ಅದ್ಯಾವುದೋ ರಂಗಾಸಕ್ತರ ವೇದಿಕೆಯವರು ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಹಿರಿಯನೆಂಬ ಕಾಲ್ಪನಿಕ ಗೌರವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನ್ನ ಸಂಗ್ರಹದ ಪುಸ್ತಕ-ಮಸ್ತಕಗಳ ರಾಶಿಯೊಳಗಿಂದ ರಂಗಭೂಮಿಯ ನೆನಪುಗಳನ್ನು ಹೆಕ್ಕಿಕೊಂಡು ಮಾತಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ನನ್ನ ಹೆಸರಿಡಿದು ಯಾರೋ ಕೂಗಿದರು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಯಾರೂ ಹಾಗೇ ಕೂಗಿರಲಿಲ್ಲ. ನಮ್ಮ ಅವ್ವನ ಸಮಕಾಲೀನರು ಹಾಗೆ ಕರೆಯುತ್ತಿದ್ದರು. ತಿರುಗಿ ನೋಡಿದೆ.
ಥೇಟ್ ಅವ್ವನ ಜಮಾನಾದ ಸೀರೆ-ಕುಪ್ಪಸ ತೊಟ್ಟರೂ ಆಧುನಿಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು “ಚಲೋತ್ನಾಗ ಮಾತಾಡಿದಿರಿ ಸರ್. ಕಂಪನಿ ನಾಟಕದ ಮಾಲೀಕಳು ಸಂಗಮ್ಮನ ಹೆಸರು ಹೇಳಿದ್ರಲ್ರಿ…” ಎಂದು ಮೌನವಾದಳು. “ಅವರ ಬಗ್ಗೆ ನಾನೇನಾದರೂ ತಪ್ಪು ಮಾಹಿತಿ ನೀಡಿದೇನಾ?” ಎಂದು ಗೊಂದಲಗೊಂಡು, ಹಿಂದೊಮ್ಮೆ ಇದೇ ರೀತಿಯ ಉಪನ್ಯಾಸ ಮಾಡಿದ ನಂತರ ಸಂಘಟಕರ ಸಮಯಪ್ರಜ್ಞೆಯಿಂದ ಬೀಳಲಿರುವ ಧರ್ಮದೇಟುಗಳಿಂದ ಪಾರಾಗಿದ್ದನ್ನು ನೆನಪಿಸಿಕೊಂಡೆ. “ಏನಾದರೂ ತಪ್ಪ ಮಾಹಿತಿ ಕೊಟ್ಟಿದ್ರ ಕ್ಷಮಾ ಮಾಡ್ರೀ ತಾಯಿ” ಎಂದು ಮೊದಲೇ ಆಂಟಿಸಿಪೇಟರಿ ಬೇಲ್‌ದಂತೆ ಮುಂಚಿತವಾಗಿ ಕೈಮುಗಿದೆ. ಅವಳು ನಸುಮೊಗದಿಂದ ಕಣ್ಣರಳಿಸಿ “ನೀವು ಹೇಳಿದ್ರಲ್ಲ ಆ ಸಂಗಮ್ಮನ ತಂಗಿ ನಿಂಗಮ್ಮನ ಮಗಳು ನಾನು. ನೀವು ಹೇಳಿದಂಗ ನಮ್ಮ ದೊಡ್ಡಮ್ಮ ಕಂಪನಿ ಮಾಲೀಕಳು. ಅದೇ ಕಂಪನಿಯೊಳಗ ನಮ್ಮವ್ವ ನಿಂಗಮ್ಮ ಹಿರೋಯಿನ್ ಪಾರ್ಟ್ ಮಾಡ್ತಿದ್ದಳ್ರೀ. ನಮ್ಮವ್ವನಿಂದಾನ ಕಂಪನಿ ಗಲ್ಲಾಪೆಟ್ಟಿಗಿ ತುಂಬ್ತಿತ್ತು. ಕಂಪ್ನಿ ಬೋರ್ಡಿಂಗದ ಹಂಚಿನಾಗ ರೊಟ್ಟಿ ಸುಡತ್ತಿದ್ದವು. ನಮ್ಮವ್ವನ ಕೈಯಿಂದ ವಗ್ಗರಣಿ ಹಾಕಿದ ಉದರಬ್ಯಾಳಿ ಪಲ್ಯಾ ರುಚಿಯಿಂದಾನ ಎಲ್ಲಾ ಕಲಾವಿದರ ಹೊಟ್ಟಿ ತುಂಬ್ತಿತ್ತು. ಪಾರ್ಟ-ಪಲ್ಯೆ ನಮ್ಮವ್ವಂದು ಪ್ರಸಿದ್ಧ ಆಗಿದ್ದು ನಮ್ಮ ದೊಡ್ಡಮ್ಮನ ಕಂಪನಿ ಅಂತ ಪ್ರಚಾರ ಮಾಡ್ತಾರ್ರೀ.” ಎಂದು ತಪ್ಪು ಮಾಹಿತಿ ಕೊಡಬ್ಯಾಡ್ರೀ ಅಂತ ಪರೋಕ್ಷವಾಗಿ ಹೇಳಿದಂತಿತ್ತು.
