ಕನ್ನಡದ ಹಿರಿಯ ಕಥೆಗಾರ್ತಿ ಬಿ.ಟಿ. ಜಾಹ್ನವಿ ಅವರಿಗೆ,
ಈಚೆಗೆ ಕೌದಿ ಪ್ರಕಾಶನ ಹೊರ ತಂದಿರುವ ನಿಮ್ಮ ಸಮಗ್ರ ಕಥೆಗಳ ಸಂಕಲನ “ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ…” ಕೃತಿ ಓದಿದೆ. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತೊಂಭತ್ತು ಕಥೆಗಳಿವೆ. ಇಲ್ಲಿನ ಅರ್ಧದಷ್ಟು ಕಥೆಗಳನ್ನು ಈಗಾಗಲೇ ಪುಸ್ತಕ ರೂಪ ಹೊರತು ಪಡಿಸಿ ಕೆಲ ಪತ್ರಿಕೆಗಳಲ್ಲಿ ಬಹು ಹಿಂದೆಯೇ ಬಿಡಿಬಿಡಿಯಾಗಿ ಓದಿದ್ದೇನೆ. ಈಗ ಎಲ್ಲ ಕಥೆಗಳನ್ನು ಒಟ್ಟಿಗೆ ಇಟ್ಟುಕೊಂಡು ಇಲ್ಲಿನ ಒಂದೊಂದೇ ಕಥೆ ಓದುತ್ತಾ ಹೋದಂತೆ ಓದಿದ ಕಥೆಗಳ ವಿವರಗಳು ಭಾಗಶಃ ನೆನಪಿಗೆ ಬರತೊಡಗಿದವು.
ಕಥಾ ಪುಟಗಳಿಗೂ ಮುನ್ನ ಹಿರಿಯ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ “ಇಲ್ಲಿರುವ ಎಲ್ಲ ಕತೆಗಳನ್ನೂ ಪರಿಚಯ ಮಾಡಿಕೊಡುವ ಉದ್ದೇಶ ನನಗಿಲ್ಲ. ಮನುಷ್ಯರ ಬಡತನ, ಕೆಟ್ಟತನ ಮತ್ತು ಸ್ವಾರ್ಥಗಳ ಫಲವಾದ ದುಃಖವನ್ನು, ಅದರ ನಡುವೆಯೂ ಮನುಷ್ಯತ್ವದ ಜೀವಸೆಲೆಯನ್ನು ಅಚ್ಚುಕಟ್ಟಾಗಿ ಹೇಳುತ್ತವೆ” ಎಂದು ಸಂಕಲನದ ಒಟ್ಟು ಕಥೆಗಳಿಗೆ ಅನ್ವಯಿಸಿ ಕೊಡುವ ಸಂಕ್ಷಿಪ್ತತೆಯಲ್ಲೆ ನೀವು ಎಂಥ ಕಥೆಗಾರ್ತಿ ಎಂಬುದು ಧ್ವನಿಸುತ್ತದೆ.
ಇಲ್ಲಿನ ಎಲ್ಲ ಕಥೆಗಳನ್ನು ಓದಿ ಮುಗಿಸಿದ ಮೇಲೆ – ಸದಾ ಸೃಜನಶೀಲ ಮನಸ್ಥಿತಿ ಇಟ್ಟು ಯೋಚಿಸುತ್ತಿದ್ದ ಬರೆಯುತ್ತಿದ್ದ ಕಾಡುತ್ತಿದ್ದ ಕ್ರಿಟಿಕ್ ಲೇಖಕ ಪಿ.ಲಂಕೇಶ್ ತರಹದವರನ್ನು ಯಾಕೆ ನಿಮ್ಮೀ ಕಥೆಗಳು ಪ್ರಭಾವಿಸಿದವು ಎಂಬ ಕುತೂಹಲ ತಣಿಸಿ ಈಗ ಇದಕ್ಕೆಲ್ಲ ಉತ್ತರ ಸಿಕ್ಕಿದೆ ಎಂಬ ಸಮಾಧಾನ ನನ್ನಾಳಕ್ಕೆ ಇಳಿದಂಗೆಲ್ಲ ಮತ್ತೆ ಮತ್ತೆ ಇಲ್ಲಿನ ಕಥೆಗಳು ಆ ಕಥೆಗಳ ವಿವರಗಳು ಪಾತ್ರಗಳು ನನ್ನನ್ನು ಗಾಢವಾಗಿ ಆವರಿಸತೊಡಗಿದವು.
