ಕರ್ಮಯೋಗಿ: ಕೊಡೀಹಳ್ಳಿ ಮುರಳೀಮೋಹನ್

ಕರ್ಮಯೋಗಿ
-ತೆಲುಗು ಮೂಲ: ವಿಹಾರಿ
-ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ವಂದಿಮಾಗಧರ ಜಯಘೋಷಗಳು ಆಕಾಶ ಮುಟ್ಟಿದ್ದವು. ಮುತ್ತಿನ ಶಾಲೆಯು (ಮುತ್ಯಾಲಶಾಲ) ಜಯಜಯ ಧ್ವನಿಗಳಿಂದ ಪ್ರತಿಧ್ವನಿಸುತ್ತಿದ್ದವು..
ಆನೆಗೊಂದಿ ಸಾಮ್ರಾಜ್ಯದ ಪ್ರಭು ಜಂಬುಕೇಶ್ವರರಾಯರು ರಾಜಸಭೆಗೆ ಆಗಮಿಸಿದ್ದರು. ವಿಜಯೋತ್ಸವಗಳು ವೈಭವದಿಂದ ಮುಕ್ತಾಯಗೊಳ್ಳಲಿರುವ ಉಜ್ವಲ ಘಟ್ಟವದು. ಗಣ್ಯರಾದ ಸಂಗೀತ, ಸಾಹಿತ್ಯ, ಕಲೆ, ವಿಜ್ಞಾನ, ಕೃಷಿ ಹಾಗೂ ಶ್ರಮಿಕ ವರ್ಗದ ಶ್ರೇಷ್ಠರಿಗೆ ಸತ್ಕಾರ; ವೀರಯೋಧರಿಗೆ ಸನ್ಮಾನಗಳು ನಡೆಯಬೇಕಾಗಿದ್ದವು.

ಒಂದು ಕಡೆ ಕೋಸಿಗಿ ಅರಸರು, ಮತ್ತೊಂದು ಕಡೆ ದೊರವಾಡಿ ಭೂಪತಿಗಳು. ಮಧ್ಯದಲ್ಲಿ ಪ್ರಧಾನಮಂತ್ರಿ ವೀರ ಹರಿಹರರಾಯರು ಉನ್ನತ ಆಸನಗಳಲ್ಲಿ ಆಸೀನರಾಗಿದ್ದರು. ಅವರ ಪಕ್ಕದಲ್ಲಿ ಬುಕ್ಕರಾಯರು ಭಾಸ್ಕರ ತೇಜಸ್ಸಿನಿಂದ ಬೆಳಗುತ್ತಿದ್ದರು. ಅವರ ಸಾಲಿನಲ್ಲಿ ಅಷ್ಟಮಂತ್ರಿಗಳು, ಆ ನಂತರ ಸಾಮಂತ ದಂಡನಾಯಕರು ಕುಳಿತಿದ್ದರು. ಸರದಾರರು, ಪ್ರೇಕ್ಷಕರು, ರಸಿಕರು, ಕವಿ-ಪಂಡಿತರು ಹಾಗೂ ಸಾಮಾನ್ಯ ಜನರಿಂದ ಸಭಾಂಗಣವು ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಪ್ರಭುವಿನ ಪಕ್ಕದಲ್ಲಿ ಮಹಾರಾಜರ ಸಹೋದರರಾದ ಮಾರನ ಮತ್ತು ಮದ್ದನ ಇಬ್ಬರೂ ಇಕ್ಕೆಲಗಳಲ್ಲಿ ಕುಳಿತಿದ್ದರು. ಆ ಇಡೀ ಸಭೆಯು ಕಮಲದ ಸರೋವರದಂತೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು.

ಆನಂದ ಕೋಲಾಹಲದ ನಡುವೆ ಪ್ರಭುವು ತಮ್ಮ ಪ್ರಜೆಗಳಿಗೆ ಸನ್ಮಾನ, ಸತ್ಕಾರಗಳನ್ನು ಮಾಡುತ್ತಿದ್ದರು. ವೀರೋಚಿತ ಹಾಗೂ ವೈಭವೋಪೇತವಾಗಿ ಆ ಕಾರ್ಯಕ್ರಮ ಮುಕ್ತಾಯವಾಯಿತು.
ಮಹಾರಾಜರು ಆಸನದಿಂದ ಎದ್ದು ನಿಂತು ಶುಭಾಶಯದ ಸಂದೇಶವನ್ನು ನೀಡಿದರು. ಜನರು ಕ್ಷೇಮ, ಸೌಖ್ಯ, ಸೌಭಾಗ್ಯಗಳಿಂದ ವರ್ಧಿಸಲೆಂದು ಆಶಿಸುತ್ತಾ ದೈವಕೃಪೆಗೆ ಕೈಮುಗಿದರು.
ಅದೇ ಕ್ಷಣದಲ್ಲಿ—
ಇದ್ದಕ್ಕಿದ್ದಂತೆ—
ಒಬ್ಬ ವೀರಭಟನು ಪ್ರವೇಶಿಸಿದನು. ರಾಜರು ಹರಿಹರರಾಯರ ಕಡೆಗೆ ಸಾಭಿಪ್ರಾಯವಾಗಿ ನೋಡಿದರು. ಹರಿಹರರು ಭಟನಿಗೆ ತನ್ನ ವಿನಂತಿಯನ್ನು ತಿಳಿಸಲು ಸೂಚಿಸಿದರು.
“ಒಬ್ಬ ಅಪರಿಚಿತನು ಉತ್ತರ ದ್ವಾರದಿಂದ ಸಭೆಗೆ ಪ್ರವೇಶ ಕೋರಿ ದ್ವಾರಪಾಲಕನಿಗೆ ಪೀಡಿಸುತ್ತಿದ್ದಾನೆ ಪ್ರಭೂ. ಪಕ್ಕದಲ್ಲಿ ಪತ್ನಿ ಮತ್ತು ಒಬ್ಬ ಬಾಲಕನಿದ್ದಾನೆ. ಉತ್ತರ ದೇಶದವನೆಂದು ಹೇಳುತ್ತಿದ್ದಾನೆ. ಅವನ ವೇಷಭೂಷಣ ಮತ್ತು ನುಡಿಯನ್ನು ನೋಡಿದರೆ ಮಹಮ್ಮದೀಯನೆಂದು ತೋರುತ್ತದೆ ಪ್ರಭೂ. ತಮ್ಮನ್ನು ಸ್ವತಃ ಭೇಟಿಯಾಗಬೇಕೆಂದು ಹಠ ಹಿಡಿದಿದ್ದಾನೆ” ಎಂದು ಭಟನು ವಿನಯದಿಂದ ವಿವರಿಸಿದನು.
ತಕ್ಷಣವೇ ಆಲೋಚಿಸಿ ಸಭೆಯ ಮುಕ್ತಾಯವನ್ನು ಸೂಚಿಸಿದರು ರಾಜ. ಅಮಾತ್ಯರು ಅದನ್ನು ಘೋಷಿಸಿದರು.

