ವಿಭಾವರಿ (ಭಾಗ 2): ವರದೇಂದ್ರ ಕೆ ಮಸ್ಕಿ

ಇದೇ ಸಂದರ್ಭದಲ್ಲಿ ಒಮ್ಮೆ ಹೇಮಂತ್ ತನ್ನ ಮನೆಗೆ ವಿಭಾಳನ್ನು ಕರೆದೊಯ್ದ. ಹೇಮಂತನ ತಂದೆ ತಾಯಿ ಎಲ್ಲರೂ ಅತ್ಯಂತ ಪ್ರೀತಿಯಿಂದ ವಿಭಾಳೊಂದಿಗೆ ಕಾಲ ಕಳೆದರು. ಆ ಬಂಗಲೆಯೋ ರಾಜನ ಅರಮನೆಯಂತಿತ್ತು. ಮನೆ ತುಂಬ ಆಳುಗಳು. ಖ್ಯಾತ ವೈದ್ಯ ದಂಪತಿಗಳ ಏಕೈಕ ಸುಪುತ್ರ ಹೇಮಂತ ಹುಟ್ಟುತ್ತಲೇ ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ಅನಿಸುವಷ್ಟು ಶ್ರೀಮಂತಿಕೆ. ಜೊತೆಗೆ ಒಬ್ಬಳೇ ತಂಗಿ ವಿಮಲಾ. ತುಂಬಾ ಚೂಟಿ, ಹಾಗೆಯೇ ಮಾತನಾಡುತ್ತ ವಿಮಲಾ, “ನೀವು ನನ್ನ ಅಣ್ಣನನ್ನು ಮದುವೆ ಆಗ್ತೀರಾ?” ಅಂತ ನೇರವಾಗಿ ಕೇಳಿಯೇ ಬಿಟ್ಟಳು, ಇದಕ್ಕೆ ಬೆಂಬಲವಾಗಿ ಹೇಮಂತನ ತಾಯಿ ಸೌಭಾಗ್ಯ ಕೂಡ ಶೃತಿ ಸೇರಿಸಿದರು. “ಹೌದು ವಿಭಾವರಿ ನಮ್ಮ ಹೇಮಂತ್ ಮನೆಯಲ್ಲಿ ಯಾಲಾಗಲೂ ನಿನ್ನ ಬಗ್ಗೆಯೇ ಮಾತನಾಡುತ್ತಿರುತ್ತಾನೆ. ಸದಾ ನಿಂದೇ ಧ್ಯಾನ ಅವನಿಗೆ. ವಿಭಾ ಹಾಗೆ, ವಿಭಾ ಹೀಗೆ ಎಂದು ಉಸಿರು ಬಿಡದೆ ಮಾತಾಡ್ತಾನೆ. ಏನು ಮೋಡಿ ಮಾಡಿದೀಯಮ್ಮಾ ವಿಭಾ. ನಾನಂತೂ ನೀನೇ ನನ್ನ ಸೊಸೆ ಅಂತ ನಿರ್ಧಾರ ಮಾಡ್ಬಿಟಿದೀನಿ. ನಿಂಗೂ ಒಪ್ಪಿಗೆ ತಾನೇ?” ಎಂದು ಬಿಟ್ಟರು ಸೌಭಾಗ್ಯ.

ಒಮ್ಮಿಂದೊಮ್ಮೆಲೆ ದಿಕ್ಕು ತೋಚದಂತಾದ ವಿಭಾ… ಒಂದು ಕ್ಷಣ ಮೈ ಮರೆತು ನಿಂತು ಬಿಟ್ಟಳು. ಏನೂ ಮಾತನಾಡದೆ ಮರಳಿ ಬಂದು ಬಿಟ್ಟಳು. ತೇಜುವಿನ ಮುಗ್ಧ ಮುಖ ಕಣ್ಣ ಮುಂದೆ ಬರತೊಡಗಿತು. ತನಗಾಗಿ ಹಗಲು ರಾತ್ರಿ ದುಡಿದು ನನ್ನನ್ನು ಓದಿಸುತ್ತಿದ್ದಾನೆ. ನಮ್ಮ ಪ್ರೇಮ ಅಮರವಾದುದು. ಕಾಲೇಜಿನಲ್ಲಿಯೇ ಗೌರವಯುತವಾದ ಪ್ರೇಮಿಗಳು ನಾವು. ಅಂತದ್ದರಲ್ಲಿ ನಾನು ಬೇರೆಯವರನ್ನು ಮದುವೆ ಆಗುವುದೆಂದರೆ ಏನು? ಎಂದು ಮನಸು ಚಿಂತಿಸುತ್ತಿತ್ತು. ಆದರೂ ಎರಡು ವರ್ಷಗಳ ಅಂತರದಲ್ಲಿ ಮೊದಲಿದ್ದ ಪ್ರೀತಿ, ನೋಡುವ, ಮಾತನಾಡುವ ಕಾತುರತೆ ಕಡಿಮೆಯಾಗಿದೆ. ತೇಜು ಇಲ್ಲದೇ ಬದುಕಲು ಆಗದು; ಎಂಬ ಸ್ಥಿತಿ ದೂರವಾಗಿ, ಅವನ ಸನಿಹ ಇಲ್ಲದೆಯೂ ಇರಬಲ್ಲೆ ಎನಿಸಿತ್ತು. ಈಗ ನಾನು ಒಃBS, ಒಆ, ನಾನು ತೇಜುವನ್ನು ಮದುವೆ ಆದರೆ, ನೋಡಿದವರು ನಿನಗಿಂತ ನಿನ್ನ ಗಂಡ ಕಡಿಮೆ ಓದಿದಾನಾ? ಅವನು ಕೇವಲ ಒಃBS ಅಷ್ಟೇ ನಾ? ಅನ್ನುತ್ತಾರೆ. ನನ್ನ ಹಿರಿಮೆ ಕಡಿಮೆ ಆಗಬಹುದು. ಅದೇ ನಾನು ಹೇಮಂತನನ್ನು ಮದುವೆ ಆದರೆ ಇಬ್ಬರು ಒಆ ಗಳೇ ಮೇಲಾಗಿ, ಐಶ್ವರ್ಯವಂತ ಕುಟುಂಬದ ಒಬ್ಬನೇ ವಾರಸುದಾರನ ಪತ್ನಿ. ಅಡಿಗೊಂದು ಆಳುಗಳು. ನನ್ನದೇ ದರ್ಬಾರ್. ಹೀಗೆ ಕ್ರಮೇಣ ವಿಭಾ ಮನಸಲ್ಲಿ ಲೋಭ ಹುಟ್ಟತೊಡಗಿತು.

