ನನ್ನ ಮನೆಯಿಂದ ಕಚೇರಿಗೆ 32 ಕಿಮೀ ದೂರ, 41 ಸ್ಟಾಪ್‌ಗಳು, 7:30ರ ಬಸ್‌ನಲ್ಲಿ ದಿನವೂ ಶಾಲಾ ಮಕ್ಕಳ ಜೊತೆಗಿನ ಪ್ರಯಾಣ. ಆರಂಭದಲ್ಲಿ, ಜನಜಂಗುಳಿಯಿಂದಾಗಿ ಬಸ್‌ನಲ್ಲಿ ಸೀಟು ಸಿಗದೆ ನಿಂತೇ ಪ್ರಯಾಣಿಸಬೇಕಿತ್ತು. ಕಚೇರಿಗೆ ತಲುಪುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಆದರೆ, ಈ ಸವಾಲನ್ನು ಒಂದು ಅವಕಾಶವಾಗಿ ನಾನು ಪರಿವರ್ತಿಸಿಕೊಂಡ ಪ್ರಕರಣವೇ 293K CRCಯ ಜನನ.
ಬಸ್‌ನಲ್ಲಿ ಪ್ರತಿದಿನ ಮಕ್ಕಳ ಗಲಾಟೆ, ನಾನು ಕೆಲವು ಮಕ್ಕಳನ್ನು ಅವರ ಶಾಲೆಯ ಬಗ್ಗೆ. ಆಟದ ಬಗ್ಗೆ ಪಾಠದ ಬಗ್ಗೆ ಚರ್ಚೆಗಳಿಂದ ಅವರ ಪರಿಚಯ ಸಂಪಾದಿಸಿದೆ. ಪ್ರತಿದಿನ ಉದ್ದೇಶ ಪೂರ್ವಕವಾಗಿ ಮಾತನಾಡಿಸಿ ಕೆಲವರ ಗೆಳೆತನ ಬೆಳೆಸಿದೆ. ಒಂದು ದಿನ ಆ ಮಕ್ಕಳಿಗೆ ಸಣ್ಣ ಕಥೆ ಹೇಳಿದೆ. ಕೆಲವು ಮಕ್ಕಳ ಕಣ್ಣುಗಳಲ್ಲಿ ಕುತೂಹಲ ಕಂಡಿತು. ಕಂಡಕ್ಟರ್, “ಸಾರ್, ಒಳ್ಳೆಯ ಕೆಲಸ! ಕಥೆ ಹೇಳಿ ಇವರ ಗಲಾಟೆ ಕಡಿಮೆಯಾಗುತ್ತೆ,” ಎಂದು ಪ್ರೋತ್ಸಾಹಿಸಿದರು. ಬಾಗಲೂರು, ಮಾರೇನಹಳ್ಳಿ, ಚೊಕ್ಕನಹಳ್ಳಿ, ಮಾರಸಂದ್ರ, ಸಣಪನಹಳ್ಳಿಯಂತಹ 15 ಹಳ್ಳಿಗಳ ಮಕ್ಕಳು, ಕೊತ್ತನೂರು, ಗೆದ್ದಲಹಳ್ಳಿ, ಲಿಂಗರಾಜಪುರ, ಕಾಕ್ಸ್ ಟೌನ್‌ನ ಶಾಲೆಗಳಿಗೆ ಹೋಗುತ್ತಿದ್ದರು. ಪ್ರತಿದಿನ ಕಥೆ ಹೇಳುವುದು ಆರಂಭವಾಯಿತು. ಮಕ್ಕಳು ನನ್ನನ್ನು “ಸ್ಟೋರಿ ಅಂಕಲ್” ಎಂದು ಕರೆಯತೊಡಗಿದರು.ಮಕ್ಕಳ ಕಥೆಗಳಿಗಾಗಿ ರಾತ್ರಿಯಿಡೀ ಓದಿ ಸಿದ್ಧನಾಗುತ್ತಿದ್ದೆ. ಕ್ರಮೇಣ, ಮಕ್ಕಳು ಸೀಟು ಬಿಟ್ಟುಕೊಡಲು ಶುರುಮಾಡಿದರು.
