ನಮ್ಮಜ್ಜಿ ಹೇಳಿದ್ದು:
ಗುಡಿ ಬಾಗ್ಲಾ ಹಾಕಿದ್ರು.
ಒಳಗಿದ್ದ ದೇವ್ರಿಗೆ ಜೈಲಿನ್ಯಾಗ ಹಾಕಿದ್ಹಂಗಾತು. ಊದಬತ್ತಿ ಹೊಗಿ, ಕರ್ಪುರದ ಗಮಲು,ಮುಗಿಗಡರಿ, ಉಸಲ್ ಕಟ್ಟ ಆದಾಂಗಾಗಿ ಗುಡಿಯಾಗಿದ್ದ ಹನಮಪ್ಪ ದೇವ್ರು ಒಂದssಸವ್ನ ಒದ್ದಾಡಾಕ್ಹತ್ತಿದ್ದ. “ಲಗೂನ ಬಾಗ್ಲಾ ತಗೀರ್ಲೇ ಹಲಕಟ್ರ” ಎಂದು ಕೂಗಿದ. ದೇವ್ರಾಡಿದ ಮಾತು ಈ ಮಳ್ಳ ಮನಷ್ಯಾರ್ಗೆಲ್ಲಿ ಕೇಳಸ್ಬೇಕು? ದೇವ್ರೂ ಒಳಗೊಳಗೆ ನಗತೊಡಗಿದ. “ನನ್ನ ಪೂಜಾ ಮಾಡಾಕ ಈ ಬಡ್ಡಿ ಮಕ್ಳು ನಾ..ನೀ.. ಅಂತ ಕಿತ್ಯಾಡಾಕತ್ತಾರು. ಏನೇನ ಮಾಡ್ತಾರೋ ಮಾಡ್ಲೀ, ನಾನು ಒಂದ ಕೈ ಇವರ ಮಾಡು ಆಟ ನೋಡಿದ್ರಾತು”. ಹನಮಪ್ಪ ದೇವ್ರು ಪೂಜಾರಿಗಳು ಜಗಳಾಡುವ ಪೌಳಿ ಕಡೆ ತನ್ನ ಚಿತ್ತನೆಲ್ಲ ಹರಿಬಿಟ್ಟ.
ಊರಿನ ಹಿರ್ಯಾರು, ಕಿರ್ಯಾರು ಹನಮಪ್ಪನ ಗುಡಿ ಪೌಳ್ಯಾಗ ಜಮಾ ಆಗಿದ್ರು. ಗುಡಿಗೆ ಬಂದ ಭಕ್ತರೂ ಹನಮಪ್ಪನ ದರಶನಾ ತಗೊಳಾಕ ಅವಕಾಶ ಇಲ್ಲದಕ್ಕ ಅವರೂ ಬಂದು ಅಲ್ಲೇ ಸೇರ್ಕೊಂಡ್ರು. ಕೆಲವ್ರಿಗೆ ಅಲ್ಯಾಕ ನಿಂತಿವಿ ಅನ್ನುವ ಅರಿವಿಲ್ಲದೇ ನಿಂತಿದ್ರು. ಇನ್ನ ಕೆಲವ್ರು ಜಗಳ ಪಾಡತಂಗ ಆಗ್ಲಿ, ಕೈ ಕಾಲು ಮೂರದ, ತೆಲಿಗಿಲಿ ಒಡದ, ರಕ್ತದ ಓಕಳಿನ ನಡಿಲಿ ಅನ್ನುವ ಜನರೂ ಅಲ್ಲಲ್ಲಿ ಕೈ ಕಟ್ಟಿ ನಿಂತ್ಕೊಂಡಿದ್ರು. ಸಣ್ಣ ಹುಡಗ್ರು “ದೇವ್ರ ಏನ ತಪ್ಪ ಮಾಡ್ಯಾನ, ಅದಕ್ಕ ಪೂಜಾರಿಗೋಳ ಸೇರ್ಕೊಂಡ ಅಂವಗ ಬಾಗಲಾ ಹಾಕಿ ಶಿಕ್ಷೆ ಕೊಡಾಕತ್ಯಾರಂತ” ಅವರವರೆ ಮಾತಾಡ್ಕೊಂಡ ಅಲ್ಲಿ ಭಾಳ ಹೊತ್ತ ನಿಲ್ಲದೆ , ಬಾಲಿಲ್ಲದ ಮಂಗನಂತೆ ಜಿಗಿಯುತ್ತ ಕುಣಿಯುತ್ತ ಗುಡಿ ಪೌಳಿ ತುಂಬೆಲ್ಲಾ ಓಡಾಡಿಕೊಂಡಿದ್ದರು.
ಹೇಮಂತಗೌಡ್ರು “ಏನೆನಪಾ ನಿಮ್ಮ ಸಮಸ್ಯೆ, ಗುಡಿ ಬಾಗಲಾ ಹಾಕುವಂತಾ ಜರೂರತ್ತೇನಿತ್ತು, ಲಗೂನ ಗುಡಿ ಬಾಗಲಾ ತಗೀರಿ, ಭಕ್ತರ ರೊಚ್ಚಿಗೆದ್ರ ಇಲ್ಲಿ ನೀಂವೂ ನಾಂವೂ ಯಾರೂ ನಿಲ್ಲಾಕ ಆಗಾಂಗಿಲ್ಲ” ಎಂದು ಜಗಳದ ಮೊದಲ ಪ್ರಾಸ್ಥಾವಿಕ ನುಡಿ ಮಾತಾಡಿದ.
“ನೋಡ್ರೀ ಗೌಡ್ರ ಜ್ಯಾತ್ರಿ ಆಗಿ ನಾಕ ತಿಂಗಳಿಗೆ ನಮ್ಮ ಪೂಜಾರ್ಕಿ, ನಮ್ಮದ ಮೂಗದ ಮ್ಯಾಲ ಅಶೋಕ ಕಾಕಾಂದ, ಆನಂತ್ರ ನಾರಾಯಣ ಕಾಕಾಂದ, ಕೊನೆಗೆ ಬರುದು ಗೋಪಾಲಗ. ಇಪ್ಪತ್ತ ವರ್ಷದಿಂದ ಹಿಂಗಸಾಗಿಕೊಂಡ ಬಂದೈತಿ, ಮುಂದಕ್ಕೂ ಹಿಂಗ ಹ್ವಾದ್ರ ನಂದೇನೂ ತಕರಾರ ಇಲ್ಲೆಂದು” ಪ್ರಲ್ಹಾದ ತನ್ನ ಗೋಳನ್ನು ತೋಡಿಕೊಂಡ. ಅಶೋಕಾ, ನಾರಾಯಣ ಇಬ್ರೂ ನಮ್ಮ ಪ್ರಲ್ಹಾದ ಅಂದ್ಹಂಗ ನಮ್ಮದೇನೂ ತಕರಾರಿಲ್ಲ, ಅಂವ ಹೇಳಿದ್ದಕ್ಕ ನಮ್ಮ ಕಬಲೈತಿ. ಅವ್ರೂ ಹೇಳಿದ್ಕ ಗೋಪಾಲ ಒಪ್ಪಲಿಲ್ಲ. ಈ ಮೂರು ಕುಟುಂಬದವ್ರಿಗೆ ವರ್ಷದಾಗ ಒಬ್ಬೊಬ್ಬರಿಗೆ ಮೂರುವರಿ ತಿಂಗಳ ಪೂಜಾರ್ಕಿ ಬಂದ್ರ, ಗೋಪಾಲನ ಕುಟುಂಬ್ಕ ಬರೀ ಒಂದುವರಿ ತಿಂಗಳಷ್ಟ ಪೂಜಾರ್ಕಿ ಬರತಿತ್ತು. ಮೂರು ಕುಟುಂಬದವ್ರಿಗೆ ಗೋಪಾಲ ಸಾಕಷ್ಟ ಬಾರಿ ಪೂಜಾರ್ಕಿ ಸರಿಯಾಗಿ ಸಮಪಾಲ ಮಾಡ್ರಿ ಮಾಡ್ರಿ ಅಂತ ದೈನಾಸ ಬಿಟ್ಟ ಕೇಳಿದ್ದ. ಅಂವನಿಗೆ ಅವ್ರು ಕ್ಯಾರೇ ಅಂದಿರಲಿಲ್ಲ. ಹಿಂಗಾಗಿ ಗೋಪಾಲ ಗುಡಿ ಕೀಲಿ ಹಾಕಿ ಚಾವಿ ತನ್ನ ಉಡದಾರಕ್ಕ ಕಟಗೊಂದಿದ್ದ.
