ದಿಕ್ಕುಗಳು (ಭಾಗ ೧): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಯ ತಾಯಿಯ ಖಾಯಿಲೆ ಗುಣ ಆಗಲಿಲ್ಲ. ಸಕ್ಕರೆ ಕಾಯಿಲೆ ಪೀಡಿತಳಾಗಿದ್ದ ಆಕೆಯ ಕಾಲಿಗೆ ಏನೇನೋ ಔಷಧ ಕೊಡಿಸಿದರೂ ಗಾಯ ಮಾಯಲೇ ಇಲ್ಲ. ಏಳೆಂಟು ವರ್ಷಗಳಿಂದ ಕೀವು ಸೋರಿ ಸೋರಿ ಶಾಂತಮ್ಮ ಕಡ್ಡಿಯಂತಾಗಿದ್ದಳು. ಕೊನೆಗೂ ಆ ದಿನ ಆಕೆಯ ಜೀವ ಹಾಸಿಗೆಯಲ್ಲೇ ಹೋಗಿತ್ತು.

ತಾಯಿಗೆ ಮಣ್ಣು ಕೊಟ್ಟು ಮನೆಗೆ ಬಂದ ಅನುಶ್ರೀಗೆ ಜೀವನ ಶೂನ್ಯವೆನ್ನಿಸಿತ್ತು. “ಜಡ್ಡಾಗ್ಲಿ ಜಾಪತ್ರಾಗ್ಲಿ ಅವ್ವ ಇರಬೇಕಾಗಿತ್ತು” ಅಂತ ಮೊಣಕಾಲ ಮೇಲೆ ಮುಖವಿರಿಸಿಕೊಂಡು ಹುಡುಗಿ ಕಂಬನಿ ಸುರಿಸುತ್ತಾ ಇತ್ತು. ಆಜೂಬಾಜೂದವರು ಹೇಳುವಷ್ಟು ಸಮಾಧಾನ ಹೇಳಿದರು. ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗೆ ನಡೆದರು. ವರಸೆಯಲ್ಲಿ ಅತ್ತೆಯಾದ ದೂರದ ಸಂಬಂಧಿ ನಾಗಮ್ಮ ಅನುಶ್ರೀ ಜೊತೆಯಲ್ಲಿದ್ದು ಶಾಂತವ್ವನ ತಿಥಿ ಕರ್ಮಗಗಳನ್ನು ಮುಗಿಸಿದ ನಂತರ ಹೊರಟು ಹೋದಳು.

ತಾಯಿಯನ್ನು ನೆನೆ ನೆನೆದು ಅನುಶ್ರೀ ಕೃಶವಾಗಿಬಿಟ್ಟಿದ್ದಳು. ಆರಾಮಿರದಿದ್ದರೂ ಅವ್ವ ಇದ್ದಾಳೆಂಬುದೇ ದೊಡ್ಡದು ಎಂದುಕೊಂಡಿದ್ದ ಹುಡುಗಿಗೆ ತಾಯಿಯ ನಿರ್ಗಮನ ಎಲ್ಲವನ್ನೂ ಕಳೆದುಕೊಂಡಂತಹ ಭಾವನೆಗೆ ಈಡು ಮಾಡಿತ್ತು. ಆದರೆ ಅನುಶ್ರೀಯ ತಂದೆ ಶಿವಪ್ಪ ಬೇರೆಯದೇ ರೀತಿಯಲ್ಲಿ ಯೋಚಿಸತೊಡಗಿದ್ದ. “ಹೋಗೂದು ಹೋದ್ಲು ಮಾರಾಯ್ತಿ… ಎಂಟು ವರ್ಷದ ಹಿಂದನಾ ಹೋಗಿದ್ರ ಅರ್ವತ್ಸಾವೇರಗಟ್ಲೆ ಸಾಲ ಆಕ್ಕಿರಲಿಲ್ಲ. ಬರೇ ಜಡ್ಡು, ದವಾಖಾನಿ, ಅಗ್ಸಿದ್ದೇವು ಅಂತ ತಿರುಗಾಡಿದ್ದಾ ತರ‍್ಗಾಡಿದ್ದು. ಒಂದಿನಾನೂ ಚೆಂದಗಿದ್ಲು ಅನ್ನೂವಂತ ನೆನಪು ಉಳೀಲಿಲ್ಲ. ಕಣ್ಣೀರು ಕೂಳು ಏಕ್ ಮಾಡಿ ತಿನ್ನಿಸಿಬಿಟ್ಲು! ಕಡಿಗಿ ಆಕಿ ಬಿಟ್ಟು ಹೋಗಿದ್ದು ಮೂರಾ. ಹೊಲ ಮನಿ ಮಾರೀದ್ರೂನು ತೀರದಷ್ಟು ಸಾಲ, ಕೆಟ್ಟು ನೆನಪು, ಮತ್ತ ನಮ್ಮಿಬ್ಬರ ಸಂಬಂಧದ ಗುರುತು ಅಂತ ಮಗಳು ಅನುಶ್ರೀ…” ಹೀಗೆ ಶಿವಪ್ಪ ಕರುಳಿಲ್ಲದವನಂತೆ ಯೋಚಿಸತೊಡಗಿದ್ದ.

ಶಾಂತವ್ವನ ಉತ್ತರ ಕ್ರಿಯೆಗಳೆಲ್ಲಾ ಮುಗಿದವು. ಬೇಕೆಂದಾಗೆಲ್ಲಾ ಬೇಕಂದಷ್ಟು ಸಾಲ ಕೊಟ್ಟಿದ್ದ ಕಟ್ಟೀಮನಿ ಮಲಕಾಜಪ್ಪ ಲೆಕ್ಕದ ಪುಸ್ತಕ ತೆಗೆದು ನೋಡಿದ. ಶಿವಪ್ಪನ ಸಾಲದ ಮೊತ್ತ ಬರೋಬ್ಬರಿ ಒಂದು ಲಕ್ಷ ಐವತ್ನಾಲ್ಕು ಸಾವಿರ. ಶಾಲನ್ನು ಕೊಡವಿ ಹೆಗಲಿಗೆ ಹಾಕಿಕೊಂಡ ಮಲಕಾಜಪ್ಪ ದೋತರದ ಚುಂಗನ್ನು ಬಲಗೈಯಲ್ಲೂ, ಲೆಕ್ಕದ ಪುಸ್ತಕವನ್ನು ಎಡಗೈಯಲ್ಲೂ ಹಿಡಿದುಕೊಂಡು ಸಾಲ ವಸೂಲಿಗಾಗಿ ಶಿವಪ್ಪನ ಮನೆಗೆ ಹೊರಟ. ನಿರೀಕ್ಷಿಸಿದಂತೆ ಶಿವಪ್ಪ ಎಲೆಯಡಿಕೆ ಜಗಿಯುತ್ತ ಬಾಗಿಲ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದ. ಮಲಕಾಜಪ್ಪ ಪ್ರತ್ಯಕ್ಷವಾದುದೇ ತಡ ಶಿವಪ್ಪ ಎದ್ದು ನಮಸ್ಕರಿಸಿ ಕಟ್ಟೆಯ ಮೇಲೊಂದು ಜಾಡಿ ಹಾಸಿದ. ಚಕ್ಕಳ ಬಕ್ಕಳ ಹಾಕಿ ಕುಳಿತುಕೊಂಡ ಮಲ್ಲಕಾಜಪ್ಪ ನೇರವಾಗಿ ವಿಷಯ ಮುಂದಿರಿಸಿದ. ಇಷ್ಟು ದಿವಸ ಮನೆಯಲ್ಲಿ ಕಾಯಿಲೆ ಬಿದ್ದ ಹೆಂಡತಿ,ಖರ್ಚು, ಅದು ಇದು ಅಂತ ಬೇನೆ ತೋಡಿಕೊಳ್ಳುತ್ತಿದ್ದ ಶಿವಪ್ಪನಿಗೆ ಈಗ ಯಾವುದೇ ನೆವವನ್ನು ಹೇಳಿ ಜಾರಿಕೊಳ್ಳಲಾಗಲಿಲ್ಲ.

