ಅಲ್ಲಿಯೇ ಇದ್ದ ಮಗಳು, ‘ವಾಟ್? ನೋ, ನೆವರ್. ಇನ್ನೊಂದಾ? ಇದೊಂದಕ್ಕೇ ಸಾಕು ಸಾಕಾಗಿದೆ,’ ಎಂದು ಉತ್ತರಿಸಿದಳು. ಆ ಮಹಿಳೆ ರೇಗಿದಳು, ‘ಏನೇ? ಒಂದೇನಾ? ಹೀಗಾದರೆ ನಮ್ಮ ಧರ್ಮದ ಜನ ಹೆಚ್ಚೋದು ಹೇಗೆ? ಆ ಕಮ್ಯುನಿಟಿಯವರು ನೋಡು, ನಾಲ್ಕು ನಾಲ್ಕು ಮದುವೆಯಾಗಿ, ಹತ್ತೋ, ಹದಿನೈದೋ ಮಕ್ಕಳನ್ನು ಹಡೆದು, ಸರಕಾರದವರು ಕೊಡುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಪಡೆದುಕೊಂಡು, ತಮ್ಮ ಧರ್ಮದ ಜನರ ಸಂಖ್ಯೆಯನ್ನು ಹೇಗೆ ಬೆಳೆಸುತ್ತಿದ್ದಾರೆ ಅಂತ? ನೀವು ಒಂದೇ ಸಾಕು ಎನ್ನುತ್ತೀರಿ,’ ಎಂದು ಆಪಾದಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ ಗಂಡ, ಜಾಂಟಿಕಾಲ್ ಜಪ್ಪಣ್ಣ, ಎನ್ನುತ್ತಾರಲ್ಲ, ಹಾಗಿರುವವನು, ಉಂಡರೆ ಮಾತ್ರ ನಾಲ್ಕು ಜನರ ಕವಳ ಉದರಕ್ಕಿಳಿಸೋನು, ಗಾದೆಯೇ ಇಲ್ಲವೇ, ಕಂಡರೆ ಮಾಣಿ, ಉಂಡರೆ ಗೋಣಿ, ಎಂದು, ಹೂಂ, ಹೂಂ ಎಂದು ತಲೆ ಆಡಿಸಿದ, ತಲೆ ಇರೋದೇ ಆಡಿಸೋಕೆ ಎಂಬಂತೆ! ಆ ಹೆಂಗಸಿನ ಗಂಡನ ಸಾಮರ್ಥ್ಯದ ಬಗ್ಗೆ ನನಗೇಕೋ ಡೌಟು. ಕೇಳಿದೆ, ‘ನಿಮಗೆಷ್ಟು ಮಕ್ಕಳು?’
ಅವರು ತಮ್ಮ ಬಗ್ಗೆ ಕೊಚ್ಚಿಕೊಳ್ಳಲೆಂದೇ ಬಂದವರಂತೆ ಕಂಡರು. ‘ಎರಡು. ಮಗಳು ಅಮೆರಿಕದಲ್ಲಿ ಇದ್ದಾಳೆ, ಮಗ ಲಂಡನಿನಲ್ಲಿ,’ ಎಂದರು. ‘ಬೇರೆ ದೇಶದಲ್ಲಿರೋ ಮಕ್ಕಳು ನಮ್ಮ ಧರ್ಮದವರ ಸಂಖ್ಯೆಯನ್ನು ಹೇಗೆ ಹೆಚ್ಚಿಸಲು ಸಾಧ್ಯ?’ ಎಂದು ಕೇಳಿದಾಗ ಮುಖ ಊದಿಸಿಕೊಂಡು ಹೊರಟೇ ಹೋದರು. ಮಗುವಿನ ಕೈಗೆ ಹತ್ತು ಅಥವಾ ಇಪ್ಪತ್ತು ರೂಪಾಯಿ ಕೊಡುತ್ತಿದ್ದರೋ ಏನೋ, ಅದೂ ತಪ್ಪಿ ಹೋಯಿತು. ಮತ್ತೆ ಈ ಲಂಗವನ್ನೇನು ಮಾಡುವುದು? ನಾವೂ ಚಿಕ್ಕ ಮಗಳಿರುವ ಯಾವುದಾದೊಂದು ಮನೆ ಹುಡುಕಿಕೊಂಡು ಹೋಗಿ ಹೀಗೆಯೇ ‘ದಾನ’ ಮಾಡಿ ಬರಬೇಕು.
