“…ಮಾಡದ ತಪ್ಪಿಗೆಲ್ಲಾ ಬೈಗುಳ ತಿನ್ನುವುದಕ್ಕೆ ನಾನೇನು ನಿಮ್ಮ ಮನೆಯ ಜೀತದಾಳಲ್ಲ. ನಾನೂ ಕಲಿತಿದ್ದೇನೆ. ಲೆಕ್ಕ ಹಾಕಿದರೆ ನನ್ನ ಮೆದುಳಿನ ತೂಕ ನಿಮ್ಮದಕ್ಕಿಂತ ಹೆಚ್ಚೇ ಇದೆ. ನನಗೆ ಬುದ್ಧಿ ಹೇಳುವ ಅರ್ಹತೆ ನಿಮಗೇನಿದೆ ಎಂದು ಸ್ವಲ್ಪವಾದರೂ ಯೋಚಿಸಬೇಕಲ್ಲಾ…” ಅವಳು ಬೈಯ್ಯುತ್ತಿದ್ದಳು. ಅವನ ಮುಖದಲ್ಲಿ ಆಶ್ಚರ್ಯವಿತ್ತು.
“ಏನಂದುಕೊಂಡಿದ್ದೀರಿ ನಿಮ್ಮನ್ನು ನೀವು? ಲೋಕಕ್ಕೆಲ್ಲಾ ಅನ್ನ ಹಾಕುತ್ತಿದ್ದೇನೆ ಎಂದುಕೊಂಡ ಹಾಗಿದೆ. ನಾನು ಹೇಗೆ ದುಡಿಯುತ್ತಿದ್ದೇನೋ ಹಾಗೆಯೇ ನೀವೂ ದುಡಿಯುತ್ತಿದ್ದೀರಿ. ನಾವಿಬ್ಬರೂ ಸಮಾನರು ಎನ್ನುವುದು ನೆನಪಿರಲಿ. ಹುದ್ದೆ ಬದಲಾದ ಮಾತ್ರಕ್ಕೆ ನಾನೇನೂ ನಿಮ್ಮ ಗುಲಾಮಳಾಗುವುದಿಲ್ಲ. ನೀವೇನು ನನ್ನನ್ನು ದತ್ತು ತೆಗೆದುಕೊಂಡವರಲ್ಲ. ನಾನು ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ನೀವು ಸಂಬಳ ಕೊಡುತ್ತಿದ್ದೀರಿ. ಪುಕ್ಕಟೆಯಾಗಿಯೇನೂ ಕೊಡುತ್ತಿಲ್ಲ. ಕೊಟ್ಟರೂ ನನಗೆ ಬೇಡ. ಸ್ವಾಭಿಮಾನ ನಿಮಗಿಲ್ಲದಿರಬಹುದು; ನನಗಿದೆ…” ಅವಳ ಬೈಗುಳ ಕೇಳಿಸಿಕೊಳ್ಳುತ್ತಲೇ ಇದ್ದ ಅವನ ಮುಖದಲ್ಲಿನ ಆಶ್ಚರ್ಯ ಈಗ ಕೋಪವಾಗಿ ಬದಲಾಗತೊಡಗಿತ್ತು.
“ಅದು ಸರಿ ಇಲ್ಲ ಇದು ಸರಿ ಇಲ್ಲ ಎಂದು ಸುಮ್ಮಸುಮ್ಮನೆ ತಪ್ಪು ಕಂಡುಹಿಡಿಯುತ್ತೀರಲ್ಲಾ, ಅದರ ಹಿಂದಿನ ಉದ್ದೇಶ ನನಗೆ ತಿಳಿಯದ್ದೇನಲ್ಲ. ಒಂದಿಷ್ಟೂ ತಪ್ಪುಗಳಿಲ್ಲದೆ ಕೆಲಸ ಮುಗಿಸುವ ಪರಿಪೂರ್ಣತೆ ನನಗಿದೆ. ಆದರೆ ಯಾವುದೋ ಬಣ್ಣ ಬಣ್ಣದ ಕನ್ನಡಕಗಳಲ್ಲಿ ನನ್ನ ಕೆಲಸವನ್ನು ಕಾಣುವ ನೀವು ಇಲ್ಲದ ತಪ್ಪುಗಳನ್ನು ನೀವೇ ಸೃಷ್ಟಿಸುತ್ತಿದ್ದೀರಿ, ಉದ್ದೇಶಪೂರ್ವಕವಾಗಿ…” ಅವಳು ಈ ಮಾತು ಹೇಳುತ್ತಿದ್ದಂತೆ ಅವನ ಮುಖ ಸಪ್ಪಗಾಗತೊಡಗಿತ್ತು. ಕೈ ಕೈ ಹಿಸುಕತೊಡಗಿದ್ದ.
