ಪುರಾಣ ಪರಿಕರಗಳು ಮತ್ತು ಚರಿತ್ರೆಯ ನಿರಚನೆ: ಸಂಗನಗೌಡ ಹಿರೇಗೌಡ

[ಎಚ್.ಎಸ್.ಶಿವಪ್ರಕಾಶರ ಮಹಾಚೈತ್ರ, ಮಂಟೆಸ್ವಾಮಿ, ಮಾದಾರಿ ಮಾದಯ್ಯ ನಾಟಕಗಳನ್ನು ಅನುಲಕ್ಷಿಸಿ]

ಹನ್ನೆರಡನೇ ಶತಮಾನದಲ್ಲಿ ಶರಣರು ಸನಾತನದ ಒಂದಷ್ಟು ಎಳೆಗಳಿಂದ ಬಿಡಿಸಿಕೊಂಡು ವಿನೂತನದೆಡೆಗೆ ಹೊರಳಿದ್ದು ಈಗಾಗಲೇ ಚರಿತ್ರೆಯಲ್ಲಿ ದಾಖಲಾಗಿದೆ. ಅಂಥ ವಿನೂತನಕ್ಕೆ ಬರಗುಗೊಂಡ ಹರಿಹರ, ಚಾಮರಸ, ಪಾಲ್ಕುರಿಕೆ ಸೋಮನಾತ, ಬೀಮ ಕವಿಯನ್ನೂ ಒಳಗೊಂಡು ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಸಾಹಿತ್ಯದ ಮೇಲೆ ದಟ್ಟ ಪ್ರಭಾವವಾದ್ದರಿಂದ ಕನ್ನಡ ಸೃಜನಶೀಲ ಬರೆಹಗಾರರು ಮತ್ತೆ ಮತ್ತೆ ಆ ಕಾಲಕ್ಕೆ ತಿರುಗಿ ನೋಡುವಂತಾಯಿತು. ಹಾಗಾಗಿಯೇ ಕನ್ನಡ ಸಾಹಿತ್ಯದಲ್ಲಿ ಅನೇಕ ನಾಟಕಗಳು ಹಾಗೂ ಕಾದಂಬರಿಗಳು, ಕವಿತೆಗಳು ಬಂದವು. ನಾಟಕಗಳನ್ನೇ ಮುಖ್ಯವಾಗಿ ತೆಗೆದುಕೊಂಡು ನೋಡಿದ್ರೆ, ಲಂಕೇಶರವರು ತಮ್ಮ “ಸಂಕ್ರಾತಿ” ನಾಟಕದಲ್ಲಿ ಬಸವಣ್ಣನವರ ತಾತ್ವಿಕ ನಿಲುವುಗಳು ಕೆಳವರ್ಗಗಳ ಮೇಲೆ ಯಾವ ರೀತಿಯಾದ ಪ್ರಭಾವ ಬೀರಿದ್ದವು ಎನ್ನುವುದನ್ನು ಮುಖ್ಯವಾಗಿಟ್ಟುಕೊಂಡು ನಾಟಕ ರಚಿಸಿದ್ದಾರೆ. ಗಿರೀಶ್‌ ಕಾರ್ನಾಡರು “ತಲೆದಂಡ” ನಾಟಕದಲ್ಲಿ ಒಟ್ಟೂ ಕ್ರಾಂತಿ ಸಂದರ್ಭದ ಸಮೂಹವನ್ನು ಎಲೈಟ್ಮೆಂಟಾಗಿ ನೋಡುತ್ತಾರೆ. ಇವರೆಡೂ ನಾಟಕಗಳು ಚರಿತ್ರೆ ಮತ್ತು ವರ್ತಮಾನವನ್ನು ಮುಖ್ಯವಾಗಿ ಪ್ರಾತಿನಿಧಿಕರಣಗೊಳಿಸಿದರೆ; ಎಚ್.ಎಸ್‌ ಶಿವಪ್ರಕಾಶರವರ “ಮಹಾಚೈತ್ರ” ನಾಟಕ “ಮಂಟೆಸ್ವಾಮಿ ಕಥಾ ಪ್ರಸಂಗ” ನಾಟಕವನ್ನೂ ಒಳಗೊಂಡು “ಮಾದರಿ ಮಾದಯ್ಯ” ಎನ್ನುವ ಈ ಮೂರೂ ನಾಟಕಗಳು ಕಲ್ಯಾಣ ಕ್ರಾಂತಿಯ ನಂತರದ ಘಟನೆಯನ್ನಿಟ್ಟುಕೊಂಡು ಚರಿತ್ರೆ, ಪೂರಾಣ, ವರ್ತಮಾನ ಮೂರನ್ನೂ ಸಮೀಕರಿಸಿ ವಿಭಿನವಾಗಿ ಮತ್ತು ವಿಶಿಷ್ಟವಾಗಿ ನೋಡುತ್ತಾರೆ.

ಸೃಜನಶೀಲ ಬರೆಹದಲ್ಲಿ ಚರಿತ್ರೆ, ಪೂರಾಣದಂಥ ಮುಖ್ಯಸಂಗತಿಗಳನ್ನು ವರ್ತಮಾನಕ್ಕೆ ಒಗ್ಗುವಂತೆ ನಿರಚನೆಗೊಳಿಸುವುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆನ್ನುವುದಕ್ಕೆ “ಮಹಾಚೈತ್ರ” ನಾಟಕದ ಪ್ರಾರಂಭದ ವಚನವೇ ಹೀಗೆ ಹೇಳುತ್ತದೆ. “ಜಗಕ್ಕಾದುದ ಕಿತ್ತು ಅಲ್ಲವಾದುದ ತೊಟ್ಟು, ಜಗ ಹಿಡಿದುದ ಬಿಟ್ಟು ಜಗ ಒಲ್ಲದುದ ತೊಟ್ಟು”. ಅಂದ್ರೆ ಈಗಾಗಲೇ ಜಗತ್ತು ವ್ಯಾಖ್ಯಾನಿಸಿರುವ ಲೋಕವನ್ನು ವಿಭಿನ್ನವಾಗಿ ನೋಡುವುದನ್ನೇ ಹೇಳುತ್ತದೆ. ಹಾಗಾಗಿಯೇ ಇಡೀ ನಾಟಕ ಈಗಾಗಲೇ ಕಲ್ಯಾಣ ಕ್ರಾಂತಿಯ ವ್ಯಾಖ್ಯಾನಗಳನ್ನು ಮುರಿದು ಹೊಸ ವ್ಯಾಖ್ಯಾನಗಳಿಗೆ, ಅಥವಾ ಅರ್ಥ ಸಾಧ್ಯತೆಗಳಿಗೆ ಹಿಗ್ಗಿಸಿಕೊಂಡು ಹೋಗುತ್ತದೆ.

