ಚುಂಬಕ ಚಂದ್ರಮನೊಂದಿಗೆ ಚಲಿಸುತ್ತಾ….: ಶೋಭಾ ಶಂಕರಾನಂದ

ಪ್ರತಿನಿತ್ಯ ನಾವು ನೋಡಬಹುದಾದ ಪ್ರತ್ಯಕ್ಷ ದೈವಗಳಾದ ಸೂರ್ಯ ಮತ್ತು ಚಂದ್ರ ನಮ್ಮ ಬದುಕಿನಲ್ಲಿ ಅಗಾಧ ಪ್ರಭಾವವನ್ನು ಬೀರುತ್ತವೆ. ಅದರಲ್ಲೂ ಚಂದ್ರನಿಗೆ ವೇದಗಳಲ್ಲಿ ಅಧಿಕ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಆತನನ್ನು ವೇದಗಳಲ್ಲಿ ‘ಸೋಮದೇವ’ ಎಂದು ಕರೆದಿದ್ದಾರೆ. ಪವಮಾನ ಸೂಕ್ತದಲ್ಲಿ ಅದರ ಹೆಚ್ಚಿನ ಮಾಹಿತಿ ನೋಡಬಹುದು. “ಚಂದ್ರಮಾ ಮನಸೋ ಜಾತಃ” ಎಂದು ಒಂದು ಉಲ್ಲೇಖವಿದೆ. ಚಂದ್ರ ನಮ್ಮ ಮನಸ್ಸಿಗೆ ಅಧಿಪತಿ ಎಂದು ಇದರ ಅರ್ಥ. ನಮ್ಮ ಮನಸ್ಸು ನೆಮ್ಮದಿಯಿಂದ ಇಲ್ಲವೆಂದಾದರೆ, ಚಂದ್ರನ ಧ್ಯಾನ ಮಾಡಬೇಕು. ಏಕೆಂದರೆ ಭೂಮಿಗೂ ಚಂದ್ರನಿಗೂ ನಡುವೆ ಒಂದು ನಂಟಿದೆ. ವೈದಿಕದ ಪ್ರಕಾರ ಚಂದ್ರ ಅಮಾವಾಸ್ಯೆ ಸಂದರ್ಭದಲ್ಲಿ ತನ್ನ ರೋಗ ನಿವಾರಣೆಗಾಗಿ ಭೂಮಿಗೆ ಬರುತ್ತಾನೆ. ನಮ್ಮ ಭೂಮಿಯಲ್ಲಿ ಸಿಗುವ ಔಷಧೀಯ ಸಸ್ಯಗಳಿಂದ ಆತನ ರೋಗ ವಾಸಿಯಾಗಿ, ಆತನಲ್ಲಿ ಕಾಂತಿ ಆವರಿಸುತ್ತದೆ. ಅದೇ ಕಾರಣಕ್ಕೆ ಅಮಾವಾಸ್ಯೆ ನಂತರ ಹುಣ್ಣಿಮೆ ಬರುವುದು ಎಂದು ಹೇಳಲಾಗುತ್ತದೆ.

