‘ಲೈ ಮಂಜಾ, ಬಾರ್ಲಾ ಇಲ್ಲಿ ! ‘ ಅಯ್ಯನ ಕೂಗು. ಆಗಷ್ಟೇ ಸ್ಕೂಲಿಂದ ಕುಪ್ಪಳಿಸಿಕೊಂಡು ಬಂದ ನನ್ನ ಕಿವಿ ತಲುಪಿತು. ಒಂದೇ ಉಸುರಿಗೆ ನಡ್ಲುಮನೆಯಲ್ಲಿದ್ದ ಮಂಚದ ಮ್ಯಾಕೆ ಬ್ಯಾಗು ಎಸೆದವನೇ ಅಯ್ಯನ ಹತ್ತಿರ ಓಡೋಡಿ ಹೋದೆ. ನನಗೆ ಗೊತ್ತಿತ್ತು ಅಯ್ಯನ ಹತ್ರ ಹೋದ್ರೆ ಏನಾದ್ರೂ ಸಿಗುತ್ತೆ ಎಂದು. ‘ ಏನಯ್ಯಾ? – ಹೋಗ್ಬುಟ್ಟು ಭೋಜಯ್ಯನ ಅಂಗಡೀಲಿ ಒಂದು ಕಟ್ಟು ನಾಟಿ ಬೀಡಿ ತಗಬಾ ! ಎಂದು ಕೈಗೆ ಒಂದು ರೂಪಾಯಿ ಕೊಡ್ತು. ಒಂದು ರೂಪಾಯಿ ನೋಡಿ ನಿರಾಶೆಯಾಯಿತು. ಅಷ್ಟಕ್ಕೆ ಅಯ್ಯನ ನಾಟಿ ಬೀಡಿ ಮಾತ್ರ ಬರುತ್ತೆ , ನಂಗೆ ಕುರುಕಲು ತಿಂಡಿಗೆ ಏನೂ ಕೊಡ್ಲಿಲ್ಲವಲ್ಲ ಅಂಥ ಖೇದ ಆದರೂ ,, ಏನಾದ್ರೂ ಸಿಕ್ಕೇ ಸಿಕ್ಕುತ್ತೆ ಎಂಬ ಅರಿವಿತ್ತು.ಏಕೆಂದರೆ ಅಯ್ಯನ ಹೊಟ್ಟೆಯ ಮ್ಯಾಲೆ ಒಂದು ಜೇಬಿತ್ತು! ಒಂಥರಾ ಮಹಾಭಾರತದ ಅಕ್ಷಯಪಾತ್ರೆಯಂತೆ !!
ಸರೀ , ಎಂದು ತಲೆಬಾಗ್ಲು ದಾಟಿ , ರಾಡು ದಾಟಿ ಹೊರಹೋದವನಿಗೆ ಅಯ್ಯನ ಎಚ್ಚರಿಕೆ ಕೇಳಿಸ್ತು – ” ಅಲ್ಲೇ ತಗೊಂಡುಬಾ , ಬ್ಯಾರೇ ಅಂಗಡೀಲಿ ತರ್ಬಡ”. ಅದ್ಹೇಗೋ ಅಯ್ಯನಿಗೆ ಅಂಗಡಿ ಬದಲಾಯ್ಸುದ್ರೆ , ಬೀಡಿ ಹಚ್ಚಿದ ತಕ್ಷಣ ಗೊತ್ತಾಗಿಬಿಡುತ್ತಿತ್ತು . ಹೀಗೆಯೇ ಒಮ್ಮೆ ಬೇರೆ ಬೀಡಿ ತಂದುಕೊಟ್ಟು ಬೈಸಿಕೊಂಡಿದ್ದೆ. ಅದಾವ ವಿದ್ಯೆ ? ಅಯ್ಯನ ಸ್ಮೃತಿ ಪಟಲದಲ್ಲಿ ಅಡಗಿದೆ ಕರಾರುವಾಕ್ಕು ಕಂಡುಹಿಡ್ಯೋಕೆ ! ಅಯ್ಯ ಕಾಲಜ್ಞಾನಿಯೇ ? ಧ್ಯಾನ ಮಾಡಿ ಸಿದ್ಧಿ ಏನಾದ್ರೂ ಪಡೆದಿದ್ದರಾ ಅಂತಾ ಅನುಮಾನ!