ತೇಜು ಬಡವ, ನನಗಿಂತ ಕಡಿಮೆ ಓದಿದವ. ಸದ್ಯದ ಪರಿಸ್ಥಿತಿಯಲ್ಲಿ ಸ್ವಂತ ಆಸ್ಪತ್ರೆ ಎಂಬುದು ಕನಸಿನ ಮಾತು. ಬೇರೆ ಆಸ್ಪತ್ರೆಯಲ್ಲಿ ಒಬ್ಬರ ಕೈ ಕೆಳಗೆ ದುಡಿಯಬೇಕು. ದುಡಿದೇ ಉಣ್ಣಬೇಕು, ಉಳಿದದ್ದರಲ್ಲಿ ಕೂಡಿಟ್ಟರೆ ಮುಂದೆ ಆಸ್ತಿ ಮಾತು. ಹೇಮಂತ್‌ನದು ಈಗಾಗಲೇ ಬೃಹದಾಕಾರದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಇದೆ. ಜೀವನವೆಲ್ಲಾ ಸುಖಮಯವೇ, ಅದಕ್ಕೇ ಏನೋ ಅಪ್ಪ ಅಮ್ಮ ತೇಜುನ ಜೊತೆ ಮದುವೆಗೆ ಒಪ್ಪಲಿಲ್ಲ ಅನಿಸುತ್ತೆ. ಹೀಗೆ ಯೋಚನೆಗಳು, ತೇಜುವಿನ ಪ್ರೇಮದ ಬೇಲಿಯನ್ನು ಹಾರತೊಡಗಿದವು. ಸ್ವಾರ್ಥ ಎನ್ನುವುದು ಕತ್ತಲೆಯಾಗಿ ಮನಸನ್ನು ಆವರಿಸತೊಡಗಿತು. ಅಹಂಕಾರ ಮೈದೋರಿ, ತೇಜುವಿನ ತ್ಯಾಗ ಬಲಿಯಾಗತೊಡಗಿತು. ಶ್ರೀಮಂತಿಕೆಯ ಬೆಳಕಿನಡಿ ತೇಜುವಿನ ತೇಜೋ ಪುಂಜ ಪ್ರೇಮದ ದೀಪ ಕರಗತೊಡಗಿತು. ಹೇಮಂತನಲ್ಲಿ ಹೃದಯ ಮನೆಮಾಡತೊಡಗಿತು. ಅವನ ನೆನಪಲ್ಲೇ ಇದ್ದವಳು ವರ್ತಮಾನಕ್ಕೆ ಬಂದದ್ದು, ತೇಜುವಿನ ಫೋನ್ ಬಂದ ಮೇಲೆಯೇ. ಫೋನ್ ಎತ್ತಲು ಮನಸಿಲ್ಲ. ಅವನ ಫೋನಿಗಾಗಿ ಕಾಯುತ್ತಿದ್ದವಳಿಗೆ, ಈಗ ಮೈ ಮೇಲೆ ಮುಳ್ಳು ಹರಿದಂತಾಗುತ್ತಿತ್ತು. ಯಾವಾಗ ಕಿತ್ತೊಗೆಯುತ್ತೇನೋ ಇವನನ್ನು ನನ್ನ ಬದುಕಿನಿಂದ ಎನಿಸಿ, ಕಾಟಾಚಾರಕ್ಕೆ ಮಾತು ಮುಗಿಸಿ ಮಲಗಿದಳು.

ಮರುದಿನ ಎಂದಿನಂತೆ ಹೇಮಂತನ ಭೇಟಿ ಆಯಿತು. ಅವಳ ಪ್ರತಿಕ್ರಿಯೆಗೆ ದುಗುಡದಿಂದ ಕಾಯುತ್ತಿದ್ದವನಿಗೆ ಅವಳ ನಗು ನೋಡಿ ನಿರಮ್ಮಳವಾಯಿತು. ಹತ್ತಿರ ಬಂದವನೇ ನಗುತ್ತ, “ವಿಭಾ ನಾನು ಒಪ್ಪಿಗೆನಾ? ನನ್ನ ಪ್ರೇಮಕ್ಕೆ ಉಸಿರಾಗುವೆಯಾ?” ಎಂಬ ಮಾತಿಗೆ ಮೂಕಳಾಗಿಬಿಡುತ್ತಾಳೆ. ‘ಮೌನಂ ಸಮ್ಮತಿ ಲಕ್ಷಣಂ’ ಎಂದುಕೊಳ್ಳಬಹುದೇ?” ಎಂಬ ಮಾತಿಗೆ ನಗು ಬೀರುತ್ತಾಳೆ.
ಮನಸಲ್ಲೇ ಹೇಮಂತ್ ಮತ್ತು ತೇಜಸ್‌ನನ್ನು ತಕ್ಕಡಿಯಲ್ಲಿ ಹಾಕಿ ತೂಗತೊಡಗುತ್ತಾಳೆ. ಒಂದು ಕಡೆ ಪ್ರೀತಿ, ಮತ್ತೊಂದೆಡೆ ಸಿರಿತನದ ಬದುಕು. ಯಾವುದು ಮುಖ್ಯ, ಯಾವುದು ನಿಕೃಷ್ಟ ಎಂಬ ಚಿಂತನೆಯಲ್ಲಿದ್ದವಳಿಗೆ ಹೇಮಂತನ ಕೈ ಸ್ಪರ್ಶ ರೋಮಾಂಚನಗೊಳಿಸಿದಾಗಲೇ ಎಚ್ಚರವಾಗುತ್ತದೆ. “ಬಾ ವಿಭಾ ಇಲ್ಲೇ ಕಾಫಿ ಕುಡಿಯುತ್ತ ಮಾತಾಡೋಣ” ಎಂದವನೇ ಕಾರಲ್ಲಿ ಫಾಯ್ ಸ್ಟಾರ್ ಹೋಟೆಲ್‌ಗೆ ಕರೆದೊಯ್ಯುತ್ತಾನೆ.

