ಅದೊಂದು ದಿನ ‘ಅಣ್ಣ’ರಂಗಣ್ಣನ ದರಬಾರು ನಡೆದಿತ್ತು. ಅಲ್ಲಿ ಸುಮಾರು ಹತ್ತರಿಂದ ಹದಿನೈದು ಆತನ ಚೇಲಾಗಳಿದ್ದರು. ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಅವರ ಸಂಭಾಷಣೆ ಹೀಗಿತ್ತು;
‘ಅಣ್ಣಾ …ನೀನು ಏನೋ ಹೇಳು, ಆ ಧೀರನ ಪಾಳ್ಯದ ಗೋವಿಂದಣ್ಣ ನಮ್ಮ ಏರಿಯಾಕ್ಕೆ ಬಂದು ಗಲಾಟೆ ಮಾಡಿ, ಸೀನನನ್ನ ಎತ್ತಾಕ್ಕೊಂಡು ಹೋಗಬಾರದಿತ್ತು. ಆತ ಹಾಗೆ ಮಾಡಿ ಅದರ ಕಳಂಕ ನಮ್ಮ ಮೇಲೆ ಹೊರಿಸುವುದಲ್ಲದೆ, ಲಾಭ ಕೂಡಾ ಮಾಡಿ ಕೊಂಡ’ ಎಂದ ರೇವ್ಯ.
‘ಏಯ್ ಸುಮ್ಕಿರಲೇ, ಅವನು ಹಾಗ ಮಾಡಿದಾ ಅಂತ ಏನೋ ಭಾಸಣಾ ಬಿಗಿ ಬ್ಯಾಡ.
ಆ ಗೋವಿಂದ ನಮ್ಮ ಏರಿಯಾದಾಗ ಬಂದು ಮೋಸ ಮಾಡಿದ ನಿಜ, ಅದ್ರ ನಮ್ಮ ಮ್ಯಾಲೆ ಅನ್ಮಾನ ಆಗಿ ಪೊಲೀಸ್ರು ನನ್ನಿಡ್ಕೊಂಡು ಹೋಗೋವ್ರಿದ್ರು. ದೇವ್ರು ದೊಡ್ಡೋವ್ನು ಕಣ್ಲಾ, ಆ ವೈಯ್ಯನ್ನೇ ಎತ್ತಾಕ್ಕೊಂಡು ಹೋದ್ರು.’ ಇದೊಳ್ಳೆ ಗ್ರಾಚಾರ ಆಲ್ವಾ ?
‘ಅದೇನೋ ಸರಿ ಅಣ್ಣಾ, ಆದ್ರೆ ನಮ್ಮ ಚೆಂದಾದ ಮಾಲುಗಳು ಹೋದವಲ್ಲಾ ?’
‘ಹೋಗ್ಲಿ ಬಿಡೋ.. ಮುಂದೆ ದ್ಯಾವ್ರು ನಮ್ಗೆ ಕರುಣೆ ಮಾಡ್ತಾನೆ.’
‘ಅದು ಆಯಿತು ಬಿಡಣ್ಣ. ಏನೋ ಒಂದು ಇಷ್ಯ ಇತ್ತು ಹೇಳೋಣ ಅಂತ ಅನಕಂಡಿವ್ನಿ.’
‘ಅದೇನ್ಲಾ ಬೊಗಳು’
‘ಅದೇ ಅಣ್ಣ .. ಪೊಲೀಸ್ರು ರಾಬರ್ಟ್ ಕೇಸ್ನ್ಯಾಗೆ ನಿನ್ನಾ ಅರೆಸ್ಟ್ ಮಾಡ್ತಾರಂತೆ ಹೌದಾ ?’
‘ಅದೇನೋ ಸುದ್ದಿ ಐತೆ. ಆದ್ರೆ ದಾಖ್ಲೇ ಕೊಡೋ ನನ್ಮಗ ಯಾಂವ ಮುಂದೆ ಬರ್ತಾನೆ ?’
