ಇವತ್ತ ನಮ್ಮ ಪದ್ದಕ್ಕಜ್ಜಿ ಹನುಮದ್ ವ್ರತ ಅಂತ ಶ್ರೀ ತಿಪ್ಪಣ್ಣಾರ್ಯರ ಹನುಮದ್ವಿಲಾಸದ ಭಜನಿಗೆ ಹೋಗಿದ್ದರ, ಅವರಿಗೆ ಈಗ ಮೊದಲಿನಂಗ ಒಂದೇ ದಿನ ಮೂರು ತಾಸು ಹನುದ್ವಿಲಾಸ ಹಾಡಿ, ಅದರ ಅರ್ಥದ ಸೊಗಸು ಹೇಳಲಿಕ್ಕಾಗುದಿಲ್ಲ ಅಂತ, ಮೂರು ದಿನದ ಭಜನಿ ಕಾರ್ಯಕ್ರಮ ಇತ್ತು. ಮೊದಲನೇ ದಿನಾನೇ, ಹನುಮಂತ ದೇವರ ವರ್ಣನಾ ಮಾಡಿ, ಸೀತಾ ಮಾತಾ, ಲಂಕಾದಾಗ ಇದ್ದಾಳ ಅನ್ನೂ ತನಾ ಬಂದ ಕೂಡಲೇ ನಿಲ್ಲಿಸಿದ್ದರು.ಎಲ್ಲಾರಿಗೂ ಕುಂಕುಮಾ ಕೊಡೂವಾಗ, ರುಕ್ಮಣೀ ಬಾಯಾರ ಕೈಯಾಗ, ಕುಂಕುಮದ ಭರಣಿ ತಂದಿದ್ದ ಹಾಳಿ ಚೀಲ, ಅಂದರ ಪೇಪರ ಬ್ಯಾಗು ಭಾಳ ಚಂದದರೆವಾ ಅಂತ ನೋಡೇ ಬಿಟ್ಟರು. ರುಕ್ಮಿಣೀ ಬಾಯಾರ ಮೂಗು ಮ್ಯಾಲಾತು ನೋಡರೀ, “ಅಯ್ಯ ಮನ್ನೆ, ನೈಮಿಷಾರಣ್ಯದಾಗ, ಭಾಗವತ ಪ್ರವಚನ ಸಪ್ತಾಹ ಹೇಳಿದರಲ್ಲ ಆಚಾರ್ರು, ಅವಾಗ ದಿಲ್ಲಿ ತನಕಾ ಫ್ಲೈಟ್ ಲೇ ಹೋಗಿದ್ದಿವಿ, ಅವಾಗ, ಫ್ಲೈಟ್ನೊಳಗಿನ ಸುಂದ್ರಿ ಕೊಟ್ಟಿದ್ದು ನೋಡರೀ, ಚಂದದ ನೀವೂ ನೋಡಲೀಂತ, ತಂದೇನಿರೀ” ಅಂದರು.
ಪದ್ದಕ್ಕಜ್ಜಿಗೆ, ಜೀವಾ ಖಜೀಲಾತು ನೋಡರೀ, ಅಲ್ಲರೀ, ಹನುಮದ್ವಿಲಾಸಾ ಹಾಡೋದು ಇವರು, ನಡುವ ರುಕ್ಮಿಣೀಬಾಯೀದೇನರೀ ಸೋಗು, ಬಿಡು ನಮ್ಮವ್ವಾ, ನೀಯೇನು ಒಬ್ಬಾಕಿನೇ ಅಲ್ಲ, ವಿಮಾನದಾಗ ಹೋದಾಕಿ, ನಿನಗ ಹೇಳದೇನೇ, ನಾನು, ಭಜನಾ ಮಂಡಳಿ ಪೂರ್ತಿ ಕರಕೊಂಡು ವಿಮಾನದಾಗ ಹಾರಿ ಬರತೇನಿ ಅಂದುಕೊಂಡರು. ಯಾವುದರೇ ವಿಷಯ ಪದ್ದಕ್ಕಜ್ಜಿ ತಲ್ಯಾಗ ಬಂತೂಂದರ ಕೇಳೀರ್ಯಾ, ರುಕ್ಮಿಣಿಬಾಯಿಗೆ ಬಾಯ್ ಬಾಯ್ ನೂ ಹೇಳದೇ, ಒಂಬತ್ತ ಮಂದೀನ ಕರಕೊಂಡು, ಸೀದಾ ವಿಮಾನ ನಿಲ್ದಾಣಕ್ಕೇನೇ ಹೋದರು.ಅದೂ ಹೆಂಗಂತೀರಿ, ಬಗಲಾಗ ಒಂದು ಚೀಲ, ಒಂದಿಬ್ಬರ ಕೈಯಾಗ ತಾಳ, ಮತ್ತೊಂದಿಬ್ಬರು ಕಂಜರಿ, ಇನ್ನೊಂದಿಬ್ಬರುಗಿಲಕಿ ಹಿಡಕೊಂಡು ರಾಮ ದೇವರ ಹಾಡು ಹೇಳಕೋತ ನಾಕು ಕಿಲೋಮೀಟರು ಪಾದಯಾತ್ರಾನ ಹೋದರು.
