“ಎಸ್ತರ್ ಅವರ ‘ನೆನಪು ಅನಂತ”: ಡಾ. ಎಚ್. ಎಸ್. ಸತ್ಯನಾರಾಯಣ

ಅಕ್ಷರ ಪ್ರಕಾಶನದವರು ಶ್ರೀಮತಿ ಎಸ್ತರ್ ಅವರು ತಮ್ಮ ಪತಿ ಅನಂತಮೂರ್ತಿಯವರ ಬಗ್ಗೆ ಹಂಚಿಕೊಂಡ ನೆನಪಿನ ಮಾಲೆಯನ್ನು ‘ನೆನಪು ಅನಂತ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಎಸ್ತರ್ ಅವರ ನೆನಪುಗಳನ್ನು ಬರಹ ರೂಪಕ್ಕಿಳಿಸಿದವರು ಪತ್ರಕರ್ತರೂ ಲೇಖಕರೂ ಆದ ಶ್ರೀ ಪೃಥ್ವೀರಾಜ ಕವತ್ತಾರು ಅವರು. ನಿರೂಪಣೆಯೇ ಈ ಪುಸ್ತಕದ ಶಕ್ತಿ. ಎಸ್ತರ್ ಅವರು ಹೇಳುತ್ತಾ ಹೋದುದ್ದನ್ನು ಬರಹದ ಸೂತ್ರಕ್ಕೆ ಒಗ್ಗಿಸುವುದು ಸುಲಭದ ಕೆಲಸವಲ್ಲ. ಎಸ್ತರ್ ಅವರ ವ್ಯಕ್ತಿತ್ವದ ಅನಾವರಣಕ್ಕೆ ಸ್ವಲ್ಪವೂ ಧಕ್ಕೆಬಾರದಂತೆ ಸೊಗಸಾಗಿ ನಿರೂಪಿಸಿರುವ ಪೃಥ್ವೀರಾಜ ಕವತ್ತೂರು ಅವರನ್ನು ಮೊದಲಿಗೆ ಅಭಿನಂದಿಸಿ ಮುಂದುವರೆಯುವುದು ಔಚಿತ್ಯಪೂರ್ಣ. ಏಕೆಂದರೆ ಇಡೀ ಕೃತಿಯ ಉದ್ದಕ್ಕೂ ಎಸ್ತರ್ ಅವರೇ ಮಾತಾಡಿದಂತೆ ಭಾಸವಾಗುವಷ್ಟು ನಿರೂಪಣೆಯ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಅದರ ಹಿಂದಿನ ಪರಿಶ್ರಮ ಇತರರ ಮಾತುಗಳನ್ನು ಬರೆದು ಜಯಿಸಿದವರಿಗೇ ಗೊತ್ತಿರುತ್ತದೆ.

ಇದು ‘ತುಷಾರ’ ಮಾಸ ಪತ್ರಿಕೆಯಲ್ಲಿ ಈ ಮೊದಲೇ ಪ್ರಕಟವಾದ ಬರಹಗಳ ಕಟ್ಟು. ಅನಂತಮೂರ್ತಿ ಯವರನ್ನು ಪ್ರೇಮಿಸಿದ ಹರೆಯದ ನೆನಪುಗಳಂದ ಆರಂಭವಾಗಿ, ಕೊನೆಯ ದಿನಗಳವರೆಗಿನ ಇಪ್ಪತ್ನಾಲ್ಕು ತಲೆ ಬರಹದ ಲೇಖನಗಳಲ್ಲಿ ಅನಂತ ನೆನಪುಗಳ ಚಿತ್ರಣವಿದೆ. ಒಟ್ಟಾಗಿ ಗಮನಿಸಿದಾಗ ಇದು ಮನೆಗೆ ಬಂದ ಅತಿಥಿಗಳೆದುರು ಎಸ್ತರ್ ಅವರು ತಮ್ಮ ಸಾಂಸಾರಿಕ ಪಟಗಳಿರುವ ಆಲ್ಬಂ ಒಂದನ್ನು ತೆರೆದು ತೋರಿಸುತ್ತಿರುವಂತೆ ಭಾಸವಾಗುತ್ತದೆ. ಪ್ರತಿಯೊಂದು ಪಟಗಳ ಹಿಂದೆಯೂ ಒಂದೊಂದು ಕಥೆಗಳು ಹುದುಗಿರುವಂತೆ ಇಲ್ಲಿನ ನೆನಪುಗಳಲ್ಲಿ ಎಸ್ತರ್ ಅವರ ಮನೋಲೋಕದೊಳಗಣ ಸಿಹಿ-ಕಹಿ ನೆನಪುಗಳು, ಬದುಕಿನಲ್ಲಿ ಅನುಭವಿಸಿದ ಸುಖ, ಸಂತೋಷ, ಸಂಕಟಗಳ ನೆನಪುಗಳು ಸ್ತಬ್ಧ ಚಿತ್ರದಂತೆ ಮೆರವಣಿಗೆ ಹೊರಟಿವೆ.

