ವೀರೇಶ ಬ. ಕುರಿ ಸೋಂಪೂರ ಅವರ “ದುಡ್ಡಿನ ಮರ”: ಎನ್. ಶೈಲಜಾ ಹಾಸನ

ಕವಿ ವೀರೇಶ ಬ. ಕುರಿ ಸೋಂಪೂರ ಅವರು ಈಗಾಗಲೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ವತಹ ಶಿಕ್ಷಕರಾಗಿರುವ ವೀರೇಶ್ ಅವರು ಸದಾ ಮಕ್ಕಳೊಂದಿಗೆ ಇದ್ದು, ಮಕ್ಕಳಿಗೆ ಬೇಕಾಗಿರುವಂತಹ, ಆಸಕ್ತಿದಾಯಕವಾಗಿರುವಂತಹ ಸಾಹಿತ್ಯವನ್ನು ನೀಡುತ್ತಾ, ಇದೀಗ ದುಡ್ಡಿನ ಮರ ಎಂಬ ಮಕ್ಕಳ ಕವನ ಸಂಕಲವನ್ನು ಹೊರತಂದಿದ್ದಾರೆ. ಇಲ್ಲಿನ ಹಲವಾರು ಕವಿತೆಗಳು ಹಲವಾರು ವಿಚಾರಗಳಿಂದ ಕೂಡಿದ್ದು, ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಮಕ್ಕಳ ಮನಸ್ಸು ಹೇಗೆ ಓಡುತ್ತದೆ, ಆ ಮಕ್ಕಳ ಮನಸ್ಸಿಗೆ ಏನು ಬೇಕು ಎಂಬುದನ್ನು ಬಹಳ ಚೆನ್ನಾಗಿ ಅರಿತಿರುವ ಕವಿ ಮಕ್ಕಳ ಮನಸ್ಸನ್ನು ಗೆಲ್ಲಲು ಎಂತಹ ವಿಚಾರಗಳನ್ನು ಹೇಳಬೇಕೆಂಬುದನ್ನು ಅರ್ಥ ಮಾಡಿಕೊಂಡು ಸರಳ ಸುಂದರ ಕವಿತೆಗಳನ್ನು ರಚಿಸಿದ್ದಾರೆ.

ಕವನ ಸಂಕಲನದ ಶೀರ್ಷಿಕೆಯ ಕವಿತೆಯಾದ ‘ದುಡ್ಡಿನ ಮರ’ ದುಡ್ಡಿನ ಮಹತ್ವವನ್ನು ಮಕ್ಕಳಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ. ದುಡ್ಡು ಅದೆಷ್ಟು ಮಹತ್ವದ್ದು ಎಂದು ತಿಳಿಸುತ್ತಾ

ಶೆಟ್ಟರ ಅಂಗಡಿಗೆ ದುಡ್ಡಿದಿದ್ದರೆ
ಮೊದಲೇ ಕೊಟ್ಟು ಚಾಕ್ಲೇಟ್
ಬಿಸ್ಕತ್ ಚಕ್ಕುಲಿ ಪೇಡೆ
ಬೇಕಾದ ತಿನ್ನಿಸು ಪಡೆಯಬಹುದಿತ್ತು
ವಿಮಾನ ಹತ್ತಿ ಜಗವ ಸುತ್ತಿ
ನೂರೆಂಟು ದೇಶ ನೋಡಬಹುದಿತ್ತು
ನಾಯಕನಾಗಿ ನಾನೇ ಒಂದು ಚಂದದ
ಸಿನಿಮಾ ಮಾಡಬಹುದಿತ್ತು

ಹೀಗೆ ಮಗು ದುಡ್ಡಿನ ಮರವೇ ತನ್ನ ಬಳಿ ಇದ್ದಿದ್ದರೆ ಏನೆಲ್ಲಾ ಮಾಡಬಹುದಿತ್ತು ಎಂಬ ಕಲ್ಪನೆಯನ್ನು ಮಗುವಿನ ಮನಸ್ಸಿನಾಳಕ್ಕೆ ಇಳಿದು ಸೊಗಸಾಗಿ ಓದುಗರಿಗೆ ಹೇಳಿದ್ದಾರೆ.

