ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 11)”: ಎಂ.ಜವರಾಜ್

-೧೧-
ಮಾರನೆ ದಿನ ಹತ್ತನ್ನೊಂದು ಗಂಟೆಗೆಲ್ಲ ಬಂದ ಗಂಗಣ್ಣ ಶಿಶುವಾರದ ಜಗುಲಿಲಿ ಧೂಳೊಡೆದು ಕುಂತ. ಕಾಲೇಜಿಗೆ ಚಕ್ಕರ್ ಹೊಡೆದು ಕ್ಯಾಸ್ಟ್ ಸರ್ಟಿಫಿಕೇಟ್ ಮಾಡಿಸಲು ರೆಡಿಯಾಗಲು ತೆಂಗಿನ ಮರಕ್ಕೆ ಒರಗಿಸಿ ನಿಲ್ಲಿಸಿದ್ದ ಸೈಕಲ್ ಒರೆಸುತ್ತಿದ್ದೆ. ಇದೇನು ಗಂಗಣ್ಣ ಇವತ್ತು ಇಷ್ಟು ಬೇಗ ಬಂದಿದಾನೆ ಅಂತ ಅಂದುಕೊಳ್ಳುವುದಕ್ಕು ಅವನು “ಯೋ ಬಾರಪ್ಪ ಇಲ್ಲಿ” ಅನ್ನುವುದಕ್ಕು ಸರಿ ಹೋಯ್ತು. ನಾನು “ಏನ್ ಗಂಗಣ್ಣ ಇವತ್ತು ಇಷ್ಟು ಜಲ್ದಿ ಬಂದಿದಿಯಾ” ಅಂದೆ. ಅಷ್ಟೊತ್ತಿಗೆ ಶಿಶುವಾರದ ಮೇಡಂ ಹೊರ ಬಂದು “ಗಂಗಣ್ಣ ಗುಗ್ರಿ ಕಾಳು ತಿಂತಿಯ.. ಇವತ್ತು ಸ್ಪೆಷಲ್ ಅದೆ..” ಅಂದರು. ಗಂಗಣ್ಣನಿಗೆ ಶಿಶುವಾರದಲ್ಲಿ ಮಾಡುವ ತಿಂಡಿ ಅಂದರೆ ಇಷ್ಟ ಅಂತ ಮೇಡಂ ಗೆ ಗೊತ್ತಿತ್ತು. ನಾನು “ಮೇಡಂ, ಗಂಗಣ್ಣ ಆತರ ಎಲ್ಲ ನಮ್ ಕೇರಿಯವ್ರು ಮಾಡುದ್ದ ತಿನ್ನಲ್ಲ” ಅಂದೆ. ಅವರು “ಇಲ್ವಲ್ಲ.. ಎಸ್ಟ್ ಸಲ ಕೊಟ್ಟಿದ್ದಿವಿ.. ತಿಂತಾನೆ” ಅಂದರು. ನಾನು ನಗ್ತಾ “ಏನ್ ಗಂಗಣ್ಣ ಈಸ್ಕೊಂಡ್ ತಿಂತಿಯ” ಅಂದೆ. ಅದಕ್ಕೆ ಅವನು “ಊಂಕನಪ್ಪ.. ಇದು ಮನೆ ಅಲ್ವಲ್ಲ ಗೌರ್ನಮೆಂಟ್ ಮಾಡೊದಲ್ವ.. ” ಅಂದ. ನಾನು “ಗಂಗಣ್ಣ ನಾವು ಕರುದ್ರೆ ಕೀಳು ಜಾತಿ.. ಸಂಪ್ರದಾಯ ಅದು ಇದು ಅಂತಿಯ ಇದೂ ನಮ್ಮೂರವ್ರೆ ಮಾಡಿರದಲ್ವ..? ಗೌರ್ನಮೆಂಟ್ ಏನ್ ಕೊಟ್ರು ಯಾರ್ ಮಾಡುದ್ರು ತಿಂತಿಯ” ಅಂದೆ. ಅವನು “ಊಂಕನಪ್ಪ. ಪಾತ್ರೆಗಳು, ಎಣ್ಣೆ, ಕಾಳು, ಬೆಲ್ಲ ಎಲ್ಲ ಗೌರ್ನಮೆಂಟ್ದು ಅಲ್ವ? ಅದ್ಕೆ ಜಾತಿ ಇದಿಯ? ನಾನು ನಾಯಿ ದನ ಹಂದಿ ಈ ಮೂರನ್ನ ಬುಟ್ಟು ಗೌರ್ನಮೆಂಟ್ ಆಫೀಸಲ್ಲಿ ಯಾರು ಏನ್ ಮಾಡುದ್ರು ತಿಂತಿನಿ ಕಣಯ್ಯ ಮನೆನಲ್ಲಿ ತಿನ್ನಲ್ಲ ” ಅಂತ ಹೇಳುತ್ತ ಅವನ ಪಾಡಿಗೆ ಅವನು ಲೆಟರ್ ಜೋಡಿಸುತ್ತ ಒಂದಷ್ಟು ಎಂಓ ಫಾರಂ ನನ್ನತ್ರ ಕೊಟ್ಟು “ತಗೊ ಎಲ್ಟಿಎಂ ಹಾಕು” ಅಂದ. ಆದರೆ “ಏಳ್ ಪಾಸಾಯ್ತ” ಅನ್ನೊದನ್ನ ಮರೆಯಲಿಲ್ಲ. ನಾನು ಏನೇ ಸಮಜಾಯಿಸಿ ನೀಡಿದರು ಏಳರಿಂದ ಮೇಲೆ ಮಾತಾಡದೆ “ನೋಡು ಈ ಮೇಡಮ್ಮೋರು ಏಳು ಪಾಸಾಗಿ ಮೇಡಮ್ ಆಗಿದ್ದಾರೆ. ನಾನು ಎಸೆಲ್ಸಿ ಪಾಸ್ ಮಾಡಿ ಈ ಕೆಲ್ಸ ಮಾಡ್ತ ಇದಿನಿ. ಅದ್ಕೆ ಹೇಳುದ್ದು ಏಳ್ ಪಾಸಾಗಿದ್ದಾ ಅಂತ” ಅಂದ. ನಾನು “ಹು ಗಂಗಣ್ಣ” ಅಂತ ಎಂಓ ಫಾರಂ ಈಸಿಕೊಂಡು ಹೆಬ್ಬೆಟ್ಟಿನ ಗುರುತಿನ ಮೇಲೆ ಎಲ್ಟಿಎಂ ಬರೆದು ಸೈನ್ ಹಾಕಿದೆ. “ಸರಿಯಾಗಿ ಹಾಕೋದು ಕಲ್ತುಕೋಪ್ಪ ನಾಳೆ ದಿನ ನಿಂಗೆ ಒಳ್ಳೆದಾಗುತ್ತೆ. ನಾನೇನೊ ಅಡ್ಜಸ್ಟ್ ಮಾಡ್ಕೊತಿನಿ ನಾಳೆ ಯಾರಾದ್ರು ಬೇರೆ ಬಂದ್ರೆ ಏನ್ಮಾಡೋದು.. ” ಅಂತ ಅನ್ನುತ್ತ ಮೆತ್ತಗಾಗಿದ್ದು ಕಂಡಿತು. ಶಿಶುವಾರದ ಮೇಡಂ ಒಂದೆರಡಕ್ಕೆ ಹಾಕಿ “ಯಾಕ್ ಗಂಗಣ್ಣ ಹಂಗೇಳ್ತಿಯ.. ನಿನ್ ಬಿಟ್ರೆ ಯಾರ್ ಬರ‌್ತಾರೆ..? ನಮ್ಮೂರ್ ಪೋಸ್ಟಾಫಿಸಿಗೆ ಸಾಯೊಗಂಟ ನೀನೆ ಪರ್ಮನೆಂಟ್ ಪೋಸ್ಟ್ ಮ್ಯಾನ್..’ ಅಂದರು. ಅದಕ್ಕೆ‌”ಇಲ್ಲ ಮೇಡಮ್ಮೋರೆ ನಿಮ್ಮೂರವ್ರು ನನ್ಮೇಲೆ ಏನೇನೋ ಕಂಪ್ಲೆಂಟ್ ಮಾಡಿದರಮ್ಮೊ.. ನಾನ್ ಸರಿಯಾಗಿ ಕೆಲ್ಸ ಮಾಡಲ್ವಂತೆ. ಪೋಸ್ಟನ್ನೆಲ್ಲ ಮಿಸ್ ಮಾಡ್ತಿನಂತೆ. ವರ್ಗ ಮಾಡ್ತರಂತೆ ನಂಜನಗೂಡಿಗೆ. ನೆನ್ನೆ ಎಂಕ್ವೈರಿಗೆ ಬಂದಿದ್ರು ನಂಜನಗೂಡು ಡಿವಿಜನ್ ಆಫೀಸರು ಗೊತ್ತಾ..? ನಮ್ ಪೋಸ್ಟ್ ಮೇಷ್ಟ್ರೂ ಇದನ್ನೆ ಹೇಳುದ್ರು ಮೇಡಮ್ಮೋರೆ. ಏನ್ಮಾಡೋದು ದೇವ್ರು ಎಲ್ಲಿಗೋಗು ಅಂತಾನೊ ಗೌರ್ನಮೆಂಟು ಎಲ್ಲಿ ಹಾಕ್ತಾರೊ ಅಲ್ಲಿಗೆ ಹೋಗ್ತ ಇರೋದೆ” ಅಂತ ಇನ್ನಷ್ಟು ಮೆತ್ತಗಾದ. ಓಲ್ಡೇಜ್ ಪೆನ್ಸನ್ ಈಸಿಕೊಂಡು ಅಲ್ಲೆ ಕುಂತಿದ್ದ ತೂರಾಮಾದಯ್ಯ “ವರ್ಗ ಮಾಡಿರು..? ನಿನ್ಯಾಕ ವರ್ಗ ಮಾಡಿರು ಕುಂತ್ಗ ಗಂಗ.. ನಿನ್ನಂಗಿ ಪೋಸ್ಟ್ ಕೊಡವ್ರು ಯಾರಿದ್ದರು? ಆ ಸಣ್ಮುಕಪ್ಪ ಬಂದ್ರ ಯೇಳ್ತಿಂವಿ ಬುಡು.. ದೈರ್ಯವಾಗಿರು” ಅಂದ. ಇನ್ನೊಂದಷ್ಟು ಜನ ಬಂದರು. ಇವನ ಮಾತು ಕೇಳಿ ಯಾರೂ ನಂಬದೆ ಗೇಲಿ ಮಾಡಿಕೊಂಡು ನಗೋರು. ಅವನು ಎಂದಿನಂತೆ ಮೇಲೆದ್ದು ಸುತ್ಮುತ್ತ ನೋಡಿ ಎಲ್ಲವನ್ನು ಬ್ಯಾಗಿನೊಳಗೆ ಹಾಕಿಕೊಂಡು ಸೈಕಲ್ ಹ್ಯಾಂಡಿಗೆ ಸಿಕ್ಕಿಸಿದ. ಒಂದಷ್ಟು ಚಿಕೈಕಳು ಗಂಗ ಪೋಸ್ಟ್ ಎಂದು ಅರಚಿದವು. ಅವನ ತಿಕದ ಕುಂಡಿಗೆ ಕಲ್ಲು ಹಾಕಿದವು. ಅವನು ಒದರಿ ಸ್ಟ್ಯಾಂಡ್ ಒತ್ತಿ ಸೈಕಲ್ ಜಗ್ಗಿದ. ಬಿಸಿಲು ಚುರುಗುಟ್ಟುತ್ತಿತ್ತು. ಬಿಸಿಲ ಧಗೆಗೆ ಗಂಗಣ್ಣನ ಅಂಗಿ ಬೆವರಿಂದ ಒದ್ದೆಯಾಗಿ ಬೆನ್ನಿಗೆ ಅಂಟಿಕೊಂಡಿತ್ತು.
‌ ‌‌ ———

