”ಹಕ್ಕು ಇದ್ರೆ ನಾವು ಬದುಕುತ್ತೇವಾ ಸಾರ್ ? ”: ನಾಗಸಿಂಹ ಜಿ ರಾವ್

ಒಂದು ವಾರದ ಹಿಂದೆ ಮನೆಗೆ ಬಂದಾಗ, ಎದುರಿನ ತೋಟದಲ್ಲಿ ಏನೋ ಕಾಣೆಯಾಗಿದೆ ಎಂದು ಅನಿಸಿತು. ಕುತೂಹಲವನ್ನು ತಡೆಯಲಾಗದೆ ತೋಟದೊಳಗೆ ನಡೆದು, ಸುತ್ತಲೂ ಕಣ್ಣಾಡಿಸಿದೆ. ಆ ಕ್ಷಣದಲ್ಲಿ ಹೃದಯವೇ ನಿಂತ ಅನುಭವ ಆಯಿತು —ನಮ್ಮ ಪ್ರೀತಿಯ ನಲ್ಲಿಕಾಯಿ ಮರದ ಒಂದು ಭಾಗವನ್ನು ಕತ್ತರಿಸಲಾಗಿತ್ತು. ತೆಂಗಿನ ಮರ ಹಾಗೂ ಹೊಂಗೆಯ ಮರದ ತೋಳಿನಡಿಯಲ್ಲಿ ಹನ್ನೆರಡು ವರ್ಷಗಳಿಂದ ಗಗನಕ್ಕೆ ಎದ್ದು ನಿಂತಿದ್ದ ಆ ಮರದ ಕೊಂಬೆಗಳು ಈಗ ಕಾಂಪೌಂಡ್‌ನಾಚೆಗಿನ ವಿದ್ಯುತ್ ತಂತಿಗೆ ತಾಗದಂತೆ “ಟ್ರಿಮ್” ಮಾಡಲ್ಪಟ್ಟಿದ್ದವು. ಆದರೆ, ಆ ಮರದ ಕತ್ತರಿಯ ಗಾಯ ನನ್ನ ಮನಸ್ಸಿಗೆ ತಾಕಿತು.

ಈ ನಲ್ಲಿಕಾಯಿ ಮರ ಕೇವಲ ಮರವಲ್ಲ, ಒಂದು ಜೀವಂತ ಕತೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ, ಎಚ್‌ಐವಿ ಬಾಧಿತ ಮತ್ತು ಸೋಂಕಿತ ಮಕ್ಕಳ ಕೈಯಿಂದ ಈ ಮರದ ಸಸಿಯನ್ನು ಉಡುಗೊರೆಯಾಗಿ ಪಡೆದಿದ್ದೆ. ಆ ಮಕ್ಕಳ ಕಣ್ಣೀರಿನಲ್ಲಿ, ಆಶಾವಾದದಲ್ಲಿ , ಹೋರಾಟದ ಛಲದಲ್ಲಿ ಈ ಸಸಿ ನೆಡಲ್ಪಟ್ಟಿತು. ತೆಂಗಿನ ಮರ ಮತ್ತು ಹೊಂಗೆಯ ಮರದ ನಡುವೆ ಪೈಪೋಟಿಯಲ್ಲಿ ಗಗನಕ್ಕೆ ಚಾಚಿಕೊಂಡ ಈ ಮರ, ಆ ಮಕ್ಕಳ ಜೀವನಾನುಭವದ ಸಂಕೇತವಾಗಿತ್ತು. ಅದರ ಜೊಂಪೆ ಜೊಂಪೆ ಕಾಯಿಗಳನ್ನು ತಿನ್ನದವರು ನನ್ನ ಹಳ್ಳಿಯಲ್ಲಿ ಯಾರೂ ಇಲ್ಲ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು , ಗೃಹಿಣಿಯರು ಆ ಕಾಯಿಗಳನ್ನು ಕಿತ್ತು, ತಿಂದು, ಸಂತೋಷದಿಂದ ಗಿಲಿಗಿಲಿಯಾಗಿ ನಗುತ್ತಿದ್ದ ದೃಶ್ಯ ಪ್ರತಿದಿನ ನಡೆದಿದೆ.

