“ಪುನರ್ಜನ್ಮದಂತೆ ಪುನರ್ವಸತಿ – ಸಂಗೀತಾಳ ಸಮರ್ಥ ಕಥೆ”: ರಶ್ಮಿ ಎಂ.ಟಿ.


ಸಂಗೀತಾ ಎಂಬ 16 ವರ್ಷದ ಅಂಗವಿಕಲ ಹೆಣ್ಣು ಮಗಳು, ಇವಳಿಗೆ ಪೋಲಿಯೋದಿಂದ ಒಂದು ಕಾಲಿಗೆ ತೊಂದರೆ ಆಗಿದ್ದು ಸರಾಗವಾಗಿ ನಡೆಯಲು ಬರುತ್ತಿರಲಿಲ್ಲ. ಇವಳು ಮೂಲತಃ ತಮಿಳುನಾಡಿನವಳು. 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಇವಳು 9ನೇ ತರಗತಿ ಓದುವಾಗ ಒಂದೇ ವರ್ಷದಲ್ಲಿ ಆರೋಗ್ಯದ ಸಮಸ್ಯೆಯಿಂದ ತಂದೆ-ತಾಯಿ ಇಬ್ಬರು ಮರಣ ಹೊಂದಿದರು. ಇವಳಿಗೆ ಮೂರು ಜನ ಅಕ್ಕಂದಿರು, ಎಲ್ಲರಿಗೂ ಮದುವೆಯಾಗಿದ್ದು, ಒಬ್ಬರು ತಮಿಳುನಾಡಿನಲ್ಲಿ, ಒಬ್ಬರು ಬೆಂಗಳೂರಿನಲ್ಲಿ ಹಾಗೂ ಒಬ್ಬ ಅಕ್ಕ ವಿದೇಶದಲ್ಲಿ ವಾಸವಾಗಿದ್ದಾರೆ. ಸಂಗೀತಾ 10ನೇ ತರಗತಿ ಪರೀಕ್ಷೆ ಮುಗಿದ ನಂತರದಲ್ಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ಹಿರಿಯ ಅಕ್ಕನ ಮನೆಗೆ ಬಂದಳು. ನಾನು ಸಮುದಾಯದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮನೆ ಮನೆ ಸರ್ವೆ ಮಾಡುವಾಗ ಇವಳನ್ನು ಗುರುತಿಸಿದೆನು.

ಸಂಗೀತಾಳಿಗೆ ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ, ನನಗೆ ತಮಿಳು ಭಾಷೆ ಬರುತ್ತಿರಲಿಲ್ಲ, ಸಂಗೀತಾಳ ಅಕ್ಕ ಸೆಲ್ವಿಯವರು ನಾನು ಮಾತನಾಡುವುದನ್ನು ತಮಿಳಿಗೆ ಭಾಷಾಂತರ ಮಾಡಿ ಸಂಗೀತಾಳು ಹೇಳಿದ್ದನ್ನು ನನಗೆ ಕನ್ನಡದಲ್ಲಿ ಭಾಷಾಂತರ ಮಾಡಿ ಹೇಳುತ್ತಿದ್ದರು. ಹೀಗೆ ಸಂಗೀತಾಳ ಕುರಿತಾದ ಮಾಹಿತಿಯನ್ನು ಕಲೆಹಾಕಿದೆ. ಇವಳ ಜೊತೆ ಕೆಲಸ ಮಾಡಬೇಕೆಂದರೆ ನಾನು ತಮಿಳು ಭಾಷೆಯನ್ನು ಕಲಿಯುವ ಅನಿವಾರ್ಯತೆ ಇತ್ತು, ಜೊತೆಗೆ ಸಂಗೀತಾಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕಾಗಿತ್ತು. ಸಂಗೀತಾಳ ಪರಿಚಯವಾಗಿ ಸುಮಾರು ಮೂರು ತಿಂಗಳು ಕಳೆಯುವಷ್ಠರಲ್ಲಿ ಅಲ್ಪ-ಸ್ವಲ್ಪ ತಮಿಳನ್ನು ಕಲಿತೆನು ಹಾಗೂ ಸಂಗೀತಾಳ ಜೊತೆ ನೇರವಾಗಿ ಮಾತನಾಡಲು ಪ್ರಾರಂಭಿಸಿದೆ. ಮೊದ ಮೊದಲು ನನ್ನ ಜೊತೆ ಮಾತನಾಡಲು ಹಿಂಜರಿಯುತ್ತಿದ್ದ ಸಂಗೀತಾ ಮನಸ್ಸು ಬಿಚ್ಚಿ ಮಾತನಾಡಲು ಪ್ರಾರಂಭಿಸಿದಳು.

