“
. . . . ತಿನ್ನುವ ಅನ್ನಕ್ಕೆ ಕಲ್ಲು ಬಿದ್ದರೆ, ಬದುಕೋ ದಾರಿ ತಪ್ಪಿದರೆ, ಅದನ್ನು ನೆಚ್ಚಿಕೊಂಡಿದ್ದವನ ಗತಿ ಏನಾಗಬಹುದು?. . .”
“ನನ್ನನ್ನು ಕೆಲಸದಿಂದ ಮಾತ್ರ ತೆಗಿಬೇಡಿ ಸಾರ್, ಬೇಕಿದ್ರೆ ನನ್ನ ಇಂಕ್ರಿಮೆಂಟ್ ಕಟ್ಮಾಡಿ, ದಂಡ ಹಾಕಿ, ಬೇರೆ ಏನೇ ಶಿಕ್ಷೆ ಕೊಡಿ, ಆದ್ರೆ ಕೆಲಸದಿಂದ ಮಾತ್ರ ತೆಗಿಬೇಡಿ ಸಾರ್. ನಾನು ಬಡವ, ನನ್ನನ್ನು ನಂಬ್ಕೊಂಡಿರೋರು ಇನ್ನೂ ಮರ್ಮಂದಿ ಇದ್ದಾರೆ, ನನ್ ಹೆಂಡ್ತಿ ಇಬ್ರು ಮಕ್ಳು, ಅವ್ರ ಹೊಟ್ಟೆ ಮೇಲೂ ಹೊಡಿಬೇಡಿ ಸಾರ್” ಎಂದು ಕಂಡಕ್ಟರ್ ನಾಗರಾಜ ಸಾರಿಗೆ ಸಂಸ್ಥೆ ಪ್ರಾದೇಶಿಕ ವ್ಯವಸ್ಥಾಪಕರ ಮುಂದೆ ಅಂಗಲಾಚಿ ಬೇಡಿಕೊಂಡ. ಅಂದು ಅವನ ಪರವಾಗಿ ವಕಾಲತ್ತು ವಹಿಸಲು ಕಾರ್ಮಿಕ ಪ್ರತಿನಿಧಿಗಳು ಸಹ ಅಲ್ಲಿ ಹಾಜರಿದ್ದರು. ಅಷ್ಟರಲ್ಲಿ ಕಾರ್ಮಿಕ ಮುಖಂಡನೊಬ್ಬ ಎದ್ದು ನಿಂತು “ಸಾರ್ ಇವನ ಅಹವಾಲನ್ನು ತಾವು ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು. ಈತ ಮಾಡಿರೋ ಅಪರಾಧಕ್ಕೆ ನೀವು ವಿಧಿಸಿರೊ ಶಿಕ್ಷೆ ಅತಿಯಾಯ್ತು. ಈತ ಕರ್ತವ್ಯನಿರತನಾಗಿದ್ದಾಗ ತನ್ನ ಬಸ್ನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಟಿಕೆಟ್ ಕೊಡಲಿಲ್ಲವೆಂದು, ಸಾರಿಗೆ ಸಂಸ್ಥೆಗೆ ನಷ್ಟ ಉಂಟಾಗಿದೆಯೆಂದು ಇವನನ್ನು ಕೆಲಸದಿಂದ ಡಿಸ್ಮಿಸ್ ಮಾಡಿದ್ದೀರಿ. ವಿಚಾರಣಾಧಿಕಾರಿಗಳು ಇವನ ಮೇಲೆ ಹೊರಿಸಿರುವ ಆರೋಪಗಳು ಮೇಲ್ನೋಟಕ್ಕೆ ಸರಿ ಎನಿಸಿದರೂ ಅದು ನ್ಯಾಯ ಸಮ್ಮತವಲ್ಲ. ಈತ ಎಸಗಿರುವುದು ಪುಟ್ಟ ಅಪರಾಧ. ನೀವು ವಿಧಿಸಿರುವ ಶಿಕ್ಷೆ ಮಾತ್ರ ದೊಡ್ಡದು. ಇವನಿಂದ ಸಂಸ್ಥೆಗೆ ಉಂಟಾದ ನಷ್ಟ ಕೇವಲ ನಲವತ್ತು ರೂಪಾಯಿಗಳು. ಕೇವಲ ನಲವತ್ತು ರೂಪಾಯಿಗಳ ನಷ್ಟಕ್ಕೆ ಕೆಲಸದಿಂದ ಡಿಸ್ಮಿಸ್ ಮಾಡಿರೋದು ಸರಿಯಲ್ಲ ಸಾರ್. ಅದಕ್ಕೆ ಬದಲಾಗಿ ಒಂದೆರಡು ಇಂಕ್ರಿಮೆಂಟ್ಗಳನ್ನು ಕಟ್ ಮಾಡುವುದೋ ಅಥವಾ ನಷ್ಟದ ಹತ್ತರಷ್ಟು ಮೊತ್ತವನ್ನು ದಂಡ ಹಾಕುವುದೋ ಏನಾದರೊಂದು ಸಾಧಾರಣ ಶಿಕ್ಷೆ ನೀಡಿದ್ದರೆ ಅಷ್ಟು ಸಾಕಾಗಿತ್ತು. ಇವನು ಮಾಡಿರೋ ಅಪರಾಧದ ಪ್ರಮಾಣಕ್ಕೆ ಅದೇ ತಕ್ಕ ಶಿಕ್ಷೆ. ತಪ್ಪು ತಿದ್ದಿಕೊಳ್ಳಲು ಮುಂದೆ ಇವನಿಗೊಂದು ಅವಕಾಶಾನೂ ಕೊಡಬಹುದಿತ್ತು. ಅದೂ ಅಲ್ಲದೆ ವಿಚಾರಣಾಧಿಕಾರಿಗಳೂ ಸಹ ಸರಿಯಾಗಿ ವಿಚಾರಣೆ ನಡೆಸಿ ತಮಗೆ ಸೂಕ್ತ ವರದಿ ಕೊಟ್ಟಿಲ್ಲ. ಈತ ಬಸ್ನಲ್ಲಿ ನಾಲ್ವರು ಪ್ರಯಾಣಿಕರಿಗೆ ಟಿಕಿಟ್ ನೀಡುವಲ್ಲಿ ವಿಫಲನಾಗಿದ್ದು, ಸಂಸ್ಥೆಗೆ ನಷ್ಟ ಉಂಟಾಗಿದೆ’ ಎಂದು ಮಾತ್ರ ವರದಿಯಲ್ಲಿ ಉಲ್ಲೇಕಿಸಿದ್ದಾರೆ. ಆದರೆ ವಿಚಾರಣಾಧಿಕಾರಿಗಳು ತನಿಖೆ ನಡೆಸಿ ನೀಡಿರುವ ವರದಿಯು ವಾಸ್ತವ ಸಂಗತಿಗೆ ದೂರವಾಗಿದ್ದು ಸತ್ಯವನ್ನು ತಿರುಚಲಾಗಿದೆ. ಒಟ್ಟಾರೆ ವರದಿಯು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ. ‘ಅಂದು ಬಸ್ ಹೆಚ್ಚು ಪ್ರಯಾಣಿಕರಿಂದ ತುಂಬಿತ್ತು, ಒತ್ತಡದ ಪ್ರಯುಕ್ತ ಈತ ನಾಲ್ಕು ಮಂದಿಗೆ ಟಿಕೆಟ್ ಕೊಡಲು ಆಗಿರಲಿಲ್ಲ.