ಜನಸಮೂಹವು ಹೊರಗೆ ಚಲಿಸಿತು, ಪ್ರವಾಹದಂತೆ ಸಾಗಿತು.
ಸಹೋದರರನ್ನೂ, ಹರಿಹರ ಬುಕ್ಕರಾಯರನ್ನೂ, ಮಂತ್ರಿ ಪರಿಷತ್ತನ್ನೂ, ಸಾಮಂತ ದಂಡನಾಯಕರನ್ನೂ ಉಳಿಯುವಂತೆ ಕಣ್ಣ ಸೈಗೆಯಿಂದ ಸೂಚಿಸಿದರು ರಾಜ. ಅವರೆಲ್ಲರೂ ಕಾಯುತ್ತಿದ್ದರು.
ಅಪರಿಚಿತನಿಗೆ ಒಳಬರುವ ಅನುಮತಿಯನ್ನು ನೀಡಲಾಯಿತು.
ಕ್ಷಣಗಳು ಉರುಳಿದವು.
“ಶರಣು ಮಹಾಪ್ರಭೂ, ಶರಣು” ಎನ್ನುತ್ತಾ ದೀನವದನದಿಂದ, ರೋದನ ಸ್ವರದೊಂದಿಗೆ, ಪತ್ನಿ ಹಾಗೂ ಕುಮಾರನ ಸಮೇತ ಸಭೆಯೊಳಗೆ ಪ್ರವೇಶಿಸಿದನು ಆ ಅಪರಿಚಿತ. ಬಲಗೈಯಿಂದ ಸಲಾಮು ಮಾಡುತ್ತಾ, ಬಾಗಿ ಬಾಗಿ ಜಯಘೋಷ ಮಾಡುತ್ತಾ ಮುಂದೆ ಬಂದನು. ಪಕ್ಕದಲ್ಲಿದ್ದ ಪತ್ನಿ ಮತ್ತು ಕುಮಾರನೂ ಅದೇ ಭಂಗಿಯಲ್ಲಿ ಹೆದರುತ್ತಾ ಹೆದರುತ್ತಾ ಅವನನ್ನು ಅನುಸರಿಸಿದರು.
“ಯಾರು ನೀವು? ನಿಮ್ಮ ವಿನಂತಿ ಏನು? ತಿಳಿಸಿ” ಧೀರ ಗಂಭೀರ ಸ್ವರದಲ್ಲಿ ಕೇಳಿದರು ಹರಿಹರ.

ಗದ್ಗದಿತ ಧ್ವನಿಯಲ್ಲಿ ಅವನು ಹೇಳಲು ಆರಂಭಿಸಿದನು:
“ಪ್ರಭೂ! ನಾನು ದೆಹಲಿ ಸುಲ್ತಾನನ ಸೋದರಳಿಯ, ಹೆಸರು ಬಹದುದ್ದೀನ್.”
ಸಭೆಯು ಆಶ್ಚರ್ಯಚಕಿತವಾಯಿತು. ಅಲ್ಲಿದ್ದವರೆಲ್ಲರೂ ಮುಖಾಮುಖಿ ನೋಡಿಕೊಂಡು ಪ್ರಭುವಿನ ಕಡೆಗೆ ನೋಡಿದರು. ರಾಯರು ಮಾತ್ರ ಶಾಂತರಾಗಿದ್ದರು. “ನಾನು ಸಾಗರ ಪ್ರದೇಶದ ಅಧಿಪತಿಯಾಗಿದ್ದೆ. ದೆಹಲಿಯಲ್ಲಿ ನನ್ನ ಮಾವನ ದರ್ಬಾರಿನಲ್ಲಿ ‘ಖಾಜಾಜಹಾ’ ಎಂಬ ಗರ್ವಿಷ್ಟನಿದ್ದಾನೆ! ಅವನು ಸುಲ್ತಾನನ ಆಪ್ತನಾಗಿದ್ದ. ನನ್ನನ್ನು ಪ್ರೀತಿಸಿದ ‘ಜುಲೇಖಾ’ ಎಂಬ ಯುವತಿಯನ್ನು ಅವನು ಬಯಸಿದನು. ಅವಳು ನಿರಾಕರಿಸಿ ನನ್ನ ಬಳಿಗೆ ಬಂದಳು. ಇದರಿಂದ ಅವನು ಈರ್ಷೆಯಿಂದ ಉರಿದುಹೋದನು. ತುಘಲಕ್ ಸುಲ್ತಾನನಿಗೆ ನನ್ನ ಮೇಲೆ ಇಲ್ಲಸಲ್ಲದ ಕಟ್ಟುಕಥೆಗಳನ್ನು ಹೇಳಿ ನನ್ನನ್ನು ಶತ್ರುವನ್ನಾಗಿ ಮಾಡಿದನು. ದಕ್ಷಿಣದ ಪ್ರಭುಗಳೊಂದಿಗೆ ಸೇರಿ, ನಾನೂ ನನ್ನ ಮಾವನ ಅಧಿಪತ್ಯವನ್ನು ಧಿಕ್ಕರಿಸಿ ಸ್ವಾತಂತ್ರ್ಯ ಘೋಷಿಸಿಕೊಂಡೆ. ತುಘಲಕನ ಅನುಮತಿಯೊಂದಿಗೆ ಖಾಜಾಜಹಾ ನನ್ನ ಮೇಲೆ ದಾಳಿ ಮಾಡಿದನು. ಘೋರ ಯುದ್ಧ ನಡೆಯಿತು. ಆದರೆ ದೈವ ನನಗೆ ಅನುಕೂಲಿಸಲಿಲ್ಲ. ‘ಅನ್ಯಥಾ ಶರಣಂ ನಾಸ್ತಿ’ ಎಂದು ಭಾವಿಸಿ, ತಮ್ಮ ಧರ್ಮರಕ್ಷಾ ದೀಕ್ಷೆಯ ಬಗ್ಗೆ ತಿಳಿದು ತಮ್ಮ ಆಶ್ರಯ ಕೋರಿ ಬಂದಿದ್ದೇನೆ. ಪ್ರಭುಗಳು ಅನುಗ್ರಹಿಸಬೇಕು” ಎಂದು ಮೊಣಕಾಲೂರಿದನು.
ಬಹದುದ್ದೀನ್ ಕಣ್ಣುಗಳಲ್ಲಿ ನೀರು ತುಂಬಿತ್ತು. ಪತ್ನಿ ಮತ್ತು ಮಗನೂ ಅವನನ್ನೇ ಅನುಕರಿಸಿದರು.

