ತೆಲುಗು ಮೂಲ: ಗಡ್ಡಂ ದೇವೀ ಪ್ರಸಾದ್
ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀ ಮೋಹನ್
“ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು”, “ ಚಲ್ಲ ಚಲ್ಲನಿ ನೀಟಿ ಪೊಟ್ಲಾಲು””… ಬಸ್ಸಿನ ನಿಲ್ದಾಣಕ್ಕೆ ಬಂದು ನಿಂತ ದೂರದ ಊರಿನ ಬಸ್ಸಿನ ಸುತ್ತಲೂ ಎಡಗೈಯಲ್ಲಿ ಬಕೆಟ್ ಹಿಡಿದು, ಬಲಗೈಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡು ದಾಸಪ್ಪ ಕೂಗುತ್ತಿದ್ದ.
ಅಷ್ಟರಲ್ಲಿ ಮತ್ತೊಂದು ಬಸ್ಸು ಬಂದರೆ, ತಕ್ಷಣ ಅದರೊಳಗೆ ಹೋಗಿ ಎರಡು ಭಾಷೆಗಳಲ್ಲಿ ಕೂಗುತ್ತಾ ಹತ್ತು ಪ್ಯಾಕೆಟ್‌ಗಳನ್ನು ಮಾರಿದ.
ನೀರಿನ ಪ್ಯಾಕೆಟ್‌ಗಳನ್ನು ಬಕೆಟ್‌ನಲ್ಲಿ ಭತ್ತದ ಹೊಟ್ಟಿರುವ ಐಸ್ ದಿಮ್ಮಿಯ ಹತ್ತಿರ ಇಡುತ್ತಾ, ನಿಲ್ದಾಣಕ್ಕೆ ಬರುತ್ತಿದ್ದ ಮತ್ತೊಂದು ಬಸ್ಸಿಗೆ ಎದುರಾಗಿ ಹೋಗಿ, ಅದು ನಿಲ್ಲುವ ಮೊದಲೇ ಜಾಣ್ಮೆಯಿಂದ ಅದರೊಳಗೆ ಹೋಗಿ ಇನ್ನೂ ಕೆಲವು ಪ್ಯಾಕೆಟ್‌ಗಳನ್ನು ಮಾರಿದ ನಂತರ ದಾಸಪ್ಪ ಕೆಳಗಿಳಿದ.
ಕೆಂಪಾದ ಕುಲುಮೆಯ ಶಾಖಕ್ಕೆ ಕಿಂಚಿತ್ತೂ ಕಡಿಮೆ ಇಲ್ಲದ ತೀವ್ರತೆಯೊಂದಿಗೆ ಸೂರ್ಯನು ಬೆಂಕಿಯ ಉಂಡೆಯಂತೆ ಉರಿಯುತ್ತಿದ್ದ.
ಮಧ್ಯಾಹ್ನ ಒಂದು ಗಂಟೆ ದಾಟಿತ್ತು. ದಾಸಪ್ಪನ ಕರುಳು ಹಸಿವಿನಿಂದ ಕೂಗುತ್ತಿತ್ತು.
ಅವನು ವೇಗವಾಗಿ ನಿಲ್ದಾಣದ ಇನ್ನೊಂದು ಬದಿಯಲ್ಲಿರುವ ಕರಂಜ ಮರದ ಕೆಳಗೆ ಬಂದನು. ಭುಜದ ಮೇಲಿದ್ದ ಬಟ್ಟೆಯಿಂದ ಮುಖವನ್ನು ಒರೆಸಿಕೊಂಡು, ತಲೆಯ ಮೇಲಿದ್ದ ಹಳೆಯ ಟೋಪಿಯನ್ನು ಜಾಗರೂಕತೆಯಿಂದ ತೆಗೆದು, ಬಿಸಿಲು ಹೊಡೆಯದಂತೆ ಬಟ್ಟೆಯಲ್ಲಿ ಸುತ್ತಿ ತಲೆಗೆ ಹಾಕಿಕೊಂಡಿದ್ದ ಕೆಂಪು ಈರುಳ್ಳಿಯೊಂದಿಗೆ ಕೆಳಗಿಟ್ಟು, ತಲೆಯ ಮೇಲಿದ್ದ ಬೆವರನ್ನು ಬಟ್ಟೆಯಿಂದ ಒತ್ತಿಕೊಂಡನು.