ನನಗ ಸರಿ ಸಮ ಪೂಜಾರ್ಕಿ ಬರುತನಕಾ ನಾ ಗುಡಿ ಬಾಗ್ಲಾ ತಗ್ಯಾಂಗಿಲ್ಲ ಎಂದು ಹಟ ಹಿಡದಿದ್ದ. ನಾಂವ ನಿನಗ ಸರಿಸಮ ಪಾಲ ಕೊಡಂಗಿಲ್ಲೆಂದು ಉಳಿದವರು ಕ್ಯಾತೆ ಎತ್ತಿದ್ರು. ಅಲ್ಲಿದ್ದ ಭಕ್ತರಿಗೆ, ಊರಿನವರಿಗೆ, ಊರ ಗೌಡನಿಗೆ ಗೋಪಾಲ ಕೇಳುವುದು ನ್ಯಾಯ ಅನಿಸಿತು. ಅಲ್ಲಿದ್ದ ಭಕ್ತನೊಬ್ಬ “ಗೋಪಾಲಗ ಲಗೂನ ಸರಿಸಮಾ ಪಾಲ ಕೊಟ್ಟು, ಪಟಕ್ನ ಗುಡಿ ಬಾಗಲಾ ತಗೀರಿ” ಅಂತ ಹೇಳೂದ ತಡಾ, ಎಲ್ಲರೂ ಗೋಪಾಲನಿಗೆ ಸೈ ಅನ್ನತೊಡಗಿದರು. ಮೂವರು, ಯಾರ ಹೇಳಿದ್ರೂ ಅವರ ನಿರ್ಧಾರ ಬದಲಿಸಲಿಲ್ಲ. ಊರ ಗೌಡಗ ವಿಪರೀತ ಸಿಟ್ಟು ಬಂತು. “ಹಿಂಗ ನೀವ ನೀವ ಹಟ ಹಿಡ್ಕೊಂಡ ಕುಂತ್ರ ಹನಮಪ್ಪೇನು ನಿಮ್ಮ ಬೀಗ ಅಲ್ಲಾ, ಅಥವಾ ಅಣ್ಣತಮ್ಮನೂ ಅಲ್ಲಾ, ಅಂವ ಇಡೀ ಊರಿನ ಸ್ವತ್ತು,ಇಡೀ ನಾಡಿನ ದೈವಾ, ಇನ್ನ ಮ್ಯಾಲ ಪೂಜ್ಯಾಗೀಜ್ಯಾ ನೀವ ಮಾಡೂದ ಬ್ಯಾಡ. ಊರಿನ ದೈವವೆಲ್ಲಾ ಕೂಡಿ ಬ್ಯಾರೆ ಜ್ಯಾತಿ ಮಂದಿಗೆ ಪೂಜಾರ್ಕಿ ಕೊಡ್ತಿವಿ” ಗೌಡ್ರು ಕಡ್ಡಿ ಎರ್ಡ ತುಂಡ ಮಾಡಿದ್ಹಂಗ ತೀರ್ಮಾನ ತಗೊಂಡ್ರು. ಅದಕ್ಕ ಅಲ್ಲಿದ್ದವರು ಸೈ ಅಂದ್ರು, ಹನಮಪ್ಪನ ದರಶನಕ್ಕ ಬಂದವ್ರೂ ಜೈ ಅಂದ್ರು. ಹಂಗ ಮಾಡ್ರೀ ಗೌಡ್ರ ಎಂದು ಗೋಪಾಲ ಗೌಡರ ಮಾತಿಗೆ ಸಾಥ ಕೊಟ್ಟ.
ಆಗ ನಾರಾಯಣ, ಅಶೋಕ ಇಬ್ಬರೂ ನಮ್ಮ ಗೋಪಾಲಗ ನಾಂವ ಸಂವಾನಂಗ ಪಾಲ ಕೋಡ್ತೀವಿ ಅಂತ ಗುಂಡಕಲ್ಲ ಗುಡ್ಕನ ಉಳ್ಳಿದ್ಹಂಗ ಗೋಪಾಲನ ಕಡೆ ಉಳ್ಳಿ ಬಂದ್ರು. ಆಗ ಪ್ರಲ್ಹಾದ ಪ್ಯಾ ಪ್ಯಾ ಮಾಡಾಕತ್ತಿದ. “ನಾರ್ಯಾ, ಅಸ್ಯಾ ಮಕ್ಕಳ ಇಬ್ಬರೂ ಬಗ್ಗಿಸಿ ಬಗನಿ ಗೂಟಾ ಇಟ್ಟರೆಲ್ಲಪಾ” ಅಂತ ಮನದಾಗ ಪ್ರಲ್ಹಾದ ಅನಕೋತ , ಗೌಡ್ರ ನಂದೂ ಒಪ್ಪಿಗೈತ್ರಿ ಅನಕೋತ ಸಪ್ಪಮಾರಿ ಮಾಡ್ಕೊಂಡ ಮನಿ ಹಾದಿ ಹಿಡದಾ. ಆಗ ಓಡಿ ಹೋಗಿ ಗೋಪಾಲ ಗುಡಿ ಬಾಗ್ಲಾ ತಗದ. ಒಳಗಿದ್ದ ಹನಮಪ್ಪ “ಉಪ್ ಅಂತ ಉಸರ್ ಬಿಟ್ಟು” ಬಂದ ಭಕ್ತರಕಡೆ ಚಿತ್ತಗೊಟ್ಟ. ಗೋಪಾಲ ದೇವ್ರಿಗೆ ಮಂಗಳಾರತಿ ಮಾಡಿ, ಭಕ್ತರ ಕಡೆ ಮಂಗಳಾರತಿ ತಟ್ಟಿ ಒಯ್ದ. ಬಂದ ಭಕ್ತರು ಮಂಗಳದೀಪಕ್ಕ ನಮಸ್ಕರಿಸಿ , ಮಂಗಳಾರತಿ ತಟ್ಟೆಯಲ್ಲಿ ತಮಗೆ ತಿಳಿದಷ್ಟು ದಕ್ಷಿಣಾ ಹಾಕಿ, ಕೈ ಮುಗಿದು ಹೊರಟರು.
ಹಿಂಗೊಂದು ಕತಿ ನಮ್ಮಜಿ ನಾ ಮಲಗುವ ಮೊದಲು ಹೇಳಿ, ನನ್ನ ಅಂದು ಮಲಗಿಸಿದ್ಳು.
ಅಜ್ಜ ಹೀಗೇ ಹೇಳಿದ:
ಅಜ್ಜ ತನ್ನ ತಲಿ ಬುಡಕ ಇರುವ ತಲಿದಿಂಬ ಸರಿಯಾಗಿ ಇಟಗೊಂದು ಮತ್ತೇ ಕತಿ ಹೇಳಲು ಅನಿಯಾದ. ಅಜ್ಜನ ಎಡಕ್ಕೆ ನಾನು ಮಲಗಿ ಕತೆ ಕೇಳುತ್ತಿದೆ.ಬಲಗಡೆ ನನ್ನ ತಂಗಿ ಇದ್ಳು. ತಂಗಿ ಹಾಂ ಹೂಂ ಅನ್ನುತ್ತ ನಿದ್ದೆಗೆ ಜಾರಿದ್ಳು. ನಾನು ಅಜ್ಜನ ಕಾಡಿ ಬೇಡಿ ಕತೆ ಹೇಳೆಂದು ಪೀಡಿಸುತ್ತಿದ್ದೆ. ಅಂವನಿಗೆ ಗೊತ್ತಿದ್ದದ್ದೋ, ಅಂವನಿಗೆ ಯಾರೋ ಹೇಳಿದ್ದೋ, ನನ್ನ ಒತ್ತಾಯಕ್ಕೋ ಗೊತ್ತಿಲ್ಲ ಕತೆ ಹೇಳುತ್ತಿದ್ದ. ಕತೆ ಹೇಳುವಾಗ ನಡು ನಡುವೆ ಆಕಳಿಸುತ್ತಿದ್ದ. ಉಳದದ್ದು ನಾಳೆ ಹೇಳ್ತಿನಿ ಈಗ ಮಲಗು ಅಂತ ನನ್ನ ರಮೀಸುತ್ತಿದ್ದ. ನನ್ನ ಹಟಮಾರಿ ತನಕ್ಕೆ ಮನಿದು ಊರ ದೇವರ ಕತೆ ಹೇಳಲು ಶುರು ಮಾಡಿದ,
ತುಳಸಿಗಿರಿ ಹನಮಪ್ಪಂದ್ರ ಅಭಿನವ ತಿರುಪತಿ ಇದ್ಹಂಗ, ರೊಕ್ಕ ಇದ್ದವರಿಗೆ ಕಡಿಗಿರಿ, ರೊಕ್ಕ ಇಲ್ಲದವ್ರಿಗೆ ನಡುಗಿರಿ. ಹಿರಿಯಾರು ಹಿಗೊಂದ ಶಾಸ್ತ್ರಾ ಮಾಡ್ಯಾರ. ಕಡಿಗಿರಿ ಒಳಗ ಇರಾಂವ ಅಂದ್ರ ತಿರುಪತಿಯ ವೆಂಕಟರಮಣ, ನಡುಗಿರಿ ಒಳಗ ಇರಾಂವ ಅಂದ್ರ ತುಳಸಿಗಿರಿ ಹನಮಪ್ಪಾ.ನಾನು ಹೂಂ ಹೂಂ ಅಂತಿದ್ದೆ.