ಇನ್ನೊಂದು ವಿಶೇಷ ಘಟನೆ ನಡೆಯಿತು. ಪಕ್ಕದ ಬೀದಿಯಲ್ಲೆಲ್ಲೋ ಕಂಡವಳು, ದೊಡ್ಡ ಬಂಗಲೆಯ ಒಡತಿಯಂತೆ, ಅವಳ ಶೃಂಗಾರ ಕಂಡರೆ ರೇಜಿಗೆಯಾಗುವಂತಿದೆ, ನನ್ನ ಮನೆಗೆ ತನ್ನ ಪುಟ್ಟ ನಾಯಿಮರಿಯೊಂದಿಗೆ, ಕರೆಯದಿದ್ದರೂ ಬಂದಿದ್ದಳು. ಅವಳ ವರ್ತನೆ ಹೇಗಿತ್ತೆಂದರೆ ಅವಳ ಪಾದಧೂಳಿಯಿಂದ ನಮ್ಮ ಮನೆ ಪಾವನವಾಯಿತು, ಎಂಬಂತಿತ್ತು. ಚಪ್ಪಲಿಯನ್ನು ಹೊರಗಿಡದೇ, ಧರಿಸಿಯೇ ಒಳಗೆ ಬಂದಿದ್ದರಿಂದ ಅದು ಪಾದಧೂಳಿಯಲ್ಲ, ಚಪ್ಪಲಿ ಧೂಳಿ. ಅವಳ ಜೊತೆಗೆ ತಾನೂ ಬಂದ ನಾಯಿ, ಹಾಗೆಂದರೆ ಅವಳಿಗೆ ಸಿಟ್ಟು ಬರುತ್ತದೆ ಎಂಬುದು ಸಹಜವಾಗಿ ಎಲ್ಲೆಡೆಇದೆ, ಮನೆಯೊಳಗೆಲ್ಲಾ ಓಡಾಡತೊಡಗಿತು. ‘ಟೋನಿ, ಹಾಗೆಲ್ಲಾ ಓಡಾಡಬಾರದು, ಇದು ಪೂವರ್ ಪೀಪಲ್ ಹೌಸು. ಕಂ ಹಿಯರ್, ಸಿಟ್ಟು, ಸಿಟ್ಟು,’ ಎಂದು ಅದನ್ನು ಕರೆದು ತನ್ನ ತೊಡೆಯ ಮೇಲೇ ಕುಳ್ಳಿರಿಸಿಕೊಂಡರು. ಕೇಳಿದಳು, ‘ಎಲ್ಲಿ ನಿಮ್ಮ ಬೇಬಿ?’