ಆಂಧ್ರಭೋಜನು ಆಳಿದ ಪ್ರದೇಶ. ನಂತರ ರಚನೆಯಾದ ನಾಲ್ಕು ಜಿಲ್ಲೆಗಳ ಸೀಡೆಡ್ ಪ್ರದೇಶದ ಊರು. ಅಂದಿನ ತೆಲುಗು ನಾಯಕರ ಸ್ವಾರ್ಥ ರಾಜಕೀಯಕ್ಕೆ ಮತ್ತು ಇತರರು ಹೆಣೆದ ಕುತಂತ್ರಗಳಿಗೆ ಕರ್ನಾಟಕಕ್ಕೆ ಸೇರಿಹೋದ ಬಳ್ಳಾರಿ ಪ್ರದೇಶವದು.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಉದ್ದೇಶಿಸಿರುವ ಮೋಕಾ ಜಲಾಶಯ, ಹತ್ತಿರದಲ್ಲಿ ತುಂಗಭದ್ರಾ ಪ್ರಾಜೆಕ್ಟು ಇದ್ದರೂ ಬೇಸಿಗೆಯಲ್ಲಿ ಹದಿನೈದು ದಿನಗಳಿಗೊಮ್ಮೆ ನೀರು ಬಿಡುತ್ತಾರೆ.
ಬೇಸಿಗೆ ಕಾಲವೆಲ್ಲಾ ತೀವ್ರವಾದ ಬಿಸಿಯಿಂದ ತತ್ತರಿಸುತ್ತಿರುತ್ತದೆ. ಪಟ್ಟಣದ ಹತ್ತಿರವಿರುವ ಅನೇಕ ಕಬ್ಬಿಣದ ಖನಿಜಗಳ ಗಣಿಗಾರಿಕೆ ಶಾಖವನ್ನು ಇನ್ನಷ್ಟು ಹೆಚ್ಚಿಸುತ್ತದೆ.
“ಈ ರಾಜಪ್ಪ ಇನ್ನೂ ಏಕೆ ಬರಲಿಲ್ಲ?” ಎಂದುಕೊಳ್ಳುತ್ತಾ, ಗೋಣಿ ಚೀಲದಲ್ಲಿ ಉಳಿದಿದ್ದ ನೀರಿನ ಪ್ಯಾಕೆಟ್‌ಗಳನ್ನು ತೆಗೆದು ಬಕೆಟ್‌ನಲ್ಲಿ ಹಾಕಿ, ಅರ್ಧವಾಗಿ ಕರಗಿದ್ದ ಐಸ್ ತುಂಡಿನ ಹತ್ತಿರ ಇಟ್ಟನು ದಾಸಪ್ಪ.
ತನ್ನ ಅಂಗಿಯ ಒಳಗಿನ ಜೇಬನ್ನು ತಡವಿ, ಕೈ ಹಾಕಿ ಚಿಲ್ಲರೆ ನಾಣ್ಯಗಳ ನಡುವೆ ಬೆವರಿನಿಂದ ನೆನೆದಿದ್ದ ಹತ್ತು ರೂಪಾಯಿ ನೋಟುಗಳನ್ನು ಮೂರು ತೆಗೆದು ಕೈಯಲ್ಲಿಟ್ಟುಕೊಂಡು, ಟೋಪಿ ಹಾಕಿಕೊಂಡು, ಬಕೆಟ್ ಸಮೇತ ರಸ್ತೆಯನ್ನು ದಾಟಿ ಊಟದ ಬಂಡಿಯ ಹತ್ತಿರ ಹೋಗಿ ನಿಂತನು ದಾಸಪ್ಪ.
ದುಡ್ಡು ತೆಗೆದುಕೊಂಡು, ಒಂದು ರಾಗಿ ಮುದ್ದೆ, ಒಂದು ಹಿಡಿ ಅನ್ನ ಮತ್ತು ಪಲ್ಯ ಹಾಕಿದ ಕಾಗದದ ತಟ್ಟೆಯನ್ನು ಬಂಡಿಯವನು ನೀಡಿದ.
