ಪಂಜು ಕಾವ್ಯಧಾರೆ

ನೆನಪುಗಳೊಂದಿಗೆ

ಮೌನ ಮೆರವಣಿಗೆ ನಡೆದಿದೆ
ರಥೋತ್ಸವದಲ್ಲಿ
ರಂಗುರಂಗಿನ ಕನಸುಗಳ ಹೊತ್ತು
ನೆನಪುಗಳ ಅನಾವರಣ
ಕಹಿ ಮರೆವಿನ ಪಲಾಯನ !

ಉಳಿದು ಹೋಗಿದೆ ನೆನಪುಗಳು
ಎಂದೆಂದಿಗೂ ಕರಗದಂತೆ
” ತಿಮ್ಮಪ್ಪನ ” ಐಶ್ವರ್ಯದಂತೆ
ಬಳಸಿದಷ್ಟೊ ……
ಕರಗಿಸಿದಷ್ಟೊ ……
ಎಂದೆಂದಿಗೂ ಮುಗಿಯದಂತೆ…..

ನೆನಪಿನ ಹನಿಗಳು ಜಾರುತಿದೆ
ಬಿಸಿಬಿಸಿಯಾಗಿ ಕೆನ್ನೆಗಳ ಮೇಲೆ
ಜಾರಿದರೂ ಉಳಿಸಿ ಹೋಗಿವೆ
ನೆನಪಿನ ಚಿತ್ತಾರವನ್ನು
ನೆನಪುಗಳೇ ಹಾಗೆ
ಮರೆಯಬೇಕೆಂದರೂ ,
ಮರೆಯಲಾಗದ , ಹಳೆಯದಾದಷ್ಟೊ
ನೆನಪುಗಳು ಮತ್ತೆ ಮತ್ತೆ ಕಾಡುತ್ತವೆ

ಜೀವದೊಡನೆ ಬೆಸೆದಿರುವ
ಆತ್ಮದಂತೆ ಹೃದಯದೊಳಗೇ
ಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು …..
ಆದರೂ,
ನನಗೆ ಭಯ
ರೆಕ್ಕೆ ಪುಕ್ಕ ಬಲಿತೊಡನೆ
ಗೂಡುಬಿಟ್ಟು ಹಾರಿಹೋಗುವ
ಪುಟ್ಟ ಹಕ್ಕಿಯಂತಾದರೆ ……?!

ಪ್ರಭಾಕರ ತಾಮ್ರಗೌರಿ

ಹಾರುವ ಹಕ್ಕಿ

ಒಂಟಿತನ ಬಹಳ
ಸೊಗಸಿನ ಜೀವ-ನ!

ಕೆಲವೊಮ್ಮೆ ಹಾಗೇ
ಕಾಡುತ್ತಿದೆ ಎನಗೆ!

ಆತ್ಮೀಯರಿಂದಲೇ
ದಾಳಿಗೊಳಗಾದವಳಲ್ಲವೇ?

ಹೆತ್ತವರು ಹೇಳಿದ್ದರಂದು..
ಭಾಷೆ ಬಾರದೂರು
ಜಾಗೃತವಾಗಿರು ಚೂರು!

ನನ್ನವರೆಂದುಕೊಂಡವರೇ
ಮುಳ್ಳಾಗುವರೆಂದು
ನನಗೇನು ಗೊತ್ತು!

ಮೇಲೆ ಹಾರಿದ ಹಕ್ಕಿಯ
ರೆಕ್ಕೆ ಅರ್ಧ ಹರಿದಿತ್ತು!

ದಿಕ್ಕಾರವಿರಲಿ
ಈ ಗೆಳೆತನಕ್ಕೆ

ಪುಕ್ಕ ಬೆಳೆಸಿಕೊಂಡು
ಮತ್ತೆ ಬೆಳೆದು
ಗುರಿಯತ್ತ ಹಾರುವೆ!
ಹರಸು ಗುರುವೆ!

ಪವಿತ್ರಾ. ಎನ್. ಮೊಗೇರಿ.

ಜ್ಞಾನ ದೇಗುಲ

ಬನ್ನಿರಿ ಬನ್ನಿರಿ ಮುದ್ದು ಮಕ್ಕಳೇ
ಖುಷಿ ಖುಷಿಯಲಿ ಕಲಿಯಲು ಶಾಲೆಗೆ
ಹಸಿರು ತೋರಣ ಕಟ್ಟಿ ಸಿಂಗರಿಸಿದೆ
ಮತ್ತೆ ನಿಮ್ಮನ್ನು ಸ್ವಾಗತಿಸಲು ಶಾಲೆಗೆ
ನವ ನಾಗರೀಕರನ್ನಾಗಿಸಲು ನಾಳೆಗೆ

ಅಜ್ಜನ ಮನೆಯಲಿ ಬೇಸಿಗೆ ರಜೆಯಲಿ
ದಿನ ದಿನವೂ ಮಜವೋ ಮಜವು
ಮಾವು ಹಲಸಿನ ಹಣ್ಣನು ತಿಂದು
ನೆಂಟರ ಮನೆಗಳಿಗೆ ಹೋಗಿ ಬಂದು

