ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 10)”: ಎಂ.ಜವರಾಜ್

-೧೦-
ನಮ್ಮ ಮುಳ್ಳೂರು ಚಿಕ್ಕಿಯ ತಂಗಿ ಮಗಳು ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇವತ್ತೊ ನಾಳೆಯೊ ನಾಳಿದ್ದೊ ಆಗುವ ಹೆರಿಗೆ ನೋವು. ಡಾಕ್ಟರು ಯಾವುದನ್ನು ಸರಿಯಾಗಿ ಹೇಳದೆ ನಾಳೆ ಬನ್ನಿ ರಾತ್ರಿ ಬನ್ನಿ ಬೆಳಗ್ಗೆ ಬನ್ನಿ ಇದು ಹೆರಿಗೆ ನೋವಲ್ಲ ಅಂತ ಏನೇನೊ ಸಮಜಾಯಿಸಿ ನೀಡುತ್ತಿದ್ದರು. ಮುಳ್ಳೂರು ಚಿಕ್ಕಿಗೆ ತಂಗಿ ಮಗಳ ಕಷ್ಟ ನೋಡಲಾರದೆ ಬಿಕ್ಕಿ ಬಿಕ್ಕಿ ಅಳುತ್ತ ನನ್ನನ್ನು ಕರೆದು ಬೆಂಗಳೂರಿನ ತಂಗಿಗು ತಂಗಿ ಗಂಡನಿಗೂ ಅವರ ಮೂವರು ಗಂಡು ಮಕ್ಳಳಿಗೂ, ಮುಳ್ಳೂರಿನ ತನ್ನವ್ವಳಿಗೂ “ಎರ‌್ಗ ನೋವಾಗದ ಬ್ಯಾಗ್ನೆ ಬನ್ನಿ ಅಂತ ಪೋಸ್ಟಾಫೀಸ್ಗೋಗಿ ಸಣ್ಮುಕಪ್ಪೋರ‌್ಗ ಯೇಳಿ ಟೆಲಿಗ್ರಾಂ ಮಾಡಪ್ಪ” ಅಂತ ದುಡ್ಡು ಕೊಟ್ಟಳು. ನಾನು ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ನೋಡಿ ಮಾತಾಡಿಸಿ ತಿಂಗಳಾಗಿತ್ತು.

ಮೂಗೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿತ್ತು. ಅದಕ್ಕು ಮುನ್ನ ಅಧ್ಯಕ್ಷರ ಕಾರ್ಯ ವೈಖರಿಗೆ ಬೇಸತ್ತು ನನ್ನ ಕೆಲವು ತಕರಾರು ದಾಖಲಿಸಿ ಪತ್ರಿಕೆಗು ಕಳುಹಿಸಿ ಅದು ಪ್ರಕಟವೂ ನಾನಷ್ಟೆ ಬೀಗಿದ್ದು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಆ ತಕರಾರು ಪತ್ರಿಕಾ ಪ್ರಕಟಣೆ ಪೋಸ್ಟ್ ಮೇಷ್ಟ್ರಿಗೆ ಗೊತ್ತೊ ಏನೊ.. ಗೊತ್ತಿದ್ದರೆ ನನ್ನೊಂದಿಗೆ ಮುಖವಿಟ್ಟು ಮಾತಾಡಲಾರರು ಎಂದುಕೊಂಡು ಟೆಲಿಗ್ರಾಂ ಮಾಡಲು ತಿರುಮಕೂಡಲು ನಡು ಮಧ್ಯೆ ಇದ್ದ ಪೋಸ್ಟ್ ಆಫೀಸ್ ಮುಂದೆ ಹೋದಾಗ ಗಂಗಣ್ಣ ಪೋಸ್ಟ್ ಚೀಲ ಒದರಿ ಆ ಚೀಲವನ್ನು ತಿಕದ ಕುಂಡಿಗೆ ಹಾಕೊಂಡು ಸುರಿದ ಪೋಸ್ಟುಗಳನ್ನು ಡಿವೈಡ್ ಮಾಡಿ ಇಡುತ್ತ ನನ್ನತ್ತ ನೋಡಿ “ಓ ಬಾರಪ್ಪ. ಎಲ್ಲೋಗಿದ್ದೆ ಇಷ್ಟು ದಿನಾ.. ನೋಡಿ ಸಾ ನಿಮ್ ಶಿಷ್ಯ ಬಂದ” ಅಂದ. ಷಣ್ಮುಖಸ್ವಾಮಿ “ಯಾರಪ್ಪ ನನ್ ಶಿಷ್ಯ” ಅಂತ ಸಂಗೀತ ಗುನುಗುತ್ತ ಬಾಗಿಲಾಚೆ ಇಣುಕಿ “ಬನ್ನಿ ಬನ್ನಿ.. ಎಲ್ಲೊಗಿದ್ರಿ ನಾಪತ್ತೆ ಆಗ್ಬುಟ್ಟಿದ್ರಿ..? ಕವಿಗೋಷ್ಠಿಲಿ ನಿಮ್ಮ ಹೆಸರನ್ನ ಮೂರು ಬಾರಿ ಕರುದ್ರು.. ಬಂದಿದ್ರೆ ನಿಮ್ಮ ಐಡೆಂಟಿಟಿ ಇರದು” ಅಂತ ಕುರ್ಚಿ ಎಳೆದು ಕೊಟ್ಟರು. ಇದರಿಂದ ನನ್ನ ವಿರೋಧ, ಪತ್ರಿಕಾ ಪ್ರಕಟಣೆ ಯಾವುದೂ ಗೊತ್ತಿಲ್ಲ ಅಂತ ತಿಳಿದು ಅದನ್ನೇ ಮೆಯಿಂಟೆನ್ ಮಾಡಿ “ಸರ್ ಏನಿಲ್ಲ ಎಕ್ಸಾಮು ಅದು ಇದು ಬರೊಕಾಗ್ನಿಲ್ಲ..” ಅಂತ ಹುಸಿನಗೆ ಬೀರಿ “ಒಂದು ಟೆಲಿಗ್ರಾಂ ಮಾಡ್ಬೇಕು ಸರ್” ಅಂದೆ. ಹೌದಾ ಕೊಡಿ ಅಂತ ಟೆಲಿಗ್ರಾಂ ಫಾರಂ ತೆಗೆದು ಫಿಲ್ ಮಾಡಿ “ಏನ್ ವಿಷಯ ಹೇಳಿ” ಅಂದರು. ನಾನು ನಮ್ಮ ಮುಳ್ಳೂರು ಚಿಕ್ಕಿ ಹೇಳಿದ್ದ ಹೆರಿಗೆ ನೋವಿನ ವಿಚಾರವನ್ನು ಒಂದೇ ಸಮ ಇಷ್ಟುದ್ದು ಹೇಳಿದೆ. ಅವರು ಎಲ್ಲವನ್ನು ಗುಣಿಸಿ ಒಂದು ಸಾಲಿನಲ್ಲಿ ಇಂಗ್ಲೀಷಲ್ಲಿ ಒಂದು ವೇಸ್ಟ್ ಪೇಪರಲ್ಲಿ ಬರೆದು ಪದಗಳನ್ನು ಎಣಿಸಿ ಪದ ಜಾಸ್ತಿ ಇದ್ದರೆ ಒಡೆದು ಕಮ್ಮಿ ಪದ ಇಟ್ಟು ಲೆಕ್ಕ ಹಾಕಿ ಇಷ್ಟು ಅಂದರು. ನಾನು ದುಡ್ಡು ಕೊಟ್ಟೆ. ಅವರು ಅದನ್ನು ಟೆಲಿಗ್ರಾಂ ಫಾರಂ ಗೆ ನೀಟಾಗಿ ಬರೆದು ಡೇಟಾಗಿ ಸಿಂಗಲ್ ಸೈನ್ ಮಾಡಿ ಫೋನ್ ರಿಸೀವರ್ ಎತ್ತಿ ಡಯಲ್ ಮಾಡಿ ಅತ್ತ ತಲುಪಬೇಕಾದ ಬೆಂಗಳೂರು ಪೋಸ್ಟಾಫೀಸಿಗೆ ಮೆಸೇಜ್ ತಲುಪಿಸಿದರು.

