ಪಂಜು ಕಾವ್ಯಧಾರೆ

ಋಣಿಯಾಗಿರು

ಹೆತ್ತವಳು ಹಣ್ಣಣ್ಣು ಬದುಕಿಯಾದಾಗ
ಅಕ್ಕರೆಯಿಂದಿರು ಸಾಕು…
ಹಾಲುಣಿಸಿ ಋಣ ತೀರಿಸುವುದು ಬೇಕಿಲ್ಲ.

ಹೆತ್ತವಳು ಮುಪ್ಪಾಗಿ ಹೊಟ್ಟೆ ಹಸಿದಾಗ
ಚೂರು ಅನ್ನವನಿಡು ಸಾಕು….
ತುತ್ತುಣಿಸಿ ಋಣ ತೀರಿಸುವುದು ಬೇಕಿಲ್ಲ.

ಹೆತ್ತವಳ ಕೈ ಕಾಲಿಗೆ ಶಕ್ತಿ ಇಲ್ಲದಿದ್ದಾಗ
ಕೈಕೋಲು ಕೊಡು ಸಾಕು…..
ಬೆರಳಿಡಿದು ನಡೆಸಿ ಋಣ ತೀರಿಸುವುದು ಬೇಕಿಲ್ಲ.

ಹೆತ್ತವಳು ದುಃಖದ ಕಣ್ಣೀರಿಡುವಾಗ
ಅವಳ ಕಣ್ಣೆದುರಿರು ಸಾಕು….
ಚಂದ್ರನ ತೋರಿಸಿ ಋಣ ತೀರಿಸುವುದು ಬೇಕಿಲ್ಲ.

ಹೆತ್ತವಳು ವೃದ್ದೆಯಾಗಿ ಹಾಸಿಗೆ ಹಿಡಿದಾಗ
ಚಾಪೆ ಚಾದರ ನೆಲಕಾಸು ಸಾಕು….
ಜೋಗುಳದೊಳು ಮಲಗಿಸಿ ಋಣ ತೀರಿಸುವುದು ಬೇಕಿಲ್ಲ.

-ಮೈನು ಐ.ಬಿ.ಎಮ್

ಬಾಳುತಿರು

ನಶ್ವರದ ಜೀವನದಲಿ ನನ್ನದು ನನ್ನದೆಂದು
ನಾಚಿಕೆ ಮಾನ ಮರ್ಯಾದೆ ಬಿಟ್ಟು ಬಾಳದಿರು
ನಿನ್ನದೆಂಬುದಿಲ್ಲಿ ನಿನ್ನದಲ್ಲೆಂಬುದ ತಿಳಿಯದೆ
ನೀನು ನೀರ ಮೇಲಣ ಗುಳ್ಳೆಯಂತಾಗದಿರು.

ನುಡಿದಂತೆ ನಡೆಯದೆ, ನಡೆದಂತೆ ನುಡಿಯದೆ
ನೂರೆಂಟು ಸಮಸ್ಯೆಗಳ ಸುಳಿಗೆ ಸಿಲುಕದಿರು
ನೃಪನಾಗುವ ತಿರುಕನ ಕನಸು ನಿತ್ಯ ಕಾಣುತ್ತ
ನೆರೆಗೆ ಕೊಚ್ಚಿಹೋದ ತರಗೆಲೆಯಂತಾಗದಿರು.

ನೇಹ ಪ್ರೀತಿ ಬಾಂಧವ್ಯಗಳ ಬೆಲೆಯನರಿಯದೆ
ನೈಚ್ಯ ಬುದ್ಧಿಯ ಜಗದೆದುರು ತೋರಿಸದಿರು
ನೊಗವೊರದ ಮಗನಾಗಿ ತಾಯ್ತಂದೆಯರಿಗೆ
ನೋವುಗಳ ನೀಡಿ ವೃದ್ಧಾಶ್ರಮಕ್ಕೆ ಅಟ್ಟದಿರು.

ನೌಟಂಕಿ ಆಟವಾಡುತ ಮಂಕುಬೂದಿ ಎರಚಿ
ನಂಬಿದವರ ಬದುಕು ಮೂರಾಬಟ್ಟೆ ಮಾಡದಿರು
ನಃ ಬಾಳು ಆರು ಮೂರಡಿಯ ಮಣ್ಣಪಾಲೆಂದು
ನೀನೇ ಎಲ್ಲಾ, ನಿಂದೆ ಎಲ್ಲವೆಂದು ಅರಿತು ಬಾಳುತಿರು.