“ಅಜ್ಜಾ ಈ ಊರಿಗೆ ತುಳಸಿಗಿರಿ ಹೆಸರ ಹೆಂಗ ಬಂತು ಹೇಳಂದೆ” ಅದೊಂದ ದೊಡ್ಡ ಕತಿ ಐತಿ. ಈಗ ಮಲಗು ನಾಳೆ ಹೇಳ್ತಿನಂದ. ನಾ ಬಿಡಲಿಲ್ಲ. ಹೇಳಬೇಕೆಂದು ಮಲಗಿದವ ಮ್ಯಾಲೆದ್ದು ಕುಂತು ಕೈ ಕಟ್ಟಿದೆ. ಇಂವಾ ಹೇಳಲಿಲ್ಲಂದ್ರ ಬಿಡು ಗಿರಾಕಿ ಅಲ್ಲೆಂದು ಖಾತ್ರಿ ಮಾಡ್ಕೊಂಡು ಊರಿನ ಕತಿಗೆ ಮತ್ತೆ ಪೀಠಿಕೆ ಹಾಕಿದ.
ಮೊದಲು ತುಳಸಿಗಿರಿ ಅನ್ನುವ ಊರಿನ ನಾಮಕರಣವೇ ಇರಲಿಲ್ಲ. ಅಲ್ಲಿದ್ದ ಜನರೆಲ್ಲ ತುಗಲಗಟ್ಟಿ ಊರಿನಲ್ಲಿ ಇದ್ರು. ಅಲ್ಲಿ ಒಬ್ಬ ಹನಮಂತ ದೇವ್ರೂ ಇದ್ದ. ಮತ್ತ ಬ್ಯಾರೆ ಬ್ಯಾರೆ ಗುಡಿ ಗುಂಡಾರಗಳೂ ಇದ್ದವು.ಅದ್ಯಾಕೋ ಅಲ್ಲಿ ಊರಿನ ಜನರ ಜೀವನದಲ್ಲಿ ಅಸ್ಥವ್ಯಸ್ಥ ಕಾಣತೊಡಗಿತು. ದನಕರಗಳಿಗೂ ರುಜು ಇರಲಿಲ್ಲ, ಮನುಷ್ಯರು ನೂರೆಂಟು ಖಾಯಿಲೆಯಿಂದ ನರಳಾಡಬೇಕಾತು. ಅಲ್ಲಿದ್ದ ಜನರೆಲ್ಲಾ ಕಂಗಾಲಾಗಿ ಕುಂತ್ರು.
ತುಗಲಗಟ್ಟಿಯಿಂದ ನೂರು ಗಜಗಳ ದೂರದಲ್ಲೊಂದು ಗಿರ ಇತ್ತು. ಗಿರಿ ಅಂದ್ರೇನಜ್ಜಾ? ಅಂದೆ. ಗಿರಿ ಅಂದ್ರ ಪರ್ವತ, ಗುಡ್ಡಾ, ಬೆಟ್ಟಾ ಅಂತಾರ. ನೀ ಹಿಂಗ ನಡು ನಡು ನನ್ನ ಪ್ರಶ್ನೆ ಕೇಳಕೋತ ಕುಂತ್ರ ನನ್ನ ಕತಿ ಮುಂದ ಹೋಗಂಗಿಲ್ಲ ಅಂದ. ಇಲ್ಲಳ ಅಜ್ಜಾ . ಗೊತ್ತ ಆಗಗಲಿಲ್ಲಂದ್ರ ಅಷ್ಟ ಕೇಳ್ತಿನಿ ಅಂತ ಅಂದೆ. ಆಗ ಅಜ್ಜ ನಕ್ಕ. ಮತ್ತೆ ಕತೆ ಶುರು ಮಾಡಿದ.
ಅಲ್ಲೊಂದು ಗಿರಿ ಇತ್ತು. ಆ ಗಿರಿ ಸುತ್ತಮುತ್ತ ಬರೀ ತುಳಸಿ ಗಿಡವೇ ಬೆಳದಿತ್ತು. ಓ ಹೋ ಆ ತುಳಸಿ ಆ ಗಿರಿ ಸುತ್ತಮುತ್ತ ಬೆಳದದ್ದರಿಂದ ಅದಕ್ಕ ತುಳಸಿಗಿರ ಅಂದ್ರೇನು ಅಜ್ಜಾ? ಅಂದೆ. ಹೌದಪಾ ಹೌದು ಅಂದ. ಈಗ ಒಂದ ತಟಗ ಸುಮ್ಮಿರೋ ನಡಕ ಅಡ್ಡಾದಿಡ್ಡಿ ಬರಬ್ಯಾಡಾ ನನಗೂ ಎಬ್ಬರತೆಬ್ಬರ ಆಗಿ ಗೊತ್ತಿದ್ದದ್ದ ಬಿಟ್ಟ ಗೊತ್ತಿಲ್ಲದ್ದ ಏನಾರಾ ಹೇಳುದಕ್ಕೈತೆಂದ. ನಾನು ಮಿಸಕಲಿಲ್ಲ. ನನ್ನ ಕೈ ಆಗ ಬಾಯಿ ಮೇಲಿತ್ತು. ಅಜ್ಜ ಕತಿ ಶುರು ಮಾಡಿದ ಅಂವನ ಹೊಟ್ಟೆಯ ಮೇಲೆ ಒಂದು ಕೈ ಹಾಕಿ ಕತೆ ಕೇಳತೊಡಗಿದೆ.
ಆಗ ತುಗಲಗಟ್ಟಿಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಿತು, ಜನರೆಲ್ಲ ಬೆಚ್ಚಿದರು. ಅದ ವ್ಯಾಳೆದಾಗ ತುಳಸಿಗಿರಿಯಲ್ಲಿ ಆಂಜನೇಯ ಸ್ವಾಮಿ ಆ ಊರಿನ ನಾಕಾರು ದನಗಾಯಿಗಳಿಗೆ ದರುಶನ ಕೊಟ್ಟಿದ್ದ. ಊರಿನವರೆಲ್ಲ ದನಗಾಯಿಗಳ ಮಾತು ಕೇಳಿದ್ದೇ ತಡ ಅಲ್ಲಿ ಜಮಾಯಿಸಿದರು ಎರಡಾಳೆತ್ತರದ ಆಂಜನೇಯ ಸ್ವಾಮಿ ದಕ್ಷಿಣಕ್ಕೆ ಮುಖಮಾಡಿ ನಿಂತಿದ್ದ ನೋಡಿ ಬೆರಗಾದ ಊರ ಜನರು ಭಕ್ತಿಯಿಂದ ಕೈ ಮುಗಿದರು, ಅವರಿಗೆನೋ ಒಂದು ಆನಂದ ಆ ಜಾದಲ್ಲಿ ಸಿಕ್ಕಂತನಿಸಿತು.