“ಅಷ್ಟಕ್ಕೂ ನನ್ನ ತಪ್ಪನ್ನು ಕಂಡುಹಿಡಿಯುವ ಯೋಗ್ಯತೆ ನಿಮಗೇನಿದೆ? ಬೇವಿನ ಕಹಿಯನ್ನು ಬೆಲ್ಲ ಗುರುತಿಸಿದರೆ ಅದನ್ನು ಸರಿ ಎನ್ನಬಹುದು. ಆದರೆ ಬೇವಿನ ಕಹಿಯನ್ನು ಹಾಗಲಕಾಯಿ ಲೇವಡಿಯಾಡಿದರೆ ಲೋಕ ಒಪ್ಪಿಕೊಳ್ಳುತ್ತದಾ? ಟೀಕಿಸಲಾದರೂ ಒಂದು ಯೋಗ್ಯತೆ ಬೇಕು. ನಾನು ತಪ್ಪು ಮಾಡಿದ್ದೇನೆ ಎಂದು ಹೇಳುವ ನೀವು ಸಾವಿರ ಸಾವಿರ ತಪ್ಪು ಮಾಡಿದ್ದೀರಿ. ಮೊನ್ನೆ ಒಂದು ಡಾಕ್ಯುಮೆಂಟ್ ಕೊಟ್ಟಿದ್ದೀರಲ್ಲ, ನೋಡಿದೆ, ಆರು ಪುಟದ ಆ ಡಾಕ್ಯುಮೆಂಟ್ನಲ್ಲಿ ಅಕ್ಷರ ತಪ್ಪುಗಳೇ ಒಂದು ಪುಟದಷ್ಟಿದೆ. ಅಕ್ಷರದ ತಪ್ಪುಗಳನ್ನಾದರೂ ಸರಿ ಮಾಡಬಹುದು. ಆದರೆ ನಿಮ್ಮ ವ್ಯಕ್ತಿತ್ವದೊಳಗಡೆಯೇ ದೋಷ ಇದೆ. ಬದುಕನ್ನು ನಡೆಸುತ್ತಿರುವ ರೀತಿಯಲ್ಲೇ ತಪ್ಪಿದೆ. ಅದಕ್ಕೆ ಏನೆನ್ನಬೇಕು? ತಲೆಯೊಳಗೆ ಬುದ್ಧಿಯಿಲ್ಲ ನಿಮಗೆ. ಆದರೆ ಅಪ್ಪನೋ ಅಜ್ಜನೋ ಮಾಡಿಟ್ಟ ಆಸ್ತಿ ಬೆಟ್ಟದಷ್ಟಿದೆ. ಅಷ್ಟು ಮಾತ್ರಕ್ಕೆ ನಾನೇನು ನಿಮಗೆ ಸಲಾಮ್ ಹೊಡೆಯಬೇಕಾ?” ಅವಳ ಧ್ವನಿ ಏರತೊಡಗಿತ್ತು. ಅವನು ಮೆತ್ತಗಾಗತೊಡಗಿದ್ದ.
“ಮೊನ್ನೆ ನೀವು ಹೇಳಿದ್ದೇನು? ನನಗೆ ಡ್ರೆಸ್ಸಿಂಗ್ ಸೆನ್ಸ್ ಇಲ್ಲ. ನನ್ನೆದುರಿರುವ ಮಹಾಸ್ವಾಮಿಗಳೇ ಸರಿಯಾಗಿ ಕೇಳಿಸಿಕೊಳ್ಳಿ, ನಾನು ಬರುವುದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿಕ್ಕೆ. ನಿಮಗೆ ಬೇಕಾದ ರೀತಿಯ ಡ್ರೆಸ್ ಹಾಕಿಕೊಂಡು ಬಂದು ನಿಮ್ಮೆದುರು ಕ್ಯಾಟ್ವಾಕ್ ಮಾಡಿ ಶಹಬ್ಬಾಸ್ಗಿರಿ ಪಡೆಯುವ ಹುಚ್ಚು ನನಗಿಲ್ಲ. ಅಷ್ಟಕ್ಕೂ ನೀವು ಬಯಸುವ ಡ್ರೆಸ್ಸಿಂಗ್ ಸೆನ್ಸ್ ಯಾವುದೆಂದು ನನಗೆ ಗೊತ್ತಿದೆ. ಮೊನ್ನೆ ಮೊನ್ನೆವರೆಗೂ ರಾತ್ರಿ ಹತ್ತು ದಾಟಿದ ಮೇಲೆ ಹೊಸ ಪ್ರಾಜೆಕ್ಟ್ ಬಗ್ಗೆ ಮಾತಾಡುವ ಕುಂಟುನೆಪ ಹೇಳಿ ಕಾಲ್ ಮಾಡುತ್ತಿದ್ದಿರಿ. ವೀಡಿಯೋ ಕಾಲ್ ಮಾಡುವ ತೆವಲು ಬೇರೆ. ನನ್ನ ಜೊತೆಗೆ ಚೆನ್ನಾಗಿದ್ದರೆ ನಿನ್ನ ಲೈಫ್ ಬಿಂದಾಸಾಗಿರುತ್ತದೆ ಎನ್ನುವ ಆಮಿಷವನ್ನೂ ಒಡ್ಡಿದ್ದೀರಿ. ಆಮೇಲೆ ನಾನು ನೇರವಾಗಿ ನನಗೆ ಇದೆಲ್ಲಾ ಇಷ್ಟ ಇಲ್ಲ ಎಂದಮೇಲೆ ತಾನೇ ನೀವು ತೆಪ್ಪಗಾದದ್ದು?” ಅವನೇನೋ ಹೇಳಲು ಹೊರಟ. ಅವಳು ಅವಕಾಶವೇ ಕೊಡದೆ ಮಾತು ಮುಂದುವರಿಸಿದಳು.
