕಾಗಿಯೇ ಪುರಂದರದಾಸರು “ದಾರಿಯಾವುದಯ್ಯ ವೈಕುಂಠಕ್ಕೆ ದಾರಿ ಯಾವುದಯ್ಯ “ಪುರಂದರ ವಿಠಲನನ್ನೇ ಮೊರೆ ಹೋದರು.
ದಾರಿ ಪದಕ್ಕೆ ಹಲವಾರು ಸಮನಾರ್ಥಕ ಪದಗಳಿವೆ ಅವುಗಳನ್ನು ನಮ್ಮ ಕರ್ನಾಟಕದ ವಿವಿಧ ಭಾಗದ ಜನ ವಿಶೇಷವಾಗಿ ಬಳಸುತ್ತಾರೆ. ಉದಾಹರಣೆಗೆ ಉತ್ತರ ಕರ್ನಾಟಕದವರು ‘ಹಾದಿ’ ಎಂದರೆ ಮಂಗಳೂರಿನ ತುಳು ಭಾಷೆಯಲ್ಲಿ ಅದು ‘ಸೀದಿ’ ಆಗುತ್ತದೆ. ನಾವು ಬೆಂಗಳೂರಿನವರು ‘ದಾರಿ’ ಎಂದರೆ ಕೊಂಕಣಿಯಲ್ಲಿ ‘ವಾಟ್’ ಎನ್ನುತ್ತಾರೆ. ಹಳೆಗನ್ನಡದ ಕಾವ್ಯಗಳಲ್ಲಿ ದಾರಿಯನ್ನು “ಬಟ್ಟೆ” ಎನ್ನುತ್ತಾರೆ. ಹಾಗಾದರೆ ಈ ದಾರಿ ಪದ ಉದ್ಭವವಾಗಿದ್ದು ಹೇಗೆ ಎಂದು ನೋಡಿದರೆ, ಪ್ರಾಕೃತದಲ್ಲಿ ಒಟ್ಟು ಎನ್ನುವ ಶಬ್ದದಿಂದ. ಅದು ಮರಾಠಿಯಲ್ಲಿ ವಾಟ್ ಎಂದು ಹೇಳಲ್ಪಡುತ್ತದೆ. ಈ ಪದ ಕನ್ನಡಕ್ಕೆ ಬಂದು ಬಟ್ಟೆ ಯಾಗಿ ಅದರಿಂದ ದಾರಿಯಾಗಿದೆ. ದಾರಿಯ ಇನ್ನೊಂದು ಪರ್ಯಾಯ ಪದ ಮಾರ್ಗ. ಪಾ ವೆಂ. ಆಚಾರ್ಯ ಅವರು ಪದಾರ್ಥ ಚಿಂತಾಮಣಿಯಲ್ಲಿ ಹೀಗೆ ದಾಖಲಿಸಿದ್ದಾರೆ.
” ಅರಣ್ಯದಲ್ಲಿ ಪ್ರಾಣಿಗಳು ಸಂಚರಿಸಿ ಮಾಡಿಕೊಂಡ ಕಾಲು ದಾರಿಯೇ ಮೂಲತಃ ಮಾರ್ಗ. ಸಂಸ್ಕೃತದ ನಿವೃತ್ತಿಕಾರರ ಪ್ರಕಾರ ಮೃಗ್ ಧಾತುವಿನಿಂದ ಮೃಗ ಪದ ಹುಟ್ಟಿದೆ. ಮಾರ್ಗ ಎಂದರೆ ಹುಡುಕು ಯತ್ನಿಸು ಎಂದು. ಇದರಿಂದ ಬಂದುದು ಮಾರ್ಗ. ಅಡವಿಯಲ್ಲಿ ಬೇಟೆಗಾರರು ಪ್ರಾಣಿಗಳನ್ನು ಹುಡುಕಿ ಹೊರಟ ಮಾರ್ಗ. ದಾರಿ ಎಂಬ ಅರ್ಥವುಳ್ಳ ಹೆಚ್ಚು ಕಡಿಮೆ ಎಲ್ಲಾ ಸಂಸ್ಕೃತ ಶಬ್ದಗಳು (ಪಥ ಪದವಿ) ಸಂಪ್ರದಾಯ, ರೀತಿ ಎನ್ನುವ ಅರ್ಥವನ್ನು ಪಡೆದಿದೆ”. ಹಳೆಗನ್ನಡದ ಶಬ್ದ ವರ್ತ್ಮಾ ಎಂಬುದಕ್ಕೆ ಕಣ್ಣೂರಪ್ಪೆ, ಹಾದಿ, ಉಡುಪು, ವಸ್ತ್ರ, ದಾರಿ, ಸುತ್ತುವರದು ಮುಂತಾದ ಹಲವಾರು ಅರ್ಥಗಳಿವೆ.
