ವಿಮರ್ಶೆ..
ಚರಂಡಿ ಜಿಗಿದವನನ್ನು ಸಮುದ್ರ ದಾಟಿದನೆಂದು ಬಿಂಬಿಸುವುದೇ?
ಅಂಬೆಗಾಲಿಡುವವನ್ನು ನಟರಾಜನೆನ್ನುವುದೇ?
ಕಾಡಿನ ತೊರೆಯ ಬದಿಯಲ್ಲಿ ಪುಕ್ಕ ತರಿದು ಕೊಂಡ
ಕೆಂಬೂತವನ್ನು ನವಿಲೆಂದು ವರ್ಣಿಸುವುದೇ?.
ಮಣ್ಣು ತಿನ್ನುವ ಮುಕ್ಕಾವನ್ನು
ಕಾಳಿಂಗಕ್ಕೆ ಹೋಲಿಸುವುದೇ?
ತರವಲ್ಲ.! ತರವಲ್ಲ.!
ಬೇವು, ಬೇಲ ಎರಡೂ ಬೆಳೆದಿವೆ
ಈ ಕಾಡಿನಲ್ಲಿ.!
ಹಾಲುಗುಂಬಳ, ಹಾಗಲ
ಎರಡೂ ಒಂದೇ ಮರಕೆ ಹಬ್ಬಿದ
ಬೇರೆ ಬೇರೆ ಬಳ್ಳಿ.!
ಆಳುದ್ದ ಹೊಂಡಕ್ಕೂ,
ಆಳ ತಿಳಿಯದ ಸಮುದ್ರಕ್ಕೂ ವಿವರಣೆ ಬೇಕೆ?
ಮರುಭೂಮಿಯ ಕುರುಚಲಿಗೂ
ಸಹ್ಯಾದ್ರಿ ಕಾಡಿಗೂ ಹೋಲಿಕೆ ಏಕೆ?
ಆಗದು ನನ್ನಿಂದಾಗದು.
ಬೇರೆ ಯಾರನ್ನಾದರೂ ಹುಡುಕಿಕೋ.!
ಬಣ್ಣದ ಕಲ್ಲನ್ನು ವಜ್ರವೆನ್ನಲು.!
ಹುಲ್ಲಿನ ಬೆಂಕಿಯನ್ನು ಕಲ್ಲಿದ್ದಲ ಕಾವೆನ್ನಲು.!
ಬಾ, ಇಲ್ಲಿ ಬಯಲ ಗಾಳಿಗೆ ತೆರೆದು ಕೊಳ್ಳೋಣ.
ಗಟ್ಟಿ ಯಾವುದೋ, ಜೊಳ್ಳು ಯಾವುದೋ ತೂರಿಕೊಳ್ಳೋಣ.!!
-ಇಂದು ಶ್ರೀನಿವಾಸ್, ಕೊರಟಗೆರೆ.
ಶಾಲಭಂಜಿಕೆ
ತೆಲುಗು ಮೂಲ : ರಾಜೇಶ್ವರೀ ದಿವಾಕರ್ಲ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಹೆಣ್ಣುಮಕ್ಕಳು ಜಡೆಯ ಬಿಟ್ಟ ಮೇಲೆ,
ಬಿಚ್ಚಿದ ಕೂದಲು ಹೂವ ಮುಡಿಯಲು ಎಲ್ಲಿಗೆ?
ಮೊಳ ಮಾರುವ ಹೂವಿನ ಬಜಾರಿನಲ್ಲಿ,
ಮಲ್ಲಿಗೆಯ ರಾಶಿ ಸುವಾಸನೆ ಬೀರಿತು ಎಲ್ಲೆಡೆ;
ಮದುವೆ, ಉತ್ಸವ, ಅಮ್ಮನ ಗುಡಿ ಪೂಜೆಗೆಂದು,
ಚಟಾಕು ಬೆಲೆಯ ಬುದ್ಧಿಯಿಂದಲೇ ಹೆಚ್ಚಿಸಿತು ಚಂದ.