ಮಕ್ಕಳು ಬಲು ಸೂಕ್ಷ್ಮ. ಪ್ರಾಣಿಗಳ ದೇಹದ ಕೂದಲು, ವಾಸನೆ ಅವುಗಳ ಆರೋಗ್ಯ ಕೆಡಿಸುತ್ತದೆ ಎಂದು ಓದಿದ ನೆನಪು. ದೊಡ್ಡ ಮನುಷ್ಯರು, ಹೇಳೋಕೆ ಆಗುತ್ತದೆಯೇ? ಹಾಗೆಂದರೆ ತನ್ನ ನಾಯಿಯ ಬಗ್ಗೆ, ಅದನ್ನು ಎಲ್ಲಿಂದ ತಂದಿದ್ದು, ಯಾರು ಕೊಟ್ಟಿದ್ದು, ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು, ತಾವು ಹೇಗೆ ಸಾಕುತ್ತಿದ್ದೇವೆ, ಅದಕ್ಕೂ ತನಗೂ ಎಂತಹ ಬಾಂಧವ್ಯ, ಎಂದೆಲ್ಲಾ ಕೊರೆಯಲು ಶುರುಮಾಡುತ್ತಾರೆ. ನಾನು ಅವರ ಪ್ರಶ್ನೆಗೆ ಶಾಂತವಾಗಿಯೇ ಉತ್ತರಿಸಿದೆ, ‘ಅವಳು ಮಲಗಿದ್ದಾಳೆ. ಮಲಗಿರುವ ಹೊತ್ತಿನಲ್ಲಿ ಎಚ್ಚರ ಮಾಡಿದರೆ ಜೋರಾಗಿ ಅಳುತ್ತಾಳೆ. ಅದೂ ಅಲ್ಲದೇ ಸದ್ದಿಗೂ ಎಚ್ಚರಗೊಳ್ಳುತ್ತಾಳೆ,’ ಎಂದವಳು ಮೊಬೈಲಿನಲ್ಲಿ ಇದ್ದ ಮಗುವಿನ ಫೋಟೊವನ್ನು ಝೂಮ್ ಮಾಡಿ ತೋರಿಸಿದೆ. ‘ನಿಮ್ಮ ಫೋನ್ ನಂಬರ್ ಕೊಡಿ, ಈ ಫೋಟೋ ಕಳುಹಿಸುತ್ತೇನೆ,’ ಎಂದೂ ಸೇರಿಸಿದೆ. ಸಿರಿಗರ ಎಂದೆನ್ನುತ್ತಾರಲ್ಲ, ಹಾಗಿರುವವರ ಜೊತೆ ವ್ಯವಹರಿಸೋದು ಬಲು ಕಷ್ಟ. ‘ಓ, ನೀವು ಒಬ್ಬಳೇನಾ ಮಗೂನ ಸಾಕೋದು? ನಿನ್ನ ಗ್ರಾಂಡ್ ಡಾಟರನ್ನು ತೋರಿಸಿದರೆ ಅದೇನು ಸವೆದು ಹೋಗುತ್ತಾ? ನಮ್ಮನೇಲಿ ಮಗೂನ ಸಾಕೋಕೆ ನಾಲ್ಕು ಜನರನ್ನ ಇದ್ದಕ್ಕೇ ಇಟ್ಟಿದ್ದೇನೆ,’ ಎಂದು ದುಸುದುಸು ಹೇಳಿ, ಬೀಸುಗಾಲು ಹಾಕಿಕೊಂಡು, ತನ್ನ ನಾಯಿಯನ್ನು ಎತ್ತಿಕೊಂಡೇ ಹೋದರು. ನಾಯಿಯನ್ನು ಮಾತ್ರ ತಾನೇ ಅತೀ ಜತನದಿಂದ ಸಾಕೋದು, ಎಂದೂ ಸೇರಿಸಲಿಲ್ಲವಾದರೂ ಅದು ತಿಳಿದೇ ತಿಳಿಯುತ್ತೆ. ಹೋಗಲಿ ಬಿಡು. ನಮ್ಮ ಮನೆಯ ಮಗುವೇನು ಎಕ್ಷಿಬಿಷನ್ ಮೆಟೀರಿಯಲ್ಲೇ?
