ಅನುಶ್ರೀ ತಂದೆಯೊಂದಿಗೆ ಪಟ್ಟಣಕ್ಕೆ ಬಂದಳು. ರೈಲು ನಿಂತಲ್ಲೆಲ್ಲಾ ಎಲ್ಲಿ ಇಳಿದರೆ ಒಳ್ಳೇದು ಅಂತ ಯೋಚಿಸುತ್ತಿದ್ದ ಶಿವಪ್ಪ. “ಎಪ್ಪಾ ಗೊತ್ತು ಕೂನ ಇಲ್ಲದಾರ ಹತ್ರ ಏನೂ ಕೇಳ್ ಬ್ಯಾಡಪ್ಪ ಸುಮ್ಕಿರು” ಎಂದಳು ಅನುಶ್ರಿ. ತಂದೆ, “ಸೈ ಬಿಡವ್ವಾ ಹಂಗಂದ್ರ ನಮಗ ಗೊತ್ತಿರೂ ಮಂದಿ ಅದಾರೇನಬೇ ಇಲ್ಲೀ” ಎಂದಾಗ ಅನುಶ್ರೀ ಪೆದ್ದಳಂತೆ ಕುಳಿತಳು.
ಪಕ್ಕದಲ್ಲಿ ಕುಳಿತಿದ್ದ ವೃದ್ಧರೊಬ್ಬರು, “ನೀವು ಎಲ್ಲಿ ಇಳಿಯಬೇಕಿದೆ” ಎಂದು ಕೇಳಿದರು. ಶಿವಪ್ಪ ಅವರಿಗೆ ಉತ್ತರಿಸದೇ ಮಗಳ ಮುಖ ನೋಡಿದನು. ಆಗ ಅನುಶ್ರೀಯೇ, “ಅಜ್ಜಾರ ಬೆಂಗಳೂರು ಇನ್ನೂ ದೂರೈತೇನ್ರೀ, ನೀವು ಎಲ್ಲಿ ಇಳಿಯಾರು?” ಎಂದು ಕೇಳಿದಳು. ಆ ವೃದ್ಧರು ಇವಳ ಮಾತಿನ ಧಾಟಿಯಿಂದ ಗುರುತಿಸಿ, “ನೀವು ಧಾರವಾಡ ಕಡೆಯವರು ಅಂತ ಅನ್ಸುತ್ತೆ” ಎಂದರು. ಶಿವಪ್ಪ, “ಹೌದುರಿ” ಎಂದನು. ವೃದ್ಧರು ಹೇಳಿದರು. “ನಾನು ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಇರೋದು. ನೀವೆಲ್ಲಿಗೆ ಹೋಗ್ಬೇಕು. ಇದೇ ಮೊದಲು ಅಂತ ಕಾಣ್ಸುತ್ತೆ ನೀವು ಇಲ್ಲಿಗೆ ಬಂದಿದ್ದು” ಎಂದರು.
“ಹೌದ್ರೀ, ನಾನು ಕೆಲಸಕ್ಕಂತ ಈ ಕಡೆ ಬಂದೀನಿ. ಇದು ನನ್ನ ಮಗಳು ಅನುಶ್ರೀ” ಎಂದನು. ತಂದೆ ಯಾವಾಗಲೂ ತನಗೆ ಅನ್ನವ್ವ ಎಂದೇ ಕರೆಯುತ್ತಿದ್ದವನು ಆ ಅಜ್ಜಪ್ಪನೆದುರಿಗೆ ‘ಅನುಶ್ರೀ’ ಅಂತ ಪರಿಚಯ ಮಾಡಿದ್ದು ಹುಡುಗಿಗೆ ತುಸು ಖುಷಿಯಾಯಿತು. ವೃದ್ಧರು, “ಒಳ್ಳೇದು, ನಿಮ್ಮ ಹೆಸರೇನು? ಈಗಾಗಲೇ ನೀವು ಹೊಸಬರು ಅಂತ ಗೊತ್ತಾಯ್ತು. ಎಲ್ಲಿ ಇಳಿತೀರಾ? ಇರೋದಕ್ಕೆ ವ್ಯವಸ್ಥೆ ಹ್ಯಾಗೆ?” ಎಂದರು. “ನನ್ನ ಹೆಸರು ಶಿವಪ್ಪ, ನಮಗ ಹಳ್ಳಿ ವಾತಾವರಣ ಇರೂ ಕಡೆ ಮನಿ ನೋಡ್ಬೇಕ್ರೀ. ನಾವು ಎಲ್ಲಿ ಇಳಿದರ ಅಂಥ ಮನಿ ಸಿಗ್ತಾವು ಹೇಳ್ರಿ ಸ್ವಲ್ಪ” ಶಿವಪ್ಪ ವಿನಮ್ರನಾಗಿ ಕೇಳಿದ. ವೃದ್ಧರು ಶಿವಪ್ಪನ ಮಗಳ ಕಡೆ ನೋಡಿದರು. ತುಂಬಾ ಚೆಲುವೆಯರ ಸಾಲಿನಲ್ಲಿ ಎದ್ದು ಕಾಣುವ ಹುಡುಗಿ. ಈ ಗಂಡಸು ನೋಡಿದರೆ ರೈತ ಜನ ಎಂದು ಆತನ ಪಂಜೆಯಿಂದಲೇ ತಿಳಿಯುತ್ತದೆ. ಪಾಪ! ಮಗುವಿಗೆ ತಾಯಿ ಇಲ್ಲವೇನೋ ಎಂದುಕೊಂಡು, “ಅನುಶ್ರೀಗೆ ತಾಯಿ ಇದ್ದಾರೇನಯ್ಯಾ?” ಎಂದರು. “ಇಲ್ರೀ ನಮ್ಮಾಕಿ ತರ‍್ಕೊಂಡು ದೀಡು ವರ್ಷಾತು. ಈಗ ನನಗ ದಿಕ್ಕಂದ್ರ ಮಗಳೊಂದಾ” ಎಂದಾತನ ಮುಖ ಬಾಡಿದಂತಾಗಿತ್ತು. ಅಷ್ಟು ಹೊತ್ತಿಗೆ ರೈಲು ನಿಂತಿತು. ತುಮಕೂರಿನಲ್ಲಿ ಹತ್ತಿದ ಪ್ರಯಾಣಿಕರಲ್ಲಿ ಒಬ್ಬ ತರುಣ ಅನುಶ್ರೀ ಕುಳಿತಿದ್ದ ಬೋಗಿಗೆ ಬಂದನು. ಅವನು ನೂಕು ನುಗ್ಗಲಿನಲ್ಲಿ ನಿಲ್ಲುವುದಕ್ಕಾದರೂ ಒಂದಿಷ್ಟು ಜಾಗ ಮಾಡಿಕೊಳ್ಳಲು ಪರದಾಡುತ್ತಿರುವುದನ್ನು ಅನುಶ್ರೀ ಗಮನಿಸುತ್ತಿದ್ದಳು. ತರುಣನಿಗೆ ನಿಲ್ಲುವುದಕ್ಕೆ ಜಾಗ ದೊರೆತಾಗ ಕುಳಿತವರ ಮೇಲೆ ದೃಷ್ಟಿ ಹಾಯಿಸಿದನು. ಅನುಶ್ರೀ ಎವೆ ಇಕ್ಕದೇ ಅವನನ್ನೇ ನೋಡುತ್ತಿದ್ದಳು. ಅಕಸ್ಮಾತ್ ಎಂಬಂತೆ ಇಬ್ಬರ ದೃಷ್ಟಿಯೂ ಸಂಧಿಸಿದಾಗ ಆ ಹುಡುಗನಿಗೆ ಮೈ ಜುಮ್ ಅಂತ ಬೆವರು ಬಂದಂತೆನಿಸಿತು. ಲಂಗ ದಾವಣಿಯಲ್ಲಿ ಇಷ್ಟೊಂದು ಮೋಹಕವಾಗಿ ಕಾಣುವ ಉದ್ದ ಜಡೆಯ, ಸರ್ವಾಂಗ ಸುಂದರಿಯಾದ ಈ ತರುಣಿ ಎಲ್ಲಿಂದ ಎಲ್ಲಿಗೆ ಹೋಗುತ್ತಿರಬಹುದು ಎಂದುಕೊಂಡನು.
ಅವನು ಆನಂದಾಶ್ಚರ್ಯಗಳಿಂದ ನೋಡುವುದನ್ನು ಮುಂದುವರೆಸಿದಾಗ ಅನುಶ್ರೀ ಒಂದೆರಡು ಕ್ಷಣ ನೋಡಿ ಒಂಥರಾ ನಾಚಿಕೆ ಬಂದಂತಾಗಿ ಹೊರಗಡೆ ಕಣ್ಣು ಹಾಯಿಸಿದಳು. ಅವನಿಗಾದರೊ ಆಕೆಯಿಂದ ಕಣ್ಣು ಕೀಲಿಸಿ ಬೇರೆಡೆಗೆ ನೋಡಲಾಗುತ್ತಿಲ್ಲ. ತನ್ನ ಜೀವಮಾನದಲ್ಲೇ ಇಂತಹ ರೂಪರಾಶಿಯನ್ನು ನೋಡಿಲ್ಲವೆಂದುಕೊಂಡನು. ಮತ್ತೆ ಅನುಶ್ರೀ ಸ್ವಲ್ಪ ಸಂಕೋಚದಿಂದಲೇ ಬೆಳ್ಳಿ ಬಟ್ಟಲದಂತಹ ತನ್ನ ಕಣ್ಣುಗಳನ್ನು ಆ ಕಡೆ ಈ ಕಡೆ ತಿರುಗಿಸಿದಳು. ತಂದೆ ಮತ್ತು ವೃದ್ಧರು ಏನನ್ನೋ ಮಾತಾಡುತ್ತಿದ್ದರು. ಈ ಹುಡುಗರ ಕಡೆ ಅವರ ಲಕ್ಷ÷್ಯ ಇರಲಿಲ್ಲ. ಉಳಿದ ಪ್ರಯಾಣಿಕರು ತಮ್ಮ ಚೀಲಗಳನ್ನು ಅಣಿಗೊಳಿಸಿಕೊಂಡು ತಾವು ಇಳಿಯಬೇಕಾಗಿರುವ ತಾಣದತ್ತ ನಿರೀಕ್ಷಿಸುತ್ತಿದ್ದರು. ಅನುಶ್ರೀ ಸ್ವಲ್ಪ ಧೈರ್ಯದಿಂದ ಮತ್ತೆ ಆ ಹುಡುಗನೆಡೆಗೆ ನೋಡಿದಳು. ಅವನೂ ಕೂಡ ಅದೇ ಮೋಹಕ ಕಂಗಳಿಂದ ದಿಟ್ಟಿಸುತ್ತಲೇ ಇದ್ದನು. ಅವಳು ಅವನ ಸುಂದರ, ಬಲಾಢ್ಯ ನಿಲುವನ್ನು ಕಂಡು ವಿಸ್ಮಿತಳಾದಂತೆನ್ನಿಸಿತು. ಮರುಕ್ಷಣವೇ ಅವಳ ಕಂಗಳ ಹೊಳಪು ಮಾಯವಾಗಿ ಡಿಮ್ ಆದ ಬಲ್ಬ್ಗಳಂತಾದುದನ್ನು ತರುಣ ಗಮನಿಸಿದನು. ಈಕೆ ಈ ಮಧವಯಸ್ಕನ ಮಗಳೋ, ವೃದ್ಧರ ಸಂಬಂಧಿಕಳೋ ತಿಳಿಯಬೇಕೆನ್ನಿಸಿತು. ಈ ವೃದ್ಧರನ್ನು ಎಲ್ಲಿಯೋ ನೋಡಿದಂತಿದೆಯಲ್ಲಾ ಎಂದುಕೊಂಡನು. ಆ ಹೊತ್ತಿಗೆ ವೃದ್ಧರು, “ಶಿವಪ್ಪ ನಮ್ಮನೆ ಚಿಕ್ಕ ಬಾಣಾವರದಲ್ಲಿದೆ ಅಂತ ಹೇಳಿದೆನೆಲ್ಲಾ, ನಮ್ಮನೆಯಿಂದ ಒಂದು ಕಿ.