ದಾಸಪ್ಪ ಮತ್ತೆ ಕರಂಜ ಮರದ ನೆರಳಿನಲ್ಲಿ ಕುಳಿತು ನಿಧಾನವಾಗಿ ಊಟ ಮುಗಿಸಿದ. ಗೋಣಿ ಚೀಲದಿಂದ ನೀರಿನ ಬಾಟಲಿಯನ್ನು ತೆಗೆದು ಕೈ ತೊಳೆದುಕೊಂಡು ಗಂಟಲನ್ನು ತೇವಗೊಳಿಸಿದ.
ಮತ್ತೊಮ್ಮೆ ಮುಖ ಒರೆಸಿಕೊಂಡು ಮರಕ್ಕೆ ಒರಗಿ ದಾಸಪ್ಪ ಕಣ್ಣು ಮುಚ್ಚಿದ. ಸಾಮಾನ್ಯವಾಗಿ ಕೂಗಿದಂತೆ ಅಲ್ಲದೆ, ಹಸಿರು ದಟ್ಟವಾದ ಎಲೆಗಳಿರುವ ಕೊಂಬೆಗಳಲ್ಲಿನ ತಂಪಿಗೆ ಮೈಮರೆತಿದ್ದ ಕಾಗೆ ‘ಕುರ್…!’ ಎಂದು ಕೂಗುತ್ತಿತ್ತು. ಮರದ ಮೇಲಿದ್ದ ಜೋಡಿ ಮೈನಾಗಳು ತಮ್ಮ ಗಂಟಲನ್ನು ಜೋಡಿಸುತ್ತಿದ್ದವು.
ಇಬ್ಬರು ಭಿಕ್ಷುಕರು ತಮ್ಮದೇ ಲೋಕದಲ್ಲಿ ಅದೇ ಮರದ ನೆರಳಿನಲ್ಲಿ ಕುಳಿತಿದ್ದರು.
“ಸಂಜೆಯ ಸಮಯದಲ್ಲಿ ಕೆಲಸ ಮಾಡಿ, ಬಿಸಿಲಿದ್ದಾಗ ನೆರಳಿನಲ್ಲಿರುವುದು ಸಾಧ್ಯವಿಲ್ಲದ ಕೆಲಸ. ಸೌತೆಕಾಯಿ ಮಾರಿದರೂ, ವಾಟರ್ ಪ್ಯಾಕೆಟ್‌ಗಳನ್ನು ಮಾರಿದರೂ ಬಿಸಿಲಿನಲ್ಲಿ, ಧೂಳಿನಲ್ಲಿ ಅತ್ತಿತ್ತ ಓಡಾಡುತ್ತಾ ಮಾರಬೇಕಾಗುತ್ತದೆ.” ಸ್ವಗತದಲ್ಲಿ ಅಂದುಕೊಂಡು ನಿಟ್ಟುಸಿರು ಬಿಟ್ಟು, ಬಕೆಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ಏಳಲು ಸಿದ್ಧನಾದ.
“ಅಪ್ಪಾ!” ಎಂದು ಬಂದು, ಕೈಯಲ್ಲಿದ್ದ ಚೀಲವನ್ನು ಕೆಳಗಿಟ್ಟು, ತಲೆಯ ಮೇಲಿದ್ದ ಮೂಟೆಯೊಂದಿಗೆ ನಿಂತಿದ್ದ ಮಗನ ಮಾತಿಗೆ ದಾಸಪ್ಪ ಎದ್ದ. ಸಹಾಯ ಮಾಡಿ ಮೂಟೆಯನ್ನು ಕೆಳಗಿಳಿಸಿದ.
“ಇನ್ನೊಂದು ಮೂಟೆ ಅಲ್ಲಿ ಇಟ್ಟಿದ್ದೀನಿ, ತರುತ್ತೀನಿ ಇರು” ಎಂದು ರಾಜಪ್ಪ ಹೋಗಿ ಅದನ್ನು ತಂದು ಕೆಳಗಿಟ್ಟ.