ರಿಕ್ಷಾ ಶ್ರಮವ ಲೆಕ್ಕಿಸದೆ ದಂಪತಿ,
ಚೌಕಾಸಿ ಮಾಡಿ ಉಳಿಸಿದರು ಹಣವ;
ಆ ಉಳಿತಾಯದಲಿ ಕೊಂಡ ವಿದ್ಯೆಯ ಫಲ,
ಸಂತಾನ ಕಚೇರಿ ಸೇರಿತು ವೇಗವ;
ಒಬ್ಬೊಬ್ಬರಾಗಿ ವಾಹನ ಖರೀದಿಸೆ,
ಮಧ್ಯಮ ವರ್ಗದ ಮಟ್ಟ ಏರಿತು ಕ್ರಮಬದ್ಧವ;
ಬಳಕೆ ಹೆಚ್ಚಾಗಿ, ಇಂಧನ ಬೆಲೆ ಏರಿತು,
ಖರ್ಚಿನ ಭಾರದಿ ಜನರ ಬಾಳು ಭಾರವ
ಮದುವೆ ನೋಡುವ ಕಾಲ ಮುಗಿಯಿತು,
ಕಾಫಿ ತಿಂಡಿಯ ಚಿಂತೆ ಇನ್ನು ಇಲ್ಲವಾಯಿತು;
ಅವರಿಬ್ಬರೂ ಒಬ್ಬರ ಮನವ ಒಬ್ಬರು ಕೊಟ್ಟು,
ಪ್ರೀತಿಯ ಆಸೆಯ ಪೂರ್ತಿಗೊಳಿಸಿದರು;
ದೂರದ ತೀರಗಳಲಿ ನಡೆದ ವಿವಾಹ ಮಹೋತ್ಸವ,
ಬಹಿರಂಗದ ಖರ್ಚಲಿ ದುಬಾರಿಯಾಯಿತು.
ಮಾಂಗಲ್ಯವನು ಧರಿಸಲು ಮನಸಿಲ್ಲ,
ಕಂಠಾಭರಣವ ಸಹಿಸುವುದೆಲ್ಲಾ ದೂರ;
ಚಿನ್ನಕ್ಕಿಂತಲೂ ಅಂದದಿ ಹೊಳಪ ತೋರುವೆ,
ಮಾತಿಗೇನೂ ತೊಂದರೆಯಿಲ್ಲ ಎಂದರು;
ಭವಿಷ್ಯಕ್ಕೆ ಹೂಡಿಕೆಯಾದ ಚಿನ್ನ,
ಅಂಗಡಿಯೊಳಗೆ ಕಣ್ಣು ಕುಕ್ಕಿ ಕಾದಿತ್ತು;
ಗುಲಗಂಜಿ ಕಾಳಿನ ತೂಕದಿ,
ಹೃದಯದ ಭಾರದಿ ಕುಸಿಯದೆ,
ಗಗನಕ್ಕೇರಿದ ಬೆಲೆಗಳಲಿ ಬೊಬ್ಬೆ ಹಾಕಿತ್ತು.
ಆಡುತ್ತಾ ಹಾಡುತ್ತಾ ಜೊತೆಯಲಿ,
ಕೆಲಸ ಮಾಡುವ ಕಾಲ ಕಳೆದು ಹೋಯಿತು;
ಪ್ಯಾಕೆಟ್ ಹಾಲು ಕುಡಿಯುವ ಶಿಶುಗಳಲಿ,
ತಾಯ ಮೊಲೆ ಹಾಲಾ ಅವಕಾಶವಿಲ್ಲವಾಯಿತು;
ಕಬಳಿಸುವ ದೃಶ್ಯಕ್ಕೆ ಒಳಗಾದ ನೋವಿನಲಿ,
ಕಂದನ ಗಂಟಲು ಬತ್ತಿ ಹೋಯಿತು;
ಆಯಾಗಳ ಅಗತ್ಯ ಬಂತು ತಕ್ಷಣದಿ,
ಮಕ್ಕಳ ಪಾಲನೆಗೆ ದಿನಭತ್ಯೆ ಮೀರಿತು.