ಅಲ್ಲೇ ನಿಂತಿದ್ದ ಗೆಳೆಯನೊಬ್ಬ “ನಾನು ಅವ್ನಿಗೆ ಹೇಳ್ತಿನಿ ಬಿಡ್ರಿ ಅಕ್ಕಾರ” ಎಂದು ಅವರಿಗೆ ಸಮಾಧಾನಿಸಿ, ನನ್ನನ್ನು ಕರೆದುಕೊಂಡು ಹೊರಗೆ ಕತ್ತಲಲ್ಲಿ ತನ್ನ ಕೈಯಲ್ಲಿದ್ದ ರಿಮೋಟ್ ಒತ್ತಿದ. ಬಾಗಿಲು ತೆರೆದು ಕಾರಿನಲ್ಲಿ ಕೂಡ್ರಿಸಿಕೊಂಡು ಊರ ಹೊರಗಿನ ಡಾಬಾ ಕಡೆಗೆ ಹೊರಟ. ಡಾಬಾದಲ್ಲಿ ಊಟಕ್ಕೆ ಆರ್ಡರ್ ಮಾಡಿ, ಊಟ ಮುಗಿಸಿ, ಬಿಲ್ ಕೊಟ್ಟು ಹೊರಬಂದು ಪಾನಬೀಡಾ ಹಾಕಿಕೊಂಡು ಕಾರಿನಲ್ಲಿ ಕುಳಿತೆವು. ಗೆಳೆಯ ಮಾತಿಗಾರಂಭಿಸಿದನು. “ನೋಡು ಮಿತ್ರಾ, ಅದೊಂದು ಕಾಲಮಾನದಾಗ ನಮ್ಮ ದೊಡ್ಡಪ್ಪ ನಾಟಕದ ಹುಚ್ಚ ಹಿಡಿಸ್ಕೊಂಡು ಮನ್ಯಾಗಿದ್ದ ಪರಮ ಪತಿವ್ರತಿಯಂಥಾ ನಮ್ಮ ದೊಡ್ಡವ್ವನ ಬಿಟ್ಟು ಆ ನಾಟಕದ ಸಂಗವ್ವನ ಬೆನ್ನ ಹತ್ತಿದ. ಆಕೀಯೇನು ಬಿಡಲಿಲ್ಲಾ….