ಅನಂತಮೂರ್ತಿಯವರಂಥ ಮಹಾ ಲೇಖಕನ ಪತ್ನಿಯಾಗಿ ತಾವು ಅನುಭವಿಸಿದ ಪರಿಪಾಟಲನ್ನು ಹೇಳುವಾಗ ಅನಂತಮೂರ್ತಿಯವರ ಪತ್ನಿಯೆನಿಸಿದ ಕಾರಣಕ್ಕೆ ಅನುಭವಿಸಿದ ಸೌಕರ್ಯ,ಗೌರವಾದರಗಳನ್ನೂ ಹೇಳಲು ಎಸ್ತರ್ ಅವರು ಮರೆಯುವುದಿಲ್ಲ. ಮನೆಯವರ, ಕ್ರಿಶ್ಚಿಯನ್ ಪಾದ್ರಿಗಳ ವಿರೋಧವನ್ನು ಎದುರಿಸಿ ಬ್ರಾಹ್ಮಣ ಹುಡುಗನನ್ನು ಮದುವೆಯಾಗುವ ನಿರ್ಧಾರ ಮಾಡಿದಾಗಲೇ ಎಸ್ತರ್ ಅವರು ಸಂಘರ್ಷದ ಬದುಕನ್ನು ಧೈರ್ಯದಿಂದ ಆಯ್ದುಕೊಂಡ ದಿಟ್ಟೆಯಾಗಿ ತೋರುತ್ತಾರೆ. ಆರಂಭದ ದಿನಗಳಲ್ಲಿ ಎರಡೂ ಕುಟುಂಬಗಳ ಅಸಹಕಾರದಲ್ಲಿ ತಮ್ಮ ಕುಟುಂಬವನ್ನು ಕಟ್ಟಿಬೆಳೆಸಲು ಹೆಣಗಿದ ಎಸ್ತರ್ ಅವರ ಪರಿಶ್ರಮ ಬೆಲೆ ಕಟ್ಟಲಾಗದ್ದು. ದೇಶ ವಿದೇಶಗಳಲ್ಲಿ ಮಕ್ಕಳನ್ನು, ಮನೆಯನ್ನು ಬೆನ್ನಿಗೆ ಕಟ್ಟಿಕೊಂಡು ಗಂಡನ ಹಿಂದೆ ಅಲೆಯುತ್ತಾ, ಪ್ರಸಿದ್ಧ ಲೇಖಕನೋರ್ವನ ಬರಹ, ಚಿಂತನೆಗಳಿಗೆ ಆಸರೆಯಾಗಿ ನಿಲ್ಲುತ್ತಾ, ಗಂಡನ ಪ್ರಸಿದ್ಧಿ ಕಂಡು ಖುಷಿಪಟ್ಟರೂ ಆತನೊಡನೆ ಸಾಮಿಪ್ಯ ಸಾಧಿಸಲಾಗದ ಏಕಾಕಿತನವನ್ನು ಸಹಿಸಿಕೊಳ್ಳತ್ತಾ ಕುಟುಂಬವನ್ನೂ ಗಂಡನನ್ನೂ ಪೊರೆದ ಎಸ್ತರ್ ಅವರ ಮನೋಬಲದ ಹಿಂದೆ ಯೌವನದ ದಿನಗಳಲ್ಲಿ ಅನಂತಮೂರ್ತಿಯವರ ಮೇಲೆ ಮೊಳೆತ ಗಾಢ ಪ್ರೀತಿಯೇ ಭದ್ರವಾದ ಬೇರುಗಳಾಗಿರಬಹುದು. ಕೊನೆಯಿಲ್ಲದ ಪ್ರೀತಿಯಿಂದ ಎಸ್ತರ್ ಅವರು ಅನಂತಮೂರ್ತಿಯವರ ಕಾಳಜಿ ಮಾಡಿದ್ದಾರೆ. ‘ವೀಕೆಂಡ್ ಹಸ್ಬೆಂಡ್’ ಅಂತ ಎಸ್ತರ್ ಮಾಡುವ ತಮಾಷೆಯ ಹಿಂದೆ ಸಂತೋಷ, ಸಂಕಟ ಎರಡೂ ಮಡುಗಟ್ಟಿ ನಿಂತಿದೆ.