ತೇಜಸ್‌ನ ಜೊತೆ ಕಾಫಿಗೆ ಹೋದದ್ದು ಎಲ್ಲಿ, ರಸ್ತೆ ಬದಿಯ ಟೀ ಅಂಗಡಿಗೆ. ಕಾಫಿ ಎಲ್ಲಿ ಸಿಗುತ್ತೆ. ಬೀದಿಯಲ್ಲಿ ನಿಂತು ಟೀ ಕುಡಿದರೆ ಕಮ್ಮಿ, ಕ್ಯಾಂಟಿನ್ ನಲ್ಲಿ ಹಾಫ್ ಮೀಲ್ಸ್ ಮಾಡಿದರೆ ಹೆಚ್ಚು. ಆದರೆ ಇಲ್ಲಿ ಸಿಂಪಲ್ ಕಾಫಿ ಕುಡಿಯಲು ಫಾಯ್ ಸ್ಟಾರ್ ಹೋಟೆಲ್‌ಗೆ ಬಂದಿರುವೆ. ಇದೇ ವ್ಯತ್ಯಾಸ. ತಕ್ಕಡಿ ಪ್ರೇಮಕ್ಕಿಂತ ಹಣ ಇದ್ದ ಕಡೆಗೆ ವಾಲುತ್ತಿದೆ. ಸಿರಿತನವೇ ಬದುಕಿಗೆ ಮುಖ್ಯ, ಪ್ರೀತಿ ಪ್ರೇಮ ಎಲ್ಲ ಮಾತಿಗೆ ಚೆನ್ನ. ಬದುಕಲು ದುಡ್ಡು ಬೇಕು, ಎಂಬ ಭಾವ ಮನದಲ್ಲಿ ಮೂಡಿದ್ದೇ ತಡ, ಬಡವ ಆಶ್ರಮ ವಾಸಿ ತೇಜಸ್ ಮನಸಿಂದ ದೂರ ಹೋಗುತ್ತಿದ್ದಾನೆ, ಅರಮನೆ ನಿವಾಸಿ ಹೇಮಂತ್ ಸ್ವಾರ್ಥ ಹೃದಯಕ್ಕೆ ಹತ್ತಿರವಾಗುತ್ತಿದ್ದಾನೆ. ಕಡೆಗೂ ಹಣವೇ ಗೆದ್ದಿತು. ವಿಭಾ, ತನ್ನ ವೈದ್ಯಕೀಯ ಓದನ್ನೆಲ್ಲ ತೇಜುವಿನ ದುಡಿಮೆಯಿಂದಲೇ ಓದಿದ್ದು, ಅವನು ನನ್ನ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾನೆ ಎಂಬುದರ ಸಣ್ಣ ಕೃತಜ್ಞತಾ ಭಾವ ಇಲ್ಲದೆ, ಅವನ ಪ್ರೇಮದ ಪರಿಯನ್ನೆಲ್ಲ ಮರೆತು ಸ್ವಾರ್ಥ ಮನದಿಂದ ಮುನ್ನಡೆದು ಬಿಡುತ್ತಾಳೆ. ಹೇಮಂತನ ಪ್ರಶ್ನೆಗೆ ಉತ್ತರವಾಗಿ, ಮದುವೆಗೆ ಸಮ್ಮತಿಸಿಬಿಡುತ್ತಾಳೆ. ನಂತರ ಪ್ರೇಮ ಪಯಣ. ಇಷ್ಟು ದಿನ ಮೂರಡಿ ದೂರ ಮೆಂಟೇನ್ ಮಾಡುತ್ತಿದ್ದವರು, ಹತ್ತಿರ ಕುಳಿತುಕೊಳ್ಳತೊಡಗಿದರು. ಸಹಜವಾಗಿಯೇ ಸಲುಗೆಯಿಂದ ಕಿಚಾಯಿಸುವುದು, ಚೂಟುವುದು ಎಲ್ಲವೂ ನಡೆಯುತ್ತಿದ್ದವು. ಮನಸಿನ ಪುಟದಲ್ಲಿ ತೇಜುವಿನ ಚಿತ್ರಕ್ಕೆ ಪೈಪೋಟಿಯಾಗಿ ಹೇಮಂತ್ನ ಮುದ್ದು ಮುಖ ನಿಂತಿತು, ಆವರಿಸಿಯೂ ಆಗಿತ್ತು. ಅವನ ನವಿರಾದ ಮಾತುಗಳು ಕರ್ಣಕುಂಡಲದಲ್ಲಿ ಗುಂಗುಡುತ್ತಿದ್ದ ತೇಜುವಿನ ಮಾತುಗಳಿಗೆ ಠಕ್ಕರ್ ಹೊಡೆದವು. ದಿನದಿಂದ ದಿನಕ್ಕೆ ತೇಜುವಿನೊಡನೆ ಮಾತುಗಳು ಕಡಿಮೆ ಆದವು. ಅವನು ಎಷ್ಟು ಸಾರಿ ಫೋನ್ ಮಾಡಿದರೂ ಎತ್ತುತ್ತಿರಲಿಲ್ಲ. ಎತ್ತಿದರೂ ಈಗ ಬಿಜಿ ಇದೀನಿ, ಪ್ರಾö್ಯಕ್ಟಿಕಲ್ ಕ್ಲಾಸ್ ಇದೆ, ಲೈಬ್ರರಿಯಲ್ಲಿದೀನಿ, ಗೆಳತಿಯರು ಇದಾರೆ. ಹೀಗೆ ಒಂದರ ಮೇಲೊಂದರಂತೆ ಸುಳ್ಳುಗಳನ್ನು ಹೆಣೆಯುತ್ತ, ಯಾವ ಪಾಪ ಪ್ರಜ್ಞೆ ಇಲ್ಲದವಳಂತೆ ವರ್ತಿಸುತ್ತಿದ್ದಳು. ಹಣ ಬೇಕಾದಾಗ ಗಂಟೆಗಟ್ಟಲೇ ಮಾತಾಡಿ, ಅವನನ್ನು ಸಂತೃಪ್ತಿಗೊಳಿಸುತ್ತಿದ್ದಳು. ಹೇಮಂತ್ ಸಂಪೂರ್ಣವಾಗಿ ಇವಳ ಮನಸನ್ನು ಆವರಿಸಿಬಿಟ್ಟಿದ್ದ. ಓದು ಸಂಪೂರ್ಣವಾಗುತ್ತಿದ್ದಂತೆಯೇ ತೇಜುವಿನ ರಗಳೆ ತಪ್ಪಿಸಿಕೊಳ್ಳಲು ಅವನ ನಂಬರ್ ಅನ್ನು ಬ್ಲಾಕ್ ಮಾಡಿ ಬಿಟ್ಟಳು. ಬ್ಲಾಕ್ ಮಾಡಿದ್ದು ಕೇವಲ ತೇಜುವಿನ ನಂಬರ್ ಅನ್ನಲ್ಲ, ನಿಷ್ಕಲ್ಮಶ ಪ್ರೀತಿಯನ್ನ, ಒಬ್ಬ ಮುಗ್ಧ ಪ್ರೇಮಿಯ ನಂಬಿಕೆಯನ್ನ. ಇದ್ಯಾವುದರ ಪರಿವೇ ಇಲ್ಲದೆ, ಇನ್ನೇನು ವಿಭಾಳ ಅಭ್ಯಾಸ ಮುಗಿಯಿತು, ಇನ್ನೇನು ಕೆಲವೇ ದಿನಗಳಲ್ಲಿ ಬಂದು ಬಿಡುತ್ತಾಳೆ. ಮದುವೆಯಾಗಿ ಸಣ್ಣ ಗೂಡಲ್ಲಿ ಸಂಸಾರ ಸಾಗಿಸುತ್ತ ನಮ್ಮದೇ ಸ್ವಂತ ಚಿಕ್ಕ ಆಸ್ಪತ್ರೆ ಪ್ರಾರಂಭಿಸಿ, ದಂಪತಿಗಳಿಬ್ಬರು ರೋಗಿಗಳ, ಬಡವರ ಸೇವೆ ಮಾಡುತ್ತ ನಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಬೇಕೆಂಬ ವಿಶಾಲ ಆಸೆಯನ್ನಿಟ್ಟುಕೊಂಡು, ಹೃದಯ ತಜ್ಞೆ ನನ್ನ ಮನದನ್ನೆ, ಹೃದಯ ತಜ್ಞೆ ನನ್ನ ಹೃದಯ ನಿವಾಸಿನಿ ಎಂದು ಕನಸು ಕಾಣುತ್ತ ವಿಭಾಳನ್ನು ಮಾತನಾಡಿಸುವ ಹಂಬಲವಾಗಿ ತುಡಿತದಿಂದ ಫೋನಾಯಿಸುತ್ತಾನೆ…. ಆದರೆ….! ಆದರೆ…..!

