ನಾನು ಸಮುದಾಯ ಅಭಿವೃದ್ಧಿ ಕಾರ್ಯಕರ್ತಳಾಗಿ ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ಒಂದು ಸಮುದಾಯದಲ್ಲಿ ಅಂವಿಕಲರ ಜೊತೆ ಕೆಲಸ ಮಾಡುವಾಗ ಅಂಗವಿಕಲ ವ್ಯಕ್ತಿಯ ಕುಟುಂಬದ ಮೂಲಕ ಇನ್ನೊಂದು ಅಂಗವಿಕಲ ಕುಟುಂಬದ ಪರಿಚಯವಾಯಿತು ಇದೇ ಸುನಿತಾಳ ಕುಟುಂಬ.
ಈ ಸಮುದಾಯದಲ್ಲಿ ಅಂಗವಿಕಲರನ್ನು ಗುರುತಿಸಲು ನನ್ನ ಸಹ ಸಿಬ್ಬಂದಿಗಳ ಜೊತೆ ಸೇರಿ ಮನೆ ಮನೆ ಸರ್ವೆ ಮಾಡಿದ್ದೆನು. ಆ ಸಮಯದಲ್ಲಿ ಸುನಿತಾಳ ಮನೆಗೂ ಹೋಗಿ ವಿಚಾರಿಸಿದ್ದೆವು ಆದರೆ ಮನೆಯಲ್ಲಿ ಅಂಗವಿಕಲತೆಯ ವ್ಯಕ್ತಿ ಇರುವ ಯಾವುದೇ ಸುಳಿವು ಸಿಗಲಿಲ್ಲ, ಮನೆಯವರೂ ಸಹ ಅಂಗವಿಕಲ ವ್ಯಕ್ತಿಯ ಮಾಹಿತಿಯನ್ನೂ ನೀಡಿರಲಿಲ್ಲ, ಅಕ್ಕ-ಪಕ್ಕದ ಮನೆಯವರಿಗೂ ಆ ವ್ಯಕ್ತಿಯ ಬಗ್ಗೆ ತಿಳಿದಿರಲಿಲ್ಲ.
ಸುಮಾರು ೬ ತಿಂಗಳ ಕಾಲ ಅದೇ ಸಮುದಾಯದಲ್ಲಿ ವಾರದಲ್ಲಿ ಮೂರು ದಿನ ಅಂಗವಿಕಲರ ಮನೆಗಳಿಗೆ ಬೇಟಿ ನೀಡುವ ಸಂದರ್ಬದಲ್ಲಿ ಸುನಿತಾಳ ತಂದೆ ಒಂದು ದೇವಸ್ಥಾನದ ಮುಂದೆ ಹೂವನ್ನು ಮಾರುವುದನ್ನು ನೋಡುತ್ತಿದ್ದೆನು.

ಒಂದು ದಿನ ಹೀಗೆ ಸಮುದಾಯಕ್ಕೆ ಬೇಟಿ ನೀಡಿದಾಗ ಒಬ್ಬ ಅಂಗವಿಕಲ ವ್ಯಕ್ತಿಯ ಪೋಷಕರು ಇಲ್ಲೇ ಒಂದು ಮನೆಯಲ್ಲಿ ಒಂದು ಅಂಗವಿಕಲ ಹೆಣ್ಣು ಮಗಳಿದ್ದಾಳೆ, ದೇವಸ್ಥಾನದ ಹತ್ತಿರ ಹೂವನ್ನು ಮಾರುವ ವ್ಯಕ್ತಿ ಅವರ ತಂದೆ ಎಂದು ಹೇಳಿದರು. ಅದರಂತೆ ದೇವಸ್ಥಾನದ ಹತ್ತಿರ ಹೋಗಿ ವಿಚಾರಿಸಿದಾಗ ಸುನಿತಾಳ ಮನೆಯನ್ನು ತೋರಿಸಿದರು.