‘ಹೌದಣ್ಣ .. ದಾಖ್ಲೇ ಕೊಡೋವ್ನ ಮೊದ್ಲೇ ನಾವು ಹಿಡ್ದು ಸಿಗ ಹಾಕ್ಬೇಕು ‘ ಎಂದ ಅಣ್ಣನ ಶಿಷ್ಯ.
‘ಸರಿ ಸರಿ, ಅದು ಬಿಟ್ಟಾಕ್ಲಾ.. ಅವನ್ಯಾವನೋ ತಿರಬೋಕಿ ಹೋಟ್ಲನವ್ನು ನಮ್ ರೋಲ್ಕಾಲ್ ಹಣ ಕೊಡೋದಿಲ್ಲ ಅಂತಾ ಹೇಳಿದನಂತೆ ?’
‘ಅಣ್ಣಾ… ನಾನು ಅವ್ನ ಎಳ್ಕೊಂಡು ಹೋಗಿ, ತದಕಿ ಸರಿ ಮಾಡಿದೆ. ಇನ್ನೆರಡು ದಿನಗಳಲ್ಲಿ ಹಣ ತಲುಪಿಸುತ್ತಾನಂತೆ’
‘ಸರಿ, ಆ ಮಾರ್ವಾಡಿ ನನ್ಮಗ ಕ್ಯಾತೆ ತೆಗೆದಾನಂತೆ ಹೌದಾ ?’
‘ಹೌದಣ್ಣಾ… ಅವ್ನ ಊರೋವ್ನು ಯಾವನೋ ಹೊಸಬ ಬಂದು, ಅದ್ಯಾಕೆ ಕೊಡಬೇಕು, ಏನಾದ್ರೂ ರಸೀದಿ ಕೊಡ್ತಾರಾ ಎಂದು ಕೇಳು ಎಂದು ಹೇಳಿದ್ನಂತೆ.’
‘ಆಮೇಲೆ ಏನ್ ಮಾಡ್ದೇ ?’
‘ಅಯ್ಯೋ.. ನಾನ್ ಬಿಡ್ತೇನೆಯೇ, ನೂರು ಜನಾ ಸೇರ್ಸಿ ನಿನ್ನ ಒಡವೆ ಮೋಸ ಬಯಲು ಮಾಡ್ತೇನೆ ‘ ಎಂದಾಗ ಆತ ಕೈ ಜೋಡಿಸಿದ. ಈಗೇನು ಸಮಸ್ಯೆ ಇಲ್ಲ ಅಣ್ಣಾ’
‘ಅಯಿತಾಯಿತು.. ಇವತ್ತು ಇಷ್ಟೇ ಸಾಕ್ಲಾ’
‘ಇನ್ನೊಂದು ಇಷ್ಯ ಇತ್ತಣ್ಣ.. ಏಳು ಅಂದ್ರೇ ಏಳ್ತೀನಿ’ ಎಂದ.
‘ಇವತ್ತು ಇಷ್ಟು ಸಾಕ್ಲಾ’ ಎಂದು ಹೇಳುತ್ತಿರುವಾಗ;
ಅಲ್ಲಿಗೆ ಅವಸರವಸರದಲ್ಲಿ ಮೇಘು ಓಡಿ ಬಂದ. ಅವನು ಏದುಸಿರು ಬಿಡುತ್ತಾ ಅಣ್ಣನ ಕಡೆಗೆ ನೋಡಿ ಹೀಗೆ ಹೇಳಿದ ಬಹಳೇ ಗಾಭರಿಯಾಗಿ;
‘ಅಣ್ಣಾ … ನೀನು ಈಗ ಅಂಡರ್ ಗ್ರೌಂಡ ಆಗ್ಬಿಡು, ಏಕೆಂದ್ರೇ ಇನ್ಸ್ಪೆಕ್ಟರ್ ಸಲೀಂ ಸಾಬ್ರು ನಿನ್ನನ್ನೇ ಹುಡ್ಕಿಕೊಂಡು ಬರ್ತಿದ್ದಾರೆ.’