ಈ ಮರದ ಬೇರುಗಳಲ್ಲಿ ಆ ಮಕ್ಕಳ ನೋವಿನ ಕಥೆಯಿದೆ, ಎಲೆ ಎಲೆಗಳಲ್ಲಿ ಅವರ ಪಿಸುಗುಡುವ ಮಾತುಗಳಿವೆ. ಒಂದೊಂದು ಕೊಂಬೆಯೂ ಅವರಲ್ಲಿನ ಜೀವಿಸುವ ಛಲದ, ಸ್ವಾಭಿಮಾನದ, ಆಶಾವಾದದ ಸಂಕೇತ. ಆದರೆ, ಈಗ ಕತ್ತರಿಸಿದ ಕೊಂಬೆಗಳನ್ನು ನೋಡಿದಾಗ, ಆ ಮಕ್ಕಳ ಮೇಲಿನ ಸಮಾಜದ ಕಾಳಜಿಯ ಕೊರತೆಯೇ ಕಾಣುತ್ತದೆ. ವಿದ್ಯುತ್ ತಂತಿಗಳಿಗೆ ತೊಡಕಾಗದಿರಲಿ ಎಂದು ಕತ್ತರಿಸಿದರೂ, ಆ ಗಾಯ ನನ್ನ ಹೃದಯಕ್ಕೆ ತಗುಲಿತು. ಈ ಮರ ಕೇವಲ ಸಸ್ಯವಲ್ಲ, ಆ ಮಕ್ಕಳ ಧೈರ್ಯದ,ಹೋರಾಟದ , ಸಂಗ್ರಾಮದ, ಮತ್ತು ಪ್ರೀತಿಯ ಜೀವಂತ ನೆನಪು.

ನನ್ನ ಮನಸ್ಸಿನಲ್ಲಿ ಈ ಮರವನ್ನು ನೋಡುವಾಗ ಹೆಮ್ಮೆಯ ಜೊತೆಗೆ ಒಂದು ಭಾರವೂ ಇದೆ. ಆ ಮಕ್ಕಳು ತಮ್ಮ ಜೀವನದ ಹೋರಾಟದಲ್ಲಿ ಗೆದ್ದವರಿಗಿಂತ ಕಡಿಮೆಯೇ? ಅವರ ಕನಸುಗಳು, ಆಕಾಂಕ್ಷೆಗಳು ಈ ಮರದಂತೆ ಗಗನಕ್ಕೇರಲಿ ಎಂದು ಆಶಿಸುತ್ತೇನೆ. ಆದರೆ, ಕತ್ತರಿಸಿದ ಆ ಕೊಂಬೆಗಳು ಒಂದು ಎಚ್ಚರಿಕೆಯಂತೆ ಕಾಣುತ್ತವೆ—ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ಸಮಾಜದ ಕೆಲವು ತಂತಿಗಳು ನಮ್ಮ ಬೆಳವಣಿಗೆಗೆ ಅಡ್ಡಿಯಾಗಬಹುದು.

ಈ ನಲ್ಲಿಕಾಯಿ ಮರ ಇಂದಿಗೂ ನಿಂತಿದೆ, ಗಾಯದಿಂದಲೇ ಆದರೂ ಜೀವಂತವಾಗಿ. ಆ ಮಕ್ಕಳ ಧೈರ್ಯವನ್ನು, ಅವರ ಕಥೆಯನ್ನು, ಅವರ ಪ್ರೀತಿಯನ್ನು ಇದು ಎಂದಿಗೂ ನೆನಪಿಸುತ್ತದೆ. ಒಂದು ದಿನ, ಈ ಮರದ ಕೊಂಬೆಗಳು ಮತ್ತೆ ಚಿಗುರಿ, ಆಕಾಶವನ್ನು ಮುಟ್ಟಲಿ—ಆ ಮಕ್ಕಳ ಕನಸುಗಳಂತೆ, ಯಾವ ತಂತಿಗಳೂ ಕಡಿಯಲಾಗದಂತೆ ಅನ್ನುವುದು ನನ್ನ ಅನಿಸಿಕೆ . ನನಗೆ ಈ ನಲ್ಲಿ ಮರವನ್ನು ಉಡುಗೆರೆಯಾಗಿ ಕೊಟ್ಟ ಮಕ್ಕಳಲ್ಲಿ ಎಷ್ಟು ಮಕ್ಕಳು ಇನ್ನೂ ಜೀವಂತವಾಗಿದ್ದಾರೆ ಎನ್ನುವ ಅರಿವಿಲ್ಲ .