ಒಂದೆರಡು ತಿಂಗಳು ಕಳೆಯುತ್ತಾ ಬಂತು. ಕಾಲೇಜಿಗೆ ಹೋಗೋದು ಫ್ರೆಂಡ್ಸ್ ಜೊತೆ ಪಿಚ್ಚರಿಗೆ ಹೋಗೋದು, ಎಕ್ಸಾಂ ಗೆ ಓದಿಕೊಳ್ಳೋದು, ಅಲ್ಲಿ ಇಲ್ಲಿ ಸುತ್ತಾಟ ಅದು ಇದು ಅಂತ ಇತ್ತು. ಇದು ಬಿಟ್ಟರೆ ನನ್ನದೇ ಆದ ಯಾವ ಕೆಲಸವಿಲ್ಲದಿದ್ದರು ಪೋಸ್ಟ್ ಆಫೀಸ್ ಕಡೆ ಮುಖ ಮಾಡುವುದಿರಲಿ ಜ್ಞಾಪಿಸಿಕೊಳ್ಳುತ್ತಲೂ ಇರಲಿಲ್ಲ. ಆರಂಭದ ಶೂರತ್ವ ಅಂತಾರಲ್ಲ ಹಾಗೆ ಕವನ ಬರೆಯೋದು ಅದರ ಬಗ್ಗೆ ಮಾತಾಡೋದು ಯಾವುದೂ ಇಲ್ಲದೆ ಯಾವಾಗಲೊ ಒಂದೊಂದು ಸಲ ಪೋಸ್ಟ್ ಮೇಷ್ಟ್ರು ಸಿಕ್ಕಾಗ “ನಮಸ್ಕಾರ ಸಾರ್” ಅಂತ ತೋರಿಕೆಗೆ ಕವನ ಬರಿತಾ ಇದಿನಿ ಅಂತಾಲೊ ಅಥವಾ ದೊಡ್ಡ ದೊಡ್ಡ ಕವಿಗಳ ಹೆಸರು ಹೇಳುತ್ತಲೊ ಬೀಗುತ್ತಿದ್ದರೆ ಅವರಿಗೆ ನನ್ನ ಆಟೋಟ ಗೊತ್ತಾಗಿಯೋ ಏನೊ ಅವರೂ ಎಂದಿನಂತೆ ಮುಖದಲ್ಲೆ ನಕ್ಕು ಪ್ರತಿಯಾಗಿ “ಹಲೊ ನಮಸ್ತೆ ಎಲ್ಲಿ ಕಾಣ್ತಾ ಇಲ್ಲ ಬನ್ನಿ ಆಫೀಸ್ಗೆ. ಏನಾದ್ರು ಬರಿತಾ ಇದಿರಾ..?” ಅಂತ ಹಾಗೇ ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು. ಒಂದೆರಡು ಸಲ ಅವರೇ ಪೋಸ್ಟ್ ಹಂಚುವುದು, ವಿಡೊ, ಓಲ್ಡೇಜ್ ಪೆನ್ಸನ್ ಕೊಡುತ್ತಿದ್ದುದು ಕಂಡು ಬಂತು. ಕೆಲವು ಸಲ ಯಾರ‌್ಯಾರೊ ಬಂದು ಬಂದು ಲೆಟರ್ ಹಂಚುವುದು ಇತ್ತು. ಇವತ್ತು ಒಬ್ಬ ಪೋಸ್ಟ್ ಮ್ಯಾನ್ ಅಂತ ಬಂದರೆ ನಾಳೆ ಇನ್ನೊಬ್ಬ ಪೋಸ್ಟ್ ಮ್ಯಾನ್ ಬಂದು “ನಾನು ಟೆಪ್ರವರಿ ಕಂಡ್ರಿ ಬೇರೆ ಬರ‌್ತಾರೆ ನಂಗೊತ್ತಿಲ್ಲ ಪೆನ್ಸನ್ ಬಗ್ಗೆ ಹೋಗಿ ಪೋಸ್ಟ್ ಮೇಷ್ಟ್ರುನೇ ಕೇಳಿ” ಅಂತ ತಾನು ಏನು ಪೋಸ್ಟ್ ಕೊಡಬೇಕಿತ್ತೊ ಕೊಟ್ಟು ಭರ‌್ರಂತ ಹೋಗ್ತಿದ್ದ. ಆ ಮೇಲೆ ಈತರ ಟೆಂಪ್ರವರಿ ಅಂತ ಬಂದವರು ಕುಂಟ ಸಿದ್ದಪ್ಪನ ಮನೆ ಮುಂದೆ ನಿಂತು ಒಂದಷ್ಟು ಅಡ್ರೆಸ್ ಕೇಳಿ ಯಾರು ಸಿಕ್ಕುತ್ತಾರೊ ಅವರಿಗೆ ಕೊಟ್ಟು ಅಕಸ್ಮಾತ್ ಆ ಅಡ್ರೆಸ್ ಮಂದಿ ಸಿಗದಿದ್ದಾಗ ‘ಸರಿ ಬರ‌್ತಿನಿ’ ಅಂತ ಸೈಕಲ್ ಏರಿ ಹೋದ ವಿಚಾರವೂ ಊರನ್ನು ಬಳಸುತ್ತ ಗಂಗಣ್ಣನ ಗುಣಗಾನ ನಡೀತಿತ್ತು.