“ನೀವೆಷ್ಟೇ ಕಷ್ಟ ಕೊಟ್ಟರೂ, ಅಸಭ್ಯವಾಗಿ ವರ್ತಿಸಿದರೂ ಹೆದರಿ ಕೂರುವ ಜಾಯಮಾನದವಳಲ್ಲ ನಾನು. ನನ್ನ ಹಿನ್ನೆಲೆ ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ಮನೆಯ ಜವಾಬ್ದಾರಿ ಇಲ್ಲದ ಅಯೋಗ್ಯ ತಂದೆ ರಾತ್ರೋರಾತ್ರಿ ನನ್ನಮ್ಮನನ್ನೂ, ಎಂಟು ವರ್ಷದ ನನ್ನನ್ನೂ ಮನೆಯಿಂದ ಹೊರದಬ್ಬಿದ್ದ. ಆಗ ನನ್ನಮ್ಮನೇನೂ ಅಳುತ್ತಾ ಕುಳಿತುಕೊಂಡಿರಲಿಲ್ಲ. ಕೂಲಿ ಮಾಡಿ ನನ್ನನ್ನು ಓದಿಸಿದ್ದಾಳೆ. ಅಂಥವಳ ಮಗಳು ನಾನು. ನಿಮಗೆ ಭಯಪಡುತ್ತೇನಾ?
“ಎಲ್ಲರನ್ನೂ ಹೆದರಿಸಬಲ್ಲ ದೊಡ್ಡ ಕಣ್ಣು ನಿಮಗಿರಬಹುದು. ಆದರೆ ನಿಮ್ಮ ದೃಷ್ಟಿ ವಕ್ರವಾಗಿದೆ. ಪ್ರಾಮಾಣಿಕವಾಗಿಲ್ಲ. ನನ್ನ ದೃಷ್ಟಿಯಂತೂ ನೇರಾನೇರ. ಪ್ರಾಮಾಣಿಕತೆಯೇ ನನ್ನ ಆಸ್ತಿ. ನಿಮ್ಮನ್ನು ಎದುರಿಸಲು ಅಷ್ಟು ಸಾಕು. ಸಾವಿರ ಸವಾಲುಗಳು ಬಂದರೂ ಎದುರಿಸುತ್ತೇನೆಯೇ ಹೊರತು ಪಲಾಯನ ಮಾಡುವುದಿಲ್ಲ. ಖಂಡಿತವಾಗಿಯೂ ಪಲಾಯನ ಮಾಡುವುದಿಲ್ಲ…” ಅವಳು ಅವನೆದುರಿಗಿದ್ದ ಮೇಜನ್ನು ಕೈಯ್ಯಿಂದ ಬಲವಾಗಿ ಬಡಿದಳು. ಅವಳ ಮಾತಿನ ಜೋರುತನ ಕೇಳಿದವರೆಲ್ಲರೂ ತಮ್ಮ ಕೆಲಸವನ್ನು ತತ್ಕಾಲಕ್ಕೆ ನಿಲ್ಲಿಸಿ ಅವರಿಬ್ಬರ ಸುತ್ತ ಸೇರತೊಡಗಿದರು. ಅವನೀಗ ತುಸು ಅಧೈರ್ಯಗೊಂಡವನಾಗಿದ್ದ. ಆದರೆ ಅವಳೇನೂ ಮಾತು ನಿಲ್ಲಿಸಲಿಲ್ಲ.
“ಕಳೆದ ಶುಕ್ರವಾರ ಮಧ್ಯಾಹ್ನ ಮೀಟಿಂಗ್ ನಡೆಯುತ್ತಿತ್ತಲ್ಲಾ, ಆಗ ನಾನು ಮಾತನಾಡುವುದಕ್ಕೆ ಎದ್ದುನಿಂತೆ. ನಿಮಗೆ ನೆನಪಿರಬಹುದು. ಆದರೆ ನೀವು ನನ್ನ ಮಾತಿಗೆ ಅವಕಾಶವನ್ನೇ ಕೊಟ್ಟಿಲ್ಲ. ಕಡಿಮೆ ಎಂದರೂ ಮೂವತ್ತಾರು ಜನರಿದ್ದರು ಆ ಮೀಟಿಂಗ್ನಲ್ಲಿ. ಎಲ್ಲರೂ ನನ್ನ ಪರಿಚಯದವರೇ. ಅದೆಷ್ಟು ಅವಮಾನವಾಯಿತು ಗೊತ್ತಾ ನನಗೆ? ಶಾಲೆಯಲ್ಲಿದ್ದಾಗ ನಾನೆಂತಹ ಒಳ್ಳೆಯ ಭಾಷಣಗಾರ್ತಿಯಾಗಿದ್ದೆ. ನಾನು ಮಾತು ಶುರುಮಾಡಿದರೆ ಸಾಕು ಎಲ್ಲರೂ ನನ್ನ ಮಾತಿನಲ್ಲೇ ತನ್ಮಯರಾಗುತ್ತಿದ್ದರು. ಅಂಥ ನನ್ನ ಮಾತಿಗೆ ನೀವು ಅವಕಾಶ ಕೊಟ್ಟಿಲ್ಲ. ಅಷ್ಟಕ್ಕೂ ಆ ಮೀಟಿಂಗ್ನಲ್ಲಿ ನಾನು ಮಾತನಾಡುವುದಕ್ಕೆ ಎದ್ದುನಿಂತದ್ದು ನನ್ನೊಬ್ಬಳಿಗಾಗಿ ಅಲ್ಲ. ಉಳಿದ ಎಲ್ಲರ ಅಭಿಪ್ರಾಯ ಏನಿದೆಯೋ ಅದನ್ನು ನಿಮಗೆ ತಿಳಿಸುವುದಕ್ಕಾಗಿ. ಆದರೆ ನಿಮಗೆ ಅಂಥ ವಿಚಾರಗಳೊಂದೂ ಬೇಕಾಗಿಲ್ಲ. ನಿಮಗೆ ಬೇಕಾದದ್ದು ನಿಮ್ಮ ಸ್ವಾರ್ಥ ಮಾತ್ರ…” ಗಳಿಗೆ ಗಳಿಗೆಗೂ ಅವಳ ಧ್ವನಿ ಏರುತ್ತಲೇ ಇತ್ತು.