ಆಗ ಇತ್ತ ಬಾಗಿಲಾಚೆ “ಹಲೋ” ಅನ್ನೊ ದನಿ ಕೇಳ್ತು. ಗಂಗಣ್ಣ “ಯಾರೂ” ಅಂದ. ಬಂದವರು “ಮೇಷ್ಡ್ರು ಇದಾರೇನಪ್ಪ” ಅಂದರು. ಗಂಗಣ್ಣ “ಸಾರ್ ಯಾರೊ ಬಂದಿದಾರೆ” ಅಂದ. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ನನಗೆ ಟೆಲಿಗ್ರಾಂ ಮಾಡಿದ್ದ ರಿಸಿಪ್ಟ್ ಕೊಟ್ಟು ಬಾಗಿಲತ್ತ ಇಣುಕಿದರು. “ಅರೆ, ಬಾ.. ಬಾರಪ್ಪ ಏನು ಇಷ್ಟು ದೂರ ಪಾದಾರ್ಪಣೆ..? ನಾನು ನಿರೀಕ್ಷೆನೆ ಮಾಡಿರಲಿಲ್ಲ” ಅಂತ ನನಗೆ ಬೆಂಟಿದರು. ನಾನು ಅರ್ಥೈಸಿಕೊಂಡು ಎದ್ದು ನಿಂತೆ. ಅವರು ನಾನು ಕುಂತಿದ್ದ ಕುರ್ಚಿಯಲ್ಲಿ ಕುಂತರು. ಅವರು ನಂಜನಗೂಡು ಸಬ್ ಡಿವಿಜ಼ನ್ ಪೋಸ್ಟಲ್ ಆಫೀಸರ್ ಎ.ಎಸ್.ಪಿ. ಸುಬ್ರಾಯ ಶೆಟ್ಟರು. ಷಣ್ಮಖಸ್ವಾಮಿಯವರ ಒಂದು ಕಾಲದ ಕಾಜೇಜು, ಹಾಸ್ಟೆಲ್ ಮೇಟು, ಫ್ರೆಂಡು. ಅವರನ್ನು ನನಗೆ ನನ್ನನ್ನು ಅವರಿಗೆ ಪರಿಚಯಿಸಿದರು. ಈಗ ಅವರು ಫ್ರೆಂಡಾಗಿ ಬಂದಿರದೆ ವಿಭಾಗವಾರು ಸಬ್ ಪೋಸ್ಟಾಫೀಸ್ ವರ್ಕ್ ಎಂಕ್ವೈರಿಗೆ ಬಂದಿದ್ದರು. ಷಣ್ಮುಖಸ್ವಾಮಿ ಕೆಲವು ಟಪಾಲು, ಬುಕ್ಕು, ಡೈಲಿ ಮೆಯಿಂಟನೆನ್ಸ್ ರಿಜಿಸ್ಟರ್ ಚೆಕ್ ಮಾಡಿ ಗಂಗಣ್ಣನ ಕಡೆ ತಿರುಗಿ “ಬಾರಪ್ಪ ಇಲ್ಲಿ ನಿನ್ನ ಡೈಲಿ ರಿಜಿಸ್ಟರ್ ಎಂಟ್ರಿ ಬುಕ್ಸ್ ಕೊಡಪ್ಪ ಇಲ್ಲಿ” ಅಂದರು. ಗಂಗಣ್ಣ “ಅಯ್ಯೋ ಅಲ್ಲಿದೆಯಲ್ಲ ಸಾರ್” ಅಂದ. ಅವರು ಸಾವಧಾನವಾಗಿ “ಬಾರಪ್ಪ ಇಲ್ಲಿ” ಅಂತ ಅಂದರು. ಷಣ್ಮುಖಸ್ವಾಮಿ “ಏಯ್ ಅವ್ರು ಏನ್ ಕೇಳ್ತ ಇದಾರೆ ಗೊತ್ತಾ.. ಅವ್ರು ಯಾರ್ ಗೊತ್ತಾ ಎ.