ಪ್ರತಿದಿನ ಶಾಲೆಗೆ ಹೋಗಿ ಪಾಠ ಪ್ರವಚನ, ಮನೆ ಕೆಲಸ ಅಂತ ಸಾಕಾಗಿರುವ ಮಗು ಭಾನುವಾರ ಬರಲಿ ಎಂದು ಕಾಯುತ್ತಿರುತ್ತದೆ.

ಭಾನುವಾರ ಬಂದ್ರೆ ಸಾಕು,
ಮನಸ್ಸಲ್ಲಿ ಕಾಮನಬಿಲ್ಲು
ಬೆಟ್ಟ ಗುಡ್ಡ ಬಟ್ಟಂಬಯಲು
ಎಲ್ಲೆಡೆ ಗೆಳೆಯರಗುಲ್ಲು
ಹಳ್ಳಕೊಳ್ಳ ಸುತ್ತಿ ಸುಳಿದು
ಸಿಹಿ ಸಿಹಿ ಜೇನಿನ ಬೇಟೆ
ಕಬ್ಬು ಕಡಲೇ ಸೂರ್ಯಪಾನ
ಬೆನ್ನಿಗೆ ಮೂಟೆ ಮೂಟೆ

ಹೀಗೆ ಇಡೀ ಭಾನುವಾರವನ್ನು ಸವಿಯುವ ಮಗು ಭಾನುವಾರಕ್ಕಾಗಿ ಸದಾ ಕಾಯುವ ಈ ಪದ್ಯ ಮಗುವಿನ ಮನಸ್ಸನ್ನು ತೆರೆದಿಟ್ಟಿದೆ.

ಶಾಲಾ ಶಿಕ್ಷಕರ ಬಗ್ಗೆ ಮಕ್ಕಳಿಗೆ ವಿಶೇಷವಾದಂತಹ ಅಭಿಮಾನವಿರುವುದು ಸಹಜ. ಅಂತಹ ಅಭಿಮಾನವನ್ನು ನಮ್ಮ ಮೇಷ್ಟ್ರು ಅನ್ನೋ ಪದ್ಯದಲ್ಲಿ ಕವಿ ಹೀಗೆ ಹೇಳಿದ್ದಾರೆ.

ನಮ್ಮ ಮೇಷ್ಟ್ರು ನಮ್ಮ ದೇವರು
ಎಷ್ಟೊಂದು ಮುದ್ದು ಮಾಡ್ತಾರವರು
ಕಥೆಗಳ ಹೇಳಿ ಹಾಡನು ಹಾಡಿಸಿ
ಅಭಿನಯ ಮಾಡುತ ನಗುಸ್ತಾರವರು
ಬೇಧ ಭಾವಕ್ಕೆ ಬೆನ್ನನ್ನು ಮಾಡಿ
ಸಮಾನತೆಯನು ಸಾರ್ತಾರವರು
ಹಮ್ಮು ಗಿಮ್ಮ ಗೊತ್ತೇ ಇಲ್ಲ
ದೇವರ ಹಾಗೆ ತೋರ್ತಾರವರು

ಅಂತ ಹೇಳುತ್ತಾ ಪಾಠ ಕಲಿಸುವ ಸದಾ ತಮ್ಮೊಂದಿಗೆ ಇರುವ ತಮ್ಮ ಗುರುಗಳ ಬಗ್ಗೆ ಅಭಿಮಾನ, ಪ್ರೀತಿ, ಗೌರವ ತೋರುತ್ತಾರೆ. ಪ್ರಸ್ತುತ ಕಾಲದಲ್ಲಿ ಇಂತಹ ಪ್ರೀತಿ ಅಭಿಮಾನ ಎಲ್ಲಾ ಮಕ್ಕಳಲ್ಲೂ ಮೂಡಿ ಬರಬೇಕು. ಅದನ್ನು ಮೂಡಿಸುವ ಶಿಕ್ಷಕರು ಕೂಡ ಇವತ್ತಿನ ದಿನಗಳಲ್ಲಿ ಅತ್ಯಗತ್ಯವಾಗಿದ್ದಾರೆ.

