ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮ – ಒಂದು ವಿವೇಚನೆ: ಸಂತೋಷ್ ಟಿ

ಮೈಸೂರು ರಾಜ ಸಂಸ್ಥಾನದಲ್ಲಿ ಎಲೆ ಅಡಿಕೆ ನೀಡುವ ಸಂಚಿಯ ಕಾಯಕದ ಸಖಿಯಾಗಿ ವೃತ್ತಿಧರ್ಮದಲ್ಲಿದ್ದ ಹೊನ್ನಮ್ಮನ ಕೃತಿ ‘ಹದಿಬದೆಯ ಧರ್ಮ’ವಾಗಿದೆ. ಚಿಕ್ಕದೇವರಾಜ ಒಡೆಯರ್ ಕಾಲದ ಸರಿಸುಮಾರು ಕ್ರಿ.ಶ. ೧೬೭೨-೧೭೦೪ ನೇ ಶತಮಾನದ ಕಾಲಘಟ್ಟದಲ್ಲಿ ಸರಸ ಸಾಹಿತ್ಯದ ವರದೇವತೆ ಎಂಬ ಅಗ್ಗಳಿಕೆಗೆ ಪಾತ್ರಳಾದವಳು ಹೊನ್ನಮ್ಮ. ದೇವರಾಜಮ್ಮಣ್ಣಿಯ ರಾಣಿ ವಾಸದ ಸಖಿಯಾಗಿ ಎಳಂದೂರಿನಿಂದ ಬಂದು ಸೇರಿದ್ದ ಹೊನ್ನಮ್ಮನು, ಅರಮನೆಯ ಪರಿವಾರಕ್ಕೆ ತಾಂಬೂಲ ಅಥವಾ ಎಲೆಅಡಿಕೆ ನೀಡುವ ಕಾಯಕ ಮಾಡುತ್ತಿದ್ದಳು. ತನ್ನ ಬುದ್ಧಿ ಶಕ್ತಿಯಿಂದ ಅರಮನೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಾಹಿತ್ಯ ಪರಿಸರದಿಂದ ಪ್ರೇರಣೆ ಪ್ರಭಾವಗಳನ್ನು ಪಡೆದಳು. ಚೆನ್ನಿಗರಾಯ ಓಡೆಯರ ಕೃಪಾ ಪೋಷಣೆ, ಮಂತ್ರಿ ತಿರುಮಲಾರ್ಯ ಮತ್ತು ತನ್ನ ಗುರು ಸಿಂಗಿರಾರ್ಯ (ಆಳಸಿಂಗಿರಾರ್ಯ) ಅನುಮತಿಯಂತೆ ವಿದ್ಯೆಯನ್ನು ಕಲಿತಳು. ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪುರಾಣಕಾವ್ಯ, ವೇದ, ಉಪನಿಷತ್ತುಗಳು, ಜನಪದ ದೇಸಿ ಕಾವ್ಯಗಳ ವ್ಯಾಸಂಗ ಮಾಡಿ, ಅಲ್ಲಿನ ಮಹಿಳೆಯರ ರೀತಿ ನೀತಿ ಬದುಕಿನ ರಿವಾಜುಗಳನ್ನು ಅರ್ಥೈಸಿಕೊಂಡು ಶೋಡಷ ಭಾವನೆಗಳಿಂದ ತಿಳುವಳಿಕೆಯ ಜ್ಞಾನ, ನಡವಳಿಕೆಯ ಜ್ಞಾನವೆಂಬ – ಸ್ತ್ರೀಯರಿಗೆ ಸಂಬಂಧಿಸಿದ ನೆಲೆಯಲ್ಲಿ ಒಂದು ಕೈಪಿಡಿಯನ್ನು ರಚಿಸಿದಳು. ಆ ಕಾಲಘಟ್ಟದಲ್ಲಿ ಅದೊಂದು ಹೆಗ್ಗುರುತು ಎಂದು ಹೇಳಬಹುದು. ಭಾರತೀಯ ಸಂಸ್ಕೃತಿಯಲ್ಲಿ ತತ್ವಶಾಸ್ತ್ರ (ಮೆಟ್ ಫಿಸಿಕ್ಸ್ ಸೈಕಾಲಜಿ) ಕಲೆಗಳಲ್ಲಿ ಮಹಿಳೆಯರಿಗೆ ಅನುಗುಣವಾದ ಹಲವು ಕಲೆಗಳಿವೆ. ನೃತ್ಯ, ಸಂಗೀತ, ಸಾಹಿತ್ಯ, ಚಿತ್ರಕಲೆ, ಪಾಕಶಾಸ್ತ್ರ, ಲಲಿತ ಕಲೆಗಳು, ವಾಸ್ತುಶಿಲ್ಪ, ಶೋಡಷೋಪಚಾರ ಮೊದಲಾದವುಗಳು.” ಪ್ರಾಚೀನ ಕನ್ನಡದ ಬೆರಳೆಣಿಕೆಯಷ್ಟು ಕವಯಿತ್ರಿಯರಲ್ಲಿ ಹದಿಬದೆಯ ಧರ್ಮ ಕೃತಿಯನ್ನು ಬರೆದ ಹೊನ್ನಮ್ಮ ಒಬ್ಬಳು.

‘ಹದಿಬದೆಯ ಧರ್ಮ’ ಸಾಂಗತ್ಯ ಛಂಧಸ್ಸಿನ ಕೃತಿಯಾಗಿದ್ದು ಇದೊಂದು ನೀತಿಕಾವ್ಯವಾಗಿದೆ. ರಾಮಾಯಣ, ಭಾರತ, ಮನ್ವಾದಿಧರ್ಮಶಾಸ್ತ್ರದಲ್ಲಿ ಹೇಳಿದ ಸತೀಧರ್ಮವನ್ನು ಹೇಳುವುದೇ ಇದರ ಉದ್ದೇಶ. ಇದರಲ್ಲಿ ಬಂದಿರುವ ಪತಿವ್ರತಾಧರ್ಮದ ನಿಯಮಗಳು, ಭಾರತೀಯ ಸ್ತ್ರೀಯ ಸ್ಥಾನಮಾನದ ವರ್ಣನೆಗಳು. ಹದಿಬದೆ ತನ್ನ ಪತಿಯ ಕೂಡ ಹೇಗಿರಬೇಕು. ಅಗಲಿದಾಗ ಹೇಗಿರಬೇಕು. ಅತ್ತೆಮಾವಂದಿರು ಮತ್ತು ಉಳಿದ ಬಳಗದೊಡನೆ ಹೇಗೆ ನಡೆಯಬೇಕೆಂಬುದನ್ನು ಮಾದರಿ ನಡತೆಯ ಸರಸ ಚಿತ್ರವನ್ನು ಬಿಡಿಸಿದಂತೆ ಬಣ್ಣಿಸಿದ್ದಾಳೆ. ಇದರಿಂದ ಈ ಕೃತಿ ಕಾವ್ಯ ಸ್ವರೂಪವನ್ನು ತಾಳಿದೆ. ವಿರಹದಲ್ಲಿಯ ಉತ್ಕಂಠೆ – ನಿರೀಕ್ಷೆ ಪತಿಯ ಪುನರಾಗಮನದಿಂದ ಉಂಟಾದ ಹರ್ಷ – ಪ್ರೀತಿ ಇವೆಲ್ಲ ಸೊಗಸಾಗಿ ನಿರೂಪಿತವಾಗಿದೆ. ಹದಿಬದೆಯ ಧರ್ಮದ ಶೈಲಿ ತಿರುಮಲಾರ್ಯ- ಸಿಂಗಿರಾರ್ಯರ ಪ್ರಭಾವದಿಂದಲೂ ಹೊನ್ನಮ್ಮನ ಸ್ವಂತ ಸ್ವತ್ವದಿಂದಲೂ ಮಾದರಿಯ ಅಚ್ಚಗನ್ನಡವಾಗಿದೆ. ಈ ಕೃತಿ ಮಹಾಕೃತಿಯಲ್ಲ, ಸತ್ಕೃತಿ. ಈಕೆಯ ಗ್ರಂಥ ಓದಲು ಸುಲಭವಾಗಿದ್ದರೂ ಮರೆಯಲು ಸುಲಭವಲ್ಲ ಎಂಬ ಮೆಚ್ಚಿಗೆಯಿದೆ. ಹೊನ್ನಮ್ಮನ ಈ ಗೃಹಿಣಿಯರ ಕೈಪಿಡಿ ಕನ್ನಡ ಸಾಹಿತ್ಯಕ್ಕೆ ಚಿರವಾದ ಕೊಡುಗೆ”ಎಂದು ಅಭಿಪ್ರಾಯ ಪಡುವ ರಂ.ಶ್ರೀ ಮುಗಳಿಯವರ ಅಭಿಪ್ರಾಯ ಹಾಗೂ ಡಿ.ಚಂಪಾಬಾಯಿಯವರ ಮಾತುಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿವೆ. (೧೩೮. ಹೊನ್ನಮ್ಮ, ಐಚ್ಚಿಕ ಕನ್ನಡ ಭಾಗ-೧ ಸಂಪಾದಕರು ಪ್ರೊ.ಮಾಲಿ ಮದ್ದಣ ಮತ್ತು ಪ್ರೊ.ಶಿವರಾಮಯ್ಯ ) ಇಂತಹ ಸುವರ್ಣ ಅವಕಾಶ ದೊರೆತಿದ್ದ ಹೊನ್ನಮ್ಮನು ಅರಮನೆಯ ಪರಿಸರದಲ್ಲಿ ವಿದ್ಯೆಯನ್ನು ಕಲಿತು ಮಹಿಳೆಯ ಬಗೆಗೆ ತಾನು ತಳೆದ ನಿರ್ಣಯಗಳನ್ನು ತನ್ನ ಧರ್ಮದಲ್ಲಿ ಅರುಹಿದಳು. ಭಾರತೀಯ ಸಮಾಜದಲ್ಲಿ ಹೆಣ್ಣಿನ ಒಳತುಡಿತಗಳ ಬೇಗುದಿ ಅಥವಾ ಹೃದಯ ಸಂವೇದನೆಗಳನ್ನು ಮಿಡಿಯುವ ಕಾವ್ಯವಾಗಿ ಹದಿಬದೆಯ ಧರ್ಮ ಕಂಡರೆ ವಿಶೇಷವೆನಲ್ಲ. ಮಾನವ ಸಮಾಜ, ಸಮುದಾಯ, ನಾಗರಿಕತೆಗಳ ಸಂರಚನೆಯ ಮೊದಲ ಘಟಕ ಕುಟುಂಬ. ಕುಟುಂಬದಿಂದ ಕಲಿತ ಸಂಸ್ಕಾರ ಮೌಲ್ಯಗಳಿಂದ ಸಮುದಾಯ ಮತ್ತು ಸಮಾಜದ ಉನ್ನತಿಗಳು ಸಾಧ್ಯವಾಗುವ ನೆಲೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಚಿಂತನೆಗಳು ಇರುತ್ತದೆ. ಶಿಕ್ಷಣವೆಂಬುದು ಇಲ್ಲಿ ಬಹಳ ಪ್ರಮುಖವಾಗುತ್ತದೆ. ಹಿಂದೂ ಅವಿಭಕ್ತ ಕೂಡ ಕುಟುಂಬ ಪದ್ದತಿಗಳಲ್ಲಿ ಬಂದ ಸಮಾಜದ ಮೂಲಚೂರ್ಣದ ಬೇರುಗಳಲ್ಲಿ ಪಿತೃ ಪ್ರಧಾನ ವ್ಯವಸ್ಥೆ ಇದ್ದರೂ ಅದಕ್ಕೆ ಮೂಲವಾದ ಮಾತೃಮೂಲೀಯ ಅಥವಾ ಮಾತೃಪ್ರಧಾನ ಕೃಷಿ ಚಟುವಟಿಕೆಯ ಸಂಬಂಧಿಯಾದ ಭೂಮಿಯ ಉತ್ಪನ್ನಗಳ ಅಭಿವೃದ್ಧಿಯ ಸಮೃದ್ಧಿ ದೇವತೆಯಾಗಿ ಹೆಣ್ಣನ್ನು ಕಾಣಲಾಗಿದೆ.