ಸುತ್ತ ಸೇರಿದ್ದವರಲ್ಲಿ ಒಬ್ಬಳಾಗಿದ್ದ ಹುಡುಗಿಯ ಕಡೆಗೆ ಕೈತೋರಿಸಿ ಹೇಳಲಾರಂಭಿಸಿದಳು- “ಅವಳು ಕೆಲಸಕ್ಕೆ ಸೇರಿ ಇನ್ನೂ ಸರಿಯಾಗಿ ಒಂದು ವರ್ಷವೂ ಆಗಿಲ್ಲ. ಆಗಲೇ ಪ್ರಮೋಷನ್ ಕೊಟ್ಟಿದ್ದೀರಿ. ಪಾಪ! ಅವಳೇನೋ ಅವಳ ಕೆಲಸ ಮಾಡುವ ರೀತಿಯನ್ನು ಮೆಚ್ಚಿಕೊಂಡು ನೀವು ಪ್ರಮೋಷನ್ ಕೊಟ್ಟಿದ್ದೀರಿ ಎಂದುಕೊಂಡಿದ್ದಾಳೆ. ನಿಮ್ಮ ಕಚ್ಚೆಹರುಕ ಬುದ್ಧಿ ಅವಳಿಗಿನ್ನೂ ಅರಿವಿಗೆ ಬಂದಂತಿಲ್ಲ. ಪ್ರಮೋಷನ್ ಕೊಟ್ಟು, ಸಂಬಳ ಹೆಚ್ಚುಮಾಡಿ ಬುಟ್ಟಿಗೆ ಕೆಡವಿಕೊಳ್ಳುವ ದರಿದ್ರ ಸ್ವಭಾವ ನಿಮಗಿದೆ ಎನ್ನುವುದು ಗೊತ್ತಿರುವುದು ನನ್ನಂಥ ಕೆಲವರಿಗೆ ಮಾತ್ರ. ಅವಳೇನೋ ನಗುನಗುತ್ತಾ ಕೆಲಸ ಮಾಡುತ್ತಿರುತ್ತಾಳೆ. ನಿಮ್ಮ ಜೊತೆಗೂ ಮಾತಾಡುವಾಗ ನಗುತ್ತಿರುತ್ತಾಳೆ. ಅಂದಮಾತ್ರಕ್ಕೆ ನಿಮ್ಮ ತಾಳಕ್ಕೆ ಕುಣಿಯುವವಳು ಅವಳೆಂದು ನೀವು ಅಪಾರ್ಥ ಮಾಡಿಕೊಂಡಂತಿದೆ. ಮಹಾನುಭಾವರೇ ಹೆಣ್ಣಿನ ಅಂತರಂಗವನ್ನೊಮ್ಮೆ ಸರಿಯಾಗಿ ಅರ್ಥಮಾಡಿಕೊಳ್ಳಿ. ಅವಳು ನಿಮ್ಮಲ್ಲಿ ಮನಃಪೂರ್ವಕವಾಗಿ ನಗುತ್ತಾ ಮಾತನಾಡುತ್ತಿದ್ದಾಳೆ ಎಂದರೆ ನಿಮ್ಮ ಕಾಮದ ಬೆಂಕಿಗೆ ಹಾರಲು ಸಿದ್ಧಳಾಗಿದ್ದಾಳೆ ಎಂದರ್ಥವಲ್ಲ. ಅವಳ ಅಣ್ಣನನ್ನೋ, ಅಪ್ಪನನ್ನೋ, ಮನಮೆಚ್ಚುವ ಬಾಳಸಂಗಾತಿಯನ್ನೋ ನಿಮ್ಮಲ್ಲಿ ಕಂಡಿದ್ದಾಳೆ ಎಂದರ್ಥ. ಮದುವೆಯಾಗಿ ಎರಡು ಮಕ್ಕಳಿರುವ ನಿಮ್ಮನ್ನು ಬಾಳ ಸಂಗಾತಿಯಾಗಿಯಂತೂ ಅವಳು ಕಲ್ಪಿಸಿಕೊಂಡಿರಲಿಕ್ಕಿಲ್ಲ. ಅಂದರೆ ಅವಳ ಭಾವನಾಲೋಕದಲ್ಲಿ ನೀವು ಅವಳ ಸಹೋದರನಾಗಿದ್ದೀರಿ. ಅಥವಾ ತಂದೆಯಾಗಿದ್ದೀರಿ. ಆದರೆ ನೀವು ಅವಳನ್ನು ಬೆಡ್ರೂಮಿನಲ್ಲಿ ಮೈಬಿಸಿ ತಣಿಸಿಕೊಳ್ಳುವುದಕ್ಕಿರುವ ಹೆಣ್ಣುದೇಹವಾಗಿ ಮಾತ್ರ ಪರಿಭಾವಿಸಿಕೊಂಡಿದ್ದೀರಿ” ಅವನ ಹಣೆಯಲ್ಲಿ ಬೆವರ ಹನಿಗಳು ಮೂಡಲಾರಂಭಿಸಿದವು. ಪ್ಯಾಂಟಿನ ಕಿಸೆಯಲ್ಲಿಟ್ಟಿದ್ದ ಕರ್ಚೀಫ್ಗಾಗಿ ತಡಕಾಡತೊಡಗಿದ.