ಎಸ್.ಪಿ ಸಾಹೇಬ್ರು. ಎಂಕ್ವೈರಿಗೆ ಬಂದಿರೋದು.. ” ಅಂದ ಮೇಲೆ ಒಳಗೆ ಬಂದು ಅದೇನೊ ಹುಡುಕಿ ತಡಕಿ ಪೋಸ್ಟ್ ಮ್ಯಾನ್ ಡಿಸ್ಪ್ಯಾಚ್ ರಿಜಿಸ್ಟರ್ ಕೊಟ್ಟ. ಸುಬ್ರಾಯ ಶೆಟ್ಟರು ಅದನ್ನು ತೆರೆದು ನೋಡ್ತಾ ಸುಸ್ತು ಹೊಡೆದಿದ್ದರು. ಈ ಗಂಗಣ್ಣನ ಬಗ್ಗೆ ನರಸೀಪುರ ಹೆಡ್ ಪೋಸ್ಟಾಫೀಸಲ್ಲಿ ಅಲ್ಲಿನ ಸಿಬ್ಬಂದಿ ತಿಳಿಸಿದ್ದರು. ಗಂಗಣ್ಣ ಪೋಸ್ಟ್ ಪುರಾಣ ಬೈರಾಪುರ ಪೋಸ್ಟ್ ಆಫೀಸ್ ಪೋಸ್ಟ್ ರಗಳೆ ಎಲ್ಲವನ್ನು ತಲೆಗೆ ತುಂಬಿಕೊಂಡು ಬಂದಿದ್ದರಿಂದ ನೇರವಾಗಿ ನೋಡಿ ತಣ್ಣಗೆ ರಿಜಿಸ್ಟರ್ ತೆಗೆದು ಪ್ರತಿ ಪುಟಗಖ ಕಡೆ ಕಣ್ಣಾಡಿಸಿದರು. ಯಾವುದೂ ಕರೆಕ್ಟ್ ಇರಲಿಲ್ಲ. ಹೇಗೋ ಪೇಜು ತುಂಬಿಸಿದ್ದ. ಅವನೇ ಬರೆದಿದ್ದನ್ನು ತೋರಿಸಿ ಇದೇನಪ್ಪ ಅಂದರು. ಸುಮ್ಮನೆ ನಿಂತು “ಅಲ್ಲೆ ಇದಿಯಲ್ಲ ಸಾರ್ ಬರ‌್ದಿದ್ದಿನಲ್ಲ ” ಅಂದ. ಸುಬ್ರಾಯಶೆಟ್ಟರು “ಏನಪ್ಪ ನಿಮ್ ಪೋಸ್ಟ್ ಮನ್ ಕತೆ.. ಇವುನ್ನ ಇಟ್ಟುಕೊಂಡು ಹೇಗಪ್ಪ ಮಾಡ್ತ ಇದ್ದಿಯಾ.. ಇಲ್ಲೆ ಹಿಂಗೆ ಮನೆ ಕಡೆ ಹೆಂಗೆ ಮಕ್ಳೆಷ್ಟು ಏನ್ಮಾಡ್ತಿದ್ದಾರೆ” ಅಂತೆಲ್ಲ ಕೇಳಿದರು.. ಷಣ್ಮುಖಸ್ವಾಮಿ ಗಂಗಣ್ಣನ ಪುರಾಣ ಬಿಚ್ಚಿದರು.