ತುಗಲಗಟ್ಟಿಯಲ್ಲಿ ಅದ್ಯಾಕೋ ಜನಜೀವನ ಅಸ್ಥವ್ಯಸ್ಥ ಆಗಿದ್ದರಿಂದ ತುಗಲಗಟ್ಟಿಯಲ್ಲಿದ್ದ ಜನರು ಆ ಆಂಜನೇಯ ಸ್ವಾಮಿಯ ಸನ್ನಿದಾನದಲ್ಲಿಯೇ ಬದುಕು ಕಟ್ಟಿಕೊಳ್ಳೋಣ, ಹೆಂಗೂ ಆ ಆಂಜನೆಯನ ಎಡ ಭಾಗದಲ್ಲಿ ದೊಡ್ಡದೊಂದು ಕೆರಿಯೂ ಇದೆ. ಮನುಷ್ಯರಿಗೆ, ದನಕರಗಳಿಗೆ ನೀರಿನ ಸಮಸ್ಯೆಯೂ ಬರದೆಂದು ತೀರ್ಮಾನಿಸಿ ಊರಿನವರೆಲ್ಲರೂ ಆ ತುಗಲಗಟ್ಟಿಯನ್ನು ಬಿಡಲು ನಿರ್ಧರಿಸಿದರು. ನೂರು ಗಜಗಳ ಅಂತರದಲ್ಲಿದ್ದ ತುಳಸಿಗಿರಿಯತ್ತ ದನಾ ಕರು ಹೊಡೆದುಕೊಂಡು, ಕೂಸು ಕುನ್ನಿ ಎತ್ತಿಕೊಂಡು, ಪಾತ್ರೆ,ಪಗಡೆ ತಗೆದುಕೊಂಡು ಬಂದು ಅಲ್ಲಿಯೇ ಬಿಡಾರ ಬಿಟ್ಟರು. ಅಂದಿನಿಂದ ತುಗಲಗಟ್ಟಿ ಹೆಸರು ಅಳಕಿ ಹೋಗಿ ತುಳಸಿಗಿರಿ ಅನ್ನುವ ಹೆಸರು ಬಂತೆಂದು ಅಜ್ಜ ಹೇಳಿದಾಗ ನಾನು ಆಕಳಿಸಿ ಆ.. ಆ ..ಎಂದೆ. ನಿದ್ದಿ ಬಂತನ ಹಂಗಾರ ಮಲಗಂದ ಅಜ್ಜ. ಇಲ್ಲಪಾ ನನಗ ನಿದ್ದಿ ಬಂದಿಲ್ಲೆಂದು ನಟಿಸಿದೆ. ಅಜ್ಜ ನಗುತ್ತ ಮತ್ತೆ ಮುಂದೆ ಶುರುಮಾಡಿದ.
ಆಗಿನ್ನೂ ನಮ್ಮ ದೇಶದಾಗ ಬ್ರಿಟೀಷರು ಇದ್ರು. ಅವರ್ಯಾರು?ಅಂದೆ. ಅಯ್ಯೋ ಅದನ್ನ ಹೇಳ್ಕೋತ ಕುಂತ್ರ ನಿನಗ ಏನೂ ಅರ್ಥ ಆಗುದಿಲ್ಲ. ಅವ್ರು ಬಾರೆ ದೇಶದವ್ರು. ದೇಶ ಅಂದ್ರೇನೆಂದೆ. ಯಪ್ಪಾ ನೀ ನಾಳೆ ಸಾಲಿಗೆ ಹೋಗಾಕ ಶುರು ಮಾಡ್ತಿಯಲ್ಲಾ , ಆಗ ಈ ದೇಶ, ಈ ನಾಡು, ಈ ಬ್ರಿಟೀಷರ ಬಗ್ಗೆ ನಿಮ್ಮ ಸಾಲ್ಯಾಗ ಮಾಸ್ತರಗೊಳ ನಿನಗೆಲ್ಲಾ ಕಲಸ್ತಾರ, ಈಗ ನೀ ಸುಮ್ನ ಕತಿ ಕೇಳೆಂದು ಅಜ್ಜ ನನ್ನ ಕಿರಕಿರಿಗೆ ಬೆಸತ್ತು ಮತ್ತೆ ಹೇಳತೊಡಗಿದ.
ಈ ತುಳಸಿಗಿರಿ ಆಂಜನೇಯ ಸ್ವಾಮಿ ಇರುವ ಜಾಗ, ಬ್ರಿಟಿಷರ ಸೇವಾ ಮಾಡ್ತಿದ್ದ ನೀರಬೂದಿಹಾಳ ದೇಸಾಯಾರ ಸರ ಹದ್ದಿಗೆ ಸೇರದ್ದು. ಅವ್ರಿಗೆ ತಮ್ಮ ಜಾಗದಾಗ ಹಿಂತ ಶಕ್ತಿವಂತ ದೇವ್ರ ಇದ್ದ ವಿಷ್ಯಾ ಗೊತ್ತಾಗಿ ಭಾಳ ಖುಷಿ ಆದ್ರು. ಅಂವ್ನ ಪೂಜಾ ನಿತ್ಯವೂ ಮಾಡಾಕ ಅದ ಊರಾಗಿದ್ದ ರಡ್ಡಿ ಸಮುದಾಯದ ಮಂದಿನ ಗೊತ್ತ ಮಾಡಿ, ಅವರಿಗೆ ಚಾಕ್ರಿ ಭೂಮಿ ಉನ್ನಾಕ ನೀಡಿದ್ರು. ಚಾಕ್ರೀ ಭೂಮಿ ಅಂದ್ರೇನು ಅಜ್ಜಾ? ನನಗ ಗೊತ್ತಿಲ್ಲ ಹೇಳಪೋ.. ಅಂದೆ. ಆಗ ನನ್ನ ಪೆದ್ದ ನುಡಿಕೇಳಿ ಅಜ್ಜ,. ಹಂಗದ್ರ ತುಳಸಿಗಿರಿ ಹನಮಪ್ಪನ ಪೂಜಾ ಮಾಡ್ತಾರಲ್ಲಾ ಆ ಪೂಜಾರಿಗಳಿಗೆ ನೀರ ಬೂದಿಹಾಳ ದೇಸಾಯಾರು ಪುಗಸೆಟ್ಟಿ ಕೊಟ್ಟದ್ದು. ಹಂಗಾ ಅಂದೆ. ಜನಾ ಬೆಳದ್ಹಂಗ ಊರನೂ ಬೆಳಿತಾ ಬಂತು, ಊರ ಬೆಳದ್ಹಂಗ ಹನಮಪ್ಪನ ಹೆಸರನೂ ನಾಡತುಂಬ ಹೆಸರು ವಾಸಿಯಾತು.
ಊರ ಮಂದಿಯಲ್ಲ ಕೂಡ್ಕೊಂಡು ಹನಮಪ್ಪನ ಜಾತ್ರಿ ಕಾರ್ತಿಕ ಮಾಸದಾಗ ಮಾಡುವ ಠರಾವು ಹುಡಿದ್ರು. ಮನಿ ಮನಿಗೆ ಹೋಗಿ ಪಟ್ಟಿ ಎತ್ತಿದ್ರು, ಸುತ್ತ ಮುತ್ತ ಹಳ್ಯಾಗೂ ಹೋಗಿ ಪಟ್ಟಿ ಕೇಳಿದ್ರು. ಕೊಡವ್ರ ಕೊಟ್ರು, ಕೊಡದವ್ರು ಬಿಟ್ರು. ಊರ ಜನರು ಕೊಟ್ಟ ರೊಕ್ಕದಾಗೊಂದ ಪಲ್ಲಕ್ಕಿ ಮಾಡಿಸಿದ್ರು, ದಾರಿ ಮ್ಯಾಲ ಹೋಗುವ ವಾಹನಗಳಿಗೆ ತಡೆದು ನಿಲ್ಲಿಸಿ, ಹನಮಪ್ಪನ ಜಾತ್ರಿ ಪಟ್ಟಿ ಕೇಳಿ ಅಲ್ಲಿನೂ ಹಣ ಸಂಗ್ರಹಿಸಿ ಹನಮಪ್ಪನ ಜಾತ್ರಿ ಧಾಮ್ ದೂಮ್ ಮಾಡಿದ್ರು.