ಪ್ರಪಂಚದ ಆದಿಯಲ್ಲಿ ಕೃಷಿ ಹಿನ್ನೆಲೆಯ ಕಾರ್ಯಗಳಿಂದ ಮಹಿಳೆ ಮೊದಲ ಭಿತ್ತನೆಯವಳು, ಉಳುಮೆ ಮಾಡಿದವಳು ಎನ್ನುವ ಪ್ರತೀತಿ – ನಿದರ್ಶನಗಳಿವೆ. ಹೀಗೆ ನಾಗರಿಕತೆಗಳು ಪ್ರಾಚೀನ ಕಾಲದಿಂದ ನದಿಮುಖಜ ಭೂಮಿ ತೀರಗಳಲ್ಲಿ ಬೆಳೆದುಬಂದ ಸಾಂಸ್ಕೃತಿಕ ಸಾಂಸ್ಥಿಕ ರಚನೆಯಲ್ಲಿ ಭಾರತೀಯರ ಸ್ವಂತಿಕೆ ಎನ್ನಬಹುದಾದ ಬಹುದೊಡ್ಡ ನಾಗರಿಕತೆಗಳ ಸಂರಚನೆಯನ್ನು ಕಾಣಬಹುದು. ( ಹರಪ್ಪ, ಮೆಹೆಂಜೋದಾರ ಮತ್ತು ಧೋಲಾವೀರ ನಾಗರಿಕತೆಗಳು ಹಾಗೂ ಆರ್ಯ – ದ್ರಾವಿಡ ಸಂಕ್ರಮಣ ಕಾಲದ ನಾಗರಿಕತೆಗಳು) ಇಂತಹ ಕಾಲದಿಂದ ಬಂದ ಜನಪದ, ಭಾಷೆ, ಸಂಸ್ಕೃತಿ, ಸಾಹಿತ್ಯ, ಪುರಾಣ, ವೇದ, ಉಪನಿಷತ್ತುಗಳು, ಪರಂಪರೆಯ ಮೌಖಿಕ ಕತೆಗಳು, ಜನಪ್ರಿಯ ಕತೆಗಳು, ಆಚರಣೆ, ವೈದ್ಯ, ಪದ್ಧತಿಗಳು, ಜೀವನ ವಿಧಾನಗಳಿಂದ ಹುಟ್ಟಿದ (ಹಿಪೋಕ್ರಸಿ ಹೈಪೊಥೆಸಿಸ್) ಬದುಕಿನ ಬಗೆಗಿನ ಜಿಜ್ಞಾಸೆಯನ್ನು ಜ್ಞಾನ ಎಂಬ ನೆಲೆಯಲ್ಲಿ ಪರಿಭಾವಿಸುವುದಾದರೆ ಅದು ಮಹಿಳೆಯರ ಬಹು ದೊಡ್ಡ ಕೊಡುಗೆ ಎನ್ನಬಹುದು. ಸಾಮಾಜಿಕ ಸಾಂಸ್ಥಿಕ ಸಂರಚನೆಯ ಸಮಾಜದಲ್ಲಿ ಮಹಿಳೆಯ ಬದುಕು ಅವಳ ನಡವಳಿಕೆಗಳು, ತಿಳುವಳಿಕೆಗಳು, ಬಿಕ್ಕಟ್ಟಿನ ಸಮಯದ ನಿರ್ಣಯಗಳು ಮೊದಲಾದವನ್ನು ಹೊನ್ನಮ್ಮ ಭಾರತೀಯ ತಾತ್ವಿಕ ನೆಲೆಯಲ್ಲಿ ಗ್ರಹಿಸಿ ಕೃತಿ ರೂಪಕ್ಕೆ ಇಳಿಸಿದಳು. ಮಹಿಳೆಯು ತಾಯಿಯಾಗಿ, ಅಜ್ಜಿಯಾಗಿ, ಮಗಳಾಗಿ, ಸೋದರಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ಇತರೆ ಸಂಬಂಧಗಳ ಸೂಕ್ಷ್ಮ ಸಂವೇದಿಯಾಗಿ ನಿಭಾಯಿಸಬೇಕಾದ ಕರ್ತವ್ಯಗಳು ಮತ್ತು ಶೋಡಷೋಪಚಾರಗಳನ್ನು ಮನಗಂಡಿದ್ದಳು ಇಲ್ಲಿನ ಕವಯಿತ್ರಿ. ಹೆಣ್ಣು ನಿಭಾಯಿಸಬಹುದಾದ ಸಾಮಾಜಿಕ ಕರ್ತವ್ಯಗಳಲ್ಲಿ ರಾಜ ಧರ್ಮ ಪಾಲನೆ, ರಾಜ್ಯಭಾರಗಳ ಪಾಲನೆ, ಅರಮನೆ ಪಾಲನೆ ಇತ್ಯಾದಿಗಳ ಅನುಭವ ಸಹ ಕಂಡಿದ್ದಳು ಹೊನ್ನಮ್ಮ. ಈ ‘ಹದಿಬದೆಯ ಧರ್ಮ’ ಕಾವ್ಯದಲ್ಲಿ ಸ್ತ್ರೀ ಧರ್ಮ ಬೋಧಿನಿಯಂತೆ ಕಾಣುವ ಸಾಂಪ್ರದಾಯಿಕ ಜಡಮೌಲ್ಯಗಳಿಗಿಂತ ಪರಂಪರೆಯಲ್ಲಿ ನಡೆದು ಬಂದ ಮಹಿಳೆಯರ ಆದರ್ಶ ಗುಣಗಳನ್ನು ಬಹಳ ಗುಣಗ್ರಾಹಕತೆ ಮತ್ತು ಸಮಯ ಸ್ಪೂರ್ತಿಯಿಂದ ಹೊನ್ನಮ್ಮ ಉದಾಹರಣೆಗಳ ಮೂಲಕ ಚಿತ್ರಿಸಿದ್ದಾಳೆ. ಇದಕ್ಕೆ ಪ್ರೇರಣೆಯಾಗಿ ಅರಮನೆಯ ಪರಿಸರವು ಸ್ಪಂದಿಸಿತು ಎಂಬುದು ಸ್ಪಷ್ಟ. ” ಅರಸಿಯ ಊಳಿಗದಲ್ಲಿದ್ದು ಬುದ್ಧಿಯಿದ್ದರೂ ವಿದ್ಯೆಯಿಲ್ಲದ ಹೆಂಗಸು”ಚೆನ್ನಿಗ ಚಿಕ್ಕದೇವರಾಯನ ಸಂಚಿಯ ಹೊನ್ನಮ್ಮನಾಗಿ ರಾಯನ ಪ್ರೇರಣೆಯಿಂದ ಸಿಂಗಿರಾರ್ಯನಲ್ಲಿ ವ್ಯಾಸಂಗ ಮಾಡಿ ‘ಹದಿಬದೆಯ ಧರ್ಮ’ ವೆಂಬ ನೀತಿ ಕಾವ್ಯವನ್ನು ಬರೆದದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸೋಜಿಗದ ಸಂಗತಿಯೇ ಸರಿ. ನಮ್ಮ ನಾಡಿನಲ್ಲಿ ಹೆಂಗೆಳೆಯರು ಕವಯಿತ್ರಿಯರೂ ಲೇಖಕಿಯರೂ ಹೆಚ್ಚಾಗಿ ಹಿಂದೆ ಆಗದಿರಲು ಅವರಲ್ಲಿ ಪ್ರತಿಭೆ – ಮೇಧಾಶಕ್ತಿಗಳು ಇರಲಿಲ್ಲವೆಂಬುದಲ್ಲ;ಅವರ ವ್ಯಕ್ತಿತ್ವ ವಿಕಾಸಕ್ಕೆ ಸೌಕರ್ಯಗಳು ದೊರೆಯಲಿಲ್ಲವೆಂಬುದು ಮುಖ್ಯಕಾರಣ”ವೆಂದು ರಂ.ಶ್ರೀ.ಮುಗಳಿಯವರ ಅಭಿಪ್ರಾಯ. ( ಪುಟ ೨೭೨-೨೭೩, ಕನ್ನಡಸಾಹಿತ್ಯ ಚರಿತ್ರೆ, ರಂ.ಶ್ರೀ.ಮುಗಳಿ) ಇಂತಹ ಸುವರ್ಣಾವಕಾಶದ ಕಾರಣದಿಂದ ಹೊನ್ನಮ್ಮ ಬೆಲೆಯುಳ್ಳ ಕಾವ್ಯವನ್ನು ರಚಿಸಿದಳು. ಸ್ತ್ರೀಯರಿಗೆ ಇಂತಹ ವಿಪುಲ ಅವಕಾಶಗಳು ದೊರೆತರೆ ಏನಾಗಬಹುದು. ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಆಧುನಿಕ ಪುನರುಜ್ಜೀವನ ಕಾಲದಲ್ಲಿ ಮಹಿಳೆ ಮತ್ತು ಎಲ್ಲರಿಗೂ ಸಮಾನವಾಗಿ ದೊರೆತ ಶಿಕ್ಷಣ ಕಾರಣವಾಗಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಸಮಾಧಾನಕರ ಸಂಗತಿ.

ಹೊನ್ನಮ್ಮನ ಅಸಾಧಾರಣ ಪ್ರತಿಭೆಗೆ ಸಿಕ್ಕ ಮನ್ನಣೆ ಗೌರವಾದರಗಳು ಅವಳ ಸುಕೃತ ಸಾರ್ಥಕ ಬದುಕು. ಸರಸ ಸಾಹಿತ್ಯದ ವರದೇವತೆ, ಕಾವ್ಯಾಲಂಕಾರ ನಾಟಕಗಳ ಪವಣಿಗೆಯ ಬಲ್ಲವಳು ಎಂದು ತನ್ನ ಗುರು ಸಿಂಗಿರಾರ್ಯನಿಂದ ಹೊಗಳಿಸಿಕೊಂಡದ್ದು ಆಕೆಯ ಕಾವ್ಯದ ಪ್ರೌಢಿಮೆ. ಮಹಿಳೆಯ ವಿಚಾರಗಳನ್ನು ಹೇಳುವುದು ಮಾತಾನಾಡುವುದು ನಿಷಿದ್ಧ ಎಂಬ ಕಾಲದಲ್ಲಿ ಮನೋವೈಜ್ಞಾನಿಕ ಪರಿಕಲ್ಪನೆಯ ಸುಪ್ತಪ್ರಜ್ಞೆ ಎಂಬ ಪರಿಸರದಲ್ಲಿ ಅಥವಾ ಪ್ರಕೃತಿಯಲ್ಲಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವಾಗಿಸಿ ಆಕೆಯ ಬಗೆಗಿನ ಪಾರಂಪರಿಕ ಜ್ಞಾನ ಪ್ರಮಾಣಗಳಾದ ಪುರಾಣ, ವೇದ, ಉಪನಿಷತ್ತುಗಳು, ಜನಪದ ಕಥನಗಳಲ್ಲಿ ಹುದುಗಿರಬಹುದಾದ ಸ್ತ್ರೀ ಮೌಲ್ಯಗಳನ್ನು ಹೆಕ್ಕಿ ತೆಗೆದು ಕಾವ್ಯ ಕಟ್ಟಿದ್ದು ಒಂದು ಜೀವಂತ ಅನುಭವವನ್ನು ಅವಳಿಗೆ ಧಕ್ಕಿಸಿತು ಎನ್ನಬಹುದು. ಅವರವರ ಸಾಂಪ್ರದಾಯಿಕ ಚೌಕ್ಕಟಿನಲ್ಲಿ ಯಾವುದನ್ನು ಹೇಗೆ ಹೇಳಬಹುದು ಎಂಬ ವಿವೇಚನೆಯ ವಿವೇಕದೊಂದಿಗೆ ಬರೆದ ಈ ಕಾವ್ಯ ನೀತಿಕಾವ್ಯವು ಹೌದು, ಮಹಿಳೆಯರ – ಗೃಹಿಣಿಯರ ಕೈಪಿಡಿಯು ಹೌದು, ಸಮೃದ್ಧಿಯ ಸಂಕೇತವು ಹೌದು. ಮೇಡಂ ಬೋವೇರಿ ಆಧುನಿಕ ಕಾಲದಲ್ಲಿ ಬರೆದ ದ ಸೆಂಕೆಡ್ ಸೆಕ್ಸ್ ಹೇಗೆ ಅಮೂಲ್ಯವೋ, ಕೇಟ್ ಮಿಲ್ಲಟ್ ಬರೆದ ಲೈಂಗಿಕ ರಾಜಕಾರಣ (ಸೆಕ್ಷುವಲ್ ಪೊಲಿಟಿಕ್ಸ್) ಹೇಗೆ ಮುಖ್ಯವೋ ಹಾಗೆ ಕ್ರಿ.ಶ.೧೬ನೆ ಶತಮಾನದ ಉತ್ತರಾರ್ಧದಲ್ಲಿ ರಚನೆಯಾದ ‘ಹದಿಬದೆಯ ಧರ್ಮ’ದ ಮೌಲ್ಯವು ಕೂಡ ಮೌಲ್ಯಯುತವಾದ ಕೊಡುಗೆಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ರಾಜ ಪರಿವಾರದ ಶ್ವೇತ ಛತ್ರದ ಅಡಿಯಲ್ಲಿ ಒಬ್ಬ ಸ್ವತಂತ್ರ ಲೇಖಕಿ ಹೇಗೆ ಬರೆಯಬಹುದು ಎಂಬ ಮಾದರಿಯಂತೆ ‘ಹದಿಬದೆಯ ಧರ್ಮ’ ಕಾವ್ಯ ಕಂಡಿದೆ. ಭಾರತೀಯ ಭೌಗೋಳಿಕ ಸಂರಚನೆಯ ಕಾಲದಿಂದಲೂ ಭಾರತೀಯ ಮಹಿಳೆಯರಿಗೆ ಇದ್ದ ಅಸ್ಮಿತೆಯ ಜ್ಞಾನವನ್ನು ಎಸ್ಥಟಿಕ್ ಆದ ನೆಲೆಯಿಂದಲ್ಲದೆ ನೈಜ ಬದುಕಿನ ಸತ್ಯಗಳನ್ನು ಯಾವುದು ಪ್ರಮಾಣ ಯಾವುದು ಅಪ್ರಮಾಣಗಳೆಂದು ಕರೆಯುತ್ತೇವೇಯೋ ಅಂತಹ ವೇದ ಪುರಾಣ ಉಪನಿಷತ್ತುಗಳಲ್ಲಿ ಕಲ್ಪಿಸಿದ ಮಹಿಳೆಯರ ನಡವಳಿಕೆ ಇಲ್ಲಿನ ಮೂಲ ಧಾತುವಾಗಿದೆ.