ಅವರಿಂದ ಟಿಕೆಟ್ ಹಣವನ್ನೂ ಪಡೆದಿರಲಿಲ್ಲ. ಹಣ ಪಡೆದಿಲ್ಲವೆಂದ ಮೇಲೆ ಇದು ಅಂತಹ ಗಂಭೀರ ಸ್ವರೂಪದ ಅಪರಾಧವೇನಲ್ಲ. ಅದೂ ಅಲ್ಲದೆ ಈ ಮುನ್ನ ಈತ ಇಂತಹ ಯಾವುದೇ ಪ್ರಕರಣಗಳಲ್ಲಿ ಸಿಲುಕಿದವನಲ್ಲ ಎಂದು ವಿಚಾರಣಾಧಿಕಾರಿ ತಮ್ಮ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. ಆದರೆ ಅವರು ಈ ಪ್ರಕರಣವನ್ನು ಸರಿಯಾಗಿ ಪರಿಶೀಲಿಸಿಲ್ಲ ವಾಸ್ತವ ವರದಿಯನ್ನೂ ಕೊಟ್ಟಿಲ್ಲ. ಒಂದು ವೇಳೆ ಈತ ಪ್ರಯಾಣಿಕರಿಂದ ಹಣ ಪಡೆದು ಅವರಿಗೆ ಟಿಕೆಟ್ ನೀಡದಿದ್ದರೆ, ಅದು ದೊಡ್ಡ ಅಪರಾಧವಾಗುತ್ತಿತ್ತು. ಆದರೆ ಮೇಲೆ ಉಲ್ಲೇಖಿಸಿರುವ ಕಾರಣದಿಂದ ಈತ ಟಿಕೆಟ್ ನೀಡಲು ವಿಫಲನಾದನೇ ಹೊರತು ಹಣ ಅಪಹರಿಸುವ ದುರುದ್ದೇಶದಿಂದಲ್ಲ. ಇದು ಕರ್ತವ್ಯಪಾಲನೆಯಲ್ಲಿ ಉಂಟಾದ ಒಂದು ಪುಟ್ಟ ಪ್ರಮಾದಪವಷ್ಟೆ. ಸಂಸ್ಥೆಯ ಶಿಸ್ತು ನಿಯಮಾವಳಿ ಪ್ರಕಾರ ಇದೊಂದು ಪುಟ್ಟ ಅಪರಾಧವೆಂದು ಪರಿಗಣಿಸಿ ತಾವು ಇವನಿಗೆ ಲಘು ಶಿಕ್ಷೆ ನೀಡ ಬಹುದಿತ್ತು. ಮುಂದೆ ಕರ್ತವ್ಯದಲ್ಲಿ ಜಾಗೃತನಾಗಿರಲು ಎಚ್ಚರಿಕೆ ಸಹ ನೀಡಬಹುದಿತ್ತು. ಈತ ಸಲ್ಲಿಸಿರುವ ಹತ್ತು ವರ್ಷಗಳ ಸರ್ವಿಸ್ನಲ್ಲಿ ಇಂತಹ ಯಾವುದೇ ಪ್ರಕರಣಗಳಲ್ಲಿ ಈತ ಸಿಲುಕಿಲ್ಲ ಹಾಗು ಬೇರೆ ಯಾವ ಪ್ರಕರಣಗಳೂ ಇವನ ಮೇಲೆ ದಾಖಲಾಗಿಲ್ಲ. ಇವನ ಸೇವಾ ದಾಖಲೆಗಳೇ ಇದನ್ನು ಸಾಬೀತುಪಡಿಸುತ್ತವೆ. ಈಗ ನೀವು ಇವನ ಮೇಲೆ ಆರೋಪ ಹೊರಿಸಿ ಕೆಲಸದಿಂದ ಡಿಸ್ಮಿಸ್ ಮಾಡಿರುವುದು ನ್ಯಾಯ ಸಮ್ಮತವಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಕೈಗೊಂಡ ನಿರ್ಧಾರವಷ್ಟೆ. ವಿಚಾರಣಾಧಿಕಾರಿ ಕೊಟ್ಟಿರುವ ವರದಿಯನ್ನೇ ತಾವು ಸರಿ ಎಂದು ಅಂಗೀಕರಿಸಿ ಈ ಬಡಪಾಯಿ ನೌಕರನ ಮೇಲೆ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದೀರಿ. ನಿಮಗೆ ತಿಳಿದ ಹಾಗೆ ಸಂಸ್ಥೆಯ ಅನ್ನ ತಿಂದು, ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದು, ಸಂಸ್ಥೆಗೆ ನಷ್ಟ ಉಂಟುಮಾಡಿ, ದ್ರೋಹವೆಸಗಿದವರು ಇನ್ನೂ ಸೇವೆಯಲ್ಲಿದ್ದಾರೆ. ಸಂಸ್ಥೆಯ ಶಿಸ್ತು ನಿಯಮಾವಳಿಗಳು ಅವರನ್ನು ಏನೂ ಮಾಡಲಾಗಲಿಲ್ಲ. ಈ ಸತ್ಯಾಂಶ ನಿಮಗೂ ತಿಳಿಯದಿದ್ದೇನಲ್ಲ. ‘ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಿ ಕೊಂಡ’ ಎಂಬಂತಿದೆ ನಿಮ್ಮ ನ್ಯಾಯ ನೀತಿಗಳು. ಯಾರನ್ನೇ ಆಗಲಿ ಶಿಕ್ಷೆಗೆ ಗುರಿಪಡಿಸುವ ಮುನ್ನ ಅವರು ಮಾಡಿರುವ ಭೌತಿಕ ಅಪರಾಧ, ನಷ್ಟದ ಪರಿಮಾಣ, ನೌಕರನ ನಡವಳಿಕೆ ಮತ್ತು ಹಿಂದಿನ ಸೇವಾ ವಿವರಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಬೇಕಾದುದು ತಮ್ಮ ಕರ್ತವ್ಯ. ಆದರೆ ಅವೆಲ್ಲವನ್ನು ಬದಿಗೊತ್ತಿ ‘ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ತಂದು ಕಟ್ಟು’ ಎಂಬಂತೆ ವಿಚಾರಣಾಧಿಕಾರಿ ನೀಡಿದ ವರದಿಯನ್ನೇ ತಾವು ಆಧಾರವಾಗಿಟ್ಟುಕೊಂಡು ನೌಕರನನ್ನು ಅನ್ಯಾಯವಾಗಿ ಕೆಲಸದಿಂದ ಡಿಸ್ಮಿಸ್ ಮಾಡಿದ್ದೀರಿ. ಇದೊಂದು ಅನ್ಯಾಯ ಹಾಗು ದುರುದ್ದೇಶದ ಆದೇಶ. ಇದನ್ನು ನಾವು ಖಂಡಿಸುತ್ತೇವೆ. ನಮ್ಮ ಕಾರ್ಮಿಕ ಪ್ರತಿನಿಧಿಗಳ ಈ ಅಹವಾಲನ್ನು ತಾವು ಮತ್ತೊಮ್ಮೆ ಪರಿಶೀಲಿಸಿ, ತಮ್ಮ ಆದೇಶವನ್ನು ವಾಪಸ್ ಪಡೆದು ಇವನಿಗೆ ಮತ್ತೊಂದು ಅವಕಾಶ ಮಾಡಿಕೊಡಬೇಕೆಂಬುದೇ ನಮ್ಮ ಕಳ ಕಳಿಯ ಮನವಿ” ಎಂದು ಕಾರ್ಮಿಕ ಮುಖಂಡ ನಾಗರಾಜನ ಪರವಾಗಿ ಸುದೀರ್ಘ ವಾದವನ್ನೇ ಮಂಡಿಸಿದ. ಅದಕ್ಕೆ ಒಂದಿಷ್ಟೂ ಸೊಪ್ಪುಹಾಕದ ಪ್ರಾದೇಶಿಕ ವ್ಯವಸ್ಥಾಪಕರು “ಅಲ್ಲಾ ರೀ, ಈ ಪ್ರಕರಣದ ವಿಚಾರಣೆ, ನಿಮ್ಮ ಕಾರ್ಮಿಕ ಪ್ರತಿನಿಧಿಗಳ ಸಮಕ್ಷಮದಲ್ಲೇ ನಡೆದಿದ್ದು,
ನಿಮ್ಮ ಈ ಹೇಳಿಕೆಯನ್ನೆಲ್ಲ ವಿಚಾರಣಾಧಿಕಾರಿ ಮುಂದೆಯೇ ಮಂಡಿಸಬಹುದಿತ್ತಲ್ಲ. ಈಗ ನಾನು ಏನೂ ಮಾಡಲೂ ಸಾಧ್ಯವಿಲ್ಲ. ಅವರು ಏನು ವರದಿ ಕೊಟ್ಟಿದ್ದಾರೋ ಅದರ ಮೇಲೆ ನಾನು ಆಡರ್ಸ್ ಪಾಸ್ ಮಾಡಿದ್ದೇನೆ. ಈ ಹಂತದಲ್ಲಿ ಅವರ ವರದಿಯನ್ನು ಬದಿಗೊತ್ತಿ ನಿಮಗೆ ಅನುಕೂಲವಾಗುವಂತಹ ಆಡರ್ಸ್ ಪಾಸ್ ಮಾಡಲು ನನ್ನಿಂದ ಸಾಧ್ಯವಿಲ್ಲ. ತಪ್ಪಿತಸ್ಥರ ಮೇಲೆ ಕೃಪೆ ತೋರಿ ಅವರನ್ನು ರಕ್ಷಿಸಲು ಸಂಸ್ಥೆ ನನ್ನನ್ನು ಇಲ್ಲಿ ನೇಮಕ ಮಾಡಿಲ್ಲ. ನಾನು ಒಮ್ಮೆ ಆಡರ್ಸ್ ಬರೆದ ಮೇಲೆ ಅದು ಮುಗಿಯಿತು. ನನ್ನ ಆಡರ್ಸ್ ವಿರುದ್ಧ ನೀವು ಎಲ್ಲಿ ಯಾವ ಕೋರ್ಟ್ನಲ್ಲಿ ಬೇಕಾದರೂ ಚಾಲೆಂಜ್ ಮಾಡಬಹುದು” ಎಂದು ಹೇಳಿದ ಪ್ರಾದೇಶಿಕ ವ್ಯವಸ್ಥಾಪಕರು ಎದ್ದು ಹೊರಡಲು ಮುಂದಾದರು. ಅಷ್ಟರಲ್ಲಿ ಕಾರ್ಮಿಕ ಮುಖಂಡ, “ನಾಗರಾಜ್, ನಮ್ಮ ವಾದ ಮುಗೀತು, ನಾವು ಎಷ್ಟೇ ಕೇಳ್ಕೊಂಡ್ರೂ ಸಾಹೇಬ್ರು ಅದೇಕೋ ಮನಸ್ಸೇ ಮಾಡ್ತಿಲ್ಲ, ಬೇಕಾದ್ರೆ ನೀನೇ ಅವರನ್ನು ಮತ್ತೊಮ್ಮೆ ಕೇಳ್ಕೋ” ಎಂದು ಹೇಳಿ ಎದ್ದು ಹೊರನಡೆದರು. ಅವರ ಹಿಂದೆಯೇ ಪ್ರಾದೇಶಿಕ ವ್ಯವಸ್ಥಾಪಕರೂ ಎದ್ದು ಹೊರಡಲ ಅನುವಾದರು. ಅಷ್ಟರಲ್ಲಿ ನಾಗರಾಜ ಅವರ ಕಾಲುಗಳಿಗೆ ಅಡ್ಡ ಬಿದ್ದು “ಸಾರ್ ನನ್ನ ಹೊಟ್ಟೆ ಮೇಲೆ ಹೊಡೀಬೇಡಿ ಸಾರ್, ಈ ಬಡಪಾಯಿ ಮೇಲೆ ಸ್ವಲ್ಪ ದಯೆ ತರ್ಸಿ, ಸಾರ್, ನನಗೆ ಮತ್ತೊಂದು ಅವಕಾಶ ಕೊಡಿ ಸಾರ್” ಎಂದು ಮತ್ತೊಮ್ಮೆ ಗೋಳಾಡುತ್ತ ಅಂಗಲಾಚಿದ. ತನ್ನ ಆರಡಿ ಎತ್ತರದ ಅಜಾನುಬಾಹು ದೇಹವನ್ನು ಮೂರಡಿಗೆ ಕುಗ್ಗಿಸಿಕೊಂಡು, ಗುಲಾಮನಂತೆ ಸಾಹೇಬರ ಕಾಲುಗಳಿಗೆ ಬಿದ್ದು ಬೇಡಿಕೊಂಡ ಪರಿ ಎಂತಹ ಕಲ್ಲು ಹೃದಯಿಗಳನ್ನು ಕರಗಿಸುವಂತಿತ್ತು. ಆದರೆ ಸಾಹೇಬರ ಹೃದಯ ಕರಗಲಿಲ್ಲ. ತಬ್ಬಿ ಹಿಡಿದಿದ್ದ ಕಾಲುಗಳನ್ನು ಬಿಡಿಸಿಕೊಂಡ ಪ್ರಾದೇಶಿಕ ವ್ಯವಸ್ಥಾಪಕರು ‘ನಾನೇನು ಮಾಡಲು ಸಾಧ್ಯವಿಲ್ಲ’ ಎನ್ನುತ್ತ ಬಾಗಿಲಿನತ್ತ ಹೆಜ್ಜೆ ಹಾಕಿದರು. ಹತಾಶನಾದ ನಾಗರಾಜ ಒದ್ದೆಯಾಗಿದ್ದ ಕಣ್ಣುಗಳನ್ನು ಒರೆಸಿಕೊಂಡು ಎದ್ದು ಸಾಹೇಬರ ಹಿಂದೆ ತಾನೂ ಹೆಜ್ಜೆ ಹಾಕಿದ. ‘ತಿನ್ನುವ ಅನ್ನಕ್ಕೆ ಕಲ್ಲು ಬಿದ್ದರೆ, ಬದುಕೋ ದಾರಿ ತಪ್ಪಿದರೆ, ಅದನ್ನು ನೆಚ್ಚಿಕೊಂಡಿದ್ದವನ ಗತಿ ಏನಾಗಬಹುದು?’ ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನ. ಅವನು ನೌಕರಿಯನ್ನೇ ನಂಬಿ ಕಟ್ಟಿಕೊಂಡಿದ್ದ ಬದುಕಿನ ಅಸ್ತಿವಾರವು ಕುಸಿದಿದ್ದರಿಂದ ಅವನಲ್ಲಿ ದುಃಖ, ಆತಂಕ ಮಡುಗಟ್ಟಿ, ಮುಂದೆ ತನ್ನ ಹೆಂಡತಿ ಮಕ್ಕಳ ಗತಿ ಏನು, ಅವರನ್ನು ಹೇಗೆ ಸಾಕುವುದು, ಎಂಬ ಚಿಂತೆಯಲ್ಲಿ ಬಿದ್ದ.
ಅಂದು ನಾಗರಾಜನ ಪರವಾಗಿ ಅವನ ಕಾರ್ಮಿಕ ಪ್ರತಿನಿಧಿಗಳು ಮಂಡಿಸಿದ ವಾದವು ಕ್ರಮಬದ್ದವಾಗಿಯೇ ಇದ್ದು ನೌಕರ ಎಸಗಿದ ಅಪರಾಧಕ್ಕೆ ಅವರು ಸೂಚಿಸಿದ ಶಿಕ್ಷೆಯ ಪ್ರಮಾಣವೂ ಸಹ ಸರಿಯಾಗಿಯೇ ಇತ್ತು. ಆದರೆ ಅಧಿಕಾರದ ಕುರ್ಚಿಯಲ್ಲಿ ಕುಳಿತು ಅದರ ಗೈರತ್ತು ಏರಿಸಿಕೊಂಡವರಿಗೆ ಇದೆಲ್ಲ ಹೇಗೆ ಅರ್ಥವಾದೀತು? ನೊಂದವರ ಕೂಗು ಅವರಿಗೆ ಕೇಳಿಸದು, ಸರಿ ತಪ್ಪುಗಳನ್ನು ವಿವೇಕದಿಂದ ವಿಮರ್ಶಿಸಿ ನ್ಯಾಯವನ್ನು ಎತ್ತಿ ಹಿಡಿಯುವಷ್ಟು ಸಮಯ ತಾಳ್ಮೆ ಅವರಿಗಿರುವುದಿಲ್ಲ. ಅಂತಹವರಿಂದ ನ್ಯಾಯ ನಿರೀಕ್ಷಿಸುವದಾದರೂ ಹೇಗೆ?
ವಿಚಾರಣಾಧಿಕಾರಿಯ ವರದಿಯನ್ನು ಒಪ್ಪುವ ಅಥವ ತಿರಸ್ಕರಿಸುವ ಸಂಪೂರ್ಣ ಅಧಿಕಾರ ಪ್ರಾದೇಶಿಕ ವ್ಯವಸ್ಥಾಪಕರಿಗಿತ್ತು. ಆದರೆ ಅವರು ತಮ್ಮ ಅಧಿಕಾರವನ್ನು ನ್ಯಾಯದ ಪರವಾಗಿ ಚಲಾಯಿಸಲು ವಿಫಲರಾದರು. ಕಾರ್ಮಿಕ ಪ್ರತಿನಿಧಿಗಳು ಮಂಡಿಸಿದ ಅಹವಾಲವನ್ನು ಆಲಿಸಿದ ಬಳಿಕವೂ ತಮ್ಮ ಆದೇಶವನ್ನು ಪುನರ್ ಪರಿಶೀಲಿಸುವುದಾಗಿ ಅವರಿಗೆ ಆಶ್ವಾಸನೆ ನೀಡಲಿಲ್ಲ. ತಾವು ಕಣ್ಣುಮುಚ್ಚಿಕೊಂಡೇ ಬರೆದ ತೀರ್ಪಿಗೇ ಬದ್ದರಾದರು. ಆದರೆ ನಾಗರಾಜ ಅದಕ್ಕೆ ಬಲಿಪಶುವಾದ. ಜೀವನಕ್ಕೆ ಆಧಾರವಾಗಿದ್ದ ನೌಕರಿಯನ್ನು ಕಳೆದುಕೊಂಡು ಹತಾಶನಾದ. ಸಂಸ್ಥೆಯಿಂದ ನಿವೃತ್ತನಾಗಿ ನಿರ್ಗಮಿಸಬೇಕಾದವನು ಡಿಸ್ಮಿಸ್ ಆಗಿ ನಿರ್ಗಮಿಸಿದ. ಇದು ಅಧಿಕಾರದ ಸೋಗಿನಲ್ಲಿ ಬಡ ನೌಕರನ ಮೇಲೆ ಎಸಗಿದ ದಬ್ಬಾಳಿಕೆಯೋ ಅಥವ ಸಂಸ್ಥೆಯ ಹಿತವನ್ನು ಕಾಪಾಡುವ ಅಧಿಕಾರಿಯ ಕರ್ತವ್ಯಬದ್ದ ನಿಷ್ಠೆಯೋ?