ಭೋಜಯ್ಯನ ಅಂಗಡಿ ನಮ್ಮೂರಿಗೆ ಫೇಮಸ್.ದಢೂತಿ ಶರೀರದ , ದುಂಡು ಕನ್ನಡಕದ ಭೋಜಯ್ಯ ಪಕ್ಕದ ಹೊಸೂರಿನವರು.ಒಂದ್ಸಲ ಪೇಪರಲ್ಲಿ ಬಂದಿದ್ರು, ಗಂಟೆಗಟ್ಟಲೇ ಅದ್ಯಾವುದೋ ಕಲ್ಯಾಣಿಯಲ್ಲಿ ಹಿಂದುಕ್ ಮನಿಕಂಡು ಕೈಕಾಲು ಬಡಿಯದೇ ಈಜಿದ್ದರಂತೆ! ಒಂದ್ಸಲ ನಂಗೂ ಕಟ್ ಮಾಡಿ ಇಟ್ಕಂಡಿದ್ದ ಆರ್ಟಿಕಲ್ಲು ತೋರ್ಸಿದ್ರು. ಅವರ ಅಂಗಡಿ ನಾಲ್ಕು ಮರದ ಹಲಗೆಗಳ ಜೋಡಿಸಿ ಮಾಡಿದ್ದ ಒಂದು ಪೆಟ್ಟಿಗೆ.ಅಷ್ಟು ದೊಡ್ಡ ಶರೀರದ ಭೋಜಯ್ಯ, ಭ್ರೂಣ ಗರ್ಭದಲ್ಲಿ ಮಲಗುವಂತೆ ಹಾಯಾಗಿ ಅಷ್ಟಗಲದ ಅಂಗಡೀಲಿ ಮಲ್ಗೋದ ನೋಡುವುದೇ ಸೋಜಿಗ! ತರಹೇವಾರಿ ಮಕ್ಕಳ ತಿನಿಸು , ಗ್ವಾಂಬಳೆ ,ಖಾರ, ಗೆಜ್ಜುಣಸೇ ಹಣ್ಣಿನ ಚಮಚ ,ವಿಧವಿಧ ಪೆಪ್ಪರುಮೆಂಟು, ಕಡ್ಲೆಮಿಠಾಯಿ , ಆಲ್ಕೋವಾ, ಮ್ಯಾಕ್ ಎಸುದ್ರೆ ತಳಿಕ್ ಬಂದು ಠಪ್ ಅನ್ನುವ ರಾಕೆಟ್ ಪಟಾಕಿ , ಆಟಿಕೆಗಳು … ಇನ್ನೂ ದೊಡ್ಡೋರ್ಗೆ ನಾಟಿ -ಭಾಗ್ಯಲಕ್ಷ್ಮಿ – ಬರೀ ಲಕ್ಷ್ಮಿ- ಶಿರಾ ಬೀಡಿಗಳು ,, ವೀಳ್ಯದೆಲೆ , ಕಡ್ಡೀಪುಡಿ , ನಶ್ಯೆಡಬ್ಬ ,ಭಜೆ, ಗೋಟಡಕೆ , ೫ ರೂ ಫೇರ್ ಅಂಡ್ ಲವ್ಲಿ , ದಿನಸಿ ಸಾಮಾನುಗಳು…..ಹೀಗೆ ಮಿನಿ ಟಾಟ ಗ್ರೂಪಿನಂತೆ ಆ ಪುಟ್ಟಂಗಡಿ ತನ್ನೊಟ್ಟೆಯಲ್ಲಿ ಸಕಲವ ಅಡಗಿಸಿಕೊಂಡಿತ್ತು. ಭೋಜಯ್ಯ ಮತ್ತು ಅಂಗಡಿ ಊರ್ನೋರಿಗೆಲ್ಲಾ ಬೇಕಾದ ಅವಿಭಾಜ್ಯ ಅಂಗವಾಗಿದ್ದರು. ಸ್ಕೂಲಿನ ರೋಡಲ್ಲಿ, ಊರಿನ ಸರ್ಕಲ್ ಲಿ ಇದ್ದ ಅಂಗಡಿ ನಮ್ಮ ಇಸ್ಕೂಲುಮಕ್ಳ ಹಾಟ್ ಫೇವರೀಟಾಗಿತ್ತು !!
‘ ಏನ್ಲಾ ? ಕೆಂಗಯ್ಯ ಕಳ್ಸೀನಾ ? ‘ – ಹೂಂ.ನಾಟಿ ಬೀಡಿ ಕೊಡ್ಬಕಂತೆ ! ಕೈಚಾಚಿದರೆ ಸಾಕು ಯಾವ ವಸ್ತುವಾದರೂ ಭೋಜಯ್ಯನ ಬೆರಳಿಗೆ ಸುಲಭವಾಗಿ ಸಿಕ್ಕುತ್ತಿತ್ತು.ಒಂದೂ ರೂಗೆ ೮ ನಾಟಿಬೀಡಿ , ೨₹ ಗೆ ೧೬ ನಾಟಿಬೀಡಿಯ ಕಟ್ಟು! ಬೆಂಕಿಪಟ್ನ ತಾಂಡ್ರೆ ಎಂಟಾಣೆ ಎಕುಸ್ಟ್ರಾ. 3 ಹಲಗೆಯ ಮಡಚುವ ಬಾಗಿಲ ಮೇಲೆ ಆಗಲೇ ಹೊಸ ನಮೂನೆಯ ಬೆಳ್ಳುಳ್ಳಿ ಉಪ್ಪಿನಕಾಯಿ ಪ್ಯಾಕೀಟು! ನನ್ನಲ್ಲಿ ನೀರೂರಿಸುತ್ತಿತ್ತು. ದುಡ್ಡಿಲ್ಲದ ಕಾರಣ ಸುಮ್ಮನೆ ಕೊಟ್ಟ ಬೀಡಿ ಇಸ್ಕಂಡು ಮತ್ತೊಮ್ಮೆ ಹೊಸ ಐಟಂ ಕಡಿಕೆ ನೋಡಿ ಮನದಲ್ಲೇ ಚಪ್ಪರಿಸುತ್ತಾ ಮನೆಗೆ ಓಡಿದೆ.
