ಯಪ್ಪಾ.. ಬೆಂಗಳೂರಿನ ಚಳಿಯನ್ನೇ ತಡೆಯೋಕೇ ಆಗ್ತಾ ಇಲ್ಲಾ.. ಇನ್ನು ದೆಹಲಿ, ಹಿಮಾಲಯ ಅಲ್ಲಿನ ಚಳಿ ನನ್ನ ಊಹೆಗೂ ಮೀರಿದ್ದು. ಚಳಿ ಅಂದ್ರೆ ಬೀರು ಒಳಗಿದ್ದ ಶಾಲು, ಸ್ವೆಟರ್ ಎಲ್ಲಾ ಹೊರಕ್ಕೆ ಬರುತ್ತೆ, ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳೋಕೆ ಹಲವಾರು ಕಸರತ್ತು ಮಾಡುತ್ತೇವೆ. ಬಿಸಿ ಬಿಸಿ ಕಾಫಿ, ಬಿಸಿ ಬಜ್ಜಿ ಬೋಂಡಾ ಹಲವಾರು ತೆರನಾದ ತಿಂಡಿ, ಮನೆಯ ವಾತಾವರಣವೇ ಬದಲಾಗಿ ಹೋಗುತ್ತದೆ. ಮನಶಾಸ್ತ್ರದ ಒಂದು ಅಂಶದ ಪ್ರಕಾರ ‘ಚಳಿಯಲ್ಲಿ ನಮ್ಮ ಯೋಚನೆ ಸಂಕುಚಿತವಾಗುತ್ತದೆ, ವಿಶಾಲವಾಗಿ ಯೋಚಿಸುವುದನ್ನು ನಿಲ್ಲಿಸಿಬಿಡುತ್ತೇವೆ’. ಇದು ನಿಜ. ಕೇವಲ ನಾವು ನಮ್ಮದು ಎನ್ನುವ ಯೋಚನೆಯಲ್ಲೇ ಚಳಿಗಾಲ ಕಳೆಯುತ್ತೇವೆ. ಆದರೆ ಒಂದು ಚಳಿಗಾಲ ನನ್ನ ಯೋಚನೆಯನ್ನು ಬದಲಿಸಿಬಿಟ್ಟಿತು. ಚಳಿಯ ಹಲವಾರು ಆಯಾಮಗಳನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಿತು. ಚಳಿಯಲ್ಲೂ ಆಶಾವಾದವಿದೆ, ಬೆಳಕಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಿತು. ಚಳಿ ನಿಜವಾದ ಮಾನವೀಯತೆಯನ್ನು ಹೊರಗೆ ತೆರೆದಿಡುತ್ತದೆ ಅನ್ನುವ ಸತ್ಯ ನನಗೆ ಅರಿವಾಯಿತು.
ಒಂದು ಚಳಿಗಾಲದ ದಿನ ನನ್ನ ಪತ್ರಕರ್ತ ಗೆಳೆಯರು ಕರೆ ಮಾಡಿ “ಸರ್ ಇವತ್ತು ಮದ್ಯಾನ್ಹ ನಿಮ್ಮನ್ನು ಸಂಧಿಸಲು ಬರುತ್ತಿದ್ದೇವೆ, ಒಂದು ಪ್ರಮುಖ ಅಂಶವನ್ನು ಚರ್ಚಿಸಬೇಕು” ಎಂದು ತಿಳಿಸಿದರು. ‘ಓಕೆ ಅಗತ್ಯವಾಗಿ ಬನ್ನಿ’ ಎಂದು ಅವರಿಗೆ ತಿಳಿಸಿದೆ.