ನಾಗರಾಜ ಕೆಲಸದಿಂದ ಡಿಸ್ಮಿಸ್ ಆದಮೇಲೆ, ಪ್ರಾವಿಡೆಂಟ್ಫಂಡ್ ವತಿಯಿಂದ ಅವನಿಗೆ ದೊರೆತ ಮೊತ್ತ ಕೇವಲ ನಲವತ್ತೊಂದು ಸಾವಿರ ಮಾತ್ರ. ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರೂ ಒಂದು ಕ್ಷಲ್ಲಕ ಕಾರಣಕ್ಕೆ ಅವನು ನೌಕರಿಯಿಂದ ಡಿಸ್ಮಿಸ್ ಆಗಬೇಕಾಗಿ ಬಂತು. ಡಿಸ್ಮಿಸ್ ಆದ ಕಾರಣ ಅವನಿಗೆ ಸಂಸ್ಥೆಯಿಂದ ಬರಬೇಕಾದ ಗ್ರಾಯಚ್ಯುಯಿಟಿ ಹಣವೂ ಸಿಗಲಿಲ್ಲ. ನಾಗರಾಜ ತನ್ನ ಕೈಗೆ ಸಿಕ್ಕಷ್ಟು ಹಣವನ್ನು ಮಾತ್ರ ತೆಗೆದುಕೊಂಡು ತನ್ನ ಮೇಲೆ ಎರಗಿ ಬಂದ ದುರ್ವಿಧಿಯನ್ನು ಶಪಿಸುತ್ತ ಮನೆಯ ಕಡೆ ಹೆಜ್ಜೆ ಹಾಕಿದ. ಮುಂದೆ ಅವನು ನ್ಯಾಯ ಅರಸಿ, ನ್ಯಾಯಾಲಯದ ಕದವನ್ನು ತಟ್ಟಬಹುದಿತ್ತು, ತನಗಾದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಬಹುದಿತ್ತು. ಆದರೆ ಆ ವ್ಯಕ್ತಿ ಚೆಕ್ ತೆಗೆದುಕೊಂಡು ಹೋದವನು ಮತ್ತೆಂದೂ ಆ ಕಡೆಗೆ ಹಿಂದಿರುಗಿ ನೋಡಲೇ ಇಲ್ಲ.
ನಾಗರಾಜ ಕೆಲಸದಿಂದ ಡಿಸ್ಮಿಸ್ ಆಗಿ ಆರು ವರ್ಷಗಳಾಗಿವೆ. ಕಾಲ ಉರುಳಿದಂತೆ ಬದಲಾವಣೆಗಳು ಆಗುವುದು ಸಹಜವೇ. ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಈಗ ಸಂಪೂರ್ಣ ನವೀಕರಣಗೊಂಡು ಹೊಸದಾಗಿ ಕಂಗೊಳಿಸುತ್ತಿದೆ. ಅಲ್ಲಿ ಹಳೆಯ ಸಿಬ್ಬಂದಿಗಳ ಜೊತೆಗೆ ಕೆಲವು ಹೊಸಬರೂ ಜೊತೆಗೂಡಿದ್ದಾರೆ. ಆದರೆ, ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರು ಮಾತ್ರ ಅವರೇ. ನಿವೃತ್ತಿ ಅಂಚಿನಲ್ಲಿದ್ದುದರಿಂದ ಅವರು ಅಲ್ಲೇ ಉಳಿದು ನಿವೃತ್ತಿಯ ದಿನವನ್ನು ಎದುರುನೋಡುತ್ತಿದ್ದಾರೆ.