ಜಂಬುಕೇಶ್ವರರಾಯರು ತಮ್ಮ ಸಭಿಕರ ಕಡೆಗೆ ಆಲೋಚನೆಯಿಂದ ನೋಡಿದರು. ಅವರ ಮುಖಗಳಲ್ಲಿದ್ದ ಅನೇಕ ಸಂದೇಹಗಳನ್ನೂ, ಅನುಮಾನಗಳನ್ನೂ ಓದಿಕೊಂಡರು.
ಸಿಂಹಾಸನದ ಮೇಲೆ – ಸ್ವಲ್ಪ ಕಾಲನ್ನು ಸರಿಸಿ, ಬಲ ಮೊಣಕಾಲಿನ ಮೇಲೆ ಕೈಯನ್ನು ನೆತ್ತಿ, ಚಿಬುಕವನ್ನು ಅದಕ್ಕೆ ಆಸರೆಯಾಗಿ ಇಟ್ಟು ಆಲೋಚನಾ ಮುದ್ರೆಯಲ್ಲಿ ಕುಳಿತು, ಕೆಲ ಕ್ಷಣದ ನಂತರ ಹೇಳಿದರು:
“ಕ್ಷತ್ರಿಯ ಧರ್ಮಗಳಲ್ಲಿ ಶ್ರೇಷ್ಠವಾದದ್ದು ಶರಣಾಗತ ರಕ್ಷಣೆ. ಆ ಧರ್ಮವನ್ನು ನಾವು ಉಲ್ಲಂಘಿಸುವಂತಿಲ್ಲ. ಇನ್ನು ಮುಂದೆ ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ಅಭಯ ನೀಡುತ್ತಿದ್ದೇವೆ, ಎದ್ದೇಳಿ.”
ಬಹದುದ್ದೀನ್ ನಿಟ್ಟುಸಿರು ಬಿಟ್ಟನು. ಅವನ ಕಣ್ಣುಗಳಲ್ಲಿ ಆನಂದಬಾಷ್ಪಗಳು ತುಂಬಿದವು. ಪತ್ನಿಯೂ ಕೂಡ ಸಂಭ್ರಮಾನಂದದಲ್ಲಿ ಮುಳುಗಿ ಬಾಗಿ ಬಾಗಿ ಸಲಾಮು ಮಾಡುತ್ತಾ ಪಕ್ಕದಲ್ಲಿ ನಿಂತಳು. ತನ್ನ ಮಗನನ್ನು ಹತ್ತಿರಕ್ಕೆ ಕರೆದುಕೊಂಡು ತೃಪ್ತಿಯಿಂದ ಗಂಡನ ಕಡೆಗೆ ನೋಡಿದಳು.

ಸಭಾಭವನದ ಮೇಲ್ಭಾಗದಿಂದ ಈ ದೃಶ್ಯವನ್ನು ನೋಡುತ್ತಿದ್ದ ಮೂವರು ರಾಣಿಯರೂ, ಅವರ ಮೂವರು ಸೊಸೆಯಂದಿರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು.
ಇತ್ತ ರಾಜರು ಸಭೆಯನ್ನು ಮುಗಿಸಿ ಎದ್ದರು.
ಬಹದುದ್ದೀನ್‌ನನ್ನು ಪತ್ನಿ ಪುತ್ರ ಸಮೇತ ವಿಶೇಷ ಬಿಡಾರಕ್ಕೆ ಕಳುಹಿಸಿಕೊಟ್ಟರು ಅಧಿಕಾರಿಗಳು.
ಈಗ ಅಂತರಂಗದ ಸಭೆಯಲ್ಲಿ ಮುಖ್ಯಸ್ಥರೆಲ್ಲರೂ ಸಭೆ ಸೇರಿದ್ದರು.

ಬಹದುದ್ದೀನ್‌ನಿಗೆ ಪ್ರಭುವು ನೀಡಿದ ಶರಣಾಗತಿಯೇ ಚರ್ಚೆಯ ಕೇಂದ್ರಬಿಂದುವಾಗಿತ್ತು. ಸರದಾರರಿಗೂ, ಅಮಾತ್ಯರಿಗೂ ಮಾತನಾಡಲು ರಾಯರು ಅವಕಾಶ ನೀಡಿದರು. ಸಾಮಂತರು ಪಿಸುಗುಟ್ಟತೊಡಗಿದರು.
ಕೊನೆಗೆ ಬುಕ್ಕರಾಯರು ತನ್ನ ಮನಸ್ಸನ್ನು ಬಿಚ್ಚಿಟ್ಟರು: “ಶರಣಾಗತ ರಕ್ಷಣೆ ನಿಮ್ಮ ವೈಯಕ್ತಿಕ ಧರ್ಮ. ಆದರೆ ಅದಕ್ಕಿಂತ ಪ್ರಬಲವಾದದ್ದು ಸಕಲ ಜನ ರಕ್ಷಣೆ. ನಿಮ್ಮ ನಿರ್ಧಾರ ಜನರಿಗೆ ಸಂಕಟ ತರಬಹುದೇನೋ ಎಂದು ನಮ್ಮೆಲ್ಲರ ಭಯ ಪ್ರಭೂ. ಈ ಸುದ್ದಿ ತಿಳಿದು ಆ ಸುಲ್ತಾನನು ಆನೆಗೊಂದಿಯನ್ನು ಪ್ರಶಾಂತವಾಗಿರಲು ಬಿಡುವನೇ?”
ಜಂಬುಕೇಶ್ವರರು ಕಿರುನಗು ಬೀರಿದರು. ಮರುಕ್ಷಣದಲ್ಲೇ ಅವರ ಮುಖಭಾವ ಬದಲಾಯಿತು. ಧೀರಗಂಭೀರವಾಗಿ ಹೇಳಿದರು: “ಆಶ್ರಿತ ರಕ್ಷಣೆ ಮಾಡದ ರಾಜಪ್ರಭುತ್ವ ಏಕೆ? ಮಾನವೀಯತೆ ಇಲ್ಲದ ಕ್ಷಾತ್ರ ತೇಜಸ್ಸು ಏಕೆ? ಕರುಣೆ ಇಲ್ಲದ ಆಡಳಿತ ಏಕೆ? ಶರಣು ಅಂದವನ ರಕ್ಷಣೆಯ ಭಾರವೇ ಧರ್ಮದ ನಿರ್ಧಾರ!”

ಕ್ಷಣದ ನಂತರ ಪ್ರಸನ್ನ ಮುಖದಿಂದ ಮತ್ತೊಂದು ಮಾತು ಹೇಳಿದರು: “ನಿಮ್ಮೆಲ್ಲರ ದೇಶಭಕ್ತಿ, ಪ್ರಜಾಭಿಮಾನ ನಮಗೆ ತಿಳಿಯದದ್ದೇನಲ್ಲ. ರಾಜನೀತಿ, ಧರ್ಮನೀತಿಗಳು ಬೇರೆ ಬೇರೆಯಲ್ಲ ಎಂಬುದು ನಮ್ಮ ನಂಬಿಕೆ. ಇವುಗಳ ಸಮ್ಮಿಲನವೇ ಇಂದಿನ ಅಗತ್ಯವಾಗಿದೆ.”
ಮಹಾರಾಜರ ಆಂತರ್ಯ ಎಲ್ಲರಿಗೂ ಅರ್ಥವಾಯಿತು.
ಜಂಬುಕೇಶ್ವರರಾಯರೇ ಮುಂದುವರಿಸಿದರು: “ಈ ಸಭೆಯಲ್ಲಿರುವ ಪ್ರತಿಯೊಬ್ಬರೂ ಯೋಧಾಗ್ರೇಸರರು, ಆಲೋಚನಾಪರರು, ವ್ಯೂಹಕರ್ತರು ಹಾಗೂ ಕರ್ತವ್ಯ ನಿಷ್ಠರು. ಪ್ರತಿಯೊಬ್ಬರೂ ಕಂಪಿಲ ರಾಜ್ಯದ ಕ್ಷೇಮಕ್ಕಾಗಿ, ಕುಂತಲ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟವರೇ. ನಿಮ್ಮ ನಿಷ್ಠೆಯ ಬಗ್ಗೆ ನಮಗೆ ಅನುಮಾನವಿಲ್ಲ. ಹಾಗೆಯೇ ನಿಮ್ಮ ಮಹಾರಾಜನ ಮಾತು ಮತ್ತು ಕೃತಿಗಳು ನಿಮಗೂ ತಿಳಿದದ್ದೇ ಆಗಿದೆ.” ಸಭೆಯು ನಿಶ್ಯಬ್ದವಾಯಿತು.