ಸಾಂಗತ್ಯ ಅಥವಾ ಸಂಗತಿ ಎಂದರೆ ಮೇಳದೊಡನೆ ಸಾಗುವ ಗತಿ ಎಂದು ಅರ್ಥ. ಇದು ಸಂಗೀತ ವಾದ್ಯ ವಿಶೇಷವಾದ ಅಚ್ಚಗನ್ನಡದ ದೇಸಿ ಮಟ್ಟು. ತ್ರಿಪದಿಯಷ್ಟು ಹಳತಾದರೂ ಇರಬಹುದು ಎಂಬ ವಿದ್ವತ್ ಲೋಕದ ಮಾತು ಇದೆ. ಅಂಶ ಗುಣ ನಿಯಮಗಳಿಗೆ ಒಳಪಡುವ ಛಂದೋರೂಪ ಸಾಂಗತ್ಯ. ವೀರರಸ ಪ್ರಧಾನವಾಗಿ ಶೃಂಗಾರ, ಹಾಸ್ಯ, ಕರುಣೆ, ಶಾಂತಿ ರಸಗಳ ಸ್ಥಾಯಿಭಾವಗಳ ಸುಕೋಮಲ ಸ್ವರ್ಶ ಈ ಛಂದಸ್ಸಿನಿಂದ ಸಾಧ್ಯವಿದೆ. ನಾದಮಯವಾದ ಹಿತಮಧುರ ಅನುಭವಗಳನ್ನು ಕಟ್ಟುವ ಅಂತರಂಗ ಪರಿಶುದ್ಧ ಸ್ಫುಟವಾದ ಆನಂದಾನೂಭೂತಿಯನ್ನು ಈ ಛಂದಸ್ಸಿನಲ್ಲಿ ಕಾಣಬಹುದು. ಪ್ರಾಚೀನ ಕವಿಗಳಿಂದ ಹಿಡಿದು ಅರ್ವಾಚೀನ ಕವಿಗಳ ವರೆಗೂ ಈ ಛಂದಸ್ಸಿನ ರಚನೆಯ ಬಳಕೆಯನ್ನು ಕಾಣಬಹುದು. ನಾಗವರ್ಮ, ಜಯಕೀರ್ತಿಯರು ಸಾಂಗತ್ಯದ ಲಕ್ಷಣವನ್ನು ತಿಳಿಸಿಲ್ಲ. ಆದರೂ ಇದು ತ್ರಿಪದಿಯ ಲಯಕ್ಕೆ ಸಮೀಪವಾಗಿದೆ ಎಂಬುದು ವಿಧಿತವಾದ ಸತ್ಯ. ಸಂಗತಿ, ಘಟನೆ, ಸಂದರ್ಭ ಮತ್ತು ಸನ್ನಿವೇಶ ನಿರ್ಮಾಣಗಳ ವಿಷಯ ನಿರೂಪಣೆ ಕ್ರಮವನ್ನು ವಿನ್ಯಾಸಗೊಳಿಸಿ ಝಲಕ್ ನ ರೀತಿ ಸಂಗತಿ ಹಾಕುವುದೆ ಸಾಂಗತ್ಯದ ಕೆಲಸ. ಸಂಗೀತದಲ್ಲಿ ಸಂಗತಿ ಹಾಕು ಎನ್ನುವ ಅರ್ಥ ಇದುವೆ ಆಗಿದೆ. ಇದರಲ್ಲಿ ಘಾತ, ಹುಸಿಪೆಟ್ಟು ಹಾಕುವ ಹಸ್ತಾಂಗುಲಿ ವ್ಯಾಪಾರವು ಇದೆ. ತಾಳತಟ್ಟುವ ವಾಡಿಕೆಯು ಇದೆ. ಸಾಂಗತ್ಯ – ವಿಶಿಷ್ಟವಾದ ಹಾಡುಗಬ್ಬ ಭಾಜನಗಬ್ಬವಾಗಿ ಕನ್ನಡ ದೇಸಿಯಾದ್ದರಿಂದ ಇದರ ಇತಿಹಾಸ ಚತ್ತಾಣ, ಬೆದಂಡೆ, ವನಕೆವಾಡು ಮೂಲ ದೇಸಿ ಛಂದಸ್ಸುಗಳ ಕಡೆಗೂ ಊಹೆ ಮಾಡುವ ಅವಕಾಶವಿದೆ. ಅದರೆ ಅವುಗಳಿಗೆ ಲಕ್ಷಣವನ್ನು ಪುರಸ್ಕರಿಸಿಲ್ಲ ಎಂಬುದನ್ನು ತಿಳಿಯಬಹುದು. ವರ್ಣನೆಗಳಿಗೆ ಅಸದಳವಾದ ಒಂದು ಸುಂದರ ಚೌಕಟ್ಟಿನ ದೇಸಿಯ ಮಟ್ಟು ಸಾಂಗತ್ಯ. ಇದು ಕರತಲಮಲಕ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿಯಾಗಿ ಪರಿಣಾಮಕಾರಿಯಾದ ಓಟವನ್ನು ಪಡೆದಿದೆ. ಸಾಂಗತ್ಯ ಛಂದಸ್ಸಿನಲ್ಲಿ ನಾಲ್ಕು ಪಾದಗಳಿದ್ದು ಒಂದು ಮತ್ತು ಮೂರನೇ ಪಾದಗಳು ಹಿರಿಯವು. ಎರಡು ಮತ್ತು ನಾಲ್ಕನೇ ಪಾದಗಳು ಕಿರಿಯವು. ಹಿರಿಯಪಾದದಲ್ಲಿ ನಾಲ್ಕು ವಿಷ್ಣುಗಣಗಳು ಮತ್ತು ಕಿರಿಯ ಪಾದಗಳಲ್ಲಿ ಎರಡು ವಿಷ್ಣುಗಣಗಳು ಮತ್ತು ಒಂದು ಬ್ರಹ್ಮಗಣ ಬರುತ್ತದೆ ಒಟ್ಟಾರೆ ಸಾಂಗತ್ಯದಲ್ಲಿ ಏಳು ಮತ್ತು ಹದಿನಾಲ್ಕನೇ ಗಣಗಳು ಬ್ರಹ್ಮಗಣದಿಂದ ಕೂಡಿ ಮಿಕ್ಕವು ವಿಷ್ಣುಗಣ ಪ್ರಧಾನವಾಗಿ ಕೂಡಿರುತ್ತವೆ. ಹಿರಿಯ ಪಾದಗಳಲ್ಲಿ ನಾಲ್ಕು ಗಣದಂತೆ ವಿಭಜನೆ, ಕಿರಿಯ ಪಾದಗಳಲ್ಲಿ ಮೂರು ಗಣದಂತೆ ಗಣ ವಿಭಜನೆಯಾಗಿ, ಗಣ ನಿಯಮ ವಿಪರ್ಯಾಸ ವಿನ್ಯಾಸ ಸಂಯೋಜನೆ ಪಡೆಯುತ್ತವೆ.

ವಿ+ವಿ+ವಿ+ವಿ
ವಿ+ವಿ+ಬ್ರ
ವಿ+ವಿ+ವಿ+ವಿ
ವಿ+ವಿ+ಬ್ರ

ನೋಟರಾ|ಯನ ಮೇಲೆ| ನೆನಹು ರಾ|ಗದ ಮೇಲೆ|
ನೀಟ ತಂ|ತಿಯ ಮೇಲೆ|ಬೆರಳು|
ಚಾಟುಕಾ|ತಿಯರು ವಾಂ|ದಸಿಕೆಯ| ನೊಂಕಿಸಿ|
ಘಾಟಿಕೆ|ಯಿಂದ ಪಾ|ಡಿದರು.

ಇನೊಂದು ಉದಾಹರಣೆ

ಪೆಣ್ಣಲ್ಲ|ವೆ ತಮ್ಮನೆ|ಲ್ಲ ಪಡೆ|ದ ತಾಯಿ|
ಪೆಣ್ಣಲ್ಲ|ವೆ ಪೊರೆ|ದವಳು|
ಪೆಣ್ಣು ಪೆ|ಣ್ಣೆಂದೇತ|ಕೆ ಬೀಳು|ಗಳೆವರು|
ಕಣ್ಣು ಕಾ|ಣದ ಗಾ|ವಿಲರು|

ಸಾಂಗತ್ಯವನ್ನು ಬಳಸಿ ಅಚ್ಚಗನ್ನಡ ದೇಸಿ ಕಾವ್ಯಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ ಕೃತಿಗಳೆಂದರೆ ಶಿಶುಮಾಯಣನ ಅಂಜನಾ ಚರಿತೆ, ತ್ರಿಪುರ ದಹನ, ದೇಪರಾಜನ ಸೊಬಗಿನ ಸೋನೆ, ತೆರಕಣಾಂಬಿ ಬೊಮ್ಮರಸನ ಜೀವಂಧರ ಸಾಂಗತ್ಯ, ಮಂಗರಸನ ನೇಮಿ ಜಿನೇಶ ಸಾಂಗತ್ಯ, ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ, ನಂಜುಂಡ ದೇವನ ಭೈರವೇಶ್ವರ ಕಾವ್ಯ, ಕನಕದಾಸರ ಮೋಹನ ತರಂಗಿಣಿ, ರತ್ನಾಕರ ವರ್ಣಿಯ ಭರತೇಶ ವೈಭವ, ಹೆಳವನಕಟ್ಟೆ ಗಿರಿಯಮ್ಮನ ಚಂದ್ರಹಾಸನ ಕಥೆ, ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮ ಸಾಂಗತ್ಯ, ಅಳಿಯ ಲಿಂಗರಾಜನ ಕಾವ್ಯಗಳು ಮೊದಲಾದವುಗಳು ರಚನೆಯಾಗಿವೆ. ಇದು ಸಾಂಗತ್ಯ ಛಂದಸ್ಸಿನ ವಿವರವಾಗಿದೆ

ಹೊನ್ನಮ್ಮನ ಕಾವ್ಯದ ವಿಳಾಸವನ್ನು ನೋಡಿದರೆ ‘ಹದಿಬದೆಯ ಧರ್ಮ’ಕಾವ್ಯ ಹೆಣ್ಣಿನ ಅಂತರಂಗ ( ಕುಟುಂಬ) ಮತ್ತು ಬಹಿರಂಗ(ಸಮಾಜ)ದ ಕೈಗನ್ನಡಿಯಾಗಿದೆ. ಭಾರತೀಯ ಸಂಸ್ಕೃತಿಯ ಮುಖಾಮುಖಿ ವಿಚಾರ ಧಾರೆಗಳಲ್ಲಿ ಗರತಿಯರ ಅಥವಾ ಪತಿವ್ರತೆಯರ ಹಾಡುಪಾಡುಗಳು ಕಾವ್ಯ ಮಾಧ್ಯಮದ ಅಭಿರುಚಿಗೆ ತಕ್ಕಂತೆ ಜನಪದ ಗೇಯಗುಣದ ಛಂದಸ್ಸಿನ ಮಟ್ಟುಗಳಾಗಿ ಹೊರಹೊಮ್ಮಿದೆ. ಹೆಣ್ಣಿನ ವಿಚಾರ ಗುಣಗಳನ್ನು ಬರೆಯಲು ನಾಲ್ಕು ಸಾಲಿನ ಸಾಂಗತ್ಯವನ್ನು ಅತ್ಯಂತ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ಇಲ್ಲಿನ ಕವಯಿತ್ರಿ ಬಳಸಿರುವಳು. ಭಾಷೆಯನ್ನು ದುಡಿಸಿಕೊಳ್ಳವ ಕಾವ್ಯ ಯೋಗ್ಯವಾದ ಸಾಂಗತ್ಯ ಛಂಧಸ್ಸಿನಲ್ಲಿ ಆಕೆ ಕಾವ್ಯ ಬರೆದಳು. ಹೊನ್ನಮ್ಮನ ಅಭಿವ್ಯಕ್ತಿಯ ಮಾಧ್ಯಮವಾಗಿ ಇದು ಮೂಡಿಬಂದಿದೆ.