ಸುತ್ತ ನಿಂತಿದ್ದವರಲ್ಲಿ ಯಾರೋ ಒಬ್ಬರು ಕಂಪೆನಿಯ ಮುಖ್ಯಸ್ಥರಿಗೆ ಕರೆಮಾಡಿ ಈ ಮೊದಲೇ ಮಾಹಿತಿ ಕೊಟ್ಟದ್ದರಿಂದ ಈ ವೇಳೆಗೆ ಮುಖ್ಯಸ್ಥರು ಆಗಮಿಸಿಯಾಗಿತ್ತು. ಅವಳು ಏನೆಲ್ಲಾ ಮಾತನಾಡಿದ್ದಾಳೆ ಎನ್ನುವುದು ಈಗಾಗಲೇ ಅವರಿಗೆ ತಿಳಿದುಬಂದಿತ್ತು. ಈಗ ಅವಳು ಮುಖ್ಯಸ್ಥರನ್ನು ಉದ್ದೇಶಿಸಿಯೇ ಮಾತನಾಡಲಾರಂಭಿಸಿದಳು- “ನೀವು ಕಂಪೆನಿಯ ಮುಖ್ಯಸ್ಥರಾಗಿ ಕಂಪೆನಿ ಹೇಗೆ ಬೆಳೆಯಬೇಕು? ಇನ್ನು ಮೂರು ವರ್ಷಗಳಲ್ಲಿ ಎಷ್ಟು ಟಾರ್ಗೆಟ್ ರೀಚ್ ಮಾಡಬೇಕು? ಇನ್ನೈದು ವರ್ಷಗಳ ನಂತರ ಎಲ್ಲೆಲ್ಲಿ ಕಂಪೆನಿಯ ಉಪಶಾಖೆಗಳು ಶುರುವಾಗಬೇಕು? ಹತ್ತು ಕೋಟಿ ಇರುವ ಕಂಪೆನಿಯ ಲಾಭ ನೂರು ಕೋಟಿ ಆಗುವುದು ಹೇಗೆ? ಎಂದೆಲ್ಲಾ ಲೆಕ್ಕಾಚಾರ ಮಾಡುವುದರಲ್ಲಿಯೇ ಕಳೆದುಹೋಗಿದ್ದೀರಿ. ಈ ವ್ಯಕ್ತಿ ಮಾಡುತ್ತಿರುವ ಅಸಂಬದ್ಧ ಕೆಲಸಗಳ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲ. ಅಥವಾ ತಿಳಿದಿದ್ದರೂ ಜಾಣಗುರುಡರಾಗಿದ್ದೀರೋ ಗೊತ್ತಿಲ್ಲ. ಏಳು ತಿಂಗಳುಗಳ ಹಿಂದೆ ಅಂದರೆ ಕಳೆದ ನವೆಂಬರ್ನಲ್ಲಿ ನೂರೆಂಭತ್ತು ಕೋಟಿ ರೂಪಾಯಿಗಳ ಟೆಂಡರ್ ಒಂದು ನಮ್ಮ ಕಂಪೆನಿಗೆ ದೊರೆತ ವಿಚಾರ ನಿಮಗೆ ಗೊತ್ತಿರಬಹುದು. ಆಗ ನಾವೆಲ್ಲಾ ಸಂಭ್ರಮಪಟ್ಟಿದ್ದೆವು. ಈಗ ಆ ಟೆಂಡರ್ನ ಕೆಲಸ ನಡೆಯುತ್ತಿದೆ. ಆದರೆ ಕಂಪೆನಿಯ ಈ ಕೆಲಸದ ಕಾರಣಕ್ಕೆ ಅಲ್ಲಿದ್ದ ಅದೆಷ್ಟೋ ಫುಟ್ಪಾತ್ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಿದೆ. ದಿನದ ದುಡಿಮೆಯನ್ನು ನಂಬಿಕೊಂಡಿರುವವರು ಅವರೆಲ್ಲ. ಕೋಟಿ ಕೋಟಿಗಳನ್ನು ಖಾತೆಗಳಲ್ಲಿ ಭದ್ರವಾಗಿಟ್ಟ ಮಂದಿ ನೀವು. ಕೆಲಸಕ್ಕೆ ಹೋಗದೆ ಒಂದು ವರ್ಷ ಮನೆಯಲ್ಲೇ ಕುಳಿತೂ ಬದುಕು ನಡೆಸುತ್ತೀರಿ. ಆದರೆ ಅವರ ಜೀವನ ಹಾಗಲ್ಲ. ಎಂಭತ್ತು ಅಡಿ ಎತ್ತರದಲ್ಲಿನ ಒಂದು ತುಂಡು ಹಗ್ಗದ ಮೇಲೆ ನಡೆದಂತೆ. ಸ್ವಲ್ಪ ಆಚೀಚೆ ಆದರೂ ಮತ್ತೆ ಬದುಕು ಇಲ್ಲವೇ ಇಲ್ಲ…” ಅವನ ಕಡೆಗೆ ಬೆರಳು ತೋರಿಸಿ ಹೇಳಲಾರಂಭಿಸಿದಳು- “ಇವರಿಗೆ ಗೊತ್ತಿಲ್ಲದ ವಿಚಾರವೇನಲ್ಲ ಇದು. ಎರಡು ವಾರ ಹಿಂದೆಯೇ ಇದನ್ನು ಇವರಿಗೆ ತಿಳಿಸಿದ್ದೇನೆ. ಇವರು ಹೇಳಿದ್ದೇನು ಗೊತ್ತಿದೆಯಾ? ಮಹಾಪ್ರವಾಹ ಬಂದಾಗ ಕೊಚ್ಚಿಹೋಗುವ ಇರುವೆ ಗೂಡುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿಲ್ಲ.
