ಕೃತಿ: ಕಿಟಕಿಗಳಾಚೆ (ಪ್ರಬಂಧ ಸಂಕಲನ)
ಲೇಖಕರು: ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು
ಪ್ರಕಾಶಕರು: ಸಮನ್ವಿತ, ಬನ್ನೇರುಘಟ್ಟ, ಬೆಂಗಳೂರು
ಮೊದಲ ಮುದ್ರಣ: ೨೦೨೩, ಕೃತಿ ಬಿಡುಗಡೆ: ೧೩-೦೭-೨೦೨೪
ಪುಟಗಳು: ೧೩೨+೪, ಬೆಲೆ: ₹ ೧೫೦
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಕಿಟಕಿಗಳಾಚೆ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಪ್ರಬಂಧಗಳಿವೆ. ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿರುವ ಕವೀಂದ್ರ ರವೀಂದ್ರರು ತಮ್ಮ ಕವನಗೀತಗಳಿಂದಾಗಿ ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ನಾಡಿನ ಅಸಂಖ್ಯಾತ ಸಹೃದಯರನ್ನು ಮುಟ್ಟಿದ್ದಾರೆ. ಹೆಸರಾಂತ ಗಾಯಕರಾದ ಶ್ರೀ ರಾಘವೇಂದ್ರ ಬೀಜಾಡಿ, ಶ್ರೀ ಗಣೇಶ ದೇಸಾಯಿಯವರ ಸಂಗೀತ ತಂಡವು ಇವರ ಗೀತಚಿತ್ರಗಳಿಗೆ ವಿಡಿಯೋ ರೂಪ ನೀಡಿರುವುದು ವೇದ್ಯ. ಈ ಪ್ರಬಂಧ ಸಂಕಲನದ ಮೂಲಕ ರವೀಂದ್ರರು ಗದ್ಯಪ್ರಕಾರಕ್ಕೂ ತಮ್ಮನ್ನು ತೆರೆದುಕೊಂಡಿದ್ದಾರೆ. ಮುನ್ನುಡಿ ರೂಪದ ಶುಭಹಾರೈಕೆಗಳನ್ನು ಬರೆದಿರುವ ಹೆಸರಾಂತ ಕವಿ ಶ್ರೀ ಬಿ ಆರ್ ಲಕ್ಷ್ಮಣರಾವ್ ಅವರು ‘ಇದನ್ನು ಪ್ರಬಂಧಗಳ ಸಂಕಲನ ಎನ್ನುವುದಕ್ಕಿಂತ ಪ್ರಸಂಗಗಳ ಸಂಕಲನ ಎನ್ನುವುದೇ ಸರಿ’ ಎಂದಿದ್ದಾರೆ. ಆ ಮಟ್ಟಿಗೆ ಇವರ ಈ ಎಲ್ಲ ಬರೆಹಗಳಲ್ಲಿ ಒಂದಿಲ್ಲೊಂದು ಪ್ರಸಂಗಗಳ ಪ್ರಸ್ತಾಪವಿದೆ. ಸುಸಂವೇದ್ಯ ಲೇಖಕರು ಎಲ್ಲಕೂ ಕಾವ್ಯಾತ್ಮಕ ಕಮನೀಯತೆಯ ಸ್ಪರ್ಶ ನೀಡಿದ್ದಾರೆ. ಯಾವ ಅಳುಕೂ ಅಂಜಿಕೆಯಿಲ್ಲದ ಮುಕ್ತ ಮನಸ್ಸೊಂದು ನಮ್ಮೊಂದಿಗೆ ತಮ್ಮ ನವಿರುಭಾವಗಳ ರಂಗವಲ್ಲಿಯ ಚಿತ್ತಾರ ಬಿಡಿಸಿ, ಆಕರ್ಷಕವಾಗಿಸಿದೆ. ಕೈಗೆತ್ತಿಕೊಂಡರೆ ಕೊನೆಯ ಪ್ರಬಂಧ ಓದಿ ಮುಗಿಸಿಯೇ ಕೆಳಗಿಡುವಷ್ಟು ಓದಿಸಿಕೊಂಡು ಹೋಗುವ ಗುಣವಿದೆ. ಸರಳವಾದರೂ ವಿರಳವಾದ ಆಪ್ತ ಭಾವಗಳು ಸಂವಾದಿಸುತ್ತವೆ. ಬದುಕಿನ ಹಲವು ತೆರನಾದ ಅನುಭವಗಳನ್ನು ಜತನವಾಗಿ ಕಾಯ್ದಿರಿಸಿಕೊಂಡು, ಅವಕ್ಕೆ ಪ್ರಬಂಧರೂಪವನ್ನು ಕೊಡುವಲ್ಲಿ ಲೇಖಕರ ಜಾಣ್ಮೆ ಮತ್ತು ತಾಳ್ಮೆಗಳು ಕೆಲಸ ಮಾಡಿವೆ. ಪ್ರಸಂಗಗಳ ಸ್ವಾರಸ್ಯ, ವ್ಯಕ್ತಿಚಿತ್ರಗಳ ಲಲಿತಲಾಸ್ಯ ಮತ್ತು ಅಲ್ಲಲ್ಲಿ ಮಿಂಚಿ ಮಾಯವಾಗುವ ಮೃದುಹಾಸ್ಯ- ಇವು ಈ ಬರೆಹಗಳ ಧನಾತ್ಮಕ ಅಂಶ. ಪ್ರತಿಯೊಂದು ಪ್ರಸಂಗಗಳು ಲೇಖಕರನ್ನು ಕಾಡಿದ ರೀತಿ ಅನನ್ಯ. ಹಾಗೆಯೇ ಅವರ ನೆನಪಿನ ಬುತ್ತಿ ಮಧುರಜನ್ಯ. ಅವರೊಳಗಿನ ಕವಿ ಹೃದಯವೇ ಇದಕ್ಕೆ ಕಾರಣ.