“ಪದಿನೆಂಟು ಬಣ್ಣನೆಯೆಂದು ಬವಣೆಗೊಂಡು
ಪದಗೆಟ್ಟು ಬಯಲ ಬಣ್ಣಿಸಿದೆ
ಮುದಗೊಡನಿಹಪರದೇಳ್ಗೆವೆಡೆಯೆ ಹದಿ
ಬದೆಯ ಧರ್ಮವ ಬಣ್ಣಿಪೆನು”

ಇಲ್ಲಿರುವ ಸ್ತ್ರೀ ಗೀತೆಯೆಲ್ಲವೂ ರಾಮಾಯಣ, ಭಗವದ್ಗೀತೆ, ಮಹಾಭಾರತ, ಮನುಧರ್ಮಶಾಸ್ತ್ರ, ಪುರಾಣಾದಿ ಕತೆಗಳಲ್ಲಿ ಹೆಣ್ಣಿನ ಬಗ್ಗೆ ಬಂದ ನೀತಿ ನಿರೂಪಣೆಗಳ ವಿಚಾರಗಳು ಕೃತಿ ರೂಪ ತಳೆದಿದೆ.

“ಧರ್ಮರಹಸ್ಯವನರಿತಿರ್ಪೆನೆಂಬೊಂದು
ಪೆರ್ಮೆಯೊಳುಸುರ್ದವಳಲ್ಲ
ಧರ್ಮದ ನೆನಹು ಮರೆಯದಂತೆ ಕೃತಿಯಾಗಿ
ನಿರ್ಮಿಸಿ ನೆಲೆಗೊಳಿಸಿದನು”

ಎಂಬಲ್ಲಿ ಧರ್ಮರಹಸ್ಯವೆಲ್ಲ ತಿಳಿದಿಯೆಂಬ ಯಾವ ಹಮ್ಮುಬಿಮ್ಮು ಹೆಚ್ಚುಗಾರಿಕೆಯಿಂದ ಇದನ್ನು ರಚಿಸಲಿಲ್ಲ. ಧರ್ಮದ ನೆನಪು ಮರೆಯದೆ ಇರಲಿ ಎಂದು ಈ ಕೃತಿರೂಪದಲ್ಲಿ ಹೇಳಿದ್ದೇನೆ. ಇನ್ನು ಮುಂದೆ ಆಕೆಯ ಕೃತಿ ತಾಳುವ ಸೌಜನ್ಯವಿಂತದ್ದು.

“ಭಾವಿಸೆ ಬಿಜ್ಜೆಗಲಿತ ಪೆರ್ಮೆಯೆನಗಿಲ್ಲ
ದೇವತೆಗಳ ವರಮಿಲ್ಲ
ಆವುದನುಪದೇಶವಿತ್ತನಾರ್ಯನು ತನ
ಗಾ ವಿಧದೊಳು ಪೇಳಿದೆನು”

ಎನ್ನುವಾಗ ವಿದ್ಯೆಯನ್ನು ಕಲಿತಿರುವೆನೆಂಬ ಅಹಂ ಹೆಮ್ಮೆ ನನಗಿಲ್ಲ. ನನಗೆ ಯಾವ ದೇವತೆಗಳ ವರವೂ ಇಲ್ಲ. ಆಚಾರ್ಯರು ಅಂದರೆ ಸಿಂಗಿರಾರ್ಯರು ಯಾವುದನ್ನು ಉಪದೇಶ ಮಾಡಿದರೋ ಅದನ್ನು ಅದೇ ರೀತಿಯಲ್ಲಿ ಹೇಳಿದ್ದೇನೆ ಎನ್ನುವ ವಿನಯವಂತಿಕೆ ಹೊನ್ನಮ್ಮನಿಗಿದೆ.

“ಓಲೆವಿಡಿದು ನಾಮೋದಲೇಕಿದನೆಮ್ಮ
ಶೀಲವನೆಂದು ಕಳೆಯದೆ
ಬಾಲೆ ಬಣ್ಣಿಸಿ ಬಳಲಿದಳೆಂಬ ಮರುಕದಿಂ
ದಾಲಿಪುದಖಿಲ ಸತಿಯರು”

ಇದು ನಮ್ಮ ಶೀಲ, ಓಲೆಯ ಹಾಳೆಗಳನ್ನು ಹಿಡಿದು ಏಕೆ ಓದಬೇಕು – ಎಂದು ತಿರಸ್ಕರಿಸಿದೆ, ಹೆಣ್ಣುಮಗಳು ವರ್ಣಿಸಿ ಆಯಾಸಗೊಂಡಿದ್ದಾಳೆ ಎಂಬ ಕರುಣೆಯಿಂದ ಎಲ್ಲ ಸತಿಯರೂ ಇದನ್ನು ಕೇಳಬೇಕು. ಎಂಬ ಔಚಿತ್ಯ ಪ್ರಜ್ಞೆಯ ನಿವೇದನೆ ಕವಯಿತ್ರಿಯಲ್ಲಿ ಕಾವ್ಯ ರಚನೆಯ ಸವಿನಯ ವಿವೇಕವನ್ನು ಕಾಣಬಹುದು.

“ಪೆಣ್ಣು ಪೆತ್ತವರ ಬಳಗ ಬಳೆವುದು ಬೇಗ
ಪೆಣ್ಣು ಪೆತ್ತವರು ಪೆರ್ಚುವರು
ಪೆಣ್ಣ ಪೆತ್ತುದರಿಂದ ಪೆಸರೆನಿಸಿತು ಮಿಗೆ
ಬಣ್ಣವೇರಿತು ಪಾಲ್ಗಡಲು

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು
ಪೆಣ್ಣಿಂದ ಭೃಗು ಪೆರ್ಚಿದನು
ಪೆಣ್ಣಿಂದ ಜನಕರಾಯನು ಜಸವಡಎದನಉ
ಪೆಣ್ಣ ನಿಂದಿಸಲೇಕೆ ಪೆರರು

ಸಿರಿರಾಣಿಯ ಸೀತೆಯ ರುಕ್ಮಿಣಿಯ ಶ್ರೀ
ಹರಿಯೊಡನೊಂದು ಹಂತಿಯೊಳು
ಇರಿಸಿ ಪೂಜೆಯನೊಡೆರಿಸುವರು ಪಿರಿಯರು
ಪರಿಕಿಪೊಡವರು ಪೆಣ್ಣೈಸೆ”

ಇಂತಹ ಕಾವ್ಯ ಭಾಗಗಳಲ್ಲಿ ಹೆಣ್ಣು ಹೆತ್ತವರ ಬಳಗ ಬಹಳ ಬೇಗ ಬೆಳೆಯುತ್ತದೆ. ಹೆಣ್ಣು ಹೆತ್ತವರು ಹೆಚ್ಚುತ್ತಾರೆ. ಹೆಣ್ಣು ಹೆತ್ತದ್ದರಿಂದ ಹೆಸರು ಬರುತ್ತದೆ. ಅದರಿಂದಲೇ ಕ್ಷೀರಸಮುದ್ರದ ಕೀರ್ತಿ ಹೆಚ್ಚಿತು. ಹಿಮವಂತ ಎಂಬ ರಾಜನು ಪಾರ್ವತಿ ಎಂಬ ಮಗಳನ್ನು ಪಡೆದು ಹೆಮ್ಮೆ ಪಡೆದನು. ಹೆಣ್ಣು ಮಗಳಾದ ಲಕ್ಷ್ಮಿಯಿಂದ ಭೃಗುವಿನ ಕೀರ್ತಿ ಹೆಚ್ಚಿತು. ಹೆಣ್ಣುಮಗು ಸೀತೆಯಿಂದ ಜನಕರಾಯನ ಖ್ಯಾತಿ ಹೆಚ್ಚಾಯಿತು. ಆದ್ದರಿಂದ ಇತರರು ಹೆಣ್ಣುಮಕ್ಕಳನ್ನು ಏಕೆ ನಿಂದಿಸಬೇಕು. ಸಿರಿರಾಣಿಯಾದ ಲಕ್ಷ್ಮಿ, ಸೀತೆ, ರುಕ್ಮಿಣಿ ಇವರನ್ನು ಹರಿಯೊಡನೆ ಒಂದೆ ಸಾಲಿನಲ್ಲಿ ಕೂರಿಸಿ ಪೂಜಿಸುವ ಕ್ರಮವನ್ನು ಹಿರಿಯರು ಮಾಡಿದ್ದಾರೆ. ಅವರೆಲ್ಲ ಹೆಣ್ಣಲ್ಲವೆ ಎಂಬ ವಿಚಿಕಿತ್ಸಕ ಪ್ರಶ್ನೆಯೊಂದಿಗೆ ಇಲ್ಲಿನ ಅರ್ಥಪೂರ್ಣ ಕಾವ್ಯ ಸಾಲುಗಳಿವೆ.

” ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು
ಇವರಿರ್ವರೊಳೇಳ್ಗೆವಡೆದವರಿಂದ
ಸವನಿಪುದಿಹಪರಸೌಖ್ಯ

ಕುಲಪುತ್ರನೋದಿ ತಿಳಿದು ನಡೆದಲ್ಲದೆ
ಕುಲವನುದ್ಧರಿಸಲರಿಯನು
ಕುಲಪುತ್ರಿಯೊಳ್ಗುವರನಿಗಿತ್ತ ಮಾತ್ರಕೆ
ಕುಲಕೋಟಿಯನುದ್ಧರಿಪಳು”

ಕುಮಾರನಾದರೆ ಹೆಚ್ಚಿನ ಗುಣವೇನು? ಕುಮಾರಿಯಾದರೆ ಹೆಚ್ಚಿನ ಕುಂದೇನು? ಇವರಿಬ್ಬರಲ್ಲಿ ಯಾರಿಂದ ಅಭಿವೃದ್ಧಿ ಹೊಂದುತ್ತಾರೆಯೋ ಅವರಿಂದ ಇಹಪರ ಸುಖಗಳು ಲಭಿಸುವುದು. ಕುಲಪುತ್ರನು ಓದಿ ಅರ್ಥಮಾಡಿಕೊಂಡು ನಡೆದುಕೊಂಡ ಹೊರತು ಕುಲವನ್ನು ಉದ್ಧರಿಸಲು ಸಾಧ್ಯವಿಲ್ಲ. ಕುಲಪುತ್ರಿಯಾದ ಹೆಣ್ಣನ್ನು ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡಿದ ಮಾತ್ರಕ್ಕೆ ಅವಳು ಕುಲಕೋಟಿಗಳನ್ನು ಉದ್ಧರಿಸುವಳು. ಎಂಬ ಹಿರಿಮೆಯನ್ನು ಹೊನ್ನಮ್ಮ ಹೇಳಿದ್ದಾಳೆ.

“ಇತ್ಥಂ ಯದಾ ಯದಾ ಬಾಧಾ ದಾನವೋತ್ಥಾ ಭವಿಷ್ಯತಿ|
ತದಾ ತದ್ಯಾವತೀರ್ಯಾಹಂ ಕರಿಷ್ಯಾಮ್ಯರಿ ಸಂಕ್ಷಯಂ|” ( ದುರ್ಗಾಸಪ್ತಶತಿ ೧೧-೫೫)

ಎಂಬ ದೇವಿ ಉಪಾಸನೆಯ ಆಶ್ವಾಸನೆ ನಂಬಿಕೆ ಭಕ್ತರಿಗೆ ಪುರಾಣ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ನಡೆದು ಬಂದಿರುವ ಆಧ್ಯಾತ್ಮಿಕ ಆಚರಣೆಗಳೆ ಆಗಿವೆ.