ಅನಂತಮೂರ್ತಿಯವರು ಸಮ ಸಮಾಜದ ಕನಸನ್ನು ಕೊನೆಯವರೆಗೂ ಕಾಪಿಟ್ಟುಕೊಂಡಿದ್ದ ಬದ್ಧತೆಯ ಬರಹಗಾರರು. ಸಾಹಿತ್ಯ ಜಗತ್ತು ಮೂರ್ತಿಯವರನ್ನು ಜೀನೀಯಸ್ ಬರಹಗಾರನೆಂದು ಅಭಿಮಾನದಿಂದ ಕಂಡಿದೆ. ಅಂತಹ ಜೀನೀಯಸ್ ಬರಹಗಾರನ ಪತ್ನಿಯಾಗಿರುವುದೆಂದರೆ ಅದು ಕೇವಲ ಅಂತಸ್ತು, ಸಾಮಾಜಿಕ ಸ್ಥಾನಮಾನಗಳ ಸಹಭಾಗಿತ್ವ ಮಾತ್ರವಾಗಿರುವುದಿಲ್ಲ. ತಮ್ಮ ಹೇಳಿಕೆಗಳಿಂದ ಅನಂತಮೂರ್ತಿಯವರು ಮೈಮೇಲೆ ಎಳೆದುಕೊಳ್ಳುತ್ತಿದ್ದ ವಿವಾದಗಳಿಗೂ ಎಸ್ತರ್ ತಲೆ ಕೊಡಬೇಕಾಗುತ್ತಿತ್ತು. ಈ ಎಲ್ಲ ಸಂಗತಿಗಳನ್ನೂ ಪ್ರಾಮಾಣಿಕವಾಗಿ ಕಾಣಿಸುವ ಪ್ರಯತ್ನವನ್ನು ಎಸ್ತರ್ ಅವರು ಈ ನೆನಪುಗಳಲ್ಲಿ ಮಾಡಿದ್ದಾರೆ. ಲಂಕೇಶ್ ಟೀಕಿಸಿ ಬರೆದಾಗ ತಮಗಾದ ನೋವನ್ನು ನಿರ್ಭಿಡೆಯಿಂದ ದಾಖಲಿಸಿದ್ದಾರೆ. ಇಂಥ ಅನೇಕ ಪ್ರಸಂಗಗಳು ನಮ್ಮ ಸಾಹಿತ್ಯ ಲೋಕಕ್ಕೆ ಸಂಬಂಧಪಟ್ಟಂತೆ ಇವೆ. ಸಾಧ್ಯವಾದಷ್ಟೂ ಸಂಗ್ರಾಹ್ಯವಾಗಿ ಹೇಳುವ ಅವರ ನೆನಪುಗಳ ಬಗೆಯೂ ಓದುಗರಿಗೆ ಇಷ್ಟವಾಗುತ್ತದೆ.