“ಗೌಡಪ್ಪ, ನಿಂದೇನು ನನಗ ಬೇಡ. ನನಗೊಂದು ಕಂಪನಿ ಮಾಡಿ ಕೊಡು ಸಾಕು” ಎಂದಿದ್ದಳು. ಮುಂದುವರೆದು, “ಆದರ ಒಂದ ಕಂಡಿಷನ್ನ ಹೊಲ-ಮನಿ ಮಾರಂಗಿಲ್ಲ. ಹೆಂಡ್ರು-ಮಕ್ಕಳ ಹೊಟ್ಟಿ ಉರಸಂಗಿಲ್ಲ” ಅಂದಳು. “ಎಲಾ ಇವಳ, ಮತ್ತೇನು ಮಾಡ್ಲಿ. ಎಲ್ಲೇರ ಹೋಗಿ ನನ್ನನ್ನ ಮಾರಿಕೊಳ್ಳಲೇನು? ಮತ್ತೇನು ಜೀತಕ್ಕೀರಲೇನು?” ಎಂದು ಹಂಗಿಸುತ್ತಾ ಗೌಡಕಿ ಬಡಿವಾರದೊಂದಿಗೆ ದಿಮಾಕಿನ ಮಾತಾಡಿದ. “ಹಂಗಲ್ಲೋ ಗೌಡಪ್ಪ, ಯಾವದರ ಒಂದು ನಿಮ್ಮ ಹೊಲದಿಂದ ಬರುವ ಉತ್ಪನ್ನವನ್ನ ಹತ್ತು ವರುಷ ನನಗ ಕೊಡ್ಸು. ಅದೆ ಉತ್ಪನ್ನದಾಗ ಒಂದು ನಾಟಕ ಕಂಪನಿ ಕಟ್ಟತೇನಿ” ಎಂದು ವಿಚಿತ್ರವಾಗಿ ಬೇಡಿಕೆಯಿಟ್ಟಿದ್ದಳು. ಸರಿಯೆನಿಸಿತು. ಮ್ಯಾಲಿನ ಮಡ್ಡಿ ಹೊಲದಾಗ ಹತ್ತು ವರುಷ ಬೆಳೆದ ಉತ್ಪನ್ನದಲ್ಲಿ “ಗೌಡ ಕೃಪಾಪೋಷಿತ ಮಡ್ಡಿಬಸಣ್ಣ ದೇವರ ಬಯಲುಸೀಮೆ ನಾಟಕ ಕಂಪನಿ” ಹೆಸರಿನಲ್ಲಿ ನಮ್ಮೂರ ಮಡ್ಡಿ ಬಸಣ್ಣದೇವರ ಜಾತ್ರಿ ದಿನ ಶುರುವಾದಾಗ ರಿಬ್ಬನ್ ಕಟ್ ಮಾಡಿ, ಉದ್ಘಾಟನೆ ಮಾಡಿದವನು ನಮ್ಮ ದೊಡ್ಡಪ್ಪ. ಭರ್ಜರಿ ಕಲೆಕ್ಷನದೊಂದಿಗೆ ಕಂಪನಿ ಶುರುವಾತು.
ಕಂಪನಿಗೆ ಆಕರ್ಷಣೆ ಅಂದ್ರ ನಿಂಗಮ್ಮನ ತಂಗಿ ಹಿರೋಯಿನ್ ಸಂಗಮ್ಮ. ದೊಡ್ಡಪ್ಪನ ನೆನಪಿನಾಗ ಆ ಕಡೆ ದೊಡ್ಡಮ್ಮ ಒಳಗೊಳಗೆ ಕೊರಗುತ್ತಾ ನಮ್ಮನ್ನೆಲ್ಲಾ ಬೆಳೆಸಿದಳು. ಯಾಕಂದ್ರ ನಮ್ಮಪ್ಪ-ನಮ್ಮವ್ವ ಮಳೆಗಾಲದಲ್ಲಿ ತೋಟದ ಕೆಲಸ ಮಾಡುವಾಗ, ಹರಿದು ಬಿದ್ದ ಕೆಬಲ್ ಮೇಲೆ ಕಾಲಿಟ್ಟು ಕೈಲಾಸ ಸೇರಿದ್ದರಿಂದ ನಮಗೆ ದೊಡ್ಡಪ್ಪ-ದೊಡ್ಡಮ್ಮನೇ ಸರ್ವಸ್ವವಾಗಿದ್ದರು. ನಾಟಕ ಕಂಪನಿಯಲ್ಲಿ ತಂಗಿಯ ಅರ್ಭಟದ ಅಭಿನಯ, ಅಕ್ಕನ ಗಲ್ಲಾಪೆಟ್ಟಿಗೆ ತುಂಬ ಝಣಝಣ ಕಾಂಚಣ. ವೈಭವದ ದಿನಗಳು. ಅತಿಥಿ ಕಲಾವಿದರಾಗಿ ಪ್ರಸಿದ್ಧ ಸಿನೇಮಾ ಸ್ಟಾರ್‌ಗಳನ್ನು ಕರೆಸಲಾಗುತ್ತಿತ್ತು. ನಾಟಕ ನೋಡಲು ಬಂದ ಸರಕಾರದ ದೊಡ್ಡ ಅಧಿಕಾರಿಯೊಬ್ಬ ಸಂಗವ್ವನ ತಂಗಿ ನಿಂಗವ್ವನಿಗೆ ತನ್ನ ಎರಡನೇಯ ಹೆಂಡ್ತಿ ಸೌಭಾಗ್ಯ ಕಲ್ಪಿಸಿದ. ಆ ಸೌಭಾಗ್ಯದ ಶಿಶು ನಿನ್ನನ್ನು ಆಗಲೇ ಮಾತಾಡಿಸಿದವಳು. ಅದೊಂದು ದಿನ ಕೆಲಸದ ನಿಮಿತ್ಯ ದೊಡ್ಡಪ್ಪ ಮತ್ತು ಕಂಪನಿ ಮಾಲೀಕಳಾದ ಸಂಗಮ್ಮನು ಕಾರಿನಲ್ಲಿ ಹೋಗುತ್ತಿರುವಾಗ ನಡೆದ ಅಪಘಾತದಲ್ಲಿ ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡು ದೊಡ್ಡಪ್ಪ ಬದುಕಿದ. ಆದರೆ ಸಂಗಮ್ಮನು ಸ್ಪಾಟ್ ಔಟ್ ಆಗಿದ್ದಳು.
ಮುಖ್ಯ ಆಧಾರಸ್ತಂಭವಾಗಿದ್ದ ಸಂಗಮ್ಮನಿಲ್ಲದೇ ಕೆಲವೇ ದಿನಗಳಲ್ಲಿ ನಾಟಕ ಕಂಪನಿ ಮುಚ್ಚಿತು. ತಂಗಿ ನಿಂಗಮ್ಮನು ತನ್ನ ಸೌಭಾಗ್ಯದ ಶಿಶುವನ್ನು ತೋರಿಸಿ ಗಂಡನ ರೂಪದ ಅಧಿಕಾರಿಯ ಆಶ್ರಯ ಪಡೆದಳು. ಇತ್ತೀಚೆಗೆ ದೊಡ್ಡಪ್ಪ ಕೊರೋನಾ ಮಾರಿಗೆ ಬಲಿಯಾದ. ಅದನ್ನು ಕೇಳಿ ತನ್ನಕ್ಕನ ನೆನಪಿನೊಂದಿಗೆ ಮಲಗಿದ ನಿಂಗಮ್ಮ ಎದ್ದೇಳಲಿಲ್ಲ” ಎಂದು ಹೇಳುತ್ತಾ ಕಣ್ಣೋರೆಸಿಕೊಂಡ.
“ಜೀವನವೆಂಬ ಬೆಂಗಾಡಿನಲ್ಲಿ ನೆನಪುಗಳೇ ಮಧುರ ಕಾಣಿಕೆ…ಎಂದು ಹೇಳಿದ ಆ ನಾಟಕದ ಹಿರೋಯಿನ್ ನಿಂಗಮ್ಮ, ಕಂಪನಿ ಕಟ್ಟಿದ ಗಟ್ಟಿಗಿತ್ತಿ ಸಂಗಮ್ಮ, ಬಣ್ಣದ ಬದುಕಿಗೆ ಮೋಹಗೊಂಡ ನಮ್ಮ ದೊಡ್ಡಪ್ಪ ಇವರೆಲ್ಲಾ ಈಗ ನಾಡು ಮರೆತ ನಾಟಕದ ಪಾತ್ರಗಳಾಗಿ ಕಾಡ್ತಾರ. ಅವರೊಂದಿಗಿನ ಒಡನಾಟವನ್ನು ಬರೆದು ದಾಖಲಿಸೋಣಂದ್ರ ಕೈ ನಡಗ್ತಾವ…ಮನಸ್ಸು ಮುದರತೈತಿ…ಸಂಗಟ ಆಗ್ತಾದನೋ… ಇಂಥಾ ಕಥೆಗಳು ಈಗ ಹಳಸಲಾಗ್ಯಾವಂತ ಅಂದ್ಬಿಡ್ತಾರೇನೋ ಅಂತ ಸುಮ್ಮನಾಗೇನಿ. ಆದರ ಇಂದಿಗೂ ಆಲದ ಮರದಂಗ ಮನೆಯ ಪಡಸಾಲಿಯಲ್ಲಿ ಕುಳಿತು ಮೊಮ್ಮಕ್ಕಳೊಂದಿಗೆ ಕುಂತು ಟಿವಿಯಲ್ಲಿ ಅಣ್ಣಾವ್ರ ಸಿನೇಮಾ ನೋಡುತ್ತಿರುವ ಆ ದೊಡ್ಡಮ್ಮನ ದೊಡ್ಡ ಸಾಕ್ಷಿ ! ಆ ದೊಡ್ಡಮ್ಮನೊಳಗ ಅಪ್ಪ-ಅವ್ವ, ದೊಡ್ಡಪ್ಪ-ಸಂಗಮ್ಮ ಎಲ್ಲಾರೂ ಕಾಣಸ್ತಾರ” ಹೇಳುತ್ತಾ ನಿಟ್ಟಿಸುರು ಬಿಟ್ಟ.