ನಿಮ್ಮ ಬಹುತೇಕ ಕಥೆಗಳಲ್ಲಿ ಹೆಣ್ಣೇ ಪ್ರಧಾನವಾಗಿ ಕಾಣುತ್ತಾಳೆ. ಹೆಣ್ಣಿನ ನೋವು ಆತಂಕ ತಲ್ಲಣಗಳ ಒಟ್ಟು ಗುಚ್ಛ. ದಲಿತರು ಬರೆವ ಬರಹಗಳಲ್ಲಿ ದಲಿತ ಸಂವೇದನೆ ಅಂತಾರಲ್ಲ ಹಾಗೆ ನಿಮ್ಮೀ ಕಥೆಗಳ ಆಳ ಅಗಲದಲ್ಲಿ ವಿಸ್ತೃತವಾದ ಸ್ತ್ರೀ ಸಂವೇದನಾಶೀಲ ಗುಣವಿದೆ. ಈ ದಲಿತ ಸಂವೇದನೆ ಮತ್ತು ಸ್ತ್ರೀ ಸಂವೇದನೆ ಅನ್ನುವುದು ಏಕೆ? ದಲಿತರಲ್ಲದ ಕುವೆಂಪು ಬರಹಗಳಲ್ಲಿ ಈ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಎಂಬುದಿರಲಿಲ್ಲವೇ?
ಇರಲಿ, “ಒಬ್ರು ಸುದ್ಯಾಕೆ.. ಒಬ್ರು ಗದ್ಲ್ಯಾಕೆ..” ಸಂಕಲನದಲ್ಲಿನ ಕಥೆಗಳನ್ನು ಓದುತ್ತಾ ಕುವೆಂಪು, ವೈದೇಹಿ, ದೇವನೂರು, ಲಂಕೇಶ್, ಚೆನ್ನಣ್ಣ, ಅನಂತಮೂರ್ತಿ, ಮಾಸ್ತಿ, ಚಿತ್ತಾಲ, ಆಲನಹಳ್ಳಿ ಕಥೆಗಳ ಶೈಲಿಗಿಂತ ಬೇರೆಯದೇ ಆದ ಕಥೆಯ ಚೌಕಟ್ಟು, ಕಥನತಂತ್ರ, ಕಥಾಕೇಂದ್ರ, ಅದನ್ನು ಕಟ್ಟಿಕೊಡುವ ರೀತಿ, ವಸ್ತು, ವಿಷಯ ಮತ್ತು ನಿರೂಪಣಾ ಶೈಲಿಯಲ್ಲಿ – ಓದಿದ ಕ್ಷಣಕ್ಕೆ ಈ ರಚನಾ ವಿಧಾನದಲ್ಲಿ ಭಿನ್ನವಾದ್ದು ಏನೊ ಇದೆ ಅನಿಸಿ ಬಿಟ್ಟಿತು ಎಂಬುದು ಈ ಕಥೆಗಳ ಒಂದು ಪ್ರಮುಖ ವೈಶಿಷ್ಟ್ಯ.
ಇಲ್ಲಿ ಇನ್ನೂ ಒಂದಿದೆ. ಅದು ಸರಳ ಮತ್ತು ಕಠಿಣ.
ಇವುಗಳಲ್ಲಿ ಕಠಿಣ ಅನಿಸದ ಸರಳ ನಿರೂಪಣೆಯ ಸರಾಗವಾಗಿ ಓದಿಸಿಕೊಳ್ಳುವ ಲಕ್ಷಣವೇ ನಿಮ್ಮ ಕಥನತಂತ್ರದ ಪ್ರಮುಖ ಅಂಶ. ಈ ನಿರೂಪಣಾ ಶೈಲಿಯೇ – ನಿಮ್ಮ ಕಥೆಗಳು ಓದುಗರನ್ನು ಗಾಢವಾಗಿ ತಟ್ಟಲು, ಓದಿದ್ದು ಬಹುಕಾಲ ಉಳಿಯುವ, ಕಾಡುವ ಬಹುಮುಖ್ಯ ಲಕ್ಷಣವೂ ಹೌದು.
