ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿ: ಡಾ.ವೃಂದಾ. ಸಂಗಮ್‌

ಮೊನ್ನೆ ನಮ್‌ ಪದ್ದಕ್ಕಜ್ಜಿ ಮುಂಜಾನೆದ್ದು, ಧಡಾ ಭಡಾ ಧಡಾ ಭಡಾ ಮಾಡಲಿಕ್ಕೆ ಹತ್ತಿದ್ದರು. ನಮ್‌ ರಾಯರು ಹಾಸಿಗಿ ಮ್ಯಾಲ ಮಲಕೊಂಡವರು ಒಂಚೂರು ಚೂರೇ ಕಣ್ಣು ಬಿಟ್ಟು ಚಹಾ ಆಗೇದ ಎಳತೀರ್ಯಾ ಅನ್ನೂ ಶಬ್ದಕ್ಕ ಕಾಯತಿದ್ದರು. ಆದರ, ಈ ಬೆಳಕು ಕಣ್ಣು ಚುಚ್ಚಿದರೂ ಪದ್ದಕ್ಕಜ್ಜಿ ಧಡಾಭಡಾ ಮುಗೀಲಿಲ್ಲ. “ಹಂಗಾರ, ಚಹಾ ಇನ್ನೂ ತಡಾ ಅನೂ” ಅಂದರು. “ಇನ್ಯಾಕ, ತಡಾ, ನೀವು ಎದ್ದು, ಇಲ್ಲೆ, ವಾರ್ಡರೋಬ್‌ ಮ್ಯಾಲಿರೋ ಮೈಸೂರು ಪೇಟಾ ತಗದ ಕೊಟ್ಟರೆ, ಚಹಾ ಮಾಡೇಬಿಡತೀನಿ” ಅಂದರು. ರಾಯರಿಗೆ ಆಶ್ಚರ್ಯ, ನೂಲಲ್ಯಾಕೆ ಚನ್ನಿ ಅಂತ, ಚನ್ನೀಗೆ ಚಹಾ ಮಾಡು ಅಂದರೂ, ಚಹಾ ಪುಡಿ, ಸಕ್ಕರೀ, ಹಾಲು ಕೇಳತಾಳ, ಅಂತಾದರಾಗ, ಚಹಾ ಮಾಡಲಿಕ್ಕೆ ಮ್ಯಾಲ ಇಟ್ಟಿರೋ ಮೈಸೂರು ಪೇಟಾ ಯಾಕ ಬೇಕು, ತಿಳೀಲಿಲ್ಲ, “ಯಾಕ, ಮೈಸೂರು ಪೇಟಾ ಹಾಕ್ಕೊಂಡು ಚಹಾ ಮಾಡಕಿದ್ದೀಯನು.” ಅಂದರು. ನಮ್‌ ಪದ್ದಕ್ಕಜ್ಜಿ, “ಇಲ್ಲದ್ದೆಲ್ಲಾ ಮಾತಾಡದೇನ, ಮೊದಲ, ಪೇಟಾ ತಗದಕೊಡರೀ” ಅಂತ ಸಿಟ್ಟು ಮಾಡಿಕೊಂಡರು. ದಿನದ ಹಂಗ, ವಾದದಾಗ, ಗೆದ್ದಿದ್ದು ಪದ್ದಕ್ಕಜ್ಜಿನೇ. ರಾಯರು ಸುಮ್ಮನೇ ಸ್ಟೂಲ್‌ ಹತ್ತಿ ಪೇಟಾ ತಗದು ಕೊಟ್ಟು, ಬಚ್ಚಲಕ್ಕ ನಡೆದರು.

ಬಿಸಿ ಬಿಸಿ ಚಹಾ ಹಿಡಕೊಂಡು, ರಾಯರ ಬಾಜೂ ಕೂತ ಪದ್ದಕ್ಕಜ್ಜಿ, ಹೇಳಿದರು, ಅಲ್ಲ, ವಯಸ್ಸಾದವರು, ಯಾವುದೂ ಜಾಹೀರಾತಿನೊಳಗ ಬರಬಾರದೇನು ಅಂದರು. ಇವತ್ಯಾಕೋ ಎಲ್ಲಾ ಹೊಸಾ ರೀತಿ ನಡೆದದ. ಇಲ್ಲಾಂದರ, ಚಹಾ ಕುಡಿಯೋವಾಗ, ಇನ್ನ ಮುಂಜಾನೆ ನಾಷ್ಟಾ ಏನು ಮಾಡೋದು, ಮಧ್ಯಾನ್ಹಕ್ಕ ಹುಳಿ ಏನು, ಭಕ್ಕರೀಗೆ ಪಲ್ಯಾ ಏನು ಅಂತ ಚರ್ಚಾ ಇರತಿತ್ತು. ಈಗೀಗ ಪದ್ದಕ್ಕಜ್ಜೀನೇ ಎಲ್ಲಾ ನಿರ್ಧಾರ ಮಾಡಿ, ನಮ್ಮ ಟ್ರಂಪ್‌ ಹಂಗ ನನ್ನಷ್ಟು ಚನ್ನಾಗಿ ಇದನ್ನು ಮಾಡೋವರಿಲ್ಲ ಅಂತಿದ್ರು ಖರೇ. ಆದರೂ, ನಮ್ಮ ತಾರಕ್‌ ಮೆಹತಾ ಕಾ ಉಲ್ಟಾ ಚಷ್ಮಾದ ದಯಾ ಭಾಭಿ ಹಂಗ, “ಮಾಂ ಕಾ ಸಂಸ್ಕಾರ್” ಅಂತ ಏನಿದ್ರು ನಮ್ಮ ರಾಯರನ್ನು ಕೇಳತಿದ್ದರು. ಆದರ, ರಾಯರ ಅಭಿಪ್ರಾಯ ಪಾಲಿಸತಿದ್ದಿಲ್ಲ ಅಷ್ಟ.

