ಬೆವರಿಳಿಸೋ ಬಿಸಿಲು
ಅಯ್ಯೋ….ಎಂಥಹ ಬಿಸಿಲು ಕಾಣಿ ಎನ್ನುವ ಮನುಜ
ಮರೆತೇ ಬಿಟ್ಟ ತಾನು ಮಾಡಿದ ಕರ್ಮವ
ಬೆಳಗೆದ್ದು ಅಂಗಳ ದಾಟಿದರೆ ಸಾಕು
ಸುರಿವುದು ಬೆವರಿನ ಧಾರಾಕಾರ ಮಳೆ.
ಮೊಳಕೆಯೊಡೆದು ಬೆಳೆದ ಮರವ ಕಡಿದು
ಕಟ್ಟಿ ಬಿಟ್ಟ ಕಟ್ಟಡವ ಬೆವರ ಸುರಿದು
ಇಂದು ಕಟ್ಟಡದ ಕೆಳಗೆ ನಿಂತು ಅಂಬರವ ನೋಡಿ
ಎನ್ನುವ ಅಯ್ಯೋ…ಎಂಥಹ ಬಿಸಿಲು ಕಾಣಿ.
ಕಾನನ ಕಡಿದು ನೆಲಸಮಗೊಳಿಸಿ
ಕಟ್ಟಿದ ಕಟ್ಟಡದಲೊಂದು ಗಿಡವನು ನೆಟ್ಟು
ಮರಗಳ ಕಡಿದು ತಂಪೆರೆವ ಗಾಳಿಯ ಕೆಡಿಸಿ
ಪೊದೆ ಮರೆಯಲಿ ನಿಂತೆನ್ನುವ *ಅಯ್ಯೋ ಎಂಥಹ ಬಿಸಿಲು ಕಾಣಿ..
–ಹರ್ಷಿತ.ಎಸ್
ನನ್ನಯ ಮುದ್ದು ಕುಸುಮಗಳು
ಶಾಲೆ ಪ್ರಾರಂಭವಾಗುತ್ತಿದೆ ಮಕ್ಕಳೇ
ತಪ್ಪದೇ ಶಾಲೆಗೆ ಬನ್ನಿರಿ ಬನ್ನಿರಿ ಬನ್ನಿ
ನಿಮಗಾಗಿ ಕಾಯುತಿರುವೆವು ಶಾಲೆಗೆ ಬನ್ನಿ ಬನ್ನಿ ಬನ್ನಿರಿ ಬನ್ನಿರಿ.. ಮಕ್ಕಳೇ
ನನ್ನಯ ಮುದ್ದು ಕುಸುಮಗಳೇ
ನೀವು ಇಷ್ಟು ದಿನ ನಿಮ್ಮ ಮನೆ ಮಂದಿಗೆ ನೀಡಿದ ಕೀಟಲೆಗಳಿಗೆ ಪೂರ್ಣವಿರಾಮ ಹಾಕಿ
ನಲಿಯುತ್ತಾ ಕಲಿಯುವ ಬನ್ನಿ ಬನ್ನಿ
ಬನ್ನಿರಿ ನನ್ನಯ ಮುದ್ದು ಕುಸುಮಗಳೇ ಬನ್ನಿರಿ
ನೀವಿಲ್ಲದ ಶಾಲೆ
ನಿಮ್ಮ ಗರಾಟಿ ಕೇಳದ ಕೊಠಡಿ
ನಿಮ್ಮ ಶಬ್ದ ಕೇಳಿದ ಶಿಕ್ಷಕರು
ಹಾತೊರೆದು ಕಾಯುತ್ತಿರುವರು ನಿಮಗಾಗಿ ಬನ್ನಿರಿ..
