ತಮಿಳು ಮೂಲ : ಪುದುಮೈಪಿತ್ತನ್
ರಚಿಸಿದ ಕಾಲ: ೧೯೩೪
ಅನುವಾದ : ಡಾ. ಮಲರ್ ವಿಳಿ ಕೆ, ಕನ್ನಡ ಪ್ರಾಧ್ಯಾಪಕರು,, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ.
ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ವದ ಕಡೆಯ ವಾರ್ಡ್ ನ ಹಾಸಿಗೆಯಲ್ಲಿ, ನನ್ನ ರೋಗಕ್ಕೆ ಏನೋ ಒಂದು ಉದ್ದನೆಯ ಲ್ಯಾಟಿನ್ ಹೆಸರನ್ನು ಹೇಳಿ, ನನ್ನನ್ನು ಕರೆದುಕೊಂಡು ಹೋಗಿ ಮಲಗಿಸಿದರು. ನನ್ನ ಇಕ್ಕೆಲಗಳಲ್ಲಿಯೂ ನನ್ನಂತೆ ಹಲವು ರೋಗಿಗಳು ಗೋಳಿಡುತ್ತಾ, ಹೂಂಗುಡುತ್ತಾ ನರಕದ ಉದಾಹರಣೆಯಂತೆ.ಒಂದೊಂದು ಮಂಚದ ಪಕ್ಕದಲ್ಲಿಯೂ ಔಷಧಿಯನ್ನು ಗಂಜಿಯನ್ನು ಇಡಲು ಒಂದು ಚಿಕ್ಕ ಆಲಮಾರು, ಮಂಚದ ಕಂಬಿಯಲ್ಲಿ ಡಾಕ್ಟರ ಗೆಲುವು ಅಥವಾ ರೋಗದ ಗೆಲುವು ಎರಡರಲ್ಲೊಂದನ್ನು ತಿಳಿಸುವ ‘ಚಾರ್ಟ್’ ಎಂಬ ಕ್ಯಾಪ್ ಫೈಲ್. ಹಾಲ್ ನ ಮಧ್ಯದಲ್ಲಿ ಒಂದು ವಿದ್ಯುದ್ದೀಪ: ನಿದ್ರಿಸುವಾಗ ಕಣ್ಣುಗಳಿಗೆ ಬೆಳಕು ಚುರುಗುಟ್ಟುವಂತೆ ಮಂದವಾದ ಒಂದು ‘ಗಾಜಿನ ಕವಚ’.ಅದರ ಕೆಳಗೆ ಬಿಳಿಯ ಬಣ್ಣ ಬಳಿದ ಒಂದು ಮೇಜು, ಕುರ್ಚಿ (ಆರಾಮ) ಅದರಲ್ಲಿ ಬಿಳಿ ವಸ್ತ್ರವನ್ನು ಧರಿಸಿದ, ಒಬ್ಬ ನರ್ಸ್ ಏನನ್ನೋ ಬರೆಯುತ್ತಿದ್ದಾಳೆ. ಯಾವುದರ ಪರಿವೆಯೂ ಇಲ್ಲದೆ ಬೇಸತ್ತಿರುವ ಮನಸ್ಸು. ಅಯ್ಯೋ! ಮತ್ತೆ ಮರುಕಳಿಸಿದ ಆ ಹೊಟ್ಟೆ ನೋವು ಕರುಳನ್ನಿರಿಯುವಂತೆ ಬರುವಂತಿದೆಯಲ್ಲಾ ! ಒಂದು ಕೈಯಿಂದ ಹೊಟ್ಟೆಯನ್ನು ಅದುಮಿಟ್ಟುಕೊಂಡು ಒಂದು ಮಗ್ಗುಲಿಗೆ ತಿರುಗಿ ಮಲಗಿದೆ. ಛಿ! ‘ಸ್ಟ್ರಿಂಗ್’ ಮಂಚವಂತೆ !
ಏನಪ್ಪ ಹೀಗೆ ಒತ್ತುತ್ತಿದೆ !
ಸ್ವಲ್ಪ ಆಯಾಸ …….
ಏನಿದು ಆಶ್ಚರ್ಯ ! ಮಂಚ ನನ್ನೊಂದಿಗೆ ಮಾತನಾಡುತ್ತಿದೆ !
“ ಏನಪ್ಪಾ ! ನನ್ನ ‘ಸ್ಟ್ರಿಂಗ್’’ ಗೆ ಏನು ಕೊರತೆ? ನೀನು ನಾಳೆಗೆ, ತುಂಬಾ…… ನನ್ನ ಬಳಿ ಬರುವವರನ್ನು, ಮರ್ಯಾದೆಯಿಂದ ನಾಲ್ಕು ಜನರೊಂದಿಗೆ,ಶಂಖ ಊದಿ ಅಥವಾ ವೇದ ಮಂತ್ರ ಸಹಿತವಾಗಿಯೇ ದೀರ್ಘ ಪ್ರಯಾಣವಾಗಿ ಕಳುಹಿಸುವುದು ! ಏನು, ಅರ್ಥವಾಯಿತೇ? ನಿನಗೂ ಅದೇ ಗತಿಯೇ! ಹ್ಹೀ ಹ್ಹೀ ಹ್ಹೀ ……..”