“ಇವರಪ್ಪ ಪೋಸ್ಟ್ ಮೇಷ್ಟ್ರು ಆಗಿದ್ರು ನರಸೀಪುರ ಹೆಡ್ಡಾಫೀಸಲ್ಲೆ. ಬೆಳಕವಾಡಿ ಬೆಟ್ಟಯ್ಯ ಶೆಟ್ಟಿ ಅಂತ. ಇಂವ ಹೆಂಗೋ ತಳ್ಳಾಡಿಕೊಂಡು ಏಳೆಂಟು ವರ್ಷ ಆದ್ಮೇಲೆ ಎಸ್ಸೆಲ್ಸಿ ಮಾಡ್ದ. ಆದ್ರೂ ಏನೇನೂ ಬರ‌್ದು. ಅದೆಂಗ್ ಎಸೆಲ್ಸಿ ಪಾಸ್ ಮಾಡಿದ್ನೊ. ನಮ್ಮಪ್ಪ ಊರೂರು ಸುತ್ತಿ ನಾಟಕ ಅದು ಇದು ಅಂತ ಮಾಡ್ತ ಇದ್ರು. ಅದರ ದೆಸೆಲೆ ಇವರಪ್ಪ ಬೆಟ್ಟಯ್ಯ ಶೆಟ್ಟಿ ಪರಿಚಯವಾಗಿ ಕ್ಲೋಸ್ ಆಗಿದ್ರು. ನಮ್ದೂ ಕಷ್ಟದ ಕುಟುಂಬ ಕಣಪ್ಪ. ಎಷ್ಟೊ ಸಲ ರಾತ್ರಿ ಊಟನು ಇಲ್ದೆ ಮಲಗಿ ಎದ್ದದ್ದಿದೆ. ನಮ್ಮೂರು ಕೇತಳ್ಳಿ ಗೊತ್ತಲ್ವ.. ? ನಾನು ಮಗುವಾಗಿದ್ದಾಗ ನಮ್ಮ ಅಜ್ಜಿ ತಾತ ನನ್ನ ಎರಡೂ ಕೈಗೆ ಚಿನ್ನದ ಬಂಧಿ ಅಂತ ಮಾಡ್ಸಿದ್ರು. ಅದು ಬಾಳ ಚೆನ್ನಾಗಿ ಕಾಣ್ತಿತ್ತು. ಊರಲ್ಲಿ ಕೈಗೆ ಚಿನ್ನ ಹಾಕೊಂಡಿರೊ ಕೂಸು ಅಂದ್ರೆ ನಾನೆ ಅಂತ ಮನೆ ಮಾತಾಗಿತ್ತು. ಅದು ಒಂಥರಾ ಸಂಭ್ರಮ ಆದ್ರೆ ಇನ್ನೊಂದು ಕಷ್ಟ ಏನಂದ್ರೆ ಆಗ ಅಪ್ಪನಿಗೆ ಎಲ್ಲೂ ನಾಟಕ ಸಿಕ್ದೆ ಕೆಲ್ಸನು ಇಲ್ದೆ ಬರೀ ಉಪವಾಸ. ಅಪ್ಪನಿಗೆ ವಿಧಿ ಇಲ್ದೆ ಒಂದ್ಸಲ ಬೆಟ್ಟಯ್ಯ ಶೆಟ್ಟಿಗೆ ನನ್ನ ಕೈಲಿದ್ದ ಚಿನ್ನದ ಬಂಧಿನ ಕೊಟ್ಟು “ಇದ ಅಡ ಇಟ್ಕಂಡು ದುಡ್ಡಿದ್ರ ಕೊಟ್ಟರ‌್ಯಾ ದವ್ಸ ಧಾನ್ಯಕ್ಕ ವಸಿ ಮುಸ್ಕರ ಆಗದ. ನಾಟ್ಕಗೀಟ್ಕ ಆದಾಗ ಬುಡುಸ್ಕತಿನಿ” ಅಂತ ಅಂದಾಗ ಬೆಟ್ಟಯ್ಯ ಶೆಟ್ಟಿ ಆ ಚಿನ್ನದ ಬಂಧಿನ ಅಡ ಇಟ್ಟುಕೊಂಡು ದುಡ್ಡು ಕೊಟ್ಟಿದ್ರು. ಆ ಸಹಾಯನ ನಮ್ಮಪ್ಪ ಯಾವಾಗ್ಲೂ ಹೇಳ್ತಿದ್ದ. ಆದ್ರ ನಮ್ಮಪ್ಪನಿಗೆ ಆ ಚಿನ್ನದ ಬಂಧಿ ಬುಡುಸ್ಕೊಳಕೆ ಆಗ್ಲೇ ಇಲ್ಲ. ಅದು ಕೊನೆಗಂಟ ನಮ್ಮಪ್ಪನ್ನ ಕಾಡ್ತು. ಪಾಪ ಇವರಪ್ಪ ಬೆಟ್ಟಯ್ಯ ಶೆಟ್ಟಿಯವ್ರು ಅದನ್ನ ಬುಡುಸ್ಕೊಳ್ಳಿ ಅಂತಾನೆ ನೇರವಾಗಿ ಕೇಳುದ್ರೆ ಬೇಜಾರಾಗ್ತಾರೆ ಅಂತ ಯಾವುದ್ಯಾವುದೊ ನೆಪದಲ್ಲಿ ಚಿನ್ನದ ಬಂಧಿ ಬಗ್ಗೆ ನೆನಪಿಸ್ತಾ ಇದ್ರಂತ.. ಅದು ಅಪ್ಪನಿಗೆ ಅರ್ಥ ಆದ್ರು ಆ ಸುದ್ದಿ ಎತ್ತಿದಾಗೆಲ್ಲ ನಾಟಕದ ಕಥೆ ಹೇಳ್ತಾ ಡೈಲಾಗ್ ಹೇಳೊರಂತೆ. ಇವರಪ್ಪ ಆ ಡೈಲಾಗ್ ಕೇಳ್ತಾ ಕೇಳ್ತಾ ಬಂಧಿ ಸುದ್ದಿ ಬಿಟ್ಟು ಆಯ್ತು ಬತ್ತಿನಿ ಅಂತ ಬೆನ್ನು ತಟ್ಟಿ ಹೋಗ್ತಿದ್ರಂತ.. ಅಂತಾ ಒಳ್ಳೆ ವ್ಯಕ್ತಿ ಇವರಪ್ಪ.