ಬೇಸಿಗೆ ರಜೆಯು ಮುಗಿದೆ ಹೋಗಿದೆ
ಶಾಲೆಗೆ ಪ್ರವೇಶವು ಆರಂಭವಾಗಿದೆ
ನಲಿವಿನ ಜೊತೆ ಜೊತೆಗೆ ನಿತ್ಯವೂ
ಕಲಿಕೆಯ ಪ್ರಾರಂಭವು ಆಗಬೇಕಿದೆ

ಮುಂಜಾನೆ ಬೇಗ ಬೇಗನೆ ಎದ್ದು
ಸ್ವಚ್ಛವಾಗಿ ಸ್ನಾನವ ಮಾಡಿಕೊಂಡು
ಭಕ್ತಿಯಿಂದ ದೇವರಿಗೆ ಪೂಜಿಸಿ
ತಂದೆ ತಾಯಿಯ ಕಾಲಿಗೆ ನಮಿಸಿ
ಬನ್ನಿರಿ ಸಮವಸ್ತ್ರವನು ಧರಿಸಿ

ಓದಿ ಬರೆಯಬೇಕು ಪ್ರತಿನಿತ್ಯ
ರೂಪಿಸಿಕೊಳ್ಳ ಬೇಕು ನಾಳಿನ ಭವಿಷ್ಯ
ಗುರುಗಳು ಕಲಿಸಿ ಕೊಡುವರು ವಿಷ್ಯ
ವಿಜ್ಞಾನ ಹೇಳುವುದು ಬಹಳ ಸತ್ಯ

ಗಣಿತ ವಿಷಯ ಕೆಲವರಿಗೆ ಕಷ್ಟ
ತಿಳಿದು ಕೊಳ್ಳದೆ ಹೋದರೆ ನಮಗೆ ನಷ್ಟ
ಅರಿತು ಕೊಂಡರೆ ಎಲ್ಲವೂ ಸ್ಪಷ್ಟ
ವಿಜ್ಞಾನ ವಿಷಯವೇ ಬಲು ವಿಶಿಷ್ಟ

ತೆರೆದಿದೆ ಎಲ್ಲರಿಗೂ ಜ್ಞಾನದ ದೇಗುಲ
ಕಲಿಯೋಣ ಜೀವನ ಪಾಠವ ಸರಿಯಾಗಿ
ಬಿಡಬೇಕಿದೆ ಮನಸಿನೊಳಗಿನ ದಿಗಿಲ
ನಾಳಿನ ಬಾಳಿನಲಿ ಗೆಲ್ಲುವ ಸಲುವಾಗಿ

ನಾಗರಾಜ ಜಿ. ಎನ್. ಬಾಡ

ಅಮ್ಮಾ ಗ್ರಂಥಾಲಯ ನೀನು…

ನವ ಮಾಸದಲ್ಲಿ ಹೊತ್ತು
ಉದರದಲ್ಲಿ ಹೊತ್ತು ಹಾಕಿದೆ…ನೀ
ನನ್ನ ಜಗ ಕಾಣಲೆಂದು…
ನಿನ್ನ ಮಡಿಲಲಿ ಹಾಡಲೆಂದು.

ನಾ ಜನಿಸಿದೆ ಜನವರಿ ಮಾಸದಲ್ಲಿ
ನೀ ಖುಷಿಯಾದೆ ಜನಮಾನಸದಲ್ಲಿ
ಅಪ್ಪನಿಗೆ ಅಕ್ಕರೆ ನಾನು…
ಅಣ್ಣನಿಗೆ ಪ್ರಾಣ ನೀನು.
ನಿನ್ನ ಋಣ ಹೇಗೆ ತೀರಿಸಲಿ ಇನ್ನು ನಾನು….

ಅಕ್ಕರೆಯ ಅಣ್ಣನಿಗೆ ಜನ್ಮ ತೆತ್ತುವಾಗ
ಆಸೆ ಹೊತ್ತೆ ಅಂದು ನೀನು….
ನಿನ್ನ ಉದರದಲ್ಲಿ ಬಂದು ನಿನ್ನ ಖುಷಿ
ಕಡಲಾಗಿಸಿದನಿಂದು.

ಶಬರಿ ಕಾದಳು ರಾಮನಿಗಾಗಿ….
ನೀ ಕಾಯುತ್ತಿರುವೆ ಅನುರೂಪದ ಅನುಸೂಯನ ಪ್ರಶಾಂತನಿಗಾಗಿ.
ಆ ದೇವರ‌ ನಿರೀಕ್ಷೆ ಸುಳ್ಳಾಗಬಹುದು…
ತಾಯಿ ನಿರೀಕ್ಷೆ ಸುಳ್ಳಾಗದು.

ನಿನ್ನ ಬಗ್ಗೆ ಹೊಗಳಲು ಪದಗಳಿಲ್ಲದ ಪುಸ್ತಕ ನಾನು,
ನನ್ನ ಹೆತ್ತು, ಹೊತ್ತು, ತಿದ್ದಿ ತೀಡಿದ
ಗ್ರಂಥಾಲಯ ನೀನು.
ಕೈ ಮುಗಿದು ಒಳ ಬರುವೆ..
ಆಶೀರ್ವಾದಿಸು ನನ ಮನವೇ..