ಇರಲಿ, ಈಗ ಜಾಹೀರಾತಿಗೆ ಬರೋಣು. ಯಾಕ ವಯಸ್ಸಾದವರು ಜಾಹೀರಾತಿಗೆ ಯಾಕೆ ಬರಬಾರದು ಅನ್ನೂದೇ ಮುಖ್ಯವಾಗಿತ್ತು. ನಮ್ಮ ಪದ್ದಕ್ಕಜ್ಜಿಯ ಮೂಲ ಉದ್ದೇಶ ಏನು ಅಂತ ಅರೀದೇನೇ, ರಾಯರು ಏನು ಮಾತಾಡಿದರೂ ಕಷ್ಟ. ಅದಕ್ಕಂತ, ರಾಯರು ಕೇಳಿದರು,ಈಗ, ನಿನಗ್ಯಾಕ, ಜಾಹೀರಾತು. ಅಂದರು. ಆದರ, ಪದ್ದಕ್ಕಜ್ಜಿ, “ಟೀವಿಯೊಳಗ, ಒಬ್ಬಾಕಿ ಅಜ್ಜಿ, ಒಂದೊಂದು ಹಲ್ಲು ಇಲ್ಲ ಬಾಯಾಗ, ಬಚ್ಚ ಬಾಯಿ, ಅಕೀ, ದೊಡ್ಡದೊಂದು ಕಬ್ಬು ಹಿಡಕೊಂಡು, ಹಲ್ಲು ತಿಕ್ಕುವ ಪೇಸ್ಟ ಜಾಹೀರಾತಿಗೆ ಬರತಾಳ.” ಅಂದರು. “ಹೌದು, ಆದರ, ಅಕೀ ಈಗ ಇಲ್ಲಂತ, ಪಾಪ ಸತ್ತು ಹೋದಳಂತ” ಅಂದರು. “ಅದಕ್ಕ, ಹಲ್ಲು ಇಲ್ಲದಾಕಿ ಟೂಥ ಪೇಸ್ಟಿನ ಜಾಹೀರಾತು ಮಾಡಿದರ, ವಯಸ್ಸಾದ ಅಜ್ಜಿ, ಸೋಪಿನ ಜಾಹೀರಾತಿಗೆ ಯಾಕ ಬರಬಾರದು.” ಅಂದರು.

ನಮ್‌ ಪದ್ದಕ್ಕಜ್ಜಿ ಪಾಯಿಂಟ್‌ ಅಂದರೇನೇ ಹೀಂಗ. ಇತ್ಲಾಗ ಅಲ್ಲಾ ಅಂತ ಅನಲಿಕ್ಕೂ ಬರೂದಿಲ್ಲ, ಹೂಂ ಅಂದರ, ಸೋಪಿನ ಜಾಹೀರಾತಿನೊಳಗ ಬರೂ ಹುಡಗೀರನ್ನ ನೋಡದೇನೆ ಇರಲಿಕ್ಕೂ ಆಗೂದಿಲ್ಲ, ಹಂಗಿರತದ. ಪಾಪ, ರಾಯರು ಹೆಂಗ ಸಹಿಸಿಕೊಂಡಿರಬೇಕು, ಇಷ್ಟು ವರ್ಷ ನಮ್ಮ ಪದ್ದಕ್ಕಜ್ಜಿನ್ನ. ಆದರೂ, ಸಾವಕಾಶ ಅಂದರು, “ಅಲ್ಲ, ಮತ್ತ ವಯಸ್ಸಾದವರು, ಸೋಪಿನ ಜಾಹೀರಾತಿಗೆ ಬಂದರ, ಕುಣೀತ, ಕುಣೀತ ಬರಲಿಕ್ಕೆ, ಕಾಲು ನೋವು ಬರತಾವಲ್ಲ, ಹೆಂಗ ಸಾಧ್ಯಾಗತದ. ಅವಾಗ, ಇದು ಸೋಪಿನ ಜಾಹೀರಾತು ಹೋಗಿ, ನೋವು ನಿವಾರಕ ಮಲಾಮಿನ ಜಾಹೀರಾತು ಆದರ ಕಷ್ಟ.” ಅಂದರು.