“ನಿಜವಾಗ್ಲೂ ನಿಮ್ಮ ಸಾಲಾನ ಆದಷ್ಟು ಲಗೂನ ತೀರಿಸ್ಬೇಕಂತೀನ್ರಿ, ಹ್ಯಾಗ ತೀರಿಸ್ಬೇಕಂತ ತಿಳೀವಲ್ದು” ಎಂದು ಶಿವಪ್ಪ ಇದ್ದ ಸಂಗತಿ ಹೇಳಿದ. ಇದೇ ಸಮಯ ಒಳ್ಳೇದೆಂದುಕೊಂಡ ಮಲಕಾಜಪ್ಪ ಗಾಳ ಹಾಕಿದ, “ಮತ್ತ ಹೊಲ ಗಿಲ ಏನಾರಾ ಮಾರೂ ಇಚಾರ ಐತಿನು?”. ಶಿವಪ್ಪನಿಗೆ ತಕ್ಷಣ ಏನು ಹೇಳಬೇಕೆಂದು ತೋಚಲಿಲ್ಲ. ಒಂದೆರಡು ನಿಮಿಷ ಸುಮ್ಮನೆ ಕುಳಿತಿದ್ದನು. ನಂತರ, “ಯೇಚ್ನೆ ಮಾಡಿ ನಾಳಿ ಹೇಳ್ತೀನ್ರಿ” ತೊದಲಿದನು ಶಿವಪ್ಪ. “ನಾಳೆ ಈ ಹೊತ್ಗಿ ಏನಾರ ಒಂದು ನಿರ್ಧಾರ ಆಗಾಬೇಕು ಶಿವಪ್ಪ, ನಾನು ಜಾಸ್ತಿ ಮಾತಾಡಂಗಿಲ್ಲ” ಎಂದು ಮಲಕಾಜಪ್ಪ ಕಟ್ಟೆ ಇಳಿದು ಹೊರಟು ಹೋದ. ಶಿವಪ್ಪ ರಾತ್ರಿ ಇಡೀ ಕಣ್ಣು ಮುಚ್ಚಲಿಲ್ಲ ನಿದ್ದೆ ಮಾಡಲಿಲ್ಲ. ಮಲಕಾಜಪ್ಪನ ಮಾತುಗಳನ್ನು ಕೇಳಿಸಿಕೊಂಡಿದ್ದ ಅನುಶ್ರೀಗೂ ಚಿಂತೆಯಾಗಿತ್ತು. ತಂದೆ- ಮಗಳು ಸಾಲದ ಬಗ್ಗೆಯೇ ಯೋಚಿಸುತ್ತಾ ರಾತ್ರಿ ಕಳೆದಿದ್ದರು. ಶಿವಪ್ಪ ಬೆಳಗಿನ ಹೊತ್ತಿಗೆ ಒಂದು ನಿರ್ಧಾರಕ್ಕೆ ಬಂದಿದ್ದ.

ಮಲಕಾಜಪ್ಪ ಮೊದಲೇ ತಿಳಿಸಿದ ಪ್ರಕಾರ ಮಾರನೆ ದಿನ ಸಾಯಂಕಾಲ ಐದರ ಹೊತ್ತಿಗೆ ಶಿವಪ್ಪನ ಮನೆಗೆ ಹಾಜರಾಗಿದ್ದ. ಆತನ ತಲೆಯಲ್ಲಿ ಬೇರೊಂದು ಯೋಚನೆ ಕುಣಿದಾಡತೊಡಗಿತ್ತು. “ಏನಂತೀಯಪಾ ಶಿವಪ್ಪ” ಆತ ಗತ್ತಿನಿಂದ ಕೇಳಿದ. “ಅನ್ನೂದೇನೈತ್ರೀ, ಹೊಲ ಮಾರೂ ನಿರ್ಧಾರಕ್ಕ ಬಂದೀನಿ. ಹೊಲ ಖರೂದಿ ಹಿಡಿಯಾಕ ಯಾರಾರ ಮುಂದ ಬಂದ್ರ ರೇಟು ಹೊಂದಿಸಿ ಕೊಟ್ಟು ಬಿಡ್ತೀನಿ. ಮಲಕಾಜಪ್ಪ ಶಿವಪ್ಪನ ಹತ್ತಿರಕ್ಕೆ ಸರಿದು ಕುಳಿತು, “ಅಲ್ಲಾ ಶಿವಪ್ಪ ಯೋಚಿಸೂ,… ಮತ್ತೆ ನೀನು ಹೂಂ ಅಂದ್ರ… ಈ ಸಾಲಾನಾ ಇನ್ನೋಸು ದಿವ್ಸ ಬಿಟ್ಟು ಕೊಡ್ಬೋದು” ಎಂದನು. ಶಿವಪ್ಪನಿಗೆ ಆತನ ಮಾತು ಅರ್ಥ ಆಗಲಿಲ್ಲ. “ನೀವು ಅವಸರ ಮಾಡಿದ್ದಕ್ಕ, ನಾನು ಹೊಲ ಮಾರೂ ಯೇಚ್ನೆ ಮಾಡೀನಿ. ಆದ್ರ ನೀವು ಈಗ ನೋಡೀದ್ರ ಹಿಂಗಂತೀರಿ, ಯಾಕ್ರಿ” ಶಿವಪ್ಪ ಆತಂಕದಿಂದ ಕೇಳಿದ. “ಅಲ್ಲಾ ಶಿವಪ್ಪ ಹೊಲ ಮಾರೀದ್ರ ಮತ್ತೆ ಖರೂದಿ ಮಾಡೂದು ಕಷ್ಟ. ಸಾಲಾನಾ ನಿಧಾನಕ್ಕೆ ಕೊಡೂವಂತ. ಈಗ ನಾನು ಹೇಳಿದಷ್ಟು ಕೇಳು” ಮಲಕಾಜಪ್ಪನ ಮಾತಿಗೆ ಅನುಶ್ರೀ ಒಳಗಿನಿಂದಲೇ ಕಿವಿಗೊಟ್ಟಳು. ಶಿವಪ್ಪನ ಪ್ರಶ್ನೆ. “ಏನು ಹೇಳ್ತೀರಿ”. ಮಲಕಾಜಪ್ಪ, “ನೀನು ಯೋಚ್ನೆ ಮಾಡು ನಾನೇನೂ ತಪುö್ಪ ಹೇಳಾಕ್ಹತ್ತಿಲ್ಲ. ನಾನು ನಿನ್ನೆ ರಾತ್ರಿ ಇಡೀ ಯೋಚಿಸ್ದೆ. ನಿಮ್ಮ ಮನಿ ಸ್ಥಿತಿ ಬಗ್ಗೆ ಪಾಪ ಅನಿಸ್ತು. ನಿನ್ನ ಮಗಳ್ನ ಆದಷ್ಟು ಲಗೂನ ಮದುವಿ ಮಾಡಿ ಕಳಿಸ್ಬಿಡು. ಬೆಳ್ದು ನಿಂತಾಳಲ್ಲ”. “ಪ್ರಯತ್ನ ಮಾಡ್ಬೇಕ್ರಿ ಮಲಕಾಜಪ್ಪ. ನಿಮದೊಂದು ಸಾಲ ತೀರಿತಂದ್ರ ಚಿಂತಿಲ್ಲ. ಎಲ್ಯಾರ ಒಳ್ಳೇ ವರ ಇದ್ರ ನೋಡ್ಕೊಂತ ರ‍್ರಿ ಸ್ವಲ್ಪ”. “ಆತ್ಬುಡು, ವರಕ್ಕೇನು ಕಡಿಮಿ ನೋಡೂನು. ಮತ್ತ ಸಾಲದ್ದೇನೂ ತಲ್ಯಾಗ ಅಷ್ಟು ಇಟ್ಕೊಬ್ಯಾಡ. ನಿಧಾನಕ್ಕ ಕೊಡೂವಂತ. ನಾನು ನಿನ್ನೆ ಅವಸರ ಮಾಡಿದ್ದಕ್ಕ ಬ್ಯಾಸರ ಮಾಡ್ಕೊಬ್ಯಾಡ. ನನಗೂ ನಿನ್ನ ಕಷ್ಟ ಅರ್ಥ ಆಗೇತಿ” ಎಂದನು.