ಮನೆಯು ಮೇನು ರೋಡಿಗೆ ಹತ್ರ ಇದ್ರೂ , ಮುಂಭಾಗದಲ್ಲಿ ವಿಶಾಲವಾದ ಜಾಗ. ಎಡ್ಗಡೆ ಬಾಗ್ಲು ಕೊಟ್ಪಿಗೆಗೆ , ಮಧ್ಯದ ಬಾಗ್ಲು ಸೀದಾ ರಾಡು , ಮಾವನ ರೂಮಿನಿಂದ ನಡ್ಲುಮನೆಗೆ ಸಾಗುತ್ತಿತ್ತು. ನಮ್ಮ ಮುತ್ತಾತ ಕುಂಟುಕಂಟಪ್ಪನಿಗೆ ಅಯ್ಯ ಹಿರಿಮಗನಂತೆ , ಅದಕ್ಕೆ ದೊಡ್ಡ ತಲೆಬಾಗಿಲ ಮನೆ ಪಾಲಿಗೆ ಬಂದಿದ್ದರೂ , ಅದನ್ನು ಬಿಟ್ಟು ಈ ಮನೆಯನ್ನೇ ತಗಂಡಿತ್ತು. ತಲೆಬಾಗ್ಲು ಮನೆ ಓಣಿಯಲ್ಲಿತ್ತು, ಅಲ್ಲಿಗೆ ಗಾಡಿ ಹೋತಿರಲಿಲ್ಲ! ಕಾಯಿ ಕೆಡವಿದ್ರೆ ಅಟ್ಟಕ್ಕೆ ಎಸೆಯಕೆ ಕಷ್ಟ ಆಗುತ್ತೇ ಅನ್ನೋ ಮುಂದಾಲೋಚನೆಯಲ್ಲಿ ಅಯ್ಯ ಈ ಮನೆ ಆಯ್ಕೆ ಮಾಡಿತ್ತಂತೆ!
ಅಯ್ಯ ಮಾವನಿಗೆ ವ್ಯವಾರ ವಯಿಸಿಕೊಟ್ಟಮೇಲೆ, ನಡ್ಲುಮನೆಯ ಬಲಮೂಲೆಯಲ್ಲಿದ್ದ ರೂಮಿಗೆ ಸೇರ್ಕಂಡಿತ್ತು. ಅದೋ ಕಿಟಕಿಯಿಲ್ಲದ ಗೌಗತ್ತಲಿನ ಕೋಣೆ. ಸೀಮೆಎಣ್ಣೆಯ ಪುಟ್ಟಿ ಹಚ್ಚುದ್ರೆ ಮಾತ್ರ ಅಷ್ಟಿಷ್ಟು ಬೆಳಕು.ದಿವಾನ್ ಕಾಟಿನ ಕೆಳಗೆ ನಿಧಿಯಂತೆ ರಕ್ಷಿಸಿಕೊಂಡು ಬಂದಿದ್ದ ಗತಕಾಲದ ಟ್ರಂಕಿತ್ತು. ನಡ್ಲುಕೋಣೇಲಿ ಇದ್ದ ಪಣತ ಹಾಳಾಗಿದ್ದರಿಂದ ಅಯ್ಯನ ರೂಮಿನಲ್ಲಿ ರಾಗಿ ಶೇಖರಿಸಲು ಒಂದು ಹೊಸ ನಮೂನೆಯ ತಗಡಿನ ವಾಡೆಯನ್ನು ಇಟ್ಟಿದ್ದೆವು. ಕರೆಂಟಿನ ಬಲ್ಪು ನಂಗ್ಬ್ಯಾಡ ಅಂದಿತ್ತು. ಒಂದರ ಹಿಂದೊಂದರಂತೆ ಬೀಡಿ ಸೇದಿ, ತುಂಡುಗಳ ಮತ್ತೊಮ್ಮೆ ಎಳೆಯಲು ಪಕ್ಕದಲ್ಲಿಟ್ಟುಕೊಂಡು , ಕೆಮ್ಮಿ , ಕ್ಯಾಕರಿಸಿ, ಅಲ್ಲೇ ಪಕ್ಕದಲ್ಲಿ ಇಟ್ಕಂಡಿದ್ದ ಚಿಪ್ಪಿನ ಒಳಗೆ ತೊಲ್ಟೆ ಉಗಿದು , ಮ್ಯಾಲೆ ಅಟ್ಟದ ಧೂಳು ಉದುರುತ್ತೆ ಅಂಥ ಟಾರ್ಪಲ್ ಕಟ್ಟಿದ್ದ ಅಯ್ಯನ ರೂಮು ಬ್ರಾಹ್ಮಣರ ಯಜ್ಞಶಾಲೆಯಂತೆ ಗೋಚರಿಸುತ್ತಿತ್ತು! ನಂಗಂತೂ ಕೌತುಕದ ಪ್ರಪಂಚದಂತೆ, ಮೇಷ್ಟ್ರು ಹೇಳುತ್ತಿದ್ದ ಸಮಾಜವಿಜ್ಞಾನದ ಕೋಟೆಯಂತೆ ಕುತೂಹಲ ಕೆರಳಿಸುತ್ತಿತ್ತು.
