ಅಕ್ಕ
ಕಾಡಿನಲ್ಲಿ ಅಲೆದಾಡಿ ಎರಡು ದಿನಗಳಾದ ಮೇಲೆ ನಾನು ಹಳ್ಳಿಯನ್ನು ತಲುಪಿದಾಗ, ನನ್ನ ಇಡೀ ಕುಟುಂಬ ಬೆರಗಾಗಿತ್ತು. ಏಕೆಂದರೆ ಒಂದು ದಿನದ ಹಿಂದೆಯೇ ಯಾರೋ ಒಬ್ಬ ರೇಂಜರ್ ನನ್ನ ಶಾಲೆಯ ಚೀಲವನ್ನು ಅವರಿಗೆ ತಂದುಕೊಟ್ಟಿದ್ದ. ಅಂದಿನಿಂದ ನನ್ನ ಕುಟುಂಬದವರು ನನಗಾಗಿ ಕಾಯುತ್ತಿರಲಿಲ್ಲ, ನನ್ನ ಅಳಿದುಳಿದ ಶವಕ್ಕಾಗಿ ಕಾಯುತ್ತಿದ್ದರು.
ಮೊದಲು ನನ್ನ ಅಪ್ಪ ಮುಂದೆ ಬಂದು ನನ್ನ ಕೆನ್ನೆಗೆ ಬಿರುಸಾಗಿ ಹೊಡೆದ. ನಾನು ಸ್ವಲ್ಪ ದೂರ ಹೋಗಿ ಬಿದ್ದೆನಾದರೂ ಮರುಕ್ಷಣವೇ ಮತ್ತೆ ಎದ್ದುನಿಂತೆ. ಸ್ವಲ್ಪವೂ ವಿಚಲಿತನಾಗದೆ, ಒಮ್ಮೆಯೂ ಕೆನ್ನೆಯನ್ನು ಸವರಿಕೊಳ್ಳದೆ ಅವರನ್ನೇ ನೋಡುತ್ತ ನಿಂತೆ. ಆಗ ನನ್ನ ಅಪ್ಪ ಕರ್ಕಶ ಧ್ವನಿಯಲ್ಲಿ ನನ್ನನ್ನು ಬೈಯಲು ಪ್ರಾರಂಭಿಸಿದ. ನನ್ನ ಅಪ್ಪ ತುಂಬಾ ಅಸಭ್ಯ ಮತ್ತು ಒರಟ. ಅವನ ಕರ್ಕಶ ಧ್ವನಿಯು ಬಿಳಿ ಮೀಸೆಯ ಮೂಲಕ ಬಂದು ವಿಚಿತ್ರವಾಗಿ ಕೇಳಿಸುತ್ತಿತ್ತು.
ನಂತರ ಅವ್ವ ಕಾಡುಪ್ರಾಣಿಯಂತೆ ಮೇಲೆರಗಿ ಬಂದು ನನ್ನನ್ನು ಹಿಡಿದುಕೊಂಡಳು. ಅವಳು ಕೆಟ್ಟದಾಗಿ ಕಿರುಚುತ್ತ ಅಳುತ್ತಿದ್ದಳು. ಆದರೆ ಅವಳ ಕಣ್ಣುಗಳಲ್ಲಿ ಕಣ್ಣೀರಿನ ಕುರುಹೇ ಇರಲಿಲ್ಲ. ಅವಳ ಕೂಗು, ಕಿರುಚಾಟ ನನ್ನಲ್ಲಿ ಯಾವುದೇ ಕೋಮಲ ಭಾವನೆಗಳನ್ನು ಹುಟ್ಟಿಸಲಿಲ್ಲ. ಕರಗುವ ಬದಲು ನಾನು ಇನ್ನಷ್ಟು ವಿರಕ್ತನಾದೆ. ನನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ನೆರೆಹೊರೆಯ ಅನೇಕ ಸಂಬಂಧಿಕರು ನನ್ನನ್ನು ಸುತ್ತುವರೆಯಲು ಪ್ರಾರಂಭಿಸಿದರು. ಅವರೆಲ್ಲರ ಸಾಮೂಹಿಕ ಪ್ರತಿಕ್ರಿಯೆ ಎಷ್ಟು ಕ್ಷುಲ್ಲಕ, ನಕಲಿ ಮತ್ತು ನಾಟಕೀಯವಾಗಿತ್ತು ಎಂದರೆ ಅದನ್ನು ನೋಡಿದಾಗ ನಾನು ಸತ್ತಿದ್ದರೆ ತುಂಬಾ ಚೆನ್ನಾಗಿತ್ತು ಎನಿಸಿತು.