ಬವಣ್ಣನವರ ಮುಖ್ಯ ನಿಲುವು ಏಕದೇವೋಪಾಸನವಾಗಿತ್ತು ಎನ್ನುವುದಕ್ಕೆ ೧೯೭೩ ರಲ್ಲಿ ರಚನೆಯಾದ ಲಂಕೇಶರ “ಸಂಕ್ರಾತಿʼ ನಾಟಕ ಘಟಿಸಿದರೆ. ೧೯೮೫ ರಲ್ಲಿ ರಚನೆಯಾದ ಎಚ್.ಎಸ್‌ ಶಿವಪ್ರಕಾಶರ “ಮಹಾಚೈತ್ರ” ನಾಟಕವೂ ಲಂಕೇಶರ ನಿಲುವನ್ನು ಒಳಗೊಂಡು ಮುಂದಕ್ಕೆ ಸಾಗುತ್ತದೆ. ಪಾತ್ರದಾರಿಯಾದ ಬಹುರೂಪಿ ಚೌಡಯ್ಯನು, ನಗೆಯ ಮಾರಿ ತಂದೆಯ ಉದ್ದೇಶಿಸಿ “ಯಾವುದೋ ಮೇಕೆ ಮರಿ ಸಿಕ್ಕಾಕಿಕೊಂಡಿದೆ! ಬಿಡಿಸುತ್ತಾ ಇದಾರೆ… ಅವರ ಜೊತೆಗೆ ಅಪ್ಪಣ್ಣವರು…”[ಪು.ಸಂ.೧೦] ಮುಂದೆ ಅಪ್ಪಣ್ಣನು ಮಾಚಿದೇವನನ್ನು ಉದ್ದೇಶಿಸಿ “ಆ ಮೇಕೆ ಮರಿ ಹೇಗೆ ಓಡುತ್ತಾ ಇದೆ. ಆ ಕೊಳ್ಳದಿಂದ ಹಾಡು ಹೊರಡುತ್ತಾ ಇದೆ” ಎಂದು ಹೇಳುತ್ತಾನೆ. ಬಸವಣ್ಣನವರ ವಿಚಾರಗಳಿಂದ ಪ್ರಾಣಿ ಸಂಕುಲಗಳು ಮನುಷ್ಯನಿಂದ ಹೇಗೆ ಬಿಡುಗಡೆ ಪಡೆದವು ಎನ್ನುವುದನ್ನು ಸೂಚ್ಯವಾಗಿ ಹೇಳುತ್ತಾರೆ. ಆದರೆ ಮುಂದೆ ನಾಟಕ ಸಾಗಿದಂತೆ, ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಬಸವಣ್ಣನವರ ಏಕದೇವೋಪಾಸನೆ ಕ್ರಾಂತಿಯ ನಂತರ ಮತ್ತು ಬಸವಣ್ಣ ಕಲ್ಯಾಣ ತೊರೆದ ನಂತರ ಸಾಕಷ್ಟು ಪಲ್ಲಟಗಳಾಗಿ ಯಥಾಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲಿಯೇ ಉಳಿದಿದ್ದ ಇನ್ನುಳಿದ ಶರಣರಿಗೆ ಭಯ, ಅಪನಂಬಿಕೆಗಳು ಹೆಚ್ಚಾಗುತ್ತವೆ. ಹಾಗಾಗಿಯೇ ಬಾಚಿ ಬೋಮ್ಮಯ್ಯನು ಕಪ್ಪಡಿಗೆ ತೊರೆದಿದ್ದ ಬಸವಣ್ಣನವರ ಕುರಿತು “ಆ ಬಸವಣ್ಣೋರ ಮಾತ್ಕಟ್ಕಂಡು ಇದೆಲ್ಲಾ ಪರಿಪಾಟ್ಲು. ಇನ್ನಿಮ್‌ ಸವಾಸ ಸಾಕು. ಒನ್ನನ್ಸಲ ಅನಿಸ್ತದೆ……ಕಾಳ್ಳವ್ವಂಗೆ ಕುರಿ ಕೋಳಿ ಕೊಡದ್ಬಿಟ್ಬಿಟ್ಟೆ ಅಂತ ಇದೆಲ್ಲ ಗ್ರಹಚಾರ ಬಂತೇನೋ” [ಪು.ಸಂ. ೩೯]ಎಂದು ಹೇಳುತ್ತಾನೆ. ಪರಂಪರೆಯಿಂದ ನಂಬಿಕೊಂಡು ಬಂದಿದ್ದ ನಂಬಿಕೆ, ಅದು ಹೇರಲ್ಪಟ್ಟ ನಂಬಿಕೆಯೆಂದು ಬಸವಣ್ಣ ಅದರಿಂದ ಬಿಡಿಸಿ ಇನ್ನೊಂದು ಹೊಸ ನಂಬಿಕೆ ಹುಟ್ಟುಹಾಕಿದಾಗ ಅದು ಸಂಪೂರ್ಣ ಚಲಾವಣೆಗೆ ಬರದದ್ದಕ್ಕಾಗಿ ಯತಾಸ್ಥಿತಿ ನಂಬಿಕೆಗೆ ಶಿಫ್ಟಾಗುವ ಕಡೆ ಬೊಮ್ಮಯ್ಯ ಆಲೋಚಿಸುತ್ತಾನೆ. ಮತ್ತು ಕಲ್ಯಾಣದಲ್ಲಿ ಕೊಲೆ, ಸುಲಿಗೆ, ಶರಣರ ಮೇಲಿನ ನಿರಂತರ ದಬ್ಬಾಳಿಕೆ ನಡೆಯುತ್ತಿರುವುದರಿಂದ ತಮ್ಮತಮ್ಮ ಅತ್ಮ ರಕ್ಷಣೆಗಾಗಿ ಪರ್ಯ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ.

ಬಾಚಿ ಬೊಮ್ಮಯ್ಯ “ಅಯ್ಯೋ ಇದಾಗದೆ ಇರಲಿ ಅಂತ ನಮ್ಮ ಕಾಳವ್ವನಿಗೆ ಕುರಿ, ಕೋಳಿ ಕೊಟ್ಟೆ”[ಪು.ಸಂ.೭೧] ಎಂದು ಹೇಳುತ್ತಾನೆ. ಮತ್ತು ಮುಖ್ಯವಾಗಿ ಬಸವಣ್ಣನವರು ಅಂತರ್ಜಾತಿ ವಿವಾಹದ ಪ್ರಭಾವ ಕಲ್ಯಾಣ ಪಟ್ಟಣದ ಮೂಲೆ ಮೂಲೆಗೂ ಪಸರಿಸಿತ್ತೆನ್ನುವುದಕ್ಕೆ ಬೀದಿ ಹುಡುಗರು ಮದುವೆ ಆಟ ಆಡುವುದು. ವಿವಾಹದಿಂದಾದ ಪರಿಣಾಮಕ್ಕೆ ಬೇಸತ್ತ ಬೊಮ್ಮಯ್ಯ ಹುಡುಗರ ಕುರಿತು ಹೇಳುವ ಮಾತು “ಮೂರು ಮೆಣಸಿನಕಾಯುದ್ದ ಇಲ್ಲ. ಮದುವೆ ಆಟ ಆಡ್ತಿರೇನ್ರೋ…ನಡೀರಿ…ನಡೀರಿ. ಇನ್ನೊಂದು ಸಲ ನೋಡಿದ್ರೆ ಸಿಗದು ತೋರಣ ಕಟ್ಬಿಡ್ತೀನಿ”[ಪು.ಸಂ.೩೮] ಎಂದು ಹೇಳುತ್ತಾನೆ. ಜಂಗಮರು “ತಿರುಕನ ಕನಸಿನ ಹಾಗಾಯ್ತಲಪ್ಪ ಈ ತಿರುಬೋಕಿಗಳ ಮಹಾಮನೆ” ಎಂದು ವಿಡಂಬನೆ ಮಾಡಿ ಅಲ್ಲಿಯೇ ಉಳಿದುಬಿಡುತ್ತಾರೆ. ಬ್ರಾಹ್ಮಣರು ಮತ್ತು ಜಂಗಮರ ನಡುವೆ ಸಾಂಸ್ಕ್ರತಿಕ ಅಸ್ಮಿತೆಯ ಪ್ರಶ್ನೆ ಬಂದಾಗ ಜಂಗಮರು ವೀರಭದ್ರನನ್ನು ಪ್ರಸ್ಥಾಪಿಸಿ ಸಮರ್ತಿಸಿಕೊಳ್ಳುತ್ತಾರೆ. ಅಪ್ಪಣ್ಣ ಮತ್ತು ಮಾಚಿದೇವ ಇಬ್ಬರೂ ಅಪಾಯದಿಂದ ಪಾರಾಗಲು ಹಿಂಸೆಗೆ ಪ್ರತಿ ಹಿಂಸೆಯನ್ನು ಅನಿವಾರ್ಯವಾಗಿ ಆಗುಮಾಡಿಕೊಳ್ಳುವ ನಿಲುವನ್ನು ಚೆನ್ನಬಸವಣ್ಣನ ಮುಂದಿಡುತ್ತಾರೆ. ಆದರೆ ಚೆನ್ನಬಸವಣ್ಣನವರು: “ಕೊಚ್ಚಿಕೊಂಡು ಹೋದರೂ ಪರವಾಗಿಲ್ಲ ಮರಣವೇ ಮಹಾನವಮಿ, ಒಂದು ಕಿಂಚಿತ್ ಜೀವಕೋಸ್ಕರ” ಎಂದಾಗ ಹರಳಯ್ಯ ನಡುವೆ ಬಾಯಿ ಹಾಕಿ “ಒಂದು ಜೀವದ ಪ್ರಶ್ನೆ ಉಳಿದಿಲ್ಲ……ನಮ್ಮನ್ನ ನೆಚ್ಚಿಕೊಂಡಿರೋ ನೂರಾರು ಮುಗ್ಧ ಜೀವಗಳ ಪ್ರಶ್ನೆ” ಇಲ್ಲಿ ಹರಳಯ್ಯನು ತನ್ನ ಸುಮುದಾಯವೇ ಈ ಘಟನೆಯ ಮುಖ್ಯ ಕೇಂದ್ರಬಿಂದು ಎನ್ನುವ ನೆರೆಟಿವ್‌ಗಳು ಹರಿದಾಡುತ್ತಿರುವ ಭಯವನ್ನು ಮನಗಂಡೇ ಈ ಪ್ರಶ್ನೆ ಎತ್ತುತ್ತಾನೆ. ಅಹಿಂಸೆಯನ್ನೇ ತನ್ನ ನಿಲುವಾಗಿಸಿಕೊಂಡಿದ್ದ ಚೆನ್ನಬಸವಣ್ಣ, “ಹಾಗಾದರೆ ನಾವು ಸೇರಬೇಕಾಗಿರುವುದು ಬೇರೆದಡ. ಕಲ್ಯಾಣದಲ್ಲಿ ಸಂಭವಿಸುವಂತಹ ಹಿಂಸೆ, ರಕ್ತಪಾತಗಳಿಂದ ಅಪಖ್ಯಾತಿಯನ್ನು ಪಡೆಯೋದಿಲ್ಲ. ನಾವು ಕಲ್ಯಾಣವನ್ನು ತ್ಯಜಿಸಿ ಹೋಗ್ತೇವೆ”[ಪು.ಸಂ.೨೦] ಎಂದು ಮಾಚಿದೇವನಿಗೆ ಹೇಳುತ್ತಾನೆ. ಅಲ್ಲಿಂದ ಶರಣರಲ್ಲಿ ಇಬ್ಭಾಗವಾಗಿ ಕೆಲವರು ಚೆನ್ನಬಸವಣ್ಣವರ ಜೊತೆಗೆ ಹೋದರೆ, ಮಾಚಿದೇವ, ಅಪ್ಪಣ್ಣ, ಹೆಂಡದ ಮಾರಯ್ಯ,ವೈದ್ಯ ಸಂಗಣ್ಣ, ಸೊಡ್ಡಳ ಬಾಜರಸರು, ರಾಯಸದ ಮಂಚಣ್ಣನವರು, ಮಧುವರಸ, ಕಿನ್ನರಿ ಬೋಮ್ಮಯ್ಯ, ತುರುಗಾಯಿ ರಾಮಣ್ಣ ಮುಖ್ಯವಾಗಿ ಆಯಗಾರ ಸಮುದಾಯಗಳು ಉಳಿಯುವುದನ್ನು ನಾಟಕಕಾರರು ಸೂಚ್ಯವಾಗಿ ಹೇಳುತ್ತಾರೆ. ಈ ಕ್ರಾಂತಿಯ ಕೇಂದ್ರ ಬಿಂದುಗಳಾದ ಬಸವಣ್ಣನವರು ಈಗಾಗಲೇ ಕಲ್ಯಾಣ ಬಿಟ್ಟು ಹೋಗಿರುವುದು. ಮತ್ತು ಅವರಂತೆ ಚೆನ್ನಬಸವಣ್ಣನವರೂ ಉಳುವಿಗೆ ಹೋಗುವುದು ಈ ನಾಟಕದಲ್ಲಿ ಎರಡೂ ಪಾತ್ರಗಳು ಪಲಾಯನಗೊಂಡಂತೆ ಗೋಚರಿಸುತ್ತವೆ. ಆದರೆ ಈ ನಾಟಕದಲ್ಲಿ ಬಹತೇಕ ಬಸವಣ್ಣವರ ವಿಚಾರಗಳು ಬರುತ್ತಾವಾದರೂ ಎಲ್ಲಿಯೂ ಅವರ ನೇರವಾದ ಪ್ರವೇಶ ಕಂಡು ಬರುವುದಿಲ್ಲ.