ಆ ಜಾತ್ರಿ ನಿಮಿತ್ಯಾ ಕುಸ್ತಿ ಸ್ಪರ್ಧೆ ಇಡುತ್ತಿದ್ರು. ಆಗ ಕುಸ್ತಿ ನೋಡಾಕ, ಮತ್ತ ಆಡಾಕ ಸಿಂಧೂರ ಲಕ್ಷ್ಮಣ್ಣನೂ ಬರ್ತಿದ್ದ. ಅಂವ್ಯಾರು? ನಾ ನಿನಗ ಮೊದಲ ಹೇಳಿಲ್ಲಾ ನಿಮ್ಮ ಸಾಲ್ಯಾಗ ಮಾಸ್ತರಪ್ಪಾ ಅಂವನ ಬಗ್ಗೆನೂ ಹೇಳಿ ಕೊಡ್ತಾನ. ಈಗ ಸುಮ್ಮೀರು.ನಾ ಮೋತಿ ಸಪ್ಪ ಮಾಡಿದ್ದಕ್ಕ. ಅಜ್ಜ ಅಂವನೂ ಒಬ್ಬ ಸ್ವತಂತ್ರ ಹೋರಾಟಗಾರ, ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನಿಸಿದ ಬ್ಯಾಡರ ಕುಲದ ಭಂಟ. ಅಂವಗ ವೀರಾ ಶೂರಾ ಅಂತ ಕರಿತಾರ. ಅಂವ ತುಳಸಿಗಿರಿ ಹಣಮಪ್ಪನ ವರಪುತ್ರ. ಅವರವ್ವಾ ಇದ ಹನಮಪ್ಪ ದೇವ್ರಿಗೆ ವರಾಕೇಳಿ ಅಂವಗ ಜೀಂವಾ ನೀಡ್ಯಾಳ.
ಅಜ್ಜಾ ನೀನು ಜಾತ್ರಿಗೆ ಹೋಗಿಯೇನು? ನಾನು ಕೇಳಿದೆ. ಅಲೇ ನಿನ್ನಾ.. ನಾ ಜಾತ್ರಿಗೆ ಹೋಗ್ದ ಇರ್ತಿನೆನೋ ಹುಚ್ಚಪ್ಪಾ! ದೇವನಾಳಿಂದ ಎಡದ ಬಿದ್ರ ತುಳಸಿಗಿರಿ ಬರ್ತೈತಿ. ನಾ ಅಷ್ಟ ಅಲ್ಲ ಇಡೀ ಊರಿಗೂರೆ ಜಾತ್ರಿಗೆ ಹೊಕ್ಕಿದ್ದಿವಿ. ಜಾತ್ರಿ ನಾಕ ದಿನ ಮುಂದ ಇರುವಾಗ್ಲೆ ನಮ್ಮ ಎತ್ತಿನ ಬಂಡಿ ಸಿಂಗಾರ, ಎತ್ತಿನ ಸಿಂಗಾರ ಮಾಡ್ತಿದ್ದಿವು.ಮನಿಯಾಗ ನಿಮ್ಮ ಅಜ್ಜಿ ಸಜ್ಜಿರೊಟ್ಟಿ, ಗುರೆಳ್ಳ ಹಿಂಡಿ, ಪುಂಡಿಪಲ್ಲೆ, ಹುಳಿಬಾನಾ, ನೈವದ್ದಿ ಎಲ್ಲಾ ಮಾಡಿರ್ತಿದ್ಳು. ಎಲ್ಲರೂ ಹೊಸ ಬಟ್ಟೆ ಹಕ್ಕೊಂದು ಗಾಡಿ ಹೂಡ್ಕೊಂಡು. ನಾ ಮುಂದ ನೀ ಮುಂದ ಅಂತ ಎತ್ತಿನ ಬಂಡಿ ಓಡಸ್ಕೊಂಡ , ಸಜ್ಜಿರೊಟ್ಟಿ ಚವಳಿಕಾಯಿ ಗೋವಿಂದ ಗೋವಿಂದ ಗೀವಿಂದಾ, ಅರ್ಧಾ ರೊಟ್ಟಿ ಅವರಿಕಾಳಾ ಗೋವಿಂದ ಗೋವಿಂದ ಗೋವಿಂದಾ,ಪೂರಾ ರೊಟ್ಟಿ ಪುಂಡಿಪಲ್ಲೆ ಗೋವಿಂದ ಗೋವಿಂದ ಗೋವಿಂದಾ. ದೇವರ ನಾಮಸ್ಮರಣೆ ಮಾಡ್ಕೋತ ಜಾತ್ರಿಗೆ ಹೊಕ್ಕಿದ್ದಿವಿ ಅಂತ ಅಜ್ಜ ಸವಿವರವಾಗಿ ಹೇಳುತ್ತಲಿದ್ದ.
ನಾನು ಹೂಂ ಹೂಂ ಅನ್ನುವುದು ನಿಲ್ಲಿಸಿದ್ದೆ. ನನಗ ನಿದ್ದಿ ಬಂತು ಅಜ್ಜಾ ಅಂದೆ. ಕತಿ ಇನ್ನ ಪೂರ್ತಿ ಮುಗದಿಲ್ಲಾ ಅನ್ನುವ ದನಿ ಅಜ್ಜನಿಂದ ಕೇಳುವುವಷ್ಟರಲ್ಲಿ ನಾನು ನಿದ್ದೆಗೆ ಜಾರಿದ್ದೆ.
ಅವ್ವನ ಕೇಳಿದ್ದೆ:
ಅವ್ವ ಪಟ ಪಟ ರೊಟ್ಟಿ ಬಡಿತಿದ್ಳು. ನನಗೆ ತಂಡಿ ಹತ್ತಿತ್ತು. ಅಕಿ ಬಾಜು ಹೋಗಿ ಕುಂತೆ.ಬರ್ರೀ ಸಾಹೇಬ್ರ ಅಂದ್ಳು. ನಾನು ಅಕಿ ಕೊಮನಗಿಯಲ್ಲಿ ನೋಡಿದೆ. ಬಡಿಯುತ್ತಿದ್ದ ರೊಟ್ಟಿಯ ಆಕಾರ ಚಂದ್ರನಂತಿತ್ತು. ಅವ್ವ ಚಂದ್ರನನ್ನು ಕೊಮನಗಿಯಲ್ಲಿ ಹಾಕಿ ಬಡಿದಂತೆ ಅನಿಸಿತು. ಅವ್ವನ ಕೈಯಿಂದಲೇ ಚಂದ್ರ ಹುಟ್ಟಿದಂತೆ ಅನಿಸಿತು,. ಅವ್ವ ಮುಟಗಿ ಮಾಡಿ ಕೊಡ್ಲೇನು ಅಂದ್ಳು, ನಾನು ವಲ್ಯಾ ಅಂದೆ. ಮತ್ತೇನು ಬೇಕೆಂದ್ಳು ಅವ್ವಾ. ಒಂದ ಕತಿ ಹೇಳವ್ವೋ ಅಂದೆ. ನನಗ ಕತಿ ಪತಿ ಹೇಳಾಕ ಬರಂಗೆಲ್ಲ, ರೊಟ್ಟಿ ಮಾಡೂದು, ಪಲ್ಯಾ ಮಾಡೂದು, ದನಾ ಮೇಸೂದು, ತ್ವಾಟದಾಗ ಕಸಾ ಕಡ್ಡಿ ತಗಿಯುದ ಬಿಟ್ರ ನನಗೇನೂ ಮುಂದಿಂದ ಗೊತ್ತಿಲ್ಲಪ್ಪಾ ಅಂತ ಹೇಳಿ ಸುಮ್ಮನಾದ್ಳು. ಕತಿ ಹೇಳವ್ವೋ ಅಂತ ಹಟ ಮಾಡಿದೆ. ಅವ್ವಾ ಎಷ್ಟ ಕೇಳಿದ್ರೂ ಗೊತ್ತಿಲ್ಲ ಅಂದ್ಳು. ಹಂಗಾರ ನಂದ ಕತಿ ಹೇಳು ಅಂದೆ. ಈಗ ಹುಟ್ಟಿ ನಾಕ ವರ್ಷದಾಂವ ಆಗಿ ನಿನ್ನ ಕತಿ ಏನೈತೋ ಅಂದ್ಳು. ಅಲ್ಲವ್ವಾ ನಾ ಹೆಂಗ ಹುಟ್ಟಿದೆ? ಅದನ್ನ ಹೇಳು? ನೀನು ತಿಪ್ಪಿ ದಂಡಿ ಮ್ಯಾಲ ಹುಟ್ಟಿದೆ, ನಿನ್ನ ತಿಪ್ಪಿ ಹಡದೈತಿ, ಎಮ್ಮಿ ಹೆಂಡಿನೇ ನಿಮ್ಮವ್ವ, ತಿಪ್ಪಿನೇ ನಿಮ್ಮಪ್ಪಾ ಅಂದು ಕೊಕ್ಕಾಡ್ಸಿ ನಗತೊಡಗಿದ್ಳು. ನಾನಾಗ ಸಪ್ಪಮಾರಿ ಮಾಡಿ ಅಳುವ ಹಾಗೆ ಮೊಸಡಿ ಮಾಡಿಕೊಂಡೆ. ಆಗ ಅವ್ವ ತನ್ನ ಕತೆಯೋ ನನ್ನ ಕತೆಯೋ ಹೇಳಲು ಶುರುಮಾಡಿದಳು.
