ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿಯನ್ನು ಆಧರಿಸಿ ರಚನೆಯಾದ ‘ಫಣಿಯಮ್ಮ’ ಸಿನಿಮಾ ೧೯೮೩ರಲ್ಲಿ ಬಿಡುಗಡೆಯಾಗಿದೆ. ಫಣಿಯಮ್ಮ ಸಿನಿಮಾದ ಯಶಸ್ಸಿಗೆ ಮುಖ್ಯವಾಗಿ ಕಾದಂಬರಿಯ ಕಥೆ ಹಾಗೂ ವಸ್ತುವೇ ಕಾರಣವಾದರೂ ಪ್ರೇಮಾ ಕಾರಂತರ ಚಿತ್ರಕತೆ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಕಾದಂಬರಿಯ ಅರ್ಥ ವಿಸ್ತಾರತೆಯನ್ನು ಸಾಧಿಸಿತು. ಸಿನಿಮಾ ಅನಕ್ಷರಸ್ಥರನ್ನೂ ತಲುಪಿ ಸಂಚಲನವನ್ನುಂಟು ಮಾಡಿತು. ಇಲ್ಲಿ ನಿರ್ದೇಶಕಿಯ ಮುಖ್ಯ ಗಮನವಿರುವುದು ಫಣಿಯಮ್ಮನ ಜೀವನದ ಕಥೆಯ ಜೊತೆಗೆ ಬ್ರಾಹ್ಮಣ ಸಮುದಾಯವು ಮಹಿಳೆಯರನ್ನು, ಅದರಲ್ಲೂ ವಿಧವೆಯರನ್ನು ವ್ಯವಸ್ಥಿತವಾಗಿ ಶತಮಾನಗಳಿಂದ ಶೋಷಿಸುತ್ತ ಬಂದಿದ್ದನ್ನು ಹೇಳುವುದು ಆ ಮೂಲಕ ಶೋಷಣೆಗೆ ಆ ಸಮುದಾಯದ ಪುರುಷ ವರ್ಗ ಬಳಸಿಕೊಂಡ ಪರಿಕರಗಳನ್ನು ಪರಿಚಯಿಸಿ ಅವರ ಹುನ್ನಾರವನ್ನು ಬಯಲಿಗೆಳೆಯುವುದು.
ಕಾದಂಬರಿಯಲ್ಲಿ ಬರುವ ಮಲೆನಾಡಿನ ಹಳ್ಳಿಯೊಂದರಲ್ಲಿ ಬಾಳಿಹೋದ ಅಂಚೆಮನೆತನ ಎನ್ನುವ ಬ್ರಾಹ್ಮಣ ಮನೆತನಕ್ಕೆ ಸೇರಿದ ಮನೆಯ ಪರಿಚಯದೊಂದಿಗೆ ಚಿತ್ರಕಥೆ ಆರಂಭವಾಗುತ್ತದೆ. ಚಿತ್ರದ ಆರಂಭದಲ್ಲಿ ಈ ಅಂಚೆಮನೆಯನ್ನು ಪರಿಚಯಾತ್ಮಕವಾಗಿ ಕಟ್ಟಿಕೊಟ್ಟ ನಂತರದಲ್ಲಿ ನಿರ್ದೇಶಕರು ಫಣಿಯಮ್ಮನ ಕಥೆಯನ್ನು ಆರಂಭಿಸುತ್ತಾರೆ. ಇಲ್ಲಿ ಮೊದಲಿಗೆ ಫಣಿಯಮ್ಮನ ಕಥೆ ತೆರೆದುಕೊಳ್ಳುವುದೇ ಅವಳ ಮಾನವೀಯ ಕೆಲಸದ ಮೂಲಕ. ಮಧ್ಯರಾತ್ರಿ ಭೈರನ ಹೆಂಡತಿ ಸಿಂಕಿಗೆ ಹೆರಿಗೆ ನೋವು ಶುರುವಾದಾಗ ಫಣಿಯಮ್ಮನ ಸಹಾಯ ಕೋರಿದಾಗ ಆಕೆ ಹೋಗುತ್ತಾಳೆ. ಮನೆಯವರು ವಿರೋಧಿಸಿದರೂ ಫಣಿಯಮ್ಮ ಏನಾಗಿದೆ ಎಂದು ನೋಡಿಕೊಂಡು ಬರುತ್ತೇನೆಂದು ಹೇಳಿ ಹೋಗುತ್ತಾಳೆ. ಹೆರಿಗೆ ಮಾಡಿಸಿಯೂ ತಾನು ಮಾಡಿಸಿದ್ದೆಂದು ಯಾರಿಗೂ ಹೇಳದಂತೆ ತಿಳಿಸಿ ಬರುತ್ತಾಳೆ. ಅಲ್ಲಿಂದ ಮರಳುವ ಫಣಿಯಮ್ಮ ನಂತರ ಬರುವುದು ತಾನು ಹುಟ್ಟಿ ಬೆಳೆದ ಅಂಚೆ ಮನೆಗೆ. ಸುಬ್ಬಾ ಜೋಯಿಸ ಸ್ನಾನ ಮಾಡಿ ಜನಿವಾರ ಬದಲಿಸಿದ್ದನ್ನು ಕಂಡ ಫಣಿಯಮ್ಮ ಯಾವುದೋ ಮೈಲಿಗೆ, ಸೂತಕವಿರಬೇಕೆಂದು ಅವನ ಹೆಂಡತಿಯಲ್ಲಿ ವಿಚಾರಿಸಿದಾಗ ಆತನ ಕಾಮುಕತೆ ತಿಳಿಯುತ್ತದೆ. ಈ ಘಟನೆ ಫಣಿಯಮ್ಮನಿಗೆ ತನ್ನ ಬದುಕಿನಲ್ಲಿ ಹಿಂದೆ ನಡೆದ ಘಟನೆಗಳು ಹಾಗೂ ಆ ಮನೆಯಲ್ಲಿ ನಡೆದ ಘಟನೆಗಳು, ಆಕೆ ನೋಡಿದ ಘಟನೆಗಳು ಎಲ್ಲವನ್ನೂ ನೆನಪಿಗೆ ತರುತ್ತದೆ. ಅವಳು ಅಂಚೆಯ ಮನೆಯ ಒಳಗೆ ನಡೆಯುತ್ತಿದ್ದಂತೆ ಅವಳಿಗೆ ಒಂದೊಂದೆ ಘಟನೆಗಳು ನೆನಪಿಗೆ ಬರುತ್ತವೆ. ಅವುಗಳೆಂದರೆ ಹಿಂದಿನ ಕಾಲದ ಬ್ರಾಹ್ಮಣ ಸಮುದಾಯದಲ್ಲಿನ ವಿಪರೀತ ಮಡಿವಂತಿಕೆ ಹಾಗೂ ಸಂಪ್ರದಾಯಗಳು, ಅಂಚೆಮನೆತನದವರ ಅಂಚೆಕೆಲಸ, ಫಣಿಯಮ್ಮನ ಬಾಲ್ಯದ ದಿನಗಳು, ಹತ್ತು ವರ್ಷಕ್ಕೆ ಅವಳ ಬಾಲ್ಯ ವಿವಾಹ, ಜಾತ್ರೆಯಲ್ಲಿ ಅವಳ ಜಡೆಬಂಗಾರ ಕಳೆದುಹೋಗುವ ಅಪಶಕುನ, ಅವಳ ವೈಧವ್ಯ, ವೈಧವ್ಯದ ನಂತರದ ಅವಳ ಬದುಕು, ಅವಳು ಕಂಡ ವಿವಾಹೇತರ ಸಂಬಂಧಗಳು ಹೀಗೆ ಅವಳ ಬದುಕಿನ ಕಥೆ ಸಿನಿಮಾದಲ್ಲಿ ಅವಳ ನೆನಪಿನ ಮೂಲಕವೇ ದೃಶ್ಯರೂಪ ಪಡೆಯುತ್ತದೆ.
ಈ ಎಲ್ಲದರ ನಡುವೆ ಋಷಿಯಂತೆ ಬದುಕಿದ ಫಣಿಯಮ್ಮನ ಕಥೆ ಮತ್ತೆ ಮುಂದುವರೆಯುತ್ತದೆ. ಇದರ ಮುಂದಿನ ಕಥೆಯಲ್ಲಿ ಫಣಿಯಮ್ಮನ ಮಾನವೀಯತೆ, ತ್ಯಾಗ, ವ್ಯಕ್ತಿತ್ವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕತೆಯಿದೆ. ಫಣಿಯಮ್ಮ ಋಷಿಯಂತೆ ಬದುಕಿದರೂ ಇತರರ ವೇದನೆ, ಸಂವೇದನೆಗಳನ್ನು ಅರ್ಥಮಾಡಿಕೊಳ್ಳಬಲ್ಲವರು ಎನ್ನುವುದನ್ನು ನಿರೂಪಿಸುವ ನಿಟ್ಟಿನಲ್ಲಿ ದಾಕ್ಷಾಯಣಿಯ ಕಥೆಯಿದೆ. ದಾಕ್ಷಾಯಣಿಯ ಗಂಡ ಸತ್ತ ಮೇಲೆ ತಲೆ ಬೋಳಿಸಿಕೊಳ್ಳಲು, ಮಡಿ ಹಿಡಿದು ವ್ರತಗಳನ್ನು ಪಾಲಿಸಲು ಆಕೆ ನಿರಾಕರಿಸುತ್ತಾಳೆ. ದಾಕ್ಷಾಯಣಿಯ ಮನಸ್ಥಿತಿಯನ್ನು ಅರಿತ ಫಣಿಯಮ್ಮ ಅವಳ ಪರವಾಗಿ ಮಾತನಾಡುತ್ತಾರೆ. ಇದು ಅಲ್ಲಿ ಸಂಪ್ರದಾಯವಾದಿ ಪುರುಷರ ಕೋಪಕ್ಕೆ ಗುರಿಯಾಗುತ್ತದೆ. ಈ ಘಟನೆಯಿಂದ ಮನನೊಂದ ಫಣಿಯಮ್ಮ ತನಗೇನಾಗಬೇಕೆಂದು ಮರಳುತ್ತಾರೆ. ಆಧುನಿಕ ಮನಸ್ಥಿತಿಯ ದಾಕ್ಷಾಯಣಿ ಕೂದಲನ್ನೂ ಕತ್ತರಿಸಿಕೊಳ್ಳದೇ, ಮಡಿಯನ್ನೂ ಹಿಡಿಯದೇ ಮೈದುನನಿಂದ ಮಗುವನ್ನು ಪಡೆದು ಅತ್ತೆಯಿಂದಲೇ ಬಾಣಂತನವನ್ನು ಮಾಡಿಸಿಕೊಳ್ಳುತ್ತಾಳೆ. ವಿಚಾರ ತಿಳಿದ ಬ್ರಾಹ್ಮಣರು ಅವಳಿಗೆ ಬಹಿಷ್ಕಾರ ಹಾಕಲು ನಿರ್ಧರಿಸುತ್ತಾರೆ. ಯಾವುದಕ್ಕೂ ಜಗ್ಗದ ದಾಕ್ಷಾಯಣಿ ಮೈದುನನ್ನೇ ಮದುವೆಯಾಗುವುದಾಗಿ ಸವಾಲನ್ನು ಹಾಕುತ್ತಾಳೆ. ಅವಳ ಪ್ರತಿರೋಧಕ್ಕೆ ವ್ಯವಸ್ಥೆ ಸುಮ್ಮನಾಗುತ್ತದೆ. ಬಹಳ ದಿನದ ನಂತರ ವಿಚಾರ ತಿಳಿದ ಫಣಿಯಮ್ಮ ಅವಳು ಮಾಡಿರುವುದು ಸರಿಯಾಗಿದೆ ಎನ್ನುತ್ತಾರೆ. ಇತ್ತ ಫಣಿಯಮ್ಮನ ಸೇವಾ ಕಾರ್ಯಗಳು ಮುಂದುವರೆದಿರುತ್ತವೆ. ಸಾಯುವ ಕೊನೆಯವರೆಗೂ ಪರೋಪಕಾರಿಯಾಗಿ ಬಿಡುವಿಲ್ಲದೇ ದುಡಿದ ಫಣಿಯಮ್ಮ ಯಾರಿಗೂ ತೊಂದರೆಯನ್ನು ನೀಡದೇ ದೇವರ ಕಟ್ಟೆಗೆ ಒರಗಿ ಕೊನೆ ಉಸಿರನ್ನು ಎಳೆಯುವ ದೃಶ್ಯದೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ.
ಫಣಿಯಮ್ಮ ಸಿನಿಮಾದ ಚಿತ್ರಕಥೆ ಫಣಿಯಮ್ಮ ಕಾದಂಬರಿಯ ಕಥನ ಕ್ರಮಕ್ಕಿಂತ ಭಿನ್ನವಾಗಿದೆ. ಸಿನಿಮಾ ಕಾದಂಬರಿಯ ಕಥೆಗೆ, ಸಂಭಾಷಣೆಗೆ ಸಾಕಷ್ಟು ಋಣಿಯಾದರೂ ಸಿನಿಮಾದ ದೃಶ್ಯ ಸಂಯೋಜನೆ ಕಾದಂಬರಿಯ ನಿರೂಪಣಾ ಕ್ರಮಕ್ಕಿಂತ ಬೇರೆಯಾಗಿದೆ. ಇದರ ಜೊತೆಗೆ ಕಾದಂಬರಿಯನ್ನು ಓದಿದಾಗ ಮತ್ತು ಸಿನಿಮಾ ನೋಡಿದಾಗ ಎರಡು ಭಿನ್ನ ಅನುಭವಗಳು ನಮಗೆ ಆಗುತ್ತವೆ. ಫಣಿಯಮ್ಮ ಕಾದಂಬರಿಯಲ್ಲಿ ಎಂ.ಕೆ. ಇಂದಿರಾ ಅವರ ಒಂದು ಅಲೋಚನಾ ಕ್ರಮ ಹಾಗೂ ಅವರದ್ದೇ ಭಾವಲಯವಿದ್ದರೆ ಸಿನಿಮಾದಲ್ಲಿ ನಿರ್ದೇಶಕಿ ಹಾಗೂ ಇತರರ ಸಹಭಾಗಿತ್ವದಲ್ಲಿ ಒಂದು ಕಲಾಕೃತಿ ನಿರ್ಮಾಣವಾಗಿರುವುದೇ ಇದಕ್ಕೆ ಕಾರಣವಾಗಿದೆ.
ಕಾದಂಬರಿಯಲ್ಲಿ ಫಣಿಯಮ್ಮ ಎಂಬ ಬಾಲ ವಿಧವೆಯ ಬದುಕು ಹಾಗೂ ಅವಳ ಕಾಲದ ಸಂಗತಿಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ ಒಂದು ಕಾಲಘಟ್ಟದ ಸಮಾಜ ಹೆಣ್ಣನ್ನು ನಡೆಸಿಕೊಳ್ಳುತ್ತಿದ್ದ ಬಗೆಯೂ ಜೊತೆಜೊತೆಗೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಕಾದಂಬರಿಯಲ್ಲಿ ಈ ಕಥೆಯನ್ನು ನಿರೂಪಿಸುತ್ತಾ ಸಾಗಿದಂತೆ ಲೇಖಕಿಯ ವಿಶಿಷ್ಟ ಭಾವಲಯವೊಂದು ಅಲ್ಲಿ ಸೃಷ್ಟಿಯಾಗಿದೆ. ಈ ನಿರೂಪಣಾ ಕ್ರಮದಿಂದ ಅಂತಹ ಕಾಲದಲ್ಲಿ ಬದುಕಿದ್ದ ‘ಫಣಿಯಮ್ಮ’ ಎಂಬ ಪಾತ್ರದ ಕುರಿತು ಅನುಕಂಪ ಮೂಡುತ್ತದೆ. ಕಾದಂಬರಿ ಸಿನಿಮಾ ಆಗುವಾಗ ಸಮೂಹ ಮಾಧ್ಯಮವಾದ ಸಿನಿಮಾದಲ್ಲಿ ಸಹಜವಾಗಿಯೇ ಲೇಖಕಿಯ ಭಾವಲಯ ಮಾಯವಾಗುತ್ತದೆ. ಇಲ್ಲಿ ಫಣಿಯಮ್ಮ ಕಾದಂಬರಿಯಲ್ಲಿನ ಲೇಖಕಿಯ ಭಾವಲಯ ಮರೆಯಾಗಿ ನಿರ್ದೇಶಕಿಯ ದೃಷ್ಟಿಕೋನದಲ್ಲಿ ನಿರ್ದೇಶನಗೊಳ್ಳುವಾಗ ಅಲ್ಲಿ ಬೇರೆಯದೇ ಭಾವಲಯ ಸೃಷ್ಟಿಯಾಗಿದೆ ಎನ್ನಬಹುದು. ಕಾದಂಬರಿಯ ಮೂಲ ಸ್ವರೂಪವನ್ನು, ಸ್ವಂತಿಕೆಯ ಗುಣಗಳನ್ನು ಸಿನಿಮಾದಲ್ಲಿ ಉಳಿಸಿಕೊಳ್ಳಲು ಸಹಜವಾಗಿಯೇ ಸಾಧ್ಯವಾಗುವುದಿಲ್ಲ.