ಸುನಿತಾಳ ಮನೆಗೆ ಹೋಗಿ ಅವರ ತಾಯಿಯನ್ನು ಮಾತನಾಡಿಸಿ, ನಿಮ್ಮ ಮನೆಯಲ್ಲಿ ಅಂಗವಿಕಲ ವ್ಯಕ್ತಿ ಇದ್ದಾರೆ ಎಂದು ಯಾರೋ ಹೇಳಿದರು, ಅವರನ್ನು ನೋಡಬಹುದೇ ಎಂದು ಕೇಳಿದಾಗ, ನಮ್ಮ ಮನೆಯಲ್ಲಿ ಯಾರೂ ಆ ರೀತಿಯವರಿಲ್ಲ, ನಿಮಗೆ ಯಾರೋ ಸುಳ್ಳು ಹೇಳಿದ್ದಾರೆ ಎಂದು ಹೇಳಿದರು. ಆಗ ಅವರ ಹತ್ತಿರ ಏನೂ ಮಾತನಾಡದೆ ಹಾಗೆ ವಾಪಾಸು ಬಂದೆನು. ಒಂದು ವಾರದ ಕಾಲ ದಿನವೂ ಅದೇ ಬೀದಿಯಲ್ಲಿ ಅವರ ಮನೆಯ ಮುಂದೆಯೇ ಓಡಾಡಲು ಪ್ರಾರಂಭಿಸಿದೆ, ಅದೇ ಸಮುದಾಯದ ಇನ್ನೊಂದು ಅಂಗವಿಕಲ ಹೆಣ್ಣು ಮಗು ಹಾಗೂ ಅವರ ಕುಟುಂಬದೊಂದಿಗೆ ಇತರೆ ಅಂಗವಿಕಲ ಮಕ್ಕಳ ಮತ್ತು ವ್ಯಕ್ತಿಗಳ ಮನೆಗಳಿಗೆ, ಅದೇ ಬೀದಿಯಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಲು ಪ್ರಾರಂಭಹಿಸಿದೆ.
ಸುನಿತಾಳ ತಾಯಿ ಅಥವಾ ತಂದೆ ಸಿಕ್ಕಿದಾಗಲೆಲ್ಲಾ ಆತ್ಮೀಯತೆಯಿಂದ ಮಾತನಾಡಿಸಲು ಪ್ರಾರಂಭಿಸಿದೆ.
ಸುಮಾರು ಒಂದು ತಿಂಗಳು ಹೀಗೆ ಕಳೆಯಿತು, ಒಂದು ದಿನ ಹೀಗೆ ಸಮುದಾಯ ಬೇಟಿ ನೀಡಿ, ದೇವಸ್ಥಾನದ ಬೀದಿಯಲ್ಲಿ ಹೋಗುವಾಗ ಸುನಿತಾಳ ತಾಯಿಯನ್ನು ಮಾತನಾಡಿಸಿದೆ. ಅವರು ನನ್ನನ್ನು ಕರೆದು ನಾನು ಏಕೆ ಸಮುದಾಯಕ್ಕೆ ಬರುತ್ತೇನೆ, ಏನು ಕೆಲಸ ಮಾಡುತ್ತೇನೆ, ಎಲ್ಲಿಂದ ಬರುತ್ತೇನೆ ಎಂಬುದನ್ನು ವಿಚಾರಿಸಿದರು. ನಾನು ಮಾಡುವ ಕೆಲಸದ ವಿವರಗಳನ್ನು ಅವರ ಜೊತೆ ಹಂಚಿಕೊಂಡೆನು.