ಆ ನಂತರ ಸ್ವಲ್ಪ ಸಮಯಕ್ಕೆ “ಹಸ್ತಿನಾಪತಿ ರಾಯರಿಗೆ ಜಯವಾಗಲಿ”, “ಕುಂಜರಕೋನ ರಾಯರಿಗೆ ಜಯವಾಗಲಿ” ಎಂದು ಸಭಾಂಗಣವು ಘೋಷಣೆಗಳಿಂದ ಮೊಳಗಿತು.
ಆನೆಗೊಂದಿಗೆ ಹಸ್ತಿನಾಪತಿ ಮತ್ತು ಕುಂಜರಕೋನ ಎಂಬ ಇತರ ಎರಡು ಹೆಸರುಗಳಿದ್ದವು, ಅವು ವೀರ ನಾದಗಳಲ್ಲಿ ವಿಜಯದ ಸ್ಫೂರ್ತಿಯಾದವು.


ಇನ್ನೂ ಆರು ತಿಂಗಳು ಕೂಡ ಪೂರ್ಣವಾಗಿರಲಿಲ್ಲ.
ಅಂದು,
ಜಂಬುಕೇಶ್ವರ ಪ್ರಭುವು ಪಂಪಾವತಿ ವಿರೂಪಾಕ್ಷ ಸ್ವಾಮಿಯ ದರ್ಶನ ಮುಗಿಸಿ ಅಷ್ಟೇ ತಾನೆ ಅರಮನೆಗೆ ಮರಳಿದ್ದರು. ಮನಸ್ಸು ಪ್ರಶಾಂತವಾಗಿತ್ತು. ಚಂದ್ರಕಾಂತ ಸೌಧದಲ್ಲಿ ಅಮೃತಮೂರ್ತಿಯಂತೆ ಶೋಭಿಸುತ್ತಿದ್ದರು.
ತನ್ನ ವೀಣಾವಾದನದಿಂದ ರಾಣಿ ಮಾನಸಿಕ ಉಲ್ಲಾಸವನ್ನು ಉಂಟುಮಾಡುತ್ತಿದ್ದಳು.
ಸರಿಯಾಗಿ ಆ ಸಮಯದಲ್ಲಿ—
ದೆಹಲಿ ಸುಲ್ತಾನನು ಕಳುಹಿಸಿದ ರಾಯಭಾರಿ ಬಂದಿದ್ದಾನೆಂಬ ವರ್ತಮಾನ ಬಂದಿತು.
ಸಾಗುತ್ತಿದ್ದ ರಮಣೀಯ ಭಾವನೆಗಳು ಹರಿದುಹೋದ ಹಾರದ ಮುತ್ತುಗಳಂತೆ ಚೆಲ್ಲಾಪಿಲ್ಲಿಯಾದವು.

ರಾಯಭಾರಿಗೆ ಪ್ರಭುವು ಭೇಟಿಯ ಅನುಮತಿ ನೀಡಿದರು.
ಸಭಾಂಗಣದಲ್ಲಿ ಸಹೋದರರಾದ ಮಾರನ, ಮದ್ದನ, ಹರಿಹರರಾಯರು ಮತ್ತು ಬುಕ್ಕರಾಯರು ಮಾತ್ರ ಇದ್ದರು. ದೂತನು ವಿನಂತಿಸಿದನು: “ಬಹದುದ್ದೀನ್ ನಮ್ಮ ವಿರುದ್ಧ ಮಾಡಿದ ಅಪರಾಧ, ತಾನಾಗಿಯೇ ಅಹಂಕಾರದಿಂದ ಘೋಷಿಸಿಕೊಂಡ ಸ್ವಾತಂತ್ರ್ಯ—ಕ್ಷಮಾರ್ಹವಲ್ಲ. ಅವನಿಗೆ ಆಶ್ರಯ ನೀಡುವ ಮೂಲಕ ನೀವೂ ತಪ್ಪು ಮಾಡುತ್ತಿದ್ದೀರಿ. ಆ ಕ್ಷುಲ್ಲಕ ಸೊಳ್ಳೆಗೆ ನಿಮ್ಮಂತಹ ಆನೆಯು ರಕ್ಷಣೆ ನೀಡುವುದು ಆಪತ್ತನ್ನು ಆಹ್ವಾನಿಸಿದಂತಾಗಿದೆ. ನಮ್ಮ ಮೈತ್ರಿಯ ಹಸ್ತವನ್ನು ಸ್ವೀಕರಿಸಿ ಬಹದುದ್ದೀನ್‌ನನ್ನು ನಮಗೆ ಒಪ್ಪಿಸಿಬಿಡಿ. ಇಲ್ಲದಿದ್ದರೆ ಯವನರ ವೀರಸೇನೆಯ ಧಾಳಿಗೆ ಸಿದ್ಧರಾಗಬೇಕಾಗುತ್ತದೆ.”
ಇದಾಗಿತ್ತು ಸಂದೇಶ! ಸಂದೇಶವಲ್ಲ, ಎಚ್ಚರಿಕೆ!
ಹರಿಹರನು ಕೋಪದಿಂದ ಹಲ್ಲು ಕಡಿದನು. ಪ್ರಭು ಅವರ ಕಣ್ಣುಗಳು ಕೆಂಪಾದವು. ಬುಕ್ಕರಾಯನು ಮುಷ್ಟಿ ಬಿಗಿದನು. ಮಾರನ ಮತ್ತು ಮದ್ದನರ ಕೈಗಳು ಕತ್ತಿಯ ಒರೆಯತ್ತ ಸಾಗಿದವು.
ಜಂಬುಕೇಶ್ವರರಾಯರೇ ಸ್ವತಃ ಉತ್ತರಿಸಿದರು: “ತುಘಲಕನೇ ಬರಲಿ, ಖಾಜಾಜಹಾನೇ ಬರಲಿ, ಯಾರು ಬಂದರೂ ಕೊಟ್ಟ ಅಭಯಹಸ್ತವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ.”
ದೂತನು ಹಿಂತಿರುಗಿದನು.

ನಾಲ್ವರೂ ಸೇರಿ ಮಂತ್ರಾಲೋಚನೆ ಮಾಡಿದರು. ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಿದರು. ಕೀಡನ್ನು ಎಣಿಸಿ ಮೇಲನ್ನು ಯೋಚಿಸಿದರು.
ಪ್ರಭುವಿನ ನಿರ್ಧಾರಕ್ಕೆ ಅನ್ಯ ಆಲೋಚನೆಗಳು ಹೊಂದಿಕೆಯಾಗಲಿಲ್ಲ.
“ಪಂಪಾಪತಿಯ ಕೃಪೆ ಇರುವವರೆಗೆ ಧರ್ಮದಿಂದ ವಿಚಲಿತನಾಗುವುದಿಲ್ಲ.” ಎಂದು ಜಂಬುಕೇಶ್ವರರಾಯರು ಮನಸ್ಸಿನಲ್ಲಿ ಪ್ರತಿಜ್ಞೆ ಮಾಡಿದರು.