ದಿನಾ ಮಠಕ್ಕ, ಗುಡೀಗೆ ಭಜನೀಗೆ ಹೋಗುವಾಗ, ಮಕ್ಕಳಿಗೆ ಕಾರನ್ಯಾಗ ಬಿಡೂ ಅನ್ನೋವರು, ಇಂದ ಯಾರಿಗೂ ಹೇಳಿಲ್ಲ, ಬರೇ ಭಜನೀಗೆ ಹೋಗಿ ಬರತೀನ್ಯಾ ಅಂತ ಹೊಂಟರು. ವಿಮಾನದಾಗೇನರೀ, ಒಂದೆರಡ ತಾಸನ್ಯಾಗ ಅಯೋಧ್ಯಾ ಮುಟ್ಟತೇವಿ, ಸೀದಾ ದೇವರ ದರ್ಶನಕ್ಕ ಹೋಗೋದು, ರಾಮ ದೇವರ ಮುಂದ ಕುತಗೊಂಡು ಒಂದು ತಾಸು ಭಜನೀ ಮಾಡಿ, ಅಲ್ಲೇ ಪೇಜಾವರ ಮಠದಾಗ ನೈವೇದ್ಯ ಪ್ರಸಾದ ಮುಗಸಿದರ, ಮುಂದೇನದ ಅಲ್ಲೆರೆ ಕೆಲಸ, ಹೊಂಟೇ ಬಿಡೋದು. ಸಂಜೀತನಾ ಮನೀ ಮನೀ ಸೇರತೇವಿ.ಯಾರಿಗ್ಯಾಕ ಈಗ ಹೇಳೋದು. ಮಕ್ಕಳು ಎಷ್ಟೋ ಸಲ, ಆಫೀಸಿಂದ ಹಂಗಿಂದ ಹಂಗ, ದಿಲ್ಲಿ, ಮದ್ರಾಸ್, ಕಲಕತ್ತಾ ಅಂತ ಹೋಗಿರೋದಿಲ್ಲ. ಮನೀಗೆ ರಾತ್ರಿ ಬಂದಮ್ಯಾಲೆನೇ ತಿಳೀತದಲ್ಲಾ, ಹಂಗ ನಾವೂ ಮಾಡೋಣ. ಮುಖ್ಯ ರುಕ್ಮಿಣೀಬಾಯೀಗೆ ಹೇಳೋದ ಬ್ಯಾಡ. ಬಂದ ಮ್ಯಾಲೆ ವಿಷಯ ತಿಳೀಬೇಕು ಬುಬ್ಬಣಗಿತ್ತಿಗೆ.