ಆನೆಯ ಬದುಕು ಆನೆಗೆ ಇರುವೆಯ ಬದುಕು ಇರುವೆಗೆ ಎಂಬ ಸರಳ ಸತ್ಯ ಗೊತ್ತಿಲ್ಲದ ಇವರಿಗೆ ಬುದ್ಧಿ ಹೇಳುವವರು ಯಾರು? ಯಾವಾಗಲೂ ಎ.ಸಿ. ಕಾರಿನಲ್ಲೇ ಓಡಾಡಿಕೊಂಡು ಆರಾಮಾಗಿರುವ ಇವರ ಬದುಕು ಇವರಿಗೆ ಎಷ್ಟು ಮುಖ್ಯವೋ ಸುಡುಬಿಸಿಲಿನಲ್ಲಿ ಬೆವರು ಹರಿಸುತ್ತಾ ತಮ್ಮ ಬದುಕಿನ ಜಾತಕವನ್ನು ಮತ್ತೆ ಬರೆಯುತ್ತಾ ಕೂತ ಆ ಫುಟ್ಪಾತ್ ವ್ಯಾಪಾರಿಗಳಿಗೆ ಅವರ ಬದುಕು ಅಷ್ಟೇ ಮುಖ್ಯ…” ಅವಳು ಬಿರುಸಾಗಿ ಮಾತನಾಡುತ್ತಾ ಎಲ್ಲವನ್ನೂ ಕಂಪೆನಿ ಮುಖ್ಯಸ್ಥರೆದುರು ಹೇಳುತ್ತಿರುವುದನ್ನು ಕಂಡು ಅವನು ದಂಗಾಗಿಹೋಗಿದ್ದ. ಈ ಅನಿರೀಕ್ಷಿತ ಆಘಾತವನ್ನು ಸಹಿಸಿಕೊಳ್ಳಲಾಗದ, ಹಾಗೆಂದು ತಪ್ಪಿಸಿಕೊಳ್ಳಲೂ ಆಗದ ಅನಿವಾರ್ಯತೆ ಅವನದ್ದು.
ಅವಳು ಹೇಳಿದ್ದು ಸರಿ ಎನ್ನುವಂತೆ ಮುಖ್ಯಸ್ಥರು ತಲೆಯಾಡಿಸಿದ್ದು ಅವಳಿಗೆ ಮತ್ತಷ್ಟು ಉತ್ಸಾಹ ತುಂಬಿದಂತಾಯಿತು. ಹಿಂದಿಗಿಂತಲೂ ಜೋರಾಗಿ ಹೇಳತೊಡಗಿದಳು- “ಕಂಪೆನಿಯ ಹೊಸ ಬ್ರಾಂಚ್ ತೆರೆದೆವಲ್ಲಾ, ಅಲ್ಲಿಯೂ ಇಂತಹದ್ದೇ ಕಥೆ ಇದೆ. ಕಾಡಿನ ಆ ಪ್ರದೇಶವನ್ನೇ ಕಂಪೆನಿಯ ವಿಸ್ತರಣೆಗಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವೇ ಇರಲಿಲ್ಲ. ಆದರೂ ಇವರು ಆಯ್ಕೆ ಮಾಡಿದ್ದು ಅದೇ ಪ್ರದೇಶವನ್ನು. ಎಷ್ಟು ಹೇಳಿದರೂ ಕೇಳಿಸಿಕೊಳ್ಳಲಾರದ ಕೀಳು ಹಮ್ಮು ಇವರದ್ದು. ಅದೇನೂ ಮಾಮೂಲಿ ಕಾಡಲ್ಲ. ಶತಶತಮಾನಗಳ ಹಿಂದೆಯೇ ನೆಲೆನಿಂತು ಕೇಕೆ ಹಾಕುತ್ತಾ, ಮರ ಏರುತ್ತಾ, ಕಾಸಗಲದ ನೆಲವನ್ನೇ ಪ್ರಪಂಚ ಎಂದಂದುಕೊಂಡಿದ್ದ ಆದಿವಾಸಿಗಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡಿದ್ದ ಮಹಾರಣ್ಯ. ಹೊರಜಗತ್ತಿಗೆ ಒಂದಿಷ್ಟೂ ತೊಂದರೆ ಕೊಡದೆ ತಾವೇ ಭಿನ್ನ ವಿಭಿನ್ನ ಜಗತ್ತಾಗಿ ಜೀವಿಸುತ್ತಿದ್ದ ಆ ಮುಗ್ಧರ ಬದುಕನ್ನು ಹೊಸಕಿಹಾಕಿದವರು ಇವರು. ಇವರಿಗೇನೋ ಆ ಮಿನಿಸ್ಟರ್ನ ಜೊತೆಗೆ ಆತ್ಮೀಯತೆಯಿತ್ತು. ಅವನೂ ಕೂಡಾ ಇವರ ಮಾತಿಗೆ ಲಯಗೂಡಿಸುವ ಕೋಲೆಬಸವನಾಗಿದ್ದ. ಇವರ ಈ ತಾಳಮೇಳಾಟಕ್ಕೆ ಬಲಿಯಾದದ್ದು ಆ ಅರಣ್ಯವಾಸಿಗಳು. ಬೇಕಾ ಈ ಬೆಳವಣಿಗೆ? ಇನ್ನೊಬ್ಬರ ಸಮಾಧಿಯನ್ನು ಬುನಾದಿಯಾಗಿಸಿಕೊಂಡು ಕುಣಿದರೆ ಅದು ಸಾವಿನ ಮೆರವಣಿಗೆಯಾಗದೆ ಬೆಳವಣಿಗೆ ಆಗುತ್ತದಾ? ಸಾಹಿತ್ಯ ಓದಿದ್ದೇನೆ ಸರ್ ನಾನು. ಸುಮ್ಮನೆ ಮಾತನಾಡುತ್ತಿಲ್ಲ. ಕವನ ಬರೆದಿದ್ದೇನೆ. ಇನ್ನೊಬ್ಬರಿಗಾದ ತೊಂದರೆಯನ್ನೂ ನನ್ನದೆಂದು ಭಾವಿಸುವ ಭಾವನೆ ನನಗಿದೆ. ಪಕ್ಕದವರ ಕಷ್ಟಕ್ಕೆ ಸ್ಪಂದಿಸುವ ಸಂವೇದನೆ ನನಗಿದೆ. ಇರುವೆ ಸಾಲು ಆಚೀಚೆ ಆದರೂ ನನ್ನ ಪ್ರಜ್ಞೆಗದು ಹೊಳೆಯುತ್ತದೆ. ತಾಯಿಯ ಬಾಯಿಯ ಆಹಾರಕ್ಕಾಗಿ ಕೊಕ್ಕರಳಿಸಿ ನಿರುಕಿಸುತ್ತಿರುವ ಮರಿಹಕ್ಕಿಯ ಮೊರೆ ನನ್ನ ಕಿವಿಗೆ ಕೇಳುತ್ತದೆ. ಹಾಗಿರುವಾಗ ಹಿರಿದಾಲದ ಗಗನಸ್ಪರ್ಶದ ಹಂಬಲಕ್ಕಾಗಿ ಗೂಡು ಕಳೆದುಕೊಂಡು ದಿಕ್ಕಾಪಾಲಾದ ಆ ಕಾಡುಹಕ್ಕಿಗಳ ಆರ್ತನಾದ ನನಗೆ ಕೇಳುವುದಿಲ್ಲವೇನು? ಅಷ್ಟದಿಕ್ಕುಗಳಲ್ಲಿಯೂ ಕೈಚಾಚಿಕೊಂಡ ನಾವು ಆ ಬಡಪಾಯಿಗಳನ್ನು ದೇಹಿ ಎನ್ನುವಂತೆ ಮಾಡಿದೆವಲ್ಲಾ, ಥೂ ನಾಚಿಕೆಯಾಗಬೇಕು ನಮ್ಮ ಜನ್ಮಕ್ಕೆ!” ಅವನನ್ನು ದುರುಗುಟ್ಟಿ ನೋಡುತ್ತಿದ್ದ ಅವಳಲ್ಲಿದ್ದ ಅಸಹನೆ ಈಗ ಕಟ್ಟೆಯೊಡೆದಿತ್ತು. ಅವಳೀಗ ಸಂಪೂರ್ಣ ಭಾವಪರವಶಳಾಗಿದ್ದಳು.
ಯಂತ್ರವೊಂದರ ಸದ್ದು ಸಣ್ಣದಾಗಿ ಕೇಳಿಬರುತ್ತಿತ್ತು. ಕಂಪೆನಿಯ ನೈಋತ್ಯ ದಿಕ್ಕಿನಿಂದ ಕೇಳಿಬರುತ್ತಿದ್ದ ಆ ಸದ್ದನ್ನೇ ಉಲ್ಲೇಖಿಸಿ ಅವಳು ಹೇಳತೊಡಗಿದಳು- “ಸರಿಯಾಗಿ ಕೇಳಿಸಿಕೊಳ್ಳಿ. ಯಂತ್ರದ ಸದ್ದೊಂದು ಕೇಳುತ್ತಿದೆ. ನಮ್ಮ ಕಂಪೆನಿಗೇ ಸೇರಿದ ಯಂತ್ರ ಅದು. ಆ ಯಂತ್ರದ ಬಳಿಯೇ ನಿಂತು ಕೆಲಸ ಮಾಡುತ್ತಿದ್ದ ಒಬ್ಬ ಬಡಪಾಯಿಯಿದ್ದ. ಕೆಲಸಕ್ಕಾಗಿ ಹಾತೊರೆಯುತ್ತಿದ್ದ, ವಹಿಸಿದ ಜವಾಬ್ದಾರಿಯೆಲ್ಲವನ್ನೂ ತಲೆಮೇಲಿಟ್ಟುಕೊಂಡು ಮಾಡುತ್ತಿದ್ದ ವ್ಯಕ್ತಿ ಅವನು. ರೋಗಿಷ್ಠೆ ತಾಯಿಯ ಚಿಕಿತ್ಸೆಯ ಖರ್ಚು, ತಂಗಿಯ ಮದುವೆ ಮಾಡಬೇಕಾದ ಹೊಣೆಗಾರಿಕೆ ಅವನದೇ ಆಗಿತ್ತು. ಈಗ ಎರಡು ತಿಂಗಳ ಹಿಂದೆ ಕಂಪೆನಿಯಲ್ಲಿ ಕೆಲಸ ಮಾಡುವಾಗಲೇ ಅವನ ಕಾಲಿಗೆ ಬಲವಾದ ಏಟು ಬಿತ್ತು. ಗುಣಪಡಿಸಲಾಗದಮಟ್ಟಿನ ಗಾಯವಾಗಿತ್ತು. ಕಾಲು ಕತ್ತರಿಸಿ ತೆಗೆಯುವುದು ಅನಿವಾರ್ಯ ಎಂಬ ಸ್ಥಿತಿ. ವೈದ್ಯರು ಹೇಳಿದ ಹಾಗೆಯೇ ಅವನ ಕಾಲನ್ನು ಕತ್ತರಿಸಲಾಯಿತು. ಈಗ ಅವನು ಕೆಲಸ ಮಾಡಲಾಗದವನಾಗಿದ್ದಾನೆ. ನಮ್ಮ ಕಂಪೆನಿಯಿಂದ ಪರಿಹಾರ ಕೇಳಿದರೆ ಪರಿಹಾರದ ಹಣ ಅವನ ಕೈಸೇರಿಲ್ಲ. ನಾಳೆ ಕೊಡುತ್ತೇನೆ, ನಾಡಿದ್ದು ಕೊಡುತ್ತೇನೆ ಎನ್ನುತ್ತಾ ಆಟವಾಡಿಸುತ್ತಿದ್ದಾರೆ ಇವರು. ಸರಿಯಾಗಿ ಕಿವಿಗೊಡಿ, ಯಂತ್ರ ಈಗಲೂ ಚಲಿಸುತ್ತಿದೆ, ಸದ್ದು ಮಾಡುತ್ತಿದೆ. ಆದರೆ ಆ ಬಡಪಾಯಿಯ ಜೀವನದ ಯಂತ್ರ ನಿಂತುಹೋಗಿದೆ” ದುಃಖ ಸಹಿಸಿಕೊಳ್ಳಲಾಗದೆ ಅವಳೀಗ ಅಳತೊಡಗಿದಳು.