ಹೃದಯದಲ್ಲಿ ಕರುಣೆಯ ಕುರುಹು ಇಲ್ಲದ ಆ ಗುಂಪನ್ನು ನೋಡಿದೆ. ಮನುಷ್ಯರಲ್ಲಿ ಮಾತ್ರ ಕಂಡುಬರುವ ಉದ್ರೇಕದ ಭಾವನೆಗಳು ಅವರ ಮುಖದಲ್ಲಿ ಜಿನುಗುತ್ತಿದ್ದವು. ಅವರ ಅನೇಕ ಸಾಂತ್ವನಗಳು ಮತ್ತು ಬೆನ್ನು ಸವರಿಕೆಗಳ ಹೊರತಾಗಿಯೂ ನಾನು ಕೊರಡಾಗಿಯೇ ಇದ್ದೆ. ಏಕೆಂದರೆ ನನ್ನ ಗಮನ ಬೇರೆಲ್ಲೋ ಇತ್ತು. ನನಗೆ ಸಾಯುವ ಮುನ್ನ ಆನೆ ಕೊನೆಯ ಬಾರಿಗೆ ನನ್ನತ್ತ ನೋಡಿದ ದೃಶ್ಯ ನೆನಪಾಗುತ್ತಿತ್ತು.
ನಾನು ಆಗ ಕಾಡಿನಲ್ಲಿ ಅಲ್ಲ, ನನ್ನ ಮನೆಯ ಅಂಗಳದಲ್ಲಿ ನಿಂತಿದ್ದೆ. ಅಷ್ಟೊಂದು ಮನುಷ್ಯರಿಂದ ಸುತ್ತುವರೆದಿದ್ದರೂ, ಅವರ ‘ಮಾನವ ಸಹಾನುಭೂತಿ’ಯ ಮಾತುಗಳ ಹೊರತಾಗಿಯೂ, ಆನೆಯ ಖಾಲಿ ನೋಟವೇಕೆ ನೆನಪಾಯಿತು ಎಂದು ನನಗೆ ಅರ್ಥವಾಗಲಿಲ್ಲ. ಅದಾದ ಮೇಲೆ ಜೀವನದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವಾದಾಗಲೆಲ್ಲಾ ಆ ಪ್ರಾಣಿಯ ಆ ಕೊನೆಯ ನೋಟ ನನಗೇಕೆ ನೆನಪಾಗುತ್ತದೆ ಎಂದು ತಿಳಿಯುವುದಿಲ್ಲ. ಹಾಗೆ ಆದಾಗಲೆಲ್ಲಾ ಲೌಕಿಕ ಜೀವನದ ಮಾನದಂಡಗಳೆಲ್ಲ ಕ್ಷುಲ್ಲಕವೆನಿಸುತ್ತವೆ.
ಆ ದಿನ ನಾನು ಯಾರೊಂದಿಗೂ ಏನನ್ನೂ ಮಾತನಾಡಲಿಲ್ಲ. ನನ್ನ ಮೌನ ನನ್ನ ಅವ್ವನ ತಲೆ ಕೆಡಿಸಿತ್ತು. ನಾನು ಏನನ್ನಾದರೂ ಹೇಳಲಿ ಎಂದು ಪದೇ ಪದೇ ನನ್ನನ್ನು ಅಲ್ಲಾಡಿಸುತ್ತಿದ್ದಳು. ಒಂದು ವೇಳೆ ನಾನು ಅತ್ತುಬಿಟ್ಟಿದ್ದರೆ ಬಹುಶಃ ನನಗೆ ಏನೋ ಆಗಿದೆ ಎಂದು ಅವ್ವನ ಭಯ ಕಡಿಮೆಯಾಗುತ್ತಿತ್ತು. ಆದರೆ ಪದೇ ಪದೇ ಅಲ್ಲಾಡಿಸಿದರೂ ನಾನು ಪ್ರತಿಕ್ರಿಯಿಸದೇ ಇದ್ದಾಗ, ಎಲ್ಲವೂ ಮುಗಿದೇ ಹೋಯಿತು ಎಂಬಂತೆ ದಂತೇಶ್ವರಿ ಮಾತೆಯ ಹೆಸರು ತೆಗೆದುಕೊಂಡು ಜೋರಾಗಿ ಅಳತೊಡಗಿದಳು.