ಹಾಗೆ, ನಿಮ್ಮ ಪ್ರತಿಯೊಂದು ಕಥೆಗಳಲ್ಲಿ ಬರುವ ಬಹುಮುಖ್ಯ ವಿವರಗಳನ್ನು ಪ್ರತ್ಯೇಕವಾಗಿ ಕೋಟ್ ಮಾಡಿ ವಿವರಿಸಿ ವಿಶ್ಲೇಷಿಸುತ್ತಾ ಹೋದರೆ ಒಂದಷ್ಟು ಪುಟಗಳ ಒಂದು ದೊಡ್ಡ ಕಥೆಯೇ ಆಗುವ ಒಂದು ಮಹತ್ವದ ಗುಣವಿದೆ. ಕಥನದ ಶೈಲಿ ಸರಳವೂ ಸರಾಗವೂ ಮಾತ್ರವಲ್ಲ ಕಥೆಗಳ ಒಳಗೆ ವಿವರಿಸಲಾಗದ ಒಂದು ಚೈತನ್ಯಶೀಲ ಲವಲವಿಕೆ ಇದೆ. ಇಲ್ಲಿನ ಕೆಲವು ಕಥೆಗಳಲ್ಲಿ ಒಂದು ತರದ ನವಿರಾದ ಹಾಸ್ಯದ ಸನ್ನಿವೇಶಗಳಿವೆ. ವಿಭಜಿಸಿ ಹೇಳಲಾಗದ ವ್ಯಂಗ್ಯ ವಿಡಂಬನೆ ಮಾತ್ರವಲ್ಲ ತೀವ್ರಗಾಢವೂ, ವಿಷಾದವೂ, ಗಂಭೀರವಾದ ಭಾವತೀವ್ರತೆಯ ಗುಣಗುಚ್ಛವಿದೆ.
ನಿಮ್ಮ ಕಥೆಗಳ ಇನ್ನೊಂದು ಗುಣ ಓದುಗನ ಮನಸ್ಸನ್ನು ಅಲುಗಾಡಿಸುವಂಥದ್ದು. ಅದಕ್ಕೆ ಪೂರಕ ಸನ್ನಿವೇಶ, ವಾತಾವರಣ, ಪಾತ್ರ ರಚನೆ, ಅವು ಬೆಸೆವ ಕ್ರಮ, ಪರದೆಯ ಮೇಲೆ ಚಿತ್ರಕಾರನೊಬ್ಬ ತನ್ನ ಕುಂಚದಲ್ಲಿ ಬಿಡಿಸಿದ ಚಿತ್ತಾರದಂತೆ ತೆರೆಡಿಡುತ್ತದೆ. ಪಿ.ಲಂಕೇಶ್ ಇಂಥದ್ದೊಂದು ಚಿತ್ತಾರದ ಕಲ್ಪನೆಯಲ್ಲಿ ‘ಪತ್ರಿಕೆ’ ಯಲ್ಲಿ ‘ಲೇಖಕ’ ಎಂಬ ವಿಚಾರ ಹಿಡಿದು “ಓದುಗನನ್ನು ಬೆಚ್ಚಿ ಬೀಳಿಸದ ಬರಹ ಬರಹವೇ ಅಲ್ಲ” ಎಂದಿರುವುದರ ಹಿಂದೆ ಕಾರಣ ಸಹಿತದ ಅವರು ಮೆಚ್ವಿದ ಸಾಹಿತ್ಯ ಬರಹಗಳ ಸಂಬಂಧಿತ ಉದಾಹರಣೆಗಳಿವೆ. ಇಂಥ ಉದಾಹರಣೆಯಲ್ಲಿ ನಿಮ್ಮ ಕಥೆಗಳೂ ಇವೆ ಎಂಬುದು ನನ್ನ ಓದಿನ ಪರಿಧಿಯಲ್ಲಿವೆ. ಈ ಉದಾಹರಣೆ ಕೊಂಡಿ ಹಿಡಿದು ನನ್ನನ್ನು ಜಗ್ಗಿಸಿ ಬೆಚ್ಚಿ ಬೀಳಿಸಿದ ಕಥೆ ‘ಕಳ್ಳುಬಳ್ಳಿ’ !