ರಣಭೇರಿಗಳು ಮೊಳಗಿದವು.
ದೊರವಾಡಿ ಭೂಪತಿ, ಹರಿಹರರಾಯರು, ಬುಕ್ಕರಾಯರು ಮತ್ತು ಕಂಪಿಲರಾಜರು ಒಗ್ಗೂಡಿ ಯುದ್ಧ ವ್ಯೂಹದೊಂದಿಗೆ ಮಲಿಕ್ ರುಕ್ನುದ್ದೀನ್‌ನ ಸೇನೆಯನ್ನು ನಾಶಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಅಪಮಾನವನ್ನು ಹೊತ್ತು ದೆಹಲಿಗೆ ಓಡಿಹೋದನು ರುಕ್ನುದ್ದೀನ್.
ಈ ವಿಜಯದ ಸುದ್ದಿ ದೇಶಾದ್ಯಂತ ಸಂಚಲನ ಉಂಟುಮಾಡಿತು.
ದೆಹಲಿ ಸುಲ್ತಾನನು ಇದನ್ನು ತನ್ನ ಗೌರವಕ್ಕೆ ಆದ ಪರಾಭವವೆಂದು ಭಾವಿಸಿ ಕೋಪದಿಂದ ಹಲ್ಲು ಕಡಿದನು. ಇತ್ತ ದಕ್ಕನ್‌ನಿಂದ ಮಹಮ್ಮದೀಯರನ್ನು ಓಡಿಸಬೇಕೆಂಬ ಹಿಂದೂಗಳ ಆಶಯಕ್ಕೆ ಈ ವಿಜಯವು ಮತ್ತಷ್ಟು ಉತ್ಸಾಹ ನೀಡಿತು.
ಕುಂತಲ ದೇಶದಲ್ಲಿ ಎಲ್ಲಿ ನೋಡಿದರೂ ವಿಜಯದ ಕಲ್ಹಾರಗಳು! ಜನರ ಕಣ್ಣುಗಳಲ್ಲಿ ಹರ್ಷದ ಹೂವುಗಳು ಅರಳಿದವು!

ನಿನ್ನೆ ಮೊನ್ನೆಷ್ಟೇ ಮುಗಿದ ವಿಜಯೋತ್ಸವದ ಗಾಥೆಗಳನ್ನು ಜನರು ನೆನಪಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ, ತುಘಲಕ್ ಸೈನ್ಯವು ಮತ್ತೊಮ್ಮೆ ಆನೆಗೊಂದಿಯನ್ನು ಯುದ್ಧಕ್ಕೆ ಎಳೆಯಿತು.
ಈ ಬಾರಿಯೂ ಜಂಬುಕೇಶ್ವರ, ಮಾರನ ಮತ್ತು ಮದ್ದನರು ಶತ್ರುಗಳಿಗೆ ಸಿಂಹಸ್ವಪ್ನವಾದರು. ಹರಿಹರ ಮತ್ತು ಬುಕ್ಕರು ನಿಗೂಢ ಯುದ್ಧ ವ್ಯೂಹದೊಂದಿಗೆ ಮುನ್ನುಗ್ಗಿದರು. ರಾಜಕುಮಾರರು, ಸರದಾರರು, ದಂಡನಾಥರು ಅಪಾರ ಶೌರ್ಯ ಪ್ರದರ್ಶಿಸಿದರು. ಶತ್ರುಗಳ ತಲೆಗಳು ರಣರಂಗದಲ್ಲಿ ಉರುಳಿದವು. ಯವನ ಸೈನ್ಯಕ್ಕೆ ಅವರನ್ನು ತಡೆಯುವುದು ಅಸಾಧ್ಯವಾಯಿತು. ಶತ್ರು ಸೇನಾಪತಿ ಕುತುಬ್‌ಮುಲ್ಕ್ ಕೂಡ ರುಕ್ನುದ್ದೀನ್‌ನ ಹಾದಿಯನ್ನೇ ಹಿಡಿದನು.
ಕನ್ನಡ/ತೆಲುಗು ಪೌರುಷವು ಎರಡನೇ ಬಾರಿಗೆ ದೆಹಲಿ ಕೋಟೆಗೆ ಎಚ್ಚರಿಕೆ ನೀಡಿ ಜಗತ್ಪ್ರಸಿದ್ಧವಾಯಿತು.


ರಾತ್ರಿ ಕಳೆಯುತ್ತಿತ್ತು.
ಮಹಾರಾಜ ಜಂಬುಕೇಶ್ವರರು ಏಕಾಂತವಾಗಿ, ಮಂದಿರದಲ್ಲಿ ಆಲೋಚನೆಯಲ್ಲಿ ಮುಳುಗಿದ್ದರು.
ಒಂಬತ್ತು ತಿಂಗಳ ಅವಧಿಯಲ್ಲಿ ಇದು ಮೂರನೇ ಯುದ್ಧ. ಈ ಬಾರಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಲಕ್ಷಾಂತರ ಕಾಲ್ದಳ, ನಲವತ್ತು ಸಾವಿರ ಅಶ್ವದಳ, ಸಾವಿರ ಮದ್ದಾನೆಗಳೊಂದಿಗೆ ಪ್ರಳಯಕಾಲದ ಮಹಾಸಮುದ್ರದಂತೆ ದೊರವಾಡಿಯಿಂದಲೇ ಆ ಮಹಾಸೈನ್ಯದ ಗರ್ಜನೆ ಆನೆಗೊಂದಿಗೆ ಕೇಳಿಬರುತ್ತಿತ್ತು.
ಕಂಪಿಲ ರಾಜ್ಯದ ನಕ್ಷೆಯಲ್ಲಿ ರಕ್ತದ ಕಲೆಗಳು ಮೂಡುತ್ತಿದ್ದವು. ಸುಲ್ತಾನನ ಸೇನಾನಾಯಕ ಖಾಜಾಜಹಾನು ವಿನಾಶದ ಅಬ್ಬರದಿಂದ ಮುನ್ನುಗ್ಗುತ್ತಿದ್ದನು. ರಾಜ್ಯದ ಪರಿಸ್ಥಿತಿ ಮುಳ್ಳಿನ ಬೇಲಿಯ ಮೇಲೆ ಬಿದ್ದ ಬಟ್ಟೆಯಂತಾಗಿತ್ತು.