2009ರಲ್ಲಿ ಬೆಂಗಳೂರಿನ ಒಂದು ಸಂಸ್ಥೆಯ ಆಹ್ವಾನದ ಮೇರೆಗೆ ಈ ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಅವಕಾಶ ಸಿಕ್ಕಾಗ, ಅವರ ಜೀವನದ ಕಷ್ಟಕರ ಸತ್ಯಗಳು ಮತ್ತು ಭಾವನಾತ್ಮಕ ಆಕ್ರಂದನಗಳು ನನ್ನ ಹೃದಯವನ್ನು ಚೂರಿಯಂತೆ ಕೊರೆಯಿತು. ನಾನು ಈ ಮಕ್ಕಳಿಗೆ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಬಗ್ಗೆ ಮಾಹಿತಿ ನೀಡಿ ಬದುಕುವ ಹಕ್ಕು , ರಕ್ಷಣೆಯ ಹಕ್ಕು , ಅಭಿವೃದ್ಧಿಯ ಹಕ್ಕು ಹಾಗೂ ಭಾಗವಹಿಸುವ ಹಕ್ಕಿನ ಬಗ್ಗೆ ಮಾಹಿತಿ ನೀಡಿದೆ . ಮಕ್ಕಳು ನನ್ನ ಭಾಷಣವನ್ನು ಗಂಭೀರವಾಗಿ ಕೇಳುತ್ತಿದ್ದರು ನನಗೆ ಈ ಮಕ್ಕಳ ಹಿನ್ನಲೆ ಮುಂಚಿತವಾಗಿ ತಿಳಿದಿತ್ತು , ಸಾಮಾಜಿಕವಾಗಿ, ಈ ಮಕ್ಕಳು ತಾರತಮ್ಯ ಮತ್ತು ಕಳಂಕದಿಂದ ಬಳಲುತ್ತಾರೆ. ಶಾಲೆಗಳಲ್ಲಿ, ಸಮುದಾಯದಲ್ಲಿ, ಮತ್ತು ಕೆಲವೊಮ್ಮೆ ಕುಟುಂಬದೊಳಗೆಯೇ ಒಂಟಿತನವನ್ನು ಎದುರಿಸುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಖಿನ್ನತೆ ಮತ್ತು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗುತ್ತದೆ. , ಆದರೆ ನಾನು ಭಾಗವಹಿಸಿದ್ದ ಕಾರ್ಯಕ್ರಮ ಈ ಮಕ್ಕಳಿಗೆ ತಮ್ಮ ಭಾವನೆಗಳನ್ನು, ನೋವನ್ನು ಹಂಚಿಕೊಳ್ಳಲು, ಸಮಾಧಾನ ಪಡೆಯಲು, ಮತ್ತು ಒಗ್ಗಟ್ಟಿನ ಭಾವನೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಲು ಆಯೋಜಿತವಾಗಿತ್ತು .

ನನ್ನ ಭಾಷಣದ ನಂತರ ಮಕ್ಕಳಿಂದ ಅನುಭವ ಹಂಚಿಕೆ ಇತ್ತು , ಆ ಮಕ್ಕಳ ಸನ್ನಿವೇಶಗಳು , ಕುಟುಂಬ ಪರಿಸ್ಥಿತಿಗಳು ಬಹಳ ಕ್ಲಿಷ್ಟ ಕರವಾಗಿತ್ತು . ಆ ಮಕ್ಕಳಲ್ಲಿ ಕೆಲವರು ತಾರತಮ್ಯ ಹಾಗೂ ಸಾಮಜಿಕ ಕಳಕದಿಂದ ಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದರು , ಬರಿ ದುರಂತ ,ಕಣ್ಣೀರು ,ಶೋಕ ಅಲ್ಲಿದ್ದ ಪ್ರತಿ ಮಗುವಿಗೂ ತಾವು ಎಂದು ಸಾಯುತ್ತೇವೆ ಎಂಬ ಆತಂಕ , ಒಬ್ಬ ಬಾಲಕಿ ಮಾತನಾಡುತ್ತಾ ಹೇಳಿದಳು ” ಈಗ ನಾಗಸಿಂಹ ಸರ್ ಹೇಳಿದರು , ನಮಗೆಲ್ಲಾ ಹಕ್ಕಿದೆ ಅಂತ , ಹಕ್ಕಿದ್ದರೆ ನಾವು ಬದುಕುತ್ತೇವೆಯೇ ಸಾರ್ ? ಹಕ್ಕು ಸಾವನ್ನು ತಪ್ಪಿಸುತ್ತದೆಯೇ ? ದಿನಾ ಸಾಯ್ತಿವಿ ಸಾಯ್ತಿವಿ ಅಂತ ಯೋಚನೆ ಮಾಡೋ ನಮಗೆ ಬೇಕಾದಾಗ ಸಾಯೋ ಹಕ್ಕು ಸರಕಾರ ಕೊಡುತ್ತಾ ಸಾರ್ ? ”ನನ್ನಲ್ಲಿ ಉತ್ತರ ಇರಲಿಲ್ಲ . ಆಂಟಿರೆಟ್ರೊವೈರಲ್ ಚಿಕಿತ್ಸೆ (ART) ಲಭ್ಯತೆಯು HIV ಸೋಂಕಿತ ಮಕ್ಕಳ ಜೀವನಾವಧಿಯನ್ನು ಗಣನೀಯವಾಗಿ ಸುಧಾರಿಸಿದೆ.