ಈ “ಕಳ್ಳುಬಳ್ಳಿ” ಓದುತ್ತಾ ಕರುಳು ಚುರ್ ಅಂದಿದೆ. ನನಗರಿವಿಲ್ಲದೆ ಒತ್ತರಿಸಿ ಬಂದ ಕಣ್ಣೀರು. ಒಂದು ಕ್ಷಣ ನನ್ನನ್ನು ಗದ್ಗದಿತನಾಗಿಸಿತು. ಹಾಗೆ “ವ್ಯಭಿಚಾರ” ಕಥೆಯ ಒಳಗುದಿ, ಪಾತ್ರಗಳ ಪಿಸುಮಾತು, ಅದು ಸೃಷ್ಟಿಸುವ ಸನ್ನಿವೇಶ, ವ್ಯಕ್ತಿಗತ ವೈಯಕ್ತಿಕ ಸಂದರ್ಭ, ಅದು ಪಡೆದುಕೊಳ್ಳುವ ಆಯಾಮ ಚಕಿತಗೊಳಿಸಿತು. ಇದೆಲ್ಲ ಏನು ಅಂದರೆ ಇದುವರೆಗಿನ ‘ವ್ಯಭಿಚಾರ’ದ ಅರ್ಥ ವ್ಯಾಖ್ಯಾನವನ್ನೇ ಬುಡಮೇಲು ಮಾಡಿ ಬೇರೊಂದು ಅರ್ಥ ವ್ಯಾಖ್ಯಾನಕ್ಕೆ ಮುನ್ನುಡಿ ಬರೆಯುತ್ತದೆ. ಮುಂದುವರೆದರೆ “ಅವ್ವಯ್ಯನ ಹಂಡೇವು” ಕಥೆ ಮೊಗಳ್ಳಿ ಗಣೇಶ್ ಅವರ “ನನ್ನಜ್ಜನಿಗೊಂದು ಆಸೆ ಇತ್ತು” ಕಥೆಯನ್ನು ನೆನಪಿಸಿತು. ಈ ಎರಡೂ ಕಥೆಗಳ ಕಾಲಮಾನ – ಅದಾದ ಮೇಲೆ ಇದೊ, ಇದಾದ ಮೇಲೆ ಅದು ಬರೆದದ್ದೊ.. ಎಂಬಂತೆ ಇಲ್ಲಿ ಒಂದು ಸಾಮ್ಯತೆಯ ರೂಪಕ ಅಂಶ ಇದೆ. “ಒಬ್ರು ಸುದ್ಯಾಕೆ.. ಒಬ್ಬು ಗದ್ಲ್ಯಾಕೆ..” ಕಥೆಯಲ್ಲಿ ಬರುವ ಕಲ್ಯಾಣಿಯ ಝಲಕ್, ‘ನೆರೆ ಹಾವಳಿ’ ಯ ಅನಿತ ಒಂದು ಪವರ್ ಫುಲ್ ಕ್ಯಾರೆಕ್ಟರ್!
ನೀವು ಅನಿತ ಎಂಬ ಆ ಪಾತ್ರವನ್ನು ಕಟ್ಟಿಕೊಟ್ಟಿರುವ ರೀತಿ ‘ವ್ಯಭಿಚಾರ’ ದಲ್ಲಿ ಬರುವ ಕ್ಯಾರೆಕ್ಟರ್ ನ್ನು ಓವರ್ ಟೇಕ್ ಮಾಡುತ್ತದೆ. ‘ದೂಪ್ದಳ್ಳಿ ಸೆಕ್ಸಿ ದುರುಗ’ ನಲ್ಲಿ ದುರುಗನ ಮಾತು ಮತ್ತು ಅವನ ಬಾಡಿ ಲಾಂಗ್ವೆಜ್ ಆವರಿಸುವ ರೀತಿ – ರೇಖಳ ಬದುಕಿಗೆ ಅದು ಕೊಡುವ ತಿರುವು ಒಟ್ಟು ಚಿತ್ರದ ಕಥಾ ನಿರೂಪಣೆಯು – ಮೈಲಿಗೆ ಇಟ್ಟುಕೊಂಡು ಓದುವ ಬರೆಯುವ ಬರಹಗಾರ್ತಿಯರ ನಡುವೆ ನಿಮ್ಮದು ಒಂದು ಭಿನ್ನವಾದ ಆಕರ್ಷಕವಾದ ಶೈಲಿ ಅನ್ನಬಹುದು. ಈ ಶೈಲಿ ನಿಮ್ಮ ಆರಂಭಿಕ ಕಥೆ ‘ವ್ಯಭಿಚಾರ’ ದಿಂದಲೇ ಗಟ್ಟಿಗೊಂಡು ಅದನ್ನು ಹಾಗೇ ಕಾಪಿಟ್ಟುಕೊಂಡು ಬಂದಿರುವುದು ಕನ್ನಡ ಕಥಾಲೋಕದಲ್ಲಿ ಗಟ್ಟಿ ಅಸ್ತಿತ್ವಕ್ಕೆ ಬೇಸ್ ಹಾಕಿದೆ. ಇಂಥ ಹತ್ತು ಹಲವು ವಿಶಿಷ್ಟತೆ ನಿಮ್ಮ ರಚನಾ ವಿಧಾನದಲ್ಲಿದೆ
ದೇವನೂರ ಮಹಾದೇವರ “ಕುಸುಮಬಾಲೆ” ಬಗ್ಗೆ “ಕುಸುಮಬಾಲೆ ಓದುವಾಗ ಬೆಳ್ಳಕ್ಕಿ ಸಾಲುಗಳು ಸಾಲುಸಾಲಾಗಿ ಬಾನಿಂದ ಇಳಿದು ಬಂದು ನೀರನ್ನು ಮುಟ್ಟೀ ಮೇಲೇರಿ ಹಾರಾಡುವ ಲೀಲೆಯಂತೆ ಅನುಭವಾಯ್ತು” ಎಂಬ ಪುತಿನ ಅವರ ಮಾತಿನಂತೆ ಇಲ್ಲಿನ ನಿಮ್ಮ “ದೇವರ್ ಬಂದಾವ್ ಬನ್ನಿರೋ” ಕಥೆಯ “ರಾತ್ರಿ ಕರಗಿ ಬೆಳಗು ಮೂಡಿದರೂ ಪೂಜೆ ನಡದೇ ಇತ್ತು. ಅಮ್ಮನೂ ಇದ್ದಳು ಚಿಕ್ಕಮ್ಮನೊಳಗೆ. ಆಕೆಯ ಒಳಗೀಕೆ. ಈಕೆಯ ಒಳಗಾಕೆ. ಒಬ್ಬರೊಳಗೊಬ್ಬರು ಸೇರಿ ಬೆರಕೆ ಆದ ಸತ್ಯ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತ ಬೆತ್ತಲಾಗುತ್ತಿತ್ತು” ಹಾಗು “ಅಜ್ಞಾತ” ಕಥೆಯ ಒಂದು ಸನ್ನಿವೇಶದ “ಅಜ್ಜೀ ಅವತ್ತು ಗುರುವಾರ. ರಾತ್ರಿ ಆಗ್ಲೇ ಎರ‌್ಡು ಗಂಟೆ ಆಗಿತ್ತು. ನಾನು ದಿನಾಲು ಅವ್ರ ಕೋಣೆ ಹೊರ‌್ಗೆ ಮಲ್ಗತ್ತಿದ್ದೆ. ಅವತ್ತು ಇದ್ದಕ್ಕಿದ್ದಂಗೆ ಅಷ್ಟೊತ್ನಾಗೆ ಪಾಪ ಅಳಾಕತ್ತಿದ. ಅದರ ಜೊತ್ಯಾಗೆ ಸಣ್ಣಮ್ಮನ ಕಿರುಚಾಟ ಕೇಳಿಸ್ತಿತ್ತು. ನಡುನಡುವೆ ಸಣ್ಣಪ್ಪನೂ ಮಾತಾಡ್ತಿದ್ದ. ಎಷ್ಟೊತ್ತಾದ್ರು ಒಳ್ಗಿನ ಗದ್ಲ ನಿಲ್ಲೆ ಇಲ್ಲ. ನಾನು ಹೆದ್ರಿಕೊಂಡು ಎದ್ದೋಳೆ ಸೀದಾ ಹೋಗಿ ದಬದಬ ಅವ್ರ ಕೋಣೆ ಬಾಗ್ಲು ಬಡ್ದೆ. ಪಾಪ ಚೀರ‌್ಕಂತ್ಲೆ ಇದ್ದ. ನಾನು ಇನ್ನೂ ಜೋರಾಗಿ ಬಡಿಯಕತ್ತಿದೆ… ಎಷ್ಟೊ ಹೊತ್ತಾದ್ಮೇಲೆ ಸಣ್ಣಪ್ಪ ಬಾಗ್ಲು ತಗ್ದು ಹೊರಕ್ಬಂದ. ಅಜ್ಜೀ.. ಅವ್ನ ಮೈಮ್ಯಾಲಿನ ಅರ‌್ಬಿಯಲ್ಲಾ ಕಿತ್ತೋಗಿತ್ತು! ಮಗೂನ ಎತ್ಕಂಡು ಹೋಗು ಅಂತ ನನ್ಗೇಳಿ ಸೀದ ಹೊರಕ್ಕೋದ ಸಣ್ಣಪ್ಪ. ಒಳ್ಗೆ ಸಣ್ಣ ದೀಪ ಉರೀತ ಇತ್ತು. ನಾನು ಬಾಗ್ಲು ಮೆಲ್ಲಗೆ ದಬ್ಬಿ ಒಳ್ಕೋದೆ ಯವ್ವಾ..! ಕಣ್ಣಾಗ್ ನೋಡ್ಬಾರ‌್ದು ಅದ್ನ! ಮತ್ತೆ..ಮತ್ತೆ.. ಆ ಕೋಣ್ಯಾಗೆ ಸಣ್ಣಮ್ಮ ಬರೇಬೆತ್ಲಲಿದ್ಲು! ಮೈಮೇಲೆ ಒಂಚೂರು ಅರಿವೆಯಿರ‌್ಲಿಲ್ಲ!” ಎಂಬಂಥ ವಿವರಣೆ ಸಂಭಾಷಣೆಯ ಸಾಲುಗಳು ಪುತಿನ ಅವರಿಗೆ ಕುಸುಮಬಾಲೆ ಓದಿನಲ್ಲಿ ಆದಂಥಹ ಅನುಭವನ್ನೇ ನನಗೂ ನಿಮ್ಮ ಕಥೆಗಳ ಓದಿನಲ್ಲಿ ನೀಡಿತು ಎಂಬುದು ಒಂದು ಕೃತಿಯ ಗಂಭೀರತೆಗೆ ಗಟ್ಟಿ ಸಾಕ್ಷಿ. ಓದುಗನೊಬ್ಬನಿಗೆ ಹೀಗೆ ಆಗುವ ಅನುಭವಕ್ಕೆ ವಿವರಣೆಯ ಅಗತ್ಯ ಬೇಡ ಅನಿಸುತ್ತದೆ. ಈ ಎರಡು ವಿವರಣೆಗಳ ಕೆಲವೇ ಕೆಲವು ಸಾಲುಗಳಂತೆ ಇನ್ನೂ ಕೆಲವು ಕಥೆಗಳಲ್ಲಿ ಪ್ರಯೋಗಶೀಲ ಭಾಷಾ ಬಳಕೆ ಒಂದು ಕೃತಿಗೆ ಆಥವ ಕಥೆಗೆ ವಿಶಿಷ್ಟತೆಯನ್ನು ಒದಗಿಸಿ ವಿಶೇಷವಾಗಿಸುತ್ತದೆ. ಮಾಲಿಂಗನ ಅಜ್ಞಾತ ಬದುಕು ಅವ್ವನ ಕೋಳಿ ಸಾರಿನ ಗಮಲಿನಲ್ಲಿ ಮುಳುಗೇಳುತ್ತದೆ. ಅದೂ ಕೂಡ ವಿವರಣೆಗೆ ನಿಲುಕದ್ದು!
ಅದು ‘ದೇವರ್ ಬಂದಾವ್..’ ಲಕ್ಷ್ಮೀ ಮತ್ತು ‘ಅಜ್ಣಾತ’ ರೇಣುಕಾಳ ಕಣ್ಣು ಎದೇಲಿ ನಾಟಿದ ಬಗೆಯಲ್ಲಿದೆ. ‘ಬಸವಿ’ ದೇವೀರಿ ಲಜ್ಜೆಯ ಚಿತ್ರದಲ್ಲಿದೆ. “ನೆಪ”ದಲ್ಲಿ ಸುರಿಗೆವ್ವನ ಕನಸಿನ ಚಿತ್ರವಿದೆ. ಅಂತಃಕರಣ ತುಂಬಿದ ಬೋರಜ್ಜಿಯ ಒಡಲಾಳ, ದೇವನೂರರ “ಒಡಲಾಳ”ದ ಸಾಕವ್ವಳೇ ಎದುರಾ ಬದುರು ಬಂದಂತೆ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ.