ಪ್ರವೇಶಕ್ಕೆ ಅನುಮತಿ ಕೇಳಿದ ಮಾರನನು ಒಳಗೆ ಬಂದು ದಾರುಣ ಪರಿಸ್ಥಿತಿಯನ್ನು ವಿವರಿಸಿದನು: “ಬರುತ್ತಿದ್ದಂತೆಯೇ ದೊರವಾಡಿಯನ್ನು ಲಕ್ಷ್ಯವಾಗಿಸಿಕೊಂಡಿದ್ದಾನೆ ಸುಲ್ತಾನನ ಪ್ರತಿನಿಧಿ ಮಹಾಪ್ರಭೂ. ಆ ಧಾಳಿಯನ್ನು ತಡೆಯಲಾರದೆ ಸಮರದಲ್ಲಿ ವೀರಮರಣ ಹೊಂದಿದ್ದಾರೆ ದೊರವಾಡಿ ಭೂಪತಿ.”
ಈ ಸುದ್ದಿ ಕೇಳಿ ಜಂಬುಕೇಶ್ವರರಾಯರ ಮುಖ ಮಂಕಾಯಿತು. ಮಿತ್ರನ ಮರಣ ರಾಜರನ್ನು ದುಃಖದ ಮಡುವಿನಲ್ಲಿ ಮುಳುಗಿಸಿತು.
ಆ ಬೆನ್ನಲ್ಲೇ ಕಂಪಿಲಿಯ ಪತನ, ಕುಮ್ಮಟದ ನಾಶದ ವಾರ್ತೆಯನ್ನು ಹಾಗೂ ಗೌಡ ಕೋಸಿಗಿ ನರೇಂದ್ರರು ರಣರಂಗದಲ್ಲಿ ಮಡಿದ ವಾಸ್ತವವನ್ನು ಮಾರನ ತಿಳಿಸಿದನು.
ಸಿಂಹಾಸನದಲ್ಲೇ ಕುಸಿದು ದುಃಖಿಸಿದರು ಜಂಬುಕೇಶ್ವರ. ಅಣ್ಣನಿಗೆ ಸಮಾಧಾನ ಹೇಳಲು ಯತ್ನಿಸಿದನು ಮಾರನ.
ಚೇತರಿಸಿಕೊಂಡ ಜಂಬುಕೇಶ್ವರರ ಕಣ್ಣುಗಳಲ್ಲಿ ಕಿಡಿಗಳು ಹಾರಿದವು.

ಮಾರನನಿಗೆ ಸೂಕ್ತ ಆದೇಶಗಳನ್ನು ನೀಡಿ, ಹರಿಹರ ಬುಕ್ಕರಿಗೆ ಎಚ್ಚರಿಕೆಯ ಸಂದೇಶ ತಲುಪಿಸಲು ಹೇಳಿದರು.
ಮಾರನ ಹೊರಟುಹೋದನು. ಮಹಾರಾಜನ ಮನಸ್ಸಿನಲ್ಲಿ ಕಳವಳ ಮುಂದುವರಿದಿತ್ತು. ‘ಬಹದುದ್ದೀನ್‌ನ ರಕ್ಷಣೆಗಾಗಿ ತಾವು ಈ ಕೆಂಡದ ನದಿಗೆ ಧುಮುಕಿದವೇ? ಅಂದು ಸರದಾರರು, ಹಿತೈಷಿಗಳು ಹೇಳಿದ ಸಲಹೆಯನ್ನು ಕೇಳದೆ ತಪ್ಪು ಮಾಡಿದೆವೇ?’ ಎಂದು ವ್ಯಾಕುಲನಾದರು. ಆದರೆ ಮರುಕ್ಷಣದಲ್ಲೇ ಆ ಆಲೋಚನೆಯನ್ನು ದೂರ ತಳ್ಳಿದರು. ‘ಛೀ’ ಎಂದು ತಲೆ ಕೊಡವಿಕೊಂಡರು. ‘ಶರಣು ಎಂದವನಿಗೆ ಕೊಟ್ಟ ಮಾತನ್ನು ತಪ್ಪುವುದೇ? ಕಂಪಿಲರಾಯರ ಧರ್ಮನಿಷ್ಠೆ ಅಷ್ಟೇನೂ ದುರ್ಬಲವಲ್ಲ. ವಿಪತ್ತಿನ ಮೋಡಗಳು ಕವಿದು ಬಂದರೂ—ನಡೆದುಹೋದದ್ದಕ್ಕೆ ಪಶ್ಚಾತ್ತಾಪ ಪಡುವ ಪ್ರಶ್ನೆಯೇ ಇಲ್ಲ’ ಎಂದು ತಮ್ಮನ್ನೇ ತಾವು ಸಮಾಧಾನ ಪಟ್ಟುಕೊಂಡರು. ಆ ಕ್ಷಣದಲ್ಲೇ ಅವರ ಮನಸ್ಸು ಮತ್ತೆ ನಿರ್ಮಲವಾಯಿತು.

ಅಷ್ಟರಲ್ಲೇ ಗೂಢಚಾರನ ಮೂಲಕ ಬುಕ್ಕರಾಯರಿಂದ ವರದಿ ಬಂದಿತು. ಪೆದ್ದಮಕೋಟೆಯ ಮೇಲೆ ಖಾಜಾಜಹಾನನ ಕಣ್ಣು ಬಿದ್ದಿದೆ. ಯಾವ ಕ್ಷಣದಲ್ಲಾದರೂ ಭಾರೀ ದಾಳಿ ಸಂಭವಿಸಬಹುದು!
ರಾಜರು ತಕ್ಷಣವೇ ಅಮಾತ್ಯನನ್ನೂ, ಮುದ್ದನನನ್ನೂ ಕರೆಯಿಸಿಕೊಂಡರು. ರಣತಂತ್ರವನ್ನು ಒಪ್ಪಿಸಿದರು. ಖಾಜಾಜಹಾನನನ್ನು ವಧಿಸುವುದು ಬುಕ್ಕನ ಜವಾಬ್ದಾರಿ. ಪೆದ್ದಮಕೋಟೆಯ ಸಂರಕ್ಷಣೆಯ ಭಾರ ಹರಿಹರನಿಗೆ. ರಾಜನಗರಿಯ ರಕ್ಷಣೆ ರಾಜಪುತ್ರ ರಾಮನಾಥನಿಗೆ. ತಾನು ಎಲ್ಲಾ ದಿಕ್ಕುಗಳಿಗೂ ಕಾವಲಾಗಿ ಇರುವುದಾಗಿ ವರ್ತಮಾನ ಕಳುಹಿಸಿದರು. ಸೈನಿಕರಲ್ಲಿ ಉತ್ಸಾಹ ತುಂಬುವ ಜವಾಬ್ದಾರಿಯನ್ನು ಮಾರಣ, ಮದ್ದಣ ಮತ್ತು ಮಂತ್ರಿಗಳಿಗೆ ಒಪ್ಪಿಸಿದರು.