ಅಕ್ಕರೆಯಿಂದ ಏನ್ ಮಗಳೆ ಎಂದೆ ನೀನು
ಇಂತಿ ನಿನ್ನ ಮಗಳೆಂದೆ ನಾನು.

ಗೌರಿಪುರದ ಪವಿತ್ರ


ಹೆಣ್ಣು ಮಾಯೆಯಲ್ಲ, ಮಮತೆಯ ಮಡಿಲು

ಅರಿಯದ ಮೂಡರು ಹೇಳುವರು ಹೆಣ್ಣೊಂದು ಮಾಯೆ…!
ಅರಿಯದೆ, ಜರಿದು ಮಾತನಾಡುವುದು ನೀ ಸರಿಯೇ….!
ಹೆಣ್ಣು ಮಾಯೆಯಲ್ಲ, ಮಮತೆಯ ಮಡಿಲು ….!
ಎನ್ನುವುದ ನೀ ಏಕೆ ಮರೆತೆ….

ಪ್ರೀತಿಯ ಮಡಿಲು, ಕರುಣೆಯ ಒಡಲು ಈ ಹೆಣ್ಣು…..!
ಈ ಮಾತೆಗೆ ಸರಿಸಮಾನದದ್ದು ಈ ಜಗದಲಿ ಹುಟ್ಟಿಲ್ಲ, ಮುಂದೆಯೂ ಹುಟ್ಟೋದಿಲ್ಲ….!
ಹೆಣ್ಣು ಮಾಯೆಯಲ್ಲ ಮಮತೆಯ ಮಡಿಲು…
ಎಂಬುದ ನೀ ಅರಿಯಲಾದೆ…!

ಅಗೆದಷ್ಟು ಬಗೆದಷ್ಟು ಚಿಮ್ಮುವ, ಪ್ರೀತಿ ವಾತ್ಸಲ್ಯ ಚಿಲುಮೆ…..!
ಅವರಿವವರೆಲ್ಲದೆ ಹಂಚುವಳು, ಪ್ರೀತಿಯ ಒಲುಮೆ….!
ಎಂಬುದನ್ನು ಮರೆತಿರುವುದು ಸರಿಯೇ….!
ಹೆಣ್ಣು ಮಾಯೆಯಲ್ಲ, ಮಮತೆಯ ಮಡಿಲು….!

ತಾಯಿಯಾಗಿ, ಅಕ್ಕ-ತಂಗಿಯಾಗಿ
ಸ್ನೇಹಿತೆ ಯಾಗಿ, ಮಡದಿಯಾಗಿ…!
ಗರ್ಭಗುಡಿಯಲ್ಲಿಟ್ಟು, ಹೊತ್ತು ಹೊತ್ತಿಗೆ
ಆಶ್ರಯ ನೀಡಿ ಒತ್ತಾಸೆಯಾಗಿ ನಿಂತು
ಸಾಕಿ ಸಲಹಿದವಳು ಹೆಣ್ಣು….!
ಎಂಬುದ ನೀ ಮರೆತೆಯಾ…
ಹೆಣ್ಣು ಮಾಯೆ ಅಲ್ಲ, ಮಮತೆಯ ಕಡಲು

ಸಂಸಾರ ಎಂಬ ಸಾಗರದಿ ಸಿಲುಕಿ
ನರಳಾಡಿದರು ತೋರಿಸಿಕೊಳ್ಳದೆ
ನಕ್ಕು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗವಳು….!
ತನ್ನ ಖುಷಿಗಿಂತ ಸಂಸಾರದಲ್ಲಿ
ಖುಷಿ ಕಾಣುವಳು ಹೆಣ್ಣು …!
ಎಂಬುದ ಅರಿಯಲಾದೆ ನೀ…
ಹೆಣ್ಣು ಮಾಯೆಯಲ್ಲ, ಮಮತೆಯ ಕಡಲು

ಮನದ ಕಡಲು ಹೊಡೆದು.
ಕಣ್ಣೀರ ಧಾರೆ ಉಕ್ಕಿ ಹರಿದರು
ಆ ಕಣ್ಣೀರನ್ನು ಪಣ್ಣೀರಿನ ಕಡಲಾಗಿಸಿ
ಅದರಿಂದಲೇ ಬೆಳೆಯ ಬೆಳೆದು….
ತನ್ನ ಸಂಸಾರಕ್ಕೆ ಆಶ್ರಯ ನೀಡುವವರು ಹೆಣ್ಣು…..!
ಎಂಬುದನ್ನು ಅರಿಯಲಾದೆ ಸರಿಯೇ…!
ಹೆಣ್ಣು ಮಾಯೆಯಲ್ಲ, ಮಮತೆಯ ಮಡಿಲು….!

ಚಿನ್ನಸ್ವಾಮಿ ಎಸ್ ಹೆಚ್ ಮೂಕಹಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x