‘ಹೌದಾss.. ಏನ್ಲಾ ವಿಷಯ ?’
‘ ಬಹುಶಾ ಗ್ಯಾಂಗ್ ಮಾದ ಆ ಸೇಠುನ ವಿಷ್ಯದಾಗ ನಿನ್ನೆಸ್ರು ಹೇಳಿರ್ಬ್ಹದೇನೋ . ಇಲ್ಲಿಂದ ಜಾಗ ಖಾಲಿ ಮಾಡಣ್ಣ’ ಹಾಗೆ ಆತ ಹೇಳುವಷ್ಟರಲ್ಲಿ ಸಲೀಂ ಸಾಹೇಬರು ಒಳಗೆ ಬಂದೇ ಬಿಟ್ಟರು !
ಅವರೋ ಅಣ್ಣಾಗಳ ಎನ್ಕೌಂಟರ್ ಮಾಡುವದ್ರಲ್ಲಿ ಬಹಳೇ ಪ್ರಸಿದ್ಧಿ. ಅವರು ಬಂದವರೇ ರಂಗಣ್ಣ ನಿಗೆ ಹೀಗೆ ಹೇಳಿದರು;
‘ಏಯ್ ರಂಗ.. ಇವ್ರನ್ನೆಲ್ಲಾ ಹೊರಗ ಕಳ್ಸೊ’ ಎಂದರು. ಆಗ ಆತನ ಶಿಷ್ಯಂದಿರು ತಡ ಮಾಡದೇ ಎಲ್ರೂ ಅಲ್ಲಿಂದ ಜಾಗ ಖಾಲಿ ಮಾಡಿದ್ರು. ಆಗ ಸಲೀಂ ಸಾಹೇಬರು ರಂಗಣ್ಣನನ್ನು ಕುರಿತು ಹೀಗೆ ಕೇಳಿದರು;
‘ಏಯ್ ರಂಗಣ್ಣ .. ನೀನು ಅಲ್ಪ ಸ್ವಲ್ಪ ನ್ಯಾಯವಂತ ಅಂತ ನನಗೆ ತಿಳಿದಿದೆ. ನಮಗೊಂದು ಸಮಸ್ಯೆ ಬಂದಿದೆ, ಅದರಲ್ಲಿ ನೀನು ನನಗೆ ಸಹಾಯ ಮಾಡಿ ಇನ್ನೂ ಹೆಚ್ಚಿಗೆ ನ್ಯಾಯವಂತನಾಗು’ ಎಂದರು.
‘ಅದೇನ್ರೀ ಸಾರೂ.. ಈ ರೋಲ್ಕಾಲ್ ರಂಗ ನಿಮ್ಗೆ ಸಹಾಯ ಮಾಡೋದಂದ್ರೇ ಏನು ?’
‘ಹೌದು.. ನಾನು ನಿನ್ನ ಬಗ್ಗೆ ಕೆಲವು ವಿಚಾರಗಳಲ್ಲಿ ಭರವಸೆ ಇಟ್ಟಿದ್ದೇನೆ. ನೀನು ಈಗ ನನ್ನ ಜೊತೆಗೆ ಬಂದು, ನಮ್ಮಲ್ಲಿಯ ಲಾಕಪ್ ಸೇರಿಕೋ. ಅಂದರೆ, ನಾನು ನಿನ್ನನ್ನು ಅರೆಸ್ಟ್ ಮಾಡಿದ ಥರವೇ ಇರುತ್ತದೆ, ಆದರೆ ನಿಜವಾಗಿ ಅದು ಇರುವುದಿಲ್ಲ. ಆಮೇಲೆ ನೀನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಬೇಕು’ ಎಂದರು.
‘ಆ ಸಮಯದಲ್ಲಿ ನೀವು ನನ್ನನ್ನು ಎನ್ಕೌಂಟರ್ ಮಾಡಿದ್ರೇ ?’