ಸುನಿತಾಳ ತಾಯಿ ಎಲ್ಲವನ್ನೂ ಕೇಳಿದ ಮೇಲೆ ಮನೆಗೆ ಬನ್ನಿ ಕಾಪಿ ಕುಡಿದು ಹೋಗುವಿರಂತೆ ಎಂದು ಕರೆದರು. ನಾನು ಇದೇ ಸಮಯವನ್ನು ಕಾಯುತ್ತಿದ್ದೆ ಅವರು ಕರೆದ ತಕ್ಷಣ ಅವರ ಜೊತೆಯಲ್ಲಿ ಅವರ ಮನೆಗೆ ಹೋದೆ. ಒಂದು ಚಿಕ್ಕ ಕಚ್ಚಾ ಮನೆ, ಅಡುಗೆ ಕೋಣೆ, ಮನೆಯ ಅವಶ್ಯಕ ವಸ್ತುಗಳನ್ನು ಜೋಡಿಸಿಟ್ಟಿರುವ ಸ್ಥಳವನ್ನು ರಾತ್ರಿ ಮಲಗಲು ಉಪಯೋಗಿಸುತ್ತಾರೆ, ಸ್ನಾನದ ಮನೆ ಅದರಲ್ಲೇ ಒಂದು ಶೌಚಾಲಯ, ಮುಂದೆ ತೆಂಗಿನ ಗರಿಯಿಂದ ನಿರ್ಮಿಸಿದ ಒಂದು ಚಪ್ಪರ. ಮನೆಯ ಒಳಗಡೆ ಹೋದಾಗ ಚಪ್ಪರದ ಹಿಂಬದಿಯಲ್ಲಿ ಕತ್ತಲ ಮೂಲೆಯಲ್ಲಿ ಒಂದು ಹುಡುಗಿ ಕುಳಿತು ಹೂವನ್ನು ಕಟ್ಟುತ್ತಿದ್ದಳು. ನಾನು ಮನೆಯ ಮುಂದಿನ ಚಪ್ಪರದಲ್ಲಿ ಕುಳಿತು ಆ ಹುಡುಗಿಯನ್ನೇ ಗಮನಿಸುತ್ತಿದ್ದೆ, ಮನೆಯ ಒಳಗೆ ಅಷ್ಟೊಂದು ಬೆಳಕು ಇಲ್ಲದ ಕಾರಣ ಒಳಗಿರುವ ಹುಡುಗಿಯು ಸರಿಯಾಗಿ ಕಾಣುತ್ತಿರಲಿಲ್ಲ. ಸುನಿತಾಳ ತಾಯಿ ಕಾಪಿ ತಯಾರಿಸಿ ತೆಗೆದುಕೊಂಡು ಬಂದು ನನಗೆ ನೀಡಿ ಅವರೂ ನನ್ನ ಪಕ್ಕದಲ್ಲಿಯೇ ಕುಳಿತು ಹಾಗೆ ಮಾತನಾಡುತ್ತಾ ಕಾಪಿ ಕುಡಿದರು.
ಕಾಪಿ ಕುಡಿದ ನಂತರ ಒಳಗೆ ಇರುವ ಹುಡುಗಿ ಯಾರು, ಏನು ಮಾಡುತ್ತಿದ್ದಾರೆ ಎಂಬುದನ್ನು ವಿಚಾರ ಮಾಡಲು ಪ್ರಾರಂಭಿಸಿದೆ. ಆಗ ಅವರು ಸುನಿತಾಳ ಬಗ್ಗೆ ವಿವರಗಳನ್ನು ಹೇಳಲು ಪ್ರಾರಂಭಸಿದರು. ಸುಮಾರು ಒಂದು ಗಂಟೆ ಕಳೆಯಿತು ಒಳಗಡೆ ಕುಳಿತಿರುವ ಹುಡುಗಿ ಹೊರಗಡೆ ಬರಲಿಲ್ಲ, ಒಂದು ಮಾತನ್ನೂ ಆಡಲಿಲ್ಲ, ತನ್ನ ಪಾಡಿಗೆ ತಾನು ಹೂವನ್ನು ಕಟ್ಟುತ್ತಾ ಕುಳಿತಿದ್ದಳು. ತಾಯಿಯ ಬಳಿ ಸುನಿತಾಳ ಬಗ್ಗೆ ವಿಚಾರಿಸಿದಾಗ ನಡೆಯಲು ಬರುವುದಿಲ್ಲ ಎಂಬುದಾಗಿ ಹೇಳಿದರು. ಅವರನ್ನು ಮಾತನಾಡಿಸಬಹುದಾ ಎಂಬುದಾಗಿ ತಾಯಿಯನ್ನು ಕೇಳಿದಾಗ ಮಾತನಾಡಿ ಎಂದು ಹೇಳಿದರು.