ಸಂಗೀತಾ ನಡೆಯುವಾಗ ಮೊಣಕಾಲಿನ ಮೇಲೆ ಕೈ ಇಟ್ಟು ಬಗ್ಗಿ ನಡೆಯುತ್ತಿದ್ದಳು, ಹೀಗೆ ನಡೆಯುವ ಕಾರಣದಿಂದ ಹೊರಗಡೆ ಎಲ್ಲೂ ಹೋಗಲು ಇವಳಿಗೆ ಇಷ್ಟವಿರಲಿಲ್ಲ. ತಾನು ಹೀಗೆ ಓಡಾಡುವುದನ್ನು ಜನ ನೋಡಿ ಜನ ಅಯ್ಯೋ ಪಾಪ ಎನ್ನುತ್ತಾರೆ, ಜೊತೆಗೆ ನೀನೇಕೆ ಹೊರಗಡೆ ಬಂದೆ ನಿನಗೇನು ಬೇಕು ಹೇಳಿದರೆ ನಿಮ್ಮ ಅಕ್ಕ – ಬಾವ ಅದನ್ನು ತಂದುಕೊಡುತ್ತಾರೆ. ಎಲ್ಲಾದರೂ ಬಿದ್ದು ಗಾಯ ಮಾಡಿಕೊಂಡರೆ ನಿನ್ನನ್ನು ನೋಡಿಕೊಳ್ಳುವವರು ಯಾರು ಹೀಗೆ ತಮಗೆ ಏನು ಅನ್ನಿಸುತ್ತದೂ ಅದನ್ನು ಅವಳಿಗೆ ನೇರವಾಗಿ ಹೇಳುತ್ತಿದ್ದರಂತೆ ಇಂತಹ ಮಾತುಗಳನ್ನು ಕೇಳಿ ಇವಳಿಗೆ ನೋವಾಗಿ ಹೊರಗಡೆ ಹೋಗುವುದನ್ನೆ ನಿಲ್ಲಿಸಿದ್ದಳು.