ಈ ನಡುವೆ ಒಂದು ದಿನ ಪ್ರತಿಷ್ಟಿತ ಕಂಪೆನಿಯ ಹೊಸ ಮಾಡಲಿನ ಕಾರೊಂದು ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯ ಮುಂದೆ ಬಂದು ನಿಂತಿತು. ಅಲ್ಲಿ ಸಂಸ್ಥೆಯ ವಾಹನಗಳೇ ಹೆಚ್ಚಾಗಿ ನಿಲ್ಲುತ್ತಿದ್ದು, ಅಂದು ಬೇರೆ ಯಾವುದೋ ಖಾಸಗಿ ಕಾರು ಬಂದು ನಿಂತಿದ್ದರಿಂದ, ಆಫೀಸ್ ಸಿಬ್ಬಂದಿಗಳ ಗಮನವೆಲ್ಲ ಆ ಕಡೆಗೆ ಹರಿಯಿತು. ನೀಟಾದ ವಸ್ತ್ರ ತೊಟ್ಟಿದ್ದ ಅಜಾನುಬಾಹು ವ್ಯಕ್ತಿಯೊಬ್ಬ ಕಾರಿನಿಂದ ಇಳಿದುದನ್ನು ಕಂಡ ಸಿಬ್ಬಂದಿಗಳು ಯಾರೋ ಗಣ್ಯ ವ್ಯಕ್ತಿ ಸಾಹೇಬರನ್ನು ನೋಡಲು ಬಂದಿದ್ದಾರೆಂದು ಪುನಃ ತಮ್ಮ ಕೆಲಸಗಳಲ್ಲಿ ಮಗ್ನರಾದರು. ಆದರೆ ಕಾರಿನಲ್ಲಿ ಬಂದಿಳಿದ ವ್ಯಕ್ತಿ ಆರು ವರ್ಷಗಳ ಹಿಂದೆ ಕೆಲಸದಿಂದ ಡಿಸ್ಮಿಸ್ ಆದ ಕಂಡಕ್ಟರ್ ನಾಗರಾಜನೇ ಎಂದು ಅವರಿಗೆ ತಕ್ಷಣಕ್ಕೆ ಗೊತ್ತಾಗಲಿಲ್ಲ. ನಾಗರಾಜ ಕಾರನ್ನು ಲಾಕ್ ಮಾಡಿ, ಕಛೇರಿಯತ್ತ ಹೆಜ್ಜೆ ಹಾಕಿದ. ಆರು ವರ್ಷಗಳು ಕಳೆದಿದ್ದರಿಂದ ಅವನ ಮುಖದ ಚಹರೆಯೂ ಸ್ವಲ್ಪ ಬದಲಾಯಿಸಿತ್ತು. ಅದೂ ಅಲ್ಲದೆ ಅವನು ತೊಟ್ಟಿದ್ದ ನೀಟಾದ ವಸ್ತ್ರಗಳು, ಠಾಕುಠೀಕಿನ ಗಂಭೀರ ನಡಿಗೆಯು ಅವನೊಬ್ಬ ಗಣ್ಯ ವ್ಯಕ್ತಿಯೆಂದೇ ಸಾರುತಿತ್ತು. ಅಷ್ಟರಲ್ಲಿ ನಾಗರಾಜನ ಗೆಳೆಯನೊಬ್ಬನಿಗೆ ಅವನ ಗುರುತು ಸಿಕ್ಕಿ ಆತ ಹತ್ತಿರಕ್ಕೆ ಬಂದ. ಇಬ್ಬರೂ ಪರಪಸ್ಪರ ಕೈ ಕುಲುಕುತ್ತ ಮಾತಿಗಿಳಿದರು. ಇದನ್ನು ಕಂಡ ಅವನ ಹಳೆಯ ಸಹೋದ್ಯೋಗಿಗಳೂ ಕೂಡ ಎದ್ದು ಬಂದರು. ಎಲ್ಲರೂ ನಾಗರಾಜನನ್ನು ಸುತ್ತುವರೆದು ನಿಂತು ಅವನ ಕುಶಲೋಪರಿ ವಿಚಾರಿಸತೊಡಗಿದರು. ಸ್ವಲ್ಪ ಹೊತ್ತು ಅವರೊಡನೆ ಮಾತಾಡಿದ ಮೇಲೆ ನಾಗರಾಜ, ‘. . . . . .ಸಾಹೇಬರು ಈಗ ಎಲ್ಲಿದ್ದಾರೆ?’ ಎಂದು ಕೇಳಿದ. ಸಾಹೇಬರು ಇಲ್ಲೇ ಇದ್ದಾರೆ, ಈಗ ಒಳಗೆ ಕೂತಿದ್ದಾರೆ ಎಂಬ ಉತ್ತರ ಬಂತು. ನಾಗರಾಜ ತನ್ನ ಸಹೋದ್ಯೋಗಿಗಳಿಂದ ಭೀಳ್ಕೊಂಡು ಸಾಹೇಬರನ್ನು ಭೇಟಿ ಮಾಡಲು ಹೊರಟ. ಹೊರಗೆ ಕುಳಿತಿದ್ದ ಅಟೆಂಡರ್ ಕೈಗೆ ತನ್ನ ವಿಸಿಟಿಂಗ್ ಕಾರ್ಡ್ನ್ನು ಕೊಟ್ಟು ಅದನ್ನು ಸಾಹೇಬರಿಗೆ ಕೊಡುವಂತೆ ಹೇಳಿದ. ಕೇವಲ ಐದು ನಿಮಿಷದಲ್ಲೇ ಅವನಿಗೆ ಸಾಹೇಬರನ್ನು ಭೇಟಿ ಮಾಡುವ ಅನುಮತಿ ಸಿಕ್ಕಿತು. ಇವನ ವಿಸಿಟಿಂಗ್ ಕಾರ್ಡ್ ನೋಡಿದ ಸಾಹೇಬರು ಯಾರೊ ಗಣ್ಯವಕ್ತ್ತಿ ತನ್ನನ್ನು ಕಾಣಲು ಬಂದಿದ್ದಾರೆಂದು ಅವರನ್ನು ಒಳಕ್ಕೆ ಬರಲು ಹೇಳಿದ್ದರು.