ಬಾಲ್ಯ, ಯೌವನ ಮತ್ತೀಗ ಮಧ್ಯ ವಯಸ್ಕತನಗಳ ಎಲ್ಲ ನೆನಪುಗಳ ದುಮ್ಮಾನ, ಸುಮ್ಮಾನಗಳೆರಡೂ ಸಮ ಪ್ರಮಾಣದಲ್ಲಿ ಸುವ್ಯಕ್ತವಾಗಿವೆ. ಬರೆಹಗಳ ಶೀರ್ಷಿಕೆಗಳೇ ಪ್ರತಿ ಲೇಖನದ ಕೇಂದ್ರವನ್ನು ಬೊಟ್ಟು ಮಾಡುತ್ತವೆ. ಪ್ರೇಮಾನುಭೂತಿ, ಸಾಂಸಾರಿಕ ಆಗು ಹೋಗುಗಳು, ಕಾವ್ಯದ ಓದು, ತಾಯ್ತಂದೆಯರ ಬದುಕಿನ ಬೆರಗು ಮತ್ತು ಕೊರಗು, ಹುಲಿ ವೇಷ, ಭೂತದ ಕತೆ, ಸೈಕಲ್ ಸವಾರಿ, ಮಳೆ, ಹೊಳೆ, ಶಾಲೆ, ಶಾಲಾ ವ್ಯಾಸಂಗ, ಹೊಟೆಲಿನ ಕೆಲಸ ಹೀಗೆ ಎಲ್ಲವೂ ಈ ಸಂಕಲನದಲ್ಲಿ ಆಪ್ಯಾಯಮಾನವಾಗಿ ಶುದ್ಧ ಸೃಜನ ಶೈಲಿಯಲ್ಲಿ ಹಿತಮಿತವಾಗಿ ಬರೆಸಿಕೊಂಡಿವೆ. ಲೇಖಕರಿಗೇ ಗೊತ್ತಿಲ್ಲದಂತೆ ಒಟ್ಟೂ ಬರೆಹವು ಒಂದು ಕಾಲಮಾನದ ಸಾಂಸ್ಕೃತಿಕ ಚಹರೆಗಳನ್ನು ದಾಖಲಿಸಿವೆ. ‘ಎದುರಿಗಿದ್ದುದನ್ನು ಕಾಣಲು ಎರಡು ಕಣ್ಣಿದ್ದರೆ ಸಾಲದು; ಅದೃಷ್ಟವೂ ಬೇಕು’ ಎಂಬ ಕವಿ ಎ ಕೆ ರಾಮಾನುಜನ್ ಅವರ ಮಾತನ್ನು ಲೇಖಕರೇ ತಮ್ಮ ಮಾತಿನಲ್ಲಿ ತಂದಿದ್ದಾರೆ. ಅದರಂತೆ, ದಿನನಿತ್ಯದ ರೊಟೀನು ಕೆಲಸ ಕಾರ್ಯಗಳ ನಡುವೆ ಬದುಕು ಕಳೆದು ಹೋಗದ ಹಾಗೆ ಒಂದಷ್ಟು ಹೊತ್ತು ತಮಗಾಗಿ ಮೀಸಲಿಡುವ ಹಾಗೆಯೇ ಎದುರಾದ ಪ್ರತಿ ಅನುಭವದ ಎಳೆಯನ್ನು ಬೆರಗಿನಿಂದ ನೋಡುವ ಅಪರೂಪದ ದೃಷ್ಟಿಯೇ ಇವರ ಈ ಬರೆಹಗಳ ಮೂಲ ಕಸುವು. ಅವರೇ ಹೇಳಿಕೊಳ್ಳುವಂತೆ, ‘ಮನದ ಕಿಟಕಿ ತೆರೆದು ಮನೆಯ ಕಿಟಕಿಯಿಂದ ಹೊರಗೆ ಇಣುಕುವಾಗ ಇರುವ ಸಂಗತಿಗಳಲ್ಲಿಯೇ ಅಂದು ಹೊಸತು ಅನ್ನುವಂತಹ ಬೆಚ್ಚಗಿನ ಭಾವ’ ಇವರಿಗೆ ದಕ್ಕಿರುವುದರಿಂದಲೇ ಬರೆಹಗಳು ಸಲೀಸಾಗಿವೆ. ಅವರನ್ನು ಕಾಡಿದ ಮತ್ತು ತಟ್ಟಿದ ವಿಶೇಷಾನುಭವಗಳನ್ನು ಸುಮ್ಮನೆ ಬರೆಯುವಾಗ ಇದು ಯಾವ ಪ್ರಕಾರಕ್ಕೆ ಸೇರುತ್ತದೆಂಬುದನ್ನೂ ಕೇಳಿಕೊಳ್ಳುವ ಹಂಗಿಗೆ ಒಳಗಾಗಿಲ್ಲ. ಇವರ ಪ್ರಧಾನ ಅಭಿವ್ಯಕ್ತಿ ಮಾಧ್ಯಮವು ಕವಿತೆಯಾದರೂ ಗದ್ಯದಲ್ಲೂ ಈ ಕವಿಯು ಕವಿತೆಯಂಥದನ್ನೇ ಹೆತ್ತಿದ್ದಾರೆ; ತಮ್ಮ ಪ್ರತಿಭಾ ಸೆಲೆಯ ಅನನ್ಯ ಶೈಲಿಯ ಛಾಪನ್ನೊತ್ತಿದ್ದಾರೆ! ‘ಸಣ್ಣ ಸಣ್ಣ ಸಂಗತಿಗಳಲ್ಲಿಯೇ ಬದುಕಿನ ಬ್ರಹ್ಮಾಂಡವಿದೆ’ ಎಂಬ ಲೇಖಕರ ಮಾತು ಅಕ್ಷರಶಃ ನಿಜ. ಅದನ್ನು ಇಲ್ಲಿಯ ಎಲ್ಲ ಪ್ರಬಂಧಗಳೂ ಸಾಬೀತು ಮಾಡಿವೆ.
ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಯಾವ ಅವಕಾಶವನ್ನೂ ಇವರ ಕಳೆದುಕೊಂಡಿಲ್ಲದೇ ಇರುವುದರಿಂದ ಪ್ರತಿ ಕ್ಷಣದ ಇವರ ಜೀವನ ಪಾವನವಾಗಿದೆ; ಬರೆಹಕ್ಕೆ ಒತ್ತಾಸೆಯಾಗಿದೆ. ಓರ್ವ ಸೃಷ್ಟಿಶೀಲ ಬರೆಹಗಾರನಿಗೆ ಇರಬೇಕಾದ ಮೊದಲ ಲಕ್ಷಣವಿದು. ‘ನನ್ನ ನುಡಿಯೊಳೇ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂಬ ಅಡಿಗರ ಮಾತಿನಂತೆ ಲೇಖಕರು ತಮ್ಮದೇ ಆದೊಂದು ಅಚ್ಚುಕಟ್ಟಾದ ನುಡಿಯಕಟ್ಟನ್ನು ಕಟ್ಟಿಕೊಂಡಿದ್ದಾರೆ. ಈ ಅಭೀಪ್ಸೆಯು ಇವರ ಎಲ್ಲ ಬರೆಹಗಳಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಪ್ರಸಂಗ ಮತ್ತು ಸಂದರ್ಭಗಳನ್ನು ಮನಸ್ಸಿನ ಪ್ರತಿಮೆಯಾಗಿಸುವಲ್ಲಿ ಇವರದು ಅಸಲು ಕಸುಬು ಎಂದೇ ನನ್ನ ಅಭಿಮತ. ತನ್ನಲ್ಲಿಯೇ ಲೋಕವನ್ನು ಕಾಣುವ ಸ್ವಾಭಿಮುಖ ಅಭಿವ್ಯಕ್ತಿಯೇ ಇಲ್ಲಿಯ ಪ್ರತಿ ಬರೆಹಗಳಲ್ಲಿ ಪ್ರತಿಫಲಿಸುತ್ತದೆ. ಕವಿತೆಯು ಕವಿಯನ್ನು ಹಿಂದಿಕ್ಕಿ ಆತನ ಭಾವವನ್ನು ಪ್ರತಿಫಲಿಸಿದರೆ, ಇಂಥ ಗದ್ಯವು ನಿರೂಪಕ ಕೇಂದ್ರಿತವಾದುದರಿಂದ ಆತನನ್ನೂ ಮುನ್ನೆಲೆಗೆ ನೂಕುವುದು. ಹಾಗಾಗಿಯೇ ಬರೆಯುವ ಮೊದಲು ಬರೆಹಗಾರ ನಿರ್ಧರಿಸಿದ ರೂಪಕ್ಕೂ ಬರೆದಾದ ಮೇಲೆ ಅದು ಆಗುವ ಸ್ವರೂಪಕ್ಕೂ ವ್ಯತ್ಯಾಸ ಕಾಣುವುದುಂಟು. ಏನನೋ ಬರೆಯ ಹೋಗಿ ಇನ್ನೇನನೋ ಬರೆಸಿಕೊಳ್ಳುವ ಗುಣ ಆತನ ಅನುಭವ ಮತ್ತು ಅಭಿವ್ಯಕ್ತಿಯ ಸಾಂದ್ರತೆಯನ್ನು ಅವಲಂಬಿಸಿದ್ದು. ಇಂಥದೇ ವಸ್ತುವನ್ನು ಇಂಥದೇ ರೂಪ ಅಥವಾ ಪ್ರಕಾರದಲ್ಲಿ ಪ್ರೆಸೆಂಟ್ ಮಾಡಲು ಹೋಗುವಾಗಲೂ ಅದು ಇನ್ನೇನೋ ಆಗಿಬಿಡುವ ಚೋದ್ಯವನ್ನು ಸ್ವತಃ ಕಂಡುಂಡವರು ಈ ರವೀಂದ್ರರು. ಅದರಿಂದಲೇ ಲಕ್ಷ್ಮಣರಾಯರ ಮಾತನ್ನು ಅವರು ಸಹ ಅನುಮೋದಿಸುತ್ತಾರೆ.