ಇನ್ನೊಂದು ಏನಪ್ಪ ಅಂದ್ರೆ ವಯಸ್ಸಾದ ಕೊರಕಬಲ್ಲಯ್ಯ, ಕಾಡ್ಮಾದಮ್ಮ, ಚಿಕ್ಕೂಸಯ್ಯ, ನರಸಮ್ಮ, ಅರಸಮ್ಮ ಮಾದಮ್ಮ ಇನ್ನು ಯಾರ‌್ಯಾರೊ ಪಂಚಾಯ್ತಿ ಆಫೀಸತ್ರನೊ, ಬಾವಿಕಟ್ಟೆಲೊ, ಶಿಶುವಾರದತ್ರನೊ ಇಲ್ಲ, ಅವರವರ ಜಗುಲಿಲಿ ಕುಂತೊ ನಿಂತೊ ಬಂದ ಬಂದವರೊಂದಿಗೆ “ಅಯ್ಯೊ ಈಚೀಚ್ಗ ಅದೆಲ್ಯ ಅಂವ ಗಂಗನೇ ಬತ್ತಿಲ್ಲ. ನಂಗ ದುಡ್ಬಂದು ಏಡ್ ತಿಂಗ್ಳೇ ಆಯ್ತು. ಸಣ್ಮುಕಪ್ಪೋರು ಕೇಳುದ್ರ ಏನೂ ಹೇಳೊಲ್ರು. ದುಡ್ಡು ಬಂದಿದ್ದ ಸಾಮಿ ಅಂದ್ರ ‘ಬಂದ್ರೆ ನಾನ್ ಇಟ್ಕೊತಿನಾ ಕೊಡದಿಲ್ವ.. ನಾಳ ಬನ್ನಿ’ ಅಂತರ. ಇತ್ತಗ ಕಳ ಕಂಬ್ಳನು ಇಲ್ಲ, ದವ್ಸ ದಾನ್ಯನು ಇಲ್ಲ. ದುಡ್ಡಾರು ಬಂದಿದ್ರ ಹೆಂಗ್ಯಾ ಕತ ಆಗದು.. ಅಂವ ಬಂದಿದ್ರ ತಂದಾರೂ ಕೊಡಂವ. ಹಾಳ್ ಮುಂಡ ಮಗ ಗಂಗ ಅದೆಲ್ ಅಡಿಕಂಡಿದ್ದನ..” ಅಂತ ನಟಿನಟಿ ಮಾತಾಡುತ್ತ ಬೈಯುತ್ತ ನೆನೆಯುತ್ತ “ಅಯ್ಯೊ ನಾವಿಂಗ ಅಂತಿಂವಿ ಅವ್ನಿಗೆ ಏನಾಗಿದ್ದೊ ಏನ.. ಮನ್ಸ ಅಂದ್ಮೇಲ ಕಾಯ್ಲಿ ಕಸ ಬರಲ್ವ.. ಒಂಜಿನನು ರಜ ಹಾಕ್ದಂವ ಉಸರಿಲ್ಲ ಅಂತಂದಂವ ಈಗ ರಜ ಹಾಕನ ಅಂದ್ರ ಅದೇನ ಆಗಿರ‌್ಬೇಕು” ಅಂತ ಮಾತು ಮಾತು… ಬರೀ ಅವನ ಬಗ್ಗೆನೇ ಮಾತು.

ಈ ಮಾತು ಊರಿನ ಬೀದಿಬೀದಿಲು ಇತ್ತು. ಹಿಂಗೆ ಮಾತಾಡ್ತ ಮಾತಾಡ್ತ ಗಂಗಣ್ಣ ನಂಜನಗೂಡಿಗೆ ವರ್ಗ ಆಗಿರ ಸುದ್ದಿ ಕುಂಟ ಸಿದ್ದಪ್ಪನ ಅಂಗಳದಿಂಲೇ ಬಂತು.

“ಅಯ್ಯೊ.. ವರ್ಗ ಆಗಿದ್ದನು..? ಇದ ನಂಬಕಾದ್ದ..? ವಳ್ಳಿ ಮನ್ಸ. ಏನೇ ಆದ್ರು ನಾಂವು ಕುಂತಿರ ಜಾಗುಕ್ಕೆ ತಂದು ಕೊಡ್ತಿದ್ನ.. ಇನ್ಯಾರಪ್ಪ ನಮ್ ಕಸ್ಟುಕ್ಕ ಸುಕುಕ್ಕ ಆಗವ್ರು.. ಅದ್ಯಾರ್ ಕಣ್ಬಿತ್ತಾ ಏನಾ.. ಛೇ ಎಂತ ಕೆಲ್ಸ ಆಯ್ತು… ಒಂದೇಡ್ ತಿಂಗ್ಳಿಂದ ಅದ್ಕೆ ಅಂವ ಕಾಣಿ ಆಗನ..” ಅಂತ ಲೊಚಗುಟ್ಟಿದರು.

ಅವತ್ತು ಯಾತಕ್ಕೊ ಷಣ್ಮುಖಸ್ವಾಮಿ ಭೇಟಿಯಾಯ್ತು. ಕ್ವಾಟ್ರಸ್ ಐಬಿ ಹತ್ರ. ಅವರು ತುಟಿ ಕುಣಿಸುತ್ತ ಹಾಡು ಗುನುಗುತ್ತ ಹೋಗುತ್ತಿದ್ದರು. ಕೈ ನೀಡಿ ತಡೆದು “ನಮಸ್ಕಾರ ಸಾರ್” ಅಂದೆ. ಅವರು ಛಕ್ಕಂತ ಸೈಕಲ್ ನಿಲ್ಲಿಸಿದರು. ಗಂಗಣ್ಣನ ಬಗ್ಗೆ ಮಾತಾಡಬೇಕೆನಿಸಿತು.

“ಊರಲ್ಲಿ ಗುಲ್ಲೆಬ್ಬಿ ಕುಂತುದ ಸಾ. ಗಂಗಣ್ಣ ಇದ್ದಿದ್ದರೆ ಚೆನ್ನಾಗಿತ್ತು ಅಂತ” ಅಂದೆ. ಅವರು “ನನ್ನದೇನು ಇಲ್ಲ. ನೀವೆ ಇದ್ರಲ್ಲ ಎಂಕ್ವೈರಿ ದಿನ. ನಾನು ಇಲ್ಲೀ ತನಕ ಎಷ್ಟು ಸಹಿಸಿಕೊಂಡು ಹೊಂದಿಕೊಂಡು ಹೋದೆ ಗೊತ್ತಾ..? ನೀವು ನಂಬ್ತಿರೊ ಬಿಡ್ತಿರೊ ಗೊತ್ತಿಲ್ಲ.. ಒಂದ್ಸಲ ಹಿಂಗೆ ಯಾವ್ದೊ ವಿಚಾರಕ್ಕೆ ಪ್ರಶ್ನೆ ಮಾಡ್ದೆ. ಅವ್ನ ಒಳ್ಳೇದಕ್ಕೆ. ಅವ್ನು ನನಗೇ ಏನೇನೊ ಅಂದ. ಅದನ್ನ ನನ್ನ ಬಾಯಲ್ಲಿ ಹೇಳೋಕೆ ಬೇಸರ ಆಗುತ್ತೆ ಇವ್ರೆ.. ಕೆಟ್ಟಕೆಟ್ಟದಾಗಿ ಬೈಯೋದಾ. ನಾನು ಇಲ್ಲಿತಂಕ ಅವ್ನು ಮಾಡೊ ಎಲ್ಲ ಎಡವಟ್ಟುಗಳನ್ನು ಯಾರಿಗೂ ಹೇಳ್ದೆ, ನೋಡಿ.. ನಿಮ್ಮಣ್ಣನ ಅಪಾಯಿಂಟ್ಮೆಂಟ್ ಆರ್ಡರ್ ಪೋಸ್ಟ್ ಏನ್ಮಾಡಿದ್ದ ಅಂತ.. ಆಗ್ಲೂ, ಪಾಪ ತಬ್ಬಲಿ ಅಂತ, ಗಿರಿಮಲ್ಲಯ್ಯ ಹೇಳಿದಾರೆ ಅಂತ, ಮೇಲಾಗಿ ಅವ್ರಪ್ಪ ಪೋಸ್ಟ್ ಮೇಷ್ಟ್ರು ಆಗಿದ್ರಲ್ಲ ಬೆಟ್ಟಯ್ಯ ಶೆಟ್ಟಿನು ನಮ್ಮಪ್ಪನು ಬೆಸ್ಟ್ ಫ್ರೆಂಡಾಗಿ ನಮ್ಗೂ ಅದು ಇದು ಉಪಕಾರ ಮಾಡಿದಾರೆ ಬಿಡು ಇಂವ ನನ್ ತಮ್ಮ ಇದ್ದಾಗೆ ಅಲ್ವ ಅಂತ ಎಲ್ಲನು ಗಂಟ್ಲಲ್ಲೇ ನುಂಕೊಂಡು ನಂಜೊತೆ ಇರುಸ್ಕೊಂಡು ಬಂದೆ. ಈಗ ನೀವೆಲ್ಲ ‘ಅವ್ನೇ ಇದ್ರ ಸರಿ’ ಅಂದ್ರ ನಾನೇನೂ ಮಾಡ ಸ್ಥಿತಿಲಿ ಇಲ್ಲ. ಅದು ನನ್ನ ಕೈಲಿ ಇಲ್ಲ. ಒಂದ್ಕೆಲ್ಸ ಮಾಡಿ ನೀವೆಲ್ಲ ನರಸೀಪುರ ಹೆಡ್ಡಾಫೀಸಿಗೆ ಒಂದು, ನಂಜನಗೂಡು ಡಿವಿಜನ್ ಆಫೀಸ್ಗೆ ಒಂದು, ಸೆಪರೇಟಾಗಿ ‘ಬೈರಾಪುರ ಸಬ್ ಪೋಸ್ಟಾಫೀಸಿಗೆ ಹಿಂದೆ ಇದ್ದ ಪೋಸ್ಟ್ ಮ್ಯಾನ್ ಗಂಗಶೆಟ್ಟಿಯನ್ನೆ ಮುಂದುವರಿಸಿ ಇದುವರೆಗೆ ಅವರ ಸೇವೆ ತೃಪ್ತಿದಾಯಕ’ ಅಂತ ನಿಮ್ಮೂರು ಯಜಮಾನ್ರು ಯುವಕ ಸಂಘದವ್ರು ಲೆಟರೆಡ್ಡಲ್ಲಿ ಒಂದು ರಿಕ್ವೆಸ್ಟ್ ಕೊಡಿ. ಅವ್ರು ಅದೇನೇಳ್ತಾರೆ ನೋಡಿ. ನೀವು ರಿಕ್ವೆಸ್ಟ್ ಲೆಟರ್ ಕೊಟ್ರೆ ನಾನೂ ಹೇಳ್ತಿನಪ್ಪ. ಅವನ ಬಗ್ಗೆ ನಂದೇನು ತಕರಾರಿಲ್ಲ” ಅಂತ ಸೈಕಲ್ ಏರಿ ಹೋದರು.