ಏನಿದು ಭಯಂಕರವಾದ ಪಿಶಾಚಿ ನಗೆ !
ಮತ್ತೆ ……..
“ಇನ್ನೂ ಸಂದೇಹವೇ? ನಮ್ಮ ‘ಡೈರಿ’ ಯನ್ನು ಓದುವೆನು ಕೇಳಿ ! “
“ಹೂಂ ……….”
“ಒಂದು ಸವಿಯಾದ ಪ್ರೇಮಕಥೆಯನ್ನು ಹೇಳಲಾ? “
“ಒಬ್ಬ ಯುವಕ, ಸ್ಪುರದ್ರೂಪಿ. ವಿಷ ಒಳಗೆ ಹೋದುದರಿಂದ ಕರುಳು ಬೆಂದು ಹೋಗಿ ಹುಣ್ಣು, ನನ್ನ ಮಡಿಲಲ್ಲೇ ಮಲಗಿಸಿದರು. ನಮ್ಮ ಡಾಕ್ಟರ್ ದೊಡ್ಡ ಅಸಹಾಯಕರು: ಎರಡನೇ ಬ್ರಹ್ಮ, ಹುಣ್ಣು ಗುಣಮುಖವಾಗುತ್ತಿದೆ. ಅದರೆ ರೋಗಿ ಮಾತ್ರ ತುಂಬ ಕೃಶವಾಗುತ್ತಿದ್ದಾನೆ. ಡಾಕ್ಟರ್ʼ ಗೆ ಏನೂ ತೋಚಲಿಲ್ಲ. ಅವನ ಕಥೆ ನನಗೆ ಗೊತ್ತು ಅವರಿಗೆ ಗೊತ್ತುಂಟಾ? ಇಬ್ಬರು ಯುವಕರು, ಆದರೆ ಹೆಣ್ಣು ಒಬ್ಬಳೇ, ಇಬ್ಬರಿಗೂ ಅವಳ ಮೇಲೆ ಪ್ರೀತಿ. ಅದೃಷ್ಟದ ಚೀಟಿ ಇವನಿಗೆ ಬಿತ್ತು. ಆದರೆ ಯುವತಿ ಅವನನ್ನು ಪ್ರೀತಿಸುತ್ತಾಳೆ.”
“ನಂತರ ಏನಾಯಿತು! ಅವನಿಗೆ ಪ್ರೇಮ, ಹೆಣ್ಣು, ಹಾಸಿಗೆ. ಇವನಿಗೆ ದು:ಖ, ವಿಷ, ನಾನು ! ಇವನ ಪ್ರೀತಿ ಪವಿತ್ರವಾದುದು. ಕಾರ್ಯ ಕೈಮೀರಿದ್ದು, ತಿಳಿದಿದ್ದರೂ, ಹೇಳುತ್ತಾರಲ್ಲಾ, ಆ ಬದಲಿಸಲಾಗದ ಹಕ್ಕು, (ಸ್ವಾಮ್ಯ) ಅದನ್ನೂ ಸಹ ಬಿಟ್ಟು ಕೊಡುತ್ತಿದ್ದ – ಅವಳ ಬಾಳಿನ ಸುಖ ಸಂಪೂರ್ಣಗೊಳಿಸಲು.‘ಅವಳ ಕೈಯ ವಿಷದಿಂದ ಸಾಯುತ್ತೇನೆ’ ಎಂಬ ಕುತೂಹಲವಿದ್ದರೆ, ನೋಡು| ನಂತರ…….. ಅಂದು ರಾತ್ರಿ ಮುಚ್ಚಿದ ಕಣ್ಣು ಸ್ವಲ್ಪ ತೆರೆಯಿತು. ಒಂದು ಮುಗುಳ್ನಗೆ ತುಟಿಗಳ ಮೇಲೆ ಅವಳ ಹೆಸರು. ಬಯಲಿಗೆ (ಗಾಳಿಗೆ) ಒಂದು ಮುತ್ತು ಅಷ್ಟೇ!” “ಚೆನ್ನಾಗಿದೆಯಾ?”