ಕ್ಯಾಲೆಂಡರ್‌ನಲ್ಲಿ ಗೀಟು ಹಾಕದೆ,
ದಿನಾಂಕ ಹಾರಿಹೋಯ್ತು ಗೊತ್ತೇ ಇರದಂತೆ;
ಗಡಿಯಾರದ ಮುಳ್ಳು ಚುಚ್ಚಿತು
ನೋವಿಗೆ, ಹೆಚ್ಚಿದ ವೆಚ್ಚಗಳ ಚಿಂತೆ ಗಾಯಕೆ ಸಿಕ್ಕಂತೆ;
ಮುಲಾಮು ಪಟ್ಟಿಗಳ ಅನ್ವೇಷಣೆಯಲಿ,
ಮಮತಾ ಬಂಧದ ಗಡುವು ಮೀರಿತು;
ಒಂಟಿ ಗಾಜಿನ ಅರಮನೆಗಳ ಮೌಲ್ಯ,
ತಾಕತ್ತ ಮೀರಿ ಬೆಲೆ ಏರಿತು.
ಕರಚಾಲನೆ ಎಮೋಜಿಗಳಿಗೆ ಸೀಮಿತ,
ಶಾಲಭಂಜಿಕೆಯ ರೂಪ ಧರಿಸಿ ಬಂತು;
ಅಕ್ಷರಗಳು ಬೆರಳ ತುದಿಯಿಂದಲೇ,
ಸಂಭಾಷಿಸಿತು ಹೊಸ ಲೋಕವನು ತಂದು.
ನೂರು ಪ್ರಯೋಗಗಳ ವಿಜಯದಿ,
ಬಾಹ್ಯಾಕಾಶವು ತ್ರಿನೇತ್ರ ತೆರೆಯಿತು;
ಕೋಗಿಲೆ ಮಾತ್ರ ಸಹಜ ರುಚಿಯ,
ಮಾವಿನ ಚಿಗುರ ತಿಂದು ಹಾಡಿತು;
ಬೆಲೆ ಕಟ್ಟಲಾಗದ ಮಧುರ ಗಾನವ,
ಪ್ರಕೃತಿಯ ಸಿರಿಯನು ಸಾರಿತು.
ತೆಲುಗು ಮೂಲ : ರಾಜೇಶ್ವರೀ ದಿವಾಕರ್ಲ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಬದುಕು ಸುಂದರ ಅನುಭವಿಸಿ
ಜನನ ಎಂಬುದೊಂದು ಕೌತುಕ
ರಾಶಿ,ನಕ್ಷತ್ರಗಳ ಕನ್ನಡಿಯೇ ಜಾತಕ..
ನಡುವೆ ನಡೆಯುವದೆಲ್ಲವೂ ನಾಟಕ
ಸಾವೆಂದರೆ ಕಂಡರೂ ಕಾಣದ ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
ಮದುವೆಯಾಗಿ ಹೊಸ ಜೀವನಕೆ
ಕಾಲಿಡುವ ಮದುಮಗ ತಾಳಿ ಕಟ್ಟಿದ
ಕೆಲವೇ ಕ್ಷಣದಲ್ಲಿ ಹೃದಯಾಘಾತ
ಸಂಭ್ರಮದಲ್ಲಿ ಕಾಣಿಸಿತು ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
ಅಮವಾಸ್ಯೆ ದೇವರಿಗೆ ಹೊರಟ
ಹಿರಿಯ ದಂಪತಿಗಳಿಗೆ ಯಮವಾಗಿ
ಬಂತು ಬಸ್ಸು ಸಾವಾಗಿ ಹೊರಟಿತು
ಸಂಭ್ರಮದಲ್ಲಿ ಕಾಣಿಸಿತು ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
ಮದುವೆಯಾದ ನವಜೋಡಿಗಳು
ಸಂಭ್ರಮಕೆಂದು ಹೋದವರಲ್ಲಿ