ಇಷ್ಟಾಗಿ ‘ಬಿಚ್ಚಿ ನೋಡಿದರೆ’ ರಚನೆಯಲ್ಲಿ ಕೆಲವು ಸನ್ನಿವೇಶ, ಸಂಭಾಷಣೆ, ಪಾತ್ರಗಳ ತಿರುವು, ಅವುಗಳ ನೋಟದ ಕ್ರಮದಲ್ಲಿ ಅಸಹಜತೆ ಕೃತಕತೆಯ ಭಾವವಿದೆ ಅನಿಸಿತು. “ಪರಿವರ್ತನೆ” ಯೂ ಹಾಗೆ. ಪದುಮಾಲಯ, ಪದುಮ, ಆಶ್ರಮದ ಚಂದ್ರನ ಪ್ರೀತಿಯ ರೀಕಾಲ್ – “ಅವತ್ತು ನಿನ್ನ ಮದುವೆ ಆಯ್ತು ಅನ್ನೊ ವಿಷಯ ತಿಳಿದಾಗ ಒಂದು ನಿರ್ಧಾರ ಮಾಡಿದ್ದೆ. ಕೊನೆಗೊಂದು ಸಲ ನಮ್ಮ ಪ್ರೇಮದ ಸ್ಮಾರಕವಾಗಿದ್ದ ಆ ಬಂಡೇನ ನೋಡಿ ಬರೋಣ ಅಂತ ಹೋದೆ. ಸದಾ ಜೀವಂತ ಅನಿಸುತ್ತಿದ್ದ ಆ ಬಂಡೆಯೂ ಅವತ್ತು ನಿರ್ಜೀವ ಅನಿಸುತ್ತಿತ್ತು.ಆದ್ರೆ ಸ್ವಲ್ಪ ಹೊತ್ತಲ್ಲೇ ಅಲ್ಲೇ ಒಂದು ಪದೆಯ ಕಡೆಗೆ ಮುಖ ಮಾಡಿ ನಾಯಿಯೊಂದು ವಿಪರೀತ ಬೊಗಳೋಕೆ ಶುರು ಮಾಡ್ತು. ನಾನು ಗಾಬರಿಯಿಂದ ಅತ್ತ ಓಡಿ ನೋಡಿದ್ರೆ ಅಲ್ಲಿ ಒಂದು ಬಟ್ಟೆಯಲ್ಲಿ ಸುತ್ತಿದ್ದ ಹೆಣ್ಣು ಮಗುವೊಂದು ಮಲಗಿತ್ತು” ಇಂಥವು ನಿರ್ದೇಶಕನೊಬ್ಬ ತನ್ನ ಸಿನಿಮಾವೊಂದರಲ್ಲಿ ಸನ್ನಿವೇಶವೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಬಳಸಿದ ಕೃತಕತೆಯ ಅಸಹಜ ರೂಪ ಅನಿಸಿದ್ದು ಬಿಟ್ಟರೆ ಒಟ್ಟಾರೆ ಇಲ್ಲಿನ ನಿಮ್ಮ ಎಲ್ಲ ಕಥೆಗಳು ಹೆಣ್ಣಿನ ಒಡಲಾಳದ ನೋವು, ಸಂಕಟ, ಯಾತನೆ, ತುಮುಲ, ಬದುಕಿನ ವೈರುಧ್ಯಗಳ ಆಳ ಅಗಲದಲ್ಲಿ ತುಂಬಿಕೊಂಡಿರುವ ನೈತಿಕತೆಯ ಸೋಗು ಮತ್ತು ಅನೈತಿಕತೆ, ವಿಕ್ಚಿಪ್ತತೆ ತುಂಬಿದ ಕತ್ತಲ ಲೋಕದಲ್ಲಿ ಜರುಗುವ ನಿಕೃಷ್ಠ ಕಣ್ಕಟ್ಟುಗಳನ್ನು ತೆರೆದಿಡುವ ಸೃಜನಶೀಲ ಕಥೆಗಳು.
-ಎಂ.ಜವರಾಜ್