ಪ್ರಭುತ್ವಕ್ಕೆ ಯಾವುದೇ ಜಾತಿ ಧರ್ಮವಿರುವುದಿಲ್ಲ. ಮತ್ತು ಇವುಗಳನ್ನು ತನ್ನ ಅನುಕೂಲಕ್ಕಾಗಿ ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತದೆ. ಸಂದಿಗ್ಧ ಸ್ಥಿತಿ ನಿರ್ಮಾಣವಾದಾಗ ತಂತ್ರ ಕುತಂತ್ರಗಳನ್ನು ಹೆಣೆಯುತ್ತದೆ. ಅದೂ ಆಗದಿದ್ದರೆ ಪ್ರಜೆಗಳ ಮುಂದೆ ತನ್ನ ಅಳಬುರುಕಿತನವನ್ನು ಪ್ರದರ್ಶಿಸುತ್ತದೆ. ಲಂಕೇಶರ “ಸಂಕ್ರಾತಿ” ನಾಟಕದಲ್ಲಿ ಬಿಜ್ಜಳನು ಬಸವಣ್ಣನಿಗೆ ಹೇಳುವ ಮಾತು “ನಾನು ನಿಮ್ಮ ಕೂಡಲ ಸಂಗಮನನ್ನು ನೆನೆದರೆ ಬ್ರಾಹ್ಮಣರ ಗುಂಪು ಬೊಬ್ಬೆ ಹಾಕುತ್ತದೆ. ಅವರ ಶ್ರೀಹರಿಯನ್ನು ನೆನೆದರೆ ನಿಮ್ಮ ಶರಣರು ಬೊಬ್ಬೆ ಹಾಕುತ್ತಾರೆ. ಏನು ಮಾಡುವುದೆಂದು ಗೊತ್ತಿಲ್ಲದೆ ನಾನು ನನ್ನನ್ನೇ ನೆನೆದುಕೊಳ್ಳುತ್ತೇನೆ. [ಸಂಕ್ರಾತಿ.ಪು.ಸಂ.೪೧] ಎಂದು ಹೇಳಿದರೆ, ಮಹಾಚೈತ್ರ ನಾಟಕದಲ್ಲಿ ಬಿಜ್ಜಳನು ತನ್ನ ತಂಗಿ ನೀಲಾಂಬಿಕೆಯನ್ನು ಉದ್ದೇಶಿಸಿ “ನೋಡಿದಿಯಾ ನೀಲ? ಕುಹಕ ಕಪಟಗಳ ಮಧ್ಯೆ ಬದುಕುತ್ತಿರುವ ನನ್ನನ್ನು. ನಿನ್ನ ಗಂಡ ಒಂದೇ ಒಂದು ದಿನ ಚಕ್ರವರ್ತಿಯಾಗಿದ್ದರೆ ಗೊತ್ತಾಗುತ್ತಿತ್ತು ಅವನ ಬೋಧನೆಗಳು ಎಷ್ಟು ನಿರರ್ಥಕವೆಂದು”[ಪು.ಸಂ.೫೯] ಇಲ್ಲಿಯ ಸಂದರ್ಭಗಳು ಬೇರೆ ಬೇರೆಯಾಗಿದ್ದರೂ ಪ್ರಭುತ್ವ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಯಾರನ್ನ ಬೇಕಾದರೂ ಹೊಗುಳತ್ತದೆ. ಮತ್ತೆ ಯಾರನ್ನ ಬೇಕಾದರೂ ತೆಗುಳುತ್ತದೆ.