ಭೂಮಿ ಮತ್ತು ಚಂದ್ರನ ನಂಟಿಗೆ ವೈಜ್ಞಾನಿಕ ಕಾರಣ ಹೇಗೆ ಸಾಧ್ಯ….!? ಎಂದರೆ, ಭೂಮಿಗೆ ಚಂದ್ರ ಹತ್ತಿರದ ಉಪಗ್ರಹವಾಗಿರುವುದರಿಂದ, ಭೂಮಿಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತಾನೆ. ಅದಕ್ಕೆ ಸಾಕ್ಷಿಯಾಗಿ ಅನೇಕ ಉದಾಹರಣೆಗಳು ಸಹ ಇವೆ. ಅದರಲ್ಲಿ ಮುಖ್ಯವಾಗಿ ಹುಣ್ಣಿಮೆಯ ಸಮಯದಲ್ಲಿ ಸಮುದ್ರ ಉಕ್ಕುವುದಕ್ಕೆ ಚಂದ್ರನೇ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇಂತಹ ಚಂದಿರ ಮನುಷ್ಯರ ಮೇಲೂ ಪ್ರಭಾವ ಬೀರುತ್ತಾನೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಚಂದ್ರನ ಪ್ರಭಾವ ಜಾಸ್ತಿ. ಜ್ಯೋತಿಷ್ಯ ಶಾಸ್ತ್ರದಲ್ಲೂ ಇದರ ಸಾಕ್ಷಿ ಸಿಗುತ್ತದೆ. “ಶಶಿ ಶುಕ್ರೋ ಯುವತೀ” ಎನ್ನುತ್ತಾರೆ. ಚಂದ್ರನನ್ನು ಸ್ತ್ರೀಗ್ರಹ ಎಂದು ಪರಿಗಣಿಸಿದ್ದಾರೆ. ಅಲ್ಲದೇ, “ಕುಜೇಂದು ಹೇತು:ಪ್ರತಿಮಾಸಮಾರ್ತವಂ”… ಅರ್ಥವೇನೆಂದರೆ ಹೆಣ್ಣು ಮಕ್ಕಳಲ್ಲಿ ಋತುಚಕ್ರ ನಿಯಮಗೊಳ್ಳುವುದೇ ಚಂದ್ರನಿಂದ ಎಂದೂ, ಜಾತಕದಲ್ಲಿ ಚಂದ್ರನ ದೋಷವಿದ್ದರೆ ಗರ್ಭಾಶಯ, ಸ್ತ್ರೀತ್ವ ಇವುಗಳಿಂದ ಆಕೆ ನರಳುತ್ತಾಳೆ ಎಂದು ಹೇಳಲಾಗುತ್ತದೆ. ಇಷ್ಟಲ್ಲದೇ ಚಂದ್ರನನ್ನು ಮಾತೃಕಾರಕ ಎಂದು ಕರೆಯುತ್ತಾರೆ. ತಾಯಿಯ ಆರೋಗ್ಯ, ಆಯುಷ್ಯ ಸ್ಥಿತಿಗತಿಗಳ ಬಗ್ಗೆ ನೋಡುವಾಗ ಚಂದ್ರನೇ ಆಧಾರ. ಚಂದ್ರನು ಬಹಳಾ ಚತುರ. ಯಾರಾದರೂ ಒಳ್ಳೆಯ ಮಾತುಗಾರರಾಗಿದ್ದರೆ ಅದಕ್ಕೆ ‘ಚಂದ್ರ’ ಕಾರಣ ಎನ್ನುತ್ತಾರೆ.

ಎಲ್ಲವನ್ನೂ ಮೀರಿ ನಮ್ಮ ಭಾರತೀಯ ನೆಲದಲ್ಲಿ ಅರಳಿರುವ ಮಹಾ ಬೃಹತ್ ಗ್ರಂಥ ಮಹಾಭಾರತದ ಅರಸುಗಳ ವಂಶ ಶುರುವಾಗುವುದೇ ಚಂದ್ರನಿಂದ. ಅದು ಚಂದ್ರ ವಂಶದ ಕಥೆ. ಆತನ ಮಗ ಬುದ್ಧ. ಬುದ್ಧನ ಮಗ ಯಯಾತಿ….., ಹೀಗೆ ನಾವು ಚಂದ್ರನನ್ನು ನಿತ್ಯವೂ ನೋಡುತ್ತೇವೆ. ಆದರೆ ಆತನ ಮಹತ್ವ ತಿಳಿಯದಿ ದ್ದರೆ ಬದುಕು ವ್ಯರ್ಥವಲ್ಲವೇ..!?

ನಾವು ಸೇವಿಸುವ ಆಹಾರ ಮೈ ಸೇರಬೇಕಾದರೆ, ದಾಂಪತ್ಯ ಸುಖವಾಗಿರಬೇಕಾದರೆ, ಜೊತೆಗೆ ಸ್ತ್ರೀಯರ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ ಚಂದ್ರಮ. ಜೀವನದಲ್ಲಿ ನೆಮ್ಮದಿಯೇ ಇಲ್ಲವೆಂದಾದರೆ ಚಂದ್ರನನ್ನು ಆರಾಧಿಸಬೇಕು ಎಂದಿದ್ದಾರೆ. ನಾವು ಇದಕ್ಕಾಗಿ ಕಷ್ಟಪಡಬೇಕಿಲ್ಲ ಹೋಮ ಮಾಡಿಸಿ, ಹಣ ವ್ಯಯಿಸಬೇಕಿಲ್ಲ. ಅಮಾವಾಸ್ಯೆ ದಿನವೊಂದನ್ನು ಬಿಟ್ಟು ಪ್ರತೀ ರಾತ್ರಿ ಏಕಾಗ್ರತೆಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಬದುಕಿನಲ್ಲಿ ಸಂತಸ ಅರಳುವುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ ಹಿರಿಯರು.