ಮದವಿಯಾಗಿ ಹನ್ನೆರ ವರ್ಷ ಉರಳಿದ್ರೂ ನನಗೆ ಮಕ್ಕಳಾಗಿರಲಿಲ್ಲ. ಆಗ ನಿಮ್ಮಪ್ಪಾ ನನ್ನ ಬಿಟ್ಟು ಇನ್ನೊಬ್ಬಾಕಿನ ಕಟಗೊಳ್ಳಾಕ ಸಜ್ಜಾಗಿದ್ದ. ನಾನು ಕೆರನೋ ಬಾವಿನೋ ನೋಡ್ಕೊಳ್ಳುದೊಂದೇ ಬಾಕಿ ಇತ್ತು. ಆ ವ್ಯಾಳೆದಾಗ ನನಗ ನೆನಪಾದಾಂವ ತುಳಸಿಗಿರಿ ಹನಮಪ್ಪ. ಅಂವೇನ ಮಾಡಿದ? ಅಂದೆ. ಅಂವ ನನ್ನ ಹೊಟ್ಟಾಗ ನಿನ್ನ ಇಟ್ಟ. ಅಂದ್ಳು. ಅದ್ಹೆಂಗ ಬೇ ಅಂದೆ.
ಮುಂದಿನ ವರ್ಷ ಅನಗೊಡ್ದ ನೀ ಗಂಡಾಗ್ಲಿ ಹೆಣ್ಣಾಗ್ಲಿ ಮಕ್ಕಳಾ ಹೆತ್ತರ ಸರಿ, ಇಲ್ಲಂದ್ರ, ನೋಡಂತ ತಾಕೀತ ಮಾಡಿದ್ರು. ದೇವ್ರ ಕೊಟ್ಟರ ಮಕ್ಕಳಾ ಮರಿ, ಅಂವ ಕೊಡದಿದ್ರೇನೈತಿ ಮಣ್ಣು.! ನಮ್ಮ ಸೀಮ್ಯಾಗ ಸತ್ತುಳ ದೇವ್ರ ಅಂದ್ರ ಅಂವ ನಡುಗಿರಿಯ ಒಡೆಯ ತುಳಸಿಗಿರಿಸ್ವಾಮಿ ಹನಮಪ್ಪಾ.
ನಾನು ಶನಿವಾರಕ್ಕೊಮ್ಮೆ ನಿರಹಂಕಾರ ಉಪವಾಸ ಮಾಡಿದೆ, ಪ್ರತಿ ಶನಿವಾರಕೊಮ್ಮೆ ಕಾಲನಡಿಗೆಯಿಂದ ನಡೆದು ಹೋಗಿ ಅಂವನ ದರಶನಾ ಪಡೆದುಕೊಂಡೆ, ಸ್ವಾಮಿ ಕಟ್ಟಿಯಿಂದ ದೀಡ ನಮಸ್ಕಾರ ಹಾಕಿ ನನ್ನ ಹರಕಿ ಮುಟ್ಟಿಸಿದೆ. ಆಗ ದೇವ್ರಾ ನನ್ನ ಮ್ಯಾಲ ಬೆಳಕ ಚೆಲ್ಲಿದ. ನನ್ನ ಹೊಟ್ಯಾಗ ನೀ ಬೆಳೆಯತೊಡಗಿದೆ. ಮನಿ ಮಂದಿಯಲ್ಲ ನನ್ನ ಅರಗಿಳಿಯಂತೆ ನೋಡತೊಡಗಿದ್ರು. ನೀ ಹುಟ್ಟಿದ ಮ್ಯಾಲ ಆ ನಡುಗಿರಿ ಒಡೆಯನ ಹೆಸರೇ ನಿನಗಿಟ್ಟದು ಎಂದು ಹೇಳುತ್ತ ಅವ್ವ ಕಡೆ ರೊಟ್ಟಿ ಮಾಡಿ ಮುಗಿಸಿ, ಕೊಮನಿಗೆಯನ್ನು ಎತ್ತಿಟ್ಟಳು. ನಾನು ಕುಂಡಿ ಜಾಡಿಸಿಕೊಂಡು ಹೊರಗೆ ಆಟ ಆಡಲು ಜಿಗತಾ ಕೊಟ್ಟೆ.
ಅಪ್ಪನ ನಿಶೆದಾನ ಮಾತು:
ಅಪ್ಪ ಶರೆ ಕುಡಿದು ಬಂದಿದ್ದ. ಶರೆ ಕುಡಿದಾಗ ಊರ ಸುದ್ದಿ ಕತಿ ಕಟ್ಟಿ ಹೇಳುವುದು ಅವನ ಚಾಳಿ. ಮೆಲ್ಲಕ ಅಂವನ ಹತ್ರ ಹ್ವಾದೆ.ನನ್ನ ಬಾಚಿ ತಬ್ಬಿ ತೊಡೆಮೇಲೆ ಕಳ್ಳರಿಸಿಕೊಂಡ. “ಯಪ್ಪಾ ಹೊಲಸ ವಾಸ್ನೆ” ಎಂದೆ. ಆಗ ಬಾಯಲ್ಲೊಂದು ಯಾಲಕ್ಕಿ ಹಾಕಿಕೊಂಡ. ವಾಸ್ನಿ ಒಂದ ತಟಗ ಕಮ್ಮಿ ಆತು.
ನಿಶೆಯಲ್ಲಿಯೇ ಅಪ್ಪ “ಹನುಮ ನಮ್ಮ ತಾಯಿ ತಂದೆ
ಭೀಮ ನಮ್ಮ ಬಂಧು ಬಳಗಾ”
ಅಪ್ಪ ಈ ಹಾಡನ್ನು ಹಾಡ ತೊಡಗಿದ. ಅಂವಾ ದಿನಾ ಭಜನಾ ಮಾಡಾಕ ತುಳಸಿಗಿರಿ ಹನಮಪ್ಪನ ಗುಡಿಗೆ ಹೊಕ್ಕಿದ್ದ.
ಕಾರ್ತಿಕ ಮಾಸದಾಗಂತು ಅಲ್ಲೇ ಟಿಕಾನಿ ಊರತಿದ್ದ. ಜಾತ್ರಿ ಮುಗದ ಮ್ಯಾಲ ಮನಿಗೆ ಹತ್ತತ್ತಿದ್ದ. ಹಂಗಾ ಹಾಡಾ ಹಾಡ್ಕೋತ ಕಿಸೆದಾಗಿಂದ ಕಡ್ಲಿ ಕಾಳ ತಗದ ನನ್ನ ಪುಟ್ಟ ಮೊಗಸ್ಯಾಗ ಹಾಕಿದ. ನಾನು ಅಂವಾ ಹಾಡುವ ಹಾಡಾ ಕೇಳ್ಕೋತ ಹಂಗ ಕಡ್ಡಲಿ ಕಟಂ ಕುಟುಂ ತಿನ್ನತೊಡಗಿದೆ. ಅಪ್ಪ ಹಾಡು ನಿಲ್ಲಿಸಿದ. ಯಪ್ಪಾ ನಿನಗ ಭಜನಾ ಮಾಡಾಕ, ಹಾಡಾ ಹಾಡಾಕ ಯಾರ ಕಲಿಸ್ಯಾರ ಅಂದೆ. ವಾರದ ಕಿಷ್ಟಪ್ಪಾ ಕಲಿಸ್ಯಾನ ಅಂದ. ಅಂವ್ಯಾರು? ಅಂತ ಕೇಳಿದೆ. ಹೇಳಲು ಶುರು ಮಾಡಿದ.