ಕಲ ಕೇತಯ್ಯ, ನಗೆಯ ಮಾರಿ ತಂದೆ, ಬಹುರೂಪಿ ಚೌಡಯ್ಯ ಈ ಮೂರು ಪಾತ್ರಗಳನ್ನು ಸೃಷ್ಟಿಸಿಕೊಂಡು ನಾಟಕದೊಳಗೊಂದು ನಾಟಕವೆಂಬಂತೆ ಕಟ್ಟಿಕೊಡುತ್ತಾರೆ. ಬಸವಣ್ಣ ತೀರಿದ ಸತ್ಯವನ್ನು ನೀಲಾಂಬಿಕೆಗೆ ಮುಟ್ಟಿಸಬೆಕಾಗಿರುವುದು ಕಲಕೇತಯ್ಯ, ಬಹುರೂಪಿ ಚೌಡಯ್ಯ, ನಗೆಯ ಮಾರಿ ತಂದೆ ಈ ಮೂವರಿಗೂ ಅನಿವಾರ್ಯವಾಗಿಬಿಡುತ್ತದೆ. ಕಲಕೇತಯ್ಯ ಬಂದು “ಹೇಗಪ್ಪಾ ಸುದ್ದಿ ತಿಳಿಸೋದು. ಎಂಥಾ ಕಲ್ಲದೆನೂ ಬಿರಿಸೊ ಸುದ್ದಿನಾ” ಎಂದಾಗ, ಬಹುರೂಪಿ ಚೌಡಯ್ಯನು “ಪ್ರಾರಂಭಿಸಿ, ಬಾಯಿ ಆಡಲೊಲ್ಲದ್ದನ್ನು ಇಡೀ ಮೈ ಆಡಿತೋರಿಸಲಿ” ಎಂದು ಹೇಳುತ್ತಾನೆ. ಕುವೆಂಪು ಅವರು ತಮ್ಮ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ “ಒಂದು ಸತ್ಯವನ್ನು ಸಾಹಸದಿಂದ ಹೇಳಬಾರದು. ಬದಲಾಗಿ ತಿಳುವಳಿಕೆಯ ಭಾಗವಾಗಿ ಹೇಳಬೇಕು” ಎಂದು ಹೇಳುತ್ತಾರೆ. ಇಲ್ಲಿ ಶಿವಪ್ರಕಾಶ ಅವರೂ ಮಡುಗಟ್ಟಿದ ದುಃಖವನ್ನು ನೇರವಾಗಿ ಹೇಳಿಸದೆ, ಕಲಾತ್ಮವಾಗಿ ಕಟ್ಟಿಕೊಟ್ಟಿದ್ದಾರೆ. ನಾಟಕದ ಮಧ್ಯ ಮತ್ತು ಕೊನೆ ಕೊನೆಗೆ ಯಜ್ಞಯಾಗಗಳನ್ನು ಪ್ರತಿಭಟಿಸಿದ್ದ ವೀರಭದ್ರನ ಪ್ರಸ್ತಾಪ ಬರುತ್ತದೆ. ಬ್ರಾಹ್ಮಣರು ಮತ್ತು ಜಂಗಮರ ನಡುವೆ ಸಾಂಸ್ಕೃತಿಕ ಅಸ್ಮಿತೆಯ ಪ್ರಶ್ನೆ ಬಂದಾಗ ಬ್ರಾಹ್ಮಣರನ್ನು ಉದ್ದೇಶಿಸಿ ಜಂಗಮ೨ ವ್ಯಂಗ್ಯವಾಗಿ ಹೀಗೆ ಹೇಳುತ್ತಾನೆ. “ದಕ್ಷ ಯಜ್ಞದಲ್ಲಿ ವೀಳ್ಯದೆಲೆ ಕೊಡಲಿಲ್ಲವೆಂದು ವೀರಭದ್ರ ಯಜ್ಞ ನಾಶಮಾಡಿದ್ದು, ದಕ್ಷನ ತಲೆ, ಹಾರುವ ಋಷಿಗಳ ತಲೆ ಕಚಕ್‌, ಅವರಲ್ಲಿ ಕೆಲವು ಷಂಡರು ವೀರಭದ್ರನ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟುಬಿಡಿ ಬಿಟ್ಟುಬಿಡಿ ಎಂದು ಬೇಡಿಕೊಂಡಾಗ ಅವರ ತಲೆ ಬೋಳಿಸಿ ಜುಟ್ಟು ಸಿಗಸಿ ಒದ್ದು, ಹೋಗಿ ಮೂಡಲ ಕಲ್ಯಾಣ ಭ್ರಹ್ಮಪುರಿಯಲ್ಲಿ ಬಾಳಿ ಎಂದು ಕಳಸಿದನಂತೆ ಅವರೇ ಈ ಬ್ರಾಹ್ಮಣರು”[ಪು.ಸಂ.೪೧] ಎಂದು ಇನ್ನೊಬ್ಬ ಜಂಗಮನಿಗೆ ಹೇಳಿ ಅಪಹಾಸ್ಯ ಮಾಡುತ್ತಾನೆ. ಮತ್ತು ನಾಟಕದ ಕೊನೆಯಲ್ಲಿ ಬಿಜ್ಜಳ “ಹೊಲೆಗೆಡಿಸಿದಿರಿ ಯಜ್ಞಶಾಲೆಗಳನ್ನು ನೀಚರ” ಎಂದಾಗ, ಬಹುರೂಪಿ ಚೌಡಯ್ಯನ ಪಾತ್ರ ಚೌಡಯ್ಯನ ಪಾತ್ರಕ್ಕೆ ಶಿಫ್ಟಾಗಿ “ನಿನ್ನದು ದಕ್ಷ ಬ್ರಹ್ಮನ ಪಾತ್ರ, ನನ್ನದು ವೀರಭದ್ರನ ಪಾತ್ರ” ಎಂದು ಹೇಳುತ್ತಾನೆ. ಈತನ ಮಾತು ಕೇಳುತ್ತಿದ್ದಂತೆ ಕಲಕೇತಯ್ಯ ಮತ್ತು ನಗೆಯ ಮಾರಿ ತಂದೆ “ನಾವು ಶಿವಗಣಂಗಳು” ಎಂದು ಹೇಳುತ್ತಾರೆ. ಜೊತೆಗೆ ಮೂವರೂ “ನಾವು ತಾಂಡವ ನಾಟ್ಯದ ಬೆವರಿನಲ್ಲಿ ಹುಟ್ಟಿದವರು” ಎಂದು ಬಿಜ್ಜಳನಿಗೆ ಹೇಳುತ್ತಾರೆ. ಶಿವನ ಬೆವರನಿಂದ ಹುಟ್ಟಿದ ವೀರಭದ್ರ, ಅಮೋಘಸಿದ್ದನಂಥವರು ಪುರಾಣದಲ್ಲಿ ಮತ್ತು ಜನಪದರ ಮೌಖಿಕ ಕಾವ್ಯಗಳಲ್ಲಿ ಬರುತ್ತಾರೆ. ಯಜ್ಞ ಪ್ರಮಾಣದ ಸಂಸ್ಕೃತಿಯನ್ನು ವಿರೋಧಿಸುವ ಗುಣವುಳ್ಳ ಇಂಥವರು ಚರಿತ್ರೆಯಲ್ಲಿ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನಾಯಕರಾಗಿದ್ದರು? ಎಂದು ಆಲೋಚಿಸಲಿಕ್ಕೆ ತುಸು ಇಂಬು ಸಿಗುತ್ತದೆ.

“ಮಹಾಚೈತ್ರ”ದ ಮುಂದೊರೆದ ಭಾಗವಾಗಿ ಇನ್ನೆರಡು ನಾಟಕಗಳಾದ “ಮಂಟೆಸ್ವಾಮಿ ಕಥಾ ಪ್ರಸಂಗ ಮತ್ತು ಮಾದರಿ ಮಾದಯ್ಯ” ದ್ವನಿಸುತ್ತವೆ. ಜನಪದರಲ್ಲಿ ಇವತ್ತಿಗೂ ಮೌಖಿಕವಾಗಿ ಉಳಿದು ಬರುತ್ತಿರುವ ಈ ಗುರು ಪರಂಪರೆಗಳನ್ನು ಎಚ್.ಎಸ್ ಶಿವಪ್ರಕಾಶರವರು ಸೃಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ರಹಮತ್‌ ತರಿಕೆರೆ ಅವರು ತಮ್ಮ “ಕರ್ನಾಟಕದ ಗುರುಪಂಥ” ಕೃತಿಯಲ್ಲಿ ಗುರು ಪಂಥದಲ್ಲಿ ಮುಖ್ಯವಾಗಿ ಎರಡು ಮಾರ್ಗಗಳ ಕುರಿತು ಹೀಗೆ ಬರೆಯುತ್ತಾರೆ. “ಗುರುಪಂಥದಲ್ಲಿ ಸಾಧನೆಯನ್ನು ಕುರಿತು ಪೀಪಿಲ-ವಿಹಂಗ ಎಂಬ ಎರಡು ಪ್ರಮುಖ ವಿಧಾನಗಳಿವೆ. ಪೀಪಿಲಿಕಾ[ಇರುವೆ]-ಮರದಲ್ಲಿರುವ ಹಣ್ಣನ್ನು ಗುರುತಿಸಿ ಕೆಳಹಂತದಿಂದ ಕ್ರಮವಾಗಿ ಮರವನೇರಿ, ಹಾದಿಯಲ್ಲಿ ಎದುರಾದ ತೊಡಕುಗಳನ್ನೆಲ್ಲ ದಾಟಿ ಹಣ್ಣನ್ನು ತಲುಪುವ ವಿಧಾನ. ಆದರೆ ವಿಹಂಗವು[ಹಕ್ಕಿ]-ಗಗನದಲ್ಲಿರುವಾಗಲೇ ಹಣ್ಣನ್ನು ಗುರುತಿಸಿ, ನೇರವಾಗಿ ಅದರ ಮೇಲೆ ಬಂದು ಕೂರುತ್ತದೆ” [ಪು.ಸಂ.೭೦] ಈ ಮಾತನ್ನು ಶರಣರಿಗೆ ಟ್ಯಾಗ್‌ ಮಾಡಿದ್ರೆ, ಮುಖ್ಯವಾಗಿ ಬಸವಣ್ಣ ಮೊದಲಿಗೆ ಭಕ್ತಿಮಾರ್ಗ[ದೈತ, ಪಿಪೀಲಿಕಾ] ದಿಂದ ಹಂತ ಹಂತವಾಗಿ ಅನುಭಾವ ಅಥವಾ ಅದೈತ, ವಿಹಂಗ, ಐಕ್ಯ ಸ್ಥಳವನ್ನು ಮುಟ್ಟಿದರೆ, ಅಲ್ಲಮ “ನಾ ದೇವನಲ್ಲದೆ ನೀ ದೇವನೆ?” ಎನ್ನುವ ಪ್ರಶ್ನೆಯ ಮುಖಾಂತರ ಅದೈತದ ಸ್ಥಿತಿಯನ್ನು ತಲುಪುತ್ತಾರೆ.

ಈ ನಾಟಕಗಳಲ್ಲಿ ಮಂಟೆ ಸ್ವಾಮಿ ಮತ್ತು ಮಾದಾರಿ ಮಾದಯ್ಯ ಇಬ್ಬರೂ ಅನುಭಾವದ ಆತ್ಯಂತಿಕ ಸ್ಥಿತಿ ತಲುಪಿ ಸ್ವತಃ ತಾವೇ ದೈವಗಳಾಗಿ ಕಂಡು ಬರುತ್ತಾರೆ. ಈ ವಿಹಂಗ ಮಾರ್ಗವು ನಾಥ, ಅವಧೂತ, ಆರೂಢ, ಸಿದ್ಧ ಪರಂಪರೆಗಳಲ್ಲಿ ಸಾಕಷ್ಟಿದೆ. ಇಂಥ ಪರಂಪರೆಗಳ ಜೊತೆಗೆ ಸುದೀರ್ಘವಾದ ಒಡನಾಟವಿರುವ ಎಚ್.ಎಸ್‌ ಶಿವಪ್ರಕಾಶರವರು ಅವುಗಳ ಪ್ರಭಾವ ಈ ಎರಡು ನಾಟಕಗಳಲ್ಲಿ ಎಡೆಬಿಡದೆ ಬಂದಿರುವುದು ಕಾಣುತ್ತದೆ. ಬುದ್ಧಿ ಪ್ರಧಾನ, ಮತ್ತು ಭಾವ ಪ್ರಧಾನ ಎನ್ನುವ ಬೈಪರ್ಕೇಶನ್‌ ಮಾಡದೆ ಅವರೆಡನ್ನು ಸಮಗ್ರವಾಗಿ ಇಲ್ಲಿ ಒಳಗೊಳ್ಳುತ್ತಾರೆ. ಕಲ್ಯಾಣಕ್ಕೆ ಬೇಟಿ ಕೊಡಲು ಬಂದ ಮಂಟೆ ಸ್ವಾಮಿಗೆ ಅಲ್ಲಿಯ ಜಂಗಮನೊಬ್ಬ “ರೀ ಬಸವಣ್ಣೋರೆ, ನಿಮ್ಮ ಪಕ್ಕ ನಿಂತಾನಲ್ರೀ ಅವ್ನು ತಿಪ್ಪೆ ಒಳಗ ಕೂತ್ಕಂಡಿದ್ದ, ಹೇನುಕೊರೆ ಬಿದ್ದದೌನು. ಅವುನ್ಗೆ ಹೇಳಿ ಅವನ ಮಲಯಾಳ-ಬಂಗಾಳ ಜಾದು ನಮ್ಮ ಹತ್ರ ನಡಿಯಲ್ಲ ಅಂತ[ಪು.ಸಂ.೨೭೩] ಗೋರಕ್ಷನಾತನ ರೂಪದಲ್ಲಿ ತಿಪ್ಪೆಯೊಳಗೆ ಉದಯಿಸಿ ಬಂದ ಮಂಟೆಸ್ವಾಮಿ ಬಂದು ನಾಲಿಗಿಲ್ಲದ ಗಂಟೆ ನುಡಿಯುವಂತೆ, ಕಲ್ಲಿನ ಕೋಳಿ ಕೂಗುವಂತಾಗುತ್ತಾಗುತ್ತದೆ. ಇಲ್ಲಿ ಜಂಗಮರು ಮಲಯಾಳ-ಬಂಗಾಳ ಜಾದು ಎನ್ನುವ ಪದಗಳು ಬಳಸುತ್ತಾರೆ. ಸುರೇಶ ನಾಗಲಮಡಿಕೆ ಅವರ ʼಹಾಡು ಕಲಿಸಿದ ಹರʼ ಕೃತಿಯೊಳಗೆ “ಅಮೋಘಸಿದ್ಧ ಮತ್ತು ಗೋರಖ ಇಬ್ಬರೂ ಈ ಮೌಖಿಕ ಪಠ್ಯದಲ್ಲಿ ಯೋಗಿಗಳಾಗಿ ಇದ್ದಾರೆ. ಇವರು ಯಾವದೋ ಇನ್ನೊಬ್ಬ ಧರ್ಮದ, ಪಂಥಗಳ ಪಂಡಿತರೊಡನೆ ಸಂವಾದವನ್ನು ನಡೆಸುವುದಕ್ಕೆ ಬರುವುದಿಲ್ಲ. ಬದಲಿಗೆ ಜನಪದರ ವೃತ್ತಿಮೂಲಗಳಿಗೆ ಕಂಟಕ ಉಂಟಾದಾಗ, ಅವರಿಗೆ ನಾನಾ ಬಗೆಯ ವಿದ್ಯೆ ಕಲಿಸಲು ಮಕ್ಕಳ ಅನುಗ್ರಹ ನೀಡಲು ಪ್ರವೇಶ ಗೊಳ್ಳುತ್ತಾರೆ.[ಪು.ಸಂ೯೭] ಇಲ್ಲಿಯೂ ಕೂಡಾ ಮಂಟೆಸ್ವಾಮಿ ರಾಚಪ್ಪಾಜಿಯನ್ನು ಕರೆದುಕೊಂಡು ಹೋಗುವುದು ಮತ್ತು ಬಾಚಿ ಬಸವಯ್ಯನು ಏಳನೇ ಜನ್ಮದಲ್ಲಿ ಸಿದ್ದಪ್ಪಾಜಿಯಾಗಿ ಹುಟ್ಟಿದಾಗ ಅವನನ್ನು ಶಿಷ್ಯಾನ್ನಾಗಿ ಪಡೆಯುವುದು. ಮತ್ತು ಬದುಕಿದ್ದೂ ಸತ್ತ ಲೋಕವನ್ನು ವ್ಯಂಗ್ಯ ವಿಡಂಬನೆ ಮಾಡುವುದರ ಮುಖಾಂತರ ದೊಡ್ಡಮ್ಮಳನ್ನು ಬದುಕಿಸುತ್ತಾನೆ.