ಸಿನಿಮಾದಲ್ಲಿ ಭಾವಲಯದ ಕೊರತೆಯ ಹೊರತಾಗಿ ಫಣಿಯಮ್ಮ ಕಾದಂಬರಿಯಲ್ಲಿನ ಕೆಲವು ಮಹತ್ವದ ವಿಚಾರಗಳಿಗೆ ಸಿನಿಮಾ ಮಹತ್ವ ನೀಡಿರುವುದನ್ನು ಈ ಕೆಳಗಿನಂತೆ ಗಮನಿಸಬಹುದು. ಕಾದಂಬರಿಯಿಂದ ತೆಗೆದುಕೊಂಡಿರವ ಕಥೆ, ಸನ್ನಿವೇಶ-ಸಂದರ್ಭ ಹಾಗೂ ಸಂಭಾಷಣೆಗಳೆಂದರೆ ಅಂಚೆಮನೆತನದ ವಿವರಗಳು, ಫಣಿಯಮ್ಮನ ಬಾಲ್ಯವಿವಾಹ ಹಾಗೂ ವೈಧವ್ಯದ ಬದುಕಿನ ಚಿತ್ರಣಗಳು, ದಾಕ್ಷಾಯಣಿಯ ಕಥೆ ಹಾಗೂ ಭೈರನ ಹೆಂಡತಿ ಸಿಂಕಿಯ ಹೆರಿಗೆ, ಸುಬ್ಬಿ ಹಾಗೂ ಪುಟ್ಟಾ ಜೋಯಿಸನ ಕಥೆ, ಕಾಮುಕ ಸುಬ್ಬರಾಯನ ಕತೆಗಳನ್ನು ಮುಖ್ಯವಾಗಿ ಗಮನಿಸಬಹುದು.
ಇದರ ಜೊತೆಗೆ ಕಾದಂಬರಿಯ ಹಲವು ಕತೆಗಳನ್ನು ಕೈಬಿಡಲಾಗಿದೆ. ಅವುಗಳೆಂದರೆ ಪುಟ್ಟಿಯ ಹೆರಿಗೆ, ಪ್ರೇಮಾಬಾಯಿಯ ಕತೆ, ಕಾದಂಬರಿಯಲ್ಲಿ ಬರುವ ಫಣಿಯಮ್ಮನ ಮನಸ್ಸಿನ ಕೆಲವು ಆಲೋಚನೆಗಳು, ಲೇಖಕಿಯ ಅಭಿಪ್ರಾಯಗಳು, ಫಣಿಯಮ್ಮನ ಅಂತ್ಯ ಸಂಸ್ಕಾರದ ವಿವರಣೆಗಳು ಇತ್ಯಾದಿ ಕೆಲವು ಅಂಶಗಳನ್ನು ಗಮನಿಸಬಹುದು. ಫಣಿಯಮ್ಮನ ಸೇವೆಯ ವಿವರಗಳು ಸಿನಿಮಾದಲ್ಲಿ ಸಂಕ್ಷಿಪ್ತಗೊಂಡಿವೆ. ಕಾದಂಬರಿಯಲ್ಲಿ ಫಣಿಯಮ್ಮನ ಬದುಕಿನ ಸುತ್ತ ನಡೆದ ಅನೇಕ ಘಟನೆಗಳಿವೆ. ಆದರೆ ಸಿನಿಮಾದಲ್ಲಿ ಕಾದಂಬರಿಯಲ್ಲಿನ ಅಂತಹ ಅನೇಕ ಘಟನೆ, ಸನ್ನಿವೇಶಗಳನ್ನು ಕೈಬಿಟ್ಟು ಬೇಕಾದ ಕೆಲವನ್ನು ಸಾಂಕೇತಿಕವಾಗಿ ಆರಿಸಿಕೊಂಡು, ಅಲ್ಲಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಚಿತ್ರಕತೆಯನ್ನು ರಚಿಸಿಕೊಂಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಗಮನಿಸುವುದಾದರೆ- ಜಾತಕ, ಬಾಲ್ಯ ವಿವಾಹ, ವೈಧವ್ಯ, ಮಡಿ ಮೈಲಿಗೆ, ಲೈಂಗಿಕ ಶೋಷಣೆ, ಈ ವಿಷಯಗಳಿಗೆ ಹೆಚ್ಚು ಒತ್ತುಕೊಟ್ಟು ಚಿತ್ರಕಥೆ ರಚಿಸಿಕೊಂಡು ಸಿನಿಮಾವನ್ನು ನಿರ್ದೇಶಿಸಲಾಗಿದೆ.
ಜಾತಕ-ಪಂಚಾಂಗಗಳು, ಮೌಖಿಕ ವಾಚಿಕೆಗಳು ಹೆಣ್ಣನ್ನು ನಿಯಂತ್ರಿಸಲು ವೈದಿಕ ಪುರುಷರಿಗೆ ಅಸ್ತ್ರಗಳಾಗಿದ್ದವು. ಇವುಗಳನ್ನು ಇಟ್ಟುಕೊಂಡು ಹೆಣ್ಣಿನ ಜೈವಿಕತೆಯನ್ನು ಹಾಗೂ ಅವರ ಜೀವನವನ್ನು ನಿಯಂತ್ರಿಸುತ್ತಿದ್ದರು ಎನ್ನುವುದನ್ನು ಸಿನಿಮಾದ ಆರಂಭಿಕ ನಿರೂಪಣೆಯಲ್ಲಿ ಮತ್ತು ವಿವಿಧ ಪಾತ್ರ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಫಣಿಯಮ್ಮನ ಗಂಡ ಸತ್ತ ನಂತರ ಬೀಗರು “ಸುಳ್ಳು ಜಾತಕ ತೋರಿಸಿ ಮೋಸ ಮಾಡಿದಿರಿ”೧ ಎಂದು ಜಗಳ ಮಾಡುತ್ತಾರೆ. ಸಿನಿಮಾದಲ್ಲಿ ಈ ದೃಶ್ಯದ ನಂತರ ಕಾದಂಬರಿಯಲ್ಲಿ ಬರುವ ಫಣಿಯಮ್ಮನ ಹುಟ್ಟಿನ ಸಂದರ್ಭದ ವಿವರಗಳನ್ನು ಬಳಸಿಕೊಂಡು ಅವರು ಜಾತಕ ಬರೆಯುವ ಅವೈಜ್ಞಾನಿಕ ಕ್ರಮ ಹಾಗೂ ಆ ಜಾತಕಗಳೇ ಮುಂದೆ ವ್ಯಕ್ತಿಗಳ ಬದುಕನ್ನು ನಿಯಂತ್ರಿಸುವ ಮೂಢತೆಯನ್ನು, ಅವುಗಳ ನಡುವಿನ ವೈರುಧ್ಯಗಳನ್ನು ಈ ದೃಶ್ಯ ತೆರೆದಿಡುತ್ತದೆ. ಫಣಿಯಮ್ಮ ರಾತ್ರಿ ಹುಟ್ಟುವ ಸಮಯದಲ್ಲಿ ಜಾತಕ ಬರೆಯಲು ಕಾದು ಕುಳಿತ ಹಿರಿಯರು ನಿದ್ದೆಯ ಮಂಪರಿನಿಂದ ಎಚ್ಚೆತ್ತು ಒಂದು ಅಂದಾಜಿನ ಸಮಯದ ಮೇಲೆ ಜಾತಕ ಬರೆಯುತ್ತಾರೆ. ಅದು ಅವಳ ಇಡೀ ಬದುಕನ್ನೇ ನಿರ್ಧರಿಸುವ ಕ್ರಮ. ಇದು ಸಿನಿಮಾದಲ್ಲಿ ವಿಡಂಬನೆಗೆ ಒಳಗಾಗಿದೆ. ಈ ರೀತಿಯ ಜಾತಕ ಪಂಚಾಂಗಗಳು ಹೆಣ್ಣಿನ ಬದುಕಿನ ಅಸ್ತಿತ್ವವನ್ನು ನಿರಾಕರಿಸಿರುವುದನ್ನು, ಅವಳನ್ನು ಆ ಮೂಲಕ ಶೋಷಿಸುವುದನ್ನು ಸಿನಿಮಾದಲ್ಲಿ ವಿರೋಧಿಸಲಾಗಿದೆ. ಮುಂದೆ ಫಣಿಯಮ್ಮ ವಿಧವೆಯಾದಾಗ ಈ ಜಾತಕಗಳ ಪೊಳ್ಳುತನ ಅರಿವಾಗುತ್ತದೆ. “ಏನು ಜಾತಕವೋ ಏನೋ ಹುಡುಗ-ಹುಡುಗಿ ಒಪ್ಪಿದರಾಯ್ತು”೨ ಎನ್ನುವ ಕಾದಂಬರಿಯ ಮಾತನ್ನು ಸಿನಿಮಾ ಬಳಸಿಕೊಂಡು ಜೀವ ವಿರೋಧಿ ಮೌಲ್ಯಗಳನ್ನು ನಿರಾಕರಿಸುವ ಮೂಲಕ ಅಜ್ಞಾನ ಮೂಢ ಆಚರಣೆಗಳನ್ನು ಕೈಬಿಡಬೇಕೆಂಬ ಆಶಯವನ್ನು ಸಿನಿಮಾದಲ್ಲಿ ಚಿತ್ರಿಸಲಾಗಿದೆ.