ಅನುಶ್ರೀ ತನ್ನ ಕಣ್ಣು ಕಿವಿಯನ್ನೇ ನಂಬದಾದಳು. ‘ರೊಟ್ಟಿ ತೊಳ್ಕೊಂಡು ಕುಡ್ದು ಊಟಾಯ್ತು ಅನ್ನೂ ಸ್ವಭಾವದ ಮಲಕಾಜಪ್ಪ ದಡಗ್ಗನ ತನ್ನ ಕಠೋರತೆ ನಿಲ್ಲಿಸಿ, ಇಷ್ಟು ಕರುಣೆ ತೋರಿಸಿದನಲ್ಲ’ ಅಂತ ಆಶ್ಚರ್ಯಚಕಿತಳಾದಳು.

“ಹೂನ್ರೀ, ಆಟು ತಾಳ್ಕೊಂಡ್ರ ನಿಮಗ ಪುಣ್ಯ ಬರುತ್ರೀ, ನನ್ನ ಮಗಳದೊಂದು ಮದುವಿ ಮಾಡ್ಬಿಟ್ರ ಆಮ್ಯಾಲೆ ನನಗೆ ಚಿಂತಿಲ್ಲ. ನಿಮ್ಮ ಸಾಲ ಆದಷ್ಟು ಲಗೂನ ತೀರಿಸ್ಬಿಡ್ತೀನಿ” ಎಂದನು ಶಿವಪ್ಪ ದೈನ್ಯದಿಂದ.

ಮಲಕಾಜಪ್ಪ ಅದೂ ಇದು ಅಂತ ಮಾತಾಡುತ್ತಾ ಎಷ್ಟೊ ಹೊತ್ತಾದರೂ ಏಳುತ್ತಲೇ ಇಲ್ಲ. ಮಾತೆಲ್ಲಾ ಮುಗಿದರೂ ಹುಡುಕಿ ಹುಡುಕಾಡಿ ಮಾತಾಡುತ್ತಿದ್ದಾನೆ ಅನ್ನಿಸಿತು ಅನುಶ್ರೀಗೆ. ಶಿವಪ್ಪನೂ ಮನಸ್ಸಿನಲ್ಲೇ. “ಇವ ಯಾಕಾ ಕುಂತಾಂವ ಕುಂತಾಬಿಟ್ನಲ್ಲ” ಎಂದುಕೊಂಡನು. ಸುಮಾರು ಹತ್ತೆಂಟು ನಿಮಿಷದ ಮಾತುಗಳನ್ನು ಹಿಗ್ಗಿಸಿ, ಜಗ್ಗಿಸಿ ಒಂದೂವರೆ ತಾಸು ಮಾತಾಡಿದನು. ಅನುಶ್ರೀ ಒಳಗೇ ಚಡಪಡಿಸುತ್ತಿದ್ದಳು. ಮಲಕಾಜಪ್ಪ ಕಾರಣವಿಲ್ಲದೆ ಎಲ್ಲಿಯೂ ಐದಾರು ನಿಮಿಷಕ್ಕಿಂತ ಹೆಚ್ಚಿಗೆ ನಿಲ್ಲುವವನಲ್ಲ. ಹಾಗಾಗಿ ಇವತ್ತಿನ ಆತನ ವರ್ತನೆ ತಂದೆ-ಮಗಳಿಗೆ ಕಗ್ಗಂಟಾಗಿ ಕಂಡಿತು. ಶಿವಪ್ಪನಿಗೆ ಏನೋ ಹೊಳೆದಂತಾಗಿ ತಲೆ ಕೆರೆದುಕೊಂಡನು. “ಯವ್ವಾ ಒಂಚೂರು ಚಾ ಕಾಸ್ಬೆ” ಅಂತ ಪಡಸಾಲೆಯಿಂದಲೇ ಆತ ಮಗಳಿಗೆ ಹೇಳಿದನು. ಅನುಶ್ರೀ ಚಹ ಕುದಿಸುವಾಗ ಆಕೆಯ ತಲೆಯಲ್ಲಿ ಯೋಚನೆಗಳ ತಾಕಲಾಟ. ಈ ಮಲಕಾಜಪ್ಪ, ಬಾರಕೇರ ರುದ್ರವ್ವಗ, “ಒಂದಿನ ನನ್ನ ಕೂಡ ಮಕ್ಕೊ, ನಿನ್ನ ಸಾಲ ಮನ್ನಾ ಮಾಡ್ತೀನಿ” ಅಂದಿದ್ದ ಅಂತ ಹಿಂದೊಮ್ಮೆ ಊರಾಗೆಲ್ಲಾ ಸುದ್ದಿ ಹಬ್ಬಿದ್ದು ನೆನಪಾಗಿ ಅನುಶ್ರೀಗೆ ಕಳವಳ ಆಯಿತು. ಅನುಶ್ರೀ ಚಹ ಮಾಡಿ ಲೋಟಕ್ಕೆ ಹಾಕಿದಳು. “ಬಾರಪ್ಪ ಇಲ್ಲೇ” ಎಂದು ಕರೆದು ತಂದೆಯ ಕೈಗೆ ಚಹ ಕೊಟ್ಟು, “ನೀನಾ ಕೊಟ್ಟು ಬಿಡು” ಎಂದಳು. ಶಿವಪ್ಪ ಚಹ ಬಟ್ಟಲು ಹಿಡಿದು ಹೊರಬಂದಾಗ ಮಲಕಾಜಪ್ಪ ಹುಳ್ಳುಳ್ಳಾಗಿದ್ದ ಮುಖವನ್ನು ಹಿಗ್ಗಿಸಿಕೊಳ್ಳಲು ಪ್ರಯತ್ನಿಸಿ ಸೋತಿದ್ದ. ಮರು ಮಾತಾಡದೇ ಶಿವಪ್ಪ ತಂದಿಟ್ಟ ಚಹ ಹಿಗ್ಗಿದ. ಅನುಶ್ರೀಯನ್ನು ಕಣ್ತುಂಬ ನೋಡಬೇಕೆಂದುಕೊಂಡು ಬಂದಿದ್ದ ಮುದಿಯನಿಗೆ ನಿರಾಸೆಯಾಯಿತು. “ಹಂಗಾದ್ರ ನಾನು ಬರ್ತೀನಿ ಶಿವಪ್ಪ” ಎಂದು ಲೆಕ್ಕದ ಪುಸ್ತಕ ಹಿಡಿದು ಮೇಲೆದ್ದನು.