ಆಗ ಚಿಕ್ಕಪ್ಪ ಮಧ್ಯೆ ಪ್ರವೇಶಿಸಿ ಅವ್ವನ ಕೈ ಹಿಡಿದು ನಮ್ಮನ್ನು ಬೇರ್ಪಡಿಸಿ, “ನೀವ್ ಈ ಕಡೆ ಬರ್ರಿ, ನಾ ನೋಡ್ತೀನಿ ಅವನ್ನ” ಎಂದ.
ಅವನು ನನ್ನ ತೋಳನ್ನು ಹಿಡಿದು ಬೆದರಿಸಿದ. “ಯಾಕಲೇ, ನಿಮ್ಮವ್ವನ ಮ್ಯಾಲ ಕನಿಕರ ಇಲ್ಲನು? ನೋಡಲ್ಲಿ ಹ್ಯಾಂಗ ಬಿಕ್ಕಿ ಬಿಕ್ಕಿ ಅಳಾಕತ್ತಾಳ. ಮತ್ತ ನೀ ಹಸಿದವನಂಗ ಕಣ್ಣು ಕಿಸದು ನೋಡಾಕತ್ತಿ. ನಿಮ್ಮವ್ವನ್ನ ಸ್ವಲ್ಪ ಸಮಾಧಾನ ಮಾಡು” ಎಂದು ನನ್ನನ್ನು ಅವ್ವ ಇರುವ ಕಡೆಗೆ ದೂಡಿದ. ಆದರೆ ಅವ್ವನ ಹತ್ತಿರ ಹೋಗುವ ಬದಲು ನಾನು ಎರಡು ಮೂರು ಹೆಜ್ಜೆ ಹಿಂದಕ್ಕೆ ಸರಿದು, ಅವ್ವನನ್ನು ನೋಡುವ ಬದಲು ನನ್ನ ಚಿಕ್ಕಪ್ಪನತ್ತ ನೋಡಿದೆ. ಬಹುಶಃ ಆ ದಿನ ನನಗೆ ಏನೋ ಆಗಿತ್ತು, ನಾನು ಕಣ್ಣು ಮಿಟುಕಿಸದೆ ಅವನನ್ನು ನೋಡುತ್ತಿದ್ದೆ. ನನ್ನ ಜಡಗಟ್ಟಿದ ಸ್ಥಿತಿಯಿಂದ ಹೊರಬರಲೆಂದು ಇದ್ದಕ್ಕಿದ್ದಂತೆಯೇ ಅವನು ನನ್ನ ಕೆನ್ನೆಗೆ ಬಲವಾಗಿ ಬಾರಿಸಿದ. ಆದರೆ ಈ ಬಾರಿಯೂ ನಾನು ನನ್ನ ಕೆನ್ನೆಯನ್ನು ಸವರಿಕೊಳ್ಳಲಿಲ್ಲ ಅಥವಾ ನನ್ನ ಸ್ಥಳದಿಂದ ಒಂದು ಇಂಚು ಕೂಡ ಕದಲಲಿಲ್ಲ. ಈ ಅಚಲ ಮತ್ತು ಹಠಮಾರಿ ಧೋರಣೆ ಅವನನ್ನು ಇನ್ನಷ್ಟು ಕೆರಳಿಸಿತು. “ನಿಲ್ಲಲೇ ಮಗನೇ, ನಿನ್ನ ಮೈಯ್ಯಾನ ದೆವ್ವಾ ಬಿಡಸ್ತಿನಿ. ನಿನಗ ಹಿಂಗ ಹೇಳಿದರ ನಡೆಂಗಿಲ್ಲ. ಮುಕುಳಿ ಮ್ಯಾಲ ಒಂದು ಬಿತ್ತಂದರ ತಿಳಿತದ…”
ಅವನು ನಿಜವಾಗಿಯೂ ತನ್ನ ಎತ್ತಿನಬಂಡಿಯಿಂದ ಬಾರಕೋಲನ್ನು ಎತ್ತಿಕೊಂಡು ಬಂದ. ಅವನನ್ನು ಯಾರೂ ತಡೆಯಲಿಲ್ಲ. ಬದಲಿಗೆ ಜನರ ಗುಂಪು ಚಿಕ್ಕಪ್ಪ ತನ್ನ ಕೆಲಸ ಸರಿಯಾಗಿ ಮಾಡಿ ಮುಗಿಸಲೆಂದು ಜಾಗ ಮಾಡಿಕೊಡಲು ಸ್ವಲ್ಪ ಹಿಂದೆ ಸರಿಯಿತು. ಆದರೆ ಆಗ ನನ್ನ ಅಕ್ಕ ಮಧ್ಯೆ ಪ್ರವೇಶಿಸಿದಳು. ಅವಳು ನನ್ನ ಕೈಯನ್ನು ಹಿಡಿದು ಗುಂಪನ್ನು ಪಕ್ಕಕ್ಕೆ ತಳ್ಳುತ್ತ ನನ್ನನ್ನು ಆ ವೃತ್ತದಿಂದ ಹೊರಗೆ ತಂದಳು. ನೇರವಾಗಿ ಮನೆಯೊಳಗೆ ನುಗ್ಗಿ, ತನ್ನ ಕೋಣೆಗೆ ಕರೆದೊಯ್ದು ಒಳಗಿನಿಂದ ಚಿಲಕ ಹಾಕಿದಳು. ಹೊರಗೆ ಅಂಗಳದಿಂದ ಚಿಕ್ಕಪ್ಪ ಜೋರಾಗಿ ಕೂಗುವ ಸದ್ದು ಬರುತ್ತಿತ್ತು. ನನ್ನ ಅವ್ವ ಕೂಡ ಚಿಕ್ಕಪ್ಪನೊಂದಿಗೆ ಸೇರಿಕೊಂಡು ನನ್ನ ಅಕ್ಕನಿಗೆ ಬೈಯುತ್ತಾ ಈ ಹುಡುಗಿಯೇ ನನ್ನ ಮಗನನ್ನು ಹಾಳು ಮಾಡಿದ್ದಾಳೆ ಎಂದು ಕೂಗಾಡುತ್ತಿದ್ದಳು.
ಆ ಕೋಣೆಯಲ್ಲಿ ಇನ್ನೊಂದು ಬಾಗಿಲು ಇತ್ತು, ಅದು ಹಿಂಭಾಗದ ಅಂಗಳದ ಕಡೆಗೆ ತೆರೆದುಕೊಳ್ಳುತ್ತಿತ್ತು. ಅಕ್ಕ ಮುಂದೆ ಹೋಗಿ ಹಿಂದಿನ ಬಾಗಿಲಿನ ಚಿಲಕವನ್ನು ತೆರೆದು, ತನ್ನ ಸೀರೆಯ ತುದಿಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಾ ನನ್ನ ಕಡೆಗೆ ಬಂದಳು. ನನಗೆ ಏನನ್ನೂ ಹೇಳದೆ ನನ್ನ ಅಂಗಿಯ ಗುಂಡಿಗಳನ್ನು ಬಿಚ್ಚಿ, ಅಂಗಿಯನ್ನು ತೆಗೆದು ಪಕ್ಕಕ್ಕೆ ಎಸೆದು ನನ್ನ ಹಾಫ್ ಪ್ಯಾಂಟಿನ ಗುಂಡಿಗಳನ್ನು ಬಿಚ್ಚಿದಳು. ಹಾಫ್ ಪ್ಯಾಂಟ್ ಕೆಳಗೆ ಜಾರಿಸಿ, ನನ್ನ ಕೈ ಹಿಡಿದು ತೋಟದ ಬಾವಿಯ ಬಳಿ ಕರೆತಂದಳು. ಅಲ್ಲಿ ನನ್ನ ಎರಡೂ ಹೆಗಲ ಮೇಲೆ ಒತ್ತಡ ಹಾಕಿ ನನ್ನನ್ನು ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಕೂರಿಸಿ ಹಗ್ಗದಿಂದ ಕಟ್ಟಿದ್ದ ಬಕೆಟನ್ನು ಬಾವಿಗೆ ಇಳಿಸಿದಳು. ಮೊದಲ ಬಕೆಟಿನಲ್ಲಿದ್ದ ನೀರನ್ನೆಲ್ಲ ನನ್ನ ಮೈಮೇಲೆ ಸುರಿದು, ಮತ್ತೊಂದು ಬಕೆಟ್ ತುಂಬಿಸಿ, ಕಲ್ಲಿನ ಬಳಿ ಇಟ್ಟಿದ್ದ ಸಾಬೂನು ಎತ್ತಿಕೊಂಡಳು. ನಾನು ಕಣ್ಣುಮುಚ್ಚಿಕೊಂಡೆ. ನನ್ನ ಮುಖಕ್ಕೆ ಸಾಬೂನು ಹಚ್ಚಿದ ನಂತರ ನನ್ನ ಕೂದಲಿಗೆ ಸಾಬೂನು ಹಚ್ಚಿದಳು. ನನ್ನ ಮೈಮೇಲೆಲ್ಲ ಸೋಪನ್ನು ಚೆನ್ನಾಗಿ ಉಜ್ಜಿ, ಒಂದು ಬಕೆಟ್ ನೀರನ್ನು ನನ್ನ ಮೇಲೆ ಸುರಿದಳು. ನಾನು ಕಣ್ಣು ತೆರೆದು ಅವಳತ್ತ ನೋಡಿದೆ. ಅವಳು ಸಂಪೂರ್ಣವಾಗಿ ಮೌನವಾಗಿದ್ದಳು. ನಾನು ಕಣ್ಣು ಮಿಟುಕಿಸುತ್ತಾ ಈಗ ನನಗೆ ಸ್ನಾನ ಮಾಡಿಸುವುದರ ಹಿಂದೆ ಅಕ್ಕನ ಉದ್ದೇಶ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕಾಡಿನಿಂದ ನನ್ನೊಂದಿಗೆ ಬಂದಿದ್ದ ‘ಎರಡನೆಯವನನ್ನು’ ಅವಳು ಗುರುತಿಸಿದ್ದಾಳೆಯೇ? ನನ್ನ ದೇಹವನ್ನು ಉಜ್ಜುವ ನೆಪದಲ್ಲಿ ಅವಳು ‘ಎರಡನೆಯವನನ್ನು’ ನನ್ನಿಂದ ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾಳೆಯೇ?
ಅವಳು ಮತ್ತೆ ನನ್ನ ಕೈ ಹಿಡಿದು ಕೋಣೆಗೆ ಕರೆತಂದಳು. ದೇಹವನ್ನು ಟವೆಲ್‌ನಿಂದ ಒರೆಸಿ, ಬಟ್ಟೆ ಹಾಕಿ, ತಲೆಗೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಬಾಚಲು ಪ್ರಾರಂಭಿಸಿದಳು. ತನ್ನ ಎಡಗೈಯಿಂದ ನನ್ನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದು ಕಾಡಿಗೆ ಡಬ್ಬಿಯನ್ನು ಕೈಗೆತ್ತಿಕೊಂಡಳು.
ಈ ಮೊದಲು ಅವಳಿಗೆ ನಾನು ಕಾಡಿಗೆ ಹಚ್ಚಲು ಬಿಡುತ್ತಿರಲಿಲ್ಲ. ಅವಳು ಕಾಡಿಗೆ ಹಚ್ಚಲು ಪ್ರಯತ್ನಿಸಿದಾಗಲೆಲ್ಲಾ ಜೋರಾಗಿ ಕಿರುಚುತ್ತಾ, ಅವಳಿಂದ ಬಿಡಿಸಿಕೊಳ್ಳಲು ನನ್ನೆಲ್ಲ ಶಕ್ತಿ ಹಾಕಿ ಪ್ರಯತ್ನಿಸುತ್ತಿದ್ದೆ. ಅವಳು ಇನ್ನೂ ಹೆಚ್ಚು ಶಕ್ತಿ ಹಾಕಿ ನನ್ನನ್ನು ಹಿಡಿದುಕೊಂಡು, ಕಾಡಿಗೆ ಹಚ್ಚದೆ ಬಿಡುತ್ತಿರಲಿಲ್ಲ. ಎಷ್ಟೋ ಸಲ ಈ ಎಳೆದಾಟದಲ್ಲಿ ಅವಳ ಕಾಡಿಗೆ ಹಚ್ಚುವ ಬೆರಳು ನನ್ನ ರೆಪ್ಪೆಯಿಂದ ಜಾರಿ, ಕಾಡಿಗೆ ನನ್ನ ಕೆನ್ನೆಯ ಮೇಲೆ ಅಸಹ್ಯವಾಗಿ ಹರಡಿಕೊಳ್ಳುತ್ತಿತ್ತು. ಹರಡಿದ ಕಾಡಿಗೆಯನ್ನು ತನ್ನ ಸೀರೆಯ ಅಂಚಿನಿಂದ ಒರೆಸಿ, ನನಗೆ ದೃಷ್ಟಿಯಾಗಬಾರದೆಂದು ನನ್ನ ಹಣೆಯ ಎಡಭಾಗದಲ್ಲಿ ದೃಷ್ಟಿಬೊಟ್ಟು ಇಡುತ್ತಿದ್ದಳು. ದೃಷ್ಟಿಬೊಟ್ಟು ಎಂದರೆ ನನಗೆ ಆಗಿ ಬರುತ್ತಿರಲಿಲ್ಲ. ಆದರೆ ಆ ದಿನ ನಾನು ನನ್ನ ಕಣ್ಣಿಗೆ ಕಾಡಿಗೆ ಹಚ್ಚುವುದನ್ನಾಗಲಿ, ದೃಷ್ಟಿಬೊಟ್ಟು ಇಡುವುದನ್ನಾಗಲಿ ವಿರೋಧಿಸಲಿಲ್ಲ.