ಪದ್ದಕ್ಕಜ್ಜಿ ತಲೀಯೊಳಗ ಏನು ಓಡತಿತ್ತೋ ಯಾರಿಗೆ ಗೊತ್ತು. ಆದರೂ ಈ ಸೋಪಿನ ಜಾಹೀರಾತಿಗೆ, ಮೈಸೂರು ಪೇಟಾಕ್ಕ ಏನು ಸಂಬಂಧ ತಿಳೀಬೇಕಾಗಿತ್ತು. ರಾಯರಿಗೆ. ಅದಕ್ಕೇ, ಹಿಂದೊಮ್ಮೆ ಬಗೆ ಬಗೆಯ ಸೋಪು ತಯಾರಕ ಕಂಪನಿಯ ಮುಖ್ಯಸ್ತ, ವಿಭಿನ್ನವಾಗಿ ಗುಂಡಗಿನ ಆಕಾರದ, ವಿವಿಧ ಬಣ್ಣಗಳ ಸೋಪು ಉಪಯೋಗಿಸುವುದನ್ನು ಕಂಡವರೊಬ್ಬರು ಅವರನ್ನು, ಇದು ಯಾವ ಕಂಪನಿಯ ಸೋಪು ಎಂದು ಪ್ರಶ್ನೆ ಮಾಡಿದರಂತೆ. ಅದಕ್ಕೆ ಅವರು, ಇದು, ಒಂದು ಸೋಪು ಖಾಲಿಯಾಗಿ, ಅದರ ತುಂಡನ್ನು, ಹೊಸ ಸೋಪಿಗೆ ಒತ್ತುವಾಗ, ಈ ಸೋಪು, ಗುಂಡಗಾಗಿದೆ. ಹಳೆಯ ಸೋಪಿನ ಬಣ್ಣ, ಈ ಸೋಪಿನ ಬಣ್ಣ ಬೇರೇಯಾಗಿ ಕಾಣುತ್ತಿದೆ. ಪರಿಮಳವೂ ಬೇರೆ ಬೇರೆಯಾಗಿವೆ ಎಂದರಂತೆ. ಆಗ, ನಮ್ಮ ಪದ್ದಕ್ಕಜ್ಜಿ, ಹೌದು ರೀ, ಜಗತ್ತಿನಲ್ಲಿ ಎಲ್ಲಾ ಸೋಪುಗಳೂ ಆಯತಾಕಾರದಲ್ಲಿದ್ದರೆ, ನಮ್ಮ ಮೈಸೂರು ಸ್ಯಾಂಡಲ್‌ ಸೋಪು ಮಾತ್ರ ಅಂಡಾಕಾರವಿದೆ. ಈಗಂತೂ ನೀವು ಹೇಳಿದಂತಹ ಗುಂಡಗಿನ ಮೈಸೂರು ಸ್ಯಾಂಡಲ್‌ ಸೋಪು ತುಂಬಾ ಆಕರ್ಷಕವೆನಿಸುತ್ತದೆ. ಮತ್ತೆ ಅದರ ಪರಿಮಳ, ಬಣ್ಣ ಮಾತ್ರ ಯಾವತ್ತೂ ತನ್ನ ಗುಣ ಮಟ್ಟ ಕಳೆದು ಕೊಂಡಿಲ್ಲ. ಎಲ್ಲಾ ಸೋಪ್‌ ಗಳೂ ಒಂದು ಕಾಗದದಲ್ಲಿ ಸುತ್ತಿ ಮಾರಾಟಕ್ಕಿದ್ದರೆ, ಮೈಸೂರು ಸ್ಯಾಂಡಲ್‌ ಸೋಪು ಮಾತ್ರ ಮೊದಲಿಂದಲೂ ಒಂದು ರಟ್ಟಿನ ಡಬ್ಬಿಯಲ್ಲಿ ಇರುತ್ತದೆ. ಎಂದರು.

ಮತ್ತೆ, ನಮ್ಮ ಮೈಸೂರು, ನಮ್ಮ ಕರ್ನಾಟಕ ತಯಾರಿಸುವ ಸೋಪ್ ಇದು. ಈ ಸೋಪ್‌ ನ್ನು ೧೯೧೬ ರಿಂದ ಬೆಂಗಳೂರಿನಲ್ಲಿ ಮೈಸೂರಿನ ಮಹಾರಾಜರು ತಯಾರಿಸಲು ಪ್ರಾರಂಭಿಸಿದರು. ಶಿವಮೊಗ್ಗ ಮತ್ತು ಮೈಸೂರಿನಲ್ಲಿನ ಶ್ರೀಗಂಧದ ಎಣ್ಣೆಯ ಕಾರ್ಖಾನೆಯನ್ನು ವಿಲೀನ ಮಾಡಿದ್ದಾರೆ. ಶುದ್ಧ ಶ್ರೀಗಂಧದಿಂದ ತಯಾರಾಗುವ ವಿಶ್ವದ ಏಕೈಕ ಸೋಪ್‌ ಇದು. ಸಾಬೂನು ಮಾರ್ಜಕ ಎಂಬ ಅಚ್ಚ ಕನ್ನಡದ ಹೆಸರುಗಳು ಸೋಪ್‌ ಗೆ ಇವೆ.

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತು, ಮೊದಲಿಗೆ ಮದರಾಸು ಪ್ರೆಸಿಡೆನ್ಸಿಯ ಜಸ್ಟೀಸ್‌ ಎಂಬ ಇಂಗ್ಲೀಷ್‌ ಪತ್ರಿಕೆಯಲ್ಲಿ ದಿನಾಂಕ ಆಗಸ್ಟ, ೧೯೩೭ ರಲ್ಲಿ ಪ್ರಕಟವಾಯಿತು. ಅದರ ಮೇಲೆ ಸ್ವಾಮ್ಯದ ಭೌಗೋಳಿಕ ಸೂಚನಾ ಟ್ಯಾಗ್ ಅನ್ನು ಹೊಂದಿದೆ, ಇದು ಬ್ರಾಂಡ್ ಹೆಸರನ್ನು ಬಳಸಲು, ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ಇತರ ತಯಾರಕರಿಂದ ಕಡಲ್ಗಳ್ಳತನ ಮತ್ತು ಅನಧಿಕೃತ ಬಳಕೆಯನ್ನು ತಡೆಯಲು ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀಡುತ್ತದೆ. 2006 ರಲ್ಲಿ, ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ಮೈಸೂರು ಸ್ಯಾಂಡಲ್ ಸೋಪಿನ ಮೊದಲ ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಲಾಯಿತು.” ಅಂದರು ರಾಯರು.