ನಲಿದಾಡುವ ಸಮಯದಲ್ಲಿ ಗುಂಡಿನ ದಾಳಿ ಪತಿಯ ಶವದ ಮುಂದೆ ಕಣ್ಣೀರಿಟ್ಟ ಪತ್ನಿ ಸಂಭ್ರಮದಲ್ಲಿ ಕಾಣಿಸಿತು ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
ಐಪಿಎಲ್ ಎಂಬ ಹದಿನೆಂಟು ವರ್ಷದ ಕ್ರಿಕೇಟ ಸಂಭ್ರಮದಾಟ ಈ ಸಲ ಕಪ್ಪು
ನಮ್ದೆಯಾಯಿತು,ಹನ್ನೊಂದು ಜನರ ಸಂಭ್ರಮದಲ್ಲಿ ಹನ್ನೊಂದು ಜನರ ಸಾವು
ಸಂಭ್ರಮದಲ್ಲಿ ಕಾಣಿಸಿತು ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
ಸಂಭ್ರಮದಿಂದ ವಿದೇಶಕ್ಕೆ ಹಾರಿತು
ಹಾರಿದ ವಿಮಾನ ಕೆಳಗೆ ಇಳಿಯಿತು
ಹೊರಟ ಉಕ್ಕಿನ ಹಕ್ಕಿ ಪತನವಾಯಿತು
ಇನ್ನೂರಾ ನಲವತ್ತೊಂದು ಜನ ಭಸ್ಮವಾದರು
ಸಂಭ್ರಮದಲ್ಲಿ ಕಾಣಿಸಿತು ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
ಸಂಭ್ರಮದಲಿ ಊಟ ಮಾಡುವ ಸಮಯ
ಭವಿಷ್ಯದ ರೋಗಿಗಳಿಗೆ ಆಸರೆಯಾಗುವ
ವಿದ್ಯಾರ್ಥಿಗಳಿಗೆ ಸೂತಕವಾಯಿತು
ಅಹಮಬಾದ ಉಕ್ಕಿನ ಹಕ್ಕಿಯ ಪಥನ
ಸಂಭ್ರಮದಲ್ಲಿ ಕಾಣಿಸಿತು ಸೂತಕ
ಅದಕೆ ಬದುಕು ಸುಂದರ ಅನುಭವಿಸಿ
–ವೆಂಕಟೇಶ ಪಿ.ಗುಡೆಪ್ಪನವರ
ಬದುಕು…..
ಬದುಕು ನೀ ನಿನ್ನಂತೆ…….. ಓ ಮನುಜ……..
ಇರಬೇಕು ನಾವು ನಮ್ಮಂತೆ……..
ಅದುವೇ ನಿನ್ನ ಬದುಕಿನ ಅರ್ಥವಿದ್ದಂತೆ……
ಬೆನ್ನಟ್ಟಿ ಹೋಗದಿರು ಆಸೆಯೆಂಬ ಮರೀಚಿಕೆಯ
ಕೈಕಟ್ಟಿ ಮರುಗದಿರು ಇಲ್ಲದ ಹಣೆಬರಹವ…..
ಕತ್ತಲೆಯ ಮನೆಗುಂಟು ಬೆಳಕಿನ ದಾರಿ
ಸಹಿಸಿದರೆ ಸುಖವುಂಟು ಕಷ್ಟಕರ ಹಾದಿ……
ಯಾರು ಉಳಿವರೋ? ಯಾರು ಅಳಿಯರೋ?
ಏನೂ ತಿಳಿಯದು ಏನೂ ನಡೆಯದು ಅವನ ಅಂಕೆ ಮೀರಿ……
ನೀ ಪಾತ್ರಧಾರಿಯೂ ಅವ ಸೂತ್ರಧಾರನೂ
ಛಲಬಿಡದೆ ಪ್ರಯತ್ನಿಸು ನಿನ್ನ ಕೈ ಮೀರಿ…..
ಈ ಮಾಯೆಯ ಜಗದೊಳು ಹಣ-ಸಿರಿಯು ಸ್ಥಿರವಲ್ಲ
ಚಿಂತೆಬಿಡು ಇಹುದಿಲ್ಲಿ ಕಾಲಚಕ್ರದ ಜಗಮಲ್ಲ……
ನಾನೆಂಬ ಅಹಂಕಾರದಿ ಮೆರೆಯುವುದು ತರವಲ್ಲ
ಸಾವೆದುರು ಬಂದಾಗ ಮಣ್ಣಿಗೆ ಹೋಗಲೇ ಬೇಕಲ್ಲ…..