ಅಯ್ಯ ಅಂದ್ರೆ ನನ್ನ ತಾತ, ತಾಯಿಯ ಕಡೆಯಿಂದ.’ಅಯ್ಯ’ ಅಂತ ಯಾರು ಹೇಳ್ಕೊಟ್ರೋ ಗೊತ್ತಿಲ್ಲ. ಎಲ್ಲರೂ, ನನ್ನಮ್ಮ , ಮಾವ, ಅವ್ವ(ಅಜ್ಜಿ) , ಊರಿನೋರು ಅಯ್ಯ ಅಂತಲೇ ಕರೆಯೋರು. ಕುರಿಕಾಯೋ ಬಸವಣ್ಣ ಮಾತ್ರ ‘ದೊರೆ’ ಅನ್ನೋದು. ಆವಯ್ಯ ಬಂತೂಂದ್ರೆ ಅಯ್ಯನ ಮುಖ ಅರಳದು.ತನಗೆ ತಿಳಿದ ಮಟ್ಟಿಗೆ , ಕೈಲಾದಷ್ಟು ಇತರರಿಗೆ ಸಹಾಯ ಮಾಡಿ , ಯಾರೊಂದಿಗೂ ಜಗಳವಾಡದೆ(ಅಣ್ತಂಮ್ರ ಬಿಟ್ಟು) ತುಂಬುಜೀವನ ನಡೆಸಿತ್ತು.ಯುವಕನಾಗಿದ್ದಾಗ ಜೋಡಿ ಎತ್ತು ಹೊಡ್ಕಂಡು ಗಂಡಸಿ ಸಂತೆಯಿಂದ ಹಾವೇರಿಗೆ ಕಾಲ್ನಡಿಗೇಲಿ ಹೋದ್ರೆ ಹತ್ತು ರೂಪಾಯಿ ಕೊಡೋವ್ರಂತೆ. ೫-೬ ಜತೆ ಒಂದೇ ಸಲ ಮೂಗುದಾರಕ್ಕೆ ಪೋಣಿಸ್ಕ್ಯಂಡಂಗೆ ಆಕಡೆ ಅರ್ಧ, ಈಕಡೆ ಅರ್ಧ ಎತ್ತು ಕಟ್ಕ್ಯಂಡು , ಹುರ್ರಾss , ಉಫ್ ss ಎಂದು , ರಾತ್ರಿಯಾದರೆ ಸಿಕ್ಕಿದ ಊರಲ್ಲಿ ಮಲಗಿ ೪-೫ ದಿನದಲ್ಲಿ ಹಾವೇರಿ ತಲಪರಂತೆ.ವಾಪಾಸ್ಸು ಮೋಟಾರು ಬಸ್ಸು ಹಿಡಿದು ಬತ್ತಿದ್ದೆ ಎಂದು ಅಯ್ಯ ಆಗಾಗ ನೆನಪಿನಾಳಕ್ಕಿಳದು ಮೆಲುಕು ಹಾಕದು.ತುಂಬು ಕುಟುಂಬದ ಹೊರೆ ಹೊತ್ತಿದ್ದ ಅಯ್ಯ ಹತ್ರೂಪಾಯಿಗೆ ಇಡೀ ದಿವ್ಸ ಬೇರೆಯೋರ ಹೊಲ , ತ್ವಾಟ ಆರು ಹೊಡ್ಯದಂತೆ.ಹೀಗೆ ದುಡಿದ ಪರಿಣಾಮ ವಯಸ್ಸಾದ ನಂತ್ರ ಮಂಡಿ ನೋವು ಕಾಡುತ್ತಿತ್ತು , ಎಲ್ಡೂ ಮಂಡಿಗಳು ಕೂಡ್ಕ್ಯಂಡು ನಡೆಯುವ ಶೈಲಿಯೇ ವಿಚಿತ್ರವಾಗಿತ್ತು.ಉದ್ದನಿಲುವಿನ , ಪಳಪಳ ಹೊಳೆಯುವ ದೇವೇಗೌಡ್ರ ಬುಲ್ಡೆಯಂತಿತ್ತು ಅಯ್ಯನ ತಲೆ, ಕೆಂಪುಗೆ ಇದ್ದ ಅಯ್ಯ ಸಂಧ್ಯಾಕಾಲದಲ್ಲೂ ಕಣ್ಮನ ಸೆಳೆಯುವಂತಿತ್ತು.ಮಂಡಿನೋವು ಮತ್ತು ಬೀಡಿ ಸೇದುವುದರಿಂದ ಉಂಟಾಗುತ್ತಿದ್ದ ಎದೆಉರಿ ಬಿಟ್ಟರೆ ಅಯ್ಯ ಹುಷಾರು ತಪ್ಪಿರದೇ ನಾನು ನೋಡಿಲ್ಲ! ೮೦ ರ ಹರಯದಲ್ಲೂ ಹಲ್ಲು ಬಿದ್ದಿರಲಿಲ್ಲ, ಟಗರಿನ ಮೂಳೆಯ ಕಟಕಟನೆ ಕಡಿಯುವ ಶಕ್ತಿಯಿತ್ತು.