“ಕಂಪನಿಯು ತನ್ನ ಶತಮಾನೋತ್ಸವವನ್ನು ಮೇ 10, 2016 ರಂದು ಆಚರಿಸಿತು. 100 ನೇ ವರ್ಷದ ಸ್ಮರಣಾರ್ಥವಾಗಿ ಕರ್ನಾಟಕ ಸೋಪ್ಸ್ ಮೇ 10, 2016 ರಂದು ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಮೈಸೂರು ಸ್ಯಾಂಡಲ್ ಸೋಪ್ ತಯಾರಕರು ನವೆಂಬರ್ 4, 2017 ರಂದು, ರೋಸ್ ಮಿಲ್ಕ್ ಕ್ರೀಮ್, ಜಾಸ್ಮಿನ್ ಮಿಲ್ಕ್ ಕ್ರೀಮ್, ಆರೆಂಜ್ ಲೈಮ್, ಕಲೋನ್ ಲ್ಯಾವೆಂಡರ್ ಮತ್ತು ಫ್ರೂಟಿ ಫ್ಲೋರಲ್ ರೂಪಾಂತರಗಳಲ್ಲಿ ಮೈ ಸೋಪ್ ಬ್ರಾಂಡ್ ಹೆಸರಿನ ಹೊಸ ಸೋಪ್ ಬುಟ್ಟಿಯನ್ನು ಬಿಡುಗಡೆ ಮಾಡಿದರು. ಪ್ರತಿಯೊಂದು ವಿಧವನ್ನು ಸಾಂಪ್ರದಾಯಿಕ ನೋಟದಲ್ಲಿ ಜನಾಂಗೀಯ ಭಾರತೀಯ ಮಹಿಳೆಯನ್ನು ಚಿತ್ರಿಸುವ ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗಿದೆ. ಸೋಪ್ 100 ಗ್ರಾಂ ತೂಗುತ್ತದೆ. ಮೈಸೂರು ಸ್ಯಾಂಡಲ್ ಬೇಬಿ ಸೋಪ್ ಅನ್ನು ಸಹ ಪರಿಚಯಿಸಿದೆ. ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಎಂಬ ಕಂಪನಿಯಡಿ ಸಿಂಹದ ದೇಹ ಮತ್ತು ಆನೆಯ ತಲೆಯನ್ನು ಹೊಂದಿರುವ ಪೌರಾಣಿಕ ಜೀವಿ ಶರಭವನ್ನು ಕಂಪನಿಯ ಲೋಗೋ ಆಗಿ ಆಯ್ಕೆ ಮಾಡಲಾಯಿತು ಏಕೆಂದರೆ ಈ ಜೀವಿ ಬುದ್ಧಿವಂತಿಕೆ, ಧೈರ್ಯ ಮತ್ತು ಶಕ್ತಿಯ ಸಂಯೋಜಿತ ಸದ್ಗುಣಗಳನ್ನು ಪ್ರತಿನಿಧಿಸುತ್ತದೆ ಮತ್ತು ಕಂಪನಿಯ ತತ್ವಶಾಸ್ತ್ರವನ್ನು ಸಂಕೇತಿಸುತ್ತದೆ ” ಅಂತ ವಿವರಣೆ ನೀಡಿದರು ನಮ್ ರಾಯರು. ಎಷ್ಟೆಂದರೂ ಅವರೂ ಕೂಡಾ ಇಂಜಿನೀಯರ್‌ ಆಗಿದ್ದರವರಲ್ಲ. ಅವರಿಗೆ ಈ ಎಲ್ಲಾ ವಿಷಯಾ ನಾಲಿಗಿ ತುದಿಯೊಳಗ ಇರತಾವ.

ಆದರ, ನಮ್ಮ ಪದ್ದಕ್ಕಜ್ಜಿಯೇ ಬೇರೆ. ಅವರ ಧೀಟೇ ಬೇರೇ ಅಲ್ಲೇನು. ನಾ ಹೊಸದಾಗಿ ಹೇಳೋದೇನದ. ನಿಮಗೇ ಗೊತ್ತದ. ಅವರ ವಿಚಾರ ಲಹರಿ ಬ್ಯಾರೇನೇ ಇರತದ. ಅವರು ಕೇಳಿದರು, “ಮೈಸೂರು ಸ್ಯಾಂಡಲ್‌ ಸೋಪು, ಪಕ್ಕಾ ಮೈಸೂರು ನಾಡಿನದು ಅಲ್ಲೇನು.” ಅಂದರು. ಅದಕ್ಕ, “ನಮ್‌ ರಾಯರು, ನೂರಕ್ಕ ನೂರು ಖರೇ ಅದ.” ಅಂದರು. “ಮತ್ತ, ಮೊದಲಿನಿಂದನೂ, ಮೈಸೂರು ಸ್ಯಾಂಡಲ್‌ ಸೋಪಿಗೆ, ಸಾಂಪ್ರದಾಯಿಕ ನೋಟದಲ್ಲಿ ಜನಾಂಗೀಯ ಭಾರತೀಯ ಮಹಿಳೆಯನ್ನು ಚಿತ್ರಿಸುವ ಜಾಹೀರಾತು ಕೊಡತಾರ. ಅಲ್ಲೇನು” ಅಂತ ಕೇಳಿದರು. ಅಷ್ಟ ಹೊತ್ತಿಗೆ, ಪೇಪರ್‌ ಬಂತು, ರಾಯರು ಗೋಣು ಅಲ್ಲಾಡಿಸಿಕೊಂಡು, ಪೇಪರ್‌ ಹಿಡಿದರು. ಪದ್ದಕ್ಕಜ್ಜಿ, ಮ್ಯಾಲೆದ್ದರು, ಚಹಾ ಕಪ್ ಗಳನ್ನ ಕೈಯಾಗ ಹಿಡಕೊಂಡು.