ಸೀದಾ ಭಜನೀ ಮಾಡಿಕೋತ ವಿಮಾನ ನಿಲ್ದಾಣದ ಎಂಟ್ರನ್ಸ್ ನೊಳಗೆ ನುಗ್ಗಿದಾಗ, ಅಲ್ಲೀ ಸೆಕ್ಯೂರಿಟಿಯವರಿಗೆ ಏನ ಮಾಡಬೇಕು, ಏನ ಹೇಳಬೇಕು ತಿಳೀದಂಗಾತು.ಮೊನ್ನೆ ಒಬ್ಬರು ಅಯೋಧ್ಯಾಕ್ಕ ಹೊಂಟವರು, ವಿಮಾನ ನಿಲ್ದಾಣದಾಗ ರಾಮನ ಭಜನೀ ಮಾಡಿದ್ದು ಕೇಳಿದ್ದರಲ್ಲ, ತುಸು ಸುಮ್ಮನಿದ್ದರು.ನಮ್ಮ ಪದ್ದಕ್ಕಜ್ಜಿಯವರು, ಸೀದಾ ಚೆಕ್ ಇನ್ ಗೆ ಹೋದವರೇ, ಇಲ್ಲೆ ಅಯೋಧ್ಯಾ ವಿಮಾನ ಎಲ್ಲಿ ನಿಲ್ಲತಾವಮ್ಮ ಅಂದರು.ಬರೀ ಇಂಗ್ಲೀಷು ಕೇಳಿದ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕನ್ನಡ ಭಾಷಾ ಕೂಡಾ ಜರ್ಮನ್ ದಂಗ ಕೇಳಿರಬೇಕು.ನಿಮ್ಮ ಪಾಸಪೋರ್ಟ ಅಥವಾ ಆಧಾರ ಕಾರ್ಡುಹಂಗ ಟಿಕೀಟು ತೋರಸರಿ ಅಂತ ನಾಲ್ಕು ಸರ್ತೆ ಇಂಗ್ಲೀಷ್ನ್ಯಾಗ ಹೇಳಿ, ಒಮ್ಮೆ ಕನ್ನಡದಾಗ ಹೇಳಿದಳು ಆ ಲಿಫ್ ಟಿಕ್ ರಮಣಿ.ಅಯ್ಯ ನಂಅವ್ವಾಇಷ್ಟನ್ನ ಅಷ್ಟುದ್ದಾ ಹೇಳೀದ್ಯೇನ, ನಂ ಎಲ್ಲಾರ್ದೂ ಪಾಸಪೋರ್ಟ ಇಲ್ಲವ್ವೀ, ಮತ್ತ ಫ್ರೀ ಟಿಕೀಟಿಗೆ ಆಧಾರ ಕಾರ್ಡ ಸಾಕಲ್ಲನೂ.ಇಕಾ ಇಲ್ಯವ ನೋಡೂ, ಜಾಗಾ ಇಲ್ಲಂತ ಹೇಳಬ್ಯಾಡ, ನಾವೆಲ್ಲಾ ಹಿಂದಿನ ಸಾಲಿನ್ಯಾಗ ನಿಂತು, ದೇವರ ಧ್ಯಾನ, ಭಜನೀ ಮಾಡಿಕೋತ ಹೋದೇವು, ಒಂಚೂರು ಬರೋ ಮದಲನೇ ವಿಮಾನದಾಗ ನಮ್ಮನ್ನ ಕಳಿಸಿಬಿಡವ್ವ. ಮತ್ತ ಸಂಜೀಗೆ ಲಗೂನ ಮನೀ ಸೇರಲಿಕ್ಕಾಗತದ. ಮತ್ತ ಮಕ್ಕಳು ಮಮ್ಮಕ್ಕಳು ಕಾಯತಾರ ತಾಯೀ, ನಿನ್ನಷ್ಟ ಚಂದದ ಸೊಸಿ ಇದ್ದಾಳ ನನಗ. ಸೀಟಿಲ್ಲಾಂತ ಮುಂದಿನ ವಿಮಾನಾಂತ ಕಾಯಿಸಬ್ಯಾಡ ತಾಯೀ, ಅಂತ ಅಂತಃಕರಣದಿಂದ ಹೇಳಿದರೇನೋ ಖರೇ.