-ಶಿವಮೂರ್ತಿ.ಹೆಚ್.

ಕವಿತೆ…

ಕಾಡುವ ಪದಗಳೇ
ಓಡುವಿರೇಕೆ
ಮೋಡದ ಜೊತೆಗೆ
ಹಾರುವಿರೇಕೆ
ಪದಗಳ ಕೂಡಿಸಿ
ರಾಗವ ಹರಡಿ
ಮಳೆಯ ಹನಿಗಳ
ಕರೆಯುವಿರೇಕೆ
ಗಿರಿಯ ಕಾನನ
ಹಸಿರು ತೋರಣ
ಮುತ್ತಿನ ಮಣಿ ಮಾಲೆ
ಹೂವಿನ ತಂಪು
ಗಾನದ ಇಂಪು
ಜರಿಗಳ ಕರೆಯೋಲೆ
ಮಣ್ಣಿನ ಗುರುತು
ಹೂವಿನ ಚೆಲುವು
ಬುವಿಯಾ ವನ ಮಾಲೆ
ಎಲ್ಲವೂ ನಿಮ್ಮವೇ
ಪ್ರೀತಿಯ ಪದಗಳೇ
ನಮ್ಮ ಮಣ್ಣಿನ
ಉಸಿರಂತೆ
ಒಲವನ್ನು ಹಂಚಿ
ಬದುಕುವ ಸಂತಸ
ಹಸಿರದು ಹುಟ್ಟಿ
ಗಗನವ ಮುಟ್ಟಿ
ಜೀವಿತ ಉಳಿಯಲಿ
ಪದದಂತೆ……

-ನಾಗರಾಜ ಬಿ. ನಾಯ್ಕ

ಭಗವಂತನಿಗೆ ಮೊರೆ

ಜಗತ್ತು ಆಗಿದೆ ಅಧರ್ಮದ ಜಾಲ
ಉತ್ತುಂಗದಲ್ಲಿದೆ ಮಾನವ ಕುಲ
ನೀತಿ ನಿಯಮ ಕಳೆದಿದೆ ಬಲ
ಇದು ಹದ ಕಳೆದ ಕೆಟ್ಟ ಕಾಲ

ಹೆಜ್ಜೆ ಹೆಜ್ಜೆಗೂ ಮೋಸ
ಬೇಕೆಂದೇನೂ ಇಲ್ಲ ತಾಮಸ
ಇದಕಿಲ್ಲ ನಿಗದಿ ದಿನ ಮಾಸ
ಹಾಡು ಹೋಗಲೇ ಎಗರಿಸುತ್ತಾರೆ ಕಾಸ!

ರಾಜಕೀಯ ಒಂದು ವ್ಯವಸ್ಥಿತ ದಂಧೆ
ಪಟ್ಟಭದ್ರರಿದ್ದಾರೆ ಅದರ ಹಿಂದೆ ಇವರಿಗಿಲ್ಲ ಮಾನ ಮರ್ಯಾದೆ
ಇವರು ಅನ್ಯಾಯದಲ್ಲಿ ಮುಂದೆ

ನೀತಿವಂತರಿಗೆ ಇದು ಕಾಲವಲ್ಲ
ಮೋಸ ತಡೆಯಲು ಭಗವಂತನೇ ಬಲ್ಲ
ಮುರಿಯಬೇಕು ಇಂಥವರ ಹಲ್ಲ
ಸದಾಚಾರಕ್ಕೆ ಇರಬೇಕು ಬೆಂಬಲ

-ಅಮರ್.ಎನ್

ನೆನಪಿನ ಘಂಟೆಯ ಸದ್ದು!

ಎದೆಯಲ್ಲಿ ಅಗಲಿ ಹೋದ, ಕಳೆದುಕೊಂಡ
ನೋವುಗಳದೇ ಮೊರೆತ
ಅದೇನ್ನನ್ನೋ ನೆನೆದು ಬೆರಳುಗಳು ಬೆಚ್ಚುತ್ತವೆ
ಗೆರೆ ಗೀಚಲಾದೆ ಮುಷ್ಠಿಯೊಳಗೆ ಮುದುರಿ ಕೂರುತ್ತವೆ
ಮನದ ನಕಾಶೆಯಲ್ಲಿ ಹಾದಿ ತಪ್ಪಿ ಹೋದ
ಹೆಜ್ಜೆಗಳದೇ ಗುರುತು!