ನನ್ನಯ ಮುದ್ದು ಕುಸುಮಗಳೇ
ನಿಮ್ಮ ಪಾದ ಸ್ಪರ್ಶಿಸದ
ನಮ್ಮಯ ಶಾಲಾ ವರಂಡ
ಖಾಲಿ ಖಾಲಿಯಾಗಿ
ಬಿಕೋ ಎನ್ನುತ್ತಿದೆ
ಬನ್ನಿರಿ ಬನ್ನಿರಿ ಮಕ್ಕಳೇ
ನಮ್ಮಯ ಶಾಲೆಗೆ ಬನ್ನಿರಿ
ನನ್ನಯ ಮುದ್ದು ಕುಸುಮಗಳೇ
ಮುದ್ದು ಮುದ್ದಾದ ನಿಮ್ಮ ಮಾತು
ಕೇಳಲು ಕದ್ದು ಮುಚ್ಚಿ ಕಾಯುತ್ತಿರುವುದು
ನಮ್ಮ ಶಾಲೆಯ ಕಿಟಕಿ ಬಾಗಿಲು
ಕಪ್ಪುಹಲಗೆಗಳೆಲ್ಲ ಬನ್ನಿರಿ ಬನ್ನಿರಿ
ನನ್ನಯ ಮುದ್ದು ಕುಸುಮಗಳೇ
ನೀವು ಕೂರುವ ಬೆಂಚು ದೂಳು ತುಂಬಿ ಬೋಳು ಬೋಳಾಗಿ
ನಿಮ್ಮಯ ಬರುವಿಕೆಗೆ
ಕನ್ನಡ ರೆಪ್ಪೆಯ ಬಡಿಯದೆ ಕಾಯುತ್ತಿರುವುದು
ಬನ್ನಿರಿ ಬನ್ನಿರಿ ನನ್ನಯ ಮುದ್ದು ಕುಸುಮಗಳೇ
ಶಾಲೆ ತುಂಬಾ ಮಕ್ಕಳಿದ್ದರೆ ಚಂದ
ಮಕ್ಕಳ ಬಾಯಿ ತುಂಬಾ ಅಕ್ಷರ ಇದ್ದರೆ ಅಂದ
ಶಿಕ್ಷಕರಿಗೆ ತರಗತಿ ತುಂಬಾ ಮಕ್ಕಳಿದ್ದರೆ ಬಲು ಆನಂದ
ಮಕ್ಕಳಿಗೆ ಕಲಿಸುವುದು ಎಂದರೆ ಶಿಕ್ಷಕರಿಗೆ ಮಹಾದಾನಂದ
ನನ್ನಯ ಮುದ್ದು ಕುಸುಮಗಳೇ
–ಚಿನ್ನಸ್ವಾಮಿ ಎಸ್, ಹೆಚ್ ಮೂಕಹಳ್ಳಿ
ಎಲೆಯ ಮರೆಯಲಿ ಕೋಗಿಲೆ
ಯಾವ ಹಾಡ ಹಾಡುತಲಿದೆ
ಎಲೆಯ ಮರೆಯಲಿ ಕೋಗಿಲೆ.
ಯಾವ ಭಾವವು ಮಿಡಿಯುತಲಿದೆ
ಎದೆಯ ಪದರದಿ ಈಗಲೇ.
ಎಳೆಯ ಚಿಗುರ ಮುಕ್ಕಿ ಮುಕ್ಕಿ
ಉಕ್ಕಿ ಬಂದಿದೆ ಹೊಸರಾಗ.
ಮಳೆಯ ತೆರದಿ ಸುರಿದ ನೋವಿಗೆ
ಬಿಕ್ಕಿ ಅಳುತಿದೆ ಅನುರಾಗ.
ಮರದ ಮೇಲೆ ಬನದ ತುಂಬಾ
ಹಾಡಿ ಹಾರಿದೆ ನಲಿಯುತ.
ಮನದ ಮೂಲೆಯ ಕದವ ತೆರೆಯದೆ
ಮುದುಡಿ ಬಾಡಿದೆ ಕನಲುತ.
ಎತ್ತಣ ಮಾಮರದಿ ಬಂದು ಕೂರಲು
ತಂದು ಬೆಸೆಯಿತೆ ಬಂಧವ.
ಸುತ್ತ ಇರುವ ಬಂಧಗಳಿಂದಲೇ
ಹೊಂದಬೇಕಿದೆ ಆನಂದವ.
–ಸರೋಜ ಪ್ರಶಾಂತಸ್ವಾಮಿ
ಅಂತರಾತ್ಮದ ಚಿಂತೆ
ಮನಸು ಮಸಣಕೇ ಜಾರುತಿಹುದು
ಅಂಗೈಯಲ್ಲಿ ಜಗವ ಕಂಡು
ಬುದ್ಧ ಬಸವರಿಲ್ಲದ ಘೋರಿಯ ನೆರಳಿಗೆ
ಯೋಗ ಭೋಗವ ಕಾಣದೆ ಸಾಗುತಿದೆ
ಬಲಿದ ಬೆಂದ ಜೀವವ..
ಹರಿದ ಧನ ಊರು ಸುಡುತ್ತಿಹುದು
ಜಾತಿ ಗಂಟಿದ ಜನಕ್ಕೆ ಬೆಂದು
ಪಂಚಮರಿಲ್ಲದ ನ್ಯಾಯದ ಬೇಲಿ ಹಾರಿ
ಸತ್ಯ ಶಾಂತಿ ಮೆರೆಸದ ನಾಳಿನ ದಿನಗಳು
ಕಳೆತಿಹವು ಎಂದಿನಂತೆ ಹಾಗೆ ಹಾಗೆ..