ಮದ್ಯಾನ್ಹ ಮೂರು ಗಂಟೆಯ ವೇಳೆಗೆ ನಾಲ್ಕು ಜನ ಮಾಧ್ಯಮ ಮಿತ್ರರು ಆಗಮಿಸಿದರು. ನನಗೆ ಆಶ್ಚರ್ಯ ಜೊತೆಗೆ ಭಯ ಕೂಡಾ ಆಯಿತು. ಪತ್ರಿಕಾ ಮಾದ್ಯಮದವರು ಮಾತ್ರವಲ್ಲ ಟಿವಿ ಮಾಧ್ಯಮದವರೂ ಸಹ ಬಂದಿದ್ದರು. ಎಲ್ಲರ ಮುಖದಲ್ಲೂ ಒಂದು ರೀತಿಯ ಬೇಸರ, ನೋವು ಇತ್ತು. ಮಾಮೂಲಿನ ನಗು, ಹಾಸ್ಯ ಇರಲಿಲ್ಲ. ಗಂಭೀರವಾಗಿ ಕುಳಿತ ಎಲ್ಲರ ಮುಖ ನೋಡಿ ಏನು? ಅನ್ನುವ ಮುಖಭಾವ ಮಾಡಿದೆ. ಟಿವಿ ಮಾಧ್ಯಮದ ಗೆಳಯರು ತಮ್ಮ ಮೊಬೈಲ್ ತೋರಿಸಿ, “ನಿಮ್ಮ ವಾಟ್ಸ್ ಆಪ್ಗೆ ಒಂದು ವಿಡಿಯೋ ಕಳಿಸಿದ್ದೇನೆ ನೋಡಿ” ಅಂದರು. ವಾಟ್ಸ್ ಅಪ್ ತೆರೆದು ವಿಡಿಯೋ ನೋಡಲು ಶುರು ಮಾಡಿದೆ. ರಾತ್ರಿ ಸುಮಾರು ೧೦ ಗಂಟೆಯಲ್ಲಿ ಮಾಡಿರುವ ವಿಡಿಯೋ ಅದು.
ಬೆಂಗಳೂರಿನ ಒಂದು ಪಾರ್ಕ್ ಪಕ್ಕದ ಫ್ಲೈ ಓವರ್ ಕೆಳಗೆ ಇಬ್ಬರು ಸುಮಾರು ಹತ್ತು ಅಥವಾ ಹನ್ನೆರಡು ವರುಷದ ಮಕ್ಕಳು ಚಳಿಯಲ್ಲಿ ನಡಗುತ್ತಾ ಮಲಗಿದ್ದಾರೆ, ಚಳಿಗೆ ಹೊರಳಾಡುತ್ತಾರೆ, ಅವರು ಮಲಗಿರುವುದು ಕಾರ್ಡ್ ಬೋರ್ಡ್ ಮೇಲೆ. ಚಳಿ ತಾಳದೆ ಇಬ್ಬರೂ ಎದ್ದು ಕುಳಿತು ಒಬ್ಬರನ್ನೊಬ್ಬರು ನೋಡುತ್ತಾರೆ, ಏನೋ ನಿರ್ಧಾರ ತೆಗೆದುಕೊಂಡವರಂತೆ ಇಬ್ಬರೂ ಎದ್ದು ಪಕ್ಕದ ಕಂಪೌಂಡ್ ಪಕ್ಕ ಬರುತ್ತಾರೆ. ಅಲ್ಲೇ ಕೆಳಗೆ ಬಿದ್ದ ಕಡ್ಡಿಗಳನ್ನು ತೆಗೆದುಕೊಂಡು ಕಂಪೌಂಡ್ಗೆ ಅಂಟಿಸಿದ್ದ ಸಿನಿಮಾ ಪೋಸ್ಟರ್ ಅನ್ನು ನಿಧಾನವಾಗಿ ತೆಗೆಯಲು ಶುರು ಮಾಡುತ್ತಾರೆ. ಮಧ್ಯ ಮಧ್ಯ ಆ ಪೋಸ್ಟರ್ ಹರಿದರೂ ಬಿಡದೆ ಅದನ್ನು ಕಂಪೌಂಡ್ನಿಂದ ತೆಗೆದು ಮತ್ತೆ ತಾವು ಮಲಗಿದ್ದ ಜಾಗಕ್ಕೆ ಬಂದು ಆ ಸಿನಿಮಾ ಪೋಸ್ಟರ್ ಅನ್ನು ಹೊದಿಕೆಯಂತೆ ಹೊದ್ದು ನಡುಗುತ್ತ ಮಲಗುತ್ತಾರೆ. ವಿಡಿಯೋ ಇದ್ದದು ಇಷ್ಟೇ. ಆದರೆ ಆ ಮಕ್ಕಳ ಪರಿಸ್ಥಿತಿ, ಪೋಸ್ಟರ್ ಹೊದ್ದು ಮಲಗಿದ ರೀತಿ ಕರುಳು ಹಿಂಡುವ ರೀತಿಯಲ್ಲಿ ಇತ್ತು. ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಅಪಹಾಸ್ಯ ಮಾಡುವಂತಿತ್ತು ಆ ವಿಡಿಯೋ.