ಕಾದಂಬರಿಯಲ್ಲಿ ಫಣಿಯಮ್ಮ ಹುಟ್ಟುವಾಗ ಜಾತಕ ಬರೆದ ಕತೆ ಅವಳ ವೈಧವ್ಯಕ್ಕೆ ಮುಂಚೆಯೇ ಬರುತ್ತದೆ ಆದರೆ ಸಿನಿಮಾದಲ್ಲಿ ಫಣಿಯಮ್ಮ ವಿಧವೆಯಾದ ನಂತರದಲ್ಲಿ ಫಣಿಯಮ್ಮನ ಹುಟ್ಟಿನ ಸಂದರ್ಭದಲ್ಲಿ ಜಾತಕ ಬರೆದ ಕ್ರಮದ ದೃಶ್ಯವನ್ನು ತೋರಿಸಿ, ಫಣಿಯಮ್ಮನ ಬದುಕು ಹಾಗೂ ಜಾತಕದಲ್ಲಿನ ಅಮೃತಗಳಿಗೆಯ ಜನನ ಹಾಗೂ ಅಲ್ಲಿ ಬರೆದಿರುವ ಅವಳ ಬದುಕಿನ ಭಾಗ್ಯ ಇತ್ಯಾದಿ ವಿಷಯಗಳ ನಡುವಿರುವ ವೈರುಧ್ಯಗಳನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತದೆ.
ಸಿನಿಮಾದಲ್ಲಿ ಕಾದಂಬರಿಯ ಸಂಭಾಷಣೆಗಳನ್ನು, ವಿವರಣೆಗಳನ್ನು ಬಳಸುವಲ್ಲಿ ಹಾಗೂ ಬಳಸದೇ ಇರುವಲ್ಲಿ ನಿರ್ದೇಶಕರ ಔಚಿತ್ಯಪ್ರಜ್ಞೆ ಎದ್ದುಕಾಣುತ್ತದೆ. ಉದಾಹರಣೆಗೆ ಫಣಿಯಮ್ಮನ ವೈಧವ್ಯದ ನಂತರದ ಮೂರು ದಿನದ ಕಾರ್ಯ, ಮೈನೆರೆದ ಮೇಲಿನ ಕಾರ್ಯಗಳು, ಕೇಶಮುಂಡನ ಇತ್ಯಾದಿ ಕಾರ್ಯಗಳ ವಿವರಗಳನ್ನು ಕಾದಂಬರಿಯಲ್ಲಿ ಬರುವ ನಿರೂಪಣೆಗಳ ಬದಲಿಗೆ ಸಿನಿಮಾದಲ್ಲಿ ದೃಶ್ಯಗಳ ಮೂಲಕ ಹಿನ್ನೆಲೆ ಸಂಗೀತದೊಂದಿಗೆ ತರಲಾಗಿದೆ. ಇಲ್ಲಿ ಮೌನ, ಹಿನ್ನೆಲೆ ಸಂಗೀತವೇ ಆ ದೃಶ್ಯವನ್ನು ವಿವರಿಸುತ್ತದೆ. ಇಲ್ಲಿ ಯಾವುದೇ ಸಂಭಾಷಣೆಯಿಲ್ಲ. ಸಿನಿಮಾದಲ್ಲಿ ಬಳಸಲಾದ ಈ ತಂತ್ರ ಅಪ್ರಾಪ್ತ ವಯಸ್ಸಿನ ಫಣಿಯಮ್ಮನ ದುರಂತ ಬದುಕನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಇಲ್ಲಿ ನೋಡುಗ ದೃಶ್ಯಗಳ ಮೂಲಕವೇ ತನ್ನ ಆಲೋಚನೆಗೆ ಇಳಿಯುತ್ತಾನೆ, ಅವಳ ದುರಂತ ಬದುಕನ್ನು ಊಹಿಸಿಕೊಳ್ಳುತ್ತಾನೆ.