“ಮೊನ್ನೆ ರಾತ್ರಿ ಬರ್ತೀನಿ ಅಂತಾ ನಾಲ್ಕು ದಿನದ ಹಿಂದೆ ಹೋಗಿ ಈಗ ಬರ್ತೀಯಾ ಮಗನೇ?” ಎಂದು ಪ್ರಶ್ನಿಸಿ, ರಾಜಪ್ಪನ ಉತ್ತರಕ್ಕಾಗಿ ಕಾಯದೆ, “ಅನ್ನ ತಿಂದಿದ್ದೀಯಾ ಮಗನೇ! ಬಂಡಿ ಹತ್ತಿರ ಹೋಗಿ ತರುತ್ತೀನಿ ಇರು” ಎನ್ನುತ್ತಾ ಹೊರಡಲು ಸಿದ್ಧನಾದ ಅಪ್ಪನ ಕೈ ಹಿಡಿದು ರಾಜಪ್ಪ ಕುಳ್ಳಿರಿಸಿದ.
“ಅಮ್ಮ ಜೋಳದ ರೊಟ್ಟಿ, ಕಡಲೆಬೀಜಗಳ ಚಟ್ನಿ ಪುಡಿ, ಊರಿಬಿಂಡಿ (ಒಂದು ಬಗೆಯ ಗಟ್ಟಿ ಚಟ್ನಿ) ಮಾಡಿ ಕಳುಹಿಸಿದ್ದಾಳೆ. ಈಗ ಮತ್ತು ರಾತ್ರಿಗೆ ಸಾಕಾಗುತ್ತೆ. ಬನ್ನಿ ಅಪ್ಪಾ, ತಿನ್ನೋಣ!”
“ನಾನು ಮುದ್ದೆ ತಿಂದು ಒಂದು ಗಂಟೆಯೂ ಆಗಿಲ್ಲ ಅಪ್ಪಾ! ನೀನು ತಿನ್ನು ಮಗನೇ!” ಎನ್ನುತ್ತಿದ್ದ ದಾಸಪ್ಪನಿಗೆ “ರೊಟ್ಟಿಗಳು ಚಿಕ್ಕವೇ. ನೀನೂ ಸ್ವಲ್ಪ ತಿನ್ನು” ಎಂದು ಮೊಸರಿನ ಪ್ಯಾಕೆಟ್ ತಂದುಕೊಟ್ಟ. ಎಲೆಯಲ್ಲಿ ಎರಡು ರೊಟ್ಟಿಗಳನ್ನು ಇಟ್ಟು, ಶೇಂಗಾ ಚಟ್ನಿ ಪುಡಿ ಹಾಕಿ, ಅದರಲ್ಲಿ ಮೊಸರು ಹಾಕಿ ಕಲಸಿ ತಂದೆಗೆ ನೀಡಿ, ತಾನೂ ತಿಂದು ಮುಗಿಸಿದ ರಾಜಪ್ಪ.
“ಸಸ್ತಾ ಸಿಕ್ಕರೆ ಸೌತೆಕಾಯಿಗಳನ್ನು ಹೆಚ್ಚು ತಂದಿರುವೆ, ನಾಲ್ಕು ದಿನ ಚಿಂತೆಯಿಲ್ಲ” ಎಂದು ರಾಜಪ್ಪ ಬಾಯಿಯನ್ನು ಬಿಗಿಯಾಗಿ ಕಟ್ಟಿದ ಮೂಟೆಯನ್ನು ಬಿಚ್ಚಿ ಮೇಲಕ್ಕೆದ್ದ.
ಅವರು ಸಾಮಾನ್ಯವಾಗಿ ತಮ್ಮ ಹಿತ್ತಾಳೆ ಗಂಗಾಳ ಇಡುವ ಸೋಡಾ ಅಂಗಡಿಗೆ ಹೋಗಿ ಅದನ್ನು ತಂದ ರಾಜಪ್ಪ.
ವೇಗವಾಗಿ ಕೆಲವು ಸೌತೆಕಾಯಿಗಳನ್ನು ಉದ್ದವಾಗಿ ಸೀಳಿ ಪಾತ್ರೆಯಲ್ಲಿ ಇಟ್ಟನು. ಗೋಣಿ ಚೀಲದಲ್ಲಿದ್ದ ಕಾಗದಗಳು, ಖಾರದ ಪುಡಿ ಬಾಟಲಿಯನ್ನು ಅಗಲವಾದ ಆ ಪಾತ್ರೆಯ ಒಂದು ಬದಿಯಲ್ಲಿಟ್ಟು, ಅದನ್ನು ನೀರಿನ ಪ್ಯಾಕೆಟ್‌ಗಳಿದ್ದ ಬಕೆಟ್ ಮೇಲೆ ಇಟ್ಟುಕೊಂಡು ಮೇಲಕ್ಕೆದ್ದ.