ಅನಂತಮೂರ್ತಿಯವರ ಪತ್ನಿಯಾಗಿ ಪ್ರಸಿದ್ಧರಾಗಿರುವ ಎಸ್ತರ್ ಅವರಿಗೊಂದು ಖಾಸಗಿ ವ್ಯಕ್ತಿತ್ವವಿರುವುದನ್ನು ನಾವು ಮರೆಯಬಾರದು. ಅವರೂ ಮರೆತಿಲ್ಲ. ಹಾಗಾಗಿ, ಆರಂಭದ ದಿನಗಳಲ್ಲಿ ಕವಿತೆಗಳನ್ನು ಬರೆದುದನ್ನು, ಅನುವಾದ ಮಾಡಲು ಪ್ರಯತ್ನಿಸಿದನ್ನು, ಹೋರಾಟಗಳಲ್ಲಿ ಭಾಗಿಯಾಗಿದ್ದನ್ನು, ಕನ್ನಡ ಪರವಾದ ಹೋರಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅನಂತಮೂರ್ತಿಯವರ ಬರಹದ ಧ್ಯಾನಸ್ಥ ಸ್ಥಿತಿಯ ಬಗ್ಗೆ ಅವರು ಹೇಳಿರುವ ಮಾತುಗಳು ಸೊಗಸಾಗಿವೆ. ಎಷ್ಟೋ ಬರಹಗಳ ಮೊದಲ ಓದುಗರು ಎಸ್ತರ್ ಅವರೇ. ಬರ್ನಿಂಗ್ಹಾಮ್ನಲ್ಲಿ ಕೇವಲ ಮೂರು ದಿನಗಳಲ್ಲಿ ‘ಸಂಸ್ಕಾರ’ ಬರೆದು ಓದಲು ಕೊಟ್ಟಾಗ ಇದು ಮುಂದೆ ಭಾರತೀಯ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಬಹುದೆಂಬ ಕಲ್ಪನೆ ಕೂಡ ಎಸ್ತರ್ ಅವರಿಗಿರಲಿಲ್ಲ. ಹಾಗೆಯೇ ಹೆಚ್ಚು ಚರ್ಚಿತವಾದ ಕಥೆಗಳು ರಚನಾಯಾದ ಸಂದರ್ಭಗಳ ನೆನಪೂ ಅವರಲ್ಲಿ ಗಾಢವಾಗಿದೆ. ಆದರೆ ತಾನೊಬ್ಬ ಬರಹಗಾರಳಲ್ಲ ಎಂಬ ಅರಿವು ಎಸ್ತರ್ ಅವರಲ್ಲಿ ಆರಂಭದ ದಿನಗಳಿಂದಲೂ ಇತ್ತು. ಅನಂತಮೂರ್ತಿಯವರು ಉತ್ಕಟ ಪ್ರೇಮಭಾವದಲ್ಲಿ ಕಾವ್ಯಾತ್ಮಕವಾಗಿ ಪ್ರೇಮಪತ್ರಗಳನ್ನು ಬರೆದರೆ, ತಾವು ಬರೀ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದುದಾಗಿ ಅವರು ಹೇಳಿಕೊಂಡಿದ್ದಾರೆ. ಅಂದಿನಿಂದ ಕೊನೆಯವರೆಗೂ ಆಕೆ ಕ್ಷೇಮಪಾಲಕಿಯಾಗಿಯೇ ಉಳಿಯಬೇಕಾದ ಸಂದರ್ಭಗಳು ಸೃಷ್ಟಿಯಾದುದು ಕುಟುಂಬವನ್ನು ಕೈಯಲ್ಲಿ ಹಿಡಿದು ಜತನದಿಂದ ಪೊರೆಯುವ ಎಲ್ಲ ಹೆಣ್ಣುಮಕ್ಕಳ ಅನಿವಾರ್ಯ ಆಯ್ಕೆಯಾಗಿರುತ್ತದೆ. ಸಂಯಮ, ತಾಳ್ಮೆ, ಅಪಾರವಾದ ಕರ್ತೃತ್ವ ಶಕ್ತಿಯಿಂದ ಎಸ್ತರ್ ಅವರು ಅದನ್ನು ನಿಭಾಯಿಸಿದ್ದಾರೆ ಕೂಡ.