ಹೀಗೆ ಸ್ವಲ್ಪ ದಿನ ಕಳೆಯಿತು ಅವರ ಮನೆಗೆ ಆಗಾಗ ಹೋಗಿ ಸುನಿತಾಳ ಅಂಗವಿಕಲತೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಸುನಿತಾಳನ್ನು ಮತ್ತವರ ತಾಯಿಯನ್ನು, ತಂದೆಯನ್ನು ಮಾತನಾಡಿಸುತ್ತಿದ್ದೆ.
ನಾನು ಸುನಿತಾಳನ್ನು ಗುರುತಿಸಿದಾಗ ಅವಳಿಗೆ ೧೭ ವರ್ಷ, ಇವಳಿಗೆ ಸ್ಪೈನಾ ಬೈಫಿಡಾ ಅಂಗವಿಕಲತೆ ಕಾರಣದಿಂದ ಸೊಂಟದ ಕೆಳಭಾಗದ ಬೆಳವಣಿಗೆ ಕುಂಠಿತವಾಗಿದ್ದು ನಡೆಯಲು ಆಗುತ್ತಿರಲಿಲ್ಲ. ಆದರೆ ಕುಳಿತು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಳು. ಸುನಿತಾಳಿಗೆ ನಾಲ್ಕು ಜನ ಅಣ್ಣಂದಿರಿದ್ದರು, ಎಲ್ಲರೂ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾಗಿದ್ದರಿಂದ ಎಲ್ಲರಿಗೂ ಇವಳೆಂದರೆ ತುಂಬಾ ಪ್ರೀತಿ, ಏನೇ ಕೇಳಿದರೂ ತಂದು ಕೊಡುತ್ತಿದ್ದರು, ಆಗಾಗ ಅವಳನ್ನು ರೇಗಿಸುವುದು ಅವಳ ಹತ್ತಿರ ಬಯ್ಯಿಸಿಕೊಳ್ಳುವುದು ಅಣ್ಣಂದರಿಗೆ ತುಂಬಾ ಇಷ್ಟ. ಅಪ್ಪ ಬೆಳಿಗ್ಗೆ ಬೇಗ ಎದ್ದು ಮಾರುಕಟ್ಟೆಗೆ ಹೋಗಿ ಹೂವನ್ನು ತರುತ್ತಿದ್ದರು, ಸುನಿತಾ ಮತ್ತು ಅವರ ತಾಯಿ ಹೂವನ್ನು ಕಟ್ಟುತ್ತಿದ್ದರು ಜೊತೆಗೆ ಏಳ್ಳಿನ ಬತ್ತಿಯನ್ನು ಮಾಡುತ್ತಿದ್ದರು. ಸುನಿತಾ ವಾಸವಾಗಿದ್ದ ಬೀದಿಯ ಕೊನೆಯಲ್ಲಿದ್ದ ದೇವಸ್ಥಾನದ ಮುಂದೆ ತಂದೆ ಹೂ ಹಾಗೂ ಎಳ್ಳಿನ ಬತ್ತಿಯನ್ನು ಮಾರುತ್ತಿದ್ದರು, ತಂದೆ ಎಲ್ಲಾದರೂ ಹೋದರೆ ತಾಯಿ ಹೂವಿನ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು. ಆಗಾಗ ಮೂತ್ರ ವಿಸರ್ಜನೆಗೆ, ಶೌಚಾಲಯಕ್ಕೆ ಹೋಗಬೇಕು ಎನ್ನುವ ಕಾರಣಕ್ಕೆ ಸುನಿತಾ ಸರಿಯಾಗಿ ಊಟವನ್ನು ಮಾಡುತ್ತಿರಲಿಲ್ಲ, ನೀರನ್ನು ಕುಡಿಯುತ್ತಿರಲಿಲ್ಲ. ಆದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿಶ್ರಾಂತಿ ಇಲ್ಲದೆ ಹೂ ಕಟ್ಟುತ್ತಿದ್ದಳು.