ನಡುರಾತ್ರಿಯ ವೇಳೆ,
ಚಿಕ್ಕಮಕೋಟೆಯೊಳಗಿನ ಸಭಾಂಗಣದಲ್ಲಿ ಮಹಾರಾಜ ಜಂಬುಕೇಶ್ವರರಾಯರು, ಅವರ ಸಹೋದರರು, ರಾಣಿಯರು, ರಾಜಕುಮಾರರು, ಸೊಸೆಯರು, ಬುಕ್ಕರಾಯರು, ಒಬ್ಬ ಮಂತ್ರಿ ಹಾಗೂ ಕೋಶಾಧಿಕಾರಿ ಸೇರಿದ್ದರು.
ಪೆದ್ದಮಕೋಟೆಯ ಪತನವಾಗುವುದು, ಹರಿಹರನು ಖಾಜಾಜಹಾನನಿಗೆ ಬಂದಿಯಾಗುವುದು ವಿಪತ್ಕಾರಕ ಬೆಳವಣಿಗೆಗಳಾಗಿದ್ದವು. ಎಲ್ಲರೂ ದುಃಖ, ಕಳವಳ ಮತ್ತು ಆತಂಕದಿಂದ ಮೌನವಾಗಿ ಕುಳಿತಿದ್ದರು.
ದೀರ್ಘ ಚರ್ಚೆ ನಡೆಯಿತು. ಮುಂದಿನ ಕ್ರಮ ಏನು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳೂ ವ್ಯಕ್ತವಾದವು.
ಆಗ ದೇವಿಯು ಎದ್ದು ನಿಂತು, ಧೀರಗಂಭೀರ ಸ್ವರದಲ್ಲಿ ಹೇಳಿದಳು: “ಪ್ರಭೂ, ಕಾಲವು ಗಾಳದಂತೆ. ನಾವು ಎಷ್ಟೇ ಧರ್ಮಕರ್ಮಗಳಿಗೆ ಬದ್ಧರಾಗಿದ್ದರೂ, ವಿಧಿಯ ಆಟಗಳು ಕೆಲವು ಬಾರಿ ವಿಕಟಿಸಬಹುದು. ರಣಕೋವಿದರಾಗಿ ನಿಮ್ಮ ನಿರ್ಧಾರವನ್ನು ನೀವು ತೆಗೆದುಕೊಳ್ಳಿ. ಆದರೆ ಚಿನ್ನಮಕೋಟೆಗೆ ಏನಾದರೂ ಮುಪ್ಪು ಬಂದರೆ, ಆ ಸುದ್ದಿ ತಿಳಿಯುತ್ತಿದ್ದಂತೆಯೇ ಅಂತಃಪುರದ ಸ್ತ್ರೀಯರೆಲ್ಲರೂ ಅಗ್ನಿಪ್ರವೇಶ ಮಾಡುತ್ತೇವೆ. ಇದು ನಮ್ಮೆಲ್ಲರ ನಿರ್ಧಾರ.” ಅವಳು ತನ್ನ ಸಹರಾಣಿಯರು, ಸೊಸೆಯರ ಕಡೆ ನೋಡಿದಳು. ಒಂದೇ ದಾರದಲ್ಲಿ ಕಟ್ಟಿದ ಹೂಮಾಲೆಯಂತೆ ಎಲ್ಲರ ತಲೆಗಳು ಒಮ್ಮತದಿಂದ ಅಲ್ಲಾಡಿದವು. ಅವರ ಮುಖಗಳಲ್ಲಿ ಭಯ ಇರಲಿಲ್ಲ. ಇತ್ತು ಎಂದರೆ ಕೇವಲ ಆತ್ಮಗೌರವ.

ಅಷ್ಟರಲ್ಲೇ ಜಂಬುಕೇಶ್ವರನ ಪ್ರೀತಿಯ ಮಗ ರಾಮನಾಥನ ಅರ್ಧಾಂಗಿ—ಆ ಮಹಿಳೆಯರಲ್ಲೇ ಅತ್ಯಂತ ಕಿರಿಯ ವಯಸ್ಸಿನವಳು — ವೀರಾವೇಶದಿಂದ ಹೇಳಿದಳು: “ರಾಣಿವಾಸದ ಸ್ತ್ರೀ ಶೌರ್ಯದ ಪ್ರತಾಪಾಗ್ನಿಯನ್ನು ಮೊದಲು ಶತ್ರಗಳಿಗೆ ತಗುಲಿಸಿ, ಆಮೇಲೆ ಕೀರ್ತಿವಂತರಾಗುತ್ತೇವೆ ಪ್ರಭೂ!”
ಆ ಮಾತು ಕೇಳಿ ಅಲ್ಲಿದ್ದವರ ಕಣ್ಣುಗಳು ತೇವಗೊಂಡವು. ಗರ್ವದಿಂದ ಅವರ ಹೃದಯಗಳು ತುಂಬಿಕೊಂಡವು. ಆ ಯುವತಿಯ ಧೈರ್ಯ ರಾಜನ ಮನಸ್ಸನ್ನು ತಟ್ಟಿತು. “ಆಂಧ್ರ ವೀರತ್ವಕ್ಕೆ ಇಂತಹ ಪರೀಕ್ಷೆಯ ಕಾಲ ಬಂದುಬಿಟ್ಟಿದೆಯೇ?” ಎಂಬ ನೋವು ಅವರೊಳಗೆ ಮೂಡಿತು. ಆದರೆ ಅವರು ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು. ವೀರರೆಲ್ಲರೂ ಉತ್ಕಂಠತೆಯ ಭಾರದಿಂದ ಬಾಗಿದ್ದಾರೆ. ದೇವಿಯ ಮುಖದಲ್ಲಿ ದೀಕ್ಷೆಯ ನಿರ್ಧಾರ, ಇತರ ಮಹಿಳೆಯರಲ್ಲಿ ನಿರೀಕ್ಷೆ!
ಮಹಾರಾಜರು ತಕ್ಷಣವೇ ಬಹದುದ್ದೀನ್‌ನನ್ನು ಕರೆಸಿದರು.

ಬಹದುದ್ದೀನ್ ಸಭೆಗೆ ಬಂದನು.
ಶಾಂತವಾದ ಮನಸ್ಸಿನಿಂದ ಜಂಬುಕೇಶ್ವರರಾಯರು ಹೀಗೆ ಹೇಳಿದರು: “ನಡೆದ ಘೋರ ಕೃತ್ಯಗಳು, ನಡೆಯುತ್ತಿರುವ ಪರಿಣಾಮಗಳು ನಿನಗೆ ತಿಳಿದೇ ಇವೆ. ಈ ಸ್ಥಿತಿಯಲ್ಲಿ ನಿನ್ನನ್ನು ಮೋಸಗೊಳಿಸುವುದು ನಮ್ಮ ಧರ್ಮವಲ್ಲ. ಯುದ್ಧದಲ್ಲಿ ವಿಜಯ ನಮ್ಮದೇ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸ್ವಲ್ಪ ಬಲದಿಂದ ದೊಡ್ಡ ಫಲವನ್ನು ನಿರೀಕ್ಷಿಸುವುದು ಕಷ್ಟ.” ಮಹಾರಾಜರು ಕ್ಷಣಕಾಲ ಮೌನವಾಗಿದ್ದರು.
ಅವರ ಮುಖದಲ್ಲಿ ಗಂಭೀರತೆ ಮೂಡಿತ್ತು. ನಂತರ ಮುಂದುವರಿಸಿದರು. “ಅಂದು ನಿನಗೆ ನಾವು ನೀಡಿದ ಮಾತಿನಂತೆ ನಿನ್ನ ರಕ್ಷಣೆ ನಮ್ಮ ಜವಾಬ್ದಾರಿ. ಪ್ರಾಣ ಇರುವವರೆಗೂ ನಾವು ಆ ಮಾತಿಗೆ ಬದ್ಧರು. ಆದ್ದರಿಂದ, ನಿನ್ನನ್ನು ನಮ್ಮ ಅತ್ಯಂತ ಆಪ್ತ ಮಿತ್ರ, ಧರ್ಮರಕ್ಷಕ ಆದ ಹೊಯ್ಸಳ ಬಲ್ಲಾಳದೇವರ ಬಳಿಗೆ ಕಳುಹಿಸುತ್ತಿದ್ದೇವೆ. ದಾವಣಗೆರೆಯಲ್ಲಿ (ದಾವನೂರು) ಬಲ್ಲಾಳನ ಆಶ್ರಯವೇ ನಿನಗೆ ಇನ್ನು ಮುಂದೆ ಕಾವಲು.”
ಮಹಾರಾಜರ ಮಾತುಗಳನ್ನು ಕೇಳುತ್ತಿದ್ದ ಬಹದುದ್ದೀನ್‌ನ ಹೃದಯ ಭಾರವಾಯಿತು. ಮಾತುಗಳು ಗಂಟಲಲ್ಲೇ ಸಿಲುಕಿಕೊಂಡವು. ಕಣ್ಣುಗಳಲ್ಲಿ ನೀರು ತುಂಬಿ ಬಂದು, ಅಪ್ರಯತ್ನವಾಗಿ ರಾಜರ ಪಾದಗಳಿಗೆ ನಮಸ್ಕರಿಸಿ ಬಿಕ್ಕಿ ಬಿಕ್ಕಿ ಅತ್ತನು. ಅವನ ತುಟಿಗಳು ನಡುಗುತ್ತಿದ್ದವು. ಬಹಳ ಕಷ್ಟಪಟ್ಟು ಮಾತು ಹೊರಬಂದಿತು. “ಮಹಾ ಸಾಮ್ರಾಜ್ಯದ ಅಸ್ತಿತ್ವವೇ ಪ್ರಶ್ನಾರ್ಥಕವಾಗಿರುವ ಈ ಸಮಯದಲ್ಲಿಯೂ ನನ್ನನ್ನು ಕಾಪಾಡಲು ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧರಾಗಿದ್ದೀರಲ್ಲಾ ಪ್ರಭೂ… ನಾನು ಯಾವ ಜನ್ಮದಲ್ಲೋ ವಾಸಿಸಿದ್ದ ಗೂಡಿಗೆ ಮರಳಿ ಬಂದ ಹಕ್ಕಿಯಂತೆ ನನಗೆ ಅನಿಸುತ್ತಿದೆ. ಇದು ಸತ್ಯ ಪ್ರಭೂ!”
ಜಂಬುಕೇಶ್ವರ ರಾಯರು ಅವನನ್ನು ಕೈಗಳಿಂದ ಮೇಲೆತ್ತಿ, ಧೀರವಾಗಿ ಭುಜ ತಟ್ಟಿ ಸಮಾಧಾನಪಡಿಸಿದರು.