ಮೀ ದೂರದಲ್ಲಿ ಕೆರೆಗುಡ್ಡದ ಹಳ್ಳಿ ಅಂತ ಚಿಕ್ಕದು ಹಳ್ಳಿ ಇದೆ. ಬಸ್ಸಿಳಿದು ಐದಾರು ಮನೆಗಳನ್ನು ದಾಟಿದರೆ ಅಲ್ಲೊಂದು ‘ಶಶಿ ಕಿರಾಣಿ ಸ್ಟೊರ‍್ಸ್’ ಅಂತ ಅಂಗಡಿ ಇದೆ. ಆ ಅಂಗಡಿಯಲ್ಲಿ ವಿಚಾರಿಸಿದರೆ ನಿಮಗೆ ಮನೆ ಕೊಡಿಸುವರು” ಎಂದರು. ಶಿವಪ್ಪ ತುಸು ಅನುಮಾನದಿಂದ, “ನೀವಾ ನಮ್ಮ ಕೂಟ ಬಂದು ಮನಿ ಬಗ್ಗೆ ಮಾತಾಡಿ ಹೊಂದಿಸೀದ್ರ ಚೊಲೊ ಆಕ್ಕೆöÊತ್ರಿ. ನಮಗ ಬಾಡಿಗಿ ಇದ್ದು ಗೊತ್ತಿಲ್ಲ. ರೇಟು ಹೆಚ್ಚೂ ಕಮ್ಮಿ ಆಗ್ಬೋದು. ಅದಕ್ಕಾ ನೀವಾ ನಮ್ಮ ಕೂಟ ಬಂದ್ರ ಭಾಳ ಪುಣ್ಯ ಬರುತ್ರೀ” ಎಂದನು ದೈನ್ಯದಿಂದ. ಅವರ ಮಾತುಗಳನ್ನು ಕೇಳಿಸಿಕೊಂಡ ಆ ತರುಣನಿಗೆ ಒಳಗೊಳಗೆ ಖುಷಿಯಾಗತೊಡಗಿತು. ವೃದ್ಧರು ಮನೆ ತೋರಿಸಲು ಹಿಂಜರಿದರೆ ತಾನು ಈ ತಂದೆ-ಮಗಳಿಗೆ ಸಹಾಯ ಮಾಡಲು ಮುಂದಾಗಬಹುದೆಂದುಕೊಂಡಿದ್ದ.
ಆ ಹೊತ್ತಿಗೆ ರೈಲಿನ ವೇಗ ದ್ರಕ್ ದ್ರಕ್ ಅಂತ ಕಡಿಮೆಯಾಗುತ್ತ ಬಂದಿತು. ವೃದ್ಧರು, “ಅಕೊ, ಅದೇ ಬಾಣಾವರ. ಲಗೇಜ್ ತಗೊಳ್ಳಿ. ಏಳಮ್ಮ ಇಲ್ಲೇ ಇಳೀರಿ. ನಾನು ನಿಮ್ಮ ಜೊತೆ ಕೆರೆಗುಡ್ಡದ ಹಳ್ಳಿಗೆ ಬಂದು ಮನೆ ತೋರಿಸುತ್ತೀನಿ” ಎಂದರು. ತಂದೆ-ಮಗಳು ಕೃತಜ್ಞತೆಯಿಂದ ಅವರ ಕಡೆ ನೋಡಿದರು. ಶಿವಪ್ಪ, “ಹೂನ್ರಿ, ಅಷ್ಟು ಮಾಡೀದ್ರ ನಿಮಗ ಪುಣ್ಯ ಬರುತ್ರೀ” ಎಂದನು. ‘ಪುಣ್ಯಾನೋ ಪಾಪನೋ ಹೊಟ್ಟೆ ಪಾಡಿಗಾಗಿ ಮನುಷ್ಯ ಎಲ್ಲಿಂದ ಎಲ್ಲಿಲ್ಲಿಗೊ ಅಲೆದಾಡಬೇಕು ನೋಡು…’ ಅಂತ ಮನಸ್ಸಿನಲ್ಲೇ ಮಾತಾದರು ವೃದ್ಧರು. ಹುಡುಗ ಮನಸ್ಸಿನಲ್ಲೇ, “ಅಬ್ಬಾ! ಚೆಲ್ವಿ, ಅಂತೂ ನಾನಿರೋ ಕಡೆಯೇ ಬರುತ್ತೀಯಲ್ಲಾ ಅಷ್ಟು ಸಾಕು. ನೀನು ನನ್ನ ಮನಸ್ಸಿಗೆ ಬಂದವಳು, ನನ್ನ ಮನೆಗೂ ಬರಬೇಕು. ಬರಲೇಬೇಕು. ನನಗಿದು ಅಸಾಧ್ಯವಲ್ಲ” ಎಂದುಕೊಂಡು ಮತ್ತೆ ಅನು ಕಡೆ ಆರಾಧನಾ ನೋಟ ಹರಿಸಿದನು. ಆಕೆ ಈ ಸಲ, “ಇವನಿಗೇನು ಬ್ಯಾರೆ ದಗದನಾ ಇಲ್ಲ. ಗಾಡ್ಯಾಗ ಸಿಕ್ಕಾರನ್ನೆಲ್ಲಾ ಹಿಂಗಾ ತಿದು ಹಾಕಾರಂಗ ನೋಡ್ತಾನ” ಅಂತ ಒಟಗುಟ್ಟಿಕೊಂಡಳಾದರೂ ಅವನ ಮೇಲೆ ಪೂರ್ಣ ಸಿಟ್ಟುಮಾಡಿಕೊಳ್ಳಲಾಗಲಿಲ್ಲ. ಅವಳ ಕೆಂಪೇರಿದ ಮುಖವನ್ನು ನೋಡಿ ಅವನು ತುಟಿಗಳು ಮುಗುಳ್ನಕ್ಕವು.
ರೈಲು ನಿಂತಿತು. ಶಿವಪ್ಪ ಅನುಶ್ರೀ ಲಗೇಜಿನೊಂದಿಗೆ ಇಳಿದರು. ವೃದ್ಧರು ತಮ್ಮ ಛತ್ರಿ ತೆಗೆದುಕೊಂಡು ಮುಂದೆ ಮುಂದೆ ಹೊರಟರು. ಈ ಹುಡುಗನೊ ಅವರ ಹಿಂದೆ ಹೊರಟನು. ಅನುಶ್ರೀ ಲಗೇಜನ್ನು ಕೈಯಿಂದ ಕೈಗೆ ಬದಲಾಯಿಸುತ್ತ ಬಳುಕುತ್ತಾ ಹೊರಟಳು. ಹಿಂತಿರುಗಿ ನೋಡಿದಾಗ ಕೆಂಪಾದಳು, “ ಥೂ ನಾಚಿಕೆಗೇಡಿ ಹುಡುಗ ಹಿಂದಿಂದ ಬಂದಿದ್ದೂ ಅಲ್ದಾ ಸಣ್ಣಗೆ ನಗಾಕ್ಹತ್ಯಾನ ತನ್ನ ಕಂಡು” ಅಂತ ಮನಸ್ಸಿನಲ್ಲೇ ಚಡಪಡಿಸಿದಳು. ರಿಕ್ಷಾ ನಿಲ್ದಾಣದವರೆಗೆ ನಡೆದು ಬಂದ ವೃದ್ಧರು ಒಂದು ರಿಕ್ಷಾಕ್ಕೆ ಹತ್ತುವಂತೆ ತನ್ನ ಸಂಗಡಿಗರಿಗೆ ತಿಳಿಸಿದರು. ತಂದೆ ಮಗಳು ರಿಕ್ಷಾ ಹತ್ತಿ ಕುಳಿತರು. ವೃದ್ಧರು ಡ್ರೆöÊವರ್ ಪಕ್ಕ ಕುಳಿತರು. ಹುಡುಗ ಕೊನೆ ಸಲ ಎಂಬಂತೆ ಮತ್ತೆ ಅನುಶ್ರೀ ಕಡೆ ನೋಡಿದನು. ಆಕೆ ಪಿತ್ತ ನೆತ್ತಿಗೇರಿದಂತೆ ಕಣ್ಣು ಕೊಂಕಿಸಿ ನೋಡಿದಾಗಲೂ ಚೆಲುವಾಗೇ ಕಂಡಳು. ಹಾಗೆಂದುಕೊಂಡು ಅವನು ‘ಶಿವಾನಿ ಎಲೆಕ್ಟಿçಕಲ್ಸ್’ ಮುಂದೆ ಬಿಟ್ಟಿದ್ದ ತನ್ನ ಹೀರೊ ಹೊಂಡಾದ ಕಣ್ಣಿಗೆ ಚಾವಿ ಚುಚ್ಚಿ ಕಿವಿ ಹಿಂಡಿದನು. ರಿಕ್ಷಾ ನಾಲ್ಕಾರು ಮಾರು ದೂರ ಸಾಗುವಷ್ಟರಲ್ಲೇ ಚೈತನ್ ಬೈಕ್ ಹತ್ತಿಕೊಂಡು ರಿಕ್ಷಾವನ್ನು ಹಿಂದೆ ಹಾಕಿ ಮುಂದೆ ಓಡಿದನು. ಬೈಕ್‌ನ ಕನ್ನಡಿಯಲ್ಲಿ ಸುಂದರಿಯನ್ನು ನೋಡಿ ತನ್ನಷ್ಟಕ್ಕೆ ಸಣ್ಣಗೆ ಸಿಳ್ಳು ಹಾಕಿಕೊಂಡು ಹೋದನು. ಅವರು ಎಲ್ಲಿ ಇಳಿಯಬಹುದು? ಬಹುಶಃ ಜ್ಯೋತಿಯ ಮನೆಯ ಹತ್ತಿರ. ಅಲ್ಲಿ ನಾಲ್ಕು ತಿಂಗಳಿಂದ ಒಂದು ಮನೆ ಖಾಲಿ ಇದೆ. ಜ್ಯೋತಿಗೆ ಹೇಗೋ ಇದು ತಿಳಿದೇ ತಿಳಿಯುತ್ತೆ ಎಂದುಕೊಂಡನು.