ಆದರೂ, ಪದ್ದಕ್ಕಜ್ಜಿ ತಲೀಯೊಳಗ, ಏನು ಓಡುತಿರದ, ಯಾರಿಗೂ ತಿಳಿಯೂದಿಲ್ಲ, ನದೀ ಮೂಲ, ಋಷೀ ಮೂಲ ಹುಡುಕ ಬಾರದು. ಹಂಗ, ನಮ್ಮ ಪದ್ದಕ್ಕಜ್ಜಿಯ ವಿಚಾರಧಾರೆಯ ಮೂಲವನ್ನೂ ಹುಡುಕಬಾರದು. ಅವರು ಹೇಳೋದೂ ಖರೇನ ಅದರೀ. ಯಾವುದೇ ಸೋಪ್‌ ಜಾಹೀರಾತಿಗೆ ಹುಡುಗೇರೇ ಯಾಕೆ ಬೇಕು. ಹಲ್ಲಿಲ್ಲದ ಅಜ್ಜಿ ಬಣ್ಣದ ಪೇಸ್ಟ ನ ಜಾಹೀರಾತಿಗೆ ಓಕೇ. ಸೋಪಿಗೆ ಮಾತ್ರ ಅಲ್ಲ ಯಾಕೆ? ಸಾಂಪ್ರದಾಯಿಕ ಭಾರತೀಯ ಮಹಿಳೆಯರು ಅಂದರೆ, ಹುಡುಗಿಯರು ಮಾತ್ರವೇನಾ? ಮೈಸೂರು ಸೋಪಿಗೆ ಮೈಸೂರು ನಾಡಿನವರನ್ನು ಬಿಟ್ಟು, ಬೇರೆಯವರು ಬ್ರಾಂಡ್‌ ರಾಯಭಾರಿ ಯಾಕೆ? ಹೀಂಗೇನೇ ಗಂಗಾ ಲಹರಿ ಹಂಗೆ ವಿಚಾರ ಲಹರಿ. ಇದು ಯಾಕ, ಅದೂ ಈ ಸಮಯದಾಗ ಅಂತ ನಿಮಗ ಅರ್ಥ ಆಗೇದ ಅಂತ ಅನಕೋತೀನೀ. ಹೇಳದಿರುವ ಮಾತನ್ನು ಅರ್ಥ ಮಾಡಿಕೊಳ್ಳುವವರೇ ಆತ್ಮೀಯರು, ಅಲ್ಲವೇನ್ರೀ.

ಆದರೂ, ಪದ್ದಕ್ಕಜ್ಜಿಯ ತಲೆಯಲ್ಲಿ ಓಡುತ್ತಿದ್ದುದು ಇದಲ್ಲವೇ ಅಲ್ಲ. ಬಿಸಿ ಬಿಸಿ ಭಕ್ಕರೀ, ಬೆಂಡಿಕಾಯಿ ಗೊಜ್ಜು ತಿಂದು, ರಾಯರು ತಿರುಗಾಟದ ಉದ್ದೇಶವೇ ಮುಖ್ಯವಾಗಿದ್ದು, ಅದಕ್ಕೇಂತ ಒಂದು ಸಣ್ಣ ಕೆಲಸ ಗುರಿಯಾಗಿಟ್ಟುಕೊಂಡು ಹೊರಟರು. ಪದ್ದಕ್ಕಜ್ಜಿ ಎದುರು ಮನೆ ಹುಡುಗಿ, ರೇಷ್ಮಾನ್ನ ಕರೆದರು. ಅಕೀಗೆ ಆಗಾಗ ಡ್ಯಾನ್ಸ ಮಾಡುವ ವಿಡಿಯೋ ನ ಮಾಡಲಿಕ್ಕೆ ಸಹಾಯ ಮಾಡೋವರೇ ಪದ್ದಕ್ಕಜ್ಜಿ, ಅದೂ ತಮ್ಮದೇ ಮೊಬೈಲ್‌ ನಲ್ಲಿ. ಹಿಂಗಾಗಿ ರೇಷ್ಮಾ ಓಡಿ ಬಂದಳು.

ಮುಂದಿನದು ಏನಿದ್ದರೂ ಇತಿಹಾಸ ಆಗುವ ಲಕ್ಷಣಗಳಿವೆ. ನಮ್ಮ ಪದ್ದಕ್ಕಜ್ಜಿ, ಹಸಿರು ಮೈಸೂರು ರೇಷಿಮೆಯ ಸೀರೆಯುಟ್ಟು, ಮುಡಿಗೆ ಮಲ್ಲಿಗೆ ಮುಡಿದು, ತಮ್ಮ ಮನೆಯಲ್ಲಿರುವ ಎಲ್ಲಾ ಸೋಪುಗಳನ್ನೂ ಪಕ್ಕಕ್ಕೆ ತಳ್ಳಿ, ಮೈಸೂರು ಸ್ಯಾಂಡಲ್‌ ಸೋಪ್‌ ಕೈಯಲ್ಲಿ ಹಿಡಿದು, ನಾನು ಮೈಸೂರು ನಾಡಿನವಳು, ಮೈಸೂರು ರೇಶಿಮೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್‌ ಸೋಪ್‌, ಎಂದಿದಿಗೂ ನಮ್ಮ ಅಭಿಮಾನ. ನಮ್ಮ ಮೈಸೂರು, ನಮ್ಮ ಹೆಮ್ಮೆ ಎಂದು ಹೇಳಿರುವ ಹತ್ತು ಸೆಕೆಂಡಿನ ಒಂದು ವೀಡಿಯೋ ತಯಾರಾಯಿತು.