ಮಡಿ-ಮೈಲಿಗೆ ಎನ್ನುವಂತಹದ್ದು ಸ್ತ್ರೀಯರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಹಾಗೂ ತಮ್ಮ ಸ್ವಾರ್ಥಕ್ಕಾಗಿ ವೈದಿಕ ಪುರುಷರು ಕಂಡುಕೊಂಡ ಮಾರ್ಗ ಎನ್ನುವ ಅಂಶವನ್ನು ಸಿನಿಮಾ ಸಾಕಷ್ಟು ದೃಶ್ಯಗಳಲ್ಲಿ ಬಿಂಬಿಸುತ್ತದೆ. ಈ ಅಂಶವನ್ನು ಸಿನಿಮಾದ ಆರಂಭಿಕ ಹಂತದ ದೃಶ್ಯದಲ್ಲಿ ನೇರವಾಗಿಯೇ ಹೇಳಿದ್ದಾರೆ. ಸುಬ್ಬರಾಯ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡು ಪದೇ-ಪದೇ ಜನಿವಾರವನ್ನು ಬದಲಾಯಿಸುವ ಕಾದಂಬರಿಯ ಕಥೆಯನ್ನು ಸಿನಿಮಾದಲ್ಲಿ ಮುಖ್ಯ ಘಟನೆಯಾಗಿ ತರಲಾಗಿದೆ. ಸಿನಿಮಾದಲ್ಲಿ ಫಣಿಯಮ್ಮನ ಬದುಕಿನ ಹಿಂದಿನ ಕಥೆ ಆರಂಭವಾಗುವುದು ಈ ದೃಶ್ಯದ ನಂತರವೇ ಎನ್ನಬಹುದು. ಹೆಣ್ಣನ್ನು ಮಡಿ ಮೈಲಿಗೆ ಎನ್ನುತ್ತಲೇ ಸಂಕೋಲೆಯೊಳಗೆ ಸಿಲುಕಿಸಿ ತಾನು ಮಾತ್ರ ಮನಸೋ ಇಚ್ಛೆ ಬದುಕುವ, ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುವ ಗಂಡಿನ ವರ್ತನೆಯನ್ನು ಇಲ್ಲಿ ಪ್ರಶ್ನಿಸಲಾಗಿದೆ. ಸುಬ್ಬರಾಯನ ಅನೈತಿಕ ಸಂಬಂಧಗಳ ಬಗ್ಗೆ ತಿಳಿದ ನಂತರ ಫಣಿಯಮ್ಮ “ವಿಚಿತ್ರ ಸಂಪ್ರದಾಯ ನಮ್ದು.. ಏನ್ ಮಡಿನೋ ಏನ್ ಆಚಾರಾನೋ ಮಾಡೋದ್ ಅನಾಚಾರ ಮನೆಮುಂದೆ ಬೃಂದಾವನ ಅಂತ’’೩ ಎನ್ನುತ್ತಾಳೆ. ಕಾದಂಬರಿಯಲ್ಲಿ ಬರುವ “ಏನು ವಿಚಿತ್ರ ಸಂಪ್ರದಾಯ ನಮ್ಮದು? ಗಂಡಸು ಹೊಲತಿಯನ್ನು ಮುಟ್ಟಿ ಬಂದರೂ ಸ್ನಾನ ಮಾಡಿ, ಜನಿವಾರ ಬದಲಾಯಿಸಿದರೆ ಶುದ್ಧ, ಹೆಂಗಸು ಅಪ್ಪಿತಪ್ಪಿ ಪುರುಷನನ್ನು ನೋಡಿದರೆ ಆಕೆ ಕುಲಟೆ. ಭಗವಂತ ಏನು ನಿನ್ನ ವಿಚಿತ್ರ ಲೀಲೆ? ಶೌಚ ತೊಳೆಯುವ ಎಡಗೈ ಪೂಜೆ ಮಾಡುವಾಗ ಗಂಟೆ ಭಾರಿಸಬೇಕು. ನಮಸ್ಕರಿಸುವಾಗ ಎರಡೂ ಕೈ ಜೋಡಿಸಬೇಕು. ಅದು ಬಿಟ್ಟರೆ ಮತ್ತೆ ಯಾವ ಶುಭಕಾರ್ಯಗಳಿಗೂ ಎಡಗೈ ಮೊದಲು ಹಾಕಬಾರದು. ಎಲ್ಲಾ ಕೆಲಸಗಳಿಗೂ ಎಡಗೈ ಬೇಕು ಆದರೆ ಶುಭ ಕಾರ್ಯಗಳಲ್ಲಿ ಅದು ಮುಂದೆ ಬರಬಾರದು. ಇಂತಹ ಕುರುಡು ಸಂಪ್ರದಾಯಗಳು ನಮ್ಮಲ್ಲಿ ಅಸಂಖ್ಯ ಇವೆ. ಎಲ್ಲರೂ ಅಜ್ಜ ನೆಟ್ಟ ಆಲದ ಮರವೆಂದರೆ, ಎಲ್ಲರೂ ಅದಕ್ಕೆ ನೇಣು ಹಾಕಿಕೊಳ್ಳುವವರೇ ಹೊರತು ಅದನ್ನು ಬದಲಾಯಿಸ ಬೇಕೆಂಬ ಬುದ್ಧಿ ಇಲ್ಲವಲ್ಲ”೪ ಎನ್ನುವ ಉದ್ದನೆಯ ನಿರೂಪಣೆ ಸಿನಿಮಾದಲ್ಲಿ ಮೇಲೆ ಗಮನಿಸಿದಂತೆ ಎರಡು ಸಾಲಿನಲ್ಲಿ ಸಂಕ್ಷಿಪ್ತವಾಗಿ ಮುಗಿಯುತ್ತದೆ.
ಸಿನಿಮಾದಲ್ಲಿ ಸುಬ್ಬರಾಯನ ಕತೆಯನ್ನು ತೆರೆಮೇಲೆ ದೃಶ್ಯೀಕರಿಸಿ ನಂತರ ವೈದಿಕ ಸಮುದಾಯದೊಳಗಿದ್ದ ಮೂಢ ಆಚಾರ-ವಿಚಾರ ಸಂಪ್ರದಾಯಗಳು ಹಾಗೂ ಕೆಲವು ಪುರುಷರು ಅದನ್ನು ಬದುಕಿಗೆ ಅನ್ವಯಿಸಿಕೊಳ್ಳುವ ಕ್ರಮದ ನಡುವಿನ ವೈರುಧ್ಯಗಳನ್ನು ಚಿತ್ರಿಸಿ, ಅಂದಿನ ಕೆಲವು ವೈದಿಕ ಪುರುಷರ ಅಸಮಾನ ನಡೆಯನ್ನು ಊಹಿಸಿಕೊಳ್ಳಲು ಪ್ರೇಕ್ಷಕರಿಗೆ ಬಿಡಲಾಗಿದೆ. ಹೆಣ್ಣಿನ ಮೇಲೆ ನಡೆದ ಲೈಂಗಿಕ ಶೋಷಣೆಯೂ ಈ ದೃಶ್ಯದಲ್ಲಿ ಪ್ರೇಕ್ಷಕನ ಅರಿವಿಗೆ ಬರುತ್ತದೆ.
ಹೆರಿಗೆ ಕೋಣೆ, ಮುಟ್ಟಿನ ಕೋಣೆ, ಕತ್ತಲೆ ಕೋಣೆಗಳ ವಿವರಗಳು ಸಿನಿಮಾದ ಆರಂಭಿಕ ನಿರೂಪಣೆಯಲ್ಲಿ ಬರುತ್ತವೆ. ಈ ಮೂಲಕ ಮಡಿ-ಮೈಲಿಗೆಯ ನೆಪದಲ್ಲಿ ನಡೆಯುವ ವ್ಯವಸ್ಥಿತ ಸಂಚನ್ನು ಸಿನಿಮಾದಲ್ಲಿ ಬಯಲಿಗೆಳೆಯಲಾಗಿದೆ. ಎಳೆಯ ಫಣಿಯನ್ನು ಕತ್ತಲೆ ಕೋಣೆಗೆ ದೂಡುವ ದೃಶ್ಯಗಳು ಈ ಮೇಲಿನ ಅಂಶವನ್ನು ಮತ್ತಷ್ಟು ಪುಷ್ಟೀಕರಿಸುತ್ತವೆ. ಮಕ್ಕಳಾಗದ ಮಹಿಳೆಯರು ತಾತ್ಸಾರಕ್ಕೆ, ಲೈಂಗಿಕ ಶೋಷಣೆಗೆ ಗುರಿಯಾಗುವುದನ್ನೂ ಕೂಡ ಸಿನಿಮಾ ವಿರೋಧಿಸಿದೆ.
ಮಕ್ಕಳಾಗುವುದಿಲ್ಲ ಎಂದು ಸುಬ್ಬಿಯನ್ನು ಗಂಡನ ಮನೆಯಿಂದ ಹೊಡೆದು ಕಳಿಸಿದಾಗ ತವರಿಗೆ ಬಂದು ಆಕೆ ಆಶ್ರಯ ಬೇಡುವ ದೃಶ್ಯದಲ್ಲಿ ಹೆಣ್ಣನ್ನು ಸಮಾಜ ನೋಡುವ ಕ್ರಮ ಬಿಂಬಿತವಾಗಿದೆ. “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು”೫ ಎನ್ನುವ ಸಂಭಾಷಣೆಯ ಮೂಲಕ ಕೌಟುಂಬಿಕ ಮೌಲ್ಯಗಳು ಮಹಿಳೆಗೆ ಸಂಕೋಲೆಯಾಗಿರುವ ಕುರಿತು ಸಿನಿಮಾದಲ್ಲಿ ವಿಷಾದಿಸಲಾಗಿದೆ. ಪುಟ್ಟಾಜೋಯಿಸನಿಂದ ಸುಬ್ಬಿ ಲೈಂಗಿಕ ಶೋಷಣೆಗೆ ಒಳಗಾಗುವ ದೃಶ್ಯ ಸಂಪ್ರದಾಯಸ್ಥ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳಾಗದ ಹಾಗೂ ಗಂಡನಿಲ್ಲದ ಮಹಿಳೆಯರ ಅಸ್ಥಿರ ಬದುಕು ಹಾಗೂ ಮಹಿಳಾ ಬದುಕಿನ ದುರಂತತೆಗಳನ್ನು ತೆರೆದಿಡುತ್ತದೆ.