ಎದುರಿನ ಮನೆಯ ಒಬ್ಬ ಹೆಂಗಸಿದ್ದಾಳೆ, ಅವಳು ಅದೀಗಷ್ಟೇ ಗೂಗಲ್ ಟೀಚರ್ ಮೂಲಕ ಇಂಗ್ಲಿಷ್ ಕಲಿಯಲು ಶುರುವಾಡಿಬಿಟ್ಟಿದ್ದಾಳೆ, ಯಾಕೆಂದರೆ ಅಮೆರಿಕದ ಪ್ರವಾಸದ ಯೋಜನೆ ಇದೆಯಂತೆ. ಆಗಷ್ಟೇ ಸ್ಕೂಟರ್ ಕಲಿತವರು ಸುಮ್ಮಸುಮ್ಮನೇ ವಾಹನ ಓಡಿಸುವುದಿಲ್ಲವೇ, ಹಾಗೆ ಈ ಹೆಂಗಸು ಕೂಡಾ ಕೆಟ್ಟ ಕೆಟ್ಟ ಇಂಗ್ಲಿಷ್ ಮಾತನಾಡುತ್ತಾಳೆ. ಅವಳನ್ನು ಮನೆಗೆ ಸೇರಿಸಬೇಡ, ಅವಳ ಆ ಭಾಷೆಯನ್ನು ಮಗುವೂ ಕಲಿಯುತ್ತದೆ, ಎಂದು ನನ್ನ ಗಂಡ ಎಚ್ಚರಿಸಿದ್ದರು. ಆ ಭಾಷೆ ಏನು ಗೊತ್ತಾ ಸ್ನೇಹಿತೆ? ‘ನೈಟು ರೈನು ಕಮಿಂಗೇ ಕಮಿಂಗು. ಕಮಿಂಗು, ಕಮಿಂಗು, ಕಮಿಕಮಿಂಗು (ವೇಗಗೊಳಿಸುತ್ತಾಳೆ, ಅಂದರೆ ಜಾಸ್ತಿ ಮಳೆ ಬಂದಿದೆ ಎಂದರ್ಥ), ನಂತರ ಕ ಮಿಂ ಗು, ಕ ಮಿಂ ಗು, ಮಿಂ ಗು (ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂಬ ಅರ್ಥ, ನಿಧಾನವಾಗಿ ಎನ್ನುತ್ತಾಳೆ). ಕನ್ನಡದ ಶಕ್ತಿ ಆಂಗ್ಲ ಭಾಷೆಗೆ ಇಲ್ಲ ಬಿಡು. ‘ಬರ‍್ರನೆ ಬಾನು ಹರಿದು, ಸುರಿದು ದರದರ ಬಂದ ಮಳೆರಾಯ ಊರನ್ನೇ ಕೊಚ್ಚಿ ಕೊಚ್ಚಿ ಹೋಗುವ’ ಎಂದೆಲ್ಲಾ ಹೇಳುವಾಗಿನ ಪರಿಣಾಮ ಇಂಗ್ಲಿಷ್ ಭಾಷೆಯಲ್ಲಿ ಬರುವುದಿಲ್ಲ.
ಹಾಲು ಕುಡಿಸುವಾಗಲೂ ಮಗುವಿನದು ಇದೇ ಅಳೋ ರಾಗ. ಅದಕ್ಕೆ ಹಸಿವಾದರೆ ಅದೇ ಕುಡಿಯುತ್ತೆ (ಕುಡಿಸಬೇಕು), ಸುಮ್ಮನಿರು, ಎಂದು ಗಂಡ ಹೇಳುತ್ತಾರೆ. ಆದರೆ ಅದರ ಹೊಟ್ಟೆಯ ಪ್ರಮಾಣ ಎಷ್ಟು, ಅದನ್ನು ತುಂಬಿಸಲು ಎಷ್ಟು ಹಾಲು ಬೇಕು ಎಂಬುದು ನನಗೆ ಗೊತ್ತಿದೆ, ಎಂದೆನ್ನುತ್ತೇನೆ ನಾನು. ಅದು ಪೂರ್ತಿ ಕುಡಿಯೋಲ್ಲ, ಬಾಯಿಗೆ ಬಿರಟೆ ಹಾಕಿದ ಹಾಗೆ ಮುಚ್ಚಿಬಿಡುತ್ತೆ. ಅಲ್ಲವೇ ಕಟವಾಯಿಯಿಂದ ಹೊರಗೆ ಉಗುಳುತ್ತೆ. ಜೊತೆಗೆ ಅಳು ಬೇರೆ. ಮತ್ತೆ ಆಗ ನಾಟಕ, ‘ಅಮ್ಮ ನಿನ್ನನ್ನ ನೋಡಿ ನಗ್ತಾಳಾ? ಅವಳು ನಕ್ಕರೆ ಅವಳ ಹಲ್ಲೇ ಕಾಣಿಸುತ್ತೆ, ಛೀ ಹೊಲಸು. ನೀನು ಜಾಣೆ, ನಿನಗೆ ಹಲ್ಲೇ ಇಲ್ಲ,’ ಎಂದೆನ್ನಬೇಕು. ಅದರೊಂದಿಗೆ ಯಾವುದಾವುದೋ ಹಾಡು ಹೇಳಬೇಕು. ಇಲ್ಲವಾದರೆ ರಚ್ಚೆ ಹಿಡಿಯತ್ತದೆ. ನನ್ನ ಗಂಡ ಇಂತಹ ಸಂದರ್ಭಗಳಲ್ಲಿ ಎಂದಿದ್ದರು, ‘ಮಗು ಒಂದೇ ಮರ್ಕತ್ತೆ,’ ಎಂದು. ‘ನೀವೂ ಅದರ ರಾಗಕ್ಕೆ ತಂತಿ ಮೀಟಿ, ಸಾಥ್ ಕೊಡಿ,’ ಎಂದು ರೇಗಿದ್ದೆ. ಅವರು ಮಾಡುವ ತಮಾಷೆ ಎಲ್ಲಾ ಸಂದರ್ಭಗಳಲ್ಲಿಯೂ ಸೂಕ್ತವಾಗೋಲ್ಲ.