“ಎರಡು ದಿನದ ಹಿಂದೆ ನಮ್ಮ ವರದಿಗಾರರು ಮಾಡಿದ ವಿಡಿಯೋ ಇದು, ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಮಕ್ಕಳಿಗೆ ನಾವು ಸಹಾಯ ಮಾಡಬೇಕು ಅಂತಿದ್ದೇವೆ, ಹೇಗೆ ಮಾಡೋದು?” ಪತ್ರಕರ್ತರ ಪ್ರಶ್ನೆ.
“ಈ ಮಕ್ಕಳನ್ನ ರಕ್ಷಣೆ ಮತ್ತು ಪೋಷಣೆ ಅಗತ್ಯ ಇರುವ ಮಕ್ಕಳು ಅಂತ ಗುರುತಿಸಬಹುದು, ಈ ಮಕ್ಕಳು ಪೋಷಕರ ಜೊತೆಗೆ ಇರುತ್ತಾರೆ, ಆ ಬಡ ಪೋಷಕರು ಈ ಮಕ್ಕಳನ್ನು ಶಾಲೆಗೆ ಕಳಿಸುವ ಯೋಚನೆಯನ್ನೇ ಮಾಡೋದಿಲ್ಲ. ಈ ಮಕ್ಕಳನ್ನ ರಕ್ಷಿಸಿ ಸರ್ಕಾರೀ ಗೃಹಗಳಲ್ಲಿ ಇಡೋದು ಸಾಧ್ಯ ಇಲ್ಲ, ಯಾಕೆಂದ್ರೆ ಮಕ್ಕಳಿಗೆ ಪೋಷಕರೊಂದಿಗೆ ಇರುವ ಹಕ್ಕು ಇದೆ. ಮಕ್ಕಳ ಕಲ್ಯಾಣ ಸಮಿತಿಯವರು ಈ ಮಕ್ಕಳನ್ನ ಮತ್ತೆ ಪೋಷಕರ ಜೊತೆಗೆ ಕಳುಹಿಸುತ್ತಾರೆ. ಇಂತಹ ಮಕ್ಕಳ ಬಗ್ಗೆ ಸರ್ಕಾರದ ಗಮನ ಸೆಳೆಯೋಕೆ ದೀರ್ಘ ವಕೀಲಿ ಮಾಡ ಬೇಕಾಗುತ್ತದೆ, ಈ ವಲಸೆ ಸಮಸ್ಯೆ ನಿರಂತರ. ನೀವು ಮಾಧ್ಯಮದವರು ಇದನ್ನ ದೊಡ್ಡ ಸುದ್ದಿ ಮಾಡಿದರೆ ಸರ್ಕಾರ ಈ ಮಕ್ಕಳ ಕಡೆ ಗಮನ ಹರಿಸಬಹುದು” ಎಂದು ಹೇಳಿದೆ.