ಪ್ರಸಂಗಗಳನ್ನು ನಿರ್ವಹಿಸಿರುವ ಕುಶಲತೆಯನ್ನು ಕವಿ ರವೀಂದ್ರರಲ್ಲಿ ಮಾತ್ರವಲ್ಲ, ಸ್ವತಃ ರವೀಂದ್ರರೇ ತಮ್ಮ ‘ಓ ಲಕ್ಷ್ಮಣಾ…….’ ಬರೆಹದಲ್ಲಿ ಅನಾವರಣಗೊಳಿಸಿದ್ದಾರೆ; ಮಹಾಕವಿ ಕುವೆಂಪು ಅವರ ಸೃಷ್ಟಿಶೀಲ ಪ್ರತಿಭೆಯನ್ನು ಮನದಟ್ಟು ಮಾಡಿಸಿದ್ದಾರೆ. ಆ ಮೂಲಕ ಪ್ರಬಂಧಕಾರರ ಓದಿನ ವಿಸ್ತಾರ ಮತ್ತು ಸದಭಿರುಚಿಗಳು ಈ ಮೂಲಕ ನಮಗೆ ಮನವರಿಕೆಯಾಗುತ್ತವೆ. ‘ಎರಡು ಮಳೆ ಪ್ರಸಂಗ’, ‘ಒಂದು ಪ್ರೇಮ ಪ್ರಸಂಗ’, ‘ಒಂದು ಆಟದ ಪ್ರಸಂಗ’ ದಂಥ ಬರೆಹಗಳು ಸಹ ತುಂಬ ಆಪ್ತವಾಗಿ ನಮ್ಮೊಳಗೆ ಮೊರೆಯುತ್ತವೆ. ಖಾಸಗೀ ಅನುಭವಗಳನ್ನು ಬರೆಹವಾಗಿಸುವಲ್ಲಿ ಲೇಖಕರು ತೋರುವ ಎಚ್ಚರ ಮತ್ತು ಹತ್ತಿರಗಳು ಅಪಲಾಪಗಳಾಗದೇ ಆಪ್ತ ಕಲಾಪಗಳಾಗುತ್ತವೆ; ಓದುಗರ ಅಂಥದೇ ಅನುಭವಗಳಿಗೆ ಕನೆಕ್ಟ್ ಆಗುತ್ತವೆ. ಒಳ್ಳೆಯ ಪ್ರಬಂಧದ ಲಕ್ಷಣವೇ ಇದು. ಓದುಗರನ್ನು ಸುಲಲಿತವಾಗಿ ತಾಗಬೇಕು. ಅವರೊಳಗೊಂದು ಕಲರವ ಮೂಡಿಸಬೇಕು. ಆಗ ಬರೆಹ ಸಾರ್ಥಕ. ಇಲ್ಲಿಯ ಬಹಳಷ್ಟು ಪ್ರಬಂಧಗಳು ಕತೆಯಾಗುವ ಎಲ್ಲ ಸಾಧ್ಯತೆಯನ್ನೂ ತಮ್ಮೊಡಲಲ್ಲಿ ಇಟ್ಟುಕೊಂಡಿವೆ. ನಾವು ಕತೆಯಂತೆಯೂ ಓದಿಕೊಳ್ಳಬಹುದು. ಇದು ಸಹ ಒಳ್ಳೆಯ ಪ್ರಬಂಧದ ಲಕ್ಷಣವೇ. ಶ್ರೇಷ್ಠ ಪ್ರಬಂಧಗಳೆಲ್ಲಾ ಒಂದು ರೀತಿಯ ಜೀವಂತ ಕತೆಗಳೇ. ಕತೆಗೂ ಪ್ರಬಂಧಕ್ಕೂ ಇರುವ ವ್ಯತ್ಯಾಸವು ನೀರ ಮೇಲಿನ ಗೆರೆಯಂತೆ; ಬರೆಯುತ್ತಲೇ ಅಳಿಸಿ ಹೋಗುವಂಥದು. ನಿಪುಣ ಪ್ರಬಂಧಕಾರನಲ್ಲಿ ಉತ್ತಮ ಕತೆಗಾರನೂ ಅಡಗಿ ಕುಳಿತು ಸಮಯ ದೊರೆತಾಗಲೆಲ್ಲಾ ಹೊರಗೆ ಬರಲು ಹೊಂಚುತ್ತಿರುತ್ತಾನೆ! ಭಕ್ತಿ, ಶ್ರದ್ಧೆ, ಕೌಶಲ್ಯ, ಚಾತುರ್ಯ ಮತ್ತು ಪ್ರತಿಭೆಗಳಷ್ಟೇ ಸಾಲದು; ಉತ್ತಮ ಶಿಲ್ಪವೊಂದು ದೇವತಾ ಪ್ರತಿಮೆಯಾಗಲು; ಅದೃಷ್ಟವೂ ಬೇಕು! ಹಾಗೆಯೇ ಎಲ್ಲ ಶಿಲೆಗಳಿಗೂ ಈ ಭಾಗ್ಯ ಒದಗದು. ಹಾಗೆ ಇಲ್ಲಿಯ ಪ್ರಬಂಧಗಳು! ಒಂದಕಿಂತ ಒಂದು ತನ್ನ ಮನೋಹರ ಗುಣದಿಂದ ನಮ್ಮನು ಅಪಹರಿಸುತ್ತವೆ; ಆವಾಹಿಸಿ, ಮೋಹಿಸುತ್ತವೆ!!
ಒಂದು ಕಾಲದಲ್ಲಿ ಪ್ರಬಂಧ ಎಂಬುದಕ್ಕೆ ಗದ್ಯ ಪದ್ಯ ಮಿಶ್ರಿತ ಚಂಪೂಕಾವ್ಯ ಎಂಬರ್ಥವೂ ಇತ್ತು. ಪಂಪ ಮಹಾಕವಿಯು ತನ್ನ ‘ವಿಕ್ರಮಾರ್ಜುನ ವಿಜಯ’ದ ಪ್ರಥಮಾಶ್ವಾಸದಲ್ಲಿ, ಒಂದೆಡೆ ‘ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದು ಒಂದಿ ದೇಸಿಯೊಳ್ ಪುಗುವುದು’ (ಭಾವಕಲ್ಪನೆಯಲಿ ನೂತನತೆ, ಮೃದು ಮಧುರ ಪದಗಳ ಜೋಡಣೆ, ಆದಷ್ಟೂ ‘ದೇಸೀ’ ರಚನೆ, ಅದನ್ನು ಅಭಿವ್ಯಕ್ತಿಸುವಲ್ಲಿ ‘ಮಾರ್ಗ’ ದ ಹಾದಿ. ಹೀಗಾದಾಗ ಸುಗ್ಗಿಯ ಕಾಲದ ಎಳೆಮಾವು, ಕೆಂಪು ಚಿಗುರು ಮತ್ತು ಹೂವುಗಳ ಭಾರಕೆ ಬಳಲಿ, ದುಂಬಿಗಳಿಂದ ತುಂಬಿ, ಗಾನಕೋಗಿಲೆಗಳಿಗೆ ಆಶ್ರಯತಾಣವಾಗಿ ಮನೋಹರವಾಗುವಂತೆ ಅಂಥ ಪ್ರತಿಭಾಬಂಧವು ಶೋಭಿಪುದು.) ಎನ್ನುವುದರ ಜೊತೆಗೆ, ‘ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೇಳ್ವೊಡೆ ಪಂಪನೆ ಪೇಳ್ಗುಂ ಎಂದು ಪಂಡಿತರೆ ತಗುಳ್ದು ಬಿಚ್ಚಳಿಸೆ ಪೇಳಲೊಡರ್ಚಿದೆನೀ ಪ್ರಬಂಧಮಂ’ ಎಂದಿದ್ದಾನೆ. ಆನಂತರ ಇಂಗ್ಲಿಷಿನ ಎಸ್ಸೇ ಎಂಬುದಕ್ಕೆ ಸಂವಾದಿಯಾಗಿ ನಾವು ಪ್ರಬಂಧ (ಪ್ರ + ಬಂಧ = ಅಡಕವಾದ ಚೌಕಟ್ಟಿನಲ್ಲಿ ಚೆನ್ನಾಗಿ ಕಟ್ಟಿದ್ದು) ಎಂದು ಬಳಸಲು ಶುರು ಮಾಡಿದೆವು. ಹಾಗಾಗಿ ಪಂಪನು ಹೇಳುವಂತೆ, ರವೀಂದ್ರರ ಬರೆಹಗಳಲ್ಲಿ ಮೃದುಬಂಧವಿದೆ, ದೇಸೀತನ ಎದ್ದು ಕಾಣುತ್ತಿದೆ, ವರ್ಣಕ ಕತೆಯೂ ಒಡಮೂಡಿದೆ, ಹಾಗಾಗಿ ಇದು ಪ್ರಬಂಧ. ರವೀಂದ್ರನಾಯಕರು ಇಂಥದೊಂದು ಪ್ರಯೋಗವನ್ನು ಕೈಗೊಂಡಿದ್ದಾರೆ. ಅಪ್ಪಟ ದೇಸೀ ಅನುಭವವನ್ನು ಅಭಿವ್ಯಕ್ತಿಸುವಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸಾಹಿತ್ಯ ಪ್ರಕಾರಗಳ ತಾಂತ್ರಿಕತೆಗಾಗಿ ನಾವೀ ಭೇದವನ್ನು ಮಾಡಬೇಕೇ ವಿನಾ ಸಹೃದಯರ ದೃಷ್ಟಿಯಲ್ಲಿ ಅಲ್ಲ! ನಿರಾಳವಾಗಿ ಬರೆಯುವ ಮತ್ತು ಅಂಥದೇ ನಿರಾಳತೆಯನ್ನು ಓದುಗರಲ್ಲಿ ಸೃಷ್ಟಿಸುವ ಗುಣವಿದ್ದರೆ ಅದು ಲಲಿತ ಪ್ರಬಂಧಗಳಿಗೆ ಮಾತ್ರ. ಅದಕಾಗಿಯೇ ಬರೆಹಗಾರರು ಕತೆಯ ಕಷ್ಟಕೆ ಮನಸಾಗದೇ ನಮ್ಮ ಸೃಜನಶಕ್ತಿಯನ್ನು ಅನುಭವ ಮತ್ತು