ಬದುಕದಿರು ನೀನೆಂದು ಬದುಕಿದ್ದು ಸತ್ತಂತೆ
ಕಾರ್ಯಸಾಧಿಸು ಬದಿಗಿಟ್ಟು ಲೋಕದ ಚಿಂತೆ…..
ಪರರನ್ನು ನಿಂದಿಸುವ ಮಾತನ್ನು ನಿಲ್ಲಿಸು
ಮೌನದ ಜೊತೆಯಲ್ಲಿ ಬದುಕು ಸಾಗಿಸು…….
ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ,
ನಿನ್ನಂತೆ ನೀ ಬದುಕು……. ಓ ಮನುಜ….
ಅದುವೇ ನಿನ್ನ ಸಾರ್ಥಕದ ಬದುಕು……..
-ಡಾ. ವೀಣಾಕುಮಾರಿ ಎ. ಎನ್.,

…ನಮ್ಮ ಕುಲ…
ಮನುಕುಲದಲ್ಲೊಂದು ಕುಲ
ನಮ್ಮ ಕುಲ
ನಮ್ಮ ಕುಲವೆ ಮೇಲು
ಆದರಿಲ್ಲಿ ಅಹಂನ ಸುಳಿವಿಲ್ಲ
ಹಣದ ಭ್ರಷ್ಟತೆಯಿಲ್ಲ
ಅದುವೆ ನಮ್ಮ ಕುಲದ ಬಲ.
ನಮ್ಮ ಕುಲ ನಮ್ಮ ಕುಲ
ಜ್ಞಾನವೆ ನಮಗೆ ಛಲ
ಆಸರೆಯಾಗಿಹುದು ನಮಗೆ
ನಮ್ಮ ಜ್ಞಾನ ದೇಗುಲ
ಅದರೊಳು ತಲೆ ಬಾಗುವುದು
ನಮ್ಮ ಕುಲ
ಅದುವೆ ಅರಿವಿನ ಕುಲ.
ವೈದ್ಯ, ಪೋಲಿಸ್, ಇಂಜಿನಿಯರ್,ವಕೀಲ
ಎಲ್ಲರಿಗೂ ದಾರಿ ದೀಪ ನಮ್ಮ ಕುಲ
ಸರ್ವೋತ್ತಮ ಸಮಾಜ ಸೃಷ್ಟಿಯ ಕೀಲಿ
ನಮ್ಮ ಕುಲದ ಕೈಲಿ
ಶ್ರೇಷ್ಠತೆಯಲ್ಲಿ ಶ್ರೇಷ್ಠ ಕುಲ
ಅದುವೆ ಅಕ್ಷರ ಕುಲ.
ಮೇಲೆಂಬ ಪದ ಬಳಸದ ಕುಲ
ಜಾತಿಯತೆಯ ಅಳಿಸಿದ ಕುಲ
ಹಣದ ಮದ, ಧರ್ಮದ ಮದ,
ಬಿಟ್ಟು ಬದುಕುವ ಕುಲ
ಅದುವೇ ಸಮಾನತೆಯ ಕುಲ
ನಮ್ಮ ಕುಲ.
ನಮ್ಮ ಕುಲ, ನಮ್ಮ ಕುಲ
ಗುರುವಿನ ಕುಲ
ವಿದ್ಯಾರ್ಥಿಗಳ ಸಾಧನೆಯೆ ನಮ್ಮ ಬಲ
ಎಲ್ಲವನ್ನು ಮೆಟ್ಟಿ ನಿಲ್ಲುವ ನಮ್ಮ ಕುಲ
ಮಾನವೀಯತೆಯ ಸಾರುವ ಕುಲ ಗುರು ಕುಲ
ಜ್ಞಾನವ ಪೂಜಿಸುವ ಕುಲ
ಅದುವೆ ನಮ್ಮ ಗುರು ಕುಲ
ನಮ್ಮ ಶಿಕ್ಷಕ ಕುಲ.
ನಿಶ್ಯಬ್ದ ಮನಸು
–ಪರಶುರಾಮ ಹೊಸಮನಿ