ಪ್ರಕೃತಿ ಸೌಂದರ್ಯ
ಭೂರಮೆಯ ಅಂದ ಚಂದದ ನೋಟ
ಸವಿಯುವ ಬನ್ನಿ ಪ್ರಕೃತಿಯ ರಸದೂಟ
ಪ್ರಕೃತಿಗೆ ವಿಕೃತಿಯಾಗಿ ಮೆರೆಯ ಬೇಡವೋ ಮರ್ಕಟ
ಸಂಭ್ರಮಿಸೋಣ ಬನ್ನಿ ಪ್ರಕೃತಿಯ
ಔತಣ ಕೂಟ
ಧರೆಗಿಳಿದು ಬಂದ ರಮಣಿಯಂತೆ
ನಿನ್ನ ಅರಮನೆಯ ದೃಶ್ಯಕ್ಕೆ ನಾ
ಶರಣಾದಂತೆ
ನೀನು ಹಚ್ಚ ಹಸಿರಿನ ಸೀರೆ ಹುಟ್ಟಂತೆ
ನನ್ನ ನಯನಗಳಿಗೆ ಹಿತವಾದಂತೆ
ಬೆಟ್ಟ ಗುಡ್ಡಗಳಿಂದ ಇಳಿದು ಬರುವ
ಜಲಧಾರೆಯ ರೌದ್ರ ನರ್ತನ
ನೋಡುಗರ ಕಣ್ಣಿಗೆ ಸೌಂದರ್ಯದ ದರ್ಶನ
ಪ್ರಾಣಿ ಪಕ್ಷಿಗಳ ವಾಸಸ್ಥಳ ಕಾನನ
ಪ್ರಕೃತಿ ಮತ್ತು ಮಾನವನ ಮಿಲನ
ಝರಿ ತೊರೆಗಳಿಂದ ಇಣುಕುವ ಜಲಧಾರೆ
ನೋಡಲು ಹಂಬಲಿಸುತ್ತಿರುವೆನು ಮನಸಾರೆ
ಇಡೀ ಜೀವಸಂಕುಲಕ್ಕೆ ನೀ ಆಸರೆ
ಹಸಿರಿನ ಸೌಂದರ್ಯಕ್ಕೆ ತಲೆಬಾಗಿ
ಸುರಿಯುವುದು ವರ್ಷಧಾರೆ
ಹಸಿರಿನ ಮೆತ್ತನೆಯ ಮಡಿಲು
ಬತ್ತದಿರಲಿ ಧರೆಯ ಒಡಲು
ತುಂಬಿ ಹರಿಯುವುದು ನದಿಯ ಕಡಲು
ನಾಚಿ ತುಸು ನಗುವುದು ಮುಗಿಲು
–ದಾಕ್ಷಾಯಣಿ
ಇರುಳ ಜಾತ್ರೆ
ತಿಳಿ ಬೆಳದಿಂಗಳ ತೇರಿನಲಿ
ಹೊರಟಿದೆ ಚಂದ್ರನ ಮೆರವಣಿಗೆ
ನೀಲಿಗಗನದ ಬೀದಿಯಲಿ
ಬೆಳ್ಳಿ ಮೂಡದೆ ಬರವಣಿಗೆ.
ಮಹಾ ಮುಗಿಲಿಗೂ ಮಿಗಿಲಾದದ್ದು
ಒಂದಿದೆ ವ್ಯೋಮದ ಬಯಲಿನಲಿ
ಮೋಡದ ತೆರೆಯಲಿ ಮಿಂದೆದ್ದ
ಚಂದ್ರನ ತೋರಿದೆ ದೀವಟಿಗೆಯಲಿ.
ನೀಲಾಂಬುಧಿಯ ಸೆರಗಿನ ಅಂಚಲಿ
ಬೆಳಕಿನ ಬೆರಗಿನ ಚಿತ್ತಾರ
ಆಡಂಬರವಿಲ್ಲದ ನಿರಾಭರಣ ನೀ
ಬಾನಿನ ಬಂಧುರ ದಿಗಂಬರ.