ಒಂದು ವಿಪರ್ಯಾಸವೆಂದರೆ ಸುನಿತಾ ಎಂದೂ ಮನೆಯಿಂದ ಹೊರಗಡೆ ಬಂದಿಲ್ಲ. ಅಕ್ಕ-ಪಕ್ಕದ ಮನೆಯವರಿಗೆ ಇವರ ಮನೆಯಲ್ಲಿ ಈ ರೀತಿಯ ಹುಡುಗಿ ಇದ್ದಾಳೆ ಎಂಬುದು ತಿಳಿದಿರಲಿಲ್ಲ. ಸುನಿತಾ ಹುಟ್ಟಿದಂದಿನಿಂದ ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಹುಟ್ಟಿದ ನಂತರದಲ್ಲಿ ಬೆನ್ನಿನ ಮೇಲೆ ಗಂಟು ಇರುವುದು ಗುರುತಿಸಿದ ತಂದೆ-ತಾಯಿ ವೈದ್ಯರನ್ನು ಬೇಟಿ ಮಾಡಿದ್ದರು, ಆಗ ವೈದ್ಯರು ಮಗುವನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಮಗುವಿನ ಪ್ರಾಣಕ್ಕೆ ಅಪಾಯವಿದೆ, ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಿ ಅಂಗವಿಕಲತೆಯ ಕಾರಣದಿಂದ ಮಗು ನಡೆಯುವುದಿಲ್ಲ ಎಂದು ಹೇಳಿದ್ದರಂತೆ. ಅಂದಿನಿಂದ ತಾಯಿಯು ಮಗುವನ್ನು ಬಿಟ್ಟು ಹೋಗಲು ಆಗದೆ ಮಗುವಿನ ಪರಿಸ್ಥಿತಿಯ ಬಗ್ಗೆ ಬೇರೆಯವರ ಜೊತೆ ಹೇಳಲು ಆಗದೆ ಎಲ್ಲಿಯೂ ಹೋಗಿಲ್ಲ. ಸಂಬಂಧಿಕರ ಮನೆಯಲ್ಲಿ ಏನಾದರೂ ಕಾರ್ಯಕ್ರಮಗಳಿದ್ದರೆ ತಂದೆ ಮತ್ತು ಅಣ್ಣಂದಿರು ಹೋಗಿ ಬರುತ್ತಿದ್ದರು. ಮನೆಗೂ ಯಾವುದೇ ಸಂಬಂಧಿಕರನ್ನು ಕರೆಯುತ್ತಿರಲಿಲ್ಲ, ಅಕ್ಕ-ಪಕ್ಕದವರನ್ನೂ ಕರೆಯುತ್ತಿರಲಿಲ್ಲ.
ಸುನಿತಾಳಿಗೆ ಅಂಗವಿಕಲರ ಗುರುತಿನ ಚೀಟಿ ಮಾಡಿಸಲು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ತಂದೆ-ತಾಯಿಯನ್ನು ಒಪ್ಪಿಸಲು ಸುಮಾರು ಮೂರು ತಿಂಗಳುಗಳೇ ಬೇಕಾಯಿತು. ಸುನಿತಾ ಮನೆಯಿಂದ ಮೊದಲ ಬಾರಿ ಹೊರಗಡೆ ಬಂದಿದ್ದೇ ಜಿಲ್ಲಾ ಆಸ್ಪತ್ರೆಗೆ ಹೋದಾಗ. ಆಟೋದಲ್ಲಿ ಅವಳನ್ನು ಕರೆದುಕೊಂಡು ಹೋಗುವಾಗ ಅಕ್ಕ-ಪಕ್ಕದ ಮನೆಯವರು ಅವಳನ್ನು ಆಶ್ಚರ್ಯದಿಂದ ನೋಡುತ್ತಿದ್ದರು, ಕೆಲವರು ಆಟೋದ ಹತ್ತಿರ ಬಂದು ಸುನಿತಾಳ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು, ತಂದೆ-ತಾಯಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ಹಾಗೂ ನನ್ನ ಸಹ ಸಿಬ್ಬಂದಿ ಅವರನ್ನು ನಿಭಾಯಿಸಿದೆವು.
ನಾನು ಸುನಿತಾ ಹಾಗೂ ಅವಳ ತಾಯಿ ಒಂದು ಆಟೋದಲ್ಲಿ ಕುಳಿತಿದ್ದೆವು, ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಸುನಿತಾ ಕುತೋಹಲದಿಂದ ಹೊರಗಡೆ ಇಣುಕಿ ನೋಡುತ್ತಿದ್ದಳು, ಇಷ್ಟೊಂದು ಬೆಳಕು ಎಲ್ಲಿಂದ ಬರಿತ್ತದೆ, ಆಕಾಶದಲ್ಲಿ ಹೊಳೆಯುತ್ತಿರುವುದು ಏನು ಎಂದು ಕೇಳಿದಳು. ಈ ಪ್ರಶ್ನೆಗಳು ನನಗೆ ಆಶ್ಚರ್ಯ ಎನಿಸಿತು. ಸುನಿತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇದನ್ನು ನೀನು ನೋಡಿಲ್ಲವಾ ಎಂದು ಕೇಳಿದಾಗ ಇಲ್ಲ, ಇದೇ ಮೊದಲ ಬಾರಿಗೆ ಇದನ್ನು ನೋಡುತ್ತಿರುವುದು ಎಂದು ಉತ್ತರಿಸಿದಳು, ತಾಯಿಯ ಮುಖವನ್ನು ನೋಡಿದಾಗ ಕಣ್ಣಲ್ಲಿ ನೀರು ತುಂಬಿತ್ತು, ಈ ಘಟನೆ ನಡೆದು ಸುಮಾರು ೧೪ ವರ್ಷಗಳೇ ಕಳೆದಿದ್ದರೂ ಈಗಲೂ ಕಣ್ಣ ಮುಂದೆ ಅಸಹಾಯಕ ತಾಯಿಯ ಮುಖ ಕಣ್ಣೆದುರು ಬರುತ್ತದೆ.
ಸುನಿತಾ ಹುಟ್ಟಿ ೧೭ ವರ್ಷಗಳೇ ಕಳಿದಿದ್ದರೂ ಸೂರ್ಯ ಹುಟ್ಟಿದಾಗ ಬೆಳಗಾಗುತ್ತದೆ, ಮುಳುಗಿದಾಗ ಕತ್ತಲೆಯಾಗುತ್ತದೆ ರಾತ್ರಿಯಲ್ಲಿ ಚಂದ್ರ, ನಕ್ಷತ್ರಗಳು ಬಾನಿನಲ್ಲಿ ಕಾಣಿಸುತ್ತವೆ ಎಂಬುದೇ ತಿಳಿದಿಲ್ಲ ಎಂದರೆ, ಇಂತಹ ಪರಿಸ್ಥಿತಿ ಇರಲು ಸಾಧ್ಯವೇ, ಇಂತಹ ಮಕ್ಕಳೂ ಇದ್ದಾರೆಯೇ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇದು ತಾಯಿ-ತಂದೆಯ ತಪ್ಪು ಎಂದು ಹೇಳಲು ಆಗುವುದಿಲ್ಲ, ಮನೆಯಲ್ಲಿ ಅಂಗವಿಕಲ ಮಗು ಇದೆ ಎಂದರೆ ಸಮಾಜದಲ್ಲಿ ತಮ್ಮನ್ನು ಹೇಗೆ ನೋಡುತ್ತಾರೂ ಅದರಲ್ಲೂ ಅಂಗವಿಕಲ ಹೆಣ್ಣು ಮಗು ಇದೆ ಎಂದರೆ ಮುಗಿದೇ ಹೋಯಿತು, ಹೆತ್ತ ತಂದೆ-ತಾಯಿಯ ದುಃಖವನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ.
ಈಗಿನ ಕಾಲ ಮಾನಕ್ಕೆ ಹೋಲಿಕೆ ಮಾಡಿ ಕೊಂಡರೆ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಸುಧಾರಣೆ ಆಗಿದೆ ಎಂದು ಹೇಳಬಹುದು.