” ಯಾದೇವೀ ಸರ್ವಭೂತೇಷು ವಿಷ್ಣು ಮಾಯೇತಿ ಶಬ್ದಿತಾ|
ನಮಸ್ತೆಸ್ಯೈ, ನಮಸ್ತಸ್ಯೈ, ನಮಸ್ತೆಸ್ಯೈ, ನಮೋ ನಮಃ|

ಯಾದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ|
ನಮಸ್ತೆಸ್ಯೈ, ನಮಸ್ತಸ್ಯೈ, ನಮಸ್ತೆಸ್ಯೈ,ನಮೋ ನಮಃ|”

ಯಾವ ದೇವಿಯು ಸರ್ವ ಪ್ರಾಣಿಗಳಲ್ಲಿ ವಿಷ್ಣು ಮಾಯೆ ಎಂದು ಕರೆಯಲ್ಪಡುವಳೋ ಅವಳನ್ನು ಪುನಃ ಪುನಃ ನಮಿಸುತ್ತೇನೆ. ಯಾವ ದೇವಿಯು ಸರ್ವ ಪ್ರಾಣಿಗಳಲ್ಲಿ ಶಕ್ತಿರೂಪದಲ್ಲಿರುವಳೋ ಅವಳನ್ನು ಪುನಃ ಪುನಃ ನಮಿಸುತ್ತೇನೆ. ( ಶಕ್ತಿದೇವತೆಯ ವಿವಿಧ ಮುಖಗಳು. ಡಿ.ಎನ್. ವಿ. ವಿಮಲ . ಗೌರವ – ಜಿ.ಎಸ್.ಎಸ್ ೭೫ , ಪುಟ ೨೧೭) ಸಮಸ್ತ ಜೀವರಾಶಿಗೆ ಮಂಗಳವನ್ನು, ಸರ್ವರ ಒಳಿತನ್ನು, ವಿಶ್ವಶಾಂತಿಯನ್ನು ಕೋರುವ ಮತ್ತು ಸಂಪದ್ಭರಿತವಾಗಿ ಸಮೃದ್ಧಿಯನ್ನು ಬಯಸುವ ಸದಿಚ್ಛೆಯ ದೇವಿಶಕ್ತಿಗೆ ನಮನಗಳು ಎಂಬ ನಮ್ರತೆ ಪ್ರಾಚೀನ ಕಾಲದಿಂದಲೂ ಜನಪದರಲ್ಲಿ ಇರುವ ಬಹುದೊಡ್ಡ ನಂಬಿಕೆ. ಈ ಹಿನ್ನೆಲೆಯಲ್ಲಿ ದೇವಿ ಆರಾಧನೆಗಳು, ನವರಾತ್ರಿ ಉತ್ಸವಗಳು, ದೇವಿ ಜಾತ್ರೆಗಳು ಭಾರತದಾದ್ಯಂತ ನಡೆಯುವುದು ವಾಡಿಕೆಯಲ್ಲಿದೆ. ಕರ್ನಾಟಕದಲ್ಲಿ ಎಷ್ಟೋ ಗ್ರಾಮದೇವತೆಗಳ ಮೇಲೆ ಸಂಶೋಧನೆಗಳು ಹೊರಬಂದಿವೆ ಎಂಬ ವಿಚಾರ ಶಿಷ್ಟದೇವತೆಗಳಂತೆ ಗ್ರಾಮೀಣ ದೇವತೆಗಳು ಸಹ ತನ್ನ ಕ್ಷೇತ್ರಗಳಲ್ಲಿ ಮಕ್ಕಳನ್ನು ಕಾಪಾಡಬಲ್ಲಳು. ಎನ್ನುವ ಆತ್ಮವಿಶ್ವಾಸದ ನಂಬಿಕೆಯ ಮಹಿಮೆಗಳನ್ನು ತಿಳಿಯಬಹುದು. ಉದಾಹರಣೆಗೆ ಡಾ. ಚನ್ನಣ್ಣವಾಲೀಕಾರರ ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು’ ಮತ್ತು ಡಾ.ಸಿದ್ದಲಿಂಗಯ್ಯನವರ ‘ಗ್ರಾಮ ದೇವತೆಗಳು’ ಎಂಬ ಜನಪ್ರಿಯ ಸಂಶೋಧನಾ ಗ್ರಂಥಗಳನ್ನು ಇಲ್ಲಿ ಸ್ಮರಿಸಬಹುದು. ಇವೆಲ್ಲವು ಮೂರ್ತ ಅಮೂರ್ತ ಲೌಕಿಕ ಅಲೌಕಿಕವಾದ ತಾರ್ಕಿಕ ನೆಲೆಯಲ್ಲಿ ಆಧ್ಯಾತ್ಮ ಹಾಗೂ ಜನರ ಬದುಕನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಜೀವಂತವಾಗಿಡುವ ಕೃಷಿ ಅಥವಾ ಪ್ರಕೃತಿಯ ಪ್ರಾಥಮಿಕ ಕಲ್ಪನೆಯನ್ನು ತಿಳಿಸುತ್ತವೆ. ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆ ಕೋಲರಿಜ್ ಹೇಳಿದ ಕಲ್ಪನಾ ಸಿದ್ದಾಂತ (ಇಮ್ಯಾಜಿನೇಷನ್ ತತ್ವ) ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೇಳಲಾದ ಪ್ರತಿಭಾ ಸಿದ್ದಾಂತಗಳ – ಭವನಿಮಜ್ಜನ ಚಾತುರ್ಯ ಹಾಗೂ ಲಘಿಮಾ ಕೌಶಲ್ಯಗಳ ಅನ್ವೇಷಣೆಗಳೆ ಆಗಿವೆ. ಲಲಿತ ಕಲೆಗಳ ಪ್ರಥಮ ಮಾಧ್ಯಮವಾಗಿ ನಾವು ಕಾಣುವ ಸತ್ಯ, ಪ್ರಕೃತಿ ವಿವರಗಳಲ್ಲಿ ಕಣ್ಣುಕಂಡ ಪಂಚಭೂತ ಸತ್ಯಗಳೊಂದಿಗೆ ಬದುಕುವ ಭೂಮಂಡಲದ ಜೀವಸೃಷ್ಟಿಯ ಹಿಂದಿರುವ ಎಷ್ಟೋ ಅಗೋಚರ ಶಕ್ತಿಗಳು ಮತ್ತು ಮಾನವನಿಂದ ಅಸಾಧ್ಯವಾದ ಅತಿಮಾನುಷ ಶಕ್ತಿಗಳ ಅರಿವು ಅವರವರ (ಅಣುಗಳ ರಚನೆ, ಪರಮಾಣುಗಳ ವಿನ್ಯಾಸ, ಅದರ ಶಕ್ತಿ , ಬೈಜಿಕ ಸಂಮ್ಮಿಲನ ಕ್ರಿಯೆ) ಜನಾಂಗಿಕ, ಸಾಮುದಾಯಿಕ, ಸಾಮಾಜಿಕ ಹಿನ್ನೆಲೆಯ ನಂಬಿಕೆ ಮತ್ತು ಸಾಂಸ್ಕೃತಿಕ ಸಹಜವಾದ ಪರಿಸರ ಸಂಬಂಧವನ್ನು ಉಂಟುಮಾಡಿದೆ ಎನ್ನುವುದು ವಸ್ತುನಿಷ್ಠ ಸತ್ಯವಾಗಿದೆ. ಮೆಟ್ ಪಿಸಿಕ್ಸ್ ಎಂಬ ಪಿಲಾಸಫಿಯ ಒಂದು ಭಾಗದಲ್ಲಿ ಇವೆಲ್ಲ ವಿವೇಚನೆಗಳು ಆಲೋಚಿಸಬಹುದಾದ ಸಂಗತಿಗಳಾಗಿವೆ.

ಹೊನ್ನಮ್ಮನ ಹದಿಬದೆಯ ಧರ್ಮದಲ್ಲಿ ಪ್ರಮುಖವಾಗಿ ವಿಭಾಗವಾರು ಕ್ರಮ ನಿರೂಪಣೆಯಲ್ಲಿ ಒಂಭತ್ತು ಸಂಧಿ ಭಾಗಗಳಲ್ಲಿ ಕಾವ್ಯ ನಿರೂಪಣೆಯಾಗಿದೆ. ಮೊದಲನೆಯ ಪೀಠಿಕಾ ಸಂಧಿಯಲ್ಲಿ ಮೈಸೂರು ಅರಸರ ವಂಶನಾಮೆ,ತನ್ನ ಆಶ್ರಯದಾತ ಚಿಕ್ಕದೇವರಾಜ ಒಡೆಯರ್ ಮತ್ತು ಆತನ ಪಟ್ಟಮಹಿಷಿ ದೇವರಾಜಮ್ಮಣ್ಣಿಯ ವರ್ಣನೆಗಳು, ಅವರು ನೀಡಿದ ಆಶ್ರಯ, ಪ್ರಭಾವ, ಪ್ರೇರಣೆ, ಪೋಷಣೆ, ಕಾವ್ಯದ ವಸ್ತು ವಿಷಯ ಆಯ್ಕೆಯನ್ನು ಸ್ಥೂಲವಾಗಿ ವಿವರಿಸಿರುವಳು. ಎರಡನೆಯ ಸಂಧಿಯಲ್ಲಿ ‘ಸತೀಧರ್ಮ’ದ ಮಹತ್ವ ಮತ್ತು ಶಕ್ತಿಯನ್ನು ವ್ರತ ತಪಸ್ಸುಗಳಿಗಿಂತ ಶ್ರೇಷ್ಠವಾದುದೆಂದು, ಸ್ತ್ರೀ ಶಕ್ತಿಯ ಆಚರಣೆಯಿಂದ ಲಭಿಸುವ ಸುಖಶಾಂತಿಗಳನ್ನು ವರ್ಣಿಸಿರುವಳು. ಮೂರನೆಯ ಸಂಧಿಯಲ್ಲಿ ಪತಿ ಶುಶ್ರೂಷೆಯ ವಿಧಾನವನ್ನು ತಿಳಿಸಿರುವಳು. ನಾಲ್ಕನೆಯ ಸಂಧಿಯಲ್ಲಿ ಅತ್ತೆ ಮಾವಂದಿರ ಸೇವೆ ಮತ್ತು ಆತ್ಮ ವಲ್ಲಭನ ಮನೋಗತವನ್ನು ಅರಿತು ನಡೆಯುವ ಕ್ರಮವನ್ನು ವಿವರಿಸಿರುವಳು. ಐದನೆಯ ಸಂಧಿಯಲ್ಲಿ ತಂದೆತಾಯಿ, ಒಡಹುಟ್ಟಿದವರು, ಅತ್ತೆ ಮಾವ ಸಕಲ ಬಂಧು ಬಾಂಧವರೊಂದಿಗೆ ಪರಸ್ಪರ ನಡೆದುಕೊಳ್ಳಬೇಕಾದ ವಿವರವನ್ನು ಹೇಳಿರುವಳು. ಆರನೆಯ ಸಂಧಿಯಲ್ಲಿ ಪ್ರಿಯನಾದವನು ಪ್ರಿಯಳ ಬಗೆಗೆ ಹೇಗೆ ಸವಿನಯವಾಗಿ ಇರಬೇಕೆಂಬುದನ್ನು ತಿಳಿಸಿರುವಳು. ಏಳನೆಯ ಸಂಧಿಯಲ್ಲಿ ಪತಿಯ ವಿರಹವೇದನೆಯಿಂದ ತಲ್ಲಣಗಳಿಗೆ ಗುರಿಯಾದ ಬಾಲೆಯರ ತಳಮಳವನ್ನು ಮನೋವೈಜ್ಞಾನಿಕ ಸುಪ್ತಪ್ರಜ್ಞೆಯಿಂದ ತಿಳಿಸಿರುವಳು. ಎಂಟನೆಯ ಸಂಧಿಯಲ್ಲಿ ಏಕಪತ್ನಿ ದಿನಚರಿಯನ್ನು ವಿವರಿಸಿರುವಳು. ಒಂಭತ್ತನೆಯ ಸಂಧಿಯಲ್ಲಿ ಪತಿಯೆ ಪರದೈವವೆಂದು ಪತಿಪಾದ ಪೂಜೆಯ ಭಕ್ತಿಯ ತಿಳಿದು ಮುಕ್ತಿ ಸಂಪಾದಿಸುವ ರೀತಿಯನ್ನು ವಿವರಿಸಿರುವಳು. ಇಷ್ಟು ಸಂಧಿಗಳಲ್ಲಿ ಅಡಕವಾಗಿರುವ ಸ್ತ್ರೀ ಪತಿವ್ರತಾ ಧರ್ಮದ ನಡವಳಿಕೆ ಶಾಸ್ತ್ರದಲ್ಲಿ ಮಹಿಳೆಯರ ಮಾನವೀಯ ಮೌಲ್ಯಗಳ ವಿವೇಚನೆಯಿದೆ. ಆಧುನಿಕ ಸ್ವಾತಂತ್ರ್ಯ ಯುಗದಲ್ಲಿ ಮಹಿಳೆಯರ ಬದುಕಿನ ಸ್ಥಿತಿಯನ್ನು ಬದಲಿಸಿದ ಜಾಗತಿಕ ವಿದ್ಯಮಾನದ ಈ ಕಾಲಘಟ್ಟದಲ್ಲಿ ನಿಂತು ಸಿಂಹಾವಲೋಕನ ಕ್ರಮದಲ್ಲಿ ನೋಡಿದಾಗ, ಇಪ್ಪತ್ತೊಂದನೆಯ ಶತಮಾನದ ಹೊಸ್ತಿಲ ಮೇಲೆ ನಿಂತು ಅವಲೋಕಿಸಿದಾಗ ಹೊನ್ನಮ್ಮನ ಕಾವ್ಯ ಚಿಂತನೆಗಳು ಸ್ತ್ರೀಯರಿಗೆ – ಸ್ತ್ರೀ ಧರ್ಮ ಬೋಧನೆ ಅಥವಾ ನೀತಿ ಬೋಧನೆಯಾಗಿ ಕಾಣಬಹುದು. ಭಾರತದ ಸಾಂಸ್ಕೃತಿಕ, ಶೈಕ್ಷಣಿಕ, ಜೀವನ ಮಟ್ಟ, ಸಾಂಸ್ಕೃತಿಕ ರಾಜಕಾರಣ ವ್ಯವಸ್ಥೆ ಬದಲಾಗಿರುವ ಸನ್ನಿವೇಶಗಳಲ್ಲಿ ಆಧುನಿಕ ಪೂರ್ವ ಪೌರಾತ್ಯ ಮತ್ತು ಪಾಶ್ಚಿಮಾತ್ಯ ನಾಗರಿಕತೆಗಳ ಪ್ರಭಾವ ಪ್ರೇರಣೆಗಳು ಮುಂದಿಟ್ಟ ಸ್ತ್ರೀವಾದದ ಚಿಂತನಾ ಕ್ರಮಗಳು ಭಾರತದಲ್ಲಿ ಸಿದ್ದ ಮಾದರಿಗಳಾಗಿ ಕಾಣುವ ಕಾಲಘಟ್ಟದಲ್ಲಿ ಹೊನ್ನಮ್ಮನ ಕಾವ್ಯದ ಅನುಸಂಧಾನ ಅಥವಾ ಮುಖಾಮುಖಿಯಾವುದು ಹಾಸ್ಯಾಸ್ಪದವಾದರೂ, ಅದರಲ್ಲಿ ಹೇಳಿದ ಕೆಲವು ವಿವರಗಳು ಇಂದಿನ ಸಾಮಾಜಿಕ ಸ್ವಾಸ್ಥ್ಯವನ್ನು ಸುಧಾರಿಸಿ ಆರೋಗ್ಯಕರವಾದ ಸಮಾಜದ ಹಿತವನ್ನು ಕಾಯಬಲ್ಲದು.