ಆ ಬಣ್ಣದ ಗೊಂಬೀಗೆ ಅದೇನೂ ತಿಳೀಲಿಲ್ಲ. ಸುಂಸುಮ್ಮನ ಹೇಳತಾರೇನು, ಸುಂಕದವನ ಮುಂದೆ ಸುಖಾ ದುಃಖಾ ಹೇಳಿದಂಗ ಅಂತ, ಐ, ಹಿಂದ ಸರೀರಿ, ನಿಮ್ಮ ಬುಕಿಂಗ್ ತೋರಸರಿ, ಆಮ್ಯಾಲ ಮುಂದ ಬರ್ರಿ, ಬರೇ ಹಾಡು ಹಾಡಕೋತ ಅಯೋಧ್ಯಾಕ್ಕ ಹೋಗಲಿಕ್ಕೆ ಇದೇನು ಪುಷ್ಪಕ ವಿಮಾನ ಅಲ್ಲ ಅಂತ ಹಿಂದ ಕಳಿಸಿದಳು, ಅಷ್ಟಲ್ಲದ ಅಷ್ಟ ದೂರದಾಗ ಯಾವುದೋ ವಿಮಾನ ಬಂತು, ಇವರು ಅಲ್ಲಿ ಸೆಕ್ಯೂರಿಟೀನೂ ಕೇಳದೇ ವಿಮಾನ ಹತ್ತಲಿಕ್ಕೆ ಓಡಿದರು, ಆದರ, ಸುಟ್ಟಬರ್ಲಿ, ಅಲ್ಲೆ ವಿಮಾನ ತನಕಾ ಹೋಗಲಿಕ್ಕೆ ಇರೂ ಬಸ್ಸಿನವನೂ ಇವರನ್ನ ಹತ್ತಿಸಿಕೊಂಡಿಲ್ಲ, ವಿಮಾನದ ಹತ್ತಿರನೇ ಓಡಿದರು, ಅಲ್ಯಂತೂ ಇವರೆಲ್ಲಾರನೂ ವಿಮಾನದ ಹತ್ತರಾನೂ ಸೇರಸಲಿಲ್ಲ. ಆ ರಾಮಚಂದ್ರ ಇವರನ್ನ ಈಗಲೇ ತನ್ನ ಹತ್ತರ ಕರಿಸಿಕೊಳ್ಳಲಿಕ್ಕೆ ಬಯಸಿಲ್ಲಂತ.
ಪಾಪ, ಈಗ ಸೆಕ್ಯೂರಿಟಿಯವರು ನಾಕು ಮಂದಿ ಒಟ್ಟಿಗೆ ಬಂದು ಇವರನ್ನು ಹೊರಗೆ ಕಳಿಸಿದರು.ಅಷ್ಟೊತ್ತಿಗೇನೇ ಒಬ್ಬರು ಹಿರಿಯರು ಬಂದು ನಮ್ಮ ಪದ್ದಕ್ಕಜ್ಜಿಗೆ ತಿಳಿಸಿ ಹೇಳಿದರು.“ಬರೇ, ಒಂದು ಆಧಾರ ಕಾರ್ಡನಿಂದ ವಿಮಾನದಾಗ ಪ್ರಯಾಣ ಮಾಡಲಿಕ್ಕೆ ಸಾಧ್ಯವಾಗೋದಿಲ್ಲ, ಹೆಂಗಸರಿಗೆ ಬರೀ ಬಸ್ಸಿನೊಳಗೆ ಮಾತ್ರ ಪುಕ್ಕಟೆ ಪ್ರಯಾಣಕ್ಕ ಅವಕಾಶದ. ಟ್ರೇನು, ವಿಮಾನದಾಗ ಅಂತಾ ಯಾವ ರಿಯಾಯಿತಿನೂ ಇಲ್ಲ. ಅಲ್ಲದೇನೆ ಇಲ್ಲಿಂದ ಅಯೋಧ್ಯಾಕ್ಕೆ ಯಾವುದೇ ನೇರ ವಿಮಾನ ಇಲ್ಲವೇ ಇಲ್ಲ. ನೀವು ಹೇಳಿದಂಗೇನೆ ಈಗ ಸೀದಾ ಅಯೋಧ್ಯಾಕ್ಕೆ ಹೋಗಿ, ನೇರವಾಗಿ ದೇವರ ಮುಂದೆ ಕೂತು ಭಜನೀ ಮಾಡಲಿಕ್ಕೆ ಸಾಧ್ಯವಾಗೋದಿಲ್ಲ. ಅಲ್ಲೆ ವಿಮಾನ ನಿಲ್ದಾಣದಿಂದ ರಾಮ ದೇವರ ದೇವಸ್ಥಾನ ಭಾಳ ದೂರ. ಅದೂ ಕೂಡ ಎರಡು ಮೂರು ತಾಸಿನ ಪ್ರವಾಸಾನೇ ಆಗತದ.