ತರಹೇವಾರಿ ವ್ಯಕ್ತಿತ್ವ ಹೊಂದಿದ್ದ ಅಯ್ಯನಿಗೆ ನಾಟಕದ ಹುಚ್ಚೂ ಇತ್ತು! ಒಂದ್ಸಲ ಜಮದಗ್ನಿ ಋಷಿಯ ವೇಷ ಧರಿಸಿ , ರಾಜಕುಮಾರನ ಬೆಳೆಸುವ ಪಾರ್ಟು ಮಾಡಿತ್ತು.ಜಾತ್ರೆಗೆ ಊರಿನವರು ಆಡುತ್ತಿದ್ದ ಪೌರಾಣಿಕ ನಾಟಕ ಎರಡ್ಮೂರು ತಿಂಗಳಿಂದಲೇ ತಯಾರಿ ಶುರುವಾಗುದು.ನಮ್ಮೂರಿನ ಅಂಗಡಿ ಮಲ್ಲಪ್ಪನೇ ನಾಟಕದ ಮೇಷ್ಟ್ರು, ಅವರ ಮನೆಯಲ್ಲಿ ನಡೆಯುತ್ತಿದ್ದ ಪ್ರಾಕ್ಟೀಸಿಗೆ ಅಯ್ಯನೊಟ್ಟಿಗೆ ನಾನೂ ಹೋಗಿ , ಅವರಾಡುವ ಹಾಡು , ಡೈಲಾಗು ಕೇಳಿ ಪಿಳಿಪಿಳಿ ಕಣ್ಣು ಬಿಡುತ್ತಿದ್ದೆ. ಆ ನಾಟಕ ಕರಮಳ್ಳಮ್ಮನ ಜಾತ್ರೆಯ ನಂತರ, ರಾತ್ರಿ ಹತ್ತಕ್ಕೆ ಶುರುವಾಗ್ತಿತ್ತು.ಎಲ್ಲರೂ ಬಾಡೂಟ ಉಂಡು , ಗಂಡುಸ್ರೆಲ್ಲಾ(ಕೆಲವರು) ಪಾಕೀಟು ಕುಡಿದು ರಂಗಾಗಿ , ಹೆಂಗುಸ್ರೆಲ್ಲಾ ಮಟನ್ ಸಾರು , ಕೊಳ್ಳುಪುಡಿ , ಫ್ರೈಯಿ ಎಲ್ಲಾ ಬಿಸಿಮಾಡಿ ಕೆಡದಂತೆ ಜೋಪಾನ ಮಾಡಿ, ಉಣ್ಣಕ್ ಬಂದು ಉಳ್ಕಂಡಿದ್ದ ನೆಂಟ್ರೂನು , ಸಣ್ಮಕ್ಳನ್ನು ಕಟ್ಕ್ಯಂಡು ಊರ ಮುಂದಿನ ಬಯಲಿಗೆ ,ಚಾಪೆ ಹಾಸೋರು. ಭದ್ರಾವತಿ ಸೀನ್ಸನ ನಾಟಕ ಸ್ಟೇಜಿನ ಮುಂದೆ ಚನ್ನಾಗಿ ಕಾಣುವಲ್ಲಿ ಜಾಗ ಕಟ್ಕಳದೂ ಒಂದು ಕಾಂಪಿಟೀಶನ್ನು.ಕೆಲವರು ಎಂಟಕ್ಕೆ ಬಂದೂ ಚಾಪೆ ಹಾಸಿ ನಾಟಕಕ್ಕಾಗಿ ಕಾಯ್ತಿದ್ರು. ನಾಟಕ ಶುರುವಾಗಿ , ಎಷ್ಟು ಹೊತ್ತಾದ್ರೂ ಅಯ್ಯನ ಪಾಲ್ಟು ಬರದೆ ನಿದ್ದೆ ಹೋಗಿದ್ದ ನನ್ನನ್ನು ಮಧ್ಯರಾತ್ರಿ ನಮ್ಮಮ್ಮ ತಟ್ಟಿ ಎಬ್ಬಿಸಿ ಅಯ್ಯ ಬಂದಾಗ ತೋರ್ಸಿತ್ತು.ಬಿಳೀ ಉದ್ದಗಡ್ಡದ ಅಯ್ಯನ ವೇಷ ನಗು ತರಿಸಿತ್ತು!