“ಮಾದರಿ ಮಾದಯ್ಯ” ನಾಟಕದಲ್ಲಿ ಮಾದಯ್ಯನೂ ಕೂಡಾ ನೆಲತಾಯಿಯನ್ನು ಮೋಹಿಸಿದ ಆಕೆಯ ಮಗ ಶ್ರಮಣದೊರೆಯಿಂದ ಬಿಡುಗಡೆಗೊಳಿಸಲು ಹರಳಯ್ಯ ಮತ್ತು ಕಲ್ಯಾಣಮ್ಮಳ ತೊಡೆಯ ಚರ್ಮದ ಚಪ್ಪಲಿ ತರಲು ಕಲ್ಯಾಣಕ್ಕೆ ಬರುತ್ತಾನೆ. ದಾರಿ ಮಧ್ಯ ಸಂಕದಲ್ಲಿ ಹುಟ್ಟಿಬಂದ ಸಂಕವ್ವಳಿಗೆ ಮಕ್ಕಳಾಗದ್ದಕ್ಕಾಗಿ ಅಕೆಯ ಗಂಡ ನೀಲೇಗೌಡ ಕಾಡಿಗೆ ಅಟ್ಟಿರುತ್ತಾನೆ. ಮಾದಯ್ಯ ತನ್ನ ಪವಾಡದಿಂದ ಅವಳೀ ಮಕ್ಕಳಾಗುವಂತೆ ಆಶೀರ್ವಧಿಸುತ್ತಾನೆ. ಜೊತೆಗೆ ಕಲ್ಯಾಣ ಕ್ರಾಂತಿಯಿಂದ ಈಗಾಗಲೇ ಕಾಲವಾದ ಬಸವಣ್ಣನನ್ನು ಮೂರ್ತಿ ರೂಪದಲ್ಲಿ ಸ್ಥಾವರಗೊಂಡಿರುತ್ತಾನೆ. ಅವನನ್ನು ತನ್ನ ತಪ್ಪಸಿದ್ದಿಯಿಂದ ಪ್ರತ್ಯಕ್ಷವಾಗುವಂತೆ ಮಾಡುತ್ತಾನೆ. ಪ್ರತ್ಯಕ್ಷವಾದ ಬಸವಣ್ಣನಿಗೆ ಮಾದಯ್ಯ ಲೋಕಕಲ್ಯಾಣಕ್ಕಾಗಿ ಹರಳಯ್ಯ ದಂಪತಿಗಳ ತೊಡೆ ಚರ್ಮದ ಸಹಾಯದ ಬೇಡಿಕೆ ಇಟ್ಟಾಗ ಬಸವಣ್ಣ ಅಸಹಾಯಕನಾಗಿ ಹೇಳುವ ಮಾತು “ನಿಶ್ಚಲವಾದ, ನಿರ್ಜಲವಾದ ಶೀಲೆಯಾಗಿರುವ ನಾನು ಯಾವ ಉಪಕಾರ ಮಾಡಬಲ್ಲೆ? ನನ್ನ ಮೇಲೆ ನಿರಂತರವಾಗಿ ಎಸಗುತ್ತಾ ಬಂದ ಅತ್ಯಚಾರಗಳನ್ನು ಒಂದನ್ನೂ ನಾನು ನಿವಾರಿಸಿಕೊಳ್ಳಲಾಗಿಲ್ಲ. ನನಗೆ ಬೇಡಾದ ಗುಡಿ ಕಟ್ಟಿದರು. ನನ್ನನು ಶಿಲೆಯನ್ನಾಗಿ ಮಾಡಿದರು. ನನಗೆ ಪೂಜೆಮಾಡಿ ಕುರುಡು ಲೋಗರು ಧನ ಸಂಪತ್ತನ್ನು ಗೋರಿಕೊಂಡರು. ನನ್ನ ಕಾಲದಲ್ಲಿ ನಾನೆಂದೂ ಧರಿಸದ ಈ ಹೊನ್ನ ಕಿರೀಟ, ನಾನು ಹೆಸರಿಸಲೂ ಆಗದ ಈ ಉದ್ದನೆ ಜರತಾರಿ ನಿಲುವಂಗಿ, ಅಹಿಂಸಾವಾದಿಯಾದ ನನಗೆ ಈ ಬಗಲುಗತ್ತಿ! ಈ ಎಲ್ಲಾ ಅತ್ಯಾಚಾರಗಳ ಮುಂದೆ ನಿಸ್ಸಾಹಾಯಕನಾಗಿದ್ದೇನೆ. ನಿಮಗೇನು ಉಪಕಾರ ಮಾಡಬಲ್ಲೆ ಹೇಳಿ”[ಪು.ಸಂ.೩೭೯] ಇಲ್ಲಿ ಭೂತಕಾಲದ ಅನಿವಾರ್ಯ ವರ್ತಮಾನದ ಕೇಡನ್ನು, ಪುರಾಣದ ಏಳು ಯುಗಾಂತರಗಳು ಏಕಕಾಲಕ್ಕೆ ಘಟಿಸಿಬಿಡುತ್ತವೆ. ಹಾಗಾಗಿ ಕಾಲದಾರಿಯ ಪಂಥಕ್ಕೆ ಸೇರಿದ ಕಾಲಜ್ಞಾನಿಗಳಾದ ಮಂಟೆಸ್ವಾಮಿ ಮತ್ತು ಮಲೆ ಮಾದೇಶ್ವರ ಇಬ್ಬರಿಗೂ ಕಲ್ಯಾಣ ಕ್ರಾಂತಿಗೆ ಮುಂಚೆ ಜನಪದರಲ್ಲಿ ಉಸುರಾಡುತ್ತಿದ್ದ ನಾಥ ಪಂಥದ ಆಚರಣೆಗಳು ಸೂಚ್ಯವಾಗಿ ನಾಟಕಗಳಲ್ಲಿ ಎಡೆಬಿಡದೆ ಗೋಚರಿಸಿರುವುದರಿಂದ, ನಾಟಕದ ಸತ್ವ ತನ್ನಮೂಲಕವೇ ಹಿಗ್ಗಿಸಿಕೊಳ್ಳುತ್ತದೆ. ಈ ಧಾರೆ ತತ್ವಪದಗಳವರೆಗೂ ಬಂದು ತಲುಪಿದೆ. ಹಾಗಾಗಿಯೇ ಮಡಿವಾಳಪ್ಪ “ಬಂಗಾಳಿ ಸಂತಿ ಬಲು ಗಡಿಬಿಡಿ” ಎಂದು ಬರೆಯುತ್ತಾನೆ. ಇನ್ನೊಂದು ಮಂಗಳಾರತಿ ಪದದಲ್ಲಿ “ಹಸತೃಷೆ ಅಜಮಿತ ವಿಚಿತ್ರಬೊಂಬಿ ಮಾಟವೆ ತಾಟಮ್ಮ, ಅಕ್ರಳ ವಿಕ್ರಳ ಕೂಟಮ್ಮ, ಬಹು ಬಹು ಬಂಗಾಲಿ ಆಟಮ್ಮ, ಅಸಮ ಮಾಂತನ ಕಾಣಗೊಡದ ದುಳ್‌ದುಂಬಿ ಬುಕಿಟಗಾಟಮ್ಮ”[ಮೀನಾಕ್ಷಿ ಬಾಳಿ. ಪು.ಸಂ ೧೬೬] ಎಂದು ತನ್ನ ಗುರು ಮಹಾಂತನನ್ನು ಸ್ಮರಿಸುವಾಗ ರೂಪಕವಾಗಿ ಬಳಸಿಕೊಳ್ಳುವುದರಿಂದ ನಾಥಪಂಥದ ದಟ್ಟವಾದ ಪ್ರಭಾವ ಕಂಡುಬರುತ್ತದೆ.