“ಹೋಗಾ ನಿನ್ನ ಮನಿ ಹಾಳಾಗ, ನಮ್ಮಪ್ಪಗ ನೀನೊಬ್ಬಾತಾ ಇದ್ದಿ ನೋಡು ಬಡ್ಡಿ ಸಾಲ ಕೊಡಾಕ, ಒಂದ್ಕೆಂಟು ಲೆಕ್ಕ ಬರೆದು ಈಗ ತಾಸಿಗೊಂದು ಸೋಗು ಹಾಕ್ತಿ. ನಿನ್ನ ಬಕ್‌ಬರ‍್ಲ ಬಡೀಲಿ” ಎಂದು ಮಲಕಾಜಪ್ಪ ಹೋದ ದಿಕ್ಕಿಗೆ ಚಟಗು ಮುರಿದು ಸಾಪಳಿಸಿದಳು. ಈ ಮುದಿಯನಿಗೆ ಧರ್ಮಬುದ್ದಿ ಹೇಗೆ ಬಂದಿದ್ದೀತು ಅಂತ ಆಕೆ ತಲೆ ಕೆಡಿಸಿಕೊಂಡಳು. ಶಿವಪ್ಪ ಕೂಡ ಮಲಕಾಜಪ್ಪನ ವರ್ತನೆಯಲ್ಲಿ ಬದಲಾವಣೆ ಕಂಡು ಆಶ್ಚರ್ಯಚಕಿತನಾಗಿದ್ದ.

ನಂತರದ ದಿನಗಳಲ್ಲಿ ಮಲಕಾಜಪ್ಪ ಶಿವಪ್ಪನ ಮನೆಗೆ ಬರುವುದು ತಾಸುಗಟ್ಟಲೆ ಮಾತಾಡುವುದು ಹೆಚ್ಚಾಯಿತು. ಆತ ಮೇಲಿಂದ ಮೇಲೆ ವಿನಾಕಾರಣ ಬರುವುದು ಶಿವಪ್ಪನಿಗೂ ಆತನ ಮಗಳಿಗೂ ಇಷ್ಟವಾಗಲಿಲ್ಲ. ಆದರೆ ತಾವು ಮಾಡಿದ ಸಾಲದ ಬಿಡೆಗೆ ತಂದೆ ಮಗಳ ಬಾಯಿಗೆ ಹೊಲಿಗೆ ಬಿದ್ದಂತಾಗಿತ್ತು. ಮಲಕಾಜಪ್ಪ ಮತ್ತು ಶಿವಪ್ಪನ ಮಾತುಗಳು ಬಹಳಷ್ಟು ಸಲ ಅನುಶ್ರೀ ಮದುವೆಯ ವಿಷಯ ಕುರಿತು ನಡೆಯುತ್ತಿದ್ದವು. ಮಲಕಾಜಪ್ಪ ಪ್ರತಿ ಸಲ ಬಂದಾಗಲೂ ಯಾವುದಾದರೂ ವರನ ಬಗ್ಗೆ ಮಾಹಿತಿ ತಂದಿದ್ದಾನೋ ಹೇಗೆ ಅಂತ ಶಿವಪ್ಪ ಆಸೆಯಿಂದ ಮಾತಿಗೆ ಇಳಿಯುತ್ತಿದ್ದನು. ಆದರೆ ಮಲಕಾಜಪ್ಪ ಈ ಕುರಿತು ಯಾವುದೇ ಖಚಿತ ಸುದ್ದಿ ತರುತ್ತಿರಲಿಲ್ಲ. ಆತ ಶಿವಪ್ಪನ ಮನೆಗೆ ಬರುವ ಉದ್ದೇಶವೇ ಅನುಶ್ರೀಯನ್ನು ನೋಡುವುದಾಗಿತ್ತು. ಈಗೀಗ ತಂದೆಗೆ ಅವಮಾನವಾಗಬಾರದೆಂದು ಅನುಶ್ರೀ ಚಹ ತಂದು ಕೊಡುತ್ತಿದ್ದಳು. ಮುದುಕ ಹೆಚ್ಚಿಗೆ ಮಾತಾಡಿಸಬೇಕೆಂದುಕೊಳ್ಳುತ್ತಿದ್ದ. ಆದರೆ ಆಕೆಯ ಮಾತು ಕಡಿಮೆ. ಸುಮ್ಮನೆ ಆ ಗೊಂಬೆಯಂಥ ಹುಡುಗಿಯನ್ನು ನೋಡಿದರೆ ಖುಷಿ ಆಗುತ್ತಲ್ಲ ಅಂತ ಆತ ಯೋಚಿಸುತ್ತಿದ್ದ. ಇತ್ತೀಚೆಗೆ ಮಲಕಾಜಪ್ಪನ ದೃಷ್ಟಿ ಅನುಶ್ರೀಯ ಮೈಮೇಲೆ ಹರಿದಾಡುವುದು ಆಕೆಯ ತಂದೆಗೆ ಸ್ಪಷ್ಟವಾಗಿ ತಿಳಿದಿತ್ತು. ಅನುಶ್ರೀಗೂ ಹಾಗೇ ಅನ್ನಿಸಿತ್ತು. ಆಕೆ ಮನಸ್ಸಿನಲ್ಲೇ, “ಹೋಗ್ಲೋ ಮುದಿ ಬಾಡ್ಯಾ” ಅಂತ ಬಯ್ಯುತ್ತಿದ್ದಳು. “ಸಾಲದ ಸಲುವಾಗಿ ಸುಮ್ಕದೀನಿ ತಡಿ, ಇಲ್ಲದಿದ್ರ ನಿನ್ನ ಉಳ್ಳಾಡಿಸಿ ಒದೀತಿದ್ದೆ” ಎಂದು ಆಕೆ ಸ್ವಗತದಲ್ಲಿ ಕೆಂಡ ಕಾರುತ್ತಿದ್ದಳು.

ಓಣಿಯ ಜನರೆಲ್ಲ ಶಿವಪ್ಪ ಮತ್ತು ಮಲಕಾಜಪ್ಪನ ಗೆಳೆತನ ಮೊದಲಿಗಿಂತಲೂ ನಿಕಟವಾಗಿದೆ ಅಂತ ಅಚ್ಚರಿಯಿಂದ ಪ್ರಶ್ನಾರ್ಥಕವಾಗಿ ನೋಡುತ್ತಿದ್ದರು; ಮಾತಾಡಿಕೊಳ್ಳುತ್ತಿದ್ದರು.

ಆ ದಿನ ಮದ್ಯಾಹ್ನ ಎರಡರ ಸಮಯ. ಊರ ಹೊರಗಿನ ಆ ಮನೆಯಲ್ಲಿ ಅನುಶ್ರೀ ಒಬ್ಬಳೆ ಇದ್ದಳು. ಶಿವಪ್ಪ ಕೊಪ್ಪಳದಲ್ಲಿರುವ ಅತ್ತೆ ಮನೆಗೆ ವ್ಯವಹಾರದ ನಿಮಿತ್ಯ ಹೋಗಿದ್ದ. ಮಲಕಾಜಪ್ಪನಿಗೆ ಈ ವಿಷಯ ತಿಳಿದಿತ್ತು. ರೂಢಿಯಂತೆ ಶಿವಪ್ಪನ ಮನೆಗೆ ಬಂದ. ಆದರೆ ಆತ ಮದ್ಯಾಹ್ನ ಎಂದೂ ಬರುತ್ತಿರಲಿಲ್ಲ. ಶಿವಪ್ಪ ಹೊಲದಿಂದ ಬರುವುದು ಸಂಜೆಯೇ. ಮದ್ಯಾಹ್ನ ಹೋದರೆ ಅನುಶ್ರೀ ಒಬ್ಬಳೇ ಸಿಗುತ್ತಾಳೆಂದು ಎಷ್ಟೋ ಸಲ ಯೋಚಿಸಿದ್ದನು. ಆದರೆ ಆಕಷ್ಮಿಕವಾಗಿ ತಾನು ಹೋದಾಗಲೇ ಶಿವಪ್ಪ ಮನೆಗೆ ಬೇಗನೆ ಬಂದರೆ ಏನಾದರೂ ರಾದ್ಧಾಂತವಾಗದೇ ಇರಲಾರದು ಎಂದು ಸುಮ್ಮನಾಗುತ್ತಿದ್ದ. ಇವತ್ತು ಶಿವಪ್ಪ ಕೊಪ್ಪಳ ಬಸ್ ಹತ್ತಿದ್ದನ್ನು ಬಹಿರ್ದೆಸೆಗೆ ಹೋಗುವಾಗ ನೋಡಿದ್ದ. ಆದರೆ ಯಾವಾಗ ವಾಪಸ್ ಬರಬಹುದು ಅಂತ ಸಂಶಯವಿತ್ತು. ಏನೇ ಇರಲಿ ಶಿವಪ್ಪ ಕೊಪ್ಪಳ, ಗಂಗಾವತಿ ಅಂತೇನಾದರೂ ಹೋಗಿದ್ದರೆ ಬರುವುದು ದೀಪ ಹತ್ತಿದ ನಂತರವೇ ಎಂದುಕೊಂಡು ತಾನು ಮದ್ಯಾಹ್ನವೇ ಹೊರಟು ಬಂದಿದ್ದ. ಶಿವಪ್ಪನ ಮನೆ ಸಮೀಸಿದಂತೆಲ್ಲಾ ಆತನ ಎದೆ ಹೊಡೆದುಕೊಳ್ಳತೊಡಗಿತ್ತು. ಅನುಶ್ರೀ ಬಾಗಿಲ ಮುಂದೆಯೇ ಕಸೂತಿ ಹೆಣೆಯುತ್ತಾ ಕುಳಿತಿದ್ದಳು. ಅದು ಆಕೆಗೆ ಹೊತ್ತು ಕಳೆಯಲು ಮತ್ತು ಕೈಗೊಂದಿಷ್ಟು ದುಡ್ಡು ಕಾಣಿಸುವ ನೆಚ್ಚಿನ ಕೆಲಸವಾಗಿತ್ತು. ಆಕೆ ಮಲಕಾಜಪ್ಪನಿಗೆ, “ರ‍್ರಿ” ಅಂತ ಸೌಜನ್ಯಕ್ಕೂ ಕರೆಯಲಿಲ್ಲ. ಮಧ್ಯಾಹ್ನ ಎಂದೂ ಬರದ ಈತ ಇವತ್ತು ಬಂದಿದ್ದು ಅದೂ ತಂದೆ ಇಲ್ಲದ ಸಮಯದಲ್ಲಿ ಬಂದದ್ದು ಆಕೆಗೆ ಒಂಥರಾ ಸಂಶಯ ತರಿಸಿತ್ತು. ಅಪ್ಪ ಊರಿಗೆ ಹೋದ ಸಂಗತಿ ಈತನಿಗೇನಾದರೂ ತಿಳಿದಿರಬಹುದೇ ಅಂತ ಯೋಚಿಸಿದಳು. ಆ ಮುದುಕ ಎಂದಿಗಿಂತಲೂ ಇವತ್ತು ತನ್ನನ್ನು ಹುರಿದು ಮುಕ್ಕುವಂತೆ ನೋಡುತ್ತಿರುವುದು ಆಕೆಗೆ ಕಸಿವಿಸಿ ಎನ್ನಿಸಿತು. “ಅಪ್ಪ ಇಲ್ರಿ ಅಜ್ಜಾರ” ಎಂದಳು ಎತ್ತರದ ಧ್ವನಿಯಲ್ಲಿ. “ಎಲ್ಲಿಗೆ ಹೋಗ್ಯಾನಬೆ”. “ಕೊಪ್ಪಳಕ ಹೋಗ್ಯಾನ್ರಿ”. “ಯಾವಾಗ ಬರ್ತಾನಂತ” “ಚಂಜಿಕಿ ಬರತಾನ್ರಿ” “ಹೂಂ ಹೌದನು” ಎನ್ನುತ್ತಾ ಮಲಕಾಜಪ್ಪ ಬಂಕದ ಕಟ್ಟೆಯ ಮೇಲೆ ಕುಳಿತನು. ಆತ ಅನುವಿನ ದೇಹವನ್ನು ನುಂಗುವಂತೆ ರೆಪ್ಪೆ ಬಡಿಯದೆ ನೋಡಿದನು.