ವಾರದ ಕಿಷ್ಟಪ್ಪ ಅಂದ್ರ ದಾಸರ ಪೈಕಿ. ಅಂವಾ ಭಾಳ ಶ್ಯಾನ್ಯಾ. ದಿನ ಬೆಳಗಾದ ಕೂಡ್ಲೆ, ಹನಮಪ್ಪನ ಗುಡಿ ಕಸಾ ಕಡ್ಡಿ ಗೂಡಿಸಿ, ಜಳಕಾ ಮಾಡಿ, ಮೊದಲಿನ ಪೂಜಾವೇಳೆಗೆ ತಂಬುರಿ ತಗೊಂದ ಬಂದು,ಹನಮಪ್ಪನೆದರಿಗೆ ಕುಂತಕೊಂಡು, ದಾಸರ ಪದಾ ಹಾಡಾಕ ಹತ್ತಿದ್ರ, ಗುಡಿಯಾಗಿದ್ದ ಹನಮಪ್ಪನೂ ಮೈಮರತ ಅವನ ಹಾಡಾ ಕೇಳಕೋತ ತಲೆದೂಗತಿದ್ದ. ಬಂದ ಭಕ್ತರೆಲ್ಲ ಅಂವನ ಕಂಚಿನ ಕಂಠದಿಂದ ಬರುವ ಸ್ವರಮಾಧುರ್ಯಕ್ಕೆ ಬೆರಗಾಗಿ ಹನಮಪ್ಪನಕಡೆ ಇದ್ದ ತಮ್ಮ ಚಿತ್ತವನ್ನು ಹನುಮದಾಸನಕಡೆ ಹರಿಬಿಟ್ಟು ಭಕ್ತಿಪರವಶರಾಗಿ ಮೈಮರಿಯುತ್ತಿದ್ರು.
ಊರ ಮಂದಿಯಲ್ಲ ಅಂವಗ ವಾರದ ಕಿಷ್ಟಪ್ಪಾ ಅನ್ನುವ ಬದಲು “ಹನುಮದಾಸ” ಎಂದು ಸಂಭೋದಿಸುತ್ತಿದ್ರು. ಸಂಜಿ ಆದ್ರ ಸಾಕು. ಹನುಮದಾಸ ದೇವರ ಭಜನೆಯಲ್ಲಿ ತೊಡಗತಿದ್ದ. ಅಂವನ ಭಜನಾ ಪದಾ ಕೇಳಾಕ ಊರಿನ ಜನ ಸೇರುತ್ತಿದ್ರು. ಅಲ್ಲಿ ನಾನು ಇರ್ತಿದ್ದೆ. ನಾನು ದಿನಾ ಹೋಗಿ ಅಂವನ ಬಾಜು ಕುಂತು ನನ್ನ ಕೈಯನ್ನೆ ತಾಳವಾಗಿ ಭಾರಿಸುತ್ತಿದ್ದೆ. ಅದನ್ನು ಕಂಡ ಹನುಮದಾಸರು ನನಗೆ ಒಂದು ದಿನ ತಾಳ ನುಡಿಸಲು ಕೊಟ್ಟರು. ನಾನು ಚೆನ್ನಾಗಿ ನುಡಿಸಿದೆ.ಹಾಗೆ ದಪಡಿ, ಕೊಟ್ಟರು, ಕೊನೆಗೆ ಹಾರ್ಮೋನಿಯಂ ನುಡಿಸಲೂ ಹೇಳಿಕೊಟ್ಟರು. ನನಗೆ ನೂರಾ ಹತ್ತು ಹಾಡು ಬಾಯಿಪಾಠ ಮಾಡಿಸಿದರು. ಹಿಂಗಾಗಿ ನಾ ಹಾಡುವುದನ್ನು ಕಲಿತೆ, ಭಜನಾ ಮಾಡುವುದನ್ನು ರೂಢಿಸಿಕೊಂಡೆ, ಇದಕ್ಕೆಲ್ಲ ಧಯತೋರಿದವನು ಹನುಮದಾಸ ಎಂದು ಅಪ್ಪ ತನ್ನ ಕತಿಗೆ ಚುಕ್ಕಿ ಇಟ್ಟ.
ಅವರಿವರಾಡಿದ ಮಾತು:
ನಾನು ಕಾಲೇಜ ಮುಗಿಸಿ ಕೆಲಸಿಲ್ಲದೇ ಊರಲ್ಲಿ ತಿಂದುಂಡು ಗುಂಡರ ಗುಳಿಯಂತೆ ತಿರಗುತ್ತಿದ್ದೆ. ಒಂದೊಂದು ಸಲ ನಮ್ಮೂರ ಮಾತಿನ ಕಟ್ಟಿಗೆ ಹೋಗಿ ನಾನೂ ಶರಣಾಗತಿ ಆಗುತ್ತಿದ್ದೇ. ಅಲ್ಲಿ ದೇಶವ್ಯಾಪಿ ಚರ್ಚೆಗಳು, ರಾಜಕೀಯ ಆಗುಹೋಗು, ಬೆಳೆಹಾಣಿ ವರದಿ, ಅಕ್ರಮ ಸಕ್ರಮ ಸಂಭಂದಗಳ ಚರ್ಚಾಕೂಟ ಎಲ್ಲವೂ ನಡೆಯುತ್ತಿತ್ತು. ಹಿರಿಯರು ಕಿರಿಯರು, ಮದ್ಯವಯಸ್ಸಿನವರು ಎಲ್ಲರೂ ಇರುತ್ತಿದ್ದರು. ಅಂಥ ಸಭೆಯಲ್ಲೂ ತುಳಸಿಗಿರಿ ಹನುಮಪ್ಪನ ಕತೆಯೊಮ್ಮೆ ಚರ್ಚೆಯಲ್ಲಿ ಸಾಗಿತ್ತು. ಅದರಲ್ಲೊಬ್ಬ ಹೇಳುತ್ತಿದ್ದ.