ಬಾಲ್ಯವಿವಾಹದ ಕುರಿತ ಚರ್ಚೆ ಸಿನಿಮಾದಲ್ಲಿ ಮುಖ್ಯ ನೆಲೆಯಲ್ಲಿಯೆ ಚಿತ್ರಿತವಾಗಿದೆ. ಸಮಾಜದಲ್ಲಿ ಬಹಳ ಹಿಂದಿನಿಂದಲೂ ಬಾಲ್ಯವಿವಾಹ ಒಂದು ಪಿಡುಗಾಗಿ ಪರಿಣಮಿಸಿತ್ತು. ಅದರಲ್ಲೂ ವೈದಿಕ ಸಂಪ್ರದಾಯದ ಪ್ರಕಾರ ಆಕೆ ಋತುಮತಿಯಾಗುವ ಮುನ್ನ ವಿವಾಹವಾಗದಿದ್ದರೆ ಜೀವನ ಪರ್ಯಂತ ವಿಧವೆಯಂತೆ ಬಾಳು ನಡೆಸಬೇಕಾಗಿತ್ತು. ಇಲ್ಲದಿದ್ದಲ್ಲಿ ಆ ಮನೆತನವನ್ನು ಬಹಿಷ್ಕರಿಸಲಾಗುತ್ತಿತ್ತು. ಸಿನಿಮಾದಲ್ಲಿ ಬಾಲ್ಯ ವಿವಾಹವನ್ನು ಉದ್ದೇಶ ಪೂರ್ವಕವಾಗಿ ವಿಡಂಬಿಸುವ ಮೂಲಕ ಅಸಹಜ ಸಂಪ್ರದಾಯವನ್ನು ಅಪಹಾಸ್ಯ ಮಾಡಿದ್ದಾರೆ. ಸಿನಿಮಾದಲ್ಲಿ ಬರುವ ಫಣಿಯಮ್ಮನ ಬಾಲ್ಯವಿವಾಹದ ದೃಶ್ಯದಲ್ಲಿ ಕಾದಂಬರಿಯಲ್ಲಿ ಬರುವ ಮದುವೆಯ ದೀರ್ಘ ವಿವರಣೆಗಳನ್ನು ಕೈಬಿಡಲಾಗಿದೆ. ಈ ಬದಲಾವಣೆಯಿಂದ ಸಿನಿಮಾದಲ್ಲಿನ ಈ ಸಂದರ್ಭ ಪರಿಣಾಮಕಾರಿಯಾಗಿ ಮೂಡಿದೆ. ಕಾದಂಬರಿಯಲ್ಲಿನ ಎಳೆಯರ ವರ್ತನೆಗಳ ವಿವರಗಳು, ಎಂಟು ದಿನ ಮದುವೆ ನಡೆದರೂ ಯಾವುದೋ ಹೋಮ ಎಂದುಕೊಂಡ ಆ ಎಳೆಯರ ಚಿತ್ರಣ ಸಿನಿಮಾದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿದೆ. ಇಲ್ಲಿ ಸಂಭಾಷಣೆ, ವಿವರಣೆ, ನಿರೂಪಣೆಗಳ ಬದಲಾಗಿ ದೃಶ್ಯಗಳೇ ಬಾಲ್ಯವಿವಾಹದ ಅಸಂಬದ್ಧತೆಯನ್ನು ತೆರೆದಿಡುತ್ತವೆ. ಹೋಮಕುಂಡದ ಹೊಗೆಯನ್ನು ತಾಳಲಾರದೇ ಕಣ್ಣುಜ್ಜಿಕೊಳ್ಳುವ, ಮದುವೆಯನ್ನು ಹೋಮವೆಂದು ತಿಳಿಯುವ ಎಳೆಯ ವಯಸ್ಸಿನ ಮದುಮಗನಾದ ನಂಜುಂಡನ ಚಿತ್ರಣ ಹಾಗೂ ಏನೂ ತಿಳಿಯದೇ ಹಿರಿಯರ ಭಯದಲ್ಲಿ ಹೇಳಿದಂತೆ ಕೇಳುತ್ತಿರುವ ಫಣಿಯಮ್ಮನ ಚಿತ್ರಣದೊಂದಿಗೆ ಬಾಲ್ಯವಿವಾಹದ ಅಸಹಜತೆ ತೆರೆಮೇಲೆ ಸ್ಪಷ್ಟವಾಗಿ ಮೂಡುತ್ತದೆ. ಇನ್ನೊಮ್ಮೆ ಮತ್ತೆ ಹೋಮ ಮಾಡುತ್ತಾರಾ ಎನ್ನುವ ನಂಜುಂಡನ ಪ್ರಶ್ನೆಗೆ, ಅಲ್ಲಿದ್ದವರು ‘ಮತ್ತೊಮ್ಮೆ ಫಣಿ ಮೈನೆರೆದ ಮೇಲೆ ಪ್ರಸ್ತದಲ್ಲಿ ಮತ್ತೆ ಹೋಮ ಮಾಡುತ್ತಾರೆ’ ಎಂದಾಗ ಆತ “ಪ್ರಸ್ತ.. ಹಂಗಂದ್ರೆ ಎಂಥದಮ್ಮ, ಫಣಿ ಯಾವಾಗ ಮೈನೆರೆತಾಳೆ? …ಎಂಥದು ಹಂಗಂದ್ರೆ?”೬ ಎಂದು ಕೇಳುವ ಪ್ರಶ್ನೆಗೆ ಎತ್ತಿನ ಗಾಡಿಯಲ್ಲಿದ್ದ ಮಹಿಳೆಯರು ನಗುತ್ತಾರೆ. ಆದರೆ ಪ್ರೇಕ್ಷಕನನ್ನು ಈ ಸನ್ನಿವೇಶ ಗಂಭೀರತೆಗೆ ಕೊಂಡೊಯ್ಯುತ್ತದೆ.
ಸಿನಿಮಾದಲ್ಲಿ ಒಟ್ಟು ಮೂರು ತಲೆಮಾರಿನ ವಿಧವೆಯರ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ಕಾಲ ಬದಲಾದರೂ ಮೂರು ತಲೆಮಾರುಗಳಲ್ಲೂ ಅದೇ ಹಳೆಯ ಮೌಢ್ಯಯುತ ಮೌಲ್ಯಗಳು, ಜಡ ಸಂಪ್ರದಾಯ ಮಡಿ-ಮೈಲಿಗೆ ಆಚರಣೆಗಳನ್ನು ಮಹಿಳೆಯ ಮೇಲೆ ಹೇರುತ್ತಿರುವ ಸಂಪ್ರದಾಯವಾದಿಗಳ ಅಮಾನವೀಯ ನಡೆಯನ್ನು ಸಿನಿಮಾ ಚಿತ್ರಿಸಿದೆ. ಹಾಗೆ ಇಲ್ಲಿ ಮೂರು ಕಾಲದ ವಿಧವೆಯರ ಪ್ರತಿಕ್ರಿಯೆಯೂ ಸ್ಪಷ್ಟವಾಗಿ ಮೂಡಿದೆ. ಆ ಮೂಲಕ ಬದಲಾವಣೆಗಳ ಸ್ವರೂಪ ಮತ್ತು ವಿವಿಧ ಹಂತಗಳನ್ನು ಸಿನಿಮಾ ಸಂಯೋಜಿಸಿದೆ.