ಅನುಶ್ರೀಗೆ ಕಿರಿಕಿರಿಯಾಯಿತು. ತಂದೆ ಮನೆಯಲ್ಲಿಲ್ಲ. ಈ ತಲೆ ನೆರೆತ ಮನುಷ್ಯನಿಗೆ ಏನೆಂದು ಬುದ್ಧಿ ಹೇಳುವುದು ಎಂದು ಯೋಚಿಸಿದಳು. ಎಲ್ಲಾದರೂ ಹೋಗಿ ಕುಳಿತುಕೊಳ್ಳಬೇಕೆಂದರೆ ಗೆಳತಿಯರೆಲ್ಲ ಗಂಡನ ಮನೆ, ಕಾಲೇಜು ಅಂತ ಹೋಗಿ ಬಿಟ್ಟಿದ್ದಾರೆ. ಅದೂ ಅಲ್ಲದೇ ಈತ ತನ್ನ ಮನೆಯ ಬಂಕದಲ್ಲಿಯೇ ಕುಳಿತಿರುವಾಗ ತಾನು ಹೇಗೆ ಹೊರಗೆ ಹೋಗಬೇಕು, ಯಾರಾದರೂ ಮುದುಕಮ್ಮನಂಥವರ ಹತ್ತಿರ ಹೋಗಿ ಕುಳಿತುಕೊಳ್ಳಬೇಕೆಂದರೆ ಇವತ್ತು ಮನೆಯಲ್ಲಿ ಯಾರೂ ಇಲ್ಲ. ಕಡೀಮನಿ ಸುಬ್ಬಮ್ಮ ದಿನಾಲು ಮನೆಯಲ್ಲಿರುತ್ತಿದ್ದಳು. ಬೇಲೇರಿ ಹೊಳೆಯಮ್ಮನೂ ಮಾತಿಗೆ ಅಷ್ಟಿಷ್ಟು ಸಿಗುತ್ತಿದ್ದಳು. ಆದರೆ ಇವತ್ತು ಹೊಳೆಯಮ್ಮ ಅಳಿಯನ ಮನೆಗೆ ಹೋಗಿದ್ದಾಳೆ. ಸುಬ್ಬಮ್ಮ ಸಂಬಂಧಿಕರ ಮದುವೆಗೆ ಹೋಗಿದ್ದಾಳೆ. ಉಳಿದ ಎಲ್ಲರ ಮನೆಯ ಹೆಣ್ಣು ಮಕ್ಕಳೂ ಕೂಲಿಗೆ ಹೋಗಿದ್ದಾರೆ. ಆ ಸಣ್ಣ ಹಳ್ಳಿಗೆ ಮರುಜೀವ ಬರುವುದೆಂದರೆ ಅದು ಸಂಜೆಯ ದೀಪ ಹತ್ತಿದ ನಂತರವೇ. ಸದಾ ಮನೆಯಲ್ಲಿರುವವರು ಭೀಮನಾಯ್ಕರ ಮನೆಯ ಸೊಸೆಯಂದಿರು, ಬ್ರಾಹ್ಮಣ ಖಿಲ್ಲಾದ ಹೆಣ್ಣು ಮಕ್ಕಳು ಮಾತ್ರ. ಆದರೆ ಅವರೆಲ್ಲರೂ ಶ್ರೀಮಂತರಾಗಿದ್ದರಿಂದ ಅವರ ಬಿಡುವಿನ ಸಮಯ ಬೇರೆಯದೇ ರೀತಿಯಲ್ಲಿ ಕಳೆಯುತ್ತಿತ್ತು. ಮನೆಯ ಬಂಕದಲ್ಲಿ ಮದ್ಯಾಹ್ನದ ಹೊತ್ತು ಕುಳಿತ ಹೆಂಗಸರೆಲ್ಲರೂ ತಂತಮ್ಮ ಮನೆಯಲ್ಲಿ ಮಾಡಿದ ಅಡುಗೆ ತಿಂಡಿಯಿಂದ ಹಿಡಿದು, ತಮ್ಮ ಮನೆಯ ಮುಂದೆ ಯಾರು ಹಾಯ್ದು ಹೋದರು ಎಂಥ ಬಟ್ಟೆ ತೊಟ್ಟಿದ್ದರು, ಹೇಗೆ ಕಾಣುತ್ತಿದ್ದರು, ಮೊನ್ನೆ ನಡೆದ ಮಂಗಳವಾರದ ಸಂತೆಯಲ್ಲಿ ಯಾರ ಮನೆಯ ಹುಡುಗಿ ಯಾವ ಹುಡುಗನ ಕಡೆ ನೋಡಿದಳು, ಮಾತಾಡಿದಳು, ಯಾವ ಹುಡುಗ ಯಾವ ಹುಡುಗಿಯ ಮೇಲೆ ಕಣ್ಣು ಹಾಕಿದ್ದಾನೆ, ಅಂತ ಊರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಅಕಸ್ಮಾತ್ ಅನುಶ್ರೀಯಂತಹ ಬಡವರ ಮನೆಯ ಹೆಣ್ಣುಮಕ್ಕಳು ಅವರ ಕೈಗೇನಾದರೂ ಸಿಕ್ಕರೆ ಬಿಡಿಗಾಸು ಸಹಾಯಕ್ಕೂ ಬಾರದ ಒಣ ಅನುಕಂಪ ತೋರಿಸಿ ಪಾಪ ಪಾಪ ಅಂತ ಮಾತಿಗೊಮ್ಮ ಲೊಚಗುಟ್ಟಿ ಪಾಪಪ್ರಜ್ಞೆಗೆ ಮತ್ತಷ್ಟು ದೂಡುತ್ತಿದ್ದರು. ಅನುಶ್ರೀಗೂ ಕೆಲವೊಮ್ಮೆ ಆ ಅನುಭವವಾಗಿದ್ದರಿಂದ ಆಕೆ ಇತ್ತೀಚೆಗೆ ತನ್ನ ಓಣಿ ರೈತ ಹೆಣ್ಣುಮಕ್ಕಳನ್ನು ಬಿಟ್ಟರೆ ಉಳಿದ ಶ್ರೀಮಂತರ ಹೆಂಗಸರನ್ನು ಮಾತನಾಡಿಸುವ ಸಂದರ್ಭಗಳನ್ನು ತಪ್ಪಿಸಿಕೊಳ್ಳುತ್ತಿದ್ದಳು. ಒಂದೊಂದು ದಿನ ಯಾರೂ ಮುದುಕಮ್ಮನವರು ಮಾತಿಗೆ ಸಿಕ್ಕದಿದ್ದರೂ ಹೊಲಿಗೆ ಹೆಣಿಕೆ ಅಂತ ತನ್ನ ಸಮಯ ನೀಗುತ್ತದೆ.