ಹಾಲು ಕುಡಿಸೋದು ಎಂದಾಗ ಮಗಳ ಬಗ್ಗೆ ಹೇಳಲೇಬೇಕು. ಕೈಯಲ್ಲಿ ಔಷಧ ತುಂಬಿದ ಒಳಲೆ ಹಿಡಿದುಕೊಂಡು ‘ಆ ಮಾಡು ಪುಟ್ಟಿ,’ ಎಂದಳು. ಅದು ಬಾಯಿ ತೆರೆಯಲಿಲ್ಲ. ತಾನು ಬಾಯಿಯನ್ನು ಇನ್ನಷ್ಟು ಇನ್ನಷ್ಟು ಅಗಲಿಸಿ ಆ, ಆ, ಆ, ಎಂದಳು. ಎಲ್ಲರಿಗೂ ಹೀಗೇ ಆಗುತ್ತೆ, ಮೊದಮೊದಲು. ಅದಾಗಲೇ ಹೊಸತಾಗಿ ದೇವರಿಗೆ ಆರತಿ ಎತ್ತುವ ವ್ಯಕ್ತಿ ಬಲಗೈನಲ್ಲಿರುವ ಆರತಿ ಎತ್ತುವ ರೀತಿಯಲ್ಲಿಯೇ ಗಂಟೆ ಹಿಡಿದ ತನ್ನ ಎಡಗೈಯನ್ನೂ ಚಲಿಸುತ್ತಾನಲ್ಲ, ಹಾಗೆ!
ಪತ್ರ ದೀರ್ಘವಾಯಿತಲ್ಲವೇನೇ? ಹೌದು, ಹೌದು. ಆದರೇನು ಮಾಡಲಿ, ಹೇಳುವುದನ್ನು ಹೇಳಲೇಬೇಕಲ್ಲ. ಇನ್ನೊಮ್ಮೆ ಬರೆಯುತ್ತೇನೆಂಬುದರ ಬಗ್ಗೆ ನನಗೆ ನಂಬಿಕೆ ಇಲ್ಲ. ನನ್ನ ಸಲಹೆ ಏನೆಂದರೆ ಈ ಕಾಗದವನ್ನು ಮೂರೋ ನಾಲ್ಕೋ ಭಾಗ ಮಾಡಿಕೊಂಡು, ವಾರ ವಾರ ಓದಿಬಿಡು. ಎಲ್ಲಿ ಭಾಗ ಮಾಡಬೇಕು ಎಂಬುದು ನಿನಗೆ ಬಿಟ್ಟ ವಿಷಯ. ಎಲ್ಲಿಯಾದರೂ ಆಗುತ್ತದೆ, ಯಾಕೆಂದರೆ ಇದು ಕುತೂಹಲ ಹುಟ್ಟಿಸುವ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಪತ್ತೇದಾರಿ ಕತೆಗಳಾದರೆ ಅರ್ಧಕ್ಕೆ ಬಿಟ್ಟರೆ ಕುತೂಹಲ ತಣಿಯುತ್ತದೆ, ಹಾಗಾಗಿ ಒಮ್ಮೆಗೇ ಎಲ್ಲವನ್ನೂ ಓದಬೇಕು.
