ಉಪದೇಶಿ ರಾಯಪ್ಪ ಮೆನೆಜಸ್: ಎಲ್.ಚಿನ್ನಪ್ಪ, ಬೆಂಗಳೂರು

೨೦ ವರ್ಷಗಳಷ್ಟು ಕಾಲ ಯಲಹಂಕ ಉಪನಗರದಲ್ಲಿ ನೆಲೆಸಿದ್ದ ನಾವು ೨೦೦೩ರಲ್ಲಿ ಯಲಹಂಕ ಉಪನಗರ ಬಿಟ್ಟು ಬಂದೆವು. ಅಲ್ಲಿ ಅತ್ಯಂತ ಆತ್ಮೀಯರಾಗಿದ್ದ ಮಾಜಿ ಉಪಪೇಶಿ ರಾಯಪ್ಪ ಮನೆಜಸ್‌ರವರು ಸುಮಾರು ೮-೧೦ ವರ್ಷಗಳ ಹಿಂದೆಯೇ ತೀರಿಕೊಂಡರೆಂಬ ಸುದ್ದಿ ಇತ್ತೀಚೆಗೆ ತಿಳಿದು ನನಗೆ ದುಃಖವಾಯಿತು. ದುಃಖ ಅಥವಾ ಸಂತೋಷದ ಸಂಗತಿ ತಿಳಿದಾಗ ಹಳೆಯ ನೆನಪುಗಳು ಜೀವ ತಾಳುತ್ತವೆ. ರಾಯಪ್ಪ ಮೆನೆಜಸ್ ಒಡನಾಟದ ಸುಮಾರು ೩೦-೩೫ ವರ್ಷಗಳಷ್ಟು ಹಳೆಯ ನೆನಪುಗಳು ನನ್ನಲ್ಲಿ ಪುನಃ ಗರಿಗೆದರಿದವು.

ಉಪದೇಶಿ ರಾಯಪ್ಪ ಮೆನೆಜಸ್‌ರದು ಎತ್ತರದಲ್ಲಿ ಗಿಡ್ಡಗಿದ್ದರೂ, ದ್ವನಿಯಲ್ಲಿ ಕಂಚಿನ ಕಂಠ. ಅವರ ಬಾಯಿಂದ ಹೊರಡುತ್ತಿದ್ದ ಮಾತುಗಳು ಹರಳು ಹುರಿದಷ್ಟು ಕಡ್ಡಿ ತುಂಡಾದಷ್ಟು ಕರಾರುವಾಕ್ಕಾಗಿರುತ್ತಿದ್ದವು. ಅದೂ ಅಲ್ಲದೆ ಅವರ ಪದ ಶಬ್ದಗಳ ಉಚ್ಛಾರಣೆ ಸ್ಪಟಿಕದಷ್ಟು ಸ್ಪಷ್ಟ. ವಯಸ್ಸು ೬೮ ದಾಟಿದ್ದರೂ ಅವರದು ಬತ್ತದ ಉತ್ಸಾಹ, ಕುಂದದ ಲವ ಲವಿಕೆ. ಅದು ಯುವಕರನ್ನು, ಆಲಸಿಗಳನ್ನು ನಾಚಿಸುವಂತಿತ್ತು. ಅಂಥಹ ಮುಪ್ಪಿನಲ್ಲಿಯೂ ಅವರಲ್ಲಿದ್ದ ಅಧಮ್ಯ ಉತ್ಸಾಹ ಅಪರೂಪದ್ದೆ. ಆದರೆ ಇಷ್ಟೆಲ್ಲ ವಿಶೇಷ ಗುಣಾವಶೇಷಗಳು ಅವರಲ್ಲಿದ್ದರೂ, ಭಗವಂತ ಅವರಲ್ಲೊಂದು ಕೊರತೆ ಇಟ್ಟಿದ್ದ. ಅವರಿಗೆ ಒಂದು ಕಣ್ಣಿನ ದೃಷ್ಟಿಯೇ ಇರಲಿಲ್ಲ. ಹುಟ್ಟಿನಿಂದಲೇ ದೃಷ್ಟಿ ಹೀನರಾಗಿದ್ದರು. ಅವರು ಒಂದೇ ಕಣ್ಣಿನಲ್ಲಿ ತಕ್ಕ ಮಟ್ಟಿಗೆ ವಿದ್ಯಾಭ್ಯಾಸವನ್ನು ಪೂರೈಸಿ ಜೊತೆಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುವಷ್ಟು ಪರಿಜ್ಞಾನವನ್ನೂ ಬೆಳಸಿಕೊಂಡಿದ್ದರು. ನನಗೆ ಅವರ ಪರಿಚಯವಾಗಿದ್ದು ೧೯೯೦ರ ದಶಕದಲ್ಲಿ. ಆಗ ಅಲ್ಲಿ ಚರ್ಚ್ ಇರಲಿಲ್ಲ. ಅಲ್ಲಿನ ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆ ವಸತಿಗೃಹಗಳ ಮಧ್ಯೆ ಇದ್ದ (Railway Wheel & Axle Plant) ಶಾಲೆಯೊಂದರಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ೭.