ನಂತರ, ನೀಲಿ ಮೈಸೂರು ರೇಷಿಮೆಯ ಸೀರೆಯುಟ್ಟ ಪದ್ದಕ್ಕಜ್ಜಿ ದೇವರ ಮನೆಯಲ್ಲಿ ಭಕ್ತಿಯಿಂದ, ಸಣ್ಣ ಧ್ವನಿಯಲ್ಲಿ, “ಮಹಾ ಗಣಪತೀಂ” ಹೇಳುತ್ತಾ, ಮೈಸೂರು ಊದುಬತ್ತಿಯನ್ನು ಹಚ್ಚಿ, ದೇವರಿಗೆ ಕೈಮುಗಿಯುತ್ತಾರೆ. ನಿಧಾನವಾಗಿ ಕ್ಯಾಮರಾದ ಕಡೆ ಕ್ಲೋಸಪ್‌ ಕಿರುನಗೆ ಬೀರಿ, ಸುಮಧುರ ಪರಿಮಳ, ಸುಂದರ ಭಾವನೆ, ಭಕ್ತಿ, ಶಾಂತಿ, ಎಂದೆಂದಿಗೂ ಮೈಸೂರು ಸ್ಯಾಂಡಲ್‌ ಅಗರಬತ್ತಿಗಳು. ನಮ್ಮ ಮೈಸೂರು, ನಮ್ಮ ಹೆಮ್ಮೆ ಎಂದು ಹೇಳಿರುವ ಎಂಟು ಸೆಕೆಂಡಿನ ಮತ್ತೊಂದು ವೀಡಿಯೋ ತಯಾರಾಯಿತು.
ಈಗ, ಕೆಂಪು ಮೈಸೂರು ರೇಷಿಮೆಯ ಸೀರೆಯಲ್ಲಿ ಪದ್ದಕ್ಕಜ್ಜಿ ಕೂತಿದ್ದಾರೆ. ತಲೆ ಮೇಲೆ ಮೈಸೂರು ಪೇಟಾ ಇದೆ. ಹೆಗಲ ಮೇಲೆ ಮೈಸೂರು ರೇಶಿಮ ಅಚ್ಚ ಬಿಳಿ ಶಾಲಿದೆ. ಮೈಸೂರು ಜನರ ಅಭಿಮಾನವಿದು. ನೂರು ಜನುಮದಲ್ಲೂ ಮೈಸೂರಿನಲ್ಲೇ ಜನಿಸುವಂತೆ ಆಶೀರ್ವಾದ ಮಾಡು, ತಾಯೀ ಚಾಮುಂಡೇಶ್ವರಿಯೇ. ಎಂದು ಹೇಳಿ ಕೈಮುಗಿಯುವ ವೀಡೀಯೋ ಕೇವಲ ಆರು ಸೆಕೆಂಡಿನದು.

ಕೊನೆಯದಾಗಿ, ಹಳದೀ ರೇಷಿಮೆ ಸೀರೆಯ ಪದ್ದಕ್ಕಜ್ಜಿ, ಕೈಯಲ್ಲಿ ಮೈಸೂರು ಪಾಕಿನ ಡಬ್ಬಿಯಿದೆ. ಹುಟ್ಟು ಹಬ್ಬದ ಸಂತೋಷವೇ, ಮದುವೆಯ ವಾರ್ಷಿಕೋತ್ಸವವೇ. ಸಂಭ್ರಮ ಯಾವುದೇ ಇರಲಿ, ಆಚರಣೆಗೆ ಸಿಹಿ ನೆನಪುಗಳಿಗೆ, ಸಿಹಿ ನೀಡುವುದು, ನಮ್ಮ ಮೈಸೂರು ಪಾಕ್‌ ನಮ್ಮ ಹೆಮ್ಮೆ ಎಂಬ ಒಂದು ವೀಡಿಯೋ.

ಇವಿಷ್ಟೂ ವೀಡಿಯೋಗಳನ್ನೂ ಹಾಗೂ ಕೆಲವು ಸ್ಟಿಲ್‌ ಫೋಟೋಗಳನ್ನೂ ಈ ಮೈಸೂರು ಸ್ಯಾಂಡಲ್‌ ಸೋಪ್‌ ಜಾಹೀರಾತಿಗೆ ಕಳಿಸುವುದು. ಪರ ಭಾಷಿಕರನ್ನು ನಮ್ಮ ನಾಡಿಗೆ ರಾಯಭಾರಿಯನ್ನಾಗಿ ಮಾಡುವುದರ ಔಪಚಾರಿಕತೆಯನ್ನು ವಿವರಿಸುವುದು. ಈ ಎರಡನ್ನೂ ಮಾನ್ಯ ಮಂತ್ರಿಗಳಿಗೆ ಕಳುಹಿಸುವುದು ಎಂದು ನಿರ್ಧರಿಸಿ, ಎಲ್ಲಾ ಸೀರೇ, ಪೇಟಾ, ಮೈಸೂರು ಪಾಕುಗಳನ್ನು ಅವುಗಳ ಜಾಗಕ್ಕೆ ಸೇರಿಸಿ, ಅನ್ನ ಸೊಪ್ಪಿನ ಹುಳಿ, ಅರಳು ಸಂಡಿಗೆ, ಮೊಸರು ತಯಾರಿಸಿಟ್ಟುಕೊಂಡು, ರಾಯರಿಗೆ ಕಾಯುತ್ತಾ ಕುಳಿತರು.