“ಅಪ್ಪಾ! ನೀನು ಇಲ್ಲಿಯೇ ನೆರಳಿನಲ್ಲಿ ಕುಳಿತುಕೋ, ಎರಡನ್ನೂ ನಾನೇ ಮಾರಿ ಬರುತ್ತೇನೆ. ಸಂಜೆ ರೂಮಿಗೆ ಹೋಗೋಣ” ಎಂದು ಹೇಳಿ ಉತ್ತರಕ್ಕಾಗಿ ಕಾಯದೆ ನಿಲ್ದಾಣದೊಳಗೆ ಹೋದ ರಾಜಪ್ಪ.
ದಾಸಪ್ಪನದು ಅನಂತಪುರ ಹತ್ತಿರದ ಹಳ್ಳಿ. ಊರಿನಲ್ಲಿ ಹೆಂಚಿನ ಮನೆ, ಎರಡು ಎಕರೆ ಒಣಭೂಮಿ ಇದೆ. ಮಳೆಗಾಲದಲ್ಲಿ ಬೀಜಗಳನ್ನು ಬಿತ್ತುತ್ತಾರೆ. ಮಳೆ ದೇವರು ಕರುಣಿಸಿದರೆ ಆಹಾರ ಧಾನ್ಯಗಳು ಮನೆ ಸೇರುತ್ತಿದ್ದವು.
ಕಳೆದ ಎರಡು ವರ್ಷಗಳಿಂದ ಮಳೆ ಸರಿಯಾದ ಸಮಯಕ್ಕೆ ಬಾರದೆ, ಉಳುಮೆ ಮಾಡಿದ ಗದ್ದೆಯಲ್ಲಿ ಬಿತ್ತಿದ ಬೀಜಗಳು ಮಣ್ಣು ಪಾಲಾಗಿದ್ದವು. ಈ ವರ್ಷ ಮಳೆ ಸಂಪೂರ್ಣವಾಗಿ ಮುಖ ತೋರಿಸದ ಕಾರಣ, ಗದ್ದೆಯಲ್ಲಿ ಉಳುಮೆ ಮಾಡಲು ಅವಕಾಶವಾಗಲಿ, ಅಗತ್ಯವಾಗಲಿ ಬರಲಿಲ್ಲ.
ಬರಗಾಲ ತೀವ್ರವಾದ್ದರಿಂದ ಇಡೀ ಹಳ್ಳಿಗಳೇ ಪಟ್ಟಣಗಳ ಕಡೆಗೆ ವಲಸೆ ಹೋದವು.
ಹೆಂಡತಿಯನ್ನು ಊರಿನಲ್ಲಿ ಮನೆಯಲ್ಲಿ ಬಿಟ್ಟು, ಮಗ ರಾಜಪ್ಪನೊಂದಿಗೆ ಬಳ್ಳಾರಿ ಪಟ್ಟಣ ತಲುಪಿದ. ಚಿಕ್ಕ ತಗಡಿನ ಶೆಡ್‌ನಲ್ಲಿ ಆಶ್ರಯ ಪಡೆದು, ಬೆಳಗ್ಗೆ ಸೊಪ್ಪು ತರಕಾರಿಗಳನ್ನು ಸಗಟಾಗಿ ಖರೀದಿಸಿ ಮಾರಾಟ ಮಾಡುವುದು, ಅದು ಮುಗಿದ ನಂತರ ಬಸ್ ನಿಲ್ದಾಣದಲ್ಲಿ ಸೌತೆಕಾಯಿ, ವಾಟರ್ ಪ್ಯಾಕೆಟ್‌ಗಳನ್ನು ಮಾರಾಟ ಮಾಡುವುದು ಮಾಡುತ್ತಿದ್ದರು. ವಾರಕ್ಕೊಮ್ಮೆ ಇಬ್ಬರಲ್ಲಿ ಒಬ್ಬರು ಊರಿಗೆ ಹೋಗಿ ಬರುತ್ತಿದ್ದರು.