“ಸರ್ಕಾರ ಗಮನ ಹರಿಸುವ ವೇಳೆಗೆ ಚಳಿಗಾಲ ಮುಗಿದಿರುತ್ತೆ, ಇಂತಹ ಮಕ್ಕಳು ಮಕ್ಕಳು ಜೀವ ಕಳಕೊಂಡು ಬಿಟ್ಟಿರ್ತಾರೆ, ಇಂತಹ ಮಕ್ಕಳಿಗೆ ದೊಡ್ಡ ಸಹಾಯ ಮಾಡೋಕೆ ನಮ್ಮ ಹತ್ತರ ಆಗೋಲ್ಲ ಅಂದರೆ ಮನೆ ಕಟ್ಟಿಸಿ ಕೊಡೋದು, ಶಾಲೆಗೆ ಕಳಿಸೋದು, ಈ ಮಕ್ಕಳ ಪರ ವಕೀಲಿ ಮಾಡೋದು ಬಹಳ ಸಮಯ ಬೇಕು. ಈ ತಕ್ಷಣ ಈ ಮಕ್ಕಳು ಚಳಿಯಿಂದ ರಕ್ಷಣೆ ಪಡೀಬೇಕು, ಏನು ಮಾಡೋಣ?” ಟಿವಿ ಗೆಳಯರ ಪ್ರಶ್ನೆ.
“ಮೊದಲು ನಮ್ಮ ನಗರದಲ್ಲಿ ಇಂತಹ ಎಷ್ಟು ಮಕ್ಕಳಿದ್ದಾರೆ ಅಂತ ಪತ್ತೆ ಮಾಡಿ ಅವರಿಗೆ ಸ್ವೆಟರ್, ಬೆಡ್ಶೀಟ್ ಕೊಟ್ಟರೆ ಈ ಚಳಿಗಾಲ ಕಳೆಯೋಕೆ ಸಾಧ್ಯ ಆಗಬಹುದೇನೋ, ಇದು ಒಂದು ಸಲಹೆ” ಅಂದೆ.
“ನೋಡಿದ್ರ ನಾವೂ ಅದನ್ನೇ ಯೋಚನೆ ಮಾಡಿದ್ವಿ, ಈ ಮಕ್ಕಳೆಲ್ಲಾ ಸರಿಯಾಗಿ ಪೋಷಣೆ ಇಲ್ಲದೆ ಬಹಳ ಸಣ್ಣ ಇರ್ತಾರೆ.. ಸ್ವೆಟರ್ ಸರಿ ಹೋಗಲ್ಲ, ಅದಕ್ಕೆ ಬೆಡ್ ಶೀಟ್ ಕೊಟ್ಟರೆ ಒಳ್ಳೇದು, ಆದರೆ ಎಷ್ಟು ಮಕ್ಕಳಿದ್ದಾರೆ, ಎಲ್ಲಿ ಎಲ್ಲಿ ಇದ್ದಾರೆ ಅಂತ ನೀವು ಪತ್ತೆ ಮಾಡಿ ಹೇಳಿ, ನಾವು ಬೆಡ್ ಶೀಟ್ ತರೋಕೆ ಹಣ ಸಂಗ್ರಹ ಮಾಡ್ತೀವಿ” ಪತ್ರಕರ್ತರ ಸಲಹೆ.
“ಸರಿ ನಮ್ಮ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಹಾಗೂ ಶಿಕ್ಷಣ ಹಕ್ಕು ಕಾರ್ಯಪಡೆಯ ಆಟೋ ಚಾಲಕರ ಸಹಕಾರದಿಂದ ಎಷ್ಟು ಮಕ್ಕಳು ಇದ್ದಾರೆ ಅಂತ ಪತ್ತೆ ಮಾಡ್ತೀವಿ, ಆದರೆ ನಮ್ಮ ಪ್ರಯತ್ನ ವ್ಯರ್ಥ ಆಗಬಾರದು” ಅಂದೆ.
“ನಾವು ಹಣ ತರುತ್ತೇವೆ, ನೀವು ಬೇಗ ಮಕ್ಕಳ ಸಂಖ್ಯೆ ಪತ್ತೆ ಮಾಡಿ, ನಮ್ಮ ಈ ಪ್ರಯತ್ನದಿಂದ ಕೆಲವು ಮಕ್ಕಳು ಬೆಚ್ಚಗೆ ಮಲಗಿದರೆ ನಮ್ಮ ಪ್ರಯತ್ನ ಸಾರ್ಥಕ ಆಗುತ್ತೆ, ಇನ್ನು ಎರಡು ಮೂರೂ ದಿನದಲ್ಲಿ ಮಕ್ಕಳ ಸಂಖ್ಯೆ ಪತ್ತೆ ಮಾಡಿ” ಎಂದು ಹೇಳಿ ಪತ್ರಕರ್ತ ಮಿತ್ರರು ಹೊರಟರು.
ಪೋಸ್ಟರ್ ಹೊದ್ದು ಮಲಗಿದ ಮಕ್ಕಳ ಚಿತ್ರ ನನ್ನ ಮನಸಲ್ಲಿ ಪದೇ ಪದೇ ಬರುತಿತ್ತು, ಪಾಪ ಆ ಮಕ್ಕಳ ಸ್ಥಿತಿ ಊಹಿಸಿಕೊಳ್ಳಲೂ ಕಷ್ಟವಾಗಿತ್ತು. ತಡಮಾಡದೆ ನಮ್ಮ ನೆಟ್ ವರ್ಕ್ ಸಂಸ್ಥೆಗಳಾದ ಅಪ್ಸಾ, ಬಾಸ್ಕೋ, ಸ್ಪರ್ಶ, ಸಿಕ್ರೆಮ್ ಹಾಗೂ ಶಿಕ್ಷಣ ಹಕ್ಕು ಕಾರ್ಯಪಡೆಯ ಸುಮಾರು ಹತ್ತು ಸದಸ್ಯರನ್ನು ಮರುದಿನ ಬೆಳಗ್ಗೆಯೇ ತುರ್ತು ಸಭೆಗೆ ಬರುವಂತೆ ಕರೆದೆ. ಎಲ್ಲರೂ ಸಭೆಗೆ ಬರಲು ಒಪ್ಪಿಕೊಂಡರು.
ಮರುದಿನ ಸಭೆಗೆ ಕರೆದವರೆಲ್ಲಾ ಬಂದಿದ್ದರು. ಪ್ರತಿಯೊಬ್ಬರಿಗೂ ನನ್ನ ಮೊಬೈಲ್ ನಲ್ಲಿ ಇದ್ದ ವಿಡಿಯೋ ತೋರಿಸಿ ಪರಿಸ್ಥಿತಿಯನ್ನು ವಿವರಿಸಿದೆ ಹಾಗೂ ಪತ್ರಕರ್ತರ ಭರವಸೆಯನ್ನೂ ತಿಳಿಸಿದೆ. ವಿಡಿಯೋ ನೋಡಿ ಪ್ರತಿಯೊಬ್ಬರಿಗೂ ಸಹಜವಾಗಿ ಬೇಸರವಾಗಿತ್ತು, ತಮ್ಮ ತಮ್ಮ ಸಂಸ್ಥೆ ಕೆಲಸ ಮಾಡುವ ಸ್ಥಳಗಳಲ್ಲಿ ಹಾಗೂ ಸುತ್ತ ಮುತ್ತ ಇಂತಹ ಮಕ್ಕಳನ್ನು ಪತ್ತೆ ಮಾಡಿ ಇನ್ನು ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ಎಲ್ಲರೂ ಒಪ್ಪಿಕೊಂಡರು. ಕಾರ್ಯಪಡೆಯ ಅಟೋ ಚಾಲಕರು ತಾವು ಓಡಾಡುವ ಸ್ಥಳಗಳಲ್ಲಿ ಕಂಡು ಬರುವ ಇಂತಹ ಮಕ್ಕಳ ವಿಳಾಸ ತರುವದಾಗಿ ಒಪ್ಪಿಕೊಂಡರು. ಒಂದು ರೀತಿಯಲ್ಲಿ ಎಲ್ಲರೂ ಒಂದು ಯುದ್ಧಕ್ಕೆ ಸಿದ್ದರಾದ ಹಾಗೆ ಇತ್ತು ಪರಿಸ್ಥಿತಿ.