ಅಂತಾ ಬೆಟ್ಟಯ್ಯ ಶೆಟ್ವ್ರಿಟಿಯವ್ರಿಗೆ ಇವುನ್ನು ಸೇರಿ ಮೂರು ಗಂಡು ಒಂದೆಣ್ಣು. ಎಲ್ರುದು ಒಂದು ಹಂತಕ್ಕೆ ಬಂತು. ಆದ್ರ ಈ ಗಂಗಶೆಟ್ಟಿದು ಆರಕ್ಕೆ ಏರದೆ ಮೂರಕ್ಕೆ ಇಳಿದೆ ಹೇಗೊ ಈ ಪೆದ್ದ ಮಗನಿಗೆ ಒಂದು ದಾರಿ ಮಾಡಬೇಕು ಅಂತ ಇರ ತನಕ ಭಂಗ ಪಟ್ರು ಏನೇನೂ ಆಗ್ದೆ ಸತ್ತಾಗ ನಮ್ ನರಸೀಪುರ ಹೆಡ್ಡಾಫಿಸಲ್ಲೆ ಗಿರಿ ಮಲ್ಲಯ್ಯ ಅಂತ ಸೀನಿಯರ್ ಸಿಗ್ನಲರ್ ಟೈಪಿಸ್ಟ್ ಆಫೀಸರ್ ಆಗಿದ್ರು. ಅವ್ರೂ ಬೆಟ್ಟಯ್ಯಶೆಟ್ಟಿನು ಕೆಲಸದಲ್ಲಿ ಅಡ್ಜೆಸ್ಟ್ ಮೆಂಟ್. ಚೆನ್ನಾಗಿ ಪೋಸ್ಟಾಫೀಸ್ ನಡೆಸಿಕೊಂಡು ಹೋದಂತವರು. ಅವ್ರು ಈ ಗಂಗಶೆಟ್ಟಿಗ ಯಾರ‌್ಯಾರಿಗೊ ಇನ್ಫ್ಲುಯೆನ್ಸ್ ಮಾಡಿ ಅವರಪ್ಪನ ಸೇವೆ ಗಣಿಸಿ ಹೇಗೊ ಆಫೀಸಿಗೆ ಹಾಕೊಂಡ್ರು. ಆದ್ರೆ ಇವನಿಗೆ ಮದ್ವೆ ಮಾತ್ರ ಆಗ್ನಿಲ್ಲ. ನಾವು ಏನೇನೊ ಪ್ರಯತ್ನ ಪಟ್ಟು ಏನ್ಮಾಡದು..? ಇವರ ಅಕ್ಕ ಯಳಂದೂರಿಗೆ ಮದ್ವೆ ಆಗಿ ಒಬ್ಬ ಮಗಳೂ ಇದ್ಲು. ಆ ಹುಡುಗಿನು ಓದಿಕೊಂಡಿತ್ತು. ಚೆನ್ನಾಗಿತ್ರು. ಇವರಪ್ಪ ಇದ್ದಾಗ್ಲೇ ಆ ಹುಡುಗಿನ ಕಟ್ಟಬೇಕು ಅಂದುಕೊಂಡಿದ್ರು. ಆದ್ರೆ ಆ ಹುಡುಗಿ ಇವನ್ನ ನೋಡಿ “ಇವನ್ನ ನನಗೆ ಕಟ್ಟುದ್ರೆ ನ್ಯಾಣ ಹಾಕೊತಿನಿ ನಾನ್ಯಾಕ್ ಮದ್ವ ಆಗ್ಲಿ ಅಂದ ಚೆಂದ ಇಲ್ದೆ ಇರ ಈ ಪೆದ್ದುನ್ನ..” ಅಂತ ಬೇಡ ಅಂದುಬಿಡ್ತು. ಆಮೇಲೆ ಎಲ್ಲಾದ್ರು ನೋಡಿ ಮಾಡೋಣ ಅಂತ ನಾನು ಗಿರಿಮಲ್ಲಯ್ಯ ಸಾಯೇಬ್ರು ಮಾತಾಡ್ತ ಇರಬೇಕಾದ್ರೆ.. ಡಾ.ಚೆನ್ನಮಲ್ಲಯ್ಯನವ್ರು ಗೊತ್ತಲ್ಲ ನರಸೀಪುರಕ್ಕೆ ಫೇಮಸ್ ಡಾಕ್ಟ್ರು. ಇವರಪ್ಪನಿಗೂ ಚೆನ್ನಾಗಿ ಗೊತ್ತು. ಅವ್ರೂ ಇವುನ್ನ ನೋಡಿ ಹೊಟ್ಟೆ ಉರಿದುಕೊಂಡು “ನೋಡಪ್ಪ ಇವನಿಗೆ ಮದ್ವೆ ಆದ್ರೆ ತಾಳಿ ತಕ್ಕೊಡೊ ಜವಾಬ್ದಾರಿ ನಂದು” ಅಂದ್ರು. ಗಿರಿಮಲ್ಲಯ್ಯ “ಊಟದ ಖರ್ಚು ನಂದು” ಅಂದ್ರು. ನಾನು ಕೇಳ್ತ ಕುಂತಿದ್ದವ್ನು “ಆಯ್ತು ಸರ್ ಛತ್ರದ ಖರ್ಚು ನಂದೇ ಆಗ್ಲಿ” ಅಂತ ಧೈರ್ಯ ಮಾಡಿ ಹೇಳಿ ಏನೋನೋ ಸರ್ಕಸ್ ಮಾಡುದ್ರು ಇವನ ಮದ್ವೆ ಅಂತು ಆಗ್ಲಿಲ್ಲ.