ತಿಮ್ಮಣ್ಣಜ್ಜನಿಗೆ ದಿಕ್ಕು ತೋಚದಂತಾಗಿತ್ತು. ಬೀಗ ಜಡಿದ ಶಿವಪ್ಪನ ಮನೆ ಕಂಡು ಬಂದು ಎರಡು ದಿನಗಳಾಗಿದ್ದವು. ಶಿವಪ್ಪ ಯಾರ ಕಣ್ಣಿಗೂ ಕಾಣದಂತೆ ಊರು ಬಿಟ್ಟು ಹೊರಟು ಹೋಗಿದ್ದು ನಾಲ್ಕಾರು ಒಳ್ಳೆಯ ಮನುಷ್ಯರ ಹೃದಯವನ್ನು ಅಲ್ಲಾಡಿಸಿತ್ತು. ಅಲ್ಲದೇ ಮಲಕಾಜಪ್ಪನ ಜಗಳದ ಪ್ರಕರಣವನ್ನು ಮುಂದಿಟ್ಟುಕೊಂಡು ಅಲ್ಲಲ್ಲಿ ಜನರು ಮಲಕಾಜಪ್ಪ ಮತ್ತು ಅನುಶ್ರೀ ನಡುವೆ ಏನಾದರೂ ನಡೆದಿದ್ದೀತು. ಇಲ್ಲದಿದ್ದರೆ ತಂದೆ-ಮಗಳ್ಯಾಕೆ ಊರು ಬಿಟ್ಟು ಹೋಗುತ್ತಿದ್ದರು ಎಂದು ಅನುಶ್ರೀಯ ನಡತೆಯನ್ನು ಅನುಮಾನಿಸಿ ಮಾತಾಡತೊಡಗಿದ್ದರು. ಇದೆಲ್ಲವನ್ನೂ ಗಮನಿಸುತ್ತಿದ್ದ ತಿಮ್ಮಣ್ಣಜ್ಜ ತಾನು ಪ್ರವಾಸಕ್ಕೆ ಹೋಗಬಾರದಿತ್ತು. ವಿಧಿ ಆ ಸಮಯವನ್ನೇ ಹೊಂಚಿ ಕುಳಿತಿತ್ತೇನೋ ಶಿವಪ್ಪನಿಗೆ ಕಾಡಲು ಅಂತ ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸತೊಡಗಿದ್ದರು.
ತಿಮ್ಮಣ್ಣಜ್ಜ ಮನೆಯ ಆವಾರದಲ್ಲೇ ಹಾಕಿದ್ದ ತನ್ನ ನುಲಿಕೆ ಹೊರಸಿನ ಮೇಲೆ ಕುಳಿತು ಬಿಡುವಿಲ್ಲದ ಯೋಚನೆಗಳಲ್ಲಿ ಮುಳುಗಿದ್ದ. ಎಲೆ ಅಡಿಕೆ ತಿನ್ನಬೇಕೆಂದು ಅಡಿಕೆ ಚೀಲ ತೆಗೆದರೂ ಮೈಮರೆತು ಅದನ್ನು ಸುಮ್ಮನೆ ಹಿಡಿದುಕೊಂಡು ಯೋಚನಾಮಗ್ನನಾಗಿದ್ದ. ಇಂದಲ್ಲಾ ನಾಳೆ ಅಣ್ಣಿಗೆರೆಯಿಂದ ಸಂಗಪ್ಪನ ಮಗ ಬಂದರೆ ಏನು ಹೇಳುವುದು ಎಂಬುದು ದೊಡ್ಡ ಚಿಂತೆಯಾಗಿತ್ತು. “ಅಜ್ಜಾರ ಕಾದಗ ತಗೊರಿ” ಎಂಬ ಧ್ವನಿಗೆ ಅಜ್ಜ ಕಪ್ಪರಿಸಿಕೊಂಡು ಎಚ್ಚರಾದ. “ಆಂ ಕಾಗದನುಪ್ಪಾ? ತತಾ” ಅಂತ ಕೈ ಚಾಚಿ ತೆಗೆದುಕೊಂಡು ನೋಡಿದನು. ಅದು ಅಣ್ಣಿಗೆರೆಯಿಂದ ಸಂಗಪ್ಪ ಬರೆದ ಪತ್ರ. ಸ್ವಲ್ಪ ದುಗುಡದಿಂದಲೇ ಪತ್ರವನ್ನು ಬಿಡಿಸಿ ಓದಿದನು. ಸಂಗಪ್ಪ ತಾವೆಲ್ಲರೂ ಕ್ಷೇಮವೆಂದೂ, ತನ್ನ ಗೆಳೆತನ ಹೀಗೆ ಕೊನೆಯವರೆಗೆ ಇರಲೆಂದೂ ಪ್ರೀತಿಯಿಂದ ಬರೆದಿದ್ದ. ಪ್ರಕಾಶ ರಜೆಯ ನಿಮಿತ್ಯ ಊರಿಗೆ ಬಂದಿದ್ದಾನೆಂದೂ ಪತ್ರ ತಲುಪಿದ ಒಂದೆರಡು ದಿನಗಳಲ್ಲಿ ಪ್ರಕಾಶ ಒಬ್ಬನೇ ಬನ್ನಿಕೊಪ್ಪಕ್ಕೆ ಬಂದು ಅನುಶ್ರೀಯನ್ನು