ಮೂರು ದಿನಗಳ ನಂತರ ಸೂರಿಲ್ಲದೆ ಚಳಿಯಲ್ಲಿ ಒದ್ದಾಡುವ ಸುಮಾರು ೪೦೦ ಕುಟುಂಬಗಳ ಮಾಹಿತಿ ದೊರೆಯಿತು. ಯಾವ ಕುಟುಂಬ ಎಲ್ಲಿದೆ, ಫುಟ್ ಪಾತ್ ನಲ್ಲಿ ಇರುವವರು, ಫ್ಲೈ ಓವರ್ ಕೆಳಗೆ ಇರುವವರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಹೊರಗೆ ಇರುವವರು ಹೀಗೆ ಒಟ್ಟು ಮಕ್ಕಳ ಸಂಖ್ಯೆ ಸುಮಾರು ೧೩೦೦. ಪತ್ರಕರ್ತ ಮಿತ್ರರಿಗೆ ಈ ಕುಟುಂಬಗಳ ಮಾಹಿತಿಯನ್ನು ತಿಳಿಸಿದೆ. ಬೆಂಗಳೂರಿನ ಯಾವ ಭಾಗದಲ್ಲಿ ಇದ್ದಾರೆ, ಎಷ್ಟು ಜನ ಇದ್ದಾರೆ ಎಂಬ ವಿಸ್ತೃತ ಮಾಹಿತಿಯನ್ನೂ ಸಹ ತಿಳಿಸಿದೆ.
ಮರುದಿನ ಬೆಳಗ್ಗೆ ಪತ್ರಕರ್ತ ಮಿತ್ರರ ಕರೆ ಬಂತು, ಎರಡು ಟೆಂಪೋಗಳ ಭರ್ತಿ ಬೆಡ್ ಶೀಟ್ ಬಂದಿದೆ. ಸುಮಾರು ಎರಡು ಸಾವಿರ ಬೆಡ್ ಶೀಟ್ ಇದೆ ಎಲ್ಲಿಗೆ ತಲುಪಿಸುವುದು. ನಮ್ಮ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಟೆಂಪೋ ಇದ್ದಲ್ಲಿಗೇ ಹೋಗಿ ಅಗತ್ಯ ಇದ್ದಷ್ಟು ಬೆಡ್ ಶೇಟ್ ಪಡೆದುಕೊಂಡರು. ಒಂದು ಟೆಂಪೋ ಬೆಡ್ ಶೀಟ್ ನಮ್ಮ ಕಚೇರಿಗೆ ಬಂತು. ನಾನು ಕುಳಿತು ಕೊಳ್ಳುತ್ತಿದ್ದ ಕೊಠಡಿ ಬೆಡ್ ಶೇಟ್ ನಿಂದ ತುಂಬಿ ಹೋಗಿತ್ತು. ಕಾರ್ಯಪಡೆಯ ಆಟೋ ಚಾಲಕರಿಗೆ ಅವರು ಪತ್ತೆ ಮಾಡಿದ ಕುಟುಂಬಗಳಿಗೆ ಕೊಡಲು ಬೆಡ್ ಶೇಟ್ ವಿತರಿಸಿದೆ. ಇನ್ನೂ ಉಳಿಯಿತು .. ನಮ್ಮ ಕಟ್ಟಡದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಹಾಗೂ ಸೆಕ್ಯುರಿಟಿ ಗಾರ್ಡ್ ಗಳಿಗೆ ಬೆಡ್ ಶೀಟ್ ವಿತರಿಸಿದೆ. ಎಲ್ಲರಿಗೂ ಆನಂದ. ಅಗತ್ಯ ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಬೆಡ್ ಶೀಟ್ ವಿತರಿಸಿದ ನಂತರ ಫೋಟೋ ತೆಗೆದು ಕೊಂಡು ನನ್ನ ಮೊಬೈಲಿಗೆ ಕಳಿಸಬೇಕು ಎನ್ನುವ ಷರತ್ತನ್ನು ಸಂಸ್ಥೆಗಳಿಗೆ ಹಾಗೂ ಕಾರ್ಯಪಡೆಯ ಚಾಲಕರಿಗೆ ವಿಧಿಸಲಾಗಿತ್ತು. ಪ್ರತಿ ಐದು ನಿಮಿಷಕೊಮ್ಮೆ ಫೋಟೋ ಬರತೊಡಗಿತ್ತು. ಪೋಷಕರ ಕಣ್ಣಲ್ಲಿ, ಮಕ್ಕಳ ಕಣ್ಣಲ್ಲಿ ಸಂತೋಷ ಕಂಡು ಒಂದೊಳ್ಳೆ ಕೆಲಸ ಮಾಡಿದ ನೆಮ್ಮದಿ ನನಗೆ.
ಈ ಪತ್ರಕರ್ತ ಮಿತ್ರರಿಗೆ ಎರಡು ಟೆಂಪೋ ಬೆಡ್ ಶೀಟ್ ನೀಡಿದವರಾರು? ಅಷ್ಟು ಹಣ ಹೇಗೆ ಸಂಗ್ರಹ ಮಾಡಿದರು ಅನ್ನೂ ಪ್ರಶ್ನೆ ನನ್ನ ಕಾಡುತಿತ್ತು, ಆಗಲೇ ಟಿವಿ ಮಾಧ್ಯಮದವರ ಕರೆ ಬಂತು, “ಸಾರ್ ಮೊಬೈಲ್ಗೆ ಬಂದಿರೋ ಎಲ್ಲಾ ಫೋಟೋಗಳನ್ನ ಹಾಗೆಯೇ ಇಟ್ಟುಕೊಂಡಿರಿ, ಯಾವುದನ್ನೂ ಡಿಲೀಟ್ ಮಾಡಬೇಡಿ, ತಕ್ಷಣ ಹೊರಟು ಪದ್ಮನಾಭನಗರಕ್ಕೆ ಬನ್ನಿ” ಯಾಕೆ ಪದ್ಮನಾಭನಗರಕ್ಕೆ ಬರಬೇಕು? ಎಲ್ಲಿ ಬರಬೇಕು? ಅನ್ನೋದನ್ನ ಕೇಳದೆ ಕಾರ್ಯಪಡೆಯ ಆಟೋ ಗೆಳೆಯರ ಜೊತೆ ಹೊರಟೆ. ಪದ್ಮನಾಭನಗರದಲ್ಲಿ ಸಿಕ್ಕ ಟಿವಿ ಮಾಧ್ಯಮದ ಗೆಳೆಯರು ನನ್ನನ್ನು ಕರೆದುಕೊಂಡು ಹೋಗಿದ್ದು ಸೀದಾ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ.
