ಮಕ್ಕಳನ್ನು ಶಾಲೆಗೆ ಕರೆತರುವ ವಾಹನಗಳ ಸುಮಾರು ೨೨ ಚಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ, ಈ ಚಾಲಕರು ಕರ್ತವ್ಯ ನಿರ್ವಹಣೆ ಮಾಡುವಾಗ ಮದ್ಯಪಾನ ಮಾಡಿದ್ದರು ಎನ್ನುವ ಆರೋಪ. ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇದೆ ಎನ್ನುವ ಹುಸಿ ಇ-ಮೇಲ್ ಶಾಲೆಗಳಿಗೆ ಬಂದಾಗ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದಿದ್ದರಿಂದ ಗಾಬರಿಯಾದ ಪೋಷಕರು ಶಾಲೆಗಳತ್ತ ಓಡಿದ್ದರು. ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಹೊಡೆದಾಡಿದರು. ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತು ಮತ್ತ್ತು ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಇಂತಹ ಇನ್ನೂ ಹಲವಾರು ಘಟನೆಗಳು ಶಾಲೆಗಳಲ್ಲಿ ನಡೆದ ಉದಾಹರಣೆಗಳಿವೆ. ಇಂತಹ ಘಟನೆ ನಡೆದಾಗ ಯಾರು ಹೊಣೆಗಾರರು? ಇಂತಹ ಸಂದಿಗ್ದ ಪರಿಸ್ಥಿತಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹೇಗೆ?
ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ “ಮಕ್ಕಳ ರಕ್ಷಣಾ ನೀತಿ” ಇರಲೇಬೇಕೆಂದು ೨೦೧೬ ರಲ್ಲಿಯೇ “ಶಿಕ್ಷಣ ಸಂಸ್ಥೆಗಳಿಗಾಗಿ ಮಕ್ಕಳ ರಕ್ಷಣಾ ನೀತಿ”ಯನ್ನು ಸರ್ಕಾರ ಸಿದ್ಧಪಡಿಸಿದೆ ಹಾಗೂ ಪ್ರತಿ ಶಾಲೆಯಲ್ಲಿಯೂ ಈ ನಿಯಮಗಳ ಬಗ್ಗೆ ಶಾಲಾ ಸಿಬ್ಬಂದಿಗೆ ತರಬೇತಿ ನೀಡಿ, ಅವರು ಈ ನಿಯಮಗಳನ್ನು ಒಪ್ಪಿಕೊಂಡು ಸಹಿ ಮಾಡಿ ನಿಯಮ ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ಹಲವಾರು ವಿಷಯ ತಜ್ಞರು ಈ ಮಕ್ಕಳ ರಕ್ಷಣಾ ನಿಯಮಗಳನ್ನು ಸಿದ್ಧಪಡಿಸಲು ಶ್ರಮಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂದಾಳತ್ವದಲ್ಲಿ ಸಿದ್ದವಾದ ಈ ಮಕ್ಕಳ ರಕ್ಷಣಾ ನೀತಿಯನ್ನು ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಬರುವ ಪ್ರತಿ ಶಾಲೆಯಲ್ಲೂ ಮಕ್ಕಳ ರಕ್ಷಣಾ ನಿಯಗಳನ್ನು ಜಾರಿ ಮಾಡಲು ಉತ್ಸಾಹ ತೋರದಿರುವುದು, ಮೇಲ್ವಿಚಾರಣೆ ಮಾಡದಿರುವುದು ಹಲವಾರು ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ಗೆ ನಮ್ಮ ದೇಶ ೧೯೯೨ರಲ್ಲಿ ಸಹಿ ಮಾಡಿ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಎತ್ತಿ ಹಿಡಿಯುವುದಾಗಿ ವಿಶ್ವದೆದುರು ಬದ್ಧವಾಗಿದೆ. ಈ ಒಡಂಬಡಿಕೆಯ ಪರಿಚ್ಚೇದ ೨೬ರ ಪ್ರಕಾರ ಮಕ್ಕಳಿಗೆ ಸಾಮಾಜಿಕ ಭದ್ರತೆಯನ್ನು ನೀಡಬೇಕಾಗಿದೆ. ಶಾಲೆಗಳು ಮಕ್ಕಳ ಸ್ನೇಹಿಯಾಗಿದ್ದು ಮಕ್ಕಳು ಭಯ ಮುಕ್ತ ವಾತಾವರಣದಲ್ಲಿ ಶಿಕ್ಷಣ ಪಡೆಯಬೇಕೆಂದು ಪರಿಚ್ಚೇದ ೨೮ ತಿಳಿಸಿದೆ. ಯಾವುದೇ ದೇಶ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿ ಒಪ್ಪಿಕೊಂಡರೆ ಆ ದೇಶ ತನ್ನ ಸಂವಿದಾನದಲ್ಲಿ, ಕಾನೂನುಗಳಲ್ಲಿ, ನೀತಿ ನಿಯಮಗಳಲ್ಲಿ ಮಕ್ಕಳ ಹಕ್ಕುಗಳನ್ನು ಅಳವಡಿಸಿಕೊಳ್ಳಬೇಕು. ಇದರ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ನಿಯಮವನ್ನು ಸಿದ್ಧಪಡಿಸಲಾಗಿದೆ.