ನೋಡಲಿ, ಆತ ಒಪ್ಪಿಕೊಂಡರೆ ತಮ್ಮ ಅಭ್ಯಂತರ ಇಲ್ಲವೆಂದು, ತಮಗೆ ಮಗನ ಖುಷಿಯೇ ಮೇಲೆಂದು ಸಂಗಪ್ಪ ಪ್ರಾಮಾಣಿಕವಾಗಿ ಹೇಳಿದ್ದನು. ಶಿವಪ್ಪ ಮಗಳೊಂದಿಗೆ ಊರು ತೊರೆದು ಹೋಗಿರದಿದ್ದರೆ ತಾನು ಓಡೋಡಿ ಹೋಗಿ ಅವರಿಗೆ ಈ ಕಾಗದವನ್ನು ತೋರಿಸಿ ಸಂತಸವನ್ನು ಹಂಚಿಕೊಳ್ಳಬಹುದಿತ್ತು. ಆದರೆ ಈಗ ಏನು ಮಾಡುವುದು ಎಂದು ಅಜ್ಜ ಕಣ್ಣಿಗೆ ಹಾಕಿದ್ದ ಚಾಳೀಸನ್ನು ತೆಗೆದು ಮೆಲ್ಲಗೆ ಜಿನುಗುತ್ತಿದ್ದ ಕಂಬನಿ ಒರೆಸಿಕೊಂಡನು. ತಂದೆ ಮಗಳದೊಂದು ಫೊಟೊ ಆದರೂ ತನ್ನ ಕಡೆ ಇಲ್ಲ. ಇದ್ದಿದ್ದರೆ ಪೊಲೀಸ್, ಪತ್ರಿಕೆ ಅಂತ ಏನಾದರೂ ಪ್ರಯತ್ನ ಮಾಡಿ ಹುಡುಕಿಸಬಹುದಿತ್ತು…
ಪ್ರಕಾಶ ಬನ್ನಿಕೊಪ್ಪಕ್ಕೆ ಬರುವುದು ಬೇಡ. ಹೀಗೆ ನಡೆದಿದೆ ಅಂತ ಪತ್ರ ಬರೆದು ಹಾಕಿ ಬಿಡಲೇ ಅಂದುಕೊಂಡನು ಅಜ್ಜ. ಆದರೆ ಪತ್ರ ಅವರ ಕೈ ತಲುಪುವ ಹೊತ್ತಿಗೆ ಐದಾರು ದಿನಗಳೇ ಕಳೆದು ಹೋಗಿರುತ್ತದೆ. ಅಷ್ಟರಲ್ಲಿ ಪ್ರಕಾಶ ಇಲ್ಲಿಗೆ ಬಂದರೂ ಬರಬಹುದು. ಹೇಗಿದ್ದರೂ ಈ ವಿಷಯವನ್ನು ತಿಳಿಸಲೇಬೇಕು. ಪತ್ರ ಬರೆಯುವುದು ಬೇಡ. ಹುಡುಗನ ಹತ್ತಿರವೇ ಹೇಳಿದರಾಯಿತು ಎಂದುಕೊಂಡನು.
ಪ್ರಕಾಶ ತಂದೆಯ ಮಾತಿಗೆ ಹೂಂಗುಟ್ಟಿದನು. ಹುಡುಗಿ ಎಷ್ಟು ಓದಿಕೊಂಡಿದ್ದಾಳೆಂದು ಕೇಳಿದನು. ಎಂಟನೇ ತರಗತಿ ಅಂತ ತಿಳಿದಾಗ ಅವನು ರಾಗ ಎಳೆದನು. “ಅಲ್ಲಪ್ಪಾ ಕಡಿಗಿ ಒಂದು ಸಾದಾ ಡಿಗ್ರಿನಾದ್ರೂ ಆಗ್ಬೇಕಿತ್ತು. ನನಗ ಯಾಕಾ ಅಲ್ಲಿಗಿ ಹೋಗೂದು ಬ್ಯಾಡ ಅನ್ಸುತ್ತಪ್ಪಾ, ತೀರಾ ಎಂಟನೇ ತರಗತಿ ಓದಿದ ಹುಡುಗಿ ಬೆಂಗಳೂರಿನ್ಯಾಗ ನನ್ನ ಜೊತಿ ಹೊಂದಿಕೊಳ್ಳೂದು ಕಷ್ಟ ಅನ್ಸುತ್ತ…” ಎಂದನು. ತಂದೆ ಸಂಗಪ್ಪ, “ ನೋಡು ಪಕ್ಯಾ, ದೊಡ್ಡಾರು ಹೇಳ್ಯಾರ. ಅವರಿಗೆ ರ‍್ಯಾದಿಯಾರ ಕೊಡಬೇಕಾ ಬ್ಯಾಡ, ಈಗಂತೂ ನೀನು ಒಬ್ಬವನಾ ಹೋಗಿ ನೋಡ್ಕೊಂಡು ಬಾ, ನೋಡಿದ ತಕ್ಷಣ ಮದುವೇನ ಆದಂಗಾಗುತ್ತೇನೋ ತಮ್ಮ” ಎಂದಾಗ ಪ್ರಕಾಶ ನಕ್ಕು ಅಪ್ಪನ ಭುಜದ ಮ್ಯಾಲೆ ಕೈ ಹಾಕಿ, “ಆತು ಆತ್ಬಿಡ್ರಿ ಹೋಗಿ ಬಂದ್ರಾತಿಲ್ಲ” ಎಂದು ನಿರುಮ್ಮಳವಾದನು.