‘ಈ ಸಲೀಂ ಅಂತಹ ಗಲೀಜ್ ಕೆಲಸ ಮಾಡೋದಿಲ್ಲ. ನನ್ನಲ್ಲಿ ಭರವಸೆ ಇಡು. ಆಮೇಲೆ ಸುಲ್ತಾನ್ಪುರ ಅರಣ್ಯದಲ್ಲಿ ಹೋಗಿ ಸೇರಿಕೋ. ಅಲ್ಲಿಯವರೆಗೆ ನಮ್ಮವರು ನಿನ್ನನ್ನು ಫಾಲೋ ಮಾಡ್ತಾರೆ. ಆಮೇಲೆ ನಿನ್ನನ್ನು ಒಳಗೆ ಬಿಟ್ಟು ಅವರು ಮರಳುತ್ತಾರೆ. ನೀನು ಸ್ವಲ್ಪ ಮುಂದೆ ಹೋದರೆ, ಅಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಆಲದ ಮರಗಳಿವೆ. ಅಲ್ಲಿಂದ ಇನ್ನೂ ಸ್ವಲ್ಪ ದೂರ ಹೋದರೆ, ಒಂದು ಕಲ್ಲು ಗುಂಡುಗಳ ಗುಡ್ಡ ಸಿಗುತ್ತದೆ. ಅಲ್ಲಿ ಸ್ವಲ್ಪ ಹೊತ್ತು ಆಚೆ ಈಚೆ ಓಡಾಡುತ್ತಾ ಇದ್ದರೇ, ಅಲ್ಲಿ ಅನುಮಾನಾಸ್ಪದ ವ್ಯಕ್ತಿಯೆಂದು ಹಿಡಿದು ಅಲ್ಲಿಯವರು ನಿನ್ನನ್ನು ಕರೆದೊಯ್ಯುತ್ತಾರೆ. ಆಗ ಅಲ್ಲಿ ಅವರು ಹೇಳಿದ ಹಾಗೆ ಕೇಳಿಕೊಂಡು ನೀನು ಇರಬೇಕು. ಅಲ್ಲಿ ಏನೂ ಬಾಯಿ ಬಿಡಬಾರದು ಅಷ್ಟೇ,. ಆಮೇಲೆ ಅದರ ಮುಂದಿನ ಭಾಗ ನಮ್ಮದು ಆಗುತ್ತದೆ. ಅದೇ ನೀನು ನಮಗೆ ಮಾಡುವ ಸಹಾಯ. ಇದರಿಂದ ನಿನಗೆ ಲಾಭವಾಗಲಿದೆ’ ಎಂದು ಸಲೀಂ ಸಾಹೇಬರು ಹೇಳಿದರು.
‘ಆಯಿತು ಸಾರ್.. ಈಗ ನಾನು ನಿಮ್ಮ ಜೊತೆಗೆ ಬರ್ತೇನೆ , ನನಗೆ ಏನೂ ತೊಂದರೆ ಮಾಡುವುದಿಲ್ಲ ತಾನೇ ?’ ಎಂದು ಮತ್ತೇ ಕೇಳಿದ.
‘ನೀನು ಹೀಗೆ ಪದೇ ಪದೇ ಕೇಳಿದರೆ, ನಿನಗೆ ಸಿಗುವ ಚಾನ್ಸ್ ಬೇರೆಯವರಿಗೆ ಕೊಟ್ಟು ಅವರಿಂದ ನಮ್ಮ ಕೆಲಸ ಮಾಡಿಸಿಕೊಳ್ತೇನೆ. ಆಮೇಲೆ ನೀನು ದುಃಖ ಪಡಬೇಕಾಗಬಹುದು’ ಎಂದು ತಿರುಗಿ ಉತ್ತರ ಕೊಟ್ಟಾಗ;
‘ಸರಿ ಸಾರ್, ನೀವು ಹೇಳಿದ ಹಾಗೆ ಮಾಡ್ತೇನೆ’ ಎಂದು ಒಪ್ಪಿಕೊಂಡ. ಆಗ ಸಲೀಂ ಸಾಹೇಬರು ಹೀಗೆ ಹೇಳಿದರು;
‘ನೀನು ಅಲ್ಲಿಗೆ ಹೋಗಿ, ನನಗೆ ಪೊಲೀಸರು ಬೆನ್ನತ್ತಿದ್ದಾರೆ ರಕ್ಷಣೆ ಕೊಡಿ ಎಂದು ಅವರಿಗೆ ಬೇಡಿಕೋ’ ಎಂದರು.