ಮಕ್ಕಳಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಹಳ್ಳಿಯ ಮಕ್ಕಳಿಗೆ ಹಸು, ಆಡು, ಕುರಿ, ಕೋಳಿ ಹೀಗೆ ಪ್ರಾಣಿಗಳನ್ನು ಪ್ರೀತಿ ಮಾಡುತ್ತಾರೆ. ಇಲ್ಲಿಯೂ ಕೂಡ ಮಗು ಗೌರಿ ಎಂಬ ಹಸುವನ್ನು ಮುದ್ದು ಮಾಡುತ್ತಾ

ನಮ್ಮ ಮನೆಯಲ್ಲಿರುವುದಣ್ಣ
ಚಂದದೊಂದು ಹಸು
ಅಚ್ಚ ಬೆಳಕು ಮೈಯ ಬಣ್ಣ
ಪ್ರೇಮ ಸಿಂಧು ಪಶು
ಗೌರಿ ಎಂಬ ಹೆಸರು ಇದಕ್ಕೆ
ನನ್ನ ಬಿಟ್ಟು ಅಗಲದು
ಇದು ತೋರುವ ಮಮಕಾರಕ್ಕೆ
ತುಂಬಿ ಬಂತು ಮನವದು

ಹೀಗೆ ಕವಿ ಮಗು ಮನಸ್ಸಿನ ಒಳಹೊಕ್ಕು ಮಗುವಿನ ಪ್ರಾಣಿ ಪ್ರೀತಿಯನ್ನುತೆರೆದಿಟ್ಟಿದ್ದಾರೆ.

ಮಗುವಿಗೆ ಇತಿಹಾಸವನ್ನು ಕಲಿಸುವ ನಿಟ್ಟಿನಲ್ಲಿ ಭಾರತ ದೇಶಕ್ಕೆ ಸ್ವತಂತ್ರವನ್ನು ತಂದುಕೊಡಲು ಹೋರಾಡಿದ ಗಾಂಧಿ ತಾತನ ಬಗ್ಗೆ ಪ್ರೀತಿಯಿಂದ ಬರೆಯುತ್ತಾ

ಇವರೇ ನೋಡು ಗಾಂಧಿ ತಾತ
ದೇಶಕ್ಕೆ ಸ್ವಾತಂತ್ರ್ಯ ತಂದವರು
ಸತ್ಯ ಶಾಂತಿ ಆಹಿಂಸೆಗಳು
ಜೀವದ ಉಸಿರು ಎಂದವರು
ಚರಕವ ಹಿಡಿದು ನೂಲನ್ನು ತೆಗೆದು
ಕಾದಿಯ ಪ್ರಚಾರ ಮಾಡಿದರು
ಪೊರಕೆಯ ಹಿಡಿದು ಕಸವನ್ನು ಗುಡಿಸಿ
ಶುಚಿತ್ವದಿ ದೇವರ ನೋಡಿದರು

ಎಂದು ಗಾಂಧೀಜಿಯವರ ಬಗ್ಗೆ ಮಗುವಿಗೆ ಸೊಗಸಾಗಿ ಪದ್ಯದ ರೂಪದಲ್ಲಿ ತಿಳಿಸಿಕೊಟ್ಟಿದ್ದಾರೆ.

ಸರ್ಕಾರಿ ಶಾಲೆಗಳು ದಿನೇ ದಿನೇ ಮಹತ್ವ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ನಮ್ಮ ಶಾಲೆ ಎಂಬ ಕವಿತೆಯಲ್ಲಿ.

ನೀಲಿ ಬಣ್ಣದ ಸಮವಸ್ತ್ರದಲ್ಲಿ
ಶಾಲೆಗೆ ನಾವು ಹೋಗುವೆವು
ನಲಿಯುತ್ತ ವಿದ್ಯೆ ಕಲಿಯುತ್ತಲಿ
ಗುರುಗಳ ಪಾದಕ್ಕೆ ಬಾಗುವೆವು
ಸರ್ಕಾರಿ ಶಾಲೆ ನಮಗುಪಕಾರಿ
ನೂರೆಂಟು ಸೌಲಭ್ಯ ನಮಗಿಲ್ಲಿ
ಅರಿವಿನ ಜೊತೆಗೆ ಹಾಲು ಅನ್ನ
ಮರೆಯದ ಜೀವನ ಸಾರವಿಲ್ಲಿ
ಕ್ರೀಡಾ ಕೋಟ ಪ್ರತಿಭಾ ಕಾರಂಜಿ
ನೀಡುವವೆಮಗೆ ಹೊಸ ಹುರುಪು
ಹಾಡಿನ ಜಾಡು ಕಥೆಗಳ ಕಾಡು

ಮೋಡಿ ಮಾಡಿದೆ ಎಂದು ಹೇಳುತ್ತಾ ತರಕಾರಿ ಶಾಲೆಗಳ ಮಹತ್ವವನ್ನು ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ

ಸಹವಾಸ ದೋಷದಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ಪದ್ಯವಾಗಿಸಿ ನೀತಿ ಹೇಳಿದ್ದಾರೆ.