ಉಪನ್ಯಾಸ ಮಾಡಿದ ನನಗೆ ಮಾತುಗಳು ಖಾಲಿಯಾಗಿದ್ದವು. ನೆನಪಿಸಿಕೊಂಡ ಆತನಿಗೆ ಸಂಕಟಗಳು ಸಾವಿರವಾಗಿದ್ದವು.
–ಸಿದ್ಧರಾಮ ಹಿಪ್ಪರಗಿ(ಸಿಹಿ), ಧಾರವಾಡ.
ತುಂಬಾ ಚೆನ್ನಾಗಿದೆ ಬರವಣಿಗೆ. ಉತ್ತರ ಕರ್ನಾಟಕದವಳು ನಾನು ನಾಲ್ಕು ಸಲ ಓದಿ ಅರ್ಥ ಮಾಡಿಕೊಂಡೆ ಸರ್
ಬೆಂಗಳೂರು ಮೈಸೂರು ಮಂಗಳೂರು ಕಡೆ ಅವರಿಗೆ ಬೇಗ ಅರ್ಥ ಆಗಲ್ಲ.
ಆಕಡೆ ಭಾಷೆ ನಮಗೆ ಅರ್ಥ ಆಗಲ್ಲ. ಇನ್ನೂ ಶೀರ್ಷಿ, ಕಾರವರ ಕನ್ನಡ, ಮಂಗಳೂರು ಕನ್ನಡ ಅರ್ಥ ಆಗೋದು ಬಲು ಕಷ್ಟ.
ನಮ್ಮ ಉತ್ತರ ಕರ್ನಾಟಕದ ಜನರ ಚಾಳಿ ನಾಟಕ ಕಂಪನಿ ಹೆಂಗಸರ ಕಡೆ ಒಲವು ಜಾಸ್ತಿ. ಮನೆಯ ಸತಿಗೆ ಅನ್ಯಾಯ ಮಾಡೋರು ಅಂತ ಅರ್ಥ ಆಗಿದ್ದು ನನಗೆ
ಮದುವೆ ಆಗಿ ಗಲಗಲಿಗೆ ಹೋದ ಮೇಲೆ ಅಲ್ಲಿಯ ಜನರ ಗುಣ ಸ್ವಭಾವ ತಿಳಿದ ಮೇಲೆ, ತುಂಬಾ ಮುಗ್ಧ ಮನಸ್ಸಿನವಳು ಆಗಿದ್ದೆ.
ನನ್ನ ತಂದೆ ಹೊರ ಜಗತ್ತಿನ ಒರಟು ಜನರೊಡನೆ ಬಿಡುತ್ತಿರಲಿಲ್ಲ. ತುಂಬಾ ಸೂಕ್ಷ್ಮ ವಾಗಿ ಬೆಳೆಸಿದ್ದರು ನಮ್ಮನ್ನು.ಮನೆಯಲ್ಲಿಯೂ ಸಹ ವಾತಾವರಣ ಶಾಂತತೆ ಇತ್ತು.
….. ಪಾರ್ವತಿದೇವಿ ಎಂ.ತುಪ್ಪದ, ಬೆಳಗಾವಿ.