ನಾನು ಜಾಣಹುಡುಗನಂತೆ ಕಂಡಾಗ ಅವಳು ನನ್ನ ಮುಖ ನೋಡಿದಳು. ತಲೆಯ ಹಿಂಭಾಗದ ಕೂದಲು ಬಹುಶಃ ಮತ್ತೆ ಎದ್ದುನಿಂತಿದ್ದವು. ಅವಳು ಬಾಚಣಿಗೆಯನ್ನು ಎತ್ತಿಕೊಂಡು ಮತ್ತೊಮ್ಮೆ ನನ್ನ ಕೂದಲನ್ನು ಬಾಚಿದಳು. ನನ್ನ ಮುಖವನ್ನು ತನ್ನ ಎರಡೂ ಅಂಗೈಗಳಲ್ಲಿ ತೆಗೆದುಕೊಂಡು ನನ್ನನ್ನು ಗಮನವಿಟ್ಟು ನೋಡಿದಳು. ಅವಳ ಕಣ್ಣುಗಳಲ್ಲಿ ಯಾವುದೇ ಥರದ ಭಾವನೆಗಳಿರಲಿಲ್ಲ. ಕೇವಲ ಚಿಂತೆ ಇತ್ತು. ಅವಳು ಇನ್ನೂ ನನಗೆ ಏನಾಗಿದೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಅವಳು ಸ್ವಲ್ಪ ಹೊತ್ತು ನನ್ನನ್ನೇ ನೋಡಿ, ನನ್ನ ಕೈ ಹಿಡಿದುಕೊಂಡು ಕೋಣೆಯಿಂದ ಹೊರಬಂದಳು.
ಅವ್ವ ಅಡುಗೆಮನೆಯಲ್ಲಿ ಇರಲಿಲ್ಲ, ಆದರೆ ಅವಳು ಹಾಕಿದ್ದ ಕಸ ಎಲ್ಲಾ ಕಡೆ ಹರಡಿಕೊಂಡಿತ್ತು. ಎಲ್ಲವನ್ನೂ ಒಟ್ಟುಗೂಡಿಸಿ ಎತ್ತಿಡಲು, ಸ್ವಚ್ಛಗೊಳಿಸಲು ಅಕ್ಕನಿಗೆ ಹೆಚ್ಚಿನ ತೊಂದರೆಯಾಗಲೆಂದು ಅವಳು ಉದ್ದೇಶಪೂರ್ವಕವಾಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಅಗತ್ಯಕ್ಕಿಂತ ಹೆಚ್ಚು ಗಲೀಜು ಮಾಡುತ್ತಿದ್ದಳು. ಅಕ್ಕನನ್ನು ಪೀಡಿಸುವ ಒಂದೇ ಒಂದು ಅವಕಾಶವನ್ನೂ ಕೂಡ ಅವಳು ಬಿಡುತ್ತಿರಲಿಲ್ಲ. ಅವ್ವನ ಬಲವಾದ ದ್ವೇಷದ ಹಿಂದಿನ ಸ್ಪಷ್ಟ ಕಾರಣ ನನಗೆ ಅರ್ಥವಾಗುತ್ತಿರಲಿಲ್ಲ. ನಾವು ಅವಳಿಂದ ಕಲಿತು ಅಳವಡಿಸಿಕೊಳ್ಳಬಹುದಾದ ಸದ್ಗುಣಗಳು ಅವಳಲ್ಲಿ ಇರಲಿಲ್ಲ, ಬದಲಿಗೆ ಅವಳ ಚಟುವಟಿಕೆಗಳು ಜಿಗುಪ್ಸೆ ತರಿಸುತ್ತಿದ್ದವು. ನನ್ನ ನೆನಪುಗಳನ್ನು ಶೋಧಿಸಿ ಹೇಳುವುದಾದರೆ ಅವಳು ಮಾನಸಿಕವಾಗಿ ಅಷ್ಟೊಂದು ಅಸ್ವಸ್ಥಳಾಗಿರಲಿಲ್ಲ, ಆದರೆ ಅಸಹ್ಯವಾಗುವಷ್ಟು ನೀಚಳಾಗಿದ್ದಳು. ಆ ಹೀನ ಮತ್ತು ನೀಚ ಉದಾಹರಣೆಗಳು ನೆನಪಿಗೆ ಬಂದಾಗ, ನನ್ನ ನರ ನಾಡಿಗಳಲ್ಲಿ ದ್ವೇಷದ ಅಲೆಯು ಹತ್ತಿ ಉರಿಯುತ್ತದೆ.