‘ಸರಿ ಸರ್ ‘ ಎಂದು ಹೇಳಿ ಮುಗಿಸಿದಾಗ, ತಕ್ಷಣವೇ ಪೋಲೀಸರ ಕಾರ್ಯಾಚರಣೆ ಪ್ರಾರಂಭವಾಯಿತು. ಆ ಪ್ರಕಾರ ಆತನನ್ನು ಕಸ್ಟೋಡಿಗೆ ಪಡೆದು ಕಚೇರಿಗೆ ಕೊಂಡೊಯ್ದರು.
ಮಾರನೇ ದಿನ ಯೋಜನೆಯಂತೆ ‘ಪೊಲೀಸ್ ಸೆಲ್’ ನಿಂದ ರಂಗಣ್ಣ ತಪ್ಪಿಸಿಕೊಂಡು ಓಡುತ್ತಲಿದ್ದ, ಆತನ ಹಿಂದೆ ಪೊಲೀಸರು ಓಡುತ್ತಲೇ ಇದ್ದರು. ಕೊನೆಗೆ ಅರಣ್ಯದಲ್ಲಿ ರಂಗಣ್ಣ ಒಳ ಹೊಕ್ಕ. ಆಮೇಲೆ ಹಿಂದೆ ಬೆನ್ನತ್ತಿದ್ದ ಪೊಲೀಸರು ಮರೆಯಾದರು. ಆಮೇಲೆ ರಂಗಣ್ಣ ಕಾಡಿನಲ್ಲಿ ಅಲೆಯತೊಡಗಿದ. ಪೊಲೀಸರು ತಿಳಿಸಿದ ಪ್ರಕಾರ ಆಲದ ಮರದ ತೋಪನ್ನು ಕಂಡು ಕೊಂಡು ಅಲ್ಲಿಗೆ ಹೋಗಿ, ಸ್ವಲ್ಪ ಹೊತ್ತು ಅಲ್ಲಿ ಕುಳಿತು ವಿರಮಿಸಿದ. ಆಮೇಲೆ ದೂರದಲ್ಲೊಂದು ಗುಡ್ಡ ಕಾಣುತ್ತಿತ್ತು. ಅದರೆಡೆಗೆ ತನ್ನ ಹೆಜ್ಜೆಗಳನ್ನು ಹಾಕತೊಡಗಿದ.
ಆ ಸ್ಥಳಕ್ಕೆ ತಲುಪಿದ ಮೇಲೆ, ಅಲ್ಲ ಅತ್ತಿಂದಿತ್ತ ಮತ್ತು ಹಾಗೆ ಹೀಗೆ ಅಲೆಯುತ್ತಲೇ ಇದ್ದ. ಈತನನ್ನು ನೋಡಿದ ಒಬ್ಬ ಆಗಂತುಕ, ಕಂಡು ಹೀಗೆ ಮಾತಾಡಿಸಿದ;
‘ಏನಯ್ಯ ..ಈ ಕಾಡಿನಲ್ಲಿ ನಿನ್ನದೇನು ಕೆಲಸ ?’
‘ಅಣ್ಣಾ.. ನಾನು ಕಷ್ಟದಲ್ಲಿ ಇದ್ದೇನೆ. ಏನೋ ತಪ್ಪು ಮಾಡಿ ಪೋಲೀಸರ ಕಣ್ಣಿಗೆ ತುತ್ತಾಗಿದ್ದೇನೆ. ಅವರು ನನ್ನ ಬೆನ್ನ ಹಿಂದೆಯೇ ಇದ್ದಾರೆ’ ಎಂದ.