ಸಂಜೆಯ ಮೊಕ್ಕತ್ತಲ ಬೆನ್ನಿಗೆ ನಾನು, ಕಾಂತು, ಕ್ಯಾಕ್ಡಿ ಇನ್ನೊಂದಷ್ಟು ಊರುಡುಗರು ಹೊಳೆಕಡೆ ಹೋಗುತ್ತಿದ್ದೆವು. ಆಗ ನಮ್ಮ ಕೇರಿಯ ಮೇಲಿದ್ದ ಒಕ್ಕಲಗೇರಿಯ ಲಿಂಗಾಯಿತರ ಅಮ್ಮಣಪ್ಪ ಅಗಸರ ಕತ್ರಪ್ಪ ಒಕ್ಕಲಿಗರ ಚೌಡಪ್ಪ ಹೊಳೆ ಕಡೆಯಿಂದ ಎಮ್ಮೆ ಮೇಯಿಸಿಕೊಂಡು ಧೂಳೇಳಿಸಿಕೊಂಡು ಎಮ್ಮೆ ಅಟ್ಟಿಕೊಂಡು ತಲೆ ಮೇಲೆ ಟವಲ್ ಎಳೆದುಕೊಂಡು ಮಾತಾಡ್ತ ಹೋಗುತ್ತಿದ್ದರು. ಚೆನ್ನಯ್ಯನ ಗುಡಿ ಬಾವಿಕಟ್ಟೆ ಮೇಲೆ ಕುಂತಿದ್ದ ನೂಲಯ್ಯ, ಕೂರರಾಚಯ್ಯ, ಎಲಿಗಡಯ್ಯ “ಅಪ್ಪೊ ಎಮ್ಮ ಮೇಯ್ಸಾಯ್ತ..ನಿಮ್ದೆ ಸರಿ ಬುಡಿ” ಅಂತ ಸಪ್ಪಗೆ ನಗಲಾರದ ನಗುನ ಮುಖದಲ್ಲಿ ತಂದುಕೊಂಡು ನಗುತ್ತ ಕೂಗಿ ಮಾತಾಡಿಸಿದರು. ಅವರು ಮೂವರು ಇವರ ಮಾತಿನ ಕೂಗಿಗೆ ನಿಂತರು. ಎಮ್ಮೆಗಳ ಕಾಲೆಳೆತದಿಂದ ಎದ್ದ ಧೂಳು ಮಾಯಲಿ ಅಂತ ಸೈಡಿಗೆ ನಿಂತು ಮುಖ ಮುಚ್ಚಿಕೊಂಡೆವು. “ಏನಪ್ಪ ನಮ್ಮದು ಸರಿ..? ತಿಂಗ ತಿಂಗ ದುಡ್ಡೇಣಿಸ್ಕಂಡು ಕಾಪಿ ಟಿ ಕುಡ್ಕಂಡು ಬಟ್ಟಲಿರ ಎಲ್ಲಾ ಕೂರಾಗೀರಾ ಸೋಸ್ಕಂಡು ಕುಕ್ಕಂಡು ಆರಾಮಾಗಿ ಕುಂತು ನಿಂತು ಮನಿಕತಿದ್ದರಿ ನಿಮ್ಗಿಂತು ನಮ್ಮದು ಸರಿನ..? ನಮ್ದಾ, ಬೆಳೆಗೆದ್ರ ಹಾಲು ಕರುದು ತಂಗ್ಳು ತಿಂದು ಎಮ್ಮನೆಲ್ಲ ಅಟ್ಕಂಡು ಸಂದೇನು ಈ ಉರಿಯ ಬಿಸುಲ್ಲಿ ಮೇವ ಮೇಯಿಸ್ಕಂಡು ನಾವು ಒಣಿಕಂಡು ಬತ್ತಿಂವಿ ನಮ್ಮದೆಂಗೆ ಸರಿ..?” ಅಂತ ಅಮ್ಮಣ್ಣಪ್ಪ ಗೇಲಿ ಮಾಡಿ ನಗಾಡಿದ. ಅದಕ್ಕೆ ಕೂರರಾಚಯ್ಯ “ಅಪ್ಪೊ ನೀವಾದ್ರ ಹಾಲ್ಮಾರಿ ಜಿನ ನಾಕ್ಕಾಸ್ ನೋಡ್ತಿದ್ದರಿ. ಮನಲಿ ಅಸ್ಟಾ ಇಸ್ಟಾ ಅದ ಬೇಯಿಸ್ಕ ತಿಂತಿದರಿ. ನಾವೆಲ್ಲಿ ತಿನ್ನಗಿದ್ದು.. ನಾಕ್ಕಾಸ್ ನೋಡಗಿದ್ದು..? ಮಗ ಸೊಸ ಕೊಟ್ಟರಾ..? ಮನಿಕಳಕೆ ಜಾಗ ಕೊಡಲ್ಲ ಜೊತ್ಗ ಒತ್ತೊತ್ಗ ಅಪಟಿ ಇಪಟಿನು ಇಟ್ಕೊಡಲ್ಲ.. ಅಂತದ್ರಲ್ಲಿ ಯಾರ್ ಏನ್ ಕೊಟ್ಟರು ನಮ್ಗ..? ಏಡ್ ಮೂರ್ ತಿಂಗ್ಳಾಯ್ತು ದುಡ್ ಬಂದು. ಇದ ಕಾಣ್ದೆ ನನ್ ಸೊಸ್ಮುಂಡ ತಟ್ಗ ಇಟ್ಟಾಗಿ ಗುಳುಕ್ ಮುರ‌್ದು ಬಾಯ್ಗಾಕ ಹೊತ್ಲಿ ‘ದುಡ್ ಬತ್ತಾ ದುಡ್ ಬತ್ತಾ’ ಅಂತ ಅದದ್ನೆ ಯೇಳ್ತಾ ಕಣಿ ಆಡ್ತಳ..’ ಅಂತ ಕಣ್ಣೀರ್ ಕಚ್ಚಿಕೊಂಡ. ಅಮ್ಮಣಪ್ಪ ” ಅದ್ಯಾಕ ಗಂಗ್ ಬಂದಿಲ್ವ.. ಅದ್ಯಾಕ ಏಡ್ ತಿಂಗ್ಳಿಂದ ಬಂದಿಲ್ಲ..? ಪೋಸ್ಟಾಫೀಸ್ಗೆ ವೋಗಿ ಕೇಳ್ ಬಾ” ಅಂತ ನಮ್ಮ ಕಡೆ ತಿರುಗಿ “ಲೌ ಕುಸ್ಗಳೇ ಅದೇನ ವಯ್ಸಾದವ್ರಿಗ ಆ ಗಂಗುನ್ಗ ಯೇಳಿ ಈಸ್ಕೊಡಕಿಲ್ವ..” ಅಂದರು. ಪಕ್ಕದಲ್ಲೆ ಇದ್ದ ಚೌಡಪ್ಪ “ಅಯ್ಯೋ ನಿಂಗೊತ್ತಿಲ್ವ. ಆ ಗಂಗಣ್ಣುಂಗೆ ವರ್ಗ ಆಯ್ತು ನಂಜುನಗೂಡ್ಗ. ಈಗ ಬೇರೆಯವ್ರು ಟೆಪ್ರರಿಗ ಬಂದರ. ಅವ್ರಿಗೆ ಸರ‌್ಯಾಗಿ ಗೊತ್ತಾಯ್ತಿಲ್ಲ. ವಾರಗಂಟ ಇರುತ್ತ ತಕ್ಕಬೋದು. ತಕ್ಕಳ್ನಿಲ್ಲ ಅಂದ್ರ ವಾಪಸ್ಸು ಗೌರ್ಮೆಂಟ್ಗೇ ಹೋಯ್ತುದ ಅಸ್ಟೆ. ಎಲ್ಲ ಹೋಗಿ ನಿಧಾನ್ಸಿ ಕೇಳಿ ತಕ್ಕಬೇಕು” ಅಂದ.