ಇನ್ನೆಲ್ಲಿ ಸಿಗುತ್ತಾಳೆ ವಿಭಾ! ಹೋಗಿದ್ದು ಓದಲಿಕ್ಕೆ ಹೊರದೇಶಕ್ಕೆ, ಆದರೆ ಹೃದಯದಿಂದಲೇ ಹೊರ ಹೋಗಿದ್ದಾಳೆ. ಹೃದಯ ತಜ್ಞೆ ಬೆಸೆದ ಹೃದಯವನ್ನು ಹರಿದುಕೊಂಡು ಹಾರಿದ್ದಾಳೆ ಹೊರಕ್ಕೆ. ಎಷ್ಟು ಬಾರಿ ಫೋನಾಯಿಸಿದರೂ ಫೋನ್ ಕನೆಕ್ಟ್ ಆಗ್ತಿಲ್ಲ. ಏನೋ ನೆಟ್ ವರ್ಕ್ ಸಮಸ್ಯೆ ಇರುಬಹುದೆಂದು ಸುಮ್ಮನಾಗುತ್ತಾನೆ ತೇಜು. ಹೌದು ನಿಜಲಾಗಲೂ ಪ್ರೇಮದ ನೆಟ್ವರ್ಕ್ ಸಮಸ್ಯೆ ಆಯಿತು. ಹೃದಯದ ತರಂಗಗಳು, ಸ್ವಾರ್ಥದ ಟವರ್‌ಗೆ ರೀಚ್ ಆಗದೇ ಹೋಗಿಬಿಟ್ಟವು. ಇಷ್ಟು ದಿನ ಬಳಸಿಕೊಂಡ ಪ್ರೀತಿಂiÀi ಡೇಟಾಗೆ ಟಾಟಾ ಮಾಡಿ, ಬೇರೆ ನೆಟ್‌ವರ್ಕ್ಗೆ ಜಂಪಾದಳು ವಿಭಾ. ಒಂದು ಬಾರಿ, ಎರಡು ಬಾರಿ, ಮರು ದಿನ, ಮತ್ತೊಂದು ದಿನ… ಹೀಗೆ ಕಾಲ್ ಮಾಡಿ ಮಾಡಿ ಸುಸ್ತಾದ ತೇಜುಗೆ ದಿಕ್ಕೇ ತೋಚದಂತಾಯಿತು. ಇಲ್ಲೇ ಹತ್ತಿರವಿದ್ದರೆ ಹೋಗಿ ನೋಡಿ ಬರಬಹುದಿತ್ತು. ಆದರೆ ಅದು ಪರದೇಶ; ಹೋಗಲು ಅಸಾಧ್ಯ. ಚಿಂತೆಯ ಉರಿ ದಿನದಿಂದ ದಿನಕ್ಕೆ ಸುಡತೊಡಗಿತು. ಇವನ ಬಾಧೆ ಕಂಡ ಸ್ನೇಹಿತರು, “ಲೋ ತೇಜು ನಾವ್ ಅವತ್ತೇ ಹೇಳಿದ್ವಿ, ಮೊದಲು ಮದುವೆ ಆಗೋ ಆ ನಂತರ ಓದಿಸುವಂತಿ ಬೇಕಿದ್ರೆ ಅಂತ ಈಗ ನೋಡು ಏನಾಯ್ತು?”

ಏ ಹಾಗೆಲ್ಲಾ ಏನು ಆಗೋದಿಲ್ವೋ, ನನ್ ವಿಭಾ ಬಗ್ಗೆ ನಂಗೆ ಗೊತ್ತಿಲ್ವಾ? ಅವಳು… ಅವಳು… ಅನ್ನೋದ್ರಲ್ಲೇ ಕಣ್ತುಂಬಿಕೊಂಡು ಅತ್ತುಬಿಟ್ಟ. ಸರಿಯಾಗಿ ಅದೇ ಸಮಯಕ್ಕೆ ಅಲ್ಲಿ ವಿಭಾಳ ಆಪ್ತ ಗೆಳತಿ, ವೇದಶ್ರೀ ಬಂದಳು. ಅಲ್ಲಿ ತೇಜು ಇರುವುದನ್ನು ನೋಡಿಯೂ ನೋಡದಂತೆ ಮುಂದೆ ಸಾಗಲು ಪ್ರಯತ್ನಿಸಿದಳು. ಆದರೆ ತೇಜುವಿನ ಗೆಳೆಯರು, ತೇಜು ಅಲ್ನೋಡೋ ವಿಭಾಳ ಗೆಳತಿ, ವೇದಶ್ರೀ. ಅವಳನ್ನು ಕೇಳಿದರೆ ಖಂಡಿತಾ ವಿಭಾಳ ಕುರಿತು ತಿಳಿಯುತ್ತೆ, ಎಂದವರೇ ಅವರೇ ವೇದಶ್ರೀಯನ್ನು ಒತ್ತಾಯವಾಗಿ ಕರೆತಂದರು. ತೇಜು ಅಳುವುದನ್ನು ನೋಡಿದ ವೇದಶ್ರೀ ಮನಸು ದುಃಖ ತಪ್ತವಾಯಿತು. ವೇದಶ್ರೀ, “ನಿಂಗೆ ವಿಭಾ ತನ್ನೆಲ್ಲ ವಿಷಯವನ್ನು ಹೇಳಿರುತ್ತಾಳೆ. ದಯವಿಟ್ಟು ಆಕೆ ಎಲ್ಲಿದಾಳೆ, ಏನಾಗಿದಾಳೆ ಹೇಳು. ಅವಳು ನಂಗೆ ಕಾಂಟ್ಯಾಕ್ಟ್ಗೆ ಸಿಗ್ತಾ ಇಲ್ಲ. ಅವಳಿಲ್ಲದ ಪ್ರತೀ ಕ್ಷಣವೂ ನರಕವಾಗಿದೆ; ಪ್ಲೀಸ್ ಹೇಳು” ಎಂದು ಅಂಗಲಾಚಿದನು.
ವೇದಶ್ರೀ ಸಂಕಟದಿಂದ, “ತೇಜು, ಅದೂ….”
“ಏನು ಹೇಳಮ್ಮ ನಮ್ ತೇಜೂನ ಸ್ಥಿತಿ ನೋಡೋಕಾಗ್ತಿಲ್ಲ” ಎಂದು ಗೆಳೆಯ ಮಾಧವ್ ಕೇಳಿದೊಡನೆ. “ಅದೂ… ತೇಜು.. ಸಮಾಧಾನ ಮಾಡ್ಕೊ, ವಿಭಾ ಅಲ್ಲೇ ತನ್ನ ಕ್ಲಾಸ್ ಮೇಟ್ ಒಬ್ಬನನ್ನು ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದಾಳೆ. ಅಲ್ಲೇ ಸೆಟಲ್ ಆಗ್ತಾಳಂತೆ. ನನ್ನ ಮರೆತು ಬಿಡು ಎಂದು ತೇಜುಗೆ ಹೇಳಿಬಿಡು ಎಂದು ಹೇಳಿದಳು. ನಾನು ಎಷ್ಟೋ ಬುದ್ಧಿ ಹೇಳಿದೆ, ಆದರೆ ಆಕೆಗೆ ವಿದ್ಯೆಯ, ಹಣದ ಮದ ತಲೆಗೇರಿದೆ, ನನ್ನ ಮಾತು ಕೇಳ್ತಿಲ್ಲ. ಮೇ ಬಿ ಸಿಮ್ ಕೂಡಾ ಚೇಂಜ್ ಮಾಡಿದಾಳೆ ಅನ್ಸುತ್ತೆ. ಅವತ್ತು ಮಾತಾಡಿದ್ದೇ ಕೊನೆ. ಅವಳು ಮತ್ತೆ ಕಾಲ್ ಮಾಡಿಲ್ಲ. ನಾ ಮಾಡಿದರೂ ಕಾಲ್ ಹೋಗ್ತಿಲ್ಲ. ಸಮಾಧಾನ ಮಾಡ್ಕೊ ತೇಜು. ಪ್ಲೀಸ್ ಅವಳನ್ನು ಮರೆತುಬಿಡೋದೇ ವಾಸಿ, ನಾನಿನ್ನು ಬರುತ್ತೇನೆ” ಎಂದು ಹೊರಟು ಹೋದಳು ವೇದಶ್ರೀ.
ಮೊದಲೇ ದುಃಖದಲ್ಲಿದ್ದ ತೇಜು ಮತ್ತಷ್ಟು ಖಿನ್ನನಾಗಿಬಿಟ್ಟ. ಗೆಳೆಯರೆಲ್ಲ ವಿಭಾಳನ್ನು ಹೀಗಳೆಯುತ್ತಿದ್ದರೆ, ತೇಜುನ ಮನ ರೋಧಿಸುತ್ತಿತ್ತು. ನನ್ನ ವಿಭಾ ಹೀಗೆ ಮಾಡಲು ಸಾಧ್ಯವೇ? ತನ್ನ ಪ್ರಾಣಕ್ಕಿಂತಲೂ ನನ್ನನ್ನು ಹೆಚ್ಚು ಪ್ರೇಮಿಸುವವಳು ಹೀಗೆ ಮಾಡಲು ಹೇಗೆ ಸಾಧ್ಯ ಎಂದು ಚಿಂತಿಸತೊಡಗಿದವನನ್ನು ಗೆಳೆಯರು ಸಮಾಧಾನ ಮಾಡಿ ಆಶ್ರಮಕ್ಕೆ ಕಳಿಸಿದರು.
ಮನಸ್ಸು ಸ್ಥಿಮಿತದಲ್ಲಿರದೆ ನಾನೇನಾಗಿ ಬಿಡುತ್ತೇನೋ ಎಂಬ ಆತಂಕದಿಂದ, ದುಃಖದಿಂದಲೇ ರಾತ್ರಿಯನ್ನು ಕಳೆಯಲಾಗದೆ, ನಿದ್ದೆ ಬರದೆ ಒದ್ಯಾಡಿ ಕೊನೆಗೆ ನಿದ್ದೆ ಮಾತ್ರೆ ತೆಗೆದುಕೊಂಡು ಮಲಗಿದ ತೇಜು. ಪ್ರತೀ ದಿನ ಇದೇ ರೀತಿ ಕೊರಗಿನಲ್ಲಿ ಬದುಕು ಸಾಗಿಸುತ್ತಾನೆ.


   ಇತ್ತ ವಿಭಾವರಿ ತನ್ನ ಹೊಸ ಪ್ರೇಮಿ ಹೇಮಂತ್‌ನೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿರುತ್ತಾಳೆ. ಓದೂ ಮುಗೀತು. ಈಗ ಒಃBS, ಒಆ ವಿಭಾವರಿಯಾಗಿದ್ದಳು. ಹೇಮಂತನ ಆಸ್ಪತ್ರೆಯಲ್ಲಿ ಹೇಮಂತನೊಂದಿಗೆ ಕೆಲಸ. ಹೇಮಂತನ ತಂದೆ ತಾಯಿ ಕೂಡ ಅಲ್ಲೇ ಇದ್ದರು. ಹೇಮಂತನನ್ನು ಒಪ್ಪಿದ್ದು ಅವರಿಗೂ ಸಂತೋಷವಾಗಿತ್ತು.  ನೋಡಮ್ಮಾ ವಿಭಾ, ಬೇಗ ಮದುವೆ ಮುಗಿಸಿಬಿಡೋಣ. ನೀ ಒಂದು ಕಡೆ, ಅವನೊಂದು ಕಡೆ ಏಕೆ? ಇಬ್ಬರೂ ಸುಖವಾಗಿ ಇರುವಂತ್ರಿ ಏನಂತೀಯಾ? ಎಂದು ಕೇಳುತ್ತಲೇ ಇದ್ದರು. “ಇವತ್ತು ರಾತ್ರಿ ಮನೆಗೆ ಬಾರಮ್ಮ. ಅಲ್ಲೇ ಊಟ ಮಾಡುವಂತಿ. ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ. ತಪ್ಪಿಸಬೇಡ ಬೇಗನೇ ಬಂದು ಬಿಡು” ಎನ್ನುತ್ತಾರೆ. ತನ್ನ ಕಾರ್ಯವೆಲ್ಲ ಮುಗಿಸಿ ಮನೆಗೆ ಹೋಗಿ ಸುಂದರವಾಗಿ ಅಲಂಕೃತಳಾಗಿ ಹೋಗಬೇಕೆಂದು ಯೋಚಿಸಿ ಮನೆಗೆ ಹೊರಡುತ್ತಾಳೆ.