ನೆನಪುಗಳ ಬಲದಿಂದ ಹಾಗೇ ನೇರವಾಗಿ ಮುಕ್ತತೆ ಮತ್ತು ಸುಭಗತೆಗಳ ಮೂಲಕ ಮುಟ್ಟಿಸುತ್ತಾರೆ. ಪ್ರಬಂಧದಲ್ಲಿ ಕತೆಯ ಅಂಶವೂ ಕತೆಯಲ್ಲಿ ಪ್ರಬಂಧದ ಅಂಶವೂ ಹೇಗೋ ಸೇರಿ ಹೋಗುತ್ತದೆ. ಅದಕಾಗಿಯೇ ಪ್ರಬಂಧವು ಕತೆಯ ತಮ್ಮನೋ ತಂಗಿಯೋ ಆಗಿ ಅವತರಿಸುವುದು. ಇಷ್ಟಕೂ ಸಾಹಿತ್ಯ ಪ್ರಕಾರಗಳ ಗಡಿ ದಾಟುವ ಎಲ್ಲ ಬರೆಹಗಳೂ ಮೂಲತಃ ಸೃಜನಾತ್ಮಕವೇ. ತಮ್ಮ ಮಹತ್ವಾಕಾಂಕ್ಷೆಯ ಮಹಾಕಾವ್ಯ ಬರೆದ ಮೇಲೂ ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಬರೆದರು! ದೇವನೂರ ಮಹಾದೇವರ ಕುಸುಮಬಾಲೆಯಂತೂ ಸಾಹಿತ್ಯ ಪ್ರಕಾರಗಳ ನೀರಸ ವರ್ಗೀಕರಣವನ್ನು ದಾಟಿ ಎಲ್ಲ ಪ್ರಕಾರಗಳ ಗುಣಗಳನ್ನೂ ಹೀರಿ ಹರಳುಗಟ್ಟಿದ್ದು ನಮಗೆ ಗೊತ್ತೇ ಇದೆ. ಹಾಗಾಗಿ ತಾಂತ್ರಿಕ ಕಾರಣಕಾಗಿ ಈ ಕಿಟಕಿಗಳಾಚೆಯಲ್ಲಿರುವ ಬರೆಹಗಳನ್ನು ಪ್ರಬಂಧಗಳೆನ್ನಬೇಕೇ ವಿನಾ ನಮ್ಮಲ್ಲಿ ಸೃಷ್ಟಿಸುವ ಹಲವು ಭಾವತರಂಗಗಳ ಹಿನ್ನೆಲೆಯಲ್ಲಿ ಕವಿತೆ, ಕತೆ, ಹರಟೆ, ಭಾವಲಹರಿ, ರೂಪಕ, ಪಗದ್ಯ ಎಲ್ಲವುಗಳ ಲಕ್ಷಣವೂ ಇವುಗಳಲ್ಲಿ ಅಡಗಿವೆ ಎಂದರೆ ತಪ್ಪಾಗದು.
ಸೂಕ್ಷ್ಮ ಸಂವೇದನಾಶೀಲ ವಿಚಕ್ಷಕನೊಬ್ಬ ರವೀಂದ್ರರಲಿ ಅಡಗಿರುವುದರಿಂದಲೇ ‘ಪಾತ್ರಪುರಾಣ’, ‘ಓ ಲಕ್ಷ್ಮಣಾ’ ಮತ್ತು ‘ಕಾವ್ಯ ಕುತೂಹಲ’ದಂಥ ಬರೆಹಗಳು ಆವಿರ್ಭವಿಸಿರುವುದು. ಶಕುಂತಲೆಗೆ ದುಷ್ಯಂತ ಕೊಟ್ಟ ಉಂಗುರ ಹಾಗೂ ಹನುಮಂತನು ಸೀತೆಗೆ ತಲಪಿಸಿದ ರಾಮನ ಉಂಗುರ – ಇವೆರಡರ ತೌಲನಿಕ ನೋಟವಂತೂ ಇವರ ಲೇಖನಿಯಲಿ ಮೃದು ಮಧುರ ನೆನಪುಗಳ ಉದ್ಯಾನವನವೇ ಆಗಿ ಹೋಗಿದೆ. ಪಾತ್ರಗಳ ಮನಸ್ಥಿತಿಯನ್ನು ಅವರಿದ್ದ ಪರಿಸ್ಥಿತಿಯೊಂದಿಗೆ ಅವಲೋಕಿಸುವ ಅಪೂರ್ವ ಒಳನೋಟ ಇಲ್ಲಿಯದು. ಸಂಸಾರದ ಹಲವೆಂಟು ತಾಪತ್ರಯಗಳೆಂಬ ಇರುಸಾಣಿಕೆಯ ನಡುವೆಯೇ ಪ್ರೀತಿ, ಮಮತೆ ಮತ್ತು ವಾತ್ಸಲ್ಯಗಳು ಗರಿಗೆದರಿದ ಕ್ಷಣಗಳನ್ನು ಸುಂದರ ಲಹರಿಯಾಗಿಸಿದ ಆಪ್ತತೆ ಕೆಲವು ಪ್ರಬಂಧಗಳಲ್ಲಿ ಬಿಡುಬೀಸಾಗಿ ಬಂದಿದೆ. ಇಂಥ ಸಂದರ್ಭದಲ್ಲಿ ಎಲ್ಲಿಯೂ ಲೇಖಕರು ಆತ್ಮವಂಚನೆಗೈಯದೇ, ಅನು-ಭವಿಸಿದ ಆ ಕ್ಷಣದ ನೆನಪುಗಳನ್ನೂ ಬರೆಯುವಾಗ ಮತ್ತೆ ನೆನಪಾದ ಉತ್ಕಟತೆಯನ್ನೂ ಜೊತೆಯಾಗಿಸಿ, ಬದುಕು ಇರುವುದೇ ಹೀಗೆ; ಅದಕೊಂದು ಕನ್ನಡಿ ಹಿಡಿವ ಪ್ರಯತ್ನವಷ್ಟೇ ನನ್ನದು ಎಂಬ ವಿನೀತತೆಯನ್ನು ಮೆರೆಯುತ್ತಾರೆ. ಹುಡುಕಿದರೂ ಇವರಲ್ಲಿ ಎಲ್ಲಿಯೂ ಆತ್ಮಪ್ರತ್ಯಯವಾಗಲೀ ಅಹಂಭಾವವಾಗಲೀ ನುಸುಳಿಲ್ಲ. ಇದು ಬರೆಹಗಾರರಿಗೆ ಇರಬೇಕಾದ ಅವಶ್ಯ ಗುಣ. ‘ಓ ಲಕ್ಷ್ಮಣಾ’ ದಲ್ಲಂತೂ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನದ ಇಡೀ ಅಧ್ಯಾಯವೊಂದರ ತಲ್ಲಣವನ್ನು ಅನಾಯಾಸವಾಗಿ ವ್ಯಾಖ್ಯಾನಿಸುತ್ತಾ, ಲಕ್ಷ್ಮಣನ ಅಂತರಾಳದ ತುಡಿತ ಮಿಡಿತಗಳಿಗೆ ಕರುಳ ಕೂಗಾಗುತ್ತಾರೆ. ಇನ್ನು ‘ಕಾವ್ಯ ಕುತೂಹಲ’ ವಂತೂ ನಿಜಕವಿಯ ಸಹಜ ಅನಿಸಿಕೆಗಳ ಆಪ್ಯಾಯಮಾನವೇ ಆಗಿ ಹೋಗಿದೆ. ಇಲ್ಲಿ ಮತ್ತು ಉಳಿದ ಬರೆಹಗಳಲ್ಲಿ ರವೀಂದ್ರರು ಉದ್ಧರಿಸುವ ಕವಿ ಕಾವ್ಯ ಸಾಲುಗಳು ಮತ್ತು ವಿದ್ವಾಂಸರ ಹೇಳಿಕೆಗಳು ಇವರ ವ್ಯಾಪಕ ಓದನ್ನು ಪ್ರತಿನಿಧಿಸುತ್ತವೆ. ಬಾಲ್ಯಕಾಲದ ಅನುಭವಗಳನ್ನು ಪ್ರಬಂಧವಾಗಿಸುವ ಚಾತುರ್ಯವಂತೂ ನನ್ನನ್ನು ಬಹುವಾಗಿ ಸೆಳೆಯಿತು. ಬಾಳುವೆಯ ಸಿಹಿಕಹಿಗಳೆರಡನ್ನೂ ಹಿತವಾಗಿ ಉಣಬಡಿಸುತ್ತಲೇ ನಮ್ಮ ದಾರಿ ಯಾವುದಾಗಿರಬೇಕೆಂಬ ದಿಕ್ಸೂಚಿಯನ್ನು ಇವರ ಪ್ರಬಂಧಗಳು ಸದ್ದಿಲ್ಲದೇ ಪ್ರತಿಪಾದಿಸುತ್ತವೆ.
‘ಎಂಥ ಒಳ್ಳೆಯ ಮನಸು, ಎಷ್ಟು ಒಳ್ಳೆಯ ಹೃದಯ, ಏನೆಂಥ ಅವಲೋಕನ ಸಾಮರ್ಥ್ಯ ಮತ್ತು ಗ್ರಹಿಕೆ?’ ಎಂಬುದು ಪ್ರಶ್ನೆಯಾಗದೇ ಅಚ್ಚರಿಯಾಗುವುದೇ ಇವರ ಬರೆಹದ ಸೊಗಸು. ಲೇಖಕರ ನೆನಪಿನ ಬುತ್ತಿಯ ತುಂಬ ವಿಧ ವಿಧವಾದ ಪರಿಕರಗಳಿವೆ. ಅವನ್ನು ಹೆಕ್ಕಿ ತೆಗೆದು ಹದವರಿತು, ನಮಗೆ ಉಣಬಡಿಸುವಾಗ ತೋರಿದ ಶ್ರದ್ಧೆ ಮತ್ತು ಮಮತೆಗಳನ್ನು ಕುರಿತು ಇಲ್ಲಿ ಹೇಳಲೇಬೇಕು. ಅಂದುಕೊಂಡದ್ದರಾಚೆಗೂ ಇದೆ ಬದುಕು; ಇಷ್ಟಕೂ ಅದೇ ಬದುಕು ಎಂಬ ತತ್ತ್ವಜ್ಞಾನ ಇಲ್ಲಿಯ ಹಲವು ಪ್ರಬಂಧಗಳ ಛಾಯೆ. ಸಂದರ್ಭ ಬಂದಾಗಲೆಲ್ಲ ತಮಗಿಷ್ಟವಾದ ಕನ್ನಡ ಮತ್ತು ಹಿಂದಿ ಹಾಡುಗಳ ಸಾಲುಗಳನ್ನು ಔಚಿತ್ಯವರಿತು ಉಲ್ಲೇಖಿಸುವುದರ ಹಿಂದೆ ಇವರ ಸದಭಿರುಚಿಯ ಸಾಹಿತ್ಯದ ಸಹವಾಸ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಕವಿತೆಯಾಗದ್ದು ಇಲ್ಲಿ ಪ್ರಬಂಧವಾಗಿದೆ ಎಂದುಕೊಂಡರೂ ಅದರಲ್ಲೂ ಕವಿತೆಯ ಗುಣವೇ ಅಡಗಿದೆ. ಪ್ರಬಂಧಗಳು ಕಾವ್ಯಗುಣದಿಂದ ಜೀಕಿದಾಗ ಸಹೃದಯರ ಮನಸು ಉಲ್ಲಸಿತವಾಗುತ್ತದೆ; ಹೇಳಿಯೂ ಹೇಳಲಾಗದ ಕೆಲವು ಗುಟ್ಟುಗಳು ರಟ್ಟಾಗುತ್ತವೆ, ಸದ್ದಿಲ್ಲದೆ, ಸುದ್ದಿ ಮಾಡದೇ. ಇಂಥ ಹಲವು ನವಿರು ಭಾವಗಳು ಇಲ್ಲಿಯ ಎಲ್ಲ ಪ್ರಬಂಧಗಳಲ್ಲೂ ಚೆಲ್ಲಾಡಿವೆ. ಮುಚ್ಚಿಕೊಂಡ ಮನದ ಕದವ ತೆರೆದು ಎದುರಾದರೆ ಸುತ್ತೆಲ್ಲ ಚೆಲ್ಲಾಡಿದ ಪಾರಿಜಾತದ ಪರಿಮಳ ಸುತ್ತಿ ಸುಳಿಯುತ್ತದೆ; ಹಿತವಾದ ಓದು ಹಾಯೆನಿಸುತ್ತದೆ. ಪ್ರಬಂಧಗಳನ್ನೂ ಹೀಗೂ ಬರೆಯಬಹುದು; ಕತೆಗೂ ಆತ್ಮಕತೆಗೂ ನಡುವೆ ಇರುವ ತೆಳ್ಳನೆಯ ಪರದೆ ಸರಿಸಿ, ಒಂದಷ್ಟು ಹೊತ್ತು ಲೋಕಾಭಿರಾಮವಾಗಿ ಅಷ್ಟೇ ಖಾಸಗಿಯಾಗಿ ನಮ್ಮಷ್ಟಕೇ ನಾವು ಮನಸೋ ಇಚ್ಛೆ ಅಡ್ಡಾಡಬಹುದು ಎಂಬುದು ವೇದ್ಯವಾಗುತ್ತದೆ. ನನಗಿವರ ಪರಿಚಯ ಮತ್ತು ಇವರ ರಚನೆಗಳ ಸಾನ್ನಿಧ್ಯ ಲಭಿಸದೇ ಹೋಗಿದ್ದ ಪಕ್ಷದಲ್ಲಿ ಬದುಕಿನ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೆ; ಆದರದು ಗೊತ್ತೇ ಆಗುತ್ತಿರಲಿಲ್ಲ! ಎಂಬ ಸೋಜಿಗ ಬೆರೆತ ದಿಗಿಲಿನಲ್ಲಿ ನಾನೀಗ ಇದ್ದೇನೆ. ಸಾಹಿತ್ಯವೆಂಬುದು ಕೇವಲ ಸಂವಹನವಲ್ಲ, ಧ್ವನಿ ರಸ ಮೀಮಾಂಸೆಯೂ ಅಲ್ಲ, ಸಾಮಾಜಿಕ ಬದಲಾವಣೆಯ ಅಸ್ತ್ರವೂ ಅಲ್ಲ, ಅದು ಇವೆಲ್ಲವನು ಒಳಗೊಂಡೂ ಸು-ಮನಸುಗಳನ್ನು ‘ಗೊತ್ತೇ ಇಲ್ಲದಂತೆ ಜೋಡಿಸಿಡುವ ತಂತು; ಹಾಲಾಹಲವ ಕಡೆದು ಅಮೃತವನುಣಿಸುವ ಮಂತು’ (ಕಡೆಗೋಲು) ಎಂಬುದನ್ನು ಇದರಿಂದ ಕಂಡುಕೊಂಡೆ. ಶ್ರೀಯುತ ರವೀಂದ್ರ ನಾಯಕರು ಇಂಥ ಇನ್ನಷ್ಟು ಪ್ರಬಂಧಗಳನ್ನು ಬರೆದು ಪ್ರಕಟಿಸಲಿ ಎಂದು ಎಲ್ಲ ಓದುಗರ ಪರವಾಗಿ ಹಾರೈಸುವೆ.
–ಡಾ. ಹೆಚ್ ಎನ್ ಮಂಜುರಾಜ್,
ಪ್ರಕಟಿಸಿದ ಪಂಜುವಿಗೆ ನನ್ನ ಧನ್ಯವಾದಗಳು.
ಹಾಗೆಯೇ ಓದಿ ಪ್ರತಿಕ್ರಿಯಿಸುವ ಎಲ್ಲ ಸಹೃದಯರಿಗೂ
ನನ್ನ ವಂದನೆಗಳು.