ಸಿನಿಮಾದಲ್ಲಿ ಫಣಿಯಮ್ಮನ ಅತ್ತೆ, ಫಣಿಯಮ್ಮ ಹಾಗೂ ದಾಕ್ಷಾಯಣಿ ಈ ಮೂರೂ ಪಾತ್ರಗಳು ವಿವಿಧ ಕಾಲಘಟ್ಟದ ವಿಧವಾ ಮಹಿಳೆಯರ ಪ್ರಾತಿನಿಧಿಕವಾಗಿ ಬರುತ್ತಾರೆ. ಫಣಿಯಮ್ಮನ ಅತ್ತೆ ಯಾವುದೇ ಪ್ರತಿರೋಧವನ್ನು ತೋರದೇ, ಅಸಹಾಯಕತೆಯಲ್ಲಿ ಎಲ್ಲವನ್ನೂ ಒಪ್ಪಿ ನಡೆದ ಪಾತ್ರ. ಅವರ ಮುಂದಿನ ತಲೆಮಾರಿನ ಫಣಿಯಮ್ಮ ಬಾಲವಿಧವೆಯಾದುದ್ದರಿಂದ ಏನೂ ಅರಿಯದ ಮುಗ್ಧೆಯಾದರೂ ಬೆಳೆದಂತೆಲ್ಲ ಬ್ರಾಹ್ಮಣ್ಯದ ವಿಧವಾ ಆಚರಣೆ, ಸಂಪ್ರದಾಯ, ಜಾತಕಫಲಗಳ ಬಗೆಗೆ ಜಿಗುಪ್ಸೆ ತಾಳುತ್ತಾಳೆ. ಫಣಿಯ ನಂತರದ ತಲೆಮಾರಿನವಳಾದ ದಾಕ್ಷಾಯಣಿ ಪಾತ್ರವನ್ನು ನಿರ್ದೇಶಕಿ ಪ್ರತಿಭಟನಾತ್ಮಕ ನೆಲೆಯಲ್ಲಿ ಚಿತ್ರಿಸುತ್ತಾರೆ. ದಾಕ್ಷಾಯಣಿಯ ಪ್ರತಿರೋಧದ ಮೂಲಕ ಬದಲಾವಣೆಯ ಸೂಚನೆಯೂ ದೊರೆಯುತ್ತದೆ. ಈ ಮೂರು ಪಾತ್ರಗಳ ದೃಶ್ಯ ಸಂಯೋಜನೆಯಲ್ಲಿ ವಿಧವೆಯರ ಸಂಕಷ್ಟದ ಬದುಕನ್ನು, ಆನಂತರದ ಕಾಲಿಕ ಬದಲಾವಣೆಗಳನ್ನು ನಿರ್ದೇಶಕಿ ಸ್ಪಷ್ಟವಾಗಿ ಕಟ್ಟಿಕೊಡುತ್ತಾರೆ. ಕಾದಂಬರಿಯ ಈ ಎಲ್ಲಾ ಕಥಾ ಸಂದರ್ಭಗಳೇ ಸಿನಿಮಾದಲ್ಲಿ ಸಂಕ್ಷಿಪ್ತವೂ, ಪರಿಣಾಮಕಾರಿಯಾಗಿಯೂ ಮೂಡಿವೆ.
ಸಿನಿಮಾದಲ್ಲಿ ಯಕ್ಷಗಾನ ಪ್ರಸಂಗದ ಹಾಡುಗಳು, ತಾಳಮದ್ದಳೆ, ನಾಟಕದ ದೃಶ್ಯಗಳು, ಅಂಟಿಗೆಪೆಂಟಿಗೆ ಹಾಡಿನ ದೃಶ್ಯಗಳು ಸಿನಿಮಾದಲ್ಲಿ ನಿರೂಪಿತವಾಗುತ್ತಿರುವ ಘಟನೆಗಳಿಗೆ ತಕ್ಕಂತೆ ಬರುತ್ತವೆ. ಕೆಲವೊಂದು ಯಕ್ಷಗಾನದ ಪ್ರಸಂಗಗಳು ಮುಂದಾಗುವ ಘಟನೆಗಳನ್ನು ಪ್ರಸಂಗದ ಹಾಡಿನಲ್ಲಿ ಸೂಚ್ಯವಾಗಿ ಬಿಂಬಿಸುತ್ತಿರುತ್ತವೆ. ಇವುಗಳ ಜೊತೆಗೆ ಫಣಿಯಮ್ಮದ ಪರಿಶುದ್ಧ ಜೀವನದ ಪಯಣವನ್ನು, ಅವಳ ಸೇವಾಜೀವನ ಹಾಗೂ ತ್ಯಾಗಗುಣಗಳನ್ನು ನಿರೂಪಿಸಲು ‘ಏನೆನ್ನಲೇ ತಾಯಿ’ ಎನ್ನುವ ಹಾಡು ಬಳಕೆಯಾಗಿದೆ. ‘ರನ್ನರ್ ರನ್ನರ್ ಹೋ’ ಎನ್ನುವ ಹಾಡು ಅಂಚೆಮನೆತನದವರ ಅಂಚೆ ರವಾನೆಯ ಕೆಲಸ ಮತ್ತು ಆ ಕಾಲದ ಮಲೆನಾಡಿನ ಜನಜೀವನದ ವಿವರ ನೀಡುತ್ತದೆ.
ಮಲೆನಾಡಿನ ಉಡುಗೆ ತೊಡುಗೆ, ಆಚಾರ-ವಿಚಾರ, ಸಂಸ್ಕೃತಿ, ನಡೆ-ನುಡಿ, ಊಟೋಪಚಾರ, ಪ್ರಕೃತಿ ಸೊಬಗು ಇತ್ಯಾದಿಗಳು ಕಾದಂಬರಿಯ ನಿರೂಪಣೆಯಲ್ಲಿ ಬರುವಂತೆ ಸಿನಿಮಾದಲ್ಲೂ ಇವುಗಳನ್ನು ತರಲಾಗಿದೆ. ಕಾದಂಬರಿಯ ವಿವರಗಳನ್ನು ಇಲ್ಲಿ ಚಾಕ್ಷಕ್ಷವಾಗಿ ತೋರಿಸಲಾಗಿದೆ. ಇದು ಪ್ರೇಕ್ಷಕನಿಗೆ ಮಲೆನಾಡಿನ ಒಂದು ಸಮುದಾಯದೊಳಗೆ ನಡೆದ ಕಥೆಯನ್ನು ನೈಜವಾಗಿ, ಹಲವು ಶತಮಾನಗಳಿಂದ ಮಹಿಳೆಯರು ಅನುಭವಿಸಿದ ಶೋಷಣೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಹಕಾರಿಯಾಗಿವೆ.
‘ಫಣಿಯಮ್ಮ’ ಸಿನಿಮಾ ರಾಷ್ಟ ಪ್ರಶಸ್ತಿಯನ್ನೂ ಪಡೆದು ಒಂದು ಕಾಲದಲ್ಲಿ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿ ಸಂಚಲನವನ್ನುಂಟು ಮಾಡಿದ್ದ ಸಿನಿಮಾ. ಆದರೆ ಫಣಿಯಮ್ಮನ ಬದುಕಿನ ವಿಸ್ತೃತ ವಿವರಣೆ, ಫಣಿಯಮ್ಮನ ಕಾಲದ ವಿಧವಾ ಬದುಕಿನ ವಾಸ್ತವ ಅನುಭವಕ್ಕೆ ನಾವು ಸಿನಿಮಾಕ್ಕಿಂತ ಕಾದಂಬರಿಯನ್ನೇ ಹೊಕ್ಕಿ ನೋಡಬೇಕಾಗುತ್ತದೆ. ಸಿನಿಮಾ ಕಾದಂಬರಿಯ ಎಲ್ಲವನ್ನು ತರಲು ಸಾಧ್ಯವಿಲ್ಲ, ಸಂಕ್ಷಿಪ್ತತೆ ಸಾಂಕೇತಿಕತೆಯೇ ಸಿನಿಮಾದ ಗುಣ. ಹಾಗಾಗಿ ಫಣಿಯಮ್ಮ ಸಿನಿಮಾವನ್ನು ಕಾದಂಬರಿಯ ಕಥೆಯಿಂದಾಯ್ದ, ಸಾಂಕೇತಿಕ ಕಥೆಗಳಿಂದ ಸಂಯೋಜಿಸಿದ ಒಂದು ಕಲಾಕೃತಿಯಾಗಿ ಭಾವಿಸಬಹುದು. ಆದರೆ ಫಣಿಯಮ್ಮನ ಬದುಕಿನ ಮತ್ತು ಅವಳ ಕಾಲದ ನಿಜದ ಕಥನವಿರುವುದು ‘ಫಣಿಯಮ್ಮ’ ಕಾದಂಬರಿಯಲ್ಲಿಯೇ ಎನ್ನಬಹುದು.