ಬೆರಳುಗಳು ದೂರಾದ ದೂರದ ಚುಕ್ಕೆಗಳನ್ನು
ಅನಾಯಸವಾಗಿ ಕೂಡಿಸಿ ಚೆಂದದ ರಂಗೋಲಿಯಾಗಿಸುತ್ತವೆ!
ತನ್ನವರೆಲ್ಲಾ‌ ತನ್ನ ಎದೆಯ ಅಂಗಳದಲ್ಲೇ
ಕೂತು ಪ್ರತಿಕ್ಷಣದ ಕನವರಿಕೆಯನ್ನು ಕೇಳುತ್ತಿದ್ದಾರೆಂದು
ಕನಸಿನಲ್ಲಿ ನಗುತ್ತದೆ!

ಕನಸು ಕರಗಿ ಎಚ್ಚರಗೊಂಡು
ಬೆಳಕಿಗೆ ಕಣ್ಣೊಡ್ಡಿ ನಿಂತರೂ
ಕಣ್ಣುಗಳು ತಾನಾಗೆ ಮುಚ್ಚಿ ಕತ್ತಲಿನ
ಕನವರಿಕೆಗೆ ಜಾರಲು ಬಯಸುತ್ತದೆ!
ಕಳೆದುಕೊಳ್ಳುವ ಭಯದಲ್ಲಿ ಕಣ್ಣುಗಳು ಕಡಲಾಗುತ್ತವೆ
ತೊರೆದು ಹೋದವರು ಹೋಗಿ ಬಿಡಬೇಕು
ಇಷ್ಟು ಕಾಡುವುದಾದರೂ ಯಾಕೆ ಎಂದು
ಗೊಣಗುತ್ತಾ ನೆನಪುಗಳೆಲ್ಲಾ ತನ್ನಿಂದ ಸರಿದು
ಹೋಗಲೆಂದು ನೀರು ಸುರಿದುಕೊಳ್ಳುತ್ತೇನೆ!

ಇಂದು ಹೊಸತು ಹುಟ್ಡು ಮರಳಿತೆಂದು
ಆಸೆಗಳ ಅರಳಿಸಿಕೊಳ್ಳುವತ್ತ
ಅಡಿಯಿಡಲು ಹೊರಳುತ್ತೇನೆ
ಗೋಡೆಯಲ್ಲಿ ತೂಗುತ್ತಿರುವ ಚಿತ್ರ
ಚಿತ್ತ ಮತ್ತದೇ ಹಳೆ ನೆನಪಿನ ಘಂಟೆಯ
ಸದ್ದಿಗೆ ಎಚ್ಚರಗೊಳ್ಖುತ್ತದೆ
ಅರಳಲೋ ಅಥವಾ ಹಳೆಯ ಮಂಪರಿಗೆ ಮರಳಲೋ
ಎಂದು ಖಾಲಿ ಕುರ್ಚಿಯಲ್ಲಿ ಕೂತು ನನ್ನ‌ ನಾನೇ ತೂಗಿಕೊಳ್ಳುತ್ತಾನೆ!

ಸೌಮ್ಯಶ್ರೀ ಎ.ಎಸ್

ಅಕ್ಷರ ನಮನ

ನೀವು ಮಾಡಿರುವಿರಿ
ನಮ್ಮಯ ಮನಃ ಪರಿವರ್ತನೆ
ಅದಕ್ಕಾಗಿ ನಮ್ಮಿಂದ
ನಿಮಗೀ ಗೌರವ ಸಮರ್ಪಣೆ.

ತರಗತಿಗೆ ಬರುವಿರಿ
ಟಿಪ್-ಟಾಪ್
ನಾವಾಗುವೆವು ಆಗ
ಗಪ್-ಚುಪ್.

ನಿಮ್ಮನ್ನು ನೋಡಿದರೆ
ಗಡಗಡನೆ ನಡುಗುವೆವು
ಒಂದೊಂದು ಬಾರಿ ನಿಮ್ಮೊಂದಿಗೆ
ಲೊಡಲೊಡನೆ ಮಾತಾಡುವೆವು.

ಮಕ್ಕಳಂತೆ
ಮಾತಾಡುವ ಮಾತುಗಾರ
ಮಾತೆಲ್ಲೇ ಗಮನ
ಹಿಡಿದಿಡುವ ಜಾದುಗಾರ.