ಕಂಡಕ್ಟರ್ ಎರಡು ವಾರದ ನಂತರ ಹೇಳಿದರು, “ಸಾರ್, ನಿಮ್ಮ ಕಥೆಗೆ ಮಕ್ಕಳು ಫಿದಾ ಆಗಿದ್ದಾರೆ. ಇದು ಬಸ್‌ನ ವಾತಾವರಣವನ್ನೇ ಬದಲಾಯಿಸಿದೆ!” ಒಬ್ಬ ಪ್ರಯಾಣಿಕ ಬಾಗಳೂರಿನ ಶಿವಕುಮಾರ್, “ನಿಮ್ಮ ಕಥೆಗಳಿಂದ ಮಕ್ಕಳಿಗೆ ಜ್ಞಾನ, ನಮಗೆ ಶಾಂತಿ!” ಎಂದು ತಮಾಷೆಯಾಗಿ ಹೇಳಿದರು.
ಒಂದು ದಿನ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಒಂದು ಸುತ್ತೋಲೆ ಸಿಕ್ಕಿತು: ಪ್ರತಿ ಶಾಲೆಯಲ್ಲಿ “ಮಕ್ಕಳ ಹಕ್ಕುಗಳ ಸಂಘ” ಇರಬೇಕು ಎಂಬುದು ಅದರ ಪ್ರಮುಖ ಅಂಶ. ಇದು ನನ್ನ ತಲೆಯಲ್ಲಿ ಕಿಡಿಯೊಂದನ್ನು ಹೊತ್ತಿಸಿತು. ಮರುದಿನ ಬಸ್‌ನಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಬಗ್ಗೆ ಮಕ್ಕಳೊಂದಿಗೆ ಮಾತಾಡಿದೆ. ಮಕ್ಕಳು ಉತ್ಸಾಹದಿಂದ ಕೇಳಿದರು. ಎರಡು ವಾರಗಳ ಕಾಲ ಈ ವಿಷಯವನ್ನು ಚರ್ಚಿಸಿದೆ. ನಂತರದ ದಿನಗಳಲ್ಲಿ ಮಕ್ಕಳು ತಮ್ಮ ಹಳ್ಳಿಗಳಲ್ಲಿ ಶಾಲೆ ಬಿಟ್ಟ ಮಕ್ಕಳು, ಬಾಲಕಾರ್ಮಿಕರು, ಅನಾಥ ಮಕ್ಕಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಪ್ರಶಾಂತ್ ಎಂಬ ಹುಡುಗ, “ಅಂಕಲ್, ನಮ್ಮ ಊರಲ್ಲಿ ಒಬ್ಬ ಹುಡುಗ ಕೆಲಸಕ್ಕೆ ಹೋಗ್ತಾನೆ, ಶಾಲೆಗೆ ಬರ್ತಿಲ್ಲ,” ಎಂದ. ಜಾನ್ , “ನಮ್ಮ ಶಾಲೆಯಲ್ಲಿ ಕೆಲವರಿಗೆ ಊಟ ಸಿಗುತ್ತಿಲ್ಲ,” ಎಂದ ಇದು ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳು ತಿಳಿದು ಕೊಳ್ಳುತ್ತಿದ್ದಾರೆ, ಮಕ್ಕಳ ಸಮಸ್ಯೆ ಗುರುತಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಒಂದು ದಿನ, “ನಾವು ಈ ಬಸ್‌ನಲ್ಲಿ ಮಕ್ಕಳ ಹಕ್ಕುಗಳ ಸಂಘ ಮಾಡೋಣವೇ?” ಎಂದು ಕೇಳಿದೆ. ಎಲ್ಲರೂ ಒಕ್ಕೊರಲಿನಿಂದ “OK ಅಂಕಲ್!” ಎಂದು ಕೂಗಿದರು. ಪ್ರಯಾಣಿಕರೊಬ್ಬರು, “ಸಾರ್, ಇದು ಒಳ್ಳೆ ಐಡಿಯಾ, ಬಸ್‌ನಲ್ಲಿ ಇಂತಹದ್ದೊಂದು ಗುಂಪು ಇದ್ದರೆ ಮಕ್ಕಳಿಗೆ ಒಳ್ಳೆಯದು,” ಎಂದರು. ಪ್ರತಿದಿನ ಪ್ರಯಾಣ ಮಾಡುತಿದ್ದ ವಿಧಾನಸೌಧದ ಸಿಬ್ಬಂದಿ ರಾಮಯ್ಯ, “ನಿಮ್ಮ ಈ ಕೆಲಸಕ್ಕೆ ಬಸ್‌ಗೆ ಒಂದು ಹೊಸ ಗೌರವ ಬಂದಿದೆ,” ಎಂದರು. ಹೀಗೆ, “293K Child Rights Club” (293K CRC) ಜನ್ಮ ತಾಳಿತು. ಪ್ರಶಾಂತ್, ಕಿರಣ್, ರಾಜು, ಜಾನ್, ಸೋನಿ, ಇಕ್ಬಾಲ್ ಸೇರಿ 15 ಮಕ್ಕಳು ಸದಸ್ಯರಾದರು.
ನಮ್ಮ ಕಚೇರಿಯಿಂದ 1098 CHILDLINE, ಬಾಲಕಾರ್ಮಿಕರ ಬಗ್ಗೆ ಪೋಸ್ಟರ್‌ಗಳನ್ನು ತಂದು ಬಸ್‌ನ ಕೊನೆಯ ಸೀಟಿನ ಮೇಲೆ ಅಂಟಿಸಿದೆ.,ಕಂಡಕ್ಟರ್ “ಸಾರ್, ಇದು ಮಕ್ಕಳಿಗೆ ಒಳ್ಳೆ ಮಾಹಿತಿ,” ಎಂದು ಮೆಚ್ಚಿದರು. ಒಂದು ದಿನ, ಕಂಡಕ್ಟರ್ ಮಗನ ಗೆಳೆಯ ರಾಜು, “ನಾಳೆ ಕಂಡಕ್ಟರ್ ಅಂಕಲ್‌ನ ಹುಟ್ಟುಹಬ್ಬ,” ಎಂದ. ಆ ಸಂಜೆ “ಮಕ್ಕಳ ಸ್ನೇಹಿ ನಿವಾಹಕರು” ಎಂದು ಬರೆದ ಕೇಕ್ ತಂದೆ. ಮರುದಿನ, ಕಣ್ಣೂರು ದಾಟಿದಾಗ ಮಕ್ಕಳು “Happy Birthday!” ಎಂದು ಕೂಗಿ ಕೇಕ್ ತೋರಿಸಿದರು. ಕಂಡಕ್ಟರ್ ಗಾಬರಿಯಾದರೂ, “ಓಹ್, ಥ್ಯಾಂಕ್ಸ್!” ಎಂದು ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದರು. “ನನ್ನ 20 ವರ್ಷದ ಸರ್ವೀಸ್‌ನಲ್ಲಿ ಇಂತಹ ಸಂಭ್ರಮ ಇದೇ ಮೊದಲು,” ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರಿತ್ತು . ಒಬ್ಬ ಪ್ರಯಾಣಿಕ, ಸಿದ್ದರಾಜು “ಈ ಬಸ್‌ನಲ್ಲಿ ಇಂತಹ ಸಂತೋಷದ ಕ್ಷಣ ಕಾಣಲು ಖುಷಿಯಾಯಿತು,” ಎಂದು ನನ್ನ ಕೈ ಕುಲುಕಿದರು. ಈ ಘಟನೆ 293K CRCಯನ್ನು ಇನ್ನಷ್ಟು ಗಟ್ಟಿಗೊಳಿಸಿತು.