ನೀರಿನ ಪ್ಯಾಕೆಟ್‌ಗಳಿದ್ದ ಸಣ್ಣ ಚೀಲವನ್ನು ಗೋಣಿ ಚೀಲದಲ್ಲಿಟ್ಟು ಬಾಯಿ ಕಟ್ಟಿ, ಕಾಲುಗಳನ್ನು ಅದರ ಮೇಲೆ ಇಟ್ಟನು. ಮರದ ಬುಡಕ್ಕೆ ಒರಗಿ ದಾಸಪ್ಪ ನಿದ್ರೆಗೆ ಜಾರಿದನು.
ಮತ್ತೊಂದು ಗಂಟೆಗೆ ರಾಜಪ್ಪ ಬಂದು ತಂದೆಯನ್ನು ಎಬ್ಬಿಸಿದ. ಮೂಟೆಯಿಂದ ಸೌತೆಕಾಯಿಗಳನ್ನು ತೆಗೆದು ಸೀಳುತ್ತಿದ್ದಾಗ “ಈ ನೀರಿನ ಪ್ಯಾಕೆಟ್‌ಗಳು ಎಲ್ಲಿಂದ ತಂದೆ?” ಎಂದು ದಾಸಪ್ಪ ಕೇಳಿದ.
“ನಮ್ಮೂರಿನ ಮಡಪ್ಪನಿಂದ ತಂದೆ. ಇನ್ನೂರಕ್ಕೂ ಹೆಚ್ಚು ಪ್ಯಾಕೆಟ್‌ಗಳು ಇರಬಹುದು! ಸಾರಾಯಿ ಕುಡಿಯಲು ಐವತ್ತು ರೂಪಾಯಿ ತೆಗೆದುಕೊಂಡು ಕೊಟ್ಟ ಅಪ್ಪಾ.”
“ಮಡಪ್ಪ ಅಂದರೆ ಊರುಗಳಲ್ಲಿ ಯಾರು ಸತ್ತರೂ ಶವದ ಕೆಲಸಗಳನ್ನೆಲ್ಲಾ ಮಾಡುವವನು ತಾನೆ? ಅವನಿಂದ ತಂದೆ? ಶವಪೆಟ್ಟಿಗೆಯಲ್ಲಿ ತಂಪು ನೀಡಲು ಹಾಸುವ ಪ್ಯಾಕೆಟ್‌ಗಳನ್ನು ಚೀಲದಲ್ಲಿ ಹಾಕಿಕೊಳ್ಳುತ್ತಾನೆ ತಾನೆ ಅವನು.” ದಾಸಪ್ಪ ಬೇಸರದಿಂದ ಕೇಳಿದ. ರಾಜಪ್ಪ ತಾನು ತಂದಿದ್ದ ಕೆಲವು ಪ್ಯಾಕೆಟ್‌ಗಳನ್ನು ತೆಗೆದು ಬಕೆಟ್‌ನಲ್ಲಿ ಹೊಸದಾಗಿ ಖರೀದಿಸಿದ ಐಸ್ ದಿಮ್ಮಿಯ ಮೇಲೆ ಇಟ್ಟು ತಲೆ ಎತ್ತಿದ.
“ಶವದ ಹತ್ತಿರ ಹಾಸಿದ ಪ್ಯಾಕೆಟ್‌ಗಳಾದರೆ ಏನು ಅಪ್ಪಾ? ಹೆಚ್ಚು ಹಣ ಕೊಟ್ಟು ಖರೀದಿಸುವ ಕಂಪನಿ ಬಾಟಲ್ ನೀರು ಒಳ್ಳೆಯದೆಂದು ಹೇಗೆ ನಂಬುವುದು? ಆ ನೀರು ಎಲ್ಲಿಯದು, ಯಾವಾಗದು! ಎಷ್ಟೋ ಕಡೆಗಳಲ್ಲಿ ಖಾಲಿ ಕಂಪನಿ ಬಾಟಲ್‌ಗಳಲ್ಲಿ ಸಾಮಾನ್ಯ ನೀರನ್ನು ತುಂಬಿ ಸೀಲ್ ಹಾಕಿ ಮಾರಾಟ ಮಾಡುತ್ತಿಲ್ಲವೇ?”