ಚಂದ್ರನಲ್ಲಿ ಕಾಣುವ ‘ಮೊಲದ ಕುರಿತು ಒಂದು ಪುಟ್ಟಕಥೆ….!!

ಒಂದು ಕಾಡಿನಲ್ಲಿ ದೈವ ಭಕ್ತಿಯುಳ್ಳ ಮತ್ತು ಕೇಳಿದವರಿಗೆ ಏನು ಬೇಕಾದರೂ ದಾನ ಮಾಡುವಂತ ಒಂದು ಮೊಲವಿತ್ತು. ಒಮ್ಮೆ ಸ್ವರ್ಗಾಧಿಪತಿ ಇಂದ್ರ ಈ ಮೊಲವನ್ನು ಪರೀಕ್ಷೆ ಮಾಡಬೇಕೆಂದು ಸನ್ಯಾಸಿಯ ವೇಷದಲ್ಲಿ ದರಗಿಳಿದು ಬಂದ. ಮೊಲದ ಹತ್ತಿರ ಹೋಗಿ….

“ಮೊಲವೇ…! ನಾನು ನೆನ್ನೆ ಉಪವಾಸವಿದ್ದೆ, ಇವತ್ತು ಪಾರಣೆ. ನನಗೆ ತಿನ್ನಲು ಏನಾದರೂ ಕೊಡು..!!”
ಎಂದು ಬೇಡಿದ.

ಮೊಲ ಕೇವಲ ಚಿಗುರು ಹುಲ್ಲನ್ನು ತಿನ್ನುತ್ತಿದ್ದ ಕಾರಣ, ಆ ಸನ್ಯಾಸಿಗೆ ಇದರಿಂದ ಏನು ಉಪಯೋಗವಾದೀತು…!? ಎಂದು ಯೋಚಿಸುತ್ತಾ.., “ಸ್ವಾಮಿಗಳೇ ದಾನವಾಗಿ ನಿಮಗೆ ಕೊಡಲು ನನ್ನ ಬಳಿ ಯಾವ ಆಹಾರವೂ ಇಲ್ಲ…!! ನಾನು ಆಹಾರವನ್ನು ಶೇಖರಿಸಿ ಕೂಡ ಇಡುವುದಿಲ್ಲ!! ಹಾಗಾಗಿ ನನ್ನನ್ನೇ ನಿಮಗೆ ಅರ್ಪಿಸಿಕೊಳ್ಳುವೆ. ನನ್ನ ಮೃದುವಾದ ಮಾಂಸ ರುಚಿಯಾಗಿರುತ್ತದೆ ಎಂದು ಎಲ್ಲರೂ ತಿನ್ನಲು ಬಯಸುತ್ತಾರೆ. ನನಗೆ ಬೇರೆ ದಾರಿ ಇಲ್ಲ. ನಿಮ್ಮನ್ನು ಬರಿಗೈಯಲ್ಲಿ ಕಳುಹಿಸಲು ನನಗೆ ಕಷ್ಟವಾಗುತ್ತಿದೆ. ನೀವು ನನ್ನ ಬೇಯಿಸಿ ತಿಂದು ತೃಪ್ತಿಪಡಬಹುದು. ನಾನು ಸಿದ್ಧ…!!”.ಎಂದಿತು.