‘ಏನು ನಿನ್ನ ಹೆಸರು ?’
‘ರಂಗಣ್ಣ ‘ .
‘ಸರಿ.. ನಿನಗೆ ಅಡಗಿಕೊಳ್ಳಲು ಒಂದು ಸ್ಥಳ ತೋರಿಸುತ್ತೇನೆ. ಆದರೆ, ನಾನು ನಿನ್ನನ್ನು ನಂಬುವುದಾದರೂ ಹೇಗೆ ?’ ಎಂದ ಆ ವ್ಯಕ್ತಿ.
‘ಬಿಡಿ.. ಅಣ್ಣ, ನಿಮಗೆ ನಂಬಿಕೆ ಇಲ್ಲದಿದ್ದರೆ, ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ. ಇಲ್ಲೇ ಅಲೆದಲೆದಾದ ಮೇಲೆ ಪಟ್ಟಣದ ಕಡೆಗೆ ಹೋಗಿಬಿಡುತ್ತೇನೆ’ ಎಂದ.
‘ಅದೇನು..ಬೇಡ. ಇಲ್ಲಿ ಪೊಲೀಸರಿಗಿಂತ ಕಾಡು ಪ್ರಾಣಿಗಳ ಕಾಟ ಜಾಸ್ತಿ, ಹಾಗಾಗಿ, ನಿನ್ನನ್ನು ನಾನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತೇನೆ, ನನ್ನ ಜೊತೆಗೆ ಬಂದುಬಿಡು’ ಎಂದನು.
‘ಆಯಿತು ಅಣ್ಣ’ ಎಂದು ಆತನ ಹಿಂದೆಯೇ ಹೋದ. ಅಲ್ಲಿ ಕಲ್ಲು ಬಂಡೆಗಳ ಮಧ್ಯೆ ಒಂದು ಗುಹೆ ಇತ್ತು. ಅದರೊಳಕ್ಕೆ ಕರೆದೊಯ್ದ . ಆಮೇಲೆ ಅಲ್ಲಿ ಒಂದು ದೊಡ್ಡ ಭಾವಿ ಇತ್ತು, ಆದರೆ ಅದರಲ್ಲಿ ನೀರಿರಲಿಲ್ಲ. ಅಲ್ಲಿ ಒಂದು ಬಳ್ಳಿಯ ಸಹಾಯದಿಂದ ಆತನ ಜೊತೆಗೆ ಈತನೂ ಅದರೊಳಗೆ ಇಳಿದ. ಆಮೇಲೆ, ಅಲ್ಲಿ ಇನ್ನೊಂದು ಗುಹೆ ಕಾಣಿಸಿತು. ಅದರೊಳಗೆ ಹೊಕ್ಕು, ಸುಮಾರು ಐವತ್ತು ಅರವತ್ತು ಅಡಿ ನಡೆದುಕೊಂಡು ಹೋದಾಗ, ಅಲ್ಲಿ ತಿರುವು ಸಿಕ್ಕು ಮತ್ತೊಂದು ಗುಹೆ ಕಂಡಿತು. ಅದರೊಳಗೆ ಇಬ್ಬರೂ ಹೋದರು. ಆಮೇಲೆ ವಿಶಾಲವಾದ ಸ್ಥಳವೊಂದು ಅಲ್ಲಿ ಇತ್ತು. ಅದನ್ನು ನೋಡಿದ ರಂಗಣ್ಣ , ಇಲ್ಲಿ ತಮ್ಮ ತರಹದ ಗ್ಯಾಂಗ್ ಇದೆ ಎಂದುಕೊಂಡ. ಆಮೇಲೆ ರಂಗಣ್ಣನನ್ನು ಒಬ್ಬನ ಮುಂದೆ ಕರೆದೊಯ್ದು ನಿಲ್ಲಿಸಿದರು. ಆತ ಈತನನ್ನು ಪ್ರಶ್ನಿಸಿದ;
‘ನೀನು ರಂಗ ತಾನೇ.. ಪೊಲೀಸರಿಂದ ತಪ್ಪಿಸಿಕೊಂಡಿದ್ದೀಯಾ ತಾನೇ ?’