ರಾಜಪ್ಪ ಇನ್ನೂ ಏನೋ ಹೇಳಲು ಹೊರಟಿದ್ದಾಗ ದಾಸಪ್ಪ ಕೇಳಿದ.
“ನೋಡುತ್ತಾ ನೋಡುತ್ತಾ ಇಂತಹದ್ದನ್ನು ಹೇಗೆ ಮಾರೋದು?”
“ಅಪ್ಪಾ! ನಾವು ಪ್ರತಿದಿನ ಮಾರುವ ಸೊಪ್ಪು ತರಕಾರಿಗಳಲ್ಲಿ ಕೆಲವು ಈ ಊರಿನಲ್ಲಿ ಮಾತ್ರವಲ್ಲದೆ ಅನೇಕ ಕಡೆಗಳಲ್ಲಿ ಚರಂಡಿ ನೀರಿನಿಂದಲೇ ತಾನೆ ಬೆಳೆಯುತ್ತಾರೆ. ಆರೋಗ್ಯಕ್ಕೆ ತರಕಾರಿ ಒಳ್ಳೆಯದೆಂದು ಅದನ್ನೇ ತಾನೆ ಎಲ್ಲರೂ ತಿನ್ನುತ್ತಿರುವುದು.”
“ನಾನು ಕಬ್ಬಿನ ತೋಟದ ಕೆಲಸಕ್ಕೆ ಶೋಲಾಪುರಕ್ಕೆ ಹೋಗಿದ್ದಾಗ ನೋಡಿದೆ ಅಪ್ಪಾ! ಅಲ್ಲಿ ವಾಸನೆ ಬರುತ್ತಿದ್ದ ಸಿಟಿ ಚರಂಡಿ ನೀರಿನಿಂದ ಎಕರೆಗಟ್ಟಲೆ ಕಬ್ಬು ಬೆಳೆಯುತ್ತಿದ್ದರು. ಆ ಕಬ್ಬನ್ನೇ ದೊಡ್ಡ ದೊಡ್ಡ ಫ್ಯಾಕ್ಟರಿಗಳು ಖರೀದಿಸಿ ಸಕ್ಕರೆ ಮಾಡಿದರೆ ಎಲ್ಲರೂ ಖರೀದಿಸುತ್ತಿದ್ದಾರೆ ತಾನೆ! ನಾವೇನು ಕೆಟ್ಟ ನೀರನ್ನು ಮಾರುತ್ತಿಲ್ಲ. ಲೋಕವೇ ಕೆಟ್ಟು ಹೋಗಿದೆ ಅಪ್ಪಾ! ನಾನು ಇವುಗಳನ್ನು ನೀರಿನಿಂದ ತೊಳೆದು ತಂದಿದ್ದೇನೆ. ನೀನು ಏನೂ ಯೋಚಿಸದೆ ಇಲ್ಲಿಯೇ ಕುಳಿತುಕೋ. ನಾನು ಇವುಗಳನ್ನು ಮಾರಿ ಬರುತ್ತೇನೆ, ಹೋಗೋಣ” ಎಂದು ಹೇಳಿ ಬಕೆಟ್ ತೆಗೆದುಕೊಂಡು ಹೋದ ರಾಜಪ್ಪ.
ಗಂಟಲು ಒಣಗಿದಂತೆ ಅನಿಸಿದರೆ ಬಾಟಲಿಯನ್ನು ತೆಗೆದು ನೋಡಿದ. ಅದರಲ್ಲಿ ಒಂದು ಹನಿ ನೀರೂ ಇರಲಿಲ್ಲ. ಗೋಣಿ ಚೀಲದಲ್ಲಿ ಮಗ ತಂದಿದ್ದ ಪ್ಯಾಕೆಟ್‌ಗಳ ನೀರನ್ನು ಕುಡಿಯಲು ಮನಸ್ಸು ಬರಲಿಲ್ಲ.