“ಇವನದು ಹೇಳ್ತಾ ಇದ್ರೆ ಒಂದು ಕಾದಂಬರಿನೆ ಬರಿಬಹುದು ಸುಬ್ರಾಯಪ್ಪ. ಕೇಳಿ ಇಲ್ಲಿ ಇನ್ನೊಂದು.. ಹೇಳುದ್ರೆ ನಗ್ತಿರಿ. ನೋಡಿ ನಂಗು ಬರ‌್ತಿದೆ, ಕೆಲ್ಸಕ್ಕೆ ಸೇರಿದ ಹೊಸದರಲ್ಲಿ ಒಂದು ಕೆಲ್ಸ ಆಯ್ತು. ಇವನಿಗೆ ಉಣ್ಣಕೆ ಉಡೋಕೆ ಮಲಗೋಕೆ ಎಲ್ಲೂ ಮನೆ ಸಿಗದೆ ಕೊನೆಗೆ ಚೌಡಯ್ಯನವ್ರ ಕಡೆಯವ್ರು ಹೆಂಗೊ ಇರಲಿ ಅಂತ ಹಳೇ ತಿರುಮಕೂಡಲಲ್ಲಿ ಜಗುಲಿಲಿ ಒಂದು ಚಿಕ್ಕ ರೂಮು ಕೊಟ್ಟರು. ಅವ್ನೇ ಅಡಿಗೆ ಮಾಡ್ಕೊತಾ ಇದ್ದ. ರಾಗಿ ಮುದ್ದೆ ಮಾಡಿ ಅದನ್ನ ಉಂಡೆ ಮಾಡಲು ಏನೂ ಇಲ್ಲದೆ, ಅಥವಾ ಗೊತ್ತಾಗದೆಯೋ ಅವರ ಜಗುಲಿ ನೀರು ಚಿಮುಕಿಸಿ ಅದರ ಮೇಲೆ ಮುದ್ದೆ ಹಾಕಿ ಉರುಳಿಸಿ ಉರುಳಿಸಿ ಉಂಡೆ ಕಟ್ತಿದ್ದ. ದಿನಾ ಹಿಂಗೆ ಮಾಡಿ ಮಾಡಿ ಇಡೀ ಜಗುಲಿಯೇ ಮುದ್ದೆ ಮೆತ್ತಿಕೊಂಡು ಅದು ಒಣಗಿ ಜಗುಲಿ ಆಗಿದ್ದ ಜಗುಲಿ ಬರೀ ರಾಗಿ ಮುದ್ದೆನೆ ಅಂಟಿ ಕೊನೆ ಅವ್ರು ನೋಡಿ ಸಾಕು ಹೋಗಪ್ಪ ನೀನು ಇರೋದು ಸಾಕು ಬಾಡಿಗೆ ಕಟ್ಟೋದು ಸಾಕು ಅಂತ ಅಲ್ಲಿಂದ ಓಡ್ಸುದ್ರು. ಕೊನೆಗೆ ಇಲ್ಲೆ ಬೈರಾಪುರದಲ್ಲಿ ಇನ್ನೊಂದು ಒಕ್ಕಲಗೇರಿ ಅಂತ ಇದೆ ಮಾದಿಗರ ಕೇರಿ ಮೇಲೆ ಸಿಲ್ಕ್ ಫ್ಯಾಕ್ಟರಿ ಹಿಂಭಾಗ. ಅಲ್ಲಿ ಗೌಡ್ರ ಜಗುಲಿಲಿ ಒಂದು ರೂಮಲ್ಲಿ ಇದಾನೆ. ಅದೂ ಮುದ್ಕಿತರ ಬಕ್ಕೊಂಡಿದೆ. ಮಳೆಗಿಳೆ ಬಂದ್ರೆ ಅದೇನ್ಮಾಡ್ತಾನೊ ಶಿವ್ನೆ ಬಲ್ಲ. ಅಲ್ಲು ಅದೆ ಕತೆ. ಅವ್ರೇನ್ ಮಾಡ್ತಾರೊ ಗೊತ್ತಿಲ್ಲ. ಏನ್ಮಾಡೋದು..!

“ನೋಡಿ ನೀವು ಹೇಳುದ್ರಲ್ಲ ಹೆಂಗೆಪ್ಪ ಇದಿಯ ಇವ್ನ ಕಟ್ಕೊಂಡು ಅಂತ – ಅವ್ರಪ್ಪನು ನಮ್ಮಪ್ಪನು ಜೊತೆಗಿದ್ದವ್ರು ಹೆಲ್ಪ್ ಮಾಡ್ದವ್ರು. ಋಣ ಅನ್ನೊದಿದೆಯಲ್ಲ ಸುಬ್ರಾಯ್ರೆ.. ಅದನ್ನ ಗಿರಿಮಲ್ಲಯ್ಯ ಸಾಯೇಬ್ರ ಮೂಲಕ ತೀರುಸ್ತ ಇದಿನಿ ಅನ್ನಿಸ್ತಿದೆ. ಇವನ ಬಗ್ಗೆ ಬೈರಾಪುರದವ್ರು ಅವ್ರು ಇವ್ರು ವಸಿ ಕಂಪ್ಲೆಂಟ್ ಮಾಡಿದರಾ..? ಎಷ್ಟೊ ಲೆಟರ್ ಮಿಸ್ ಆಗಿವೆ. ಒಂದ್ ಸಂದರ್ಭದಲ್ಲಿ ಇವನ ಯಡವಟ್ಟಿಂದ ಒಬ್ರು ಕೆಲ್ಸನೇ ಹೊಯ್ತಿತ್ತು. ನೋಡಿ ಇವ್ರ ಅಣ್ಣಂದು ಅಪಾಯಿಂಟ್ಮೆಟ್ ಆರ್ಡರ್ ಕಾಪಿ. ಅದೇಗೊ ಹುಡುಕಿದ್ದಾಯ್ತು. ಕೆಲವು ಕಾಗ್ದನ ಹೊಳೆಗೆಸ್ದಿದಾನೆ. ಇದನ್ನೆಲ್ಲ ಸಯಿಸ್ಕೊಂಡು ಮ್ಯಾನೇಜ್ ಮಾಡ್ಕೊಂಡು ಹೋಗ್ತಾ ಇದಿನಿ. ಹೆಂಗೊ ನಾನಿರತಂಕ.. ಆಮೇಲೆ ಅವನ ಕರ್ಮ!” ಅಂತ “ಬನ್ನಿ ಕಾಫಿ ಕುಡ್ದು ಬರಾಣ” ಅಂದರು.