ಒಂದು ದಿನ, ಇಂಗ್ಲಿಷ್ ಶಿಕ್ಷಕರೊಬ್ಬರು ಮಕ್ಕಳಿಗೆ ತೀವ್ರವಾಗಿ ಹೊಡೆಯುತ್ತಾರೆ ಎಂದು ಒಂದು ಶಾಲೆಯ ಮಕ್ಕಳಿಂದ ದೂರು ಬಂತು. ಬೆಳಗ್ಗೆ 8:30ಕ್ಕೆ ಮಕ್ಕಳು ಈ ವಿಷಯ ತಿಳಿಸಿದರು. ಕೂಡಲೇ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ಬಸ್ ಇಂದಲೇ ಕರೆ ಮಾಡಿ ವಿಚಾರ ತಿಳಿಸಿ, ಶಾಲೆಯ ಇಮೇಲ್ ಮತ್ತು ದೂರವಾಣಿ ಸಂಖ್ಯೆ ನೀಡಿದೆ. 9:30ರ ವೇಳೆಗೆಅವರು ಶಾಲೆಯ ಇಮೇಲ್ ಗೆ ನೋಟಿಸ್ ಕಳುಹಿಸಿದ್ದರು. ಪ್ರಾಂಶುಪಾಲರು ಶಿಕ್ಷಕರಿಗೆ ಬುದ್ಧಿವಾದ ಹೇಳಿ, ಮಕ್ಕಳಿಗೆ ಭರವಸೆ ನೀಡಿದರು. ಈ ಘಟನೆಯಿಂದ ಮಕ್ಕಳು ಉತ್ಸಾಹಗೊಂಡರು. ದೂರುಗಳು ಜಾಸ್ತಿಯಾದವು. ಪೋಷಕರಿಂದ ಪ್ರಯಾಣಿಕರಿಂದ ಪ್ರಶಂಶೆ ಕೂಡ ಜಾಸ್ತಿಯಾಯಿತು. ಮತ್ತೊಂದು ದಿನ, ಒಂದು ಶಾಲೆಯ ಮುಂದೆ ಬಸ್ ನಿಲ್ಲದಿರುವ ಸಮಸ್ಯೆಯ ಬಗ್ಗೆ ದೂರು ಬಂತು. ಶಾಲೆಗೆ ಅರ್ಧ ಮೈಲಿ ದೂರದಲ್ಲಿ ಬಸ್ ನಿಲ್ಲುತ್ತಿತ್ತು. ಈ ಬಗ್ಗೆ ಡಿಪೋ ಮ್ಯಾನೇಜರ್‌ಗೆ ಪತ್ರ ಬರೆದರೂ ಪ್ರತಿಕ್ರಿಯೆ ಬರಲಿಲ್ಲ. ಆಗ, ಈ ವಿಷಯವನ್ನು ಮಾಧ್ಯಮಗಳಿಗೆ ಕಳುಹಿಸಿದೆ.
ಒಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿ, ಅಧಿಕಾರಿಗಳು ಕೂಡಲೇ ಶಾಲೆಯ ಮುಂದೆ ಬಸ್ ನಿಲ್ಲಿಸುವಂತೆ ಆದೇಶಿಸಿದರು. ಆ ಶಾಲೆಯಲ್ಲಿ ನಡೆದ ಒಂದು ಸಭೆಗೆ ನನ್ನನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಿದ್ದರು.
293K CRCಯ ಕೆಲಸ ಮಾಧ್ಯಮಗಳ ಗಮನ ಸೆಳೆಯಿತು. ದಿ ಹಿಂದೂ ಪತ್ರಿಕೆ, “ಈ ಬಸ್ ಮಕ್ಕಳ ಹಕ್ಕುಗಳ ತೊಟ್ಟಿಲು” ಎಂದು ವರದಿ ಮಾಡಿತು (ನವೆಂಬರ್ 25, 2014) ವರದಿಯಲ್ಲಿ, “BMTC ಬಸ್ ಒಂದು ಸಾಮಾನ್ಯ ಸಾರಿಗೆಯಾಗಿ ಉಳಿಯದೆ, ಮಕ್ಕಳ ಹಕ್ಕುಗಳಿಗಾಗಿ ಒಂದು ಚಿಕ್ಕ ಆಂದೋಲನವಾಗಿ ಪರಿವರ್ತನೆಗೊಂಡಿದೆ” ಎಂದು ಬರೆಯಿತು.