ಉತ್ತರ ಪತ್ತ್ರಿಕೆ ಹಿಡಿದು
ನೀವಾಗುವಿರಿ ಪೊಲೀಸರಂತೆ
ಸಿಕ್ಕಿ ಬೀಳುವೆವು
ನಾವಾಗ ಕಳ್ಳರಂತೆ.

ಹರಿಸಿರುವಿರಿ ಅನುಮವಮಂಟದಿ
ಕನ್ನಡದ ಕಂಪು
ಹರಡುವಿರಿ ಮಕ್ಕಳ ಮನದಿ
ಮಾತಿನ ಇಂಪು.

ನಮಗಾಗಿ ಮಾಡುವಿರಿ
ರಂಜನೆ
ನಿಮಗಾಗಿ ನಮ್ಮಯ
ವಂದನೆ.

ಜಾಹ್ನವಿ ಎಂ ಬಿ

ಏರಿಳಿತ

ಎಲ್ಲವೂ ಸರಿ ಇರುವಾಗ ನಮಗೆ
ಎಲ್ಲವೂ ಬೇಕು ಬೇಕೆನಿಸುವುದು
ಕಣ್ಣ ಮುಂದೆ ಇರುವುದೆಲ್ಲವೂ
ನಮಗೆ ಎಷ್ಟಿದ್ದರೂ ಸಾಕು ಸಾಕೆನಿಸದು

ಮತ್ತಷ್ಟು ಮಗದಷ್ಟೂ ಸಿಕ್ಕಷ್ಟನ್ನೂ
ದೋಚಿ ನಮ್ಮದಾಗಿಸಿಕೊಳ್ಳುವಾಸೆ
ಪರರ ಚಿಂತೆ ಕಾಡದು ಆಗ ನಮಗೆ
ಎಲ್ಲವೂ ನಮ್ಮದಾಗಲೇ ಬೇಕೆಂಬಾಸೆ

ಅಗತ್ಯಕ್ಕೆ ಮೀರಿ ಬೇಕು ಬೇಡದ
ಎಲ್ಲವನ್ನೂ ತುಂಬಿಕೊಳ್ಳುವೆವು
ಇರುವುದು ನಾಲ್ಕುದಿನ ಎಂಬುದ ಮರೆತು
ಚಿರಂಜೀವಿಗಳಂತೆ ವರ್ತಿಸುವೆವು

ನಮಗೆ ವಯಸ್ಸು ಆಗುತ್ತ ಹೋದಂತೆ
ದೇಹಕ್ಕೆ ಮನಸ್ಸಿಗೆ ಎಲ್ಲವೂ ಭಾರವೆನಿಸುವುದು
ಎದಿರು ಇರುವುದೇ ಕಿರಿ ಕಿರಿ ಎನಿಸುವುದು
ಯಾವುದೂ ಬೇಡ ಬೇಡವೆನಿಸುವುದು

ಆರೋಗ್ಯವೊಂದೆ ಭಾಗ್ಯ ಎನಿಸುವುದು
ಮಿಕ್ಕೆಲ್ಲವೂ ಶೂನ್ಯ ಎಂದೆನಿಸುವುದು
ಬದುಕಿನಲಿ ಆದಷ್ಟು ಹಗುರವಾಗಿರಬೇಕು
ಖುಷಿ ಸಮಾಧಾನವನ್ನು ಹೊಂದಿರಬೇಕು

ಅಂತಸ್ತಿನ ಅರಮನೆಯು ಸುಖನೀಡದು
ಮೃಷ್ಟಾನ್ ಬೋಜನವೂ ಹಿತವೆನಿಸದು
ಆಪ್ತತೆಯ ಸನಿಹ ಮಾತ್ರ ಬೇಕೆನಿಸುವುದು
ಮಕ್ಕಳ ಮೊಮ್ಮಕ್ಕಳ ಒಡನಾಟ ಖುಷಿ ನೀಡುವುದು

ನಾಗರಾಜ ಜಿ. ಎನ್. ಬಾಡ

“ನಾಳೆ ಎಂಬುದಿದೆಯಾ?”