ನಾನು ಗಂಗಣ್ಣನ ಬಗ್ಗೆ ಒಂದಷ್ಟು ಹೇಳಿದೆ. ಅವರೂ ಲೊಚಗುಟ್ಟುತ್ತ “ಏನಾ.. ಪೆದ್ನ ಗಿದ್ನ ಅಂವಿದ್ರ ಎಲ್ರುಗು ಒಂದು ನಂಬ್ಕ ಅನ್ನದು ಇತ್ತು. ಮನ್ಗ ಒಬ್ಬ ಮಗ ಇದ್ದಂಗಿ ಇದ್ದು ತಂದು ಪಂದು ಕೊಡ್ತಿದ್ನ. ಅದ್ಯಾರ ನೋಡು ವರ್ಗ ಮಾಡಿ ಎಂತ ಕೆಲ್ಸ ಮಾಡರ..? ಒಳ್ಳೇದ್ಕ ಕಾಲ ಇಲ್ಲ ಕಣಾ..” ಅಂತ ಹೋದರು. ಧೂಳೇಳಿಸಿಕೊಂಡು ಹೋಗುತ್ತಿದ್ದ ಎಮ್ಮೆಗಳು ಒಕ್ಕಲಗೇರಿ ಬೀದಿ ತುದಿ ಮುಟ್ಟಿದ್ದವು.

                         -------

ಅದಾದ ಮೇಲೆ ದಿನಾ ದಿನಾ ಕಳಿತಾ ಯಾರೇ ಪೋಸ್ಟ್ ಮ್ಯಾನ್ ಅಂತ ಬಂದು ಪೋಸ್ಟೋ, ವಿಡೊ ಪೆನ್ಸನ್ನೊ ಓಲ್ಡೇಜ್ ಪೆನ್ಸನ್ನೊ ಮತ್ತಿನ್ನೊಂದೊ ಕೊಡುತ್ತಿದ್ದರೆ ‘ಗಂಗ್ ಕೊಟ್ನಾ..?’ ಅಂತಂತ ಪೋಸ್ಟ್ ಮ್ಯಾನ್ ಸುಳಿವಿಲ್ಲದಿದ್ದಾಗ “ಗಂಗಾ ಬಂದಿದ್ನಾ..?” ಅನ್ನೋರು. ಹಾಗೆ ಕೇಳ್ತಾ ಕೇಳ್ತ ‘ಬಾಯಿಲ್ಲಿ ಗಂಗುಂತವ್ಕ ವೋಗ್ಬರಂವ್ ದುಡ್ಗಿಡ್ ಬಂದಿದ್ದ ನೋಡಂವ್’ ಅಂತ ಅವನಲ್ಲದಿದ್ದರು ರೂಢಿಯಂತೆ ಎಲ್ಲರ ಬಾಯಲ್ಲಿ ಗಂಗ, ಗಂಗಣ್ಣ, ಪೋಸ್ಟ್ ಮ್ಯಾನು ಅನ್ನೋದು ಉಳಿದಿತ್ತು.

ಅದೇ ಹೊತ್ತಿಗೆ ನನ್ನ ಕಿರಿ ಅಣ್ಣನಿಗೆ ಮದುವೆ ಮಾತುಕತೆ ಆಗಿ ನಂಜನಗೂಡಿಂದ ಹೆಣ್ಣು ಒಪ್ಪಿ ಬಂದಿದ್ದರು. ಒಂದೆರಡು ಸಲ ನಂಜನಗೂಡು ತೇರಿಗೆ ಅಂತ ಅಪ್ಪ ಅವ್ವನ ಜೊತೆ ಆಗಾಗ ಹೋಗುತ್ತಿದ್ದುದು ಬಿಟ್ಟರೆ ನೆಂಟರಿಲ್ಲದ ನಂಜನಗೂಡಿಗೆ ಯಾತಕ್ಕೆ ಹೋಗೋದು?