ಈ ಬಸ್‌ನಲ್ಲಿ 15 ಗ್ರಾಮೀಣ ಶಾಲೆಗಳ 15-20 ಮಕ್ಕಳು, ಚಿಲ್ಡ್ರನ್ ರೈಟ್ಸ್ ಕ್ಲಬ್‌ನ ಸದಸ್ಯರಾಗಿ, ಶಿಕ್ಷಣ, ಆರೋಗ್ಯ, ರಕ್ಷಣೆಯ ಹಕ್ಕುಗಳ ಬಗ್ಗೆ ಚರ್ಚಿಸುತ್ತಾರೆ. ಈ ಆಂದೋಲನ ಸಮಾಜದಲ್ಲಿ ಮಕ್ಕಳ ಧ್ವನಿಯನ್ನು ಬಲಪಡಿಸಿದೆ ಎಂದು ವರದಿ ತಿಳಿಸಿತು. ಆ ದಿನ ಬಸ್‌ನಲ್ಲಿ ಹಬ್ಬದ ವಾತಾವರಣ.ಕಂಡಕ್ಟರ್, “ಸಾರ್, ನಿಮ್ಮ ಕೆಲಸಕ್ಕೆ ನಮ್ಮ ಬಸ್ ಫೇಮಸ್ ಆಯಿತು!” ಎಂದರು.ಪತ್ರಿಕೆಯ ಸುದ್ದಿಯನ್ನು ಇತರ ಪ್ರಯಾಣಿಕರಿಗೆ ಹೆಮ್ಮೆಯಿಂದ ತೋರಿಸುತ್ತಿದ್ದರು. ಡ್ರೈವರ್ ಹೇಳಿದ್ದು, “ನಾನು 15 ವರ್ಷದಿಂದ ಬಸ್ ಓಡಿಸುತ್ತಿದ್ದೇನೆ, ಆದರೆ ಇಂತಹ ಕೆಲಸ ಇದೇ ಮೊದಲು,” ಎಂದು. ಪ್ರಯಾಣಿಕರೊಬ್ಬರು, “ಈ ಬಸ್‌ನಲ್ಲಿ ಪ್ರಯಾಣಿಸುವುದೇ ಒಂದು ಒಳ್ಳೆಯ ಅನುಭವವಾಯಿತು,” ಎಂದು ಹೇಳಿದ್ದು ಇಂದಿಗೂ ನನಗೆ ನೆನಪಿದೆ. ಮಕ್ಕಳ ತಂದೆ-ತಾಯಿಯರೂ, “ನಮ್ಮ ಮಕ್ಕಳಿಗೆ ಇಂತಹ ಒಳ್ಳೆಯ ಮಾರ್ಗದರ್ಶನ ಸಿಕ್ಕಿದೆ,” ಎಂದು ಹೆಮ್ಮೆಪಟ್ಟರು.
ಸೀಟು ಸಿಗಲಿ ಎಂದು ಆರಂಭವಾದ ಪ್ರಕರಣ, ಮಕ್ಕಳ ಹಕ್ಕುಗಳ ಆಂದೋಲನವಾಯಿತು. ವರ್ಷಗಳ ನಂತರವೂ 293K CRCಯ ಕೆಲವು ಸದಸ್ಯರು ಭೇಟಿಯಾಗುತ್ತಾರೆ., ಈಗ ಪೋಷಕರಾಗಿರುವ ಅವರು, “ಅಂಕಲ್, ನಿಮ್ಮ ಕಥೆಗಳಿಂದ ನಾವು ಕಲಿತದ್ದು ಈಗಲೂ ಜೀವನದಲ್ಲಿ ಉಪಯೋಗವಾಗುತ್ತಿದೆ,” ಎನ್ನುತ್ತಾರೆ. ಈ ಬಸ್, ಕೇವಲ ಸಾರಿಗೆಯಾಗಿರದೆ, ಮಕ್ಕಳ ಧ್ವನಿಯಾಗಿ, ಸಮಾಜದ ಬದಲಾವಣೆಯ ತೊಟ್ಟಿಲಾಗಿದ್ದು ಈಗಲೂ ಕನಸಿನಂತೆ ಕಾಣುತ್ತದೆ.
–ನಾಗಸಿಂಹ ಜಿ ರಾವ್

Nagasimha always guides childrens and society in right path. Good mentor. Knowledgeable person. He has taken small village name(Chagalaty) to different level.