ಕೆಲವು ಜನಗಳ ಮದ್ಯ ಕುಳಿತಿದ್ದ ಮಾನ್ಯ ದೇವೇಗೌಡರು ನನ್ನ ನೋಡಿ ಎದ್ದು ಬಂದರು. ಟಿವಿ ಮಾಧ್ಯಮದ ಗೆಳೆಯರು “ಸಾರ್ ಇವರೇ ನಾಗಸಿಂಹ, ಮಕ್ಕಳ ಹಕ್ಕುಗಳ ಸಂಸ್ಥೆಯವರು, ನೀವು ಕೊಡಿಸಿದ ಬೆಡ್ ಶೀಟ್ ಎಲ್ಲವನ್ನೂ ಅಗತ್ಯ ಮಕ್ಕಳಿಗೆ ತಲುಪಿಸಿದ್ದಾರೆ”. ಎಂದು ಹೇಳಿದರು.
ಮಾಜಿ ಪ್ರಧಾನಿಯವರು ನನ್ನ ಹೆಗಲ ಮೇಲೆ ಕೈ ಹಾಕಿ “ಒಳ್ಳೆ ಕೆಲಸ ಮಾಡಿದ್ದೀರಿ, ನಾನು ನನ್ನ ಕೈಲಾದ ಸಹಾಯ ಮಾಡಿದ್ದೀನಿ. ನಾನು ಕೊಡಿಸಿದ್ದು ಅನ್ನುವ ವಿಚಾರವನ್ನ ಬಹಿರಂಗ ಮಾಡಬೇಡಿ. ಇಂತಹ ವಿಚಾರಗಳಲ್ಲಿ ಪ್ರಚಾರ ಪಡಿಯಬಾರದು” ಎಂದರು. ನಾನು ಮೂಕವಿಸ್ಮಿತನಾಗಿದ್ದೆ. ನನ್ನ ಮೊಬೈಲ್ನಲ್ಲಿ ಇದ್ದ ಬೆಡ್ ಶೀಟ್ ವಿತರಣೆಯ ಫೋಟೋಗಳನ್ನು ದೇವೇಗೌಡರಿಗೆ ತೋರಿಸಿದೆ. ಬಹಳ ಸಂತೋಷಪಟ್ಟರು. ಪತ್ನಿಯ ಜೊತೆ ನನ್ನದೊಂದು ಫೋಟೋ ತೆಗೆಸಿಕೊಂಡು ನನ್ನನ್ನು ಬಿಳ್ಕೊಟ್ಟರು.
ಈ ಘಟನೆಯ ಬಗ್ಗೆ ಮಾಧ್ಯಮದವರು ಪ್ರಚಾರ ಪಡೆಯಲಿಲ್ಲ, ಸ್ವಯಂಸೇವಾ ಸಂಸ್ಥೆಗಳ ಸದಸ್ಯರಾಗಲಿ, ಸಹಕರಿಸಿದ ಆಟೋ ಚಾಲಕರಾಗಲಿ ಪ್ರಚಾರ ಬಯಸಲಿಲ್ಲ. ಅದ್ಭುತವಾದ ಕೆಲಸ ಮರೆಯಲ್ಲಿ ನಡೆದಿತ್ತು. ಇಂತಹ ಘಟನೆಗಳು ಯಾಕೆ ಪದೇ ಪದೇ ನಡೆಯುವುದಿಲ್ಲ?
ಒಂದು ಚಳಿಗಾಲವನ್ನು ಈ ವಸತಿ ರಹಿತ, ವಲಸೆ ಮಕ್ಕಳು ನಾವು ನೀಡಿದ ಬೆಡ್ ಶೀಟ್ ಸಹಾಯದಿಂದ ಕಳೆದರು. ಮುಂದಿನ ವರುಷ ?????
-ನಾಗಸಿಂಹ ಜಿ ರಾವ್
Super Anna 🫶🏻👍🏻
ಒಂದು ಯೋಚನೆ. ಹಲವು ಸಾಧ್ಯತೆಗಳು. ಚೆನ್ನಾಗಿದೆ ನಿರೂಪಣೆ.