೦೦ ಗಂಟೆಗೆ ಇಂಗ್ಲಿಷ್ ಬಲಿಪೂಜೆ ಜರುಗುತ್ತಿತ್ತು. ಗುರುಗಳು ಮಲ್ಲೇಶ್ವರಂನಿಂದ ಬಂದು ಅಲ್ಲಿ ಬಲಿಪೂಜೆ ಅರ್ಪಿಸುತ್ತಿದ್ದರು. ಆಗ ಬಲಿಪೂಜೆಯಲ್ಲಿ ಭಾಗವಹಿಸಲು ನಾವು ಆ ಶಾಲೆಗೆ ಹೋಗುತ್ತಿದೆವು. ಆಗಲೇ ನಮಗೆ ರಾಯಪ್ಪ ಮೆನೆಜಸ್‌ರ ಪರಿಚಯವಾಗಿದ್ದು. ಇಂಗ್ಲಿಷ್ ಬಲಿಪೂಜೆಯಲ್ಲಿ ಆಗ ಒಂದು ಕನ್ನಡ ವಾಚನ ಹಾಗು ಒಂದೆರಡು ಕನ್ನಡ ಹಾಡುಗಳನ್ನು ಮಾತ್ರ ಹಾಡುತ್ತಿದ್ದರು. ಕನ್ನಡದಲ್ಲಿ ಬೈಬಲ್ ವಾಚನ ಹಾಗು ಕನ್ನಡದ ಹಾಡುಗಳನ್ನು ರಾಯಪ್ಪ ಮನೆಜಸ್‌ರೇ ತಮ್ಮ ಮುಂದಾಳತ್ವದಲ್ಲಿ ನಡೆಸಿಕೊಡುತ್ತಿದ್ದರು. ಒಮ್ಮೊಮ್ಮೆ ಕನ್ನಡದಲ್ಲಿ ವಿಶ್ವಾಸಿಗಳ ಪ್ರಾರ್ಥನೆಯನ್ನು ಸಹ ಅವರೇ ಹೇಳುತ್ತಿದ್ದರು. ನಂತರದ ದಿನಗಳಲ್ಲಿ ಬೈಬಲ್ ವಾಚನ ಓದುವುದರಲ್ಲಿ ಮತ್ತು ಹಾಡುಗಳಿಗೆ ರಾಯಪ್ಪರೊಡನೆ ಧ್ವನಿಗೂಡಿಸುವಲ್ಲಿ ನನ್ನ ಪತ್ನಿಯೂ ಅವರಿಗೆ ಜತೆಯಾದಳು. ಬಲಿಪೂಜೆ ಮುಗಿದ ಮೇಲೆ ಗುರುಗಳು ಇಂಗ್ಲಿಷ್‌ನಲ್ಲಿ ಪ್ರಕಟಿಸುತ್ತಿದ್ದ ಪ್ರಕಟಣೆಯನ್ನು ರಾಯಪ್ಪ ಮೆನೆಜಸ್ ಕನ್ನಡದಲ್ಲಿ ಪ್ರಕಟಿಸುತ್ತಿದ್ದರು. ರಾಯಪ್ಪನವರಿಗೆ ಮೈಕ್ ಮುಂದೆ ನಿಂತು ಮಾತನಾಡುವುದೆಂದರೆ, ಎಲ್ಲಿಲ್ಲದ ಉತ್ಸಾಹ. ಸುಮಾರು ೩೦ ವರ್ಷಗಳಷ್ಟು ಕಾಲ ಅವರು ಕೊಡಗಿನ ವಿರಾಜಪೇಟೆಯ ದೇವಾಲಯವೊಂದರಲ್ಲಿ ಉಪದೇಶಿಯಾಗಿ ಕೆಲಸ ಮಾಡಿದ್ದರಂತೆ. ಅವರಿಗೆ ಪತ್ನಿ ಇರಲಿಲ್ಲ, ಅವರು ಯಾವಾಗ ತೀರಿಕೊಂಡಿದ್ದರೋ ನಮಗೆ ಗೊತ್ತಿಲ್ಲ. ಆದರೆ, ಅವರಿಗೆ ಒಬ್ಬ ಮಗ ಇದ್ದ. ಮಗನ ವಿದ್ಯಾಭ್ಯಾಸ ಮುಗಿದ ಮೇಲೆ ಆತನಿಗೆ ಬೆಂಗಳೂರಿನ ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆಯಲ್ಲಿ ಉದ್ಯೋಗ ಸಿಕ್ಕಿತ್ತು. ನಂತರ ಅವರ ಕುಟುಂಬವು ಇಲ್ಲಿಗೆ ಬಂದು ನೆಲೆಸಿತ್ತು. ಕ್ರಮೇಣ ನಮಗೆ ಅವರ ಮಗ ಮತ್ತು ಸೊಸೆÀಯ ಪರಿಚಯವಾಗಿ ನಮ್ಮಲ್ಲಿ ಆತ್ಮೀಯತೆ ಬೆಳೆಯಿತು. ಮಗ-ಸೊಸೆ ಅವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು.