ಶಿವಪ್ಪ ಒಂಚೂರೂ ಸುಳಿವು ಕೊಡದೇ ಊರು ಬಿಟ್ಟು ಹೋಗಿ ಬಿಟ್ಟ ಎಂದು ತಿಮ್ಮಣ್ಣಜ್ಜ ಪರಿಪರಿಯಾಗಿ ಚಡಪಡಿಸಿದ. ಆ ದಿನ ಇಳಿಹೊತ್ತಾದರೂ ಅಣ್ಣಿಗೆರೆ ಪ್ರಕಾಶ ಬರಲಿಲ್ಲ. ಬಹುಶಃ ಮರುದಿನ ಬಂದಾನು ಎಂಬ ನಿರೀಕ್ಷೆಯಲ್ಲಿ ತಿಮ್ಮಣ್ಣಜ್ಜನಿದ್ದ. ಆ ಹುಡುಗನಿಗೆ ಏನು ಹೇಳುವುದು, ಹ್ಯಾಗೆ ಹೇಳುವುದು, ಅವನೇನಾದರೂ ತಪುö್ಪ ತಿಳಿದುಕೊಂಡರೆ ಅಂತ ಅಜ್ಜ ಕೈ ಕೈ ಹಿಸುಕಿಕೊಂಡಿತು. ತಿಮ್ಮಣ್ಣಜ್ಜ ಎದ್ದು ಒಳಗೆ ಹೋಗಿ ಕೈಕಾಲು ಮುಖ ತೊಳೆದು ವಿಭೂತಿ ಧರಿಸಿ ದೇವರ ಮುಂದೆ ಪೂಜೆಗೆ ಕುಳಿತನು. ಮೂರೂ ಹೊತ್ತು ಶಿವಪೂಜೆ ಇಲ್ಲದಿದ್ದರೆ ತಿಮ್ಮಣ್ಣಜ್ಜನಿಗೆ ಬದುಕೇ ಇರುತಿರಲಿಲ್ಲವೇನೋ! ಆಗ ಹೊರಗೆ ಮೇವು ಕೊರೆಯುತ್ತಿದ್ದ ಕೆಂಚ ಅಪರಿಚಿತ ತರುಣ ಮನೆಗೆ ಬಂದುದನ್ನು ಕಂಡು, “ರ‍್ರಿ ರ‍್ರಿ ಎಲ್ಲಿಂದ ಬಂದ್ರಿ?” ಎಂದು ವಿಚಾರಿಸಿದನು. ಪ್ರಕಾಶ ಉತ್ತರಿಸಿದಾಗ, “ಹೌದುನ್ರಿ ಕುಂತ್ಕೊರಿ, ಅಜ್ಜಾರು ಪೂಜೆಗೆ ಕುಂತಾರ. ಸ್ವಲ್ಪ ಹೊತ್ತಿನ್ಯಾಗ ಬರ್ತಾರ” ಎಂದು ಕಟ್ಟಿಗೆಯ ಕುರ್ಚಿಯೊಂದನ್ನು ತಂದಿರಿಸಿದನು. ಪ್ರಕಾಶ ಕಾಂಪೌಂಡಿನಲ್ಲಿದ್ದ ಗಿಡ-ಮರಗಳನ್ನು ಹೂಬಳ್ಳಿಗಳನ್ನು ನೋಡಿ ಖುಷಿ ಪಟ್ಟನು. ತಿಮ್ಮಣ್ಣಜ್ಜ ಹೊರಬಂದು ಕೆಂಚ ಎನ್ನುತ್ತ ದೃಷ್ಟಿ ಹರಿಸಿದ. ಕೆಂಚ ಅಲ್ಲೇ ಇದ್ದ ಸೇದುವ ಬಾವಿಯಿಂದ ನೀರೆತ್ತತೊಡಗಿದ್ದ. ಪ್ರಕಾಶ ಎದ್ದು ನಿಂತು, “ನಮಸ್ಕಾರ ಅಜ್ಜಾರ” ಎಂದು ಕೈಜೋಡಿಸಿದನು. “ಅರೆ ಪ್ರಕಾಶ ಬಂದಿನುಪ್ಪಾ, ನಾನು ನಿನ್ನ ಬಗ್ಗೆನೆ ಯೋಚಿಸ್ಕೊಂತ ಕುಂತಿದ್ದೆ ಬೆಳಿಗ್ಗಿಂದ” ಎಂದನು.