ವಿಜಯನಗರ ಸಾಮ್ರಾಜ್ಯದ ಬೀದಿಗಳಲ್ಲಿ ಮುತ್ತು ರತ್ನ, ಚಿನ್ನಗಳನ್ನಿಟ್ಟು ಮಾರುತ್ತಿದ್ದರು ಎನ್ನುವುದನ್ನು ಇತಿಹಾಸದಲ್ಲಿ ಈಗಾಗಲೆ ನಾವು ಓದಿದ್ದೇವೆ. ಆ ಸಂಗತಿಯನ್ನು ನಾಟಕಕ್ಕೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಕಬ್ಬಿಣ ಕೇಳಬಂದ ಸಿದ್ದಪ್ಪಾಜಿಯ ಜೊತೆಗೆ ಮುತ್ತೋಜಿ, ರನ್ನೋಜಿ, ಚಿನ್ನೋಜಿಗಳ ನಡುವೆ ನಡೆಯುವ ಸಂಭಾಷಣೆ ಚರಿತ್ರೆಯನ್ನು ವ್ಯಂಗ್ಯ ಮಾಡುವುದು ಕಂಡು ಬರುತ್ತದೆ. “ಮಾದರಿ ಮಾದಯ್ಯ” ನಾಟಕದಲ್ಲಿ ಪ್ರಸ್ತಾಪವಾದ ಕಬ್ಬಿಣ ಮತ್ತು “ಮಂಟೆಸ್ವಾಮಿ ಕಥಾ ಪ್ರಸಂಗ”ದಲ್ಲಿ ಬಸವಣ್ಣ: “ಆ ಪ್ರಕಾರವಾಗಿ ನೀವೀಗಲೇ ಹೋಗಿ ವಿಶ್ವಕರ್ಮರ ಕೈಯಲ್ಲಿ ಒಂದು ನಾಲಿಗಿಲ್ಲದ ಗಂಟೆಯನ್ನು ಮಾಡಿಸಿ” [ಪು.ಸಂ೨೫೯] ಎಂದು ಪಾರಾದವರಿಗೆ ಹೇಳುತ್ತಾನೆ. ಕಂಚು ಮತ್ತು ಕಬ್ಬಿಣವು ಈ ಬಯಲು ಸೀಮೆಯಲ್ಲಿ ಬಳಕೆಯಲ್ಲಿದ್ದಿತ್ತು ಎನ್ನುವುದಕ್ಕೆ, ಮನು ದೇವ ದೇವನ್‌ ಅವರು ತಮ್ಮ “ಪ್ರಥ್ವಿಯಲ್ಲೊದಗಿದ ಘಟವು…ಕರ್ನಾಟಕದ ನಿನ್ನೆಗಳು” ಎನ್ನುವ ಕೃತಿಯಲ್ಲಿ “ಜಗತ್ತಿನ ಬಹುತೇಕ ಭಾಗಗಳಲ್ಲಿ ಶಿಲಾಯುಗ ಮತ್ತು ಹರಪ್ಪ, ಮೆಸೊಪೊಟೇಮಿಯ, ಈಜಿಪ್ಟ್‌ ಮುಂತಾದ ಕಂಚಿನ ಯುಗದ ನೆಲೆಗಟ್ಟುಗಳು ಬೆಳೆದುಬಂದದ್ದು ಬಯಲುಸೀಮೆಗಳಲ್ಲಿಯೇ ಹೊರತು ಅರಣ್ಯ ಪ್ರದೇಶಗಳಲ್ಲಲ್ಲ. ಕಬ್ಬಿಣದ ಬಳಕೆ ಇರದಿದ್ದ ಕಾಲದಲ್ಲಿ ಅರಣ್ಯಗಳನ್ನು ಕಡಿದು ಕೃಷಿ ನಡೆಸುವುದು ಸಾಧ್ಯವಾಗಿರಲಿಲ್ಲ ಎಂಬುದೇ ಇದಕ್ಕೆ ಕಾರಣ. ಹೀಗಿರುವಾಗ ಶಿವಮೊಗ್ಗ ಜಿಲ್ಲೆಯ ಅರಣ್ಯಪ್ರದೇಶಗಳಿಗೆ ಸೇರಿದ ಹೊಸನಗರ, ಯೆಡೆಗುಡ್ಡೆ ಮತ್ತು ನೀಸನಕಲ್ಲುಗಳಲ್ಲಿ ಹೊಸ ಶಿಲಾಯುಗದ ಅವಾಸಕೇಂದ್ರಗಳು ಪತ್ತೆಯಾಗಿರುವುದು ವಿಶೇಷವೇ. ಈ ಮಲೆನಾಡು ಪ್ರದೇಶಲ್ಲಿ ಬಯಲುಸೀಮೆಗಿಂತ ಹೆಚ್ಚಿನ ಮಳೆಯಾಗುವುದರಿಂದ ಸಾಗುವಳಿ ಕಾರ್ಯದಲ್ಲಿ ತೊಡಗುವುದು ಅಸಧ್ಯವಾಗಿರಲಿಲ್ಲ ಎಂಬುದು ಇಲ್ಲಿ ಅವಾಸಕೇಂದ್ರಗಳು ನೆಲೆಗೊಳ್ಳಲು ಕಾರಣವಾದರೆ ಇದರ ಹಿಂದೆ ಬಹಲುಸೀಮೆಗೆ ಅರಣ್ಯಪ್ರದೇಶದ ಸಂಪನ್ಮೂಲಗಳನ್ನು ಸರಬರಾಜು ಮಾಡುವ ಉದ್ದೇಶವು ಇದ್ದಿರಲೇಬೇಕು.

ಸಾಗುವಳಿ ಜೀವನಾಧಾರಕ್ಕೆ ಮಾತ್ರ ಸೀಮಿತಗೊಂಡಿದ್ದ ಈ ಪರಿಸ್ಥಿತಿ ಬದಲಾಗತೊಡಗಿದ್ದು ಕ್ರಿ.ಪೂ.ಹತ್ತನೇ ಶತಮಾನದ ಆಸುಪಾಸಿನಲ್ಲಿ” [ಪು.ಸಂ೧೦.೧೧] ಎಂದು ಹೇಳುತ್ತಾರೆ. ಸುರೇಶ ನಾಗಲಮಡಿಕೆ ಅವರು ʼಹಾಡು ಕಲಿಸಿದ ಹರʼ ಕೃತಿಯಲ್ಲಿ ಮಂಟೆಸ್ವಾಮಿ ಮತ್ತು ಮಾದೇಶ್ವರನ ಕಾವ್ಯಗಳಲ್ಲಿ ಬರುವ ಕಬ್ಬಿಣದ ಕುರಿತು “ಮಂಟೆಸ್ವಾಮಿ ಕಬ್ಬಿಣವನ್ನು ಬೇಡುವುದು ಪಾತಾಳಬಾವಿಯನ್ನು ಅಗೆಯುವುದಕ್ಕೆ. ಇದೇ ಭಾಗದಲ್ಲಿ ಹುಟ್ಟಿಕೊಂಡಿರುವ ʼಮಾದಪ್ಪʼನ ಕಾವ್ಯದಲ್ಲೂ ಕಬ್ಬಿಣದ ಪ್ರಸ್ತಾಪ ಬರುತ್ತದೆ. ಅಲ್ಲಿ ಜುಂಜಪ್ಪ, ಮಾದಪ್ಪನ, ಏಳಂಕಣ ದೇವಸ್ಥಾನ ಕಟ್ಟುವುದಕ್ಕೆ ಕೊಯಮತ್ತೂರಿನಿಂದ ವಡ್ಡರನ್ನು ಕರೆಸುತ್ತಾನೆ. ಹಾರೆ, ಗುದ್ಲಿಗಳನ್ನು ತರಿಸಿ ಪಾಯದ ಕೆಲಸ ಮಾಡಿಸುತ್ತಾನೆ. ಇಲ್ಲಿ ಚೋಳರ ಸುಳುಹು ಇರುವುದರಿಂದ ಆ ಕಾಲಕ್ಕೆ ಕಬ್ಬಿಣದ ಬಳಕೆಯನ್ನು ಎಳೆಯಬಹುದು.[ಪು.ಸಂ.೮೦] ಎಚ್.ಎಸ್‌ ಶಿವಪ್ರಕಾಶರೂ ತಮ್ಮ ನಾಟಕಗಳಲ್ಲಿ ಕಬ್ಬಿಣದ ಮೂಲಕ ಮುತ್ತು ರತ್ನ ಚಿನ್ನಗಳನ್ನು ವ್ಯಂಗ್ಯಗೊಳಿಸಿದ್ದು. ಇದು ಕೇವಲ ಆಭರಣಗಳ ವ್ಯಂಗ್ಯವಲ್ಲ ಈ ಮೂಲಕ ಚರಿತ್ರೆಯನ್ನೇ ವ್ಯಂಗ್ಯಮಾಡುತ್ತಾರೆ. ಇದೇ ಕಬ್ಬಿಣವನ್ನು ಕೃಷ್ಣಮೂರ್ತಿ ಹನೂರವರು ತಮ್ಮ ʼಹರನೆಂಬುದೇ ಸತ್ಯ…ʼ ಕೃತಿಯಲ್ಲಿ ಜನ್ನನ ಕಾವ್ಯ ಕಥನ ಅವಲೋಕನ ಸಂದರ್ಭದಲ್ಲಿ ಈ ಕಬ್ಬಿಣದ ಕತ್ತಿ, ಅದರದೇ ತಂತಿ ಕುರಿತು ಮಾತಾಡ್ತಾ,“ಜನಪದ ತತ್ವಪದಕಾರರು ಹೇಳುವಂತೆ ಕಬ್ಬಿಣದಿಂದ ಮಾಡಿದ್ದ ತಂತಿ ಸೋರೆ ಬುರುಡೆಯ ತಮಬೂರಿಯೊಂದಿಗೆ ಸೇರಿಕೊಂಡು ಆತ್ಮವನ್ನು ಮೀಟುತ್ತದೆ, ಅಂತರಂಗವನ್ನು ಮೇಲೇರಿಸುತ್ತದೆ. ಅದೇ ಕಬ್ಬಿಣದಿಂದ ತಯಾರಾದ ಕತ್ತಿಯು ದೇಹವನ್ನು ತುಂಡರಿಸಿ, ಭೂಮಿಗೆ ಚರಗ ಚಲ್ಲಿಬಿಡುತ್ತದೆ”.[ಪು.ಸಂ.೨೧] ಎಚ್‌.ಎಸ್‌ ಶಿವಪ್ರಕಾಶರು ಈ ಕಬ್ಬಿಣದ ಮೂಲಕ ಲೋಕದ ಬದುಕಿಗೆ ಮುಖ್ಯವಾಗಿ ಬೇಕಾಗಿದ್ದು ಗಾಳಿ, ಅನ್ನ, ನೀರು, ಅದಕ್ಕಾಗಿ ಬಾವಿ ಅಗೆಯಲು ಕಬ್ಬಿಣದ ಅವಶ್ಯವಾಗುತ್ತದೆ. ಹಾಗಾಗಿಯೇ ಆಭರಣಗಳನ್ನು ಆ ಸಂದರ್ಭಕ್ಕೆ ವ್ಯಂಗ್ಯ ಮಾಡುತ್ತಾರೆ.