ನಾಳೆ ಎಂಬುದೊಂದು ಇದೆಯಾ ಗೆಳತಿ?.
ಅವನು ಬರುವನೆಂದು ಕಾದು
ನೆಂದ ಕಣ್ಣಗಲಿಸಿ ಜಡೀ ಮಳೆಯಲಿ
ಹಿಡಿ ನೆನಪಿನೊಂದಿಗೆ ಚಾತಕಪಕ್ಷಿಯಾದೆ.
ಬೆಳದಿಂಗಳ ಹಾಯ ದೋಣಿಯಲಿ
ವಚನವಿಟ್ಟು ತೆರಳಿ ಇಂದಿಗೆ ಬರೋಬ್ಬರಿ
ಹನ್ನೆರಡು ಮಾಸಗಳೆ ಸಂದವು!.

ನೆನಪುಗಳ ಮಳೆ ನಿತ್ಯ ಸುರಿದರೂ
ಹೃದಯ ತಣಿಯುತ್ತಿಲ್ಲ.
ಅವನಿರದ ಹನಿಗಳು
ಎಷ್ಟು ಹೊಯ್ದರೂ ಎದೆ ನೆಲ
ಹಸನಾಗುವುದಾದರೂ ಹೇಗೆ?.

ನನ್ನ ಕನವರಿಕೆಗಳು ಕನಸುಗಳಂತೆ,,
ಗಾಳಿಪಟವಾದವು ಸೂತ್ರ ಹರಿದು!.
ಪ್ರೀತಿಯ ಒಂಟಿನವಿಲು ಗರಿಬಿಚ್ಚಿತ್ತಷ್ಟೆ
ಕುಣಿಯಲು ಗಾಳಿ ಘಮವಿರದೆ
ಅಲ್ಲೂ ಸ್ಮಶಾನ ಮೌನ!.

ಇಂದವನು ಮಳೆ ತಂದರೆ,,,
ಹಗಲು ಇರುಳಾಗಿ ಮುಗಿಲು ಹರಿದು
ಹದವಾಗಲಿ ಈ ಬರಡು ಭೂಮಿ.
ಆದರೆ,,,,
ಮತ್ತೊಂದು ಮಿಲನಕ್ಕೆ ಸಜ್ಜಾಗೊ
ಆ ಅನಾಮಿಕ ಹೂವು ನನ್ನಂತೆ
ಅವನೊಲವ ದೀಪಕೆ
ಮಿಂಚುಹುಳು ಆಗುವುದಾದರೆ
ನಾಳೆ ಎಂಬುದು ಬಾರದಿರಲಿ ಗೆಳತಿ!!.

-ವಾಣಿ ಭಂಡಾರಿ

ವೇದನೆ

ನೀನು ಮತ್ತೆಂದಿಗೂ
ನನ್ನೆದುರು ಸುಳಿಯಬೇಡ
‘ನನ್ನ ಚೈತನ್ಯ ಕೊಂದ ರಾಕ್ಷಸೀ’
ಅಂದು, ಎದೆಗೆ ಒರಗಿ ಭಾವುಕಳಾಗಿ
ನುಡಿದೆ ‘ನಿನ್ನ ಬಿಟ್ಟಿಲಾರೆನು.’
ಉಸಿ ಮಾತುಗಳ ಬುಗ್ಗೆ ನೀನು
ಮಾಯಲೋಕದ ಸುಂದರೀ…
ನಶೆ ಏರಿಸಿ ಮೋರಿಗೆ ತಳ್ಳಿಬಿಟ್ಟೆ
ಬಳ್ಳಿಯಂತೆ ಬೇಕಾದ
ಗಿಡಮರಗಳನ್ನೆಲ್ಲ ಸುತ್ತಿಕೊಂಡೆ
ಬೇರಿದ್ದ ನೆಲವನ್ನು ಮರೆತೆ.
ಶಿಕ್ಷೆ ನೀಡುವ ಅಧಿಕಾರ ನಿನಗಿದೆ
ನೀನು ಹೇಳಿದ್ದನ್ನೆಲ್ಲ
ನಂಬಿದ ಮೂರ್ಖ ದೊರೆ ನಾನು.
ಮತ್ತಷ್ಟು ನೋವು ನೀಡದಿದ್ದರೆ
ನಿನ್ನ ಹೆಣ್ತನಕ್ಕೆ ಧಕ್ಕೆ ಆಗಬಹುದು
ಆಯುಧ ಸೀಳಿಕೊಂಡು
ತರುವ ಸಾವು
ಚಿತ್ರಹಿಂಸೆಯ ನಿನ್ನ ಮೋಸಕ್ಕಿಂತ ಒಳ್ಳೆಯದು

-ಅಜಯ್ ಕುಮಾರ್ ಎಂ ಗುಂಬಳ್ಳಿ

ಕಡಲ ತೀರದಲ್ಲಿ

ಈ ಸುಂದರ ಸಂಜೆಯಲಿ
ಕಡಲ ತೀರದಲ್ಲಿ
ಕೈ ಕೈ ಹಿಡಿದು ನಡೆಯುವ
ಸವಿ ಪಿಸುಮಾತುಗಳ ಆಡುತಾ

ಮನದ ಕಡಲಲಿ
ಅವಿತು ಕುಳಿತು ಬಚ್ಚಿಟ್ಟ
ಭಾವನೆಗಳ ಬರೆದು
ಹಾಡುವ ರಾಗದಲಿ

ಒಂದೊಂದು ಹೆಜ್ಜೆಗಳ
ಇಡುತಾ ಕಂಗಳಲಿ
ಮಾತಾಡುತಾ ಒಲವ
ಮಧುರ ಕಾವ್ಯಗಳ ನೆನಪಿಸುತಾ

ಮನದಿ ಮಾತಲಿ, ನೋವ ಮರೆತು
ಸಾಗರದಲೆಯಲಿ ಮೂಡಿದ
ಕೆಂಪು ಚಂದ್ರನ ಹೊನ್ನ
ಕಿರಣವ ನೋಡುತಾ ನಡೆಯುವ

-ಚೈತ್ರಾ ವಿ ಮಾಲವಿ

ಪರಿಸರ ಜಾಗೃತಿ ಗೀತೆ.

ಹಸಿರಿಲ್ಲದೆ ಜೀವರಾಶಿಗುಸಿರು ಎಲ್ಲಿದೆ
ಮರಗಿಡಗಳೆ ಉಸಿರು ಕೊಡುವ ದೇವರಲ್ಲವೆ

ಉಳಿಸುವಿರಾ ನೀವು ಬೆಳೆಸುವಿರಾ
ಗಿಡ ಮರ ಕಾಡನ್ನು ಉಳಿಸುವಿರಾ |ಪ|

ಇದ್ದಬದ್ಧ ಗಿಡ ಮರ ಕಾಡನ್ನು ನಾಶಮಾಡಿ
ಕಾಡು ಇದ್ದ ಜಾಗವನ್ನು ಖಾತೆ ಮಾಡಿ ತನ್ನದೆಂದು
ಬೀಗುವವರೆ ಕಣ್ಬಿಟ್ಟು ನೋಡುವಿರಾ…
ಪರಿಸರದಾ ಗೋಳನೊಮ್ಮೆ ಕೇಳುವಿರಾ… |ಪ|

ಊರಿಗಿದ್ದ ಗುಂಡುತೋಪು ಗೋಕುಂಟೆ ಗೋಮಾಳ
ಒತ್ತುವರಿಯಾಗಿ ನಮ್ಮ ದೊಡ್ಡ ದೊಡ್ಡ ಕೆರೆಯಂಗಳ
ಮಳೆಯ ನೀರು ನಿಲ್ಲಲಲ್ಲಿ ಜಾಗವಿಲ್ಲಾ…
ಬಂದ ನೀರು ಪೂರ ಇಂಗಿ ಹೋದವಲ್ಲ… |ಪ|

ಸಾವಿರಾರು ಅಡಿಗಳಷ್ಟು ಭೂಮಿಯಲೂ ನೀರಿಲ್ಲ
ಕಂಡ ಕಂಡ ಕಡೆಯಲ್ಲ ಕೊಳವೆಬಾವಿ ಕೊರೆದರಲ್ಲ
ಅಂತರ್ಜಲವೆ ಮಾಯವಾಗಿ ಹೋಯಿತಲ್ಲ….
ಭೂತಾಯ ಗೋಳನ್ಯಾರು ಕೇಳೋರಿಲ್ಲಾ … |ಪ|

ಮನೆಗೊಂದು ಮರವಂತೆ ಊರಿಗೊಂದು ವನವಂತೆ
ಕಾಡಿದ್ದರೆ ನಾಡಂತೆ ಮರವಿದ್ದರೆ ಮಳೆಯಂತೆ
ನಾಮಫಲಕಕಷ್ಟೆ ಇದು ಪರಿಮಿತವೆ…
ಘೋಷಣೆ ಮೊಳಗಲಷ್ಟೆ ಸೀಮಿತವೆ….|ಪ|