ರಾಮನೆಂಬ ಹುಡುಗನು
ಶಾಲೆಯಲ್ಲಿ ಜಾಣನು
ಓದುಬರಹ ಲೆಕ್ಕದೊಳಗೆ
ಮೊಟ್ಟಮೊದಲು ಈತನು
ಕೈಗೆ ಕಾಸು ಬಂದ ಮೇಲೆ

ಅವನ ದಿನಚರಿ ಬದಲಾಯಿತು
ತಿನಿಸಿನ ಅಂಗಡಿ ಮುಂದೆ
ತಪ್ಪದೆ ಅವನ ಹಾಜರಿ,
ನನಗಿಂತಲೂ ಜಾಣರಿಲ್ಲ
ಎಂಬ ಅಹಂ ಬೆಳೆಯಿತು
ಕೆಟ್ಟ ಹುಡುಗರ ಗುಂಪಲ್ಲಿ
ಇವನ ವೇಳೆ ಕಳೆಯಿತು
ಓದು ಬರಹ ಎಲ್ಲ ಬಿಟ್ಟು
ಊರ ತಿರುಗಿ ಎಲ್ಲರೊಡನೆ
ನಿತ್ಯ ಜಗಳ ಕೊನೆಗೆ
ತನ್ನ ತಪ್ಪು ಅರಿತುಕೊಂಡು

ಮೊದಲಿನಂತಾದ ರಾಮ ಎಂಬ ಸಂದೇಶದೊಂದಿಗೆ ಮಕ್ಕಳು ಒಳ್ಳೆಯವರ ಗೆಳೆತನ ಮಾಡಬೇಕು ಎಂದು ಸಂದೇಶ ನೀಡಿದ್ದಾರೆ.

ಮಕ್ಕಳಿಗೆ ಇಷ್ಟವಾದ ಜಾತ್ರೆಯ ಬಗ್ಗೆ ಕೂಡ ಬರೆದಿದ್ದಾರೆ ಜಾತ್ರೆಯೊಳಗೆ ಸುತ್ತಿ ಸುಳಿಯುತ

ಸೂತ್ರದ ಬೊಂಬೆಯ ಕೊಳ್ಳುವೆವು
ನೇತ್ರಕ್ಕೆ ಸುಂದರ ಚಾಳಿಸ್ ಧರಿಸಿ
ಪಾತ್ರವ ಮಾಡುತ್ತ ಕುಣಿಯುವೆವು
ತೇರಿಗೆ ಜೋರು ಹುತ್ತುತ್ತಿ ಎಸೆದು
ಮನದಲ್ಲಿ ಹಿರಿಹಿರಿ ಹಿಗ್ಗುವೆವು

ಎಂದು ಜಾತ್ರೆಯ ಬಗ್ಗೆ ಸ್ವಾರಸ್ಯವಾಗಿ ಬರೆದಿದ್ದಾರೆ.

ಇವತ್ತು ಮೊಬೈಲ್ ಎಲ್ಲರನ್ನು ಆವರಿಸಿಕೊಂಡು ಬಿಟ್ಟಿದೆ. ಮಕ್ಕಳು ದೊಡ್ಡವರೆನ್ನದೆ ಮೊಬೈಲ್ ಮಾಯೆ ಎಲ್ಲರನ್ನು ಆವರಿಸಿ ಬಿಟ್ಟಿದೆ. ಅಂತಹ ಮೊಬೈಲ್ ಬಗ್ಗೆ ಕವಿ ಹೀಗೆ ಹೇಳುತ್ತಾರೆ

ಅಂಗೈಯಗಲದ ಮೊಬೈಲಿನೊಳಗೆ
ಏನೆಲ್ಲಾ ತುಂಬೈತಿ
ಮೊಬೈಲನ್ನೇ ಸರ್ವಸ್ವ ಅಂತ
ಜಗತ್ತು ನಂಬೈತೆ
ದೂರದ ಊರಿಗೆ ವೀಡಿಯೊ ಕಾಲ್
ಫೋನ್ ಪೇ, ಗೂಗಲ್ ಪೇ. ಪೇ ಟಿ ಎಮ್
ಇದರಲ್ಲೇ ಕಟ್ಟಬಹುದು ಎಲ್ಲಾ ಬಿಲ್ಲು.