ಆ ದಿನ ಅವಳ ಅಸೂಯೆಗೆ ಮೂಲವಾದ ಕಾರಣ ಏನೆಂದರೆ, ಅವಳು ಎಷ್ಟೇ ಅತ್ತು ಕರೆದರೂ, ವಿನಾಕಾರಣ ಪದೇ ಪದೇ ಅಪ್ಪಿಕೊಂಡರೂ ನಾನು ಅವಳೊಂದಿಗೆ ಸೌಜನ್ಯದಿಂದ ವರ್ತಿಸಲು ಸಾಧ್ಯವಾಗಿರಲಿಲ್ಲ ಮತ್ತು ಅಕ್ಕ ನನ್ನ ಕೈ ಹಿಡಿದ ತಕ್ಷಣ ಅವಳ ಜೊತೆಗೆ ಹೋಗಿದ್ದೆ. ಇದು ಅಕ್ಕನ ಇನ್ನೊಂದು ಗೆಲುವಾಗಿತ್ತು. ಮಲಅಕ್ಕನ ಜೊತೆಗೆ ನಾನಿರುವುದು ಅವ್ವನಿಗೆ ಒಂಚೂರು ಇಷ್ಟವಿರಲಿಲ್ಲ. ಅವಳು ನನ್ನ ಮನಸನ್ನು ಗೆಲ್ಲಲು ಮತ್ತು ಅಕ್ಕನನ್ನು ನನ್ನಿಂದ ದೂರವಿರಿಸಲು ಎಲ್ಲಾ ತಂತ್ರಗಳನ್ನು ಬಳಸುತ್ತಿದ್ದಳು. ಆದರೆ ನಿರ್ಣಾಯಕ ಕ್ಷಣಗಳಲ್ಲಿ, ಅಕ್ಕ ಯಾವಾಗಲೂ ಗೆಲ್ಲುತ್ತಿದ್ದಳು. ಏಕೆಂದರೆ ಅವ್ವ ನನ್ನನ್ನು ತನ್ನೆಡೆಗೆ ಸೆಳೆಯಲು ಯಾವ ಥರದ ದುಷ್ಟ ಪ್ರಯತ್ನ ಮಾಡುತ್ತಿದ್ದಳೆಂದರೆ, ಅವುಗಳಲ್ಲಿ ನನ್ನ ಮೇಲಿನ ಪ್ರೀತಿ-ವಾತ್ಸಲ್ಯ ಕಡಿಮೆ ಮತ್ತು ಅಕ್ಕನ ಮೇಲಿನ ಕ್ರೌರ್ಯ ಹೆಚ್ಚಾಗಿರುತ್ತಿತ್ತು.
ಅಕ್ಕ ನನಗೆ ಬಾವಿಯ ಬಳಿ ಸ್ನಾನ ಮಾಡಿಸುತ್ತಿದ್ದಾಗ, ಅಕ್ಕನ ಬೆನ್ನ ಹಿಂದಿನಿಂದ ನಾನು ಅಡುಗೆಮನೆಯ ಕಿಟಕಿಯ ಬಳಿ ಅವ್ವನನ್ನು ನೋಡಿದ್ದೆ. ಅವಳ ಮುಖವು ಉಗ್ರ ಪ್ರತೀಕಾರದಿಂದ ಉರಿಯುತ್ತಿತ್ತು. ಅವಳು ಹಲ್ಲು ಕಡಿಯುತ್ತಾ ಕೊಳಕು ಬೈಗುಳಗಳನ್ನು ಉಗುಳುತ್ತಿದ್ದಳು.