ಅಯ್ಯನ ಜತೆ ಎಮ್ಮೆ ಕಾಯೋದು, ಹಿಂಡ್ಲುಸಿದ್ದಯ್ಯನ ಕೆರೆಯ ಮೂಲೆಯಲ್ಲಿದ್ದ ಬಾವಿಯಲ್ಲಿ ಟಗರು ಮೈತೊಳೆಯೋದು, ಇಲ್ಲೆಲ್ಲಾ ನಾನೇ ಅಯ್ಯನ ಜತೆಗಾರ. ಮಕ್ಕಳಿಗೆ ಬಲುಬೇಗನೆ ಹೊಂದಿಕೊಳ್ಳುವ ಗುಣವಿತ್ತು.ಕುಡಿದಾಗ ನಾಟಕದ ಹಾಡು ಹೇಳಿ ರಂಜಿಸುತ್ತಿತ್ತು.ಬೀಡಿ ಸೇದುವಾಗ ಮೂಗಿನಲ್ಲಿ , ಕಿವಿಗಳಲ್ಲಿ ಬುಸ್ಸ್ ಎಂದು ಬಿಡುವ ಹೊಗೆ ನೋಡೀ , ಸೈನ್ಸು ಮೇಡಂ ಜಯಂತಿ ಮಿಸ್ಸಿಗಿಂತಾ ಅಯ್ಯನೇ ಗಾಳಿಯ ಗುಣಲಕ್ಷಣವ ತೋರಿಸುತ್ತೆ ಅನಿಸಿ ಅಚ್ಚರಿಯಾಗುತ್ತಿತ್ತು! ‘ಕಣ್ಣಿನಲ್ಲಿ ಹೊಗೆ ಬಿಡ್ತಿನಿ ನೋಡ್ತಿರಾ ? ಇಷ್ಟು ದಿವಸ ಮೂಗು ಮತ್ತು ಕಿವಿಲೀ ನೋಡಿದ್ದ ಹುಡುಗರ ಹಿಂಡಿಗೆ ಆಶ್ಚರ್ಯವೋ ಆಶ್ಚರ್ಯ!! ಕಣ್ಣನ್ನೇ ಗಮನವಿಟ್ಟು ನೋಡಿ , ದಿಟ್ಟಿಸಿ ನೋಡಿ ಎಂದು ಹೇಳಿದ ಅಯ್ಯ ಪಪ್ಪುಸ ತುಂಬಾ ಹೊಗೆ ತುಂಬಿಕೊಳ್ತು ಆದರೆ ಹೊರಗೆ ಬಿಡಲಿಲ್ಲ. ಕಣ್ಣನ್ನೇ ತಪಸ್ಸಿನಂತೆ ನೋಡುತ್ತಿದ್ದ ನಮಗೆ ತಳಗೆ ಕಾಲಿನಲ್ಲಿ ಬಿಸಿ ಮುಟ್ಟಿದಂತಾಯ್ತು, ನೋಡಿದರೆ ಅಯ್ಯನ ಬೀಡಿ ತುಂಡು ಸುಡುತ್ತಿದ್ದೆ! ಹೋss ಅಯ್ಯನ ಆಟ ಅರ್ಥವಾದ ನಾವೆಲ್ಲ ಚೀರುತ್ತಾ, ನಗುತ್ತಾ ದಿಕ್ಕಾಪಾಲಾಗಿ ಓಡಿ ಬಿಟ್ಟೆವು!!