     ತನ್ನ ತಂದೆ ತಾಯಿಗೆ ವಿಷಯ ತಿಳಿಸಬೇಕು. ತೇಜುನ ಬಿಟ್ಟು ಹೇಮಂತನನ್ನು ಒರಿಸುತ್ತಿರುವದಕ್ಕೆ ನಿಜವಾಗಲೂ ಅವರು ಸಂತೋಷ ಪಡಬಹುದು. ಅಥವಾ ಒಬ್ಬನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಹೋಗುತ್ತಿರುವುದಕ್ಕೆ ಅವರಿಗೆ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುತ್ತದೆಯೋ? ಏನೋ? ಎಂದು ಆಲೋಚಿಸುತ್ತಾ ಮನೆಗೆ ಬರುತ್ತಾಳೆ. 
  ಸುಂದರವಾಗಿ ಅಲಂಕೃತಗೊಂಡ ವಿಭಾ ಅಪ್ಪಟ ಗೊಂಬೆಯಂತೆ ಕಾಣುತ್ತಿರುತ್ತಾಳೆ. ಸರ್ವಾಲಂಕಾರ ಭೂಷಿತೆ, ಸೌಂದರ್ಯದ ಖಣಿ. ನೋಡಿದರೆ ನೋಡುತ್ತಲೇ ಇರಬೇಕೆನಿಸುತ್ತದೆ. ಒಮ್ಮೆ ನೋಡಿದವರು ಅವಳ ಕಮಲದಂತಹ ಮೊಗದ ಗುಂಗಲ್ಲೇ ಕಾಲ ಕಳೆಯಬೇಕು. ಪ್ರತಿಭಾವಂತೆ, ಅಷ್ಟೇ ಶಿಸ್ತು, ಸೀರೆ ಉಟ್ಟರೆ ಒಂದು ನೆರಿಗೆಯೂ ವ್ಯತ್ಯಾಸ ಇರುವುದಿಲ್ಲ. ಉಟ್ಟರೆ ಇವಳಂತೆ ಸೀರೆ ಉಡಬೇಕು ಎಂದು ಎಲ್ಲ ಗೆಳತಿಯರೂ ಆಡಿಕೊಳ್ಳುತ್ತಿದ್ದರು. ಅಷ್ಟು ಚೊಕ್ಕವಾಗಿ ಸಿದ್ಧಳಾಗುತ್ತಿದ್ದಳು. ಈ ದಿನ ತನ್ನ ಮನದರಸನ ಮನೆಗೆ ಸಂತೃಪ್ತಿಯಿಂದ ಭೇಟಿ ಆಗುತ್ತಿರುವುದಕ್ಕೆ, ತಿಳಿ ನೀಲಿ ಬಣ್ಣದ ಸೀರೆಯುಟ್ಟು ಝಗಮಗಿಸುತ್ತಿದ್ದಳು. ಹೊರಡಲಣಿಯಾದವಳಿಗೆ ಒಂದು ಅಪರಿಚಿತ ಸಂಖ್ಯೆಯಿಂದ ಕಾಲ್ ಬಂತು. ಈ ಸಂತೋಷದ ಸಮಯದಲ್ಲಿ ಯಾರು ಮಾಡಿರಬಹುದು ಎಂಬ ಅಳುಕಲ್ಲೇ ಫೋನ್ ರಿಸೀವ್ ಮಾಡಿದಳು. ಅತ್ತ ಕಡೆಯಿಂದ ಮಗಳೇ... ಎಂಬ ತಾಯಿಯ ಧ್ವನಿ ಕೇಳಿ ಗದ್ಗತಿಳಾದಳು. ಮಾತುಗಳು ಹೊರಡುತ್ತಲೇ ಇಲ್ಲ. ನನ್ನೆಲ್ಲ ವೃತ್ತಾಂತವನ್ನು ಹೇಗೆ ಹೇಳುವುದು ಎಂದು ಯೋಚಿಸುವುದರಲ್ಲಿ; ವಿಭಾ ನಿನ್ನ ಗೆಳತಿ ಸಿಕ್ಕಿದ್ದಳು, ಎಲ್ಲ ವಿಷಯವನ್ನು ಹೇಳಿದಳು. ನೀನು ತೇಜಸ್‌ನನ್ನು ಮದುವೆ ಆಗ್ತಿಲ್ವಂತೆ, ನಿಜಾನಾ!... ಎಂಬಷ್ಟರಲ್ಲಿ ಹೇಮಂತ್‌ನ ಕರೆ ಬಂತು.. ಅಮ್ಮನ ಕರೆ ಕಟ್ ಮಾಡಿ ಈಗ ಬಂದೆ ಎಂದು ಹೊರಟಳು. ಮನಸಲ್ಲಿ ದುಗುಡ ಅಪ್ಪ ಅಮ್ಮ ನನ್ನ ಬಗ್ಗೆ ಎಷ್ಟು ಅಸಹ್ಯ ಪಟ್ಟುಕೊಂಡಿರಲಿಕ್ಕಿಲ್ಲ. ಯಾವುದೇ ತಂದೆ ತಾಯಿಯಾದರು ಮಗಳು ಒಬ್ಬ ಹುಡುಗನನ್ನು ಪ್ರೀತಿಸಿ ಅವನ ಜೊತೆ ಸುತ್ತಿ ಮತ್ತೆ ಬೇರೊಬ್ಬನೊಡನೆ ಮದುವೆ ಆಗ್ತಾಳೆ ಎಂದರೆ ಸಹಿಸುವುದಿಲ್ಲ... ಸುಸಂಸ್ಕೃತರಾದ ಯಾರಿಗೇ ಆದರು ಹೆಣ್ಣು ಮಕ್ಕಳ ಈ ನಡೆ ಅಸಹನೀಯ ಎಂಬಂತೆ ಅವರೊಡನೆ ಮಾತನಾಡಲೂ ಹಿಂಜರಿಯುತ್ತಿದ್ದಳು. ಅಷ್ಟಕ್ಕೂ ನನ್ನ ಹೊಸ ನಂಬರ್ ಅಮ್ಮನಿಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಾತೀತವಾಗಿ ಚಿಂತಿಸುತ್ತಿದ್ದಳು.