ಭಾರತವು HIV ಸೋಂಕಿನ ಜಾಗತಿಕ ಒಟ್ಟು ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ, ಸುಮಾರು 21 ಲಕ್ಷ ಜನರು HIV ಯೊಂದಿಗೆ ಬದುಕುತ್ತಿದ್ದಾರೆ. ಕಳೆದ ದಶಕದಲ್ಲಿ HIV ಯ ಪ್ರಮಾಣ ಕಡಿಮೆಯಾಗಿದ್ದರೂ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಇನ್ನೂ ಗಣನೀಯ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಭಾರತದಲ್ಲಿ HIV/ಏಡ್ಸ್ ನಿಯಂತ್ರಣಕ್ಕೆ ನಾಯಕತ್ವ ವಹಿಸಿದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸೆ ಮತ್ತು ಜಾಗೃತಿಯ ಕೊರತೆ ಇನ್ನೂ ಸವಾಲಾಗಿದೆ.

ಭಾರತದಲ್ಲಿ HIV ಬಾಧಿತ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸಲು ಕಾನೂನು ಚೌಕಟ್ಟುಗಳಿವೆ. HIV ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ 2014ರ ಪ್ರಕಾರ, HIV ಸೋಂಕಿತ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಮತ್ತು ಆರೋಗ್ಯ ಸೇವೆಗಳಲ್ಲಿ ತಾರತಮ್ಯವನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯು ಮಕ್ಕಳಿಗೆ ಕಲ್ಯಾಣ ಯೋಜನೆಗಳು, ಲಿಂಗ ಸಂವೇದನೆಯ ಶಿಕ್ಷಣ, ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಎಲ್ಲಾ ಮಾಹಿತಿ ನಮ್ಮಲ್ಲಿ ಇದ್ದರೂ ಇದರಿಂದ ಪರಿತಪಿಸುವ ಮಕ್ಕಳಿಗೆ ಸಮಾಧಾನ ಮಾಡಲು ಅಸಮರ್ಥರಾಗುತ್ತೇವೆ .

HIV ಬಾಧಿತ ಮತ್ತು ಸೋಂಕಿತ ಮಕ್ಕಳ ಜೀವನವು ಕೇವಲ ಆರೋಗ್ಯದ ಸವಾಲುಗಳಿಗೆ ಸೀಮಿತವಲ್ಲ, ಇದು ಸಾಮಾಜಿಕ, ಭಾವನಾತ್ಮಕ, ಮತ್ತು ಶೈಕ್ಷಣಿಕ ಆಯಾಮಗಳನ್ನು ಒಳಗೊಂಡಿದೆ. ಭಾರತದಂತಹ ದೇಶಗಳಲ್ಲಿ ಕಾನೂನು ರಕ್ಷಣೆ ಮತ್ತು ಚಿಕಿತ್ಸೆಯ ಲಭ್ಯತೆಯಿಂದ ಪರಿಸ್ಥಿತಿ ಸುಧಾರಿಸಿದೆಯಾದರೂ, ತಾರತಮ್ಯ ಮತ್ತು ಜಾಗೃತಿಯ ಕೊರತೆಯಿಂದಾಗಿ ಇನ್ನೂ ದೀರ್ಘವಾದ ಹಾದಿಯಿದೆ. ಜಾಗತಿಕವಾಗಿ, ಆಫ್ರಿಕಾದಂತಹ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ಮತ್ತು ಅನಾಥತ್ವದ ಸಮಸ್ಯೆ ಗಂಭೀರವಾಗಿದೆ. ಈ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸುವ ಮೂಲಕ, “ನಲ್ಲಿ ಮರ”ದಂತೆ ಅವರ ಜೀವನವೂ ಸಮಾಜಕ್ಕೆ ಸಿಹಿಯಾದ ಫಲವನ್ನು ನೀಡಬಹುದು. ನಮ್ಮ ಜವಾಬ್ದಾರಿಯು ಅವರಿಗೆ ಆಶಾಕಿರಣವನ್ನು ನೀಡುವುದು ಮತ್ತು ಅವರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿದೆ.

-ನಾಗಸಿಂಹ ಜಿ ರಾವ್

ಕನ್ನಡದ ಬರಹಗಳನ್ನು ಹಂಚಿ ಹರಡಿ
4 3 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x