ಇಲ್ಲಿಯ ಮೂರೂ ನಾಟಕಗಳು ಪುರಾಣ ಪರಿಕರಗಳನ್ನು ಬಳಸಿಕೊಂಡು, ಈಗಾಗಲೇ ಶಿಸ್ತುಬದ್ದವಾಗಿ ನೋಡಿರುವ ಚರಿತ್ರೆಯನ್ನು ವಿಭಿನ್ನವಾಗಿ ನೋಡುವ, ಮತ್ತು ಕಾಲಕ್ಕೆ ತಕ್ಕಂತೆ ಹೊಸ ಕ್ರಮಗಳನ್ನು ಹಿಗ್ಗಿಸಿಕೊಳ್ಳುವುದು ಕಂಡುಬರುತ್ತದೆ. ಶರಣರ ಕಾಲಘಟ್ಟದಲ್ಲಿ ಸ್ಥಾಪಿತವಾದ್ದ ಇಷ್ಟಲಿಂಗದ ಪರಿಕಲ್ಪನೆ ಎಚ್.ಎಸ್.ಶಿವಪ್ರಕಾಶರ ನಾಟಕಗಳಲ್ಲಿ ನಿರಚನೆಗೊಳ್ಳುವುದರ ಮೂಲಕ ಕುರುಹು ಕಳೆದುಕೊಂಡು ಬಯಲನ್ನು ಆಗುಮಾಡಿಕೊಳ್ಳುತ್ತದೆ. ಇಂಥ ಬಯಲನ್ನು ಪ್ರತಿನಿದಿಸುವ ಅಥವಾ ಸ್ವತಃ ತಾನೇ ಲಿಂಗವಾಗುವ ಮಂಟೆಸ್ವಾಮಿಯ ಮಾತು ಹೀಗಿದೆ, “ಅಪ್ಪ ನಿಮ್‌ ಸುಳ್‌ ಲಿಂಗವನ್ನು ನಾವು ಮಾಯಾ ಮಾಡ್ತೀವಿ. ಮಾಯಾಮಾಡಿ ನಿಜವಾದ ಲಿಂಗವನ್ನು ಇದರೊಳಗ್‌ ತುಂಬಿದೀವಿ; ನಿಮ್‌ ತಾವ ಇದ್ದಿದ್ದು ಉಳಿ ಮುಟ್ಟಿದ ಲಿಂಗ, ನಿಮುಗ್‌ ನಾವು ಕೊಟ್ಟಿರದು ಉಳಿ ಮುಟ್ಟದ ಲಿಂಗ, ಅದನ್ನ ಇಟ್ಕಂಡು ಐಕ್ಯವಾಗಿ”[ಪು.ಸಂ೨೭೬] ಎಂದು ಹೇಳುತ್ತಾನೆ. ಆಗಲೇ ಹೇಳಿದ ಹಾಗೆ ಗುರುಪಂಥದಲ್ಲಿ ಇದನ್ನು ವಿಹಂಗ ಮಾರ್ಗವೆಂದು ಕರೆಯಲಾಗಿದೆ. ಅಂಥ ಮಾರ್ಗವನ್ನೇ ಮಂಟೆಸ್ವಾಮಿ ಕಥಾ ಪ್ರಸಂಗ ಮತ್ತು ಮಾದರಿ ಮಾದಯ್ಯ ನಾಟಕಗಳಲ್ಲಿ ದಟ್ಟವಾಗಿ ಬಂದಿದೆ.
ಮುಗಿಸುವ ಮುನ್ನ:

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜೈನ, ವೈಷ್ಣವ, ಶೈವ, ವೈದಿಕ ಧರ್ಮಗಳ ನಡುವಿನ ಬಿಕ್ಕಟ್ಟುಗಳು. ಇವುಗಳ ಮಧ್ಯದಲ್ಲಿ ಉದಯಿಸಿ ಬಂದ ಗುರುಪಂಥದ ಭಾಗವಾದ ಮತ್ತು ಏಕಾಏಕಿ ತೀವ್ರ ಸ್ವರೂಪತಾಳಿದ ಶರಣರ ಕ್ರಾಂತಿಯು ತುಂಬಾ ಸಂಕೀರ್ಣವಾದದ್ದು. ಕನ್ನಡದ ಸಾಹಿತ್ಯ ಮತ್ತು ಸಮಾಜದ ಮಟ್ಟಿಗೆ ಹೊಸ ಅರಿವನ್ನು ನೀಡಿದ್ದು. ಹಾಗಾಗಿಯೇ ಅನೇಕ ಕ್ರಿಯಾಶೀಲ ಮನಸುಗಳು ತಮ್ಮ ಸಮಯವನ್ನು ಇವತ್ತಿಗೂ ಆ ಕಾಲಕ್ಕೆ ಮೀಸಲಿಡುತ್ತಾ ಬರುತ್ತಿರುವುದು ಬಹುಮುಖ್ಯ ಸಂಗತಿಯಾಗಿದೆ. ಈ ಕಾಲದಘಟ್ಟದ ಕುರಿತು ಕಾರ್ನಾಡರು “ನೋಯದ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ ಆ ಯುಗದ ಬೆರಗುಗೊಳಿಸುವ ಪ್ರತಿಭೆಗೆ, ಉತ್ನಾಹಕ್ಕೆ ಮೌಲಿಕ ಪ್ರಶ್ನೆಗಳನ್ನು ಕೇಳುವ ಎದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವುದು, ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ” ಎಂದು ಹೇಳಿದ ಮಾತು ಅತೀಶಯವೇನಲ್ಲ.

ಸಂಗನಗೌಡ ಹಿರೇಗೌಡ



ಮೂಲ ಪಠ್ಯ
೧.ನಾಟಕಗಳು ಇಂದಿನವರೆಗೆ..ಲೇಖಕರು. ಎಚ್.ಎಸ್.ಶಿವಪ್ರಕಾಶ್‌. ಪ್ರಕಾಶಕರು. ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ ಜೆ.ಸಿ ರಸ್ತೆ ಬೆಂಗಳುರು-೨೦೧೧

ಪರಾಮರ್ಶನ ಗ್ರಂಥಗಳು
೧.ಸಂಕ್ರಾತಿ. ಪಿ.ಲಂಕೇಶ್‌. ಪ್ರಕಾಶಕರು. ಲಂಕೇಶ ಪ್ರಕಾಶನ-೨೦೧೨
೨.ದಲೆದಂಡ. ಗಿರೀಶ್‌ ಕಾರ್ನಾಡ್‌. ಪ್ರಕಾಶಕರು. ಮನೋಹರ ಗ್ರಂಥಮಾಲೆ-೨೦೧೧
೩.ಹಾಡು ಕಲಿಸಿದ ಹರ. ಸುರೇಶ್‌ ನಾಗಲಮಡಿಕೆ. ಪ್ರಕಾಶಕರು. ದೀಪಾಂಕರ-೨೦೨೦
೪.ಪೃಥ್ವಿಯಲ್ಲೊದಗಿದ ಘಟವು ಕರ್ನಾಟಕದ ನಿನ್ನೆಗಳು. ಮನು ವಿ.ದೇವದೇವನ್. ಪ್ರಕಾಶಕರು ಅಕ್ಷರ ಹೆಗ್ಗೋಡು-೨೦೦೯
೫.ಕರ್ನಾಟಕದ ಗುರುಪಂಥ. ರಹಮತ್‌ ತರಿಕೆರೆ. ಪ್ರಕಾಶಕರು. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ ಹಂಪಿ-೨೦೨೦
೬.ಕಡಕೋಳ ಮಡಿವಾಲಪ್ಪ ಮತ್ತು ಶಿಷ್ಯರ ತತ್ವಪದಗಳು. ಮೀನಾಕ್ಷಿ ಬಾಳಿ. ಪ್ರಕಾಶಕರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.-೨೦೧೭
೭.ಹರನೆಂಬುದೇ ಸತ್ಯ….ಕೃಷ್ಣಮೂರ್ತಿ ಹನೂರು. ಪ್ರಕಾಶನ.ಲೋಹಿಯಾ ಪ್ರಕಾಶನ, ಬಳ್ಳಾರಿ-೨೦೨೧


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x