ಮುಂದೆ ಮೊದಲೇ ದರ್ಶನಕ್ಕೆ ಟಿಕೇಟ್ ಬುಕ್ ಮಾಡಿದ್ದರೂನೂ ನಾಲ್ಕು ತಾಸು ಬೇಕು ದರ್ಶನಾಗಿ ಹೊರಗೆ ಬರಲಿಕ್ಕೆ, ಪೇಜಾವರ ಮಠವೇ ಆಗಲಿ,ಬೇರೇ ಯಾವುದೇ ಮಠವೇ ಆಗಲೀ, ಮೊದಲೇ ರೂಮು ಬುಕ್ ಮಾಡಿರಬೇಕು.ಹೋಗಿ ಬರಲಿಕ್ಕೆ ಮೂರು ದಿನಾ ಆದರೂ ಬೇಕು.” ಅಂತ ತಿಳಿಸಿ ಹೇಳಿದರು.
ಆದರೇನು ಮಾಡೋದು.ಅಯೋಧ್ಯಾಕ್ಕ ಹೋಗಿ ರಾಮದೇವರ ಮುಂದ ಭಜನೀ ಅಂದುಕೊಂಡು ಮನೀಯಿಂದ ಬಂದು ಹಂಗ, ಮನೀಗೆ ಹೋಗಲಿಕ್ಕೆ ಆಗತದೇನು.ಅಲ್ಲೇ ವಿಮಾನ ನಿಲ್ದಾಣದ ಕಾರಿಡಾರಿನೊಳಗ ಒಂದು ಕಡೆ ದುಂಡಗ ಕೂತರು, ಯಾರದೋ ಚೀಲದಾಗಿದ್ದ ರಾಮದೇವರ ಸಣ್ಣ ಫೋಟೋ ನಡುವಿಟ್ಟರು, ಅಂದುಕೊಂಡಿದ್ದ ಭಜನೀ ಶುರು ಮಾಡಿದರು.ಸತತ ಎರಡು ತಾಸು ಭಜನೀ ನಡೀತು.ವಿಮಾನ ನಿಲ್ದಾಣದಾಗಿದ್ದ ಎಲ್ಲಾ ಜನರೂ ಇವರ ಸುತ್ತಲೂ ಬಂದು ನಿಂತರು. ನಮ್ಮ ಪದ್ದಕ್ಕಜ್ಜಿಗೆ ಪ್ರತಿಯೊಬ್ಬರ ಮುಖದೊಳಗೂ ಶ್ರೀ ರಾಮಚಂದ್ರನೇ ಕಾಣಿಸಿದ. ಬ್ಯಾಸರದಿಂದ ಶುರು ಮಾಡಿದ ಭಜನೀಯೊಳಗೆ ಭಕ್ತಿ ತುಂಬಿತ್ತು. ಒಬ್ಬ ದೇವರು ನಮಗ ದರ್ಶನಕ್ಕ ಹೋಗಲಿಕ್ಕೆ ಅವಕಾಶ ಕೊಡಲಿಲ್ಲಂದರೇನಾತು, ಇಷ್ಟು ಮಂದಿ ಜನತಾ ಜನಾರ್ಧನನ ಮುಖಾಂತರ ದರ್ಶನಾ ಕೊಟ್ಟಾನಲ್ಲ ಅಂತ ಸಂಪೂರ್ಣ ತೃಪ್ತಿಯಿಂದ “ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ । ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ, ಶ್ರೀಮನ್ನಾರಾಯಣಾಯೇತಿ ಸಮರ್ಪಯಾಮಿ” ಅನ್ನೂದರೊಳಗೆ, ನೋಡತಾರ,