ಕೆಲವು ಮಠಗಳ ಶೋಷಣೆ ಬಗ್ಗೆ ಕಾದಂಬರಿಯಷ್ಟು ಮುಕ್ತವಾಗಿ ಸಿನಿಮಾ ಮಾತನಾಡುವುದಿಲ್ಲ. ಆದರೆ ಕಾದಂಬರಿಯಲ್ಲಿ ಲೇಖಕಿ ಮಠಗಳ ಮೂಲಕ ನಡೆಸುತ್ತಿದ್ದ ಶೋಷಣೆಯ ಬಗ್ಗೆ, ಅಲ್ಲಿ ನಡೆಯುವ ಕುತಂತ್ರಗಳ ಬಗ್ಗೆ ನಿರ್ಭಿಡೆಯಿಂದಲೇ ಮಾತನಾಡುತ್ತಾರೆ. ಎಂ.ಕೆ. ಇಂದಿರಾ ಅವರು ಸಂಪ್ರದಾಯವಾದಿ ಎನ್ನುವುದು ವಿಮರ್ಶಕರ ಅಭಿಪ್ರಾಯ ಆದರೆ ಲೇಖಕಿ ಅಮಾನವೀಯ ಎನ್ನುವ ವಿಚಾರಗಳನ್ನು ಮುಕ್ತವಾಗಿಯೇ ಖಂಡಿಸುತ್ತಿದ್ದರು ಎನ್ನುವುದನ್ನು ಮಠಗಳ ಶೋಷಣೆಯ ಬಗ್ಗೆ ಅವರು ಮುಕ್ತವಾಗಿ ಬರೆದ ನಿರೂಪಣೆಯಲ್ಲಿ ಗಮನಿಸಬಹುದು. ಸಿನಿಮಾ ಈ ವಿಚಾರವನ್ನು ಕೈಬಿಟ್ಟಿದೆ.
‘ಫಣಿಯಮ್ಮ’ ಸಿನಿಮಾದ ಬಗ್ಗೆ ಅಷ್ಟು ಚರ್ಚೆಗಳು ನಡೆದಿಲ್ಲ. ನಡೆದ ಚರ್ಚೆಗಳಲ್ಲಿಯೂ ಅಲ್ಲಿನ ತಾಂತ್ರಿಕ ದೋಷಗಳನ್ನೇ ಬೊಟ್ಟು ಮಾಡಿ ಉಳಿದ ಅಂಶಗಳನ್ನು ಗಮನಿಸದೇ ನಿರ್ಲಕ್ಷಿಸಲಾಗಿದೆ. ಇದಕ್ಕೆ ಹಲವು ರಾಜಕೀಯ ಕಾರಣಗಳೂ ಇವೆ. “ಘಟಶ್ರಾದ್ಧ, ನಾಯಿ ನೆರಳು, ವಂಶವೃಕ್ಷ ಈ ಸಿನಿಮಾಗಳ ಪಕ್ಕದಲ್ಲಿಟ್ಟರೆ ಸಿನೆಮಾದ ಹೊಸ ಅಲೆಯ ಯಶಸ್ವೀ ಚಿತ್ರ ಎಂದೇ ಇದನ್ನು ಕರೆಯಬಹುದಾಗಿದೆ. ಸಂಸ್ಕಾರ ಬಂದ ಹೊತ್ತಲ್ಲೇ ಫಣಿಯಮ್ಮ ಕೂಡ ಸಿನಿಮಾ ಆಗಿ ಬಂತು. ಆದರೆ ಯಾಕೆ ಇದನ್ನು ಸಂಸ್ಕಾರದಷ್ಟು ಗಂಭೀರವಾಗಿ ನೋಡಿಲ್ಲ ಮತ್ತು ಅಷ್ಟು ಚರ್ಚೆಗಳು ನಡೆಯಲಿಲ್ಲ ಎನ್ನುವುದನ್ನು ಮತ್ತೆ ಮತ್ತೆ ನಾವು ಕೇಳಿಕೊಳ್ಳಬೇಕಾಗುತ್ತದೆ. ಇಂಥಾ ರಾಜಕೀಯ ಸಂಗತಿಗಳು ಮಹಿಳಾ ತಂತ್ರಜ್ಞರನ್ನು ಕ್ಷೇತ್ರ ಹೇಗೆ ಕಡೆಗಣಿಸಿದೆ ಎನ್ನುವುದಕ್ಕೆ ಉದಾಹರಣೆಯೂ ಆಗಿದೆ”೭ ಎನ್ನುವ ಮಾತು ವಾಸ್ತವವಾದುದು. ಇದು ಇಂದೂ ಕೂಡ ಕಂಡುಬರುತ್ತಿರುವ ಅಸಮಾನ ಧೋರಣೆಯೇ ಆಗಿದೆ.
ಒಟ್ಟಿನಲ್ಲಿ ಫಣಿಯಮ್ಮ ಸಿನಿಮಾ ಹಾಗೂ ಕಾದಂಬರಿಗಳೆರಡೂ ಭಿನ್ನವಾಗಿ ಬಾಲವಿಧವೆಯರ, ವಿವಿಧ ಕಾಲಘಟ್ಟದ ವೈದಿಕ ಬ್ರಾಹ್ಮಣ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಸಮಾಜಕ್ಕೆ ತಿಳಿಯುವಂತೆ ಮಾಡಿವೆ. ಈ ಎರಡೂ ಕಲಾಕೃತಿಯೊಳಗೆ ವಿಮರ್ಶಕರು ಗುರುತಿಸುವ ದೋಷಗಳೇನೇ ಇರಬಹುದು. ಆದರೆ ಇವೆರಡೂ ಕಲಾಕೃತಿಯೊಳಗಿನ ಸಂವೇದನೆಯ ನೆಲೆ, ಮಾನವೀಯ ಅಂಶಗಳು, ಮಹಿಳಾ ಕಾಳಜಿಗಳನ್ನು ಎಂದಿಗೂ ಯಾರೂ ತಿರಸ್ಕರಿಸುವಂತಿಲ್ಲ. ಇವೆರಡೂ ಒಂದು ಕಾಲದ ಸಾಂಸ್ಕೃತಿಕ ಚರಿತ್ರೆಯ ಮುಖ್ಯ ದಾಖಲೆಗಳಾಗಿ ಉಳಿಯುತ್ತವೆ.
-ಡಾ. ಸುಶ್ಮಿತಾ ವೈ.
ಅಡಿ ಟಿಪ್ಪಣಿಗಳು
೧. ಫಣಿಯಮ್ಮ ಸಿನಿಮಾ (೧೯೮೩).
೨. ಅದೇ.
೩. ಅದೇ.
೪. ಇಂದಿರಾ, ಎಂ.ಕೆ. (೨೦೧೩). ಫಣಿಯಮ್ಮ. ಇಂದಿರಾ ಪ್ರಕಾಶನ, ಬೆಂಗಳೂರು, ಪು. ೬೨.
೫. ಫಣಿಯಮ್ಮ ಸಿನಿಮಾ (೧೯೮೩).
೬. ಅದೇ.
೭. ಪಾರ್ವತಿ, ಎಚ್.ಎಸ್. (ಸಂ.) (೧೯೯೧). ಸುರಗಿ. ಇಳಾ ಪ್ರಕಾಶನ, ಬೆಂಗಳೂರು, ಪು. ೪೦.
ಪರಾಮರ್ಶನ ಗ್ರಂಥಗಳು
೮. ಬರಗೂರು ರಾಮಚಂದ್ರಪ್ಪ (೨೦೧೬). ಸಿನಿಮಾ ಒಂದು ಜಾನಪದ ಕಲೆ. ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.
೯. ಪ್ರಶಾಂತ ನಾಯಕ, ಜಿ. (೨೦೦೯). ಕನ್ನಡ ಸಿನಿಮಾ ಲೋಕ. ರಚನಾ ಪ್ರಕಾಶನ, ಮೈಸೂರು.
೧೦. ಪ್ರಸನ್ನ, ಎ.ಎನ್. (೨೦೧೭). ಚಿತ್ರಕಥೆಯ ಸ್ವರೂಪ. ಕಣ್ವ ಪ್ರಕಾಶನ, ಬೆಂಗಳೂರು.
೧೧. ಬರಗೂರು ರಾಮಚಂದ್ರಪ್ಪ (೨೦೧೨). ಸಂಸ್ಕೃತಿ ಶ್ರಮ ಮತ್ತು ಸೃಜನಶೀಲತೆ. ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.
೧೨. ಪ್ರಶಾಂತ ನಾಯಕ, ಜಿ. (೨೦೧೮). ಸಿನಿ ಸಂಪದ. ಉಷಾ ಪ್ರಕಾಶನ, ಮೈಸೂರು.