ಆಧುನಿಕ ಪ್ರಪಂಚದಲ್ಲಿ ಹಣವೆ ಎಲ್ಲವೂ ಎಂಬ ದುಡಿಮೆಯ ಪೈಪೋಟಿಗೆ ಬಿದ್ದವರಂತೆ ಮಹಿಳೆಯರು ಸಹಜವಾಗಿ ಅನುಭವಿಸುವ ಅತೀವ ದುಃಖ, ದೈಹಿಕ ಮತ್ತು ಮಾನಸಿಕ ಖಿನ್ನತೆ, ದೃಢತೆ, ಪ್ರಾಮಾಣಿಕತೆ ಪಾರದರ್ಶಕತೆ ಮೊದಲಾದವನ್ನು ವಿವೇಚನೆಗೆ ಒಡ್ಡುವ ಒಂದು ಪೂರ್ವ ತಯಾರಿ ‘ಹದಿಬದೆಯ ಧರ್ಮ’ ಕಾವ್ಯದಲ್ಲಿದೆ. ಸಾಮಾಜಿಕವಾಗಿ ಮೂಲ ಘಟಕವಾದ ಕುಟುಂಬ – ಗೋತ್ರ – ಬಳ್ಳಿ – ಬೆಡಗು – ವಂಶನಾಮೆ – ಪಟ್ಟಾವಳಿ. ಪಿತೃಮೂಲ – ಸಂಬಂಧ, ಮಾತೃಮೂಲ – ಸಂಬಂಧಗಳ ಆಧಾರದಲ್ಲಿ ಸ್ತ್ರೀ ಭಾರತೀಯ ನಾಗರಿಕಳಾಗಿ ಸಾಂಸ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಔದ್ಯೋಗಿಕ, ಔದ್ಯಮಿಕ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡು, ದುಡಿಯುವ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲು ಬಿಕ್ಕಟ್ಟುಗಳಿಗೆ ಸಂವಾದಿಯಾಗಿ ಹೊನ್ನಮ್ಮನ ‘ಹದಿಬದೆಯ ಧರ್ಮ’ ಕಾವ್ಯ ಕೃತಿ ನೀತಿ ನಡವಳಿಕೆಗಳ ನಿರೂಪಣೆಯ ಲೆಜೆಂಡರಿ ಕೃತಿಯಾಗಿದೆ ಎನ್ನಬಹುದು. ಇಲ್ಲಿರುವ ವಸ್ತು ವಿಷಯ ಪೂರ್ತಿ ಐತಿಹಾಸಿಕ ಪೌರಾಣಿಕ ಸ್ತ್ರೀಯರ ನಡವಳಿಕೆಯಿಂದ ಕೂಡಿ ಭಾರತೀಯ ನಾರಿಯರ ಪರಂಪರೆಯನ್ನು ತನ್ಮೂಲಕ ನಿರೂಪಿಸಿದೆ. ಆಧುನಿಕ ಜಗತ್ತು ಜಾಗತಿಕ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಈ ದಿನಗಳಲ್ಲೂ ಕೂಡ, ಸಂಸ್ಕೃತಿ ಎಂಬುದು ಹೈಜಾಕ್ ಆಗಿ ನಾಗಲೋಟದಂತೆ ಸಾಗುತ್ತಿರುವ ಪರಿಸ್ಥಿತಿಯಲ್ಲಿ, ಮಾನವ ಸಂಬಂಧಗಳ ಅರ್ಥಹೀನ ನಡವಳಿಕೆಗಳಿಂದ ತೊಳಲಾಡುವ ವಿಪರ್ಯಾಸಕರ ಸ್ಥಿತಿಯಲ್ಲಿ ಹೊನ್ನಮ್ಮನ ‘ಹದಿಬದೆಯ ಧರ್ಮ’ದ ಚಿಂತನೆಗಳು ಪ್ರಸ್ತುತವಾಗಿದೆ. ಆಧುನಿಕ ಪ್ರಪಂಚದಲ್ಲಿ ಸ್ತ್ರೀವಾದದ ಸಿದ್ದ ಮಾದರಿಗಳು ಆಂಗ್ಲಭಾಷೆಯಿಂದ ಬೇಕಾದಷ್ಟು ಬಂದಿರುವಾಗ, ಒಂದು ಬಹು ದೊಡ್ಡ ಸಂಸ್ಕೃತಿ, ಉಪಸಂಸ್ಕೃತಿ, ಶ್ರಮಣಧಾರೆಗಳ ಮುಖ್ಯವಾಹಿನಿಯಲ್ಲಿ ಸ್ತ್ರೀಯರ ಅವಕಾಶಗಳು ಮಾಸ್ಟರ್ ಕಲ್ಚರ್ ಎದುರಿನಲ್ಲಿ ತೆರೆದುಕೊಳ್ಳುತ್ತಿವೆ. ಈ ವಿಭಿನ್ನತೆಯ ಮೂಲಕ ಆಧುನಿಕ ಪರಿಭಾಷೆಯಲ್ಲಿನ ಹಲವು ಬಿಕ್ಕಟು, ತುರ್ತು, ಅನಿಶ್ಚಿತತೆಗಳನ್ನು ನಿರ್ವಹಿಸುವ ಸಾಂಸ್ಕೃತಿಕ ರಾಜಕಾರಣದ ಮಹತ್ವವನ್ನು ಹದಿಬದೆಯ ಧರ್ಮ ಮೂಡಿಸಿದೆ. ‘ಸ್ತ್ರೀ’ ಸಾಂಸ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಹೇಗೆ ಕ್ರಿಯಾಶೀಲಳು, ಚಟುವಟಿಕೆಯ ಕಾರ್ಯ ತತ್ಪರಳು, ಧರ್ಮದಲ್ಲಿ ಎಲ್ಲಿ ಅವಳನ್ನು ,ಅವಳ ಹಕ್ಕುಗಳನ್ನು ದಮನಿಸಲಾಗಿದೆ.

ದಮನಿಸಲಾದ ಕಾಲಘಟ್ಟದಲ್ಲಿ ಸ್ತ್ರೀಯರ ನಡವಳಿಕೆ ಹೇಗಿತ್ತು. ಎಂಬ ವಿಚಾರಗಳನ್ನು ಮಹಾಭಾರತದ ದ್ರೌಪದಿಯ ವಿಚಾರದಿಂದ ಅರಿಯಬಹುದು. ದುಡಿಯುವ ಮಹಿಳೆಯರು ಸಹ ಸಾಹಿತ್ಯ ಸೃಜನೆ ಮಾಡಬಹುದು ಎಂಬ ಉದಾಹರಣೆ ಹೊನ್ನಮ್ಮನ ‘ಹದಿಬದೆಯ ಧರ್ಮ’ ಕಾವ್ಯವಾಗಿದೆ. ಪುರಾಣ ಕಾವ್ಯಗಳಲ್ಲಿ ಜನಪ್ರಿಯವಾದ ಸೀತೆ, ದ್ರೌಪದಿ, ಅಹಲ್ಯೆ, ಸಾವಿತ್ರಿ, ಅನುಸೂಯಾ, ಕುಂತಿ, ಗಾಂಧಾರಿ, ದೇವಕಿ, ನಳದಮಯಂತಿ, ಆರುಂಧತಿ, ಲೋಪಾಮುದ್ರಾ, ಪಾರ್ವತಿ, ಲಕ್ಷೀ, ಶುಕುಂತಲಾ ಮೊದಲಾದ ದೈವಿಕ ಪೌರಾಣಿಕ ಪಾತ್ರ ಕಥನಗಳ ವಿವೇಚನೆಯ ಪತಾಳಿಯ ಸಂವೇದನಾಶೀಲತೆಯಲ್ಲಿ ಬಿಕ್ಕಟ್ಟುಗಳು ವಿಭಿನ್ನವಾದರೂ ಸಾಂಸ್ಥಿಕ ನೆಲೆಯಲ್ಲಿ ನರಳುವ ಬಗೆ ಒಂದೆ ತೆರನಾಗಿ ಕಂಡರೆ ಅದು ಇಲ್ಲಿನ ಸ್ತ್ರೀ ಧರ್ಮವೆಂಬ ‘ಹದಿಬದೆಯ ಧರ್ಮ’ದ ಸಂವೇದನಾ ಶೀಲತೆಯಾಗಿದೆ. ಉಪದೇಶ, ನೀತಿಕಾವ್ಯ, ಗುಣಗ್ರಾಹಿ ಹೆಣ್ಣುಮಕ್ಕಳ ಲಕ್ಷಣವನ್ನು ಲಕ್ಷಿಸಿ ಬರೆದ ಹೊನ್ನಮ್ಮನ ಕೃತಿ ಆಗಿನ ಕಾಲಕ್ಕೆ ಹೊಗಳಿಸಿಕೊಂಡ ಕೃತಿಯಾಗಿದೆ. ಇದರ ನೆಲೆಬೆಲೆ ಎತ್ತರ ಭಿತ್ತರಗಳನ್ನು ಆಗಿನ ಕಾಲಕ್ಕೆ ಯಾವ ಕೃತಿಗಳೂ ಸರಿಗಟ್ಟಲಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಂತಿ, ಕುಂದಣರಸಿ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ವಚನಗಾರ್ತಿಯರು, ಗಂಗಾದೇವಿ, ಜಕ್ಕಲಾಂಬಾ ( ಶ್ರೀಮತಿ), ನಾಗಲಾದೇವಿ, ಚಂದನಾಂಬಿಕೆಯ ಕತೆಯ ಅಜ್ಞಾತ ಕವಯಿತ್ರಿ, ಮಹಾಮಂಡಳೇಶ್ವರಿಯರ ಶಾಸನ ಕೃತಿಗಳು, ಹೆಳವನಕಟ್ಟೆ ಗಿರಿಯಮ್ಮ, ಗಲಗಲಿ ಅವ್ವನವರು ಮೊದಲಾದವರ ರಚನೆಗಳಿದ್ದರು, ಅವು ಸ್ತ್ರೀ ಉದ್ದೇಶಿತ ಅಥವಾ ಸ್ತ್ರೀ ಕೇಂದ್ರಿತ ಚರ್ಚೆಗಳಾಗಿರದೆ, ನಿರ್ದಿಷ್ಟ ಕಥಾವಸ್ತು ಹೊಂದಿದ ರಚನೆಗಳಾಗಿವೆ. ಭಕ್ತಿ ಕೇಂದ್ರಿತ ನೆಲೆಯಲ್ಲಿ ರಚನೆಯಾದವುಗಳು ಭಕ್ತಿ ಆಂದೋಲನದ ವಿಷಯ ನಿರೂಪಣೆಯಿಂದ ಕೂಡಿವೆ. ಆಧ್ಯಾತ್ಮಿಕ ಸಾಹಿತ್ಯದಲ್ಲಿ ಸ್ತ್ರೀತನವನ್ನು ಅವು ಸಂಕೇತವಾಗಿ ನಿರೂಪಿಸಿದವು. ಇನ್ನು ಕೆಲವು ಕೃತಿಗಳು ಐತಿಹಾಸಿಕ ರಾಜಸಂಸ್ಥಾನಗಳ ಚರಿತ್ರೆಗಳು ಆಗಿವೆ. ಆದರೆ ಹೊನ್ನಮ್ಮನ ‘ಹದಿಬದೆಯಧರ್ಮ’ ಪೂರ್ತಿ ಮಹಿಳಾವಾದ, ಸ್ತ್ರೀವಾದ (ಫಿಮಿನಿಸಂ) ಎಂಬ ಪರಿಭಾಷೆ ಹುಟ್ಟುವುದಕ್ಕೆ ಮುಂಚಿನ ಆಯಾಮವಾಗಿ ಕಂಡುಬರುತ್ತದೆ. ಕಾಲ – ದೇಶ – ಅಂತರ ಯುಗದ ಕಲ್ಪನೆಯಿಂದ ಇದು ಅವತ್ತಿನ ಸ್ತ್ರೀ ಸಂವೇದನೆ ಅಥವಾ ಸ್ತ್ರೀ ಚಿಂತನೆ ಎನ್ನಬಹುದು.