“ಮತ್ತೊಂದು ……. ಅವನು ಚಿಕ್ಕ ಬಾಲಕ. ಸತ್ಯಾಗ್ರಹಿ| ಹೊಟ್ಟೆಯಲ್ಲಿ …… ದೊಣ್ಣೆಯಿಂದಾದ ಪೆಟ್ಟು, ಅವನಿಗೂ ಚಿಕಿತ್ಸೆ ನಡೆಯಿತು. ಪಾಪಿ ಯಮನೂ ಸಹ ಅವನನ್ನು ನೋಡಿಯೇ ಹಂಸ ನಡಿಗೆ ನಡೆಯುತ್ತಿದ್ದಾನೆ. ಬಾಲಕನಿಗೋ ಮರಣದ ಮೇಲೆ ಎಷ್ಟೊಂದು ಆಸೆ! ಎದೆಗೆ ಗುಂಡು ಹಾಕಲಿಲ್ಲವಲ್ಲಾ! ಎಂಬ ದೊಡ್ಡ ಕೊರಗು ಹಲಬುತ್ತಿದ್ದಾನೆ. ನನ್ನ ಕೈಯಲ್ಲೊಂದು ಬಂದೂಕು ಇದ್ದಿದ್ದರೆ…… ಮರಣವನ್ನು ಕಂಡೊಡನೆ ಏನು ಉತ್ಸಾಹ ! ಪ್ರೇಯಸಿಯನ್ನು ಕಂಡಂತೆ. ಏನೋ, ‘ಸುಜಲಂ, ಸುಫಲಾಂ’ ಎಂದು ಆರಂಭಿಸಿದ . ದ್ವನಿ ಗೊರ್ ಎಂದಿತು….. ಇನ್ನೇನು ? ಅವನ ತಾಯಂತೆ, ಒಬ್ಬ ವಿಧವೆ, ಎಷ್ಟೊಂದು ಅತ್ತಳು ! ಸಂಸ್ಕಾರ ಮಾಡಲು ತನಗೆ ಯಾರೂ ಇಲ್ಲವೆಂದೇ! ಹ್ಹೀ ಹ್ಹೀ ಹ್ಹೀ!!!”
“ಮತ್ತೊಂದು ಹೇಳುತ್ತೇನೆ, ಕೇಳು…..”
“ರಕ್ತ ಬೇಧಿ (ಆಮಶಂಕೆ) ಕೇಸ್, ಅವನು ಒಬ್ಬ ಮಿಲ್ಲಿನ ಕೂಲಿ. ಆಗ ‘ಸೀಸನ್ ಡಲ್’, ನನ್ಮೇಲೆ ತಂದು ಮಲಗಿಸಿದರು. ಜೊತೇಲಿ ಸೇರು, ಪಾವು, ಚಟಾಕು, ಎಷ್ಟೊಂದು ಮಂದಿ! ಇಷ್ಟು ಸಾಲದೆಂಬಂತೆ ಇವನ ವಯಸ್ಸಾದ ಅಜ್ಜಿ. ಡಾಕ್ಟರ್ ಬಂದರು, ಬಂತು ನೋಡಿ ಕೋಪ! “ಕತ್ತೇನ್ನಾ ಹಿಡಿದು ಕೆಳಗೆ ಹಾಕು” ಎಂದು ಕಿರುಚಿದರು. ನಾನು ಬಿಟ್ಟುಬಿಡ್ತೀನಾ? ಒಂದೇ ಸಲಕ್ಕೆ ಅ ಬಾಲಕನ್ನು ‘ಕ್ಲೋಸ್ ಮಾಡಿಬಿಟ್ಟೆ!”
“ಮತ್ತಿನ್ನೇನು?”
“ನಾನು ಯಾರು ಗೊತ್ತುಂಟಾ? ಶ್! ಹೇಡಿ ಭಯ ಪಡಬೇಡ! ನಾನು ಒಬ್ಬ ಬೋಲ್ಷಿವಿಕ್ಕಿ (ಸಮತಾವಾದಿ) ಹ್ಹೀ! ಹ್ಹೀ! ಹ್ಹೀ!……..”
ಮತ್ತೆ ಆ ಭಯಂಕರವಾದ ಕಂಬಿಹಲ್ಲಿನ ನಗೆ? ಯಾರೋ ನನ್ನನ್ನು ಬಂದು ಏಳಿಸಿದರು.
“ಏಕೆ ಗೊಣಗುಟ್ಟುತ್ತಿದ್ದೀಯ? ನಿದ್ರೆ ಬರುವಂತೆ ಔಷಧಿ ಕೊಡಲಾ?” ಎಂದಳು ನನ್ನ ಮೇಲೆ ಬಾಗಿಕೊಂಡಿದ್ದ ನರ್ಸ್.
ಎಲ್ಲೋ ಟಕ್, ಟಕ್, ಟಕ್ ಎಂಬ ಬೂಟ್ಸ್ ಶಬ್ದ.
ಡಾಕ್ಟ್ರೇನು?