ನಿನ್ನನ್ನು “ಬೇಯಿಸೋದು ಹೇಗೆ..!?” ಎಂದು ಕೇಳಿದರು ಸನ್ಯಾಸಿ. ಕೂಡಲೇ ಮೊಲ ಸುತ್ತಮುತ್ತಲಿದ್ದ ಕಟ್ಟಿಗೆಗಳನ್ನು ಗುಡ್ಡೆ ಹಾಕಿತು. ಆ ಕಟ್ಟಿಗೆಗೆ ಮಾರುವೇಷದ ಇಂದ್ರ, ತನ್ನ ತಪಸ್ಸಿನ ಶಕ್ತಿಯಿಂದ ಕಿಡಿ ಹಚ್ಚಿದ.

ಮೊಲ ಆ ಬೆಂಕಿಯಲ್ಲಿ ಹಾರಲು ಸಿದ್ಧವಾಗಿ… “ಮಹಾತ್ಮರೇ…!! ನೀವು ನನ್ನಿಂದ ತೃಪ್ತಿ ಪಟ್ಟರೆ ನನಗೆ ಅದಕ್ಕಿಂತ ಬೇರೆ ಸಂತೋಷವಿಲ್ಲ…” ಎನ್ನುತ್ತಾ ಬೆಂಕಿಯೊಳಗೆ ಹಾರಿಬಿಟ್ಟಿತ್ತು. ಆದರೆ ಆಶ್ಚರ್ಯವೆಂದರೆ ಕಟ್ಟಿಗೆಗಳು ಚಟ ಚಟನೆ ಉರಿಯುತ್ತಿದ್ದರೂ…!!ಮೊಲದ ಒಂದು ಕೂದಲು ಕೂಡಾ ಸುಟ್ಟಿರಲಿಲ್ಲ. ಬದಲಿಗೆ ಉರಿಯುವ ಬೆಂಕಿಯಲ್ಲಿ ಕುಳಿತಿದ್ದರೂ ಕಮಲದ ಎಲೆಯ ಮೇಲೆ ಕುಳಿತಷ್ಟೇ ತಂಪಾದ ಅನುಭವವಾಯಿತು.

“ಈ ಸುಡುವ ಬೆಂಕಿ ತಂಪಾಗಿದೆಯಲ್ಲ ಮಹಾತ್ಮರೇ…!? ನೀವು ಯಾರು…!? ದಯವಿಟ್ಟು ಹೇಳಿ..” ಎಂದು ಕೇಳಿತು. ಆಗ ಮಾರುವೇಷದ ಇಂದ್ರದೇವ ನಿಜ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. “ಮಹಾಮಹಿಮನಾದ ಮೊಲವೇ.. ನಿನ್ನನ್ನು ಪರೀಕ್ಷಿಸಲೆಂದೇ ನಾನು ಸ್ವರ್ಗದಿಂದ ಬಂದೆ. ನಿನ್ನ ದಾನ ಮತ್ತು ತ್ಯಾಗ ಬುದ್ಧಿಗೆ ನಾನು ಮೆಚ್ಚಿರುವೆ. ನಿನಗೆ ಏನು ವರ ಬೇಕು ಕೇಳು….??” ಎಂದ.

ಮೊಲ “ದೇವಾದಿದೇವಾ…!! ನನ್ನ ದಾನ ಮತ್ತು ತ್ಯಾಗದ ಬುದ್ಧಿಗಳು ಎಂದೆಂದಿಗೂ ನನ್ನಲ್ಲಿ ಶಾಶ್ವತವಾಗಿ ಇರಬೇಕು ನನಗಷ್ಟೇ ಸಾಕು…!!” ಎಂದು ಕೇಳಿಕೊಂಡಿತು. ಇಂದ್ರನಿಗೆ ಅದರಿಂದ ಸಮಾಧಾನವಾಗಲಿಲ್ಲ. ಸೂರ್ಯ ಚಂದ್ರರಿರುವವರೆಗೂ ನಿನ್ನ ತ್ಯಾಗ, ದಾನದ ಗುರುತು ಪ್ರಪಂಚದ ಜಗತ್ತಿನ ಜನರಿಗೆ ಸದಾ ನಿದರ್ಶನ ವಾಗಬೇಕು..”. ಎಂದು ಹೇಳುತ್ತಾ, ತ್ರಿವಿಕ್ರಮನಂತೆ ಆಕಾಶದೆತ್ತರ ಬೆಳೆದು, ಎಡಗೈಯಲ್ಲಿ ಬೆಟ್ಟವನ್ನು ಹಿಂಡಿ ಹಸಿರು ತೆಗೆದು, ಬಲಗೈ ಬೆರಳನಿಂದ ಆ ರಸವನ್ನು ಅದ್ದಿಕೊಂಡು ಗುಂಡಾಗಿದ್ದ ಬಿಳಿಯ ಚಂದ್ರನ ಮೈಮೇಲೆ ಮೊಲದ ಚಿತ್ರವನ್ನು ಬರೆದನಂತೆ…!! ಅಂದಿನಿಂದ ಮೊಲದ ದಾನ ಮತ್ತು ತ್ಯಾಗದ ನೆನಪಿಗಾಗಿ ಚಂದ್ರನಲ್ಲಿ ಮೊಲ ಗೋಚರಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. (ಅವರವರ ನಂಬಿಕೆಗೆ ಅನ್ವಯಿಸುತ್ತದೆ)