ಅಡ್ಲಿಕ್ಕುಂಟು ನೂರೆಂಟು ಗೇಮು
ನೋಡ್ಲಿಕ್ ಉಂಟು ‘ಫೇಸ್ಟುಕ್’, ‘ವಾಟ್ಸಪ್’.
‘ಇನ್ಸ್ಟಾಗ್ರಾಮ’ಲಿ ರೀಲ್ಲು ಜೋರು
ಸ್ವಿಚ್ ಆಫ್ ಆದ್ರೆ ಕೈ ಕಾಲು ಗಪ್ ಚುಪ್!
ಬೆರಗನು ಮೂಡಿಸೊ ನೂರೆಂಟು ‘ಆ್ಯಪು’
ಬದಲಿ ಮಾಡುವವು ಮುಖದ ‘ಶೇಪು’.
ಬೇಕಾದ ಹಾಡನು ಕೇಳಲುಬಹುದು
ಕುಳಿತಲ್ಲೆ ಕ್ರಿಕೇಟು ನೋಡಲುಬಹುದು.
ಪ್ರಶ್ನೆಗೆ ಉತ್ತರ ಹುಡುಕಲು ‘ಗೂಗಲ್ಲು’
ಸಾವಿರಾರು ವೀಡಿಯೊ ‘ಯ್ಯೂಟ್ಯೂಬ’ಲ್ಲಿ
ಬರೀಬಹುದಣ್ಣ ಏನೆಲ್ಲಾ ಇಲ್ಲಿ
ಮನಸ್ಸಿನ ಭಾವನೆ ‘ಸ್ಟೇಟಸ್ಸಿ’ನಲ್ಲಿ.

ಅಬ್ಬಬ್ಬಬ್ಬಾ ಮೊಬೈಲ ಮಾಯೆಯು
ಮಲಗುವ ಸಮಯವನೂ ಕಸ್ಕಂತು.
ಚಿಕ್ಕವರು-ದೊಡ್ಡವರು ಎಲ್ಲರ ಕೈಯಾಗೂ
ಪುಸ್ತಕ ಹೋಗಿ ಮೊಬೈಲು ಬಂತು.

ಹೀಗೆಮೊಬೈಲ್ ಮೋಹ ಹಿತಮಿತವಿದ್ದರೆ ಮನುಜರ ಬದುಕಿಗೆ ಅದು ಮೆರುಗು. ಅತಿಯಾದಂತ ಮೊಬೈಲ್ ಹುಚ್ಚದು ತರುವುದು ತಮ್ಮಾ ಬಹು ಕೊರಗು ಅಂತ ಹಿತವಚನ ಹೇಳಿದ್ದಾರೆ.

ಒಟ್ಟಾರೆ ಈ ಕವನ ಸಂಕಲನದಲ್ಲಿ ಮಕ್ಕಳಿಗೆ ಮುದ ನೀಡುವ, ಖುಷಿ ನೀಡುವ, ಮಕ್ಕಳಿಗೆ ಇಷ್ಟವಾಗುವಂತಹ ಕವಿತೆಗಳನ್ನು ರಚಿಸಿ ಮಕ್ಕಳ ಮನ ಗೆದ್ದಿದ್ದಾರೆ ಮಕ್ಕಳು ತಮ್ಮ ಕಲ್ಪನೆಯ ಕುದುರೆಯನ್ನೇರಿ ಜಗದುದ್ದಗಲಕ್ಕು ಹಾರಾಡುವಂತೆ ಮಾಡಿದ್ದಾರೆ. ಕವಿ ವೀರೇಶ ಬಾ ಕುರಿ ಸೋಂಪುರ ಅವರಿಂದ ಇನ್ನಷ್ಟು ಮೌಲ್ಯಭರಿತ ಕೃತಿಗಳು ರಚನೆಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲಿ ಎಂದು ಹಾರೈಸುತ್ತೇನೆ.

ಎನ್. ಶೈಲಜಾ ಹಾಸನ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x