     ಅಷ್ಟರಲ್ಲೇ ಹೇಮಂತ್ ಕಳಿಸಿದ ಕಾರಲ್ಲಿ ಹತ್ತಿ ಅವರ ಮನೆ ತಲುಪಿದಳು. ಮನೆಯ ಹೊರ ಭಾಗ ತಳಿರು ತೋರಣಗಳಿಂದ ಅಲಂಕೃತಗೊಂಡಿತ್ತು, ವಿಧ ವಿಧ ಹೂಗಳ ರಾಶಿಯನ್ನೇ ತಂದು ಮಾಲೆಮಾಡಿ ಅಲಂಕರಿಸಿದ್ದರು. ಇಲ್ಲೇನು ನಡೆಯುತ್ತಿದೆ ಎಂಬುದೇ ತಿಳಿಯದಂತಾದಳು. ಏನು ಮನೆಯಲ್ಲಿ ಪೂಜೆ ಇದೆನಾ? ಮದುವೆಗೆ ಮಾಡೋ ತರಹ ಅಲಂಕಾರ ಮಾಡಿದ್ದಾರೆ. ಏನು ವಿಶೇಷವಿದೆ? ನೆಂಟರು ಬಂದಿದಾರೆ ಬಾ ಎಂದಷ್ಟೇ ಹೇಳಿದ್ದರು. ಇಲ್ಲಿ ನೋಡಿದರೆ ವಿಚಿತ್ರವಾಗಿದೆಯಲ್ಲ! ಎಂದು ಗರಬಡಿದವಳಂತೆ ನಿಂತವಳನ್ನು ಹೇಮಂತ್ ಹಾಯ್ ಸ್ವೀಟ್ ಹಾರ್ಟ್ ಕಮಾನ್. ನನ್ನ ಅರಮನೆಗೆ ನನ್ನ ಮನದ ರಾಣಿಗೆ ಸ್ವಾಗತ ಎಂದು ಒಳಗೆ ಕರೆದೊಯ್ದನು. ಆಶ್ಚರ್ಯವಾದರೂ, ನಗು ಮೊಗದಿಂದ ಒಳ ನಡೆದವಳಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಒಳಗೆ ಕಾಲಿಡುತ್ತಿದ್ದಂತೆ ತಲೆ ತಿರುಗಿದಂತಾಯಿತು. ತನ್ನ ಕಣ್ಣನ್ನು ತಾನೇ ನಂಬದಾದಳು. ಅಪ್ಪ ಅಮ್ಮ ಎದುರಿಗೆ ನಿಂತಿದ್ದಾರೆ. ಅವರು ಇಲ್ಲಿಗೆ ಹೇಗೆ ಬಂದರು. ಹೇಮಂತ್‌ನ ಮನೆಯವರಿಗೆ ಇವರಿಗೆ ಹೇಗೆ ಪರಿಚಯ? ಏಕಾ ಏಕಿ ಅಪ್ಪನನ್ನು ನೋಡಿ ಬೆವರತೊಡಗಿದಳು. ಎಲ್ಲಿ ನನ್ನ ರಹಸ್ಯ ಬಯಲಾಗುತ್ತದೆ ಎಂಬ ಭಯದಿಂದ ನಲುಗಿ ಹೋದಳು. ತನ್ನ ನಡೆಗೆ ತಾನೇ ಛೀ ಮಾರಿ ಹಾಕಿಕೊಂಡು, ಕಳ್ಳಿಯಂತೆ ಮುಖ ಸಪ್ಪೆ ಮಾಡಿಕೊಂಡಳು. ಇದನ್ನೆಲ್ಲ ಗಮನಿಸಿ ಬಳಿ ಬಂದ ತಾಯಿ ವಿಭಾ ಯಾಕೆ ಮುಖ ಬಾಡಿತು. “ನಾವ್ಹೇಗೆ ಇಲ್ಲಿಗೆ ಬಂದ್ವಿ ಅನ್ನೋದು ತಾನೆ ನಿನ್ನ ಚಿಂತೆ, ನಿಂಗೇ ಎಲ್ಲಾ ಗೊತ್ತಾಗುತ್ತೆ ಬಾ. ಇವತ್ತು ನಿನ್ನ ಮತ್ತು ಹೇಮಂತ್‌ನ ನಿಶ್ಚಿತಾರ್ಥ. ಅದಕ್ಕೆ ನಾವು ಬಂದಿದೀವಿ”. ಎಂಬ ಮಾತು ಕೇಳಿದವಳಿಗೆ ಏನು ಹೇಳುವುದು ತಿಳಿಯುವುದೇ ಇಲ್ಲ. 

ಎಲ್ಲವೂ ನಿಗೂಢ ಅನಿಸುತ್ತಿದೆ. ಅಷ್ಟರಲ್ಲೇ ಹೇಮಂತ್‌ನ ತಂದೆ “ಬನ್ನಿ ಸಮಯ ಆಗ್ತಾ ಇದೆ. ತಾಂಬೂಲ ಬದಲಾಯಿಸಿಕೊಳ್ಳೋಣ” ಎಂದು ಅವಸರ ಮಾಡುತ್ತಾರೆ. ಪುರೋಹಿತರು “ಇಬ್ಬರನ್ನು ಕರೆಯಿರಿ ಬೇಗ” ಎಂದು ಕೂಗುತ್ತರೆ. ಮಾತಾಡುವುದಕ್ಕೆ ಸಮಯವೇ ಸಿಗದೆ ಜೋಡಿಗಳು ಉಂಗುರ ಬದಲಾಯಿಸಿಕೊಳ್ಳುತ್ತಾರೆ. ಹೇಮಂತನ ಖುಷಿಗೆ ಪಾರವೇ ಇರಲಿಲ್ಲ. ವಿಭಾಳ ತಂದೆ ತಾಯಿ ತಾವು ಗೆದ್ದ ಖುಷಿಯಲ್ಲಿ ಬೀಗುತ್ತಿದ್ದಾರೆ. ಬೀಗರ ಮುಖಗಳಲ್ಲಿ ಮಂದಹಾಸ ಇದೆ. ನಿಶ್ಚಿತಾರ್ಥಕ್ಕೆ ಬಂದವರೆಲ್ಲ ಈ ಜೋಡಿಯನ್ನು ಹೊಗಳಿದ್ದೇ ಹೊಗಳಿದ್ದು. “ಅಪ್ಸರೆ ರಿ ನಿಮ್ಮ ಸೊಸೆ. ಮೊದಲು ದೃಷ್ಟಿ ತೆಗೀರಿ” ಎಂದು ಹೊಗಳಿದ್ದೇ ಹೊಗಳಿದ್ದು. ಆದರೆ ವಿಭಾವರಿಗೆ ಮಾತ್ರ ಎಲ್ಲವೂ ಅಯೋಮಯ ಅನಿಸುತ್ತಿದೆ. ಪ್ರತಿ ಕ್ಷಣ ಕ್ಷಣವೂ ತೇಜಸ್‌ನ ಮುಖ ಮನದಲ್ಲಿ ಮೂಡಿ ಮರೆಯಾಗುತ್ತಿದೆ. ತಕ್ಷಣ ಸಿರಿವಂತಿಕೆ ನೆನೆದು ಅವನ ಮುಖವನ್ನು ಒತ್ತಾಯವಾಗಿ ಮರೆಮಾಚುತ್ತಿದ್ದಾಳೆ. ಎಲ್ಲವೂ ಕನಸೆಂಬಂತೆ ಮುಗಿದು ಹೊಯಿತು. ಹೇಮಂತ್ ಮತ್ತು ವಿಭಾವರಿ ಈಗ ಅಧಿಕೃತ ಪ್ರೇಮಿಗಳಾಗಿದ್ದರು.