ಗಂಗಣ್ಣ ಪೋಸ್ಟ್ ಮೇಷ್ಟ್ರು ಹೇಳಿದ್ದನ್ನೆ ಕೇಳ್ತಾ ಎಲ್ಲ ಲೆಟರು, ಎಂ.ಓ ಕಾರ್ಡು, ರಿಜಿಸ್ಟರ್ಡು ಜೋಡಿಸಿಟ್ಟುಕೊಂಡು “ಸಾರ್ ಬರ‌್ಲಾ ನಾನು..ಕೊಡಿ ಅಮೌಂಟು ಎಮೋದು” ಅಂದ. ಆಗ ಸುಬ್ರಾಯ ಶೆಟ್ಟರು “ಇಷ್ಟೆಲ್ಲ ಆದ್ಮೇಲೆ ಇವುನ್ನ ನಂಜನಗೂಡು ಡಿವಿಜನ್ ಆಫೀಸ್ಗೆ ಹಾಕೊಂಡ್ರೆ ಹೆಂಗೆ…? ಅಲ್ಲೆ ಸಣ್ಣಪುಟ್ಟ ಕೆಲ್ಸ ಮಾಡ್ಕೊಂಡಿರಲಿ. ಪಾಪ ರಿಸ್ಕ್ ಕೆಲ್ಸ ಯಾಕೆ?” ಅಂದ ಮೇಲೆ “ನೋಡಪ್ಪ ಅಷ್ಟು ಮಾಡಿ ಪುಣ್ಯ ಕಟ್ಗ ನಂದೇನು ಅಭ್ಯಂತ್ರ ಇಲ್ಲ. ಬನ್ನಿ ಮೊದ್ಲು ಕಾಫಿ ಕುಡ್ದು ಬರಾಣ. ಮೇಲಾಗಿ ನೀವು ನನ್ನ ಮೇಲಾಧಿಕಾರಿ.. ಆಮೇಲೆ ನನ್ ಮೇಲೂ ರಿಪೋರ್ಟ್ ಬರ‌್ದ್ ಗಿರ‌್ದಿಯ” ಅಂತ ನಗ್ತಾ ಗಂಗಣ್ಣನ ಕಡೆ ತಿರುಗಿ “ನೋಡಪ್ಪ ಸ್ವಲ್ಪ ಇರು. ಸಾಯೇಬ್ರು ನಾನು ಕಾಫಿ ಕುಡ್ದು ಬರ‌್ತಿವಿ. ನಾನು ಬಂದು ರಿಪೋರ್ಟ್ ಹಾಕಿ ಕೊಡ್ತಿನಿ. ನೀನು ಒಂದೇ ಸಲ ಚೀಲ ಕಂಟಂಡು ಆಫೀಸ್ಗೆ ಕೊಟ್ಬುಟ್ಟು ಆಮೇಲೆ ಸಂಜೆ ತನಕ ಬೇಕಾದ್ರೆ ಪೋಸ್ಟ್ ಹಂಚೋಕೆ ಹೋಗು” ಅಂತ ಹೇಳಿ ನನಗೂ ಕೈಸನ್ನೆ ಮಾಡಿದರು. ನಾನೂ ಅವರ ಹಿಂದೆ ನಡೆದಾಗ ಸೈಕಲ್ ತಳ್ಳುತ್ತಲೆ ನನ್ನ ಹೆಗಲ ಮೇಲೆ ಕೈ ಹಾಕಿ ಕಾಫಿಗೇ ಅಂತ ನಡೆವಾಗ “ಇವರು ಕವಿಗಳು. ಇದೆ ಊರು” ಅಂತ ಮತ್ತೆ ಪರಿಚಯಿಸಿದರು. ಇದರೊಂದಿಗೆ ಗಂಗಣ್ಣನ ಬಗ್ಗೆ ಇನ್ನು ಏನೇನೊ ಮಾತಾಡ್ತ ನಂಜನಗೂಡು ಸಬ್ ಡಿವಿಜನ್ ಪೋಸ್ಟ್ ಆಫೀಸ್ ನ ಎ.ಎಸ್.ಪಿ ಸುಬ್ರಾಯ ಶೆಟ್ಟರು, ನಮ್ಮ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಒಂದು ನಿರ್ಧಾರಕ್ಕೆ ಬಂದಂತಿತ್ತು.

-ಎಂ.ಜವರಾಜ್
(ಮುಂದುವರಿಯುವುದು)


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x