ಮಮತೆಯ ಮಡಿಲ ಬತ್ತುತಿಹುದು
ಕರುಳಿಲ್ಲದ ಕುಡಿಯಲ್ಲಿ ಮಿಂದು
ಸತ್ವವಿರದ ಮನೆಯ ಮಾಳಿಗೆಯಲಿ
ನಿಶ್ಚಯ ಮಾಡದೇ ಬಾಳು ಸಾಗಿದೆ
ಅಂತರಾತ್ಮದ ಚಿಂತೆಯಲಿ..
–ಅಲ್ಲಾಬಕ್ಷ ನರಗುಂದ

ನವಿಲುಗಳ ಕನಸು
ಎಲ್ಲಿ ನೋಡಿದರಲ್ಲಲ್ಲಿ ನವಿಲುಗಳ ಕನಸು
ಬಣ್ಣಬಣ್ಣದ ಕಣ್ಣಾಗಿ ಅರಳಿ ನಿಂತ ಸೊಗಸು
ಕಾನನ ಮಲೆ ಹೊಲ ತೋಟಗಳಲಿ ಮೇವು
ಹರಸಿ ನಲಿದಾಡುವ ವರಸೆಯ ಬೇಟೆಕಾವು
ನಿಂತ ನೆಲವೆ ಆಧಾರ ಕಾಡುಮೇದೆ ಭದ್ರ
ಯಾವ ಅಂಕುಶದ ಅಂಕುರವು ಇಲ್ಲದ ಬದುಕು
ನಿರಂಕುಶ ಮತಿಗಳ ಮನಸ್ಸಿನಂತೆ ಆತಂಕವಿಲ್ಲ
ಬದುಕುವ ಜೀವಗಳಿಗೆ ಜೀವನೋತ್ಸಾಹ
ಇಳೆ ತಂಪಾಯಿತು ಮಳೆಮೂಡಿ ಸುರಿದು
ಕಾಣುವ ಸತ್ಯ ತನ್ನೆದುರು ನಿಂತು ಲೀಲೆಯೊಳು
ಪಂಚಭೂತ ವಿಕಾಸಶೀಲ ಅರಳಿ ಸೃಜನೆಯೊಳು
ಹಸಿರು ಹುಲ್ಲು ಗರಿಕೆ ಚಿಗುರಿ ಬೆಳೆದು
ಪಶುಪಕ್ಷಿಗಳ ಕಲರವ ಇಂಚರ ಕೂಗಿತು
ಮುದ್ದಿನ ಕರು ತಾಯಿ ಕೆಚ್ಚಲಿಗೆ ಬಾಯಿಟ್ಟು
ಹಾಲು ಕುಡಿದಂತೆ ಯೋಗಿಗಳು ರಸಪಾನ
ಕರೆಯಿತು ದಿವ್ಯತೆಯ ಕಲ್ಪನೆ ಕೊನರಿದ ಎಸ್ಛಟಿಕ್
ಪ್ರಜ್ಞೆ ಔಚಿತ್ಯ ಲೋಕಾನುಭವ ಸ್ವಯಂ ಸೇವಾನುರಾಗ
ಪೃಥ್ವಿ ಆಕಾಶ ಜಲ ವಾಯು ಅಗ್ನಿಗಳಲ್ಲಿ ಬೆರೆತು
ಜೀವ ಮಿಳಿತವಾದ ಶ್ರಮ ಜೀವಿಗಳ ಕಾಯಕ
ಹಸಿರ ಉಸಿರಧಾರೆಯಾಗಿ ಹರಿಯಿತು ಅನುರಾಗ
ಒಂದೊಂದು ಸತ್ವಗಳು ಒಂದೊಂದು ತರ ಬೆರೆತು
ತನ್ನ ಕ್ರಿಯೆಯಂತೆ ಯಥಾವತ್ತಿನ ಚಟುವಟಿಕೆ ಕಲೆತು
ಇಳೆಯ ಮೇಲಣ ಕೊಂಡಿಗಳಂತೆ ಬಲಕ್ಕೆ ಬಲವಾದ ಆಕರ್ಷಕ
ಸೃಜನಶೀಲತೆ ಬೆಳವಣಿಗೆಯ ಪೂರಕ ಉತ್ಕರ್ಷಕ.
–ಸಂತೋಷ್ ಟಿ