ಚಂದ್ರನಿಗೆ ಸ್ಥಿರವಾದ ಆಕಾರವಿಲ್ಲ. ಪ್ರತಿದಿನ ಬದಲಾಗುತ್ತಾನೆ. ಕೆಲವು ರಾತ್ರಿಗಳಲ್ಲಿ ಕಣ್ಮರೆಯಾಗಿ, ಮತ್ತೆ ಪ್ರತ್ಯಕ್ಷವಾಗುತ್ತಾನೆ. ಚಂದ್ರನ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಚಂದ್ರನು ದಕ್ಷ ಋಷಿಯ ೨೭ ಪುತ್ರಿಯರನ್ನು ಮದುವೆಯಾಗುತ್ತಾನೆ. (೨೭ ನಕ್ಷತ್ರಗಳು) ಪುರಾಣಗಳ ಪ್ರಕಾರ ಪಿತೃ ಲೋಕವು ಚಂದ್ರಲೋಕದಲ್ಲಿದೆ. ಸಾವಿನ ನಂತರ ಆತ್ಮಗಳು ಇಲ್ಲಿ ಒಂದರಿಂದ ನೂರು ವರ್ಷಗಳವರೆಗೆ ಇರುತ್ತವೆ. ಅವರ ಕಾರ್ಯಗಳನ್ನು ಇಲ್ಲಿ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ವಿಪರ್ಯಾಸವೆಂದರೆ, ಅದೆಷ್ಟೋ ಕವಿಮನಗಳಿಗೆ ಸ್ಪೂರ್ತಿಯಾಗಿರುವ ಆಕಾಶ, ಅದರ ಅನಂತತೆ, ಅಲ್ಲಿರುವ ಸೂರ್ಯ ಚಂದ್ರರನ್ನು ನೋಡುವುದೇ ಇಲ್ಲ…!! ರಾತ್ರಿಯಂತೂ ಆಗಸದ ಸೊಬಗು ಇಮ್ಮಡಿಯಾಗಿರುತ್ತದೆ. ಮನೆಯಲ್ಲಿ ದೂರದರ್ಶನದ ಮುಂದೆ ಕುಳಿತು ಸಮಯ ಹಾಳು ಮಾಡುವ ದಾರಾವಾಹಿಗಳನ್ನು ವೀಕ್ಷಿಸಲು ಸಮಯವಿರುತ್ತದೆ. ಅದೇ ರೀತಿಯಲ್ಲಿ ಮೊಬೈಲು ಕೈಯಲ್ಲಿ ಹಿಡಿದರೆ ಅದು ಸಮಯ ತಿನ್ನುವುದರ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಹೊರಬಂದು ಅಂಗಳದಲ್ಲಿ ನಿಂತು ಆಗಸವನ್ನು ನೋಡಲು ಸಮಯ ಇರುವುದಿಲ್ಲ….!! ಇಂದಿನ ತಾಯಂದಿರು ಮಕ್ಕಳನ್ನು ದೂರದರ್ಶನದ ಮುಂದೆ ಕೂಡಿಸಿ ಅಥವಾ ಮೊಬೈಲ್ ಕೈಯಲ್ಲಿ ಕೊಟ್ಟು ಊಟ ಮಾಡಿಸುವ ಅವೈಜ್ಞಾನಿಕ ಪದ್ಧತಿಯು ಭವಿಷ್ಯದಲ್ಲಿ ಮಕ್ಕಳಿಗೆ ಅನೇಕ ರೋಗಕ್ಕೆ ದಾರಿ ಮಾಡಿ ಕೊಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಮಕ್ಕಳನ್ನು ಮನೆಯಂಗಳದಲ್ಲಿ ಕರೆತಂದು, ನೀಲಾಕಾಶದಲ್ಲಿ ಚುಂಬಕ ಚಂದಿರನನ್ನು ತೋರಿಸುತ್ತಾ ಜೊತೆಗಿರುವ ಮಿನುಗುವ ನಕ್ಷತ್ರಗಳನ್ನು ಎಣಿಸುತ್ತಾ ,ಸಂಬಂಧ ಪಟ್ಟ ಕಥೆಗಳನ್ನು ಹೇಳುತ್ತಾ, ಮಕ್ಕಳಿಗೆ ಊಟ ಮಾಡಿಸಿದಾಗ ಚಂದ್ರ ಮತ್ತು ಮಗುವಿನಲ್ಲಿ ಅವಿನಾಭಾವ ಸಂಬಂಧ ಗಟ್ಟಿಯಾಗಿ ಬೆಳೆಯುತ್ತದೆ. (ಚಂದ್ರ ಆ ಮಗುವಿಗೆ ಭಾವನಾತ್ಮಕವಾಗಿ ಮಾಮನಾಗುತ್ತಾನೆ).ಮೊಬೈಲ್ ಕೊಟ್ಟು ಕೂರಿಸಿ ಊಟ ಮಾಡಿಸಿದರೆ ಮಕ್ಕಳು ಅದಕ್ಕೆ ಹೊಂದಿಕೊಳ್ಳುತ್ತವೆ, ಅಂಗಳದ ಚಂದಿರನನ್ನು ತೋರಿಸುತ್ತಾ ಊಟ ಮಾಡಿಸಿದರೆ ಅದಕ್ಕೂ ಹೊಂದಿಕೊಳ್ಳುತ್ತವೆ. ಪಾಲಕರು ಕಲಿಸಿದಂತೆ ಮಕ್ಕಳು ಕಲಿಯುತ್ತವೆ ಎನ್ನುವುದು ಸತ್ಯ ವಲ್ಲವೇ…!?