ಇಂದಿನ ದಿನದಲ್ಲಿ ಪ್ರತಿಯೊಬ್ಬ ಶಿಕ್ಷಕನೂ ಮಕ್ಕಳ ರಕ್ಷಣೆಗೆ ಇರುವ ಪ್ರಮುಖ ಕಾಯಿದೆಗಳಾದ ‘ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ೨೦೦೯, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ೨೦೧೨, ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ ೨೦೧೫’ ಇವೇ ಮೊದಲಾದ ಕಾಯ್ದೆಗಳ ವಿಚಾರಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಈ ಎಲ್ಲಾ ಕಾಯಿದೆಗಳ ವಿಚಾರಗಳು ಈ ರಕ್ಷಣಾ ನಿಯಮಗಳಲ್ಲಿ ಅಡಕವಾಗಿದೆ. ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಅಳವಡಿಸಿಕೊಳ್ಳುವುದರಿಂದ ಮಕ್ಕಳ ರಕ್ಷಣೆಗಿಂತಲೂ ಮಿಗಿಲಾಗಿ ಶಿಕ್ಷಕರ ರಕ್ಷಣೆೆಯಾಗುತ್ತದೆ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದಿದೆ ೨೦೦೯ರ ವಿಭಾಗ ೧೭ ಶಾಲೆಗಳಲ್ಲಿ ಶಿಸ್ತಿನ ಹೆಸರಿನಲ್ಲಿ ಮಕ್ಕಳನ್ನು ಶಿಕ್ಷಿಸುವುದನ್ನು ನಿಷೇಧಿಸಿದೆ. ಹಾಗೆಯೆ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯಿದೆ ೨೦೧೫ ಮಕ್ಕಳ ಮೇಲಿನ ಕ್ರೌರ್ಯವನ್ನು ನಿಷೇಧಿಸಿದೆ. ಮಕ್ಕಳಿಗೆ ಶಿಕ್ಷೆ ನೀಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಕಾನೂನುಗಳ ವಿಚಾರ ಅನೇಕ ಶಿಕ್ಷಕರಿಗೆ ಇನ್ನೂ ತಿಳಿದಿಲ್ಲ, ಇನ್ನೂ ಶಿಕ್ಷೆ ನೀಡದೆ ಇದ್ದರೆ ಮಕ್ಕಳು ಕಲಿಯುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲೇ ಇದ್ದಾರೆ. ಹಾಗಾಗಿ ಶಾಲೆಗಳಲ್ಲಿ ಶಿಕ್ಷೆಯ ಪ್ರಕರಣಗಳು ಜರುಗಿ ಶಿಕ್ಷಕರು ಕಾನೂನು ಕ್ರಮವನ್ನು ಎದುರಿಸುತ್ತಿದ್ದಾರೆ. ಶಿಕ್ಷೆ ನೀಡದೆ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಹಲವಾರು ತಜ್ಞರ ಸಹಕಾರದಿಂದ ಶಿಕ್ಷಕರಿಗಾಗಿ ಕೈಪಿಡಿಯನ್ನು ಹೊರತಂದಿದೆ. ಆದರೆ ಈ ಕೈಪಿಡಿಯ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಅರಿವೇ ಇಲ್ಲ. ಮಕ್ಕಳ ರಕ್ಷಣಾ ನೀತಿ ಈ ವಿಚಾರಕ್ಕೆ ಒತ್ತು ನೀಡಿದೆ. ನಮ್ಮ ರಾಜ್ಯದಲ್ಲಿ ನ್ಯಾಯಾಲಯದ ಮುಂದೆ ಹೆಚ್ಚಿನ ಪೋಕ್ಸೋ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ ಮತ್ತು ಈ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಶಾಲಾ ಶಿಕ್ಷಕರದ್ದೇ ಅಗಿವೆ. ಪೋಕ್ಸೋ ಕಾನೂನಿನ ಸೂಕ್ಷ್ಮಗಳನ್ನು ಅರಿತುಕೊಳ್ಳದ ಶಿಕ್ಷಕರು ಶಿಶುಪೀಡಕರ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದ್ದಾರೆ. ಮಕ್ಕಳ ರಕ್ಷಣಾ ನೀತಿಯು ಶಿಕ್ಷಕರಿಗೆ ಮಕ್ಕಳ ರಕ್ಷಣೆಯ ಕುರಿತಾಗಿರುವ ಕಾನೂನಿನ ಮಹತ್ವವನ್ನು ತಿಳಿಸುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯು ಅನಿವಾರ್ಯವಾಗಿದೆ. ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಚುರುಕಾಗುತ್ತಿದ್ದಾರೆ, ಅವರಿಗೆ ಅರಿವಿಲ್ಲದೆ ಅನೇಕ ಅಪಾಯಗಳಿಗೆ ಒಳಗಾಗುತ್ತಿದ್ದಾರೆ. ಹದಿನೆಂಟು ತುಂಬದ ಶಾಲಾ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಅಪಾಯಗಳಿಗೆ ಒಳಗಾಗುವುದನ್ನು ತಡೆಯುವ ಹೊಣೆ ಶಾಲಾ ಶಿಕ್ಷಕರಿಗೆ ಇದೆ. ಕಳೆದ ತಿಂಗಳು ಒಂದು ಶಾಲೆಯಲ್ಲಿ ನಡೆದ ಘಟನೆ ಮಕ್ಕಳ ರಕ್ಷಣಾ ನೀತಿಯ ಅವಶ್ಯಕತೆಯನ್ನು ತೋರಿಸುತ್ತದೆ. ಆ ಶಾಲೆಯ ಒಂಬತ್ತನೇ ತರಗತಿಯ ಮಕ್ಕಳು ವಾಟ್ಸಪ್ ಗುಂಪು ಮಾಡಿಕೊಂಡು ಮೊದಲು ಪಾಠದ ವಿಚಾರದ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಕ್ರಮೇಣ ಜೋಕುಗಳು ನಂತರ ರೀಲ್ಸ್ಗಳು ಪ್ರಾರಂಭವಾಗಿ ಶಾಲೆಯ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲವಾಗಿ ಸಂದೇಶಗಳು ಬರತೊಡಗಿದವು. ವಿದ್ಯಾರ್ಥಿನಿಯರ ಫೋಟೋ ತೆಗೆದು ಗುಂಪಿನಲ್ಲಿ ಹಂಚಿಕೊಂಡು ಅಶ್ಲೀಲವಾಗಿ ಕಾಮೆಂಟ್ ಮಾಡುವುದು ನಡೆಯುತಿತ್ತು. ಈ ವಿಚಾರ ತಿಳಿದ ವಿದ್ಯಾರ್ಥಿನಿಯರು ಶಿಕ್ಷಕರ ಗಮನಕ್ಕೆ ಈ ವಿಚಾರವನ್ನು ತಂದರು. ಇದು ವಿದ್ಯಾರ್ಥಿಗಳ ವಯಕ್ತಿಕ ವಿಚಾರವೇ? ಶಾಲೆಗೆ ಸಂಬಂಧಿಸಿದ ವಿಚಾರವೇ? ಮಕ್ಕಳನ್ನು ಶಿಕ್ಷಿಸಬೇಕೇ? ಏನು ಮಾಡಬೇಕು? ಎಂದು ಗೊಂದಲದಲ್ಲಿ ಇದ್ದ ಶಿಕ್ಷಕರಿಗೆ ನಮ್ಮ ಸಂಸ್ಥೆ ಚೈಲ್ಡ್ ರೈಟ್ಸ್ ಟ್ರಸ್ಟ್ ಮೂಲಕ ಮಾಹಿತಿ ನೀಡಿ ಆ ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳಲು ಸಹಕಾರ ನೀಡಿದೆವು. ಮಕ್ಕಳ ರಕ್ಷಣಾ ನೀತಿ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳ ಒಡಂಬಡಿಕೆ ವಿಚಾರಗಳನ್ನು ತರಬೇತಿ ನೀಡಿ ಶಾಲೆಯು ಮಕ್ಕಳ ಸ್ನೇಹಿಯಾಗಲು ಸಹಕಾರ ನೀಡಿದೆವು.
ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಓದುವ ಹದಿಹರೆಯದ ಮಕ್ಕಳನ್ನು ಗೆಳೆಯರಂತೆ ನೋಡಿಕೊಂಡು ಅವರಿಗೆ ಶಿಕ್ಷಣ ನೀಡುವುದು ಶಿಕ್ಷಕರಿಗೆ ದೊಡ್ಡ ಸವಾಲು. ದೇಹದಲ್ಲಿನ ಮತ್ತು ಮನಸ್ಸಿನಲ್ಲಿನ ಬದಲಾವಣೆಗಳ ಬಗ್ಗೆ ಈ ಹದಿಹರೆಯದ ಮಕ್ಕಳಿಗೆ ಅರಿವು ಮೂಡಿಸಿ ಮಾರ್ಗದರ್ಶನ ಮಾಡುವುದು ಶಾಲೆಯ ಜವಾಬ್ದಾರಿಯಾಗಿರುತ್ತದೆ. ಈ ವಯಸ್ಸಿನ ಮಕ್ಕಳು ಪ್ರೀತಿ, ಪ್ರೇಮದಲ್ಲಿ ಬಿದ್ದು ಶಿಕ್ಷಣ ಮರೆತರೆ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರಲೇಬೇಕಾಗುತ್ತದೆ. ಮಕ್ಕಳು ಪ್ರೀತಿಯಲ್ಲಿ ಬಿದ್ದರೆ ಅದು ಅವರ ವಯಕ್ತಿಕ ವಿಚಾರವಾದರೂ ಓಡಿ ಹೋಗುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅವರ ಬದುಕನ್ನೇ ಹಾಳು ಮಾಡಿಬಿಡುತ್ತದೆ. ನಮ್ಮ ರಾಜ್ಯದಲ್ಲಿ ಬಾಲಗರ್ಭಿಣ ಯ ಸಂಖ್ಯೆ ಗಮನಿಸಿದಾಗ ಈ ಮಕ್ಕಳಿಗೆ ಕಾನೂನಿನ ಅರಿವು ನೀಡಬೇಕಾದ್ದು ಅಗತ್ಯವೆನಿಸುತ್ತದೆ. ಇಂತಹ ವಿಚಾರಗಳು ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನಿಯಮ ಇಲ್ಲದಿದ್ದರೆ ಶಾಲೆಯ ಮೇಲೆ ಮತ್ತು ಮಕ್ಕಳ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ.
ಶಾಲೆಗಳು ಮಕ್ಕಳ ರಕ್ಷಣಾ ನಿಯಮಗಳನ್ನು ಅಳವಡಿಸಿಕೊಂಡರೆ ಹಲವಾರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ರಕ್ಷಣೆ ದೊರೆಯುತ್ತದೆ ಮತ್ತು ಅಪಾಯ ಮುಕ್ತ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಾರೆ.
-ನಾಗಸಿಂಹ ಜಿ ರಾವ್
Nice information thank you