ನನ್ನನ್ನು ಕಟಿಂಗ್ ಮಾಡ್ಸಕೆ ಕರ್ಕಂಡು ಹೋಗುತ್ತಿದ್ದ ಅಯ್ಯ, ಈಗಿನ ಕ್ಷೌರದ ಮಂಜಣ್ಣನ ಅಪ್ಪನಿಗೆ ದುಡ್ಡೇ ಕೊಡ್ತಿರಲಿಲ್ಲ. ಎರಡ್ಮೂರು ಕಾಯಿ ಕೊಟ್ರೆ ಸಾಕಾಗಿತ್ತು! ಆ ಕಾಲದ ಅವರವರ ಅಂಡರ್ಸ್ಟ್ಯಾಂಡಿಂಗು. ಅಯ್ಯನಲ್ಲಿ ಇಷ್ಟವಾಗದ ದುರ್ಗುಣಗಳೂ ಇದ್ದವು, ಎಮ್ಮೆಗಳ ಕತ್ತು ನುಲುಚದು, ಮನಬಂದಂತೆ ದನಗಳಿಗೆ ಹೊಡೆಯುವುದು, ತಮ್ಮ ಪಾಡಿಗೆ ತಿಪ್ಪೆ ಕೆರೆಯುತ್ತಿದ್ದ ಕೋಳಿಗಳಿಗೆ ಕಲ್ಲು ಬೀಸುವುದು! ಹೀಗೆ ಒಮ್ಮೆ ಬೀಸಿದ ಕಲ್ಲು ಪಕ್ಕದ್ಮನೆಯ ವಯಸ್ಸಾದ ಅಜ್ಜಿಯ ಬೆನ್ನಿಗೆ ತಾಕಿ, ಅವರ ಮೊಮ್ಮಗ ಕಿರಣಿ ಅಯ್ಯನ ಮೇಲೆ ಜಗಳಕ್ಕೆ ಬಂದಾಗ, “ಇಕೋ! ಕೊಳ್ಳಪ್ಪ ಹತ್ರೂಪಾಯಿ ಆಸ್ಪತ್ರೆಗೆ ತೋರ್ಸು” ಎಂದು ಪ್ಯಾದೆಯಂತೆ ತ್ಯಾಪೆ ಹಚ್ತಿತ್ತು.ಮನೆಯವರನ್ನ ಬಯ್ಯುವುದು, ಹೊಡೆಯುವುದು ಆಗಾಗ ಒಂದು ಪ್ರಹಸನವಾಗುತ್ತಿತ್ತು.
ಜೀವನದ ಬಗ್ಗೆ ದೊಡ್ದ ದೊಡ್ಡ ಮಾತುಗಳನ್ನಾಡದ ಅಯ್ಯ, ನಾನು ಕಾಲೇಜು ಸೇರಿದಾಗ – ‘ನೋಡ್ಕ್ಯಂಡು ಹುಡುಗರ ಜತೆ ಸೇರಪ್ಪ! ಸಹವಾಸ ಚನ್ನಾಗಿರ್ಬಕು ‘ ಎಂದು ಬದುಕಿನ ಅತ್ಯಮೂಲ್ಯ ಸಲಹೆ ನೀಡಿತ್ತು.ಇನ್ನೂ ಸಂಧ್ಯಾಕಾಲದಲ್ಲಿ ತ್ವಾಟದ ಹೊಸಮನೆಗೆ ಬಂದನಂತರ ಟೆರೆಸ್ಸು ಮೇಲ್ಗಡೆ ಅಯ್ಯನ ಠಿಕಾಣಿಯಿತ್ತು.ಬೈಕಿನಲ್ಲಿ ಕುಂತ್ಕಳವರ್ಗೂ ಕಟಿಂಗ್ ಅಂಗಡಿಗೆ ಕರ್ಕಂಡು ಹೋಗುತ್ತಿದ್ದ ನಾನು ನಂತರ ನಾನೇ ವಾರಕ್ಕೊಮ್ಮೆ ಕಾಲೇಜಿನಿಂದ ಬಂದು ಶೇವಿಂಗ್ ಮಾಡಿ , ಮೈ ತಿಕ್ಕಿ , ಲೈಫ್ಬಾಯ್ ಹಚ್ಚಿ ಬಿಸಿನೀರಿನಲ್ಲಿ ಗಂಟೆಗಟ್ಟಲೇ ಟೆರಸ್ಸಿನ ಚುಮುಚುಮು ಬಿಸಿಲಿನಲ್ಲಿ ಹಿತವಾಗಿ ಸ್ನಾನ ಮಾಡುಸ್ತಿದ್ದೆ. ಮೊದಮೊದಲು ಸರಿಯಾಗಿ ಬೋಳಿಸಲು ಬರದೆ ಅಲ್ಲಲ್ಲಿ ಕುಯ್ದು ಗಾಯ ಮಾಡಿ ಹಿಂಸಿಸುತ್ತಿದ್ದೆ ಎನಿಸುತ್ತೆ. ನಂತರ ಸರಿಯಾಗಿ ಕಲಿತೆ,ಬರುಬರುತ್ತಾ ನಾನೇ ಅಯ್ಯನ ಕ್ಷೌರಿಕನಾದೆ. ಬುದ್ಧನ ಕ್ಷೌರಿಕ ಉಪಾಲಿಯಂತೆ! ತುಂಬು ವಯಸ್ಸಾದಂತೆ ಮಗುವಿನಂತೆ ಮುಗ್ಧಜೀವಿಯಾಯ್ತು ಅಯ್ಯ.ಆಗಾಗ ಅಳುದು.ಸ್ನಾನ ಮಾಡಿಸಲು ಹೋದರೆ ಹಟ ಮಾಡುದು.ಬಾಲ್ಯ ಮತ್ತು ವೃದ್ದಾಪ್ಯ ಒಂದೇ ನಾಣ್ಯದ ಎರಡು ಮುಖಗಳೇ ಸರಿ.