ಒಂದ್ಸಲ ಹಿಂಗೆ ನಂಜನಗೂಡು ದೇವಸ್ಥಾನದಲ್ಲಿ ರಾಜ್ ಕುಮಾರ್ ದು “ಅನುರಾಗ ಅರಳಿತು” ಪಿಚ್ಚರ್ ಶೂಟಿಂಗ್ ನಡೀತಿತ್ತು ಅಂತ ನರಸೀಪುರದ ನರಸೀಪುರದ ಜನ ಜಾತ್ರೆ ತರ ಶೂಟಿಂಗ್ ನೋಡೋಕೆ ಹೋಗ್ತಿದ್ರು. ನನಗೂ ರಾಜ್ ಕುಮಾರ್ ನೋಡುವ ಹುಮ್ಮಸ್ಸಾಗಿ ಮನೆಯವರಿಗೆ ಹೇಳದೆ ಗಸಗಿ ಕಾಂತು ಕುಮಾರನಿಗೆ ಹೇಳಿ ಕಾಸು ರೆಡಿ ಮಾಡಿಕೊಂಡು ಬಸ್ಸತ್ತಿ ನಂಜನಗೂಡಿನ ದೇವಸ್ಥಾನದತ್ತಿರ ಇಳಿದು ಬರಿ ಮೈಲಿದ್ದ ಕೈ ಮುಗಿತಾ ಆ್ಯಕ್ಟಿಂಗ್ ಮಾಡ್ತಿದ್ದ ರಾಜ್ ಕುಮಾರ್ ನೋಡ್ಕಂಡು ವಾಪಸ್ ಬರುವಾಗ ಶೂಟಿಂಗ್ ನೂಕು ನುಗ್ಗಲಲ್ಲಿ ನನ್ನ ಅಂಗಿ ಹರಿದೋಗಿತ್ತು. ಊರಿಗೆ ಬಂದಾಗ ಕತ್ತಲ ಕವಿದು ಮಲಗೊ ಹೊತ್ತು. ಜೂಲು ಜೂಲಾಗಿದ್ದ ಅಂಗಿ. ಗೇದು ಸಾಕಾಗಿ ಸುಸ್ತಾಗಿ ಮಲಗೊ ಹೊತ್ತಲ್ಲಿ ಹರಿದ ಅಂಗಿ ನೋಡಿದ ಅಪ್ಪ ಸಿಟ್ಟಾಗಿ ಬೈದಿದ್ದ. ನಾನು ಏನೂ ಮಾತಾಡದೆ ಮೆಲ್ಲಗೆ ಕೋಣೆಗೋಗಿ ಉಂಡು ಮಲಗಿ, ಆ ಮಲಗಿದ ಮಗ್ಗುಲಲ್ಲಿ ರಾಜ್ ಕುಮಾರ್ ನೋಡಿದ್ದ ಖುಷಿಗೆ ಅಪ್ಪ ಬೈದಿದ್ದು ಏನೂ ಅಲ್ಲ ಅನ್ನೊ ತರ ರಾಜ್ ಕುಮಾರ್ ನೋಡಿದ ಗುಂಗಲ್ಲೆ ಒಂದಷ್ಟು ದಿನ ಕಳೆದು ರಾತ್ರಿ ಕನಸಲ್ಲು ನಂಜನಗೂಡು ನಂಜುಂಡೇಶ್ವರ, ರಾಜ್ ಕುಮಾರ್ ಆ್ಯಕ್ಟಿಂಗು ಕಣ್ಮುಂದೆ ಬರ‌್ತಿತ್ತು.

ಈಗ ಅದೇ ನಂಜನಗೂಡಲ್ಲಿ ಅಣ್ಣನಿಗೆ ಹೆಣ್ಣು ಒಪ್ಪಿ ಬಂದಿದ್ದರಿಂದ ಇದೇ ನೆಪದಲ್ಲಿ ಅಲ್ಲಿ ಗಂಗಣ್ಣನ್ನ ನೋಡಬಹುದೆಂದುಕೊಂಡು ಪೋಸ್ಟಾಫೀಸಿಗೆ ಹೋಗಿ “ಸಾರ್ ನಮಸ್ಕಾರ, ನಂಜನಗೂಡಲ್ಲಿ ಪೋಸ್ಟಾಫೀಸ್ ಎಲ್ಲಿ ಬರುತ್ತೆ” ಅಂತ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಕೇಳಿದೆ. ಅವರು ಯಾಕಪ್ಪ? ಏನಕ್ಕೆ? ಏನಾದ್ರು ಆಗ್ಬೇಕಾ ಹೇಳಿ ಅಂತೆಲ್ಲ ಕೇಳಿ ನಾನು ಮರು ಮಾತಾಡದಿದ್ದಾಗ ಕೊನೆಗೆ ಅವರೇ ಬಸ್ಟ್ಯಾಂಡ್ ರೋಡು ಬಾಳೆಮಂಡಿ, ರೈಲ್ವೆ ಟ್ರ್ಯಾಕು, ಹಳೆಬೀದಿ, ಹುಲ್ಲಳ್ಳಿ ರಸ್ತೆ ಅಂತೆಲ್ಲ ಅಡ್ರೆಸ್ ಹೇಳಿದರು. ನನಗೆ ಕನ್ಫ್ಯೂಸ್ ಆಯ್ತು. ಮತ್ತೆ ಕೇಳಿದರೆ – ಏನಪ್ಪ ಇಂವ ಕವಿಯಾಗಿ ಗೊತ್ತಿರ ಊರ ಅಡ್ರೆಸ್ನ ಹಿಂಗೆಲ್ಲ ಕೇಳ್ತಿಯ ಗೊತ್ತಾಗಲ್ವ? ಅಂತರ ಅಂತ ಈತರ ಆದ್ರೆ ನನ್ನ ದಡ್ಡ ಪೆದ್ದ ಅಂದುಕೊಳ್ಳುವ ಹಿಂಜರಿಕೆಯಿಂದ ಅದನ್ನು ತೋರಿಸಿಕೊಳ್ಳದೆ “ಗೊತ್ತಾಯ್ತು ಸಾರ್. ಸರಿ ಸಾರ್” ಅಂತ ಬಿರಬಿರನೆ ನಡೆದೆ.

ಇದಾಗಿ ನಂಜನಗೂಡು ಅತ್ತಿಗೆ ಮನೆಗೆ ಹೋದಾಗಲೆಲ್ಲ ಊಟ ತಿಂಡಿ ಮಾಡಿಕೊಂಡು ಪಿಚ್ಚರಿಗೆ ಹೋಗೋ ನೆಪದಲ್ಲಿ ಇಡೀ ನಂಜನಗೂಡು ಸುತ್ತಿ ಅಲ್ಲಿನ ಪೋಸ್ಟಾಫೀಸ್ ಹತ್ರ ಹೋಗಿ ಇಣುಕಿ ಕೇಳಿದರೆ ‘ಇಲ್ಲಿ ಯಾವ ಗಂಗನು ಇಲ್ಲ ಪುಂಗನು ಇಲ್ಲ ಕಣಪ್ಪ.. ಅಲ್ಲೊಂದು ಸಬ್ ಇದೆ ಅಲ್ಲೋಗಿ ನೋಡು’ ಅಂದರೆ ಅವರಿವರನ್ನು ಕೇಳುತ್ತಾ ಹೋದರೆ ಅಲ್ಲಿ ಯಾವ ಸಬ್ ಪೋಸ್ಟಾಫೀಸೂ ನನ್ನ ಕಣ್ಣಿಗೆ ಕಾಣದೆ ಗಂಗಣ್ಣನನ್ನು ಕಾಣದೆ ವಾಪಸ್ ಬಂದ ನೆನಪು ಈಗಲೂ ಇದೆ.