ನೀರಬೂದಿಹಾಳ ದೇಸಾಯರು ಆ ಕಾಲದಲ್ಲಿ ಪ್ರತಿ ಕಾರ್ತಿಕ ಮಾಸಕ್ಕೆ ತಿರುಪತಿ ತಿಮ್ಮಪ್ಪನ ದರುಶನಕ್ಕೆ, ಕುದುರೆ, ಆನೆಗಳ ಸಮೇತ, ಬೆಳ್ಳಿ ಬಂಗಾರ ಹೇರಿಕೊಂಡು, ತನ್ನ ಕುಟುಂಬ, ಪರಿವಾರ ಸಮೇತ ಎಲ್ಲರನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಅಲ್ಲಿಯ ಜನರು ದೇಸಾಯರು ಬರುವ ದಾರಿಯನ್ನೇ ಕಾಯುತ್ತ ನಿಲ್ಲುತ್ತಿದ್ದರು. ಅಲ್ಲಿದ್ದ ಜನರಿಗೆ ನೀರಬೂದಿಹಳಾದ ದೇಸಾಯಾರು ಬೆಳ್ಳಿ ಬಂಗಾರ ಧಾನ ಮಾಡುತ್ತಿದ್ದರಂತೆ. ಹಿಂಗಾಗಿ ತಿರುಪತಿ ತಿಮ್ಮಪ್ಪನಿಗಿಂತ ಈ ದೇಸಾಯಾರ ಮ್ಯಾಲ ಅಲ್ಲಿಯ ಜನರಿಗೆ ಭಕ್ತಿ ಹೆಚ್ಚಾಗಿ ಇವರನ್ನೇ ದೇವರಂತೆ ಕಾಣುತ್ತಿದ್ದು. ಗುಡಿಯಾಗಿದ್ದ ದೇವರಿಗೂ ಸಹಿಲಾಗಲಿಲ್ಲ. ಅವಾಗ ಒಂದು ದಿನ ಸಾಕ್ಷಾತ ದೇವರು ನೀರ ಬೂದಿಹಾಳ ದೇಸಾಯರ ಕನಸಲ್ಲಿ ಬಂದು. “ನೋಡಪಾ ನೀನು ಅಷ್ಟ ದೂರಿಂದ ಇಲ್ಲಿ ತನಕಾ ಬರಬ್ಯಾಡ, ನಾನು ನಿನಗ ನೀನಿದ್ದ ಜಾಗದಾಗ ಬಂದ ನೆಲಸ್ತಿನಿ, ನೀ ಅಲ್ಲೇ ನನಗ ಪೂಜಾ ಪುಣಸ್ಕಾರ ಮಾಡು” ಅಂತ ಹೇಳಿ ದೇವ್ರ ಅವರ ಕನಸಿಂದ ಕಣ್ಮರಿಯಾದಂತ. ಆ ಮ್ಯಾಲ ಎಷ್ಟೋ ದಿನಕ್ಕ ನೀರ ಬೂದ್ಯಾಳ ದೇಸಾಯಾರ ಕಾಗಾರ ದನಗೋಳ ಈ ತುಳಸಿ ವಣದಾಗಿದ್ದ ಗಿರಿ ಕಡೆ ಮೇಕೋತ ಬಂದಾಗ ಅಲ್ಲಿ ಒಂದ ಆಕಳಾ, ಹನಮಪ್ಪ ಇದ್ದ ಜಾಗಕ್ಕ ಓಡೋಡಿ ಹೋಗಿ ಹಾಲ ಕುಡಿಸಿ ಬರ್ತಿತಂತ. ಹಿಂಗ ಬಾಳ ದಿನಾ ಆದ ಮ್ಯಾಲ ಆಕಳ ಸುಳು ಹಿಡಕೊಂಡ ಹೋಗಿ ದನಾಕಾಯಾಂವ ಪಶ್ಚಿಮಕ್ಕೆ ಅಭಿಮುಖವಾಗಿದ್ದ ದೊಡ್ಡ ವಿಗ್ರಹ ನೋಡಿ ಬೆಚ್ಚಿ ಬಿದ್ದು, ನಂತ್ರ ಈ ಸುದ್ದಿ ದೇಸಾಯರಿಗೆ ತಲುಪಿಸಿದಾಗ. ಆಗ ದೇಸಾಯಾರು ಅಲ್ಲಿ ದೊಡ್ಡ ಗುಡಿ ಕಟ್ಟಿಸಿದ್ರಂತ. ಆ ಗುಡಿಯಾಗ ಇದ್ದಾಂವ ಅಭಿನವ ತಿರುಪತಿ. ಹಿಂಗಾಗಿ ತುಳಸಿಗಿರಿಗೆ “ನಡುಗಿರಿ” ಅಂತಾರೆಂದು. ಮಾತು ಮುಗಿಸಿದ. ನಾನು ಆ ಕತಿ ಕೇಳಿ ಮತ್ತೆ ಪುಣಿತನಾಗಿ ಮನೆಕಡೆ ನಡಿದೆ.
ವರದಿಗಾರನ ವರದಿ:
“ಕಾಲಾಯ ತಸ್ಮೈ ನಮಃ”
ಕಾಲ ಬದಲಾದಂತೆ, ಜನ ಬದಲಾಗುತ್ತಾರೆ, ಜನ ಬದಲಾದಂತೆ ಜಾತ್ರೆಗಳೂ ಬದಲಾಗುತ್ತವೆ. ಮೊದಲೆಲ್ಲ ಎತ್ತಿನ ಬಂಡಿಯಲ್ಲಿ ಜಾತ್ರಗೆ ಬರುತ್ತಿದ್ದ ಜನ ಈಗ ಕಾರು, ಬೈಕ್, ಮೇಲೆ ಬರುತ್ತಿದ್ದಾರೆ. ಮೊದಲು ಇಡೀ ಆಡಳಿತ ಪೂಜಾರ್ಕಿ ಮಾಡುವರ ಕೈಯಲ್ಲಿತ್ತು. ಹೆಚ್ಚು ಆದಾಯ ಬರುವುದರಿಂದ ಸರಕಾರದ ಹದ್ದಿನ ಕಣ್ಣು ಬಿದ್ದು. ಸರಕಾರ ಗುಡಿಯನ್ನು ತನ್ನ ಸ್ವಾಧೀನಕ್ಕೆ ಒಳಪಡಿಸಿಕೊಂಡಿತು. ಆಗ ಗುಡಿ ಚಾಕ್ರಿ ಮಾಡುವ ಜನ ಬೇಸತ್ತರೂ ಪೂಜಯ ಕೈಂಕರ್ಯ ಆದರೂ ಮುಂದುವರಿಸಿದರು.
ಆದರೆ ಸರಕಾರ ಗುಡಿಯನ್ನು ತನ್ನ ಸ್ವಾದಿನಕ್ಕೆ ತಗಿದುಕೊಂಡ ಮೇಲೆ, ಬರೀ ಆದಾಯವನ್ನಷ್ಟೇ ಲೆಕ್ಕ ಹಾಕುತ್ತಿದೆ. ಬಂದ ಹಣವನ್ನು ಎತ್ತಿಕೊಂಡು ಹೋಗುತ್ತಿದೆ. ಗುಡಿಯ ಸುತ್ತ ಮುತ್ತ, ಸುಸಜ್ಜಿತ ಕಂಪೌಂಡಿಲ್ಲ, ಬಂದ ಭಕ್ತರು ಬಿಡಲು ಕಾರ್ ಪಾರ್ಕಿಂಗ್ ಇಲ್ಲ, ಬೈಕ್ ಪಾರ್ಕಿಂಗ್ ಇಲ್ಲ, ಬಂದವರು ಉಳಿದು ಕೊಳ್ಳಲು ಅಚ್ಚುಕಟ್ಟಾದ ವಸತಿ ಗೃಹ ಇಲ್ಲಾ ಸರಕಾರ ಬಂದ ಹಣವನೆಲ್ಲ ನುಂಗಿ ನೀರು ಕುಡಿಯುತ್ತಿದೆ. ಭಕ್ತರು ಕಂಗಾಲಾಗಿದ್ದಾರೆ. ದೇವಾಲಯದ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳು ಸರಿಯಾಗಿ ಲಕ್ಷ ಹರಿಸದಿದ್ರೇ ಮುಂದಿನ ಪರಿಣಾಮ ಸರಕಾರವೇ ಎದುರಿಸಬೇಕಾಗುವುದೆಂದು ವರದಿಗಾರ ಕಡಕ್ಕಾಗಿ ವರದಿ ಮಾಡಿದ್ದ.
ಬೆಂಗಳೂರಿನಲ್ಲಿದ್ದ ನಾನು ಆ ಪೇಪರ್ ವರದಿ ಓದುತ್ತಾ, ಅಜ್ಜ- ಅಜ್ಜಿ, ಅವ್ವ- ಅಪ್ಪ ಹೇಳಿದ ಕತೆಯನೊಮ್ಮೆ ಮೆಲಕು ಹಾಕಿದೆ. ಆಗ
“ಸಜ್ಜಿ ರೊಟ್ಟಿ ಚವಳಿಕಾಯಿ
ಗೋವಿಂದ ಗೋವಿಂದಾ.. ಗೋವಿಂದಾ
ಅರ್ಧಾ ರೊಟ್ಟಿ ಅವರಿ ಕಾಳಾ
ಗೋವಿಂದ ಗೋವಿಂದಾ.. ಗೋವಿಂದಾ
ಪೂರಾ ರೊಟ್ಟಿ ಪುಂಡಿ ಪಲ್ಲೆ
ಗೋವಿಂದ ಗೋವಿಂದಾ.. ಗೋವಿಂದಾ
ಕಡಿಗಿರಿಗಿಂತಾ ನಡುಗಿರಿ ಲೇಸು
ಗೋವಿಂದ ಗೋವಿಂದಾ.. ಗೋವಿಂದಾ”
ಜಾತ್ರೆಗೆ ಹೋಗುವಾಗ ನಡುಗಿರಿ ದೇವರ ಕುರಿತು ಅಜ್ಜ ಹಾಡಿದ ಹಾಡು ನನ್ನ ನೆನಪಿನ ಬುತ್ತಿಯಿಂದ ಆಗ ಮತ್ತೊಮ್ಮೆ ಬಿಚ್ಚಿಕೊಂಡಿತು.
-ತಿರುಪತಿ ಭಂಗಿ