ಶುದ್ಧ ಗಾಳಿ ಶುದ್ಧ ನೀರು ಪಡೆಯುವುದು ನಮ್ಮ ಹಕ್ಕು
ಮುಂದಿನಾ ಪೀಳಿಗೆಗೂ ಉಳಿಯಬೇಕು ನಮಗೂ ಮಿಕ್ಕು
ಜಾಗ್ರತೆಯ ಈಗ ನೀವು ವಹಿಸುವಿರಾ ….
ಪರಿಸರದ ರಕ್ಷಣೆಯ ಮಾಡುವಿರಾ…. |ಪ|

-ದೇವರಾಜ್ ನಿಸರ್ಗತನಯ

ಈ ಪರಿಸರವು

ಬನ್ನಿರಿ ಬನ್ನಿರಿ ಕನ್ನಡ ಮಕ್ಕಳೇ
ಕನ್ನಡ ಶಾಲೆಯು ತೆರೆದಿಹುದು
ಬೇಸಿಗೆ ರಜೆಯು ಮುಗಿದಿಹುದು
ಶಾಲೆಗಳೆಲ್ಲ ಆರಂಭವಾಗಿ ತೆಗಿದಿಹುದು

ಬಿಸಿಯೂಟದಾಕೆ ನಾನು ನಿಮ್ಮ ತಾಯಿ
ಎಂದಿನಂತೆ ಅಡಿಗೆ ಮಾಡಿ ಬಡಿಸುವೆನು
ಪ್ರೀತಿಯ ಕೈತುತ್ತುಂಡು ನಲ್ಮೆಯ ಅಕ್ಷರಾಭ್ಯಾಸ
ಕಲಿಯುತ ನಲಿಯುತ ಹಾಡುತ ಪಾಡುತ ಅಭ್ಯಾಸ

ಬೇಸಿಗೆ ಶಿಬಿರದ ಅನುಭವಗಳ ಹಂಚಿರಿ
ಮುದದಲಿ ಕೇಳುವೆ ಕುತೂಹಲದಿ ಕೆರಳಿ
ನೀವೆನಾಟವನಾಡಿದಿರಿ ಏನೇನನು ಕಲಿತಿರಿ
ಕ್ರಿಯಾಶೀಲ ಚಟುವಟಿಕೆಗಳ ಹೇಳಿ ಮಕ್ಕಳೆ

ಬೇಸಿಗೆಯಂಚಲಿ ಮಳೆಯು ಬಂದಿತು ಧಾರಾಕಾರ
ಮನೆಯ ಕೈತೋಟಗಳ ಹಸನು ಮಾಡಿದೆವು
ಗಿಡಗಳ ನೆಟ್ಟೆವು ಗೊಬ್ಬರ ಹಾಕಿದೆವು
ನೀರೆರದು ಕಣ್ಣನು ಮಿಟುಕಿಸಿ ಹೊಸ ಚಿಗುರು ಬಂತು

ಮಳೆಯು ಬಂತು ಹೃನ್ಮನದಿ ಮಕ್ಕಳ ಕಸುಬಿಗೆ
ಮಳೆರಾಯನು ಜೊತೆಯಾಗಿ ಹಸಿರೆ ಉಸಿರು
ಪರಿಸರ ಉಳಿಸಿ ಬೆಳಿಸಿ ಸಂರಕ್ಷಿಸಿ ಸ್ವಚ್ಚಂದಗಾಳಿ
ಉಸಿರಾಡುವೆವು ಆಮ್ಲಜನಕವೆ ನಮ್ಮ ಉಸಿರು ಎಂದು ಸಾರಿದೆವು

ವರಲಕ್ಷ್ಮಿ ಬಿಸಿಯೂಟದಾಕೆ ಕೇಳುತ ಮುದದಲಿ
ಮಕ್ಕಳ ಮಾತನು ಊಟವ ಹೆಚ್ಚು ಬಡಿಸಿದಳು
ಇನ್ನು ತಿನ್ನು ಗಿಡಗಳ ನೆಟ್ಟ ಪರಿಶ್ರಮಕೆ ದೈವವು
ನೀಡಿದ ಉಡುಗೊರೆಯು ಈ ಪರಿಸರವು.

-ಸಂತೋಷ್ ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
2 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x