ದಾರಿಯನ್ನು ಅಷ್ಟು ಗಂಭೀರವಾಗಿ ಅರ್ಥೈಸಿದ್ದಕ್ಕೆ ಗಾಬರಿ ಪಡಬೇಡಿ. ದಾರಿಯ ಬಗ್ಗೆ ಹಲವಾರು ಹಾಸ್ಯಗಳು ಕುಚುತೆಗಳು ಇವೆ. ಒಬ್ಬ ಪ್ರಯಾಣಿಕ ತಾನು ಸಾಗುತ್ತಿರುವ ದಾರಿ ತನಗೆ ಹೋಗಬೇಕಾದ ಊರಿಗೆ ತಲುಪತ್ತದೆಯೋ ಇಲ್ಲವೋ ಎಂದು ಸಂದೇಹವಾಗಿ ಅಂಗಡಿಯವನನ್ನು ವಿಚಾರಿಸುತ್ತಾನೆ “ ಸ್ವಾಮಿ ಈ ದಾರಿ ಈ ದಾರಿ ಎಲ್ಲಿಗೆ ಹೋಗುತ್ತದೆ?” ಅಂಗಡಿಯವ ಎಲ್ಲೂ ಹೋಗುವುದಿಲ್ಲ ಇದ್ದಲ್ಲೇ ಇರುತ್ತದೆ”!!. ಇನ್ನೊಂದು ಮೊಬೈಲ್ ನಲ್ಲಿ ಬಂದ ನೂಕಲಿನ(forward) ಹಾಸ್ಯ; ಒಬ್ಬ ಮನುಷ್ಯ ಆಸ್ಪತ್ರೆಗೆ ದಾರಿಯನ್ನು ತಿಳಿಯಲು ಒಬ್ಬ ಹೆಂಗಸನ್ನು ಕೇಳುತ್ತಾನೆ. ಅವಳು ಮುಂದೆ ಒಂದು ದೊಡ್ಡ ಲಾರಿ ಬರ್ತಾ ಇದೆಯಲ್ಲ ಅದರ ಮುಂದಕ್ಕೆ ಹೋಗು ಜನರೇ ನಿನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ” ಇದು ದಾರಿ ತೋರಿಸುವ ವಿಚಿತ್ರ ವಿಧಾನ. ಇನ್ನೊಂದು ಸಂಗತಿ ಎಂದರೆ ಗಂಡಸರು ದಾರಿಯನ್ನು ಕೇಳುವುದಿಲ್ಲ ಎನ್ನುವುದು. ಅದು ಅವರ ಆತ್ಮ ಗೌರವಕ್ಕೆ ದೊಡ್ಡ ಪೆಟ್ಟು. ತಾವು ಹೋಗುತ್ತಿರುವ ದಾರಿ ಬೇಕಾದ ಕಡೆ ತಲುಪೆ ತಲುಪುತ್ತದೆ ಎನ್ನುವ ಅದಮ್ಯ ವಿಶ್ವಾಸದಿಂದ ಅವರು ಮುಂದುವರೆಯುತ್ತಾರೆ.
ಜೊತೆಯಲ್ಲಿರುವ ಹೆಂಗಸರು ಒಂದು ಸಲ ಕೇಳಿಬಿಡೋಣ ಎಂದು ಎಷ್ಟು ಹೇಳಿದರು ಅವರು ಒಪ್ಪುವುದೇ ಇಲ್ಲ. ಕೊನೆಗೆ ಎಲ್ಲಿಗೆ ತಲೆಪುತ್ತಾರೆ ಎನ್ನುವುದು ಪ್ರಶ್ನಾರ್ಥಕ?