ಆದರೆ ಇವತ್ತು ನೋಡಿದರೆ ಈ ಮನುಷ್ಯ ಬಂದು ಕುಳಿತಿದ್ದಾನೆ. ಸ್ನೇಹಿತನೇ ಮನೆಯಲ್ಲಿಲ್ಲ ಅಂತ ತಿಳಿದರೂ ಎದ್ದು ಹೋಗುತ್ತಿಲ್ಲ. ಒಂಟಿ ಹೆಣ್ಣುಮಗಳು ಇರುವ ಸಮಯದಲ್ಲಿ ಈತನಿಗೇನು ಕೆಲಸ ಅಂತ ಆಕೆ ಕೆಂಡವಾಗಿದ್ದಳು. ಆಡಲೂಬಾರದು, ಅನುಭವಿಸಲೂ ಬಾರದು ಎಂಬಂತೆ ಆಕೆ ಅಸಹಾಯಕಳಾಗಿದ್ದಳು. ಆದರೂ ಧೈರ್ಯ ಮಾಡಿ ಮತ್ತೊಮ್ಮೆ ಹೇಳಿದಳು. “ಅಜ್ಜಾರ ಹೇಳಿದೆನಲ್ರೀ ಅಪ್ಪ ಚಂಜಿಕಿ ಬರ್ತಾನಂತ”. “ಆತ ಚಂಜಿಕಿ ಬರವಲ್ನಾಕ ಬಿಡು. ನಾನು ನಿನ್ನ ಹತ್ರ ಮಾತಾಡೂದೈತಿ, ಅದಕ್ಕಾ ಕುಂತೀನಿ” ಉಗುಳು ನುಂಗುತ್ತಾ ಹೇಳಿದನು. “ಏನು ಮಾತಾಡೂದೈತಿ ಹೇಳ್ರಿ”. ಅರಮುದುಕ ಅತ್ತಿತ್ತ ನೋಡಿ, ಯಾರದೂ ಸುಳಿವು ಇಲ್ಲ ಅಂತ ಖಚಿತಪಡಿಸಿಕೊಂಡನು. ಆಕೆಯನ್ನು ಒಂಥರಾ ನೋಡಿ, “ಸ್ವಲ್ಪ ಒಳಗ ನಡೀ, ಒಳಗ ಕುಂತು ಮಾತಾಡೂನು” ಎಂದನು. ಅನುಶ್ರೀಗೆ ಮೈಯೆಲ್ಲಾ ಉರಿದು ಹೋಯಿತು. ಯಾರೂ ಇಲ್ಲದ ಮನಿಯಾಗ ಹುಡುಗಿ ಜೊತೀಗಿ ಈತನಿಗೇನು ಮಾತು” ಎಂದುಕೊಂಡಳು. ತಾಯಿ ಆಗಾಗ್ಗೆ ತಲೆ ನೇವರಿಸುತ್ತಾ ಹೇಳುತ್ತಿದ್ದ ಮಾತುಗಳು ನೆನಪಾದವು, “ಅನು ನಾನು ಸತ್ತು ಹೋದೆನೆಂದ್ರ ನಿನ್ನ ಯಾರ ನೋಡ್ಕೊಂತಾರವ್ವ, ನೀನು ನನ್ನಕ್ಕಿಂತ ಚೆಂದದಿ ಮಗಳಾ, ನೀನು ಕಂಡಾರ ಜೊತ್ಗೆ ಗೆಳೆತನ ಮಾಡಬ್ಯಾಡ. ಗಂಡಸರ ಕೂಟ ಸಲಿಗಿ ಬೆಳಸ್ಬಾ÷್ಯಡ. ಹೆಣ್ಮಕ್ಳಾದ್ರೂ ಅಷ್ಟ. ಯಾರ ಮನಿಗೂ ಹೋಗಿ ಕುಂತು ಜಾಸ್ತಿ ಹೊತ್ತು ಕಳಿಬ್ಯಾಡ. ನಿನಗ ಇದನ್ನೆಲ್ಲಾ ಯಾಕ ಹೇಳ್ತೀನಿ ಅಂದ್ರ ನಾನೂ ಒಂದು ಕಾಲದಾಗ ಎಲ್ಲರ‍್ನೂ ನಂಬಿದ್ದೆ. ಭಾಳ ಮಂದಿ ಮೋಸ ಮಾಡಾಕ ನೋಡೀದ್ರ. ಒಬ್ಬಾಕಿ ಕಸ ಮುಸುರಿ ಮಾಡಿಸಿಕೊಂಡ್ರ, ಇನ್ನೊಬ್ಬಾಕಿ ಇನ್ನೊಂಥರಾ ಬಳಸಿಕೊಂತಾಳ. ನಾನು ನಾಕೆಂಟು ವರ್ಷದಾಗ ತಾಯೀನ ಕಳ್ಕೊಂಡೆ. ತಂದೆ ಕುಡಿತಕ್ಕ ಬಿದ್ದ. ಪುಣ್ಯಕ್ಕ ನನಗೊಬ್ಬ ಅಣ್ಣ ಅದಾನಲ್ಲ. ದೇವರು ಆತಗ ಒಳ್ಳೇ ಬುದ್ಧಿ ಕೊಟ್ಟಾನ. ಆತ ನಿಮ್ಮಪ್ಪನಂತ ಒಳ್ಳೇ ಮನುಷ್ಯನ ಹುಡುಕಿ ನನ್ನ ಧಾರಿ ಎರದ…” ಅಂತ ಅವ್ವ ಹೇಳಿದ್ದು ತನ್ನ ಅನುಭವದಿಂದಲೇ ಇರಬೇಕು ಅನ್ನಿಸಿತು. ತಾಯಿ ತನಗೆ ಇಷ್ಟಾದರೂ ಬುದ್ಧಿ ಮಾತು ಹೇಳಿ ಹೋಗದಿದ್ದರೆ ಇವತ್ತು ತನಗೆ ಇದನ್ನೆಲ್ಲಾ ಯಾರೂ ಹೇಳುತ್ತಿರಲಿಲ್ಲ. ಅವ್ವ ಸಹ ಇಂತಹ ಜನರ ಮೋಸದಿಂದ ಪಾರಾಗಿರಬಹುದು ಅಥವಾ ಮೋಸಕ್ಕೆ ಇಡಾಗಿರಲೂಬಹುದು ಎಂದುಕೊಂಡಳು.