ಎಸ್ತರ್ ಒಬ್ಬ ಗೃಹಣಿಯಾಗಿ, ತಾಯಿಯಾಗಿ ಗಮನ ಸೆಳೆದಂತೆಯೇ ಒಬ್ಬ ಉತ್ತಮ ಅಧ್ಯಾಪಕಿಯಾಗಿ ಕೂಡ ಗಮನ ಸೆಳೆಯುತ್ತಾರೆ. ಅವರೊಳಗೊಬ್ಬ ಅದ್ಭುತ ನಟಿ ಇದ್ದಾಳೆ. ಮೈಸೂರಿನಲ್ಲಿದ್ದ ದಿನಗಳಲ್ಲಿ ಸಿಂಧುವಳ್ಳಿ ಅನಂತಮೂರ್ತಿ ಮುಂತಾದ ಗೆಳೆಯರ ಸಮತೆಂತೋ ನಾಟಕ ತಂಡದ ಕ್ರಿಯಾಶೀಲ ಸದಸ್ಯೆಯಾಗಿದ್ದ ಎಸ್ತರ್ ಅವರು ಕಾಡುಪ್ರಾಣಿ, ಆವಾಹನೆ, ತಾಯಿ, ಘಾಸೀರಾಂ ಕೋತ್ವಾಲ್ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿರುವುದಲ್ಲದೆ, ತಾವೊಬ್ಬ ಸೊಗಸಾದ ಗಾಯಕಿಯೆಂಬುದನ್ನೂ ಮಗಳೊಂದಿಗೆ ನಾಟಕಗಳಲ್ಲಿ ಹಾಡಿದ ನೆನಪುಗಳನ್ನು ಹೇಳಿ ಸಾಬೀತುಪಡಿಸಿದ್ದಾರೆ.

‘ಆವಾಹನೆ’ ಅನಂತಮೂರ್ತಿಯವರೇ ಬರೆದ ನಾಟಕ. ಅದನ್ನು ರಂಗರೂಪಕ್ಕೆ ತರಲು ಸಮತೆಂತೋ ಯೋಜಿಸಿದಾಗ ಸರೋಜಾ ಎಂಬ ಅದರ ನಾಯಕಿ ಪಾತ್ರ ನಿರ್ವಹಿಸುತ್ತಿದ್ದವರು ಎಸ್ತರ್. ಗಂಡನ ಪಾತ್ರ ಮಾಡುವ ಕಲಾವಿದನಿಗೆ ಮದುವೆ ನಿಶ್ಚಯವಾದ ಕಾರಣ ಆತ ಪ್ರದರ್ಶನದ ದಿನ ಕೈಕೊಟ್ಟ. ನಾಟಕ ಬರೆದಿದ್ದ ಅನಂತಮೂರ್ತಿಯವರೇ ಆ ಪಾತ್ರವನ್ನು ಸಂಭಾಳಿಸಬೇಕೆಂಬ ಗೆಳೆಯರ ಮನವಿಯಂತೆ ಮೂರ್ತಿಯವರು ಜುಟ್ಟಿಗೆ ಮಲ್ಲಿಗೆ ಮುಡಿದು ಸಂಪ್ರದಾಯಸ್ಥ ವ್ಯಕ್ತಿಯಂತೆ ರಂಗಪ್ರವೇಶ ಮಾಡಿದಾಗ ಆ ಸ್ಥಿತಿಯಲ್ಲಿ ಗಂಡನನ್ನು ನೋಡಿ ಎಸ್ತರ್ ಜೋರಾಗಿ ನಕ್ಕುಬಿಟ್ಟರಂತೆ. ‘ಸೀರಿಯಸ್ ಆಗಿರಿ’ ಅಂತ ಹಿಂದಿನ ಸಾಲಿನಿಂದ ಯಾರೋ ಬೈದಮೇಲೆ ಸುಮ್ಮನಾದರಂತೆ. ಉರು ಹೊಡೆದ ಡೈಲಾಗ್ ಬಿಟ್ಟು ಅನಂತಮೂರ್ತಿ ಸಮಯಸ್ಪೂರ್ತಿಯಿಂದ ಸೃಜನಶೀಲವಾಗಿ ಮಾತಾಡಲಾರಂಭಿಸಿದಾಗ ಎಸ್ತರ್ ಅವರಿಗೆ ಕಕ್ಕಾಬಿಕ್ಕಿ! ಈ ನಾಟಕದಲ್ಲಿ ಪಾತ್ರ ವಹಿಸಿದ್ದರಿಂದ ಅದನ್ನು ಮತ್ತಷ್ಟು ತಿದ್ದಿ ಸುಧಾರಿಸಬಹುದೆಂಬ ಭಾವ ಗಂಡನದ್ದು. ಇಂತಹ ಅನೇಕ ಸಂಗತಿಗಳನ್ನು ಎಸ್ತರ್ ಅವರು ಸೊಗಸಾಗಿ ಹೇಳಿದ್ದಾರೆ.