ಒಂದು ಮಧ್ಯಾಹ್ನ ಮಜ್ಜಿಗೆ ಅನ್ನ ಉಂಡ ಅಯ್ಯ, ನಂತರ ತಣ್ಣಗೆ ಇಹಲೋಕ ತ್ಯಜಿಸಿತ್ತು.ಕಡೆಗೂ ಯಾರಿಗೂ ಹೊರೆಯಾಗದೆ, ಮನಿಕಂಡಿತ್ತಲೇ ಎಲ್ಲಾ ಬಾಚಿಸ್ಕ್ಯಳದಂಗೆ ತನ್ನ ಪಯಣ ಮುಗಿಸಿತ್ತು.ಒಂದೀಡೀ ಜೀವನದ ಹಲವಾರು ಪಲಕುಗಳ ಕಂಡು, ಬಂದಂತೆ ಬದುಕಿ , ಸುಖದುಃಖಗಳ ಉಂಡು, ಉಚ್ಚ-ನೀಚ ವ್ಯಕ್ತಿತ್ವಗಳ ಗೊಂದಲದ ಮಿಶ್ರಣಗಳಂತೆ , ಅರ್ಥಕ್ಕೆ ನಿಲುಕದೆ, ಚೌಕಟ್ಟಿಗೆ ಒಳಪಡದೆ ಸಾರ್ಥಕ ಜೀವನ ನಡೆಸಿದ್ದು ಮಾತ್ರ ವಿಸ್ಮಯ!
ಹಾಂ! ಅಂದು ಬೀಡಿ ತಂದುಕೊಟ್ಟಾಗ ಅಯ್ಯ ತನ್ನ ಹೊಟ್ಟೆಯ ಮೇಲಿನ ಜೇಬು(!)(ನಿಲುವಂಗಿಯ ಜೇಬು) ಗೆ ಕೈಹಾಕಿತು. ಆ ಜೇಬೋ ಪೂರ್ತಿ ಮೊಳಕೈ ಹೋಗುವಷ್ಟು ಆಳ, ಒಂದು ದಿನದ ಪ್ರವಾಸಕ್ಕಾಗೋವಷ್ಟು ಸಾಮಾನು ತುಂಬಿಸುವ ಅಗಲ ಹೊಂದಿತ್ತು! ಅದರೊಳಗೆ ಅವರಪ್ಪನ ಕಾಲದ ಚೀಟಿ, ಹಲ್ಲುಸಂಧಿ ಕ್ಲೀನು ಮಾಡಕೆ ಅಂಚಿಕಡ್ಡಿಗಳು, ಗತಕಾಲದ ಮೋಟುಬೀಡಿಗಳು, ಒಂದು ಮ್ಯಾಣದ ಕವರಲ್ಲಿ ಗಾಂಧಿ ನೋಟುಗಳು, ನಾಣ್ಯಗಳು…..ಹೀಗೆ ತರಹೇವಾರಿ ಐಟಂ ಹೊಂದಿದ್ದ ಆ ಜೇಬು ಒಂಥರಾ ಅಕ್ಷಯಪಾತ್ರೆಯಂತೆ! ಅಯ್ಯ ನಿಧಾನವಾಗಿ ತೆಗೆಯುತ್ತಿದ್ದುದ ಕಾತುರದಿಂದ ನೋಡುತ್ತಲೇ ಚಡಪಡಿಸುತ್ತಿದ್ದ ನನಗೆ ಬೇಕಾಗಿದ್ದ ಕವರ್ರು ಬಂದೇ ಬುಡ್ತು. ಅದೇ ಶುಂಠಿ ಪೆಪ್ಪರಿಮೆಂಟಿನ ಕವರ್ರು! ಅದರಲ್ಲಿ ಎರಡು ತೆಗೆದು ಕೊಡ್ತು. ಒಂದು ಬಾಯೊಳಗೆ ಎಸ್ಕಂಡು, ಚೀಪುತ್ತಾ , ಇನ್ನೊಂದ ಅಂಗಿಯ ಜೇಬಿಗೆ ಇಳಿಸಿಕೊಳ್ಳುತ್ತಾ , ಲಕ್ಕಮ್ಮನ ಗುಡಿಯ ಹಿಂದ್ಗಡೆಯ ಬಳಸಾಕಟ್ಟೆ ಕಡೀಕೆ ಓಟ ಕಿತ್ತೆ! ಏರೋಪ್ಲೇನ್ ಚಿಟ್ಟೆ ಹಿಡಿದು ದಾರ ಕಟ್ಟಲು , ಗೆಳೆಯರನ್ನುಅರಸುತ್ತಾ , ಡ್ಯೂಟಿಗೆ ಲೇಟ್ ಆದವನಂತೆ!!
–ಡಾ. ಮಂಜುನಾಥ