ದಾರಿಯ ಬಗ್ಗೆ ಹಲವಾರು ಗಾದೆ ಮಾತು ನಾಲ್ನುಡಿಗಳು ಸಹಾ ಇವೆ. ಬಲವಾದವನು ಅಥವಾ ಹಣವುಳ್ಳವನು ಏನು ಬೇಕಾದರೂ ಮಾಡಬಹುದು ಯಾರಿಗೂ ಕೇಳಲು ಧೈರ್ಯ ಇರುವುದಿಲ್ಲ ಎನ್ನುವುದನ್ನು ಸೂಚಿಸುವ “ಆನೆ ನಡೆದದ್ದೇ ದಾರಿ” ಎನ್ನುವ ಗಾದೆ. ಹಾಗೆಯೇ ಮನಸ್ಸಿದ್ದರೆ ಮಾರ್ಗ ಎನ್ನುವ ಗಾದೆ ಮಾತು ಎಲ್ಲರೂ ತಿಳಿದಿರುವಂತೆ ನಾವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳುತ್ತದೆ. ದಾರಿ ತಪ್ಪಿದ ಎನ್ನುವ ನಾಳ್ನುಡಿಯ ಮಾತಿಗೆ ತನ್ನಗಮ್ಯವನ್ನು ತಲುಪುವ ದಾರಿ ತಪ್ಪಿದ ಎಂಬುದಷ್ಟೇ ಅಲ್ಲದೆ ಕೆಟ್ಟ ಜಾಳಿಗೆ ಬಿದ್ದ ಅಥವಾ ಕೆಟ್ಟ ಕೆಲಸ ಮಾಡಿ ಜೀವನದ ದಾರಿ ತಪ್ಪಿದ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ. ಬಂದ ದಾರಿಗೆ ಸುಂಕವಿಲ್ಲ ಎನ್ನುವುದು ಸಹ ಪ್ರಚಲಿತ ನಾಳ್ನುಡಿ. ಯಾವುದಾದರೂ ಕೆಲಸಕ್ಕಾಗಿ ಹೋಗಿ ಅಲ್ಲಿ ಭೇಟಿಯಾಗಬೇಕಾದವರು ಇಲ್ಲದೆ ಇದ್ದಾಗ ಅಥವಾ ಅಂದುಕೊಂಡ ಕೆಲಸ ಆಗದಿದ್ದಾಗ ಈ ನಾಳ್ನುಡಿಯನ್ನು ನೆನಪಿಸಿಕೊಳ್ಳುತ್ತಾರೆ.
ಹಾಗೆಯೇ ಜೀವನವನ್ನು ಸರಿಯಾಗಿ ನಡೆಸಲು ತೋರಿಸಿದ ವ್ಯಕ್ತಿಗೆ ದಾರಿ ದೀಪವಾದರೂ ಎಂದು ಹೊಗಳಿದರೆ ಕಷ್ಟ ಕಾರ್ಪಣ್ಯಗಳನ್ನು ಮುಕ್ತಿಯನ್ನು ಪಡೆಯಲು ಸಲಹೆ ನೀಡಿದಾಗ ಅವರಿಗೆ ದಾರಿ ತೋರಿಸಿದವರು ಎಂದು ಗೌರವಿಸುತ್ತೇವೆ. ದಾರಿಗೆ ಬಿದ್ದ ಎಂದಾಗ ತನ್ನ ಸರ್ವಸ್ವವನ್ನು ಕಳೆದುಕೊಂಡ ಎನ್ನುವ ಅರ್ಥ ಬರುತ್ತದೆ. ಮುಂದೇನು ಮಾಡುವುದು ಎಂದು ತಿಳಿಯದಾದಾಗ ನಮಗೆ ದಾರಿ ತೋರದಂತಾಗುತ್ತದೆ ಅಲ್ಲವೇ?
ದಾರಿಯ ಬಗ್ಗೆ ಸಾಹಿತ್ಯದಲ್ಲಿ ಹಲವಾರು ಉಲ್ಲೇಖಗಳು ಸಿಗುತ್ತವೆ. ಸಾಮಾನ್ಯವಾಗಿ ಎಲ್ಲಾ ಕಥೆಗಳ ತಿರುಳು ಒಂದಲ್ಲ ಒಂದು ರೀತಿಯಲ್ಲಿ ಕಳೆದು ಹೋಗುವುದು ದಾರಿಯನ್ನು ಹುಡುಕುವುದೇ ಆಗಿರುತ್ತದೆ. ರಾಮಾಯಣದಲ್ಲಿ ವಾನರಸೇನೆ ಸೀತಾದೇವಿಯನ್ನು ಹುಡುಕುತ್ತಾ ಹೊರಟಾಗ ಜಟಾಯುವಿನ ಅಣ್ಣನಾದ ಸಂಪಾದಿ ಅವರಿಗೆ ರಾವಣ ಹೋದೆ ದಿಕ್ಕನ್ನು ತೋರಿಸಿ ಉಪಕಾರ ಮಾಡಿದನು. ಕಾಳಿದಾಸನ ಮೇಘದೂತ ದಾರಿ ತೋರುವುದಕ್ಕೆ ಅತ್ಯುತ್ತಮವಾದ ಉದಾಹರಣೆ. ಇದರಲ್ಲಿ ಯಕ್ಷನು ಮೇಘಗಳಿಗೆ ತನ್ನ ಪ್ರಿಯತಮ ಇರುವ ಸ್ಥಳಕ್ಕೆ ಹೋಗಿ ಅವಳಿಗೆ ಪ್ರೇಮ ಸಂದೇಶವನ್ನು ನೀಡಲು ಹಿಮಾಲಯದಿಂದ ಅಲಕಾ ಪಟ್ಟಣಕ್ಕೆ ಹೋಗಲು ದಾರಿಯನ್ನು ಹೇಳಿ ಅದರೊಂದಿಗೆ ಅಲ್ಲಿ ಏನೇನು ಪ್ರೇಕ್ಷಣೀಯ ಸ್ಥಳಗಳಿವೆ ಅದರಲ್ಲಿ ಏನೇನು ವಿಶೇಷಗಳಿದೆ ಎಂದು ಸಹ ವಿವರಿಸುತ್ತಾನೆ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ “ ಬಾನುಳೊರುವುದೇ ಪಕ್ಷಿ ಪಾರ್ವತ ನಕ್ಷೆ, ಮೀನು ನೀರುಳು ನುಸುಳೆ ಪಥ ನಿಯಮವಿಹುದೇ” ಎಂದು ಬಾನಿನಲ್ಲಿ ಹಾರುವ ಹಕ್ಕಿಗಳಿಗೆ ಒಂದು ನಕ್ಷೆ ಇಲ್ಲ, ಮೀನಿಗೆ ನೀರಿನಲ್ಲಿ ಮುಸುಳಿದಾಗ ದಾರಿ ಇಲ್ಲ. ಹಾಗೆಯೇ ಪರಬ್ರಹ್ಮನು ಸೂತ್ರವನ್ನು ಹಿಡಿದು ಎಳೆದಂತೆ ನೀನು ನಡೆಯುತ್ತಿರುವೆ ಎಂದು ನಮಗೆ ಸುಂದರವಾದ ಉಪಮೇಗಳೊಂದಿಗೆ ವಿವರಿಸಿದ್ದಾರೆ.
ಇನ್ನು ರಾಬರ್ಟ್ ಫ್ರಾಸ್ಟ್ ಎನ್ನುವ ಇಂಗ್ಲಿಷ್ ಕವಿ ತನ್ನ ಜೀವನದ ಕವಲು ದಾರಿಯಲ್ಲಿ ನಿಂತು ಬರೆದ “ದ ರೋಡ್ ನಾಟ್ ಟೇಕನ್” ಎನ್ನುವ ಪದ್ಯ ಅವನ ಜೀವನದ ದ್ವಂದ್ವವು,
ನಮ್ಮ ಜೀವನ ಪರಿಸ್ಥಿತಿಯ ಬಗ್ಗೆಯೇ ಬರೆದಿದ್ದಾರೆ ಎಂಬಂತಿದೆ. ಅದು ಶಾಲೆಯ ದಿನಗಳಲ್ಲಿ ಓದಿದ್ದಾದರೂ ಜೀವನದ ದ್ವಂದ್ವದ ಕ್ಷಣಗಳಲ್ಲಿ ನೆನಪಿಗೆ ಬರುತ್ತಿರುತ್ತದೆ. ಸಿಕ್ಕಾಲರ ಮೂರು ದಾರಿಗಳು ಕಾದಂಬರಿಯನ್ನು ಇಲ್ಲಿ ಸ್ಮರಿಸಬಹುದು. ಇದರಲ್ಲಿ ಒಂದು ಘಟನೆಗೆ ಸಂಬಂಧಿಸಿದ ಮೂರು ವ್ಯಕ್ತಿಗಳು ಅದಕ್ಕೆ ಹೇಗೆ ಪ್ರತಿಕ್ರಿಯೆಸುತ್ತಾರೆ ಎನ್ನುವುದನ್ನು ತೋರಿಸಿದ್ದಾರೆ. ಮೂರು ವ್ಯಕ್ತಿಗಳು ಮೂರು ಬೇರೆ ದಾರಿಗಳನ್ನೇ ಹಿಡಿಯುತ್ತಾರೆ. ಕನ್ನಡದಲ್ಲಿ ಇತ್ತೀಚಿನ ಸಮಯದಲ್ಲೂ ದಾರಿಯ ಬಗ್ಗೆ ಹಲವಾರು ಕಥೆ ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಅದರಲ್ಲಿ ಗಮನ ಸೆಳೆಯುವುದು ವಸುದೇಂದ್ರ ಅವರ ರೇಷ್ಮೆ ಬಟ್ಟೆ. ಹಳೆಗನ್ನಡದ ದಾರಿಯಾಗಿಯೂ ಮತ್ತು ರೇಷ್ಮೆಯ ವಸ್ತ್ರವಾಗಿಯೂ ಎರಡು ರೀತಿಯಲ್ಲಿ ಬಟ್ಟೆಯನ್ನುವ ಪದವನ್ನು ಬಳಸಿ ಹಿಂದಿನ ಸಿಲ್ಕ್ ರೂಟ್ ಮಾರ್ಗ ಮತ್ತು ವ್ಯಾಪಾರಗಳ ಬಗ್ಗೆ ಬರೆದ ಕಾದಂಬರಿ.