“ಈಗಲೇ ಹೊರಡಬೇಕು.” ಎಂದು ಹೇಳಿದರು.
ಸಭೆಯಲ್ಲಿ ಇದ್ದ ಎಲ್ಲರ ಮನಸ್ಸು ಭಾರವಾಗಿತ್ತು. ಮಾತಿಗಿಂತ ಮೌನವೇ ಹೆಚ್ಚು ಮಾತನಾಡುತ್ತಿತ್ತು.
ಬುಕ್ಕರಾಯ ಮಹಾರಾಜರನ್ನು ನೋಡುತ್ತಾ ಆಶ್ಚರ್ಯಚಕಿತರಾದನು. ‘ಏನು ಈ ರಾಜರ ಔದಾರ್ಯ?! ಕಾರುಣ್ಯ?! ಧರ್ಮದೀಕ್ಷ?! ಬುದ್ಧದೇವನ ಭೂಮಿಯಲ್ಲಿ ಹುಟ್ಟಿದ ಕರ್ಮಯೋಗಿ! ಈ ಪುಣ್ಯಪುರುಷರ ಜನ್ಮ ಚರಿತಾರ್ಥವಾಯಿತು!’ ಎಂದು ಮನಸ್ಸಿನಲ್ಲೇ ಆರಾಧಿಸಿದನು. ಅವನ ಕಣ್ಣುಗಳು ನೀರಿನಿಂದ ತುಂಬಿಕೊಂಡವು.

ರಾಜರು ಬಹದುದ್ದೀನ್‌ಗೆ “ನೀವು ತಕ್ಷಣವೇ ಹೊರಡಬೇಕು. ಇಗೋ ದ್ವಾರದ ಬಳಿ ಸಿದ್ಧವಾಗಿರುವ ನಮ್ಮ ಅಂಗರಕ್ಷಕರು ನಿಮ್ಮನ್ನು ರಹಸ್ಯ ಮಾರ್ಗದ ಮೂಲಕ ಸುರಕ್ಷಿತವಾಗಿ ತಲುಪಿಸುತ್ತಾರೆ. ಹೊರಡಿ” ಎಂದರು.
ಒಂದು ತಂಪಾದ ಕೈಸ್ಪರ್ಶವು ಬೆನ್ನನ್ನು ಸವರಿತು. ಬಹದುದ್ದೀನ್ ತಬ್ಬಿಬ್ಬುಗೊಂಡನು. ಈ ಜಾತಿಯ ಜೀವಸ್ಪರ್ಶವು ತನಗೆ ಪ್ರಾಣದಾನ ಮಾಡುತ್ತಿದೆಯೋ ಎಂಬಂತೆ ಭಾಸವಾಯಿತು. ತಪೋಭಂಗಕ್ಕೊಳಗಾದ ಮುನಿಗಳಂತೆ ಎಲ್ಲರೂ ಮಹಾರಾಜರನ್ನೂ, ಬಹದುದ್ದೀನ್‌ನನ್ನೂ ನೋಡತೊಡಗಿದರು.
ಮಹಾರಾಜರು ಮಾತ್ರ ನಿರ್ವಿಚಾರ ವದನದಿಂದ ವಿಶ್ವದ ರಹಸ್ಯವನ್ನು ಗ್ರಹಿಸುತ್ತಿರುವವನಂತೆ ನಿಶ್ಚಲವಾಗಿ ನಿಂತಿದ್ದರು.

ಬಹದುದ್ದೀನ್ ಬಾಗಿ ಸಲಾಮ್ ಮಾಡುತ್ತಾ, ಕಣ್ಣೀರನ್ನು ಒರೆಸಿಕೊಳ್ಳುತ್ತಾ ಬೇಗ ಬೇಗನೆ ಮಂದಿರವನ್ನು ಬಿಟ್ಟು ಹೊರಟುಹೋದನು.
ಪಶ್ಚಿಮ ದಿಕ್ಕಿನಲ್ಲಿ ಕತ್ತಲೆಯ ಪರದೆಗಳು ಸರಿಯುತ್ತಿದವು. ಪೂರ್ವ ದಿಕ್ಕಿನಲ್ಲಿ ಪ್ರಭಾತದ ಕಿರಣಗಳು ಕತ್ತಿಗಳಂತೆ ಆಕಾಶವನ್ನು ಚೀರುತ್ತಾ ಮೇಲೇಳುತ್ತಿದವು.
ಈ ಕತ್ತಲೆ-ಬೆಳಕಿನ ನೆರಳುಗಳ ನಡುವೆ—
ಆ ರಾಜವಂಶದ ನಾರಿಯ ಆತ್ಮಸ್ಥೈರ್ಯವನ್ನು, ಆತ್ಮಬಲಿದಾನವನ್ನು— ಆಕಾಶವು ಸಾಕ್ಷಿಯಾಗಿ ಆಹ್ವಾನಿಸುತ್ತಿದೆ!
ಆ ಆದರ್ಶಕ್ಕೆ ಒಂದು ಹೆಸರಿತ್ತು—

“ಶರಣಾಗತ ತ್ರಾಣ ಪರಾಯಣತೆ!!!”

-ಕೊಡೀಹಳ್ಳಿ ಮುರಳೀಮೋಹನ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x