ದೆಹಲಿಗೆ ಹೋಗಿದ್ದಾಗ ಈ ದಂಪತಿ ಹರಿದ್ವಾರ ನೋಡಲು ಹೋಗಿರುತ್ತಾರೆ. ಅನಂತಮೂರ್ತಿಯವರಿಗೆ ಹಿರೀಕರನ್ನು ಸ್ಮರಿಸುವ ಸಲುವಾಗಿ ಪಿತೃಶ್ರಾದ್ಧ ನಡೆಸಬೇಕೆಂಬ ಬಯಕೆ ಉಂಟಾಗುತ್ತದೆ. ಎಲ್ಲ ಸಿದ್ಧತೆ ಮುಗಿದಾಕ್ಷಣ ಅನಂತಮೂರ್ತಿಯವರಿಗೆ ಕದಲಲಾರದಷ್ಟು ಬೆನ್ನು ನೋವು ಬಾಧಿಸುತ್ತದೆ. ಕ್ರಿಶ್ಚಿಯನ್ ಧರ್ಮದ ಎಸ್ತರ್ ಗಂಗೆ ತಂದು ಶ್ರಾದ್ಧಕ್ಕೆ ಸಹಕರಿಸಲು ಅನಂತಮೂರ್ತಿಯವರು ಪುರೋಹಿತರ ಸಮ್ಮತಿ ಪಡೆಯುವುದೂ, ನಿರ್ವಿಘ್ನವಾಗಿ ಶ್ರಾದ್ಧ ನೆರವೇರಿಸುವುದೂ ಇಲ್ಲಿನ ಮುಖ್ಯ ನೆನಪುಗಳಲ್ಲೊಂದು. ಪ್ರಖರ ವಿಚಾರವಾದಿಯಾಗಿದ್ದ ಅನಂತಮೂರ್ತಿಯವರ ಸನಾತನ ಶ್ರದ್ಧೆಯ ಮುಖ ಇಲ್ಲಿ ಅನಾವರಣಗೊಳ್ಳುತ್ತದೆ. ದಸರಾ ಉದ್ಘಾಟನೆಯನ್ನು ಮಾಡುವಾಗಲೂ ಅನಂತಮೂರ್ತಿಯವರ ವೈಚಾರಿಕ ಗೆಳೆಯರು ವಿರೋಧಿಸಿದ್ದು ನೆನಪಾಗದಿರದು. “ಮೋದಿ ಪ್ರಧಾನಿಯಾದ ದೇಶದಲ್ಲಿ ನಾನಿರಲು ಬಯಸುವುದಿಲ್ಲ” ಎಂಬ ಹೇಳಿಕೆ ಸೃಷ್ಟಿಮಾಡಿದ ವಿವಾದವನ್ನು ನೆನಪು ಮಾಡಿಕೊಳ್ಳುತ್ತಾ ಎಸ್ತರ್ ಹೇಳುತ್ತಾರೆ: “ಇದು ಪ್ರಜಾಪ್ರಭುತ್ವ, ನಮ್ಮ ಎಲ್ಲ ಅನಿಸಿಕೆಗಳನ್ನೂ ಹೇಳಲು ಸ್ವಾತಂತ್ರ್ಯವಿದೆ.” ಈ ಮಾತನ್ನು ಅನಂತಮೂರ್ತಿಯವರ ಎಲ್ಲ ವಿವಾದಗಳ ಸಂದರ್ಭದಲ್ಲೂ ನೆನಪಿಸುತ್ತಾ ರಕ್ಷಣಾತ್ಮಕ ನೆಲೆಯಲ್ಲಿ ಎಸ್ತರ್ ಅವರು ಮಾತಾಡುವುದು ಹೆಂಡತಿಯಾಗಿ ಸಹಜವಾಗಿಯೇ ಇದೆ. ಸರ್ಕಾರವನ್ನು ವಿನಂತಿಸಿ ಡಾಲರ್ಸ್ ಕಾಲನಿಯಲ್ಲಿ ಮನೆ ಪಡೆದಾಗ ದೊಡ್ಡ ವಿವಾದವೇ ಸೃಷ್ಟಿಯಾಯ್ತು. ಅಷ್ಟರಲ್ಲಿ ಜ್ಞಾನಪೀಠ, ಪದ್ಮಭೂಷಣ ಪುರಸ್ಕಾರಗಳು ಅವರಿಗೆ ಸಂದಿದ್ದವು. ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದವರಿಗೆ ಮನೆಕೊಡುವ ಸರ್ಕಾರಿ ಸೌಲಭ್ಯವನ್ನು ಕೊಡಿಸಲು ಓಡಾಡಿದ್ದು ಡಿ. ಆರ್. ನಾಗರಾಜ್, ಜೆ. ಎಚ್. ಪಟೇಲರಂತಹ ಗೆಳೆಯರು. ಪಟೇಲರೇ ಆಗಿನ ಮುಖ್ಯಮಂತ್ರಿ. ಬೇರೆ ಕಡೆ ಸರ್ಕಾರ ಕೊಟ್ಟಿದ್ದ ನಿವೇಶನವನ್ನು ಹಿಂದಿರುಗಿಸುವುದರೊಂದಿಗೆ ಹೆಚ್ಚುವರಿಯಾದ ಒಂಬತ್ತು-ಹತ್ತು ಲಕ್ಷ ರೂ.ಗಳನ್ನು ತುಂಬಿ ಸಕ್ರಮವಾಗಿಯೇ ಮನೆ ಪಡೆದರೂ ಅದು ಕೆಲವರ ಕಣ್ಣು ಕುಕ್ಕಿದ್ದನ್ನು ಎಸ್ತರ್ ವಿವರಿಸಿದ್ದಾರೆ. ಎಗರಿ ಬಿದ್ದವರನ್ನೆಲ್ಲಾ ತಣ್ಣಗಾಗಿಸುವಂತೆ “ಅನಂತಮೂರ್ತಿಯವರಂತಹ ಲೇಖಕರಿಗೆ ಮನೆ ಕೊಟ್ಟು ಇಟ್ಟುಕೊಳ್ಳಲು ಯಾವ ದೇಶವಾದರೂ ಹೆಮ್ಮೆ ಪಡುತ್ತದೆ.” ಎಂಬ ಡಿ.ಆರ್. ನಾಗರಾಜರ ಮಾತನ್ನೂ ಎಸ್ತರ್ ಅವರು ಉಲ್ಲೇಖಿಸಿದ್ದರೆ ಚೆನ್ನಾಗಿತ್ತು.

ಅನಂತಮೂರ್ತಿಯವರ ಬರಹಗಳನ್ನು ಮಾತ್ರ ಓದಿ ಮೆಚ್ಚಿಕೊಂಡವರಿಗೆ ಈ ಕೃತಿಯಿಂದ ಅವರ ಅನೇಕ ಖಾಸಗಿ ಸಂಗತಿಗಳ ವಿವರ ದೊರೆಯುತ್ತದೆ. “ಲೇಖಕರ ಖಾಸಗಿ ವಿಚಾರಗಳು ನಮಗೇಕೆ? ಅವರ ಬರಹಗಳನ್ನು ಓದಿದರೆ ಸಾಕಲ್ಲವೆ?” ಎಂಬ ಮಾತನಾಚೆಯೂ ಅನಂತಮೂರ್ತಿಯವರಂತಹ ವರ್ಣರಂಜಿತ ಬುದ್ಧಿಜೀವಿ, ಧೀಮಂತ ಲೇಖಕರ ವಿಚಾರಗಳು ನಮಗೆ ಬೇಕೆನಿಸುವ ಚಪಲ ಹುಟ್ಟಿಸುವ ಬರಹವಿದು. ಅವರ ಕುಟುಂಬ ವಾತ್ಸಲ್ಯ, ಬರಹದ ಬದ್ಧತೆ, ಭಾಷಣದ ಮಾಂತ್ರಿಕ ಶೈಲಿ, ಸುಂದರ ರೂಪ ಒಂದೇ ಎರಡೇ!