ಇಲ್ಲೇ ಸಣ್ಣದೊಂದು ಟ್ವಿಸ್ಟ್ ಬಂದಿದೆ. ರೇಷ್ಮಾ, ತುಂಬಾ ಉತ್ಸಾಹದಿಂದ ಮಾಡಿದ ವೀಡೀಯೋಗಳನ್ನು ನೋಡಿ, ತಾನೇ ಆಶ್ಚರ್ಯ ಪಟ್ಟು, ಅವನ್ನು ತನ್ನ ಗೆಳತಿಗೆ ಕಳಿಸಿ, ನೋಡು ನಾನೇ ಮಾಡಿದ ವೀಡೀಯೋಗಳು ಎಂದು ತಿಳಿಸಿದಳು. ಅದು ವೈರಲ್‌ ಆಗುವುದು ತಡವಾಗಲಿಲ್ಲ. ಇಂತಹ ಚಂದದ ವೀಡಿಯೋಗಳನ್ನು ಮಾಡಿದವರಿಗೆ ಒಂದು ಧನ್ಯವಾದಗಳು. ನಮ್ಮ ಮೈಸೂರು, ನಮ್ಮ ಹೆಮ್ಮೆ ಎನ್ನುವುದನ್ನು ಯಾರೂ ಮರೆಯಲಿಲ್ಲ. ಅತೀ ಹೆಮ್ಮೆಯಿಂದ ಒಬ್ಬರಿಂದೊಬ್ಬರಿಗೆ ಶೇರ್‌ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ನೂರಾರು ಜನರಿಂದ ನೂರಾರು ಬಾರಿ ಶೇರ್‌ ಆದ ವೀಡಿಯೋಗಳಿವು.

ಈ ವೀಡಿಯೋಗಳಲ್ಲಿನ ವಿಶೇಷತೆಯಂದರೆ, ತುಂಬಾ ಸ್ವಾಭಾವಿಕವಾಗಿ ಮೂಡಿ ಬಂದಿರುವುದು. ಪದ್ದಕ್ಕಜ್ಜಿ ನಮ್ಮ ಮನೆಯವರೇ ಏನೋ ಎಂಬ ಆತ್ಮೀಯ ಭಾವವನ್ನು ತೋರಿರುವುದು. ಮುಖ್ಯವಾಗಿ ಎಲ್ಲೂ ಅತಿರೇಕದ, ನನ್ನದಲ್ಲದ ಅಂಶ ಕಾಣದಿರುವುದು. ಇಂದಿನ ಯಾವುದೇ ಜಾಹೀರಾತಿನಲ್ಲಿ ಕಂಡು ಬರುವ ಕಿವಿಗಡಿಚಿಕ್ಕುವ ನಮ್ಮದಲ್ಲದ ಸಂಗೀತವಿಲ್ಲ. ಎಲ್ಲೂ ಶೋ ಆಫ್‌ ಇಲ್ಲ. ಮತ್ತೆ ನಮ್ಮ ಪದ್ದಕ್ಕಜ್ಜಿ ಮಾತ್ರ ಇಷ್ಟು ಸುಂದರವಾಗಿ ಕಾಣುವರೇ ಎಂದು ಅವರೇ ನಂಬಲಿಕ್ಕಾಗದಷ್ಟು ಗೌರವ ಪೂರ್ಣವಾಗಿ ಕಾಣಿಸುತ್ತಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಒಬ್ಬೊಬ್ಬರೇ, ಪದ್ದಕ್ಕಜ್ಜಿಗೂ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಸಂಜೆಯ ವೇಳೆಗೆ, ನಮ್ಮ ಪದ್ದಕ್ಕಜ್ಜಿಯ ವೀಡಿಯೋಗಳು ಇನ್ಸ್ಟಾಗ್ರಾಂ ಗಳಲ್ಲಿ ಪದ್ದಕ್ಕಜ್ಜಿಯದೇ ಪ್ರತಿಭೆ. ಅಮೇರಿಕಾದಲ್ಲಿದ್ದ ಮಗನಿಗೆ, ಬೆಳಿಗ್ಗೆಯೇ ಅವರ ಅಮೇರಿಕಾದ ಬಾಸ್‌ ನಿಂದ ಒಂದು ಮೆಸೇಜ್‌ ಬಂತು. ಕೂಡಲೇ ಈ ವೀಡೀಯೋ ನೋಡಿ ಅಂತ. ಅವರು, ಹಾಸಿಗೆಯಲ್ಲಿದ್ದಾಗಲೇ, ವೀಡೀಯೋ ನೋಡಿದರೆ, ಅಮ್ಮನ ವೀಡೀಯೋ. ಯಾಕೆ, ಏನು ಅಂತ ವಿಚಾರ ಮಾಡುವ ಮೊದಲೇ, ಸೊಸೆ ಹೇಳಿದಳು. “ಅತ್ತೆ ಎಷ್ಟು ಚನ್ನಾಗಿದ್ದಾರಲ್ವಾ, ಈ ವಯಸ್ಸಲ್ಲಿಯೂ, ಸಾಕ್ಷಾತ್‌ ಲಕ್ಷ್ಮೀದೇವಿ ನಿಂತಂತಿದೆ.” ಎಂದಳು. ಮಗನಿಗೆ ಆಶ್ಚರ್ಯ, ಅಮ್ಮ ಈ ವೀಡಿಯೋ ಯಾಕಾಗಿ ಮಾಡಿದ್ದಾರೆ, ಮತ್ತೆ ಅದೂ ನಮ್ಮ ಅಮೇರಿಕಾ ಬಾಸ್‌ ಗೆ ಹೇಗೆ ತಲುಪಿದೆ. ಅದು ನಮ್ಮ ಅಮ್ಮ ಎಂದು ಹೇಗೆ ತಿಳಿಯಿತು, ಇದೆಲ್ಲಾ ಯಕ್ಷ ಪ್ರಶ್ನೆ ಎನಿಸಿತು. ಅದಕ್ಕೆ ಉತ್ತರವಾಗಿ ಬಾಸ್‌ ಕರೆ ಬಂತು. ಅಲ್ಲಿ, ಬಾಸ್‌ ಗೆಳೆಯನೊಬ್ಬ ಸುಂದರವಾದ ವೀಡೀಯೋ ನೋಡಲೆಂದು ಕಳಿಸಿದನಂತೆ. ಅಲ್ಲಿ ಪದ್ದಕ್ಕಜ್ಜಿ ಮೈಸೂರು ಪಾಕ್‌ ತಿನ್ನುವ ಪ್ರಸಂಗದಲ್ಲಿ, ಹಿಂದೆ ಮಗನ ಫೋಟೋ ದೊಡ್ಡದಾಗಿ ಕಾಣುತಿತ್ತು. ಕಂಗ್ರಾಜ್ಯುಲೇಷನ್‌ ಎಂದ. ಮಗ ತಕ್ಷಣವೇ ಅಮ್ಮನಿಗೆ ಕರೆ ಮಾಡಿದ. ತಂಗಿಗೆ ಆಸ್ಟ್ರೇಲಿಯಾದಲ್ಲಿರುವವರಿಗೂ ಈ ವೀಡೀಯೋ ತಲುಪಿತ್ತು. ಇಬ್ಬರಿಗೂ ಖುಷಿಯೋ ಖುಷಿ.