ವಿಮಾನ ನಿಲ್ದಾಣದಾಗ ಸುತ್ತಲೂ ಎಲ್ಲಾರೂ ನಿಂತಾರ, ಯಾವ ಸೆಕ್ಯೂರಿಟಿ, ಇವರನ್ನ ಝಬರಿಸಿ, ಕರಕೊಂಡು ಬಂದಿದ್ದನೋ, ಅವನೇ, ಈಗ, ಕೈ ಮುಕ್ಕೊಂಡು ನಿಂತಾನ. ಅಷ್ಟೇ ಅಲ್ಲ. ಇವರ ಭಜನಿಗೆ ನಾಕು ಮಂದಿ ವಿದೇಶೀ ಹುಡುಗರು ನರ್ತನಾ ಮಾಡಲಿಕ್ಕತ್ತಾರ. ಅವರ ಜೊತೆಗೆ ನಮ್ಮೂರಿನವರೂ ನಾಲ್ಕುಮಂದಿ ಸೇರಿಕೊಂಡಾರ, ಮುಖ್ಯವಾಗಿ, ಎಲ್ಲಾ ಕನ್ನಡ ಟೀವೀ ಚಾನೆಲ್ಲನವರಿಗೆ ಸುದ್ದಿ ಹೆಂಗ ಮುಟ್ಟೇದೋ ಗೊತ್ತಿಲ್ಲ, ಎಲ್ಲಾರೂ ಈ ಟೀವೀಯವರು ಲೈವ್ ಕವರೇಜ್ ಮಾಡಲಿಕ್ಕತ್ತಾರ. ಒಮ್ಮೆ ಈ ನರ್ತನದವರನ್ನ ತೋರಿಸಿದರ, ಮತ್ತೊಮ್ಮೆ ಭಜನಾ ಮಂಡಳಿಗೆ ಹಿಂಗ ಕ್ಯಾಮರಾ ಹಿಡದು ತೋರಸತಾರ. ನಮ್ಮತನಾ, ನಮ್ಮ ಧರ್ಮದ ಬಗ್ಗೆ ಯಾರ್ಯಾರೋ ಹೇಳಿಕೆ ನೀಡಲಿಕ್ಕತ್ತಾರ. ಒಬ್ಬಾಕಿ ಯಾರೋ ಏನೋ ಗೊತ್ತಿಲ್ಲ, “ಮಾನ್ಯ ಮುಖ್ಯಮಂತ್ರಿಗಳೇ ನೀವು ಯಾರಿಗೆ ಗ್ಯಾರಂಟೀ ಕೊಡತೀರೋ ಗೊತ್ತಿಲ್ಲ. ಅದು ಯಾರಿಗೆ ಮುಟ್ಟಿದೆಯೋ ಅದೂ ಗೊತ್ತಿಲ್ಲ, ಆದರೆ, ಇಂತಹ ಹಿರಿಯರಿಗೆ, ಇಂತಹ ಭಕ್ತರಿಗೆ ನೀವು ನೇರ ವಿಮಾನ ಪ್ರವಾಸದ ವ್ಯವಸ್ಥೆ ಯಾಕೆ ಮಾಡಿಲ್ಲ, ನಿಮಗೆ ಸರ್ಕಾರದಿಂದ ಯಾರು ಯಾರಿಗೋ ಯಾತ್ರೆಯನ್ನು ಮಾಡಲಿಕ್ಕೆ ಸೌಲಭ್ಯದ ಅವಕಾಶ ಅದ, ಇವರಿಗೆಲ್ಲಾ ಯಾತ್ರೆಯ ಸೌಲಭ್ಯ ಕೊಡತೀರಿ, ಇಂತಹ ಅರ್ಹರು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ, ಹೇಳಿ ಮಾನ್ಯ ಮುಖ್ಯಮಂತ್ರಿಗಳೇ, ಈ ವಯಸ್ಸಾದವರು ನಿಮಗೆ ಮತದಾನ ಮಾಡಿಲ್ಲವೇ, ಹಿರಿಯ ನಾಗರಿಕರ ಬಗ್ಗೆ ನಿಮಗೆ ಗೌರವಿಲ್ಲವೇ, ಸನಾತನ ಧರ್ಮವನ್ನು ಉಳಿಸುವ ಬಗ್ಗೆ ಸರ್ಕಾರದ ವಿಚಾರ, ಜವಾಬ್ದಾರಿ ಏನು ಎಂಬುದನ್ನ ನೇರವಾಗಿ ಹೇಳಿ.” ಅಂತ ಆವೇಶ ಭರಿತಳಾಗಿ ಹೇಳಲಿಕ್ಕೆ ಹತ್ಯಾಳ.