೧೯೯೨ರಲ್ಲಿ ಯಲಹಂಕ ಉಪನಗರದಲ್ಲಿ ಹೊಸದಾಗಿ ಚರ್ಚ್ ನಿರ್ಮಾಣಗೊಂಡಿತು. ಭಕ್ತಾದಿಗಳೆಲ್ಲರೂ ಹೊಸ ಚರ್ಚ್ಗೆ ಬರತೊಡಗಿದರು. ಅದು ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆಯಿಂದ ಕೇವಲ ಅರ್ಧ ಕಿಮೀ. ಅಂತರದಲ್ಲಿತ್ತು. ಕ್ರಮೇಣ ಯಲಹಂಕ ಉಪನಗರದ ಆಸು ಪಾಸು ಪ್ರದೇಶಗಳಲ್ಲಿ ನೆಲೆಸಿದ್ದ ಕ್ರೆöÊಸ್ತರೆಲ್ಲರೂ ಬಲಿಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಅಲ್ಲಿ ಬಲಿಪೂಜೆ ಅರ್ಪಿಸಲು ಬರುತ್ತಿದ್ದ ಗುರುಗಳು ಎಂ.ಎಸ್.ಎಫ್.ಎಸ್ ಸಭೆಯವರು. ಅವರಿಗೆ ಮಲೆಯಾಳಂ ಮತ್ತು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆ ಬರುತ್ತಿರಲಿಲ್ಲ. ಅಲ್ಲಿ ಚರ್ಚ್ಗೆ ಬರುತ್ತಿದ್ದ ಭಕ್ತಾಧಿಗಳಲ್ಲಿ ನಾನಾ ಭಾಷೆಗಳನ್ನು ಮಾತನಾಡುವವರಿದ್ದರು. ಮಲಯಾಳಂ, ತಮಿಳು, ಕೊಂಕಣಿ, ತೆಲುಗು, ಕನ್ನಡ ಮತ್ತು ಉತ್ತರ ಭಾರತದ ಹಿಂದಿ ಮಾತನಾಡುವವರೂ ಸಹ ಇದ್ದರು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ಭಾಷೆ ಇಂಗ್ಲಿಷ್ ಒಂದೇ ಎಂದು ಅಲ್ಲಿ ಇಂಗ್ಲಿಷ್ ಪೂಜೆಯೇ ಜರುಗುತಿತ್ತು. ಅಲ್ಲಿ ಕನ್ನಡ ಕ್ರೆöÊಸ್ತರು ಬೆರಳೆಣಿಕೆಯಷ್ಟು ಮಾತ್ರ ನೆಲೆಸಿದ್ದರು. ಹೊಸದಾಗಿ ಚರ್ಚ್ ನಿರ್ಮಾಣಗೊಂಡ ಮೇಲೆ ಇಂಗ್ಲಿಷ್ ಬಲಿಪೂಜೆಯಲ್ಲಿ ರಾಯಪ್ಪ ಮೆನೆಜಸ್ ಮತ್ತು ನನ್ನ ಪತ್ನಿ ಕನ್ನಡ ವಾಚನಗಳನ್ನು ಓದುವುದನ್ನು ಮುಂದುವರೆಸಿದರು. ರಾಯಪ್ಪ ಮೆನೆಜಸ್ ಮೂಲತಃ ಮಂಗಳೂರು ಕಥೋಲಿಕ ಕೊಂಕಣಿ ಕ್ರೈಸ್ತ ಮನೆತನಕ್ಕೆ ಸೇರಿದವರು.