‘ಹೌದಣ್ಣ.. ನಿಮಗೆ ಹೇಗೆ ತಿಳಿಯಿತು ?’
‘ನಮಗೆ ಆಗಲೇ ಸುದ್ದಿ ತಲುಪಿದೆ. ನೀನು ಇಲ್ಲಿ ಕೆಲವು ದಿನಗಳ ಮಟ್ಟಿಗೆ ಹಾಯಾಗಿರಬಹುದು’ ಎಂದ ಮುನಿಯಣ್ಣ
‘ಇಲ್ಲ ಅಣ್ಣ, ನಾನು ನಾಳೇನೇ ಹೋಗಿಬಿಡುತ್ತೇನೆ. ಏಕೆಂದರೆ, ನಮ್ಮ ಕುಟುಂಬದವರು ಕಾಯುತ್ತಿರುತ್ತಾರೆ’ ಎಂದ.
‘ಅವೆಲ್ಲಾ ಏನೂ ಇಲ್ಲ, ಇಲ್ಲಿಗೆ ಬಂದ ಯಾರೇ ಇರಲಿ, ಇಲ್ಲಿಂದ ಹೋಗುವ ನಿರ್ಧಾರ ನಮ್ಮದೇನೇ ‘ ಎಂದಾಗ ರಂಗ ಮುಂದೆ ಮಾತಾಡಲಿಲ್ಲ !
ಒಂದೆರಡು ದಿನಗಳಾದ ಮೇಲೆ, ಆ ಕಲ್ಲು ಬಂಡೆಯ ಗುಹೆಯನ್ನು ಪೊಲೀಸರು ಸುತ್ತುವರೆದರು. ಅಂದು ಪೋಲೀಸರ ಸೈನ್ಯವೇ ಬಂದಿತ್ತು. ಅವರು ಕೂಡಾ ಮೊದಲು ಭಾವಿಯಲ್ಲಿ ಇಳಿದರು, ಆಮೇಲೆ ಅಕ್ಕ ಪಕ್ಕ ನೋಡಿ ಗುಹೆಗಳಲ್ಲಿ ಒಳ ಹೊಕ್ಕು ಹೋದರು. ಕೊನೆಗೆ, ಮುನಿಯಣ್ಣನ ಸ್ಥಾನಕ್ಕೆ ಬಂದು ಅವನನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ಅವರ ಜೊತೆಗೆ ರಂಗಣ್ಣನನ್ನೂ ಕೂಡಾ ಪಡೆದುಕೊಂಡರು. ಆನಂತರ, ಆ ಸ್ಥಳವನ್ನು ಕೂಲಂಕುಷವಾಗಿ ನೋಡಿದಾಗ, ಅಲ್ಲಿ ಕಳ್ಳತನ ಮಾಡಿದ್ದ ಎಲ್ಲಾ ಸಾಮಾನುಗಳು ದೊರಕಿದವು. ಅವೆಲ್ಲವುಗಳನ್ನು ಪೊಲೀಸರು ಅಲ್ಲಿಂದ ಸಾಗ ಹಾಕಿದರು.
ಮುಂದೆ ಇವರೆಲ್ಲರ ವಿಚಾರಣೆ ನಡೆದಾಗ, ಆ ಗುಂಪಿನಲ್ಲಿದ್ದ ಕೇವಲ ಕೆಲವು ಜನರನ್ನು ದೋಷ ಮುಕ್ತರನ್ನಾಗಿ ಮಾಡಿ, ಅವರ ಕೈಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದರು. ಹಾಗೆ ಬಿಡುಗಡೆಯಾದವರ ಪೈಕಿ ರಂಗಣ್ಣನೂ ಕೂಡಾ ಇದ್ದ. ಒಟ್ಟಿನಲ್ಲಿ
ಕಿಂಗ್ ಪಿನ್ ಮುನಿಯಣ್ಣನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮುನಿಯಣ್ಣನ
ಜೊತೆಗೆ ಕೆಲವರನ್ನು ಕೆಲವೊಂದು ಕಲಮಿನಡಿ ಕೇಸ್ ಹಾಕಿ ಸೆರೆ ಮನೆಗೆ ತಳ್ಳಿದರು.
ಆಮೇಲೆ ರಂಗಣ್ಣನನ್ನು ಸಲೀಂ ಸಾಬರು ಕರೆದು, ಹೀಗೆ ಹೇಳಿದರು;
‘ರಂಗ ನೀನು ನಮಗೆ ಸಹಾಯ ಮಾಡಿದ್ದೀಯಾ. ನಿನಗೊಂದು ಒಳ್ಳೆಯ ಅವಕಾಶ ಕೊಡುತ್ತಿದ್ದೇನೆ. ನೀನು ಈಗ ನಿನ್ನ ಅಡ್ಡದ ಕಡೆಗೆ ಹೋಗದೆಯೇ, ನೇರವಾಗಿ ನಾನು ಹೇಳುವ ಆಶ್ರಮಕ್ಕೆ ಹೋಗಿಬಿಡು. ಅಲ್ಲಿ ಸುಮಾರು ಎರಡು ತಿಂಗಳು ಇದ್ದು ಬಿಡು. ಏಕೆಂದರೆ, ಈ ಅವಧಿಯಲ್ಲಿ ನಿನ್ನ ಜೀವಕ್ಕೆ ಬೆದರಿಕೆ ಬರಬಹುದು. ಆಮೇಲೆ, ನೀನು ಮುಂದಿನ ಜೀವನದ ನಿರ್ಧಾರ ಮಾಡುವೀಯಂತೆ’. ಎಂದು ಹೇಳಿದರು.
ಅವರು ಹೇಳಿದ ಪ್ರಕಾರ ದೂರದಲ್ಲಿರುವ ‘ ಆನಂದಾಶ್ರಮ’ ಸೇರಿಕೊಂಡ. ಸುಮಾರು ದಿನಗಳು ಆತನು ಅಲ್ಲಿ ಕಳೆದಾಗ, ಆತನ ಒಳಗಿನ ಭಾವಗಳು ಪರಿವರ್ತನೆಗೊಳ್ಳುತ್ತಲಿದ್ದವು. ಆ ಸಮಯದಲ್ಲಿ ಆತನಿಗೆ ಒಂದು ಅವಕಾಶ ನೀಡಿ, ಹೊರಗೆ ಹೋಗಲು ಹೇಳಿದಾಗ ಆತನು ಒಪ್ಪಲಿಲ್ಲ. ತಾನು ಅಲ್ಲಿಯೇ ಇದ್ದು ಅಲ್ಲಿರುವ ಅಂಗ ವಿಕಲರ ಸೇವೆ ಮಾಡಿ ಜೀವನ ಕಳೆಯುತ್ತೇನೆ ಎಂದು ಹೇಳಿ, ಹೊರಗೆ ಹೋಗುವ ವಿಷಯವನ್ನು ಕೈ ಬಿಟ್ಟ ! ಆಗ ಎಚ್ಛೇತ್ತ ಚೇತನದಿಂದ ಆತನು ಒಬ್ಬ ಪರಿಪೂರ್ಣ ಗುರುವಾಗಿ ಪರಿವರ್ತಿತ ಗೊಂಡಿದ್ದ.
-ಬಿ.ಟಿ.ನಾಯಕ,
ಶ್ರೀಗಂಧದ ಕಾವಲು, ಬೆಂಗಳೂರು.