ಮರುಕ್ಷಣ, “ಅವ್ವ ಮೋಸದ ಬಲಿ ರ‍್ದು ಹಾಕಿ ಪಾರಾಗಿರಬೇಕು. ಆಕಿ ಧೈರ್ಯದಾಕಿ ಅಂತ ಆಕೀ ಮಾತಿನಿಂದಾನ ತಿಳೀತಿತ್ತು. ಅವ್ವನ ರಕ್ತ ನನ್ನ ದೇಹದಾಗೈತಿ. ಅದಕ್ಕಾ ದೇವುö್ರ ನನಗೆ ಧೈರ್ಯ ನೀಡ್ಯಾನ” ಎಂದುಕೊಂಡಳು. “ಅಹ್” ಅಂತ ಮಲಕಾಜಪ್ಪ ಕೆಮ್ಮಿದಂತೆ ಮಾಡಿದನು. ಅನುಶ್ರೀ ನೆನಪಿನ ತಂತು ತುಂಡಾಗಿ ಆಕೆ ವಾಸ್ತವಕ್ಕೆ ಬಂದಳು. “ಹೇಳಿದೆನಲ್ರಿ ಅಪ್ಪ ಇಲ್ಲ. ನನ್ನ ಕೂಟೇನು ನಿಮ್ಮ ಮಾತು? ಇಲ್ಲೇ ನಿಂತು ಹೇಳಿ ಹೋಗ್ರಿ” ಎಂದಳು ನಿಷ್ಠುರವಾಗಿ. ಇವಳನ್ನು ಒಲಿಸಿಕೊಳ್ಳುವುದು ಸ್ವಲ್ಪ ಕಷ್ಟ ಎಂದು ಆತನಿಗೆ ಅನ್ನಿಸಿತು. “ಅನುಶ್ರೀ ನಿನಗೇನು ಬೇಕು ಹೇಳು ತಂದು ಕೊಡ್ತೀನಿ” ಆತನ ಧ್ವನಿಯಲ್ಲಿ ಓಲೈಕೆ ಇತ್ತು. ಆಕೆ ಎಣಿಸಿದಂತೆಯೇ ಈ ಆಸಾಮಿ ಹಲ್ಕಟ್ ಸ್ವಭಾವದವನೇ ಅಂತ ಖಾತರಿಯಾಗಿ ಹೋಯಿತು. ಸಿಟ್ಟಿನಿಂದ ಆಕೆಯ ಹುಬ್ಬು ಗಂಟಾದವು. “ನನಗೇನು ತಂದು ಕೊಡ್ತೀಯಪ್ಪ ಮುದಿಯಪ್ಪ, ತಂದು ಕೊಡಾಕ ನನಗೇನು ಸಂಬಂಧ ನೀನು” ಅಂತ ಕಿಡಿ ಕಾರಿದಳು. “ಅಲ್ಲಾ ಮತ್ತ ನಿನಗ ಏನೂ ಆಸೆ ಆಗಿಲ್ಲನೂ” ಎಂದು ಮಲಕಾಜಪ್ಪ ಆಕೆಯ ದೇಹದ ಉಬ್ಬು ತಗ್ಗುಗಳನ್ನು ದೋಚಿಕೊಳ್ಳುವಂತೆ ನೋಡಿ ಉಗುಳು ನುಂಗಿದನು. ಈಗ ಅನುಶ್ರೀಗೆ ರೇಗಿ ಹೋಯಿತು. ಹೆಣಿಕೆ ದಾರ ಸೂಜಿಗಳನ್ನು ಕೆಳಗೆಸೆದು, ಚಟಕ್ಕನೆ ಮೇಲೆದ್ದಳು. ಅಲ್ಲೇ ಮುಂಬಾಗಲ ಕದದ ಹಿಂದಿದ್ದ ಚರ್ಮದ ಕೆರವನ್ನೆತ್ತಿಕೊಂಡೆ ಮೇಲೆದ್ದಳು. ಹೊಸ್ತಿಲು ದಾಟಿ ಹೊರಗೆ ಹೆಜ್ಜೆ ಇರಿಸಿದ ಅನುಶ್ರೀ ಉಗ್ರ ಕಾಳಿಯಂತೆ ಕಂಡಳು. ಮಲಕಾಜಪ್ಪ ದಂಗುಬಡಿದವನಾಗಿ, ಪುಸ್ತಕ ತೆಗೆದುಕೊಂಡು ಓಡಲು ಆತುರಪಟ್ಟ. ಕೈ ನಡುಗಿ ಪುಸ್ತಕ ಕೆಳಗೆ ಜಾರಿತು. ಏನಾಗುತ್ತಿದೆ ಅನ್ನುವಷ್ಟರಲ್ಲಿಯೇ ಅನುಶ್ರೀ ಆತನ ಮಾರಿ ಮುಸುಡಿ ಎನ್ನದೇ ಬಾರಿಸಿ ಬಿಟ್ಟಳು. “ಲೋ ಬಾಡ್ಕೊ, ಇದಾ, ಇದಾ ಕಡೀ ಸಲ ಆಗ್ಲಿ ನಿನ್ನ ಭಂಡ ಮಾತು. ಇನ್ನೊಂದ್ಸಲ ನೀನೇನಾರ ದುಸರಾ ಮಾತಾಡ್ತೀ ಅಂದ್ರ ನಿನ್ನ ಪ್ರಾಣ ತಗುದು ಜೈಲಿಗಿ ಹೊಕ್ಕೂನಿ…” ಅಂತ ಚೀರಿದಳು. ಆಕೆಯ ಧ್ವನಿ, ಕೂಗಾಟ ಕೇಳಿ ಇದ್ದಬಿದ್ದ ಜನರೆಲ್ಲಾ ಹೊರಗೆ ಬಂದು ಈಕೆಯ ಮನೆಯ ಮುಂದೆ ಜಮಾಯಿಸಿದರು. ಮಲಕಾಜಪ್ಪನ ಜಂಗಾಬಲ ಉಡುಗಿ ಹೋಗಿತ್ತು. “ಶಾಂತವ್ವ ಕೂಡ ಮಗಳಂತೆ ಸುಂದ್ರಿ. ಆದ್ರ ತಾನು ಆಕಿಗಿ ಹಿಂಗ ಮಾತಾಡಿ, ಆಕಿಯಿಂದ ಬೈಗಳ ಏಟೂ ಏನೂ ತಿಂದಿರಲಿಲ್ಲ. ಎಂದಾದ್ರೂ ಒಂದ್ಸಲ ಆಕೀನ ಮನಸಾರೆ ಕೂಡ್ಬೇಕು ಅಂತ ಆಸೆ ಮಾತ್ರ ಇತ್ತು. ಆಕೆ ಸತ್ತು ಹೋದ್ಲು. ಆಕೀಗಿಂತ ಚೆಲುವಿ ಈ ಹುಡುಗಿ ಅಂದ್ಕೊಂಡು ತಾನು ಈ ರೀತಿ ಯೋಚ್ನೆ ಮಾಡಿದ್ದಾ ತಪುö್ಪ, ಈಕಿ ಬಲು ಧೈರ್ಯದಾಕಿ…” ಹೀಗೆ ಯೋಚನೆಗಳಲ್ಲಿ ಆತ ಚಡಪಡಿಸಿದ.

(ಮುಂದುವರೆಯುವುದು…)

-ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x