ಕಾರ್ಯಕ್ರಮ ಮುಗಿಸಿ ತನ್ನ ಮನೆಗೆ ತಂದೆ ತಾಯಿಯ ಜೋಡಿ ಬಂದಳು. ಒಂದೂ ಮಾತಾಡದೆ ಇದ್ದ ವಿಭಾಳಿಗೆ, ಅವಳ ತಾಯಿ ಎಲ್ಲವನ್ನೂ ವಿವರಿಸತೊಡಗಿದರು. ವಿಭಾ ಇದೆಲ್ಲ ನಮ್ಮ ಪೂರ್ವ ನಿಯೋಜಿತ ಪ್ಲ್ಯಾನ್. ನೀನು ಆ ಬಡವ ತೇಜಸ್‌ನನ್ನು ಪ್ರೀತಿಸಿ ನಮ್ಮಿಂದ ದೂರವಾದೆ. ಏನ್ ಮಡೋದು ಅಂತ ತಿಳಿಯದೆ ಚಿಂತೆ ಮಾಡ್ತಿದ್ವಿ. ಆದರೆ ನೀನು ಹೈಯರ್ ಸ್ಟಡೀಸಿಗೆ ಇಲ್ಲಿಗೆ ಬಂದದ್ದು ತಿಳಿದು ನಾವೇ ಹೇಮಂತನಿಗೆ ನಿನ್ನ ಹಿಂದೆ ಬಿದ್ದು ನಿನ್ನನ್ನು ಒಲಿಸಿಕೊಳ್ಳಲು ಹೇಳಿದ್ದು. ಹೇಮಂತ್ ಬೇರೆ ಯಾರೂ ಅಲ್ಲ ಕಣೆ. ನನ್ನ ಚಿಕ್ಕಮ್ಮಳ ಮಗನ ಮಗ. ಅಂದರೆ ನನ್ನ ಅಣ್ಣನ ಮಗ. ನಿನ್ನ ಸೋದರ ಮಾವನ ಮಗ ಕಣೆ. ಎಲ್ಲವೂ ನಾವಂದುಕೊಂಡಂತೇ ಆಯ್ತು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು. ನಿನ್ನನ್ನು ತೇಜಸ್‌ನಿಂದ ದೂರ ಮಾಡಲು ನಾವು ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾಯ್ತು ನೋಡು. ನೀನು ಕೂಡ ಹೇಮಂತನಿಗೆ ಅವನ ಸಿರಿವಂತಿಕೆಗೆ ಮಾರು ಹೋದೆ. ನಮಗೂ ಅದೇ ಬೇಕಿತ್ತು. ಆ ತೇಜಸ್ ನೋಡು ಮೂರ್ಖ ನಿನ್ನ ಎಲ್ಲ ಓದಿನ ಖರ್ಚನ್ನು ತಾನೇ ವ್ಯಯಿಸಿದ. ಅದು ನಮಗೂ ಗೊತ್ತಿತ್ತು. ನಾವು ಸುಮ್ಮನಿದ್ವಿ. ಮಗ ಬರ್ಬಾದ್ ಆಗ್ಲಿ ಅಂತ. ಏ ವಿಭಾ! ಈಗ ತೇಜಸ್ ಹೇಗಾಗಿದಾನೆ ಗೊತ್ತಾ..? ನಿನ್ನ ನೆನಪಲ್ಲೇ ಹುಚ್ಚನಂತಾಗಿದ್ದಾನೆ. ಇನ್ನೂ ನೀನು ಬಂದೇ ಬರ್ತೀಯಾ ಅಂತ ಪೆಕರನಂತೆ ಕಾಯ್ತಿದಾನೆ. ಒಂದು ಆಸ್ಪತ್ರೆಯನ್ನೂ ಕಟ್ಟಿಸ್ತಿದ್ದ. ಈಗ ಅದರ ಕನ್ಸ÷್ಟçಕ್ಷನ್ ಕೂಡ ನಿಂತುಬಿಟ್ಟಿದೆ. ಭಿಕಾರಿ, ಭಿಕಾರಿ ಆಗಿದ್ದಾನೆ, ದೇವದಾಸ ಆಗಿದ್ದಾನೆ ಕಣೆ ಎಂದು ಜೋರಾಗಿ ನಗತೊಡಗಿದಳು. ನನ್ನ ಮಗಳ ತಂಟೆಗೆ ಬಂದವನಿಗೆ ಹೀಗೇ ಆಗಬೇಕು. ರೊಕ್ಕನೂ ಹೋಯ್ತು ಹುಡುಗಿನೂ ಹೋದ್ಲು…. ಹ..ಹ..ಹ… ಎಂದು ಮತ್ತೆ ಜೋರಾಗಿ ನಗತೊಡಗಿದಳು. ತಾಯಿಯ ಜೊತೆ ತಂದೆಯೂ ನಗುವುದಕ್ಕೆ ಪ್ರಾರಂಭಿಸಿದರು. ವೆರಿ ಪೂರ್ ಬಾಯ್, ಪೂರ್ ಬಾಯ್… ಹ..ಹ..ಹ.. ಎಂದು ಇಬ್ಬರೂ ನಗುವುದನ್ನು ಕೇಳಿ ವಿಭಾಳ ಹೃದಯ ಒಡೆದಂತಾಯಿತು. ನನ್ನನ್ನು ತೇಜಸ್ ನಿಂದ ದೂರ ಮಾಡಲು ಇವರೇ ಇಂತಹ ಪ್ಲ್ಯಾನ್ ಮಾಡಿದಾರೆ.

ಮುಂದುವರೆಯುವುದು…

ವರದೇಂದ್ರ ಕೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x