ಆ ದಿನವೂ ಅಕ್ಕ ಅವ್ವನ ಕಿರಿಕಿರಿಯ ನಡತೆ, ಬೈಗುಳಗಳನ್ನು ಕಡೆಗಣಿಸಿ ಅಡುಗೆಮನೆಯ ಕೆಲಸವನ್ನು ಬೇಗ ಬೇಗ ಮುಗಿಸತೊಡಗಿದಳು. ಕೆಲಸ ಮುಗಿದ ಮೇಲೆ ಬೇಳೆಸಾರು ಮತ್ತು ಅನ್ನದ ಪಾತ್ರೆಗಳ ಮುಚ್ಚಳ ತೆಗೆದು ಸ್ವಲ್ಪ ಹೊತ್ತು ನೋಡುತ್ತ ಕುಳಿತಳು. ಆ ಒಂದು ಕ್ಷಣದಲ್ಲಿ ಅವಳ ಮುಖದಲ್ಲಿ ಕೋಪದ ಅಲೆಯೊಂದು ಬಂದುಹೋಗಿದ್ದನ್ನು ನಾನು ಗಮನಿಸಿದೆ. ಅವಳ ಮುಖದಿಂದ ದೃಷ್ಟಿ ಸರಿಸಿ ಪಾತ್ರೆಗಳಲ್ಲಿ ನೋಡಿ ದಿಗ್ಭ್ರಮೆಗೊಂಡೆ. ಅನ್ನದ ಮೇಲೆ ಒಲೆಯ ಬೂದಿ ಎರಚಲಾಗಿತ್ತು, ಬೇಳೆಸಾರಿನಲ್ಲಿ ಎರಡು ಜಿರಳೆಗಳು ಸತ್ತು ಬಿದ್ದಿದ್ದವು.
ಅಕ್ಕ ಸ್ವಲ್ಪ ಹೊತ್ತು ಯೋಚಿಸಿ ತನ್ನ ಬಲಗೈ ಬಳೆಗಳನ್ನು ಮೇಲಕ್ಕೆ ಸರಿಸಿ ಬೇಳೆಸಾರಿನಲ್ಲಿ ಬಿದ್ದಿದ್ದ ಜಿರಳೆಯ ಕಾಲನ್ನು ಹಿಡಿದು ಹೊರತೆಗೆದು, ಅಡುಗೆಮನೆಯಿಂದ ಹೊರಬಂದು ನೇರವಾಗಿ ಮಂಚದ ಮೇಲೆ ಮಲಗಿದ್ದ ಅವ್ವನ ಕೋಣೆಗೆ ಹೋದಳು. ಅವ್ವ ತನ್ನ ಎಡಗೈಯನ್ನು ಹಣೆಯ ಮೇಲೆ ಇಟ್ಟುಕೊಂಡು ಮಲಗಿದ್ದಳು. ಅಕ್ಕ ಅವಳ ಕೈಯನ್ನು ತಟ್ಟಿ ಎಚ್ಚರಿಸಿದಾಗ ಅವ್ವ ಆಘಾತಗೊಂಡು ತನ್ನ ಹಣೆಯಿಂದ ಕೈಯನ್ನು ತೆಗೆದಳು. ಅಕ್ಕ ಜಿರಳೆ ಹಿಡಿದಿದ್ದ ಕೈಯನ್ನು ಮೇಲಕ್ಕೆ ಎತ್ತಿದಳು. ಅವ್ವ ಮತ್ತು ಅಕ್ಕನ ನಡುವೆ ಕೆಲಕಾಲ ನೀರವ ಮೌನ ಆವರಿಸಿತ್ತು. ಅಕ್ಕ ಬಾಯಿಯನ್ನು ತೆರೆದು ಜಿರಳೆಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಜಗಿಯತೊಡಗಿದಳು. ಅಕ್ಕನ ಈ ರೂಪವನ್ನು ನಾನು ಮೊದಲ ಬಾರಿಗೆ ನೋಡಿದ್ದೆ. ಅವಳು ಎಷ್ಟು ಮೌನವಾಗಿದ್ದಳೋ ಅಷ್ಟೇ ಮಾರಣಾಂತಿಕ ಎಂದು ನನಗೆ ತಿಳಿದಿರಲಿಲ್ಲ.
–ಚಂದ್ರಶೇಖರ ಮದಭಾವಿ
ಕೃತಿ: ಮುರಿದ ಕಡಲು
ಪ್ರಕಾರ: ಕಾದಂಬರಿ
ಹಿಂದಿ ಮೂಲ: ಮನೋಜ್ ರೂಪ್ಡಾ
ಕನ್ನಡಕ್ಕೆ: ಚಂದ್ರಶೇಖರ ಮದಭಾವಿ
ಬೆಲೆ: ₹210/-
ಪ್ರಕಾಶನ: ಛಂದ ಪುಸ್ತಕ
ಪ್ರತಿಗಳಿಗಾಗಿ ಸಂಪರ್ಕಿಸಿ: 9945939436