ಆಸ್ಪತ್ರೆಗೆ ಹೋಗಿ ಬಂದ ನಂತರದಲ್ಲಿ ಸುನಿತಾ ಮುಕ್ತವಾಗಿ ನನ್ನ ಜೊತೆ ಮಾತನಾಡಲು ಪ್ರಾರಂಭಿಸಿದಳು. ಪಟ ಪಟ ಅಂತ ಮಾತನಾಡುತ್ತಿದ್ದಳು, ಕೆಲವು ಬಾರಿ ನನ್ನನ್ನೇ ತಮಾಷೆ ಮಾಡುತ್ತಿದ್ದಳು. ಇಡೀ ಮನೆಯ ಎಲ್ಲಾ ಸದಸ್ಯರು ಆತ್ಮೀಯತೆಯಿಂದ ಮಾತನಾಡಲು ಶುರು ಮಾಡಿದರು. ಸುನಿತಾಳ ಅಣ್ಣಂದಿರ ಜೊತೆ ಅವಳ ಅಂಗವಿಕಲತೆ ಹಾಗೂ ಅವಕಾಶಗಳು, ಕುಟುಂಬದ ಸದಸ್ಯರ ಪಾತ್ರ ಮತ್ತು ಜವಾಬ್ಧಾರಿಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಿದೆ. ಇದಾದ ನಂತರ ಯಾವುದೋ ಕತ್ತಲ ಮೂಲೆಯಲ್ಲಿ ಕುಳಿತು ಹೂವನ್ನು ಕಟ್ಟುತ್ತಿದ್ದ ಸುನಿತಾ ಮನೆಯ ಮುಂದಿನ ಚಪ್ಪರದ ಕೆಳಗೆ ಕುಳಿತು ಕೊಳ್ಳಲು ಪ್ರಾರಂಭಿಸಿದಳು, ಆಗಾಗ ಅದೇ ಸಮುದಾಯದ ಕೆಲವು ಅಂಗವಿಕಲ ಮಕ್ಕಳನ್ನು ಸುನಿತಾಳ ಮನೆಗೆ ಕರೆದುಕೊಂಡು ಬಂದು ಮಾತನಾಡಲು ಅವಕಾಶ ಮಾಡಿಕೊಟ್ಟೆ. ಇದಾದ ನಂತರದಲ್ಲಿ ಅಕ್ಕ-ಪಕ್ಕದ ಮನೆಯವರು ಸುನಿತಾಳ ಮನೆಯನ್ನು ಹಾದು ಹೋಗುವಾಗ ಅವಳನ್ನು ಮಾತನಾಡಿಸಲು ಶುರು ಮಾಡಿದರು. ಇದರಿಂದ ಸುನಿತಾಳಿಗೆ ತುಂಬಾ ಸಂತೋಷವಾಗುತ್ತಿತ್ತು.
ಸುನಿತಾಳಿಗೆ ವ್ಹೀಲ್ ಚೇರ್ ಕೂಡ ಕೊಡಿಸಿದೆ, ತಿಂಗಳಿಗೊಮ್ಮೆ ಅಂಗವಿಕಲ ವ್ಯಕ್ತಿಗಳ ಹಾಗೂ ಪೋಷಕರ ಸಭೆಗೆ ವ್ಹೀಲ್ ಚೇರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದೆವು, ಕೆಲವೊಮ್ಮೆ ತಾಯಿ ಕರೆದುಕೊಂಡು ಬರುತ್ತಿದ್ದರು. ಹೀಗೆ ಹೊರಗಡೆ ಬರುವುದೆಂದರೆ ಸುನಿತಾಳಿಗೆ ಎಲ್ಲಿಲ್ಲದ ಸಂತೋಷ. ಸಭೆ ಮುಗಿದು ಒಂದೆರಡು ಗಂಟೆಯಾದರೂ ಇತರೆ ಅಂಗವಿಕಲ ಹೆಣ್ಣು ಮಕ್ಕಳು ಹಾಗೂ ಚಿಕ್ಕ ಮಕ್ಕಳ ಜೊತೆ ಮಾತನಾಡುತ್ತಾ ಕಾಲ ಕಳೆಯಿತ್ತಿದ್ದಳು, ಇದನ್ನು ನೋಡಿ ತಂದೆ-ತಾಯಿ ಹಾಗೂ ಅಣ್ಣಂದಿರು ಸಂತೋಷಪಡುತ್ತಿದ್ದರು.
ಇದು ಸುನಿತಾಳ ಕಥೆ ಮಾತ್ರವಲ್ಲ, ಇಂತಹ ಸಾವಿರಾರು ಸುನಿತಾಳ ಜೀವನದ ಪ್ರತಿಬಿಂಭ. ಇಲ್ಲಿ ಯಾರ ತಪ್ಪು ಎಂದು ಹುಡುಕುವ ಬದಲು ಅದರಿಂದ ಹೊರತರುವ ಪ್ರಯತ್ನಗಳಾಗಬೇಕು, ಸಮುದಾಯದಲ್ಲಿ ಸಾಕಷ್ಠು ಅರಿವು ಕಾರ್ಯಕ್ರಮಗಳಾಗಬೇಕು. ಸಮುದಾಯದಲ್ಲಿ ಅಂಗವಿಕಲರನ್ನು ಅವರ ನ್ಯೂನ್ಯತೆಯನ್ನು ನೋಡುವ ಬದಲು ಅವರ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಸೂಕ್ಷ್ಮ ಮನಸ್ಸುಗಳು ಬೇಕು. ಇದು ಒಂದೆರಡು ದಿನದಲ್ಲಿ ಆಗುವ ಕೆಲಸವಲ್ಲ, ಧೀರ್ಘ ಸಮಯ ಮತ್ತು ನಿರಂತರ ಶ್ರಮ ಬೇಕಾಗುತ್ತದೆ.
ಸಮುದಾಯದ ಕೆಲಸ ಬಿಟ್ಟ ನಂತರದಲ್ಲಿ ಸುನಿತಾಳ ಕುಟುಂಬದ ಸಂಪರ್ಕವಿಲ್ಲ. ಆದರೆ ಸುನಿತಾಳ ಕುಟುಂಬ ಈಗ ಬೇರೆ ಕಡೆ ಸ್ವಂತ ಮನೆಯನ್ನು ಖರೀದಿಸಿದ್ದು, ತಂದೆ-ತಾಯಿ ಈಗಲೂ ಹೂವನ್ನು ಮಾರುವ ಕೆಲಸ ಮಾಡುತ್ತಿದ್ದಾರೆ, ಸುನಿತಾ ಹೂ ಕಟ್ಟುತ್ತಾಳೆ ಎಂದು ಅದೇ ಸಮುದಾಯದ ಮತ್ತೊಬ್ಬ ಅಂಗವಿಕಲ ವ್ಯಕ್ತಿಯ ಮೂಲಕ ತಿಳಿಯಿತು. ಸುನಿತಾಳ ಜೊತೆಗೆ ಕೆಲಸ ಮಾಡಿದ ಅನುಭವ ಮರೆಯಲು ಸಾಧ್ಯವೇ ಇಲ್ಲ.
ಸುನಿತಾಳ ಜೊತೆ ಸುಮಾರು ೪ ವರ್ಷ ಕೆಲಸ ಮಾಡಿದೆ, ಎಂದೂ ಕೂಡ ದುಃಖದಿಂದ ಇರುವುದನ್ನು, ಇಂತಹುದೇ ಬೇಕು ಎನ್ನುವ ಹಠವನ್ನಾಗಲಿ, ಹೀಗೆ ಇರಬೇಕು, ಇದನ್ನು ತಿನ್ನಬೇಕು ಎನ್ನುವ ಆಸೆಯನ್ನಾಗಲಿ ನಾನು ನೋಡಲೇ ಇಲ್ಲ, ಸದಾ ನಗು ನಗುತ್ತಾ, ಪಟ ಪಟ ಅಂತ ಮಾತನಾಡುತ್ತಾ, ಅಣ್ಣಂದಿರನ್ನು ತಮಾಷೆ ಮಾಡುತ್ತಾ ತನ್ನ ನೋವನ್ನು ಮರೆಯುತ್ತಿದ್ದಳು. ಕೆಲವು ಬಾರಿ ಎಲ್ಲವೂ ಇದ್ದರೂ ಇನ್ನೇನೋ ಬೇಕು ಎಂದು ಬಯಸುವ ಹುಚ್ಚು ಮನಸ್ಸುಳ್ಳ ನಾವೆಲ್ಲರೂ ಇಂತಹವರನ್ನು ನೋಡಿ ಕಲಿಯುವುದು ಸಾಕಷ್ಟಿದೆ.
–ರಶ್ಮಿ ಎಂ ಟಿ