ದೂರದರ್ಶನ, ಮೊಬೈಲ್ ಇಲ್ಲದ ಕಾಲದಲ್ಲಿ ಜೀವಿಸಿದ ರೀತಿಯನ್ನು ನೆನೆಯುತ್ತಾ..!! ಮರೆತುಹೋದ/ಕಳೆದುಹೋದ ದಿನಗಳನ್ನು ಸ್ಮರಿಸಿಕೊಂಡು ..!! ಸಮಯ ದೊರಕಿದಾಗಲೆಲ್ಲಾ ಬಂಧುಗಳ ಅಥವಾ ಸ್ನೇಹಿತರ ಜೊತೆಗೆ ಮನೆಯ ಅಂಗಳದಲ್ಲಿ ಅಥವಾ ಮಾಳಿಗೆಯ ಮೇಲೆ ಮನಕ್ಕೆ ಮುದ ನೀಡುವ ತಂಪಾದ ಬೆಳದಿಂಗಳೂಟಕ್ಕೆ ಒಂದೆಡೆ ಸೇರಬೇಕು. ಆ ರಸಮಯ ಕ್ಷಣಗಳು ಮತ್ತೆ ಸೃಷ್ಟಿಯಾಗಬೇಕು.

ಬಾರಾ ಚಂದಮಾಮ..

ನನ್ನ ಮುದ್ದು ಕುಮುದೇಶ ಮಾಮ
ಆಡಲು ಬಾರೆಯಾ ಯಮಿರ..!?
ಕುಳಿತು ನಾವು ನದಿ ದಂಡೆ ತೀರದಲಿ
ಸವೆಯುತ ಬೆಳದಿಂಗಳ ಹಾಲ್ಬೆಳಕಿನಲಿ
ದೋಣಿಯ ತೇಲಿಸು ಬಾರಾ ವರಾಲಿ..!!