ಇದು ಅಚ್ಚಗನ್ನಡ ದೇಸಿ ಶೈಲಿ ಸಾಂಗತ್ಯ ಛಂಧಸ್ಸಿನಲ್ಲಿ ರಚನೆಯಾಗಿದೆ ಎಂಬುದು ಅದರ ವಿಶೇಷ. ಈಗಿನಷ್ಟು ಸ್ತ್ರೀವಾದದ ಉಗ್ರ ಸ್ವರೂಪ ಅಥವಾ ಅಂತಹ ಮಹಿಳಾ ಹೋರಾಟವೆಂಬ ಆಂದೋಲನವನ್ನು ಹೊನ್ನಮ್ಮನಲ್ಲಿ ವ್ಯವಸ್ಥಿತವಾಗಿ ಕಾಣಲಾಗದು. ಪುರಾಣ ಕಾವ್ಯಗಳಲ್ಲಿ ಕಂಡುಬಂದ ಮಹಿಳೆಯರ ಪ್ರತಿಭಟನೆಗಳೆಲ್ಲವು ಯುದ್ಧಗಳಿಂದ, ಭಕ್ತಿಯಿಂದ, ನಿಪುಣತೆಯಿಂದ ಪರಿಸಮಾಪ್ತಿಯಾಗಿವೆ. ಹೆಣ್ಣು- ಹೊನ್ನು – ಮಣ್ಣುಗಳ ಸುತ್ತ ರಾಜಪ್ರಭುತ್ವ ಮತ್ತು ಜನಸಾಮಾನ್ಯರ ತಿಳುವಳಿಕಯ ಹಿನ್ನೆಲೆಯಲ್ಲಿ ಅಲ್ಲಿನ ಪಾತ್ರ ಪ್ರಪಂಚವಿದೆ ಎಂಬುದು ಪುರಾಣ ಕಾವ್ಯಗಳ ಮಾತು. ಹೊನ್ನಮ್ಮ ಸಾತ್ವಿಕ ಸತ್ವಯುತ ಹೋರಾಟವನ್ನು ಮಾಡಿದವಳೇ ವಿನಾಃ ವ್ಯವಸ್ಥಿತವಾಗಿಯಲ್ಲ ಎಂಬುದು ದಿಟ. ಕೇವಲ ಅಂತಃಪುರ ವಿಲಾಸದ ಮಹಿಳೆಯರಿಗಲ್ಲದೆ ಎಲ್ಲ ವರ್ಗದ ಸತಿಯರ ಹಿತವನ್ನು ಬಯಸುವ ಒಂದು ಧರ್ಮವನ್ನು ಉಪದೇಶದಂತೆ ನಾರಿಯರ ಧರ್ಮವನ್ನು ಹೊನ್ನಮ್ಮ ಶಿಷ್ಟ ಕಾವ್ಯವಾಗಿ ಬರೆದಳು. ಆಧ್ಯಾತ್ಮವನ್ನು ತುಣುಕು ಹಾಕುವ ಕಡೆ ತನ್ನ ನೆಚ್ಚಿನ ಇಷ್ಟದೈವ ಶ್ರೀರಂಗಪಟ್ಟಣದ ಶ್ರೀಲಕ್ಷ್ಮಿ ರಂಗನಾಥನ ನಾಮವನ್ನು ಪ್ರತಿಸಂಧಿಯ ನಾಂದಿಪದ್ಯಗಳಲ್ಲಿ ಅಂಕಿತವಾಗಿರಿಸಿ ವರ್ಣಿಸಿರುವುದು ಕಾಣಬಹುದು. ಹೊನ್ನಮ್ಮನ ಕಾಲ ಶ್ರೀ ವೈಷ್ಣವ ಭಕ್ತಿ ಪಂಥದ ಕಾಲವಾಗಿದೆ. ಶ್ರೀವೈಷ್ಣವ ತತ್ವದ ಪ್ರತಿಪಾದನೆ ಕವಯಿತ್ರಿಯಲ್ಲಿ ಆಂಶಿಕವಾಗಿ ಕಂಡರೂ ಅದರ ಉದ್ದೇಶ ‘ಸ್ತ್ರೀ’ ಧರ್ಮವನ್ನು ಪ್ರಾತಿಪಾದಿಸುವುದಾಗಿದೆ.

ಸಂಚಿ ಹೊನ್ನಮ್ಮನ ಸ್ತ್ರೀ ಭಾಷೆ ಅಥವಾ ಮಹಿಳಾ ಪರಿಭಾಷೆ ಎಂದರೆ ಸ್ತ್ರೀ ಸಂಕಥನವನ್ನು ಏರುಯೌವ್ವನದ ಹೆಣ್ಣು ಮಕ್ಕಳಿಗೆ, ವಿವಾಹದ ವಯಸ್ಸಿನವರಿಗೆ, ಪ್ರೌಢ ವಯಸ್ಸಿನವರಿಗೆ ಹೇಳುವ ನೀತಿ ವಾಕ್ಯ ಕಾವ್ಯವಾಗಿದೆ. ಮಹಿಳಾವಾದ ಅಥವಾ ಸ್ತ್ರೀವಾದ ಎಂಬುದು ತತ್ವಜ್ಞಾನದ ಜಿಜ್ಞಾಸೆಗೆ ಒಳಪಟ್ಟಿರದ ಕಾಲದಲ್ಲಿ ‘ಹದಿಬದೆಯ ಧರ್ಮ’ ರಚನೆಯಾಗಿದೆ ಎನ್ನುವುದು ಕೂತುಹಲಕರ ವಿಷಯ. ಆಧುನಿಕ ಪುನರುಜ್ಜೀವನ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಧುನಿಕ ಮಹಿಳಾ ಅಧ್ಯಯನ ‘ಸ್ತ್ರೀವಾದ’ವೆಂಬುದು ಇಂದು ಪ್ರತ್ಯೇಕವಾದ ಅಧ್ಯಯನದ ಅಕಾಡೆಮಿಕ್ ಜ್ಞಾನ ಶಿಸ್ತಾಗಿದೆ. ಗಾರ್ಗಿ, ಮೈತ್ರೇಯಿ ಪ್ರಾಚೀನ ಕಾಲದ ವೇದಕಾಲದ ಮಹಿಳೆಯರನ್ನು ಹೊರತುಪಡಿಸಿದರೆ ಶಾಸನೋಕ್ತ ತಮಿಳುನಾಡಿನ ವಾಂಡಿವಾಷ್ ಜೈನ ಮಹಿಳೆಯರ ಶಿಕ್ಷಣಕೇಂದ್ರವಿತ್ತು ಎಂಬ ನಿದರ್ಶನವಿದೆ. ಮಧ್ಯಕಾಲೀನ ಭಾರತದಲ್ಲಿ ಆಂಗ್ಲರ ಆಳ್ವಿಕೆಯಲ್ಲಿ ಶಿಕ್ಷಣ ಸುಧಾರಣೆಗಳಿಂದ ಭಾರತದಲ್ಲಿ ಮಹಿಳೆಯರ ಅಧ್ಯಯನ ತಡವಾಗಿ ಆರಂಭವಾಯಿತು. ಇಲ್ಲಿ ಆಂಗ್ಲ ಶಿಕ್ಷಣ ಪ್ರಮುಖವಾದರೂ ಆಡಳಿತ ದೃಷ್ಟಿಯಿಂದ ಭಾರತೀಯರನ್ನು ಬೆಸೆಯುವ ಕೆಲಸ ನಿಧಾನವಾಗಿ ಏರ್ಪಟ್ಟಿತ್ತು. ಇಂದು ಮಹಿಳೆಯರ ವಿದ್ಯಾಭ್ಯಾಸ, ಸಾಹಿತ್ಯ ರಚನೆ ವ್ಯಾಪಕವಾಗಿ ಹರಡಿಕೊಂಡಿದೆ. ಯಾವುದೆ ಬಂಧನವು ಅಲ್ಲದ, ಮುಕ್ತವು ಅಲ್ಲದ ಕುಟುಂಬ ಪದ್ಧತಿಯ ಸಮಾಜದಲ್ಲಿ ಹೆಣ್ಣಿನ ವಿಚಾರಗಳನ್ನು ಹದಿನಾರನೆಯ ಶತಮಾನದಲ್ಲಿ ನಿರೂಪಿಸಿರುವುದು ಹೊನ್ನಮ್ಮನ ಕಾವ್ಯದ ತಾಜಾತನದ ರೂವಾರಿಕೆಯಾಗಿದೆ. ಇದು ಮಹಿಳೆಯರ ತತ್ವಜ್ಞಾನವನ್ನು ಅಳವಡಿಸಿಕೊಂಡ ಮೊದಲ ಮಾದರಿ ಕಾವ್ಯವೆಂದರೂ ನಡೆಯುತ್ತದೆ. ಡಾ.ಸಿ.ವೀರಣ್ಣನವರ ” ಕನ್ನಡ ಕಾವ್ಯ ಕಂಡ ಹೆಣ್ಣು” ಎಂಬ ವಿಮರ್ಶಾತ್ಮಕ ಸಂಶೋಧನೆಯಲ್ಲಿ ಪ್ರಾಚೀನ ಕಾಲದ ಮಹಿಳೆಯರ ಮತ್ತು ಇಲ್ಲಿಯವರೆಗಿನ ಮಹಿಳಾ ಸಾಹಿತ್ಯದ ನೆಲೆಬೆಲೆಗಳನ್ನು ಭಾರತೀಯ ಸಂಸ್ಕೃತಿಯ ಕನ್ನಡ ಕೇಂದ್ರಿತ ಚರ್ಚೆಯಾಗಿ ಸ್ತ್ರೀವಾದದ ಧ್ವನಿಯನ್ನು ಹಂತಹಂತವಾಗಿ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಇದು ನಮ್ಮ ದೇಸಿ ಮಾದರಿಯ ಸ್ತ್ರೀವಾದಗಳ ರಚನೆ, ರೂಪ, ವಿನ್ಯಾಸ, ಚರ್ಚೆ, ವಿಮರ್ಶೆ, ಚಿಂತನೆ, ಅನುಸಂಧಾನದ ಮೂಲಕ ಏರ್ಪಟ್ಟಿರುವ ಪೂರ್ವ ಪೀಠಿಕೆಯಾಗಿ ನಿರ್ವಚನಗೊಂಡಿರುವುದನ್ನು ಕಾಣಬಹುದು.