ಐದು ದಶಕಗಳ ಕಾಲ ಈ ಹಿರಿಯ ಜೀವವನ್ನು ಜೋಪಾನವಾಗಿ ನೋಡಿಕೊಂಡ ಎಸ್ತರ್ ಅವರ ಪರಿಶ್ರಮವನ್ನು ಈ ಕೃತಿ ವಿವರವಾಗಿ ಕಾಣಿಸುತ್ತದೆ. ಅವರು ಮನಸ್ಸು ಮಾಡಿದ್ದರೆ ಮತ್ತಷ್ಟು ನೆನಪುಗಳನ್ನು ಹೇಳಬಹುದಿತ್ತು. ಅನಂತಮೂರ್ತಿಯವರ ಬೇರೆ ಬೇರೆ ಪ್ರೇಮಪ್ರಕರಣಗಳ ಏನಾದರೂ ಬರೆದಿದ್ದಾರಾ? ಎಂಬ ಕುತೂಹಲದಿಂದ ಹುಡುಕಿದರೆ ಅಂತಾದ್ದೇನೂ ನಡೆಯಲು ನಾನು ಬಿಟ್ಟಿಲ್ಲ ಎನ್ನುವಷ್ಟು ಪೊಸೇಸಿವ್ ಆಗಿ ಕಟ್ಟುನಿಟ್ಟಾಗಿ ಎಸ್ತರ್ ನೋಡಿಕೊಂಡಿದ್ದಾರೆ. ಈ ನೆನಪುಗಳಲ್ಲೂ ಅದೇ ಕಟ್ಟುನಿಟ್ಟನ್ನು ಪಾಕಿಸಿದ್ದಾರೆ. ನೆನಪು ಮಾಡಿಕೊಂಡಿರುವ ಎಸ್ತರ್ ಅವರಿಗೂ, ಸೊಗಸಾಗಿ ನಿರೂಪಿಸಿರುವ ಪೃಥ್ವಿರಾಜ್‌ ಕವತ್ತಾರು ಅವರಿಗೂ, ಪ್ರಕಟಿಸಿದ ಅಕ್ಷರ ಪ್ರಕಾಶನಕ್ಕೂ ಓದುಗರ ಪರವಾಗಿ ಕೃತಜ್ಞತೆಗಳನ್ನು ಹೇಳುವೆ. ಮುಖಚಿತ್ರ ಮತ್ತು ಒಳಗಣ ಫೋಟೋಗಳ ಕ್ವಾಲಿಟಿಯನ್ನು ಇನ್ನಷ್ಟು ಹೆಚ್ಚಿಸಬಹುದಿತ್ತೆಂಬ ಅಸಮಾಧಾನವನ್ನೂ ಇಲ್ಲಿ ಹೇಳಲೇಬೇಕು.

ಬಹಳ ಹಿಂದೆ ಮಯೂರದಲ್ಲಿ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಎಂಬ ಮಾಲಿಕೆಯೊಂದನ್ನು ಬಿ.ಎಸ್. ವೆಂಕಟಲಕ್ಷ್ಮಿಯವರು ಪ್ರಕಟಿಸಿದ್ದರು. ಅದೇ ಬಗೆಯ ಬರಹವಿದು. ಅಂಬುಜಾ ತರಾಸು ಅವರ ‘ಹಿಂದಿರುಗಿ ನೋಡಿದಾಗ’ ರಾಜೇಶ್ವರಿಯವರ ‘ನನ್ನ ತೇಜಸ್ವಿ’, ಇಂದಿರಾ ಲಂಕೇಶರ ‘ಹುಳಿಮಾವಿನ ಮರ ಮತ್ತು ನಾನು’ ಮುಂತಾದ ಉತ್ತಮ ಬರಹಗಳ ಸಾಲಿಗೆ ಸೇರುವ ಕೃತಿ ಎಸ್ತರ್ ಅವರ ‘ನೆನಪು ಅನಂತ’

-ಡಾ. ಎಚ್. ಎಸ್. ಸತ್ಯನಾರಾಯಣ


ಕನ್ನಡದ ಬರಹಗಳನ್ನು ಹಂಚಿ ಹರಡಿ
4 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x