ಆರು ವರ್ಷಗಳ ಬಳಿಕ ನಾಗರಾಜ ಪ್ರಾದೇಶಿಕ ವ್ಯವಸ್ಥಾಪಕರ ಕೊಠಡಿಯ ಬಾಗಿಲನ್ನು ತಳ್ಳಿಕೊಂಡು ಒಳಕ್ಕೆ ಎಂಟ್ರಿಕೊಟ್ಟ. ಸಾಹೇಬರಿಗೆ ಒಳಕ್ಕೆ ಬಂದ ವ್ಯಕ್ತಿಯ ಗುರುತು ತಕ್ಷಣಕ್ಕೆ ಸಿಗಲಿಲ್ಲ. ನಾಗರಾಜನೇ ಸಾಹೇಬರಿಗೆ ವಂದಿಸಿದ. ಅದಕ್ಕೆ ಪ್ರತಿಯಾಗಿ ಅವರೂ ವಂದಿಸಿ ತಮ್ಮ ಮುಂದಿದ್ದ ಆಸನವನ್ನು ತೋರಿ ‘ಪ್ಲೀಸ್ ಬಿ ಸೀಟೆಡ್’ ಎಂದರು. ನಾಗರಾಜ ಕುಳಿತುಕೊಳ್ಳುವಷ್ಟರಲ್ಲಿ “ತಮ್ಮ ಪರಿಚಯ?” ಎಂದು ಸಾಹೇಬರೇ ಕೇಳಿದರು. “ ಸಾರ್ ನಾನು ಯಾರೆಂದು ನಿಮಗೆ ಇನ್ನೂ ಗೊತ್ತಾಗ್ಲಿಲ್ವ? . . . . ನಾನೇ ಸಾರ್, ಕಂಡಕ್ಟರ್ ನಾಗರಾಜ. ನೀವು ಆರು ವರ್ಷಗಳ ಹಿಂದೆ ನನ್ನನ್ನು ಕೆಲ್ಸಿ÷್ದಂದ ಡಿಸ್ಮಿಸ್ ಮಾಡಿದ್ರಲ್ಲ, ಅದೇ ನಾಗರಾಜ ಸಾರ್, ನಾನು” ಎಂದು ನಾಗರಾಜ ತನ್ನನ್ನು ಸಾಹೇಬರಿಗೆ ಪರಿಚಯಿಸಿಕೊಂಡ. ನಾಗರಾಜನ ನೇರವಾದ ನುಡಿಗಳು ಸ್ಪಷ್ಟವಾಗಿದ್ದರೂ ಅವನು ಆಡಿದ ಮಾತುಗಳು ಸಾಹೇಬರನ್ನೇ ಗುರಿಯಾಗಿಸಿ ಅವರನ್ನು ಅಣಕಿಸಿ ಚುಚ್ಚುವಂತಿದ್ದವು. ಆದರೆ ಸಾಹೇಬರು ಅದನ್ನು ಹೊರಗೆ ತೋರ್ಪಡಿಸದೆ ತಮ್ಮೊಳಗೇ ಅದುಮಿಟ್ಟುಕೊಂಡು “ಓಹ್ . . . . . . ಹೌದು. . . . ಹೌದು, . . . . .ಈಗ ನೆನಪಿಗೆ ಬರ್ತಿದೆ” . . . . .ಎಂದು ತೊದಲುತ್ತ ಉತ್ತರಿಸಿದರು. ಮುಂದೆ ಅವರಿಂದ ಮಾತುಗಳೇ ಹೊರಡಲಿಲ್ಲ. ನಾಗರಾಜನೇ ಮುಂದುವರೆದು, “ಸಾರ್ ಅಂದು ನನ್ನನ್ನು ಕೆಲ್ಸಿ÷್ದಂದ ಡಿಸ್ಮಿಸ್ ಮಾಡಿ ತಾವು ಪುಣ್ಯವನ್ನೇ ಕಟ್ಕೊಂಡ್ರಿ” ಎಂದ. ಅವನ ಮಾತುಗಳ ಅರ್ಥವನ್ನು ಸಾಹೇಬರಿಂದ ಸರಿಯಾಗಿ ಗ್ರಹಿಸಲಾಗಲಿಲ್ಲ. ಒಂದು ರೀತಿಯಲ್ಲಿ ಅವನ ಮಾತುಗಳು ಪಾದರಕ್ಷೆಯನ್ನು ಬಟ್ಟೆಯಲ್ಲಿ ಸುತ್ತಿ ಸಾಹೇಬರ ಮುಖಕ್ಕೆ ಭಾರಿಸಿದಂತಿತ್ತು. ಈ ವ್ಯಕ್ತಿ ತನ್ನನ್ನು ತೆಗಳಲು ಬಂದಿದ್ದಾನೋ, ಹೊಗಳಲು ಬಂದಿದ್ದಾನೋ ಏನೆಂದೇ ತಿಳಿಯದೆ, ಮಾತುಗಳೇ ಬಾರದೆ ಕುಳಿತಲ್ಲೇ ಕಂಗಾಲಾದರು. “ಸಾರ್ ಅಂದು ನೀವು ನನ್ನನ್ನು ಕೆಲಸದಿಂದ ಡಿಸ್ಮಿಸ್ ಮಾಡಿದ್ದು ನನಗೆ ತುಂಬ ಉಪಕಾರವಾಯ್ತು ಸಾರ್” ಎಂದ, ನಾಗರಾಜ.
ಸಾಹೇಬರ ಉಸಿರಾಟವು ಈಗ ಸ್ವಲ್ಪ ಸರಾಗಗೊಂಡು ಬಿಗಿಹಿಡಿದಿದ್ದ ತಮ್ಮ ಶ್ವಾಸವನ್ನು ಬಿಟ್ಟು ಹಾಗೆಯೇ ಸೀಟಿಗೊರಗಿದರು.. “ಸಾರ್ ಅಂದು ನಿಮ್ಮ ಮುಂದೆ ನಾನು ಅಡ್ಡ ಬಿದ್ದು ಕೇಳ್ಕೊಂಡ್ಮೇಲೆ ನೀವೇನಾದ್ರು ಮನಸ್ಸು ಮಾಡಿ ನನಗೆ ಪುನಃ ಕೆಲಸ ಕೊಟ್ಟುಬಿಟ್ಟಿದ್ರೆ, ನಾನು ಖಂಡಿತ ಈ ಹಂತಕ್ಕೆ ಬರಕಾಗ್ತರ್ಲಿಲ್ಲ ಸಾರ್. ಏನೇ ಆಗ್ಲಿ, ತಾವು ಕೆಲಸದಿಂದ ಡಿಸ್ಮಿಸ್ ಮಾಡಿ ನನಗೆ ದೊಡ್ಡ ಉಪಕಾರಾನೇ ಮಾಡಿದ್ದೀರಿ. ನಾನಂತು ತಮಗೆ ತುಂಬಾ ಆಭಾರಿ, ಚಿರಋಣಿ ಸಾರ್. ಆಗೋದೆಲ್ಲ ಒಳ್ಳೇದಕ್ಕೇ ಅಂತ ಡಿಸ್ಮಿಸ್ ಆದ್ಮೇಲೆ ನಾನು ಸ್ವಂತವಾಗಿ ಎಸ್ಟೇಟ್ ಏಜೆನ್ಸಿ ಪ್ರಾರಂಭಿಸಿದೆ. ಸ್ನೇಹಿತನೊಬ್ಬ ನನಗೆ ಎಲ್ಲಾ ರೀತಿಯ ನೆರವು ನೀಡಿದ. ನನ್ನ ಪ್ರಯತ್ನ ಹಾಗು ಅದೃಷ್ಟ ಎರಡೂ ಫಲಿಸಿದ್ದರಿಂದ ಈ ಆರು ವರ್ಷಗಳಲ್ಲಿ ನಾನು ಸಾಕಷ್ಟು ಸಂಪಾದಿಸಿದ್ದೇನೆ. ಒಂದ್ವೇಳೆ ನಾನೇನಾದ್ರೂ ಈ ಸಂಸ್ಥೆಯಲ್ಲೇ ಉಳ್ದಿದ್ರೆ, ಖಂಡಿತ ನಾನು ಇಂದು ಈ ಹಂತಕ್ಕೆ ಬರಕ್ಕಾಗ್ತರ್ಲಿಲ್ಲ, ಸಾರ್. ನನ್ನ ರಿಟೈರ್ಮೆಂಟ್ವರೆಗೆ ನಾನೆಷ್ಟು ದುಡೀತಿದ್ನೋ ಅದರ ಹತ್ತುಪಟ್ಟು ಈಗಾಗ್ಲೆ ದುಡ್ಕೊಂಡಿದ್ದೇನೆ. ವಾಸಕ್ಕೊಂದು ದೊಡ್ಡ ಮನೆ ಮಾಡ್ಕೊಂಡಿದ್ದೀನೆ. ಮತ್ತೊಂದು ಶಾಪಿಂಗ್ ಬಿಲ್ಡಿಂಗ್ನ ಮಾಲೀಕ ಕೂಡ ನಾನು. ಈಗ ನನಗೆ ಬಾಡಿಗೆ ಹಣವೂ ರ್ತಿದೆ. ನನ್ನ ಎಸ್ಟೇಟ್ ಬಿಸಿನೆಸ್ ಕೂಡ ಚೆನ್ನಾಗಿಯೇ ನಡೀತಿದೆ. ಆಫೀಸ್ನಲ್ಲಿ ನನಗೆ ನಾಲ್ಕು ಮಂದಿ ಸಹಾಯಕರಿದ್ದಾರೆ. ಅವರಿಗೆ ಓಡಾಡಲು ಬೈಕ್ ಕೊಡ್ಸಿದ್ದೇನೆ. ಕೈತುಂಬ ಸಂಬಳ ಕೊಡ್ತಿದ್ದೇನೆ. ನಾನು ಎರಡು ಕಾರ್ ಇಟ್ಕೊಂಡಿದ್ದೇನೆ. ಒಂದು ನನಗೆ ಮತ್ತೊಂದು ಮನೆಯವರಿಗೆ. ಈಗ ರ್ತಿರೋ ಬಾಡಿಗೆ ಹಣದಲ್ಲೇ ನಾನು ಜೀವನ ಪೂರ್ತಿ ಕುಳಿತೇ ಕಾಲ ಕಳೆಯಬಹುದು. ಏನೇ ಹೇಳಿ ಸಾರ್, ನೀವು ನನಗೆ ದೊಡ್ಡ ಉಪ್ಕಾರಾನೇ ಮಾಡಿದ್ದೀರಿ. ನಿಮ್ಮ ಉಪ್ಕಾರಾನ ನಾನು ಖಂಡಿತ ರ್ಯೋಕಾಗಲ್ಲ, ಸಾರ್. ಬಹಳ ದಿನಗಳಾದ್ಮೇಲೆ ನಿಮ್ಮ ನೆನಪು ಬಂದು ಈಗ ನಿಮ್ಗೊಂದು ಥ್ಯಾಂಕ್ಸ್ ಹೇಳಿ ಹೋಗೋಣ ಅಂಥ ಈ ಕಡೆ ಬಂದೆ ಸಾರ್ೆ” ಎಂದ ನಾಗರಾಜ. ಸಾಹೇಬರು ತಮ್ಮ ಸೀಟಿನಲ್ಲಿ ಆರಾಮವಾಗಿ ಕುಳಿತು ಅವನ ಮಾತುಗಳನ್ನು ಕೇಳುತ್ತಿದ್ದರೇ ಹೊರತು ಅವರಿಂದ ಪ್ರತ್ಯುತ್ತರವಾಗಿ ಮಾತುಗಳೇ ಹೊರಡಲಿಲ್ಲ.
ಅಷ್ಟರಲ್ಲಿ ಟೇಬಲ್ ಮೇಲಿದ್ದ ಲ್ಯಾಂಡ್ ಪೋನ್ ರಿಂಗಣಿಸಿತು. ಸಾಹೇಬರು ರಿಸೀವರ್ ತೆಗೆದುಕೊಂಡು ‘ಹಲೋ’ ಎಂದರು. ಅತ್ತಿಂದ ಮಾತು ಆಲಿಸುತ್ತಲೇ ಸಾಹೇಬರು ರಿಸೀವರ್ ಕೆಳಗಿಟ್ಟು ಏನೂ ತೋಚದೆ ಕುಳಿತುಬಿಟ್ಟರು. ಮುಖದಲ್ಲಿ ಏನೋ ಗಾಬರಿ ! ಮೈ ಬೆವರತೊಡಗಿತು ! ಅಂತು ಹೇಗೋ ಸಾವರಿಸಿಕೊಂಡ ಸಾಹೇಬರು ಎದ್ದು ನಿಂತು, “ದಯವಿಟ್ಟು ಕ್ಷಮಿಸಿ, ಈಗ ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗಬೇಕು, ದಯಮಾಡಿ ತಕ್ಷಣ ನನ್ನನ್ನು ನಿಮ್ಮ ಕಾರ್ನಲ್ಲಿ ಸಾಗರ್ ಆಸ್ಪತ್ರೆಗೆ ಡ್ರಾಪ್ ಮಾಡಿ. ಅಲ್ಲಿ ನನ್ನ ಪತ್ನಿಯನ್ನು ಅಡ್ಮಿಟ್ ಮಾಡಿದ್ದಾರಂತೆ. ಈಗ ಪೋನ್ಕಾಲ್ ಬಂದದ್ದು ಅಲ್ಲಿಂದಲೇ. ಆಕೆ ಸೀರಿಯಸ್ ಕಂಡೀಶನ್ನಲ್ಲಿದ್ದಾಳಂತೆ. ತಕ್ಷಣ ನಾನಲ್ಲಿಗೆ ಹೋಗ್ಬೇಕು. ದುರಾದೃಷ್ಟಕ್ಕೆ ಇಂದೇ ನನ್ನ ಕಾರ್ ಬೇರೆ ಕೆಟ್ಟು ರಿಪೇರಿಯಲ್ಲಿದೆ. ದಯಮಾಡಿ ತಪ್ಪು ತಿಳ್ಕೋಬೇಡಿ.” ಎಂದರು. ಸಾಹೇಬರ ಮಾತಿನಲ್ಲಿ ಈಗ ನಯ ವಿನಯ ನಮ್ರತೆ ಎಲ್ಲವೂ ಸಮ್ಮಿಳಿತಗೊಂಡಿತ್ತು. ನಾಗರಾಜ ಎದ್ದು ನಿಂತು, “ಆಗಲಿ ಬನ್ನಿ ಸಾರ್, ಅದ್ಕೇನು ಹೋಗೋಣ” ಎಂದು ಹೇಳಿ ಹೊರನಡೆದ. ಈಗ ಸಾಹೇಬರದು ನಾಗರಾಜನನ್ನು ಹಿಂಬಾಲಿಸುವ ಪರಿ !
-ಎಲ್.ಚಿನ್ನಪ್ಪ, ಬೆಂಗಳೂರು