ಸಮುದಾಯದಲ್ಲಿ ಕೆಲಸ ಮಾಡುವಾಗ ಕೇವಲ ಅಂಗವಿಕಲರನ್ನು ಗುರುತಿಸಿ ಮಾಹಿತಿಯನ್ನು ಕಲೆಹಾಕುವುದಲ್ಲದೆ ಅವರಿಗೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಪಡೆದುಕೊಳ್ಳುವಲ್ಲಿ ಸಹಾಯ ಮಾಡುವುದು ಕೂಡ ನನ್ನ ಜವಾಬ್ಧಾರಿಯಾದ್ದು, ಇವಳಿಗೆ ಮುಖ್ಯವಾಗಿ ಕಾಲಿನ ಶಸ್ರಚಿಕಿತ್ಸೆ ಅವಶ್ಯಕವಾಗಿತ್ತು. ಡಾ. ಎಂ. ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ನಡೆದ ಉಚಿತ ಶಸ್ರಚಿಕಿತ್ಸಾ ಕ್ಯಾಂಪ್‌ಗೆ ಸಂಗೀತಾಳನ್ನು ಕಳುಹಿಸಲಾಯಿತು. ಸಂಗೀತಾಳಿಗೆ ಇದೇ ಆಸ್ಪತ್ರೆಯಲ್ಲಿ ಶಸ್ರಚಿಕಿತ್ಸೆ ಕೂಡ ಆಯಿತು. ಶಸ್ರಚಿಕಿತ್ಸೆ ಆದ ನಂತರದಲ್ಲಿ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇದ್ದಳು, ಇವಳಿದ್ದ ವಾರ್ಡನಲ್ಲಿ ಇದೇ ರೀತಿಯ ತೊಂದರೆ ಇರುವ ಇತರರನ್ನು ನೋಡಿ ಇವಳಿಗೆ ತುಂಬಾ ಖುಷಿ, ನಾನೊಬ್ಬಳೇ ಹೀಗೆ ಇಲ್ಲ ನನ್ನ ಹಾಗೆ ಇರುವವರು ಇನ್ನು ತುಂಬಾ ಜನ ಇದ್ದಾರೆ ಎಂದು. ಸಂಗೀತಾಳ ಅಕ್ಕ ಬೆಳಿಗ್ಗೆ ಬಂದು ರಾತ್ರಿಯವರೆಗೆ ಆಸ್ಪತ್ರೆಯಲ್ಲಿ ಇರುತ್ತಿದ್ದರು, ಬಾವ ಮನೆಯಿಂದ ಊಟ ತಂದು ಕೊಟ್ಟು ಸಂಗೀತಾಳ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಹೋಗುತ್ತಿದ್ದರು. ಸಂಗೀತಾಳ ಪಕ್ಕದ ಬೆಡ್‌ನಲ್ಲಿ ಇನ್ನೊಬ್ಬ ಅಂಗವಿಕಲ ಮಗುವಿನ ಪೋಷಕರು ರಾತ್ರಿಯ ಸಮಯದಲ್ಲಿ ಸಂಗೀತಾಳನ್ನು ನೋಡಿಕೊಳ್ಳುತ್ತಿದ್ದರು. ಸೆಲ್ವಿಯವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದರು ಅವರನ್ನು ದಿನಾಲು ಬೆಳಿಗ್ಗೆ ಸಂಬಂಧಿಕರ ಮನೆಯಲ್ಲಿ ಬಿಟ್ಟು ಆಸ್ಪತ್ರೆಗೆ ಬರುತ್ತಿದ್ದರು ಮತ್ತು ರಾತ್ರಿ ವಾಪಾಸು ಹೋಗಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ನಾನು ಆಗಾಗ ಹೋಗಿ ನೋಡಿಕೊಂಡು ಬರುತ್ತಿದ್ದೆ. ಹೇಳ ಬೇಕೆಂದರೆ ಸಂಗೀತಾಳು ಕೂಡ ಸೆಲ್ವಿಯವರ ಹೆತ್ತ ಮಗಳೆಂದೇ ಹೇಳಬಹುದು ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅಕ್ಕ-ಬಾವ.

ಮೂರು ತಿಂಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಮನೆಗೆ ಬಂದಳು, ಆಸ್ಪತ್ರೆಯಲ್ಲಿ ಹೇಳಿಕೊಟ್ಟ ಥೆರಫಿಯನ್ನು ಮನೆಯಲ್ಲಿ ಅಕ್ಕನ ಸಹಾಯದಿಂದ ದಿನಾಲೂ ಮಾಡುತ್ತಿದ್ದಳು. ಶಸ್ರಚಿಕಿತ್ಸೆ ಆಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಸಂಗೀತಾ ಕಾಲಿಗೆ ಕ್ಯಾಲಿಪರ್‌ ಹಾಕಿಕೊಂಡು ಯಾರ ಸಹಾಯವಿಲ್ಲದೆ ನಿಧಾನವಾಗಿ ನೇರವಾಗಿ ನಡೆಯಲು ಪ್ರಾರಂಭಿಸಿದಳು, ಈ ಬದಲಾವಣೆ ಸಂಗೀತಾಳಿಗೆ ಮಾತ್ರವಲ್ಲ ಅವಳ ಕುಟುಂಬ ಸದಸ್ಯರಿಗೆ ತುಂಬಾ ಸಂತೋಷ ನೀಡಿತು. ಮೊದಲ ಬಾರಿಗೆ ನೇರವಾಗಿ ನಿಂತು ನಡೆಯುವುದನ್ನು ನೋಡಿದ ಸಂಗೀತಾಳ ಅಕ್ಕ ಸೆಲ್ವಿಯವರ ಸಂತೋಷವನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಆ ದಿನ ನನಗೂ ಮರೆಯಲು ಸಾಧ್ಯವಿಲ್ಲ, ಏಕೆಂದರೆ ಇಡೀ ಮನೆಯಲ್ಲಿ ಹಬ್ಬದ ವಾತಾವರಣವೇ ತುಂಬಿತ್ತು ತಮಿಳುನಾಡಿನಲ್ಲಿರುವ ಅಕ್ಕನ ಕುಟುಂಬವೂ ಬಂದಿತ್ತು, ಮನೆಯಲ್ಲಿ ಹಬ್ಬದ ಅಡುಗೆ ಮಾಡಿದ್ದರು, ಇಡೀ ಬೀದಿಗೆ ಸೆಲ್ವಿಯವರು ಮನೆ ಮನೆಗೆ ಹೋಗಿ ಸಿಹಿ ಹಂಚಿದರು.