ಪರಸ್ಪರರು ಯೋಗಕ್ಷೇಮ ಕೇಳಿಕೊಂಡರು. ತಿಮ್ಮಣ್ಣಜ್ಜ ಕೆಂಚನ ಮನೆಯಿಂದಲೇ ಊಟಕ್ಕೆ ತರಿಸಿಕೊಳ್ಳುತ್ತಾರೆ. ಕೆಂಚ ಅವರ ಅತ್ಯಂತ ನಂಬಿಗಸ್ಥ. ಮನೆಯ ಮಗ ಇದ್ದಂತೆ. ಪ್ರಕಾಶನೊಂದಿಗೆ ಊಟ ಮಾತು ಕಥೆ ಆದವು. ಆದರೆ ತಿಮ್ಮಣ್ಣಜ್ಜ ಯಾಕೋ ಹುಡುಗಿ ಮನೆಯ ಕಡೆ ಹೋಗುವ ಮಾತೇ ಆಡುತ್ತಿಲ್ಲವೆಂದು ಪ್ರಕಾಶ ಒಳಗೊಳಗೆ ಪ್ರಶ್ನಿಸಿಕೊಳ್ಳತೊಡಗಿದ್ದ. ಅದನ್ನು ಅಜ್ಜನಿಗೆ ನೆನಪಿಸುವ ಉದ್ದೇಶದಿಂದ, “ಅಜ್ಜಾರ ಬೆಳಿಗ್ಗೆ ನಾನು ಊರಿಗಿ ಹೋಗಬೇಕ್ರಿ..” ಎಂದನು. ಹುಡುಗನ ಮನಸ್ಸನ್ನು ಅರ್ಥ ಮಾಡಿಕೊಂಡ ತಿಮ್ಮಣ್ಣಜ್ಜ ನಿಟ್ಟುಸಿರು ಬಿಟ್ಟು ಎತ್ತಲೊ ನೋಡುತ್ತಾ ಸ್ವಲ್ಪ ಹೊತ್ತು ಕುಳಿತರು. ನಂತರ ಅನ್ಯಮಾರ್ಗವೇ ಇಲ್ಲವಲ್ಲವೆಂದುಕೊಂಡು ನಡೆದ ಘಟನೆ ಮತ್ತು ಕಾರಣವಾದ ಘಟನೆಗಳನ್ನು ಇದ್ದಂತೆಯೇ ಪ್ರಕಾಶನ ಮುಂದೆ ವಿವರಿಸಿದರು. ಎಲ್ಲವನ್ನೂ ಕೇಳಿದ ಆ ಯುವಕ, “ಅಜ್ಜಾರ ಯಾರೂ ಏನೂ ಮಾಡಾಕಾಗಲ್ಲರೀ, ಈಗ ನಡೆದದ್ದು ನಡೆದ್ಹೋತು. ನೀವೇನೂ ಚಿಂತಿ ಮಾಡಬ್ಯಾಡ್ರಿ. ಎಲ್ಲಿಯಾದ್ರೂ ಶಿವಪ್ಪ ಮತ್ತು ಅವರ ಮಗಳಿಗೆ ದೇವರು ದಾರಿ ತೋರಿಸ್ತಾನ. ನೀವು ಮಾಡೂ ಪ್ರಯತ್ನ ಮಾಡೀದ್ರಿ. ಆದ್ರ ಹಿಂಗ ಆಗಬೇಕು ಅಂತ ವಿಧಿ ಬರಹ ಇತ್ತಲ್ಲ… ನೀವು ಊರು ಕಡೆ ಬಂದೇ ಇಲ್ಲಂತ ಈ ವರ್ಷ. ಮನೆಗೆ ಬಂದು ಎರಡು ದಿನ ಅಪ್ಪನ ಜೊತಿಗಿ ಮಾತಾಡಿ ಹೊಲ ಹೊಲ ತಿರುಗಾಡಿ ಬ್ಯಾಸರ ಕಳ್ಕೊಳ್ಳೂರಂತೆ ರ‍್ರಿ. ನನ್ನ ಜೊತೀನ ಬಂದು ಬಿಡ್ರಿ” ಎಂದು ಪ್ರೀತಿಯಿಂದ ಅಜ್ಜನ ಕೈ ಹಿಡಿದು ಹೇಳಿದನು. “ಖರೇವಂದ್ರ ಬ್ಯಾಸರಾಗೇತಪ್ಪಾ ತಮ್ಮ, ಇನ್ನೆಂಟು ದಿನ ಬಿಟ್ಟು ಬರ್ತೀನಿ ನಿಮ್ಮರ‍್ಗೆ..” ಎಂದನು. ಹುಡುಗನಿಗೆ ಎಲ್ಲಾ ಹೇಳಿಕೊಂಡರೂ ಅಜ್ಜನ ಮನಸ್ಸೇನೂ ನಿರುಮ್ಮಳವಾಗಲಿಲ್ಲ. ಶಿವಪ್ಪನ ಮೇಲೆ ಸಿಟ್ಟು ಬರತೊಡಗಿತ್ತು. ಹುಟ್ಟಿ ಬೆಳೆದ ಈ ಊರಿನಲ್ಲಿಯೇ ಇಷ್ಟೊಂದು ಕೆಟ್ಟ ಜನರಿರುವಾಗ ಯಾರೂ ಗೊತ್ತು ಪರಿಚಯವಿರದ ಕಡೆ ಎಳೆಯ ಹೆಣ್ಣುಮಗಳನ್ನು ಹೇಗೆ ರಕ್ಷಿಸಿಯಾನು ಅಂತ ಅವರಿಗೆ ಮನಸ್ಸು ಕೊರೆಯತೊಡಗಿತ್ತು. ಪ್ರಕಾಶನಿಗೆ ಅಲ್ಲಿಂದ ಹೊರಡುವಾಗ ಎಷ್ಟೇ ಹಸನ್ಮುಖನಾಗಿರಲು ಪ್ರಯತ್ನಿಸಿದರೂ ಮುಖ ಒಣಗಿದಂತಾಗಿತ್ತು. ಪ್ರಥಮ ಚುಂಬನಂ ದಂತ ಭಗ್ನಂ ಅನ್ನುವ ಹಾಗೆ ಅವನು ಮೊದಲ ಸಲ ಹುಡುಗಿ ನೋಡುವ ಪ್ರಯತ್ನ ಈ ರೀತಿಯಲ್ಲಿ ಮುಗಿದಿತ್ತು…
ಮುಂದುವರೆಯುವುದು
–ಹಟ್ಟಿ ಸಾವಿತ್ರಿ ಪ್ರಭಾಕರಗೌಡ