ಗ್ರೀಕ್ ಪುರಾಣದಲ್ಲಿ ಗುಹೆಗಳ ಸಿಕ್ಕುದಾರಿ (maze) ಒಳಗೆ ಕಳೆದು ಹೋಗಬಾರದೆಂದು ಒಬ್ಬ ಮನುಷ್ಯನು ಒಂದು ದಾರದ ಉಂಡೆಯನ್ನು ಹಿಡಿದು ಹೋಗಿ ತನ್ನ ಕೆಲಸ ಮುಗಿದ ಮೇಲೆ ಅದರ ಸಹಾಯದಿಂದ ಆ ಗುಹೆಗಳಿಂದ ಹೊರಗೆ ಬರಲು ದಾರಿ ಕಂಡುಕೊಂಡ ಕಥೆ ಬರುತ್ತದೆ. ನಮ್ಮ ಜಾನಪದ ದವರು ದಾರಿ ತೋರುವದರಲ್ಲಿ ಹಿಂದೆ ಬಿದ್ದಿಲ್ಲ. ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ ಎನ್ನುವ ಹಾಡಿನಲ್ಲಿ ಮುತ್ತೈದೆ ಹೆಣ್ಣು ತನ್ನ ತಾಯಿಗೆ ಬಳೆ ಎಂದರೆ ತುಂಬಾ ಇಷ್ಟ ಅವಳಿಗೆ ಬಳೆಗಳನ್ನು ತೊಡಿಸು ಎಂದು ಬಳೆಗಾರನಿಗೆ ಕೇಳುತ್ತಾಳೆ. ಅವನು ತಾಯಿಯ ಮನೆಗೆ ದಾರಿ ಹೇಳು ಎಂದಾಗ ಹಾಡಿನ ಮುಖ್ಯನ ಯಾವ ದಾರಿಯಲ್ಲಿ ಹೋಗಬೇಕು ಎಂದು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ನನ್ನ ಅನುಭವವನ್ನು ಹೇಳುವುದಾದರೆ ಹೊಸದಾಗಿ ಮದುವೆಯಾಗಿ ಹೋದಾಗ ನನ್ನ ಪತಿಯ ಊರಿನಲ್ಲಿ ಒಂದು ಆರತಕ್ಷತೆಯನ್ನು ಆಯೋಜಿಸಿದ್ದರು. ಅದು ಒಂದು ದೇವಸ್ಥಾನದ ಪಕ್ಕದ ಸಭಾಂಗಣ. ಹೆಚ್ಚು ಜನಕ್ಕೆ ಅದು ತಿಳಿದಿರಲಿಲ್ಲ. ಮದುವೆ ಹುಡುಗ ಪೂರ್ತಿ ಸಮಯ ಮೊಬೈಲ್ ಹಿಡಿದು ಸಭಾಂಗಣಕ್ಕೆ ಬರುವವರಿಗೆ ದಾರಿಯನ್ನು ವಿವರವಾಗಿ ಹೇಳುತ್ತಿದ್ದರು. ಬಂದು ನಮಗೆ ಶುಭ ಹಾರೈಸಿದ ನಂತರವೂ ದಾರಿಯದೇ ಮಾತು. “ ಅಲ್ಲಿಂದ ಯಾಕೆ ಬಂದೆ ಹೀಗೆ ಬರಬಹುದು ಅದು ತುಂಬಾ ದೂರ” ಇತ್ಯಾದಿ ಇತ್ಯಾದಿ; ನಾನು ಅಲ್ಲಿ ನಿಂತು ಈ ದಾರಿಯ ಉಪಟಳದಿಂದ ಪಾರಾಗುವ ಮಾರ್ಗ ಎಂತಯ್ಯ ಎಂದು ಯೋಚಿಸುತ್ತಿದೆ.
ನಮ್ಮ ಸಂಬಂಧಿಕರು ಪರ ಅನುಭವ. ಅವರು ಡಾರ್ಜಲಿಂಗ್ ಗೆ ಕಾರಿನಲ್ಲಿ ಹೋಗಿದ್ದರಂತೆ. ಪಕ್ಕದಲ್ಲಿ ರೈಲಿನ ಹಳ್ಳಿಗಳು ಹೋಗುತ್ತಿದ್ದನ್ನು ಕಂಡು “ ಮೇಲೆ ಸಪ್ನನೊಂಕೆ ರಾಣಿ ಕಬ್ ಆಯೆಗೀ ತೂ” ಎಂದು ತಮ್ಮ ಯವ್ವನ ದಿನಗಳ ಕನಸು ಕಾಣುತ್ತಾ ಆಡುತ್ತಾ ದಾರಿಯತ್ತ ಗಮನ ಕೊಡದೆ ತಪ್ಪು ದಾರಿಯಲ್ಲಿ ನಾಲ್ಕು ಐದು ಕಿಲೋಮೀಟರ್ ಹೋಗಿ ಕನಸಿನಿಂದ ಹೆಚ್ಚೆತ್ತು ಮತ್ತೆ ಸರಿದಾರಿಗೆ ಹಿಂದಿರುಗಿದರಂತೆ.
ಇನ್ನು ಈಗ ತಾನೆ ಕಾರು ಕಾಡಿ ನಡೆಸಲು ಕಲಿಯುವ ಅಷ್ಟಾದಶಿಯರ ಅವಣೆಯಂತೂ ಹೇಳತೀರದು. ಅವರಿಗೆ ಎಲ್ಲಾ ರಸ್ತೆ ಎಲ್ಲಾ ಫ್ಲೈ ಓವರ್ ಗಳು ಒಂದೇ ರೀತಿ ಕಂಡು ನಾವು ಎಲ್ಲಿದ್ದೀವಿ ಎಂದೇ ಗೊಂದಲವಾಗುತ್ತದೆ. ಅವರಿಗೆ ಗಾಡಿ ಕೊಟ್ಟರೆ ಯಾವ ದಾರಿಯಲ್ಲಿ ಹೋಗಿ ಯಾವ ಜಾಗ ತಲುಪುತ್ತಾರೋ ದೇವರೇ ಬಲ್ಲ!! ಅದೇ ಯುವಕರಿಗೆ ಆ ತೊಂದರೆ ಇಲ್ಲ ಅದು ಹೇಗೋ ಅವರಿಗೆ ಎಲ್ಲಾ ರಸ್ತೆಗಳು ತಿಳಿದು ಬಿಟ್ಟಿರುತ್ತದೆ.
ಇಷ್ಟೆಲ್ಲಾ ದಾರಿಯ ಬಗ್ಗೆ ಇದ್ದಾಗ ಸಿನಿಮಾಗಳನ್ನು ಕರೆಯಲಾಗುತ್ತದೆಯೇ? ದಾರಿಯ ಬಗ್ಗೆ ಕಥೆಗಳೂ ಹಾಡುಗಳೂ ಬಂದಿದೆ. ಸರ್ವೇಸಾಮಾನ್ಯ ದಾರಿಯ ಕಥೆ ಎಂದರೆ ಒಟ್ಟಿಗೆ ಹೊರಟ ಯುವಕ ಯುವತಿಯರು ಪ್ರಾರಂಭದಲ್ಲಿ ಕಿತ್ತಾಡಿ ಗ್ರಮ್ಯವನ್ನು ತಲುಪುವ ವೇಳೆಗೆ ತಮ್ಮ ಪ್ರೇಮದ ಪ್ರಯಾಣವನ್ನು ಆರಂಭಿಸಿರುತ್ತಾರೆ.
ಹಾಗೆ ದಾರಿಯಲ್ಲಿರುವ ದೆವ್ವ ಭೂತ ಭಯಾನಕ ಜಾಗಗಳು ಕಳ್ಳರು ಎಲ್ಲವೂ ಕುತೂಹಲಕಾರಿಯಾಗಿ ಸಿನಿಮಾದಲ್ಲಿ ಒಳಗೊಂಡಿರುತ್ತದೆ. ಅಷ್ಟೇ ಅಲ್ಲ ದಾರಿಯಲ್ಲಿ ನಡೆಯುವ ಹೊಡೆದಾಟ ಅದರಿಂದ ಪಚ್ಚಿಯಾಗುವ ವಾಹನಗಳು ಒಂದು ಕಡೆಯಾದರೆ ಹೀರೋ ಮತ್ತು ಖಳನಾಯಕರ ಚೇಸ್ ನ ಮಜವೇ ಮಜ! ಎಲ್ಲಾ ಸಿನಿಮಾದಲ್ಲೂ ಹೃದಯ ಬಡಿತ ಹೆಚ್ಚಿಸುವ ಕಾರುಗಳ ಚೇಸ್ ಅವುಗಳ ಉರುಳಾಟ ಇರಲೇಬೇಕು. ಅದರಲ್ಲಿಯೂ ಹಾಸ್ಯವನ್ನು ತಂದಿರುವ ನನ್ನ ಮೆಚ್ಚಿನ ರಾಜಕುಮಾರ್ ನ
ಭಾಗ್ಯದ ಲಕ್ಷ್ಮಿ ಬಾರಮ್ಮ ಸಿನಿಮಾದ ಕಾರನ್ನು ಬೆನ್ನಟ್ಟುವಿಕೆ ಅಲ್ಲಿ ನಡೆಯುವ ಹಾಸ್ಯ ಘಟನೆಗಳನ್ನು ನೋಡಿಯೇ ಆನಂದಿಸಬೇಕು. ಹಾಗೆ ದಾರಿಯ ಹೆಸರಿನ ಸಿನಿಮಾ ಬಯಲುದಾರಿ ಕವಲುದಾರಿ ಮುಂತಾದವು ಕನ್ನಡದ್ದಾದರೆ ದೋ ರಾಸ್ತೆ, ರಾಸ್ತೇ ಕೀ ಫತರ್ ಮುಂತಾದವು ಹಿಂದಿಯಲ್ಲಿ ಬಂದಿದೆ. ಇಂಗ್ಲೀಷ್ ನಲ್ಲು ಈ ರೀತಿಯ ಹಲವಾರು ಸಿನಿಮಾಗಳು ಬಂದಿದೆ. ಪುಸ್ತಕದಿಂದ ಬೆಳ್ಳಿ ತೆರೆಗೆ ಬಂದ ರೋಡ್ ಟು ಎಲ್ಡರಾಡೋ ಸಿನಿಮಾದಲ್ಲಿ ಚಿನ್ನದ ನಾಡನ್ನು ಹುಡುಕಿಕೊಂಡು ಹೋಗುತ್ತಾರೆ. ಹಲವಾರು ಹಾಡುಗಳು ರಸ್ತೆ ರಸ್ತಾ, ರಾಸತೇ ಎಂದು ಪ್ರಾರಂಭವಾಗಿ ದಾರಿ ಮತ್ತು ಜೀವನವನ್ನು ಸಮೀಕರಿಸುತ್ತವೆ. ಅಭಿಲಾಷ ಸಿನಿಮಾಗೆ ಮಹಮ್ಮದ್ ರಫಿ ಅವರು ಹಾಡಿರುವ ವಾದಿಯಾ ಮೇಲೆ ದಾಮನ್ ರಾಸತೇ ಮೇರೆ ಬಾಹೇ ಹಾಡಿನಲ್ಲಿ ಮಜರೂ ಸುಲ್ತಾನ್ ಪುರಿ ಅವರು ಬೆಟ್ಟಗಳು ಹಾಗೂ ರಸ್ತೆಗಳನ್ನು ಪ್ರಿಯತಮನ ದೇಹ ಮತ್ತು ಕೈಗಳಿಗೆ ರೂಪಕವಾಗಿ ಬಳಸಿ ಅತ್ಯುತ್ತಮವಾದ ಗೀತೆಯನ್ನು ರಚಿಸಿದ್ದಾರೆ. ಅದು ಎಂದಿಗೂ ನೆನಪಿನಲ್ಲಿ ಹಚ್ಚು ಹಸಿರಾಗಿ ಉಳಿಯುವ ಗೀತೆ.
ಇತ್ತೀಚೆಗೆ ಗೂಗಲ್ ಮ್ಯಾಪ್ ಮತ್ತು ಜಿಪಿಎಸ್ ಬಂದ ನಂತರ ದಾರಿ ಯಾವುದೇ ಯಾರು ಯಾರನ್ನು ಕೇಳುವುದಿಲ್ಲ. ನಾವು ಹೋಗಬೇಕಾದ ಜಾಗದ ವಿಳಾಸ ಹಾಕಿದರೆ ಗೂಗಲ್ ತನ್ನ ಮಧುರ ಧ್ವನಿಯ ನಿರ್ದೇಶನವನ್ನು ನೀಡುತ್ತಾ ತಲುಪಬೇಕಾದ ಜಾಗಕ್ಕೆ ತಂದು ಬಿಡುತ್ತದೆ. ವಾಹನ ದಟ್ಟಣೆ ಅದರಿಂದಾಗಿ ನಾವು ಕಳೆದುಕೊಳ್ಳುವ ಸಮಯ ಯಾವ ರಸ್ತೆಯಲ್ಲಿ ಹೋದರೆ ಎಷ್ಟು ನಿಮಿಷ ಬೇಗ ತಲುಪಬಹುದು ಮುಂತಾದ ಮಾಹಿತಿಗಳನ್ನು ನೀಡುತ್ತದೆ. ಆದರೆ ಗೂಗಲ್ ನಲ್ಲಿ ನಂಬಿ ಹೋಗುವುದು ತೊಂದರೆಗೆ ಎಡೆ ಮಾಡಬಹುದು. ವಿಳಾಸ ಸರಿಯಾಗಿ ಹಾಕಿಲ್ಲದಿದ್ದರೆ ಗೂಗಲ್ ತಪ್ಪು ಜಾಗಕ್ಕೆ ಕರೆದೊಯುತ್ತದೆ. ಕೆಲವೊಮ್ಮೆ ಅತಿ ಬುದ್ಧಿವಂತಿಕೆಯಿಂದ ತೀರಾ ಸಣ್ಣ ರಸ್ತೆ ಕೆಟ್ಟದಾದ ರಸ್ತೆಯ ಮಾರ್ಗಗಳನ್ನು ಸೂಚಿಸುತ್ತದೆ. ಒಮ್ಮುಖ ರಸ್ತೆ ಬಗ್ಗೆ ಮಾಹಿತಿ ಇಲ್ಲದೆ ಹೋದಾಗ ಹೋಗಲು ಆಗದ ಜಾಗದಲ್ಲಿ ಬಲಕ್ಕೆ ತಿರುಗಿ ಎಂದು ಬಲವಂತ ಮಾಡುತ್ತದೆ. ಇಷ್ಟು ಸಾಲದಂತೆ ಸರಿಯಾಗಿ ನೋಡಾಗದಿದ್ದಾಗ ತಿರುಗಬೇಕಾದ ಜಾಗದಿಂದ ನಾವು ಮುಂದೆ ಹೋಗಿ ಮತ್ತೆ ಸುತ್ತಿಕೊಂಡು ಹಿಂದಿರುಗಿ ಬರಬೇಕಾಗುತ್ತದೆ. ಬೇಕಾಗಿಲ್ಲ ಮಾಹಿತಿಗಳನ್ನು ನೀಡುವುದರಲ್ಲೂ ಗೂಗಲ್ ಪ್ರಖ್ಯಾತ ಸೀದಾ ಹೋಗುತ್ತಿದ್ದಾಗ ಇನ್ನೂ ನೂರು ಮೀಟರ್ ಗಳಲ್ಲಿ ಸೀದಾ ಹೋಗಿ ಒಂದು ಕಿಲೋಮೀಟರ್ ನಂತರ ಸೀದಾ ಹೋಗಿ ಎಂದು ಮತ್ತೆ ಮತ್ತೆ ಹೇಳಿ ತಲೆ ತಿನ್ನುತ್ತದೆ.
ಒಮ್ಮೆ ನಾವು ಕನ್ಯಾಕುಮಾರಿಗೆ ಕಾರಿನಲ್ಲಿ ಹೋಗಿದ್ದೆವು. ನಮ್ಮ ಹೋಟೆಲ್ ಸಮುದ್ರದ ಹತ್ತಿರ ಇತ್ತು. ರಸ್ತೆ ತೋರಿಸುತ್ತಿದ್ದ ಗೂಗಲ್ ನಮ್ಮನ್ನು ಸಮುದ್ರದ ಒಳಗೆ ಕರೆದೊಯ್ಯುತ್ತಿತ್ತು. ನನ್ನ ಪತಿ “ ರಸ್ತೆ ಮುಗಿಯುತ್ತಿದೆ ಹೋಟೆಲ್ ಎಲ್ಲಿದೆ? ಸರಿಯಾಗಿ ನೋಡಿ ಹೇಳಿ” ಎಂದು ನಮ್ಮನ್ನೆಲ್ಲ ಹೆದರಿಸಿದರು. ಇನ್ನೊಂದು ಮೊಬೈಲ್ನ ಹಾಸ್ಯದಲ್ಲಿ ಸ್ಮಶಾನ್ಯದ ಪಕ್ಕದಲ್ಲಿ ಇದ್ದ ಮನೆಗೆ ಹೊರಟಿದ್ದ ವರಿಗೆ ಗೂಗಲ್ ಸ್ಮಶಾನದ ಬಳಿ “ನಿಮ್ಮ ಗಮ್ಯ ಸ್ಥಾನ ಬಂದಿದೆ” ಎಂದು ಹೇಳಿ ಹೆದರಿಸಿ ಬಿಟ್ಟಿತು. ಎಲ್ಲರ ಕೊನೆಯ ಜಾಗ ಅದೇ ಅಲ್ಲವೇ?
ಜೀವನವನ್ನು ಪ್ರಯಾಣ ಎಂದು ಕರೆಯುತ್ತಾರೆ ನಾವು ಎಷ್ಟೇ ಕಷ್ಟ ಬಂದರೂ ಈ ಪ್ರಯಾಣವನ್ನು ಕೊನೆಯವರೆಗೆ ಮುಂದುವರಿಸಲೇಬೇಕು. ಇಷ್ಟು ಹೇಳಿ ದಾರಿಯ ಬಗ್ಗೆ ಲೇಖನವನ್ನು ನಿಲ್ಲಿಸಿ ನನ್ನ ದಾರಿಯಲ್ಲಿ ಹೋಗುತ್ತೇನೆ, ದಾರಿಗಳಂತೆ ಇದು ಸಹ ಮುಂದುವರಿಯುತ್ತಲೇ ಇರುವ ವಿಷಯ!!
–ಅಂಬಿಕ ರಾವ್