ಇದಾದ ಒಂದು ವರ್ಷದಲ್ಲೆ ನಾನು ಆಯೋಜನೆ ಮಾಡುವ ಎಲ್ಲಾ ಸಭೆಗಳಲ್ಲಿ ಹಾಗೂ ತರಬೇತಿಗಳಲ್ಲೂ ಭಾಗವಹಿಸಲು ಪ್ರಾರಂಭಿಸಿದಳು, ಜೊತೆಗೆ ಕನ್ನಡ ಮಾತನಾಡುವುದನ್ನು ಕಲಿತಳು. ಮೊದ ಮೊದಲು ಅಕ್ಕನ ಜೊತೆ ಸಭೆಗಳಿಗೆ ತರಬೇತಿಗಳಿಗೆ ಬರುವ ಸಂಗೀತಾ ತಾನೊಬ್ಬಳೇ ಬರುವುದಕ್ಕೆ ಪ್ರಾರಂಭಿಸಿದಳು, ಇದು ಅವಳ ಆತ್ಮವಿಶ್ವಾಸವನ್ನು ತೋರಿಸಿತು. ಇವಳ ಜೊತೆ ಸಮುದಾಯದಲ್ಲಿ ಮೂರು ವರ್ಷ ಕೆಲಸ ಮಾಡಿದೆ, ನಂತರದಲ್ಲಿ ಸಂಗೀತಾ ಅನಿಮೇಟರ್‌ ಆಗಿ ಅಂಗವಿಕಲರಿಗಾಗಿ ಸಮುದಾಯದಲ್ಲಿ ನನ್ನ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು, ಮೂರು ವರ್ಷ ಕೆಲಸ ಮಾಡಿದಳು, ಸಮುದಾಯ ಆಧಾರಿತ ಕಾರ್ಯಕ್ರಮ ಮುಕ್ತಾಯವಾದ ನಂತರ ಮತ್ತೆ ಸಂಗೀತಾ ಮನೆಯಲ್ಲಿಯೇ ಉಳಿಯಬೇಕಾಯಿತು. ಆದರೆ ಇವಳು ಸುಮ್ಮನೆ ಮನೆಯಲ್ಲಿಯೇ ಕೂರಲಿಲ್ಲ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ ನೀಡುವ ಹೊಲಿಗೆ ತರಬೇತಿಗೆ ದಾಖಲಾಗಿ ಕಲಿಯಲು ಪ್ರಾರಂಭಿಸಿದಳು ಹಾಗು ತನ್ನ ಸಮುದಾಯದಲ್ಲಿನ ಯಾವುದಾದರೂ ಅಂಗವಿಕಲ ವ್ಯಕ್ತಿಗಳನ್ನು ಕಂಡಾಗ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಿದ್ದಳು.

ಪ್ರಸ್ತುತ ಸಂಗೀತಾಳು ಮದುವಯಾಗಿ ಗಂಡನ ಮನೆಯಲ್ಲಿ ಸಂತೋಷದಿಂದ ಇದ್ದಾಳೆ ಹಾಗೂ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಸಮುದಾಯ ಕಾರ್ಯಕರ್ತೆಯಾಗಿ ಅಂಗವಿಕಲರನ್ನು ಗುರುತಿಸಿ, ಅವರಿಗೆ ಬೇಕಾದ ಸರ್ಕಾರಿ ಸೌಲಭ್ಯಗಳನ್ನು ಕೊಡಿಸುವಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಇವಳ ಜೊತೆ ಕೆಲಸ ಮಾಡುವುದನ್ನು ಬಿಟ್ಟು ಸುಮಾರು 14 ವರ್ಷಗಳೇ ಕಳೆದಿದ್ದರೂ ಈಗಲೂ ತಿಂಗಳಿಗೊಮ್ಮೆ ಪೋನ್‌ ಮಾಡಿ ಮಾತನಾಡುತ್ತಾಳೆ.