ಲಭ್ಯವಿಲ್ಲದಿದ್ದಾಗ ನೀರಡಿಕೆ ಇನ್ನಷ್ಟು ಹೆಚ್ಚಾಗುವುದು ಸಹಜ ಯಾರಿಗಾದರೂ. ನೀರು ಕುಡಿಯಬೇಕೆಂಬ ಆಸೆ ಹೆಚ್ಚಾದ್ದರಿಂದ ದಾಸಪ್ಪ ಮೇಲಕ್ಕೆದ್ದ.
ಕೆಲವು ಸಮಯದ ಹಿಂದೆ ಬಸ್ ನಿಲ್ದಾಣದಲ್ಲಿ ಒಂದೆರಡು ಅಂಗಡಿಗಳಲ್ಲಿ ಕುಡಿಯುವ ನೀರಿಗಾಗಿ ಕೇಳಿ ಇಲ್ಲವೆಂದು ಕೇಳಿಸಿಕೊಂಡಿದ್ದ.
ಬಾಟಲ್ ನೀರು ಖರೀದಿಸಬೇಕೆಂದು ಒಂದು ಕ್ಷಣ ಅನಿಸಿತು. ಅದಕ್ಕೆ ಇಪ್ಪತ್ತು ರೂಪಾಯಿ ಹಾಕಲು ಮನಸ್ಸು ಒಪ್ಪಲಿಲ್ಲ. ಸೋಡಾ ನೀರಿಗೂ ಅಷ್ಟೇ ಹಾಕಬೇಕು.
ಆ ಇಪ್ಪತ್ತು ರೂಪಾಯಿಗಾಗಿ ಎಷ್ಟು ಸಮಯ ಗಂಟಲು ಹರಿದುಕೊಂಡು ಬಿಸಿಲಿನಲ್ಲಿ ಅತ್ತಿತ್ತ ಓಡಾಡಿದೆ ತಾನೆ! ಎಂದುಕೊಂಡು ನೆಲದ ಮೇಲೆ ಕುಳಿತುಕೊಂಡ.
ನೀರು ಕುಡಿಯದಿದ್ದರೆ ಪ್ರಾಣ ಹೋಗುತ್ತಿರುವಂತೆ ಅನಿಸಿತು ದಾಸಪ್ಪನಿಗೆ. ಕೈಯನ್ನು ಗೋಣಿ ಚೀಲದೊಳಗೆ ಹಾಕಿ ಒಂದು ನೀರಿನ ಪ್ಯಾಕೆಟ್ ತೆಗೆದು ಬಾಯಿಯ ಮುಂದಿನ ಹಲ್ಲುಗಳಿಂದ ಕಚ್ಚಿದ. ನೀರಿನ ಹನಿಗಳು ಗಂಟಲೊಳಗೆ ಇಳಿಯುತ್ತಾ ಪ್ರಾಣವನ್ನು ಸಮಾಧಾನಪಡಿಸಿದವು.
ಯಾರಿಂದ ಅವುಗಳನ್ನು ತಂದಿದ್ದಾನೆಂದು ಮಗ ತನಗೆ ಹೇಳದಿದ್ದರೆ ತಾನು ಇಷ್ಟೊಂದು ಚಿಂತಿಸುತ್ತಿದ್ದನೇ? ಎಂದುಕೊಂಡ ದಾಸಪ್ಪ.
“ಸೋತೆಕಾಯ್! ಸೋತೆಕಾಯ್! ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು!” ಬಸ್ ನಿಲ್ದಾಣದಿಂದ ಮಗನ ಧ್ವನಿ ಲಘುವಾಗಿ ಕೇಳಿಸುತ್ತಿದೆ.
ಯಾವುದು ಮುಟ್ಟಬಲ್ಲದ್ದು? ಯಾವುದು ಮುಟ್ಟಬಾರದದ್ದು? ನೀರಡಿಕೆ ಕಲಿಸಿದ ಸಮಾನತೆಯ ತತ್ವ ದೇಹವನ್ನು ತೊಟ್ಟಿಲಲ್ಲಿ ಹಾಕಿದಂತೆ ಜೋತಾಡಿಸುತ್ತಿದ್ದಾಗ ದಾಸಪ್ಪ ನಿದ್ರೆಗೆ ಜಾರಿದನು.
–ಕೋಡಿಹಳ್ಳಿ ಮುರಳೀ ಮೋಹನ್