ದ್ವಿಜೇಂದ್ರ,ದೀಪೇಂದು,ದಿವ್ಯೇಂದು
ತರಲು ತುತ್ತ ಬಾಯಿಗೆ ಅಂತರತಾರಾ
ಹಾಜರು ಅಮ್ಮ ಕರೆದೊಡೆ ನಾಕ್ಷತ್ರಿಕ
ಕರೆಯೆ ನಾ ಕಾಡುವೆ ಏಕೆ ಬಾರಾ ಮಾಯಾಂಕ..!!

ಆಧೀರ,ಅಮಲೇಂದು, ಅಮೃತಾಂಬು
ಇಂದು, ಇಂದುಭೂಷಣ, ಇಂದುಲೇಖ
ರಜನೀಶ,ರಾಕೇಶ, ರೋಹಿಣೀಶ ನೀ
ಎನ್ನ ಪುಟ್ಟ ಕೈಗಳ ತುಂಬಿ ಕುಮುದೇಶ
ಸಿಹಿ ಮುತ್ತ ನೀಡು ಬಾರಾ ಹಿಮಾಂಶು..!!

ಅನಂತಾನಂತ ಆಗಸದ ಶಶಿಕಾಂತ
ಹೊಳೆವ ನಕ್ಷತ್ರಪುಂಜ ನಿಶಿಕಾಂತ
ಚಂದ್ರಭಾವ, ಚಂದ್ರಕಾಂತ, ಚಂದ್ರಮ
ಚಂದ್ರನಾಥ ನೀ ಬಾರಾ ಚಂದಮಾಮ..!!

ಬಾರದಿರೆ ನೀಲೇಶ, ಹಾರುವೆ ನೀಲಾಕಾಶಕೆ
ಅಮ್ಮನ ಕೈತುತ್ತಲಿ ಪಾಲ ನೀಡಲೆ ಸುಧಾಕರ.!?
ಉಂಡುಟ್ಟು ನಲಿಯೋಣ ಸೋಮೇಶ್ವರ
ಶಶಿಕಾಂತ, ಶುಭಾಂಶು, ಶೀತಾಂಶು
ಕಣ್ಣಮುಚ್ಚಾಲೆ ಆಡೋಣ ಬಾರಾ ಹರ್ಮೇಂದ್ರ..!!

ಬಾರಾ ನೀ ನನ್ನ ಮುದ್ದು ಚಂದಮಾಮ..!!
(ಸ್ವರಚಿತ ಕವನ)

ಈ ರೀತಿಯಲ್ಲಿ ಒಂದು ಮಗು ತನ್ನ ಅಮ್ಮನ ಪ್ರತೀ ಕೈ ತುತ್ತಿಗೆ ‘ಚಂದಮಾಮ’ ನನ್ನು ಕೈ ಚಾಚಿ ಕರೆಯುವಂಥಹ ದಿನಗಳು ಬೇಕು….!! ಇಂದಿನ ತಾಯಂದಿರು ಮಕ್ಕಳ ಕೈಗೆ ಮೊಬೈಲ್ ಬದಲಾಗಿ, ಗಗನದಲ್ಲಿ ಮೋಡಗಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಾ, ಹಾಲ್ನೊರೆಯ ಬೆಳದಿಂಗಳ ಚೆಲ್ಲುವ ಚಂದಿರನೊಂದಿಗೆ ಸಂಭಾಷಣೆ ಮಾಡುತ್ತಾ, ಭೂಲೋಕಕ್ಕೆ ಕರೆಸಿ ಮತ್ತೆ ವಾಪಾಸ್ಸು ನಭಕ್ಕೆ ಕಳುಹಿಸಿಕೊಟ್ಟರೆ…!!
ಒಂದು ಅವಿನಾಭಾವ ಸಂಬಂಧ ಸೃಷ್ಟಿಯಾಗುತ್ತದೆ. ಸಧ್ಯದ ಸುಂದರ ಅನುಭೂತಿಯು ಮುಗ್ಗ ಕಂದಮ್ಮಗಳಿಗೆ ಅತೀ ಅವಶ್ಯಕವಾಗಿದೆ….

ಶೋಭಾ ಶಂಕರಾನಂದ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x