ಕಂಪೆನಿಯ ಮುಖ್ಯಸ್ಥರು ಕೋಪದಿಂದ ಅವನೆಡೆಗೆ ನೋಡತೊಡಗಿದರು. ಅವನು ತಲೆತಗ್ಗಿಸಿ ನಿಂತಿದ್ದ. ಅವಳನ್ನು ಸಮಾಧಾನಪಡಿಸುವಂತೆ ಹೇಳತೊಡಗಿದರು- “ನೋಡಿ ಮೇಡಂ, ಇದೆಲ್ಲಾ ನನಗೆ ಗೊತ್ತೇ ಇರಲಿಲ್ಲ. ನೀವು ಹೇಳಿದ ಮೇಲೆಯೇ ಇವನ ಈ ಬುದ್ಧಿಯೆಲ್ಲಾ ಗೊತ್ತಾದದ್ದು. ಹೆಣ್ಣಿನ ಚಪಲ, ಅಮಾನವೀಯತೆ, ಸ್ವಾರ್ಥ… ರಿಯಲೀ ಶೇಮ್ಲೆಸ್. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಾನೆ ಎಂದು ನಾನಂದುಕೊಂಡಿದ್ದೆ. ಕಂಪೆನಿಯ ಡೆವಲಪ್ಮೆಂಟ್ಗಾಗಿ ಕಷ್ಟಪಡುತ್ತಿದ್ದಾನೆ ಎಂದುಕೊಂಡಿದ್ದೆ. ಆದರೆ ಇವನ ನಿಜಬಣ್ಣ ಗೊತ್ತಾದಮೇಲೂ ಇವನನ್ನು ಕಂಪೆನಿಯಲ್ಲಿಟ್ಟುಕೊಂಡರೆ ನಮ್ಮ ಕಂಪೆನಿಯ ಗೌರವಕ್ಕೇ ಕುಂದು. ನಾಲ್ಕು ಜನರು ನಾಲ್ಕು ತರಹ ಮಾತಾಡಲು ನಾನೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಕಂಪೆನಿಯಲ್ಲಿ ಈ ದಿವಸವೇ ಇವನಿಗೆ ಕೊನೆಯ ದಿವಸ. ಈಗಲೇ ಇವನನ್ನು ಕೆಲಸದಿಂದ ತೆಗೆಯುತ್ತಿದ್ದೇನೆ. ಇನ್ನುಮುಂದೆ ಇವನು ನಿಮಗ್ಯಾರಿಗೂ ಬಾಸ್ ಅಲ್ಲ” ಮುಖ್ಯಸ್ಥರ ನಿರ್ಧಾರ ಅಚಲವಾಗಿತ್ತು.
ಸುತ್ತ ನಿಂತವರ ಚಪ್ಪಾಳೆ…ಅವಳ ಕೈ ಕುಲುಕುತ್ತಿರುವ ಎಲ್ಲರೂ…ನಮಗೂ ಇದೆಲ್ಲಾ ಅನಿಸುತ್ತಿತ್ತು, ನಮ್ಮ ಪ್ರತಿನಿಧಿಯಾಗಿ ನೀವು ಹೇಳಿದಿರಿ ಎಂಬ ಮಾತು…ನಗು…ಅವನ ಸಪ್ಪಗಾದ ಮುಖ…ಅವಳ ಮುಖದ ತುಂಬ ನಗು…
ದಡಕ್ಕನೆ ಎದ್ದುಕುಳಿತ ಅವಳು ನೋಡಿದ್ದು ಗಡಿಯಾರದ ಕಡೆಗೆ. ಯಾವತ್ತಿಗಿಂತ ಇಪ್ಪತ್ತು ನಿಮಿಷ ತಡವಾಗಿತ್ತು. ತಡವಾಗಿ ಹೋದರೆ ಬಾಸ್ ಬೈಯ್ಯುವುದು ಖಂಡಿತ ಎಂದುಕೊಂಡ ಅವಳು “ಇಷ್ಟು ಲೇಟಾದದ್ದು ಈ ಕನಸಿನಿಂದಾಗಿ” ಎಂದುಕೊಳ್ಳುತ್ತಾ, ಬೇಗ ಬೇಗ ತಯಾರಾಗುವ ಗಡಿಬಿಡಿಯಿಂದ ಬಾತ್ರೂಮ್ ಒಳಹೋದಳು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