ಜಲವೇ ಇಲ್ಲದ ಕಡಲಿನಲಿ
ತೇಲಿದೆ ಬೆಳ್ಳಿಯ ನಾವೆ
ತೆರೆಯುವ ಮೆರೆಯುವ ನೀಲಿಯಲಿ
ತಾರೆಗಳು ಹೊಳೆಯುತಾವೆ.
–ಸರೋಜ ಪ್ರಶಾಂತಸ್ವಾಮಿ
ನವಿಲುಗಳ ಕನಸು
ಎಲ್ಲಿ ನೋಡಿದರಲ್ಲಲ್ಲಿ ನವಿಲುಗಳ ಕನಸು
ಬಣ್ಣಬಣ್ಣದ ಕಣ್ಣಾಗಿ ಅರಳಿ ನಿಂತ ಸೊಗಸು
ಕಾನನ ಮಲೆ ಹೊಲ ತೋಟಗಳಲಿ ಮೇವು
ಹರಸಿ ನಲಿದಾಡುವ ವರಸೆಯ ಬೇಟೆಕಾವು
ನಿಂತ ನೆಲವೆ ಆಧಾರ ಕಾಡುಮೇದೆ ಭದ್ರ
ಯಾವ ಅಂಕುಶದ ಅಂಕುರವು ಇಲ್ಲದ ಬದುಕು
ನಿರಂಕುಶ ಮತಿಗಳ ಮನಸ್ಸಿನಂತೆ ಆತಂಕವಿಲ್ಲ
ಬದುಕುವ ಜೀವಗಳಿಗೆ ಜೀವನೋತ್ಸಾಹ
ಇಳೆ ತಂಪಾಯಿತು ಮಳೆಮೂಡಿ ಸುರಿದು
ಕಾಣುವ ಸತ್ಯ ತನ್ನೆದುರು ನಿಂತು ಲೀಲೆಯೊಳು
ಪಂಚಭೂತ ವಿಕಾಸಶೀಲ ಅರಳಿ ಸೃಜನೆಯೊಳು
ಹಸಿರು ಹುಲ್ಲು ಗರಿಕೆ ಚಿಗುರಿ ಬೆಳೆದು
ಪಶುಪಕ್ಷಿಗಳ ಕಲರವ ಇಂಚರ ಕೂಗಿತು
ಮುದ್ದಿನ ಕರು ತಾಯಿ ಕೆಚ್ಚಲಿಗೆ ಬಾಯಿಟ್ಟು
ಹಾಲು ಕುಡಿದಂತೆ ಯೋಗಿಗಳು ರಸಪಾನ
ಕರೆಯಿತು ದಿವ್ಯತೆಯ ಕಲ್ಪನೆ ಕೊನರಿದ ಎಸ್ಛಟಿಕ್
ಪ್ರಜ್ಞೆ ಔಚಿತ್ಯ ಲೋಕಾನುಭವ ಸ್ವಯಂ ಸೇವಾನುರಾಗ
ಪೃಥ್ವಿ ಆಕಾಶ ಜಲ ವಾಯು ಅಗ್ನಿಗಳಲ್ಲಿ ಬೆರೆತು
ಜೀವ ಮಿಳಿತವಾದ ಶ್ರಮ ಜೀವಿಗಳ ಕಾಯಕ
ಹಸಿರ ಉಸಿರಧಾರೆಯಾಗಿ ಹರಿಯಿತು ಅನುರಾಗ
ಒಂದೊಂದು ಸತ್ವಗಳು ಒಂದೊಂದು ತರ ಬೆರೆತು
ತನ್ನ ಕ್ರಿಯೆಯಂತೆ ಯಥಾವತ್ತಿನ ಚಟುವಟಿಕೆ ಕಲೆತು
ಇಳೆಯ ಮೇಲಣ ಕೊಂಡಿಗಳಂತೆ ಬಲಕ್ಕೆ ಬಲವಾದ ಆಕರ್ಷಕ
ಸೃಜನಶೀಲತೆ ಬೆಳವಣಿಗೆಯ ಪೂರಕ ಉತ್ಕರ್ಷಕ.
–ಸಂತೋಷ್ ಟಿ