೧೭೦೦ನೇ ಇಸವಿಯಲ್ಲಿ ಗೋವಾದ ಆಳ್ವಿಕೆಯಲ್ಲಿದ್ದ ಪೋರ್ಚುಗೀಸರು ಸ್ಥಳೀಯ ಗೋವಾ ಕ್ರೈಸ್ತರ ಮೇಲೆ ಧರ್ಮದಾಚರಣೆಯ ವಿರುದ್ಧ ಹೊಸದಾಗಿ ಹೇರಿದ ತನಿಖೆ (Inquisition)ಗೆ ಬೇಸತ್ತು ಅವರು ಗೋವಾ ತೊರೆದು ಮಂಗಳೂರಿಗೆ ಬಂದು ನೆಲೆಸಿದ್ದರು. ನಂತರ ಅಲ್ಲಿ ಅವರ ಸಂತತಿ ಬೆಳೆದು ವೃದ್ಧಿಸಿತ್ತು. ಕೃಷಿ ಕಾಯಕದಲ್ಲಿ ತೊಡಗಿದ್ದ ಅವರು ಮುಂದೆ ಅವರು ತಮ್ಮನ್ನು ಮಂಗಳೂರು ಕಥೋಲಿಕ ಕ್ರೈಸ್ತರು ಎಂದು ಗುರುತಿಸಿಕೊಂಡರೆ ಹೊರತು, ತಮ್ಮ ಮೂಲ ಗೋವಾ ಮನೆತನದ ಬಗ್ಗೆ ಅವರು ಎಂದೂ ಪ್ರಸ್ಥಾಪಿಸಲಿಲ್ಲ. ಅವರು ಮಂಗಳೂರಿಗೆ ಬಂದು ನೆಲೆ ನಿಂತ ಮೇಲೆ, ತಮ್ಮ ಧಾರ್ಮಿಕ ಆಚರಣೆಗಾಗಿ ಅಲ್ಲಿ ದೇವಾಲಯಗಳನ್ನು ನಿರ್ಮಿಸಿಕೊಂಡಿದ್ದರು. ೧೭೮೨ರಲ್ಲಿ ಟಿಪ್ಪು ಸುಲ್ತಾನ್ ಮೈಸೂರು ರಾಜ್ಯದ ಅಧಿಪತಿಯಾದ. ಅವನು ಕರಾವಳಿ ಕಥೋಲಿಕ ಕ್ರೈಸ್ತರ ಬಗ್ಗೆ ಹೊಂದಿದ್ದ ಯಾವುದೋ ಪೂರ್ವಾಗ್ರಹ ಪೀಡಿತ ದ್ವೇಷದಿಂದ ಅವರ ಮೇಲೆ ಹಗೆತನ ಕಾರತೊಡಗಿದ. ನಂತರ ಅವರ ಮೇಲೆ ಅವನ ದಬ್ಬಾಳಿಕೆಯ ಯುಗ ಪ್ರಾರಂಭವಾಯಿತು. ದ್ವೇಷದ ಪ್ರತೀಕವಾಗಿ ಮಂಗಳೂರಿನಲ್ಲಿ ನಿರ್ಮಿಸಿಕೊಂಡಿದ್ದ ಅವರ ಚರ್ಚ್ಗಳನ್ನು ಟಿಪ್ಪು ದ್ವಂಸಗೊಳಿಸಿದನಲ್ಲದೆ, ಅವರ ಮನೆ ಮಠ ಆಸ್ತಿಗಳನ್ನು ವಶಪಡಿಸಿಕೊಂಡ. ಸುಮಾರು ೨೦,೦೦೦ ದಷ್ಟು ಕ್ರೈಸ್ತರನ್ನು ಬಂಧಿಸಿ ತಂದು ಶ್ರೀರಂಗಪಟ್ಟಣದ ಸೆರೆಮನೆಯಲ್ಲಿಟ್ಟ. ಮಂಗಳೂರಿನಿಂದ ಅವರನ್ನು ಬಂಧಿಸಿ ಕರೆತರುವ ಮಾರ್ಗದ ಮಧ್ಯದಲ್ಲೆ ಸಾಕಷ್ಟು ಜನರು ಅನ್ನ ಆಹಾರವಿಲ್ಲದೆ, ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದರು. ಉಳಿದವರನ್ನು ಸೆರೆಮನೆಯಲ್ಲಿಟ್ಟು ಅವರಿಗೆ ಶಿಕ್ಷೆ ನೀಡತೊಡಗಿದ. ಅನೇಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ. ಅವನ ಶಿಕ್ಷೆಗೆ ಹೆದರಿ ಅನೇಕ ಕ್ರೈಸ್ತರು ಸೆರೆಮನೆಯಿಂದ ಹೇಗೋ ತಪ್ಪಿಸಿಕೊಂಡು ಓಡಿಹೋದರು. ಹಾಗೆ ತಪ್ಪಿಸಿಕೊಂಡ ಕೆಲವೊಂದು ಗುಂಪು ಮಲಬಾರಿನತ್ತ ತೆರಳಿದರೆ, ಮತ್ತೊಂದು ಗುಂಪು ಕೊಡಗಿನ ಕಡೆಗೆ ತೆರಳಿತು. ಹಾಗೆ ಕೊಡಗಿನ ಕಡೆಗೆ ತೆರಳಿದ ಕ್ರೈಸ್ತರು ಅಲ್ಲಿ ತಮ್ಮ ವಸಾಹತುಗಳನ್ನು ನಿರ್ಮಿಸಿಕೊಂಡು ಅಲ್ಲೇ ನೆಲೆ ನಿಂತರು. ಅಲ್ಲಿ ವೃದ್ಧಿಸಿದ ಕ್ರೈಸ್ತರ ಕುಟುಂಬವೊಂದಕ್ಕೆ ತಾನು ಸೇರಿದವನು ಎಂದು ರಾಯಪ್ಪ ಮೆನೆಜಸ್ ತಮಗೆ ತಿಳಿದ ತಮ್ಮ ಕುಟುಂಬದ ಪೂರ್ವ ಇತಿಹಾಸವನ್ನು ನಮಗೆ ಆಗಾಗ್ಗೆ ಹೇಳುತ್ತಿದ್ದರು. ಆದರೆ ನೂರಾರು ವರ್ಷಗಳ ಹಿಂದಿನಿಂದಲೂ ಅವರ ಪೀಳಿಗೆಯು ವಿರಾಜಪೇಟೆಯಲ್ಲೇ ನೆಲೆಸಿದ್ದರಿಂದ ಅವರ ಪ್ರಚಲಿತ ವ್ಯವಹಾರಿಕ ಭಾಷೆ ಕನ್ನಡವೇ ಆಗಿತ್ತು. ಮನೆಯಲ್ಲಿ ಮಾತ್ರ ಅವರು ಕೊಂಕಣಿ ಮಾತನಾಡುತ್ತಿದ್ದರು.

೧೯೯೨ರಲ್ಲಿ ಪ್ರಾರಂಭಗೊಂಡ ಚರ್ಚ್ನಲ್ಲಿ ಬರಿ ಇಂಗ್ಲಿಷ್ ಪೂಜೆ ಮಾತ್ರ ಜರುಗುತ್ತಿದ್ದು ಕ್ರಮೇಣ ಜನವರಿ ೧೯೯೬ರಿಂದ ಅಲ್ಲಿ ಕನ್ನಡ ಬಲಿಪೂಜೆ ಪ್ರಾರಂಭಗೊಂಡಿತು. ರಾಯಪ್ಪ ಮೆನೆಜಸ್ ಸುಮಾರು ಮೂವತ್ತು ವರ್ಷಗಳ ಕಾಲ ವಿರಾಜಪೇಟೆಯ ಅನ್ನಮ್ಮ ದೇವಾಲಯದಲ್ಲಿ ಉಪದೇಶಿಯಾಗಿ ಕೆಲಸ ಮಾಡಿದ್ದರು. ಅವರ ಕುಟುಂಬವು ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಅಲ್ಲಿಗೆ ಅವರ ಉಪದೇಶಿ ಉದ್ಯೋಗ ಕೊನೆಗೊಂಡಿತ್ತು. ಮೂವತ್ತು ವರ್ಷಗಳಷ್ಟು ಕಾಲ ಚರ್ಚ್ ಸೇವೆ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಸದಾ ಮನಸ್ಸು ಗಮನವೆಲ್ಲ ಅದರಲ್ಲೇ ನೆಟ್ಟಿರುವುದು ಸಹಜವೇ. ಅವರು ಚರ್ಚ್ನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಮುಂದಿರುತ್ತಿದ್ದರು. ಗುರುಗಳ ಎಲ್ಲಾ ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ಕೆಲವೊಮ್ಮೆ ಅವರಿಗೆ ತಮ್ಮ ಅಮೂಲ್ಯ ಸಲಹೆಯನ್ನೂ ನೀಡುತ್ತಿದ್ದರು. ಆದರೆ ಹೊಸದಾಗಿ ಪ್ರಾರಂಭಗೊಂಡ ಚರ್ಚ್ನಲ್ಲಿ ಗುರುಗಳು ಯಾರನ್ನೂ ಉಪದೇಶಿಯನ್ನಾಗಿ ನೇಮಕ ಮಾಡಿಕೊಂಡಿರಲಿಲ್ಲ. ರಾಯಪ್ಪ ಮೆನೆಜಸ್ ವಯಸ್ಸಾದ ಹಿರಿಯರು ಎಂದು ಚರ್ಚ್ನಲ್ಲಿ ಎಲ್ಲರೂ ಅವರಿಗೆ ಗೌರವ ಕೊಡುತ್ತಿದ್ದರು. ಚರ್ಚ್ನಲ್ಲಿ ಗಂಟೆ ಭಾರಿಸುವುದು, ಬಲಿಪೂಜೆಯಲ್ಲಿ ವಾಚನ ಓದುವುದು, ವಿಶ್ವಾಸಿಗಳ ಪ್ರಾರ್ಥನೆ ಹೇಳುವುದು, ಕಾಣಿಕೆ ತೆಗೆಯುವುದು, ಕಾಣಿಕೆ ಹಣವನ್ನು ಎಣಿಸಿ ಗುರುಗಳಿಗೆ ಹಸ್ತಾಂತರಿಸುವುದು ಮುಂತಾದ ಕಾರ್ಯಗಳಲ್ಲಿ ಅವರೇ ಮುಂದಿರುತ್ತಿದ್ದರು. ಈಸ್ಟರ್ ಹಬ್ಬದ ಮುನ್ನ ಜರುಗುವ ತಪಸ್ಸು ಕಾಲದ ಶುಕ್ರವಾರದಂದು ಜರುಗುವ ಕನ್ನಡ ಶಿಲುಬೆ ಹಾದಿಯಲ್ಲಿ ಅವರು ಅತ್ಯಂತ ಶೋಕಭರಿತ ಹಾಗು ಭಕ್ತಿಭಾವದಿಂದ ಶಿಲುಬೆ ಹಾದಿ ಪ್ರಾರ್ಥನೆಗಳನ್ನು ಪಠಿಸುತ್ತಿದ್ದರು. ಅವರು ತಮ್ಮ ಕಂಚಿನ ಕಂಠದಲ್ಲಿ ರಾಗಬದ್ದವಾಗಿ ಪಠಿಸುತ್ತಿದ್ದ ಶಿಲುಬೆ ಹಾದಿಯ ಪ್ರಾರ್ಥನೆಗಳು ಭಕ್ತರನ್ನು ಭಕ್ತಿಭಾವದಲ್ಲಿ ಮುಳುಗಿಸಿಬಿಡುತ್ತಿತ್ತು.

ವಿರಾಜಪೇಟೆ ಕೊಡುಗು ಪ್ರದೇಶವಾಗಿದ್ದರಿಂದ ಅಲ್ಲಿ ಚಳಿಯ ವಾತಾವರಣ ಹೆಚ್ಚೆ. ಚಳಿಗೆ ಸ್ವಲ್ಪ ಬೆಚ್ಚಗಾಗಲು ಸಾಮಾನ್ಯವಾಗಿ ಅಲ್ಲಿ ಎಲ್ಲರೂ ಒಂದಿಷ್ಟು ಮಧ್ಯ ಸೇವಿಸುವ ಅಭ್ಯಾಸ ಬೆಳೆಸಿಕೊಂಡವರೇ. ಅಂತೆಯೇ ರಾಯಪ್ಪ ಮೆನೆಜಸ್‌ಗೂ ಸ್ವಲ್ಪ ಕುಡಿತದ ಚಟ ಅಂಟಿಕೊಂಡಿತ್ತು. ವಾರದಲ್ಲಿ ಕನಿಷ್ಟ ಎರಡು ಮೂರು ದಿನಗಳಾದರೂ ಅವರಿಗೆ ಮಧ್ಯ ಬೇಕಾಗುತ್ತಿತ್ತು. ಆದರೆ ಅದರ ವೆಚ್ಚವನ್ನು ಭರಿಸುವ ಯಾವ ಆದಾಯವೂ ಅವರಿಗೆ ಇರಲಿಲ್ಲ. ಮಗ ತಿಂಗಳಿಗೊಮ್ಮೆ ಕೊಡುತ್ತಿದ್ದ ಪಾಕೆಟ್ ಮನಿಯಲ್ಲೇ ಹೇಗೋ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದರು. ಅದು ಯಾವ ಮೂಲೆಗೂ ಸಾಲುತ್ತಿರಲಿಲ್ಲ. ಹಣದ ಅಗತ್ಯವಿದ್ದಾಗ ನಮ್ಮ ಮನೆಗೆ ಬಂದು ಬಿಡುತ್ತಿದ್ದರು. ಅವರು ನಮ್ಮ ಮನೆಗೆ ಬಂದರೆ ಅದರ ಕಾರಣ ನಮಗೆ ಅರ್ಥವಾಗುತ್ತಿತ್ತು. ಹಿರಿಯ ಜೀವದ ಮನಸ್ಸು ನೋಯಬಾರದೆಂದು ನಾನು ಅವರ ಕೈಗೆ ಒಂದಿಷ್ಟು ಕಾಸು ಕೊಡುತ್ತಿದ್ದೆ. ಕಾಸು ಕೈಗಿಟ್ಟರೆ ಅವರ ಮುಖ ಹೂವಿನಂತೆ ಹಿಗ್ಗುತ್ತಿತ್ತು. ಆದರೆ ಅವರು ಎಂದೂ ಬಾಯಿ ಬಿಟ್ಟು ನನ್ನನ್ನು ಹಣ ಕೇಳದವರಲ್ಲ. ಆದರೆ ಅವರ ಮನೋಬಯಕೆ ಏನೆಂದು ನನಗೆ ಅರ್ಥವಾಗುತ್ತಿತ್ತು. ಆಗಾಗ್ಗೆ ಕಾಸು ಕೊಟ್ಟರೆ ಮಧ್ಯಪಾನದ ಚಟ ಹೆಚ್ಚಾಗುವುದೆಂದು ಭಾವಿಸಿ ನಾನು ಕೆಲವೊಮ್ಮೆ ಹಣ ಕೊಡಲು ಹಿಂದೇಟು ಹಾಕುತ್ತಿದ್ದೆ. ಇದನ್ನು ಕಂಡ ನನ್ನ ಪತ್ನಿಯೇ ಎಷ್ಟೋ ಸಲ ನನ್ನಿಂದ ಹಣ ಕೊಡಿಸಿದ್ದಳು.

ಕುಡಿತದ ಚಟ ಏರಿಸಿಕೊಂಡ ವ್ಯಕ್ತಿಗೆ ಕುಡಿಯಲು ಕೈಯಲ್ಲಿ ಕಾಸು ಇಲ್ಲದಿದ್ದಾಗ, ಅದು ಏನೆಲ್ಲ ಮಾಡಿಸುತ್ತದೆ ಎಂಬುದೇ ಈ ಲೇಖನದ ಸಾರಾಂಶ. ಈ ಕುರಿತು ಒಂದು ಪುಟ್ಟ ವಾಸ್ತವ ಘಟನೆಯನ್ನು ಇಲ್ಲಿ ಹೇಳಿದ್ದೇನೆ. ೨೦೦೦ನೇ ಇಸವಿಯಲ್ಲಿ ನಮ್ಮ ದೇವಾಲಯಕ್ಕೆ ಹೊಸದಾಗಿ ಒಬ್ಬ ಗುರುಗಳು ವರ್ಗವಾಗಿ ಬಂದರು. ಆ ವರ್ಷದ ಕ್ರಿಸ್‌ಮಸ್ ಹಬ್ಬವನ್ನು ತುಂಬಾ ಸಡಗರ ಸಂಭ್ರಮದಿಂದ ಆಚರಿಸಬೇಕೆಂದು ಗುರುಗಳು ಕೆಲವೊಂದು ಪೂರ್ವಯೋಜನೆ ಹಾಕಿಕೊಂಡಿದ್ದರು. ಹಾಕಿಕೊಂಡ ಕಾರ್ಯಕ್ರಮದಂತೆ ಅಲ್ಲಿನ ಪ್ರತಿಯೊಂದು ಕ್ರೈಸ್ತರ ಮನೆಗೆ ನಮ್ಮ ತಂಡವು ಭೇಟಿಕೊಟ್ಟು ಕ್ರಿಸ್‌ಮಸ್ ಗೀತೆಗಳನ್ನು ಹಾಡಿ ಕ್ರಿಸ್ತನ ಜನನದ ಸಂದೇಶವನ್ನು ಸಾರುವುದು. ಗುರುಗಳು ನಮ್ಮಲ್ಲಿ ಸುಮಾರು ೧೦ ಮಂದಿ ಯುವಕ-ಯುವತಿ ಹಾಗು ಹಿರಿಯರನ್ನು ಆಯ್ಕೆ ಮಾಡಿಕೊಂಡು ತಮ್ಮ ದೊಡ್ಡ ವಾಹನದಲ್ಲಿ ಪ್ರತಿಯೊಬ್ಬ ವಿಶ್ವಾಸಿಗಳ ಮನೆಗಳಿಗೆ ಅವರೇ ನಮ್ಮನ್ನು ಕರೆದೊಯ್ದರು. ರಾಯಪ್ಪ ಮೆನೆಜಸ್ ಕೂಡ ನಮ್ಮ ಜೊತೆಗಿದ್ದರು. ಅವರಿಗೆ ಭಕ್ತರಿಂದ ಕಾಣಿಕೆ ಹಣ ಸಂಗ್ರಹಿಸುವ ಕೆಲಸ ವಹಿಸಿದ್ದರು. ನಾವೆಲ್ಲರೂ ಭಕ್ತರ ಮನೆಗಳಲ್ಲಿ ಕ್ರಿಸ್‌ಮಸ್ ಗೀತೆಗಳನ್ನು ಹಾಡಿ ಕ್ರಿಸ್‌ಮಸ್ ಸಂದೇಶ ಸಾರಿ ಮರಳುವಾಗ ರಾಯಪ್ಪ ಮೆನೆಜಸ್ ಆ ಮನೆ ಹಿರಿಯರ ಮುಂದೆ ತಮ್ಮ ಕಾಣಿಕೆ ಹುಂಡಿಯನ್ನು ಚಾಚುತ್ತಿದ್ದರು. ಭಕ್ತರೂ ಖುಷಿಯಿಂದ ಧಾರಾಳವಾಗಿಯೇ ಹುಂಡಿಗೆ ಕಾಣಿಕೆ ಹಾಕುತ್ತಿದ್ದರು.

ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತೂ ಇದೆ. ಇದು ಒಂದು ರೀತಿ ಹಾಸ್ಯಾಸ್ಪದ ಎನಿಸದರೂ ಈ ಮಾತಿನಲ್ಲಿ ಕಟು ವಾಸ್ತವಾಂಶವೂ ಅಡಗಿದೆ. ಹಣವನ್ನು ವಾವಮಾರ್ಗದಲ್ಲಿ ಗಳಿಸುವಲ್ಲಿ, ಮನುಷ್ಯನ ಕೌಶಲ ಮತ್ತು ಬುದ್ಧಿ ಶಕ್ತಿಯು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತದೆ. ಕೈಗೆ ಬಂದ ಹಣವನ್ನು ಲಪಟಾಯಿಸಲು ಮನುಷ್ಯನ ಬುದ್ಧಿ ಶಕ್ತಿ ಹೇಗೆ ಚುರುಕಾಗುತ್ತದೆ ಎಂಬುದೇ ಸೋಜಿಗ. ಕ್ರಿಸ್‌ಮಸ್ ಸಂದೇಶವನ್ನು ಸಾರಿ ಮರಳುವಾಗ ಭಕ್ತರು ಹುಂಡಿಗೆ ಹಾಕುತ್ತಿದ್ದ ಹಣವನ್ನು ರಾಯಪ್ಪ ಮನೆಜಸ್ ನಮ್ಮೆಲ್ಲರ ಕಣ್ಣು ತಪ್ಪಿಸಿ ಸ್ವಲ್ಪ ಹಣವನ್ನು ತೆಗೆದು ತಮ್ಮ ಜೇಬಿಗೆ ಇಳಿ ಬಿಡುತ್ತಿದ್ದರು. ಭಕ್ತರು ಹುಂಡಿಗೆ ಹಾಕಿದ ಹಣ ದೇವರಿಗೆ/ದೇವಸ್ಥಾನಕ್ಕೆ ಸಲ್ಲಬೇಕಲ್ಲವೆ? ಆದರೆ, ಅದರಲ್ಲಿ ತನ್ನ ಪಾಲೂ ಸ್ವಲ್ಪ ಇದೆ ಎಂದು ರಾಯಪ್ಪನವರು ಭಾವಿಸಿದ್ದರೇನೋ? ಇದನ್ನು ಗುರುಗಳು ಹೇಗೋ ಗುಟ್ಟಾಗಿ ಗಮನಿಸಿದ್ದರು ಅಂತ ಕಾಣುತ್ತದೆ. ಒಬ್ಬ ಭಕ್ತರ ಮನೆಯಿಂದ ಹೊರಗೆ ಬಂದ ಮೇಲೆ, ಗುರುಗಳು ರಾಯಪ್ಪನವರಿಗೆ ವಿನಯದಿಂದ ‘ರಾಯಪ್ಪನವರೇ ನೀವು ಹುಂಡಿ ಹಿಡಿಯುವುದು ಬೇಡ, ಅದನ್ನು ಚಿನ್ನಪ್ಪನವರಿಗೆ ಕೊಡಿ, ಅವರೇ ಹಿಡಿದುಕೊಳ್ಳಲಿ’ ಎನ್ನಬೇಕೆ?

ಎಲ್.ಚಿನ್ನಪ್ಪ, ಬೆಂಗಳೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x