ನಮ್ಮ ಪದ್ದಕ್ಕಜ್ಜಿ ಲೈವ್ ಟೀವೀಯೊಳಗೆ ಬಂದಿದ್ದು ನೋಡಿ, ಅವರ ಭಜನಾ ಮಂಡಳಿಯವರು, ಆ ಸದಸ್ಯರ ಕುಟುಂಬದವರು, ತಮ್ಮ ಬಂಧುಗಳು, ಗೆಳೆಯರು, ಪರಿಚಿತರು ಎಲ್ಲಾರಿಗೂ ಫೋನ್ ಮಾಡಿ ಲಗೂನ ಟೀವೀ ನೋಡರೀ ಅಂತ ಸಂತೋಷ ಹಂಚಿಕೊಳ್ಳತಿದ್ದಾರಂತ. ಹಂಗ ವಿಮಾನ ನಿಲ್ದಾಣದ ಹೊರಗಿನಿಂದ ಎಳೆ ನೀರು ಕೊಚ್ಚುವವನು ಇವರಿಗೆ ತಾನು ಎಳೆನೀರು ನೀಡುವುದಾಗಿಯೂ, ಅದು ತನ್ನಿಂದ ದೇವರಿಗೆ ಒಂದು ಸಣ್ಣ ಸೇವಾ ಅಂತ ಹೇಳಿದ್ದು ಸಹ ಟೀವಿಯಲ್ಲಿ ಬಂತು, ಅದನ್ನು ಕೇಳಿದ ಕೆಲವರು, ಇಂತಹವರ ಸೇವೆ ನಿಜವಾಗಿ ದೇವರ ಸೇವೆ ಅಂದರು.
ಭಜನಾ ಮಂಡಳಿಯವರು ಮಾತ್ರ ನಿಧಾನಾಗಿ ಬಗ್ಗೆ ಅಯೋಧ್ಯಾ ದಿಕ್ಕಿಗೆ ನಮಸ್ಕಾರ ಮಾಡಿ, ನಡೀರಿನ್ನ ಮನೀಗೆ ಹೋಗೋಣು ಅಂತ ತಯಾರಾದರು. ಪಾಪ, ವಯಸ್ಸಾದವರೆಲ್ಲಾ, ಏನೋ ಉತ್ಸಾಹದಿಂದ ರಾಮ ದೇವರ ದರ್ಶನಕ್ಕ ಪಾದಯಾತ್ರಾ ಅಂತ ಬಂದಿದ್ದರು.ಈಗ ಎಲ್ಲಾರ ಕಾಲೂ ಹಿಡಕೊಂಡಾವ, ಅಲ್ಲಿನ ನಾಲ್ಕು ಮಂದಿ ಟ್ಯಾಕ್ಸಿ ಡ್ರೈವರ್, ತಾವು ಇವರನ್ನೆಲ್ಲಾ ಮನೀಗೆ ಸೇರಿಸತೇವಿ ಅಂತ ಮುಂದ ಬಂದರು.ವಿಮಾನ ನಿಲ್ದಾಣದಿಂದ ಹೊರಗ ಬಂದಾಗ, ಭಾಳ ಮಂದಿ ಇವರ ಪಾದಕ್ಕ ಹಣಿ ಹಚ್ಚಿ ನಮಸ್ಕಾರ ಮಾಡಿದರು. ಎಳನೀರು ಕುಡಿದು, ಮನೀಗೆ ಹೊಂಟಾಗ, ಟ್ಯಾಕ್ಸಿ ಡ್ರೈವರ್ ಗ ನಮ್ಮ ಪದ್ದಕ್ಕಜ್ಜಿ, “ನಾವು ರಾಮ ದೇವರ ದರ್ಶನಾ ಅಂದುಕೊಂಡು ಹೊಂಟಿದ್ದವೆಪ್ಪಾ, ದಾರಿಯೊಳಗ ರಾಮದೇವರ ಗುಡಿ ಕಂಡರ ನಿಲ್ಲಸೋ ಅಪ್ಪಯ್ಯಾ, ಆ ಸ್ವಾಮಿ ಇಲ್ಲೇ ಇದ್ದಾನ ಅಂತ ಒಂಚೂರು ಕೈ ಮುಗುದು ಮನೀ ಸೇರತೇವಿ” ಅಂದರು.