ಈಗ, ಈ ವೀಡೀಯೋಗಳೆಲ್ಲಾ ರಾಯಭಾರಿಯಾಗಲಿರುವವರಿಗೂ ತಲುಪುಪಿತ್ತು. ಅವರೇ ಒಂದು ವೀಡೀಯೋವನ್ನು ತಯಾರಿಸಿ, ನಮ್ಮ ಮೈಸೂರಿನ ಹೆಮ್ಮೆ ಈ ತಾಯಿ. ನಿಜವಾಗಿಯೂ, ಚಾಮುಂಡೇಶ್ವರಿಯೇ ಶಾಂತ ರೂಪದಿಂದ ಈ ವೀಡೀಯೋಗಳಲ್ಲಿ ನಗುನಗುತ್ತಾ ಬಂದಿದ್ದಾರೆ. ಅವರು ಮಾಡಿದ ಈ ವೀಡಿಯೋಗೆ ನಾನು ನಟಿಸಿದರೆ, ದೇವಿಗೆ ಕೋಪ ಬರುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ನಾನು ಕೂಡಾ ಈ ಜಾಹೀರಾತಿಗೆ ಗೌರವಿಸುತ್ತೇನೆ. ಆ ತಾಯಿಯ ಅನುಗ್ರಹ ಹಾಗೂ ಕನ್ನಡಿಗರ ಹೆಮ್ಮೆಯ ನಂಟಿನ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದ್ದಾರೆ. ಅದನ್ನೂ ಈ ವೀಡಿಯೋಗಳ ಜೊತೆ ಎಲ್ಲಾ ಟೀವಿಯಲ್ಲೂ ಪ್ರಸಾರ ಮಾಡುತ್ತಿದ್ದಾರೆ.

ಇದೀಗ ಮೈಸೂರು ಸ್ಯಾಂಡಲ್‌ ಸೋಪ್‌ ನ ಮಂತ್ರಿಗಳ ಇಲಾಖೆಯ ಕಾರ್ಯದರ್ಶಿಗಳು, ಈ ವೀಡೀಯೋಗಳು ಈಗಾಗಲೇ ಕನ್ನಡಿಗರ ಮನ ಗೆದ್ದಿರುವುದರಿಂದ, ಇವುಗಳನ್ನೇ ಮೈಸೂರು ಸ್ಯಾಂಡಲ್‌ ಸೋಪ್‌ ಜಾಹೀರಾತಿಗೆ ಬಳಸುವ ಬಗ್ಗೆ ಮಾನ್ಯ ಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ನಾಳೆಯಿಂದ ನಮ್ಮ ಪದ್ದಕ್ಕಜ್ಜಿಯೇ ಮೈಸೂರು ಸ್ಯಾಂಡಲ್‌ ಸೋಪಿನ ಬ್ರ್ಯಾಂಡ್‌ ಅಂಬ್ಯಾಸ್ಯಾಡರ್‌ ಅಂದರೆ ರಾಯಭಾರಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ನೀವೂ ನಮ್ಮೊಂದಿಗೇ ಅಲ್ಲವೇ.

-ಡಾ.ವೃಂದಾ. ಸಂಗಮ್‌

ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x