ಈಗ ಗಂಗಣ್ಣನನ್ನು ನೋಡಿ ಹಿಂದಿನಿಂದ ಅವನ ಭುಜ ಹಿಡಿದಾಗ ಗಾಬರಿ ಬಿದ್ದು ನೋಡುತ್ತಿದ್ದವನಿಗೆ ‘ಗಂಗಣ್ಣ ಹೆಂಗಿದ್ದಿಯ.. ಎಷ್ಟ್ ದಿನ ಆಯ್ತು ನಿನ್ನ ನೋಡಿ.. ಈಗೆಲ್ಲಿದ್ದಿಯ..ರಿಟೈರ್ ಆಗಿ ಎಷ್ಟೊರ್ಷ ಆಯ್ರು.. ಗೊತ್ತಾಗ್ಲಿಲ್ವ ನಾನು’ ಅಂದೆ ಅವನು ನೋಡುತ್ತಿದ್ದ ರೀತಿಗೆ. ಅವನು ಒಂದು ಗಳಿಗೆ ಏನೂ ಮಾತಾಡದೆ ಆಮೇಲೆ ಮಾಮೂಲಿನಂತೆ “ಅಯ್ಯೋ ಯಾರಪ್ಪಾ ನೀನು.. ಏ ಬಿಡಪ್ಪ ನಾನ್ ಹೋಗ್ಬೇಕು’ ಅಂತ ಕೈ ಬಿಡಿಸಿಕೊಳ್ಳಲು ಕೊಸರಿದ. ಹಾಗೆ ಹಿಂದೆ ಮುಂದೆ ನೋಡಿಕೊಂಡ. ಜೇಬು ನೋಡಿಕೊಂಡ. ನಾನು ಬಲವಂತ ಮಾಡಿ “ಅದೆ ಗಂಗಣ್ಣ ಬೈರಾಪುರ. ಗೊತ್ತಿಲ್ವ..? ನೀನು ಕೆಲ್ಸ ಮಾಡ್ತಿದೆಲ್ಲ ನಮ್ಮೂರ್ ಪೋಸ್ಟಾಫೀಸಲ್ಲಿ.. ನೀನು ಪೋಸ್ಟ್ ಮ್ಯಾನ್ ಆಗಿದ್ದೆಲ್ವ’ ಅಂದೆ. ಆಗ ‘ಆ್ಞ..’ ಅನ್ನೊ ನರಳಿಕೆ ದನಿಯಲ್ಲಿ ಅದೇನೊ ಜ್ಞಾಪಿಸಿಕೊಳುವವನಂತೆ ತಲೆ ಎತ್ತಿ ನನ್ನ ಮುಖವನ್ನೇ ನೋಡುತ್ತ ‘ಓ.. ನೀನಾ..” ಅಂದ ಅಷ್ಟೆ. ಮುಂದೇನೂ ಮಾತಾಡದೆ “ಅಯ್ಯೋ ಬಿಡಪ್ಪ ತಮ್ಮ ನಾನ್ ಹೋಗ್ಬೇಕು. ಕರೋನ ಬೇರೆ ಇನ್ನ ಎಲ್ಲ ಕಡೆ ಇದಿಯಂತೆ ಬಂದ್ಬುಟ್ರೆ ಕಷ್ಟ..ನಂದು ಮಾಸ್ಕು ಹೊಳೆ ಕಡೆ ಹೋಗಿದ್ನಲ್ಲ ಅದೆಲ್ಲೊ ಅಲ್ಲೆ ಬಿಟ್ಬಂದೆ ಅನ್ಸುತ್ತೆ.. ಹೋದದ್ದು ಹೋಯ್ತು ಏನ್ಮಾಡೋದು ಅದ್ಕೆ ಅದನ್ನ ತಗೊಬೇಕು ಆಸ್ಪತ್ರೆತವು ಮೆಡಿಕಲ್ ಶಾಪ್ಗೆ ಹೋಗ್ಬೇಕು ಬಿಡಪ್ಪ” ಅಂತ ಮತ್ತೆ ಕೊಸರಿದ. ನನಗೂ ಡ್ಯೂಟಿಗೆ ಟೈಮ್ ಆಗ್ತಾ ಇತ್ತು. ನಾನು ನನ್ನ ಮುಖದಲ್ಲಿದ್ದ ಮಾಸ್ಕ್ ತೆಗೆದು ಆತುರದಲ್ಲಿ ಬ್ಯಾಗಿಂದ ಮೊಬೈಲ್ ಎತ್ತಿ ಸೆಲ್ಫಿ ಆನ್ ಮಾಡಿ ‘ಗಂಗ ಒಂದ್ ಫೋಟೋ ತಗೊತಿನಿ’ ಅಂದೆ. ಅವನು “ಅಯ್ಯೋ.. ಏ ಅದೆಲ್ಲ ಏನೂ ಬೇಡ ಬಿಡಪ್ಪ ನೀನು ನಂಗ ಅದರಲ್ಲ ಇಷ್ಟ ಇಲ್ಲ’ ಅಂತ ಕೈ ಕೊಸರಿ ತಿರುಗುವಾಗ ನಾನೂ ಸರ‌್ರನೆ ಸೆಲ್ಫಿ ಕ್ಲಿಕ್ಕಿಸಿ ನೋಡೋ ಅಷ್ಟರಲ್ಲಿ ಅವನು ಸರಸರನೆ ಹೆಜ್ಜೆ ಹಾಕುತ್ತ ಕಾರು ಬೈಕುಗಳ ಸಂದಿಯಲ್ಲಿ ತೂರುತ್ತಾ ಸಾಗುತ್ತ ಹೋದದ್ದ ತಿರುಗಿ ತಿರುಗಿ ನೋಡುತ್ತ ಮೈಸೂರಿಗೆ ಹೋಗುವ ನೆಕ್ಸ್ಟ್ ಬಸ್ ಗಾಗಿ ಬಸ್ಡ್ಯಾಂಡ್ ಕಡೆ ನಡೆಯುತ್ತ ಕ್ಲಿಕ್ಕಿಸಿದ ಫೋಟೋ ನೋಡಿದೆ. ಅದರಲ್ಲಿ ನಾನಿಲ್ಲದೆ ಅವನ ಎದೆಯ ಭಾಗದಿಂದ ಮೇಲ್ಮುಖವಾಗಿ ವಿದ್ಯುತ್ ಕಂಬ ಸೇರಿದಂತೆ ಆಯ್ದು ಹೋದ ತಂತಿ ಸಹಿತ ಸಿನಿಮಾದಲ್ಲಿ ಆ್ಯಕ್ಟರ್ ಒಬ್ಬ ದಿಗಿಲಾಗಿ ನೋಡುವ ದೃಶ್ಯದಂತೆ ಕ್ಕಿಕ್ಕಿಸುವ ವೇಳೆ ಮೊಬೈಲ್ ಶೇಕ್ ಆಗಿ ಅವನೊಬ್ಬನೇ ಇರುವಂತೆ ಫೋಟೋ ಕ್ಕಿಕ್ಕಾಗಿತ್ತು.

-ಎಂ.ಜವರಾಜ್
(ಮುಂದುವರಿಯುವುದು)


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x