‘ಹದಿಬದೆಯ ಧರ್ಮ’ ಕಾವ್ಯವು ಕೇವಲ ಕಾವ್ಯ ನಿರೂಪಣೆಗಷ್ಟೆ ಸೀಮಿತವಾಗದೆ ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಕತೆ, ಉಪಕತೆ, ಅಖ್ಯಾಯಿಕೆ, ವ್ಯಾಖ್ಯಾನ ಸಂಸ್ಕ್ರತ ಶ್ಲೋಕಗಳ ಉದ್ಧರಣೆಯನ್ನು ಔಚಿತ್ಯವಿರುವ ಕಡೆ ಬಳಸಿರುವುದು ಹೊನ್ನಮ್ಮನಿಗಿದ್ದ ಅಗಾಧ ವಿದ್ವತ್ತು ಮತ್ತು ಕಾವ್ಯ ರಚನೆಯಲ್ಲಿ ಪೂರ್ವದ ನಿದರ್ಶನ ತರುವ ಮಹತ್ವದ ಅರಿವಿತ್ತು ಎನ್ನಬಹುದು. ಮಿತ್ರಾವಿಂದಗೋವಿಂದ ನಾಟಕದ ಕರ್ತೃ ಆಳಸಿಂಗಿರಾರ್ಯನ ಶಿಷ್ಯೆಯಾಗಿ ಹೊನ್ನಮ್ಮ ಸಂಸ್ಕ್ರತ, ಕನ್ನಡ ಶಿಷ್ಟ ಮತ್ತು ಜನಪದ ದೇಸಿಯನ್ನು ಕಲಿತಿರುವುದು ಪ್ರೌಢಿಮೆಯ ಮಾತು. ಹೆಣ್ಣಿನ ಹೃದಯಾಂತರಾಳದ ಮೂಕ ಭಾವನೆಗಳಿಗೆ ಯುಗ ಪಲ್ಲವಿಯಂತೆ ಶೃಂಗಾರ ರಸಭರಿತವಾದ ಕಾವ್ಯವನ್ನು ಬರೆದಳು. ಇದು ಎಲ್ಲಾ ವರ್ಗದ ವಯಸ್ಸಿನ ಜನರು ಓದುವಂತಹ ಕಾವ್ಯವಾಗಿದೆ. ಭರತೇಶ ವೈಭವದ ಜನಪ್ರಿಯ ಓದಿನಂತೆ ಇದು. ( ಇಂದಿಗೂ ಭರತೇಶ ವೈಭವ ಕಾವ್ಯವನ್ನು ಜೈನ ಮಹಿಳೆಯರು ಪಾರಾಯಣ ಮಾಡುವುದಿದೆ) ಹೆಣ್ಣಿನ ಸಂಕೀರ್ಣ ಮನಸ್ಥಿತಿಯ ಭಾವನೆಗಳು, ಮಾನಸಿಕ ಸುಪ್ತಪ್ರಜ್ಞೆ, ದಾಂಪತ್ಯ ಜೀವನ, ಸುಖಸಂಸಾರ, ಆದರ್ಶ ಗುಣಗಳಿಂದ ಕೂಡಿದ ನಿಯಮಗಳು, ಸಾಂಸ್ಥಿಕ ಬದುಕಿನ ನೀತಿಗಳಂತೆ ರಚನೆಯಾಗಿದೆ. ಹೊನ್ನಮ್ಮನ ಕಾವ್ಯದಲ್ಲಿ ದೈವಭಕ್ತಿ, ರಾಜಭಕ್ತಿ, ಗುರುಭಕ್ತಿಗಳು ಸಂಮಿಶ್ರವಾಗಿದೆ. ಹೆಣ್ಣಿನ ಶೀಲ ಮತ್ತು ಪಾತಿವ್ರತ್ಯ ಗುಣಗಳಿಗೆ ಪ್ರಾಧಾನ್ಯತೆ ನೀಡಿರುವುದು ಕಾವ್ಯ ಓದಿದವರಿಗೆ ಅರಿವಾಗುವ ಸಂಗತಿ. ‘ಮಹಿಳಾವಾದ’ ಅಥವಾ ‘ಸ್ತ್ರೀವಾದ’ಎಂಬ ಪರಿಕಲ್ಪನೆ ಇರದಿದ್ದ ಕಾಲದಲ್ಲಿ ಹೊನ್ನಮ್ಮನ ಸಾಹಸ ಹೊಸದು ಎನ್ನಬಹುದು. ತನ್ನ ಕಾವ್ಯವಸ್ತು ಆಯ್ಕೆ ಮತ್ತು ಸರಸ ಸೋಪಾಜ್ಞಾ ಶೈಲಿಯಿಂದ ನೀರಸವಾಗಬಹುದಾದ ಕಾವ್ಯವನ್ನು ರಂಜನೀಯ ರಮ್ಯ ಮಧುರ ಭಾವಗಳಿಂದ ಸುಕುಮಾರ ಶೈಲಿಯಲ್ಲಿ ವಿವರಿಸಿರುವುದು ‘ಹದಿಬದೆಯ ಧರ್ಮ’ ಕಾವ್ಯದ ಮೇರು ಗುಣವಾಗಿದೆ. ತೌಲನಿಕವಾಗಿ ಹೇಳಬಹುದಾದರೆ ತೆಲುಗಿನ ಕವಯಿತ್ರಿ ಮತ್ತು ವಿಮರ್ಶಕರಾದ ಡಾ.ಕೋಲಕಲೂರಿ ಮಧುಜ್ಯೋತಿಯವರ ಅಭಿಪ್ರಾಯದಂತೆ – ಭಾರತೀಯ ದ್ರಾವಿಡ ಭಾಷೆಗಳಲ್ಲಿ ” ಸ್ತ್ರೀವಾದ ಬರುವುದಕ್ಕೆ ಮುಂಚಿತವಾಗಿಯೆ ‘ಸ್ತ್ರೀ-ಚೈತನ್ಯ’ಎಂಬುದಿತ್ತು.” ಎನ್ನುತ್ತಾರೆ.

ಪ್ರಾಚೀನ ಭಾರತೀಯ ಕಾವ್ಯ ಕೃತಿಗಳಲ್ಲಿ ಮಹಿಳಾ ಪರವಾದ ಧ್ವನಿಯು ಆಂಶಿಕವಾಗಿಯಾದರೂ ಕೆಲವು ಕಡೆ ದಾಖಲೆಯಾಗಿದೆ. ದೇಸಿ ಭಾಷೆಗಳಲ್ಲಿ ಆಧುನಿಕ ಪರಿಭಾಷೆಯ ಮಹಿಳಾ ಸಂವೇದನೆ, ಮಹಿಳೆಯರ ಸಾಹಿತ್ಯ, ಸ್ತ್ರೀವಾದದ ಅಧ್ಯಯನ ನೆಲೆಗಳು ರೂಪುಗೊಳ್ಳುವ ಕಾಲಕ್ಕಾಗಲೇ ಭಕ್ತಿಪಂಥ ಚಳುವಳಿಗಳಲ್ಲಿ ಸಾಮಾಜಿಕ ಹೋರಾಟದ ಭಾಗವಾಗಿ ಸ್ತ್ರೀಯರು ಇದ್ದರು. ಅದು ಅವರ ಚೈತನ್ಯ ಅಥವಾ ಅಸ್ಮಿತೆಯಾಗಿದೆ. ನಾಯ್ಮಾರರ ಕಾಲದಲ್ಲಿನ ಕಾರೈಕಾಲ್ ಅಮೈಯಾರ್, ಆಳ್ವಾರ್ ಕಾಲದಲ್ಲಿನ ಆಂಡಳ್ (ಗೋಧಾ), ಮೀರಾಬಾಯಿ, ಸಂಘಂಸಾಹಿತ್ಯದ ಕಾಲದ ಮಣೆಮೇಗಲೈ ಕಾವ್ಯ, ಶಿಲಪ್ಪಾದಿಗಾರಂನ ಕನ್ನಗಿ ಕೋವಿಲನ್ ಪ್ರಸಂಗ, ವಚನ ಸಾಹಿತ್ಯದ ಕಾಲದಲ್ಲಿನ ವಚನಗಾರ್ತಿಯರ ಅಂತರಾಗದ ಅನುಭೂತಿ ಅನುಭಾವ ಸಾಹಿತ್ಯ, ದಾಸ ಸಾಹಿತ್ಯ ಕಾಲದಲ್ಲಿನ ಬ್ರಾಹ್ಮಣ ಮಹಿಳೆಯರು ಭಗವಂತನ ಪ್ರೇಮಾಲಾಪದ ಭಕ್ತಿ ಪದಗಳೆಲ್ಲವು – ನಿರ್ದಿಷ್ಟ ಕಾಲಘಟ್ಟದ ಸಾಹಿತ್ಯ ಸಂಘಟನೆಗಳಲ್ಲಿ ಸಾಹಿತ್ಯ ರಚನೆಗೆ ಮಹಿಳೆಯರಿಗೆ ಕಲ್ಪಿಸಲಾದ ಅವಕಾಶವನ್ನು ತಿಳಿಸುತ್ತದೆ. ಏಕೈಕವಾಗಿಯೂ ರಾಜ ಸಂಸ್ಥಾನಗಳು ಇತರೆ ಅನುಕೂಲಸ್ಥರ ಮನೆ ಹೆಣ್ಣು ಮಕ್ಕಳು ಓದು,ಬರಹ, ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಎಂಬುದು ತಿಳಿದು ಬರುವ ವಿಷಯವೆ ಆಗಿದೆ. ಇವೆಲ್ಲವು ಇಂದಿನ ಮಹಿಳಾ ಸಾಹಿತ್ಯ ಚರಿತ್ರೆಗಳಲ್ಲಿ ದಾಖಲಾಗಬೇಕಾದ ಅಂಶಗಳಾಗಿವೆ. ಸಂಚಿ ಹೊನ್ನಮ್ಮನ ‘ಹದಿಬದೆಯ ಧರ್ಮ’ ಕಾವ್ಯವನ್ನು ಕನ್ನಡ ಸಾಹಿತ್ಯ ಪರಿಪತ್ತು ಪ್ರಕಟಿಸಿದೆ. ಇದರ ಗದ್ಯಾನುವಾದ ಸಹಿತ ಕಾವ್ಯವನ್ನು ಎನ್.ರಂಗನಾಥಶರ್ಮ ಸಂಪಾದಿಸಿರುವರು. ರಂ.ಶ್ರೀ ಮುಗಳಿ, ಡಿ.ಚಂಪಾಬಾಯಿ, ಕಮಲಾ ಹಂಪನಾ,ಸಿ.ವೀರಣ್ಣನವರ ಬಿಡಿ ಲೇಖನಗಳನ್ನು ಅವರ ಗ್ರಂಥ ನಿಬಂಧಗಳಲ್ಲಿ ಕಾಣಬಹುದು. ಹೊನ್ನಮ್ಮನ ಕಾವ್ಯ ಧರ್ಮಬೋಧನೆಯಂತಿದೆ – ಎಂಬ ದೋಷವನ್ನು ಹೊರತುಪಡಿಸಿ ಅಧ್ಯಯನ ಮಾಡಿದರೆ ‘ಹದಿಬದೆಯ ಧರ್ಮ’ ರಸ ನಿರೂಪಣೆಯ ಪಠ್ಯವಾಗಿ ಸ್ಫುರಿಸುತ್ತದೆ. ಹೆಣ್ಣಿನ ವಿಚಾರದಲ್ಲಿ ಮಾನವ ನಾಗರಿಕ ಸಮಾಜ ನಡೆದುಕೊಳ್ಳಬೇಕಾದ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಪರಂಪರೆಯ ಅಂಶಗಳಿಂದ ‘ ಹೆಣ್ಣು’ ಚಿರಸ್ಥಾಯಿ, ಜ್ಞಾನಸ್ಥಾಯಿಯಾದ ಭಾವವೆ ಬಂದು ಮೈವೇತ್ತಿದಂತೆ ದಾಖಲಿಸಿದ್ದಾಳೆ. ಯಾಜಮಾನ ಸಂಸ್ಕೃತಿಯಲ್ಲಿ ಎಲ್ಲರೂ ಒಪ್ಪುವ ಇತ್ಯಾತ್ಮಕವಾದ ಮೌಲ್ಯಗಳು ನಿರ್ಮಾಣ ಭಿತ್ತಿಯಲ್ಲಿ ರಂಜಿಸುತ್ತದೆ. “ಸ್ತ್ರೀ ಸ್ವಭಾವ ವೈಶಿಷ್ಟ್ಯವನ್ನು ಪ್ರತಿಪಾದಿಸುವ ಸನ್ನುತಿ ಪಡೆದ ಕೃತಿ” ಗುಣ ಸಂಬಂಧಿಯಾಗಿದೆ.

“ಮಳೆಯಕ್ಕೆ ಕಾಲಕಾಲಕೆ ದೇವರೊಲವಿಂದ
ಬೆಳೆಗೈಗೆ ಪೆರ್ಚುಗೆಯಕ್ಕೆ
ಇಳೆಯೊಳು ಪತಿ ಪುತ್ರ ಪೌತ್ರ ಸಂಪದದೊಡ
ನೊಳುವೆಂಡಿರೊಪ್ಪದೊಳಿರ್ಕೆ”

ದೇವರ ಕೃಪೆಯಿಂದ ಕಾಲಕಾಲಕ್ಕೆ ಮಳೆಯಾಗಲಿ, ಬೆಳೆ ಬೆಳೆಯಲಿ, ಅಭಿವೃದ್ಧಿಯಾಗಲಿ, ಲೋಕದಲ್ಲಿ ಪತಿ- ಪುತ್ರರು- ಮೊಮ್ಮಕ್ಕಳು ಮೊದಲಾದವರಿಂದ ಕೂಡಿ ಸಂಪತ್ತಿನಿಂದ ಸಾದ್ವಿಯರು ಚೆನ್ನಾಗಿರಲಿ ಎಂಬ ಸದಾಶಯಗಳು.

-ಸಂತೋಷ್ ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x