ಒಂದು ಸಲ ಒಂದು ತಮಾಷೆ ಆಯಿತು ಕಣೇ. ಪಕ್ಕದ ಬೀದಿಯವರು ಅರಶಿನ-ಕುಂಕುಮಕ್ಕೆ ಕರೆದಿದ್ದರು. ಮಗುವನ್ನು ಮನೆಯಲ್ಲಿಯೇ ಬಿಟ್ಟು, ಗಂಡನಿಗೆ ಅದರ ಜವಾಬ್ದಾರಿ ವಹಿಸಿ, ಕೇವಲ ಹದಿನೈದೇ ನಿಮಿಷ, ಹೀಗೆ ಹೋಗಿ ಹೀಗೆ ಬರ್ತೀವಿ, ಎಂದು ಹೇಳಿ ಹೋಗಿದ್ದೆವು. ಮಗು ಅತ್ತರೆ ತೂಗಿ ಮಲಗಿಸಿ, ಸಾಧ್ಯವಾದರೆ ನಿಧಾನವಾಗಿ ಎದೆಯ ಮೇಲೆ ತಟ್ಟಿ, ನಿಧಾನ, ರೊಟ್ಟಿ ತಟ್ಟಿದ ಹಾಗಲ್ಲ, ಮತ್ತೂ ಮರಕಿದರೆ ಹಾಲಿನ ಬಾಟಲನ್ನ ಬಾಯಿಗೆ ಇಡಿ. ಲಂಬಾಕಾರವಾಗಿ ಇಡಬೇಡಿ, ಗಂಟಲಿಗೆ ಹಾಲು ಸಿಲುಕುತ್ತದೆ, ಒಂದು ಬದಿಯಿಂದ ಇಡಿ. ಕುಡಿಯುವ ತನಕ ಕೈಲಿ ಹಿಡಿದುಕೊಂಡೇ ಇರಿ, ಎಂದು ಹೇಳಿ ಹೋಗಿದ್ದೆವು. ಮಗು ತನ್ನ ಸುತ್ತ ಯಾರಾದರೂ ಇದ್ದಾರೆ ಎಂದು ಗೊತ್ತಾದರೆ ಸುಮ್ಮನಿರುತ್ತೆ, ಎಂತಲೂ ಹೇಳಿದ್ದೆ.
ಇವರೇನು ಮಾಡಿದರು ಗೊತ್ತಾ? ಮಗು ರಾಗ ಎಳೆಯಿತಂತೆ, ತೊಟ್ಟಿಲು ತೂಗಿದ್ದಾರೆ. ಕೈ ನೋಯ್ದಿದೆ. ಕೊನೆಗೂ ಅವರ ತಲೆಗೊಂದು ಐಡಿಯಾ ಹೊಳೆದಿದೆ. ನಮ್ಮ ಮನೆಯಲ್ಲಿದ್ದ ನನ್ನದೊಂದು ದೊಡ್ಡ ಫೋಟೋ ಇತ್ತು. ಅದನ್ನು ತೆಗೆದುಕೊಂಡು ಹೋಗಿ ಮಗುವಿನ ತೊಟ್ಟಿಲಿನ ಎದುರು ಇಟ್ಟರಂತೆ. ಫೋಟೋ ಕಂಡ ಮಗು ತಮ್ಮೆದುರು ಜನ ಇದ್ದಾರೆ ಎಂದು ತಿಳಿದುಕೊಳ್ಳುವಂತೆ ಮೋಸ ಮಾಡಿದರಂತೆ. ನಂತರ ತೊಟ್ಟಿಲು ತೂಗುವ ಯಂತ್ರಗಳೇನಾದರೂ ಇವೆಯೇ ಎಂದು ಗೂಗಲ್‌ನಲ್ಲಿ ಹುಡುಕಿದ್ದಾರೆ. ಮಕ್ಕಳನ್ನು ಸಾಕೋದು ಎಷ್ಟು ಕಷ್ಟ ಎಂಬುದು ಅವರಿಗೆ ಗೊತ್ತಾಗಲಿ. ಮನೆಲಿದ್ದು ಬೇಸರವಾದರೆ ಅಂಗಿಯೊಳಗೆ ತೂರಿಕೊಂಡು ಹೊರಗೆ ಹೊರಟು ಬಿಟ್ಟರೆ ಯಾವತ್ತು ಬರಬೇಕೆಂಬ ಜ್ಞಾನವೂ ಇರೋಲ್ಲ. ಒಂದು ಥರಾ ಹೇಳಿದರೆ ಅವರಿಗೆ ಮನೆಯೊಂದು ರೆಸಾರ್ಟ್. ಹೇಳಿ, ಹೇಳಿ, ನಿಷ್ಫಲ ಎಂದು ಗೊತ್ತಾದ ಮೇಲೆ ನಾನೂ ಸುಮ್ಮನಾಗಿದ್ದೆ ಅನ್ನು.