ಪದ್ದಕ್ಕಜ್ಜಿ ಮನೀ ಸೇರೋದರೊಳಗ, ವಿರೋಧ ಪಕ್ಷದ ನಾಯಕರು, ಸರ್ಕಾರದ ಹಿನ್ನೆಡೆಯಿದು, ತಮ್ಮ ಸ್ವಂತ ಖರ್ಚಿನಿಂದ ಇವರನ್ನ ಅಯೋಧ್ಯಾ ಯಾತ್ರಾ ಮಾಡಸತೇನಿ ಅಂತ ಹೇಳಿಕೆ ಕೊಟ್ಟರಂತ. ಆದರ, ಇದು ಆಡಳಿತ ಪಕ್ಷದವರಿಗೆ, ಮುಖ್ಯಮಂತ್ರಿಗಳಿಗೆ, ಸರ್ಕಾರದಒಂದು ಪ್ರತಿಷ್ಠೆಯ ಪ್ರಶ್ನೆ ಎನಿಸಿ, ಈಗಿಂದೀಗಲೇ ಅವರಿಗೆ ವಿಮಾನ ಯಾನದೊಂದಿಗೆ ಅಯೋಧ್ಯೆ ಯಾತ್ರೆಯ ಸಂಪೂರ್ಣ ವ್ಯವಸ್ಥೆ ಸರ್ಕಾರದಿಂದ ಮಾಡಿರೋದಾಗಿ ತಿಳಿಸಲು, ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರೋದರಿಂದ, ಖುದ್ದು ಜಿಲ್ಲಾಧಿಕಾರಿಗಳೇ ಇವರಿಗೆ, ಈಗಲೇ ವಿಮಾನ ನಿಲ್ದಾಣದಿಂದ ನೇರವಾಗಿ ತಮ್ಮ ಕಛೇರಿಗೆ ಕರೆತರಲು ಫೋನ್ ಮಾಡಿದ್ದಾರಂತ. ನೋಡೋಣ ನಾಳೆ ಪೇಪರಿನೊಳಗೆ ಜಿಲ್ಲಾಧಿಕಾರಿಗಳ ಜೊತೆ ಪದ್ದಕ್ಕಜ್ಜಿ ಬರತಾರಲ್ಲ, ಎಲ್ಲಾ ತಿಳಿದೇ ತಿಳೀತದ. ಈ ಎಲ್ಲಾ ವಿಷಯನೂ ಶ್ರೀಮನ್ನಾರಾಯಣಾಯೇತಿ ಸಮರ್ಪಯಾಮಿ ಅಂತ ನಾನು ಹೇಳಿದೆ.ನೀವೂ ಹೇಳರೀ ಮತ್ತ. ಒಂಚೂರು ಪುಣ್ಯ ನಮಗೂ ಬರಲೀಂತ.
-ಡಾ. ವೃಂದಾ ಸಂಗಮ್
ಪದ್ದಕ್ಕಜ್ಜಿ ಜೊತೆ ನಾವೂ ಬರಬೋದಾ ಅಂತ! ಎಲ್ಲಾ ವ್ಯವಸ್ಥೆನೂ ಅಲ್ಲೇ ಆಗುತ್ತೆ. ಸ್ವಲ್ಪ ನೋಡಿ ಹೇಳ್ರೀ. ಜೊತೇಲೇ ಇದ್ದು ಕೈ ಚಪ್ಪಾಳೆ ತಟ್ಕೊಂತಾ ಹಿಂದೆ ಹಿಂದೆ ಬರ್ತೀವಿ. ಪ್ರಸಾದ ವಿತರಣೆಗೆ ಕೈ ಮುಂದೆ ಮಾಡ್ತೀವಿ.