ಕೆಲವು ಅಂಗವಿಕಲ ವ್ಯಕ್ತಿಗಳಿಗೆ ವೈದ್ಯಕೀಯ ಪುನರ್ವಸತಿಯು ಒಂದು ಪುನರ್ಜನ್ಮ ಎಂದೇ ಹೇಳಬಹುದು ಜೊತೆಗೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಲು, ನೀವೂ ಕೂಡ ಏನಾದರೂ ಸಾಧನೆ ಮಾಡಬಹುದು ಮಾಡುವ ಶಕ್ತಿ ನಿಮ್ಮಲ್ಲಿದೆ ಎಂದು ಉತ್ತೇಜನ ನೀಡುವ ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳು ತುಂಬಾ ಅವಶ್ಯಕ.
ಯಾವುದೇ ಒಬ್ಬ ಅಂಗವಿಕಲ ವ್ಯಕ್ತಿಯ ಶಕ್ತಿ, ಆಸರೆ ಎಂದರೆ ಅವರ ಕುಟುಂಬ. ಕುಟುಂಬದ ಸಹಕಾರ, ತಾಳ್ಮೆ, ಇರುವುದನ್ನು ಹಾಗೆಯೇ ಸ್ವೀಕರಿಸುವ ಮನೋಭಾವ ಇದ್ದರೆ ಮಾತ್ರ ಅಂಗವಿಕಲ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಸಂಗೀತಾಳಂತಹ ಮಾದರಿ ವ್ಯಕ್ತಿಗಳ ಅವಶ್ಯಕತೆ ಸಮುದಾಯಕ್ಕಿದೆ, ಅಂಗವಿಕಲ ವ್ಯಕ್ತಿಗಳೇ ತಮ್ಮ ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಂಗೀತಾಳ ಈ ಸಾಮಾಜಿಕ ಮನೋಭಾವ ತನ್ನ ಕ್ಷೇತ್ರದ ಬಗ್ಗೆ ಇರುವ ಕಾಳಜಿಯನ್ನು ನೋಡಿದರೆ ತುಂಬಾ ಹೆಮ್ಮೆ ಆಗುತ್ತದೆ. ಜೊತೆಗೆ ಈ ಕೆಲಸಕ್ಕೆ ಬೆನ್ನೆಲುಬಾಗಿ ನಿಂತ ಸಂಗೀತಾಳ ಪತಿಯನ್ನು ಸೇರಿಕೊಂಡಂತೆ ಇಡೀ ಕುಟುಂಬ ಸಮಾಜಕ್ಕೆ ಒಂದು ಮಾದರಿಯಾಗಿದೆ. ಇಂತಹ ಸಹಕಾರ ಸಿಕ್ಕರೆ ಸಂಗೀತಾಳಂತಹ ಹಲವಾರು ಅಂಗವಿಕಲ ಹೆಣ್ಣು ಮಕ್ಕಳು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ.

ಸಮುದಾಯದ ಜನರಲ್ಲಿ ಅಂಗವಿಕಲ ವ್ಯಕ್ತಿಗಳ ಕುರಿತು ಇರುವ ನಕಾರಾತ್ಮಕ ಧೋರಣೆ ಬದಲಾಗಬೇಕು, ಅಂಗವಿಕಲ ವ್ಯಕ್ತಿಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ, ಅವರಿಗೂ ಒಂದು ಮನಸ್ಸಿದೆ, ಆಸೆ ಕನಸುಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮನೋಭಾವನೆ ಬೇಕಾಗಿದೆ. ಸಹಾಯ ಮಾಡದಿದ್ದರೂ ಪರವಾಗಿಲ್ಲ ಚುಚ್ಚು ಮಾತನ್ನಾಡದೆ, ಹೀಯಾಳಿಸದೆ ಅವರನ್ನು ಅವರ ಪಾಡಿಗೆ ಬದುಕಲು ಬಿಟ್ಟರೆ ಅದೇ ಅವರು ಮಾಡುವ ದೊಡ್ಡ ಸಹಾಯ.
ರಶ್ಮಿ ಎಂ. ಟಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Mohan
Mohan
10 days ago
Very very Good Achievement madam Rashmi ji.

Hat's off to you. 🙏🙏🙏

✍️Mohan Salikeri
Bharathi
Bharathi
10 days ago
Reply to  Mohan

🙏 🙏 🙏 🙏

Vijayalakshmi
Vijayalakshmi
10 days ago

Very proud of you Rashmi for bringing such change in Sangeetha and the likes.

3
0
Would love your thoughts, please comment.x
()
x