ಅವರು ಮಗುವಿನೆದುರು ನಿಂತುಕೊಂಡು ಬುದ್ಧಿವಾದ ಹೇಳುತ್ತಿದ್ದರು, ಅದು ಹೂಂ, ಆ, ಪಚ ಕೊಚ ಎಂದು ಪ್ರತಿಕ್ರಿಯಿಸುತ್ತಿತ್ತು, ‘ನೋಡು ಪುಟ್ಟಿ, ನೀನು ಪೆದ್ದು ಅಂದರೆ ಪೆದ್ದು, ಒಳ್ಳೆಯವಳು ಎಂದರೆ ಒಳ್ಳೆಯವಳು. ಹೌದು, ಒಳ್ಳೆಯವಳು. ನಿನ್ನನ್ನು ಬಲು ಸುಲಭವಾಗಿ ಮೋಸ ಮಾಡಬಹುದು ಎಂದು ನಿನ್ನ ಅಮ್ಮ ಮತ್ತು ಅಜ್ಜಿ, ಅದೇ ನಿನ್ನ ಹೆತ್ತವಳು ಮತ್ತು ಅವಳನ್ನು ಹೆತ್ತವಳು, ಹಾಂ, ಹೌದು, ತಿಳೀತಲ್ಲ, ತಿಳಿದುಕೊಂಡುಬಿಟ್ಟಿದ್ದಾರೆ. ನೀನು ಬೆಟ್ಟ ಕಡಿದು ಮಟ್ಟ ಮಾಡಿ ಸುಸ್ತಾಗಿ ಮಲಗುವುದನ್ನೇ ಕಾದು, ಪುಸ್ಸನೆ ಬೆಕ್ಕಿನ ಹಾಗೆ ಮನೆಯಿಂದ ಹೊರಗೆ ಹೋಗುತ್ತಾರೆ, ನಿನ್ನನ್ನು ಬಿಟ್ಟು. ನೀನು ನಿನ್ನ ಹಕ್ಕೊತ್ತಾಯ, ಏನು ಹಾಗೆಂದರೆ ಎಂದು ಕೇಳಬೇಡ, ನಿನ್ನ ಹಕ್ಕು ಮತ್ತು ಒತ್ತಾಯ, ಗುಣ ಸಂಧಿ, ಮಾಡಬೇಕು. ಹೂಂ, ಮಾಡಬೇಕು. ‘ತಾನೂ ಬತ್ತೀನಿ,’ ಎಂದು ಬಲವಂತವಾಗಿ ಹೇಳಬೇಕು. ಇಲ್ಲವಾದರೆ ನಿನಗೆ ಟೋಪಿ ಹಾಕಿಬಿಡುತ್ತಾರೆ,’ ಎಂದೆಲ್ಲಾ. ಕಂದನೋ, ಎಲ್ಲವೂ ಅರ್ಥವಾಯಿತು ಎಂಬಂತೆ ಕೈ ಆಡಿಸುತ್ತಾ ನಗುತ್ತದೆ. ಸಮಯ ಕಳೆಯಲು ಬಲು ಸುಲಭ.
ಮುಂದುವರೆಯುವುದು….
–ಸೂರಿ ಹಾರ್ದಳ್ಳಿ